Friday, January 23, 2026

ಹಿಂದೂ ಹೃದಯ ಸಾಮ್ರಾಟನಾದ ಮರಾಠಿ ಮಾಣೂಸ್‌

 (ವಿಕ್ರಮ - 25 ಜನವರಿ 2026)

ಸುದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿ ನಿರಂತರ ಸಕ್ರಿಯರಾಗಿದ್ದು, ಜೊತೆಗೆ ಪ್ರಸ್ತುತರೂ ಆಗಿದ್ದು ತಮ್ಮ ಬದುಕಿನ ನಂತರವೂ ಪ್ರಭಾವಿಯಾಗಿರುವ ವ್ಯಕ್ತಿಗಳು ವಿರಳ. ಭಾರತ ಕಂಡ ಅಂತಹ ಓರ್ವ ವಿಶಿಷ್ಟ ನೇತಾರ ಬಾಳಾ ಠಾಕ್ರೆ. ಪುಣೆಯ ಸಾಮಾನ್ಯ ಮರಾಠಿ ಕುಟುಂಬದಲ್ಲಿ ಜನಿಸಿದ ಬಾಳ ಕೇಶವ ಠಾಕ್ರೆ (ಜನನ 23 ಜನವರಿ 1926) ವಾಜಪೇಯಿ, ಆಡ್ವಾಣಿ ಮೊದಲಾದವರ ಸಮಕಾಲೀನರಾಗಿ ಯಾವ ಸಾಂವಿಧಾನಿಕ ಹುದ್ದೆಗೂ ಏರದೇ, ಒಂದೇ ಒಂದು ಚುನಾವಣೆಯಲ್ಲಿಯೂ ಸ್ವಯಂ ಸ್ಪರ್ಧೆ ಮಾಡದೇ, ಬದಲಾಗಿ ಶಿಸ್ತುಕ್ರಮದ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೂ ಮತದಾನ ಮಾಡುವ ಅಧಿಕಾರಿದಿಂದಲೂ ನಿಷೇಧಕ್ಕೊಳಪಟ್ಟರೂ (1999ರಲ್ಲಿ 6 ವರ್ಷಗಳ ಕಾಲ) ರಾಷ್ಟ್ರದ ಅದರಲ್ಲೂ ವಿಷೇಶವಾಗಿ ಮಹಾರಾಷ್ಟ್ರದ ರಾಜಕೀಯದಲ್ಲಿ ಅಚ್ಚಳಿಯದ ಪ್ರಭಾವವನ್ನು ಬೀರಿದ್ದು ಅದ್ವಿತೀಯವಾದುದು. ‘ಸಿಂಹ ಎಂದೂ ಚುನಾವಣೆಗೆ  ನಿಲ್ಲುವುದಿಲ್ಲ, ಅದು ತನ್ನ ತಾಕತ್ತಿನಿಂದ ಆಳುತ್ತದೆ’ ಇದು ಶಿವಾಜಿ ಮಹಾರಾಜರ ಧ್ವಜವನ್ನು ಕೈಯಲ್ಲೆತ್ತಿ ಹಿಡಿದ ಬಾಳಾಸಾಹೇಬರ ವಾದ.

ಕುಂಚದಿಂದ ಆರಂಭವಾದ ಕ್ರಾಂತಿ

ಬಾಳಾ ಠಾಕ್ರೆ ಅಂದರೆ ಸಾಮಾನ್ಯವಾಗಿ ಕಣ್ಣ ಮುಂದೆ ಬರುವುದು ಒಬ್ಬ ಖಡಕ್‌ ನಾಯಕನ ರೂಪ, ಆದರೆ ಅವರೊಳಗೆ ನವಿರಾದ ರೇಖೆಗಳು ಮತ್ತು ತಿಳಿಹಾಸ್ಯದ ಮೂಲಕ ಚುರುಕು ಸಂದೇಶ ಮುಟ್ಟಿಸಬಲ್ಲ ವ್ಯಂಗಚಿತ್ರಕಾರನಿದ್ದ ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಅವರ ಸಾರ್ವಜನಿಕ ಚಟುವಟಿಕೆ ಆರಂಭವಾಗಿದ್ದು ರಾಜಕೀಯ ವ್ಯಂಗಚಿತ್ರಕಾರನಾಗಿ, ಪತ್ರಕರ್ತನಾಗಿ. ಆರಂಭದಲ್ಲಿ ಮುಂಬೈನ (ಅಂದಿನ ಬಾಂಬೆ) ದ ಫ್ರೀ ಪ್ರೆಸ್‌ ಜರ್ನಲ್‌ನಲ್ಲಿ ಪ್ರಕಟವಾಗುತ್ತಿದ್ದ ಅವರ ವ್ಯಂಗ್ಯಚಿತ್ರಗಳು ತೀಕ್ಷ್ಣ ರಾಜಕೀಯ ವಿಡಂಬನೆಗಳಿಂದ ಗಮನ ಸೆಳೆದವು. ಟೈಮ್ಸ್‌ ಆಫ್‌ ಇಂಡಿಯಾದ ಭಾನುವಾರದ ಆವೃತ್ತಿಗಳಲ್ಲಿಯೂ ಅವರ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತಿದ್ದವು. ಖ್ಯಾತ ವ್ಯಂಗ್ಯಚಿತ್ರಕಾರ ಆರ್‌ ಕೆ ಲಕ್ಷ್ಮಣರಿಗೆ ಅವರು ಸಹೋದ್ಯೋಗಿಯಾಗಿದ್ದರು. ನಂತರ ಕೆಲವು ಕಾಲ ನ್ಯೂಸ್‌ ಡೇಲಿ ಎನ್ನುವ ದಿನಪತ್ರಿಯಕೆನ್ನು ಅಲ್ಪಕಾಲ ನಡೆಸಿದರು. 1960ರಲ್ಲಿ ಸಹೋದರ ಶ್ರೀಕಾಂತ ಠಾಕ್ರೆ ಜೊತೆಗೆ ಸೇರಿ ಮಾರ್ಮಿಕ್‌ ಹೆಸರಿನ ಮರಾಠಿ ವಾರಪತ್ರಿಕೆಯನ್ನು ಆರಂಭಿಸಿದರು. ನಂತರದ ದಶಕದಲ್ಲಿ ಅವರು ಸ್ಥಾಪಿಸಿದ ದಿನಪತ್ರಿಕೆ ‘ಸಾಮ್ನಾ’ ಶಿವಸೇನೆ ಪಕ್ಷದ ಮುಖವಾಣಿಯಾಗಿದೆ.

ಈ ಎಲ್ಲ ಕಾರ್ಯಗಳ ಹಿಂದೆ ತನ್ನ ತಂದೆಯ ಗಾಢವಾದ ಪ್ರಭಾವ ಇರುವುದನ್ನು ಅವರೇ ಹೇಳಿಕೊಂಡಿದ್ದಾರೆ ಪ್ರಭೊದನಕರ್‌ ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದ ಬಾಳ ಠಾಕ್ರೆಯವರ ತಂದೆ ಕೇಶವ ಠಾಕ್ರೆ ಪತ್ರಕರ್ತರಾಗಿ ದುಡಿದವರು, ಮರಾಠಿ ಭಾಷಿಕ ಪ್ರದೇಶಗಳ ಏಕೀಕರಣಕ್ಕಾಗಿ ಶ್ರಮಿಸಿದ ಸಂಯುಕ್ತ ಮಹಾರಾಷ್ಟ್ರ ಆಂದೋಲನ ಅಗ್ರಗಣ್ಯ ನೇತಾರರಾಗಿದ್ದರು.

 ಪ್ರಾದೇಶಿಕವಾದಿ ಮರಾಠಿ ಮಾಣೂಸ್‌

ಇಂದೂ ಕೇಳಿಬರುವ ಲುಂಗಿ-ಪುಂಗಿ, ಬಿಹಾರಿ ವಲಸಿಗರ ವಿರೋಧದ ಸ್ಲೋಗನ್ನುಗಳ ಮೂಲವನ್ನು 1960ರ ದಶಕದ ಮರಾಠಿ ಪ್ರಾದೇಶಿಕವಾದದ ಆಂದೋಲನಗಳಲ್ಲಿ ಹುಡುಕಬಹುದು. ಠಾಕ್ರೆ ಸಹೋದರರು ಆರಂಭಿಸಿದ ಮಾರ್ಮಿಕ್‌ ಪತ್ರಿಕೆ ಪ್ರಮುಖವಾಗಿ ಮುಂಬೈನ ಮರಾಠಿ ಭಾಷಿಕರ ಸಮಸ್ಯೆಗಳನ್ನು ಎತ್ತಿಕೊಂಡಿತು. ನಿರುದ್ಯೋಗ ಮೊದಲಾದುವುಗಳಿಗೆ ಮದರಾಸಿಗಳು, ಗುಜರಾತಿಗಳ ವಲಸೆ ಬರುವುದೇ ಕಾರಣ ಎಂದು ವ್ಯಾಖ್ಯಾನಿಸಿತು. ಮರಾಠಿ ಭಾಷಿಕರ ಹಿತ ಕಾಯುವ ಸಲುವಾಗಿ ಶಿವಸೇನೆ ಎನ್ನುವ ರಾಜಕೀಯ ವೇದಿಕೆಯ ಹುಟ್ಟು ಇಲ್ಲಿಂದ ಆರಂಭವಾಯಿತು. "ಮರಾಠಿ ಮಾಣೂಸ್" (ಮರಾಠಿ ಮನುಷ್ಯ) ಎಂಬ ಘೋಷಣೆಯೊಂದಿಗೆ ಆರಂಭವಾದ ಈ ಚಳುವಳಿ, ಕೇವಲ ಭಾಷಾ ಪ್ರೇಮವಲ್ಲದೆ, ಅದು ಸ್ಥಳೀಯರ ಆತ್ಮಗೌರವದ ಸಂಕೇತವಾಗಿತ್ತು. 60 ಮತ್ತು 70ರ ದಶಕಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರ ಬೆಂಬಲ ಇದಕ್ಕೆ ದೊರಕಿತು. ಬೀದಿ ಹೋರಾಟ, ಪ್ರತಿಭಟನೆಗಳಿಂದ ಆರಂಭವಾಗಿ ಮುಂಬೈನಾದ್ಯಂತ ಶಿವಸೇನೆ ತನ್ನ ಶಾಖೆಗಳನ್ನು ಸ್ಥಾಪಿಸಿತು. ಠಾಕ್ರೆಯವರ ನೇತೃತ್ವದಲ್ಲಿ ಶಿವಸೇನೆ ಒಂದು ತೋಳ್ಬಲವುಳ್ಳ ಹಾಗೂ ಶಿಸ್ತಿನ ಕೇಡರ್‌ ಉಳ್ಳ ಪಕ್ಷವಾಗಿ ಹೊರಹೊಮ್ಮಿತು.  ಕಾರ್ಮಿಕರ ತಕರಾರು, ಸ್ಥಳೀಯ ಕುಂದುಕೊರತೆಗಳನ್ನು ಪರಿಹರಿಸುವ ಮಧ್ಯಸ್ಥಗಾರನಂತೆ ಪ್ರಭಾವವನ್ನು ಬೆಳೆಸಿಕೊಂಡಿತು. ಪರಿಣಾಮ ಮುಂಬೈನಲ್ಲಿ ಎಡಪಂಥೀಯ ಕಾರ್ಮಿಕ ಯೂನಿಯನ್‌ಗಳನ್ನು ಹಿಂದಿಕ್ಕಿ ಕಾಂಗ್ರೆಸ್‌ನೊಂದಿಗೆ ನೇರ ಪೈಪೋಟಿಗಿಳಿಯಬಲ್ಲ ಸಮರ್ಥ ಪ್ರತಿಸ್ಪರ್ಧಿಯಾಗಿ ಬೆಳೆಯಿತು.

ಪ್ರಖರ ಹಿಂದೂ ರಾಷ್ಟ್ರವಾದಿ

ಠಾಕ್ರೆ ಅವರ ಜೀವನದ ಅತ್ಯಂತ ಮಹತ್ವದ ತಿರುವು ಎಂದರೆ ಅದು ಪ್ರಾದೇಶಿಕವಾದದಿಂದ ಪ್ರಖರ ಹಿಂದುತ್ವದತ್ತ ಅವರು ವಾಲಿದ್ದು. 1980ರ ದಶಕದ ವೇಳೆಗೆ ಭಾರತದ ರಾಜಕಾರಣದಲ್ಲಿ ಓಲೈಕೆಯ ರಾಜಕಾರಣ ತಾರಕಕ್ಕೇರಿತ್ತು. "ಗರ್ವ ಸೇ ಕಹೋ ಹಮ್ ಹಿಂದೂ ಹೈ" ಎಂಬ ಘೋಷಣೆಯನ್ನು ಅವರು ಪ್ರತಿಧ್ವನಿಸಿದಾಗ, ಅದು ದೇಶಾದ್ಯಂತ ಹೊಸ ಸಂಚಲನ ಮೂಡಿಸಿತು. ಭಾಷೆಯ ಗಡಿಯನ್ನು ಮೀರಿ ಧರ್ಮ ಮತ್ತು ರಾಷ್ಟ್ರದ ಹಿತಾಸಕ್ತಿ ಮುಖ್ಯ ಎಂಬ ನಿಲುವನ್ನು ಅವರು ತಳೆದರು. 1987ರ ವಿಲೆ ಪಾರ್ಲೆ ವಿಧಾನಸಭಾ ಉಪಚುನಾವಣೆಯಲ್ಲಿ ಶಿವಸೇನೆಯು ಮೊದಲ ಬಾರಿಗೆ "ಹಿಂದುತ್ವ"ದ ಘೋಷಣೆಯ ಮೇಲೆ ಸ್ಪರ್ಧಿಸಿ ಗೆದ್ದಾಗ, ಭಾರತೀಯ ರಾಜಕಾರಣದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಯಿತು. ಅವರು ಕೇವಲ ಮಹಾರಾಷ್ಟ್ರದ ನಾಯಕರಾಗಿ ಉಳಿಯದೆ, ಇಡೀ ಭಾರತದ ಹಿಂದೂಗಳ ಧ್ವನಿಯಾಗಿ ರೂಪುಗೊಂಡರು.

1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ನಂತರ ಉಂಟಾದ ಅನಿಶ್ಚಿತತೆಯ ನಡುವೆ, "ಅದನ್ನು ಕೆಡವಿದವರು ನನ್ನ ಶಿವಸೈನಿಕರಾಗಿದ್ದರೆ, ಅದಕ್ಕಾಗಿ ನಾನು ಹೆಮ್ಮೆಪಡುತ್ತೇನೆ" ಎಂದು ಬಹಿರಂಗವಾಗಿ ಘೋಷಿಸಿದ ಏಕೈಕ ನಾಯಕ ಠಾಕ್ರೆ. ಅವರ ಈ ನಿರ್ಭೀತ ನಿಲುವು ಅವರನ್ನು ಹಿಂದೂಗಳ ಅಪ್ರತಿಮ ನಾಯಕನನ್ನಾಗಿ ಮಾಡಿತು. ಮುಂಬೈ ಗಲಭೆಯ ಸಮಯದಲ್ಲಿ ಹಿಂದೂಗಳ ರಕ್ಷಣೆಗೆ ಅವರು ನಿಂತರು. ಕಾಶ್ಮೀರದ ಹಿಂದೂಗಳು ಮುಸ್ಲಿಂ ಮೂಲಭೂತಾದಿಗಳ ಹಿಂಸೆಗೆ ಬಲಿಯಾಗಿ ಪಲಾಯನ ಮಾಡಬೇಕಾಗಿ ಬಂದಾಗಿ ಅವರ ಪರವಾಗಿ ಧ್ವನಿ ಎತ್ತಿದವರಲ್ಲಿ ಮೊದಲಿಗರು ಬಾಳಾ ಠಾಕ್ರೆ. ಅಮರನಾಥ ಯಾತ್ರೆಯ ಮೇಲೆ ಮುಸ್ಲಿಂ ಉಗ್ರರ ಕರಾಳ ಛಾಯೆ ಬಿದ್ದು ಕೇಂದ್ರ ಸರ್ಕಾರವೂ ಅಸಹಾಯಕತೆಯನ್ನು ಪ್ರದರ್ಶಿಸಿದಾಗ ‘ಹಿಂದೂಗಳು ಅಮರನಾಥ ಯಾತ್ರೆ ಕೈಗೊಳ್ಳುವುದು ಸಾಧ್ಯವಿಲ್ಲ ಎಂತಾದರೆ ಮುಂಬೈನಿಂದ ಹಜ್‌ಗೆ ಒಂದೂ ವಿಮಾನ ಹಾರುವುದಿಲ್ಲ’ ಎಂದು ಗುಡುಗಿದವರು ಬಾಳಾ ಠಾಕ್ರೆ.

 ರಾಜಕೀಯ ಪ್ರಭಾವ

          90ರ ದಶಕದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿದ ಶಿವಸೇನೆ 1995ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿತು. ರಾಷ್ಟ್ರಮಟ್ಟದಲ್ಲಿಯೂ ಸಹ ಬಿಜೆಪಿಯ ಪ್ರಮುಖ ಮಿತ್ರಪಕ್ಷವಾಗಿ ಶಿವಸೇನೆ ವಾಜಪೇಯಿ ಸರ್ಕಾರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿತು. ಬಾಳಾ ಠಾಕ್ರೆಯವರ ರಾಜಕೀಯ ಮತ್ತು ಶಿವಸೇನೆ ಒಂದು ಮರಾಠಿ ಹಿತಾಸಕ್ತಿಯನ್ನು ಕಾಯುವ ಪ್ರಾದೇಶಿಕ ಭಾವನೆಗಳಿಂದ ಆರಂಭಗೊಂಡರು ಅದರ ಸಿದ್ಧಾಂತ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ವಿರುದ್ಧ, ಹಿಂದುತ್ವ ಮತ್ತು ರಾಷ್ಟ್ರೀಯವಾದದ ಪರವಾಗಿ ವಿಕಾಸಗೊಂಡಿತು. ಇಂದು ಮಹಾರಾಷ್ಟ್ರ ಮತ್ತು ಭಾರತದ ರಾಜಕಾರಣದಲ್ಲಿ ಹಿಂದುತ್ವದ ಮಾತುಗಳು ಕೇಳಿಬರುತ್ತಿದ್ದರೆ, ಅದಕ್ಕೆ ಅಡಿಪಾಯ ಹಾಕಿದವರಲ್ಲಿ ಠಾಕ್ರೆ ಪ್ರಮುಖರು. ಹಾಗೆಯೇ ಪ್ರಾದೇಶಿಕ ಶಕ್ತಿಯನ್ನು ರಾಷ್ಟ್ರೀಯ ಆಶಯದೊಂದಿಗೆ ಹೇಗೆ ಜೋಡಿಸಬಹುದು ಎಂಬುದಕ್ಕೆ ಶಿವಸೇನೆ ಮತ್ತು ಬಿಜೆಪಿಯ ಸುದೀರ್ಘ ಮೈತ್ರಿಯೂ ಒಂದು ಉದಾಹರಣೆ. ಮತ್ತು ಹಿಂದೂ ಹಿತಾಸಕ್ತಿಯ ಧ್ವನಿ ಕ್ಷೀಣವಾಗಿದ್ದ ಸಮಯದಲ್ಲಿ ಸಾರ್ವಜನಿಕವಾಗಿ, ರಾಜಕೀಯ ವೇದಿಕೆಯಲ್ಲಿ ಹಿಂದುತ್ವದ ಪರವಾಗಿ ನಿಂತು, ಹಿಂದುತ್ವಕ್ಕೆ ರಾಜಕೀಯ ಶಕ್ತಿಯನ್ನು ತುಂಬಿದ ಮುಂಚೂಣಿ ನಾಯಕ ಬಾಳಾ ಠಾಕ್ರೆ.

          ಅವರು ರಾಜಕೀಯ ಜೀವನದಲ್ಲಿ ಎಂದು ಚುನಾವಣೆಗೆ ನಿಂತು ಗೆಲ್ಲಲಿಲ್ಲ, ಹಾಗೂ ಯಾವುದೇ ಸಾಂವಿಧಾನಿಕ ಹುದ್ದೆಗೆ ಏರಲಿಲ್ಲ. 1995ರಲ್ಲಿ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಾಗ ಮನೋಹರ ಜೋಶಿ ಮುಖ್ಯಮಂತ್ರಿಯಾದರು. ಆದರೂ ಸರ್ಕಾರದ ನಿಯಂತ್ರಣ ಸಂಪೂರ್ಣ ನಿಯಂತ್ರಣವಿದ್ದಿದ್ದು ಠಾಕ್ರೆಯವರ ನಿವಾಸ ‘ಮಾತೋಶ್ರೀ’ಯಲ್ಲಿ. ನಂತರದ ದಶಕಗಳಲ್ಲಿ, ಇತ್ತೀಚೆಗೆ ಅವರ ಮರಣದ ನಂತರವೂ ಶಿವಸೇನೆ ಅನೇಕ ಗುಂಪುಗಳು-ಹೋಳುಗಳಾದರೂ ಪಕ್ಷದಲ್ಲಿ ಇಂದಿಗೂ ಬಾಳಾ ಠಾಕ್ರೆಯವರ ಸ್ಥಾನ-ಅಧಿಕಾರ-ಪ್ರಭಾವ ಪ್ರಶ್ನಾತೀತವಾಗಿ ಉಳಿಯಿತು.

---------------------------------------------------------------------------------------------

ಸ್ವಾರಸ್ಯಕರ ಸಂಗತಿಗಳು

ಅವರಿಗೆ ರಾಜಕೀಯದೊಂದಿಗೆ ಕಲೆ, ಕ್ರೀಡೆ ಮತ್ತು ಸಾಹಿತ್ಯಗಳ ಬಗ್ಗೆಯೂ ಅಪಾರ ಆಸಕ್ತಿಯಿತ್ತು. ವಿಶೇಷವಾಗಿ ಸಿನಿಮಾ ಕ್ಷೇತ್ರದಲ್ಲಿಯೂ ಅವರಿಗೆ ಆಸಕ್ತಿಯಿತ್ತು, ಬಾಲಿವುಡ್ಡಿನ ಅನೇಕ ಜನಪ್ರಿಯರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಹಾಗೆಯೇ ಸಿನಿಮಾ ಕಾಸ್ಟಿಂಗ್‌, ಪ್ರಚಾರ, ಮಾರ್ಕೆಟಿಂಗ್‌ಗಳಲ್ಲಿಯೂ ಪ್ರಭಾವ ಬೀರಬಲ್ಲವರಾಗಿದ್ದರು. ಭಾರತೀಯ ಸಂಸ್ಕೃತಿ ಕಲೆಗಳ ಬಗ್ಗೆ ಆದರವಿದ್ದಂತೆಯೇ, ವಿಶ್ವಪ್ರಸಿದ್ಧ ಪಾಪ್‌ ಗಾಯಕ ಮೈಕಲ್‌ ಜಾಕ್ಸನ್‌ಗೆ ಆತಿಥ್ಯ ನೀಡಿ ಮುಂಬೈನಲ್ಲಿ ಆತನ ಕಾರ್ಯಕ್ರಮ ಆಯೋಜಿಸುವ, ಆತನ ಸಂಗೀತವನ್ನು ಆಸ್ವಾದಿಸುವ ರಸಿಕತೆಯೂ ಅವರಲ್ಲಿತ್ತು.

ಬಾಳಾ ಠಾಕ್ರೆ ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಅವರು ಯಾವತ್ತೂ ರಾಜಿ ಮಾಡಿಕೊಂಡವರಲ್ಲ. ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಭಾರತವಿರೋಧಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದನ್ನು ಅವರು ಕಡುವಾಗಿ ವಿರೋಧಿಸಿದರು. ಶಿವಸೇನೆಯ ಕಾರ್ಯಕರ್ತತು 1991ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸಕ್ಕೆ ಬಂದಾಗ ಮುಂಬೈನ ವಾಂಖೆಡೆ ಸ್ಟೇಡಿಯಮ್‌ನ ಪಿಚ್‌ ಅಗೆದು ಪಂದ್ಯ ನಿಲ್ಲಿಸಲು ಮುಂದಾದರು. ಮುಂದೆ 1999ರಲ್ಲಿ ದೆಹಲಿಯಲ್ಲೂ ಇದೇ ರೀತಿ ಪ್ರತಿಭಟಿಸಿದರು. ಹೀಗಿದ್ದೂ ಪಾಕಿಸ್ತಾನಿ ಕ್ರಿಕೆಟಿಗ ಜಾವೆದ್‌ ಮಿಯಾಂದಾದನನ್ನು ತಮ್ಮ ಮನೆಗೆ ಆಹ್ವಾನಿಸಿ ಆತನ ಬ್ಯಾಟಿಂಗ್‌ ಕೌಶಲ್ಯವನ್ನು ಪ್ರಶಂಸಿಸುವ ಕ್ರೀಡಾ ಸ್ಪೂರ್ತಿಯನ್ನೂ ಹೊಂದಿದ್ದರು.

ಅವರ ಚುರುಕು ಮುಟ್ಟಿಸುವ ವ್ಯಂಗ್ಯಚಿತ್ರಗಳಂತೆ ಭಾಷಣಗಳಲ್ಲೂ ವಿಡಂಬನೆ, ತಮಾಷೆ, ಕೆಲವೊಮ್ಮೆ ವಿವಾದ ಹುಟ್ಟಿಸುವ ಮಾತುಗಳು ಹೇರಳವಾಗಿರುತ್ತಿದ್ದವು. ಸಭೆಗಳಲ್ಲಿ ಸಾವಿರಾರು ಜನರನ್ನು ತಮ್ಮ ಮಾತಿನಿಂದ ಮಂತ್ರಮುಗ್ಧಗೊಳಿಸಬಲ್ಲ ಪ್ರಭಾವಿ ವಾಗ್ಮಿಯೂ ಆಗಿದ್ದರು. ಅವರು ಮರಾಠಿಯನ್ನು ಸಹಜ ಬಲದಿಂದ ಮಾತನಾಡುತ್ತಿದ್ದರೂ, ಭಾರತೀಯ ಮಹಾಕಾವ್ಯಗಳು, ಹಿಂದೂ ಪುರಾಣ ಕಥೆಗಳಿಂದ ಹಿಡಿದು ಮತ್ತು ಪಾಪ್ ಸಂಸ್ಕೃತಿಯನ್ನೂ ಅಷ್ಟೇ ಸಹಜವಾಗಿ ಉಲ್ಲೇಖಿಸಬಲ್ಲವರಾಗಿದ್ದರು. ಈ ಸಾಮರ್ಥ್ಯದಿಂದ ಸ್ಥಳೀಯ ಕುಂದುಕೊರತೆಗಳನ್ನು ವಿಶಾಲ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಪ್ರಸ್ತುತಪಡಿಸುವುದು ಮತ್ತು ಜನಮಾನಸವನ್ನು ತಲುಪಿವುದು ಸಾಧ್ಯವಾಯಿತು.

ಅವರು ಕಾಂಗ್ರೆಸ್‌ನ ರಾಜಕೀಯವನ್ನು ವಿರೋಧಿಸಿ ಸಂಘಟನೆ ಮಾಡಿದರೂ 1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಅದನ್ನು ಬೆಂಬಲಿಸಿದರು ಎನ್ನುವುದೂ ಅರ್ಥವಾಗದ ಸಂಗತಿ. ಆದರೂ ಇಂದಿರಾ ಗಾಂಧಿಯವರ ನೀತಿಯನ್ನು ಟೀಕಿಸುವ ಅನೇಕ ವ್ಯಂಗ್ಯಚಿತ್ರಗಳು ಕಾಲಕಾಲಕ್ಕೆ ಅವರ ಕುಂಚದಲ್ಲಿ ಮೂಡಿಬಂದವು.

-------------------------------------------------------------------------------------------------

ವಾರಸುದಾರಿಕೆಯ ವೈರುಧ್ಯಗಳು

          ಸ್ವಯಂ ಅಧಿಕಾರದ ಆಸನದಲ್ಲಿ ಕುಳಿತುಕೊಳ್ಳದಿದ್ದರೂ ಸರ್ಕಾರದ ತಂತ್ರ ಮತ್ತು ಪಕ್ಷದ ಮೇಲೆ ಪ್ರಶ್ನಾತೀತ ಅಧಿಕಾರವನ್ನು ಚಲಾಯಿಸಿದವರು ಬಾಳಾಸಾಹೇಬ್‌ ಠಾಕ್ರೆ. ಆದರೆ ಇಂದು ಮಾತೋಶ್ರೀ ಆ ಪ್ರಭಾವವನ್ನು ಉಳಿಸಿಕೊಂಡಿಲ್ಲ. ವಾರಸಿಕೆಯ ತಕರಾರಿನಲ್ಲಿ ಕೆಲವು ವರ್ಷಗಳ ಹಿಂದೆ ದಾಯಾದಿಗಳು ವಿರೋಧಿಗಳಾದರು. ಪ್ರತ್ಯೇಕ ಸಂಘಟನೆ ಕಟ್ಟಿದ ರಾಜ್‌ ಠಾಕ್ರೆ ರಾಜಕೀಯವಾಗಿ ಶೂನ್ಯವನ್ನೇ ಸಂಪಾದಿಸಿದರು. ಹಾಗೆಯೇ ಅಧಿಕಾರದ ಖುರ್ಚಿಯೇರುವ ಕಾಂಕ್ಷೆಗೆ ಬಲಿಯಾದ ಉದ್ಧವ ಠಾಕ್ರೆ ಮತ್ತು ಮೊಮ್ಮಗ ಆದಿತ್ಯ, ಬಾಳಾ ಠಾಕ್ರೆಯವರ ರಾಜಕೀಯದ ಕಡು ವಿರೋಧಿ ಕಾಂಗ್ರೆಸ್‌ನೊಂದಿಗೇ ಕೈಜೋಡಿಸಿದರು, ಜೊತೆಗೆ ಶಿವಸೇನೆಯ ವಿಭಜನೆಗೂ ಕಾರಣರಾದರು. ದಾಯಾದಿಗಳು ಇದೀಗ ಮತ್ತೆ ಒಂದಾಗಿ ಬಾಳಾಸಾಹೇಬರ ವಾರಸಿಕೆಯ ಹಕ್ಕುಸ್ಥಾಪನೆಗೆ ಮುಂದಾಗಿದ್ದಾರೆ, ಜೊತೆಗೆ ಪ್ರಾದೇಶಿಕವಾದದ ಸಂಕುಚಿತತೆಗೂ ಮರಳುವಂತೆ ಕಾಣಿಸುತ್ತಿದೆ. ಇನ್ನೊಂದೆಡೆ ಠಾಕ್ರೆಯವರ ನಿಜವಾದ ವಾರಸುದಾರರು ತಾವು ಎನ್ನುವ ಶಿವಸೇನೆಯ ಇನ್ನೊಂದು ಗುಂಪಿನ ಸಿದ್ದಾಂತವೂ ಸಹ ಅಧಿಕಾರದ ಆಸೆಯ ಹೊರತೂ ಬೇರಯೇನೂ ಇದ್ದಂತೆ ಕಾಣುವುದಿಲ್ಲ.

          ಮಹಾರಾಷ್ಟ್ರದ ರಾಜಕಾರಣದಲ್ಲಿ ಬಾಳಾ ಠಾಕ್ರೆಯವರ ವಾರಸಿಕೆಯ ಗೊಂದಲಗಳೇನೇ ಇರಲಿ. ಆದರೆ ಅವರ ಸಿದ್ದಾಂತ ಇಂದು ಪ್ರಸ್ತುತವೇ ? ಎನ್ನುವ ಪ್ರಶ್ನೆ ಬರಬಹುದು. ಪ್ರಮುಖವಾಗಿ ಕಂಡುಬರುವ ಸಂಗತಿಗಳು ಅಂದರೆ ಪ್ರಾದೇಶಿಕ ಹಿತವನ್ನು ಕಾಯುವ ಪಕ್ಷವಾಗಿ ಆರಂಭವಾದ ಶಿವಸೇನೆ ರಾಷ್ಟ್ರದ ವಿಷಯದಲ್ಲಿ ಮತ್ತು ಹಿಂದೂ ಹಿತದ ಸಂದರ್ಭ ಬಂದಾಗ ಪ್ರಾದೇಶಿಕವಾದದ ಸಂಕುಚಿತತೆಯನ್ನು ಮೀರಿ ಹೇಗೆ ನಿಲ್ಲಬಹುದು ಎನ್ನುವುದಕ್ಕೆ ಒಂದು ಮಾದರಿಯಾಗಿದೆ. ಇದನ್ನು ಶಿವಸೇನೆ ಮತ್ತು ಬಿಜೆಪಿಯ ನಡುವೆ, ಒಂದಿಷ್ಟು ಭಿನ್ನಮತಗಳ ಹೊರತಾಗಿಯೂ ದೀರ್ಘ ಕಾಲ ಬೆಳದುಬಂದ ಮೈತ್ರಿ, ವಿಶೇಷವಾಗಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಶಿವಸೇನೆಯ ಬೆಂಬಲ ಮೊದಲಾದ ನಿದರ್ಶನಗಳಲ್ಲಿ ಕಾಣಬಹುದು.ಇನ್ನೊಂದು ಹಿಂದುತ್ವದ ಪರವಾದ ನಿರ್ಭೀತ ಮತ್ತು ಯಾವುದೇ ಮುಲಾಜಿಗೆ ರಾಜಿಯಾದ ಪ್ರಬಲ ಧ್ವನಿಯಾಗಿದ್ದವರು ಬಾಳಾ ಠಾಕ್ರೆ. ಮರಾಠಿ ಮಾಣೂಸ್‌ ಪ್ರಖರ ಹಿಂದೂ ರಾಷ್ಟ್ರವಾದಿಯಾಗಿ ಪರಿವರ್ತನೆಯಾದುದೂ ಸಹ ಒಂದು ಗಮನೀಯ ಅಂಶವಾಗಿದೆ. ಇಂದು ಬಂಗಾಲ ಮೊದಲಾದ ಕಡೆಗಳಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ-ಹಿಂಸಾಚಾರಗಳನ್ನು ಕಂಡಾಗ ಅಗತ್ಯವಾಗಿ ಬೇಕಾಗಿದ್ದ ನಿರ್ಭೀತ ಹಾಗೂ ಪ್ರಬಲಾದ ಹಿಂದೂ ಧ್ವನಿಯ ಕೊರತೆ ಬಾಧಿಸುತ್ತಿದೆ.



Thursday, January 15, 2026

ಭಾರತೀಯ ಪ್ರಕೃತಿ ಚಿಂತನೆ

 ('ಉತ್ಥಾನ' ಮಾಸಿಕ, ಜನವರಿ 2025, 'ಸಂಕ್ರಾಂತಿ ಗಣರಾಜ್ಯೋತ್ಸವ ವಿಶೇಷಾಂಕ')

ಪರಿಸರ ಸಂರಕ್ಷಣೆ ಆಂದೋಲನ – ‘ಎನ್ವಿರಾನ್ಮೆಂಟಲ್‌ ಎಕ್ಟಿವಿಸಮ್‌’ ಎನ್ನುವುದು ಇಂದಿನ ಜಗತ್ತಿನ ಒಂದು ಅನಿವಾರ್ಯ ಹೋರಾಟವೆಂದೇ ಪರಿಗಣಿಸಲ್ಪಟ್ಟಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ, ಅರಣ್ಯನಾಶ, ಮರುಭೂಮೀಕರಣ, ಪ್ಲಾಸ್ಟಿಕ್‌ ಮಾಲಿನ್ಯ, ಜೀವವೈವಿಧ್ಯ ನಾಶ, ಮಣ್ಣು ಸವಕಳಿ, ಧ್ರುವ ಪ್ರದೇಶದ ಮಂಜುಗಡ್ಡೆ ಕರಗುವುದು, ಗ್ರೀನ್‌ಹೌಸ್‌ ಗ್ಯಾಸ್‌ ಎಮಿಶನ್‌, ಜೀವಜಲದ ಮಾಲಿನ್ಯ ಮತ್ತು ನೀರಿನ ಕೊರತೆ, ವಾಯು ಗುಣಮಟ್ಟ ಸೂಚ್ಯಂಕ ಕುಸಿತ, ಹವಳದ ದಿಬ್ಬಗಳ ಬ್ಲೀಚಿಂಗ್ ಇತ್ಯಾದಿ ಹತ್ತು ಹಲವು ಪರಿಸರ ಸಂಬಂಧೀ ವ್ಯಾಧಿಗಳ ಕುರಿತು ನೂರಾರು ವೈಶ್ವಿಕ ವೇದಿಕೆಗಳು, ಶೃಂಗಸಭೆಗಳು, ಸೆಮಿನಾರುಗಳು, ಘೋಷಣೆ-ಘೋಷವಾಕ್ಯಗಳು, ಬಿಲಿಯನ್‌ಗಟ್ಟಲೇ ಡಾಲರುಗಳನ್ನು ಮೀಸಲಿಡುವ ವಾಗ್ದಾನಗಳು, ನವೀನ ತಂತ್ರಜ್ಞಾನದ ಮೂಲಕವೇ ಪರಿಹಾರ ಎನ್ನುವ ವಾದಗಳು ಈ ಎಲ್ಲ ಯಾವ ಪ್ರಯತ್ನಗಳಿಂದಲೂ ಪ್ರಕೃತಿಯ ನಿರಂತರ ನಾಶವನ್ನು ನಿಲ್ಲಿಸಲು ಸಾಧ್ಯವಾಗಿಲ್ಲ, ಅವನತಿಯ ಹಾದಿಯಿಂದ ವಿಮುಖವಾಗಲಿಲ್ಲ. ಅನೇಕ ಅಧ್ಯಯನಗಳ ಪ್ರಕಾರ ಪರಿಸರ ನಾಶದಿಂದಾಗಿ ಉಂಟಾಗುತ್ತಿರುವ ನಷ್ಟ, ಆಧುನಿಕ ಪರಿಭಾಷೆಯಲ್ಲಿಯೇ ಹೇಳುವುದಾದರೆ ವಾರ್ಷಿಕ 25 ಟ್ರಿಲಿಯನ್‌ ಡಾಲರಿಗಿಂತಲೂ ಹೆಚ್ಚು.

ಪರಿಸರದ ಈ ಅಧೋಗತಿಯ ಹಿಂದಿರುವ ಮೂಲ ಕಾರಣ ಮನುಷ್ಯನ ಆದ್ಯತೆಗಳು, ಆತನ ಸುಖದ ಕಲ್ಪನೆ, ಪ್ರಗತಿಯ ಕಲ್ಪನೆ. ನಿಜವಾದ ಸಮೃದ್ಧಿಯ ಬದಲು ಕೇವಲ ಜಿಡಿಪಿ, ಆರ್ಥಿಕತೆಯ ಗಾತ್ರ ಹಿಗ್ಗುವುದೇ ಪ್ರಗತಿ ಎಂದಾಗಿದೆ. ಉದಾಹರಣೆಗೆ ನದಿಯಲ್ಲಿ ಪರಿಶುದ್ದ ನೀರು ಉಗಮದಿಂದ ಕಡಲು ಸೇರುವವರೆಗೆ ಸದಾ ತುಂಬಿ ಹರಿದು ಜಲಚರಗಳನ್ನು, ಇಕ್ಕೆಲಗಳ ಜೀವರಾಶಿಯನ್ನು ಪೋಷಿಸುತ್ತ ಅದೇ ಗಾಂಭೀರ್ಯದಲ್ಲಿ ಸಾಗರವನ್ನು ಸೇರಿದರೆ ಅದು ಸಮೃದ್ಧಿ. ಆದರೆ ಅದಕ್ಕೊಂದು ಅಣೆಕಟ್ಟು ಕಟ್ಟಿ ಸಹಸ್ರಾರು ಹೆಕ್ಟೇರ್‌ ಕಾಡು ನಾಡುಗಳನ್ನು ಮುಳುಗಿಸಿ, ಕೆಳಗಿನ ನದೀಪಾತ್ರವನ್ನು ಒಣಗಿಸಿ, ನಡೆಯುವ ವಿದ್ಯುತ್‌ ಉತ್ಪಾದನೆಯೋ, ಕೆನಾಲುಗಳಲ್ಲಿ ನೀರು ಹರಿಸುವುದೋ ಇಂದು ಪ್ರಗತಿ ಎನಿಸಿಕೊಳ್ಳುತ್ತದೆ. ಅನ್ನದಾತದ ತೋಟದಲ್ಲಿ ಬೇರೆ ಬೇರೆ ಜಾತಿಯ ಗಿಡಮರಬಳ್ಳಿಗಳು ಹಚ್ಚಹಸುರಾಗಿ ಆರೋಗ್ಯವಾಗಿ ಬೆಳೆದು ಬಗೆಬಗೆಯ ಹೂವುಹಣ್ಣುಗಳನ್ನು ತಳೆದು ನಂದನವನವಾದರೆ, ಮನುಷ್ಯನ ಜೊತೆಗೆ ಪ್ರಾಣಿಪಕ್ಷಿ ಜೆನ್ನೊಣ ಚಿಟ್ಟೆಗಳಾದಿಯಾಗಿ ಕೀಟಗಳೆಲ್ಲವುಗಳ ತನುಮನಗಳನ್ನು ತಣಿಸುವುದು ಸಮೃದ್ಧಿಯಾದರೆ ಅಂತಹ ಜಮೀನಿನಲ್ಲಿ ಅಣೆಕಟ್ಟಿನ ಕೆನಾಲಿನಿಂದ ಬರುವ ನೀರಿನಿಂದಲೋ ಅಥವಾ ಎಂಟನೂರು ಅಡಿ ಆಳದ ಬೋರ್‌ವೆಲ್ಲಿನಿಂದ ಎತ್ತಿದ ನೀರನ್ನು ಬಳಸಿ, ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಸುರಿದು ವಾಣಿಜ್ಯ ಬೆಳೆಗಳನ್ನು ಬೆಳೆದು ಕೈತುಂಬ ಹಣಗಳಿಸುವವನು ‘ಪ್ರಗತಿಪರ ಕೃಷಿಕ’ ಎಂದು ಸನ್ಮಾನಿತನಾಗುತ್ತಾನೆ.

ಕಾಲದ ಅನಿವಾರ್ಯದಲ್ಲಿ ಸಿಲುಕಿರುವ ಭಾರತವೂ ಸಹ ಇದೇ ಮಾದರಿಯನ್ನು ಅನುಸರಿಸುತ್ತಿರುವುದು ವಿದಿತವಾದರರೂ ಮೂಲ ಭಾರತೀಯ ಚಿಂತನೆಯಲ್ಲಿ ಪರಿಸರವನ್ನು ನೋಡುವ ದೃಷ್ಟಿ ಭಿನ್ನವಾಗಿರುವುದು ಕಂಡುಬರುತ್ತದೆ. ಹಾಗೂ ಭಾರತೀಯ ಪ್ರಕೃತಿ ಚಿಂತನೆ ನಮ್ಮ ಸಂಸ್ಕೃತಿ, ಆಚರಣೆಗಳನ್ನು ಹಾಸುಹೊಕ್ಕಾಗಿ ಇಂದಿಗೂ ಜೀವಂತವಾಗಿರುವುದೂ ಕಾಣಿಸುತ್ತದೆ. ಅವುಗಳನ್ನು ಮತ್ತೆ ಜ್ಞಾಪಿಸಿಕೊಂಡರೆ ಪ್ರಪಂಚ ಇಂದು ಎದುರಿಸುತ್ತಿರುವ ಅನೇಕ ಸವಾಲುಗಳಿಗೆ ಪರಿಹಾರ ಸಿಗಬಹುದು.

ಸೃಷ್ಟಿ – ಪಂಚ ಮಹಾಭೂತಗಳು

           ಸೃಷ್ಟಿಯೆಲ್ಲವೂ ಪರಮಾತ್ಮ ವಾಸಸ್ಥಾನ ಎಂದು ಈಶಾವಾಸ್ಯೋಪನಿಷತ್ತಿನ ಮೊದಲ ಮಂತ್ರದಲ್ಲಿಯೇ ಹೇಳಿದೆ ‘ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್‌’. ಅದು ಪೂಜನೀಯವಾದದ್ದು, ಶೋಷಣೀಯವಾದದ್ದಲ್ಲ. ಆದ್ದರಿಂದ ತ್ಯಾಗ ಮನೋಭಾವದಿಂದ ಬದುಕಬೇಕೇ ಹೊರತು ಲೋಭದಿಂದಲ್ಲ. ಭಾರತೀಯ ಚಿಂತನೆಯಲ್ಲಿ ಯಾವುದೂ ಜಡವಲ್ಲ. ಮಾನವನ ಭೌತಿಕ ಶರೀರವೂ ಸೇರಿದಂತೆ ಸರ್ವವೂ ಪಂಚಭೂತಗಳ ಸೃಷ್ಟಿ.

ಭಾರತೀಯ ಪರಿಕಲ್ಪನೆಯಲ್ಲಿ ಮಾನವ ಪ್ರಕೃತಿ ಒಂದು ಭಾಗವೇ ಹೊರತು ಮಾಲೀಕನಲ್ಲ. ಸಕಲ ಚರಾಚರ ಜೀವಿಗಳಂತೇ ಮಾನವನೂ ಸಹ ಪ್ರಕೃತಿಯಿಂದ ಪೋಷಣೆ ಪಡೆಯಬೇಕಾದವನು. ಅಲ್ಲಿರುವುದು ತಾಯಿ ಮಕ್ಕಳ ಸಂಬಂಧ. ಅಥರ್ವವೇದದ 'ಪೃಥ್ವಿ ಸೂಕ್ತ'ವನ್ನು ನಾವು ಜಗತ್ತಿನ ಅತ್ಯಂತ ಪುರಾತನ ಪರಿಸರ ಗೀತೆ ಎಂದು ಕರೆಯಬಹುದು. ಅದರಲ್ಲಿ ಭೂಮಿಯನ್ನು ಕುರಿತು ಹೀಗೆ ಪ್ರಾರ್ಥಿಸಲಾಗಿದೆ "ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ" - ಭೂಮಿಯು ತಾಯಿ, ನಾನು ಅವಳ ಮಗ. ಮುಂದುವರಿದು, ಇನ್ನೂ ಒಂದು ಅದ್ಭುತವಾದ ಸಾಲು ಬರುತ್ತದೆ - "ಹೇ ತಾಯಿ ಭೂಮಿ, ನಿನ್ನನ್ನು ನಾನು ಅಗೆಯುತ್ತೇನೆ ಅದರಿಂದ ನಿನ್ನ ಹೃದಯಕ್ಕೆ ಧಕ್ಕೆಯಾಗದಂತಿರಲಿ, ನಿನ್ನ ಮರ್ಮಸ್ಥಾನಗಳಿಗೆ ನೋವಾಗದಂತಿರಲಿ." – “ಯತ್‌ ತೇ ಭೂಮೇ ವಿಖನಾಮಿ ಕ್ಷಿಪ್ರಂ ತದಪಿ ರೋಹತು, ಮಾ ತೇ ಮರ್ಮ ವಿಮಗ್ವರಿ ಮಾ ತೇ ಹೃದಯಮರ್ಪಿಪಮ್‌” ಮನೆ ಕಟ್ಟುವಾಗ, ಕೃಷಿ ಮಾಡುವಾಗ, ಗಣಿಗಾರಿಕೆಗೆ ಭೂಮಿಯ ಒಡಲನ್ನು ಬಗೆಯಬೇಕಾಗುತ್ತದೆ. ಆದರೆ ಅದು ಭೂಮಿ ತಾಯಿಗೆ ನೋವಾಗದಂತೆ, ಆಕೆ ಮತ್ತೆ ಚೇತರಿಸಿಕೊಳ್ಳುವಂತೆ ಇರಬೇಕು ಎಂಬ ಎಚ್ಚರಿಕೆ ಸಹಸ್ರಾರು ವರ್ಷಗಳ ಹಿಂದೆಯೇ ನಮ್ಮ ಹಿರಿಯರಿಗಿತ್ತು.

ಪರ್ವತಗಳನ್ನು ತಂದೆಯ ಸ್ಥಾನದಲ್ಲಿ, ನದಿಗಳನ್ನು ತಾಯಿಯಂತೆ ಕಾಣುವ ಸಂಸ್ಕೃತಿ ನಮ್ಮದು. ಹಾಗಾಗಿಯೇ ಪ್ರತಿಯೊಂದು ನದಿಪರ್ವತಗಳಿಗೆ ನಮ್ಮಲ್ಲಿ ಅರ್ಥಪೂರ್ಣ ಹೆಸರಗಳಿವೆ. ಅವುಗಳನ್ನು ಪೂಜಿಸಲಾಗುತ್ತದೆ, ಪೂಜ್ಯ ದೃಷ್ಟಿಯಿಂದ ಕಾಣಲಾಗುತ್ತದೆ. ಪ್ರತಿಯೊಂದು ಮನೆಯಲ್ಲೂ ನಡೆಯುತ್ತಿದ್ದ ಯಜ್ಞ-ಯಾಗಾದಿಗಳು, ಅಗ್ನಿಹೋತ್ರ ಮೊದಲಾದವು ವಾತಾವರಣವನ್ನು ಶುದ್ಧೀಕರಿಸುವ ಪ್ರಕ್ರಿಯೆಗಳಾಗಿದ್ದವು. ಅಗ್ನಿಯನ್ನು ಮನುಷ್ಯ ಮತ್ತು ದೇವರ ನಡುವಿನ ಕೊಂಡಿ ಎಂದು ಭಾವಿಸಲಾಗಿತ್ತು. ಯಾಗಗಳಲ್ಲಿ ಸಮರ್ಪಿಸುವ ಹವಿಸ್ಸನ್ನು ದೇವತೆಗಳಿಗೆ ತಲುಪಿಸುವುದು ಅಗ್ನಿದೇವನ ಕಾರ್ಯ ಎಂದು ವೇದಗಳಲ್ಲೇ ಹೇಳಿದೆ.

ನಿರಾಕಾರನಾದರೂ ಸರ್ವವ್ಯಾಪಿಯಾದ ಪರಮಾತ್ಮನು ಎಲ್ಲ ರೂಪಗಳಲ್ಲಿಯೂ ವ್ಯಕ್ತನಾಗುತ್ತಾನೆ ಎನ್ನುವ ನಂಬಿಕೆ ನಮ್ಮದು. ಹಾಗಾಗಿಯೇ ನಮಗೆ ಪ್ರಾಣಿಪಕ್ಷಿಯಾದಿ ಸಕಲ ಚರಾಚರಗಳಲ್ಲಿ ಭಗವಂತನನ್ನು ಕಾಣಲು ಸಾಧ್ಯ, ಕಲ್ಲಿನಲ್ಲಿ ಪರಮಾತ್ಮನ್ನು ನಾವು ಪ್ರತಿಷ್ಠಾಪಿಸಬಲ್ಲೆವು. ಪ್ರಾಣಿಪಕ್ಷಿಗಳ ರೂಪದಲ್ಲಿಯೂ ದೇವರುಗಳನ್ನು ಕಲ್ಪಿಸಿಕೊಂಡು ಪೂಜಿಸಲುತ್ತೇವೆ.


 =========================================================================

‘Conquest of nature’, ‘Bending nature to our will’, ‘Man verses nature’, ‘Taming the wilderness’, ‘Nature as something to be dissected’, ‘Overcoming natural limits’, ‘Defying nature’ ಇತ್ಯಾದಿ ಹತ್ತು ಹಲವು ನುಡಿಗಟ್ಟುಗಳನ್ನು ನಾವು ಕೇಳಿರಬಹುದು. ವಿಶೇಷವಾಗಿ ಇವು ಪಾಶ್ಚಾತ್ಯ ಜಗತ್ತಿನ ಸಾಹಿತ್ಯ, ತತ್ವಶಾಸ್ತ್ರ, ರಾಜಕೀಯ, ವಸಾಹತುಶಾಹಿ ಕಥನಗಳು, ಕೈಗಾರಿಕಾ ಪ್ರಗತಿಯ ಚರ್ಚೆಗಳು, ಮತ್ತು ಸಾಮಾನ್ಯ ಜನಮಾನಸ ಸಂಸ್ಕೃತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಇವೆಲ್ಲವೂ ಪ್ರಕೃತಿಯ ಮೇಲೆ ಮಾನವ ಪ್ರಾಬಲ್ಯ, ನಿಯಂತ್ರಣ ಅಥವಾ ಮಾಲೀಕತ್ವವನ್ನು ಸೂಚಿಸುವ ಸಾಮಾನ್ಯ ಪಾಶ್ಚಿಮಾತ್ಯ ಮೂಲದ ನುಡಿಗಟ್ಟುಗಳು ಅಥವಾ ರೂಪಕಗಳು. ಇಂತಹ ರೂಪಕಗಳ ಮೂಲವಿರುವುದು ಜುಡೆಯೋ-ಕ್ರಿಶ್ಚಿಯನ್‌ ಚಿಂತನೆಯಲ್ಲಿ, ನಂತರ ಯುರೋಪಿನ ಜ್ಞಾನೋದಯ ಮತ್ತು ಕ್ರಾಂತಿಯ ಯುಗ (Enlightenment and Scientific Revolution) ಹಾಗೂ ಕೈಗಾರಿಕೀಕರಣ, ವಸಾಹತುಯುಗಗಳಲ್ಲಿ ಇವು ಇನ್ನೂ ಬೆಳೆದವು. ಪ್ರಕೃತಿ ಎನ್ನುವುದು ಪ್ರಶ್ನಿಸಬೇಕಾದ, ತಿದ್ದಬೇಕಾದ-ತರಬೇತುಗೊಳಿಸಬೇಕಾದ, ಗೆಲ್ಲಬೇಕಾದ, ಮಾನವನ ಭೋಗಕ್ಕೆ ಇರುವ ಸಂಗತಿ ಎನ್ನುವ ಕಥನ ಬೆಳೆದು ಬಂತು. ದುರದೃಷ್ಟಕರವೆಂದರೆ ಈ ಚಿಂತನೆಯೇ ಪ್ರಪಂಚದಲ್ಲಿ ಇಂದು ಪ್ರಬಲವಾಗಿದೆ. ಪ್ರಕೃತಿಯೊಂದಿಗೆ ಸಾಮರಸ್ಯ, ಪರಸ್ಪರ ಅವಲಂಬನೆ ಅಥವಾ ಪರಸ್ಪರ ಸಂಬಂಧವನ್ನು ಒತ್ತಿಹೇಳುವ ಭಾರತೀಯ ಮತ್ತು ಕೆಲವು ಪೌರ್ವಾತ್ಯ ದೃಷ್ಟಿಕೋನಗಳೊಂದಿಗೆ ಇದನ್ನು ಹೋಲಿಸಿ ನೋಡಬಹುದು.

==========================================================================

ಜ್ಞಾನ ಮತ್ತು ಕಲೆಗಳ ಮೂಲ ಗುರುವೇ ಪೃಕೃತಿ

ಭಾರತೀಯ ಪ್ರಕೃತಿ ಚಿಂತನೆ ಕೇವಲ ಚಿಂತನೆಯ ಸ್ತರಕ್ಕೆ ಸೀಮಿತವಲ್ಲ, ನಮ್ಮ ಎಲ್ಲ ಧಾರ್ಮಿಕ ಸಾಂಸ್ಕೃತಿಕ ಆಚರಣೆಗಳಲ್ಲಿ ಹಾಸುಹೊಕ್ಕಾಗಿದೆ. ಭಾರತೀಯರಿಗೆ ಎಲ್ಲ ಜ್ಞಾನ ಮತ್ತು ಕಲೆಗಳ ಮೂಲ ಪ್ರಕೃತಿಯೇ ಆಗಿದೆ. ಗುರುವಿನ ಗುರು ಎಂದೇ ಗೌರವಿತನಾದ ದತ್ತಾತ್ರೇಯ ಪ್ರಕೃತಿಯಲ್ಲಿಯೇ ಗುರುವನ್ನು ಕಂಡವನು. ಭೂಮಿ, ನೀರು, ಗಾಳಿ, ಅಗ್ನಿ, ಆಕಾಶ, ಸೂರ್ಯ-ಚಂದ್ರ, ಸಾಗರ, ಜೇನುಗೂಡು, ಹೆಬ್ಬಾವು, ಮೀನು, ಆನೆ, ಜಿಂಕೆ ಮೊದಲಾಗಿ 24 ಗುರುಗಳಿಂದ ಪಾಠ ಕಲಿತೆ ಎಂದು ದತ್ತಗುರು ಹೇಳುತ್ತಾನೆ. ಯೋಗ ಆಯುರ್ವೇದಗಳು ಪ್ರಕೃತಿಯಿಂದ ಮಾನವ ಕಲಿತ ಪಾಠಗಳು.

ಆರೋಗ್ಯವನ್ನು ನಮ್ಮ ದೇಹ, ಮನಸ್ಸು, ಚೈತನ್ಯ ಮತ್ತು ಪರಿಸರದ ಒಳಗೆ ಮತ್ತು ಅವುಗಳ ನಡುವಿನ ಸಾಮರಸ್ಯದ ಸ್ಥಿತಿ ಎಂದು ಆಯುರ್ವೇದದಲ್ಲಿ ವ್ಯಾಖ್ಯಾನಿಸಲಾಗಿದೆ. ನಮ್ಮ ಶಾರೀರಿಕ ಹಾಗೂ ಮಾನಸಿಕ ಪ್ರಕೃತಿ ಮತ್ತು ನಾವು ಪರಿಸರದ ಚಕ್ರದೊಂದಿಗೆ ಸಂವಹನ ನಡೆಸುವ ವಿಧಾನಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಸಾಮರಸ್ಯವನ್ನು ಸಾಧಿಸಬಹುದು. ಸೃಷ್ಟಿಯ ಐದು ಅಂಶಗಳಾದ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಇವುಗಳು ನಮ್ಮ ಶಾರೀರಿಕ ಮತ್ತು ಮಾನಸಿಕ ಕಾರ್ಯಗಳನ್ನು ನಿಯಂತ್ರಿಸುವ ಮೂರು ದೋಷಗಳಾದ ವಾತ, ಪಿತ್ತ ಮತ್ತು ಕಫದಲ್ಲಿ ವ್ಯಕ್ತವಾಗುತ್ತವೆ. ಹಾಗೂ ಈ ತ್ರಿದೋಷಗಳು ಬದಲಾಗುತ್ತಿರುವ ಋತುಗಳು, ದಿನದ ಸಮಯಗಳು ಮತ್ತು ನಾವು ತಿನ್ನುವ ಆಹಾರಗಳಿಂದ ಪ್ರಭಾವಿತವಾಗಿರುತ್ತದೆ. ಹಾಗಾಗಿ ‘ಋತುಚರ್ಯೆ’ ಅಂದರೆ ಋತುಮಾನದ ಬದಲಾವಣೆಗಳಿಗೆ ಅನುಗುಣವಾಗಿ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಮಾರ್ಪಡಿಸಿಕೊಳ್ಳುವುದನ್ನು ಆಯುರ್ವೇದ ಪ್ರತಿಪಾದಿಸುತ್ತದೆ. ಅದರಂತೆಯೇ ಋತುಗಳಿಗನುಸಾರವಾಗಿ ನಮ್ಮ ಹಬ್ಬಹರಿದಿನ ಆಚರಣೆಗಳು, ಪ್ರತಿಯೊಂದು ಆಚರಣೆಗಳ ವಿಶೇಷತೆಗಳು, ಆಹಾರ-ವ್ಯವಹಾರ ಕ್ರಮ ಒಟ್ಟಾರೆ ಜೀವನಶೈಲಿ ರೂಪಿತವಾಗಿರುವುದನ್ನು ನಾವು ಗಮನಿಸಬಹುದು.

ಪ್ರಕೃತಿಯ ಮೇಲೆ ಗೆಲುವು ಸಾಧಿಸುವುದೂ ಅಲ್ಲ, ಅದು ತನ್ನ ಭೋಗದ ವಸ್ತು ಎನ್ನುವ ಭಾವನೆಯೂ ಅಲ್ಲ, ಬದಲಾಗಿ ಪ್ರಕೃತಿಯ ಕುರಿತು ವಿನೀತಭಾವ ಭಾರತೀಯ ಸಂಸ್ಕೃತಿಯ ಲಕ್ಷಣ. ಇಂದಿಗೂ ಮನೆ ಕಟ್ಟುವ ಮೊದಲು, ಯಾವುದೇ ನಿರ್ಮಾಣ ಆರಂಭಕ್ಕೆ ಮೊದಲು, ಕೃಷಿ ಕಾರ್ಯವನ್ನು ಆರಂಭಿಸುವ ಮೊದಲು 'ಭೂಮಿ ಪೂಜೆ' ಮಾಡುವ ಸಂಪ್ರದಾಯವಿದೆ. "ನನ್ನ ವಾಸಕ್ಕಾಗಿ ನಿನ್ನ ಮೇಲೆ ಭಾರ ಹಾಕುತ್ತಿದ್ದೇನೆ, ನಿನ್ನನ್ನು ಅಗೆಯುತ್ತಿದ್ದೇನೆ, ನನ್ನನ್ನು ಕ್ಷಮಿಸು ತಾಯಿ" ಎಂದು ಪ್ರಾರ್ಥಿಸುವ ಸಂಸ್ಕೃತಿ ಜಗತ್ತಿನಲ್ಲಿ ಬೇರೆಲ್ಲಿಯೂ ಕಾಣುವುದಿಲ್ಲ. ಹಾಗೆಯೇ ಮನೆಯನ್ನು ಕಟ್ಟುವಾಗ ಅನೇಕ ಜೀವಜಂತುಗಳು ಅನಿವಾರ್ಯವಾಗಿ ನಾಶವಾಗುತ್ತವೆ, ಹಾಗಾಗಿ ಪಾಪಪರಿಹಾರಾರ್ಥವಾಗಿ ದಾನಧರ್ಮಗಳನ್ನು ಮಾಡಬೇಕೆನ್ನುವ ಶಾಸ್ತ್ರವಿದೆ.

 

ಪ್ರಗತಿ – ಡೆವೆಲಪ್‌ಮೆಂಟ್‌ನ ಪರಿಕಲ್ಪನೆ

ಹಾಗೆಂದು ಆಧುನಿಕವಾದುದೆಲ್ಲವನ್ನೂ ಅಥವಾ ವೈಜ್ಞಾನಿಕ ಎಂದು ಕರೆಯಲ್ಪಡುವುದೆಲ್ಲವನ್ನೂ ತಿರಸ್ಕರಿಸುವುದು ಭಾರತೀಯ ದೃಷ್ಟಿಯಲ್ಲ. ಹಾಗಿದ್ದಿದ್ದರೆ ಪ್ರಾಚೀನ ಭಾರತದಲ್ಲಿ ಕಂಡುಬರುವ ಇಂದಿನ ವೈಜ್ಞಾನಿಕ ಜಗತ್ತೂ ವಿಸ್ಮಯಗೊಳ್ಳುವಂತಹ ಅನ್ವೇಷಣೆಗಳು ಸಾಧ್ಯವಾಗುತ್ತಿರಲಿಲ್ಲ. ಆದರೆ ಆಧುನಿಕತೆಯ ಮಾದರಿ ಯಾವುದು? ಎನ್ನುವ ಪ್ರಶ್ನೆ ಬಂದಾಗ ಪ್ರಕೃತಿಗೆ ಹಾನಿಯುಂಟುಮಾಡುವ ಮಾರ್ಗವನ್ನು ಭಾರತ ಆಯ್ದುಕೊಳ್ಳಲಿಲ್ಲ. ಬೌದ್ಧಿಕ ಮಟ್ಟದಲ್ಲಿ ಉಳಿದೆಲ್ಲ ಜೀವಜಂತುಗಳಿಗಿಂತ ಮೇಲನ ಸ್ತರದಲ್ಲಿರುವ ಮಾನವ ಪ್ರಪಂಚನವನ್ನು ತನ್ನ ಭೋಗಕ್ಕೆ ಮಾತ್ರ ಬಳಸುವುದಲ್ಲ ಬದಲಿಗೆ ತಾನೂ ಅದರ ಭಾಗವಾಗಿರುವುದರಿಂದ ಅದನ್ನು ಕಾಪಾಡುವ ಹೊಣೆಯೂ ತನ್ನ ಮೇಲಿದೆ ಎನ್ನುವ ಸತ್ಯವನ್ನು ಭಾರತೀಯ ಸಂಸ್ಕೃತಿ ಕಂಡುಕೊಂಡಿತ್ತು. ಅದಕ್ಕನುಗುಣವಾಗಿ ನಮ್ಮ ಬದುಕುವ ರೀತಿ, ಜೀವನಶೈಲಿ ರೂಪುಗೊಂಡಿತು. ಪ್ರಕೃತಿಯೊಂದಿಗೆ ಸಮರಸ ಬದುಕು ನಡೆಸುವ ಕಾರಣ, ಪರಿಸರ ನಾಶ ಹಾಗೂ ಮಾಲಿನ್ಯದ ಪ್ರಶ್ನೆ ಹುಟ್ಟಲಿಲ್ಲ. ಪರಿಸರ ಸಂರಕ್ಷಣೆಯ ವಿಶೇಷ ಅಗತ್ಯ ಪ್ರಾಚೀನ ಭಾರತೀಯರಿಗೆ ಬರಲಿಲ್ಲ.

ಪ್ರಕೃತಿಯ ಮೇಲೆ ಮಾನವನ ದೌರ್ಜನ್ಯದ ಪ್ರತಿಫಲವನ್ನು ನಾವಿಂದು ಕಲುಷಿತ ವಾತಾವರಣ, ಹವಾಮಾನ ವೈಪರಿತ್ಯ, ಋತುಗಳ ಏರುಪೇರು, ತಾಪಮಾನ ಏರಿಕೆ, ಅತವೃಷ್ಟಿ-ಅನಾವೃಷ್ಟಿ ಮೊದಲಾದವುಗಳ ಮೂಲಕ ಪಡೆಯುತ್ತಿದ್ದೇವೆ. ಇವುಗಳಿಗೆ ಮೂಲ ಕಾರಣ ಮಾನವನೇ ಆದರೂ ನಿರಪರಾಧಿಗಳಾದ ಪೃಥ್ವಿಯ ಉಳಿದ ಜೀವಜಂತುಗಳು ಶಿಕ್ಷೆಯನ್ನು ಅನುಭವಿಸುತ್ತಿವೆ. ಪ್ರಕೃತಿಯೇ ಸಹನೆ ಮೀರಿ ಉಗ್ರ ಪ್ರತೀಕಾರಕ್ಕೆ ಮುಂದಾಗುವ ಮೊದಲು ಮಾನವ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ. ಪ್ರಾಚೀನ ಭಾರತ ತೋರಿದ ಸಾಮರಸ್ಯದ ದಾರಿ ನಮ್ಮಲ್ಲಿ ಅಲ್ಪ ಪ್ರಮಾಣದಲ್ಲಿಯಾದರೂ ಜೀವಂತವಿದೆ. ಅದನ್ನು ಮತ್ತೆ ಜ್ಞಾಪಿಸಿಕೊಂಡು ಆ ಜ್ಞಾನದ ಬೆಳಕನ್ನು ವಿಶ್ವದ ಮುಂದಿಡಲು ಭಾರತ ಸನ್ನದ್ಧವಾಗಬೇಕಿದೆ.


 **************************************************************************************************

ವೃಕ್ಷರಕ್ಷಣೆ

ದಶಪುತ್ರ ಸಮೋ ದ್ರುಮಃಎಂದು ಒಂದು ಸುಭಾಷಿತ ಹೇಳುತ್ತದೆ, ಅಂದರೆ ಒಂದು ವೃಕ್ಷವು ಹತ್ತು ಮಕ್ಕಳಿಗೆ ಸಮ. ಗಿಡಮರಗಳನ್ನು ಮಕ್ಕಳಂತೇ ಭಾವಿಸಿ ಸಲಹಿದ ಸಾಲುಮರದ ತಿಮ್ಮಕ್ಕನಂತವರ, ತುಳಿಸಿ ಗೌಡರಂತವರ ವೃಕ್ಷಮಾತೆಯರ ನಾಡು ನಮ್ಮ ನೆಲ. ಇಂದಿಗೂ ಕರ್ನಾಟಕದ ಮೂಲೆ ಮೂಲೆಗಳಲ್ಲಿ ದೇವರಕಾಡುಗಳು ಕಾಣಸಿಗುತ್ತವೆ. ಅದು ಊರ ದೇವರು ನೆಲೆಸಿರುವ ಕಾಡು, ಅದನ್ನು ಹಾಳು ಮಾಡಬಾರದು ಎನ್ನುವ ಶ್ರದ್ಧೆ ಜನರಲ್ಲಿದೆ. ಹಾಗೆಯೇ ನವಗ್ರಹ ವನಗಳ ಕಲ್ಪನೆಯಿದೆ. ಪ್ರತಿಯೊಂದು ಗ್ರಹದ ಪ್ರತೀಕ ಗಿಡವನ್ನು ನೆಟ್ಟು ಪೋಷಿಸಿ, ಅದನ್ನು ಪೂಜಿಸಿ ಪ್ರದಕ್ಷಿಣೆ ಹಾಕುವುದರಿಂದ ದೋಷಪರಿಹಾರವಾಗುತ್ತದೆ ಎನ್ನುವ ನಂಬಿಕೆಯಿದೆ. ಬಸುರಿ ಹೆಂಗಸರು, ಮಕ್ಕಳನ್ನು ಬಯಸುವವರು ಅಶ್ವತ್ಥ ವೃಕ್ಷದ ಪ್ರದಕ್ಷಿಣೆ ಹಾಕುವುದರಿಂದ ಸತ್ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವು ನಂಬಿಕೆಯ ಹಿಂದೆ ಆರೋಗ್ಯದ ಜೊತೆಗೆ ಪರಿಶುದ್ಧ ಗಾಳಿಯನ್ನು ನೀಡುವ ಅಶ್ವತ್ಥ ವೃಕ್ಷದ ಸಂರಕ್ಷಣೆಯೂ ಇದೆ. ಭಾರತೀಯ ಸಂಸ್ಕೃತಿಯಲ್ಲಿ ಅಶ್ವತ್ಥ ವೃಕ್ಷಕ್ಕೆ ವಿಶೇಷ ಸ್ಥಾನವಿದೆ. ಅಶ್ವತ್ಥ ವೃಕ್ಷಕ್ಕೆ ಉಪನಯನ ಮಾಡಲಾಗುತ್ತದೆ. ವಿವಾಹ ಮಾಡಲಾಗುತ್ತದೆ. ಪೂಜಿಸಲಾಗುತ್ತದೆ. ಗ್ರಾಮದ ಪಂಚಾಯತಿಗಳು ನಡೆಯವುದು, ಎಲ್ಲರೂ ಸೇರಿ ಕಷ್ಟಸುಖಗಳನ್ನು ಹಂಚಿಕೊಳ್ಳುವುದು ಊರಿನ ಅರಳೀಕಟ್ಟೆಯ ಮೇಲೆಯೇ. ತುಳಸೀ ವಿವಾಹ, ವನಭೋಜನ, ನಾಗಬನ-ನಾಗಾರಾಧನೆ ಇತ್ಯಾದಿ ಆಚರಣೆಗಳನ್ನು ಪ್ರಕೃತಿ ಸಂರಕ್ಷಣೆಯ ಹಿನ್ನೆಲೆಯಲ್ಲಿ ಕಾಣಬಹುದು.

ಅಶ್ವತ್ಥಮೇಕಂ ಪಿಚುಮಂದಮೇಕಂ ನ್ಯಗ್ರೋಧಮೇಕಂ ದಶತಿಂತ್ರಿಣೀಕಂ| ಕಪಿತ್ಥಬಿಲ್ವಾಮಲಕ ತ್ರಯಂಚ ಪಂಚಾಮ್ರರೋಪೀ ನರಕಂನಯಾತಿ||’ - ಒಂದು ಅಶ್ವತ್ಥ,  ಒಂದು ಬೇವು, ಒಂದು ಆಲ, 10 ಹುಣಿಸೆ, ತಲಾ ಮೂರು ಬೇಲ, ಬಿಲ್ವ, ನೆಲ್ಲಿ ಮತ್ತು ಐದು ಮಾವು ಇವಿಷ್ಟು ಗಿಡಗಳನ್ನು ನೆಟ್ಟು ಮರವಾಗಿ ಮಾಡಿದವನು ನರಕಕ್ಕೆ ಹೋಗುವುದಿಲ್ಲ ಎನ್ನುತ್ತದೆ ಗರುಡಪುರಾಣದ ಈ ಶ್ಲೋಕ.ಒಂದಲ್ಲ ಒಂದು ರೀತಿ ಪ್ರಯೋಜನಕಾರಿ, ಆಯುರ್ವೇದೀಯ ಮಹತ್ತ್ವ ಉಳ್ಳವು ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತಿದೆ. ವಿವಿಧ ಜಾತಿಯ ಮರಗಿಡಗಳು ಯಥೇಚ್ಚವಾಗಿದ್ದ ಕಾಲದಲ್ಲೇ ನಮ್ಮ ಪ್ರಾಚೀನರು ಹೀಗೆ ಎಚ್ಚರವಹಿಸಿ ಮರಗಿಡಗಳನ್ನು ನೆಟ್ಟು ಬೆಳೆಸಬೇಕಾದ ಮಹತ್ವವನ್ನು ಸಾರಿದ್ದರು. 

ವೃಕ್ಷರಕ್ಷಣೆ ಪ್ರಾಚೀನ ಕಾಲದಿಂದ ನಮ್ಮ ಧಾರ್ಮಿಕ ಸಂಪ್ರದಾಯಗಳಲ್ಲಿಯೇ ಬೆರೆತುಕೊಂಡಿದೆ. ಉದಾಹರಣೆಗೆ ಸಂತ ಗುರು ಜಂಬಾಜಿ ಮಹಾರಾಜ ಅವರಿಂದ ಸ್ಥಾಪನೆಯಾದ ಬಿಷ್ಣೋಯ್‌ ಸಮಾಜ ಪರಿಸರ ಸಂರಕ್ಷಣೆಯನ್ನೇ ಮೂಲ ಧ್ಯೇಯವಾಗಿ ಹೊಂದಿದೆ. ಉತ್ತರ ಭಾರತದಲ್ಲಿ ವಿಶೇಷವಾಗಿ ರಾಜಸ್ಥಾನ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಷ್ಣೋಯ್‌ ಸಮಾದ 29 ತತ್ವಗಳ ಪೈಕಿ ಹೆಚ್ಚಿನವು ಪ್ರಕೃತಿ ಗಿಡಮರ ಪ್ರಾಣಿಪಕ್ಷಿಗಳ ರಕ್ಷಣೆಯನ್ನು ಧಾರ್ಮಿಕ ಕರ್ತವ್ಯವ ಎಂದೇ ವಿಧಿಸುತ್ತವೆ. ಬಿಷ್ಣೋಯ್‌ ಸಂಪ್ರದಾಯ ಸ್ಥಾಪನೆಯಾಗಿ ಸುಮಾರು 300 ವರ್ಷಗಳ ನಂತರ 1730ರಲ್ಲಿ ಜೋದಪುರ ಸಮೀಪದ ಖೇಜರ್ಲಿ ಗ್ರಾಮದಲ್ಲಿ ನಡೆದ ಘಟನೆ – ಅಲ್ಲಿ ದೊಡ್ಡ ಪ್ರಮಾಣದಲ್ಲಿ ಬನ್ನಿ ಮರಗಳ ಕಾಡು ಬೆಳೆದಿತ್ತು. ಜೋಧಪುರದ ಮಹಾರಾಜ ಒಂದು ಅರಮನೆಯನ್ನು ನಿರ್ಮಿಸಲು ಬಯಸಿದಾಗ ಅರಮನೆ ಕಟ್ಟಲು ಬೇಕಾಗಿದ್ದ ಮರಗಳನ್ನು ಆ ಕಾಡಿನಿಂದ ಕಡಿದು ತರಲು ಸೈನಿಕರನ್ನು ಅಟ್ಟಿದ. ಮರಗಳ ರಕ್ಷಣೆಗೆ ಕರ್ತವ್ಯಬದ್ಧರಾಗಿದ್ದ ಬಿಷ್ಣೋಯಿಗಳು ವಿರೋಧಿಸಿದರು. ರಾಜಾಜ್ಞೆಯಂತೆ ಮರಗಳ ಕಟಾವಿಗೆ ನಿಂತಿದ್ದ ಸೈನಿಕರು ವಿರೋಧವನ್ನು ಲೆಕ್ಕಿಸದೇ ಇದ್ದಾಗ, ಕಣ್ಣ ಮುಂದೆಯೇ ತಮ್ಮ ನಂಬಿಕೆ ಮತ್ತು ಕಾಡು ಎರಡೂ ನಾಶವಾಗುತ್ತಿದ್ದುದನ್ನು ಸಹಿಸದ ಅಮೃತಾ ದೇವಿ ಎಂಬ ಹೆಸರಿನ ಬಿಷ್ಣೋಯಿ ಮಹಿಳೆ ಮರವನ್ನು ಅಪ್ಪಿಕೊಂಡು ಮರಕಡಿಯುವ ಮೊದಲು ತನ್ನ ತಲೆಕಡಿಯಿರಿ ಎಂದು ಸವಾಲು ಹಾಕಿದಳು. ಮರರಕ್ಷಣೆಗಾಗಿ ಸೈನಿಕರ ಕತ್ತಿಗೆ ಕೊರಳೊಡ್ಡಿದಳು. ಅವಳಿಂದ ಪ್ರೇರಣೆ ಪಡೆದ ಸುಮಾರು 350ಕ್ಕೂ ಹೆಚ್ಚು ಗ್ರಾಮಸ್ಥರು ಮರವನ್ನು ಅಪ್ಪಿಕೊಂಡು ಆತ್ಮಾಹುತಿಗೈದರು. ಸುದ್ದಿ ರಾಜನಿಗೆ ತಲುಪಿತು. ಪಶ್ಚಾತ್ತಾಪಗೊಂಡ ರಾಜ ಆ ಗ್ರಾಮಕ್ಕೆ ಬಂದು ಕ್ಷಮಾಪಣೆ ಕೇಳಿದ ಮತ್ತು ಆ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿ ಯಾವುದೇ ಮರಗಿಡಗಳನ್ನು ಕಡಿಯಬಾರದು, ಪ್ರಾಣಿಗಳನ್ನು ಸಾಯಿಸಬಾರದು ಎಂದು ಕಾನೂನು ಜಾರಿಗೊಳಿಸಿದ. ಇಂದಿಗೂ ಸಹ ಈ ಕಾನೂನು ಜಾರಿಯಲ್ಲಿದೆ.

***************************************************************************************************



ಹಿಂದೂ ಹೃದಯ ಸಾಮ್ರಾಟನಾದ ಮರಾಠಿ ಮಾಣೂಸ್‌

 (ವಿಕ್ರಮ - 25 ಜನವರಿ 2026) ಸುದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿ ನಿರಂತರ ಸಕ್ರಿಯರಾಗಿದ್ದು, ಜೊತೆಗೆ ಪ್ರಸ್ತುತರೂ ಆಗಿದ್ದು ತಮ್ಮ ಬದುಕಿನ ನಂತರವೂ ಪ್ರಭಾವಿಯಾಗಿರು...