Saturday, April 1, 2017

ಎಸ್ ಗುರುಮೂರ್ತಿ ಕಂಡಂತೆ 'ಗುರೂಜಿ ಮತ್ತು ಸಮಕಾಲೀನ ಭಾರತ'

(ಪುಂಗವ 15/03/2017)


ಆರೆಸ್ಸೆಸ್ ಮತ್ತು ಗೋಳ್ವಲ್ಕರ್‌ರನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವಿಲ್ಲ ಏಕೆಂದರೆ ಆರೆಸ್ಸೆಸ್ಸಿನ ಸಿದ್ಧಾಂತ, ಕಾರ್ಯಪದ್ಧತಿ, ಚರಿತ್ರೆ, ಶಿಸ್ತು, ತರಬೇತಿಯ ಮಾದರಿ, ಸಾರ್ವಜನಿಕ ಚಿತ್ರಣ ಇವೆಲ್ಲ ಒಟ್ಟಿಗೆ ಹೊಂದಿಕೊಂಡಿವೆ. ಕಳೆದ ಅನೇಕ ದಶಕಗಳಲ್ಲಿ  ಬಹುಶಃ ಅತಿಹೆಚ್ಚು ಪ್ರಶಂಸೆಗೆ ಮತ್ತು ಅಷ್ಟೇ ಪ್ರಮಾಣದ ತೆಗಳಿಕೆಗೆ ಒಳಗಾದ ಸಂಘಟನೆ ಆರೆಸ್ಸೆಸ್ ಹಾಗೆಯೇ ಗುರೂಜೀ ಗೋಳ್ವಲ್ಕರ್ ಕೂಡ. ಸಾಮಾಜಿಕವಾಗಿ ಪ್ರಶಂಸಿಲ್ಪಡುವ ಆರೆಸ್ಸೆಸ್ ರಾಜಕೀಯ ಕಾರಣಗಳಿಂದಾಗಿ ವಿರೋಧಕ್ಕೆ ಒಳಗಾಗಿದೆ. ಇದೇ ರೀತಿ ಗುರೂಜೀಯವರು ಸತ್ಯ ಅಥವಾ ಅಪಾರ್ಥಕ್ಕೆ, ಪ್ರಶಂಸೆ ಅಥವಾ ಟೀಕೆಗೆ ಒಳಗಾದರು. ಆದರೆ ಪ್ರಶಂಸೆ ಅಥವಾ ಟೀಕೆಯ ಮಿತಿಯನ್ನು ದಾಟದ ಹೊರತು ಕೇವಲ ತನ್ನ ತಾಯ್ನಾಡಿಗಷ್ಟೇ ಅಲ್ಲ ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲ ದೃಷ್ಟಿಕೋನ ಹೊಂದಿದ್ದ ಶ್ರೇಷ್ಟ ತತ್ವಜ್ಞ ಚಿಂತಕರಾಗಿದ್ದ ಗುರೂಜಿಯವರ ಪೂರ್ಣ ವ್ಯಕ್ತಿತ್ವದ ಪರಿಚಯ ದೊರಕುವುದಿಲ್ಲ. ಹಾಗೆಯೇ ಗುರೂಜಿಯವರನ್ನು ಕೇವಲ ಭಾರತಕ್ಕೆ ಸೀಮಿತಗೊಳಿಸುವ ಪ್ರಯತ್ನವನ್ನು ಕೆಲವರು ಮಾವುತ್ತಾರೆ, ಇದೂ ಸರಿಯಾದುದಲ್ಲ. ಸಂಘವನ್ನು ವಿಶ್ಲೇಷಣೆ ಮಾಡದೇ ಗುರೂಜೀಯವರ ವ್ಯಕ್ತಿತ್ವವನ್ನು ವಿಶ್ಲೇಷಣೆ ಮಾಡುವುದು ಸಾಧ್ಯವಿಲ್ಲ, ಈ ಎರಡು ವ್ಯಕ್ತಿತ್ವಗಳು ಬೇರ್ಪಡಿಸಲಾರದಂತೆ ಬೆರೆತಿವೆ. 33 ವರ್ಷಗಳ ಕಾಲ ಅತ್ಯಂತ ಕಠಿಣ ಸಮಯದಲ್ಲಿ ಅವರು ಸಂಘಕ್ಕೆ ಮಾರ್ಗದರ್ಶನ ನೀಡಿದರು. ದೇಶಹಿತ, ಹಿಂದೂ ಹಿತದಲ್ಲಿ ಸಂಘವನ್ನು ರೂಪಿಸಿದರು. 

ಯಾವುದೇ ವ್ಯಕ್ತಿ ಅಥವಾ ಸಿದ್ಧಾಂತವನ್ನು ಟೀಕೆಗೆ ಒಳಪಡಿಸಬೇಕಾದಾಗ ಅವರ ಬಗ್ಗೆ ಆಳವಾಗಿ ಅಧ್ಯಯನ ಮಾಡಿರಬೇಕು ಇಲ್ಲವಾದರೆ ಟೀಕಿಸುವ ಅಧಿಕಾರ ನಮಗೆ ಬರುವುದಿಲ್ಲ. ಆದರೆ ಗೋಲ್ವಲ್ಕರ್ ಮತ್ತು ಸಂಘದ ಮೇಲಿನ ಎಲ್ಲಾ ಟೀಕೆಗಳ ಹಿಂದೇ ಯಾವುದೇ ಅಧ್ಯಯನವೇ ಇಲ್ಲ. ಇದನ್ನು ಕಮ್ಯುನಿಸ್ಟ ಚಿಂತಕರೇ ಒಪ್ಪಿಕೊಂಡಿದ್ದಾರೆ.

1940ರವರೆಗೆ ಆರೆಸ್ಸೆಸ್ ವಿಚಾರಧಾರೆ ಮತ್ತು ದೇಶದ ಉಳಿದ ರಾಜಕೀಯ, ಸಾಮಾಜಿಕ, ಆರ್ಥಿಕ ಚಿಂತಕರ ವಿಚಾರಗಳಲ್ಲಿ ಬಹುತೇಕ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಭಾರತದ ಹೊರಗೂ ಸಹ ಬೇರೆ ಬೇರೆ ಎಡಪಂಥೀಯ ಚಿಂತಕರು ಭಾರತವನ್ನು ನೋಡಿದ ದೃಷ್ಟಿಯು ಆರೆಸ್ಸೆಸ್ ವಿಚಾರಕ್ಕಿಂತ ಬರಳ ಭಿನ್ನವಾಗಿರಲಿಲ್ಲ. 1940ರವರೆಗೆ ಕಮ್ಯುನಿಸ್ಟರು, ಗಾಂಧೀಜೀ, ನೆಹರು ಇವರೆಲ್ಲರ ವಿಚಾರಗಳಲ್ಲಿ ಭಾರತದ ಹಿಂದೂ ಗುರುತಿನ ಬಗ್ಗೆ ಒಮ್ಮತವಿತ್ತು. ಈ ದಾಖಲೆಗಳನ್ನು ಪುನಃ ಬರೆದು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ 1940ರಲ್ಲಿ ಮುಸ್ಲಿಂ ಲೀಗ್ ಪಾಕಿಸ್ತಾನವನ್ನು ನಿರ್ಮಿಸುವ ನಿರ್ಣಯವನ್ನು ಅಂಗೀಕರಿಸಿದ ನಂತರ ಇವೆಲ್ಲವೂ ಬದಲಾದವು. ಇದರಿಂದ ಇಡೀ ರಾಜಕೀಯ ಚರ್ಚೆಯೇ ಬದಲಾಯಿತು. ಹಿಂದು, ಹಿಂದುತ್ವದ ತತ್ವ ಮತ್ತು ಸಂಸ್ಕೃತಿಯೊಂದಿಗೆ ಭಾರತದ ಗುರುತು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತ ಸಂಪೂರ್ಣ ಭಾರತಕ್ಕಲ್ಲ ಎನ್ನುವ ರಾಜಕೀಯ ವ್ಯಾಖ್ಯೆ 1940ರ ನಂತರ ಆರಂಭವಾಯಿತು. ಭಾರತದ ಹಿಂದೂ ಗುರುತಿನ ಕುರಿತು ಸಾಮಾನ್ಯ ಒಮ್ಮತವಿದ್ದ ವಿಚಾರ ಬದಲಾಗುತ್ತಿರುವ ಸಮಯದಲ್ಲಿ ಗೋಳ್ವಲ್ಕರ್ ಸಂಘದ ನೇತೃತ್ವ ವಹಿಸಿಕೊಂಡರು. ಇಂತಹ ನಿರ್ಣಾಯಕ ಕಾಲದಲ್ಲಿ ಅವರು ಸಂಘವನ್ನು ಮುನ್ನಡೆಸಿದರು. ಸಂಘ 1940ರವರೆಗೆ ಭಾರತದ ಹಿಂದೂ ಅಸ್ಮಿತೆಯ ಕುರಿತು ಇಡೀ ದೇಶದಲ್ಲೇ ಸ್ಥಾಪಿತವಾಗಿದ್ದ ವಿಚಾರದ ಪರವಾಗಿ ಆರೆಸ್ಸೆಸ್ ನಿಂತಿದೆಯೇ ಹೊರತು ಹೊಸದೊಂದು ವಿಚಾರವನ್ನು ಹುಟ್ಟುಹಾಕಿಲ್ಲ. ಆರೆಸ್ಸೆಸ್ ಹಿಂದೂ ರಾಷ್ಟ್ರೀಯತೆಯೆ ವಿಚಾರವನ್ನು ಹುಟ್ಟುಹಾಕಿಲ್ಲ, ಬದಲಿಗೆ 1940ರವರೆಗೆ ಸಾಮಾನ್ಯವಾಗಿ ಎಲ್ಲ ವರ್ಗದವರೂ ಒಪ್ಪಿದ್ದ ಭಾರತದ ಹಿಂದೂ ರಾಷ್ಟ್ರೀಯತೆಯ ಗುರುತನ್ನೇ ಪ್ರತಿಪಾದಿಸಿತು. ಆರೆಸ್ಸೆಸ್ ಗುರೂಜಿಯವರ ನೇತೃತ್ವದಲ್ಲಿ ಭಾರತದ ಪುರಾತನ ಏಕತೆಯನ್ನು ಪುನಃ ಸ್ಥಾಪಿಸಲು ಕಾರ್ಯಮಾಡತೊಡಗಿತು. 


ಅಮೇರಿಕದ ಶಿಕಾಗೋ ವಿಶ್ವವಿದ್ಯಾಲಯ ನಡೆಸಿದ "ಫಂಡಮೆಂಟಲಿಸಂ" ಹೆಸರಿನಲ ಅಧ್ಯಯದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ವಿವಿಧ ಮತ ಮತ್ತು ಆರೆಸ್ಸೆಸ್  ಸೇರಿದ್ಂತೆ ವಿವಿಧ್ ಸಂಘಟನೆಗಳಲ್ಲಿ ಮತೀಯ ಮೂಲಭೂತವಾದವನ್ನು ಕುರಿತು ಅಧ್ಯಯನ ನಡೆಸಿತು. ಈ ಅಧ್ಯಯನವು ಹಿಂದುತ್ವ, ಹಿಂದೂರಾಷ್ಟ್ರ, ಹಿಂದೂ ಸಾಂಸ್ಕೄತಿಕ ರಾಷ್ಟ್ರೀಯತೆ ಈ ವಿಷಯಗಳ ಕುರಿತಾದ ಗುರೂಜಿಯವರ ವಿಚಾರಗಳಿಗೆ ಬೆಂಬಲ ಸೂಚಿಸಿದೆ. 


ಆರೆಸ್ಸೆಸ್ ಕುರಿತು ಮಾತನಾಡುವಾಗಲೆಲ್ಲ ಇದೊಂದು ಹಿಂದೂ ಪುನರುತ್ಥಾನ ಮಾಡುವ, ಪ್ರತಿಕ್ರಿಯಾತ್ಮಕ ಸಂಘಟನೆ ಎಂದು ಹೇಳಲಾಗುತ್ತಿತ್ತು, ಆದರೆ ಈ ವ್ಯಾಖ್ಯಾನಗಳು ಹಿಂದುತ್ವಕ್ಕೆ ಒಪ್ಪುವಂತವಲ್ಲ ಏಕೆಂದರೆ ಯಾರಿಗೂ ಪ್ರತಿಕ್ರಿಯೆ ನೀಡುವವರಲ್ಲ, ನಾವು ಸರ್ವವೂ ಸೇರಿರುವ ಸಂಘಟನೆ, ನಾವು ಎಲ್ಲರನ್ನೂ ಒಪ್ಪುತ್ತೇವೆ. ಎನ್ನುವುದು ಗುರೂಜೀಯವರ ಅಭಿಪ್ರಾಯವಾಗಿತ್ತು. ರಾಷ್ಟ್ರ ಮತ್ತು ರಾಜ್ಯ (ನೇಶನ್ ಮತ್ತು ಸ್ಟೇಟ್) ಇವೆರಡೂ ಬೇರೆ ಬೇರೆ, ಉಳಿದೆಲ್ಲ ದೇಶಗಳಲ್ಲಿ ರಾಜ್ಯವು ರಾಷ್ಟ್ರವನ್ನು ನಿರ್ಮಿಸಿದರೆ ನಮ್ಮಲ್ಲಿ ರಾಜ್ಯವಿಲ್ಲದೆಯೇ ರಾಷ್ಟ್ರವಿತ್ತು, ವಿರೋಧೀ ರಾಜ್ಯವಿದ್ದರೂ ರಾಷ್ಟ್ರವಿತ್ತು. ರಾಷ್ಟ್ರ ಎನ್ನುವುದು ಪ್ರೇಮ ಮತ್ತು ಏಕತೆಯ ಮೇಲೆ ನಿಂತಿರುವ ಮಾನಸಿಕ ಸ್ಥಿತಿ, ಅದು ಎರಡು ಸಾವಿರ ವರ್ಷಗಳಿಂದ ರಾಜ್ಯವಿಲ್ಲದೇ ನಿಲ್ಲಬಲ್ಲದ್ದು, ಇಸ್ರೇಲಿನ ಯಾವುದೇ ಭೂಭಾಗವು ನಿಯಂತ್ರಣದಲ್ಲಿರದಿದ್ದರೂ ಜ್ಯೂ ರಾಷ್ಟ್ರವು ಜ್ಯೂಗಳ ಹೃದಯದಲ್ಲಿ ನೆಲೆಸಿತ್ತು. ರಾಷ್ಟ್ರ ಎನ್ನುವುದು ಜನರ ಮನೋಬುದ್ಧಿ ಹೃದಯಗಳಲ್ಲಿ ಜೀವಂತವಾಗಿರುತ್ತದೆ, ಆದರೆ ರಾಜ್ಯಕ್ಕೆ ಸ್ವತಂತ್ರವಾದ ಅಸ್ತಿತ್ವ ಇದೆ ಎನ್ನುವುದು ಗುರೂಜೀಯವರ ಅಭಿಪ್ರಾಯವಾಗಿತ್ತು.

ಗುರೂಜೀಯವರ ವಿಚಾರಗಳು ಶಿಕಾಗೋ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಪ್ರತಿಧ್ವನಿತವಾಗಿವೆ. ಹಾಗೆಯೇ ಭಾರತದ ಸರ್ವೋಚ್ಛ ನ್ಯಾಯಾಲಯದ ಹಿಂದುತ್ವ ಜಡ್ಜಮೆಂಟಿನಲ್ಲಿಯೂ ಗುರೂಜೀಯವರು ಬಂಚ್ ಆಫ್ ಥಾಟ್ನಜಲ್ಲಿ ಹೇಳಿರುವ ಶಬ್ದಗಳೇ ಉಲ್ಲೇಖಗೊಂಡಿವೆ. 

ಪರಿಪೂರ್ಣ ವ್ಯಕ್ತಿತ್ವದ ಗುರೂಜೀ ಕೇವಲ ಆರೆಸ್ಸೆಸ್ಸಿಗ್ನಷ್ಟೇ ಅಲ್ಲ ಸಂದಿಗ್ದ ಕಾಲದಲ್ಲಿ ದೇಶಕ್ಕೂ ಮಾರ್ಗದರ್ಶನ ನೀಡಿದರು. ಅವರ ಸಾತ್ವಿಕ ಶಕ್ತಿ ಮತ್ತು ಪರಿಶುದ್ಧತೆ ಎಷ್ಟು ಶ್ರೇಷ್ಟವಾಗಿತ್ತೆಂದರೆ ಆರೆಸ್ಸೆಸ್ ವಿರೋಧೀ ವಾತಾವರಣ ತೀವ್ರವಾಗಿದ್ದ ಸಮಯದಲ್ಲಿ ಗುರೂಜೀ ಮೃತರಾದಾಗ ಸಂಸತ್ತು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು, ಸಂಸತ್ತಿನಲ್ಲಿ ಚರ್ಚೆಯ ನೇತೃತ್ವ ವಹಿಸಿದ್ದವರು ಗುರೂಜೀಯವರೊಂದಿಗೆ ಬಹಳ ವೈಚಾರಿಕ ಭಿನ್ನಾಭಿಪ್ರಾಯ ಹೊಂದಿದ್ದ ಸ್ವಯಂ ಇಂದಿರಾ ಗಾಂಧಿ. ಅವರು ಎಷ್ಟು ಪ್ರಸ್ತುತ ಎಂದರೆ ಸಂಘವಷ್ಟೇ ಅಲ್ಲ ದೇಶದ ವಿಷಯದಲ್ಲಿ  ಅವರ ಪರಿಕಲ್ಪನೆಯಲ್ಲಿ ಮೂಡಿದ, ಹೇಳಿದ, ಮಂಡಿಸಿದ್, ರೂಪಗೊಳಿಸಿದ ವಿಚಾರಗಳನ್ನು  ತದನಂತರದ ಸಮಯದಲ್ಲಿ ನಡೆದ ಘಟನೆಗಳು ಪುಷ್ಟೀಕರಿಸಿವೆ. ಉದಾಹರಣೆಗೆ ಚೀನಾದ ಕುರಿತು ಕೇಳಿದ ಪ್ರಶ್ನೆಗೆ ’ಕಮ್ಯುನಿಸ್ಟ ಚೀನಾದಿಂದ ಕನ್ಫ್ಯೂಶಿಯನ್ ಚೀನಾ ಹುಟ್ಟುವುದು, ಆದರೆ ಅದರ ಸಾಮ್ರಾಜ್ಯಶಾಹಿ ಪ್ರವೃತ್ತಿ ಹಾಗೇ ಬೆಳೆಯುವುದು’ ಎಂದು ಹೇಳಿದ್ದರು. ಹಾಗೆಯೇ ಪಾಕಿಸ್ತಾನದ ಕುರಿತು ’ಅದು ವಿಶ್ವಕ್ಕೆ ಸದಾ ಉಪದ್ರವಕಾರಿಯಾಗಿರಲಿದೆ’ ಎಂದು ಹೇಳಿದ್ದರು. ಇಂದು ನಾವು ಇದನ್ನೇ ಕಾಣುತ್ತಿದ್ದೇವೆ. ಅವರು ಕೇವಲ ಆಯಾ ಸಾಂದರ್ಭಿಕ ಸನ್ನಿವೇಶಕ್ಕೆ ಸೀಮಿತರಾಗಿರಲಿಲ್ಲ. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಅವರೊಬ್ಬರು ಋಷಿಯಾಗಿದ್ದರು.


(ಆರೆಸ್ಸೆಸ್ ದ್ವಿತೀಯ ಸರಸಂಘಚಾಲಕ ಶ್ರೀ ಗುರೂಜಿ(ಮಾಧವ ಸದಾಶಿವರಾವ್ ಗೋಳ್ವಲ್ಕರ್) ಜನ್ಮದಿನದ ನಿಮಿತ್ತ ಬೆಂಗಳೂರಿನ ಮಂಥನ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಆರ್ಥ ತಜ್ಞ, ಹಿರಿಯ ಪತ್ರಕರ್ತ ಎಸ್ ಗುರುಮೂರ್ತಿ ನೀಡಿದ ಉಪನ್ಯಾಸದ ತುಣುಕುಗಳು)

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...