(ವಿಕ್ರಮ 22/01/2017)
(ಆಚಾರ್ಯ ಅಭಿನವಗುಪ್ತ ಸಹಸ್ರಾಬ್ದಿ ವರ್ಷಾಚರಣೆಯ ಸಮಾರೋಪ ಮತ್ತು ವಿದ್ವತ್ ಗೋಷ್ಠಿಯ ವರದಿ)
ಕಾಶ್ಮೀರಿ ಶೈವ ಸಂಪ್ರದಾಯದ ಮೂರ್ಧನ್ಯ ಆಚಾರ್ಯ ಶ್ರೇಷ್ಠ ತತ್ವಜ್ಙ ಹಾಗೂ ಭಾರತೀಯ ಕಾವ್ಯ ಕಲೆ ಸಾಹಿತ್ಯ ಸಂಸ್ಕೃತಿಗಳ ಮೇಲೆ ತನ್ನ ಅಚ್ಚಳಿಯದ ಪ್ರಭಾವನ್ನು ಬೀರಿದ ಆಚಾರ್ಯ ಅಭಿನವ ಗುಪ್ತ ಇಂದಿಗೆ ಸಾವಿರ ವರ್ಷಗಳ ಕೆಳಗೆ ಕಾಶ್ಮೀರದ ಭೈರವ ಗುಹೆಯೊಳಗೆ ತನ್ನ 1200ಶಿಷ್ಯರೊಡನೆ ಪ್ರವೇಶ ಮಾಡಿದರು. ಇಂದು ವಿಶ್ವದ ಐವತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಅಭಿನವ ಗುಪ್ತರ ಕೃತಿ ಕಾರ್ಯಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಆಚಾರ್ಯ ಅಭಿನವ ಗುಪ್ತರ ಜೀವನ ಸಾಧನೆಯನ್ನು ನೆನಪಿಸುವ ಸಹಸ್ರಾಬ್ದಿ ವರ್ಷಾಚರಣೆ ಕಳೆದ ವರ್ಷದ ಫೆಬ್ರುವರಿಯಲ್ಲಿ ಆರಂಭವಾಯಿತು. ಭಾರತೀಯ ತತ್ವ ಕಲೆ ಕಾವ್ಯ ಶಾಸ್ತ್ರಗಳಿಗೆ ಅಭಿನವ ಗುಪ್ತರ ಕೊಡುಗೆಗಳ ಜೊತೆಗೆ ಕಾಶ್ಮೀರ ಶೈವ ದರ್ಶನವನ್ನೂ ಪರಿಚಯಿಸುವ ಅಭಿನವ ಸಂದೇಶ ಯಾತ್ರೆ, ಅನೇಕ ಗೋಷ್ಠಿ ಸಂವಾದಗಳು ದೇಶದ ವಿವಿಧ ಪ್ರದೇಶಗಳಲ್ಲಿ ಆಯೋಜನೆಗೊಂಡವು. ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ವಿವಿಧ ಆಯಾಮಗಳ ಅಧ್ಯಯನ ಮತ್ತು ಜಾಗೃತಿಯ ವಿಷಯದಲ್ಲಿ ಕಾರ್ಯ ನಡೆಸುತ್ತಿರುವ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಘಟನೆಗೊಂಡ ಅಭಿನವ ಗುಪ್ತ ಸಹಸ್ರಾಬ್ದಿ ವರ್ಷಾಚರಣ ಸಮಿತಿಯ ಕಾರ್ಯಕ್ರಮಗಳ ಸಮಾರೋಪ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದ ಪರಿಸದಲ್ಲಿ ಇದೇ ಜನವರಿಯ 6 ಮತ್ತು 7ರಂದು ಸಂಪನ್ನಗೊಂಡಿತು. ಸಮಾರೋಪದ ಅಂಗವಾಗಿ ರಾಷ್ಟ್ರೀಯ ವಿದ್ವತ್ ಗೋಷ್ಠಿಯು ಆಯೋಜನೆಗೊಂಡಿತು.
ಉದ್ಘಾಟನೆ
ಅಭಿನವ ಗುಪ್ತ ಸಹಸ್ರಾಬ್ದಿ ವರ್ಷಾಚರಣಾ ಸಮಿತಿಯ ಅಧ್ಯಕ್ಷರೂ ಆದ ಅಂತರರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಸಮಾರೋಪ ಹಾಗೂ ವಿದ್ವತ್ ಗೋಷ್ಠಿಯನ್ನು ಉದ್ಘಾಟನೆ ಮಾಡಿದರು. ಸಮಾರೋಪ ಸಮಾರಂಭದಲ್ಲಿ ಜಮ್ಮು ಕಾಶ್ಮೀರದ ಉಪಮುಖ್ಯಮಂತ್ರಿ ಡಾ ನಿರ್ಮಲ್ ಸಿಂಘ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಪ್ರಚಾರ ಪ್ರಮುಖ ಜೆ ನಂದಕುಮಾರ ಹಾಗೂ ದೇಶದ ವಿವಿಧ ಮೂಲೆಗಳಿಂದ ಬಂದ ಪ್ರತಿನಿಧಿಗಳು ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ ನಿರ್ಮಲ್ ಸಿಂಗ್ ಕಾಶ್ಮೀರದ ಜನರನ್ನು ಅದರಲ್ಲೂ ವಿಶೇಷವಾಗಿ ಯುವಕರನ್ನು ಧೃವೀಕರಣಗೊಳಿಸಲು ಭಾರತ ವಿರೋಧಿ ಶಕ್ತಿಗಳು ಸತತವಾಗಿ ಪ್ರಯತ್ನಿಸುತ್ತಿವೆ. ಇತ್ತೀಚಿನ ಪ್ರಕ್ಷುಬ್ಧತೆ ಇದರ ಒಂದು ನಿದರ್ಶನ. ಹಾಗೆಯೇ ಜಮ್ಮು ಕಾಶ್ಮೀರದ ಕಳೆದ ಮೂರು ತಲೆಮಾರುಗಳ ನಾಯಕತ್ವವೂ ಸಹ ಜನರನ್ನು ದಿಕ್ಕು ತಪ್ಪಿಸಿದೆ. ಹೀಗಿದ್ದರೂ ಧನಾತ್ಮಕ ವಾತಾವರಣವನ್ನು ನಿರ್ಮಿಸಲು ಇಂದಿಗೂ ಸಾಕಷ್ಟು ಅವಕಾಶಗಳಿವೆ.ಎಂದು ನುಡಿದರು. ಆಚಾರ್ಯ ಅಭಿನವಗುಪ್ತರ ಕಾರ್ಯ ಮತ್ತು ತತ್ವಗಳು ಕಾಶ್ಮೀರದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತವೆ. ಇದನ್ನು ಸರಿಯಾದ ಸಂದರ್ಭದಲ್ಲಿ ಅರ್ಥೈಸಿಕೊಂಡು, ಸಂಶೋಧನೆಗಳನ್ನು ನಡೆಸಿ ಜನಪ್ರಿಯಗೊಳಿಸಬೇಕು. ಸಹಸ್ರ ವರ್ಷಗಳ ಹಿಂದನಂತೆ ಇಂದಿಗೂ ಸಹ ಅಭಿನವ ಗುಪ್ತರ ತತ್ವ ಹಾಗೂ ಕಾರ್ಯಗಳು ಪ್ರಸ್ತುತವಾಗಿವೆ. ಯುವಜನತೆ ತಮ್ಮ ಬೇರಿನೊಂದಿಗೆ ಸಂಬಂಧವನ್ನು ಅರಿತಾಗ ಋಣಾತ್ಮಕ ಶಕ್ತಿಗಳನ್ನು ತಡೆಯುವ ಸಾಮರ್ಥ್ಯ ಪಡೆಯುವರು ಎಂದು ಅವರು ಅಭಿಪ್ರಾಯ ಪಟ್ಟರು.
ದಿಕ್ಸೂಚಿ ಭಾಷಣ ಮಾಡಿದ ಆರೆಸ್ಸೆಸ್‌ನ ಜೆ ನಂದಕುಮಾರ್ ಆಚಾರ್ಯ ಅಭಿನವ ಗುಪ್ತ ಭಾರತೀಯ ಋಷಿ ಪರಂಪರೆಯ ಮೂರ್ತಿವೆತ್ತಂತಿದ್ದರು. ಭಾರತದ ಇತಿಹಾಸದಲ್ಲಿ ನಿರಂತರ ನವೋದಯವನ್ನು ನಾವು ಕಾಣಬಹುದು. ಅನೇಕ ಮಹನೀಯರು ನಮ್ಮ ಸಂಸ್ಕೃತಿ, ಮೌಲ್ಯಗಳು ಮತ್ತು ದರ್ಶನಗಳಿಗೆ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ. ಅವರಲ್ಲಿ ಆಚಾರ್ಯ ಅಭಿನವ ಗುಪ್ತ ಅಗ್ರಗಣ್ಯರಾದವರು. ಎಂದು ಹೇಳಿದರು. ಭಾರತೀಯ ದರ್ಶನ ಮತ್ತು ಪರಂಪರೆಗಳನ್ನು ಕಡೆಗಣಿಸುವ ಸತತ ಪ್ರಯತ್ನಗಳನ್ನು ನೆನಪು ಮಾಡಿಕೊಂಡ ಅವರು ಸ್ವತಂತ್ರ ಭಾರತದ ನಾಯಕರೂ ಸಹ ಬ್ರಿಟಿಷರ ಮಾರ್ಗವನ್ನು ಹಿಡಿದದ್ದು ದುರದೃಷ್ಟಕರ ಎಂದು ಹೇಳಿದರು. ಆಚಾರ್ಯ ಅಭಿನವ ಗುಪ್ತರ ಕುರಿತು ಇಂದಿಗೂ ಹೆಚ್ಚಿನ ಸಂಶೋಧನೆ ಚರ್ಚೆಗಳು ನಡೆಯುತ್ತಿಲ್ಲ. ನಮ್ಮ ಇತಿಹಾಸ ಮತ್ತು ದರ್ಶನಗಳನ್ನು ಸರಿಯಾದ ದೃಷ್ಟಿಕೋನದಲ್ಲಿ ತಿಳಿಯುವ ಅಗತ್ಯವಿದೆ. ಭಾರತೀಯ ಸಂಸ್ಕೃತಿಯು ವೇದ ತಂತ್ರ ಮತ್ತು ಯೋಗಗಳ ತ್ರಿವೇಣಿ ಸಂಗಮ. ಅಭಿನವ ಗುಪ್ತ ಇದರ ಅವಿಭಾಜ್ಯ ಅಂಗ ಎಂದು ಅವರು ಅಭಿಪ್ರಾಯಪಟ್ಟರು.
ಉದ್ಘಾಟನಾ ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀ ಶ್ರೀ ರವಿಶಂಕರ ಕಾರ್ಯಕ್ರಮದ ಯಶಸ್ಸಿಗೆ ಆಶೀರ್ವಚನ ನೀಡಿದರು.
ರಾಷ್ಟ್ರೀಯ ವಿದ್ವತ್ ಗೋಷ್ಠಿ
ಆಚಾರ್ಯ ಅಭಿನವಗುಪ್ತ ಸಹಸ್ರಾಬ್ದಿ ವರ್ಷಾಚರಣೆಯ ಸಮಾರೋಪದ ಅಂಗವಾಗಿ ಎರಡು ದಿನಗಳ ರಾಷ್ಟ್ರೀಯ ವಿದ್ವತ್ ಗೋಷ್ಠಿ ಆಯೋಜನೆಗೊಂಡಿತು. ಈ ಗೋಷ್ಠಿಗಳಲ್ಲಿ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಜೊತೆಗೆ ಭುವನೇಶ್ವರದ ಶ್ರೀ ಶ್ರೀ ರವಿಶಂಕರ ವಿಶ್ವವಿದ್ಯಾಲಯ, ನವದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ನವದೆಹಲಿಯ ಭಾರತೀಯ ತತ್ವಶಾಸ್ತ್ರ ಸಂಶೋಧನಾ ಸಂಘ, ಭೋಪಾಲಿನ ಮಾಖನ್‌ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ಮತ್ತು ಸಂವಹನ ವಿಶ್ವವಿದ್ಯಾನಿಲಯಗಳು ಕೈಜೋಡಿಸಿದವು. ಗಂಭೀರ ವಿಷಯಗಳ ಕುರಿತು ವಿದ್ವತ್ ಪೂರ್ಣ ವಿಚಾರ ಮಂಡನೆ ಚರ್ಚೆಗಳು ನಡೆದ ದೇಶದ ವಿವಿಧೆಡೆಗಳಿಂದ ಆಗಮಿಸಿದ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಸಂಶೋಧಕರು, ವಿದ್ವಾಂಸರು, ಹಿರಿಯ ನ್ಯಾಯವಾದಿಗಳು, ಪತ್ರಕರ್ತರು, ಸಮಾಜದ ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಗಣಮಾನ್ಯ ವ್ಯಕ್ತಿಗಳು ಸೇರಿ 350ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡರು.
ಒಟ್ಟು ಐದು ಅವಧಿಗಳಲ್ಲಿ ಎಂಟು ಸಮಾನಾಂತರ ಗೋಷ್ಠಿಗಳಲ್ಲಿ ವಿಷಯ ಮಂಡನೆ, ಚರ್ಚೆ ಸಂವಾದಗಳು ನಡೆದವು. ಈ ಕೆಳಗೆ ಪಟ್ಟಿ ಮಾಡಿರುವ ವಿಷಯಗಳಲ್ಲಿ ಆಯಾ ವಿಷಯಗಳ ಪರಿಣತರು ಗೋಷ್ಠಿಗಳನ್ನು ನಡೆಸಿಕೊಟ್ಟರು.
1. ಜಮ್ಮು ಕಾಶ್ಮೀರದ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಸ್ಥಿತಿಗತಿ
2. ಇತಿಹಾಸದಲ್ಲಿ ಜಮ್ಮು ಕಾಶ್ಮೀರ
3. ಹಿಮಾಯಲ ಪ್ರದೇಶದ ಭೌಗೋಳಿಕ-ರಾಜಕೀಯ ವ್ಯವಸ್ಥೆ
4. ಆಚಾರ್ಯ ಅಭಿನವಗುಪ್ತ ಮತ್ತು ಮಾಧ್ಯಮ ಹಾಗೂ ಸಂವಹನ
5. ಆಚಾರ್ಯ ಅಭಿನವಗುಪ್ತ ಮತ್ತು ಸಾಂಸ್ಕೃತಿಕ ಅಧ್ಯಯನ
6. ಆಚಾರ್ಯ ಅಭಿನವಗುಪ್ತ ಮತ್ತು ಭಾರತೀಯ ಸಾಹಿತ್ಯ
7. ಆಚಾರ್ಯ ಅಭಿನವಗುಪ್ತ ಮತ್ತು ನಾಗರಿಕತೆಯ ಅಧ್ಯಯನ
8. ಆಚಾರ್ಯ ಅಭಿನವಗುಪ್ತ ಮತ್ತು ದರ್ಶನ, ಆಧ್ಯಾತ್ಮ ಮತ್ತು ಸಾಧನೆ
ಈ ಗೋಷ್ಠಿಗಳು ಜಮ್ಮು ಕಾಶ್ಮೀರವನ್ನಷ್ಟೇ ಅಲ್ಲದೇ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಮೆಲುಕು ಹಾಕುವ ಪ್ರಯತ್ನ ಮಾಡಿದವು. ಜೊತೆಗೆ ಆಚಾರ್ಯ ಅಭಿನವಗುಪ್ತರ ಕಾರ್ಯವನ್ನು ನೆನಪಿಸುವುದರ ಜೊತೆಗೆ ಇಂದಿನ ಸನ್ನಿವೇಶದಲ್ಲಿ ಅಭಿನವಗುಪ್ತರ ಕಾರ್ಯದ ಪ್ರಸ್ತುತತೆಯನ್ನು ಚರ್ಚಿಸಿದವು.
ಸಮಾರೋಪ
ಆರ್ಟ್ ಆಫ್ ಲಿವಿಂಗ್ ಆಶ್ರಮದ ಪರಿಸರದಲ್ಲಿ ನಡೆದ ಆಚಾರ್ಯ ಅಭಿನವ ಗುಪ್ತ ಸಹಸ್ರಾಬ್ದಿ ವರ್ಷಾಚರಣೆ ಮತ್ತು ಅದರ ಅಂಗವಾಗಿ ಆಯೋಜಿಸಲ್ಪಟ್ಟ ವಿದ್ವತ್ ಗೋಷ್ಠಿಗಳ ಸಮಾರೋಪದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಗ ಮಾನನೀಯ ಭಯ್ಯಾಜೀ(ಸುರೇಶ್) ಜೋಶಿ, ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ಪ್ರಕಾಶ ಜಾವಡೇಕರ ಪಾಲ್ಗೊಂಡರು. ಶ್ರೀ ಶ್ರೀ ರವಿಶಂಕರ ಗುರೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಚಾರ್ಯ ಅಭಿನವಗುಪ್ತರನ್ನು ಪೃಥ್ವಿಯ ಓರ್ವ ಶ್ರೇಷ್ಠ ಧಾರ್ಶನಿಕ ಎಂದು ಬಣ್ಣಿಸಿದ ಪ್ರಕಾಶ ಜಾವಡೇಕರ್, ಸಾವಿರ ವರ್ಷಗಳ ಹಿಂದೆಯೂ ಭಾರತವು ವಿಶ್ವದಲ್ಲಿ ಜ್ಞಾನದ ಕೇಂದ್ರವಾಗಿತ್ತು. ಆ ಕಾಲದಲ್ಲಿ ಅಂತರರಾಷ್ಟ್ರೀಯ ರ‍್ಯಾಂಕಿಂಗ್ ವ್ಯವಸ್ಥೆ ಇದ್ದಿದ್ದರೆ ಭಾರತೀಯ ವಿದ್ವಾಂಸರು ಒಂದರಿಂದ ಹತ್ತರವರೆಗಿನ ಎಲ್ಲ ರ‍್ಯಾಂಕಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಎಂದು ನುಡಿದರು. ಆಚಾರ್ಯ ಅಭಿನವಗುಪ್ತರ ಕುರಿತ ಸಂಶೋಧನೆಗೆ ಎಲ್ಲ ಸಹಕಾರ ನೀಡುವ ಭರವಸೆಯನ್ನು ಮಾನ್ಯ ಸಚಿವರು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರೆಸ್ಸೆಸ್ ಸರಕಾರ್ಯವಾಹ ಭಯ್ಯಾಜೀ ಜೋಶಿ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದರೆ ಅದು ರಾಜಕೀಯ ಅರ್ಥದಲ್ಲಿ ಅಲ್ಲವೇ ಅಲ್ಲ. ಸಾವಿರಾರು ವರ್ಷಗಳ ಹಿಂದಿನಿಂದಲೂ ಇದು ಎಲ್ಲ ರೀತಿಯಿಂದಲೂ ಸ್ವಾಭಾವಿಕವಾಗಿ ಭಾರತದ ಭಾಗವಾಗಿತ್ತು. ನಾವು ಇಂದು ಅಭಿನವ ಗುಪ್ತರ ಸಹಸ್ರಾಬ್ದ ವರ್ಷವನ್ನು ಆಚರಿಸುತ್ತಿದ್ದೇವೆ, ಅವರು ಶೈವ ದರ್ಶನದ ಮೂಲಕ ಭಾರತೀಯ ವಿಚಾರವನ್ನು ಉತ್ತರದ ಕಾಶ್ಮೀರದಿಂದ ದಕ್ಷಿಣದ ತುದಿಯವರೆಗೆ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಎಂದು ನುಡಿದರು. ಮಾತೆ ವೈಶ್ಣೋದೇವಿ, ಖೀರ ಭವಾನಿ ಮಂದಿರಗಳುಳ್ಳ ಜಮ್ಮು ಕಾಶ್ಮೀರವು ಶಕ್ತಿಯ ಸ್ಥಾನ. ಇದು ಸಾಂಸ್ಕೃತಿಕ ಮೌಲ್ಯಗಳ ಭೋದನೆಗಳ ಮೂಲ ಸ್ಥಾನ. ಕಾಶ್ಮೀರವನ್ನು ಹಿಂದಿದ್ದ ರೀತಿಯ ಜ್ಞಾನ ಮತ್ತು ಶಾಂತಿಯ ಕ್ಷೇತ್ರವಾಗಿ ಪುನಃ ಎದ್ದು ನಿಲ್ಲಸಲು ಕೆಲಸ ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.
ಶತಮಾನಗಳ ನಂತರ ಒಬ್ಬ ನಿಜವಾದ ತತ್ವಜ್ಞರನ್ನು ನೆನೆಸಿಕೊಳ್ಳುತ್ತಿದ್ದೇವೆ. ಇಂದಿನ ಕಾರ್ಯಕ್ರಮವು ಕಳೆದ ಒಂದು ವರ್ಷದ ಕಾರ್ಯಕ್ರಮಗಳ ಸಮಾರೋಪವಷ್ಟೇ. ಆದರೆ ಆಚಾರ್ಯ ಅಭಿನವ ಗುಪ್ತರ ಸಂದೇಶವನ್ನು ದೇಶ ಹಾಗೂ ವಿಶ್ವದಾದ್ಯಂತ ತೆಗೆದುಕೊಂಡು ಹೋಗಬೇಕು ಎಂದು ಶ್ರೀ ಶ್ರೀ ರವಿಶಂಕರ ಗುರೂಜಿ ನುಡಿದರು. ಅವರ ಮೊದಲಿನ ಪ್ರವಚನಗಳು ಶಿವ ಸೂತ್ರಗಳ ಮೇಲೆ ಆಧರಿಸದ್ದನ್ನು ನೆನಪಿಸಿಕೊಳ್ಳುತ್ತ ಓಂ ನಮಃ ಶಿವಾಯ, ಈ ಮಂತ್ರವು ಕಾಶ್ಮೀರದಿಂದ ರಾಮೇಶ್ವರಂವರೆಗೆ ಭಾರತವನ್ನು ಜೋಡಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಆರೆಸ್ಸೆಸ್ ಪ್ರಚಾರಕ, ರಾಷ್ಟ್ರೀಯ ಕಾರ್ಯಕಾರಣಿಯ ಸದಸ್ಯ ಹಾಗೂ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ನಿರ್ದೇಶಕರೂ ಆದ ಶ್ರೀ ಅರುಣಕುಮಾರ್ ಜಮ್ಮು ಕಾಶ್ಮೀರದ ಕುರಿತು ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಸಮ್ಮೇಳನದ ಉದ್ಧೇಶ ಇಲ್ಲಿ ನಡೆದ ಚರ್ಚೆಯ ವಿಷಯ ಇಡೀ ದೇಶದಲ್ಲಿ ಚರ್ಚೆಯಾಗಬೇಕು ಎನ್ನುವುದಾಗಿದೆ. ಚಿಂತಕರು, ಶೈಕ್ಷಣಿಕ ಕ್ಷೇತ್ರದ ವಿದ್ವಾಂಸರು, ಮಾಧ್ಯಮ, ನೀತಿ ನಿರೂಪಕ ಸಂಸ್ಥೆಗಳು ಇಲ್ಲಿ ಚರ್ಚಿತವಾದ ವಿಷಯಗಳನ್ನು ಅರಿಯಬೇಕು. ರಾಷ್ಟ್ರೀಯ ವಿದ್ವತ್ ಗೋಷ್ಠಿಯಲ್ಲಿ ಪರಿಣಿತರು ನಿರ್ಣಯಿಸಿದ ವಿಷಯಗಳನ್ನು ದೇಶದಾದ್ಯಂತ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ನಾವು ಮಾಡುತ್ತೇವೆ. ಇಂದಿನ ಜಮ್ಮು ಕಾಶ್ಮೀರ ಸಮಸ್ಯೆಗೆ ಎರಡು ಪ್ರಮುಖವಾದ ಮೂಲ ಕಾರಣಗಳಿವೆ, ಒಂದು ಜಮ್ಮು ಕಾಶ್ಮೀರದಲ್ಲಿ ಹರಡಿರುವ ತಪ್ಪು ಮಾಹಿತಿ ಇನ್ನೊಂದು ದೇಶದ ಉಳಿದ ಭಾಗದಲ್ಲಿ ಮಾಹಿತಿಯ ಕೊರತೆ. ಮಾಹಿತಿಯ ಕೊರತೆ ಇದ್ದಾಗ ತಪ್ಪು ಗ್ರಹಿಕೆ ಉಂಟಾಗುತ್ತದೆ, ಈ ತಪ್ಪು ಗ್ರಹಿಕೆ ಸಮಂಜಸವಲ್ಲದ ನಿರ್ಣಯಗಳಿಗೆ ಎಡೆಮಾಡಿಕೊಡುತ್ತದೆ. ರಾಜ್ಯ ಮತ್ತು ದೇಶದ ಇತರೆಡೆ ಜಮ್ಮು ಕಾಶ್ಮೀರ ಕುರಿತ ತಪ್ಪು ಗ್ರಹಿಕೆಗಳನ್ನು ಬದಲಾಯಿಸಬೇಕೆಂಬ ಗುರಿಯನ್ನು ಇಟ್ಟುಕೊಂಡರೆ ನಾವು ಸರಿಯಾದ ಮಾಹಿತಿಯನ್ನು ಪ್ರಚುರಪಡಿಸಬೇಕು. ಇದಕ್ಕಾಗಿ ದೇಶದ ಮೂಲೆ ಮೂಲೆಗೆ ಸರಿಯಾದ ವಿಷಯ ತಲುಪಬೇಕು ಮತ್ತು ತನ್ಮೂಲಕ ಜಮ್ಮು ಕಾಶ್ಮೀರ ಕುರಿತಂತೆ ಸರಿಯಾದ ಅಭಿಪ್ರಾಯ ಮತ್ತು ಸಾರ್ವಜನಿಕ ಚರ್ಚೆ ಬೆಳೆಯಬೇಕು, ಇದು ಇಂದಿನ ಅಗತ್ಯವಾಗಿದೆ ಎಂದು ನುಡಿದರು.
ಜಮ್ಮು ಕಾಶ್ಮೀರವನ್ನು ಕುರಿತ ಎರಡು ದಿನಗಳ ಚಿಂತನಾ ಗೋಷ್ಠಿ ಕಾಶ್ಮೀರದ ಸಾಂಸ್ಕೃತಿಕ ಪರಂಪರೆಯನ್ನು ಸರಿಯಾದ ದೃಷ್ಟಿಕೋನದಲ್ಲಿ ಮುಂದಿರಿಸಿ ಪ್ರಚಾರಗೊಳಿಸುವ ಮೂಲಕ ಸಾರ್ವಜನಿಕ ಅಭಿಪ್ರಾಯ ಮತ್ತು ಚರ್ಚೆಯನ್ನು ಬದಲಿಸುವ ನಿರ್ಣಯವನ್ನು ಕೈಗೊಂಡು ಸಮಾರೋಪಗೊಂಡಿತು.
No comments:
Post a Comment