Saturday, September 27, 2014

ನೆರೆಹೊರೆಯ ಏಷಿಯ ದೇಶಗಳ ನೇತೃತ್ವ ವಹಿಸುವತ್ತ ಭಾರತ "ಅಸಾಧ್ಯವಲ್ಲ ಅಖಂಡ ಭಾರತ"


(ಪುಂಗವ: 01/10/2014)

        ವಿಷ್ಣುಪುರಾಣದಲ್ಲಿ ಉಲ್ಲಿಖಿತವಾಗಿರುವಂತೆ ‘ಉತ್ತರಮ್ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಮ್| ವರ್ಷಂ ತದ್ ಭಾರತಮ್ ನಾಮ ಭಾರತೀ ಯತ್ರ ಸಂತತಿಃ|| ಅಂದರೆ ಉತ್ತರದ ಹಿಮಾಲಯ ಮತ್ತು ದಕ್ಷಿಣದ ಸಾಗರದ ಪರ್ಯಂತ ಪಸರಿಸಿರುವ ಪ್ರದೇಶವನ್ನು ಭಾರತವರ್ಷ ಎಂದು ಕರೆಯಲಾಗುತ್ತದೆ. ಹಾಗೆಯೇ ಬ್ರಹಸ್ಪತಿ ಆಗಮದ ಒಂದು ಶ್ಲೋಕದಲ್ಲಿ ‘ಹಿಮಾಲಯಂ ಸಮಾರಭ್ಯ ಯಾವತ್ ಇಂದು ಸರೋವರಮ್| ತಂ ದೇವನಿರ್ಮಿತಮ್ ದೇಶಮ್ ಹಿಂದುಸ್ತಾನಮ್ ಪ್ರಚಕ್ಷತೇ||’ - ಹಿಮಾಲಯದಿಂದ ಆರಂಭಗೊಂಡು ಹಿಂದೂ ಮಹಾಸಾಗರದ ನಡುವಿನ ದೇವನಿರ್ಮಿತ ದೇಶವನ್ನು ಹಿಂದುಸ್ತಾನವೆಂದು ಕರೆಯಲಾಗುತ್ತದೆ ಎಂದು ಹೇಳಲಾಗಿದೆ. ಧಾರ್ಮಿಕ ವಿಧಿವಿಧಾನಗಳ ಆರಂಭದಲ್ಲಿ ಸಂಕಲ್ಪಮಾಡುವಾಗ ಜಂಬೂದ್ವೀಪೇ, ಭರತಖಂಡೇ ಭಾರತವರ್ಷೇ ಹೀಗೆ ಸ್ಥಳನಿರ್ದೇಶವನ್ನು ಹೇಳಲಾಗುತ್ತದೆ. ವಿಶ್ವದ ನಕ್ಷೆಯನ್ನು ನಮ್ಮ ಕಣ್ಣಮುಂದಿರಿಸಿದರೆ ಸುಮಾರು 5000 ಶಿಖರಗಳು ಮತ್ತು 6000ಕ್ಕೂ ಹೆಚ್ಚು ನದಿಗಳ ಮೂಲವಾದ ಹಿಮಾಲಯ ಪರ್ವತ ಶ್ರೇಣಿಯು ಪೂರ್ವದಲ್ಲಿ ಇಂದಿನ ಇಂಡೋನೇಶಿಯವರೆಗೆ ಮತ್ತು ಪಶ್ಚಿಮದಲ್ಲಿ ಇಂದಿನ ಇರಾನಿನವರೆಗೆ ವ್ಯಾಪಿಸಿರುವುದು ತಿಳಿಯುತ್ತದೆ. ಅಂತೆಯೇ ಹಿಂದೂ ದಕ್ಷಿಣದ ಮಹಾಸಾಗರವೂ ಕೂಡ ಈ ಎರಡು ದೇಶಗಳ ಗಡಿಯವರೆಗೆ ವಿಸ್ತರಿಸಿದೆ. ಇದರಿಂದ ಪುರಾಣಗಳಲ್ಲಿ ಹೇಳಲಾದ ಅಖಂಡ ಭಾರತವು ಪೂರ್ವದ ಜಾವಾ ಸುಮಾತ್ರಾ, ಬಾಲಿ ದ್ವೀಪಗಳನ್ನೊಳಗೊಂಡ ಇಂಡೋನೇಶಿಯಾದಿಂದ ಪಶ್ಚಿಮದ ಇರಾನಿನವರೆಗೆ ವ್ಯಾಪಿಸಿರುವುದು ಸ್ಫಷ್ಟವಾಗಿ ಗೋಚರವಾಗುತ್ತದೆ. ಸಹಸ್ರಾರು ವರ್ಷಗಳಲ್ಲಿ ವಿಕಾಸಗೊಂಡ ಶ್ರೇಷ್ಟ ನಾಗರಿಕ ಪರಂಪರೆಯ ಚರಿತ್ರೆ ಈ ನೆಲಕ್ಕಿದೆ. ಕಳೆದ 2500 ವರ್ಷಗಳಲ್ಲಿ ಯವನ, ಹೂಣ, ಶಕ, ತುರ್ಕ, ಮೊಘಲರಾದಿಯಾಗಿ ಪೋರ್ಚುಗೀಸ್ ಇಂಗ್ಲೀಷರವರೆಗೆ ವಿದೇಶಿ ಆಕ್ರಮಣಕಾರರ ದಾಳಿ ಈ ನೆಲದ ಮೇಲಾಯಿತು. ಆದರೆ ಇತಿಹಾಸದ ಪುಸ್ತಕಗಳಲ್ಲಿ ಭಾರತ ಅಥವಾ ಹಿಂದುಸ್ತಾನದ ಮೇಲೆ ಆಕ್ರಮಣವಾಯಿತು ಎಂದು ಬರೆಯಲಾಗಿದೆಯೇ ಹೊರತು ಪ್ರತ್ಯೇಕವಾಗಿ ಅಪಘಾನಿಸ್ತಾನ, ಬರ್ಮಾ, ಸಿಂಹಳಗಳ ಮೇಲೆ ದಾಳಿಯಾಯಿತೆಂದು ಎಲ್ಲಿಯೂ ಹೇಳಲಾಗಿಲ್ಲ.

ಬ್ರಿಟಿಷ್ ಆಡಳಿತದಿಂದ ಸ್ವತಂತ್ರಗೊಂಡ ಹೊಸ್ತಿಲಲ್ಲಿ ಭಾರತ ವಿಭಜನೆಗೊಂಡ ಇತಿಹಾಸ ಎಲ್ಲರಿಗೂ ಪರಿಚಿತವಿದೆ. ಆದರೆ ವಿಶಾಲ ಭಾರತವರ್ಷ ಇದುವರೆಗೂ 24 ಬಾರಿ ವಿಭಜನೆಗೊಂಡಿದೆ. 1857ರಲ್ಲಿ ಭಾರತದ ವಿಸ್ತೀರ್ಣ 83ಲಕ್ಷ ಚದರ ಕಿಮೀ ಇತ್ತು. ಇಂದಿನ ಭಾರತದ 33ಲಕ್ಷ ಚಕಿಮೀ ವಿಸ್ತೀರ್ಣ ಹೊಂದಿದ್ದರೆ ನೆರೆಹೊರೆಯ ದೇಶಗಳ ಒಟ್ಟೂ ವಿಸ್ತೀರ್ಣ ಸುಮಾರು 50ಲಕ್ಷ ಚಕಿಮೀ ಆಗಿದೆ. 1800ಕ್ಕೂ ಮೊದಲು ಇಂದು ಭಾರತದ ನೆರೆಹೊರೆಯಾಗಿರುವ ಯಾವ ದೇಶವೂ ಅಸ್ತಿತ್ವದಲ್ಲಿರಲಿಲ್ಲ. ಇಡೀ ಅಖಂಡ ಭಾರತವು ಒಂದು ರಾಜಕೀಯ ಆಡಳಿತಕ್ಕೆ ಒಳಗಾಗಗಿರಲಿಲ್ಲ ನಿಜ, ಈ ಪ್ರದೇಶಗಳಲ್ಲಿ ಸ್ವತಂತ್ರ ಆಡಳಿತಗಳಿದ್ದವು. ಆದರೆ ಸಾಂಸ್ಕøತಿಕವಾಗಿ ಈ ಎಲ್ಲ ರಾಜ್ಯಗಳು ಭಾರತವರ್ಷದ ಅಂಗಗಳಾಗಿದ್ದವು, ಅವುಗಳ ನಡುವೆ ವ್ಯಾಪಾರ ವಹಿವಾಟು, ತೀರ್ಥ ಪರ್ಯಟನೆ, ಜನಸಂಪರ್ಕ ಅವ್ಯಾಹತವಾಗಿ ನಡೆದಿತ್ತು. ಅಲ್ಲದೇ ಆಗ್ನೇಯ ಏಷಿಯ ದೇಶಗಳು, ಚೀನಾ ಮತ್ತು ಜಪಾನ್ ದೇಶಗಲೂ ಸಹ ವಿಶಾಲ ಭಾರತೀಯ ಸಂಸ್ಕøತಿಯ ಪ್ರಭಾವದಲ್ಲಿದ್ದವು.  1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ರಷಿಯ ಮತ್ತು ಚೀನಾ ದೇಶಗಳ ನಡುವೆ ತಡೆ ದೇಶಗಳನ್ನು (buffer state) ನಿರ್ಮಿಸುವ ಬ್ರಿಟಿಷರ ಕೂಟನೀತಿಯು ಅಪಘಾನಿಸ್ತಾನ, ನೇಪಾಳ, ಟಿಬೇಟ್, ಭೂತಾನ್, ಬರ್ಮಾ ಮೊದಲಾದ ದೇಶಗಳ ಜನ್ಮಕ್ಕೆ ಕಾರಣವಾಯಿತು.  

        ರಾಜಕೀಯವಾಗಿ ಬೇರೆ ಬೇರೆಯಾಗಿರುವ ನೆರೆಹೊರೆಯ ದೇಶಗಳಿಗೆ ಭಾರತ ಮಾತೃಸ್ಥಾನದಲ್ಲಿದೆ. ಅಮೇರಿಕ ಮತ್ತು ಯೂರೋಪಿನ ರಾಷ್ಟ್ರಗಳ ದೊಡ್ಡಣ್ಣನ ನೀತಿ ಹಾಗೂ ಚೀನಾದ ವಿಸ್ತರಣಾವಾದಗಳ ನಡುವೆ ತಮ್ಮತಮ್ಮ ದೇಶಗಳ ಸಾರ್ವಭೌಮತೆ ಮತ್ತು ಹಿತವನ್ನು ಕಾಯ್ದುಕೊಳ್ಳುವ ಸಲುವಾಗಿ ಈ ಎಲ್ಲ ದೇಶಗಳು ಇಂದಿಗೂ ಭಾರತದತ್ತ ಆಶಾಭಾವದಿಂದ ಮುಖಮಾಡುತ್ತಿವೆ. ಈ ನಿಟ್ಟಿನಲ್ಲಿ ಧನಾತ್ಮಕವಾಗಿ ಸ್ಪಂದಿಸಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿದೇಶಿ ನೀತಿಯು ಬೃಹತ್ ಭಾರತವೆಂದು(Greater India) ಕರೆಯಬಹುದಾದ ದಕ್ಷಿಣ ಏಷಿಯ ಮತ್ತು ಆಗ್ನೇಯ ಏಷಿಯ ದೇಶಗಳ ನಡುವೆ ಸಂಬಂಧಗಳನ್ನು ವರ್ಧಿಸುವಲ್ಲಿ ಪೂರಕವಾಗಿದೆ. ಸರ್ಕಾರದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಾರ್ಕ(South Asian Association for Regional Cooperation) ದೇಶಗಳ ನಾಯಕರನ್ನು ಆಹ್ವಾನಿಸಲಾಯಿತು. ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ ತಮ್ಮ ಅರಂಭಿಕ ವಿದೇಶ ಯಾತ್ರೆಗಳಿಗಾಗಿ ಭೂತಾನ ಮತ್ತು ನೇಪಾಳವನ್ನು ಆಯ್ದುಕೊಂಡರು. ಇಸ್ರೋದ ಯಶಸ್ವೀ ಉಪಗ್ರಹ ಉಡಾವಣೆಯ ನಂತರ ಮಾತನಾಡಿದ ಪ್ರಧಾನಿ ಸಾರ್ಕದೇಶಗಳಿಗಾಗಿ ಉಪಗ್ರಹವೊಂದನ್ನು ನಿರ್ಮಿಸುವ ಮತ್ತು ಸಾರ್ಕದೇಶಗಳ ದೂರಸಂಪರ್ಕ ಪ್ರಗತಿಯಲ್ಲಿ ನೆರವು ನೀಡುವ ಭರವಸೆ ನೀಡಿದರು. ಅಮೇರಿಕ ರಷಿಯ ಮತ್ತು ಯೂರೋಪಿನ ದೇಶಗಳನ್ನು ಬಿಟ್ಟು ಭಾರತದೊಂದಿಗೆ ಸಾಂಸ್ಕøತಿಕ ನಿಕಟತೆಯುಳ್ಳ ಜಪಾನ ಹಾಗೂ ಚೀನಾಗಳೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಪ್ರಾಮುಖ್ಯತೆ ನೀಡಲಾಯಿತು. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇದುವರೆಗೂ ಏಷಿಯಾ ಸುತ್ತಲಿನ ಐದು ರಾಷ್ಟ್ರಗಳ ಪ್ರವಾಸ ಮಾಡಿ ಪ್ರಾದೇಶಿಕ ಸಹಕಾರಗಳನ್ನು ವರ್ಧಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಪ್ರಧಾನಿ ಮೋದಿಯವರ ಪ್ರತಿಯೊಂದು ವಿದೇಶ ಪ್ರವಾಸವೂ ವಿಶೇಷವಾಗಿ ಜಪಾನ್ ಪ್ರವಾಸವು ಭಾರತದ ಗೌರವನ್ನು ಎತ್ತಿ ಹಿಡಿಯುವುದರ ಜೊತೆಗೆ ಏಷಿಯ ದೇಶಗಳ ಪ್ರಗತಿಯಲ್ಲಿ ಭಾರತ ಪ್ರಮುಖ ಪಾತ್ರವಹಿಸಬೇಕಾದುದನ್ನು ಒತ್ತಿಹೇಳಿವೆ.

        ಭಾರತದಿಂದ ಬೇರೆಯಾದ ಯಾವ ದೇಶವೂ ಶಾಂತಿ-ಸಮೃದ್ಧಿಯನ್ನು ಹೊಂದಿಲ್ಲ. ಅಷ್ಟೇ ಅಲ್ಲದೇ ಅನೇಕ ನೆರೆಹೊರೆಯ ದೇಶಗಳು ರಾಜಕೀಯ ಸ್ಥಿರತೆ ಮತ್ತು ಸ್ವತಂತ್ರ ಅಸ್ತಿತ್ವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ತಾಯಿಯಿಂದ ಬೇರೆಯಾದ ಮಕ್ಕಳಂತೇ ದಿಕ್ಕುದೆಸೆಯಿಲ್ಲದ, ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿ ಈ ದೇಶಗಳದ್ದಾಗಿದೆ. ಅವುಗಳಿಗೆ ಇಂದು ತಾಯಿಯ ಅಭಯ ಸ್ನೇಹ ಸ್ಪರ್ಶದ ಅಗತ್ಯವಿದೆ. ಈ ದೇಶಗಳ ರಾಜಕೀಯ ನಾಯಕರ ಚಿಂತನೆಗಳು ಏನೇ ಇರಲಿ, ಜನಸಾಮಾನ್ಯರಲ್ಲಿ ಭಾರತದ ಬಗ್ಗೆ ಒಳ್ಳೆಯ ಭಾವನೆ ಇದೆ, ಭಾರತ ತಮಗೆ ಸಹಾಯ ಮಾಡಬಹುದೆಂಬ ಆಶಾಭಾವವಿದೆ. 

        ಭರತಖಂಡದ ದೇಶಗಳೆಲ್ಲವೂ ಒಂದಾಗಿ ಶಕ್ತಿಯನ್ನು ವರ್ಧಿಸಿಕೊಂಡು ವಿಕಾಸದ ಮಾರ್ಗದಲ್ಲಿ ಸಾಗಬೇಕಾದುದು ವರ್ತಮಾನ ಕಾಲದ ಅಗತ್ಯವಾಗಿದೆ. ಸಾಂಸ್ಕøತಿಕ ಹಿನ್ನೆಲೆಯಲ್ಲಿ ನೆರೆಹೊರೆಯ ಏಷಿಯಾದ ದೇಶಗಳ ನಡುವಿನ ಜನರನ್ನು ಬೆಸೆಯುವ ಸದವಕಾಶ ಈಗ ನಮಗಿದೆ. ಯುರೋಪಿನ ದೇಶಗಳೆಲ್ಲಾ ಒಂದಾಗಿ ಏಕರೂಪ ಕರೆನ್ಸಿ(ಯುರೋ)ಯನ್ನು ಚಲಾವಣೆಗೆ ತಂದಂತೆ ಅಖಂಡ ಭಾರತದ ದೇಶಗಳೂ ಏಕರೂಪ ಕರೆನ್ಸಿ-ವ್ಯಾಪಾರ-ವ್ಯವಹಾರಗಳ ವ್ಯವಸ್ಥೆಯನ್ನು ಜಾರಿತರಬಾರದೇಕೆ? ಅಮೆರಿಕಾ ಅಫಘಾನಿಸ್ತಾನವನ್ನು ಧ್ವಂಸ ಮಾಡಿದ ಕಳಂಕ ಹೊತ್ತಿರುವಾಗ ಭಾರತ ಆ ದೇಶದ ಪುನರ್ನಿರ್ಮಾಣದ ನೇತೃತ್ವವಹಿಸಬಾರದೇಕೆ? ಮ್ಯಾನ್ಮಾರಿಗೆ ಪ್ರಜಾಪ್ರಭುತ್ವದ ಪಾಠ ಹೇಳಿಕೊಡಬಾರದೇಕೆ? ನೇಪಾಳಕ್ಕೆ ಸಂವಿಧಾನ ರಚನೆಯಲ್ಲಿ ಸಹಾಯ ಮಾಡಬಾರದೇಕೆ? ಹೀಗೆ ಭರತಖಂಡದ ದೇಶಗಳನ್ನು ಕೈಹಿಡಿದು ನಡೆಸುವ ಅವಕಾಶ ಮತ್ತು ಸಾಮಥ್ರ್ಯ ಭಾರತಕ್ಕಿದೆ. ರಾಜಕೀಯವಾಗಿ ಸದ್ಯದಲ್ಲೇ ಸಾಧ್ಯವಿಲ್ಲವಾದರೂ ಸಾಂಸ್ಕøತಿಕ ಹಿನ್ನೆಲೆ, ವ್ಯಾವಹಾರಿಕ ವಹಿವಾಟುಗಳು ಮತ್ತು ಸಾಮಾಜಿಕ ಸಂಪರ್ಕಗಳ ನೆಲೆಯಲ್ಲಿ ಅಖಂಡ ಭಾರತ ಖಂಡಿತ ಅಸಾಧ್ಯವಲ್ಲ. 

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...