(ವಿಕ್ರಮ 02/04/2017)
ಉತ್ತರ ಪ್ರದೇಶದ ಸಹಾರಾನ್‌ಪುರ ಜಿಲ್ಲೆಯ ದೇವಬಂದ್‌ನಲ್ಲಿ ದಾರುಲ್ ಉಲೂಮ್ ಹೆಸರಿನ ಇಸ್ಲಾಂ ಅಧ್ಯಯನ ಕೇಂದ್ರವಿದೆ. ಹತ್ತೊಂಭತ್ತನೇ ಶತಮಾನದ 1866ರಲ್ಲಿ ಆರಂಭವಾದ ಈ ಕೇಂದ್ರ ಇಸ್ಲಾಂ ಸಂಪ್ರದಾಯಗಳ ವಿಷಯದಲ್ಲಿ ಕಟ್ಟರ್ ಎಂದು ಗುರುತಿಸಿಕೊಂಡಿದೆ. ಭಾರತದ ಅತ್ಯಂತ ಹಳೆಯ ಇಸ್ಲಾಂ ಅಧ್ಯಯನ ಕೇಂದ್ರಗಳಲ್ಲೊಂದಾದ ದಾರುಲ್ ಉಲೂಮ್ ಬೇರೆ ಬೇರೆ ರಾಜ್ಯಗಳಲ್ಲಿ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು ಏಳುಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ. 2011ರಲ್ಲಿ ಈ ಸಂಸ್ಥೆಯ ಉಪಕುಲಪತಿಯಾಗಿ ನಿಯುಕ್ತರಾದ ಗುಜರಾತ್ ಮೂಲದ ಗುಲಾಮ್ ಮೊಹಮ್ಮದ್ ವಸ್ತಾನವಿ ಈ ಕಟ್ಟರ್ ಸಾಂಪ್ರದಾಯಿಕ ವಾದದಿಂದ ಸ್ವಲ್ಪ ಹೊರಬಂದು ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ, ಇಂಜಿನಿಯರಿಂಗ್, ಕಲೆ, ಸಾಹಿತ್ಯ, ಸಂಗೀತ ವಿಷಯಗಳನ್ನು ಪರಿಚಯಿಸಿ, ಇಸ್ಲಾಮಿನ ಅಧ್ಯಯನದ ಜೊತೆಗೆ ಆಧುನಿಕ ಶಿಕ್ಷಣವನ್ನೂ ನೀಡಲು ಪ್ರಯತ್ನಿಸಿದರು. ವೈಶ್ವಿಕ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣ ನೀಡುವ ಜ್ಞಾನವೂ ಅಗತ್ಯ ಎನ್ನುವುದು ಅವರ ನಂಬಿಕೆಯಾಗಿತ್ತು. ಆದರೆ ಅವರ ಜಾರಿಗೆ ತಂದ ಶಿಕ್ಷಣ ಪದ್ಧತಿ ಇಸ್ಲಾಂ ಶಿಕ್ಷಣವೇ ಎಲ್ಲಕ್ಕಿಂತ ಶ್ರೇಷ್ಠ ಎಂದು ಪ್ರತಿಪಾದಿಸುತ್ತಿದ್ದ ಮುಸ್ಲಿಂ ಮುಲ್ಲಾಗಳ ಕೆಂಗಣ್ಣಿಗೆ ಗುರಿಯಾಯಿತು. ವಸ್ತಾನವಿ ಗುಜರಾತ್ ದಂಗೆಯ ವಿಷಯದಲ್ಲಿ ನರೇಂದ್ರ ಮೋದಿಯವರ ಪರ ಮಾತನಾಡಿದರು ಎಂದು ಕುಂಟು ನೆಪ ಹೊರಿಸಿ ಅವರನ್ನು ಉಪಕುಲಪತಿ ಸ್ಥಾನದಿಂದ ಕೆಳಗಿಳಿಸಲಾಯಿತು. ಆದರೆ ಮುಂದೆ ನಡೆದ ಬೆಳವಣಿಗೆಗಳು ಮುಸ್ಲಿಂ ಸಮಾಜದ ಯುವಕರ ಬದಲಾಗುತ್ತಿರುವ ಮನೋಸ್ಥಿತಿಯನ್ನು ಮತ್ತು ಅವರ ಇಂದಿನ ಆಯ್ಕೆಗಳು ಏನು ಎನ್ನುವುದನ್ನು ಸೂಚಿಸುತ್ತದೆ. ವಸ್ತಾನವಿಯವರ ಬೆಂಬಲಕ್ಕೆ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ನಿಂತರು. ಜೊತಗೆ ಮಾಧ್ಯಮದಲ್ಲಿಯೂ ಅವರ ಪರ ಬೆಂಬಲ ವ್ಯಕ್ತವಾಯಿತು. ದಾರುಲ್ ಉಲೂಮ್‌ನ ಆಡಳಿತ ಮಂಡಳಿ ಮಜ್ಲಿಸ್ ಎ ಶೂರಾ ಬಗ್ಗಲೇ ಬೇಕಾಯಿತು. ಅವರ ಮೋದಿಪರ ಹೇಳಿಕೆಯ ಕುರಿತು ತನಿಖೆ ಆದೇಶವಾಯಿತಾದರೂ ಗುಲಾಮ್ ಮೊಹಮ್ಮದ್ ವಸ್ತಾನವಿ ದಾರುಲ್ ಉಲೂಮ್‌ನ ಉಪಕುಲಪತಿಯಾಗಿ ಪುನಃ ನಿಯುಕ್ತರಾದರು.
ಹಾಗೆ ನೋಡಿದರೆ ಮೂಲಭೂತವಾದ ಮತ್ತು ಆಧುನಿಕ ಸಾಮಾಜಿಕ ಜೀವನಕ್ಕೆ ತೆರೆದುಕೊಳ್ಳಬಯಸುವ ಇಬ್ಬಗೆಯ ಸಂಕೀರ್ಣ ವ್ಯವಸ್ಥೆ ಮುಸ್ಲಿಂ ಸಮಾಜದಲ್ಲಿ ಮೇಲುನೋಟಕ್ಕೆ ಕಾಣಸಿಗುತ್ತದೆ. ಮಧ್ಯಮ ವರ್ಗದ ಮುಸ್ಲಿಂ ಕುಟುಂಬಗಳ ಆಶೋತ್ತರಗಳು ಉಳಿದವರಿಗಿಂತ ಬೇರೆಯೇನಿಲ್ಲ. ಮತೀಯ ಕಟ್ಟರ್‌ವಾದ ಮತ್ತು ತಾರ್ಕಿಕ ಕಾರಣಗಳಿಗೆ ನಿಲುಕದ ನಂಬಿಕೆ ಮತ್ತು ಕೆಲವೇ ಕೆಲವರ ವ್ಯಾಖ್ಯಾನಗಳ ನಿಯಮಗಳ ನಿರ್ಭಂಧದಲ್ಲಿ ನಡೆಯುವ ಇಸ್ಲಾಂ ಸಮಾಜ ಈ ಹಿಡಿತದಿಂದ ಹೊರಬರಲು ಯತ್ನಿಸಿರುವುದು ಇತಿಹಾಸದಲ್ಲಿ ಅಲ್ಲಲ್ಲಿ ಕಾಣಿಸುತ್ತದೆ. ಹಾಗೆಯೇ ಪ್ರಸ್ತುತ ಕಾಲದಲ್ಲಿಯೂ ಇಂತಹ ಸನ್ನಿವೇಶವನ್ನು ಗಮನಿಸಬಹುದು.
ಉಗ್ರವಾದ ಮತ್ತು ಇಸ್ಲಾಂ
ವಿಶ್ವಶಾಂತಿಗೆ ಕಂಟಕವಾಗಿರುವ ಪ್ರಮುಖ ಸಮಸ್ಯೆಗಳಲ್ಲಿ ಮೂಲಭೂತವಾಗಿ ಇಸ್ಲಾಂ ಉಗ್ರವಾದ ಮೊದಲನೆಯದು. ಅಪಘಾನಿಸ್ತಾನದ ತಾಲಿಬಾನನಿಂದ ಮೊದಲುಗೊಂಡು, ಒಸಾಮಾ ಬಿನ್ ಲಾಡನ್‌ನ ಅಲ್ ಖೈದಾ, ಪಾಕಿಸ್ತಾನದಲ್ಲಿ ಬೇರು ಬಿಟ್ಟಿರುವ ಉಗ್ರ ಸಂಘಟನೆಗಳು, ಬಾಂಗ್ಲಾದೇಶದ ಜಮಾತೆಯಂತಹ ತೀವ್ರವಾದಿ ಸಂಘಟನೆಗಳ ಪುಂಡರು, ಯೂರೋಪಿನಲ್ಲಿ ನಿಧಾನವಾಗಿ ಬೇರಿಳಿಸುತ್ತಿರುವ ಮೂಲಭೂತವಾದ, ಜೊತೆಗೆ ಇತ್ತೀಚಿನ ಕೆಲವರ್ಷಗಳಲ್ಲಿ ಪೆಡಂಭೂತವಾಗಿ ಬೆಳದು ಭದ್ರ ನೆಲೆಯನ್ನು ಸ್ಥಾಪಿಸಿಕೊಂಡ ಇಸ್ಲಾಮಿಕ್ ಸ್ಟೇಟ್ (ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಆಂಡ್ ಇರಾಕ್ ಅಥವಾ ಐಎಸ್‌ಐಎಸ್) ಮೊದಲಾದವು ಇಸ್ಲಾಮಿನ ಜಿಹಾದ್ ಹೆಸರಿನಲ್ಲಿ ಮಾನವಕುಲವನ್ನು ವಿನಾಶದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿವೆ. ಪಾಕಿಸ್ತಾನ, ಮಧ್ಯಪ್ರಾಚ್ಯ ಮತ್ತು ಅರಬ್ ದೇಶಗಳು, ಉತ್ತರ ಆಫ್ರಿಕದ ಕೆಲವು ದೇಶಗಳು ಇಂತಹ ದುಷ್ಟಕೂಟಗಳಿಗೆ ಆಶ್ರಯವನ್ನು ನೀಡುತ್ತಿವೆ. ಹಾಗೆಯೇ ಮುಸ್ಲಿಂ ರಾಷ್ಟ್ರವಾಗಿದ್ದರೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದ ಮಲೇಷಿಯ, ಇಂಡೋನೇಷಿಯದಂತಹ ದೇಶಗಳು ಕಟ್ಟರ್ ವಹಾಬಿ ಮೂಲಭೂತವಾದದತ್ತ ವಾಲುತ್ತಿರುವುದು ಕಂಡುಬರುತ್ತಿದೆ. ಅಷ್ಟೇ ಅಲ್ಲದೇ ಚೀನಾದ ಕಮ್ಯುನಿಸ್ಟ್ ಸರ್ಕಾರದ ಬಿಗಿಹಿಡಿತದ ಹೊರತಾಗಿಯೂ ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ನೆಲೆಸಿರುವ ಉಯ್‌ಗುರ್ ಮುಸಲ್ಮಾನ ಉಗ್ರವಾದ ಚಿಗುರುತ್ತಿದೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಐಎಸ್‌ಐಎಸ್ ಪ್ರಭಾವ ಹರಡುತ್ತಿರುವ ವಿಷಯ ವರದಿಯಾಗಿದೆ.
ಇತ್ತೀಚಿನ ಸಮಯದಲ್ಲಿ ಐಎಸ್‌ಐಎಸ್ ಪ್ರಭಾವಕ್ಕೊಳಗಾದ ಮಧ್ಯಪ್ರಾಚ್ಯ ಪ್ರದೇಶವನ್ನು ಬಿಟ್ಟರೆ ಜಿಹಾದಿ ಭಯೋತ್ಪಾದನೆ ಬಲಿಯಾದ ಇನ್ನೊಂದು ಪ್ರದೇಶ ಸ್ವಯಂ ಮತೀಯ ಉಗ್ರವಾದವನ್ನೇ ಪೋಷಿಸುತ್ತಿರುವ ಪಾಕಿಸ್ತಾನ. 2017ರ ಕಳೆದ ಮೂರು ತಿಂಗಳಿನಲ್ಲಿ ಹದಿನೈದಕ್ಕೂ ಹೆಚ್ಚು ಭಯೋತ್ಪಾದಕ ದಾಳಿಗಳು ಬಾಂಬ್ ವಿಸ್ಫೋಟಗಳು ಪಾಕಿಸ್ತಾನದಲ್ಲಿ ನಡೆದಿದ್ದು ನಾಗರಿಕರು, ಭದ್ರತಾ ಪಡೆಯ ಸಿಬ್ಬಂದಿ ಸೇರಿದಂತೆ ೩೫೦ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 2004ರಿಂದ ಪಾಕಿಸ್ತಾನದಲ್ಲಿ ನಿರಂತರ ಉಗ್ರ ಚಟುವಟಿಕೆ ನಡೆಯುತ್ತಿದ್ದು ಪ್ರತಿವರ್ಷ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಇಸ್ಲಾಂ ಮೂಲಭೂತವಾದ ಅದರಲ್ಲೂ ಪಾಕಿಸ್ತಾನ ಪ್ರೇರಿತ ಗಡಿಯಾಚೆಗಿನ ಭಯೋತ್ಪಾದನೆಯನ್ನು ಭಾರತ ದಶಕಗಳಿಂದ ಎದುರಿಸುತ್ತ ಬಂದಿದೆ. ಇಸ್ಲಾಮಿಗೂ ಉಗ್ರವಾದಕ್ಕೂ ಸಂಭಂಧವಿಲ್ಲ, ಭಾರತೀಯ ಮುಸಲ್ಮಾನರು ಐಎಸ್‌ಐಎಸ್‌ನಂತಹ ಉಗ್ರ ಸಂಘಟನೆ ಸೇರಿಲ್ಲ ಎಂದು ರಾಜಕೀಯ ನೇತಾರರು ಮಾಧ್ಯiದ ಬುದ್ಧಿಜೀವಿಗಳು ಎಷ್ಟೇ ಹೇಳಿದರೂ ಕಳೆದ ಒಂದು ವರ್ಷದಲ್ಲಿ ರಾಷ್ಟ್ರೀಯ ತನಿಖಾದಳ (ಎನ್‌ಐಎ) ಪ್ರತಿಬಾರಿ ಉಗ್ರರನ್ನು ಬಂಧಿಸಿದಾಗ ಹೊರಬೀಳುವ ಮಾಹಿತಿಯನ್ನು ನೋಡಿದರೆ ಜಿಹಾದಿ ಭಯೋತ್ಪಾದಕ ಸಂಘಟನೆಗಳಿಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುವ ಸ್ಲೀಪರ್ ಸೆಲ್‌ಗಳು ಅಲ್ಲಲ್ಲಿ ಕೆಲಸ ಮಾಡುತ್ತಿರುವುದು ಹಾಗೆಯೇ ಸ್ಥಳೀಯರನ್ನೇ ಬಳಸಿಕೊಂಡು ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲು ಯೋಜನೆ ಹಾಕಿರುವುದು ಕಾಣಿಸುತ್ತದೆ. ಇದೇ ಮಾರ್ಚ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ರೇಲ್ವೆಯ ಮೇಲೆ ನಡೆದ ಉಗ್ರ ದಾಳಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಇನ್ನು ಸಾಮಾಜಿಕ ಜಾಲತಾಣಗಳನ್ನೂ ಬಳಸಿಕೊಂಡು ಭಯ ಬಿತ್ತುವ ಕೆಲಸವೂ ನಡೆಯುತ್ತಿದೆ. ಅಂತರರಾಷ್ಟ್ರೀಯ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಪ್ರಭಾವಕ್ಕೆ ಭಾರತೀಯ ಮುಸ್ಲಿಂ ಯುವಕರು ಬಲಿಯಾಗುವರೇ? ಎನ್ನುವುದು ಮುಸ್ಲಿಂ ಸಮಾಜವೇ ಪರಿಹಾರ ಕಂಡುಹಿಡಿಯಬೇಕಾದ ಪ್ರಶ್ನೆಯಾಗಿದೆ.
ಮುಸ್ಲಿಂ ಮಹಿಳೆಯರು ಮತ್ತು ಸಮಾನತೆ
ವ್ಯಕ್ತಿಸ್ವಾತಂತ್ರ್ಯ ಮತ್ತು ಸಮಾನತೆಗಳ ವಿಷಯದಲ್ಲಿ ಮುಸ್ಲಿಂ ಮಹಿಳೆಯರಷ್ಟು ತಾರತಮ್ಯಕ್ಕೊಳಗಾದ ಗುಂಪು ಇನ್ನೊಂದು ಇರಲಿಕ್ಕಿಲ್ಲ. ಕೆಲವು ಶ್ರೀಮಂತ ವರ್ಗದ ಉದಾಹರಣೆಗಳನ್ನು ನೀಡಿ ಮುಸ್ಲಿಂ ಮಹಿಳೆಯರಿಗೆ ಸಮಾನ ಆಧಿಕಾರ ಇದೆ ಎಂದು ವಾದಿಸಲಾಗುತ್ತದೆಯಾದರೂ ಇಸ್ಲಾಂ ಸಮಾಜದ ದೊಡ್ಡ ವರ್ಗ ಮಹಿಳೆಯರನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಿರುವುದೂ ಅಷ್ಟೇ ಸತ್ಯ. ಉಡುಗೆ ತೊಡುಗೆಗಳಿಂದ ಹಿಡಿದು ಮಹಿಳೆಯರ ಸಾರ್ವಜನಿಕ ವ್ಯವಹಾರದವರೆಗೆ ಮತೀಯ ವಿಧಿನಿಷೇಧಗಳನ್ನು ಪುರುಷಪ್ರಧಾನ ಕಟ್ಟರ್‌ವಾದಿ ಮುಸ್ಲಿಂ ಸಮಾಜ ಹೇರುತ್ತಲೇ ಇದೆ. ಮಾವನಿಂದ ಅತ್ಯಾಚಾರಕ್ಕೊಳಗಾದ ಮಹಿಳೆಗೆ ಗಂಡನಿಂದ ವಿಚ್ಛೇದನ ನೀಡಿಸಿ, ಇನ್ನು ಗಂಡನನ್ನು ಮಗನಂತೇ ಕಾಣಬೇಕೇಂದು ತಲೆಬುಡವಿಲ್ಲದ ತೀರ್ಪಿತ್ತಂತಹ ಘಟನೆಗಳೂ ನಡೆದಿವೆ.
ಉದಾಹರಣೆಗೆ ವಿವಾಹದ ವಿಷಯವನ್ನೇ ತೆಗೆದುಕೊಳ್ಳಬಹುದು. ಇಸ್ಲಾಮಿನಲ್ಲಿ ವಿವಾಹ ಎನ್ನುವುದು ಪುರುಷ ಮತ್ತು ಮಹಿಳೆಯ ನಡುವಿನ ಒಂದು ಒಪ್ಪಂದವೇ ಹೊರತು ಭಾರತೀಯ ಪದ್ಧತಿಯಂತೆ ಒಂದು ಪವಿತ್ರ ಬಂಧನವಲ್ಲ. ಮುಸ್ಲಿಂ ಕಾನೂನಿನಂತೆ ಓರ್ವ ಪುರುಷ ಒಟ್ಟಿಗೆ ನಾಲ್ಕು ಪತ್ನಿಯರನ್ನು ಹೊಂದಲು ಅವಕಾಶವಿದೆ. ಆತ ಇನ್ನೊಂದು ಸ್ತ್ರೀಯನ್ನು ಮದುವೆಯಾಗಲು ಬಯಸಿದರೆ, ನಾಲ್ವರಲ್ಲಿ ಓರ್ವಳನ್ನು ತ್ಯಜಸಿ ಇನ್ನೊಂದು ವಿವಾಹವಾಗಬಹುದು. ವಿವಾಹವಾಗಲು ಸ್ತ್ರೀಪುರುಷರಿಗೆ 18 ಮತ್ತು ೨೧ವರ್ಷ ವಯಸ್ಸಾಗಿರಬೇಕು ಎಂಬ ಕಾನೂನಿದ್ದರೂ ಮುಸ್ಲಿಂ ವೈಯಕ್ತಿಕ ಕಾನೂನಿನಂತೆ ೧೫ ವರ್ಷಕ್ಕೆ ಮುಸ್ಲಿಂ ಹುಡುಗಿಯ ಮದುವೆ ಮಾಡಬಹುದು. ಒಂದು ಸೀಮಿತ ಅವಧಿಗಷ್ಟೇ ಮದುವೆಯಾಗಿರಬಹುದಾದ ಮುಟಾ ವಿವಾಹವೂ ಇಸ್ಲಾಮಿನಲ್ಲಿದೆ. ಮುಸ್ಲಿಂ ಪುರುಷ ತ್ರಿವಳಿ ತಲಾಖ್ ಮೂಲಕ ಯಾವುದೇ ಕಾರಣ ಹಾಗೂ ಜೀವನಾಂಶವನ್ನೂ ನೀಡದೆ ಪತ್ನಿಗೆ ವಿಚ್ಛೇದನ ನೀಡಬಹುದು. 2011 ಜನಗಣತಿಯ ಅಂಕಿಅಂಶಗಳ ಪ್ರಕಾರ 1000 ಮದುವೆಗಳಲ್ಲಿ ವಿಚ್ಛೇದನದ ಪ್ರಮಾಣ ರಾಷ್ಟ್ರೀಯ ಸರಾಸರಿ 3.1ರಷ್ಟು ಇದ್ದರೆ ಮುಸಲ್ಮಾನರಲ್ಲಿ 5.63ರಷ್ಟಿದೆ. ಅವರಲ್ಲಿ 20-34 ವರ್ಷ ವಯೋಮಾನದ ಮಹಿಳೆಯರೇ ಹೆಚ್ಚು ಎನ್ನುವುದು ಇನ್ನೂ ಕಳವಳಕಾರಿಯಾದ ವಿಷಯವಾಗಿದೆ. ಬುರ್ಖಾದ ಪರದೆಯ ಹಿಂದೆ ತಮ್ಮ ಜೀವಮಾನವನ್ನು ಕಳೆಯುವ ಮಹಿಳೆಂiರಿಗೆ ಸಿಗುವ ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಏನು ಎಷ್ಟು? ಎನ್ನುವುದನ್ನು ಮುಸಲ್ಮಾನ ಸಮಾಜವೇ ಹೇಳಬೇಕು.
ಒಂದಿಷ್ಟು ಧನಾತ್ಮಕ ಸೂಚನೆಗಳು
ಇವೆಲ್ಲದರ ನಡುವೆ ಭಾರತೀಯ ಮುಸ್ಲಿಂ ಸಮಾಜ ಬದಲಾವಣೆಯಾಗುತ್ತಿರುವ ಹಾಗೂ ಸಂಪ್ರದಾಯವಾದಿಗಳ ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲುತ್ತಿರುವ ಕೆಲವೊಂದು ಧನಾತ್ಮಕ ಸೂಚನೆಗಳೂ ಕಾಣುತ್ತವೆ.
ಇತ್ತೀಚೆಗೆ ಕನ್ನಡದ ಪ್ರಸಿದ್ಧ ದೂರದರ್ಶನ ವಾಹಿನಿ ನಡೆಸುವ ಸರೆಗಮಪ ಎಂಬ ಹೆಸರಿನ ರಿಯಾಲಿಟಿ ಶೋನಲ್ಲಿ ತನ್ನ ಸುಮಧುರ ಕಂಠದಿಂದ ಭಕ್ತಿಗೀತೆಯನ್ನು ಹಾಡಿ ಜನಮೆಚ್ಚುಗೆ ಗಳಿಸಿದ ಸುಹಾನಾ ಸೈಯದ್ ಎಂಬ ಹುಡುಗಿ ಕಟ್ಟರ್ ವಾದಿಗಳ ಕೆಂಗಣ್ಣಿಗೆ ಗುರಿಯಾದಳು. ಸಾಮಾಜಿಕ ಜಾಲತಾಣಗಳಲ್ಲಿ ಅವಳನ್ನು ಬೇಕಾಬಿಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಯಿತು. ಅವೆಲ್ಲವನ್ನೂ ಧೈರ್ಯಗುಂದದೇ ಎದುರಿಸಿದ ಸುಹಾನಾ ಹಾಡುವುದನ್ನು ನಿಲ್ಲಿಸಲಿಲ್ಲ. ಅವಳ ಕುಟುಂಬವೂ ಸುಹಾನಾಳ ಬೆಂಬಲಕ್ಕೆ ನಿಂತಿತು. ಕರ್ನಾಟಕ ರಾಜ್ಯದ ಮಂತ್ರಿ ಯು ಟಿ ಖಾದರ್ ಸೇರಿದಂತೆ ಮುಸಲ್ಮಾನ ಸಮಾಜದ ಅನೇಕ ಪ್ರಗತಿಪರರೂ ಅವಳ ಬೆಂಬಲಕ್ಕೆ ನಿಂತರು.
ಕರ್ನಾಟಕದ ಸುಹಾನಾಳಂತೆ ಆಸ್ಸಾಮಿನ ೧೬ವರ್ಷದ ಹುಡುಗಿ ನಾಹಿದ್ ಆಫ್ರಿನ್ ಕೂಡ ಸಾರ್ವಜನಿಕ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಡಿದ್ದಕ್ಕಾಗಿ ಮೌಲ್ವಿಗಳ ಕ್ರೋಧಕ್ಕೆ ಗುರಿಯಾದಳು. ಪ್ರಸಿದ್ಧ ಇಂಡಿಯನ್ ಐಡಲ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಎರಡನೇ ಸ್ಥಾನ ವಿಜೇತಳಾದ ನಾಹಿದ್ ಕಳೆದ ಮಾರ್ಚ ೨೫ರಂದು ಆಸ್ಸಾಮಿನ ಉಡಲಿ ಸೊನಾಯ್ ಬೀಬಿ ಕಾಲೇಜ್ ಆವರಣದಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಹಾಡುವುದನ್ನು ನಿಷೇಧಿಸ ೪೫ ಮೌಲ್ವಿಗಳು ಫತ್ವಾ ಹೊರಡಿಸಿದರು. ’ಮಸೀದಿ, ಮದರಸಾ, ಖಬರ್‌ಸ್ಥಾನ, ಈದಗಾ ಮೈದಾಗಳು ಇರುವ ಪ್ರದೇಶದ ಆವರಣದಲ್ಲಿ ಸಂಗೀತ ಕಾರ್ಯಕ್ರಮ ನಡೆಸುವುದು ಶರಿಯಾಕ್ಕೆ ವಿರುದ್ಧ, ಇದರಿಂದ ನಮ್ಮ ಮುಂದಿನ ತಲೆಮಾರುಗಳು ಅಲ್ಲಾನ ಕ್ರೋಧಕ್ಕೆ ಗುರಿಯಾಗುತ್ತಾರೆ ಎಂದು ಫತ್ವಾ ಹೊರಡಿಸಲಾಗಿತ್ತು. ಇದಕ್ಕೆ ಬಗ್ಗದ ನಾಹಿದ್ ಸಂಗೀತ ನನಗೆ ದೇವರು ನೀಡಿದ ಉಡುಗೊರೆ, ಆದ್ದರಿಂದ ಹಾಡದೇ ಇರುವುದ ದೇವರಿಗೆ ಮಾಡುವ ಅವಮಾನ’ ಎಂದು ಕಡಕ್ ಉತ್ತರ ನೀಡಿದಳು. ಇವರಿಬ್ಬರಿಗೂ ಪ್ರಗತಿಪರ ಮುಸ್ಲಿಂ ಸಮಾಜವೂ ಸೇರಿದಂತೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಖ್ಯಾತ ಚಲನಚಿತ್ರ ಗೀತಕಾರ ಚಿಂತಕ ಜಾವೇದ್ ಆಖ್ತರ್ ಸಾಂಪ್ರದಾಯವಾದಿಗಳನ್ನು ಬಲವಾಗಿ ಖಂಡಿಸಿದರು.
ಕೆಲವು ದಿನಗಳ ಹಿಂದೆ ಲಖನೌನ ಠಾಕುರ್‌ಗಂಜ್‌ನಲ್ಲಿ ಅಡಗಿ ಕೂತ ಉಗ್ರರ ತಂಡವನ್ನು ಭೇದಿಸಲು ನಡೆದ ಭಯೋತ್ಪಾದನ ನಿಗ್ರಹ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಉಗ್ರ ಸೈಫುಲ್ಲಾಹ್‌ನ ಶವವನ್ನು ಪಡೆಯಲು ಸ್ವಯಂ ಆತನ ತಂದೆಯಾದ ಸರ್ತಾಜ್ ನಿರಾಕರಿಸಿದರು. ಎರಡೂವರೆ ತಿಂಗಳ ಹಿಂದೆ ಮನೆ ಬಿಟ್ಟಿದ್ದ ಮಗ ಭಯೋತ್ಪಾದಕನಾಗಿದ್ದನ್ನು ತಿಳಿದ ಆತ ಓರ್ವ ದೇಶದ್ರೋಹಿ ನನ್ನ ಮಗನಾಗಲಾರ. ನಾವು ಮೊದಲು ಭಾರತೀಯರು. ನಾನು ಹುಟ್ಟಿದ್ದು ಇಲ್ಲಿ, ನಮ್ಮ ಪೂರ್ವಜರೂ ಇಲ್ಲಿಯೇ ಹುಟ್ಟಿದ್ದು ಎಂದರು.
ತ್ರಿವಳಿ ತಲಾಖ್‌ನಿಂದ ಮುಸ್ಲಿಂ ಮಹಿಳೆಯರಿಗೆ ಬಹಳ ಅನ್ಯಾಯವಾಗುತ್ತಿದ್ದು ಅದನ್ನು ಕಾನೂನಾತ್ಮಕವಾಗಿ ರದ್ದುಗೊಳಿಸಬೇಕೆಂಬ ಬಲವಾದ ಬೇಡಿಕೆ ಮುಸಲ್ಮಾನ ಸಮಾಜದಿಂದಲೇ ಕೇಳಿಬರುತ್ತಿದೆ. ಇತ್ತಿಚೆಗೆ ದೆಹಲಿಯಲ್ಲಿ ಸೇರಿ ಪ್ರದರ್ಶನ ನಡೆಸಿದ ದೇಶದಾದ್ಯಂತದಿಂದ ಬಂದ ಮುಸ್ಲಿಂ ಮಹಿಳೆಯರು ಪ್ರಧಾನಿ ಮೋದಿಯವರನ್ನು ತ್ರಿವಳಿ ತಲಾಖ್ ಕೊನೆಗೊಳಿಸಲು ಕಾನೂನು ತರುವಂತೆ ಒತ್ತಾಯಿಸಿದರು. ತ್ರಿವಳಿ ತಲಾಖ್ ವಿರುದ್ಧ ಮುಸ್ಲಿಂ ರಾಷ್ಟ್ರೀಯ ಮಂಚ್ ಎನ್ನುವ ಸಂಘಟನೆ ನಡೆಸಿದ ಸಹಿ ಅಭಿಯಾನವನ್ನು ಹತ್ತು ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಬೆಂಬಲಿಸಿದ್ದಾರೆ. ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಎನ್ನುವ ಸಂಘಟನೆ ನಡೆಸಿದ ಸಮೀಕ್ಷೆಯ ಪ್ರಕಾರ ಶೇ 92.1ರಷ್ಟು ಮಹಿಳೆಯರು ತ್ರಿವಳಿ ತಲಾಖ್ ನಿಷೇಧವನ್ನು ಬೆಂಬಲಿಸಿದ್ದಾರೆ, ಶೇ. 91.7 ಮಹಿಳೆಯರು ಬಹುಪತ್ನಿತ್ವವನ್ನು ವಿರೋಧಿಸಿದ್ದು ಮತ್ತು ಶೇ. 83.3ರಷ್ಟು ಮಹಿಳೆಯರು ಸಮಾನತೆ ಮತ್ತು ನ್ಯಾಯ ಸಿಗಲು ಮುಸ್ಲಿಂ ವಿವಾಹ ಕಾನೂನನ್ನು ಲಿಖಿತ ರೂಪಕ್ಕೆ ತರಬೇಕು ಎಂದು ಬಯಸುವುದು ಕಂಡುಬಂದಿದೆ. ಮುಸ್ಲಿಂ ಸಮಾಜದ ಅನೇಕ ಯುವಕರು ಮತ್ತು ಚಿಂತಕರು ತ್ರಿವಳಿ ತಲಾಖ್ ಮತ್ತು ಬಹುಪತ್ನಿತ್ವದ ವಿರುದ್ಧ ದನಿಯೆತ್ತುತ್ತಿರುವುದನ್ನು ಗಮನಿಸಬಹುದು.
ಇತ್ತೀಚೆಗೆ ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಮುಸ್ಲಿಂ ಜನಸಂಖ್ಯಾ ಬಾಹುಳ್ಯದ ಮತ್ತು ಮುಸ್ಲಿಂ ಮತದಾರರೇ ನಿರ್ಣಾಯಕವಾಗಿರುವ ೪೨ ವಿಧಾನಸಭಾ ಕ್ಷೇತ್ರಗಳ ಪೈಕಿ 32ರಲ್ಲಿ ಉಳಿದ ಪಕ್ಷಗಳು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಹೊರತಾಗಿಯೂ ಭಾರತೀಯ ಜನತಾ ಪಾರ್ಟಿ ಬಿಜೆಪಿಯ ಅಭ್ಯರ್ಥಿಗಳು ದೊಡ್ಡ ಮತಗಳ ಅಂತರದಿಂದ ಜಯಗಳಿಸಿದರು. ಅದರಲ್ಲೂ ಮುಸ್ಲಿಂ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಿದ್ದಾಗಿ ಅನೇಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಯನ್ನು ಸಾಮಾನ್ಯವಾಗಿ ಮುಸ್ಲಿಂ ವಿರೋಧಿಯೆಂದು ಪ್ರಚಾರ ಮಾಡಿದ್ದನ್ನು ನಾವು ಗಮನಿಸಿರಬಹುದು. ಈ ಫಲಿತಾಂಶ ಇದುವರೆಗೂ ತಥಾಕಥಿತ ಸೆಕ್ಯುಲರ್ ಪಕ್ಷಗಳ ಮತಬ್ಯಾಂಕ್ ಆಗಿದ್ದ ಮುಸ್ಲಿಂ ಸಮಾಜ ಜಾಗೃತವಾಗಿದ್ದು ದೇಶಹಿತದಲ್ಲಿ ಮೌಲ್ವಿಗಳ ಫತ್ವಾವನ್ನು ಮೀರಿ ಮತಹಾಕುತ್ತಿರುವುದನ್ನು ಸೂಚಿಸುತ್ತದೆ.
ಪ್ರತ್ಯೇಕತಾವಾದಿಗಳೂ ಮತ್ತು ಪಾಕ್ ಮೂಲದ ಜಿಹಾದಿ ಭಯೋತ್ಪಾದಕರ ಬೆದರಿಕೆಗಳ ಹೊರತಾಗಿಯೂ ಭಾರತೀಯ ಸೇನೆಯನ್ನು ಸೇರಲು ಕಾಶ್ಮೀರದ ಯುವಕರು ಸಾಲುಗಟ್ಟಿ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಮಾರ್ಚನಲ್ಲಿ ಬಾರಾಮುಲ್ಲಾದಲ್ಲಿ ನಡೆದ ಸೇನಾಭರ್ತಿ ಮೇಳದಲ್ಲಿ ಸಾವಿರಾರು ಕಾಶ್ಮೀರಿ ಯುವಕರು ಪಾಲ್ಗೊಂಡರು.
ಮುನ್ನೋಟ
ಈ ಮೇಲೆ ಉಲ್ಲೇಖಿಸಿದ ಘಟನೆಗಳು ಒಂದಿಷ್ಟು ಸಮಾಧಾನಕರವಾಗಿದ್ದರೂ ಮುಸ್ಲಿಂ ಸಮಾಜ ಎದುರಿಸಬೇಕಾದ ಸವಾಲುಗಳು ಇನ್ನೂ ಬಹಳವಾಗಿವೆ. ಮುಸ್ಲಿಂ ಸಮಾಜದ ಒಳಗಿಂದಲೇ ಕಟ್ಟರ್ವಾದಿಗಳು ಮತ್ತು ಮೂಲಭೂತವಾದಿಗಳ ವಿರುದ್ಧ ಹೋರಾಡುವ ಶಕ್ತಿ ಸಜ್ಜಾಗಬೇಕಿದೆ. ಒಂದುಕಡೆ ಅಮೆರಿಕ ಬೆಂಬಲದ ನ್ಯಾಟೋ, ಕುರ್ದಿಶ್ ಮತ್ತು ಇರಾಕಿ ಸೇನೆ ಹಾಗೂ ಇನ್ನೊಂದು ಕಡೆಗೆ ರಷ್ಯಾ ಇರಾನ್ ಬೆಂಬಲದ ಸಿರಿಯಾ ಬಲದ ದಾಳಿಗೆ ಐಎಸ್‌ಐಎಸ್ ಸೌಧ ನಿಧಾನವಾಗಿ ಕುಸಿದು ಬೀಳುತ್ತಿದೆ, ಆದರೆ ಅಲ್ಲಿ ನೆಲೆ ಕಳೆದುಕೊಂಡು ಈ ಪಿಡುಗು ದೊಡ್ಡ ಸಂಖ್ಯೆಯ ಮುಸಲ್ಮಾನ ಜನಸಂಖ್ಯೆ ಇರುವ ಏಷಿಯಾದತ್ತ ಮುಖ ಮಾಡುತ್ತಿವೆ. ಈ ಐಎಸ್‌ಐಎಸ್‌ನ ಪ್ರಭಾವಕ್ಕೆ ಮುಸಲ್ಮಾನ ಯುವಕರು ಬಲಿಯಾಗದಂತೆ ತಡೆಯುವ ಜವಾಬ್ದಾರಿಯೂ ಇದೆ.
ಅಮೇರಿಕ ಪ್ಯೂ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನ ಹೇಳುವಂತೆ ೨೦೫೦ರ ಹೊತ್ತಿಗೆ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯುಳ್ಳ ದೇಶವಾಗಲಿದೆ. ಭಾರತದ ಜನಸಂಖ್ಯೆಯ ಶೇ ೭೭ರಷ್ಟು ಹಿಂದೂಗಳೇ ಇದ್ದರೂ ಸುಮಾರು ೩೧ ಕೋಟಿಯಷ್ಟಾಗು ಮುಸ್ಲಿಂ ಜಸಂಖ್ಯೆ ೨೦೫೦ರ ಹೊತ್ತಿಗೆ ಭಾರತದಲ್ಲಿರಲಿದೆ. ಆದರೆ ಶೇ೧೮ ರಷ್ಟು ಜನಸಂಖ್ಯೆಯಿದ್ದರೂ ಅಲ್ಪಸಂಖ್ಯಾತರೆಂದೇ ಗುರುತಿಸಲ್ಪಡುವ ಮುಸ್ಲಿಂ ಸಮುದಾಯ ಸಾಂಪ್ರದಾಯಿಕ ಕಟ್ಟರ್‌ಪಂಥದಿಂದ ಬಿಡಿಸಿಕೊಂಡು ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳದಿದ್ದರೆ ದೊಡ್ಡ ಗಂಡಾಂತರವನ್ನು ತಂದೊಡ್ಡವುದರಲ್ಲಿ ಸಂಶಯವಿಲ್ಲ. ಏಕೆಂದರೆ ಇಷ್ಟು ದೊಡ್ಡ ಸಮುದಾಯ ಒಂದು ಸಣ್ಣ ಪ್ರತಿಶತ ಭಾಗ ಮತೀಯ ಮೂಲಭೂತವಾದ ಭಯೋತ್ಪಾದನೆಯ ಮಾರ್ಗ ಹಿಡಿದರೂ ಸಮಾಜದ ಶಾಂತಿ ಕೆಡಿಸಲು ಸಾಕು. ದಶಕಗಳಿಂದ ನಡೆದಿರುವ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಉಗ್ರವಾದ, ಕೆಲವು ವರ್ಷಗಳ ಹಿಂದೆ ಆಸ್ಸಾಂನಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಮತ್ತು ಪಶ್ಚಿಮ ಬಂಗಾಳದ ಇತ್ತೀಚಿನ ಬೆಳವಣಿಗೆಗಳು ಇದಕ್ಕೆ ಉದಾಹರಣೆಗಳು.
ಆದ್ದರಿಂದ ಮುಸ್ಲಿಮರ ಹಕ್ಕಿನ ಪರವಾಗಿ ಹೋರಾಡುತ್ತೇವೆ ಎನ್ನುವ ಬುದ್ಧಿಜೀವಿಗಳು, ತಥಾಕಥಿತ ಸೆಕ್ಯುಲರ್‌ವಾದಿ ರಾಜಕೀಯ ಪಕ್ಷಗಳು ಗಮನಹರಿಸಬೇಕಾದುದು ಮುಸ್ಲಿಂ ಸಮಾಜ ಅಲ್ಪಸಂಖ್ಯಾತರೆಂದು ಪ್ರತ್ಯೇಕ ಸವಲತ್ತುಗಳನ್ನು ನೀಡುವ ಕಡೆಗಲ್ಲ. ಬದಲಾಗಿ ಮುಸಲ್ಮಾನ ಸಮಾಜದಲ್ಲೇ ಇರುವ, ಅಲ್ಲಿಂದಲೇ ಹುಟ್ಟಿ ಬರುವ ಪ್ರಗತಿಶೀಲ ದನಿಗಳನ್ನು ಪ್ರೋತ್ಸಾಹಿಸುವುದು, ಸುಧಾರಣೆಗೊಳಪಡಿಸಿ ಆಧುನಿಕ ಕಾಲಕ್ಕೆ ತಮ್ಮ ಸಮಾಜವನ್ನು ತಯಾರುಮಾಡಲು ಪ್ರೇರಣೆ ಪ್ರೋತ್ಸಾಹ ನೀಡುವುದು, ಮತೀಯ ತೀವ್ರವಾದ ಮತ್ತು ಜಿಹಾದಿ ಉಗ್ರವಾದಗಳ ಕಡೆಗೆ ಮುಸ್ಲಿಂ ಯುವಜನರು ಆಕರ್ಷಿತರಾಗುವುದನ್ನು ತಡೆಯಲು ಕ್ರಮ ಕೈಗೊಳ್ಳುವುದು ಇಂದಿನ ಆದ್ಯತೆಯಾಗಬೇಕು. ಏಕೆಂದರೆ ಕಾಲಕಾಲಕ್ಕೆ ಪರಿಷ್ಕರಣೆಗೆ ಒಳಗಾಗದ ಮತೀಯ ನಿಯಮಗಳ ಚೌಕಟ್ಟಿನ ಮಿತಿಯ ಹೊರಗೆ ವಿಚಾರಮಾಡದ ಹೊರತು ಭಾರತೀಯ ಇಸ್ಲಾಮ್ ಸಮಾಜದ ಉತ್ಕರ್ಷ ಅಸಾಧ್ಯ, ಹಾಗೆಯೇ ದೇಶದ ಪ್ರಗತಿಯೂ ಸಹ.