Thursday, August 28, 2014

ಕರ್ನಾಟಕದಲ್ಲಿ ಸಂಘದ ಆದ್ಯಪ್ರವರ್ತಕ : ಯಾದವರಾವ್ ಜೋಶಿ

(ಪುಂಗವ : 01/9/2014)
(ಆಧಾರ : “ಜನಮನಶಿಲ್ಪಿ” - ಲೇ: ಚಂದ್ರಶೇಖರ ಭಂಡಾರಿ)


          ಜನವರಿ 20, 1929ರಂದು ನಾಗಪುರದ ಶ್ರೀ ವೆಂಕಟೇಶ ಥಿಯೇಟರಿನಲ್ಲಿ ಸಂಗೀತದ ಖ್ಯಾತ ಗುರು ಶಂಕರರಾವ್‍ರವರ ‘ಅಭಿನವ ಸಂಗೀತ’ ಶಾಲೆಯ ಆಶ್ರಯದಲ್ಲಿ ಸಂಗೀತ ಸಮಾರಾಧನೆ ಏರ್ಪಾಡಾಗಿತ್ತು. ಅಂದು ತಮ್ಮ ಮಧುರ ಕಂಠದಶ್ರೀಯಿಂದ ಕೇಳುಗರ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಇಬ್ಬರು ಎಳೆಯರು- ಯಾದವ ಜೋಶಿ ಮತ್ತು ಪ್ರಭಾಕರ ಜೋಶಿ. ಯಾದವ ಜೋಶಿ ಆಗ ಇನ್ನೂ ಕಿಶೋರ. ಪ್ರತಿಭಾಶಾಲಿ ಸಂಗೀತಪಟು ಎಂದು ಪ್ರಸಿದ್ಧಿ ಗಳಿಸಿದ್ದ. ‘ಸಂಗೀತ ಬಾಲ ಭಾಸ್ಕರ’ ಎಂದು ಬಿರುದಿನಿಂದ ಊರಿಗೆಲ್ಲ ಪರಿಚಿತನಾಗಿದ್ದ. ಅಂದು ಯಾದವನ ಸಂಗೀತಸುಧೆಗೆ ಮಂತ್ರಮುಗ್ಧರಾದವರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾಕ್ಟರ್ ಹೆಡಗೆವಾರರೂ ಒಬ್ಬರು. ಆವತ್ತಿನ ಸಂಗೀತ ಕಛೇರಿಯ ನಂತರ ಯಾದವ ಡಾ. ಹೆಡಗೆವಾರರ ಆಪ್ತಬಳಗದಲ್ಲಿ ಒಬ್ಬನಾದ. ಅವರ ಚುಂಬಕ ವ್ಯಕ್ತಿತ್ವಕ್ಕೆ ಕ್ರಮೇಣ ಮಾರುಹೋದ. ಕೆಲ ದಿನಗಳ ನಂತರ ಶಂಕರರಾವ್ ಅವರನ್ನು ಕಾಣಲು ಬಂದ ಡಾ ಹೆಡಗೆವಾರರು, “ಮಾಸ್ತರ್, ಈ ಯಾದವನನ್ನು ನಾನೀಗ ನಮ್ಮ ಸಂಘಕಾರ್ಯಕ್ಕಾಗಿ ಪಡೆದುಕೊಂಡಿರುವೆ. ಅವನು ನಿಮ್ಮ ಅತ್ಯಂತ ಪ್ರಿಯ ಉದಯೋನ್ಮುಖ ಶಿಷ್ಯ ಎಂಬುದು ನನಗೆ ಗೊತ್ತು. ಈ ಕಾರಣಕ್ಕಾಗಿ ನೀವು ಮನನೊಂದುಕೊಳ್ಳುವುದು ಸಹಜವೇ. ಆದರೂ ನೀವು ಇಂತಹ ಅನೇಕ ‘ಯಾದವ’ರನ್ನು ತರಬೇತಿಗೊಳಿಸಬಲ್ಲಿರಿ ಎಂಬ ಭರವಸೆ ನನಗಿದೆ” ಎಂದರು. ತಮ್ಮ ಸಂಗೀತವಾರಸಿಕೆಯನ್ನು ಯಾದವ ಮುಂದುವರಿಸಬೇಕೆಂಬ ತಮ್ಮ ಕನಸನ್ನು ಬದಿಗೊತ್ತಿ ಶಂಕರರಾಯರು ಉದಾರ ಮನಸ್ಸಿನಿಂದ ಹರಸಿ ಯಾದವನ್ನು ಡಾ ಹಡಗೆವಾರರ ಕೈಗೊಪ್ಪಿಸಿದರು. ಬಾಲಕೀರ್ತಿಯ ಶಿಖರ ತಲುಪಿದ್ದ ಯಾದವ ಅಂದಿನಿಂದ ಸಂಗೀತ ಸಂನ್ಯಾಸ ಸ್ವೀಕರಿಸಿದ, ಸಂಘ ತಪಸ್ವಿಯಾದ, ದೇಶ ಕಾರ್ಯಕ್ಕೆ ತನ್ನನ್ನು ತಾನು ಸಂಪೂರ್ಣ ಸಮರ್ಪಿಸಿಕೊಂಡ. ಸಂಘದ ಸ್ವರ, ತಾಳ, ಲಯ ಇವೇ ಯಾದವನ ಜೀವನಶ್ರುತಿಯಾಯಿತು.

      ಸ್ವಯಂ ಡಾ ಹೆಡಗೆವಾರರ ಮಾರ್ಗದರ್ಶನ ಮತ್ತು ಹಿರಿಯರಾದ ಬಾಬಾಸಾಹೇಬ್ ಆಪ್ಟೆಯವರ ಗರಡಿಯಲ್ಲಿ ಯಾದವರಾವ್ ಓರ್ವ ಪ್ರಬುದ್ಧ ಸ್ವಯಂಸೇವಕನಾಗಿ, ಸಂಘಟಕ, ಪ್ರಭಾವೀ ವಾಗ್ಮಿಯಾಗಿ ಬೆಳೆದರು. ಅಂದಿನ ಸಮಯದಲ್ಲಿ ನಾಗಪುರದಲ್ಲಿ ನಡೆಯತ್ತಿದ್ದ ಶಾಖೆಗಳಲ್ಲಿ ಯಾದವರಾವ್ ನಡೆಸುತ್ತಿದ್ದ ಶಾಖೆ ಅತ್ಯಂತ ಪ್ರಭಾವಿಯಾಗಿತ್ತು. ಕಿರಿಯ ಸಹಕಾರಿಗಳ ಚಿಂತನಾಶೈಲಿಗೆ ಆಕಾರ ನೀಡಿ ಅದನ್ನು ಒಪ್ಪ ಓರಣಗೊಳಿಸುವಲ್ಲಿ ಡಾ ಹೆಡಗೆವಾರರು ಅನುಸರಿಸುತಿದ್ದ ವಿಶಿಷ್ಟ ರೀತಿಯು ಯಾದವರಾಯರ ಮೇಲೆ ಗಾಢ ಪರಿಣಾಮ ಬೀರಿತು. ಎಲ್‍ಎಲ್‍ಬಿ ವ್ಯಾಸಂಗ ನಡೆಸುತ್ತಿದ್ದ ದಿನಗಳಲ್ಲಿ ಡಾ ಹೆಡಗೆವಾರರ ಜತೆ ಅವರ ಸಂಬಂಧ ಇನ್ನಷ್ಟು ಆಳವಾಯಿತು. ತಮ್ಮ ಎಮ್‍ಎ ಎಲ್‍ಎಲ್‍ಬಿ ವಿದ್ಯಾಭ್ಯಾಸದ ನಂತರ ಡಾ ಹೆಡಗೆವಾರರ ಆಶಯದಂತೆ ಪ್ರಚಾರಕನಾಗಿ ಸಂಘಕಾರ್ಯದ ವಿಸ್ತರಣೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡರು.

ಜೀವನಚಿತ್ರ
  • 3 ಸೆಪ್ಟೆಂಬರ್ 1914, ಅನಂತ ಚತುರ್ದಶಿಯ ದಿನ, ಶ್ರೀ ಕೃಷ್ಣ ಜೋಶಿ-ಸೌ ಸತ್ಯಭಾಮಾ ದಂಪತಿಗಳ ಒಬ್ಬನೇ ಮಗನಾಗಿ, ನಾಗಪುರದಲ್ಲಿ ಜನನ.
  • ಬಾಲ್ಯದಲ್ಲೇ ಸಂಗೀತ ಅಭ್ಯಾಸ, “ಸಂಗೀತ ಬಾಲ ಭಾಸ್ಕರಬಿರುದಾಂಕಿತ.
  • 1929ರಲ್ಲಿ ಸಂಗೀತ ಕಛೇರಿ ನೀಡುತ್ತಿರುವಾಗ ಆರೆಸ್ಸೆಸ್ ಸಂಸ್ಥಾಪಕ ಡಾ. ಹೆಡಗೆವಾರ್‍ರ ದೃಷ್ಟಿಗೆ ಬಿದ್ದರು, ಸ್ವಯಂಸೇವಕನಾಗಿ ಸಂಘಕಾರ್ಯದ ಆರಂಭ; ಸಂಗೀತಸಂನ್ಯಾಸ ಸ್ವೀಕಾರ.
  • ಎಮ್‍ಎ ಎಲ್‍ಎಲ್‍ಬಿ ಪದವಿ ಪ್ರಾಪ್ತಿಯ ನಂತರ ಸಂಘದ ಪೂರ್ಣಾವಧಿ ಪ್ರಚಾರಕರಾಗಿ ದೇಶಸೇವೆಗೆ ಸಂಪೂರ್ಣ ಸಮರ್ಪಣೆ.
  • 1941ರಲ್ಲಿ ಕರ್ನಾಟಕ ಪ್ರಾಂತ ಪ್ರಚಾರಕರಾಗಿ ಪಾದಾರ್ಪಣೆ.
  • ಮುಂದಿನ 5 ದಶಕಗಳ ಕಾಲ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಸಂಘಕಾರ್ಯದ ವಿಸ್ತರಣೆಗೆ ಅವಿರತ ದುಡಿಮೆ.
  • 20 ಅಗಸ್ಟ 1992, ಗೋಕುಲಾಷ್ಟಮಿಯ ದಿವಸ ವಿಧಿಲೀನ.

       

          ಬೇರೆ ಬೇರೆ ಊರುಗಳಿಗೆ ಸಂಘಕಾರ್ಯಕ್ಕಾಗಿ ಹೊರಡುವ ಯೋಜನೆಯಂತೆ ಯಾದವರಾಯರು 1941ರಲ್ಲಿ ಕರ್ನಾಟಕಕ್ಕೆ ಮೊದಲಬಾರಿಗೆ ಪ್ರಾಂತಪ್ರಚಾರಕರಾಗಿ ಬಂದರು. ಕರ್ನಾಟಕದೊಂದಿಗೆ ಅಂದು ಆರಂಭವಾದ ಈ ನಂಟು ಮುಂದಿನ 51 ವರ್ಷಗಳ ಕಾಲ ಸತತವಾಗಿ ಬೆಳೆದು ಬಂದಿತು. ಕರ್ನಾಟಕ ಅವರ ಕರ್ಮಭೂಮಿಯಾಯಿತು. ಮುಂದೆ ಅವರ ಕಾರ್ಯಕ್ಷೇತ್ರವು ಆಂಧ್ರ, ತಮಿಳುನಾಡು ಮತ್ತು ಕೇರಳದವರೆಗೆ ವಿಸ್ತಾರಗೊಂಡಾಗಲೂ, ಅಖಿಲ ಭಾರತ ಸ್ತರದ ಜವಾಬ್ದಾರಿ ಇದ್ದಾಗಲೂ ಅವರ ಕೇಂದ್ರವಾಗಿದ್ದುದು ಬೆಂಗಳೂರೇ. ಕರ್ನಾಟಕದಲ್ಲಿ 1940ರ ಹೊತ್ತಿಗೆ ಕೆಲವೇ ಕೆಲವು ಶಾಖೆಗಳಿಂದ ಆರಂಭವಾದ ಆರೆಸ್ಸೆಸ್ಸಿನ ಕಾರ್ಯ ಯಾದವರಾಯರ ಪ್ರಯತ್ನದಿಂದ ವೇಗ ಪಡೆದುಕೊಂಡಿತು. ಓರ್ವ ಸಾಮಾನ್ಯ ಪ್ರಚಾರಕನಾಗಿ ಅತ್ಯಂತ ಪ್ರಾಥಮಿಕ ಹಂತದಿಂದ ಇಲ್ಲಿ ಸಂಘಕಾರ್ಯದ ಕೃಷಿ ಆರಂಭಿಸಿದ ಅವರು, ಕೆಲವೇ ವರ್ಷಗಳಲ್ಲಿ ಪ್ರಾಂತ್ಯದ ಎಲ್ಲ ಜಿಲ್ಲೆಗಳವರೆಗೆ ಸಂಘಶಾಖೆಗಳ ಕಾರ್ಯಜಾಲವನ್ನು ಹರಡಿಸಿದರು. ಅವರ ಕಾರ್ಯಕೌಶಲ್ಯದಿಂದಾಗಿ ಸಮಾಜದಲ್ಲಿನ ಎಲ್ಲ ವರ್ಗದವರನ್ನು ಒಳಗೊಂಡು ಸಂಘದ ಕಾರ್ಯ ಬೆಳೆಯಿತು. ಸಂಘಟನೆಗೆ ಸಂಬಂಧಿಸಿದ ಯಾವುದೇ ಪೂರ್ವಪರಂಪರೆಗಳೇ ಇಲ್ಲದ ಅಪರಿಚಿತ ಕಾರ್ಯಕ್ಷೇತ್ರದಲ್ಲಿ ತಮ್ಮ ಚಿಂತನೆ, ಮಾತು, ನಡವಳಿಕೆ ಹಾಗೂ ಧ್ಯೇಯನಿಷ್ಠೆ ಇವುಗಳ ಮೇಲ್ಪಂಕ್ತಿಯಿಂದ ತಾವೇ ಹೊಸ ಪರಂಪರೆಗಳ ರೂವಾರಿಯಾದರು. ಮುಂದೆ 50ರ ದಶಕದಲ್ಲಿ ಮೊದಲ ನಿಷೇಧದ ಅನನುಕೂಲ ಸಂದರ್ಭದಲ್ಲಿ ಹಲವು ವಿಧ ಸವಾಲುಗಳ ನಡುವೆ ಓರ್ವ ಯಶಸ್ವೀ ಕಪ್ತಾನನಂತೆ ಸಂಘನೌಕೆಯನ್ನು ಮುನ್ನಡೆಸಿದರು.

         ಸಮಾಜ ಸುಧಾರಣೆ ಹಾಗೂ ಸಂಘಟನೆಯ ಕಾರ್ಯದಲ್ಲಿ ತಮ್ಮ ಮನದ ಕಲ್ಪನೆಗಳಿಗೆ ಕಾರ್ಯರೂಪ ನೀಡಲು ಅವರು ಕರ್ನಾಟಕವನ್ನು ಪ್ರಯೋಗಭೂಮಿಯಾಗಿ ಮಾಡಿಕೊಂಡರು. ವಿವಿಧ ಸೇವಾಕಾರ್ಯಗಳ ಮೂಲಕ ಸಮಾಜ ಪರಿವರ್ತನೆಯ – ವಿಶೇಷವಾಗಿ ಅಸ್ಪøಷ್ಯತೆಯ ನಿವಾರಣೆಯ - ಸಲುವಾಗಿ ಮುಂದಾಗುವಂತೆ ಸ್ವಯಂಸೇವಕರ ಮನೋಭೂಮಿಕೆಯನ್ನು ರೂಪಿಸುವುದು ಅವರ ವಿಶೇಷ ಆಸಕ್ತಿಯ ವಿಷಯವಾಗಿತ್ತು. ಸಮಾಜಸೇವೆಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಸುವಂತಹ ಪ್ರೇರಣೆಯನ್ನು ಸಾವಿರಾರು ಕಿರಿಯರ ಮನದಲ್ಲಿ ತುಂಬಿದುದಲ್ಲದೇ ಅವರ ಜೀವನವನ್ನು ತಿದ್ದಿ ತೀಡಿ ರೂಪಿಸಿದರು. ಯಾದವರಾಯರಿಂದ ಪ್ರೇರಣೆ ಪಡೆದ ಅದೆಷ್ಟೋ ಯುವಕರು ಸಂಘದ ಪ್ರಚಾರಕರಾಗಿ, ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಸಮರ್ಪಿಸಿಕೊಂಡು ಔನ್ನತ್ಯವನ್ನು ಪಡೆದರು. ಹಿಂದೂ ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದಕರಾಗಿದ್ದ ಅವರು ಸಂಸ್ಕøತ ಪ್ರಚಾರ, ಹಿಂದೂ ಸಮಾಜೋತ್ಸವ, ಪುಂಗವ ಜಾಗರಣ ಪತ್ರಿಕೆ, ಜಾಗರಣ ಪ್ರಕಾಶನ, ಕರ್ನಾಟಕ ಆರೆಸ್ಸೆಸ್ಸಿನ ಮೂರು ಬೃಹತ್ ಶಿಬಿರಗಳು, ತಮಿಳು ನಾಡಿನ ಹಿಂದು ಮುನ್ನಾನಿ, ಕೇರಳದ ಬಾಲಗೋಕುಲ, ತಪಸ್ಯಾ  ಮೊದಲಾದ ಹತ್ತು ಹಲವು ವಿಧದ ಹಿಂದು ಜಾಗೃತಿಯ ಕಾರ್ಯಕ್ರಮಗಳ ನೇಪಥ್ಯದ ಶಕ್ತಿಯಾದರು. ಸದಾ ಪ್ರಯೋಗಶೀಲರು ಹಾಗೂ ಲೋಕಸಂಗ್ರಹದಲ್ಲಿ ವಿಶ್ವಾಸವಿದ್ದ ಅವರು ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ವಿದ್ಯಾಕೇಂದ್ರ, ಹಿಂದು ಸೇವಾ ಪ್ರತಿಷ್ಠಾನ, ಸಂಸ್ಕøತ ವಿಭಾಗ ಮೊದಲಾದ ಅನೇಕ ಸಂಸ್ಥೆಗಳ ಆರಂಭದ ಹಿಂದಿನ ಪ್ರೇರಕ ಸ್ಫೂರ್ತಿಯಾಗಿದ್ದರು.  ಅವರ ಕೈಗಳಲ್ಲಿ ತಯಾರಾದ ಕಿರಿಯರು ಅವರಿಗಿಂತ ಹೆಚ್ಚಿನ ಜವಾಬ್ದಾರಿ ಹೊರುವಂತಹರಾದಾಗ  ಉತ್ಕಟ ಅಭಿಮಾನಪಟ್ಟರು. ‘ಸ್ವದೇಶೋ ಭುವನತ್ರಯಂ’ ಎಂಬ ಕಲ್ಪನೆಗನುಗುಣವಾಗಿ ತಮ್ಮ ಬದುಕಿನಶೈಲಿ ನಿರ್ವಹಿಸುವಂತೆ ನಾಡಿನಗಡಿಯಾಚೆಯ ಹಿಂದುಗಳಿಗೆ ಅವರು ನೀಡಿದ ಕರೆ, ಅಲ್ಲನವರಿಗೊಂದು ಹೊಸ ಜೀವನದೃಷ್ಟಿಯೇ ಆಯಿತು. ತಮ್ಮ ಧ್ಯೇಯದೇವ ಡಾಕ್ಟರ್ ಹೆಡಗೆವಾರರ ಜನ್ಮಶತಮಾನೋತ್ಸವದಲ್ಲಿ ಹಿಂದುತ್ವದ ಜಯಭೇರಿ ದಿಗಂತ ದೂರದ ತನಕ ಅನುರಣಿತವಾಗುತ್ತಿರುವುದನ್ನು ಕಂಡು, ಕೇಳಿ ಅವರು ಧನ್ಯತೆಯ ಪುಳಕ ಅನುಭವಿಸಿದರು.


    
ನಾಗಪುರದಿಂದ ತಾವು ಹೊರಟ ದಿನಂದಿಂದ (25 ಜೂನ 1941) ಆರಂಭಿಸಿ ದಿನಾಂಕಕ್ಕನುಗುಣವಾಗಿ ತಮ್ಮ ಸಂಚಾರದ ಊರಿನ ಹೆಸರನ್ನು ಗುರುತು ಹಾಕಿಡುವಲ್ಲಿ ಯಾದವರಾಯರು ಒಂದು ದಿನವೂ ತಪ್ಪುತ್ತಿರಲಿಲ್ಲ. 1992ರಲ್ಲಿ ಅಂತಿಮ ಕಾಯಿಲೆಯಿಂದ ಹಾಸಿಗೆ ಹಿಡಿಯುವವರೆಗೂ ಈ ರೀತಿ 51 ವರ್ಷಗಳ ಕಾಲ ಅವರು ತಮ್ಮ ಕೈಬರಹದಲ್ಲಿ ಬರೆದಿರುವ ಸುಮಾರು 18 ಸಾವಿರಕ್ಕೂ ಹೆಚ್ಚಿನ ‘ದಿನಾಂಕ-ಊರು’ ವಿವರಗಳನ್ನೊಳಗೊಂಡ ಹಲವು ಪುಸ್ತಕಗಳಿವೆ.


ವರಕವಿ ದ ರಾ ಬೇಂದ್ರೆಯವರ ಜೊತೆ ಯಾದವರಾಯರ ಮೊದಲ ಭೇಟಿ ಬಹು ಮಾರ್ಮಿಕವಾಗಿತ್ತು. ಧಾರವಾಡಕ್ಕೆ ಬಂದ ಹೊಸತರಲ್ಲಿ ಅವರು ಭೇಟಿಗಾಗಿ ಬೇಂದ್ರೆಯವರಲ್ಲಿಗೆ ಹೋದರು. ನಾಗಪುರದ ತರುಣನಿಂದ ಸಂಘದ ವಿಚಾರ, ಕೆಲಸದ ವಿವರ ಇತ್ಯಾದಿಗಳನ್ನೆಲ್ಲ ವಿಚಾರಿಸಿದ ಕವಿವರ್ಯರು, ಆನಂದಿತರಾಗಿ “ವಿಚಾರವೇನೋ ಒಳ್ಳೆಯದೇ, ಆದರೆ ಇದನ್ನು ಕರ್ನಾಟಕದ ಜನರಿಗೆ ನೀವು ಹೇಗೆ ತಲುಪಿಸುವಿರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಯಾದವರಾಯರು “ನಾನಂತೂ ಇಲ್ಲಿನ ಜನರ ಸೇವೆಗಾಗಿ ಬಂದವನು, ಸೇವೆಯ ಜೊತೆ ನನಗೆ ತಿಳಿದಷ್ಟು ಹೇಳುವೆ” ಎಂದು ವಿನಮ್ರವಾಗಿ ಉತ್ತರಿಸಿದರು. ಅವರ ಮಾತುಗಳನ್ನು ಕೇಳಿ ಇನ್ನೂ ಮಾರು ಹೋದ ಬೇಂದ್ರೆಯವರು “ಜನರನ್ನು ಉಪದೇಶದಿಂದ ಮರಳುಗೊಳಿಸಲು ಪ್ರಯತ್ನಿಸಬೇಡಿ ಅವರ ಹೃದಯವನ್ನು ಗೆಲ್ಲಲು ಪ್ರಯತ್ನಿಸಿ (Don’t try to cap them, but try to capture their hearts)” ಎಂದು ಕಿವಿಮಾತು ಹೇಳಿದರು. ಅವರು ಹೇಳಿದ ಕಿವಿಮಾತು ಯಾದವರಾಯರಿಗೆ ದಾರಿದೀಪವೇ ಆಯಿತು, ಅಲ್ಲದೇ ಈ ಭೇಟಿಯ ಪ್ರಸಂಗ ಅವರಿಬ್ಬರ ನಡುವಣ ಗಾಢವಾದ ಸ್ನೇಹಕ್ಕೆ ನಾಂದಿಯಾಯಿತು.


  ಬದುಕಿನುದ್ದಕ್ಕೂ ರಾಜಿಯಿಲ್ಲದ ಸಂಘನಿಷ್ಠೆಯ ಮೈವೆತ್ತ ರೂಪವಾಗಿದ್ದವರು ಯಾದವರಾವ್ ಜೋಶಿ. ಶರೀರ ಜರ್ಜರಿತವಾಗಿದ್ದ ಬಾಳಸಂಜೆಯಲ್ಲೂ ‘ತ್ವದರ್ಥೇ ಏಷಃ ಕಾಯಃ ಪತತು’ ಎಂಬ ಅವರ ಜೀವನಶ್ರದ್ಧೆಗೆ ಕಿಂಚಿತ್ತೂ ಚ್ಯುತಿ ಬರಲಿಲ್ಲ. ಇಂತಹ ಬಹುಮುಖ ಕರ್ತೃತ್ವಶಾಲಿ ಯಾದವರಾಯರ ಜನ್ಮಶತಮಾನ ವರ್ಷ ಇದೀಗ ಬಂದಿದೆ. ಓರ್ವ ಕರ್ತೃತ್ವಶಾಲಿ ಧ್ಯೇಯವಾದಿ ಕಾಯವಳಿದಮೇಲೂ ತನ್ನ ಕೃತಿಯ ಮೂಲಕವೇ ಬದುಕುತ್ತಾನೆ ಎನ್ನುವುದು ಒಂದು ನಿತ್ಯಸತ್ಯ. ಕಾಯ ಕಳೆದು ಕಾರ್ಯರೂಪವಾದವರು ಯಾದವರಾವ್ ಜೋಶಿ.

Thursday, August 7, 2014

ರಾಷ್ಟ್ರಭಕ್ತಿಯನ್ನು ಉಕ್ಕಿಸಲಿ ಸ್ವಾತಂತ್ರ್ಯ ದಿನಾಚರಣೆ


(ಪುಂಗವ: 01/08/2014)

         ದೇಶ ಈ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಅಣಿಗೊಳ್ಳುವ ಹೊತ್ತಿಗೆ ಅನೇಕ ಒಳ್ಳೆಯ ಬೆಳವಣಿಗೆಗಳನ್ನು ಕಂಡಿದೆ. ಕಳೆದ ಮೇ ತಿಂಗಳಿನಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಬಹುತೇಕ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿದ ಮತ್ತು ಈ ಮಣ್ಣಿನೊಡನೆ ಘನಿಷ್ಠ ಸಂಬಂಧ ಹೊಂದಿದವರ ಕೈಯಲ್ಲಿ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿಸಿದೆ. ಸಾಮಾನ್ಯ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ವ್ಯಕ್ತಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿರುವುದು ದೇಶದ ಪ್ರಜಾಪ್ರಭುತ್ವದ ಗಟ್ಟಿತನವನ್ನು ಬಿಂಬಿಸುತ್ತದೆ. ಹೊಸ ಸರ್ಕಾರದ ನೀತಿಗಳು, ಕಾರ್ಯಶೈಲಿ, ಆಯವ್ಯಯ ಯೋಜನಾ ಪತ್ರ, ಗಂಗಾ ಪುನರುಜ್ಜೀವನದಂತಹ ಕಾರ್ಯಗಳನ್ನು ಕೈಗೊಂಡಿದ್ದು, ಪೂರ್ವೋತ್ತರ ರಾಜ್ಯಗಳ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಿರುವುದು, ದೇಶದ ಸಮಗ್ರ ವಿಕಾಸವನ್ನು ಕುರಿತು ಆಲೋಚಿಸುತ್ತಿರುವುದು ಮೊದಲಾದ ಒಟ್ಟೂ ಧೋರಣೆಯನ್ನು ಗಮನಿಸಿದರೆ ಶುಭದಿನಗಳು ಬರಲಿವೆಯೆಂಬ ಜನತೆಯ ಆಕಾಂಕ್ಷೆ ನಿಜವಾಗುವ ಲಕ್ಷಣಗಳು ತೋರುತ್ತಿವೆ. ಕಳೆದ ದಶಕದಲ್ಲಿ ಕುಸಿದಿದ್ದ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುತ್ತಿದ್ದು ವಿಶ್ವದ ಹೂಡಿಕೆದಾರರು, ಉದ್ಯಮಪತಿಗಳು ಭಾರತದತ್ತ ನೋಡುತ್ತಿದ್ದಾರೆ.  ಹಾಗೆಯೇ ಇತ್ತೀಚಿನ ಇರಾಕಿನ ದೊಂಬಿಯಿಂದ ಭಾರತೀಯರನ್ನು ರಕ್ಷಿಸುವಲ್ಲಿ ತೋರಿದ ದಿಟ್ಟತನ, ದಕ್ಷಿಣ ಏಷ್ಯಾ ದೇಶಗಳ ಪ್ರಗತಿಯಲ್ಲಿ ಭಾರತ ತೋರುತ್ತಿರುವ ಕಾಳಜಿ, ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾರತದ ನಿಲುವು ಮುಂತಾದವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಮಥ್ರ್ಯವನ್ನು ತೆರೆದಿಟ್ಟಿವೆ. ಇಸ್ರೋದಂತಹ ವೈಜ್ಞಾನಿಕ ಸಂಸ್ಥೆಗಳ ಸಾಧನೆ, ವಿಶ್ವದೆಲ್ಲೆಡೆ ಹರಡಿರುವ ವಿವಿಧ ಸಂಸ್ಥೆಗಳಲ್ಲಿ ತಮ್ಮ ಪ್ರತಿಭೆಯಿಂದ ಉನ್ನತ ಹುದ್ದೆಗಳನ್ನು ಗಳಿಸಿರುವ ಭಾರತೀಯ ಮೂಲದ ವ್ಯಕ್ತಿಗಳ ಸಾಧನೆ, ಶಕ್ತಿಯಾಗಿ ಹೊರಹೊಮ್ಮುತ್ತಿರುವ ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ಜನಾಂಗ ಇವೆಲ್ಲ ವಿಶ್ವದ ಅಂಗಳದಲ್ಲಿ ಭಾರತದ ಗೌರವವನ್ನು ಹೆಚ್ಚಿಸಿವೆ. ಒಟ್ಟಿನಲ್ಲಿ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಒಂದು ರೀತಿಯ ಧನಾತ್ಮಕ ವಾತಾವರಣ ನೆಲೆಗೊಂಡಿದೆ.

        ಆದರೆ ಇವೆಲ್ಲದರ ನಡುವೆ, ಸಾವಿರ ವರ್ಷಗಳ ಪರಕೀಯ ಆಳ್ವಿಕೆಯಿಂದ ಮುಕ್ತಗೊಂಡು 67 ವರ್ಷಗಳು ಕಳೆದರೂ ದೇಶದ ಜನಸಂಖ್ಯೆ ಬಹುದೊಡ್ಡ ಭಾಗ ಬಡತನ, ಅನಕ್ಷರತೆ ಮತ್ತು ಮೌಢ್ಯದಲ್ಲೇ ಬದುಕುತ್ತಿದೆ.  ಆರ್ಥಿಕ ಅಭಿವೃದ್ಧಿಯ ಜೊತೆಗೆ ಅಸಮಾನತೆಯೂ ಬೆಳೆದಿದೆ. ವೇಗವಾಗಿ ಬೆಳೆಯುತ್ತಿರುವ ವ್ಯಾಪಾರ ವಹಿವಾಟುಗಳ ಸ್ಪರ್ಧೆಯ ನಡುವೆ ಮನುಷ್ಯ ಸಂಬಂಧಗಳು, ಕುಟುಂಬ ವ್ಯವಸ್ಥೆ, ಸಮುದಾಯ ಜೀವನ ಬಡವಾಗುತ್ತಿವೆ. ವ್ಯಕ್ತಿಗತ ಸ್ವಾರ್ಥಲೋಲುಪತೆಗಳು ಹಾಗೂ ಭ್ರಷ್ಟಾಚಾರ ವ್ಯಾಪಕವಾಗಿರುವಂತೆ ಕರ್ತವ್ಯ ಪರಾಯಣತೆಯನ್ನು ಅನುಸರಿಸುವ ಮತ್ತು ಸಾರ್ವಜನಿಕ ಜೀವನದಲ್ಲಿ ಶುದ್ಧಿಯನ್ನು ಕಾಪಾಡಿಕೊಳ್ಳುವವರ ಸಂಖ್ಯೆಯೂ ಕುಸಿಯುತ್ತಿದೆ. ಮಾತೃಗೌವರವದ ಪಾಠವನ್ನು ಪ್ರಪಂಚಕ್ಕೆ ಕಲಿಸಿದ ನೆಲದಲ್ಲಿ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಅತ್ಯಾಚಾರಗಳು ದಿಗಿಲೆಬ್ಬಿಸುವಷ್ಟು ನಡೆಯುತ್ತಿವೆ. ದೇಶದ ಭವಿಷ್ಯವನ್ನು ತಯಾರು ಮಾಡಬೇಕಿದ್ದ ಶಿಕ್ಷಣ ವ್ಯವಸ್ಥೆಯಲ್ಲಿ ಆಶಿಸ್ತು ಅಸಮರ್ಪಕತೆಗಳ ಜೊತೆಗೆ ವ್ಯಾಪಾರೀಕರಣವೂ ವರ್ಧಿಸುತ್ತಿದೆ.
ಇವುಗಳಿಗೆಲ್ಲ ಕಾರಣ ನಮ್ಮಲ್ಲಿ ರಾಷ್ಟ್ರಭಕ್ತಿ ದೇಶಪ್ರೇಮದ ಕೊರತೆಯಿರುವುದು ಸುಸ್ಪಷ್ಟವಾಗಿ ಗೋಚರವಾಗುತ್ತದೆ.  ಪರಕೀಯ ಆಡಳಿತ ಕೊನೆಗೊಂಡು ಏಳನೇ ದಶಕ ನಡೆಯುತ್ತಿದ್ದರೂ ಸಾಮಾನ್ಯ ಜನಮಾನಸದಲ್ಲಿ ರಾಷ್ಟ್ರೀಯತೆ ಮತ್ತು ದೇಶಹಿತಕ್ಕಾಗಿ ಬದುಕುವ ಮನೋಭಾವವನ್ನು ಬೆಳಸುವಲ್ಲಿ ನಾವು ವಿಫಲರಾಗಿದ್ದೇವೆಯೇ? ಎನ್ನುವ ಸಂದೇಹ ಬಾರದಿರದು. ಏಕೆಂದರೆ, ದೇಶಪ್ರೇಮವಿರುವ ಓರ್ವ ಸರ್ಕಾರಿ ಅಧಿಕಾರಿ ಎಂದೂ ಭ್ರಷ್ಟನಾಗಲಾರ, ರಾಷ್ಟ್ರಕಾರ್ಯದಲ್ಲಿ ಪಾಲುದಾರನೆಂದು ಭಾವಿಸುವ ಯಾವ ಕಾಂಟ್ರಾಕ್ಟ್ ಉದ್ಯಮಿಯು ಕಳಪೆ ಕಾಮಗಾರಿಯನ್ನು ಮಾಡಲಾರ. ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಹೊತ್ತಿರುವೆನೆಂಬ ಭಾವನೆಯುಳ್ಳ ಯಾವ ಶಿಕ್ಷಕನೂ ವಿದ್ಯಾದಾನವನ್ನು ವ್ಯಾಪಾರ ಮಾಡಲಾರ. ದೇಶಕ್ಕೆ ಅನ್ನಕೊಡುವ ಜವಾಬ್ದಾರಿ ಹೊತ್ತಿರುವ ರೈತನೆಂದೂ ಭೂಮಿಗೆ ವಿಷ ಉಣಿಸಲಾರ. ಯಾವ ದೇಶಪ್ರೇಮಿ ನಾಗರಿಕನೂ ಪರಿಸರವನ್ನು ಕೆಡಿಸಲಾರ. ಓರ್ವ ರಾಷ್ಟ್ರಭಕ್ತ ವಿದ್ಯಾರ್ಥಿ ಶ್ರದ್ಧೆಯಿಂದ ಅಧ್ಯಯನ ಮಾಡುವನೇ ಹೊರತು ಸುಖಲೋಲುಪತೆಯ ಹಿಂದೆ ಬೀಳಲಾರ. ರಾಷ್ಟ್ರಪ್ರೇಮಿಯಾದ ಓರ್ವ ರಾಜಕಾರಣಿಯು ಸ್ವಾರ್ಥವನ್ನು ದೇಶಕ್ಕಿಂತ ಮಿಗಲಾಗಿ ಭಾವಿಸಲಾರ.

        ದೇಶದಲ್ಲಿ ರಾಜಕೀಯ ಪರಿವರ್ತನೆಯಾಗಿ ಸಮರ್ಥ ಜನಪ್ರಿಯ ಸರ್ಕಾರ ಅಧಿಕಾರಕ್ಕೆ ಬಂದರೂ ಸುದೃಢ ಭಾರತದ ನಿರ್ಮಾಣ ಸಾಧ್ಯವಾಗುವಲ್ಲಿ ಪ್ರಜೆಗಳ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ದೇಶಭಕ್ತ ನಾಗರಿಕರೇ ಒಂದು ರಾಷ್ಟ್ರದ ನಿಜವಾದ ಸಂಪತ್ತು. ಆದ್ದರಿಂದ ಜನಸಮುದಾಯದಲ್ಲಿ ರಾಷ್ಟಭಕ್ತಿಯನ್ನು ಜಾಗೃತಗೊಳಿಸುವ ಪರ್ವವಾಗಿ ಸ್ವಾತಂತ್ರ್ಯ ದಿನ ಆಚರಣೆಗೊಳ್ಳಬೇಕು. ಸ್ವಾತಂತ್ರ್ಯೋತ್ಸವದ ಆಚರಣೆ ರಾಷ್ಟ್ರೀಯತೆಯ ಸೂತ್ರದಲ್ಲಿ ಪ್ರಜೆಗಳನ್ನೆಲ್ಲ ಒಂದುಗೂಡಿಸಿ ದೇಶದ ಹಿತಕ್ಕಾಗಿ ಬದುಕಬೇಕು ಎನ್ನುವ ಭಾವವನ್ನು ಬೆಳೆಸುವಂತಾಗಬೇಕು. ರಾಷ್ಟ್ರೀಯ ಹಬ್ಬಗಳು ಕೇವಲ ದೇಶಕ್ಕಾಗಿ ಮಡಿದವರ ಸ್ಮರಣೆಯಷ್ಟೇ ಅಲ್ಲ. ದೇಶದ ಭವಿತವ್ಯದ ಕುರಿತು ಚಿಂತಿಸುವ ಮತ್ತು  ರಾಷ್ಟ್ರಕಾರ್ಯಕ್ಕಾಗಿ ಸಮರ್ಪಣೆಗೈಯುವ ಸಂದರ್ಭವೂ ಹೌದು. ಸ್ವಾಮಿ ವಿವೇಕಾನಂದರು ಹೇಳಿದಂತೆ ‘ರಾಷ್ಟ್ರಭಕ್ತಿಯೆಂದರೆ ಕೇವಲ ಭಾವನೆ ಅಥವಾ ಮಾತೃಭೂಮಿಯ ಬಗ್ಗೆ ಪ್ರೇಮದ ಮನೋಭಾವವಲ್ಲ; ಅದು ದೇಶ ಹಿತಕ್ಕಾಗಿ ದುಡಿಯುವ ಮತ್ತು ಬಡಜನರಿಗೆ ಸೇವೆ ಸಲ್ಲಿಸುವ ಉತ್ಕಟ ಅಭಿಲಾಷೆಯಾಗಿದೆ’.


ಹೀಗಿರಲಿ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ

  • ಊರಿನ ಜನರೆಲ್ಲ ಸೇರಿ ಶಾಲೆ, ಗ್ರಾಮ ಪಂಚಾಯತಿಯ ಪ್ರಾಂಗಣ ಅಥವಾ ಸಾರ್ವಜನಿಕ ಸ್ಥಳದಲ್ಲಿ ರಾಷ್ಟ್ರಧ್ವಜಾರೋಹಣೆಯನ್ನು ಆಯೋಜಿಸುವುದು. ದೇಶದ ಬಗ್ಗೆ ಚಿಂತನೆ ನಡೆಸುವುದು, ದೇಶಭಕ್ತಿ ಗೀತಗಾಯನ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ದೇಶಿಯ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುವ ಸಲುವಾಗಿ ಲಘು ಉದ್ಯಮಗಳು, ಕೃಷಿಗೆ ಸಂಬಂಧಿಸಿದ ಕಾರ್ಯಾಗಾರ, ವಸ್ತು ಪ್ರದರ್ಶನ, ತರಬೇತಿ ಮೊದಲಾದವುಗಳನ್ನು ಆಯೋಜಿಸುವುದು.
  • ನಮ್ಮ ಊರಿಗೆ ಪ್ರಯೋಜನಕ್ಕೆ ಬರುವ ಕೆಲಸಕ್ಕಾಗಿ ಒಂದು ದಿನದ ಶ್ರಮದಾನ ಮಾಡುವುದು.
  • ಗ್ರಾಮದ ಅರಣ್ಯ ಸಂರಕ್ಷಣೆಯ ಕಾರ್ಯ, ಸಸಿ ನೆಡುವುದು, ಪರಿಸರ ಸಂರಕ್ಷಣೆ, ಜಲಸಂವರ್ಧನೆಗಳ ಕುರಿತು ಜಾಗೃತಿ ಮೂಡಿಸುವುದು. ಜೊತೆಗೆ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಮ್ಮ ಜೀವನವನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡುವುದು.
  • ಸುತ್ತಲಿನ ನಾಲ್ಕು ಜನ ಮಕ್ಕಳಿಗೆ ಪಾಠ ಹೇಳಿಕೊಡುವುದು. ನಮ್ಮ ಹತ್ತಿರದಲ್ಲಿರುವ ಬಡ ಮತ್ತು ಹಿಂದುಳಿದ ವರ್ಗದ ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದು. 
  • ನಮ್ಮ ಮಕ್ಕಳನ್ನು ಸುಶಿಕ್ಷಿತರಾಗಿ ಸಂಸ್ಕಾರವಂತರಾಗಿ ಬೆಳೆಸಿ ಸಮಾಜಕ್ಕೆ ನೀಡುವುದೂ ದೇಶಭಕ್ತ ಪ್ರಜೆಗಳ ಆದ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಈ ಸಂಕಲ್ಪಕ್ಕೆ ಸಾಕ್ಷಿಯಾಗಲಿ.

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...