Friday, November 20, 2009

ಸಂಸತ್ತಿನ ಚಳಿಗಾಲದ ಅಧಿವೇಶನ ಮತ್ತು ಪ್ರಧಾನಿಗಳ ವಿದೇಶ ಯಾತ್ರೆ

ಈ ಬಾರಿಯ ಸಂಸತ್ತಿನ ಅಧಿವೇಶನ ಮೊನ್ನೆ ನವಂಬರ್ 19ರಿಂದ ಆರಂಭವಾಗಿದೆ. ನಮ್ಮ ಪ್ರಜಾಪ್ರತಿನಿಧಿ(ಪ್ರ.ಪ್ರ.)ಗಳಿಗೂ ಅಧಿವೇಶನಕ್ಕೊ ಏನು ಸಂಬಂಧ ಅಂತಾನಾ? ಚಳಿಗಾಲದಲ್ಲಿ ದೆಹಲಿಯಲ್ಲಿ ಇರಬೇಕಲ್ಲ ಕೆಲಸ ಇಲ್ಲದೆ. ಉತ್ತರದವರಿಗೆ, ಹಿಮಾಚಲ ಕಾಶ್ಮೀರದವರಿಗೇನೋ ಸರಿ ರೂಢಿ ಇರುತ್ತದೆ, ದಪ್ಪ ದಪ್ಪ ಸ್ವೆಟರ್ ಹೊಲಿಸಿಕೊಂಡಿರುತ್ತಾರೆ, ಅವರ ಕ್ಷೇತ್ರನೂ ಹತ್ತಿರ, ಅವರಿಗೂ ಅವರ ಕ್ಷೇತ್ರಕ್ಕೂ ಮುಂದಿನ ಚುನಾವಣೆವರೆಗೆ ಏನೂ ಸಂಬಂಧವಿಲ್ಲದಿದ್ದರೂ. ಆದ್ರೂ ಈಗ ವಿಮಾನ ಹೆಲೆಕಾಪ್ಟರ್‌ಗಳು ಜಾಸ್ತಿ ಆಗಿರುವುದರಿಂದ ವಾರವಾರ ಏನು ಎರಡೆರಡು ದಿನಕ್ಕೆ ಯಾರದೊ ಚೇಲಾ ಮಂದಿ ಮನೆಯಲ್ಲಿ ಶ್ರಾದ್ಧವೋ ಮದುವೆಯೋ ಅಥವ ಇನ್ಯಾವುದೋ ರಿಬ್ಬನ್ ಕಟಿಂಗಿಗೋ ಬೇಲಿಗುಟ್ಟ ನೆಡುವುದಕ್ಕೋ ಅಂತ ಘನಕಾರ್ಯ ಮಾಡುವ ಸಲುವಾಗಿ ನಮ್ಮ ಪ್ರ.ಪ್ರ.ಗಳು ಓಡಿಬರುವುದುಂಟು. ನಮ್ಮ ಯಡಿಯೂರಪ್ಪನವರ ಹಾಗೆ ಬೆಳಿಗ್ಗೆ ಗುಲ್ಬರ್ಗಾದಲ್ಲಿ ರಿಬ್ಬನ್ ಕಟಿಂಗು, ಮಧ್ಯಾಹ್ನ ಮೈಸೂರಲ್ಲಿ ಪ್ರೆಸ್ ಕಾನ್ಫರೆನ್ಸು, ಸಾಯಂಕಾಲ ಗೋಕರ್ಣದಲ್ಲಿ ಲಿಂಗಪೂಜೆ, ರಾತ್ರಿ ಮಂಗಳೂರಲ್ಲಿ ಯಾರದೋ ಮನೆ ಮದುವೆ ಮಂಟಪದಲ್ಲಿ, ಇನ್ನು ಸ್ವಲ್ಪ ಹೊತ್ತು ಬಿಟ್ಟು ಬೆಂಗಳೂರಲ್ಲಿ ಕ್ಯಾಬಿನೆಟ್ ಮೀಟೀಂಗು; ಏನು ಡೈನಾಮಿಕ್ ಅಲ್ಲ ನಮ್ಮ ಸಿಎಮ್ಮು, ಹೆಲಿಕಾಪ್ಟರ್ ದುಡ್ಡು ಇವರ ಅಪ್ಪ ಕೊಡ್ತಾನೆ?. ನಮ್ಮ ಪ್ರ.ಪ್ರ.ಗಳಿಗೆ TA/DA ಅಂತ ಕೊಡ್ತಾರಲ್ಲ, ಅಂದ್ರೆ ಇವರೆ ಕೊಟ್ಟುಕೊಳ್ಳುತ್ತಾರಲ್ಲ. ಪ್ರತಿವರ್ಷವೂ ಜಾಸ್ತಿ ಮಾಡಲೇಬೇಕು, ಈ ಬಿಲ್ ಮಾತ್ರ ಯಾವುದೇ ತಕರಾರಿಲ್ಲದೇ, ವಾಜಪೇಯಿ ಪ್ರಧಾನಿಯಾಗಿದ್ದಾಗ ಹೇಳ್ತಿದ್ದರಲ್ಲ “ಆಮ್ ಸಹಮತಿ”ಯಿಂದ, ಸದನದ ಸಮಯ ಹಾಳಾಗಬಾರದೂ ಎಂದು ಚರ್ಚೆ ಕೂಡ ಮಾಡದೇ ಪಾಸಾಗಿಬಿಡುತ್ತದೆ. ಆದ್ರೂ ಅಧಿವೇಶನದ ಸಮಯದಲ್ಲಿ ದೆಹಲಿನಲ್ಲಿ ಕೆಲಸ ಇರುತ್ತದಲ್ಲ. ನೆನೆಪಾದಾಗಾದರೊಮ್ಮೆ ಪಾರ್ಲಿಮೆಂಟ್‌ಕಡೆ ಹೋಗಿ ಹಾಜರಿ ಹಾಕಿ ಬರುವುದು, ಒಳಗಡೆ ಇದ್ದಾಗ ಆದಷ್ಟು ಜಾಸ್ತಿ ಕಿರುಚಾಡಿ ಅಡ್ಜರ್ನ್ ಆಗೊ ಹಾಗೆ ಮಾಡುವುದು, ಒಳಗೇ ಧರಣಿ ಮಾಡುವುದು, ಸಭಾತ್ಯಾಗ(ಯಾವತ್ತು ಸಭಾತ್ಯಾಗದಲ್ಲೇ ಇರೋವಾಗ ಇನ್ನೆಂಥ ಸಭಾತ್ಯಾಗ?, ಆದರೂ ನಮ್ಮ ಪ್ರ.ಪ್ರ.ಗಳು ಮಾಡುವ ಒಂದೇ ಒಂದು ತ್ಯಾಗ ’ಸಭಾತ್ಯಾಗ’) ಮಾಡುವುದು, ಕೂಗಾಟದಲ್ಲಿ ತಮ್ಮ ಪಕ್ಷದವರ ಪರ ಕೆಲವೊಮ್ಮೆ ಸಹಾಯಕ್ಕೆ ನಿಲ್ಲುವುದು, ಎಲ್ಲಾದರೂ ಬಿಲ್ ಪಾಸಿಂಗಿಗೋ ಇನ್ಯಾವುದೋ ಮೋಶನ್ನಿಗೊ ವೋಟಿಂಗ್ ಆದ್ರೆ ’aye’  ಅಂತನೋ ‘no’ ಅಂತನೋ ಒದರೋದು, ಪಾರ್ಟಿ ಹೇಳಿದಹಾಗೆ. ಇನ್ನೂ ಒಂದು ಅಂದ್ರೆ ಈಗ ಭಿನ್ನಮತ ಬಂಡಾಯ ಜಾಸ್ತಿ ಆಗಿ ಅಗಾಗ ಹೈಕಮಾಂಡ್ ಮುಂದೆ ಶಕ್ತಿಪ್ರದರ್ಶನ ಎಲ್ಲ ಇರುತ್ತದಲ್ಲ ಅಂತಹ ಸಂದರ್ಭದಲ್ಲಿ ಯಾವೊದೋ ಒಂದು ಭಿನ್ನಮತೀಯ ನಿಯೋಗದಲ್ಲಿ ಇರಬೇಕಾದ ಕಷ್ಟದ ಕೆಲಸ ಒಂದಿದೆಯಲ್ಲ, ದೆಹಲಿಯಲ್ಲೇ ಇರೋವಾಗ ಅನಿವಾರ್ಯ. ಹೋಗ್ಲಿ ಬಿಡಿ, ಅಧಿವೇಶನದ ಸಮಯದಲ್ಲಾದರೂ ಸ್ವಲ್ಪ ದಿವಸ ದೆಹಲಿನಲ್ಲಿ ಇದ್ದು ಕುಡಿದು ಕುಪ್ಪಳಿಸಿ ಅಲೆದು ತಿರುಗಿ ಸಾಯಲಿ ಊರ ಕಡೆ ತಲೆಹಾಕದೇ. majority ಎಲ್ಲ ಪ್ರ.ಪ್ರ.ಗಳ ಕತೆ ಇದೇ ಆದರೂ ಕೆಲವರಾದರೂ ಸ್ವಲ್ಪ ಸಂಸತ್ತಿನಲ್ಲಿ ಮಾತಾಡುತ್ತರಲ್ಲ, ಏನೇನೋ ಪ್ರಶ್ನೆ ಕೇಳಿ ಮಂತ್ರಿಗಳ ತಲೆ ತಿಂದು ಅಧಿವೇಶನ ನಡೆಸುವುದು ಅನಿವಾರ್ಯ ಮಾಡಿಬಿಡುತ್ತಾರಲ್ಲಾ. ಅಂತವರಿಂದಾಗಿ ಎಲ್ಲೋ ಅಲ್ಪಸ್ವಲ್ಪ ಪ್ರಜಾಪ್ರಭುತ್ವ ಅನ್ನೋದು ಉಳಿದುಕೊಂಡಿದೆ.
ವಿಷಯ ಅದಾ? ಅಲ್ಲ.
ನಮ್ಮ ದೇಶದಲ್ಲಿರುವುದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ(parlimentary democracy system). ಈ ವ್ಯವಸ್ಥೆಯಲ್ಲಿ ಲೋಕಸಭೆ(house of people)ಯಲ್ಲಿ ಬಹುಮತ(N/2+1) ಪಡೆದ ಪಕ್ಷ ಅಥವ ಗುಂಪು(coalition) ಸರ್ಕಾರ ರಚನೆ ಮಾಡುತ್ತದೆ. ಮಂತ್ರಿಮಂಡಳದ ಸದಸ್ಯರು ಸಂಸತ್ತಿನ ಭಾಗವಾಗಿರುತ್ತಾರೆ. ಯಾವುದೇ ಪಕ್ಷದ ಅಥವಾ ಗುಂಪಿನ ಸರ್ಕಾರ ಅಸ್ತಿತ್ವದಲ್ಲಿರಲು ಲೋಕಸಭೆಯ ’ವಿಶ್ವಾಸ’ ಅಂದರೆ ಬಹುಮತ ಹೊಂದಿರುವುದು ಅನಿವಾರ್ಯ. ಹಾಗೆಯೇ ಎಲ್ಲ ಯಾವುದೇ ಕಾನೂನಾಗಲಿ, ಆಯವ್ಯಯವಾಗಲೀ ಪತ್ರವಾಗಲೀ(budget) ಸಂಸತ್ತಿನ ಅನುಮೋದನೆ ಇಲ್ಲದೇ ಅನುಷ್ಟಾನಗೊಳ್ಳಲಾಗದು. ಸಂಸತ್ಸದಸ್ಯರು ಸರ್ಕಾರದಿಂದ ಮಂತ್ರಿಗಳಿಂದ ಪ್ರಶ್ನೆಗಳನ್ನು ಕೇಳುವ ಮುಖಾಂತರ ಮಾಹಿತಿ ಪಡೆಯುವ ಹಾಗೂ ಸಾರ್ವಜನೀನ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ, ಪರಿಹಾರಗಳನ್ನು ಪ್ರಸ್ತಾಪಿಸುವ, ವಿವಿಧ ಮೋಶನ್‌ಗಳನ್ನು ಮಂಡಿಸುವ, ಇತ್ಯಾದಿ ಅಧಿಕಾರಗಳನ್ನು ಪಡೆದಿರುತ್ತಾರೆ. ಸರ್ಕಾರ ಹಾಗೂ ಮಂತ್ರಿಗಳು ಪ್ರಶ್ನೆಗಳಿಗೆ ಹಾಗೂ ಚರ್ಚಿಸಲ್ಪಡುವ ವಿಷಯಗಳಿಗೆ ಉತ್ತರಿಸುವ ಬದ್ಧತೆಯನ್ನು ಹೊಂದಿರುತ್ತಾರೆ. ಲೋಕಸಭೆ ಅವಿಶ್ವಾಸ ಗೊತ್ತುವಳಿ ಮೊದಲಾದ instrumentಗಳ ಮುಖಾಂತರ ಬಹು ಸಂಸತ್ಸದಸ್ಯರು ಸರ್ಕಾರದಲ್ಲಿ ವಿಶ್ವಾಸ ಹೊಡಿಲ್ಲ ಎಂದು ಸಾಧಿಸಿ, ಸರ್ಕಾರವನ್ನು ಉರುಳಿಸಬಹುದು. ಈ ರೀತಿಯಲ್ಲಿ ಸಂಸತ್ತು ಅದರಲ್ಲೂ ಲೋಕಸಭೆ ಮಂತ್ರಿಮಂಡಳದ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಅಧಿವೇಶನ ಸರ್ಕಾರ(ಕಾರ್ಯಾಂಗ) ಹಾಗೂ ಪ್ರಜೆಗಳ ಪ್ರತಿನಿಧಿಗಳ(ಶಾಸಕಾಂಗ) ಮುಖಾಮುಖಿಗೆ ವೇದಿಕೆಯನ್ನು ಒದಗಿಸುತ್ತದೆ. ದೇಶದ ಪ್ರಮುಖ ಆಗುಹೋಗುಗಳ ಬಗ್ಗೆ, ಅಭಿವೄದ್ಧಿ, ಯೋಜನಾತ್ಮಕ ವಿಷಯಗಳ ಬಗ್ಗೆ ಚರ್ಚೆ ಮಾಡುವುದು, ಅಗತ್ಯವಿರುವ ಕಾನೂನುಗಳನ್ನು, ಪಾಸ್ ಮಾಡುವುದು ಮುಂತಾದವುಗಳು ಅಧಿವೇಶನದಲ್ಲಿ ನಡೆಯಬೇಕಾದ ಕಾರ್ಯಗಳು. ಆದ್ದರಿಂದ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಾದುದು ಎಲ್ಲ ಪ್ರ.ಪ್ರ.ಗಳ ಆದ್ಯ ಕರ್ತವ್ಯ. ಅದರಲ್ಲೂ ಅಧಿವೇಶನದ ಸಮಯದಲ್ಲಿ ಮಂತ್ರಿಮಂಡಲದ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಪ್ರತಿವರ್ಷ ಕನಿಷ್ಟ ಎರಡು ಬಾರಿ ಅಧಿವೇಶನ ನಡೆಯಬೇಕು, ಅಂದರೆ ಎರಡು ಅಧಿವೇಶನಗಳ ನಡುವೆ ಅರು ತಿಂಗಳಿಗಿಂತ ಹೆಚ್ಚಿನ ಕಾಲಾಂತರ ಇರಬಾರದು. ಇದು ಸಾಂವಿಧಾನಿಕ ವಿಧಿ. ನಮ್ಮ ಸಂಸತ್ ವ್ಯವಸ್ಥೆಯಲ್ಲಿ ಅಧಿವೇಶನವನ್ನು ಕರೆಯುವ ಅಧಿಕಾರ ಔಪಚಾರಿಕವಾಗಿ ಲೋಕಸಭಾ ಸ್ಪೀಕರ್‌ಗೆ ಇದ್ದರೂ, ಸರ್ಕಾರವೇ ಅಧಿವೇಶನದ ದಿನಾಂಕವನ್ನು ನಿಗದಿಮಾಡುತ್ತದೆ. ಮಂತ್ರಿಮಂಡಲದ ಸದಸ್ಯರ ಉಪಸ್ಥಿತಿಯ ಅನುಕೂಲಕ್ಕೆ ತಕ್ಕಂತೆ ಅಧಿವೇಶನ ನಡೆಸಲು ಈ ಸೌಲಭ್ಯ ಇರುವುದು. ಒಟ್ಟೂ ಉದ್ಧೇಶ ಇಷ್ಟೇ, ಯಶಸ್ವಿಯಾಗಿ ನಡೆದ ಅಧಿವೇಶನ ಪ್ರಜಾಪ್ರಭುತ್ವದ ಜೀವಂತಿಕೆಗೆಯನ್ನು ಸೂಚಿಸುತ್ತದೆ.
ಆದರೆ....
ಮೇಲೆ ಉಲ್ಲೇಖಿಸಿದ ಹಾಗೆ, ಕಳೆದ 19ರಂದು ಚಳಿಗಾಲದ ಅಧಿವೇಶನ ಆರಂಭವಾಗಿದೆ. ಹೀಗಿರುವಾಗ ನಮ್ಮ ಸರ್ಕಾರದ ನಾಯಕರಾದ ಪ್ರಧಾನಿ, ಅರ್ಥಶಾಸ್ತ್ರಜ್ಞ ಇನ್ನು ಏನೇನೋ ಬಿರುದಾಂಕಿತ( ನಾವೆಲ್ಲ ಇಂಟರ್‌ನೆಟ್‌ನಲ್ಲಿ ಓಡಾಡುವ ಬಯೋಡೆಟಾ ನೋಡಿರಬಹುದು)  ಡಾ. ಮನಮೋಹನಸಿಂಗರು ಸಪತ್ನೀಕರಾಗಿ, ವಿದೇಶ ಮಂತ್ರಿ ಎಸ್.ಎಮ್.ಕೄಷ್ಣ ಮೊದಲಾದ ಪ್ರಹಸ್ತಾದಿಗಳನ್ನು ಕೂಡಿಕೊಂಡು ಅಮೇರಿಕ ಮೊದಲಾದ ರಾಷ್ಟ್ರಗಳಿಗೆ 21ನೇ ತಾರಿಖಿನಂದು ಬಿಜಯಂಗೈದಿದ್ದಾರೆ. ದಿನನಿತ್ಯ ಡಿನ್ನರ್ ಪಾರ್ಟಿಗಳಲ್ಲಿ ಒಬಾಮಾದಿ ಚಕ್ರೆಶ್ವರ ಸಾಮಂತರೊಡನೆ (ಯಾರು ಯಾರಿಗೆ ಸಾಮಂತರೋ?) ಹಸ್ತಲಾಘವ ಮಾಡುತ್ತಿರುವ ಛಾಯಚಿತ್ರಗಳು ನಮ್ಮ ದಿನನಿತ್ಯದ ದೇಶೀಯ ವಾರ್ತಾಪತ್ರಗಳಲ್ಲಿ ವಿಜೄಂಭಿಸಿವೆ. ಹೌದು, ಇಂದಿನ ಜಾಗತೀಕರಣದ ಯುಗದಲ್ಲಿ, ರಾಷ್ಟ್ರ ರಾಷ್ಟ್ರಗಳ ಸಂಬಂಧಗಳು ಬೆಳೆಯುತ್ತಿರುವ ಇಂದಿನ ಯುಗದಲ್ಲಿ ವಿದೇಶ ಪ್ರವಾಸಗಳು, ಶೃಂಗಸಭೆಗಳಲ್ಲಿ ರಾಷ್ಟ್ರದ ಪ್ರಧಾನಿಯ ಪಾಲ್ಗೊಳ್ಳುವಿಕೆ ಅನಿವಾರ್ಯವಷ್ಟೇ ಅಲ್ಲ ಅತ್ಯಗತ್ಯ ಕೂಡ. ಹಾಗೆಯೇ ಅಧಿವೇಶನದ ಸಂದರ್ಭದಲ್ಲಿ, ಇಡೀ ದೇಶವೇ ಒಟ್ಟಾಗಿ ನಿಂತು ಒಗ್ಗಟ್ಟನ್ನು ಸಾರಬೇಕಾದ, ದೇಶದ ಜನರಲ್ಲಿ ಸ್ಥೈರ್ಯವನ್ನು ತುಂಬಬೇಕಾದ ಮುಂಬೈ ದಾಳಿಯ ವಾರ್ಷಿಕದ ಸಂದರ್ಭದಲ್ಲಿ ಸರ್ಕಾರದ ನಾಯಕನ ಉಪಸ್ಥಿತಿಯೂ ಅತ್ಯಗತ್ಯವಲ್ಲವೇ? ಅಧಿವೇಶನದ ದಿನಾಂಕವನ್ನು ನಿರ್ಧರಿಸುವ ಸಂದರ್ಭದಲ್ಲಿ ಪ್ರವಾಸದ ವಿಷಯಗಳೇಕೆ ಗಣನೆಗೆ ತೆಗೆದುಕೊಳ್ಳಲ್ಪಡುವುದಿಲ್ಲ? ನಮ್ಮ ಡಾ. ಪ್ರಧಾನಿಗೆ ತಾನು ವಹಿಸಿರುವ ಹುದ್ದೆಯ ಜವಾಬ್ದಾರಿಗಳ ಬಗ್ಗೆ ಅರಿವಿಲ್ಲವೇ? ಅಥವಾ ಹೇಗೂ ನಡೆಯುತ್ತೆ ಎಂಬ ಭಾವನೆಯೇ? ಇಲ್ಲಿ ಗಮನಿಸಬೇಕಾದದ್ದು ಗೈರುಹಾಜರಿ ಒಬ್ಬ ಸಾಮಾನ್ಯ ಸಂಸತ್ಸದಸ್ಯನದಲ್ಲ ಪ್ರಧಾನಿಯದು ಹಾಗೂ ಮಂತ್ರಿಮಂಡಳದ ಹಿರಿಯ ಸದಸ್ಯನದು.
ಎಷ್ಟಂದರೂ ನಮ್ಮ ಪ್ರಧಾನಿ appointed ತಾನೆ, elected ಅಲ್ಲವಲ್ಲ, ತನ್ನನ್ನು ತಾನು ಸರ್ಕಾರಿ ನೌಕರ ಎಂದು ತಿಳಿದುಕೊಂಡಿದ್ದಾರೋ ಏನೋ?

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...