(ಪುಂಗವ: 01/08/2014)
ದೇಶ ಈ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಅಣಿಗೊಳ್ಳುವ ಹೊತ್ತಿಗೆ ಅನೇಕ ಒಳ್ಳೆಯ ಬೆಳವಣಿಗೆಗಳನ್ನು ಕಂಡಿದೆ. ಕಳೆದ ಮೇ ತಿಂಗಳಿನಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಬಹುತೇಕ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿದ ಮತ್ತು ಈ ಮಣ್ಣಿನೊಡನೆ ಘನಿಷ್ಠ ಸಂಬಂಧ ಹೊಂದಿದವರ ಕೈಯಲ್ಲಿ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿಸಿದೆ. ಸಾಮಾನ್ಯ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ವ್ಯಕ್ತಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿರುವುದು ದೇಶದ ಪ್ರಜಾಪ್ರಭುತ್ವದ ಗಟ್ಟಿತನವನ್ನು ಬಿಂಬಿಸುತ್ತದೆ. ಹೊಸ ಸರ್ಕಾರದ ನೀತಿಗಳು, ಕಾರ್ಯಶೈಲಿ, ಆಯವ್ಯಯ ಯೋಜನಾ ಪತ್ರ, ಗಂಗಾ ಪುನರುಜ್ಜೀವನದಂತಹ ಕಾರ್ಯಗಳನ್ನು ಕೈಗೊಂಡಿದ್ದು, ಪೂರ್ವೋತ್ತರ ರಾಜ್ಯಗಳ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಿರುವುದು, ದೇಶದ ಸಮಗ್ರ ವಿಕಾಸವನ್ನು ಕುರಿತು ಆಲೋಚಿಸುತ್ತಿರುವುದು ಮೊದಲಾದ ಒಟ್ಟೂ ಧೋರಣೆಯನ್ನು ಗಮನಿಸಿದರೆ ಶುಭದಿನಗಳು ಬರಲಿವೆಯೆಂಬ ಜನತೆಯ ಆಕಾಂಕ್ಷೆ ನಿಜವಾಗುವ ಲಕ್ಷಣಗಳು ತೋರುತ್ತಿವೆ. ಕಳೆದ ದಶಕದಲ್ಲಿ ಕುಸಿದಿದ್ದ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುತ್ತಿದ್ದು ವಿಶ್ವದ ಹೂಡಿಕೆದಾರರು, ಉದ್ಯಮಪತಿಗಳು ಭಾರತದತ್ತ ನೋಡುತ್ತಿದ್ದಾರೆ. ಹಾಗೆಯೇ ಇತ್ತೀಚಿನ ಇರಾಕಿನ ದೊಂಬಿಯಿಂದ ಭಾರತೀಯರನ್ನು ರಕ್ಷಿಸುವಲ್ಲಿ ತೋರಿದ ದಿಟ್ಟತನ, ದಕ್ಷಿಣ ಏಷ್ಯಾ ದೇಶಗಳ ಪ್ರಗತಿಯಲ್ಲಿ ಭಾರತ ತೋರುತ್ತಿರುವ ಕಾಳಜಿ, ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾರತದ ನಿಲುವು ಮುಂತಾದವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಮಥ್ರ್ಯವನ್ನು ತೆರೆದಿಟ್ಟಿವೆ. ಇಸ್ರೋದಂತಹ ವೈಜ್ಞಾನಿಕ ಸಂಸ್ಥೆಗಳ ಸಾಧನೆ, ವಿಶ್ವದೆಲ್ಲೆಡೆ ಹರಡಿರುವ ವಿವಿಧ ಸಂಸ್ಥೆಗಳಲ್ಲಿ ತಮ್ಮ ಪ್ರತಿಭೆಯಿಂದ ಉನ್ನತ ಹುದ್ದೆಗಳನ್ನು ಗಳಿಸಿರುವ ಭಾರತೀಯ ಮೂಲದ ವ್ಯಕ್ತಿಗಳ ಸಾಧನೆ, ಶಕ್ತಿಯಾಗಿ ಹೊರಹೊಮ್ಮುತ್ತಿರುವ ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ಜನಾಂಗ ಇವೆಲ್ಲ ವಿಶ್ವದ ಅಂಗಳದಲ್ಲಿ ಭಾರತದ ಗೌರವವನ್ನು ಹೆಚ್ಚಿಸಿವೆ. ಒಟ್ಟಿನಲ್ಲಿ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಒಂದು ರೀತಿಯ ಧನಾತ್ಮಕ ವಾತಾವರಣ ನೆಲೆಗೊಂಡಿದೆ.
ಆದರೆ ಇವೆಲ್ಲದರ ನಡುವೆ, ಸಾವಿರ ವರ್ಷಗಳ ಪರಕೀಯ ಆಳ್ವಿಕೆಯಿಂದ ಮುಕ್ತಗೊಂಡು 67 ವರ್ಷಗಳು ಕಳೆದರೂ ದೇಶದ ಜನಸಂಖ್ಯೆ ಬಹುದೊಡ್ಡ ಭಾಗ ಬಡತನ, ಅನಕ್ಷರತೆ ಮತ್ತು ಮೌಢ್ಯದಲ್ಲೇ ಬದುಕುತ್ತಿದೆ. ಆರ್ಥಿಕ ಅಭಿವೃದ್ಧಿಯ ಜೊತೆಗೆ ಅಸಮಾನತೆಯೂ ಬೆಳೆದಿದೆ. ವೇಗವಾಗಿ ಬೆಳೆಯುತ್ತಿರುವ ವ್ಯಾಪಾರ ವಹಿವಾಟುಗಳ ಸ್ಪರ್ಧೆಯ ನಡುವೆ ಮನುಷ್ಯ ಸಂಬಂಧಗಳು, ಕುಟುಂಬ ವ್ಯವಸ್ಥೆ, ಸಮುದಾಯ ಜೀವನ ಬಡವಾಗುತ್ತಿವೆ. ವ್ಯಕ್ತಿಗತ ಸ್ವಾರ್ಥಲೋಲುಪತೆಗಳು ಹಾಗೂ ಭ್ರಷ್ಟಾಚಾರ ವ್ಯಾಪಕವಾಗಿರುವಂತೆ ಕರ್ತವ್ಯ ಪರಾಯಣತೆಯನ್ನು ಅನುಸರಿಸುವ ಮತ್ತು ಸಾರ್ವಜನಿಕ ಜೀವನದಲ್ಲಿ ಶುದ್ಧಿಯನ್ನು ಕಾಪಾಡಿಕೊಳ್ಳುವವರ ಸಂಖ್ಯೆಯೂ ಕುಸಿಯುತ್ತಿದೆ. ಮಾತೃಗೌವರವದ ಪಾಠವನ್ನು ಪ್ರಪಂಚಕ್ಕೆ ಕಲಿಸಿದ ನೆಲದಲ್ಲಿ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಅತ್ಯಾಚಾರಗಳು ದಿಗಿಲೆಬ್ಬಿಸುವಷ್ಟು ನಡೆಯುತ್ತಿವೆ. ದೇಶದ ಭವಿಷ್ಯವನ್ನು ತಯಾರು ಮಾಡಬೇಕಿದ್ದ ಶಿಕ್ಷಣ ವ್ಯವಸ್ಥೆಯಲ್ಲಿ ಆಶಿಸ್ತು ಅಸಮರ್ಪಕತೆಗಳ ಜೊತೆಗೆ ವ್ಯಾಪಾರೀಕರಣವೂ ವರ್ಧಿಸುತ್ತಿದೆ.
ಇವುಗಳಿಗೆಲ್ಲ ಕಾರಣ ನಮ್ಮಲ್ಲಿ ರಾಷ್ಟ್ರಭಕ್ತಿ ದೇಶಪ್ರೇಮದ ಕೊರತೆಯಿರುವುದು ಸುಸ್ಪಷ್ಟವಾಗಿ ಗೋಚರವಾಗುತ್ತದೆ. ಪರಕೀಯ ಆಡಳಿತ ಕೊನೆಗೊಂಡು ಏಳನೇ ದಶಕ ನಡೆಯುತ್ತಿದ್ದರೂ ಸಾಮಾನ್ಯ ಜನಮಾನಸದಲ್ಲಿ ರಾಷ್ಟ್ರೀಯತೆ ಮತ್ತು ದೇಶಹಿತಕ್ಕಾಗಿ ಬದುಕುವ ಮನೋಭಾವವನ್ನು ಬೆಳಸುವಲ್ಲಿ ನಾವು ವಿಫಲರಾಗಿದ್ದೇವೆಯೇ? ಎನ್ನುವ ಸಂದೇಹ ಬಾರದಿರದು. ಏಕೆಂದರೆ, ದೇಶಪ್ರೇಮವಿರುವ ಓರ್ವ ಸರ್ಕಾರಿ ಅಧಿಕಾರಿ ಎಂದೂ ಭ್ರಷ್ಟನಾಗಲಾರ, ರಾಷ್ಟ್ರಕಾರ್ಯದಲ್ಲಿ ಪಾಲುದಾರನೆಂದು ಭಾವಿಸುವ ಯಾವ ಕಾಂಟ್ರಾಕ್ಟ್ ಉದ್ಯಮಿಯು ಕಳಪೆ ಕಾಮಗಾರಿಯನ್ನು ಮಾಡಲಾರ. ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಹೊತ್ತಿರುವೆನೆಂಬ ಭಾವನೆಯುಳ್ಳ ಯಾವ ಶಿಕ್ಷಕನೂ ವಿದ್ಯಾದಾನವನ್ನು ವ್ಯಾಪಾರ ಮಾಡಲಾರ. ದೇಶಕ್ಕೆ ಅನ್ನಕೊಡುವ ಜವಾಬ್ದಾರಿ ಹೊತ್ತಿರುವ ರೈತನೆಂದೂ ಭೂಮಿಗೆ ವಿಷ ಉಣಿಸಲಾರ. ಯಾವ ದೇಶಪ್ರೇಮಿ ನಾಗರಿಕನೂ ಪರಿಸರವನ್ನು ಕೆಡಿಸಲಾರ. ಓರ್ವ ರಾಷ್ಟ್ರಭಕ್ತ ವಿದ್ಯಾರ್ಥಿ ಶ್ರದ್ಧೆಯಿಂದ ಅಧ್ಯಯನ ಮಾಡುವನೇ ಹೊರತು ಸುಖಲೋಲುಪತೆಯ ಹಿಂದೆ ಬೀಳಲಾರ. ರಾಷ್ಟ್ರಪ್ರೇಮಿಯಾದ ಓರ್ವ ರಾಜಕಾರಣಿಯು ಸ್ವಾರ್ಥವನ್ನು ದೇಶಕ್ಕಿಂತ ಮಿಗಲಾಗಿ ಭಾವಿಸಲಾರ.
ದೇಶದಲ್ಲಿ ರಾಜಕೀಯ ಪರಿವರ್ತನೆಯಾಗಿ ಸಮರ್ಥ ಜನಪ್ರಿಯ ಸರ್ಕಾರ ಅಧಿಕಾರಕ್ಕೆ ಬಂದರೂ ಸುದೃಢ ಭಾರತದ ನಿರ್ಮಾಣ ಸಾಧ್ಯವಾಗುವಲ್ಲಿ ಪ್ರಜೆಗಳ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ದೇಶಭಕ್ತ ನಾಗರಿಕರೇ ಒಂದು ರಾಷ್ಟ್ರದ ನಿಜವಾದ ಸಂಪತ್ತು. ಆದ್ದರಿಂದ ಜನಸಮುದಾಯದಲ್ಲಿ ರಾಷ್ಟಭಕ್ತಿಯನ್ನು ಜಾಗೃತಗೊಳಿಸುವ ಪರ್ವವಾಗಿ ಸ್ವಾತಂತ್ರ್ಯ ದಿನ ಆಚರಣೆಗೊಳ್ಳಬೇಕು. ಸ್ವಾತಂತ್ರ್ಯೋತ್ಸವದ ಆಚರಣೆ ರಾಷ್ಟ್ರೀಯತೆಯ ಸೂತ್ರದಲ್ಲಿ ಪ್ರಜೆಗಳನ್ನೆಲ್ಲ ಒಂದುಗೂಡಿಸಿ ದೇಶದ ಹಿತಕ್ಕಾಗಿ ಬದುಕಬೇಕು ಎನ್ನುವ ಭಾವವನ್ನು ಬೆಳೆಸುವಂತಾಗಬೇಕು. ರಾಷ್ಟ್ರೀಯ ಹಬ್ಬಗಳು ಕೇವಲ ದೇಶಕ್ಕಾಗಿ ಮಡಿದವರ ಸ್ಮರಣೆಯಷ್ಟೇ ಅಲ್ಲ. ದೇಶದ ಭವಿತವ್ಯದ ಕುರಿತು ಚಿಂತಿಸುವ ಮತ್ತು ರಾಷ್ಟ್ರಕಾರ್ಯಕ್ಕಾಗಿ ಸಮರ್ಪಣೆಗೈಯುವ ಸಂದರ್ಭವೂ ಹೌದು. ಸ್ವಾಮಿ ವಿವೇಕಾನಂದರು ಹೇಳಿದಂತೆ ‘ರಾಷ್ಟ್ರಭಕ್ತಿಯೆಂದರೆ ಕೇವಲ ಭಾವನೆ ಅಥವಾ ಮಾತೃಭೂಮಿಯ ಬಗ್ಗೆ ಪ್ರೇಮದ ಮನೋಭಾವವಲ್ಲ; ಅದು ದೇಶ ಹಿತಕ್ಕಾಗಿ ದುಡಿಯುವ ಮತ್ತು ಬಡಜನರಿಗೆ ಸೇವೆ ಸಲ್ಲಿಸುವ ಉತ್ಕಟ ಅಭಿಲಾಷೆಯಾಗಿದೆ’.
ಹೀಗಿರಲಿ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ
- ಊರಿನ ಜನರೆಲ್ಲ ಸೇರಿ ಶಾಲೆ, ಗ್ರಾಮ ಪಂಚಾಯತಿಯ ಪ್ರಾಂಗಣ ಅಥವಾ ಸಾರ್ವಜನಿಕ ಸ್ಥಳದಲ್ಲಿ ರಾಷ್ಟ್ರಧ್ವಜಾರೋಹಣೆಯನ್ನು ಆಯೋಜಿಸುವುದು. ದೇಶದ ಬಗ್ಗೆ ಚಿಂತನೆ ನಡೆಸುವುದು, ದೇಶಭಕ್ತಿ ಗೀತಗಾಯನ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು.
- ದೇಶಿಯ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುವ ಸಲುವಾಗಿ ಲಘು ಉದ್ಯಮಗಳು, ಕೃಷಿಗೆ ಸಂಬಂಧಿಸಿದ ಕಾರ್ಯಾಗಾರ, ವಸ್ತು ಪ್ರದರ್ಶನ, ತರಬೇತಿ ಮೊದಲಾದವುಗಳನ್ನು ಆಯೋಜಿಸುವುದು.
- ನಮ್ಮ ಊರಿಗೆ ಪ್ರಯೋಜನಕ್ಕೆ ಬರುವ ಕೆಲಸಕ್ಕಾಗಿ ಒಂದು ದಿನದ ಶ್ರಮದಾನ ಮಾಡುವುದು.
- ಗ್ರಾಮದ ಅರಣ್ಯ ಸಂರಕ್ಷಣೆಯ ಕಾರ್ಯ, ಸಸಿ ನೆಡುವುದು, ಪರಿಸರ ಸಂರಕ್ಷಣೆ, ಜಲಸಂವರ್ಧನೆಗಳ ಕುರಿತು ಜಾಗೃತಿ ಮೂಡಿಸುವುದು. ಜೊತೆಗೆ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಮ್ಮ ಜೀವನವನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡುವುದು.
- ಸುತ್ತಲಿನ ನಾಲ್ಕು ಜನ ಮಕ್ಕಳಿಗೆ ಪಾಠ ಹೇಳಿಕೊಡುವುದು. ನಮ್ಮ ಹತ್ತಿರದಲ್ಲಿರುವ ಬಡ ಮತ್ತು ಹಿಂದುಳಿದ ವರ್ಗದ ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದು.
- ನಮ್ಮ ಮಕ್ಕಳನ್ನು ಸುಶಿಕ್ಷಿತರಾಗಿ ಸಂಸ್ಕಾರವಂತರಾಗಿ ಬೆಳೆಸಿ ಸಮಾಜಕ್ಕೆ ನೀಡುವುದೂ ದೇಶಭಕ್ತ ಪ್ರಜೆಗಳ ಆದ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಈ ಸಂಕಲ್ಪಕ್ಕೆ ಸಾಕ್ಷಿಯಾಗಲಿ.
No comments:
Post a Comment