(ಪ್ರಕಟಿತ: ಪುಂಗವ 1/3/2013)
ಲೋಕಸಭೆಯ ಚುನಾವಣೆ ಹತ್ತಿರ ಬಂದಂತೆ ಹಾಲೀ ಎಂಪಿಗಳು ತಮ್ಮ ಐದು ವರ್ಷಗಳ ಸಾಧನೆಗಳನ್ನು ಪಟ್ಟಿಮಾಡಿ ಮತದಾರರನ್ನು ಮತ್ತೆ ಓಲೈಸಲು ಪ್ರಾರಂಭಿಸಿಯಾಗಿದೆ. ತಮ್ಮ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯ ಏನೂ ಕೆಲಸ ಮಾಡಲಿಲ್ಲ ಎಂದು ದೂಷಿಸುವುದು ಅಥವಾ ಆತನ ಕಾರ್ಯವನ್ನು ಹೊಗಳುವುದು ಸಾರ್ವಜನಿಕ ಚರ್ಚೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಯಾವ ಯಾವ ಅಂಶಗಳ ಆಧಾರದ ಮೇಲೆ ಓರ್ವ ಜನಪ್ರತಿನಿಧಿಯ ಸಾಧನೆಯ ಮೌಲ್ಯಮಾಪನ ಮಾಡಬಹುದು? ಆತನ ಕ್ಷೇತ್ರದಲ್ಲಿ ಎಷ್ಟು ರಸ್ತೆಗಳು ಅಭಿವೃದ್ಧಿಯಾದವು, ಎಷ್ಟು ಚರಂಡಿಗಳು ದುರಸ್ತಿಯಾದವು, ಎಷ್ಟು ನೀರಾವರಿ ಕಾಲುವೆಗಳು ತೋಡಲ್ಪಟ್ಟವು, ಎಷ್ಟೆಷ್ಟು ಸಾರ್ವಜನಿಕ ಸಮಾರಂಭಗಳಲ್ಲಿ ಆತ ಕಾಣಿಸಿಕೊಂಡ, ಎಷ್ಟು ಜನ ನೌಕರರ ವರ್ಗಾವಣೆಯಲ್ಲಿ ಸಹಾಯ ಮಾಡಿದ, ಇನ್ನೆಷ್ಟು ಜನರಿಗೆ ಶಿಫಾರಸ್ಸು ಪತ್ರ ನೀಡಿದ, ಲಂಚವನ್ನು ತೆಗೆದುಕೊಳ್ಳುವವನೇ ಅಥವಾ ಅಲ್ಲವೇ, ಇತ್ಯಾದಿಗಳು ಒಬ್ಬ ಜನಪ್ರತಿನಿಧಿಯ ಕೆಲಸವನ್ನು ಅಳೆಯಲು ಮಾಪದಂಡಗಳಾಗಬಲ್ಲವೇ? ತಾನು ಪ್ರತಿನಿಧಿಸುವ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವುದು, ಸವಲತ್ತುಗಳನ್ನು ಅಭಿವೃದ್ಧಿಪಡಿಸುವುದು ಇವುಗಳು ಮಾತ್ರ ಒಬ್ಬ ಎಂಪಿ ಅಥವಾ ಎಮ್‍ಎಲ್‍ಎಯ ಕೆಲಸವೇ ಅಥವಾ ಆತನಿಗೆ ಇನ್ನೂ ಹೆಚ್ಚಿನ ಕರ್ತವ್ಯವಿದೆಯೇ? ಅಷ್ಟಕ್ಕೂ ನಮ್ಮ ಎಂಪಿ/ಎಮ್‍ಎಲ್‍ಎಯ ಕರ್ತವ್ಯಗಳೇನು? ಎಂದು ಪ್ರಶ್ನೆ ಮಾಡಿದರೆ ಕುತೂಹಲಕಾರಿಯಾದ ಉತ್ತರ ಸಿಗುವುದು. “ಸಂವಿಧಾನ ಅಥವಾ ಸದನದ ಕಾರ್ಯಕಲಾಪ ನಿಯಮಗಳ ಯಾವುದೇ ಪ್ರಾವಧಾನದಲ್ಲೂ ಸಂಸತ್ಸದಸ್ಯರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿರ್ದಿಷ್ಟವಾಗಿ ಹೇಳಲಾಗಿಲ್ಲ ಹಾಗೂ ಸರಿಯಾಗಿ ಕಾರ್ಯನಿರ್ವಹಿಸದ ಸಂಸತ್ಸದಸ್ಯರನ್ನು ಉತ್ತರದಾಯಿಯನ್ನಾಗಿ ಮಾಡುವ ಯಾವುದೇ ವಿಧಾನವನ್ನೂ ಉಲ್ಲೇಖಿಸಲಾಗಿಲ್ಲ.” ಇದು ಮಾಹಿತಿ ಹಕ್ಕು ಕಾಯಿದೆಯನ್ವಯ ಕೇಳಲಾದ ಪ್ರಶ್ನೆಗೆ ಲೋಕಸಭೆಯ ಕಾರ್ಯಾಲಯ ನೀಡಿದ ಉತ್ತರ! ಅಂದರೆ ನಮ್ಮ ಜನಪ್ರತಿನಿಧಿಗಳಿಗೆ ಕಾನೂನು ಪ್ರಕಾರ ನಿರ್ದಿಷ್ಟವಾದ ಕರ್ತವ್ಯ ಮತ್ತು ಜವಾಬ್ದಾರಿಗಳೇ ಇಲ್ಲ! ಆದ್ದರಿಂದ ಓರ್ವ ಚುನಾಯಿತ ಜನಪ್ರತಿನಿಧಿಯು ಅಂಗವಾಗಿರು ಶಾಸನಸಭೆಯ ಕಾರ್ಯಕಲಾಪಗಳು ಮತ್ತು ಆತನಿಗೆ ನೀಡಲಾಗಿರುವ ಅಧಿಕಾರಗಳನ್ನು ಅವಲೋಕಿಸಿದರೆ ಆತನ ಕರ್ತವ್ಯಗಳೇನು ಎನ್ನುವುದು ಸ್ಪಷ್ಟವಾಗುವುದು.
ಉದಾಹರಣೆಗೆ ಸಂಸತ್ತು(ಲೋಕಸಭೆ ಮತ್ತು ರಾಜ್ಯಸಭೆ) ನಿರ್ವಹಿಸಬೇಕಾದ ಕೆಲವು ಪ್ರಮುಖ ಕಾರ್ಯಗಳನ್ನು ಸಂವಿಧಾನದಲ್ಲಿ ಉಲ್ಲೇಖಿಸಿಲಾಗಿದೆ.
- ಕಾನೂನು ರಚನೆ: ಕಾನೂನುಗಳನ್ನು ರೂಪಿಸುವುದು ಸಂಸತ್ತಿನ ಪ್ರಥಮ ಕರ್ತವ್ಯ. ಎಲ್ಲ ಬಗೆಯ ಮಸೂದೆಗಳು ಲೋಕಸಭೆಯಲ್ಲಿ ಮಂಡನೆಗೊಂಡು ಒಪ್ಪಿಗೆ ಪಡೆದನಂತರ ರಾಜ್ಯಸಭೆಯಲ್ಲೂ ಅನುಮೋದನೆಗೊಂಡರೆ ಕಾನೂನಾಗಬಹುದು. ರಾಜ್ಯಸಭೆಯಲ್ಲಿ ಮಂಡನೆಯಾದ ಮಸೂದೆಗಳು ಲೋಕಸಭೆಯ ಒಪ್ಪಿಗೆಯ ನಂತರ ಕಾನೂನಾಗುವುವು. ಎರಡು ಸದನಗಳಲ್ಲಿ ಭಿನ್ನಾಭಿಪ್ರಾಯ ಬಂದರೆ ಜಂಟಿ ಅಧಿವೇಶನದ ಮೂಲಕ ಮಸೂದೆಯನ್ನು ಅಂಗೀಕರಿಸಲು ಅವಕಾಶವಿದೆ. ಆದರೆ ಹಣಕಾಸಿಗೆ ಸಂಭಂಧಿಸಿದ ವಿಷಯಗಳಲ್ಲಿ ಲೋಕಸಭೆಗೆ ಮಾತ್ರ ಕಾನೂನು ರೂಪಿಸುವ ಅಧಿಕಾರವಿದೆ.
- ಆರ್ಥಿಕ ನಿಯಂತ್ರಣ: ಲೋಕಸಭೆಯು ಕೇಂದ್ರ ಸರ್ಕಾರದ ಎಲ್ಲ ಆರ್ಥಿಕ ವ್ಯವಹಾರಗಳನ್ನು ನಿಯಂತ್ರಿಸುತ್ತದೆ. ಕೇಂದ್ರ ಸರ್ಕಾರದ ಖರ್ಚುವೆಚ್ಚಗಳಿಗೆ ಲೋಕಸಭೆಯ ಅನುಮೋದನೆ ಅತ್ಯಗತ್ಯ. ಜೊತೆಗೆ ಬಜೆಟ್ ಮೇಲಿನ ಚರ್ಚೆಗಳು ಮತ್ತು ಸದನ ಸಮೀತಿಗಳ ಪರಿಶೀಲನೆಗಳ ಮೂಲಕ ಲೋಕಸಭೆಯು ಸರ್ಕಾರದ ಆರ್ಥಿಕ ವ್ಯವಹಾರಗಳ ಮೇಲೆ ನಿಯಂತ್ರಣ ಸಾಧಿಸುತ್ತದೆ.
- ಕಾರ್ಯಾಂಗದ ನಿಯಂತ್ರಣ: ಕೇಂದ್ರ ಸರ್ಕಾರದ ಮಂತ್ರಿಮಂಡಳ ಅಥವಾ ಕಾರ್ಯಾಂಗ ತನ್ನ ಕಾರ್ಯ ಹಾಗೂ ಲೋಪಗಳಿಗೆ ಲೋಕಸಭೆಗೆ ಉತ್ತರದಾಯಿಯಾಗಿದೆ. ಅವಿಶ್ವಾಸ ಸೂಚಕ ಗೊತ್ತುವಳಿಯನ್ನು ಅಂಗೀಕರಿಸುವುದರ ಮೂಲಕ ಮಂತ್ರಿಮಂಡಳವು ರಾಜೀನಾಮೆ ನೀಡುವಂತೆ ಮಾಡುವ ಅಧಿಕಾರ ಲೋಕಸಭೆಗಿದೆ. ಜೊತೆಗೆ ಪ್ರಶ್ನೆಗಳು, ಗಮನಾಕರ್ಷಣ ಮೋಶನ್, ಅಡ್ಜರ್ನಮೆಂಟ್ ಮೋಶನ್, ಆಯವ್ಯಯದ ಮೇಲಿನ ಚರ್ಚೆಗಳು, ಮಸೂದೆಗಳ ಮೇಲಿನ ಚರ್ಚೆಗಳು ಮುಂತಾದ ಹಲವಾರು ಸಾಧನಗಳ ಮೂಲಕ ಲೋಕಸಭೆಯ ಸದಸ್ಯರು ಸರ್ಕಾರವನ್ನು ಬಾಧ್ಯಗೊಳಿಸಬಹುದು. ಅಲ್ಲದೇ ಸದನದ ಅನೇಕ ಸಮೀತಿಗಳ ಮೂಲಕ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳ ಅನುಷ್ಠಾನವನ್ನು ಗಮನಿಸಬಹುದು.
- ಕುಂದುಕೊರತೆಗಳ ಪ್ರಕಟೀಕರಣ: ದೇಶದ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಸಂಸತ್ಸದಸ್ಯರು ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಪ್ರಶ್ನೆಯೆತ್ತಬಹುದು, ಕುಂದುಕೊರತೆಗಳನ್ನು ಪ್ರಸ್ತಾಪಸಿಬಹುದು. ಸಂಸತ್ತಿನಲ್ಲಿ ತಾವು ಪ್ರತಿನಿಧಿಸುವ ಪ್ರಜೆಗಳ ದನಿಯಾಗಬಹುದು.
- ಸಂವಿಧಾನ ತಿದ್ದುಪಡಿ: ಸಂವಿಧಾನವನ್ನು ತಿದ್ದುಪಡಿ ಮಾಡುವುದು ಸಂಸತ್ತಿಗಿರುವ ಇನ್ನೊಂದು ಪ್ರಮುಖ ಅಧಿಕಾರ.
- ಸಾರ್ವಜನಿಕ ಶಿಕ್ಷಣ: ಇವೆಲ್ಲದರ ಜೊತೆಗೆ ಸಂಸತ್ತಿನಲ್ಲಿ ಪ್ರಸ್ತಾಪವಾಗುವ ವಿಷಯಗಳು ಸಾರ್ವಜನಿಕ ಚರ್ಚೆಗೊಳಗಾಗಿ ಪ್ರಜೆಗಳ ರಾಜಕೀಯ ಚಿಂತನೆಯನ್ನು ಬೆಳೆಸುತ್ತದೆ. ದೂರದರ್ಶನಾದಿ ಮಾಧ್ಯಮಗಳ ಮೂಲಕ ಜನರನ್ನು ತಲುಪುವ ಲೋಕಸಭೆ ರಾಜ್ಯಸಭೆಗಳ ಚರ್ಚೆಗಳು ಪ್ರಜೆಗಳಿಗೆ ಮಾಹಿತಿಯನ್ನು ನೀಡುವುದರ ಜೊತೆಗೆ ಪ್ರಜಾಪ್ರಭುತ್ವದ ಶಿಕ್ಷಣವನ್ನೂ ನೀಡುತ್ತವೆ. ಅಲ್ಲದೇ ಸಂಸತ್ತು ನಮ್ಮ ಒಟ್ಟೂ ರಾಜಕೀಯ ಪ್ರಜ್ಞೆಯ ಪ್ರತಿಬಿಂಬವಾಗಿದೆ.
- ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಆಯಾ ಶಾಸನಸಭೆಗಳ ಸಭಾಧ್ಯಕ್ಷರನ್ನು ಚುನಾಯಿಸುವ ಅಧಿಕಾರಗಳನ್ನು ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ನೀಡಲಾಗಿದೆ. ಜೊತೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯಗಳ ನ್ಯಾಯಧೀಶರುಗಳನ್ನು ವಾಗ್ದಂಡನೆಗೊಳಪಡಿಸುವ ಅಧಿಕಾರವನ್ನೂ ಸಂಸತ್ತಿಗೆ ನೀಡಲಾಗಿದೆ. ಅಲ್ಲದೇ ಸಂಸತ್ತಿನ ಹಕ್ಕು ಉಲ್ಲಂಘನೆಗಾಗಿ ಯಾವುದೇ ವ್ಯಕ್ತಿಯನ್ನು ದಂಡನೆಗೊಳಪಡಿಸುವ ಅಧಿಕಾರವನ್ನೂ ಸಹ ಸಂಸತ್ಸಭೆಗಳಿಗೆ ನೀಡಲಾಗಿದೆ. ಜೊತೆಗೆ ಯುಪಿಎಸ್‍ಸಿ, ಸಿಎಜಿ, ಫೈನಾನ್ಸ್ ಕಮಿಶನ್, ಲಾ ಕಮಿಶನ್ ಮೊದಲಾದ ಸಂಸ್ಥೆಗಳ ವರದಿಯನ್ನು ಪರಿಶೀಲಿಸುವ ಅಧಿಕಾರವೂ ಸಂಸತ್ತಿಗಿದೆ.
- ಸಂಸತ್ತಿನ ಅನೇಕ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಅನೇಕ ಸದನ ಸಮೀತಿಗಳನ್ನು ರಚಿಸಲಾಗುತ್ತದೆ. ಅಂತಹ ಸಮೀತಿಗಳಿಗೆ ಎಂಪಿಗಳು ಸದಸ್ಯರಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.
- ಸಂಸತ್ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯ ಅನ್ವಯ ಓರ್ವ ಸಂಸತ್ಸದಸ್ಯನು ತನ್ನ ಕ್ಷೇತ್ರದಲ್ಲಿ ವಾರ್ಷಿಕ 5ಕೋಟಿ ರೂಗಳ ವೆಚ್ಚದ ಸಾರ್ವಜನಿಕ ಉಪಯೋಗಿ ಕೆಲಸಗಳನ್ನು ಮಾಡಿಸಬಹುದಾಗಿದೆ.
- ಈ ಉದ್ಧೇಶಗಳಿಗಾಗಿ ರಚಿತವಾಗುವ ಸಂಸತ್ತಿನ ಕಾರ್ಯಕಲಾಪಗಳು ಸಮರ್ಪಕವಾಗಿ ನಡೆಯಲು ಬೇಕಾದ ಎಲ್ಲ ಅಧಿಕಾರಗಳು ಸಂಸತದಸ್ಯರಿಗೆ ಲಭ್ಯವಿದೆ. ಮೇಲಿನ ಅಂಶಗಳನ್ನು ಗಮನಿಸಿದರೆ ಓರ್ವ ಸಂಸತ್ಸದಸ್ಯನ ನಿಜವಾದ ಕರ್ತವ್ಯ ವ್ಯಾಪ್ತಿಯ ಅರಿವಾಗಬಹುದು.
ಈ ಹಿನ್ನೆಲೆಯಲ್ಲಿ 15ನೇ ಲೋಕಸಭೆಯ ಕಾರ್ಯವನ್ನು ಸ್ಥೂಲವಾಗಿ ಗಮನಿಸಿದರೆ ನಾವು ಚುನಾಯಿಸಿದ ಪ್ರತಿನಿಧಿಗಳ ಕಾರ್ಯವನ್ನು ಅಳೆಯಲು ಸಾಧ್ಯವಾಗಬಹುದು. ವರ್ಷದಲ್ಲಿ ಮೂರುಬಾರಿ ನಡೆಯುವ ಸಂಸತ್ ಅಧಿವೇಶನ ಕಳೆದ ಐದು ವರ್ಷಗಳಲ್ಲಿ ಸರಾಸರಿ ವಾರ್ಷಿಕ 60 ದಿನಗಳ ಕಾಲ ಮಾತ್ರ ನಡೆದಿದೆ. ಹಿಂದಿನ ಲೋಕಸಭೆಗಳ ಸರಾಸರಿ 120 ದಿನಗಳು ನಡೆದದ್ದನ್ನು ಗಮನಿಸಬಹುದು. ಅಧಿವೇಶನಗಳಲ್ಲಿ ಅನೇಕ ಸದಸ್ಯರ ಹಾಜರಾತಿ ಮತ್ತು ಚರ್ಚೆಗಳಲ್ಲಿ ಪಾಲ್ಗೊಳ್ಳುವಿಕೆ 50%ಕ್ಕಿಂತಲೂ ಕಡಿಮೆಯಿದೆ. ಇದುವರೆಗೂ ಸಂಸತ್ತಿನ ಇತಿಹಾಸದಲ್ಲೇ ಅತ್ಯಂತ ಕಡಿಮೆ 118 ಮಸೂದೆಗಳು ಮಾತ್ರ ಅಂಗೀಕಾರವಾಗಿದ್ದು ಇನ್ನೂ 72ಕ್ಕೂ ಹೆಚ್ಚು ಬಾಕೀ ಇವೆ. ಅದರಲ್ಲೂ ಕೇವಲ 27 ಮಸೂದೆಗಳು ಮಾತ್ರ 2-3 ಗಂಟೆ ಚರ್ಚೆಗೊಳಗಾಗಿ ಅಂಗೀಕೃತವಾಗಿವೆ. ಉಳಿದವು ಚರ್ಚೆ ಮಾಡದೆ 4-5 ನಿಮಿಷಗಳಲ್ಲೇ ಅಂಗೀಕಾರಗೊಂಡಿವೆ. ಬಹುತೇಕ ಸಂಸತ್ಸದಸ್ಯರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡುವುದರಲ್ಲಿ ವಿಫಲರಾಗಿದ್ದಾರೆ.
ಇವುಗಳನ್ನು ಗಮನಿಸಿದಾಗ ಚುನಾಯಿತ ಪ್ರತಿನಿಧಿಗಳಿಗೇ ತಮ್ಮ ಅಧಿಕಾರವ್ಯಾಪ್ತಿ ಮತ್ತು ಕರ್ತವ್ಯಗಳ ಮಾಹಿತ ಇಲ್ಲವೆನ್ನುವ ಸಂಶಯ ಮೂಡಿವುದು ದುರದೃಷ್ಟಕರವಾದರೂ ಅಸಹಜವಲ್ಲ. ಆದ್ದರಿಂದ ಚುನಾಯಿತ ಪ್ರತಿನಿಧಿಯ ಸಾಧನೆಗಳನ್ನು ಸರಿಯಾದ ಮಾನದಂಡಗಳ ಮೇಲೆ ಮೌಲ್ಯಾಂಕನ ಮಾಡುವುದರ ಜೊತೆಗೆ ಓರ್ವ ಸಂಸತ್ಸದಸ್ಯನಿಂದ ಅಪೇಕ್ಷಿತವಾದ ಕಾರ್ಯಗಳನ್ನು ನಿರ್ವಹಿಸುವ ಸಾಮಥ್ರ್ಯವುಳ್ಳವರನ್ನು ಆರಿಸುವ ಜವಾಬ್ದಾರಿಯೂ ಮತದಾರರ ಮೇಲಿದೆ.
ಹೀಗೂ ಉಂಟು
ಒಬ್ಬ ಸಂಸತ್ಸದಸ್ಯನಿಗೆ 50000ರೂ ಸಂಬಳ, 40000 ಕ್ಷೇತ್ರ ಭತ್ಯೆ, 40000 ಕಛೇರಿ ನಿರ್ವಹಣಾ ವೆಚ್ಚ ಇವುಗಳು ಸೇರಿ ಮಾಸಿಕ ನಿಕ್ಕಿ 1.3 ಲಕ್ಷ ಮೊತ್ತ ದೊರೆಯುತ್ತದೆ. ಇದಲ್ಲದೇ ಪ್ರಯಾಣ ಭತ್ಯೆ, ದೂರವಾಣಿ ವೆಚ್ಚ,ರೇಲ್ವೆ, ಬಸ್ಸು, ವಿಮಾನಗಳಲ್ಲಿ ಉಚಿತ ಪ್ರಯಾಣ, ದೆಹಲಿಯಲ್ಲಿ ವಸತಿ ಸೌಕರ್ಯ ಇನ್ನೂ ಅನೇಕ ಸೌಲಭ್ಯಗಳು ಎಂಪಿಗೆ ಲಭ್ಯವಿದೆ. ಇಷ್ಟೇ ಅಲ್ಲದೇ ಅಧಿವೇಶನದ ಸಂದರ್ಭದಲ್ಲಿ ಪ್ರತಿದಿನ 2000ರೂಗಳ ಭತ್ಯೆಯ ಜೊತೆಗೆ ಸಬ್ಸಿಡಿ ದರದಲ್ಲಿ ಕ್ಯಾಂಟೀನ್ ಸೌಕರ್ಯ, ಅಂಗಡಿ ಸಾಮಾನುಗಳೂ ದೊರೆಯುತ್ತವೆ. ಇವೆಲ್ಲದರ ಜೊತೆಗೆ ಓರ್ವ ಎಂಪಿಯು ತನ್ನ ಜೀವಿತದವರೆಗೆ ಮಾಸಿಕ 20000ರೂಗಳ ನಿವೃತ್ತಿ ವೇತನವನ್ನೂ ಪಡೆಯುತ್ತಾನೆ.