(ಪ್ರಕಟಿತ : ಪುಂಗವ 15/02/2014)
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ(UNDP) ವ್ಯಾಖ್ಯೆಯ ಪ್ರಕಾರ ಒಂದು ದೇಶದ ಎಲ್ಲ ಹಂತಗಳ ವ್ಯವಹಾರಗಳನ್ನು ಆರ್ಥಿಕ, ರಾಜಕೀಯ ಮತ್ತು ಆಡಳಿತಾತ್ಮಕ ಅಧಿಕಾರಗಳ ಬಲದೊಂದಿಗೆ ನಿರ್ವಹಿಸುವುದನ್ನು ಶಾಸನ(governance) ಎನ್ನಬಹುದು. ಸ್ಥೂಲವಾಗಿ ನೋಡುವುದಾದರೆ ನಿರ್ಣಯಿಸುವ ಮತ್ತು ನಿರ್ಣಯಗಳನ್ನು ಅನುಷ್ಠಾನಗೊಳಿಸುವ (ಅನುಷ್ಠಾನಗೊಳಿಸದೇ ಇರುವ) ಪ್ರಕ್ರಿಯೆಯನ್ನೇ ಶಾಸನ ಅಥವಾ ಆಡಳಿತ ಎನ್ನಬಹುದು. ಆಡಳಿತದ ವ್ಯಾಖ್ಯೆಯು ಕಾರ್ಪೋರೇಟ್‍ಗಳಿಂದ ಹಿಡಿದು ಎಲ್ಲ ರಾಷ್ಟ್ರೀಯ, ಅಂತರರಾಷ್ಟ್ರೀಯ, ಸ್ಥಳೀಯ ಸರ್ಕಾರೀ ಮತ್ತು ಸರ್ಕಾರೇತರ ಸಂಸ್ಥೆಗಳ ನಿರ್ವಹಣೆಗೂ ಅನ್ವಯಿಸುತ್ತದೆ. ಈಗಿರುವ ಬಹುತೇಕ ಸ್ವಾರ್ಥಪರ ಕಲುಷಿತ ರಾಜಕೀಯ ವಾತಾವರಣದಲ್ಲಿ ಯಾವುದೇ ಸಂಸ್ಥೆಯ ಶಾಸನ ವ್ಯವಸ್ಥೆಯು ಪರಿಣಾಮಕಾರಿಯಾಗಿ ತನ್ನ ಕಾರ್ಯವನ್ನು ನಿರ್ವಹಿಸಬಲ್ಲುದೇ? ಎನ್ನುವ ಸಂದೇಹ ಸಹಜವಾಗಿ ಉದ್ಭವಿಸುತ್ತದೆ. ಅದರಲ್ಲೂ ರಾಜಕೀಯ ಮತ್ತು ನೌಕರಶಾಹಿಗಳ ನಡುವೆ ನಲುಗುತ್ತಿರುವ ಸರ್ಕಾರೀ ಸಂಸ್ಥೆಗಳ ನಿರ್ವಹಣೆ, ಕಾರ್ಯಶೈಲಿ ಮತ್ತು ಯೋಜನೆಗಳ ಸಮರ್ಪಕ ಅನುಷ್ಠಾನದ ವಿಷಯಕ್ಕೆ ಬಂದಾಗ ಶಾಸನ ವ್ಯವಸ್ಥೆಯು ಸಮರ್ಥವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಪ್ರತಿಪಾದಿಸಬಲ್ಲವರಂತೂ ವಿರಳಾತಿವಿರಳ.
ಈ ಹಿನ್ನೆಲೆಯಲ್ಲಿ ಆಡಳಿತ ಪ್ರಭಾವಿ ಮತ್ತು ಪರಿಣಾಮಕಾರಿಯಾಗಬೇಕಾದ ನಿಟ್ಟಿನಲ್ಲಿ ಕೆಲವು ವರ್ಷಗಳಿಂದೀಚೆಗೆ ಸುಶಾಸನ ಅಥವಾ good governance ಪರಿಕಲ್ಪನೆ ಪ್ರಚುರಗೊಳ್ಳುತ್ತಿದೆ. ಸಮರ್ಥ ಮತ್ತು ಪರಿಣಾಮಕಾರಿ, ಜನಸಹಯೋಗಿ, ಉತ್ತರದಾಯೀ, ಪಾರದರ್ಶಕ, ಪ್ರತಿಸ್ಪಂದನಶೀಲ, ಎಲ್ಲರನ್ನೂ ಒಳಗೊಳ್ಳುವ, ಒಮ್ಮತದ ಆಧಾರಿತ, ನ್ಯಾಯಸಮ್ಮತ, ಇತ್ಯಾದಿ ಗುಣಲಕ್ಷಣಗಳನ್ನು ಒಳಗೊಂಡ ಆಡಳಿತ ಸುಶಾಸನ ಎನಿಸಿಕೊಳ್ಳುವುದು. ಒಟ್ಟಿನಲ್ಲಿ ಸುಶಾಸನ ಪರಿಕಲ್ಪನೆಯಲ್ಲಿ ಆಡಳಿತವು ಜವಾಬ್ದಾರಿಯುತವಾಗಿದ್ದು ಕೇವಲ ಕೆಲವರ ಲಾಭಕ್ಕಾಗಿರದೇ ಜನಸಾಮಾನ್ಯರ ಅಗತ್ಯಗಳನ್ನು ಪೋರೈಸುವಂತಿರಬೇಕು.
ನಮ್ಮ ದೇಶದಲ್ಲೇ ಸುಶಾಸನದ ಅನೇಕ ಉದಾಹರಣೆಗಳನ್ನು ಕಾಣಬಹದು.
- ದಶಕದ ಹಿಂದೆಯೇ ಯಶಸ್ವಿಯಾಗಿ ಜಾರಿಗೆ ಬಂದ ಕರ್ನಾಟಕ ಸರ್ಕಾರದ ಪಹಣಿ ಪತ್ರಗಳ ಡಿಜಿಟಲೀಕರಣಗೊಳಿಸುವ ‘ಭೂಮಿ’ ಯೋಜನೆ.
- ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ಸಲುವಾಗಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯಿದೆ.
- ರಾಷ್ಟ್ರಕ್ಕೇ ಮಾದರಿಯಾಗಿವ ಛತ್ತೀಸಗಢದ ಪಡಿತರ ವಿತರಣಾ ಯೋಜನೆ.
- ಗುಜರಾತಿನ ವಿದ್ಯುತ್, ಕೃಷಿ, ಸಮೂಹ ಸಾರಿಗೆ, ಕೈಗಾರಿಕೋದ್ಯಮಗಳಲ್ಲಿನ ಸಾಧನೆಗಳು.
- ನಾಗರಿಕ ಸೇವೆಗಳನ್ನು ನಿಗದಿತ ಕಾಲದೊಳಗೆ ದೊರಕಿಸುವ ಸಲುವಾಗಿ ಕರ್ನಾಟಕದಲ್ಲಿ ಜಾರಿಗೆ ಬಂದ ‘ಸಕಾಲ’
- ಮಧ್ಯಪ್ರದೇಶ ರಾಜ್ಯದ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಳು
ಇವುಗಳನ್ನು ಗಮನಿಸಿದರೆ ಎಲ್ಲ ನ್ಯೂನತೆಗಳ ಹೊರತಾಗಿಯೂ ಸಮರ್ಪಕ ಆಡಳಿತ ಹಾಗೂ ಯೋಜನೆಗಳ ಅನುಷ್ಠಾನ ಸಾಧ್ಯ ಎನ್ನವುದನ್ನು ತೋರಿಸುತ್ತವೆ.
ಗುಜರಾತಿನ ವಿದ್ಯುತ್ ಕ್ರಾಂತಿ
ನಿರ್ವಹಣೆಯಲ್ಲಿ ಶಿಸ್ತು ತರುವುದರಿಂದ ಗುಜರಾತಿನ ವಿದ್ಯುತ್ ಕ್ಷೇತ್ರದಲ್ಲಾದ ಅದ್ವಿತೀಯ ಪ್ರಗತಿ ಸುಶಾಸನದ ಒಂದು ಉತ್ತಮ ಉದಾಹರಣೆ. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 2001ರಲ್ಲಿ ಗುಜರಾತ್ ವಿದ್ಯುತ ಪ್ರಸರಣ ನಿಗಮಗಳು ಒಟ್ಟೂ 2246 ಕೋಟಿ ರೂಗಳ ನಷ್ಟದಲ್ಲಿದ್ದು ಯಾವುದೇ ಹೊಸ ವಿದ್ಯುದುತ್ಪಾದನಾ ಯೋಜನೆಯನ್ನು ಕೈಗೆತ್ತಿಕೊಳ್ಳದ ಸ್ಥಿತಿ ನಿರ್ಮಾಣವಾಗಿತ್ತು. ಪ್ರಸರಣ ಮತ್ತು ಹಂಚಿಕೆ ನಷ್ಟ(T&D losses) ಶೇ.35.27 ರಷ್ಟಿತ್ತು. ವಿದ್ಯುತ್ ಕ್ಷೇತ್ರದ ದು:ಸ್ಥಿತಿ ಇತರೇ ಕ್ಷೇತ್ರಗಳ ಮೇಲೆ ಬೀರಬಹುದಾದ ಪರಿಣಾಮಗಳನ್ನು ಮನಗಂಡ ಗುಜರಾತ ಸರ್ಕಾರ ಈ ಕ್ಷೇತ್ರ ಸುಧಾರಣೆಯನ್ನು ಆದ್ಯತೆಯಾಗಿ ಪರಿಗಣಿಸಿ ಕಾರ್ಯಪ್ರವೃತ್ತವಾಯಿತು. ಗುಜರಾತ್ ವಿದ್ಯುತ್ ಬೋರ್ಡಿನ ಆಡಳಿತದಲ್ಲಿ ಸಮರ್ಥರನ್ನು ನೇಮಿಸಲಾಯಿತು. ಗುಜರಾತ್ ವಿದ್ಯುತ್ ನಿಗಮದ ಛೇರ್‍ಮನ್ ಮತ್ತು ಇಂಧನ ಕಾರ್ಯದರ್ಶಿಯಾಗಿ ಹೊಸದಾಗಿ ನೇಮಕಗೊಂಡ ಗುಜರಾತ್ ಕೇಡರ್‍ನ ಐಎಎಸ್ ಅಧಿಕಾರಿ ಮಂಜುಳಾ ಸುಬ್ರಮಣಿಯನ್ ನೇತೃತ್ವದಲ್ಲಿ ಕಾರ್ಯದಲ್ಲಿ ದಕ್ಷತೆ ಮತ್ತು ಅನುಶಾಸನವನ್ನು ತರಲಾಯಿತು. ಆರ್ಥಿಕ ಹೊಣೆಗಾರಿಕೆ ಮತ್ತು ವಿತರಣೆಯನ್ನು ಪುನರ್ರಚಿಸಲಾಯಿತು. ವಿದ್ಯುತ ನಿಗಮದ ನೌಕರರು ಮತ್ತು ಸಂಭಂಧಿತ ಖಾಸಗೀ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯದಲ್ಲಿ ಜೋಡಿಸಿಕೊಳ್ಳಲಾಯಿತು. ಹಂಚಿಕೆಯಲ್ಲಿ ವಿದ್ಯುತ್ ಕಳ್ಳತನದಿಂದಾಗುವ ನಷ್ಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕಾನೂನನ್ನು ಜಾರಿಗೊಳಿಸಿ ಅಪರಾಧಿಗಳನ್ನು ಕಾನೂನಿನ ಪರಿಧಿಗೆ ತರಲಾಯಿತು. ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಗೃಹಬಳಕೆ, ಕೈಗಾರಿಕೆ ಮತ್ತು ಕೃಷಿಬಳಕೆಯ ಪ್ರಸರಣ ಲೈನ್‍ಗಳನ್ನು ಪ್ರತ್ಯೇಕಗೊಳೊಸಿ ವಿದ್ಯುತ್ ಹಂಚಿಕೆಯ ಗುಣಮಟ್ಟವನ್ನು ಹೆಚ್ಚಿಸಲಾಯಿತು. ವಿದ್ಯುತ್ ಉತ್ಪಾದನೆಯನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಜಲ ಮತ್ತು ಉಷ್ಣವಿದ್ಯುತ ಸ್ಥಾವರಗಳ ಜೊತೆಗೆ ಸೌರಶಕ್ತಿ ಪವನಶಕ್ತಿ ಮೊದಲಾದ ನವೀಕರಿಸಬಹುದಾದ ಮೂಲಗಳಿಗೂ ಹೆಚ್ಚಿನ ಮಹತ್ವ ನೀಡಲಾಯಿತು. ಇವೆಲ್ಲ ಕ್ರಮಗಳ ಫಲವಾಗಿ ಗುಜರಾತ ಇಂದು ವಿದ್ಯುತ್ ಹೆಚ್ಚುವರಿಯುಳ್ಳ ರಾಜ್ಯವಾಗಿದೆ. ಕೈಗಾರಿಕಗಳಿಗೊಂದೇ ಅಲ್ಲ ಗೃಹಬಳಕೆ ಕೃಷಿಗೂ 24x7 ಘಂಟೆಗಳ ಕಾಲ ವಿದ್ಯುತ್ ಪೋರೈಕೆಯಾಗುತ್ತಿದೆ. ಅಂದು ನಷ್ಟದಲ್ಲಿದ್ದ ಗುಜರಾತ ವಿದ್ಯುತ್ ನಿಗಮ ಇಂದು ಸಾವಿರ ಕೋಟಿಗಳ ನಿವ್ವಳ ಲಾಭಗಳಿಸುತ್ತಿದೆ. ಗುಜರಾತ್ ವಿದ್ಯುತ್ ಸರಬರಾಜು ಕಂಪನಿಗಳು ಕೇಂದ್ರ ಸರ್ಕಾರದ ಪ್ರಶಸ್ತಿಯೂ ಸೇರಿದಂತೆ ಅನೇಕ ಸಮ್ಮಾನಗಳನ್ನು ಬಾಚಿಕೊಂಡಿವೆ. ಗುಜರಾತಿನಲ್ಲಿ ಉತ್ಪಾದನೆಯಾದ ವಿದ್ಯುತ್ತಿನಿಂದಾಗಿ ನೆರೆಯ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಬೆಳಕು ಉರಿಯುತ್ತಿದೆ.
ನಮ್ಮ ಮುಂದಿರುವ ಇನ್ನೂ ಅನೇಕ ಉದಾಹರಣೆಗಳನ್ನು ಗಮನಿಸಿದರೆ ಪ್ರಬಲ ಇಚ್ಛಾಶಕ್ತಿಯಿರುವ ನಾಯಕತ್ವವಿದ್ದರೆ ಅನೇಕ ನ್ಯೂನತೆಗಳಿರುವ ಸರ್ಕಾರಿ ವ್ಯವಸ್ಥೆಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು ಎನ್ನುವುದು ಸ್ಪಷ್ಟವಾಗುತ್ತದೆ. ಪ್ರತಿಯೊಂದಕ್ಕೂ ‘ಸಿಸ್ಟಮ್ಮ’ನ್ನು ದೂರುವ ಮತ್ತು ಎಲ್ಲದಕ್ಕೂ ರಾಜಕೀಯವನ್ನು ಅಧಿಕಾರಶಾಹಿಯನ್ನು ಜರೆಯುವುದಕ್ಕಿಂತಲೂ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಹೇಗೆ ಪರಿಣಾಮಕಾರಿಯಾಗಿ ಮಾಡಬಹುದು ಎನ್ನುವ ಚಿಂತನೆ ನಡೆಯಬೇಕಾದ ಅಗತ್ಯ ಅಧಿಕವಾಗಿದೆ.
ಸುಶಾಸನದ ಪ್ರಬಲ ಪ್ರತಿಪಾದಕ, ನಮೋ
ಸುಶಾಸನವನ್ನು ಪ್ರಬಲವಾಗಿ ಪ್ರತಿಪಾದಿಸುವವರಲ್ಲಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾರೆ. ಇಂಟರ್ನೆಟ್ ತಂತ್ರಜ್ಞಾನದ ಬಳಕಯಿಂದ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿರುವ ಸಾರ್ವಜನಿಕ ಸಮಸ್ಯಾ ಪರಿಹಾರ ವ್ಯವಸ್ಥೆ(Statewide Attention on Grievances with Application of Technology
(SWAGAT)) ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿಗೆ ಭಾಜನವಾಗಿದೆ. ದೇಶದ ಉಳಿದ ರಾಜ್ಯಗಳಲ್ಲಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿರುವಾಗ ಜಲಸಂವರ್ಧನೆಯಲ್ಲಿ ಕೈಗೊಂಡ ಕ್ರಮಗಳಿಂದಾಗಿ ಕಳೆದ ಎಂಟು ವರ್ಷಗಳಲ್ಲಿ ಗುಜರಾತಿನಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡಿದೆ. ಸಮರ್ಪಕ ಕೈಗಾರಿಕಾ ನೀತಿಯ ಅನುಷ್ಠಾನದಿಂದಾಗಿ ಸಣ್ಣ ಕೈಗಾರಿಕೆಗಳ ಉತ್ಪಾದನೆಯಲ್ಲಿ ಏರಿಕೆ ಕಂಡಿರುವುದಷ್ಟೇ ಅಲ್ಲದೇ ಅನೇಕ ಉದ್ಯಮಗಳು ಗುಜರಾತಿನತ್ತ ಮುಖ ಮಾಡಿವೆ. ಸೌರಶಕ್ತಿ ಮೊದಲಾದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಗುಜರಾತ ರಾಜ್ಯ ಮಾದರಿಯಾಗಿದೆ. ಭಾರತದ ರಾಷ್ಟ್ರೀಯ ಕೃಷಿ ಕ್ಷೇತ್ರದ ಅಭಿವೃದ್ಧಿದರ ತೆವಳುತ್ತಿದ್ದರೆ ಗುಜರಾತ ಸತತವಾಗಿ ಎರಡಂಕಿ ದಾಟುತ್ತಿದೆ. ಹನ್ನರಡು ವರ್ಷಗಳ ಹಿಂದೆ 2200 ಕೋಟಿ ರೂ ನಷ್ಟದಲ್ಲಿದ್ದ ಗುಜರಾತಿನ ವಿದ್ಯುತ್ ನಿಗಮ 2010ರ ವೇಳೆಗೇ 550ಕೋಟಿ ರೂಗಳ ನಿವ್ವಳ ಲಾಭ ದಾಖಲಿಸಿದೆ. ಅನೇಕ ರಾಜ್ಯಗಳಲ್ಲಿ ನೆಲಕಚ್ಚಿರುವ ನಗರ ಸಮೂಹ ಸಾರಿಗೆ ವ್ಯವಸ್ಥೆ ಬಿಆರ್‍ಟಿಎಸ್ ಗುಜರಾತಿನ ಅಹಮದಾಬಾದಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಇನ್ನೂ ಅನೇಕ ಸಾಧನೆಯ ಗರಿಗಳು ಗುಜರಾತ ಮತ್ತು ನರೇಂದ್ರ ಮೋದಿಯವರ ಸರ್ಕಾರದ ಕಿರೀಟವನ್ನಲಂಕರಿಸಿದ್ದರ ಹಿಂದೆ, ಇರುವ ವ್ಯವಸ್ಥಯಲ್ಲೇ ಸುಧಾರಣೆ ತಂದು ಸಮರ್ಪಕ ಆಡಳಿತ ನೀಡುವ ಪ್ರಯತ್ನ ಎದ್ದು ಕಾಣುತ್ತದೆ.
No comments:
Post a Comment