Friday, September 4, 2015

ಮರೆಯಲಾಗದ ಮಹಾಕದನ

(ಪುಂಗವ – 15/9/2015)


1965ರ ಭಾರತ - ಪಾಕ್ ಯುದ್ಧಕ್ಕೆ 50 ವರ್ಷಗಳು

            ದೇಶದ ಏಕತೆ ಮತ್ತು ಸಮಗ್ರತೆಯನ್ನು ಗಟ್ಟಿಯಾಗಿರಿಸುವಲ್ಲಿ ಭೌಗೋಳಿಕ ಗಡಿಗಳು ಸುರಕ್ಷಿತವಾಗಿರುವುದರ ಜೊತೆಗೆ ಜನಮಾನಸದಲ್ಲಿ ರಾಷ್ಟ್ರದ ಆತ್ಮಗೌರವವನ್ನು ಎತ್ತಿಹಿಡಿಯಬೇಕೆಂಬ ಪ್ರಜ್ಞೆ ಜಾಗೃತವಾಗಿರುವುದೂ ಅತ್ಯಗತ್ಯವಾಗಿದೆ. ಒಚಿದು ರಾಷ್ಟ್ರದ ಇತಿಹಾಸದ ಭಾಗವಾದ ಶೌರ್ಯ ಮತ್ತು ವಿಜಯಗಳ ಗಾಥೆಗಳು ರಾಷ್ಟ್ರಾಭಿಮಾನದ ಭಾವನೆಯನ್ನು ಹೆಚ್ಚಿಸುತ್ತವೆ. ಆದರೆ ಭಾರತ ವಿರೋಧಿ ಶಕ್ತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾದ ನಮ್ಮ ಸಾಧನೆಗಳನ್ನು ತಗ್ಗಿಸಿ ದೇಶದ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಸದಾ ಪ್ರಯತ್ನ ನಡೆಸುವುದು ಹೊಸದೇನಲ್ಲ. ಇಂದಿಗೆ ಐವತ್ತು ವರ್ಷಗಳ ಹಿಂದೆ 1965ರಲ್ಲಿ ಅತಿಕ್ರಮಣದ ಸಾಹಸಕ್ಕೆ ಮುಂದಾದ ಪಾಕಿಸ್ತಾನ ಸೈನ್ಯವನ್ನು ಹಿಮ್ಮೆಟ್ಟಿಸಿ ತಕ್ಕ ಪಾಠ ಕಲಿಸಿದ ನಮ್ಮ ವೀರಯೋಧರ ಸಾಧನೆಯನ್ನು, ಇದೊಂದು ಅನಿರ್ಣಾಯಕವಾದ ಸಂಘರ್ಷ ಎಂದು ಬಿಂಬಿಸಿ ಜನರ ನೆನಪಿನಿಂದ ಮರೆಯಾಗುವಂತೆ ಮಾಡಿದ್ದು ಅಪಚಾರವೇ ಸರಿ. ಈ ಹಿನ್ನೆಲೆಯಲ್ಲಿ 1965ರ ಆಗಸ್ಟ್ 5ರಿಂದ ಸೆಪ್ಟೆಂಬರ್ 22ರವರೆಗೆ ನಡೆದ ಪಾಕಿಸ್ತಾನ ಯುದ್ಧದ 50ನೇ ವರ್ಷಾಚರಣೆಯನ್ನು ಕೇಂದ್ರ ಸರ್ಕಾರ ನಿರ್ಧರಿಸಿರುವುದು ದೇಶದ ರಕ್ಷಣೆಯಲ್ಲಿ ಪ್ರಾಣತೆತ್ತ ಸಹಸ್ರಾರು ಸೈನಿಕರಿಗೆ ಸಲ್ಲಿಸುವ ಸೂಕ್ತ ಗೌರವವಾಗಿದೆ.


ನಡೆದದ್ದಿಷ್ಟು...
ಎರಡನೇ ವಿಶ್ವಯುದ್ಧದ ನಂತರ ಅತ್ಯಂತ ನಡೆದ ಅತ್ಯಂತ ಉಗ್ರವಾದ ಸಮರವೆಂದೇ ಬಣ್ಣಿಸಲಾಗುವ 1965 ಭಾರತ-ಪಾಕಿಸ್ತಾನ ಕದನ ಕಛ್‍ದಿಂದ ಕಾಶ್ಮೀರದವರೆಗಿನ ಭಾರತದ ಪಶ್ಚಿಮದಗಡಿಯುದ್ಧಕ್ಕೂ ನಡೆಯಿತು. 
1962ರ ಚೀನಾ ಯುದ್ಧದ ಸೋಲಿನಿಂದ ಭಾರತ ಸೈನ್ಯ ಶಕ್ತಿ ಮತ್ತು ಆರ್ಥಿಕವಾಗಿ ದುರ್ಬಲವಾಗಿದೆ, ಇದರ ಲಾಭ ಪಡೆದು ಕಾಶ್ಮೀರವನ್ನು ಕಬಳಿಸಬೇಕೆಂಬ ಪಾಕಿಸ್ತಾನದ ಹುನ್ನಾರವೇ ಈ ಯುದ್ಧದ ಮೂಲಕಾರನ. ಪಾಕಿಸ್ತಾನಿ ಮಿಲಿಟರಿ ಗುಪ್ತಚರ ಇಲಾಖೆ ಮತ್ತು ವಿದೇಶಾಂಗ ಮಂತ್ರಿ ಝುಲ್ಫಿಕರ್ ಅಲಿ ಭುಟ್ಟೋ ನೇತೃತ್ವದ ಸಚಿವಾಲಯ ಈ ವಿಷಯಗಳನ್ನು ಮುಂದಿಟ್ಟುಕೊಂಡು, ಕಾಶ್ಮೀರದಲ್ಲಿ ಪ್ರಬಲವಾದ ಭಾರತ ವಿರೋಧಿ ಅಲೆ ಇದೆ, ಅಲ್ಲಿನ ಜನರು ಪಾಕಿಸ್ತಾನ ಸೇರಲು ಉತ್ಸುಕರಾಗಿದ್ದಾರೆ ಎಂಬ ವಾದವನ್ನು ಮಂಡಿಸಿ ಕಾಶ್ಮೀರವನ್ನು ಆಕ್ರಮಿಸಲು ಇದು ಸುಸಂದರ್ಭ ಎಂದು ಅಂದಿನ ರಾಷ್ಟ್ರಪತಿ ಅಯೂಬ್ ಖಾನ್‍ನನ್ನು ಒಪ್ಪಿಸುವಲ್ಲಿ ಯ

ಅತಿಕ್ರಮಣಕ್ಕೆ ಮುನ್ನ ಪಾಕಿಸ್ತಾನದ ಸಿದ್ಧತೆ 
  • ಅಮೇರಿಕದೊಂದಿಗೆ ರಕ್ಷಣಾ ಒಪ್ಪಂದಕ್ಕೆ ಸಹಿಹಾಕಿ ಅಮೆರಿಕದ ನೆರವಿನಿಂದ ಸೈನ್ಯ ಶಕ್ತಿಯನ್ನು ಬೆಳೆಸಿಕೊಂಡಿತು. 
  • 1954 ರಿಂದ 1965ರವರೆಗೆ ಅಮೆರಿಕದಿಂದ ಪಾಟನ್ ಟ್ಯಾಂಕ್, ಯುದ್ಧ ವಿಮಾನಗಳು, ಜೆಟ್‍ಗಳು, ಮೆಶಿನ್ ಗನ್, ಆಧುನಿಕ ರೈಫಲ್‍ಗಳು ಮುಂತಾದವನ್ನು  ದೊಡ್ಡ ಪ್ರಮಾಣದಲ್ಲಿ ಪಡೆದು ತನ್ನ ಯುದ್ಧ ಸಾಮಗ್ರಿಗಳನ್ನು ಸಂಪೂರ್ಣ ಆಧುನಿಕಗೊಳಸಿಕೊಂಡಿತು.
  • ಪಾಕಿಸ್ತಾನದ ಸೈನ್ಯಾಧಿಕಾರಿಗಳು ಅಮೇರಿಕ ಮತ್ತು ಬ್ರಿಟನ್‍ಗಳಿಂದ ತರಬೇತಿ ಪಡೆದು ಜಂಟಿ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿದರು.
  • ಆಜಾದ್ ಕಾಶ್ಮೀರ ಎಂದು ಕರೆಯುವ ಪಾಕ್ ಆಕ್ರಮಿತ ಕಾಶ್ಮೀರದ ಸೈನ್ಯಬಲವನ್ನು ಹೆಚ್ಚಿಸಿತು.
  • ಚೀನಾದೊಂದಿಗೆ ಆರ್ಥಿಕ ಮತ್ತು ಮಿಲಿಟರಿ ಸಹಕಾರದ ಒಪ್ಪಂದವನ್ನೂ ಮಾಡಿಕೊಂಡಿತು. 



      1965ರ ಜನವರಿಯಲ್ಲಿ ಕಛ್ ಪ್ರದೇಶದಲ್ಲಿ 'ಆಪರೇಶನ್ ಡೆಸರ್ಟ ಹಾಕ್' ಹೆಸರಿನಲ್ಲಿ ಪಾಕಿಸ್ತಾನ ಸೈನ್ಯ ನುಗ್ಗುವುದರೊಂದಿಗೆ ಅತಿಕ್ರಮಣ ಪ್ರಾರಂಭವಾಯಿತು. ಭಾರತೀಯ ಸೈನ್ಯದ ಗಮನವನ್ನು ಕಛ್‍ನತ್ತ ಸೆಳೆದು ಕಾಶ್ಮೀರದ ಕಡೆ ಒಳನುಸುಳುವುದು ಪಾಕಿಸ್ತಾನದ ಮೂಲ ಉದ್ಧೇಶವಾಗಿತ್ತು. ಆರಂಭಿಕ ಗುಂಡಿನ ದಾಳಿಯ ವಿನಿಮಯದ ನಂತರ ಪಾಕಿಸ್ತಾನ ಕೆಲವು ಪೋಸ್ಟಗಳನ್ನು ಆಕ್ರಮಿಸಿಕೊಂಡು, ಮಾತುಕತೆಗೆ ಆಹ್ವಾನ ನೀಡಿತು. ಪಾಕಿಸ್ತಾನ ಆಕ್ರಮಿಸಿದ ಪ್ರದೇಶವನ್ನು ತೆರವುಗೊಳಿಸದ ಹೊರತೂ ಯಾವುದೇ ಮಾತುಕತೆಗೆ ಸಿದ್ಧವಿಲ್ಲವೆಂದು ಭಾರತ ಹೇಳಿದರೂ ಬ್ರಿಟಿನ್ನಿನ ಒತ್ತಡಕ್ಕೆ ಮಣಿದು ಕದನವಿರಾಮಕ್ಕೆ ಒಪ್ಪಿತು. ಜೂನ್ 30ರ ಕದನವಿರಾಮ ಒಪ್ಪಂದದಂತೆ ಪಾಕಿಸ್ತಾನ ಅತಿಕ್ರಮಣ ಮಾಡಿದ ಪ್ರದೇಶದಿಂದ ಹಿಂತೆಗೆಯಲೇನೋ ಒಪ್ಪಿತು ಆದರೆ ಭಾರತ ಸರ್ಕಾರ ಮತ್ತು ಸೈನ್ಯ ಯುದ್ಧಕ್ಕೆ ಸಿದ್ಧವಿಲ್ಲ ಎಂದು ಭಾವಿಸಿ ಎದೆಯುಬ್ಬಿಸಿಕೊಂಡಿತು. “ಮುಂದಿನ ಬಾರಿ ಪಾಕಿಸ್ತಾನ ಯುದ್ಧ ಬಯಸಿದರೆ ಭಾರತ ತನ್ನ ಆಯ್ಕೆಯ ಸಮಯದಲ್ಲಿ ತಾನು ಆರಿಸಿದ ಪ್ರದೇಶದ ಮೇಲೆ ದಾಳಿ ಮಾಡುತ್ತದೆ” ಎಂದ ಪ್ರಧಾನಿ ಲಾಲ ಬಹಾದ್ದೂರ್ ಶಾಸ್ತ್ರಿಯವರ ಮಾತನ್ನು ಪಾಕಿಸ್ತಾನ ಲಘುವಾಗಿ ಪರಿಗಣಿಸಿತು.

        ಈ ನಡುವೆ ಕಾಶ್ಮೀರದ ನಿಯಂತ್ರಣ ರೇಖೆಗುಂಟ ಶೆಲ್ಲಿಂಗ, ಗುಂಡಿನ ದಾಳಿಗಳು, ಒಳನುಸುಳುವುದು ಮುಂತಾದ ಪ್ರಚೋದನಕಾರಿ ಚಟುವಟಿಕೆಗಳು ಹೆಚ್ಚಾಗಿದ್ದಲ್ಲದೇ, ಆಗಸ್ಟ ತಿಂಗಳಿನಲ್ಲಿ ಪಾಕಿಸ್ತಾನದಿಂದ ಸುಮಾರು 30000ಕ್ಕೂ ಹೆಚ್ಚು ನುಸುಳುಕೋರರು, ಅವರಲ್ಲಿ ಬಹುತೇಕ ಪಾಕಿಸ್ತಾನಿ ಸೈನಿಕರು, ನಿಯಂತ್ರಣ ರೇಖೆಯನ್ನು ದಾಟಿ ಒಳನುಸುಳಿದರು. ದೊಡ್ಟ ಪ್ರಮಾಣದಲ್ಲಿ ಗಲಭೆಯನ್ನು ಎಬ್ಬಿಸಿ ಸ್ಥಳೀಯ ಜನರ ಅನುಕಂಪಗಳಿಸುವುದು ಇದರ ಉದ್ಧೇಶವಾಗಿತ್ತು. ಆಪರೇಶನ್ ಜಿಬ್ರಾಲ್ಟರ್ ಹೆಸರಿನ ಈ ಅತಿಕ್ರಮಣದ ಮಾಹಿತಿ ದುರದೃಷ್ಟವಶಾತ್ ಒಂದು ವಾರ ತಡವಾಗಿ ಭಾರತೀಯ ಸೇನೆಗೆ ದೊರಕಿತು. ಸ್ಥಳೀಯ ಜನರೊಡನೆ ಬೆರೆತು ಆಗಸ್ಟ 8ರಂದು ಪೀರ್ ದಸ್ತಗೀರ್ ಸಾಹಿಬ್ ಉತ್ಸವ ಹಾಗೂ ಮರುದಿನ ಶೇಖ್ ಅಬ್ದುಲ್ಲಾ ಬಂಧನದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ತಮ್ಮ ಕಾರ್ಯವನ್ನು ಸಾಧಿಸುವ ಯೋಜನೆಗೆ ಭಾರತೀಯ ಸೈನ್ಯದ ಜಾಗರೂಕತೆಯಿಂದ ಹಿನ್ನೆಡೆಯಾಯಿತು. ಅನೇಕ ಒಳನುಸುಳುಕೋರರು ಬಂಧಿಸಲ್ಪಟ್ಟರು. ರಾಜ್ಯಾಂದ್ಯಂತ ಸುರಕ್ಷತೆಯನ್ನು ಬಿಗಿಗೊಳಿಸಲಾಯಿತು. ಒಳನುಸುಳುಕೋರರ ವಿರುದ್ಧ ಕಾರ್ಯಚರಣೆ ನಡೆಸಲಾಯಿತು. ಸ್ಥಳೀಯರ ಸಹಾಯ ಸಿಗದೆ ಅನೇಕರು ಬಂಧನಕ್ಕೊಳಗಾದರು, ಅನೇಕರು ಶರಣಾದರು, ಕೆಲವರು ಗಡಿದಾಟಿ ಪರಾರಿಯಾದರು. 
ಆಗಸ್ಟ 28ರಂದು ನಿಯಂತ್ರಣ ರೇಖೆಯನ್ನು ದಾಟಿದ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಹಾಜಿ ಪೀರ್ ಪಾಸ್ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಇದೊಂದು ಬಹುಮುಖ್ಯ ವಿಜಯ ಏಕೆಂದರೆ ಹಾಜಿ ಪೀರ್ ಮೇಲಿನ ನಿಯಂತ್ರಣವೆಂದರೆ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಪ್ಪರಾಬಾದ್‍ನ್ನು ವಶಕ್ಕೆ ತೆಗೆದುಕೊಂಡಂತೆ.
ಈ ನಡುವೆ ಪಾಕಿಸ್ತಾನವು ಛಂಬ್ ಮತ್ತು ಆಖ್‍ನೂರ್ ಪ್ರದೇಶಗಳಲ್ಲಿ ಆಪರೇಶನ್ ಗ್ರಾಂಡ್ ಸ್ಲಾಮ್ ಹೆಸರಿನಲ್ಲಿ ತೀವ್ರ ದಾಳಿಯನ್ನು ಆರಂಭಿಸಿತು. 

        ಪರಿಸ್ಥಿತಿಯ ತೀವ್ರತೆಯನ್ನು ಮನಗಂಡ ಪ್ರಧಾನಿ ಶಾಸ್ತ್ರಿ ಎರಡು ಪ್ರಮುಖ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡರು. ಒಂದು ವಾಯುಸೇನೆಯನ್ನು ಯುದ್ಧದಲ್ಲಿ ತೊಡಿಗಿಸುವುದು. ಭಾರತೀಯ ವಾಯುಸೇನೆಯ 45ನೇ ಸ್ಕ್ವಾಡ್ರನ್‍ನ್ನು ನಿಯೋಜಿಸಿ ಪಾಕಿಸ್ತಾನ ಸೇನೆಯ ಮೇಲೆ ನೇರ ಸಮರ ಸಾರಲಾಯಿತು. ಇನ್ನೊಂದು ಭಾರತೀಯ ಭೂಸೇನೆಗೆ ಪಾಕಿಸ್ತಾನದ ಮೇಲೆ ಯುದ್ಧ ಸಾರುಲು ಆದೇಶಿಸಲಾಯಿತು. ಮೊದಲನೇ ಬಾರಿಗೆ ಭಾರತೀಯ ಸೇನೆಯು ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಲಾಹೋರ್ ಮತ್ತು ಸಿಯಾಲ್ಕೊಟ್‍ಗಳತ್ತ ನುಗ್ಗಿತು. ಭಾರತೀಯ ವಾಯುಸೇನೆಯ ದಾಳಿಗೆ ಅಮೇರಿಕದಿಂದ ಆಮದಾದ ಶಸ್ತ್ರಾಸ್ತ್ರಗಳು ನಾಶವಾಗಿ, ಯುದ್ಧವಿಮಾನಗಳು ನೆರವಿಗೆ ಬಾರದೇ, ಅನೇಕ ಯುದ್ಧಟ್ಯಾಂಕುಗಳು ಭಾರತದ ವಶವಾಗಿ, ಪಾಕಿಸ್ತಾನದ ಹೃದಯದಂತಿರುವ ಲಾಹೋರ್ ನಗರವೂ ಭಾರತದ ಸೈನ್ಯದ ದಾಳಿಗೆ ತುತ್ತಾದಾಗ ಗಾಬರಿಗೊಂಡ ಪಾಕಿಸ್ತಾನ ನಡುಗಿ ಮಂಡಿಯೂರಲೇ ಬೇಕಾಯಿತು.
ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಲ್ಲದೇ ಹೋಗಿದ್ದರೆ ಪಾಕಿಸ್ತಾನಕ್ಕೆ ಸಂಪೂರ್ಣ ಶರಣಾಗತಿಯ ಹೊರತು ಅನ್ಯ ಮಾರ್ಗವೇ ಇರುತ್ತಿರಲಿಲ್ಲ. ವಿಶ್ವಸಂಸ್ಥೆಯ ಒತ್ತಡದಿಂದಾಗಿ ಭಾರತ ಸಂಘರ್ಷ ವಿರಾಮಕ್ಕೆ ಒಪ್ಪಿತು. ಯುದ್ಧ ನಿರ್ಣಾಯಕವೆಂದು ಕಾಣದಿದ್ದರೂ ಭಾರತ ಶಕ್ತಿಶಾಲಿಯಾಗಿ ಹೊರಹೊಮ್ಮಿತು.

ಯುದ್ಧೋತ್ತರ
          ಸಂಘರ್ಷ ವಿರಾಮದ ನಂತರ ಸೋವಿಯತ್ ಯೂನಿಯನ್‍ನ ತಾಷ್ಕೆಂಟ್‍ನಲ್ಲಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಜನರಲ್ ಅಯೂಬ್ ಖಾನ್ ತಾಷ್ಕೆಂಟ್ ಒಪ್ಪಂದಕ್ಕೆ ಸಹಿಹಾಕಿದರು. ಇದರ ಅನ್ವಯ ಎರಡೂ ಪಕ್ಷಗಳು ತಮ್ಮ ತಮ್ಮ ವಶದಲ್ಲಿರುವ ಪ್ರದೇಶಗಳಿಂದ ಹಿಂತೆಗೆಯಬೇಕು ಮತ್ತು ಯುದ್ಧಪೂರ್ವ ಆಗಸ್ಟ ಸ್ಥಿತಿಗೆ ಮರಳಬೇಕು ಎನ್ನುವ ಷರತ್ತಿಗೆ ಒಪ್ಪಿದವು. ಇದರರ್ಥ ಪಾಕಿಸ್ತಾನಿ ನುಸುಳುಕೋರರು ದಾಟಿಬಂದ ಆಯಕಟ್ಟಿನ ಹಾಜಿ ಪೀರ್ ಪಾಸ್‍ನ ನಿಯಂತ್ರಣ ಮೊದಲಾದ ಅನೇಕ ತಾಂತ್ರಿಕ ಲಾಭಗಳನ್ನು ಭಾರತ ಕಳೆದುಕೊಂಡಿತು. ತಾಷ್ಟೆಂಟ್‍ನಲ್ಲಿ ಪ್ರಧಾನಿ ಶಾಸ್ತ್ರಿಯವರ ಹಠಾತ್ ಮೃತ್ಯುವಿನಿಂದ ತಾಷ್ಟೆಂಟ್ ಭಾರತದ ಪಾಲಿಗೆ ಕಹಿಯಾಯಿತು.

      1965ರ ಯುದ್ಧದ ನಂತರ ನಡೆದ ಇನ್ನೆರಡು ಪಾಕಿಸ್ತಾನಕ್ಕೆ ಸಂಬಂಧಿಸಿದ ಬೆಳವಣಿಗೆಗಳು ಮಹತ್ಚದ್ದಾಗಿವೆ. ಪಾಕಿಸ್ತಾನದೊಂದಿಗೆ ರಕ್ಷಣಾ ಸಹಕಾರ ಒಪ್ಪಂದ ಹೊಂದಿದ್ದ ಅಮೇರಿಕ ಯುದ್ಧದಲ್ಲಿ ತಟಸ್ಥ ಧೊರಣೆಯನ್ನು ಅನುಸರಿಸಿತು. ಇದರಿಂದ ಪಾಕಿಸ್ತಾನ ಮತ್ತು ಅಮೇರಿಕದ ಸಂಬಂಧಗಳು ಸ್ವಲ್ಪ ಹಳಸಿದುದು ಒಂದಾದರೆ, ಪಾಠ ಕಲಿತ ಪಾಕಿಸ್ತಾನ ಚೀನಾ ಮತ್ತು ಸೋವಿಯತ್‍ಗಲ ಸಖ್ಯವನ್ನು ಬೆಳೆಸುವತ್ತ ಹೆಜ್ಜೆಯಿಟ್ಟಿತು. ಹಾಗೆಯೇ ಸೋಲಿನ ಬಾಗಿಲಿಗೆ ಬಂದು ನಿಂತರೂ ತಾನೇ ಯುದ್ಧದಲ್ಲಿ ವಿಜಯಿ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿರುವುದು ಇನ್ನೊಂದು ವಿಪರ್ಯಾಸ. 

           1965ರ ಯುದ್ಧವು ಅತ್ಯಂತ ಕಷ್ಟಕರ ಸನ್ನಿವೇಶದಲ್ಲಿ ಭಾರತದ ಮೇಲೆ ಅನಿವಾರ್ಯವಾಗಿ ಹೇರಲ್ಪಟ್ಟದ್ದಾದರೂ ಭಾರತ ಸಂದರ್ಭೋಚಿತವಾಗಿ ಎದುರಿಸಿತು. ಈ ಸಂಘರ್ಷದ ಗೆಲುವು 1962ರಲ್ಲಿ ಚೀನಾ ವಿರುದ್ಧದ ಸೋಲಿನಿಂದಾದ ಸಾಮರಿಕ, ಆರ್ಥಿಕ ಆಘಾತದಿಂದÀ ಚೇತರಿಸಿಕೊಂಡು ಹೊಸ ಆತ್ಮವಿಶ್ವಾಸದ ಮೂಡಿಸುವಲ್ಲಿ ಸಹಕಾರಿಯಾಯಿತು. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಒತ್ತಿ ಹೇಳುವುದರ ಜೊತೆಗೆ ಭಾರತ ತನ್ನ ನೆಲದ ಯಾವುದೇ ಅತಿಕ್ರಮಣವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಿತು. ಹಾಗೆಯೇ ಈ ವಿಜಯವು 1971ರ ಯುದ್ಧದಲ್ಲಿ ಪಾಕಿಸ್ತಾನ ಸೈನ್ಯ ಸಂಪೂರ್ಣ ನೆಲಕಚ್ಚಿ ಶರಣಾಗುವ ಘಟನೆಗೆ ಮುನ್ನುಡಿಯಾಯಿತು. 

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...