Monday, March 22, 2010

ಸಾತ್ತ್ವಿಕ ಸುಳ್ಳು

          ’ಅಶ್ವತ್ಥಾಮೋ ಹತಃ ಇತಿ, ನರೋ ವಾ ಕುಂಜರೋ ವಾ’; ಆ ಧರ್ಮರಾಜನ ಬಾಯಿಂದಲೇ ಕೃಷ್ಣ ಅರ್ಧಸತ್ಯವನ್ನು ಹೇಳಿಸಿದನಲ್ಲ. ಧರ್ಮರಾಜನಿಗೆ ಗೊತ್ತಿತ್ತು, ಭೀಮ ಕೊಂದಿದ್ದು ಅಶ್ವತ್ಥಾಮ ಎಂಬ ಹೆಸರಿನ ಆನೆಯನ್ನು ಎಂದು. ಆದರೂ ’ನರೋ ವಾ ಕುಂಜರೋ ವಾ’ ಎಂದು ಸಣ್ಣ ಧ್ವನಿಯಲ್ಲಿ ಹೇಳಿದ. ಅದನ್ನೂ ಕೃಷ್ಣ ತನ್ನ ಪಾಂಚಜನ್ಯದ ಧ್ವನಿಯಿಂದ ಮರೆಮಾಚಿಸಿದ. ಸುಳ್ಳು ದ್ರೋಣನಿಗೆ ಸತ್ಯವಾಗಿ ಕೇಳುವಂತೆ ಮಾಡಿದ. ಪರಿಣಾಮ ದ್ರೋಣನಿಗೆ ತನ್ನ ಮಗನ ಚಿರಂಜೀವತ್ವದ ಮೇಲೆಯೇ ನಂಬಿಕೆಯಿರದಾಯಿತು. ಸೇನಾಪತಿತ್ವದ ಕರ್ತವ್ಯಕ್ಕಿಂತ ಪುತ್ರಮೋಹವೇ ಮೇಲಾಯಿತು. ಕುರುಕ್ಷೇತ್ರ ಯುದ್ಧದ ನಡೆಯೇ ಬದಲಾಯಿತು.
          ನಾವೆಲ್ಲರೂ ಹೇಳಿರುತ್ತೇವೆ, ಸುಳ್ಳನ್ನು. ಸುಳ್ಳಿಗೇ ಹೆಸರುವಾಸಿಯಾದ ರಾಜಕಾರಣಿಗಳನ್ನು ಬಿಡಿ, ’ಸತ್ಯದೊಂದಿಗೆ ಪ್ರಯೋಗ’ವನ್ನೇ ಮಾಡಿದ ಮಹಾತ್ಮಾ ಗಾಂಧಿಯವರೂ ಹೇಳಿರುತ್ತಾರೆ. ಹಾಗೆ ನೋಡಿದರೆ ಕವಿ ಹೇಳುವುದು ಸುಳ್ಳಿನ ಕಂತೆ. ಹೇಗೆ ಕೇಳುವಿರಾ? ಕವಿಯ ಅಭಿವ್ಯಕ್ತಿಯ ಹೆಚ್ಚಿನ ಭಾಗ ಕಲ್ಪನೆ, ಅಂದರೆ ಅವಾಸ್ತವ, ಅಂದರೆ ವಸ್ತುಸ್ಥಿತಿಯಲ್ಲಿ ಇಲ್ಲದಿರುವುದು, not existing in reality, ಅಸತ್ಯ, ಸುಳ್ಳು! ಸುಳ್ಳಿರದೇ ವಕೀಲೀ, ಜ್ಯೋತಿಷ್ಯ, ವ್ಯಾಪಾರಾದಿ ವೃತ್ತಿಗಳು ನಡೆಯಲು ಸಾಧ್ಯವೇ? ನಮ್ಮ ನಮ್ಮ ಮೇಲಧಿಕಾರಿಗಳಲ್ಲಿ ನಾವೇ ಎಷ್ಟು ಸುಳ್ಳುಗಳನ್ನು ಹೇಳಿಲ್ಲ? ಇನ್ನು ’ದೇವರು’ ಮತ್ತು ಅವನಿಗೆ/ಅವಳಿಗೆ/ಅದಕ್ಕೆ ಇರುವ (ನಾವು ಇಟ್ಟಿರುವ) ಅಗಣ್ಯ ನಾಮ ರೂಪಾದಿಗಳಿಗಿಂತ ಬೇರೆ ದೊಡ್ಡ ಸುಳ್ಳು ಬೇಕೇ? (ಪ್ರಪಂಚವನ್ನು ನಡೆಸುತ್ತಿರುವ, ಪ್ರಪಂಚವೇ ಆಗಿರುವ ಅವಚನೀಯ ಚೈತನ್ಯದ ಬಗ್ಗೆಯೇನು ನನ್ನ ತಕರಾರಿಲ್ಲ)
          ಆದರೆ...
          ನಮ್ಮ ನಡುವೆಯೇ ಓಡಾಡುತ್ತಿರುವ, ಒಮ್ಮೊಮ್ಮೆ ನಮ್ಮ ಜೀವನದ ಭಾಗವೇ ಎನ್ನಬಹುದಾದ ಕೆಲ ವರ್ಗದ ಸುಳ್ಳುಗಳಿಗೆ ಒಳ್ಳೆಯ ಉದ್ಧೇಶವಿರುತ್ತದೆ. ಅಮ್ಮ ಹಾಲುಕುಡಿಯದ, ಅನ್ನವುಣ್ಣದ, ಮಲಗದ ಕಂದನಿಗೆ ’ಗುಮ್ಮ ಬರುತ್ತಾನೆ, ನಿನ್ನ ಎತ್ತಿಕೊಂಡು ಒಯ್ಯುತ್ತಾನೆ’ ಎಂದು ಸುಳ್ಳು ಹೇಳಿ ಸಂಭಾಳಿಸುತ್ತಾಳೆ. ಮರಣಶಯ್ಯೆಯಲ್ಲಿ ಮಲಗಿರುವ ರೋಗಿಗೆ, ಆತನ ಬಂಧುವರ್ಗದವರಿಗೆ, ’ಏನಿಲ್ಲ, ಸಣ್ಣ ಕಾಯಿಲೆ, ಗುಣವಾಗುತ್ತೆ’ ಎಂದು ವೈದ್ಯ ಸುಳ್ಳು ಸಮಾಧಾನವನ್ನು ಹೇಳುತ್ತಾನೆ. ಫೋನ್ ಮಾಡಿದ ಸ್ನೇಹಿತನೋ, ಅಪರೂಪಕ್ಕೆ ಮನೆಗೆ ಬಂದ ಅತಿಥಿಯೋ ಆರೋಗ್ಯ ಕುಶಲ ವಿಚಾರಿಸಿದಾಗ ಬೆಳಿಗ್ಗೆಯಷ್ಟೆ ಟೈಫಾಯ್ಡ್ ಜ್ವರದಿಂದ ಎದ್ದಿದ್ದರೂ, ಮನೆತುಂಬ ತಾಪತ್ರಯವೇ ತುಂಬಿದ್ದರೂ ಆರೋಗ್ಯವಾಗಿ ಸಂತೋಷದಿಂದ ಇರುವಂತೆ ತೋರಿಸಿಕೊಳ್ಳುತ್ತೇವೆ, ನಮ್ಮ ಸಮಸ್ಯೆಗಳನ್ನು ತೋರಗೊಡದೇ. performance ಅತ್ಯಂತ ಖರಾಬ್ ಆಗಿದ್ದರೂ ಗಾಯಕ, ವಾದಕ, ನಟ, ನರ್ತಕ, ಭಾಷಣಕಾರ, ಕ್ರೀಡಾಪಟು ಮುಂತಾದವರನ್ನು ಎದುರು ತೆಗಳುವುದಿಲ್ಲ, ಬದಲಿಗೆ ’you have done great’ ಎಂದು ಸುಳ್ಳೇ ಹೊಗಳಿಬಿಡುತ್ತೇವೆ. ’ಸಾವಿರ ಸುಳ್ಳನ್ನು ಹೇಳಿಯಾದರೂ ಒಂದು ಮದುವೆ ಮಾಡು’ ಎಂಬ ಗಾದೆಮಾತೇ ಇದೆಯಲ್ಲ.
          ಇತ್ಯಾದಿ ಇತ್ಯಾದಿ
          ಇಂತಹ ’ಸಾತ್ತ್ವಿಕ’ ಉದ್ಧೇಶ ಹೊಂದಿದ ’ಸುಳ್ಳು’ಗಳನ್ನು ಏನೆಂದು ಕರೆಯೋಣ ?
          "ಸಾತ್ತ್ವಿಕ ಸುಳ್ಳು" !!!

1 comment:

  1. hallow sir, I hope you are doing great job with your health. Now i have created a new blog pls visit this & leave your opinion.

    http://neladamatu.blogspot.com

    Namaste

    ReplyDelete

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...