(ವಿಕ್ರಮ - 25 ಜನವರಿ 2026)
ಸುದೀರ್ಘ ಕಾಲ ಸಾರ್ವಜನಿಕ
ಬದುಕಿನಲ್ಲಿ ನಿರಂತರ ಸಕ್ರಿಯರಾಗಿದ್ದು, ಜೊತೆಗೆ ಪ್ರಸ್ತುತರೂ ಆಗಿದ್ದು ತಮ್ಮ ಬದುಕಿನ ನಂತರವೂ ಪ್ರಭಾವಿಯಾಗಿರುವ
ವ್ಯಕ್ತಿಗಳು ವಿರಳ. ಭಾರತ ಕಂಡ ಅಂತಹ ಓರ್ವ ವಿಶಿಷ್ಟ ನೇತಾರ ಬಾಳಾ ಠಾಕ್ರೆ. ಪುಣೆಯ ಸಾಮಾನ್ಯ ಮರಾಠಿ
ಕುಟುಂಬದಲ್ಲಿ ಜನಿಸಿದ ಬಾಳ ಕೇಶವ ಠಾಕ್ರೆ (ಜನನ 23 ಜನವರಿ 1926) ವಾಜಪೇಯಿ, ಆಡ್ವಾಣಿ ಮೊದಲಾದವರ
ಸಮಕಾಲೀನರಾಗಿ ಯಾವ ಸಾಂವಿಧಾನಿಕ ಹುದ್ದೆಗೂ ಏರದೇ, ಒಂದೇ ಒಂದು ಚುನಾವಣೆಯಲ್ಲಿಯೂ ಸ್ವಯಂ ಸ್ಪರ್ಧೆ
ಮಾಡದೇ, ಬದಲಾಗಿ ಶಿಸ್ತುಕ್ರಮದ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೂ ಮತದಾನ ಮಾಡುವ ಅಧಿಕಾರಿದಿಂದಲೂ
ನಿಷೇಧಕ್ಕೊಳಪಟ್ಟರೂ (1999ರಲ್ಲಿ 6 ವರ್ಷಗಳ ಕಾಲ) ರಾಷ್ಟ್ರದ ಅದರಲ್ಲೂ ವಿಷೇಶವಾಗಿ ಮಹಾರಾಷ್ಟ್ರದ
ರಾಜಕೀಯದಲ್ಲಿ ಅಚ್ಚಳಿಯದ ಪ್ರಭಾವವನ್ನು ಬೀರಿದ್ದು ಅದ್ವಿತೀಯವಾದುದು. ‘ಸಿಂಹ ಎಂದೂ ಚುನಾವಣೆಗೆ ನಿಲ್ಲುವುದಿಲ್ಲ, ಅದು ತನ್ನ ತಾಕತ್ತಿನಿಂದ ಆಳುತ್ತದೆ’
ಇದು ಶಿವಾಜಿ ಮಹಾರಾಜರ ಧ್ವಜವನ್ನು ಕೈಯಲ್ಲೆತ್ತಿ ಹಿಡಿದ ಬಾಳಾಸಾಹೇಬರ ವಾದ.
ಕುಂಚದಿಂದ ಆರಂಭವಾದ
ಕ್ರಾಂತಿ
ಬಾಳಾ
ಠಾಕ್ರೆ ಅಂದರೆ ಸಾಮಾನ್ಯವಾಗಿ ಕಣ್ಣ ಮುಂದೆ ಬರುವುದು ಒಬ್ಬ ಖಡಕ್ ನಾಯಕನ ರೂಪ, ಆದರೆ ಅವರೊಳಗೆ ನವಿರಾದ
ರೇಖೆಗಳು ಮತ್ತು ತಿಳಿಹಾಸ್ಯದ ಮೂಲಕ ಚುರುಕು ಸಂದೇಶ ಮುಟ್ಟಿಸಬಲ್ಲ ವ್ಯಂಗಚಿತ್ರಕಾರನಿದ್ದ ಎನ್ನುವುದು
ಅನೇಕರಿಗೆ ಗೊತ್ತಿಲ್ಲ. ಅವರ ಸಾರ್ವಜನಿಕ ಚಟುವಟಿಕೆ ಆರಂಭವಾಗಿದ್ದು ರಾಜಕೀಯ ವ್ಯಂಗಚಿತ್ರಕಾರನಾಗಿ,
ಪತ್ರಕರ್ತನಾಗಿ. ಆರಂಭದಲ್ಲಿ ಮುಂಬೈನ (ಅಂದಿನ ಬಾಂಬೆ) ದ ಫ್ರೀ ಪ್ರೆಸ್ ಜರ್ನಲ್‌ನಲ್ಲಿ ಪ್ರಕಟವಾಗುತ್ತಿದ್ದ
ಅವರ ವ್ಯಂಗ್ಯಚಿತ್ರಗಳು ತೀಕ್ಷ್ಣ ರಾಜಕೀಯ ವಿಡಂಬನೆಗಳಿಂದ ಗಮನ ಸೆಳೆದವು. ಟೈಮ್ಸ್ ಆಫ್ ಇಂಡಿಯಾದ
ಭಾನುವಾರದ ಆವೃತ್ತಿಗಳಲ್ಲಿಯೂ ಅವರ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತಿದ್ದವು. ಖ್ಯಾತ ವ್ಯಂಗ್ಯಚಿತ್ರಕಾರ
ಆರ್ ಕೆ ಲಕ್ಷ್ಮಣರಿಗೆ ಅವರು ಸಹೋದ್ಯೋಗಿಯಾಗಿದ್ದರು. ನಂತರ ಕೆಲವು ಕಾಲ ನ್ಯೂಸ್ ಡೇಲಿ ಎನ್ನುವ
ದಿನಪತ್ರಿಯಕೆನ್ನು ಅಲ್ಪಕಾಲ ನಡೆಸಿದರು. 1960ರಲ್ಲಿ ಸಹೋದರ ಶ್ರೀಕಾಂತ ಠಾಕ್ರೆ ಜೊತೆಗೆ ಸೇರಿ ಮಾರ್ಮಿಕ್
ಹೆಸರಿನ ಮರಾಠಿ ವಾರಪತ್ರಿಕೆಯನ್ನು ಆರಂಭಿಸಿದರು. ನಂತರದ ದಶಕದಲ್ಲಿ ಅವರು ಸ್ಥಾಪಿಸಿದ ದಿನಪತ್ರಿಕೆ
‘ಸಾಮ್ನಾ’ ಶಿವಸೇನೆ ಪಕ್ಷದ ಮುಖವಾಣಿಯಾಗಿದೆ.
ಈ
ಎಲ್ಲ ಕಾರ್ಯಗಳ ಹಿಂದೆ ತನ್ನ ತಂದೆಯ ಗಾಢವಾದ ಪ್ರಭಾವ ಇರುವುದನ್ನು ಅವರೇ ಹೇಳಿಕೊಂಡಿದ್ದಾರೆ ಪ್ರಭೊದನಕರ್
ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದ ಬಾಳ ಠಾಕ್ರೆಯವರ ತಂದೆ ಕೇಶವ ಠಾಕ್ರೆ ಪತ್ರಕರ್ತರಾಗಿ ದುಡಿದವರು,
ಮರಾಠಿ ಭಾಷಿಕ ಪ್ರದೇಶಗಳ ಏಕೀಕರಣಕ್ಕಾಗಿ ಶ್ರಮಿಸಿದ ಸಂಯುಕ್ತ ಮಹಾರಾಷ್ಟ್ರ ಆಂದೋಲನ ಅಗ್ರಗಣ್ಯ ನೇತಾರರಾಗಿದ್ದರು.
ಪ್ರಾದೇಶಿಕವಾದಿ ಮರಾಠಿ ಮಾಣೂಸ್
ಇಂದೂ
ಕೇಳಿಬರುವ ಲುಂಗಿ-ಪುಂಗಿ, ಬಿಹಾರಿ ವಲಸಿಗರ ವಿರೋಧದ ಸ್ಲೋಗನ್ನುಗಳ ಮೂಲವನ್ನು 1960ರ ದಶಕದ ಮರಾಠಿ
ಪ್ರಾದೇಶಿಕವಾದದ ಆಂದೋಲನಗಳಲ್ಲಿ ಹುಡುಕಬಹುದು. ಠಾಕ್ರೆ ಸಹೋದರರು ಆರಂಭಿಸಿದ ಮಾರ್ಮಿಕ್ ಪತ್ರಿಕೆ
ಪ್ರಮುಖವಾಗಿ ಮುಂಬೈನ ಮರಾಠಿ ಭಾಷಿಕರ ಸಮಸ್ಯೆಗಳನ್ನು ಎತ್ತಿಕೊಂಡಿತು. ನಿರುದ್ಯೋಗ ಮೊದಲಾದುವುಗಳಿಗೆ
ಮದರಾಸಿಗಳು, ಗುಜರಾತಿಗಳ ವಲಸೆ ಬರುವುದೇ ಕಾರಣ ಎಂದು ವ್ಯಾಖ್ಯಾನಿಸಿತು. ಮರಾಠಿ ಭಾಷಿಕರ ಹಿತ ಕಾಯುವ
ಸಲುವಾಗಿ ಶಿವಸೇನೆ ಎನ್ನುವ ರಾಜಕೀಯ ವೇದಿಕೆಯ ಹುಟ್ಟು ಇಲ್ಲಿಂದ ಆರಂಭವಾಯಿತು. "ಮರಾಠಿ
ಮಾಣೂಸ್" (ಮರಾಠಿ ಮನುಷ್ಯ) ಎಂಬ ಘೋಷಣೆಯೊಂದಿಗೆ ಆರಂಭವಾದ ಈ ಚಳುವಳಿ, ಕೇವಲ ಭಾಷಾ
ಪ್ರೇಮವಲ್ಲದೆ, ಅದು ಸ್ಥಳೀಯರ ಆತ್ಮಗೌರವದ ಸಂಕೇತವಾಗಿತ್ತು. 60 ಮತ್ತು 70ರ ದಶಕಗಳಲ್ಲಿ ದೊಡ್ಡ ಪ್ರಮಾಣದಲ್ಲಿ
ಕಾರ್ಮಿಕರ ಬೆಂಬಲ ಇದಕ್ಕೆ ದೊರಕಿತು. ಬೀದಿ ಹೋರಾಟ, ಪ್ರತಿಭಟನೆಗಳಿಂದ ಆರಂಭವಾಗಿ ಮುಂಬೈನಾದ್ಯಂತ
ಶಿವಸೇನೆ ತನ್ನ ಶಾಖೆಗಳನ್ನು ಸ್ಥಾಪಿಸಿತು. ಠಾಕ್ರೆಯವರ ನೇತೃತ್ವದಲ್ಲಿ ಶಿವಸೇನೆ ಒಂದು ತೋಳ್ಬಲವುಳ್ಳ
ಹಾಗೂ ಶಿಸ್ತಿನ ಕೇಡರ್ ಉಳ್ಳ ಪಕ್ಷವಾಗಿ ಹೊರಹೊಮ್ಮಿತು.
ಕಾರ್ಮಿಕರ ತಕರಾರು, ಸ್ಥಳೀಯ ಕುಂದುಕೊರತೆಗಳನ್ನು ಪರಿಹರಿಸುವ ಮಧ್ಯಸ್ಥಗಾರನಂತೆ ಪ್ರಭಾವವನ್ನು
ಬೆಳೆಸಿಕೊಂಡಿತು. ಪರಿಣಾಮ ಮುಂಬೈನಲ್ಲಿ ಎಡಪಂಥೀಯ ಕಾರ್ಮಿಕ ಯೂನಿಯನ್‌ಗಳನ್ನು ಹಿಂದಿಕ್ಕಿ ಕಾಂಗ್ರೆಸ್‌ನೊಂದಿಗೆ
ನೇರ ಪೈಪೋಟಿಗಿಳಿಯಬಲ್ಲ ಸಮರ್ಥ ಪ್ರತಿಸ್ಪರ್ಧಿಯಾಗಿ ಬೆಳೆಯಿತು.
ಪ್ರಖರ ಹಿಂದೂ ರಾಷ್ಟ್ರವಾದಿ
ಠಾಕ್ರೆ ಅವರ ಜೀವನದ ಅತ್ಯಂತ ಮಹತ್ವದ ತಿರುವು ಎಂದರೆ
ಅದು ಪ್ರಾದೇಶಿಕವಾದದಿಂದ ಪ್ರಖರ ಹಿಂದುತ್ವದತ್ತ ಅವರು ವಾಲಿದ್ದು. 1980ರ ದಶಕದ ವೇಳೆಗೆ
ಭಾರತದ ರಾಜಕಾರಣದಲ್ಲಿ ಓಲೈಕೆಯ ರಾಜಕಾರಣ ತಾರಕಕ್ಕೇರಿತ್ತು. "ಗರ್ವ ಸೇ ಕಹೋ ಹಮ್ ಹಿಂದೂ ಹೈ" ಎಂಬ ಘೋಷಣೆಯನ್ನು ಅವರು
ಪ್ರತಿಧ್ವನಿಸಿದಾಗ, ಅದು ದೇಶಾದ್ಯಂತ ಹೊಸ ಸಂಚಲನ ಮೂಡಿಸಿತು. ಭಾಷೆಯ ಗಡಿಯನ್ನು ಮೀರಿ
ಧರ್ಮ ಮತ್ತು ರಾಷ್ಟ್ರದ ಹಿತಾಸಕ್ತಿ ಮುಖ್ಯ ಎಂಬ ನಿಲುವನ್ನು ಅವರು ತಳೆದರು. 1987ರ ವಿಲೆ ಪಾರ್ಲೆ
ವಿಧಾನಸಭಾ ಉಪಚುನಾವಣೆಯಲ್ಲಿ ಶಿವಸೇನೆಯು ಮೊದಲ ಬಾರಿಗೆ "ಹಿಂದುತ್ವ"ದ ಘೋಷಣೆಯ ಮೇಲೆ
ಸ್ಪರ್ಧಿಸಿ ಗೆದ್ದಾಗ, ಭಾರತೀಯ ರಾಜಕಾರಣದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಯಿತು. ಅವರು ಕೇವಲ ಮಹಾರಾಷ್ಟ್ರದ ನಾಯಕರಾಗಿ ಉಳಿಯದೆ, ಇಡೀ ಭಾರತದ
ಹಿಂದೂಗಳ ಧ್ವನಿಯಾಗಿ ರೂಪುಗೊಂಡರು.
1992ರಲ್ಲಿ ಬಾಬರಿ ಮಸೀದಿ
ಧ್ವಂಸಗೊಂಡ ನಂತರ ಉಂಟಾದ ಅನಿಶ್ಚಿತತೆಯ ನಡುವೆ, "ಅದನ್ನು ಕೆಡವಿದವರು ನನ್ನ
ಶಿವಸೈನಿಕರಾಗಿದ್ದರೆ, ಅದಕ್ಕಾಗಿ ನಾನು ಹೆಮ್ಮೆಪಡುತ್ತೇನೆ" ಎಂದು ಬಹಿರಂಗವಾಗಿ
ಘೋಷಿಸಿದ ಏಕೈಕ ನಾಯಕ ಠಾಕ್ರೆ. ಅವರ ಈ ನಿರ್ಭೀತ ನಿಲುವು ಅವರನ್ನು ಹಿಂದೂಗಳ ಅಪ್ರತಿಮ
ನಾಯಕನನ್ನಾಗಿ ಮಾಡಿತು. ಮುಂಬೈ ಗಲಭೆಯ ಸಮಯದಲ್ಲಿ ಹಿಂದೂಗಳ ರಕ್ಷಣೆಗೆ ಅವರು ನಿಂತರು. ಕಾಶ್ಮೀರದ ಹಿಂದೂಗಳು ಮುಸ್ಲಿಂ ಮೂಲಭೂತಾದಿಗಳ ಹಿಂಸೆಗೆ ಬಲಿಯಾಗಿ ಪಲಾಯನ
ಮಾಡಬೇಕಾಗಿ ಬಂದಾಗಿ ಅವರ ಪರವಾಗಿ ಧ್ವನಿ ಎತ್ತಿದವರಲ್ಲಿ ಮೊದಲಿಗರು ಬಾಳಾ ಠಾಕ್ರೆ. ಅಮರನಾಥ ಯಾತ್ರೆಯ
ಮೇಲೆ ಮುಸ್ಲಿಂ ಉಗ್ರರ ಕರಾಳ ಛಾಯೆ ಬಿದ್ದು ಕೇಂದ್ರ ಸರ್ಕಾರವೂ ಅಸಹಾಯಕತೆಯನ್ನು ಪ್ರದರ್ಶಿಸಿದಾಗ
‘ಹಿಂದೂಗಳು ಅಮರನಾಥ ಯಾತ್ರೆ ಕೈಗೊಳ್ಳುವುದು ಸಾಧ್ಯವಿಲ್ಲ ಎಂತಾದರೆ ಮುಂಬೈನಿಂದ ಹಜ್‌ಗೆ ಒಂದೂ ವಿಮಾನ
ಹಾರುವುದಿಲ್ಲ’ ಎಂದು ಗುಡುಗಿದವರು ಬಾಳಾ ಠಾಕ್ರೆ.
90ರ ದಶಕದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿದ
ಶಿವಸೇನೆ 1995ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿತು.
ರಾಷ್ಟ್ರಮಟ್ಟದಲ್ಲಿಯೂ ಸಹ ಬಿಜೆಪಿಯ ಪ್ರಮುಖ ಮಿತ್ರಪಕ್ಷವಾಗಿ ಶಿವಸೇನೆ ವಾಜಪೇಯಿ ಸರ್ಕಾರದಲ್ಲಿ ಪ್ರಮುಖ
ಪಾತ್ರವನ್ನು ನಿರ್ವಹಿಸಿತು. ಬಾಳಾ ಠಾಕ್ರೆಯವರ ರಾಜಕೀಯ ಮತ್ತು ಶಿವಸೇನೆ ಒಂದು ಮರಾಠಿ ಹಿತಾಸಕ್ತಿಯನ್ನು
ಕಾಯುವ ಪ್ರಾದೇಶಿಕ ಭಾವನೆಗಳಿಂದ ಆರಂಭಗೊಂಡರು ಅದರ ಸಿದ್ಧಾಂತ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ವಿರುದ್ಧ,
ಹಿಂದುತ್ವ ಮತ್ತು ರಾಷ್ಟ್ರೀಯವಾದದ ಪರವಾಗಿ ವಿಕಾಸಗೊಂಡಿತು. ಇಂದು ಮಹಾರಾಷ್ಟ್ರ ಮತ್ತು
ಭಾರತದ ರಾಜಕಾರಣದಲ್ಲಿ ಹಿಂದುತ್ವದ ಮಾತುಗಳು ಕೇಳಿಬರುತ್ತಿದ್ದರೆ, ಅದಕ್ಕೆ ಅಡಿಪಾಯ ಹಾಕಿದವರಲ್ಲಿ
ಠಾಕ್ರೆ ಪ್ರಮುಖರು. ಹಾಗೆಯೇ ಪ್ರಾದೇಶಿಕ
ಶಕ್ತಿಯನ್ನು ರಾಷ್ಟ್ರೀಯ ಆಶಯದೊಂದಿಗೆ ಹೇಗೆ ಜೋಡಿಸಬಹುದು ಎಂಬುದಕ್ಕೆ ಶಿವಸೇನೆ ಮತ್ತು ಬಿಜೆಪಿಯ
ಸುದೀರ್ಘ ಮೈತ್ರಿಯೂ ಒಂದು ಉದಾಹರಣೆ. ಮತ್ತು ಹಿಂದೂ ಹಿತಾಸಕ್ತಿಯ ಧ್ವನಿ ಕ್ಷೀಣವಾಗಿದ್ದ ಸಮಯದಲ್ಲಿ ಸಾರ್ವಜನಿಕವಾಗಿ,
ರಾಜಕೀಯ ವೇದಿಕೆಯಲ್ಲಿ ಹಿಂದುತ್ವದ ಪರವಾಗಿ ನಿಂತು, ಹಿಂದುತ್ವಕ್ಕೆ ರಾಜಕೀಯ ಶಕ್ತಿಯನ್ನು ತುಂಬಿದ
ಮುಂಚೂಣಿ ನಾಯಕ ಬಾಳಾ ಠಾಕ್ರೆ.
ಅವರು ರಾಜಕೀಯ ಜೀವನದಲ್ಲಿ ಎಂದು ಚುನಾವಣೆಗೆ
ನಿಂತು ಗೆಲ್ಲಲಿಲ್ಲ, ಹಾಗೂ ಯಾವುದೇ ಸಾಂವಿಧಾನಿಕ ಹುದ್ದೆಗೆ ಏರಲಿಲ್ಲ. 1995ರಲ್ಲಿ ಶಿವಸೇನೆ-ಬಿಜೆಪಿ
ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಾಗ ಮನೋಹರ ಜೋಶಿ ಮುಖ್ಯಮಂತ್ರಿಯಾದರು. ಆದರೂ
ಸರ್ಕಾರದ ನಿಯಂತ್ರಣ ಸಂಪೂರ್ಣ ನಿಯಂತ್ರಣವಿದ್ದಿದ್ದು ಠಾಕ್ರೆಯವರ ನಿವಾಸ ‘ಮಾತೋಶ್ರೀ’ಯಲ್ಲಿ. ನಂತರದ
ದಶಕಗಳಲ್ಲಿ, ಇತ್ತೀಚೆಗೆ ಅವರ ಮರಣದ ನಂತರವೂ ಶಿವಸೇನೆ ಅನೇಕ ಗುಂಪುಗಳು-ಹೋಳುಗಳಾದರೂ ಪಕ್ಷದಲ್ಲಿ
ಇಂದಿಗೂ ಬಾಳಾ ಠಾಕ್ರೆಯವರ ಸ್ಥಾನ-ಅಧಿಕಾರ-ಪ್ರಭಾವ ಪ್ರಶ್ನಾತೀತವಾಗಿ ಉಳಿಯಿತು.
---------------------------------------------------------------------------------------------
ಸ್ವಾರಸ್ಯಕರ ಸಂಗತಿಗಳು
ಅವರಿಗೆ ರಾಜಕೀಯದೊಂದಿಗೆ ಕಲೆ, ಕ್ರೀಡೆ ಮತ್ತು ಸಾಹಿತ್ಯಗಳ ಬಗ್ಗೆಯೂ ಅಪಾರ ಆಸಕ್ತಿಯಿತ್ತು. ವಿಶೇಷವಾಗಿ ಸಿನಿಮಾ ಕ್ಷೇತ್ರದಲ್ಲಿಯೂ ಅವರಿಗೆ ಆಸಕ್ತಿಯಿತ್ತು,
ಬಾಲಿವುಡ್ಡಿನ ಅನೇಕ ಜನಪ್ರಿಯರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಹಾಗೆಯೇ ಸಿನಿಮಾ ಕಾಸ್ಟಿಂಗ್,
ಪ್ರಚಾರ, ಮಾರ್ಕೆಟಿಂಗ್‌ಗಳಲ್ಲಿಯೂ ಪ್ರಭಾವ ಬೀರಬಲ್ಲವರಾಗಿದ್ದರು. ಭಾರತೀಯ ಸಂಸ್ಕೃತಿ ಕಲೆಗಳ ಬಗ್ಗೆ
ಆದರವಿದ್ದಂತೆಯೇ, ವಿಶ್ವಪ್ರಸಿದ್ಧ ಪಾಪ್ ಗಾಯಕ ಮೈಕಲ್ ಜಾಕ್ಸನ್‌ಗೆ ಆತಿಥ್ಯ ನೀಡಿ ಮುಂಬೈನಲ್ಲಿ
ಆತನ ಕಾರ್ಯಕ್ರಮ ಆಯೋಜಿಸುವ, ಆತನ ಸಂಗೀತವನ್ನು ಆಸ್ವಾದಿಸುವ ರಸಿಕತೆಯೂ ಅವರಲ್ಲಿತ್ತು.
ಬಾಳಾ ಠಾಕ್ರೆ ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಅವರು ಯಾವತ್ತೂ ರಾಜಿ
ಮಾಡಿಕೊಂಡವರಲ್ಲ. ಗಡಿಯಾಚೆಗಿನ ಭಯೋತ್ಪಾದನೆಗೆ
ಕುಮ್ಮಕ್ಕು ನೀಡುವ ಭಾರತವಿರೋಧಿ ಪಾಕಿಸ್ತಾನದೊಂದಿಗೆ
ಕ್ರಿಕೆಟ್ ಆಡುವುದನ್ನು ಅವರು ಕಡುವಾಗಿ ವಿರೋಧಿಸಿದರು. ಶಿವಸೇನೆಯ ಕಾರ್ಯಕರ್ತತು
1991ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸಕ್ಕೆ ಬಂದಾಗ ಮುಂಬೈನ ವಾಂಖೆಡೆ ಸ್ಟೇಡಿಯಮ್‌ನ ಪಿಚ್ ಅಗೆದು
ಪಂದ್ಯ ನಿಲ್ಲಿಸಲು ಮುಂದಾದರು. ಮುಂದೆ 1999ರಲ್ಲಿ ದೆಹಲಿಯಲ್ಲೂ ಇದೇ ರೀತಿ ಪ್ರತಿಭಟಿಸಿದರು. ಹೀಗಿದ್ದೂ
ಪಾಕಿಸ್ತಾನಿ ಕ್ರಿಕೆಟಿಗ ಜಾವೆದ್ ಮಿಯಾಂದಾದನನ್ನು ತಮ್ಮ ಮನೆಗೆ ಆಹ್ವಾನಿಸಿ ಆತನ ಬ್ಯಾಟಿಂಗ್ ಕೌಶಲ್ಯವನ್ನು
ಪ್ರಶಂಸಿಸುವ ಕ್ರೀಡಾ ಸ್ಪೂರ್ತಿಯನ್ನೂ ಹೊಂದಿದ್ದರು.
ಅವರ ಚುರುಕು ಮುಟ್ಟಿಸುವ ವ್ಯಂಗ್ಯಚಿತ್ರಗಳಂತೆ ಭಾಷಣಗಳಲ್ಲೂ ವಿಡಂಬನೆ, ತಮಾಷೆ, ಕೆಲವೊಮ್ಮೆ
ವಿವಾದ ಹುಟ್ಟಿಸುವ ಮಾತುಗಳು ಹೇರಳವಾಗಿರುತ್ತಿದ್ದವು. ಸಭೆಗಳಲ್ಲಿ ಸಾವಿರಾರು ಜನರನ್ನು ತಮ್ಮ ಮಾತಿನಿಂದ
ಮಂತ್ರಮುಗ್ಧಗೊಳಿಸಬಲ್ಲ ಪ್ರಭಾವಿ ವಾಗ್ಮಿಯೂ ಆಗಿದ್ದರು. ಅವರು ಮರಾಠಿಯನ್ನು ಸಹಜ ಬಲದಿಂದ ಮಾತನಾಡುತ್ತಿದ್ದರೂ,
ಭಾರತೀಯ ಮಹಾಕಾವ್ಯಗಳು, ಹಿಂದೂ ಪುರಾಣ ಕಥೆಗಳಿಂದ ಹಿಡಿದು ಮತ್ತು ಪಾಪ್ ಸಂಸ್ಕೃತಿಯನ್ನೂ ಅಷ್ಟೇ ಸಹಜವಾಗಿ ಉಲ್ಲೇಖಿಸಬಲ್ಲವರಾಗಿದ್ದರು. ಈ ಸಾಮರ್ಥ್ಯದಿಂದ ಸ್ಥಳೀಯ ಕುಂದುಕೊರತೆಗಳನ್ನು ವಿಶಾಲ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಪ್ರಸ್ತುತಪಡಿಸುವುದು ಮತ್ತು ಜನಮಾನಸವನ್ನು ತಲುಪಿವುದು ಸಾಧ್ಯವಾಯಿತು.
ಅವರು ಕಾಂಗ್ರೆಸ್‌ನ ರಾಜಕೀಯವನ್ನು ವಿರೋಧಿಸಿ ಸಂಘಟನೆ ಮಾಡಿದರೂ 1975ರಲ್ಲಿ ಇಂದಿರಾ ಗಾಂಧಿ
ತುರ್ತು ಪರಿಸ್ಥಿತಿಯನ್ನು ಹೇರಿದಾಗ ಅದನ್ನು ಬೆಂಬಲಿಸಿದರು ಎನ್ನುವುದೂ ಅರ್ಥವಾಗದ ಸಂಗತಿ. ಆದರೂ
ಇಂದಿರಾ ಗಾಂಧಿಯವರ ನೀತಿಯನ್ನು ಟೀಕಿಸುವ ಅನೇಕ ವ್ಯಂಗ್ಯಚಿತ್ರಗಳು ಕಾಲಕಾಲಕ್ಕೆ ಅವರ ಕುಂಚದಲ್ಲಿ
ಮೂಡಿಬಂದವು.
-------------------------------------------------------------------------------------------------
ವಾರಸುದಾರಿಕೆಯ ವೈರುಧ್ಯಗಳು
ಸ್ವಯಂ ಅಧಿಕಾರದ ಆಸನದಲ್ಲಿ ಕುಳಿತುಕೊಳ್ಳದಿದ್ದರೂ
ಸರ್ಕಾರದ ತಂತ್ರ ಮತ್ತು ಪಕ್ಷದ ಮೇಲೆ ಪ್ರಶ್ನಾತೀತ ಅಧಿಕಾರವನ್ನು ಚಲಾಯಿಸಿದವರು ಬಾಳಾಸಾಹೇಬ್ ಠಾಕ್ರೆ.
ಆದರೆ ಇಂದು ಮಾತೋಶ್ರೀ ಆ ಪ್ರಭಾವವನ್ನು ಉಳಿಸಿಕೊಂಡಿಲ್ಲ. ವಾರಸಿಕೆಯ ತಕರಾರಿನಲ್ಲಿ ಕೆಲವು ವರ್ಷಗಳ
ಹಿಂದೆ ದಾಯಾದಿಗಳು ವಿರೋಧಿಗಳಾದರು. ಪ್ರತ್ಯೇಕ ಸಂಘಟನೆ ಕಟ್ಟಿದ ರಾಜ್ ಠಾಕ್ರೆ ರಾಜಕೀಯವಾಗಿ ಶೂನ್ಯವನ್ನೇ
ಸಂಪಾದಿಸಿದರು. ಹಾಗೆಯೇ ಅಧಿಕಾರದ ಖುರ್ಚಿಯೇರುವ ಕಾಂಕ್ಷೆಗೆ ಬಲಿಯಾದ ಉದ್ಧವ ಠಾಕ್ರೆ ಮತ್ತು ಮೊಮ್ಮಗ
ಆದಿತ್ಯ, ಬಾಳಾ ಠಾಕ್ರೆಯವರ ರಾಜಕೀಯದ ಕಡು ವಿರೋಧಿ ಕಾಂಗ್ರೆಸ್‌ನೊಂದಿಗೇ ಕೈಜೋಡಿಸಿದರು, ಜೊತೆಗೆ
ಶಿವಸೇನೆಯ ವಿಭಜನೆಗೂ ಕಾರಣರಾದರು. ದಾಯಾದಿಗಳು ಇದೀಗ ಮತ್ತೆ ಒಂದಾಗಿ ಬಾಳಾಸಾಹೇಬರ ವಾರಸಿಕೆಯ ಹಕ್ಕುಸ್ಥಾಪನೆಗೆ
ಮುಂದಾಗಿದ್ದಾರೆ, ಜೊತೆಗೆ ಪ್ರಾದೇಶಿಕವಾದದ ಸಂಕುಚಿತತೆಗೂ ಮರಳುವಂತೆ ಕಾಣಿಸುತ್ತಿದೆ. ಇನ್ನೊಂದೆಡೆ
ಠಾಕ್ರೆಯವರ ನಿಜವಾದ ವಾರಸುದಾರರು ತಾವು ಎನ್ನುವ ಶಿವಸೇನೆಯ ಇನ್ನೊಂದು ಗುಂಪಿನ ಸಿದ್ದಾಂತವೂ ಸಹ ಅಧಿಕಾರದ
ಆಸೆಯ ಹೊರತೂ ಬೇರಯೇನೂ ಇದ್ದಂತೆ ಕಾಣುವುದಿಲ್ಲ.
ಮಹಾರಾಷ್ಟ್ರದ ರಾಜಕಾರಣದಲ್ಲಿ ಬಾಳಾ ಠಾಕ್ರೆಯವರ
ವಾರಸಿಕೆಯ ಗೊಂದಲಗಳೇನೇ ಇರಲಿ. ಆದರೆ ಅವರ ಸಿದ್ದಾಂತ ಇಂದು ಪ್ರಸ್ತುತವೇ ? ಎನ್ನುವ ಪ್ರಶ್ನೆ ಬರಬಹುದು.
ಪ್ರಮುಖವಾಗಿ ಕಂಡುಬರುವ ಸಂಗತಿಗಳು ಅಂದರೆ ಪ್ರಾದೇಶಿಕ ಹಿತವನ್ನು ಕಾಯುವ ಪಕ್ಷವಾಗಿ ಆರಂಭವಾದ ಶಿವಸೇನೆ
ರಾಷ್ಟ್ರದ ವಿಷಯದಲ್ಲಿ ಮತ್ತು ಹಿಂದೂ ಹಿತದ ಸಂದರ್ಭ ಬಂದಾಗ ಪ್ರಾದೇಶಿಕವಾದದ ಸಂಕುಚಿತತೆಯನ್ನು ಮೀರಿ
ಹೇಗೆ ನಿಲ್ಲಬಹುದು ಎನ್ನುವುದಕ್ಕೆ ಒಂದು ಮಾದರಿಯಾಗಿದೆ. ಇದನ್ನು ಶಿವಸೇನೆ ಮತ್ತು ಬಿಜೆಪಿಯ ನಡುವೆ,
ಒಂದಿಷ್ಟು ಭಿನ್ನಮತಗಳ ಹೊರತಾಗಿಯೂ ದೀರ್ಘ ಕಾಲ ಬೆಳದುಬಂದ ಮೈತ್ರಿ, ವಿಶೇಷವಾಗಿ ವಾಜಪೇಯಿ ಸರ್ಕಾರದ
ಅವಧಿಯಲ್ಲಿ ಶಿವಸೇನೆಯ ಬೆಂಬಲ ಮೊದಲಾದ ನಿದರ್ಶನಗಳಲ್ಲಿ ಕಾಣಬಹುದು.ಇನ್ನೊಂದು ಹಿಂದುತ್ವದ ಪರವಾದ
ನಿರ್ಭೀತ ಮತ್ತು ಯಾವುದೇ ಮುಲಾಜಿಗೆ ರಾಜಿಯಾದ ಪ್ರಬಲ ಧ್ವನಿಯಾಗಿದ್ದವರು ಬಾಳಾ ಠಾಕ್ರೆ. ಮರಾಠಿ ಮಾಣೂಸ್
ಪ್ರಖರ ಹಿಂದೂ ರಾಷ್ಟ್ರವಾದಿಯಾಗಿ ಪರಿವರ್ತನೆಯಾದುದೂ ಸಹ ಒಂದು ಗಮನೀಯ ಅಂಶವಾಗಿದೆ. ಇಂದು ಬಂಗಾಲ
ಮೊದಲಾದ ಕಡೆಗಳಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ-ಹಿಂಸಾಚಾರಗಳನ್ನು ಕಂಡಾಗ ಅಗತ್ಯವಾಗಿ
ಬೇಕಾಗಿದ್ದ ನಿರ್ಭೀತ ಹಾಗೂ ಪ್ರಬಲಾದ ಹಿಂದೂ ಧ್ವನಿಯ ಕೊರತೆ ಬಾಧಿಸುತ್ತಿದೆ.




No comments:
Post a Comment