ಕವಿ ರವೀಂದ್ರನಾಥ ಟಾಗೂರರು ಒಮ್ಮೆ ತಮ್ಮ ಕೋಣೆಯಲ್ಲಿ ಮೊಂಬತ್ತಿಯ ಬೆಳಕಿನಲ್ಲಿ ಏನನ್ನೋ ಓದುತ್ತ, ಇನ್ನೇನನ್ನೋ ಚಿಂತಿಸುತ್ತ ಕುಳಿತಿದ್ದರು. ಮೊಂಬತ್ತಿಯ ಮೇಣ ಕರಗಿ ಜ್ವಾಲೆ ಆರಿಹೋಯಿತು, ಕೋಣೆಯಲ್ಲಿ ಕತ್ತಲು ವ್ಯಾಪಿಸಿತು. ಆಗ ಕಿಟಕಿಯ ಸಂದಿನಿಂದ ಕೋಣೆಯೊಳಗೆ ಇಣುಕಿದ ಬೆಳದಿಂಗಳ ಎಳೆಯೊಂದು ರವೀಂದ್ರರನ್ನು ಸೆಳೆಯಿತು. ಕೋಣೆಯಿಂದ ಹೊರಬಂದ ರವೀಂದ್ರರ ಕವಿಹೃದಯ ಬೆಳದಿಂಗಳ ಸೊಬಗಿಗೆ ಸಂಪೂರ್ಣ ಸೂರೆಗೊಂಡಿತು. ಕವಿ ತನ್ನನ್ನು ತಾನು ಮರೆತರು. ಹುಣ್ಣಿಮೆಯ ಹಾಲುಬೆಳದಿಂಗಳಿಗೆ ಸೋಲದ ಮನೆವೆಲ್ಲಿದೆ ಹೇಳಿ. ಅಂತಹ ಸೋತ ಮನವೇ ’ಗೀತಾಂಜಲಿ’ಯಂತಹ ಮೇರು ಕೃತಿಯನ್ನು ಸೃಷ್ಟಿಸಬಲ್ಲದು. ಪ್ರೇಮಕವಿಗಳನ್ನು ಬೆಳದಿಂಗಳು ಕಾಡಿದಷ್ಟು ಇನ್ನಾರೂ ಕಾಡಿರಲಿಕ್ಕಿಲ್ಲ. ತನ್ನ ಕಂದನಿಗೆ ಉಣ್ಣಿಸುವಾಗಲೂ ಅಮ್ಮನಿಗೆ ಆ ಚಂದಮಾಮನೇ ಬೇಕು.
ಆದರೆ ಕೋಣೆಯಲ್ಲಿನ ಮೊಂಬತ್ತಿ ಇಷ್ಟು ಹೊತ್ತು ಬೆಳದಿಂಗಳ ಬೆಳಕನ್ನು ಮರೆಮಾಡಿತ್ತಲ್ಲ.
ಬೆಂಗಳೂರಿನಂತಹ ನಗರಪ್ರದೇಶಗಳಲ್ಲಿ, ಸಂಜೆ ಆರುಗಂಟೆಗೆ, ಇನ್ನೂ ಸೂರ್ಯನ ಬಿಸಿಲು ಚೆಲ್ಲುತ್ತಿದ್ದರೂ ಮನೆ ಒಳಗೆ, ಹೊರಗೆ, ಬಣ್ಣಬಣ್ಣದ ಅಲಂಕಾರಿಕ ದೀಪಗಳು, ಬೀದಿದೀಪಗಳು, ವಾಹನಗಳ ದೀಪಗಳು, ಹೈಮಾಸ್ಕ್ ಲಾಂಪ್‍ಗಳು, ಹೆಲೊಜಿನ್ ಲೈಟ್‍ಗಳು ಒಂದೊದಾಗಿ ಹೊತ್ತಿಕೊಳ್ಳುತ್ತವೆ. ವಿದ್ಯುತ್ತಿಗೆ ಎಷ್ಟೇ ತತ್ವಾರವಿದ್ದರೂ ರಾತ್ರಿಯಿಡೀ ಲಕ್ಷದೀಪೋತ್ಸವ ನಡೆಯುತ್ತದೆ. ಸೂರ್ಯನೊಡನೆಯೇ ಸ್ಪರ್ಧೆಗಿಳಿಯುವ ಈ ಬೆಳಕಿನ ಮುಂದೆ ಚಂದಮಾಮನ ಬೆಳದಿಂಗಳ ಆಟವೆಲ್ಲಿ ನಡೆದೀತು? ಬೆಳದಿಂಗಳನ್ನೇ ಕಾಣದೇ, ಅದರ ಸೊಬಗನ್ನ ಅನುಭವಿಸದೇ ತಮ್ಮ ಜೀವಮಾನವನ್ನೇ ಕಳೆದ ನಗರವಾಸಿಗಳೆಷ್ಟೋ? ಬೆಂಗಳೂರಿಗರಿಗೆಲ್ಲಿ ಬೆಳದಿಂಗಳ ಭಾಗ್ಯ? ಇನ್ನು ಹೊಟ್ಟೆಪಾಡಿಗೆಂದು ಕೆಟ್ಟು ಪಟ್ಟಣ ಸೇರಿದವರು ಹಳ್ಳಿಗಳಲ್ಲಿ ಕಳೆದ ತಮ್ಮ ಬಾಲ್ಯದ ದಿನಗಳಲ್ಲೇ ಬೆಳದಿಂಗಳ ನೆನಪನ್ನು ಬಗೆಯಬೇಕು.
ಸ್ವಲ್ಪ ವಿಷಯಾಂತರ ಮಾಡೋಣ,
ಸ್ಸ್ಕೂಲು-ಹೈಸ್ಕೂಲುಗಳ ಪರೀಕ್ಷೆಗಳು ಮುಗಿದಿವೆ. ಇಷ್ಟು ದಿನ ಪರೀಕ್ಷಾಗ್ರಸ್ತರಾಗಿದ್ದ ನಗರದ ಹುಡುಗರು ಅಲ್ಲಲ್ಲಿ ಮನೆ ಅಪಾರ್ಟ್‍ಮೆಂಟ್‍ಗಳ ಮುಂದಿನ ರಸ್ತೆಯಲ್ಲಿ ಬ್ಯಾಟು ಬಾಲು, ಹಿಡಿದು ಕಾಣಿಸಿಕೊಳ್ಳುತ್ತಿದ್ದಾರೆ. ಕೆಲದಿನಗಳು ಅಷ್ಟೆ. ನಂತರ ಅವರನ್ನು ಬೇಸಿಗೆ ಶಿಬಿರ summer campಗಳಿಗೋ, ಇನ್ಯಾವುದೋ brain gymಗೋ, ಕರಾಟೆ ಕ್ಲಾಸಿಗೋ, ಹೆಣ್ಣುಮಕ್ಕಳಾದರೆ ಸಂಗೀತ, ನೃತ್ಯದ ಕ್ಲಾಸುಗಳಿಗೋ, ಚಿತ್ರಕಲೆಯ ವರ್ಗಗಳಿಗೋ, ಇಲ್ಲಾ ಮುಂದಿನ ವರ್ಷದ ವಿಷಯಗಳ ಟ್ಯೂಶನ್ನಿಗೋ ಅಟ್ಟಲಾಗುತ್ತದೆ. ಬೇಸಿಗೆ ಪ್ರವಾಸ ಅಂದರೂ ಒಂದೆರಡು ದಿನ ಅಪ್ಪ-ಅಮ್ಮ ಯಾವುದೋ ದೇವಸ್ಥಾನದ ಊರಿಗೋ ಇಲ್ಲ ಇನ್ಯಾವುದೋ ಪ್ರವಾಸಿ ಸ್ಥಳಕ್ಕೋ ಕರೆದುಕೊಂಡು ಹೋಗಿ ಮುಗಿಸಿಬಿಡುತ್ತಾರೆ. ಕಲಿಯಲಿ. ಕರಾಟೆ, ಸಂಗೀತ, ನೃತ್ಯ, ಚಿತ್ರಕಲೆಗಳೂ ಮನುಷ್ಯನ ವಿಕಾಸಕ್ಕೆ ಅಗತ್ಯ. ಆದರೆ ಸಾವಿರಾರು ರೂಪಾಯಿ ತೆತ್ತು ಮಕ್ಕಳನ್ನು ಶಿಬಿರ ಟ್ಯೂಶನ್‍ಗಳಿಗೆ ಸೇರಿಸಿದ ಮಾತ್ರಕ್ಕೆ ಮನಸ್ಸು ಬೆಳೆಬಲ್ಲದೇ? ಬುದ್ಧಿಯ ಸರ್ವಾಂಗೀಣ ವಿಕಾಸವಾಗಬಲ್ಲದೇ?
ಬೇಸಿಗೆಯ ರಜೆಯಲ್ಲಿ ಗಾಳಹಾಕಿ ಕಾದುಕುಳಿತಿರುವ ನಗರಗಳ ನೂರೆಂಟು ಶಿಬಿರಗಳನ್ನು ಬಿಟ್ಟು, ನಮ್ಮ ಮಕ್ಕಳನ್ನು ಹಳ್ಳಿಗಳಲ್ಲಿರುವ ಅಜ್ಜನ ಮನೆಯೋ, ಅಜ್ಜಿಯ ಮನೆಯೋ, ಮಾವ, ಅತ್ತೆ, ದೊಡ್ಡಮ್ಮ, ಚಿಕ್ಕಮ್ಮನ ಅಥವ ಸಂಭಂದಿ ಸ್ನೇಹಿತರ ಮನೆಗೋ ಒಂದೆರಡು ವಾರ ಕಳುಹಿಸಬಹುದಲ್ಲ?
ಸ್ಕೂಲ್ ವ್ಯಾನಗಳಲ್ಲಿ, ಆಟೋಗಳಲ್ಲಿ ಮುದುಡಿಕುಳಿತು ಶಾಲೆಗೆ ಹೋಗುವ ನಮ್ಮ ಮಕ್ಕಳು ಹಳ್ಳಿಯ ಸ್ವಚ್ಛಂದ ಬಯಲಿನಲ್ಲಿ ಒಮ್ಮೆ ಓಡಾಡಲಿ, ನಾಲ್ಕು ಗೋಡೆಗಳ ಮಧ್ಯೆ ಸದಾ ತಮ್ಮ ತಮ್ಮ ಕೆಲಸದಲ್ಲೇ ನಿರತರಾಗಿರುವ ಅಪ್ಪ ಅಮ್ಮರನ್ನು ಸ್ವಲ್ಪ ದಿನ ಬಿಟ್ಟು ಇತರ ಸಂಭಂದಿಗಳ ಸ್ನೇಹ ಪ್ರೀತಿಯನ್ನೂ ಕೆಲದಿನ ಸವಿಯಲಿ. ಹಳ್ಳಿಯ ಹುಡುಗ ಹುಡುಗಿಯರೊಡನೆ ಸ್ಕೂಲ್‍ಗಳ ಟೀಚರುಗಳ ಭಯವಿಲ್ಲದೇ ಸವಿಗನ್ನಡದಲ್ಲಿ ಬಾಯ್ತುಂಬ ಹರಟೆಹೊಡೆಯಲಿ. ಗುಡ್ಡಗಳ ಕರಿಬಂಡೆಗಳ ಮೇಲೆ ಕುಣಿದಾಡಲಿ, ಎತ್ತರದ ಬೆಟ್ಟದ ಮೇಲೆ ನಿಂತು ಕಿಟಾರನೆ ಕಿರುಚಲಿ, ಹಾಗೆ ಕಿರುಚಿದ ಧ್ವನಿಯ ಪ್ರತಿಧ್ವನಿಗೆ ಒಮ್ಮೆ ಬೆಚ್ಚಿ ಬೀಳಲಿ, ವಿಸ್ಮಯಗೊಳ್ಳಲಿ. ಮರಗಳ ಕೊಂಬೆಗಳ ಮೇಲೆ ಹಳ್ಳಿಯ ಗೆಳೆಯ ಗೆಳತಿಯರೊಡನೆ ಮಂಗಗಳಂತೆ ಜಿಗಿದಾಡಲಿ. ಅಡಿಕೆ ಮರಹತ್ತುವ ಕೊನೆಗೌಡನನ್ನು ಕಂಡು ತಾನೂ ಹತ್ತುತ್ತೇನೆಂದು ಹೋಗಿ, ಜಾರಿ ಬಿದ್ದು ತೊಡೆ ತೆರೆಚಿಕೊಳ್ಳಲಿ. ಮಾವು, ಪೇರಲ, ಹಲಸು, ಜಂಬೆ, ಸಕ್ಕರೆ ಕಂಚಿ, ನೇರಳ, ಸಂಪಿಗೆ ಹಣ್ಣುಗಳನ್ನು ತಾವೇ ಮರದಿಂದ ಕಿತ್ತು ತಿನ್ನಲಿ. ಮಾವಿನ ಮರಕ್ಕೆ ಕಲ್ಲು ಹೊಡೆದಾಗ ರಟ್ಟೆಯಲ್ಲಿ ಆಗುವ, ಆಡುವಾಗ ಬಿದ್ದು ಮಂಡಿಯಲ್ಲಿ ಗಾಯ ಮಾಡಿಕೊಂಡಾಗ ಆಗುವ ಮಧುರ ನೋವನ್ನು ಅನುಭವಿಸಲಿ. ಹಸಿಗೇರುಬೀಜ ಸುಲಿಯಲು ಹೋಗಿ ಕೈಯೆಲ್ಲ ಕಲೆ ಮಾಡಿಕೊಳ್ಳಲಿ, ಹಲಸಿನ ಮೇಣವನ್ನು ತುಟಿಗೆ ಬಡಿದುಕೊಂಡು ಗುದ್ದಾಡಲಿ. ಮಾವಿನ ಸೊನೆಯನ್ನು ಮೂಗಿಗೆ ಬಡಿದುಕೊಂದು ಹುಣ್ಣೆಬ್ಬಿಸಿಕೊಳ್ಳಲಿ. ಬಯಲುಸೀಮೆಯ ಹತ್ತಿ ಸೂರ್ಯಕಾಂತಿ ಬೆಳೆದು ಕಟಾವು ಮಾಡಿದ ಬಟಾಬಯಲಿನಲ್ಲಿ ಕುಣಿದಾಡಿ ಧೂಳನ್ನೆಬ್ಬಿಸಲಿ. ಬಯಲಿನಲ್ಲಿ ಕಣ್ಣಳತೆಗೂ ನಿಲುಕದ ದೂರದಲ್ಲಿ ಆಕಾಶ ಭೂಮಿ ಸೇರುವಲ್ಲಿ ಸೂರ್ಯನ ಉದಯವನ್ನು ಅಸ್ತವನ್ನು ಕಣ್ಣಲ್ಲಿ ತುಂಬಿಕೊಳ್ಳಲಿ, ವಿಶಾಲ ಬಯಲಿನ ನಟ್ಟನಡುವೆ ಹಾದುಹೋಗುವ ರೈಲು ಟ್ರಾಕಿನ ಹಳಿಯ ಮೇಲೆ ಬ್ಯಾಲೆನ್ಸ್ ಮಾಡುತ್ತ ನಡೆಯಲಿ. ಈಗಷ್ಟೇ ನೆಟ್ಟಿರುವ ಕಬ್ಬಿನ ಗದ್ದೆಯ ಬದುವಿನ ಮೇಲೆ ನಿಧಾನ ನಡೆಯಲಿ. ಸಮುದ್ರದ ದಂಡೆಯ ಮೇಲೆ ಮರಳಿನ ಗುಹೆ ತೋಡಲಿ. ಮರಳಿನ ಮೇಲೆ ತಮ್ಮ ಹೆಸರನ್ನು ಬರೆದು ಅಲೆಯೊಂದು ಬಂದು ಅದನ್ನು ಅಳಿಸುವುದನ್ನು ಕಂಡು ಕುಣಿಯಲಿ, ಮರಳಿನ ಮೇಲೆ ಹೊರಳಾಡಲಿ. ಮಟ ಮಟ ಮಧ್ಯಾಹ್ನ ಬಾಯಾರಿ ಮನೆಗೆ ಓಡಿ ಬಂದಾಗ ಸಿಗುವ ತಂಪಾದ ಬೆಲ್ಲ ಬೆರೆಸಿದ ಮಜ್ಜಿಗೆಯ ರುಚಿಯನ್ನು ಸವಿಯಲಿ. ಬೆಳಬೆಳಿಗ್ಗೆ ಹಾಸಿಗೆಯಿಂದ ಏಳುವ ಮೊದಲೆ ಅಡುಗೆ ಮನೆಯಿಂದ ಬರುವ "ಸುಂಯ್" ಎನ್ನುವ ದೋಸೆ ಎರೆಯುವ ಸದ್ದನ್ನು ಕಿವಿತುಂಬಿಸಿಕೊಳ್ಳಲಿ. ಆಕಳ ಕೆಚ್ಚಲಿಗೆ ಬಾಯಿಟ್ಟು ಹಾಲಿನ ನೊರೆಯೆಬ್ಬಿಸುವ, ಹಾಲುಂಡು ಛಂಗನೆ ನೆಗೆಯುವ ಕರುವಿನ ಉತ್ಸಾಹವನ್ನು ಕಂಡು ನಲಿಯಲಿ. ಸಂಜೆಯಹೊತ್ತಿಗೆ ಮೆಂದು ಮನೆಯ ಕಡೆ ಹೊರಡುವ ದನಕರುಗಳು ನಡೆದು ಮಾಡಿದ ದಾರಿಗುಂಟ ನಡೆಯಲಿ. ಮಧ್ಯಾಹ್ನದ ವೇಳೆ ಬಯಲುಸೀಮೆಯ ಕೆಸರು ಹೊಂಡಗಳಲ್ಲು ಮುಳುಗಿ, ತಲೆಯನ್ನಷ್ಟೇ ಮೇಲೆತ್ತಿ ಬುಸ್ಸೆಂದು ಉಸಿರು ಬಿಡುವ ಎಮ್ಮೆ ಕೋಣಗಳಂತೆ ನಿಟ್ಟುಸಿರು ಬಿಡಲಿ. ತಿಳಿನೀರ ಹಳ್ಳ ಕೆರೆಗಳ ತಳದಲ್ಲಿ ಕುಳಿತಿರುವ ಕೆಸರನ್ನು ಕುಣಿದಾಡಿ ಮೇಲೆಬ್ಬಿಸಲಿ. ಸಂಜೆಯ ಹೊತ್ತಿಗೆ ಪಂಪ್‍ಸೆಟ್ಟಿನ ಪೈಪಿನಿಂದ ಬರುವ ನೀರಿನ ಧಾರೆಗೆ ತಲೆಕೊಟ್ಟು ಸ್ನಾನ ಮಾಡಲಿ. ಯಾರೂ ಇಲ್ಲದ ಊರಿನ ದೇವಸ್ಥಾನದ ಮೈಲಿಯಲ್ಲಿ ಬೇಕಾದಷ್ಟು ಬಾರಿ ಸುತ್ತು ಹೊಡೆಯಲಿ. ಊರಿನ ಹಬ್ಬ ಜಾತ್ರೆ ಪೇಟೆಗಳಲ್ಲಿ ಗೆಳೆಯರ ಕೈ ಕೈ ಹಿಡಿದು ಓಡಾಡಲಿ, ದೇವರ ಪಲ್ಲಕ್ಕಿಯ ಹಿಂದೆ ಇಡೀ ಊರನ್ನು ಸುತ್ತಲಿ. ಬಣ್ಣಬಣ್ಣದ ಬಾಂಬೆ ಮಿಠಾಯಿ, ಆಯ್ಸ್ ಕ್ಯಾಂಡಿಗಳನ್ನು ಸವಿಯಲಿ. ಜಾತ್ರೆ ಪೇಟೆಯಲ್ಲಿ ರಾಗಿನೀರು, ಎಳ್ಳುನೀರು, ನಿಂಬೆ ಪಾನಕ ಕುಡಿದು ತಂಪಾಗಲಿ. ಕೆಂಡ ಹಾಯುವವನ ಸಾಹಸವನ್ನು ಕಂಡು ಅಚ್ಚರಿಗೊಳ್ಳಲಿ. ರಾತ್ರಿ ನಿದ್ದೆಗಣ್ಣಲ್ಲಿ ಒಬ್ಬರೆ ಉಚ್ಚೆ ಹೊಯ್ಯಲೆಂದು ಮನೆಯಮುಂದಿನ ತೆಂಗಿನ ಮರದ ಬಳಿಗೆ ಬಂದಾಗ ಬೆಳದಿಂಗಳಲ್ಲಿ ದೂರದ ಗಿಡದ ನೆರಳೊಂದು ಅಲುಗಿದಾಗ, ದೂರದಲ್ಲಿ ನಾಯಿಯೋ, ನರಿಯೋ ಕೂಗಿದಾಗ ಭೂತ ಎಂದು ಭಾವಿಸಿ ಸಣ್ಣಗೆ ಬೆವರಲಿ. ಮುಸ್ಸಂಜೆಯ ಮುನ್ನ ಕಾದಿರುವ ನೆಲದ ಮೇಲೆ ಪಟಪಟನೆ ಉದುರುವ ಮಳೆಹನಿ ಎಬ್ಬಿಸುವ ಮಣ್ಣಿನ ಪರಿಮಳವನ್ನು ಮೂಗಿನ ತುಂಬ ತುಂಬಿಕೊಳ್ಳಲಿ. ... ... ... .. .. ನಗರದ ಹೊರಗೂ ಬದುಕಿದೆ ಎಂದು ಸ್ವಲ್ಪವಾದರೂ ತಿಳಿಯಲಿ.
ಇವೆಲ್ಲ ಅನುಭವಗಳಿಂದ ದೂರವಿಟ್ಟು ನಗರವಾಸಿಗಳು ತಮ್ಮ ಮಕ್ಕಳಿನ್ನು ವಂಚಸುತ್ತಿದ್ದಾರೆ ಅನ್ನುಸುವುದಿಲ್ಲವೇ?
ನಮ್ಮ ಮಕ್ಕಳು ಬೆಳದಿಂಗಳನ್ನು ಕಾಣದೇ ತಮ್ಮ ಬಾಲ್ಯವನ್ನು ಕಳೆಯುವಂತಾಗಬಾರದು ಅಲ್ಲ?
ವಿಷಯಾಂತರವು ಬೆಸೆದ ಕೊಂಡಿ ಅದ್ಭುತ. ಕಳೆದುಕೊಂಡ ಕೊಂಡಿ ಬೆಸೆಯುವಂತಾಗಲಿ ಹೊಟ್ಟೆಪಾಡಿಗೆ ನಗರ ಸೇರಿಕೊಂಡ ವಡಬರ ಬಡ ಮಕ್ಕಳ ಜೀವನದಲ್ಲಿ.
ReplyDeleteಶಿಶಿರ ಹೆಗಡೆ
good
ReplyDeletei didnot know u can write so well man
good job keep it up
- Shyam