ಮತದಾನದ ಮೊದಲು ಯೋಚಿಸಿ, ನಾವು ನಿರ್ಧರಿಸುತ್ತಿರುವುದು ದೇಶದ ಭವಿಷ್ಯವನ್ನು
(ಪ್ರಕಟಿತ: ಪುಂಗವ 1/4/2014)
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆಂಬ ಹಿರಿಮೆ ಹೊತ್ತ ಭಾರತ ದೇಶದ ಆಡಳಿತ ಚುಕ್ಕಾಣಿಯನ್ನು ನಿರ್ವಹಿಸಬಲ್ಲ ಜನಪ್ರಿಯ ಸರ್ಕಾವನ್ನು ಆಯ್ಕೆಮಾಡುವ ಸವಾಲಿನ ಜೊತೆಗೆ ಪರಿವರ್ತನೆಯ ಸದವಕಾಶವೂ ನಮ್ಮೆದುರು ಬಂದಿದೆ. ಈ ಸಂಧರ್ಭದಲ್ಲಿ ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಸೋನಿಯಾ ಗಾಂಧಿ ನೇತೃತ್ವದ ಡಾ. ಮನಮೋಹನ ಸಿಂಗ್‍ರ ಸಂಯುಕ್ತ ಪ್ರಗತಿಶೀಲ ಒಕ್ಕೂಟ (United
Progressive Alliance) (ಯುಪಿಎ) ಸರ್ಕಾರದ ಆಡಳಿತ ನಿರ್ವಹಣೆ-ಕಾರ್ಯಶೈಲಿಯನ್ನು ಅವಲೋಕನ ಮಾಡಿದರೆ ಇದೊಂದು ದುರಾಡಳಿತದ ದಶಕ ಎಂದರೆ ಅತಿಶಯವಾಗಲಾರದು. 2020ರ ವೇಳೆಗೆ ವಿಶ್ವದ ಶಕ್ತಿಯಾಗುವತ್ತ ಮುನ್ನುಗ್ಗುತ್ತಿದ್ದ ಭಾರತದ ಪ್ರಗತಿಯ ಯಾತ್ರೆಗೆ ಇಂದು ಹಿನ್ನಡೆಯಾಗಿದೆ. ದೇಶದ ಆತ್ಮವಿಶ್ವಾಸವೇ ಅಲುಗಾಡಿದೆ. ಏಕೆ ಹೀಗಾಯಿತು? ಎಂದು ಯೋಚಿಸಿದರೆ, ಕಳೆದ ಒಂದು ದಶಕದಿಂದ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿದ್ದ ದೂರದೃಷ್ಟಿಯಿಲ್ಲದ ಅಸಮರ್ಥ ನಾಯಕತ್ವ, ನೇತೃತ್ವದ ವೈಫಲ್ಯ ಸ್ಫಷ್ಟವಾಗಿ ಗೋಚರಿಸುತ್ತದೆ.
ಮಕಾಡೆ ಮಲಗಿದ ಆರ್ಥಿಕ ಅಭಿವೃದ್ಧಿ, ಪಾಶ್ರ್ವವಾಯು ಬಡಿದ ನೀತಿ ಮತ್ತು ನಿರ್ಣಯ ವ್ಯವಸ್ಥೆ: ಕಳೆದ ಹತ್ತು ವರ್ಷಗಳಲ್ಲಿ ನಮ್ಮ ದೇಶದ ಆರ್ಥಿಕ ಅಭಿವೃದ್ಧಿ ಗಣನೀಯವಾಗಿ ಕುಂಠಿತಗೊಂಡಿದ್ದು ಮೇಲ್ನೋಟದಲ್ಲೇ ಕಾಣುತ್ತದೆ. 2004ರಲ್ಲಿ 8.2% ಇದ್ದ ಜಿಡಿಪಿ ಅಭಿವೃದ್ಧಿ ದರ 2013-14ರಲ್ಲಿ 4.6ಕ್ಕೆ ಕುಸಿದಿದೆ. 2004ರಲ್ಲಿ ಡಾಲರೊಂದಕ್ಕೆ 44ರೂ ಇದ್ದ ರೂಪಾಯಿ ಅಪಮೌಲ್ಯಗೊಂಡು 2013ರಲ್ಲಿ 69ಕ್ಕೆ ಕುಸಿಯಿತು. ಪ್ರತಿ ಬಾರಿಯ ಬಜೆಟ್‍ನಲ್ಲೂ ಕೇಂದ್ರದ ವಿತ್ತೀಯ ಕೊರತೆ ಹೆಚ್ಚುತ್ತಲೇ ಇದೆ. ಮೇಲ್ಮುಖ ಬೆಳವಣಿಗೆ ಹೊಂದಿದ್ದ ವಿದೇಶಿ ವಿನಿಮಯ ಮೀಸಲು ಇಂದು ಕರಗುತ್ತಿದೆ. ಪಾಶ್ರ್ವವಾಯು ಬಡಿದಂತಾದ ನೀತಿ ನಿರ್ಣಯ ವ್ಯವಸ್ಥೆಯ (policy
paralysis) ಪರಿಣಾಮ ಲಕ್ಷಾಂತರ ಕೋಟಿ ಮೊತ್ತದ ಯೋಜನೆಗಳು ಸರ್ಕಾರಿ ದಫ್ತರ್‍ಗಳ ಫೈಲುಗಳಲ್ಲಿ ಕೊಳೆಯುತ್ತಿವೆ. ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ಹೂಡಿಕೆಗೆ ಅವಕಾಶ ನೀಡುವಂತಹ ನೀತಿಗಳು ಸುಮಾರು ದೇಶದ ಉತ್ಪಾದನೆಯ 50%ರಷ್ಟು ಕೊಡುಗೆ ನೀಡುವ, 40ಕೋಟಿಗೂ ಅಧಿಕ ಉದ್ಯೋಗ ಒದಗಿಸುವ ಅಸಂಘಟಿತ ವಲಯದ ಸಾಮಾನ್ಯ ಉದ್ದಿಮೆಗಳ ಮೂಲಕ್ಕೇ ಕೊಡಲಿಯೇಟು ಹಾಕಿವೆ.
ಒಂದನ್ನೊಂದು ಮೀರಿಸುವ ಸಾಲು ಸಾಲು ಹಗರಣಗಳು: ಹಿಂದೆಂದೂ ಕಂಡುಕೇಳರಿಯದ ಪ್ರಮಾಣದ ಹಗರಣಗಳು ಕಳೆದ ಹತ್ತು ವರ್ಷಗಳಲ್ಲಿ ಹೊರಬಿದ್ದವು. ಕಾಮನ್‍ವೆಲ್ತ್, 2ಜಿ, ಕಲ್ಲಿದ್ದಲು, ವಾದ್ರಾ ಭೂ ಹಗರಣ, ಆದರ್ಶ ಸೊಸೈಟಿ, ರೈಲು ನೇಮಕಾತಿ, ಸೇನಾ ಶಸ್ತ್ರಾಸ್ತ್ರ ಖರೀದಿ, ಹೆಲಿಕಾಪ್ಟರ್ ಖರೀದಿ ಹಗರಣಗಳಾದಿಯಾಗಿ ಇತ್ತೀಚೆಗೆ ರಾಷ್ಟ್ರಪತಿ ಭವನದ ಸುರಕ್ಷೆಯೊಂದಿಗೂ ರಾಜಿ ಮಾಡಿಕೊಂಡು ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭೂಮಿಯನ್ನು ನೀಡುವ ಹಗರಣದವರೆಗೂ ಬ್ರಷ್ಟಾಚಾರದ ಚರಮ ಸೀಮೆಯನ್ನೂ ದಾಟುವ ಸಾಲು ಸಾಲು ದುವ್ರ್ಯವಹಾರಗಳು ಯುಪಿಎ ಸರ್ಕಾರದ ಆಶ್ರಯದಲ್ಲಿ ನಡೆದವು. 2ಜಿ ಮತ್ತು ಕಲ್ಲಿದ್ದಲು ಹಗರಣಗಳಲ್ಲಂತೂ ಸ್ವಯಂ ಪ್ರಧಾನಿಯವರ ಮೇಲೆ ಆರೋಪ ಕೇಳಿಬಂತು. ಕಲ್ಲಿದ್ದಲು ಹಂಚಿಕೆಗೆ ಸಂಭಂಧಿಸಿದ 257 ಕಡತಗಳು ಪ್ರಧಾನಿಯವರ ಕಛೇರಿಯಿಂದಲೇ ನಾಪತ್ತೆಯಾದವು ಎಂದರೆ ಬ್ರಷ್ಟತೆಯ ತೀವ್ರತೆಯನ್ನು ಊಹಿಸಬಹುದು.
ಗ್ರಾಹಕನಿಗೆ ಬೆಲೆಯೇರಿಕೆಯ ಬಿಸಿ, ರೈತನಿಗೆ ಸಿಗದ ನ್ಯಾಯವಾದ ಬೆಲೆ: ಆಹಾರ ವಸ್ತುಗಳು ಮತ್ತು ಜೀವನಾವಶ್ಯಕ ವಸ್ತುಗಳಲ್ಲಿನ ಅನಿಯಂತ್ರಿತ ಬೆಲೆಯೇರಿಕೆ ಜನರ ಜೀವನವನ್ನೇ ದುಸ್ತರಗೊಳಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಹಣದುಬ್ಬರ ದರ ಸರಾಸರಿ 9%ರ ಮೇಲೆಯೇ ಇದೆ. ಬೆಲೆಯೇರಿಕೆಯಿಂದ ರೈತರಿಗೆ ಲಾಭವಾಗಿದೆಯೇ? ಎಂದು ಕೇಳಿದರೆ ಖಂಡಿತ ಇಲ್ಲ, ತನ್ನ ಉತ್ಪಾದನೆಗೆ ನ್ಯಾಯವಾದ ಬೆಲೆ ಸಿಗದೆ ಕಂಗಾಲಾದ ರೈತರ ಆತ್ಮಹತ್ಯೆ ಪ್ರಕರಣಗಳು ಇಂದಿಗೂ ನಿಂತಿಲ್ಲ.
ಮಾರುಕಟ್ಟೆಯ ಏರಿಳಿತಗಳು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳನ್ನೂ ಬಾಧಿಸದೇ ಬಿಟ್ಟಿಲ್ಲ.
ದೇಶ ಪರಿವರ್ತನೆಯನ್ನು ಎದುರು ನೋಡುತ್ತಿದೆ. ಈ ಸರ್ಕಾರ ತೊಲಗಬೇಕು.
ಭಯ್ಯಾಜಿ ಜೋಷಿ
ಮಾನ್ಯ ಸರಕಾರ್ಯವಾಹರು, ರಾ. ಸ್ವ. ಸಂಘ
|
ಹಿಂದೂ ವಿರೋಧಿ ನೀತಿಗಳು: ರಾಮಸೇತುವನ್ನು ಒಡೆಯುವ ಹುನ್ನಾರ, ಅಮರನಾಥ ಯಾತ್ರೆಗೆ ಸರಿಯಾದ ಸೌಕರ್ಯವನ್ನೊದಗಿಸುವಲ್ಲಿ ಅಡಚಣೆ ಮಾಡುವುದು, ಬಹುಸಂಖ್ಯಾತ ಹಿಂದೂಗಳೊಂದಿಗೆ ಪಕ್ಷಪಾತ ಮಾಡುವ ಮತೀಯ ಹಿಂಸಾ ಕಾಯಿದೆಯಂತಹ ಕಾನೂನುಗಳನ್ನು ತರುವ ಪ್ರಯತ್ನ, ಕೇಸರಿ-ಹಿಂದೂ ಭಯೋತ್ಪಾದನೆ ಮುಂತಾದ ವ್ಯಾಖ್ಯೆಗಳನ್ನು ಪ್ರಚುರಗೊಳಿಸಿ ಹಿಂದೂಗಳನ್ನು ಭಯೋತ್ಪಾದನೆಯ ಕಟಕಟೆಯಲ್ಲಿ ನಿಲ್ಲಿಸುವ ಸಂಚು, ಸಾಧ್ವಿ ಪ್ರಗ್ಯಾ ಸಿಂಗ್, ಆಸಾರಾಮ್ ಬಾಪು ಮೊದಲಾದ ಸಂತರನ್ನು ನಡೆಸಿಕೊಳ್ಳುತ್ತಿರುವ ರೀತಿ, ಹಿಂದೂ ದೇವಾಲಯದ ಆಸ್ತಿಯನ್ನು ಕಬಳಿಸುವ ಹುನ್ನಾರ, ಪಿಂಕ್ ರವೊಲ್ಯುಶನ್ ಹೆಸರಿನಲ್ಲಿ ಮಾಂಸದ ರಫ್ರನ್ನು ಹೆಚ್ಚಿಸುವ ಸಲುವಾಗಿ ಗೋಹತ್ಯೆಗೆ ಪ್ರೋತ್ಸಾಹ ಮುಂತಾದವುಗಳನ್ನು ನೋಡಿದರೆ ಯುಪಿಎ ಸರ್ಕಾರದ ಹಿಂದೂ ವಿರೋಧಿ ನೀತಿ ಸ್ಫಷ್ಟವಾಗುತ್ತದೆ.
ಮುಸ್ಲಿಂ ತುಷ್ಟೀಕರಣ ಮತ್ತು ಮತಬ್ಯಾಂಕ್ ರಾಜಕೀಯ: ಅಲ್ಪಸಂಖ್ಯಾತರ ಅಭಿವೃದ್ಧಿಯ ಹೆಸರಿನಲ್ಲಿ ಕಾಂಗ್ರೆಸ್‍ನ ಸಾಂಪ್ರದಾಯಿಕ ಮತಬ್ಯಾಂಕ್ ಭದ್ರಗೊಳಿಸುವ, ಅದರಲ್ಲೂ ಮುಸ್ಲಿಂರನ್ನು ಓಲೈಸುವ ಕಾರ್ಯವನ್ನು ಈ ಸರ್ಕಾರ ಶ್ರದ್ಧೆಯಿಂದ ನಿರ್ವಹಿಸಿದೆ. ಮುಸ್ಲಿಮರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಯನ್ನು ಅರಿಯುವ ಸಲುವಾಗಿ ಸಾಚಾರ ಸಮಿತಿಯನ್ನು ನೇಮಿಸಿ, ಸಮಿತ ವರದಿಯ ಅನುಷ್ಠಾನದ ನೆಪದಲ್ಲಿ ಸಾವಿರಾರು ಕೋಟಿ ರೂಗಳನ್ನು ಕೇವಲ ಮುಸ್ಲಿಮರಿಗಾಗಿ ವೆಚ್ಚ ಮಾಡಿತು. ಮುಸ್ಲಿಮರಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ತರುವ ಪ್ರಯತ್ನವನ್ನೂ ಮಾಡಿತಲ್ಲದೇ ಖಾಸಗಿ ಸಂಸ್ಥೆಗಳೂ ಮುಸ್ಲಿಂ ಯುವಕರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು ಎಂದು ಹೇಳಿತು. ರಾಷ್ಟ್ರೀಯ ಅಭಿವೃದ್ಧಿ ಕೌನ್ಸಿಲ್ ಸಭೆಯಲ್ಲಿ ಮಾತನಾಡುತ್ತ ದೇಶದ ಪ್ರಧಾನಿ ಮನಮೋಹನ ಸಿಂಗ್ ‘ಈ ದೇಶದ ಸಂಪತ್ತಿನಲ್ಲಿ ಪ್ರಥಮ ಅಧಿಕಾರ ಮುಸ್ಲಿರಿಗಿದೆ’ ಎಂದು ಹೇಳುವ ಮಟ್ಟಿಗೆ ಯುಪಿಎ ಸರ್ಕಾರದ ತುಷ್ಟೀಕರಣ ನೀತಿ ಮುಂದುವರಿಯಿತು.
ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ: ಯುಪಿಎ 2004ರಲ್ಲಿ ಅಧಿಕಾರ ಹಿಡಿಯತ್ತಲೇ ವಾಜಪೇಯಿ ಸರ್ಕಾರ ಜಾರಿಗೊಳಿಸಿದ್ದ ಸಶಕ್ತ ಭಯೋತ್ಪಾದನಾ ನಿಗ್ರಹಾ ಕಾನೂನು ಪೋಟಾವನ್ನು ಹಿಂಪಡೆಯಿತು. ಅಫ್ಜಲ್ ಗುರುವಿನಂತಹ ದೇಶದ್ರೋಹಿ ಉಗ್ರನನ್ನೂ ಗಲ್ಲಿಗೇರಿಸುವಲ್ಲ್ಲಿ, 26/11ರ ಮುಂಬೈ ದಾಳಿಯೂ ಸೇರಿದಂತೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಶಿಕ್ಷೆಗೊಳಪಡಿಸುವಲ್ಲಿ ವಿಳಂಬ ನೀತಿಯನ್ನು ಅನುಸರಿಸಿತು. ಛತ್ತೀಸಗಢದಲ್ಲಿ ಪದೇ ಪದೇ ರಕ್ತ ಹರಿಸುತ್ತಿರುವ ಮಾವೋವಾದಿಗಳ ಬಗ್ಗೆ ಮೃದುಧೋರಣೆಯಷ್ಟೇ ಅಲ್ಲ ಮಾವೋವಾದಿಗಳಿಗೆ ಸಹಕಾರ ನೀಡಿದ್ದಕ್ಕಾಗಿ ನ್ಯಾಯಲಯದಿಂದ ರಾಷ್ಟದ್ರೋಹದ ಆರೋಪದಡಿ ಶಿಕ್ಷೆಗೆ ಗುರಿಯಾದ ಬಿನಾಯಕ ಸೇನ್‍ರನ್ನು ಯೋಜನಾ ಆಯೋಗದ ಆರೋಗ್ಯ ಸಮಿತಿಗೆ ನೇಮಿಸುವ ದಾಷ್ಟ್ರ್ಯವನ್ನು ತೋರಿತು. ಗಡಿಯಾಚೆಯ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದಲ್ಲದೇ ಮತ್ತೆ ಮತ್ತೆ ನಿಯಂತ್ರಣ ರೇಖೆಯ ಬಳಿ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವ ಪಾಕಿಸ್ತಾನಕ್ಕೆ ಖಡಕ್ಕಾದ ಎಚ್ಚರಿಕೆಯನ್ನು ರವಾನಿಸುವ ಬದಲು ಮಾತುಕತೆಗೆ ಆಹ್ವಾನಿಸಲಾಯಿತು. ಬಾಂಗ್ಲಾ ದೇಶಿಗರ ಅಕ್ರಮ ವಲಸೆಯಿಂದ ಅಸ್ಸಾಂ ಉರಿಯುತ್ತಿದ್ದರೂ ಕೇಂದ್ರ ಸರ್ಕಾರ ಮೌನವಾಗಿತ್ತು. ಲಢಾಕ್ ಮತ್ತು ಅರುಣಾಚಲ ಪ್ರದೇಶದ ಗಡಿಪ್ರದೇಶದಲ್ಲಿ ಚೀನಾ ನಡೆಸುತ್ತಿರುವ ಒತ್ತುವರಿಯನ್ನು ಬಲವಾಗಿ ವಿರೋಧಿಸುವ ಬದಲು ಗಡಿಸುರಕ್ಷಾ ಪಡೆಯ ಸಲಹೆಯನ್ನೂ ಮೀರಿ ಏನೂ ಆಗಿಲ್ಲವೆಂಬಂತೆ ತಳ್ಳಿಹಾಕಲಾಯಿತು. ಉತ್ತರದ ಲಢಾಕ್‍ನಲ್ಲಿ ಚೀನಾ ಸೇನೆಯು 19ಕಿಮೀ ಒಳಬಂದ ಘಟನೆಯನ್ನು ನಮ್ಮ ಪ್ರಧಾನಿ ‘ಇದೊಂದು ಸ್ಥಳೀಯ ಸಮಸ್ಯೆಯಷ್ಟೇ’ ಎಂದುಬಿಟ್ಟರು!
ದುರ್ಬಲ ವಿದೇಶಿ ನೀತಿ, ಅಂತರರಾಷ್ಟ್ರೀಯ ವಲಯದಲ್ಲಿ ಭಾರತದ ಮಾನ ಹರಾಜು: ವಾಜಪೇಯಿ ಸರ್ಕಾರದ ಸಮಯದಲ್ಲಿ ಕೈಗೊಂಡ ವಿದೇಶಿ ನೀತಿಯಿಮದಾಗಿ ಪೂರ್ವದ ದೇಶಗಳೊಂದಿಗೆ ಸಂಭಂಧ ವಧಿಸಿದ್ದಲ್ಲದೇ ವ್ಯಾಪಾರಿ ದೃಷ್ಟಿಯಿಂದ ಆಯಕಟ್ಟಿನ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತ ನಾಯಕತ್ವ ವಹಿಸುವ ಕಡೆಗೆ ಹೆಜ್ಜೆಹಾಕಿತ್ತು. ಅಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರತ ಗೌರವನೀಯ ಸ್ಥಾನ ಪಡೆದಿಂತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರದ ವಿದೇಶಿ ನೀತಿಗಳು ಅಂತರರಾಷ್ಟ್ರೀಯ ನೀತಿಗಳ ಪರಿಣಾಮ ಕೇರಳದ ಮೀನುಗಾರರನ್ನು ಇಟಲಿಯ ನಾವಿಕರು ಗುಂಡಿಕ್ಕಿ ಸಾಯಿಸಿದ ಪ್ರಕರಣದಲ್ಲಿ ಕಂಡಂತೆ ಚಿಲ್ಲರೆ ಇಟಲಿ ದೇಶವೂ ಭಾರತದ ಸಾರ್ವಭೌಮತೆಗೆ ಸವಾಲು ಹಾಕುವಷ್ಟು ಧೈರ್ಯ ಮಾಡಿತು. ಚೀನಾ, ಪಾಕಿಸ್ತಾನಗಳಂತೂ ಆಗಾಗ ಕ್ಯಾತೆ ತೆಗೆಯುತ್ತಲೇ ಇರುತ್ತವೆ.
ವಂಶವಾದ: ರಾಹುಲ್ ಗಾಂಧಿ ಕಾಂಗ್ರೆಸ್‍ನ ಸರ್ವೋಚ್ಛ ನಾಯಕರಾಗ ನೆಹರು-ಗಾಂಧಿ ಕುಟುಂಬದ ಕುಡಿಯೆಂಬ ಒಂದೇ ಅರ್ಹತೆ ಸಾಕು. ವಂಶವಾದ ಕಾಂಗ್ರೆಸ್‍ನ ಅಘೋಷಿತ ನಿಯಮ. ನೆಹರು-ಗಾಂಧಿ ವಂಶದ ಆಶ್ರಯದಲ್ಲಿ ಇನ್ನೂ ಅನೇಕ ನಣ್ಣ ಪುಟ್ಟ ಸಾಮಂತ ವಂಶಗಳು ತಮ್ಮ ತಮ್ಮ ಸಂತತಿಯ ರಾಜಕೀಯ ಭವಿಷ್ಯವನ್ನು ನಿರ್ಮಿಸಿಕೊಳ್ಳುವ ಪರಂಪರೆ ಕಾಂಗ್ರೆಸ್‍ನಲ್ಲಿ ಸಾಮಾನ್ಯವಾಗಿಹೋಗಿದೆ. 120ಕೋಟಿ ಜನಸಂಖ್ಯೆಯ ಭಾರತದ ಪ್ರಧಾನಿಯಾಗಿ ಹತ್ತು ವರ್ಷಗಳ ಕಾಲ ಕುರ್ಚಿಯಲ್ಲಿ ಕುಳಿತರೂ ಇತಿಹಾಸ ಕಂಡ ಅತ್ಯಂತ ದುರ್ಬಲ ಪ್ರಧಾನಿಯೆಂಬ ಕುಖ್ಯಾತಿಗೊಳಗಾಗಿರುವ ಡಾ. ಮನಮೋಹನ ಸಿಂಗ್‍ರೂ ಗಾಂಧಿ ಕುಟುಂಬದ ಕೈಗೊಂಬೆಯಾದುದು ಈ ದೇಶದ ದೌರ್ಭಾಗ್ಯ.
ಸಿಬಿಐ, ಐಬಿ, ಸಿಎಜಿ, ಸಶಸ್ತ್ರ ಸೇನೆ ಮೊದಲಾದ ಸಂಸ್ಥೆಗಳ ಸ್ಥೈರ್ಯಗೆಡಿಸುವ ಪ್ರಯತ್ನ: ಸಿಬಿಐ ಮೊದಲಾದ ತನಿಖಾ ಸಂಸ್ಥೆಗಳು ಸರ್ಕಾರಕ್ಕೆ ಸಂಖ್ಯಾ ಬೆಂಬಲವನ್ನು ಖಾತ್ರಿ ಪಡಿಸುವ ಹಾಗು ವಿರೋಧಿಗಳನ್ನು ಹಳಿಯುವ ಸಲಕರಣೆಗಳಾಗಿ ಬಳಕೆಯಾದವು. ಸಿವಿಸಿ, ಸಿಎಜಿ, ಐಬಿ ಮುಂತಾದ ಸಂಸ್ಥೆಗಳನ್ನು ದುರ್ಬಲಗೊಳಿಸುವ, ನಿಶ್ಶ್ಯಕ್ತ ಲೋಕಪಾಲ್ ಕಾನೂನನ್ನು ಜಾರಿಗೊಳಿಸುವ ಪ್ರಯತ್ನಗಳನ್ನು ಯಥೇಚ್ಛವಾಗಿ ಮಾಡಲಾಯಿತು. ಪಾಕಿಸ್ತಾನಿಗಳು ಭಾರತೀಯ ಸೈನಿಕರ ರುಂಡವನ್ನು ಕಡಿದು ಕೊಂಡೊಯ್ದರೂ ಸಮರ್ಥವಾಗಿ ಪ್ರತಿಭಟಿಸಿ, ಹುತಾತ್ಮ ಸೈನಿಕರ ಗೌರವ ರಕ್ಷಿಸುವಲ್ಲಿ ಸರ್ಕಾರ ವಿಫಲವಾಯಿತು. ಸೇನೆಯ ದಂಡನಾಯಕ ಜನರಲ್ ವಿ ಕೆ ಸಿಂಗ್‍ರು ತಮ್ಮ ಹುಟ್ಟಿದ ದಿನಾಂಕವನ್ನು ಸಾಬೀತುಪಡಿಸುವ ಸಲುವಾಗಿ ನ್ಯಾಯಾಲಯಕ್ಕೆ ಹೋಗಬೇಕಾದ ದುಃಸ್ಥಿತಿ ನಿರ್ಮಾಣವಾಯಿತು. ಭಾರತೀಯ ನೌಕಾಸೇನೆಯಲ್ಲಿ ಗುಜರಿ ಹಿಡಿದಿರುವ ಉಪಕರಣಗಳಿಂದಾಗಿ ಕಳೆದ 7 ತಿಂಗಳಲ್ಲಿ 11 ಅಪಘಾತಗಳಾಗಿ 22 ಮಂದಿ ಪ್ರತಿಭಾನ್ವಿತ ಅಧಿಕಾರಿಗಳು ಮರಣಹೊಂದಿದರು. ಗಡಿಕಾಯುವ ಸೈನಿಕರ ಸ್ಥಿತಿಗತಿಯಂತೂ ಕರುಣಾಜನಕವಾಗಿದೆ. ಇದುವರೆಗೂ ನಿವೃತ್ತ ಸೈನಿಕರ ಸಮಸ್ಯೆಗಳಿಗೆ ಕಿವುಡಾಗಿದ್ದ ಸರ್ಕಾರ ಚುನಾವಣೆಯ ಹೊಸ್ತಿನಲ್ಲಿ ಒಂದು ರ್ಯಾಂಕ್‍ಗೆ ಒಂದೇತರದ ನಿವೃತ್ತಿ ವೇತನ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೂ ಮತದ ಮೇಲಿನ ಹೊಂಚಿನಿಂದಲ್ಲದೇ ಇನ್ನೇನು ಅಲ್ಲ.
ಪಟ್ಟಿ ಮಾಡುತ್ತ ಹೊದರೆ ಯುಪಿಎ ಸರ್ಕಾರದ ಕಳೆದ ಒಂದು ದಶಕದ ದುರಾಡಳಿತದ ಕಥನ ಬೆಳೆಯುತ್ತಲೇ ಹೋಗುತ್ತದೆ. ಇದಕ್ಕೆಲ್ಲ ಹೊಣೆ ಹೊರಬೇಕಾದವರು ಯಾರು? ಮತದಾರರಾದ ನಾವೇ. ಪ್ರಜಾಪ್ರಭುತ್ವದ ಹಬ್ಬವೆಂದೇ ಪರಿಗಣಿತವಾಗಿರುವ ಸಾರ್ವತ್ರಿಕ ಚುನಾವಣೆಯ ಸಂಧರ್ಭದಲ್ಲಿ ದೇಶದ ಪ್ರಜೆಗಳಾದ ನಾವು ನಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆ ಒಂದೇ. ಇಂತಹ ದುರಾಡಳಿತ ಇನ್ನೂ ಮುಂದುವರಿಯಬೇಕೆ? ಭಾರತ ಇನ್ನೂ ಕುಸಿಯಬೇಕೆ? ನಮ್ಮ ಉತ್ತರ ಇಲ್ಲವೆಂದಾದರೆ ಪರಿವರ್ತನೆಗಾಗಿ ಮತ ಚಲಾಯಿಸುವ ಅವಕಾಶ ಈಗ ಒದಗಿ ಬಂದಿದೆ. ಈ ಚುನಾವಣೆಯಲ್ಲಿ ನಾವು ನಿರ್ಧರಿಸುತ್ತಿರುವುದು ದೇಶದ ಭವಿಷ್ಯವನ್ನು; ನೆನಪಿರಲಿ.