ಹದಿನಾರನೇ ಲೋಕಸಭೆಯ ಆಯ್ಕೆಗಾಗಿ ಸಾರ್ವತ್ರಿಕ ಚುನಾವಣೆ ಮುಗಿದು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜನಪ್ರಿಯ ಸರ್ಕಾರವು ಪ್ರತಿಷ್ಠಾಪನೆಗೊಂಡಿದೆ. ಒಟ್ಟೂ ಚುನಾವಣೆಯ ಪ್ರಕ್ರಿಯೆ ಮತ್ತು ಫಲಿತಾಂಶಗಳನ್ನು ವಿಶ್ಲೇಷಿಸಿದರೆ ಕೆಲವು ಧನಾತ್ಮಕ ಮತ್ತು ಕುತೂಹಲಕರ ಅಂಶಗಳು ನಮ್ಮ ಮುಂದೆ ಅನಾವರಣಗೊಳ್ಳುತ್ತವೆ.
- 2014ರ ಲೋಕಸಭಾ ಚುನಾವಣೆಯಲ್ಲಿ ಶೇ 66.4ರಷ್ಟು ಮತದಾನವಾಯಿತು. ಸುಮಾರು 55.1ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಇದು ಅತೀ ಹೆಚ್ಚಿನ ಮತದಾನದ ಪ್ರಮಾಣವಾಗಿದ್ದು ಮತದಾರರ ಹೆಚ್ಚಿನ ಪಾಲ್ಗೊಳ್ಳುವಿಕೆಯಿಂದ ಪ್ರಜಾಪ್ರಭುತ್ವ ಗಟ್ಟಿಗೊಂಡಿದೆ. 1984ರ ಚುನಾವಣೆಯ ಶೇ. 64ರಷ್ಟು ಮತದಾನ ಈ ವರೆಗಿನ ದಾಖಲೆಯಾಗಿತ್ತು.
- 1984ರ ನಂತರ ಇದೇ ಮೊದಲ ಬಾರಿಗೆ ಒಂದು ಪಕ್ಷಕ್ಕೆ ಪೂರ್ಣ ಬಹುಮತ ದೊರಕಿದ್ದು ಕೇಂದ್ರ ಸರ್ಕಾರದಲ್ಲಿ ಆಡಳಿತ ಸ್ಥಿರತೆಗೆ ದೇಶದ ಒಲವು ಸ್ಪಷ್ಟವಾಗಿದೆ. ಹಾಗೆಯೇ 282 ಕ್ಷೇತ್ರಗಳಲ್ಲಿ ಜಯಳಿಸಿದ ಬಿಜೆಪಿ ಮೊದಲ ಕಾಂಗ್ರೆಸ್ಸೇತರ ಪಕ್ಷವಾಗಿ ಹೊರಹೊಮ್ಮಿದ್ದು, ಹೀನಾಯವಾಗಿ ಸೋಲಿಗೊಳಗಾದ ಕಾಂಗ್ರೆಸ್ ಹಾಗೂ ಅದರ ರಾಜಕೀಯ ಸಿದ್ಧಾಂತ ಮತ್ತು ಇತರ ಸಣ್ಣ ಪುಟ್ಟ ಕುಟಂಬ ಆಧಾರಿತ ಪ್ರಾದೇಶಿಕ ಪಕ್ಷಗಳನ್ನು ಜನತೆ ತಿರಸ್ಕರಿಸಿದ್ದು ಇದರಿಂದ ಸ್ಫುಟವಾಗಿ ಗೋಚರವಾಗುತ್ತದೆ.
- ಉತ್ತರದ ಲಢಾಕ್‍ನಿಂದ ದಕ್ಷಿಣದ ಕನ್ಯಾಕುಮಾರಿ, ಪೂರ್ವದ ಅರುಣಾಚಲದಿಂದ ಪಶ್ಚಿಮದ ಕಛ್‍ವರೆಗಿನ ದೇಶದಾದ್ಯಂತ ಹರಡಿರುವ ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದ ಭಾರತೀಯ ಜನತಾ ಪಾರ್ಟಿ ನಿಜಾರ್ಥದಲ್ಲಿ ಒಂದು ಸದೃಢ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ.
- ಸಂಭವನೀಯ ಮತಹಂಚಿಕೆಯನ್ನು ವಿಶ್ಲೇಷಿಸಿದಾಗ ಮತದಾರರು ಜಾತಿ ಮತಗಳನ್ನು ಮೀರಿ ಬಿಜೆಪಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಮಿತ್ರ ಪಕ್ಷಗಳನ್ನು ಬೆಂಬಲಿಸಿದ್ದು ಕಂಡುಬರುತ್ತದೆ. ದಲಿತ ಹಿಂದುಳಿದ ವರ್ಗಗಳ ಮತದಾರರಷ್ಟೇ ಅಲ್ಲದೇ ಮುಸ್ಲಿಮರೂ ಕೂಡ ಸುಶಾಸನ ಹಾಗೂ ಅಭಿವೃದ್ಧಿಯ ಪರವಾಗಿ ಬಿಜೆಪಿಯನ್ನು ಬೆಂಬಲಿಸಿದ್ದು ಸ್ಪಷ್ಟವಾಗುತ್ತದೆ. ಒಂದು ಅಂದಾಜಿನ ಪ್ರಕಾರ ಸುಮಾರು ಶೇ. 39ಕ್ಕೂ ಹೆಚ್ಚು ದಲಿತ ಮತ್ತು ಹಿಂದುಳಿದ ವರ್ಗದ ಮತದಾರರು ಬಿಜೆಪಿಯನ್ನು ಬೆಂಬಲಿಸಿದರೆ ಕೇವಲ ಶೇ. 15ರಷ್ಟು ಮಾತ್ರ ಕಾಂಗ್ರೆಸ್ಸನ್ನು ಬೆಂಬಲಿಸಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಜಾರ್ಖಂಡ, ಛತ್ತೀಸ್‍ಗಢ ಮೊದಲಾದ ರಾಜ್ಯಗಳ ಫಲಿತಾಂಶವು ಜಾತಿ ವರ್ಗೀಕರಣದ ಆಧಾರದ ಮೇಲೆ ಮತಬ್ಯಾಂಕನ್ನು ಭದ್ರ ಪಡಿಸಿಕೊಳ್ಳುತ್ತಿದ್ದ ಕೆಲವು ರಾಜಕೀಯ ಪಕ್ಷಗಳ ತಂತ್ರಗಾರಿಕಯನ್ನು ಬುಡಮೇಲುಮಾಡಿದೆ.
- ಮುಸ್ಲಿಂ ಮತದಾರರು ನಿರ್ಣಾಯಕವಾಗಿರುವ ಸುಮಾರು 87 ಕ್ಷೇತ್ರಗಳ ಪೈಕಿ ಬಿಜೆಪಿ 47ರಲ್ಲಿ ಜಯಸಾಧಿಸಿದ್ದು ಮುಸ್ಲಿಂ ಓಲೈಕೆ ಮತಬ್ಯಾಂಕ್ ರಾಜಕಾರಣಕ್ಕೆ ಹಿನ್ನಡೆಯಾಗಿದೆ. ಅಲ್ಲದೇ ಮುಸ್ಲಿಂ ಓಲೈಕೆಯಿಲ್ಲದೆಯೂ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ತೋರಿಸಿಕೊಟ್ಟಂತಾಗಿದೆ. ಶೇ. 20ಕ್ಕೂ ಹೆಚ್ಚು ಮುಸ್ಲಿಂ ಜನಸಂಖ್ಯೆಯಿರುವ ಪ್ರದೇಶಗಳಲ್ಲೂ ಬಿಜೆಪಿಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿಯ ಪರವಾಗಿ ಮುಸ್ಲಿಂ ಸಮುದಾಯದ ಧೋರಣೆ ಬದಲಾಗುತ್ತಿರುವುದನ್ನು ಸೂಚಿಸುತ್ತದೆ. ಬಿಜೆಪಿಯು 7 ಮುಸ್ಲಿಂ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಿದ್ದನ್ನು ಹಾಗೂ ಅನೇಕ ಮುಸ್ಲಿಂ ಸಮುದಾಯದ ಅನೇಕ ನಾಯಕರು ಬಿಜೆಪಿಯ ಪರವಾಗಿ ಪ್ರಚಾರಗೈದಿದ್ದನ್ನು ಇಲ್ಲಿ ಗಮನಿಸಬಹುದು.
- ಕರ್ನಾಟಕದ 28 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 132 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿಗೆ ಮುನ್ನಡೆ ದೊರೆತಿದೆ. ಒಂದು ವರ್ಷ ಹಿಂದೆ ನಡೆದ ಚುನಾವಣೆಯಲ್ಲನುಭವಿಸಿದ ಸೋಲಿಗೆ ಹೋಲಿಸಿದರೆ ಬಿಜೆಪಿಯ ಜನಬೆಂಬಲದಲ್ಲಿ ಗಣನೀಯವಾದ ವೃದ್ಧಿಯಾಗಿದೆ.
- ಚುನಾವಣೆಯ ಪ್ರಚಾರ ಸಂಧರ್ಭದಲ್ಲಿ ರಾಷ್ಟ್ರೀಯ ಸುರಕ್ಷೆ, ಬಾಂಗ್ಲಾ ನುಸುಳುಕೋರರ ಸಮಸ್ಯೆ, ಸುಶಾಸನ, ಆರ್ಥಿಕ ಅಭಿವೃದ್ಧಿ, ಜಮ್ಮು ಕಾಶ್ಮೀರ-370ನೇ ವಿಧಿ, ಗಂಗಾ ಪುನರುಜ್ಜೀವನ ಮೊದಲಾದ ಮಹತ್ವಪೂರ್ಣ ವಿಷಯಗಳ ಬಗ್ಗೆ ವ್ಯಾಪಕ ಚರ್ಚೆ ನಡೆದಿದ್ದು ಇದೊಂದು ಪ್ರಜಾಪ್ರಭುತ್ವದ ಉತ್ತಮ ಬೆಳವಣಿಗೆಯಾಗಿದೆ.
- ಚುನಾವಣೆಯ ಪ್ರಚಾರದಲ್ಲಿ ಸೋಷಿಯಲ್ ಮೀಡಿಯ, ತಂತ್ರಜ್ಞಾನ ಮೊದಲಾದುವುಗಳ ವ್ಯಾಪಕ ಬಳಕೆಯಾಗಿದ್ದು ಮುಂಬರುವ ಚುನಾವಣೆಗಳಲ್ಲಿ ಪ್ರಚಾರದ ಕ್ರಮವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ.
- ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಮತದಾರರ ಜಾಗೃತಿ, ಮತ ಚಲಾವಣೆಯನ್ನು ಹೆಚ್ಚಿಸುವ ಮತ್ತು ರಾಷ್ಟ್ರೀಯ ವಿಚಾರಧಾರೆಯ ಪರವಾಗಿ ಮತಚಲಾಯಿಸುವಂತೆ ಜನರನ್ನು ಪ್ರೇರೇಪಿಸುವ ಕಾರ್ಯದಲ್ಲಿ ನೇರವಾಗಿ ಪಾಲ್ಗೊಂಡಿತು. ಸಂಘಟಿತ ಪ್ರಯತ್ನವು ಸತ್ಪರಿಣಾಮವನ್ನು ನೀಡಿದ್ದು ಇನ್ನೊಮ್ಮೆ ಸಂಘ ಸಾಮಥ್ರ್ಯದ ಸಾಬೀತಾಗಿದೆ.
ಐತಿಹಾಸಿಕವೆನ್ನಬಹುದಾದ 2014ರ ಚುನಾವಣೆಯು ಭ್ರಷ್ಟ ಯುಪಿಏ ಸರ್ಕಾರದ ದಶಕದ ಕುಶಾಸನವನ್ನು ಕೆಳಗಿಳಿಸಿ ಸಮರ್ಥ ನಾಯಕತ್ವದ, ರಾಷ್ಟ್ರೀಯತೆಯ ಪ್ರತಿಪಾದಕ ಸ್ಥಿರ ಸರ್ಕಾರದ ಸ್ಥಾಪನೆಗೆ ಅಣಿಮಾಡಿಕೊಟ್ಟಿದೆ. ಈಗಾಗಲೇ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವ ನರೇಂದ್ರ ಮೋದಿಯವರ ನೇತೃತ್ವದ ಎನ್‍ಡಿಎ ಸರ್ಕಾರ ಜನತೆಯ ಆಶೋತ್ತರಗಳಿಗೆ ಪ್ರತಿಸ್ಪಂದಿಸುವುದರ ಜೊತೆಗೆ ಮತ್ತೊಮ್ಮೆ ವಿಶ್ವಗುರುವಾಗುವ ಭಾರತದ ಕನಸನ್ನು ಸಾಕಾರಗೊಳಿಸುವತ್ತ ಹೆಜ್ಜೆ ಹಾಕಲಿ ಎನ್ನುವುದು ರಾಷ್ಟ್ರಪ್ರೇಮಿಗಳ ಸದಾಶಯವಾಗಿದೆ.