Thursday, April 24, 2014

ಭಾರತದ ನೆರೆ’ಹೊರೆ: ಮತ್ತಷ್ಟು ಅಪಾಯಕಾರಿಯಾಗುತ್ತಿರುವ ಚೀನಾ

(ಪ್ರಕಟಿತ: ಪುಂಗವ 1/5/2014)


           ಭಾರತ ಚೀನಾ ಸಮರ ನಡೆದು(1962) ಐದು ದಶಕಗಳೇ ಕಳೆದರೂ ಎರಡು ದೇಶಗಳ ನಡುವಿನ ಸಂಭಂಧದ ಮೇಲೆ ಸದಾ ಆತಂಕದ ನೆರಳು ಆವರಿಸಿಯೇ ಇದೆ. ರಾಜಕೀಯ, ಆರ್ಥಿಕ ಮತ್ತು ಸಾಂಸ್ಕøತಿಕ ವಿಷಯಗಳಲ್ಲಿ ದ್ವಿಪಕ್ಷೀಯ ವಹಿವಾಟು ವೃದ್ಧಿಯಾದರೂ ಅಪನಂಬಿಕೆ ಇನ್ನೂ ಆಳವಾಗಿಯೇ ಬೇರೂರಿದೆ. ಬಾಹ್ಯವಾಗಿ, ದ್ವಿಪಕ್ಷೀಯ ಸಂಭಂಧಗಳನ್ನು ಘನಿಷ್ಠಗೊಳಿಸಲು ತಮ್ಮ ಬದ್ಧತೆಯನ್ನು ಪುನರುಚ್ಛರಿಸುವ ಯಾವ ಅವಕಾಶವನ್ನು ಎರಡೂ ದೇಶದ ನಾಯಕರುಗಳು ಬಿಡುವುದಿಲ್ಲ. ಆದರೆ ತಳದಲ್ಲಿ ಮಾತ್ರ ಜೋಡಿಸಲಸಾಧ್ಯವಾದ ಭಾರೀ ಕಂದರ ಇರುವುದು ಎರಡು ದೇಶಗಳಿಗೂ ತಿಳಿದಿರುವುದೇ ಆಗಿದೆ.

            ಸಹಸ್ರಾರು ವರ್ಷಗಳ ನಾಗರಿಕತೆಯ ಇತಹಾಸವುಳ್ಳ ಭಾರತ ಮತ್ತು ಚೀನಾ ದೇಶಗಳು ದ್ವಿತೀಯ ಸಹಸ್ರಮಾನದ ಕೊನೆಯ ಹೊತ್ತಿಗೆ ಜನಸಂಖ್ಯೆ ಮತ್ತು ಸಂಪನ್ಮೂಲಗಳ ಬಲದಿಂದಾಗಿ ಮತ್ತೆ ವಿಶ್ವದ ಶಕ್ತಿಯಾಗಿ ಹೊರಹೊಮ್ಮಲು ಮುನ್ನುಗ್ಗತೊಡಗಿದವು. 1940ರ ದಶಕದ ಕೊನೆಗೆ ಸ್ವಾತಂತ್ರ ಪಡೆದ ಭಾರತ ಮತ್ತು ಚೀನಾ ಸಂಪೂರ್ಣ ವಿರುದ್ಧವಾದ ರಾಜಕೀಯ ತತ್ವಗಳನ್ನು ಆಯ್ಕೆ ಮಾಡಿಕೊಂಡವು. ಈ ಅಂಶಗಳು ಎರಡೂ ದೇಶಗಳು ಪರಸ್ಪರ ಸ್ಪರ್ಧೆಗಿಳಿಯಲು ಕಾರಣವಾದವು.

              ಐತಿಹಾಸಿಕವಾಗಿ ಭಾರತ ಮತ್ತು ಚೀನಾ ನಡುವೆ ಎಂದೂ ಸಾಮಾನ್ಯ ಗಡಿಯಿದ್ದಿರಲಿಲ್ಲ. 1950ರಲ್ಲಿ ಎರಡು ದೇಶಗಳ ನಡುವೆ ಗೋಡೆಯಂತಿದ್ದ ಟಿಬೆಟನ್ನು ತನ್ನೊಳಗೆ ಜೋಡಿಸಿಕೊಂಡ ಚೀನಾ ಮೊದಲಬಾರಿಗೆ ಭಾರತದ ಬಾಗಿಲಿಗೆ ಬಂದು ನಿಂತಿತ್ತು. ಚೀನಾದ ಈ ನಡೆಯಿಂದ ಭಾರತಕ್ಕೆ ಒದಗಿಬಂದ ವ್ಯೂಹಾತ್ಮಕ ಬೆದರಿಕೆಯನ್ನು ಅಂದೇ ಮನಗಾಣಬೇಕಿತ್ತು. ಸ್ವತಂತ್ರ ರಾಷ್ಟ್ರವಾಗಿದ್ದ ಟಿಬೆಟ್‍ಗೆ ಭಾರತ ಸಹಾಯವನ್ನು ನಿರಾಕರಿಸಿದ್ದಲ್ಲದೇ ಚೀನಾದ ನಡೆಯನ್ನು ವಿರೋಧಿಸಲೂ ಇಲ್ಲ. ಅಲ್ಲದೇ ವಿಶ್ವಸಂಸ್ಥೆಯಲ್ಲೂ ಕೂಡ ಟಿಬೆಟ್ ಪರ ದನಿಯೆತ್ತಿದ ಎಲ್ ಸಾಲ್‍ವಡಾರ್‍ನಂತಹ ಚಿಕ್ಕ ದೇಶ ಮಂಡಿಸಿದ ನಿರ್ಣಯವು ಅಂಗೀಕಾರವಾಗದಂತೆ ನೋಡಿಕೊಂಡಿತು. ‘ಹಿಂದೀ ಚೀನೀ ಭಾಯಿ ಭಾಯಿ’ ಘೋಷಣೆಯ ಗುಂಗಿನಲ್ಲಿ ಮೈಮರೆತು ಗಡಿಗಳಲ್ಲಿನ ಚೀನಿಯರ ಒತ್ತುವರಿಯನ್ನು ಅಲ್ಲಗಳೆಯುತ್ತಲೇ ಬಂದ ಭಾರತಕ್ಕೆ ಮೊದಲ ಆಘಾತವಾಗಿದ್ದು 1962ರಲ್ಲಿ ಚೀನೀ ಆಕ್ರಮಣದಲ್ಲಿ ಸೋತ ನಂತರವೇ. ಇಷ್ಟಾಗಿ ಲಢಾಕ್ ಬಹುಭಾಗವನ್ನು ಕಳೆದಕೊಂಡ ನಂತರವೂ ವಿಸ್ತರಣಾವಾದಿ ಚೀನಾದೊಂದಿಗೆ ವ್ಯವಹಾರ ಮಾಡುವಲ್ಲಿ ಸಮರ್ಥ ನೀತಿಯನ್ನು ರೂಪಿಸುವಲ್ಲಿ ಭಾರತ ವಿಫಲವಾಗಿದೆ. ಆದರೆ ಚೀನಾ ಆರ್ಥಿಕವಾಗಿ ಮತ್ತು ಯುದ್ಧ ವ್ಯೂಹಾತ್ಮಕವಾಗಿ ಭಾರತದ ಮೇಲೆ ಮೇಲುಗೈ ಸಾಧಿಸುವ ಯಾವ ಅವಕಾಶವನ್ನು ಕೈಬಿಟ್ಟಿಲ್ಲ.
ಪ್ರಪಂಚದ ಶಕ್ತಿಯಾಗಬೇಕೆಂಬ ಮಹತ್ವಾಕಾಂಕ್ಷೆಯ ಹಿಂದೆ ಬಿದ್ದಿರುವ ಚೀನಾದ ಆಕ್ರಮಣಶೀಲ ನೀತಿಯಿಂದಾಗಿ ಕೆಲವು ಗಂಭೀರ ಸವಾಲುಗಳು ಭಾರತದ ಮುಂದೆ ಕಾದಿವೆ.

ಗಡಿಪ್ರದೇಶದ ಅಭಿವೃದ್ಧಿ: 2000ನೇ ಇಸವಿಯಿಂದಿಚೆಗೆ ಭಾರತ-ಟಿಬೆಟ್ ಗಡಿಪ್ರದೇಶದಲ್ಲಿ ರೇಲ್ವೆ, ರಸ್ತೆ ಸಂಪರ್ಕ, ಕೈಗಾರಿಕೆ ಮೊದಲಾದುವುಗಳ ನಿರ್ಮಾಣದ ಪ್ರಮುಖ ಯೋಜನೆಗಳನ್ನು ಕೈಗೆತ್ತಿಗೊಂಡ ಚೀನಾ ಅತ್ಯಂತ ವೇಗವಾಗಿ ಟಿಬೆಟ್‍ನ್ನು ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿಸುವತ್ತ ಮುನ್ನುಗ್ಗುತ್ತಿದೆ. ಜೊತೆಗೆ ಈ ಪ್ರದೇಶದಲ್ಲಿ ಸೇನಾನೆಲೆಯನ್ನು ಬಲಗೊಳಿಸಿದ್ದಲ್ಲದೇ ಪರಮಾಣು ಕ್ಷಿಪಣಿಗಳನ್ನೂ ಸ್ಥಾಪಿಸಿದೆ. ಆದರೆ ಯಥಾಪ್ರಕಾರ ಭಾರತ ಗಡಿಪ್ರದೇಶಗಳ ಅಭಿವೃದ್ಧಿಯಲ್ಲಿ ಕುಂಟುತ್ತಲೇ ಸಾಗುತ್ತಿದೆ.
ನದಿ ನೀರಿನ ಹಂಚಿಕೆ: ಸಿಂಧು, ಸಟ್ಲೆಜ್, ಬ್ರಹ್ಮಪುತ್ರ ಸೇರಿದಂತೆ ಅನೇಕ ಪ್ರಮುಖ ನದಿಗಳ ಮೂಲ ಟಿಬೆಟ್‍ನಲ್ಲಿದೆ. ಚೀನಾ ಈ ಪ್ರಮುಖ ನದಿಗಳ ಪಾತ್ರಗದಲ್ಲಿ ಆಣೆಕಟ್ಟುಗಳನ್ನು ನಿರ್ಮಿಸುವ ಬಿರುಸಿನ ಕಾರ್ಯವನ್ನು ಕೈಗೊಂಡಿದೆ. ಕಳೆದ ಆರು ದಶಕಗಳಲ್ಲಿ 22000 ಡ್ಯಾಂಗಳನ್ನು ಚೀನಾ ನಿರ್ಮಿಸಿದ್ದು ಪ್ರಪಂಚದ ಅರ್ಧದಷ್ಟು ಡ್ಯಾಂಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದತ್ತ ಹರಿಯುವ ನದಿ ನೀರನ್ನು ತಡೆಹಿಡಿಯುವ ಇಂತಹ ಯೋಜನೆಗಳು ನೀರಿನ ಕೊರತೆಯನ್ನುಂಟು ಮಾಡುವುದರ ಜೊತೆಗೆ ಗಡಿಪ್ರದೇಶಗಳಲ್ಲಿ ಹಠಾತ್ ಪ್ರವಾಹಕ್ಕೂ ಕಾರಣವಾಗಬಲ್ಲವು. ಭಾರತ-ಚೀನಾ ನಡುವೆ ನದಿ ನೀರಿನ ಹಂಚಿಕೆಯ ಯಾವುದೇ ಒಪ್ಪಂದಗಳಿರದ ಕಾರಣ ಚೀನಾ ನಿರ್ಮಿಸುತ್ತಿರುವ ಆಣೆಕಟ್ಟು ಯೋಜನೆಗಳ ಯಾವ ಮಾಹಿತಿಯೂ ಭಾರತಕ್ಕೆ ಸಿಗುತ್ತಿಲ್ಲ.
ಬಗೆಹರಿಯದ ಗಡಿ ತಕರಾರುಗಳು: ತನ್ನ ಗಡಿಯನ್ನು ವಿಸ್ತರಿಸುವ ಚೀನಾದ ಪ್ರವೃತ್ತಿ ಇನ್ನೊಂದು ಗಂಭಿರ ಸವಾಲಾಗಿದೆ. ಇತ್ತೀಚೆಗೆ ಲಢಾಕ್‍ನಲ್ಲಿ ನಡೆದ ಚೀನಾದ ಒತ್ತುವರಿ, ಅರುಣಾಚಲ ಪ್ರದೇಶದ ಗಡಿತಂಟೆ ಮೊದಲಾದುವಗಳನ್ನು ಹೇಗೆ ನಿರ್ವಹಿಸಬೇಕೆಂಬ ವಿಷಯದಲ್ಲಿ ಭಾರತಕ್ಕೆ ಮಾರ್ಗ ತೋಚದಂತೆ ಕಂಡುಬರುತ್ತದೆ.
ಬೆಳೆಯುತ್ತಿರುವ ಆಮದು-ರಫ್ತು ವ್ಯಾಪಾರಿ ಕೊರತೆ: ಚೀನಾದೊಂದಿಗಿನ ವ್ಯಾಪಾರ ವಹಿವಾಟು ಸುಮಾರು 70 ಬಿಲಿಯನ್ ಡಾಲರ್ ದಾಟಿದ್ದರು ಆಮದು ರಫ್ತಿಗಿಂದ ಎಷ್ಟೋ ಪಾಲು ಹೆಚಿದ್ದು ಸುಮಾರು 50ಬಿಲಿಯನ್ ಡಾಲರ್‍ಗಳ ಕೊರತೆಯನ್ನು ಎದುರಿಸುತ್ತಿದೆ. ಅದರಲ್ಲೂ ಅದಿರು ಮೊದಲಾದ ಕಚ್ಚಾವಸ್ತುಗಳು ಭಾರತದ ರಫ್ತಿನ ಪಟ್ಟಿಯಲ್ಲಿದ್ದರೆ ಸಿದ್ಧವಸ್ತುಗಳು, ಕಬ್ಬಿಣ, ಆಟಿಕೆಗಳು, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಸಾಮಗ್ರಿಗಳು ಚೀನಾದಿಂದ ಆಮದಾಗುತ್ತವೆ, ಅಷ್ಟೇ ಅಲ್ಲದೇ ಭಾರತದೊಂದಿಗೆ ಮುಕ್ತವ್ಯಾಪಾರ ಒಪ್ಪಂದ ಹೊಂದಿರುವ ಸಾರ್ಕ ದೇಶಗಳು, ಥೈಲಾಂಡ್ ಮೊದಲಾದ ದೇಶಗಳ ಮುಖಾಂತರವೂ ಚೀನಾ ನಿರ್ಮಿತ ವಸ್ತುಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಆದರೆ ಭಾರತದ ಮಾಹಿತಿ ತಂತ್ರಜ್ಞಾನ, ಇಂಜಿನಿಯರಿಂಗ್ ಕಂಪನಿಗಳು ಚೀನಾದಲ್ಲಿ ವ್ಯವಹಾರ ಪ್ರಾರಂಭ ಮಾಡಲು ಹರಸಾಹಸ ಪಡಬೇಕಾಗಿದೆ.

             ಏಷಿಯಾ ಖಂಡದ ಯುಗವೆಂದು ಹೇಳಲಾಗುವ ಇಪ್ಪತ್ತೊಂದನೇ ಶತಮಾನದಲ್ಲಿ ಭಾರತ ಮತ್ತು ಚೀನಾಗಳ ನಡುವೆ ಪ್ರಬಲ ಪೈಪೋಟಿ ನಡೆಯುವುದಂತೂ ಸತ್ಯ. ಆದ್ದರಿಂದ ಭಾರತದ ಮಟ್ಟಿಗೆ ತನ್ನ ಹಿತಕಾರಿಯಲ್ಲದ ನೆರೆದೇಶವಾದ ಚೀನಾದ ಆಲೋಚನೆ, ತಂತ್ರಗಾರಿಕೆ ಮತ್ತು ಆಕ್ರಮಕ ನಡೆಗಳನ್ನು ಅರಿಯಬೇಕಾದ ಅನಿವಾರ್ಯತೆಯಿದೆ.

1962 ಚೀನಾ ಅಕ್ರಮಣದ ಇತಿಹಾಸ ಮತ್ತು ಐವತ್ತು ವರ್ಷಗಳ ನಂತರವೂ ತನ್ನ ನೆರೆದೇಶದ ನಿಜಸ್ವವರೂಪವನ್ನು  ಅರ್ಥೈಸಿಕೊಳ್ಳುವುದರಲ್ಲಿ ಭಾರತದ ವೈಫಲ್ಯವನ್ನು ವಿವರಿಸುವ ಪುಸ್ತಕವನ್ನು ಆರೆಸ್ಸೆಸ್‍ನ ಅಖಿಲ ಭಾರತೀಯ ಸಹ ಸಂಪರ್ಕ ಪ್ರಮುಖ ಮತ್ತು ನವದೆಹಲಿಯ ಇಂಡಿಯಾ ಫೌಂಡೇಶನ್‍ನ ನಿರ್ದೇಶಕರಾದ ರಾಮ್ ಮಾಧವ್ ಹೊರತಂದಿದ್ದಾರೆ. ‘ಅನ್ ಈಸಿ ನೇಬರ್ಸ್’ (Uneasy Neighbours – India and China after 50 Years of War) ರಾಮ ಮಾಧವ ಅವರ ಎರಡು ದಶಕಗಳ ಚೀನಾ ಸಂಭಂಧಿತ ಅಧ್ಯಯನದ ಪರಿಣತಿಯಲ್ಲಿ ಈ ಕೃತಿ ಹೊರಬಂದಿದೆ. ಚೀನಾ ಆಕ್ರಮಣದ ಮೊದಲು ಅನುಸರಿಸುತ್ತಿದ್ದ ನೀತಿಗಳನ್ನೇ ಇಂದಿಗೂ ಬೆನ್ನುಹತ್ತಿದುದರ ಪರಿಣಾಮದಿಂದಾಗಿ ಭಾರತ ಮತ್ತೆ ಮತ್ತೆ ಸಂಕಷ್ಟಕ್ಕೊಳಗಾಗುತ್ತಿದೆ. ಆದ್ದರಿಂದ ತನ್ನ ‘ಅನ್ ಈಸಿ ನೇಬರ್’ ಚೀನಾವನ್ನು ವಾಸ್ತವದ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾದ ಅಗತ್ಯ ಭಾರತಕ್ಕಿದೆ ಎಂದು ಪುಸ್ತಕ ಪ್ರತಿಪಾದಿಸುತ್ತದೆ.

Tuesday, April 8, 2014

ಹೀಗಿರಲಿ ನಾವು ಚುನಾಯಿಸುವ ಸರ್ಕಾರ

(ಪ್ರಕಟಿತ: ಪುಂಗವ 15/04/2014)


     ಮತದಾನ ಮಾಡುವ ಮೊದಲು ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಸರ್ಕಾರ ಹೇಗಿಬೇಕು? ಸರ್ಕಾರದ ಅದ್ಯತೆಗಳೇನಿರಬೇಕು? ಎಂದು ಯೋಚಿಸಿ ನಿರ್ಣಯಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಹಿತದಲ್ಲಿ ನಾವು ಆಯ್ಕೆಮಾಡುವ ಸರ್ಕಾರ ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳನ್ನು ಈ ಕೆಳಗೆ ಪಟ್ಟಿಮಾಡಿದೆ ಪಟ್ಟಿಮಾಡಿದೆ.

  • ಹದಗೆಟ್ಟಿರುವ ಆಡಳಿತ ಯಂತ್ರವನ್ನು ಸುಧಾರಿಸುವುದು ಮತ್ತು ಸ್ಥಿರತೆ ಸರ್ಕಾರದ ಪ್ರಥಮ ಆದ್ಯತೆಯಾಗಲಿ. 
  • ವ್ಯಾಪಕವಾಗಿರುವ ಬ್ರಷ್ಟಾಚಾರ ನಿಗ್ರಹಿಸುವುದು, ಬ್ರಷ್ಟಾಚಾರದ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
  • ಆಡಳಿತ ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತವಾಗಿರಬೇಕು. ಸರ್ಕಾರದ ಮಂತ್ರಿಗಳು ಮತ್ತು ಉನ್ನತ ಅಧಿಕಾರಿಗಳು ಸಂಶಯಾತೀತ ಪ್ರಾಮಾಣಿಕರಾಗಿರಲಿ.
  • ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಮೇಲೆತ್ತಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹಣದುಬ್ಬರದ ಮೇಲೆ ನಿಯಂತ್ರಣ, ಯೋಜನೆಗಳ ತ್ವರಿತ ಅನುಷ್ಠಾನ, ವಿತ್ತೀಯ ಕೊರತೆಯನ್ನು ಕಡಿಮೆಗೊಳಿಸುವ ಪ್ರಯತ್ನ, ಅನಗತ್ಯ ಸಬ್ಸಿಡಿ ಮತ್ತು ಪುಕ್ಕಟೆ ಕೊಡುಗೆಗಳ ಯೋಜನೆಗಳಿಗೆ ಕಡಿವಾಣ, ಉತ್ಪಾದನೆಯನ್ನು ಹೆಚ್ಚಿಸುವ ಮಾರ್ಗಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ಮಂತಾದವುಗಳು ಸರ್ಕಾರದ ಪ್ರಾಥಮಿಕ ಆದ್ಯತೆಗಳಾಗಲಿ.
  • ಮಿತಿಮೀರಿ ಏರುಪೇರಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಲಿ. ಜೊತೆಗೆ ಕೃಷಿ ಉತ್ಪನ್ನಗಳಿಗೆ ಸ್ಥಿರ ಮತ್ತು ಯೋಗ್ಯ ಬೆಲೆ ದೊರಕುವಂತಹ ನೀತಿಗಳನ್ನು ರೂಪಿಸಲಿ.
  • ಆಹಾರೋತ್ಪಾದನೆ, ಇಂಧನ, ವಿದ್ಯುತ್, ಸಂಪರ್ಕ, ಸೇನಾ-ಸುರಕ್ಷೆಯ ಶಸ್ತ್ರ ಸಲಕರಣೆಗಳ ಉತ್ಪಾದನೆಗಳಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗುವ ನೀತಿಗಳನ್ನು ರೂಪಿಸಬೇಕು.
  • ಭಾರತ ದೇಶದ ವಿಶಿಷ್ಟ ಗ್ರಾಮಜೀವನ ಸದೃಢಗೊಳ್ಳಬೇಕು. ಗ್ರಾಮೀಣಪ್ರದೇಶಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಕೃಷಿ, ಹೈನುಗಾರಿಕೆ, ಗೋಸಂರಕ್ಷಣೆ, ಗುಡಿಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಹಳ್ಳಿಗಳಿಂದ ನಗರಗಳತ್ತ ಯುವಕರು ವಲಸೆ ಹೋಗುವುದನ್ನು ತಡೆಯಬೇಕು.
  • ದೇಶವನ್ನು ಕ್ಯಾನ್ಸರ್‍ನಂತೆ ಕಾಡುತ್ತಿರುವ ಜೆಹಾದಿ, ಮಾವೋವಾದಿ, ನಕ್ಸಲ್ ಮುಂತಾದ ಭಯೋತ್ಪಾದನೆಗಳನ್ನು ಮಟ್ಟ ಹಾಕುವ ದಿಟ್ಟತನವನ್ನು ತೋರಬೇಕು.
  • ಅಲ್ಲಸಂಖ್ಯಾತ ತುಷ್ಟೀಕರಣ, ಮತಬ್ಯಾಂಕ್ ರಾಜಕಾರಣ ಕೊನೆಗೊಳ್ಳಲಿ. ಸಮಾಜದ ಎಲ್ಲ ವರ್ಗಗಳನ್ನು ಸಮಾನವಾಗಿ ಕಂಡು ಸಾಮಾಜಿಕ ಸಾಮರಸ್ಯ ಬೆಳೆಸುವುದು ಸರ್ಕಾರದ ಕರ್ತವ್ಯವಾಗಬೇಕು. 
  • ಮತಾಂತರ, ಲವ್ ಜೆಹಾದ್, ಲ್ಯಾಂಡ್ ಜಿಹಾದ್ ಮೊದಲಾದ ಸಮಾಜಘಾತುಕ ಚಟುವಟಿಕೆಗಳನ್ನು ಕೊನೆಗೊಳಿಸಲಿ.
  • ದೇಶದ ಭೂ ಮತ್ತು ಜಲ ಗಡಿಗಳು ಸುರಕ್ಷಿತವಾಗಿರಬೇಕು. ಆಂತರಿಕ ಮತ್ತು ಗಡಿ ಸುರಕ್ಷೆ ಸರ್ಕಾರದ ಪ್ರಮುಖ ಜವಾಬ್ದಾರಿಯಾಗಬೇಕು. ಜಮ್ಮು-ಕಾಶ್ಮೀರದಂತಹ ಸಮಸ್ಯೆಗಳು, ಅಸ್ಸಾಂನ ಬಾಂಗ್ಲಾ ನುಸುಳುಕೋರರ ತಂಟೆಗಳು ಮೊದಲಾದವುಗಳನ್ನು ಕೊನೆಗೊಳಿಸುವ ಹೊಣೆಗಾರಿಕೆಯನ್ನು ಅರ್ಹರೀತಿಯಲ್ಲಿ ನಿರ್ವಹಿಸಬೇಕು.
  • ಆಗಾಗ ಗಡಿ ಉಲ್ಲಂಘಿಸುತ್ತಿರುವ ಚೀನಾ, ಗಡಿಯಾಚೆಯಿಂದ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ, ಅಕ್ರಮ ನುಸುಳುಕೋರರಿಂದಾಗಿ ತಲೆನೋವಾಗಿರುವ ಬಾಂಗ್ಲಾದೇಶ ಮುಂತಾದ ನೆರೆಯ ಶತ್ರುದೇಶಗಳಿಗೆ ತಕ್ಕ ಉತ್ತರ ನೀಡುವ ಎದೆಗಾರಿಕೆಯನ್ನು ಪ್ರದರ್ಶಿಸಲಿ.
  • ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಗೌರವವನ್ನು ಎತ್ತಿಹಿಡಿಯಲಿ. ವಿವಿಧ ದೇಶದಗಳೊಂದಿಗೆ ದ್ವಿಪಕ್ಷೀಯ ಸಂಭಂಧಗಳನ್ನು ಉತ್ತಮಗೊಳಿಸುವುದರ ಜೊತೆಗೆ, ಏಷ್ಯಾ, ಆಫ್ರಿಕ ಮತ್ತು ದಕ್ಷಿಣ ಅಮೇರಿಕಗಳ ಅಭಿವೃದ್ಧಿಶೀಲ ದೇಶಗಳಿಗೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನೇತೃತ್ವ ಒದಗಿಸಲು ಭಾರತ ಸಕ್ಷಮವಾಗಲಿ.
  • ಸಶಸ್ತ್ರ ಸೇನೆ, ಗಡಿಕಾಯುವ ಸೈನಿಕ ದಳ, ಆಡಳಿತ ಮತ್ತು ಪೋಲೀಸ್ ವ್ಯವಸ್ಥೆಯ ಪ್ರಾಮಾಣಿಕ ಅಧಿಕಾರಿಗಳು, ದೇಶದ ಹಿತ ಬಯಸುವ ಹಾಗೂ ದೇಶದ ಒಳಿತಿಗಾಗಿ ಕಾರ್ಯಮಾಡುವ ಸಜ್ಜನರು ಮತ್ತು ಸಂಘ-ಸಂಸ್ಥೆಗಳ ನೈತಿಕ ಸ್ಥರ್ಯವನ್ನು ಹೆಚ್ಚಿಸಲಿ.
  • ಭಾರತೀಯ ಸಂಸ್ಕøತಿ ಪರಂಪರೆಗಳಲ್ಲಿ ನಂಬಿಕೆ ಉಳ್ಳ ಸರ್ಕಾರ ಅಸ್ತಿತ್ವಕ್ಕೆ ಬರಲಿ. ನಮ್ಮ ಪ್ರಾಚೀನ ಸಂಪ್ರದಾಯಗಳನ್ನು ಗೌರವಿಸುವ, ಇಲ್ಲಿನ ಆಚರಣೆಗಳು, ಕಲೆ-ಸಾಹಿತ್ಯ, ಭಾಷೆ, ಸ್ಮಾರಕಗಳನ್ನು ಸಂರಕ್ಷಿಸುವಲ್ಲಿ ಸರ್ಕಾರ ಕ್ರಮಗಳನ್ನು ಕೈಗೊಳ್ಳಲಿ. 
  • ಎಲ್ಲಕ್ಕಿಂತ ಮಿಗಿಲಾಗಿ ದೇಶದಲ್ಲಿ ಜನರಲ್ಲಿ ದೇಶಪ್ರೇಮ, ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಮೂಡಿಸಬಲ್ಲ ಸಮರ್ಥ ನೇತೃತ್ವ ಭಾರತಕ್ಕೆ ದೊರಕಲಿ.

            ದಶಕದ ದುರಾಡಳಿತದಿಂದ ಬೇಸತ್ತ ಭಾರತದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ದೇಶದ ಭವಿಷ್ಯವನ್ನು ಆಯ್ಕೆ ಮಾಡಬೇಕಾಗಿರುವ ಈ ಸಂಧರ್ಭದಲ್ಲಿ ಪ್ರಜ್ಞಾವಂತ ಮತದಾರ ಓರ್ವ ಸಮರ್ಥ, ದಕ್ಷ ಮತ್ತು ಅದಮ್ಯ ದೇಶಪ್ರೇಮವುಳ್ಳ ನೇತೃತ್ವದ ಸರ್ಕಾರವನ್ನು ಚುನಾಯಿಸಬಲ್ಲನೇ? ಕಾದು ನೋಡಬೇಕು. 

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...