(ಪ್ರಕಟಿತ: ಉತ್ಥಾನ ಮಾಸಿಕ ಜೂನ 2013)
(ಮಾರ್ಗದರ್ಶನ ಮತ್ತು ಸಹಕಾರ ²æà gÁzsÁPÀȵÀÚ ºÉƼÀî)

ಸ್ವಾತಂತ್ರೋತ್ತರ ಭಾರತದ ಇತಿಹಾಸದ ಕಾಲಘಟ್ಟದಲ್ಲಿ ನಮ್ಮ ರಾಜಕೀಯ ನೇತೃತ್ವ ಇಟ್ಟ ಕೆಲವು ತಪ್ಪು ಹೆಜ್ಜೆಗಳು, ನೆರೆಯ ಶತ್ರುರಾಷ್ಟ್ರಗಳ ವಿಸ್ತರಣದ ಹುನ್ನಾರಗಳು, ಮತೀಯ ಮೂಲಭೂತವಾದ ಮತ್ತು ಪ್ರತ್ಯೇಕತಾವಾದಿ ಭಯೋತ್ಪಾದಕ ಚಟುವಟಿಕೆಗಳಿಂದ ಭಾರತದ ಮುಕುಟಮಣಿ ಜಮ್ಮು-ಕಾಶ್ಮೀರ ಇಂದಿಗೂ ಬಗೆಹರಿಯದ ಸಮಸ್ಯೆಗಳ ಜಟಿಲತೆಯಲ್ಲಿ ಸಿಲುಕಿದೆ. ಮಹತ್ವಾಕಾಂಕ್ಷೆಯ ರೋಗದಿಂದ ಬಳಲುತ್ತಿರುವ ಕೆಲವೇ ವ್ಯಕ್ತಿಗಳು ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದುರುದ್ದೇಶದಿಂದ ಪಸರಿಸಿರುವ ಮಿಥ್ಯಾ ಗ್ರಹಿಕೆಗಳು ಜಮ್ಮು ಕಾಶ್ಮೀರದ ದುರಂತ. ಆಳವಾಗಿ ಬೇರೂರಿರುವ ಈ ಅಪನಂಬಿಕೆಗಳೇ ಕಾಶ್ಮೀರದ ತೊಡಕುಗಳ ಮೂಲ ಕಾರಣಗಳೆಂದರೆ ಅತಿಶಯವಾಗಲಾರದು.
ಉದಾಹರಣೆಗೆ, ಜಮ್ಮು ಕಾಶ್ಮೀರವೆಂದರೆ ‘ಕಾಶ್ಮೀರ’ ಎಂಬ ಸಾಮಾನ್ಯ ಗ್ರಹಿಕೆ. ವಾಸ್ತವವಾಗಿ ಕಾಶ್ಮೀರವೆಂದರೆ ಬ್ರಿಟಿಷರ ಕಾಲದ ಜಮ್ಮು ಕಾಶ್ಮೀರ ರಾಜ್ಯದ 7.16% ಕ್ಷೇತ್ರ ಹಾಗೂ ಪ್ರಸ್ತುತ ಭಾರತೀಯ ಆಡಳಿತಕ್ಕೊಳಪಟ್ಟ ರಾಜ್ಯದ 15.63% ಕ್ಷೇತ್ರ ಮಾತ್ರ. ಇನ್ನೊಂದು ಜಮ್ಮು ಕಾಶ್ಮೀರ ಮುಸ್ಲಿಂ ರಾಜ್ಯವೆಂಬ ಸಾಮಾನ್ಯ ನಂಬಿಕೆಯಲ್ಲಿರುವ ಅಭಿಪ್ರಾಯ. ಜಮ್ಮು ಕಾಶ್ಮೀರ ಮುಸ್ಲಿಂ ಬಾಹುಳ್ಯವುಳ್ಳ ರಾಜ್ಯವಾದರೂ ಜಮ್ಮು ಮತ್ತು ಲಡಾಖ್ ಭಾಗಗಳಲ್ಲಿ ಹಿಂದೂ ಮತ್ತು ಬೌದ್ಧ ಜನಸಂಖ್ಯೆ ಹೆಚ್ಚಿದೆ. ಕಾಶ್ಮೀರದಲ್ಲಿ ಮುಸ್ಲಿಂ ಬಾಹುಳ್ಯವಿದ್ದರೂ ಇತರ ಪ್ರದೇಶಗಳಂತೇ ಅನೇಕ ಪಂಗಡಗಳಾಗಿ ಹಂಚಿಹೋಗಿದೆ. ಇಂತಹ ದುರುದ್ದೇಶಪೂರಿತ ಅವಾಸ್ತವಿಕವಾದ ನೆಲೆಗಟ್ಟಿನ ಮೇಲೆಯೇ ಬೆಳೆಸಲ್ಪಟ್ಟ ವಾದಗಳು ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಚರ್ಚೆ, ನೀತಿ, ನಿರ್ಧಾರಗಳಲ್ಲಿ ಕಾಶ್ಮೀರಕೇಂದ್ರಿತ ವ್ಯವಸ್ಥೆಯನ್ನು ಸೃಷ್ಟಿಸಿವೆ. ಅದರಲ್ಲೂ ಹಿಡಿಯಷ್ಟಿರುವ ಕಣಿವೆಯ ಸುನ್ನಿ ಮುಸ್ಲಿಂ ಸಮುದಾಯವು ಎಲ್ಲ ವಿಷಯಗಳನ್ನು ಪ್ರಭಾವಿಸುತ್ತದೆ. ಕೇವಲ 15% ಭೂಭಾಗವುಳ್ಳ ಕಾಶ್ಮೀರ ಕಣಿವೆ ಪ್ರದೇಶವು ರಾಜ್ಯದ 85% ಭೂಭಾಗವುಳ್ಳ ಜಮ್ಮು ಮತ್ತು ಲಡಾಖ್ ಪ್ರದೇಶಗಳನ್ನು ಮರೆಮಾಚಿದೆ. ಇವೆಲ್ಲದರ ನಡುವೆ ದೇಶದ ಉಳಿದ ಭಾಗದ ಜನರ ಸಾಮಾನ್ಯ ಪರಿಕಲ್ಪನೆಯಲ್ಲಿ ನೆಲೆಯಾಗಿರುವ ಚಿತ್ರಣವೆಂದರೆ, ಜಮ್ಮು ಕಾಶ್ಮೀರ ಭಾರತಕ್ಕೆ ತಲೆನೋವಾಗಿರುವ, ಹಿಂಸಾಚಾರ ಭಯೋತ್ಪಾದನೆಗಳಲ್ಲಿ ಹೊತ್ತಿ ಉರಿಯುತ್ತಿರುವ, ಭಾರತವಿರೋಧಿ ಭಾವನೆಗಳೇ ಬಲವಾಗಿರುವ, ಪ್ರತ್ಯೇಕತೆಗೆ ತವಕಿಸುತ್ತಿರುವ, ¨ಬಗೆಹರಿಯದ ಸಮಸ್ಯೆಗಳ ಗೂಡು. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಮತ್ತು ಸಂಬಂಧಿತ ಸಮಸ್ಯೆಗಳನ್ನು ಯಥಾರ್ಥ ವಸ್ತುಸ್ಥಿತಿಯಲ್ಲಿ ಗ್ರಹಿಸಬೇಕಾದ, ಹಾಗೆಯೇ ಸಮಂಜಸವಾದ ಮಾಹಿತಿಯನ್ನು ಹೊರತರಬೇಕಾದ ಅಗತ್ಯವಿದೆ.
ಯಾವುದು ಜಮ್ಮು ಕಾಶ್ಮೀರ?
ಹಿಮಾಲಯದ ತಪ್ಪಲು ಹಾಗೂ ಪರ್ವತ ಶ್ರೇಣಿಗಳಿಂದ ಆವೃತ ಜಮ್ಮು ಕಾಶ್ಮೀರವೆಂದರೆ ಸಾಮಾನ್ಯ ಕಲ್ಪನೆಯಲ್ಲಿ ಕೇವಲ 'ಕಾಶ್ಮೀರ'ವಷ್ಟೇ, ಅಲ್ಲಿಯ ದಾಲ್ ಸರೋವರ, ಕೇಸರಿ, ಕಾಶ್ಮೀರಿ ಸೇಬು, ಕಾಶ್ಮೀರಿ ಕಣಿವೆ, ಪ್ರತ್ಯೇಕತಾವಾದಿ ಆತಂಕವಾದ, ಬಂದೂಕಿನ ಗುಂಡಿನ ಸದ್ದು, ಸದಾ ಉದ್ವಿಗ್ನವಾಗಿರುವ ವಾತಾವರಣ, ಭಾರತದ ಧ್ವಜವನ್ನು ಸುಡುವ, ಸೈನಿಕರತ್ತ ಕಲ್ಲು ತೂರುವ, ಪಾಕಿಸ್ತಾನ ಸೇರಲು ಹವಣಿಸುತ್ತಿರುವ ಮುಸ್ಲಿಂ ಪ್ರಜಾಸಮುದಾಯ. ಆದರೆ ವಾಸ್ತವ ಚಿತ್ರಣ ಇದಕ್ಕಿಂತ ಬಹಳ ಭಿನ್ನವಾಗಿದೆ. 2,22,236 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಜಮ್ಮು ಕಾಶ್ಮೀರದಲ್ಲಿ ಮೂರು ಪ್ರಾಂತಗಳಿವೆ. 36,000 ಚದರ ಕಿ.ಮೀ ವಿಸ್ತೀರ್ಣದ ಜಮ್ಮು, 22,000 ಚದರ ಕಿ.ಮೀ ವಿಸ್ತೀರ್ಣದ ಕಾಶ್ಮೀರ ಹಾಗೂ 1,64,000 ಚದರ ಕಿ.ಮೀ ವಿಸ್ತೀರ್ಣವುಳ್ಳ ಲಡಾಖ್. ಇದರಲ್ಲಿ 78,000 ಚದರ ಕಿ.ಮೀ (ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಪಿಒಕೆ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ) ಪಾಕಿಸ್ತಾನದ ವಶದಲ್ಲಿಯೂ ಹಾಗೂ ಲಡಾಖ್ ಪ್ರಾಂತದ 37,500 ಚದರ ಕಿ.ಮೀ ಮತ್ತು ಪಾಕಿಸ್ತಾನವು ಅಕ್ರಮವಾಗಿ ಚೀನಾಕ್ಕೆ ನೀಡಿದ ಉತ್ತರ ಭಾಗದ 2,000 ಚದರ ಕಿ.ಮೀ ಚೀನಾದ ವಶದಲ್ಲಿಯೂ ಇದೆ. ಒಂದು ಬಹುಮುಖ್ಯವಾದ ಅಂಶವೆಂದರೆ ಭಿನ್ನ ಭಿನ್ನ ಭಾಷೆಯಾಡುವ, ವಿವಿಧ ಮತಾಚರಣೆಯುಳ್ಳ, ಭೌಗೋಳಿಕವಾಗಿ ಕೂಡ ಸಮರೂಪಿಯಲ್ಲದ ಜಮ್ಮು ಕಾಶ್ಮೀರದ ಮೂರೂ ಪ್ರಾಂತಗಳು ಐತಿಹಾಸಿಕವಾಗಿ, 1846ರಲ್ಲಿ ಡೋಗ್ರಾ ರಾಜವಂಶದ ಗುಲಾಬ ಸಿಂಗನ ಆಡಳಿತಕ್ಕೊಳಪಡುವವರೆಗೂ ಒಂದು ಘಟಕವಾಗಿರಲಿಲ್ಲ. ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳವರೆಗೂ ಜಮ್ಮು ಮತ್ತು ಕಾಶ್ಮೀರದ ನಡುವೆ ನೇರವಾದ ರಸ್ತೆಯ ಸಂಪರ್ಕವೇ ಇರಲಿಲ್ಲ. ಜಮ್ಮುವಿನಿಂದ ಪಂಜಾಬದ ಮುಖಾಂತರವಾಗಿ ಕಾಶ್ಮೀರ ತಲುಪಬೇಕಾಗುತ್ತಿತ್ತು. ಇಂದಿಗೂ ಲಡಾಖ್ ಪ್ರಾಂತವು ವರ್ಷದ ಆರು ತಿಂಗಳು ಇತರ ಭೂಭಾಗದಿಂದ ಸಂಪರ್ಕರಹಿತವಾಗಿರುತ್ತದೆ. ರಾಷ್ಟ್ರೀಯ ಹೆದ್ದಾರಿ 1ಡಿ ಕಡಿತಗೊಂಡರೆ ಲಡಾಖ್ ಕಾಶ್ಮೀರದಿಂದ ಸಂಪರ್ಕ ಕಳೆದುಕೊಂಡುಬಿಡುತ್ತದೆ. ರಾಜ್ಯದ ಈ ಮೂರು ಪ್ರದೇಶಗಳು ವ್ಯಾವಹಾರಿಕ ಭಾಷೆಯಿಂದ, ಜನಾಂಗೀಯವಾಗಿ ಹಾಗೂ ಮತಾಚಾರದಿಂದ ಕೂಡ ಒಂದರಿಂದೊಂದು ಭಿನ್ನವಾಗಿವೆ.
ವಿಸ್ತೀರ್ಣದಲ್ಲಿ ರಾಜ್ಯದ ಅತಿದೊಡ್ಡ ಭಾಗವಾದ ಲಡಾಖ್ ಪ್ರದೇಶ ಲೆಹ್ ಮತ್ತು ಕಾರ್ಗಿಲ್‍ಗಳೆಂಬ ಎರಡು ಜಿಲ್ಲೆಗಳನ್ನೊಳಗೊಂಡಿದೆ. ಲೆಹ್‍ನಲ್ಲಿ 77% ಬೌದ್ಧ ಸಮುದಾಯ ಹಾಗೂ ಇತರೆ ಷಿಯಾ ಮುಸ್ಲಿಂ ಮತ್ತು ಹಿಂದೂ ಜನವಸತಿಯಿದೆ. ಇಲ್ಲಿಯ ಮುಖ್ಯ ಭಾಷೆ ಬಾಲ್ಟಿ ಮತ್ತು ಲಢಾಕಿ. ಕಾರ್ಗಿಲ್ ಜಿಲ್ಲೆಯಲ್ಲಿ 80% ಪಹಾರಿ, ಗುಜ್ಜರ್ ಇತ್ಯಾದಿ ಗುಡ್ಡಗಾಡು ಮುಸ್ಲಿಂ ಸಮುದಾಯ ಹಾಗೂ ಇತರೆ ಅಲ್ಪಸಂಖ್ಯೆಯಲ್ಲಿ ಬೌದ್ಧರಿದ್ದಾರೆ. ಜಮ್ಮು ಪ್ರಾಂತದಲ್ಲಿ ಹಿಂದೂ-ಸಿಖ್ ಮತ್ತು ಮುಸ್ಲಿಂ ಜನಸಂಖ್ಯೆಯ ಅನುಪಾತ 70:30 ಇದೆ. ಇವರಲ್ಲಿ 15 ಲಕ್ಷಕ್ಕೂ ಅಧಿಕ ನಿರ್ವಸಿತರಿದ್ದಾರೆ. ಇಲ್ಲಿನ ಮುಖ್ಯ ಭಾಷೆ ಡೋಗ್ರಿ. ಕಾಶ್ಮೀರ ಪ್ರಮುಖವಾಗಿ ಎರಡು ಪ್ರದೇಶಗಳನ್ನು ಒಳಗೊಂಡಿದೆ; 70% ಭೂಭಾಗವುಳ್ಳ ಗುಡ್ಡಗಾಡು ಪ್ರದೇಶ ಮತ್ತು ಉಳಿದಂತೆ ಕಾಶ್ಮೀರಿ ಕಣಿವೆ ಪ್ರದೇಶ. ಗುಡ್ಡಗಾಡು ಪ್ರದೇಶದಲ್ಲಿ ಜನಾಂಗೀಯವಾಗಿ ಕಾಶ್ಮೀರಿಗಳಲ್ಲದ ಗುಜ್ಜರ್, ಬಾಕೆರ್ವಾಲ್, ದಾರ್ದ್, ಬಾಲ್ಟಿ ಇತ್ಯಾದಿ ಬುಡಕಟ್ಟು ಮುಸ್ಲಿಂ ಜನಾಂಗಗಳು ವಾಸವಾಗಿದ್ದರೆ ಕಾಶ್ಮೀರ ಕಣಿವೆಯಲ್ಲಿ ಬಹುಸಂಖ್ಯೆಯಲ್ಲಿ ಸುನ್ನಿ ಮುಸ್ಲಿಮರಿದ್ದಾರೆ. ಅಂದರೆ ಕಾಶ್ಮೀರದಲ್ಲಿ 97% ಮುಸ್ಲಿಂ ಸಮುದಾಯವಿದ್ದರೂ ಪಂಗಡಗಳಾಗಿ ವಿಂಗಡನೆಗೊಂಡಿವೆ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ವಂಚಿತರಾದ ಗುಡ್ಡಗಾಡು ಪ್ರದೇಶದ ಮುಸ್ಲಿಂ ಜನರ ಅವಸ್ಥೆ ಕೂಡ ಜಮ್ಮು ಮತ್ತು ಲಡಾಖ್‍ನ ಸಮಸ್ಯೆಗಳಿಗಿಂತ ತೀರ ಭಿನ್ನವೇನೂ ಅಲ್ಲ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಕಾಶ್ಮೀರ ಕಣಿವೆಯ ಜನಸಮುದಾಯ ಕೂಡ ಏಕರೂಪಿಯಾಗಿಲ್ಲ. ಸುನ್ನಿ ಮುಸ್ಲಿಂ ಸಮುದಾಯ ಅತಿಹೆಚ್ಚು; 28 ಲಕ್ಷದಷ್ಟಿದ್ದರೆ, ಎರಡನೇ ದೊಡ್ಡ ಸಮುದಾಯ ಷಿಯಾ ಮುಸ್ಲಿಮರು ಸುಮಾರು 8 ಲಕ್ಷದಷ್ಟಿದ್ದಾರೆ. ಉಳಿದಂತೆ ಹಿಂದುಳಿದ ಬುಡಕಟ್ಟು ಮುಸ್ಲಿಂ ಜನರು, ಅಲ್ಪಸಂಖ್ಯ ಹಿಂದೂ ಸಿಖ್ ಸಮುದಾಯ ಸಾಕಷ್ಟು ಪ್ರಮಾಣದಲ್ಲಿದ್ದಾರೆ.
ಯಾವರೀತಿಯಿಂದಲೂ ಒಂದಕ್ಕೊಂದು ಹೋಲಿಕೆಯಿರದ ಈ ಮೂರು ಪ್ರತ್ಯೇಕ ಭಾಗಗಳಲ್ಲಿ ಕೇವಲ ಕಾಶ್ಮೀರ ಕಣಿವೆಗಳಿಂದ ಮಾತ್ರ ಪ್ರತ್ಯೇಕತೆ ಸ್ವಾಯುತ್ತತೆಗಳ ಕೂಗು ಕೇಳಿ ಬರುತ್ತದೆ. ಪ್ರತ್ಯೇಕತಾವಾದ ಮತ್ತು ಭಾರತವಿರೋಧಿ ಮಾನಸಿಕತೆಯನ್ನು ಬೆಳೆಸಿರುವುದು ರಾಜ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಕಾಶ್ಮೀರಿ ಮಾತನಾಡುವ ಸುನ್ನಿ ಮುಸ್ಲಿಂ ಕುಟುಂಬಗಳು ಕೆಲವು. ಸುನ್ನಿ ಮುಸ್ಲಿಮರೆಲ್ಲರೂ ಈ ದೇಶದ್ರೀಹಿಗಳ ಹಿಂದೆಯೇನೂ ಇಲ್ಲ. ಅವರಲ್ಲಿಯೂ ಅನೇಕ ಪಂಗಡಗಳಿದ್ದು ಭಾರತದೊಂದಿಗಿನ ವಿಲೀನವನ್ನು ಸಂಪೂರ್ಣ ಬೆಂಬಲಿಸುವ ರಾಷ್ಟ್ರವಾದಿ ಜನಸಮುದಾಯವೂ ಸಾಕಷ್ಟು ಪ್ರಮಾಣದಲ್ಲಿದೆ. ಹುರಿಯತ್ ಕಾನ್ಫರೆನ್ಸ್ ಮುಂತಾದ ಪ್ರತ್ಯೇಕತಾವಾದಿ ಸಂಘಟನೆಗಳು, ಸ್ವಾಯತ್ತತೆಯ ಬೇಡಿಕೆಯಿಡುವ ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ ಮೊದಲಾದ ರಾಜಕೀಯ ಪಕ್ಷಗಳು, ಪಾಕಿಸ್ತಾನಿ ಭಯೊತ್ಪಾದಕರ ಒಳನುಸುಳುವಿಕೆಗೆ ಸಹಾಯ ಮಾಡುವ ಗುಂಪುಗಳು, ಎರಡು ವರ್ಷಗಳ ಹಿಂದೆ ಬೀದಿಗಿಳಿದಿದ್ದ ಕಲ್ಲೆಸೆತಗಾರರು, ದೆಹಲಿಯ ಬುದ್ಧಿಜೀವಿ ವರ್ಗಗಳಲ್ಲಿ ಪ್ರತ್ಯೇಕತೆಯ ಭಾಷಣ ಬಿಗಿಯುವವರು, ಮಾಧ್ಯಮಗಳಲ್ಲಿ ಕಾಶ್ಮೀರವನ್ನು ಪ್ರತಿನಿಧಿಸುವವರು ಇವರೆಲ್ಲರೂ ಕಣಿವೆಯ ಸುನ್ನಿ ಮುಸಲ್ಮಾನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜಮ್ಮು ಕಾಶ್ಮೀರದ ನಾಯಕರೆಂದು ಪ್ರತಿಬಿಂಬಿಸಲ್ಪಡುವ ನ್ಯಾಶನಲ್ ಕಾನ್ಫರೆನ್ಸ್‍ನ ಅಧ್ಯಕ್ಷ ಮತ್ತು ಕೇಂದ್ರ ಮಂತ್ರಿ ಫಾರೂಕ್ ಅಬ್ದುಲಾ್ಲೃ, ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲಾ, ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿಯ ಮುಫ್ತಿ ಮಹಮ್ಮದ್ ಸಯೀದ್ ಮತ್ತವರ ಮಗಳು ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸೈಫುದ್ದೀನ್ ಸೋಜ್, ಕೇಂದ್ರ ಮಂತ್ರಿ ಗುಲಾಮ್ ನಬೀ ಆಜಾದ್, ಸಿಪಿಐ-ಎಮ್‍ನ ಕಾರ್ಯದರ್ಶಿ ಮಹಮ್ಮದ್ ಯೂಸುಪ್ ತರಿಗಾಮಿ, ಸಿಪಿಐನ ಕಾರ್ಯದರ್ಶಿ ಟುಕ್ರೂ, ಪ್ರತ್ಯೇಕತಾವಾದಿ ಮುಂದಾಳುಗಳಾದ ಅಬ್ದುಲ್ ಗನಿ ಭಟ್, ಮಿಜ್ರ್ವಾ ಉಮರ್ ಫಾರೂಕ್, ಯಾಸಿನ್ ಮಲಿಕ, ಶಬ್ಬೀರ್ ಶಾ, ಹುರಿಯತ್ ಕಾನ್ಫರೆನ್ಸ್‍ನ ಸೈಯ್ಯದ್ ಅಲಿ ಶಾ ಗಿಲಾನಿ ಇವರೆಲ್ಲ ಒಂದೇ ಪಂಗಡಕ್ಕೆ ಸೇರಿದವರು, 'ಕಾಶ್ಮೀರಿ ಸುನ್ನಿ ಮುಸಲ್ಮಾನ'. ಅದಲ್ಲದೆ ಜಮ್ಮು ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ, ಜಮ್ಮು ಕಾಶ್ಮೀರ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ಅಧ್ಯಕ್ಷ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಇವರೆಲ್ಲ ಕಾಶ್ಮೀರಿ ಸುನ್ನಿ ಸಮುದಾಯಕ್ಕೆ ಸೇರಿದವರೇ. 99% ಕಾಶ್ಮೀರಿ ವ್ಯಾಖ್ಯಾನಕಾರರು, ವರದಿಗಾರರು ಸುನ್ನಿ ಮುಸ್ಲಿಮರು, ಕಾಶ್ಮೀರದ ಬಹುತೇಕ ಎಲ್ಲಾ ಸಾಮಾಜಿಕ ಜನಸಂಘಟನೆಗಳು ಸುನ್ನಿ ಮುಸಲ್ಮಾನರ ನಿಯಂತ್ರಣದಲ್ಲೇ ಇದೆ. ರಾಜ್ಯದ ಆಡಳಿತ ಮತ್ತು ಆಡಳಿತಾತ್ಮಕ ಸೇವೆಗಳಲ್ಲಿ ಕಾಶ್ಮೀರಿ ಕಣಿವೆಯ ಸುನ್ನಿ ಮುಸ್ಲಿಮರದೇ ಪ್ರಾಬಲ್ಯವಿದೆ. ಆದರೆ, ಉಳಿದಂತೆ ಷಿಯಾ ವiತ್ತು ಗುಡ್ಡಗಾಡು ಪ್ರದೇಶದ ಗುಜ್ಜರ್, ಪಹಾಡಿ ಇತ್ಯಾದಿ ಮುಸ್ಲಿಂ ಜನರ ನಡುವಿನಿಂದ ಅಥವಾ ರಾಜ್ಯದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ 85% ಕ್ಕೂ ಹೆಚ್ಚಿನ ಭೂಭಾಗವುಳ್ಳ ಜಮ್ಮು ಮತ್ತು ಲಡಾಖ್ ಪ್ರಾಂತಗಳಿಂದ ಪ್ರತ್ಯೇಕತೆಯನ್ನು ಪ್ರತಿಪಾದಿಸುವ ಒಂದೇ ಒಂದು ಸಂಘಟನೆಯಾಗಲೀ, ಒಬ್ಬನೇ ನಾಯಕನಾಗಲೀ ಇಲ್ಲ. ಇವರೆಲ್ಲ ಭಾರತಪ್ರೇಮಿಗಳು, ದೇಶಭಕ್ತರು.
ವಿಲೀನ ಪ್ರಕ್ರಿಯೆಯ ಸುತ್ತ ಬೆಳೆದಿರುವ ಮಿಥ್ಯೆಗಳು
ಭಾರತದೊಂದಿಗಿನ ವಿಲೀನಕ್ಕೆ ಸಂಬಂಧಿಸಿದಂತೆ ಮೂರು ಪ್ರಮುಖ ಮಿಥ್ಯೆಗಳು ಚಾಲ್ತಿಯಲ್ಲಿವೆ. ಅವೆಂದರೆ, ಜಮ್ಮು ಕಾಶ್ಮೀರದ ವಿಲೀನವೇ ಪೂರ್ಣವಲ್ಲವೆಂಬ ತಕರಾರು, ಜನಮತಗಣನೆ ಮತ್ತು ಸ್ವಾಯತ್ತತೆ. ಈ ವಾದಗಳನ್ನು ವಿಶ್ಲೇಷಿಸುವ ನಿಟ್ಟಿನಲ್ಲಿ, ಸ್ವಾತಂತ್ರಪೂರ್ವದಲ್ಲಿ ವiತ್ತು ಭಾರತದೊಂದಿಗಿನ ವಿಲೀನದ ನಂತರದ ಜಮ್ಮು ಕಾಶ್ಮೀರದ ರಾಜಕೀಯ, ಐತಿಹಾಸಿಕ ಘಟನಾವಳಿಗಳ ಜೊತೆಗೆ ವಿಲೀನ ಪ್ರಕ್ರಿಯೆ ಮತ್ತು ಅದಕ್ಕೆ ಸಂಬಂಧಿತ ಕಾನೂನು ದಾಖಲೆಗಳನ್ನು ಸರಿಯಾಗಿ ಅರ್ಥೈಸಬೇಕಿದೆ. 1947ರ ಬ್ರಿಟಿಷ್ ಆಡಳಿತ ಕೊನೆಗೊಳ್ಳುವ ಸಂದರ್ಭದಲ್ಲಿ ಭಾರತ ಎರಡು ರೀತಿಯ ವ್ಯವಸ್ಥೆಗೊಳಪಟ್ಟಿತ್ತು. ಒಂದು ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟ ಪ್ರಾಂತಗಳು ಒಂದು ಬಗೆಯಾದರೆ, ಸುಮಾರು 35% ಭಾಗದಷ್ಟಿದ್ದ ಮೈಸೂರು, ಗ್ವಾಲಿಯರ್, ತಿರುವಾಂಕೂರು, ಪಾಟಿಯಾಲ, ಜಮ್ಮು ಕಾಶ್ಮೀರ ಮೊದಲಾದ 569 ರಾಜ ಸಂಸ್ಥಾನಗಳ ಆಡಳಿತ ಇನ್ನೊಂದು ಬಗೆ. ರಾಜ ಸಂಸ್ಥಾನಗಳು ಮತ್ತು ಬ್ರಿಟಿಷರ ನಡುವೆ ಆಡಳಿತಾತ್ಮಕ ಒಪ್ಪಂದಗಳಿದ್ದವು. 1947 ಆಗಸ್ಟ್ 14ರ ಮಧ್ಯರಾತ್ರಿಗೆ ಭಾರತೀಯ ಸ್ವಾತಂತ್ರ್ಯ ಕಾಯಿದೆ 1947 (India Independence Act 1947)ರ ಅನ್ವಯ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟ ಪ್ರಾಂತಗಳ ಮೇಲೆ ಬ್ರಿಟನ್ನಿನ ಸಾರ್ವಭೌಮತೆ ಕೊನೆಗೊಂಡು, ಹೊಸದಾಗಿ ನಿರ್ಮಿತವಾದ ಡೊಮಿನಿಯನ್‍ಗಳಾದ ಭಾರತ ಮತ್ತು ಪಾಕಿಸ್ತಾನಗಳಿಗೆ ಅಧಿಕಾರ ಹಸ್ತಾಂತರಗೊಂಡಿತು. ಇದರೊಂದಿಗೆ ರಾಜ ಸಂಸ್ಥಾನಗಳ ಬ್ರಿಟಿಷರೊಂದಿಗಿನ ಒಪ್ಪಂದವು ಕೊನೆಗೊಂಡಿತು, ಸಂಸ್ಥಾನಗಳು ಸ್ವತಂತ್ರಗೊಂಡವು. ಹೀಗೆ ಸ್ವತಂತ್ರಗೊಂಡ ಸಂಸ್ಥಾನಗಳಿಗೆ ಭಾರತೀಯ ಸ್ವಾತಂತ್ರ್ಯ ಕಾಯಿದೆ 1947ರ ಅನ್ವಯ ಹೊಸದಾಗಿ ನಿರ್ಮಿತವಾದ ಭಾರತ ಅಥವಾ ಪಾಕಿಸ್ತಾನ ಡೊಮಿನಿಯನ್‍ಗಳನ್ನು ಸೇರುವ ಅವಕಾಶ ನೀಡಲಾಯಿತು. ಅಂತಹ ಸಂದರ್ಭದಲ್ಲಿ ಡೊಮಿನಿಯನ್ ಮತ್ತು ಅದುವರೆಗೂ ಬ್ರಿಟಿಷ್ ಆಡಳಿತದೊಂದಿಗೆ ಒಪ್ಪಂದ ಹೊಂದಿದ್ದ ರಾಜ ಸಂಸ್ಥಾನಗಳು ಇವೆರಡರ ನಡುವಿನ ಸಂಬಂಧವನ್ನು ನಿರ್ಧರಿಸುವ ಕಾನೂನು ತಾತ್ಕಾಲಿಕ ಸಂವಿಧಾನವಾಗಿದ್ದ 1947ರ ತಿದ್ದುಪಡಿಯೊಂದಿಗಿನ ಭಾರತ ಸರಕಾರ ಕಾಯಿದೆ 1935(Government of India Act 1935 as amended on 1947). ಈ ಎರಡು ಕಾನೂನುಗಳ ಜೊತೆಗೆ ಸಂಸ್ಥಾನಗಳ ವಿಲೀನಕ್ಕೆ ಸಂಬಂಧಿಸಿದ ದಾಖಲೆಗಳೆಂದರೆ ವಿಲಯನ ಒಪ್ಪಂದ(Instrument of Accession) ಮತ್ತು ಭಾರತದ ಗವರ್ನರ್ ಜನರಲ್‍ನ ವಿಲಯನ ಒಪ್ಪಿಗೆ ಪತ್ರ(Acceptance to Instrument of Accession). ಭಾರತೀಯ ಸ್ವಾತಂತ್ರ್ಯ ಕಾಯಿದೆ 1947 ಹಾಗೂ ಭಾರತ ಸರಕಾರ ಕಾಯಿದೆ 1935ರ ಅನ್ವಯ, ತಮ್ಮ ರಾಜ್ಯದ ವಿಲೀನವನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರವನ್ನು ಸಂಸ್ಥಾನಿಕ ರಾಜ/ಆಡಳಿತಗಾರರಿಗೆ ನೀಡಲಾಗಿತ್ತು. ಗಮನಿಸಬೇಕಾದ ಇನ್ನೊಂದು ಬಹುಮುಖ್ಯ ಅಂಶವೆಂದರೆ ಭಾರತ ಸರಕಾರ ಕಾಯಿದೆ 1935ರ ಅನ್ವಯ ಯಾವುದೇ ಸಂಸ್ಥಾನಕ್ಕೆ ಸ್ವತಂತ್ರವಾಗಿರುವ ಆಯ್ಕೆಯಿರಲಿಲ್ಲ.
ಈ ವಿಲೀನ ಒಪ್ಪಂದವನ್ನು ಅನುಸರಿಸಿಯೇ ಗ್ವಾಲಿಯರ್, ಮೈಸೂರು, ತಿರುವಾಂಕೂರು, ಪಾಟಿಯಾಲ ಮೊದಲಾದ 500ಕ್ಕೂ ಅಧಿಕ ಸಂಸ್ಥಾನಗಳು ಭಾರತದಲ್ಲಿ ವಿಲೀನಗೊಂಡವು. 1947ರ ಅಗಸ್ಟ್ ನಂತರ ಕೆಲವು ವಾರಗಳಲ್ಲಿ ಪಾಕಿಸ್ತಾನದ ಆಕ್ರಮಣದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಮಹಾರಾಜ ಹರಿಸಿಂಗ್‍ರವರು, ರಾಜ್ಯದ ಸುರಕ್ಷತೆಯನ್ನು ಕಾಪಾಡುವಲ್ಲಿ ಭಾರತ ಸರ್ಕಾರ ಪ್ರವೇಶಿಸಬೇಕಾದ ತುರ್ತ ಅಗತ್ಯವನ್ನು ಮನಗಂಡು ಉಳಿದ ಸಂಸ್ಥಾನಗಳು ಅನುಸರಿಸಿದ ಮಾದರಿಯಲ್ಲೇ 26 ಅಕ್ಟೋಬರ್ 1947ರಂದು ಜಮ್ಮು ಕಾಶ್ಮೀರ ರಾಜ್ಯವನ್ನು ಬೇಷರತ್ತಾಗಿ ಭಾರತದಲ್ಲಿ ವಿಲೀನಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದರು. 27 ಅಕ್ಟೋಬರ್ 1947ರಂದು ಭಾರತದ ಗವರ್ನರ್ ಜನರಲ್ ಲಾರ್ಡ್ ಮೌಂಟ್‍ಬ್ಯಾಟನ್ ವಿಲಯನ ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವುದರೊಂದಿಗೆ ಭಾರತ ಗಣರಾಜ್ಯದೊಂದಿಗೆ ಜಮ್ಮು ಕಾಶ್ಮೀರದ ವಿಲೀನ ಸಂಪೂರ್ಣವಾಗಿತ್ತು.
ಮಹಾರಾಜ ಹರಿಸಿಂಗರವರು ಜಮ್ಮು ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸದೇ ಸ್ವತಂತ್ರವಾಗಿರಬಯಸಿದ್ದರು ಅದಕ್ಕಾಗಿಯೇ ವಿಲೀನ ಮಾಡುವಲ್ಲಿ ವಿಳಂಬ ಮಾಡಿದರು ಎಂಬ ಸತ್ಯಕ್ಕೆ ದೂರವಾದ ಆರೋಪ ಮಾಡಲಾಗುತ್ತದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಎರಡು ಅಂಶಗಳನ್ನು ಗಮನಿಸುವುದು ಉಚಿತವಾಗುವುದು.
ಮೊದಲನೆಯದು - ರಾಷ್ಟ್ರಭಕ್ತರಾಗಿದ್ದ ಮಹಾರಾಜರು ಆರಂಭದಲ್ಲೇ ವಿಲೀನಕ್ಕೆ ಸಿದ್ಧರಿದ್ದರು, ಆದರೆ ಪ್ರಧಾನಿ ಪಂಡಿತ ನೆಹರು ಮುಂದಿಟ್ಟ, ಅಧಿಕಾರವನ್ನು ನ್ಯಾಷನಲ್ ಕಾನ್ಫರೆನ್ಸ್‍ನ ಸಂಸ್ಥಾಪಕ ಶೇಖ್ ಅಬ್ದುಲ್ಲಾರಿಗೆ ಹಸ್ತಾಂತರಿಸುವ ಬೇಡಿಕೆ ಮಹಾರಾಜರಿಗೆ ಒಪ್ಪಿಗೆಯಿರಲಿಲ್ಲ. ಮಹತ್ವಾಕಾಂಕ್ಷಿಯಾಗಿದ್ದ ಶೇಖ್ ಅಬ್ದುಲ್ಲಾ 1930ರ ದಶಕದಿಂದಲೇ ಮಹಾರಾಜರ ಆಡಳಿತ ವಿರೋಧಿಯಾಗಿದ್ದರು. ಕ್ವಿಟ್ ಇಂಡಿಯಾ ಮಾದರಿಯಲ್ಲಿ ಸಂಸ್ಥಾನದ ವಿರುದ್ಧ ಕ್ವಿಟ್ ಕಾಶ್ಮೀರ ಚಳುವಳಿಯನ್ನು ಸಂಘಟಿಸಿದ್ದರು. ಇದರಿಂದ ಮಹಾರಾಜರ ಮೇಲೆ ಮುನಿಸಿಕೊಂಡಿದ್ದ ಪ್ರಧಾನಿ ನೆಹರು ಕೂಡ ವಿಲೀನದ ವಿಳಂಬಕ್ಕೆ ಕಾರಣರಾದರು.
ಎರಡನೆಯದು - ಜಮ್ಮು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕೆಂಬುದು ಬ್ರಿಟಿಷರ ಧಾರಣೆಯಾಗಿತ್ತು. ಅದಕ್ಕಾಗಿ ಅವರು ಯೋಜನಾಬದ್ಧರಾಗಿ ಕಾರ್ಯನಿರತರಾಗಿದ್ದರು. ಸ್ವತಃ ಮೌಂಟ್ ಬ್ಯಾಟನ್ ಶ್ರೀನಗರಕ್ಕೆ ತೆರಳಿ ಮಹಾರಾಜರ ಮನವೊಲಿಕೆಗೆ ಮುಂದಾಗಿದ್ದ. ನಿಜವಾದ ರಾಷ್ಟ್ರಭಕ್ತ ಮಹಾರಾಜ ಹರಿಸಿಂಗರು ಸನ್ನಿವೇಶದ ತೀವ್ರತೆಯನ್ನು ಮನಗಂಡು 26 ಅಕ್ಟೋಬರ್ 1947ರಂದು ನೆಹರು ಅಣತಿಯಂತೆ ಅಧಿಕಾರವನ್ನು ಶೇಖ ಅಬ್ದುಲ್ಲಾರಿಗೆ ಹಸ್ತಾಂತರಿಸಿ ಜಮ್ಮು ಕಾಶ್ಮೀರವನ್ನು ಭಾರತದೊಡನೆ ವಿಲೀನಗೊಳಿಸಿದರು. ವಾಸ್ತವವಾಗಿ ಜಮ್ಮು ಕಾಶ್ಮೀರ ಭಾರತದಲ್ಲಿ ವಿಲೀನವಾಗಿದ್ದರÀ ಸಂಪೂರ್ಣ ಶ್ರೇಯ ಮಹಾರಾಜ ಹರಿಸಿಂಗರವರಿಗೆ ಸಲ್ಲಬೇಕು.
ವಸ್ತುಸ್ಥಿತಿ ಹೀಗಿರುವಾಗ ಕಾಶ್ಮೀರ ವಿವಾದವೆಲ್ಲಿ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ವಿಲೀನ ಒಪ್ಪಂದದ ಒಪ್ಪಿಗೆಯೊಂದಿಗೆ ಲಾರ್ಡ್ ಮೌಂಟ್ ಬ್ಯಾಟನ್ ಬರೆದ ಪತ್ರದಲ್ಲಿ 'ಕಾಶ್ಮೀರ ವಿವಾದ'ದ ಉಲ್ಲೇಖವನ್ನು ಗುರುತಿಸಲಾಗುತ್ತದೆ. ಕಾಶ್ಮೀರದ ವಿಲೀನದ ಒಪ್ಪಂದವನ್ನು ಅನುಮೋದಿಸುತ್ತಾ ಮಹಾರಾಜರಿಗೆ ಬರೆದ ಉತ್ತರದಲ್ಲಿ "ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಲು ನೀಡಲಾಗಿರುವ ಸಲಹೆಯನ್ನು ಸ್ವೀಕರಿಸಲು ನನ್ನ ಸರ್ಕಾರವು ನಿರ್ಧರಿಸಿದೆ. ನನ್ನ ಸರ್ಕಾರದ ನೀತಿಯನ್ನು ಲಕ್ಷದಲ್ಲಿರಿಸಿ, ವಿವಾದವಿರುವಲ್ಲೆಲ್ಲ ರಾಜ್ಯದ ಜನರ ಅಪೇಕ್ಷೆಗನುಗುಣವಾಗಿ ಪರಿಹಾರ ಹುಡುಕಬೇಕಾಗಿದೆ......" ಇಂತಹ ಅಸಂಬದ್ಧ ಷರತ್ತುಗಳನ್ನು ಸೇರಿಸಲು ಲಾರ್ಡ್ ಮೌಂಟಬ್ಯಾಟನ್‍ಗೆ ಅಧಿಕಾರವಿತ್ತೇ? ಎಂಬುದು ಒಂದು ಪ್ರಶ್ನೆಯಾದರೆ, ವಿಲೀನದ ವಿಷಯದಲ್ಲಿ ನಿರ್ಧರಿಸುವ ಸಂಪೂರ್ಣ ಅಧಿಕಾರ ಮಹಾರಾಜರಿಗೆ ಸಂವಿಧಾನಾತ್ಮಕವಾಗಿ ಕೊಡಲ್ಪಟ್ಟಿರುವಾಗ ಮತ್ತು ವಿಲೀನ ಒಪ್ಪಂದದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವ ಅಧಿಕಾರವಷ್ಟೇ ಇದ್ದ ಗವರ್ನರ್ ಜನರಲ್ ಲಾರ್ಡ್ ಮೌಂಟಬ್ಯಾಟನ್‍ನ ಪತ್ರದ ಮಾನ್ಯತೆಯೇನು? ಎಂಬುದು ಇನ್ನೊಂದು ಪ್ರಶ್ನೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಮಹಾರಾಜರು ವಿಲೀನ ಒಪ್ಪಂದಕ್ಕೆ ಸಹಿ ಹಾಕಿ, ಭಾರತ ಸರ್ಕಾರದ ಪರವಾಗಿ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಒಪ್ಪಿದ ನಂತರ ಅಸ್ತಿತ್ವಕ್ಕೆ ಬಂದ ಶೇಖ್ ಅಬ್ದುಲ್ಲಾ ನೇತೃತ್ವದ ಸರ್ಕಾರ 6 ಪೆಬ್ರುವರಿ 1954ರಂದು ವಿಲೀನವನ್ನು ಅನುಮೋದಿಸಿದೆ. (ವಿಲೀನ ಒಪ್ಪಂದ ಮಾರ್ಗಸೂಚಿಯಂತೆ ಇದು ಅನಗತ್ಯ). ಅದಲ್ಲದೇ ಭಾರತ ಸಂವಿಧಾನದ 370ನೇ ವಿಧಿಯನ್ವಯ 26 ಜನವರಿ 1957ರಂದು ಜಾರಿಗೆ ಬಂದ ರಾಜ್ಯದ ಸಂವಿಧಾನದ ವಿಧಿ 3 ರಲ್ಲಿ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಘೋಷಿಸಲಾಗಿದೆ. ವಿವಾದವನ್ನು ಹುಟ್ಟುಹಾಕುವ ಹುನ್ನಾರ ಜಮ್ಮು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕೆಂದು ಬಲವಾಗಿ ಬಯಸಿದ್ದ ಬ್ರಿಟಿಷ್ ರಾಜತಾಂತ್ರಿಕ ಲೆಕ್ಕಾಚಾರ ಬಿತ್ತಿದ ವಿಷಬೀಜ ಅಲ್ಲದೇ ಮತ್ತೇನೂ ಇಲ್ಲ.
ವಿಶ್ವಸಂಸ್ಥೆಯ ಠರಾವು ಮತ್ತು ಜನಮತಗಣನೆಯೆಂಬ ಮಿಥ್ಯೆ
1947ರ ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಬ್ರಿಟಿಷರ ಒತ್ತಡಕ್ಕೆ ಮಣಿದು ಕದನವಿರಾಮವನ್ನು ಘೋಷಿಸಿ ದೂರನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಒಯ್ಯಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕನಾಗಿ ಗುರುತಿಸಲ್ಪಡಬೇಕೆಂಬ ಪ್ರಧಾನಿ ನೆಹರುರವರ ಮಹತ್ವಾಕಾಂಕ್ಷೆಗಳೂ ಇದರ ಹಿಂದೆ ಕೆಲಸ ಮಾಡಿವೆ ಎನ್ನುವ ಗುಮಾನಿಯೂ ಹಲವರದ್ದು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯ ಶಾಂತಿ ಪಾಲನೆ. ಮುಖ್ಯವಾದ ಅಂಶವೆಂದರೆ ಭಾರತದ ದೂರು ಅದಾಗಲೇ ಮಹಾರಾಜರಿಂದ ಭಾರತದಲ್ಲಿ ವಿಲೀನಗೊಳಿಸಲ್ಪಟ್ಟ ಜಮ್ಮು ಕಾಶ್ಮೀರ ರಾಜ್ಯದಲ್ಲಿ ವಿಧಿವಿರುದ್ಧವಾಗಿ ಪಾಕಿಸ್ತಾನ ಆಕ್ರಮಿಸಿರುವ ಪ್ರದೇಶಗಳನ್ನು ತೆರವುಗೊಳಿಸಬೇಕು ಎಂಬುದಾಗಿತ್ತು. ಭಾರತ ಮತ್ತು ಪಾಕಿಸ್ತಾನಗಳ ವಾದಗಳನ್ನು ಆಲಿಸಿ ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ 21 ಎಪ್ರಿಲ್ 1948ರಂದು ಠರಾವು ಸಂಖ್ಯೆ 47ನ್ನು ಅಂಗೀಕರಿಸಲಾಯಿತು. ಈ ಠರಾವಿನಲ್ಲಿ ಪಂಚ ಸದಸ್ಯರ ಶಾಂತಿಪಾಲನಾ ಸಮಿತಿಯನ್ನು ರಚಿಸಿ ಕಾಶ್ಮೀರದ ಭವಿಷ್ಯವನ್ನು ನಿರ್ಧರಿಸುವ ಸಲುವಾಗಿ ಜನಮತಗಣನೆಗೆ ತಯಾರಿ ಮಾಡುವ ದೃಷ್ಟಿಯಿಂದ ಭಾರತ ಮತ್ತು ಪಾಕಿಸ್ತಾನಗಳೆರಡೂ ಜೊತೆಗೂಡಿ ಅಲ್ಲಿ ಶಾಂತಿ ಸ್ಥಾಪಿಸಬೇಕೆಂದು ಸೂಚಿಸಿತು. ಹೀಗೆ ಭಾರತದಲ್ಲಿ ಸಂಪೂರ್ಣವಾಗಿ ವಿಲೀನಗೊಂಡಿದ್ದ ಪ್ರದೇಶದಲ್ಲಿ ಜನಮತಗಣನೆಯೆಂಬ ಹೊಸ ವರಸೆ ಪ್ರಾರಂಭವಾಯಿತು.
ಮುಂದುವರೆದು ಠರಾವಿನಲ್ಲಿ ಸೂಚಿಸಿದ ಮುಖ್ಯವಾದ ವಿಷಯಗಳೆಂದರೆ, ಒಂದು ಜನಮತಗಣನೆಯು ನಿಷ್ಪಕ್ಷವಾಗಿ ನಡೆಯುವ ನಿಟ್ಟಿನಲ್ಲಿ ಪಾಕಿಸ್ತಾನ ಆಕ್ರಮಿತ ಪ್ರದೇಶಗಳಿಂದ ತನ್ನೆಲ್ಲ ನಾಗರಿಕರು, ಬುಡಕಟ್ಟು ಜನರು ಹಾಗು ಸೇನೆಯನ್ನು ವಾಪಸು ಪಡೆಯಬೇಕು. ಎರಡನೆಯದಾಗಿ ಭಾರತ ನಾಗರಿಕ ಸುವ್ಯವಸ್ಥೆಗೆ ಬೇಕಾಗುವಷ್ಟು ಕನಿಷ್ಠ ಸೇನೆಯನ್ನು ನಿಯೋಜಿಸಬೇಕು. ಆ ಬಳಿಕ ಜನಮತಗಣನೆ ನಡೆಯಬೇಕು ಎಂಬುದಾಗಿ ಆ ಠರಾವಿನಲ್ಲಿತ್ತು. ಭಾರತವೇನೋ ಜನಮತಗಣೆಯನ್ನು ನಡೆಸಲು ಸಿದ್ಧವಿತ್ತು, ಆದರೆ ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸೂಚನೆಯನ್ನು ಪಾಲಿಸಿತೇ ಎನ್ನುವುದು ಪ್ರಶ್ನೆ? ಜನಮತಗಣನೆಯ ಸಲುವಾಗಿ ಭಾರತವನ್ನು ದೂರುವವರು ಈ ವಿಷಯವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಪಾಕಿಸ್ತಾನ ಈಗಲೂ 1947ರಲ್ಲಿ ಆಕ್ರಮಿಸಿಕೊಂಡ ಪ್ರದೇಶಗಳನ್ನು ತನ್ನ ನಿಯಂತ್ರಣದಲ್ಲೇ ಇರಿಸಿಕೊಂಡಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನಿ ಸರ್ವೋಚ್ಚ ನ್ಯಾಯಾಲಯವೂ ಕೂಡಾ ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶಗಳನ್ನು ಜಮ್ಮು ಕಾಶ್ಮೀರ ರಾಜ್ಯದ ಅವಿಭಾಜ್ಯ ಅಂಗವೆಂದೇ ಘೋಷಿಸಿದೆ. 1947ರಲ್ಲಿ ಮಹಾರಾಜರಿಂದ ಭಾರತದಲ್ಲಿ ವಿಲೀನ, ಭಾರತದ ಸಂವಿಧಾನದ 370ನೇ ವಿಧಿ ಹಾಗೂ ಜಮ್ಮು ಕಾಶ್ಮೀರ ಸಂವಿಧಾನರಚನಾ ಶಾಸನ ಸಭೆಯ ಅನುಮೋದನೆಯೊಂದಿಗೆ ಸಂವಿಧಾನದನ ಜಾರಿ ಮತ್ತು ಜಮ್ಮು ಕಾಶ್ಮೀರ ರಾಜ್ಯ ಸಂವಿಧಾನದ ವಿಧಿ 3ರಲ್ಲಿ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದೇ ಉಲ್ಲೇಖಿಸಿರುವುದು ಇವೆಲ್ಲವೂ ಜಮ್ಮು ಕಾಶ್ಮೀರದಲ್ಲಿ ಬೇಕೆಂದೇ ವಿವಾದವನ್ನು ಸೃಷ್ಟಿಸಲಾಗುತ್ತಿದೆಯೇ ಹೊರತು, ವಾಸ್ತವದಲ್ಲಿ ವಿವಾದವೇನೂ ಇಲ್ಲವೆಂಬುದನ್ನು ಸೂಚಿಸುತ್ತವೆ.
370ನೇ ವಿಧಿಯೆಂಬ ಭೂತ
ಇನ್ನೊಂದು ಅನಿಷ್ಟಕ್ಕೆ ಕಾರಣವಾಗಿದ್ದು ಸಂವಿಧಾನದ ಸ್ಥಿತ್ಯಂತರ ಮತ್ತು ತಾತ್ಕಾಲಿಕ(Transitional and Temporary) 370ನೇ ವಿಧಿ. ಜಮ್ಮು ಕಾಶ್ಮೀರವು ಯುದ್ಧದ ಅಸಹಜ ಪರಿಸ್ಥಿತಿಯಲ್ಲಿದೆಯೆಂಬ ಕಾರಣ ನೀಡಿ ವಿಶೇಷ ಪರಿಸ್ಥಿತಿ ನಿರ್ವಹಣೆಗಾಗಿ 370ನೇ ವಿಧಿಯನ್ನು ಸ್ವೀಕರಿಸಲಾಯಿತು. ಈ ಅನಗತ್ಯ ವಿಶೇಷ ವ್ಯವಸ್ಥೆಯ ಸೇರ್ಪಡೆ ಸರ್ದಾರ್ ಪಟೇಲರು ಸೇರಿದಂತೆ ಬಹುತೇಕ ಭಾರತ ಸಂಸತ್ಸದಸ್ಯರಿಗೆ ಇಷ್ಟವಿರಲಿಲ್ಲ ಎಂಬುದು ಅಂದಿನ ಸಂಸತ್ತಿನ ಕಲಾಪಗಳ ಅವಲೋಕನದಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಪ್ರಧಾನಿ ನೆಹರು ಹಾಗೂ ಶೇಖ ಅಬ್ದುಲ್ಲಾರ ರಾಜಕಾರಣದ ಪ್ರಭಾವದಿಂದ ಸ್ಥಿತ್ಯಂತರ ಮತ್ತು ತಾತ್ಕಾಲಿಕ ವಿಧಿಯಾಗಿ ಸಂವಿಧಾನದಲ್ಲಿ ಸೇರಿಸಲ್ಪಟ್ಟ 370ನೇ ವಿಧಿಯ ಅನ್ವಯ ಜಮ್ಮು ಕಾಶ್ಮೀರ ರಾಜ್ಯ ಪ್ರತ್ಯೇಕ ಸಂವಿಧಾನವನ್ನು ಹೊಂದಿದೆ. 370ನೇ ವಿಧಿಯ ಅನ್ವಯ ನಮ್ಮ ಸಂಸತ್ತಿನಲ್ಲಿ ಅನುಮೋದನೆಯಾಗುವ ವಿದೇಶಾಂಗ ವ್ಯವಹಾರ, ಸಂಪರ್ಕ ಮತ್ತು ರಕ್ಷಣೆಯ ವಿಷಯಗಳಿಗೆ ಸಂಬಂಧಿತÀ ಕಾನೂನುಗಳು ಮಾತ್ರ ಜಮ್ಮು ಕಾಶ್ಮೀರಕ್ಕೆ ಅನ್ವಯವಾಗುತ್ತವೆ. ಸಂವಿಧಾನದಲ್ಲಿನ ಸಂಘಾತ್ಮಕ (Union) ಹಾಗೂ ಸಹವರ್ತಿ (Concurrent) ಪಟ್ಟಿಯಲ್ಲಿ ಬರುವ ಇತರ ವಿಷಯಗಳಿಗೆ ಸಂಬಂಧಿತ ಕಾನೂನುಗಳು ರಾಜ್ಯದ ಶಾಸನ ಸಭೆಯ ಅನುಮೋದನೆಯೊಂದಿಗೆ ಮಾತ್ರ ಜಾರಿಗೆ ಬರಬಲ್ಲದು. ಶೇಷಾತ್ಮಕ(Residuary) ಅಧಿಕಾರಗಳು ಇರುವುದು ಕೂಡ ರಾಜ್ಯದ ಬಳಿಯಲ್ಲೇ.
370ನೇ ವಿಧಿಯ ಆವರಣವನ್ನು ಬಳಸಿ ಶೇಖ ಅಬ್ದುಲ್ಲಾ ನೇತೃತ್ವ ರಾಜ್ಯದಲ್ಲಿ ಕಾಶ್ಮೀರಿ ಸುನ್ನಿ ಮುಸ್ಲಿಂ ಪ್ರಾಬಲ್ಯ ಬೆಳೆಸಲು ಬಳಸಿಕೊಂಡಿತು. 1952ರಲ್ಲಿ ಪ್ರತ್ಯೇಕ ಧ್ವಜದ ಅಂಗೀಕಾರ, ಬೇರೆಯೇ ಧ್ವಜ ಸಂಹಿತೆ, ರಾಜ್ಯಪಾಲ, ಮುಖ್ಯಮಂತ್ರಿ ಎಂಬ ಸಂಬೋಧನೆಗೆ ಬದಲಾಗಿ ವಜೀರ್-ಎ-ರಿಯಾಸತ್, ಸದರ್-ಎ-ಆಜಂ ಇತ್ಯಾದಿಗಳ ಶಬ್ದಗಳ ಬಳಕೆ, ದೇಶದ ಉಳಿದ ಪ್ರದೇಶದ ನಾಗರಿಕ ಜಮ್ಮು ಕಾಶ್ಮೀರದಲ್ಲಿ ನೆಲೆಗೊಳ್ಳದಂತೆ ಕಾನೂನುಗಳು ಇತ್ಯಾದಿ ಉದ್ದೇಶಪೂರ್ವಕವಾಗಿ ಪ್ರತ್ಯೇಕತೆಯನ್ನು ಬೆಳೆಸುವ ಪ್ರಯತ್ನಗಳನ್ನು ನಡೆಸಲಾಯಿತು. ಮೊದಲಿನಿಂದಲೂ ರಾಜ್ಯ ಶಾಸನಸಭೆ ಮತ್ತು ಸರ್ಕಾರದಲ್ಲಿ ಕಾಶ್ಮೀರಿ ಸುನ್ನಿ ಮುಸ್ಲಿಮರ ಪ್ರಾಬಲ್ಯ ಬೆಳೆದುಬಂದಿದ್ದು ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಎರಕ ಹೊಯ್ಯಲಾಗಿದೆ. 370ರ ವಿಧಿ ದುರ್ಬಳಕೆಯಿಂದ ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ಪ್ರತ್ಯೇಕತೆಗೆ ಇಂಬು ಕೊಡುವ ನಿಟ್ಟಿನಲ್ಲಿ ಕಾಶ್ಮೀರಿ ಕೇಂದ್ರಿತ ವ್ಯವಸ್ಥೆಯನ್ನು ಧೃಢವಾಗಿ ನೆಲಗೊಳಿಸಿವೆ. ಇದರಿಂದಾಗಿ ರಾಜ್ಯದ 85% ಭೂಭಾಗ ಹೊಂದಿರುವ ಜಮ್ಮು ಮತ್ತು ಲಡಾಖ್ ಪ್ರದೇಶಗಳು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಅಧಿಕಾರಗಳಿಂದ ಸಂಪೂರ್ಣ ವಂಚಿತವಾಗಿದೆ.
370ನೇ ವಿಧಿಯ ದುರ್ಬಳಕೆಯಿಂದ ನಡೆಯುತ್ತಿರುವ ಅನ್ಯಾಯಗಳಲ್ಲಿ ಕೆಲವನ್ನು ಗಮನಿಸುವುದಾದರೆ
· ಜಮ್ಮು ಕಾಶ್ಮೀರ ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಧ್ವಜ ಮತ್ತು ಪ್ರತ್ಯೇಕ ಪೌರತ್ವ. ಅಂದರೆ, ಹೆಚ್ಚೂ ಕಮ್ಮಿ ದೇಶದೊಳಗೊಂದು ದೇಶ ಎನ್ನಬಹುದು. ಆದ್ದರಿಂದ ವಿಧಾನಸಭೆಯ ಮತದಾರರ ಪಟ್ಟಿ ಮತ್ತು ಲೋಕಸಭೆಯ ಮತದಾರರ ಪಟ್ಟಿ ಎರಡೂ ಪ್ರತ್ಯೇಕವೇ.
· ಜಮ್ಮು ಪ್ರಾಂತವು ವಿಸ್ತೀರ್ಣ ಹಾಗೂ ಜನಸಂಖ್ಯೆಯ ಆಧಾರದ ಮೇಲೆ ಕಾಶ್ಮೀರಕ್ಕಿಂತ ದೊಡ್ಡದು. ಆದರೆ 87 ಸದಸ್ಯರ ಶಾಸನಸಭೆಯಲ್ಲಿ 24,22,765 ಜನಸಂಖ್ಯೆಯುಳ್ಳ ಕಾಶ್ಮೀರ 47 ಸದಸ್ಯರನ್ನೂ, 24,55,174 ಜನಸಂಖ್ಯೆಯುಳ್ಳ ಜಮ್ಮು 37 ಸದಸ್ಯರನ್ನೂ ಹೊಂದಿವೆ. 1,43,719 ಜನಸಂಖ್ಯೆಯುಳ್ಳ ಲಡಾಖ್ ಪ್ರಾಂತಕ್ಕೆ ಕೇವಲ 2 ಸ್ಥಾನ ನೀಡಲಾಗಿದೆ. ಕಾಶ್ಮೀರ 3 ಸಂಸತ್ಸದಸ್ಯರನ್ನು ಚುನಾಯಿಸಿದರೆ, ಜಮ್ಮು 2 ಮತ್ತು ಲಡಾಖ್ 1 ಸದಸ್ಯರನ್ನು ಚುನಾಯಿಸುತ್ತವೆ. ಜನಗಣತಿಯ ನಂತರ ಭಾರತ ಸರ್ಕಾರದ ಆದೇಶದ ಮೇಲೆ ನಡೆಯುವ ಕ್ಷೇತ್ರ ವಿಂಗಡನೆ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಜಾರಿಗೆ ಬರುವುದಿಲ್ಲ.
· ರಾಜ್ಯ ಸಚಿವ ಸಂಪುಟದಲ್ಲಿ ಜಮ್ಮು ಪ್ರಾಂತದ ಮಂತ್ರಿಗಳು 5. ಕಾಶ್ಮೀರದ ಮಂತ್ರಿಗಳು 16.
· ಪಶ್ಚಿಮ ಪಾಕಿಸ್ತಾನದಿಂದ ನಿರಾಶ್ರಿತರಾಗಿ ಜಮ್ಮುವಿನಲ್ಲಿ ನೆಲೆಸಿರುವ 2 ಲಕ್ಷಕ್ಕೂ ಹೆಚ್ಚು ಜನರಿಗೆ ಇದುವರೆಗೂ ರಾಜ್ಯದ ನಾಗರಿಕತೆ ದೊರಕಿಲ್ಲ, ಪುನರ್ವಸತಿಯೂ ದೊರಕಿಲ್ಲ. ಕುತೂಹಲಕಾರಿ ಅಂಶವೆಂದರೆ ಈ ನಿರಾಶ್ರಿತರು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಬಹುದು, ಆದರೆ ಇವರಿಗೆ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ.
· ಭಾರತದ ಇತರ ಪ್ರದೇಶಗಳಿಂದ ವರ್ಗವಾಗಿ ಬರುವ ಆಡಳಿತ ಹಾಗೂ ಕಾನೂನು ಸೇವೆಗಳ ಅಧಿಕಾರಿಗಳು ನಿವೃತ್ತಿಯ ನಂತರ ರಾಜ್ಯದಲ್ಲಿ ನೆಲೆಗೊಳ್ಳುವಂತಿಲ್ಲ. ಅವರ ಮಕ್ಕಳಿಗೆ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಸಿಗುವುದಿಲ್ಲ.
· ದೇಶದ ಉಳಿದ ಪ್ರದೇಶಗಳಲ್ಲಿ ಜಾರಿ ಇರುವಂತೆ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲಾಗಿಲ್ಲ. ಸರ್ವೋಚ್ಚ ನ್ಯಾಯಾಲಯದ ಮಧ್ಯಪ್ರವೇಶದಿಂದ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ನೀಡಲಾಗಿದ್ದು ಅದನ್ನೂ ಬದಲಾಯಿಸಲು ಶಾಸನ ಸಭೆಯಲ್ಲಿ ಪ್ರಯತ್ನ ಪಡಲಾಯಿತು, ಆದರೆ ಜನರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕೈ ಬಿಡಲಾಯಿತು.
· ಈ ವಿಧಿಯಿಂದಾಗಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಭಾರತ ಸರ್ಕಾರದ ಯಾವುದೇ ಆದೇಶಗಳನ್ನು ಪಾಲಿಸಬೇಕಾದ ಬದ್ಧತೆಯನ್ನು ಹೊಂದಿಲ್ಲ.
· ಜಮ್ಮು ಕಾಶ್ಮೀರದ ಉಚ್ಚ ನ್ಯಾಯಾಲಯವು ದೇಶದ ಇತರ ರಾಜ್ಯಗಳಲ್ಲಿನ ಉಚ್ಚ ನ್ಯಾಯಾಲಯಗಳು ಹೊಂದಿರುವಷ್ಟು ಅದಿಕಾರವನ್ನು ಹೊಂದಿಲ್ಲ. ಮೂಲಭೂತ ಹಕ್ಕುಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಹೊರತುಪಡಿಸಿ ಇತರ ವಿಷಯಗಳ ಬಗ್ಗೆ ರಿಟ್ ಆದೇಶ ಹೊರಡಿಸುವಂತಿಲ್ಲ ಇಲ್ಲಿನ ಹೈಕೋರ್ಟ್.
· ಇಡೀ ದೇಶದೆಲ್ಲೆಡೆ ಅನ್ವಯವಾಗುವ ಮಾಹಿತಿ ಹಕ್ಕು ಕಾಯ್ದೆ ಜಮ್ಮು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ.
· ಜಮ್ಮು ಕಾಶ್ಮೀರದ ಹುಡುಗಿಯೊಬ್ಬಳು ಹೊರಗಿನವನನ್ನು ಮದುವೆಯಾದರೆ, ಅವಳಿಗೆ ಅಲ್ಲಿನ ಆಸ್ತಿಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ.
· ಜಮ್ಮು ಕಾಶ್ಮೀರದದಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಸುಡುವುದು ಪೆÇೀಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ಕ್ರಮ ಕೈಗೊಳ್ಳಬಹುದಾದ ಅಪರಾಧವಲ್ಲ.
· ದೇಶದ ಸಂಸತ್ತು ಜಮ್ಮು ಕಾಶ್ಮೀರದ ಗಡಿಗಳನ್ನು ಬದಲಿಸುವಂತಿಲ್ಲ.
· ಸ್ವಾತಂತ್ರ್ಯಪೂರ್ವದಲ್ಲಿ ಕಾಶ್ಮೀರದಲ್ಲಿ 3 ಜಿಲ್ಲೆಗಳೂ, ಜಮ್ಮುವಿನಲ್ಲಿ 6 ಜಿಲ್ಲೆಗಳೂ ಇದ್ದವು. ವಾಜಿರ್ ಆಯೋಗವು ಜಮ್ಮುವಿನಲ್ಲಿ 3 ಹೊಸ ಜಿಲ್ಲೆಗಳನ್ನೂ, ಕಾಶ್ಮೀರದಲ್ಲಿ ಒಂದು ಹೊಸ ಜಿಲ್ಲೆಯನ್ನೂ ಸೇರಿಸಲು ಸಲಹೆ ನೀಡಿತು. ಆದರೆ, ರಾಜ್ಯ ಸರ್ಕಾರವು, ಜಮ್ಮುವಿನಲ್ಲಿ ಒಂದು ಜಿಲ್ಲೆಯನ್ನೂ, ಕಾಶ್ಮೀರದಲ್ಲಿ 4 ಹೊಸ ಜಿಲ್ಲೆಗಳನ್ನೂ ಸೇರಿಸಿತು. ಹಾಗಾಗಿ, ಹೆಚ್ಚಿನ ಹಣಕಾಸಿನ ನೆರವೆಲ್ಲವೂ ಕಾಶ್ಮೀರಕ್ಕೆ ಹರಿಯಲು ಅನುಕೂಲವಾಯಿತು.
· ಜಮ್ಮು ಪ್ರಂತದ ಕಿಶ್ತ್ವಾರ್‍ನ ಕೇಸರಿಯು ಕಾಶ್ಮೀರದ ಕೇಸರಿಗಿಂತ ಉತ್ಕೃಷ್ಟ ಗುಣಮಟ್ಟದ್ದಾದರೂ ಅದಕ್ಕೆ ಯಾವುದೇ ಪೆÇ್ರೀತ್ಸಾಹವಿಲ್ಲ. ಜಮ್ಮುವಿನ ಬಾಸ್ಮತಿ ಅಕ್ಕಿಗೂ ಅದೇ ಗತಿ. ಜಮ್ಮುವಿನ ಉತ್ಕೃಷ್ಟ ಜೇನುತುಪ್ಪಕ್ಕೂ ಇದೇ ನೀತಿ.
· ಜಮ್ಮುವಿನ ಪ್ರವಾಸಿ ತಾಣಗಳಿಗೆ ಸುಣ್ಣ, ಕಾಶ್ಮೀರದ ಪ್ರವಾಸಿ ತಾಣಗಳಿಗೆ ಬೆಣ್ಣೆ. ಹಾಗಾಗಿ, ಪ್ರವಾಸೋದ್ಯಮದ ಆದಾಯವೆಲ್ಲ ಕಾಶ್ಮೀರದ ಮುಸ್ಲಿಮರ ಕಿಸೆಗಿಳಿಯುತ್ತಿದೆಯೇ ಹೊರತು, ಜಮ್ಮುವಿನ ಹಿಂದುಗಳ ಕಿಸೆ ತುಂಬುತ್ತಿಲ್ಲ. ಆದರೆ, ಕಾಶ್ಮೀರದಲ್ಲಿರುವಷ್ಟೇ ಸುಂದರತಾಣಗಳು ಜಮ್ಮುವಿನಲ್ಲೂ ಇವೆ. ಆದರೆ, ಸರ್ಕಾರದ ತಾರತಮ್ಯ ನೀತಿಯಿಂದಾಗಿ ಇವು ಬೆಳಕಿಗೆ ಬರುತ್ತಿಲ್ಲ.
· ಸರ್ಕಾರದ ಆದಾಯದ 75% ಜಮ್ಮುವಿನಿಂದ ಬಂದರೆ, ಕಾಶ್ಮೀರ ಕಣಿವೆಯ ಆದಾಯ 25% ಮಾತ್ರ. ಆದರೂ, ಕಾಶ್ಮೀರ ಕಣಿವೆಯ ಜನರಿಗೆ ಕಳೆದ 60 ವರ್ಷಗಳಿಂದ ಉಚಿತ ವಿದ್ಯುತ್. ಜಮ್ಮುವಿನವರು ವಿದ್ಯುತ್ ಬಿಲ್ ಕಟ್ಟಲೇಬೇಕು.
· ಜಮ್ಮುವಿನಲ್ಲಿ ನಿರುದ್ಯೋಗ 70%, ಕಾಶ್ಮೀರದಲ್ಲಿ 30% ಮಾತ್ರ.
· ಸಚಿವಾಲಯದ ಉದ್ಯೋಗಿಗಳು - ಜಮ್ಮುವಿನವರು 20%, ಕಾಶ್ಮೀರದವರು 75%.
· ಒಟ್ಟು ಸರ್ಕಾರಿ ಉದ್ಯೋಗಿಗಳು – ಜಮ್ಮುವಿನವರು 1.2 ಲಕ್ಷ, ಕಾಶ್ಮೀರದವರು 3 ಲಕ್ಷ.
· ವಿದ್ಯುತ್ ಸಂಪರ್ಕವಿರುವ ಮನೆಗಳು – ಜಮ್ಮು 70%, ಕಾಶ್ಮೀರ 99%
· ಕೃಷಿ ಅನುದಾನ – ಜಮ್ಮು – 30%, ಕಾಶ್ಮೀರ 70%.
ಯುದ್ಧದಿಂದ ಸಹಜ ಸ್ಥಿತಿಗೆ ಮರಳಿದ ನಂತರ ಸ್ಥಿತ್ಯಂತರ ಮತ್ತು ತಾತ್ಕಾಲಿಕ 370ನೇ ವಿಧಿಂiÀiನ್ನು ನಿಜವಾಗಿ ಸಮಾಪ್ತಗೊಳಿಸಬೇಕಿತ್ತು. 370(3)ರ ಅನ್ವಯ ಜಮ್ಮು ಕಾಶ್ಮೀರ ಸಂವಿಧಾನರಚನಾ ಶಾಸನಸಭೆಯ ಅನುಮೋದನೆಯೊಂದಿಗೆ ವಿಧಿಯನ್ನು ಹಿಂಪಡೆಯುವ ಅಧಿಕಾರವನ್ನು ಭಾರತದ ರಾಷ್ಟ್ರಪತಿಯವರಿಗೆ ನೀಡಲಾಗಿದೆ. ಅದಕ್ಕಾಗಿ ಭಾರತದ ಸಂವಿಧಾನ ತಿದ್ದುಪಡಿಯ ಅಗತ್ಯವೂ ಇರುವುದಿಲ್ಲ. 1957ರ ನಂತರ ಜಮ್ಮು ಕಾಶ್ಮೀರದ ಸಂವಿಧಾನರಚನಾ ಶಾಸನ ಸಭೆಯ ಕೊನೆಗೊಂಡಿದೆ. ಆದ್ದರಿಂದ ತಾಂತ್ರಿಕವಾಗಿ ಭಾರತದ ರಾಷ್ಟ್ರಪತಿ 370ನೇ ವಿಧಿಯನ್ನು ಸಮಾಪ್ತಗೊಳಿಸಲು ಸಮರ್ಥರಾಗಿದ್ದಾರೆ. ಆದರೆ ಆಳುವ ವರ್ಗದ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಈ ವಿಚಾರದ ಚರ್ಚೆ ನೆನಗುದಿಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ತಪ್ಪಾಗಿ ಅರ್ಥೈಸಲ್ಪಟ್ಟಿರುವ 370ನೇ ವಿಧಿಯ ಬಗ್ಗೆ ಜಾಗೃತಿಯಾಗಬೇಕಿದೆ.
ಪಾಕಿಸ್ತಾನ ಮತ್ತು ಮುಸ್ಲಿಂ ಮೂಲಭೂತವಾದ
1947ರಲ್ಲಿ ಭಾರತದ ವಿಭಜನೆಯ ನಂತರ ಜಮ್ಮು ಕಾಶ್ಮೀರ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬುದು ಪಾಕಿಸ್ತಾನದ ಬಹುಮುಖ್ಯ ಹಂಬಲ. ಅದಕ್ಕಾಗಿ ಇದುವರೆಗಿನ ಅಲ್ಲಿನ ಎಲ್ಲ ಪ್ರಜಾತಾಂತ್ರಿಕ ಹಾಗೂ ಸೇನಾ ಸರ್ಕಾರಗಳೂ ಪ್ರತಿಪಾದಿಸುತ್ತಲೇ ಬಂದಿವೆ. ಪಾಕಿಸ್ತಾನವು ಜಮ್ಮು ಕಾಶ್ಮೀರದ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಲು ಬಯಸುವುದಕ್ಕೆ ಮುಖ್ಯ ಮೂರು ಕಾರಣಗಳಿವೆ. ಮೊದಲನೆಯದು ರಾಜಕೀಯವಾಗಿ ಮತ್ತು ಭೌಗೋಳಿಕವಾಗಿ ಜಮ್ಮು ಕಾಶ್ಮೀರ ವiತ್ತು ಲಡಾಖ್À ಪ್ರದೇಶಗಳು ಆಯಕಟ್ಟಿನ ಸ್ಥಾನ. ಮತೀಯ ವಿಭಜನೆಯ ಆಧಾರದ ಮೇಲೆಯೇ ನಿರ್ಮಿತವಾದ ದೇಶ ಪಾಕಿಸ್ತಾನ. ತನ್ನ ಜನ್ಮದಾರಂಭದಿಂದಲೇ ಹಿಂದೂ ಜನಬಾಹುಳ್ಯದ ಭಾರತವನ್ನು ಶತ್ರುವೆಂದೇ ಭಾವಿಸಿದೆ. ಆಯಕಟ್ಟಿನ ಜಮ್ಮು ಕಾಶ್ಮೀರವನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ದಕ್ಷಿಣದಲ್ಲಿರುವ ಭಾರತವನ್ನು ಸುಲಭವಾಗಿ ನಿಯಂತ್ರಿಸಬಹುದೆಂಬ ಯುದ್ಧತಂತ್ರದ ಲೆಕ್ಕಾಚಾರ ಒಂದೆಡೆಯಾದರೆ, ಪಶ್ಚಿಮಕ್ಕೆ ಹರಿಯವ ಅಂದರೆ ಪಾಕಿಸ್ತಾನಕ್ಕೆ ನೀರುಣಿಸುವ ಸಿಂಧೂ, ಸೆಟ್ಲೆಜ್ ಮುಂತಾದ ನದಿಗಳ ಉಗಮ ಸ್ಥಾನ ಜಮ್ಮು ಕಾಶ್ಮೀರದ ಹಿಮಪರ್ವತಗಳಾಗಿರುವುದು ಇನ್ನೊಂದು ಕಾರಣ. ಇತಿಹಾಸ ಪ್ರಸಿದ್ಧ ಸಿಲ್ಕ್ ರೂಟ್ ಹಾದುಹೋಗುವ ಆಯಕಟ್ಟಿನ ಗಿಲ್ಗಿಟ್-ಬಾಲ್ಟಿಸ್ತಾನದ ಮೇಲೆ ನಿಯಂತ್ರಣ ಹೊಂದುವತ್ತ ಪಾಕಿಸ್ತಾನದ ದೃಷ್ಟಿ ಇರುವುದು ಗಮನಾರ್ಹ ಅಂಶ. ಭೌಗೋಳಿಕವಾಗಿ ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶ ಮಧ್ಯ ಏಷ್ಯದ ಕೇಂದ್ರ ಪ್ರದೇಶ, ಐತಿಹಾಸಿಕ ವ್ಯಾಪಾರಿ ಕೇಂದ್ರ. ಭಾರತ, ಚೀನ(ಟಿಬೆಟ್), ತಜಿಕಿಸ್ತಾನ, ಅಫಘಾನಿಸ್ತಾನ, ಪಾಕಿಸ್ತಾನ ಈ ಐದು ದೇಶಗಳು ಇಲ್ಲಿ ಕೂಡುತ್ತವೆ. ಇದಲ್ಲದೇ ಭೂಮಾರ್ಗವಾಗಿ ಮಧ್ಯ ಪ್ರಾಚ್ಯ ಏಷಿಯ, ಮಧ್ಯ ಏಷಿಯ ಹಾಗೂ ರಷಿಯ ಮೊದಲಾದ ಐರೋಪ್ಯ ರಾಷ್ಟ್ರಗಳು ಕೆಲವು ನೂರು, ಸಾವಿರ ಮೈಲಿ ದೂರದಲ್ಲಿವೆ. ಆದ್ದರಿಂದ ಗಿಲ್ಗಿಟ್-ಬಾಲ್ಟಿಸ್ತಾನ ಆಯಕಟ್ಟಿನ ವ್ಯಾಪಾರಿ ಪ್ರದೇಶ. ಹೀಗಾಗಿ ಜಮ್ಮು ಕಾಶ್ಮೀರವು ಪ್ರದೇಶ ಆರ್ಥಿಕವಾಗಿ ಕೂಡ ಮಹತ್ವದ್ದಾಗಿದೆ. ಎರಡನೆಯದಾಗಿ ಮುಸ್ಲಿಂ ಜನಸಮುದಾಯ ಬಹುಸಂಖ್ಯೆಯಲ್ಲಿರುವುದರಿಂದ ಅಲ್ಲಿನ ಭೂಭಾಗ ಕೂಡ ತನಗೇ ಸೇರಬೇಕೆಂಬ ತರ್ಕ ಪಾಕಿಸ್ತಾನದ್ದು. ಮೂರನೆಯದಾಗಿ ಪ್ರಪಂಚದಾದ್ಯಂತ ತನ್ನ ಕಬಂಧ ಬಾಹುಗಳನ್ನು ಬೆಳೆಸಿರುವ ಜೆಹಾದಿ ಅಥವಾ ಮುಸ್ಲಿಂ ಮೂಲಭೂತವಾದಿ ಭಯೋತ್ಪಾದನೆಯ ಬೇರುಗಳಿಗೆ ಸಹಜವಾಗಿ ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ತಾನ ನೀರೆರೆಯುತ್ತದೆ.
ಜಮ್ಮು ಕಾಶ್ಮೀರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯ ಸಾಕಾರಕ್ಕಾಗಿ ಪಾಕಿಸ್ತಾನ ಇದುವರೆಗೂ ನಾಲ್ಕು ಬಾರಿ ನೇರ ಯುದ್ಧವನ್ನು ನಡೆಸಿದೆ. ಸ್ವಾತಂತ್ರ್ಯಾನಂತರದ ಕೆಲವೇ ವಾರಗಳಲ್ಲಿ ಬುಡಕಟ್ಟು ಜನರ ಒಳನುಳುವಿಕೆ ನಂತರ ಪಾಕ್ ಸೇನೆಯ ನೇರ ಪ್ರವೇಶದೊಂದಿಗೆ ನಡೆದ 1947-48ರ ಯುದ್ಧ, ಮಿಲಿಟರಿ ಸರ್ವಾಧಿಕಾರಿ ಅಯೂಬ್ ಖಾನನ ನೇತೃತ್ವದ 'ಆಪರೇಷನ್ ಜಿಬ್ರಾಲ್ಟರ್' 1965ರ ಯುದ್ಧ, 1971 ಬಾಂಗ್ಲಾ ವಿಮೋಚನಾ ಸಮರ ಮತ್ತು 1999ರ ಕಾರ್ಗಿಲ್ ಕದನ, ಈ ಎಲ್ಲ ಸಂಘರ್ಷಗಳಲ್ಲೂ ಪಾಕಿಸ್ತಾನಿ ಸೇನೆ ಸಮರಾಂಗಣದಲ್ಲಿ ಭಾರತೀಯ ಸೈನಿಕರ ಶೌರ್ಯದ ಮುಂದೆ ಹಿಮ್ಮೆಟ್ಟಿದೆ. ಆದರೆ ದೌರ್ಭಾಗ್ಯದ ಸಂಗತಿಯೆಂದರೆ, 1999ರ ಸಂಘರ್ಷವನ್ನು ಹೊರತುಪಡಿಸಿ ಉಳಿದೆಲ್ಲ ಯುದ್ಧಗಳಲ್ಲಿ ಭಾರತೀಯ ಸೈನ್ಯ ಸಮರದಲ್ಲಿ ಗೆದ್ದರೂ, ಸಂಧಿಯ ಮೇಜಿನಲ್ಲಿ ಜಯ ಪಾಕಿಸ್ತಾನ ಪಾಲಾಗಿದೆ. 1947ರ ಪ್ರಥಮ ಇಂಡೋ-ಪಾಕ್ ಯುದ್ಧದ ಪರಿಣಾಮ ಜಮ್ಮು ಕಾಶ್ಮೀರದ ಪಶ್ಚಿಮೋತ್ತರ ಭಾಗ ಅಂದರೆ ಪ್ರಸ್ತುತ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ (ಪಿಓಜೆಕೆ ಅಥವಾ ಪಿಓಕೆ) ಮತ್ತು ಆಯಕಟ್ಟಿನ ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶ ಪಾಕಿಸ್ತಾನದ ನಿಯಂತ್ರಣಕ್ಕೆ ಸೇರಿಹೋಯಿತು. ಪ್ರಸ್ತುತ ಪಿಓಕೆಯನ್ನು ಆಜಾದ್ ಕಾಶ್ಮೀರ ಎಂದು ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶವನ್ನು ಸ್ವಾಯತ್ತ ಆಡಳಿತ ಪ್ರದೇಶ ಎಂದು ಪಾಕಿಸ್ತಾನ ಗುರುತಿಸುತ್ತದೆ. ಕದನವಿರಾಮ ಮತ್ತು ವಿಶ್ವಸಂಸ್ಥೆಗೆ ವಿವಾದವನ್ನು ಒಯ್ಯುವುದರೊಂದಿಗೆ ಭಾರತದ ಪಾಲಿಗೆ ಶಾಶ್ವತ ಸಮಸ್ಯೆಯೊಂದರ ಉಗಮವಾಯಿತು. ಹಾಗೆಯೇ 1971ರ ಯುದ್ಧದಲ್ಲಿ ಪಾಕಿಸ್ತಾನಿ ಸೇನೆಯ ಸಂಪೂರ್ಣ ಶರಣಾಗತಿಯ ನಂತರವೂ ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವ ಯಾವುದೇ ಫಲಕಾರಿ ಪ್ರಯತ್ನ ನಡೆಯಲಿಲ್ಲ. ಬದಲಿಗೆ ಯುದ್ಧದಲ್ಲಿ ಪಾಕ್ ಆಕ್ರಮಿಸಿದ 120 ಚದರ ಕಿಮೀ ವಿಸ್ತೀರ್ಣದ ಛಂಬ್ ಪ್ರದೇಶವನ್ನು ಶಿಮ್ಲಾ ಒಪ್ಪಂದದ ಮೂಲಕ ಪಾಕಿಸ್ತಾನಕ್ಕೇ ಒಪ್ಪಿಸಲಾಯಿತು.
ನೇರ ಯುದ್ಧದ ಮೂಲಕ ಭಾರತವನ್ನು ಮಣಿಸಲು ಸಾಧ್ಯವಾಗದ್ದನ್ನು ಮನಗಂಡ ಪಾಕಿಸ್ತಾನ ಭಯೋತ್ಪಾದನೆಯ ವಾಮಮಾರ್ಗವನ್ನು ಬಳಸುತ್ತಿದೆ. ಜಮ್ಮು ಕಾಶ್ಮೀರದ ‘ಆಜಾದಿ’ಯನ್ನೇ ಧ್ಯೇಯವಾಗಿಟ್ಟುಕೊಂಡಿರುವ ಲಷ್ಕರ್-ಎ-ತೋಯ್ಬಾ, ಜೈಶ್-ಎ-ಮಹಮ್ಮದ್, ಹಿಜಬ್-ಉಲ್-ಮುಜಾಹಿದೀನ್ ಮುಂತಾದ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನದಲ್ಲಿ ಭರಪೂರ ಆಸರೆ ಮತ್ತು ಪ್ರೋತ್ಸಾಹ ದೊರೆಯುತ್ತದೆ. ಪಾಕ್ ಆಕ್ರಮಿತ ಕಾಶ್ಮೀರದಿಂದ ನಿರಂತರ ಒಳನುಸುಳುವಿಕೆ ನಡೆದೇ ಇದೆ. ಭಾರತದ ಇತರ ಪ್ರದೇಶಗಳೂ ಈ ಮೂಲಭೂತವಾದಿ ಭಯೋತ್ಪಾದಕ ಸಂಘಟನೆಗಳ ಗುರಿಯಾಗಿವೆ. ಪಾಕಿಸ್ತಾನಿ ಪ್ರೇರಣೆಯಿಂದ ಮತ್ತು ಸಹಾನುಭೂತಿಯುಳ್ಳ ಸ್ಥಳೀಯ ಪ್ರತ್ಯೇಕತಾವಾದಿಗಳ ನೆರವಿನೊಂದಿಗೆ ರಾಜ್ಯದ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಪ್ರಯತ್ನ ನಿರಂತರವಾಗಿ ನಡೆದುಬಂದಿದೆ.
ಚೀನ ಮತ್ತು ಮಹಾತ್ವಾಕಾಂಕ್ಷೆಗಳು
ಜಮ್ಮು ಕಾಶ್ಮೀರ ರಾಜ್ಯದ ಸುಮಾರು 42 ಸಾವಿರ ಚದರ ಕಿ.ಮೀ ವಿಸ್ತೀರ್ಣದ ಭೂಭಾಗ ಚೀನಾದ ವಶದಲ್ಲಿ ಸೇರಿದೆ. 1962ರ ಇಂಡೋ-ಚೀನ ಯುದ್ಧದಲ್ಲಿ ಲಡಾಖ್ ಅಕ್ಸಾಯ್‍ಚಿನ್ ವiತ್ತು ಸಿಯಾಚಿನ್ ಗ್ಲೇಸಿಯರ್‍ನ ಸುಮಾರು 37.5 ಸಾವಿರ ಚದರ ಕಿ.ಮೀ ಭಾಗವನ್ನು ಚೀನ ಆಕ್ರಮಿಸಿಕೊಂಡಿತು. ಇದರೊಂದಿಗೆ 1963ರ ಚೀನ-ಪಾಕ್ ಗಡಿ ಒಪ್ಪಂದದಂತೆ ಉತ್ತರ ಭಾಗದ ಸಕ್ಷಮ್ ವ್ಯಾಲಿ ಪ್ರದೇಶವನ್ನು ಪಾಕಿಸ್ತಾನ ಚೀನಾಕ್ಕೆ ಒಪ್ಪಿಸಿದೆ. ಜಮ್ಮು ಕಾಶ್ಮೀರದ ಭೂಭಾಗದ ಮೇಲೆ ಮುಖ್ಯವಾಗಿ ಎರಡು ಕಾರಣಗಳಿಂದ ಚೀನ ಆಸಕ್ತಿ ಹೊಂದಿದೆ. ಮೊದಲನೆಯದು 1949ರಲ್ಲಿ ಟಿಬೆಟ್ ಆಕ್ರಮಿಸಿಕೊಂಡ ನಂತರ ಅದನ್ನು ಅಂಕೆಯಲ್ಲಿಡಲು ಹತ್ತಿರದ ಕ್ಸಿಂಜಿಯಾಂಗ ಪ್ರಾಂತದೊಂದಿಗೆ ಜೋಡಿಸುವುದು ಚೀನಾದ ತಂತ್ರಗಳಲ್ಲೊಂದು. ಆದರೆ ನೇರವಾಗಿ ಭೂಮಾರ್ಗ ನಿರ್ಮಿಸುವಲ್ಲಿ ಭೌಗೋಳಿಕ ತೊಡಕುಗಳಿವೆ. ಆಗ ಗೋಚರವಾಗಿದ್ದು ಅಕ್ಸಾಯ್‍ಚಿನ್‍ನ ಸಮತಲ ಎತ್ತರದ ಪ್ರದೇಶ. ಚೀನಾ ಲಡಾಖ್ ಪ್ರದೇಶವನ್ನು ಟಿಬೆಟಿನ ಮುಂದುವರಿದ ಭಾಗ ಎಂದು ಪ್ರತಿಪಾದಿಸುತ್ತದೆ. ಕ್ಸಿಂಜಿಯಾಂಗ್ ಮತ್ತು ಟಿಬೆಟನ್ನು ಜೋಡಿಸುವ ಹೆದ್ದಾರಿ ಅಕ್ಸಾಯ್‍ಚಿನ್ ಮೂಲಕ ಹಾದುಹೋಗುತ್ತದೆ. ಜೊತೆಗೆ ಚೀನಿಯರಿಂದ ಮುಕ್ತಿ ಪಡೆಯಲು ಟಿಬೆಟಿಯನ್ನರು ನಡೆಸಿರುವ ಹೋರಾಟಗಳನ್ನು ಹತ್ತಿಕ್ಕಲು ಬೇಕಾದ ಸೇನಾ ನಿಯೋಜನೆಗೆ ಕೂಡ ಅಕ್ಸಾಯ್‍ಚಿನ್ ಆಯಕಟ್ಟಿನ ಜಾಗವಾಗಿದೆ. 1965ರಲ್ಲೇ ಭಾರತದೊಂದಿಗೆ ಯುದ್ಧ ವಿರಾಮವಾಗಿದ್ದರೂ ಚೀನಾ ಆಗಾಗ ಲಡಾಖ್‍ಲ್ಲಿ ತನ್ನ ಹೆಜ್ಜೆಗಳನ್ನು ಮುಂದಿಡುತ್ತ ಬರುತ್ತಿದೆ. ಮೊನ್ನೆ ಏಪ್ರಿಲ್‍ನಲ್ಲಿ ಲಡಾಖ್‍ನಲ್ಲಿ ನಡೆದ ಅತಿಕ್ರಮಣ ಇದಕ್ಕೊಂದು ಸಾಕ್ಷಿ ಅಷ್ಟೇ.
ಎರಡನೆಯದಾಗಿ ಆರ್ಥಿಕ ಶಕ್ತಿಯಾಗುವ ಚೀನಾದ ಮಹತ್ವಾಕಾಂಕ್ಷೆ. ಅದಕ್ಕಾಗಿ ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸುತ್ತಿದೆ. ಪಾಕಿಸ್ತಾನದೊಂದಿಗಿನ ಆರ್ಥಿಕ ಒಪ್ಪಂದಗಳಿಂದ ಗಿಲ್ಗಿಟ ಮತ್ತು ಪಾಕಿಸ್ತಾನದ ನಾರ್ಥ ವೆಸ್ಟ್ ಪ್ರಾಂತದಲ್ಲಿ ವಿದ್ಯುತ್ ಸ್ಥಾವರ, ರಸ್ತೆಗಳು ಹಾಗೂ ಸಂಪರ್ಕ ಸೌಲಭ್ಯಗಳನ್ನು ನಿರ್ಮಿಸುವುದರೊಂದಿಗೆ ತನ್ನ ಇರುವಿಕೆಯನ್ನು ಬಲಗೊಳಿಸುತಿದೆ. ಪಾಕಿಸ್ತಾನದ ಬಹುದೊಡ್ಡ ಗ್ವದಾರ್ ಬಂದರನ್ನು ಚೀನಾದ ಸಹಯೋಗದಲ್ಲಿ ನಿರ್ಮಿಸಲಾಗುತ್ತಿದೆ. ಉತ್ತರ ಕಾಶ್ಮೀರದ ಕಾರಕೋರಮ್ ಪರ್ವತ ಶ್ರೇಣಿಯಲ್ಲಿ ಚೀನಾದ ಕ್ಸಿಂಜಿಯಾಂಗ್ ವiತ್ತು ಗಿಲ್ಗಿಟ್ ಪ್ರದೇಶವನ್ನು ಜೋಡಿಸುವ ಹೆದ್ದಾರಿಯನ್ನು ಚೀನಾ ನಿರ್ಮಿಸಿದೆ. ಜೊತೆಗೆ ಗ್ವದಾರ್ ಬಂದರು ಮತ್ತು ಚೀನಾದ ನಡುವೆ ರೈಲು ಸಂಪರ್ಕ ನಿರ್ಮಿಸುವ ಯೋಜನೆಯನ್ನು ಕೂಡ ಚೀನ ಹೊಂದಿದೆ. ಚೀನ ಮತ್ತು ಪಾಕಿಸ್ತಾನಗಳಿಗೆ ಸಂಬಂಧಿಸಿದಂತೆ ಒಂದೆರಡು ಅಂಶಗಳನ್ನು ಗಮನಿಸುವುದು ಉಚಿತವಾಗುವುದು. ಮೊದಲನೆಯದಾಗಿ, ಪಾಕಿಸ್ತಾನದೊಂದಿಗೆ ಆರ್ಥಿಕ ಹಾಗೂ ರಾಜತಾಂತ್ರಿಕ ಕಾರಣಗಳಿಂದ ಮಿತ್ರತ್ವ ಹೊಂದಿದ್ದರೂ ಚೀನ ಕೂಡ ಮುಸ್ಲಿಂ ಮೂಲಭೂತವಾದಿ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಮುಸ್ಲಿಂ ಬಾಹುಳ್ಯದ ಕ್ಸಿಂಜಿಯಾಂಗ ಪ್ರಾಂತದಲ್ಲಿ ಪ್ರತ್ಯೇಕತಾವಾದಿ ಭಾವನೆಗಳು ಆಗಾಗ ಸಿಡಿದೇಳುತ್ತಿವೆ. ಎರಡನೆಯದಾಗಿ, ಪಾಕಿಸ್ತಾನದ ಉತ್ತರ ಪ್ರಾಂತದಲ್ಲಿ ಮೂಲಭೂತ ಸೌಲಭ್ಯ ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸುವಲ್ಲಿ ತೊಡಗಿರುವ ಚೀನಿಯರಲ್ಲಿ ಬಹುತೇಕ ಸೈನ್ಯವೇ ಇದೆ. ಷಿಯಾ ಮುಸಲ್ಮಾನರು ಬಹುಸಂಖ್ಯೆಯಲ್ಲಿರುವ ಈ ಪ್ರದೇಶದಲ್ಲಿ ಚೀನಾ ವಿರೋಧಿ ಭಾವನೆಗಳು ಬಲಗೊಳ್ಳುತ್ತಿವೆ. ಹೀಗೆ ಈ ಪ್ರದೇಶದ ಪರಿಸ್ಥಿತಿ ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಾ ಬರುತ್ತಿದೆ.
ಅಂತರರಾಷ್ಟ್ರೀಯ ಹಸ್ತಕ್ಷೇಪಗಳು: ಅಮೆರಿಕ, ಯುಕೆ
1947ರ ಸಂದರ್ಭದಲ್ಲೇ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆನ್ನುವುದು ಬ್ರಿಟಿಷ ರಾಜತಾಂತ್ರಿಕತೆಯ ಒಂದು ಭಾಗವಾಗಿತ್ತು. ಬ್ರಿಟಿಷರು ಯೂರೋಪ್ ಮತ್ತು ಚೀನಾದ ನಡುವೆ ಒಂದು ಮುಸ್ಲಿಂ ಗೋಡೆಯನ್ನು ಬಯಸಿದ್ದರು. ಆ ಸಮಯದಲ್ಲಿ ಬೆಳೆಯುತ್ತಿದ್ದ ರಷಿಯ ಮತ್ತು ಚೀನಾದ ಕಮ್ಯೂನಿಸಂನೊಂದಿಗೆ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಮಧ್ಯ ಏಷಿಯದಲ್ಲಿ ತಮ್ಮ ಪ್ರಭಾವ ಉಳಿಸಿಕೊಳ್ಳುವುದು ಬ್ರಿಟನ್ ಮತ್ತು ಅಮೆರಿಕಾಕ್ಕೆ ಅನಿವಾರ್ಯವಾಗಿ ಕಾಣಿಸಿತು. ಭಾರತದಿಂದ ಕಾಲುತೆಗೆಯುವ ಸಮಯದ ಆಸುಪಾಸಿನಲ್ಲಿ ಬ್ರಿಟಿಷ್ ರಾಜತಾಂತ್ರಿಕರು ವ್ಯವಸ್ಥಿತವಾಗಿ ಕಾಶ್ಮೀರವನ್ನು ತಮಗನುಕೂಲವಾದ ರೀತಿಯಲ್ಲಿ ಮಾರ್ಪಡಿಸಿಕೊಳ್ಳುವುದರಲ್ಲಿ ತೊಡಗಿಕೊಂಡಿದ್ದರು. ಅದರ ಪರಿಣಾಮವೇ ಪ್ರಥಮ ಇಂಡೋ-ಪಾಕ್ ಯುದ್ಧ. ಭಾರತದ ಪರವಾಗಿ ನಿರ್ಣಾಯಕ ಹಂತ ತಲುಪುವ ಮೊದಲೇ ವಿರಾಮಗೊಂಡು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪರಿಹಾರಕ್ಕಾಗಿ ತಲುಪಿ, ಕಾಶ್ಮೀರವು ಒಂದು ಅಂರರಾಷ್ಟ್ರೀಯ ವಿವಾದವಾಗಿ ಮಾರ್ಪಾಡುಗೊಂಡಿತು. ವಿಶ್ವಸಂಸ್ಥೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳ ತಂತ್ರಗಾರಿಕೆ ಸರ್ವವಿದಿತ.
ನಿರಾಶ್ರಿತರ ಬವಣೆಗಳು
ಕಾಶ್ಮೀರ ಕೇಂದ್ರಿತ ದೃಷ್ಟಿಕೋನ ಹಾಗೂ ಘನ ನಿರ್ಲಕ್ಷದಿಂದ ಜಮ್ಮು ಮತ್ತು ಲಡಾಖ್ ಪ್ರದೇಶಗಳ ಜನರಿಗೆ ಆಗುತ್ತಿರುವ ಅನ್ಯಾಯಗಳು ಜಮ್ಮು ಕಾಶ್ಮೀರದಲ್ಲಿ ಒಂದು ವಿಷಯವೇ ಅಲ್ಲವೆಂಬಷ್ಟು ಸಹಜವಾಗಿ ಹೋಗಿದೆ. ಬಹು ಆಯಾಮೀ ಸಮಸ್ಯೆಗಳುಳ್ಳ ರಾಜ್ಯದ ಅನೇಕ ಸಂಕಷ್ಟ ಪೀಡಿತ ಸಮುದಾಯದಲ್ಲಿ ಒಂದು ವರ್ಗವೆಂದರೆ ಸುಮಾರು 20 ಲಕ್ಷಕ್ಕೂ ಮೀರಿರುವ ಜಮ್ಮುವಿನ ನಿರಾಶ್ರಿತರು. ಸಾಮಾನ್ಯವಾಗಿ ನಿರಾಶ್ರಿತರ ವಿಷಯ ಬಂದಾಗ ಕಾಶ್ಮೀರಿ ಪಂಡಿತರನ್ನು ಉದಾಹರಿಸಲಾಗುತ್ತದೆ. ಅವರಿಗಿಂತ ಎಷ್ಟೋ ಪಟ್ಟು ಹೆಚ್ಚು ಸಂಖ್ಯೆಯಲ್ಲಿರುವವರು ಹಾಗೂ ಬಹಳ ಪೀಡಿತರು ಜಮ್ಮು ಪ್ರದೇಶದಲ್ಲಿ ಕ್ಯಾಂಪ್‍ಗಳಲ್ಲಿ ಮೂರು ತಲೆಮಾರುಗಳಿಂದ ನೆಲೆಸಿರುವ ಈ ನಿರಾಶ್ರಿತರು. ಅವರ ಸಂಖ್ಯೆಯನ್ನು ಈ ಕೆಳಗೆ ಕೊಡಲಾಗಿದೆ.
ಎಲ್ಲಿಂದ ವಲಸೆ ಬಂದವರು:
ನಿರಾಶ್ರಿತರ ಸಂಖ್ಯೆ (ಅಂದಾಜು)
ಪಶ್ಚಿಮ ಪಾಕಿಸ್ತಾನ : 2 ಲಕ್ಷ
ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ: 12 ಲಕ್ಷ
ಗಡಿ ಭಾಗದ ಯುದ್ಧ ಸಂತ್ರಸ್ತರು : 3.5 ಲಕ್ಷ
ಕಾಶ್ಮೀರ ಕಣಿವೆಯ ಪಂಡಿತರು : 3 ಲಕ್ಷ
ಒಟ್ಟು : 20.5 ಲಕ್ಷ
ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರು
ದೇಶ ವಿಭಜನೆಯ ನಂತರ ಹಿಂಸಾಚಾರ ಪೀಡಿತ ಪಶ್ಚಿಮ ಪಾಕಿಸ್ತಾನದಿಂದ ನಿರ್ವಸಿತರಾಗಿ ಜಮ್ಮುವಿನಲ್ಲಿ ನೆಲೆಸಿದ ಸುಮಾರು 2 ಲಕ್ಷಕ್ಕೂ ಹೆಚ್ಚು ಹಿಂದೂ-ಸಿಖ್ ಸಮುದಾಯವಿದೆ. ಅವರಲ್ಲಿ ಇಂದು ಪಾಕಿಸ್ತಾನದಲ್ಲಿರುವ ಸಿಯಾಲ್‍ಕೋಟ್ ಜಿಲ್ಲೆಯವರೇ ಹೆಚ್ಚಿನವರು. ಅವರೆಲ್ಲ ಮಾಡಿದ ತಪ್ಪು ಒಂದೇ. 1947ರಲ್ಲಿ ಭಾರತದ ಇತರ ಭಾಗಕ್ಕೆ ವಲಸೆ ಬರದೇ ಜಮ್ಮುವಿನಲ್ಲೇ ನೆಲೆ ನಿಂತಿದ್ದು. ಅದರಿಂದಾಗಿ ಇಂದು ಅತಂತ್ರರಾಗಿ ಬದುಕುವ ಸ್ಥಿತಿ ಬಂದಿದೆ. ಭಾರತ ಪಾಕ್ ಗಡಿಯಲ್ಲಿನ ಜಮ್ಮು, ಸಾಂಬಾ ಮತ್ತು ಕಠುವಾ ಜಿಲ್ಲೆಗಳಲ್ಲಿರುವ ನಿರಾಶ್ರಿತ ಶಿಬಿರಗಳೇಇವರಿಗೀಗ ನೆಲೆ.
ಸಂವಿಧಾನದ 370ನೇ ವಿಧಿಯ ಪ್ರಕಾರ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನವಿರುವುದರಿಂದ ಭಾರತದ ಪೌರÀತ್ವವಲ್ಲದೇ ಆ ರಾಜ್ಯದ ಜನರಿಗೆರಾಜ್ಯದ ಪ್ರತ್ಯೇಕ ಪೌರತ್ವವಿದೆ. ಅಲ್ಲಿನ ಕಾನೂನಿನ ಪ್ರಕಾರ 1954ಕ್ಕೂ ಮೊದಲು ಹತ್ತು ವರ್ಷಗಳಿಂದ ಆ ರಾಜ್ಯದಲ್ಲಿ ನೆಲೆಸಿರುವವರು ಮತ್ತು ಅವರ ಮಕ್ಕಳಿಗೆ ಮಾತ್ರ ಅಲ್ಲಿಯ ಪೌರತ್ವ. (ಅಂತರರಾಷ್ಟ್ರೀಯ ಮಾನವ ಹಕ್ಕು ನಿಯಮಗಳ ಪ್ರಕಾರ, ವ್ಯಕ್ತಿಯೊಬ್ಬ ಹುಟ್ಟಿದ ಪ್ರದೇಶದಲ್ಲಿ ಆತನಿಗೆ ಪೌರತ್ವ ನೀಡಬೇಕೇ ಹೊರತು, ಅವನ ಪೆÇೀಷಕರು ಹುಟ್ಟಿದ್ದೆಲ್ಲಿ ಎಂಬುದರ ಮೇಲೆ ಪೌರತ್ವ ನೀಡುವ ಹಾಗಿಲ್ಲ. ಭಾರತವೂ ಈ ನಿಯಮಕ್ಕೆ ಸಹಿ ಹಾಕಿರುವ ದೇಶಗಳಲ್ಲೊಂದು. ಆದರೂ, ಜಮ್ಮು ಕಾಶ್ಮೀರದಲ್ಲಿ ಈ ಕಾನೂನಿದೆ!) ಹಾಗಾಗಿ, 1947ರಲ್ಲಿ ಪಾಕಿಸ್ತಾನದಿಂದ ನಿರಾಶ್ರಿತರಾಗಿ ಅಲ್ಲಿಗೆ ಬಂದು ನೆಲೆ ನಿಂತ ಈ ಹಿಂದುಗಳಿಗೆ ಪೌರತ್ವವಿಲ್ಲ! ಪರಿಣಾಮವಾಗಿ, ಇವರು ಅಲ್ಲಿನ ವಿಧಾನಸಭೆ, ಪಂಚಾಯತ್ ಅಥವಾ ಯಾವುದೇ ಚುನಾವಣೆಗಳಲ್ಲಿ ಮತದಾನ ಮಾಡುವಂತಿಲ್ಲ. ಅಲ್ಲಿ ಆಸ್ತಿ ಹೊಂದುವಂತಿಲ್ಲ. ಅವರ ಮಕ್ಕಳಿಗೆ ವೃತ್ತಿಪರ ಕಾಲೇಜುಗಳಿಗೆ ಪ್ರವೇಶವಿಲ್ಲ. ರಾಜ್ಯ ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯಗಳಿಲ್ಲ. ಅದೃಷ್ಟವಶಾತ್, ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಮಾತ್ರ ಇದೆ. ಆದರೆ, ಜಮ್ಮು ಕಾಶ್ಮೀರದಲ್ಲಿ ಅವರದೇ ಸಂವಿಧಾನ, ಕಾನೂನು ಇರುವುದರಿಂದ ಲೋಕಸಭೆಯಲ್ಲಿ ಏನೇ ನಡೆದರೂ ಇವರಿಗೇನೂ ಹೆಚ್ಚಿನ ಪ್ರಯೋಜನವಿಲ್ಲ. ಇವರ ವೋಟಿನ ಹಂಗಿಲ್ಲದಿರುವುದರಿಂದ ಜಮ್ಮು ಕಾಶ್ಮೀರದ ಯಾವುದೇ ರಾಜಕೀಯ ಪಕ್ಷಗಳೂ ಇವರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೇಳಿ ಕೇಳಿ, ಇವರೆಲ್ಲ ಹಿಂದುಗಳು. ಅದರಲ್ಲೂ ಹೆಚ್ಚಿನವರು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರು.ಪರಿಶಿಷ್ಟ ಜಾತಿ ಪಂಗಡಗಳಿಗೆ ತಾವೇ ನಾಯಕರೆಂದು ಹೇಳಿಕೊಳ್ಳುವ, ಅವರ ಹಿತವೇ ನಮ್ಮ ಹಿತವೆಂದು ಪೆÇೀಸು ಕೊಡುವ ಯಾವ ರಾಜಕೀಯ ಪಕ್ಷಕ್ಕೂ ಇವರ ಕೂಗು ಕೇಳುತ್ತಲೇ ಇಲ್ಲ.
ಸರ್ಕಾರಿ ಜಾಗದಲ್ಲಿ ಕಟ್ಟಿಕೊಂಡಿರುವ ತಾತ್ಕಾಲಿಕ ಶೆಡ್‍ಗಳಲ್ಲೇ ಅವರು ಕಳೆದ 65 ವರ್ಷಗಳಿಂದ ದಿನದೂಡುತ್ತಿದ್ದಾರೆಂದರೆ ಅವರ ಮನಸ್ಸು ಅದೆಷ್ಟು ಕುಗ್ಗಿ ಹೋಗಿರಬೇಡ ಯೋಚಿಸಿ. ಇವರುಗಳು ಜೀವನೋಪಾಯಕ್ಕಾಗಿ ಇಂದಿಗೂ ಅವಲಂಬಿಸಿರುವುದು ದಿನಗೂಲಿಯನ್ನೇ. ಯಾವುದೇ ಉದ್ಯಮವನ್ನಾಗಲೀ ಹೊಂದಿದವರು ಇವರಲ್ಲ, ಒಳ್ಳೆಯ ಕೆಲಸವೂ ಇವರಿಗೆ ಸಿಗುತ್ತಿಲ್ಲ.
1981ರಲ್ಲಿ ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದಾಗ ಅಂದಿನ ಸರ್ಕಾರ ಕೂಡಲೇ ಈ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಭರವಸೆ ನೀಡಿತು. ಆದರೆ ಅದು ಜಾರಿಯಾಗಲೇ ಇಲ್ಲ. ಅದೇ ಸಮಯದಲ್ಲಿ ಜಮ್ಮು ಕಾಶ್ಮೀರ ಸರ್ಕಾರ ಒಂದು ಕಾನೂನನ್ನು ಜಾರಿಗೆ ತಂದಿತು. ಅದರ ಪ್ರಕಾರ, ಮೂಲತಃ ಜಮ್ಮು ಕಾಶ್ಮೀರ ರಾಜ್ಯದವರಾದ, ಆದರೆ ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ಹೋಗಿ ನೆಲೆಸಿರುವವರು ಇಲ್ಲಿಗೆ ಹಿಂತಿರುಗಿ ಬಂದು ತಮ್ಮ ಆಸ್ತಿಯ ಮೇಲಿನ ಹಕ್ಕನ್ನು ಪಡೆಯಬಹುದಾಗಿತ್ತು. ಅಂತಹವರಿಗೆ ರಾಜ್ಯದ ಪೌರತ್ವವನ್ನೂ ದಯಪಾಲಿಸಿತು ಸರ್ಕಾರ! ಅಲ್ಲಲ್ಲಿ ಇದ್ದ ಇಂತಹ ಮನೆಗಳಲ್ಲಿ ವಾಸಿಸುತ್ತಿದ್ದ ಈ ನಿರಾಶ್ರಿತರಿಗೆ ಈ ಮನೆಗಳ ಹಕ್ಕನ್ನು ಕೊಡುವ ಬದಲು, ಅದನ್ನು ಈಗ ದೇಶದಲ್ಲೇ ಇಲ್ಲದ, ಪಾಕಿಸ್ತಾನದ ಪೌರತ್ವವನ್ನು ಹೊಂದಿದ ಮುಸ್ಲಿಮರಿಗೆ ಕೊಟ್ಟಿತು ಸರ್ಕಾರ. ಹಾಗಾಗಿ, ಪುನಃ ಬೀದಿಗೆ ಬಿದ್ದವು ಅನೇಕ ಕುಟುಂಬಗಳು. ನಾಲ್ಕೈದು ದಶಕಗಳಿಂದ ಇಲ್ಲೇ ಇರುವವರ ಬಗ್ಗೆ ಇಲ್ಲದ ಕಾಳಜಿ ದೇಶಬಿಟ್ಟು ಹೋದವರ ಬಗ್ಗೆ ಜಮ್ಮು ಕಾಶ್ಮೀರದ ಸರ್ಕಾರಕ್ಕೇಕೆ ಎಂದು ಪ್ರಶ್ನಿಸುತ್ತಾರೆ ವಕೀಲ ಬಿ ಎಲ್ ಕಾಲಗೋತರ ಅವರು. ಆಡ್ವಾಣಿಯವರು ಗೃಹಮಂತ್ರಿಯಾಗಿದ್ದಾಗ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವಂತೆ ಸೂಚಿಸಿ ಎರಡು ಬಾರಿ ಕಳುಹಿಸಿದ ಪತ್ರಕ್ಕೆ ಜಮ್ಮು ಕಾಶ್ಮೀರ ಸರ್ಕಾರ ಕವಡೆ ಕಾಸಿನ ಕಿಮ್ಮತ್ತೂ ಕೊಡಲಿಲ್ಲ. ಹೀಗಾಗಿ ಅವರ ಸ್ಥಿತಿ ಹಾಗೆಯೇ ಉಳಿದಿದೆ.
ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ ನಿರಾಶ್ರಿತರು
1947ರ ಅಕ್ಟೋಬರ್‍ನಲ್ಲಿ ಪಾಕಿಸ್ತಾನದ ಸೈನ್ಯ ಮತ್ತು ಮುಸ್ಲಿಂ ದಾಳಿಕೋರರು ಜಮ್ಮು ಕಾಶ್ಮೀರದ ಮೇಲೆ ದಾಳಿ ಪ್ರಾರಂಭಿಸಿದರು. ಮುಜಫರಾಬಾದ್ ನಗರ ಅವರ ಮೊದಲ ಗುರಿ.ಬಳಿಕ ಮೀರ್‍ಪುರ್ ಮತ್ತು ಪೂಂಚ್. ಸಂಪೂರ್ಣ ಜಮ್ಮು ಕಾಶ್ಮೀರದಿಂದ ಹಿಂದುಗಳನ್ನು ಹೊಡೆದೋಡಿಸಿ ಇಡೀ ರಾಜ್ಯವನ್ನು ವಶಪಡಿಸಿಕೊಳ್ಳುವ ಹುನ್ನಾರ ಅವರದ್ದಾಗಿತ್ತು! ಅದರ ಅಂಗವಾಗಿ ಮುಜಫರಾಬಾದ್ ನಗರದಲ್ಲಿ 10,000 ಜನರನ್ನು ಒಂದೇ ರಾತ್ರಿಯಲ್ಲಿ ಕೊಂದವರು ಈ ರಾಕ್ಷಸರು. ಇಂತಹ ಭಯದ ವಾತಾವರಣದಲ್ಲಿ ತಮ್ಮ ಮನೆ ಮಠವನ್ನೆಲ್ಲ ತೊರೆದು ಉಟ್ಟ ಬಟ್ಟೆಯಲ್ಲೇ ಜೀವ ಉಳಿಸಿಕೊಳ್ಳಲು ಜಮ್ಮು ಕಡೆಗೆ ಬಂದವರು ಅದೆಷ್ಟೋ ಹಿಂದುಗಳು, ಸಿಕ್ಖರು.ಪುನಃ ಹಿಂತಿರುಗಿ ಹೋಗುತ್ತೇವೆಂಬ ಭರವಸೆಯೊಂದಿಗೆ ಬಂದ ಇವರ ಕನಸು ಕನಸಾಗಿಯೇ ಉಳಿಯಿತು.ಮುಜಫರಾಬಾದ್, ಮೀರ್‍ಪುರ, ಪೂಂಚ್‍ಗಳು ಭಾರತಕ್ಕೆ ಸೇರಲೇ ಇಲ್ಲ. ‘ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ’ ಎಂದು ನಾವು ಇಂದಿಗೂ ಕರೆಯುತ್ತಿದ್ದೇವೆ. ಕೇವಲ ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆ ಎಂಬ ಸ್ಥಿತಿಯಲ್ಲಿ ಹೀಗೆ ಬಂದವರ ಸಂಖ್ಯೆಸುಮಾರು 12 ಲಕ್ಷ. ಅವರಲ್ಲಿ 10 ಲಕ್ಷದಷ್ಟು ಜನ ಜಮ್ಮುವಿನ ನಿರಾಶ್ರಿತರ ಶಿಬಿರದಲ್ಲೇ ಇದ್ದಾರೆ. ಉಳಿದ 2 ಲಕ್ಷ ಜನರು ದೇಶದ ಇತರ ಭಾಗಗಳಲ್ಲಿದ್ದಾರೆ.
ನಮ್ಮ ದೇಶ ವಿಜ್ಞಾನ, ತಂತ್ರಜ್ಞಾನದಲ್ಲಿ ಮುಂದುವರಿದಿದ್ದರೂ, ಚಂದ್ರನಲ್ಲಿಗೆ ರಾಕೆಟ್ ಕಳುಹಿಸುವ ಮಾತುಗಳನ್ನಾಡುತ್ತಿದ್ದರೂ ನಮ್ಮ ಸರ್ಕಾರ ಮಾತ್ರ ಇನ್ನೂ ಇವರಿಗೆ ಮನುಷ್ಯರಿಗೆ ಬೇಕಾದ ಯಾವ ಸವಲತ್ತನ್ನೂ ಕಲ್ಪಿಸಿಲ್ಲ. 1960ರಲ್ಲಿ ಪ್ರತಿ ಕುಟುಂಬಕ್ಕೆ 3,600 ರೂಪಾಯಿ ಕೊಟ್ಟು ಕೈತೊಳೆದುಕೊಂಡದ್ದು ಬಿಟ್ಟರೆ ಬೇರೇನೂ ಮಾಡಿಲ್ಲ ಇವರಿಗೆ.ಅದರಲ್ಲಿ 2,250 ರೂಪಾಯಿಯನ್ನು ಇವರ ಗುಡಿಸಲಿನ ಜಾಗದ ಬಾಬ್ತು ಎಂದು ಜಮ್ಮು ಕಾಶ್ಮೀರ ಸರ್ಕಾರ ವಜಾ ಮಾಡಿಕೊಂಡು ಉಳಿದ ಹಣವನ್ನು ಇವರಿಗೆ ಕೊಟ್ಟಿದೆ.ಅದೂ ಎಲ್ಲರಿಗೂ ಸಿಗಲಿಲ್ಲ. ಅದರ ಮಧ್ಯೆ ಸರ್ಕಾರ ಇವರಿಗೆ ಸಾಲವಾಗಿ 50, 100 ರೂಪಾಯಿಗಳನ್ನು ಕೊಟ್ಟಿತ್ತಂತೆ. ಅದರ ಬಡ್ಡಿ ಎಲ್ಲವನ್ನೂ ಲೆಕ್ಕ ಹಾಕಿ, ನಿಮ್ಮ ಲೆಕ್ಕ ಚುಕ್ತಾ ಆಗಿದೆ ಎಂದು ಸರ್ಕಾರ ಕೆಲವರಿಗೆ ಆ ಹಣವನ್ನೂ ಕೊಟ್ಟಿಲ್ಲ. ಹೇಗಿದೆ ನೋಡಿ ಜಮ್ಮು ಕಾಶ್ಮೀರ ಸರ್ಕಾರದ ಮಾರ್ವಾಡಿ ಲೆಕ್ಕಾಚಾರ! ಅಲ್ಲದೇ, ಇವರಿಗೆ ಸರ್ಕಾರ ಕೃಷಿಗೆಂದು ಕೊಟ್ಟ ಜಾಗಕ್ಕೆ ಬಾಡಿಗೆ ಕೊಡಬೇಕು. ಅಷ್ಟೇ ಅಲ್ಲದೇ, ಅವರ ಇಳುವರಿಯ 40% ಭಾಗವನ್ನು ಸರ್ಕಾರಕ್ಕೆ ಕೊಡಬೇಕು.ಇವರ ಶೋಷಣೆಗೆ ಅಂತ್ಯವೇ ಇಲ್ಲ ಎಂಬಂತಾಗಿದೆ ಇವರ ಸ್ಥಿತಿ.ಅತ್ತ ಪಾಕಿಸ್ತಾನದ ಮುಸ್ಲಿಮರ ನರಕದಿಂದ ತಪ್ಪಿಸಿಕೊಂಡು ಬಂದಿದ್ದು ಇನ್ನೊಂದು ನರಕಕ್ಕೆ ಎಂದು ನಮಗೆ ಈಗ ಗೊತ್ತಾಗುತ್ತಿದೆ ಎನ್ನುತ್ತಾರೆ ಅಲ್ಲಿನ ಹಿರಿಯರು.
ಸರ್ಕಾರದ ಪ್ರಕಾರ ಇವರೆಲ್ಲ ನಿರಾಶ್ರಿತರೇ ಅಲ್ಲ. ಹಾಗಾಗಿ ಅವರಿಗೆ ಪುನರ್ವಸತಿ ಕಲ್ಪಿಸುವುದು ಕಾನೂನಿನ ಪ್ರಕಾರ ಸಾಧ್ಯವಿಲ್ಲ. ಆಶ್ಚರ್ಯವಾಯಿತೇ?ಕೆಲವೊಮ್ಮೆ, ಸರ್ಕಾರದ ತರ್ಕ ನಮ್ಮ ನಿಮ್ಮಂಥವರಿಗೆ ಅರ್ಥವಾಗುವುದಿಲ್ಲ. ಸರ್ಕಾರದ ಪ್ರಕಾರ, ಪಾಕ್ ಆಕ್ರಮಿತ ಜಮ್ಮು ಕಾಶ್ಮೀರವೂ ನಮ್ಮದೇ ಪ್ರದೇಶ. ಆದರೆ, ಪಾಕಿಸ್ತಾನ ಆಕ್ರಮಿಸಿಕೊಂಡಿದೆ ಅಷ್ಟೇ. ಹಾಗಾಗಿ, ಇವರೆಲ್ಲ ನಮ್ಮದೇ ದೇಶದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಂದವರೇ ಹೊರತು, ನಿರಾಶ್ರಿತರೇನಲ್ಲ! ಹಾಗಾಗಿ, ಅದನ್ನು ಪುನಃ ನಮ್ಮ ವಶಕ್ಕೆ ತೆಗೆದುಕೊಂಡು ಇವರಿಗೆಲ್ಲ ಅವರವರ ಮನೆ, ಆಸ್ತಿಯನ್ನು ಕೊಡಿಸುವುದಾಗಿ ಸರ್ಕಾರದ ಅಂಬೋಣ. ಆದರೆ, ಯಾವಾಗ? ಅದಕ್ಕೆ ಮಾತ್ರ ಉತ್ತರವಿಲ್ಲ. ಇಂತಹ ಉತ್ತರ ಕೊಡಲು ನಾಚಿಕೆಯಾಗದ ರಾಜಕಾರಣಿಗಳನ್ನು ಆರಿಸಿ ಕಳುಹಿಸುವ ನಮನ್ನು ನಾವೇ ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು ಅಷ್ಟೇ!
ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಈ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಪ್ರದೇಶಕ್ಕೆ ಮೀಸಲಾದ 24 ಸ್ಥಾನಗಳಿವೆ. ಆದರೆ, ಅವನ್ನು ಖಾಲಿ ಬಿಡಲಾಗಿದೆಯೇ ಹೊರತು ಚುನಾವಣೆ ನಡೆಸುತ್ತಿಲ್ಲ. ಅಲ್ಲಿನ ಜನರಲ್ಲಿ ಮೂರನೇ ಒಂದು ಭಾಗ ಇಲ್ಲೇ ನಿರಾಶ್ರಿತ ಶಿಬಿರಗಳಲ್ಲಿರುವಾಗ ಆ ಸ್ಥಾನಗಳಿಗೆ ಚುನಾವಣೆ ನಡೆಸಬಾರದೇಕೆ ಎಂದರೆ, ಉತ್ತರವಿಲ್ಲ. ವಿಧಾನಸಭೆಯಲ್ಲಿ ಹಿಂದುಗಳ ಸಂಖ್ಯೆ ಹೆಚ್ಚಾದರೆ, ಮುಸ್ಲಿಮರಿಗೆ ಬೇಕಾದ ಹಾಗೆ ರಾಜ್ಯಭಾರ ನಡೆಸಲು ಆಗುವುದಿಲ್ಲ ಎನ್ನುವುದು ಒಳಗುಟ್ಟು. ಅಲ್ಲದೇ, ಈ ಸ್ಥಾನಗಳಿಗೆ ಚುನಾವಣೆ ನಡೆಸಿದರೆ, ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ ಮೇಲಿನ ಭಾರತದ ಹಕ್ಕು ಇನ್ನೂ ಬಲವಾಗುತ್ತದೆ. ಅದು ಕೆಲವರಿಗೆ ಬೇಕಾಗಿಲ್ಲ. ಹಾಗಾಗಿಯೇ, ಚುನಾವಣೆ ನಡೆಯುತ್ತಿಲ್ಲ.
ಇವರು ಬಿಟ್ಟುಬಂದ ಜಮೀನು ಮನೆಗಳಿಗೆ ಏನೂ ಪರಿಹಾರ ನೀಡಿಲ್ಲ ನಮ್ಮ ಸರ್ಕಾರಗಳು. ಮೊದಲೆಲ್ಲಾ ಬಟ್ಟೆಯ ಟೆಂಟ್‍ಗಳಲ್ಲೇ ವಾಸಿಸುತ್ತಿದ್ದರು ಇವರು.ಅದು ಹರಿದು ಹೋದ ಮೇಲೆ ಸಣ್ಣ ಗುಡಿಸಲುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ. ಆದರೆ, ಪಾಕಿಸ್ತಾನದಲ್ಲಿರುವ ಕಾಶ್ಮೀರಿ ಮುಸ್ಲಿಮರಿಗೆ ಅವರ ಮನೆ ಜಮೀನಿನ ಹಕ್ಕು ಕೊಟ್ಟಿದೆ, ಅದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡಿದೆ. ಹೇಗಿದೆ ನೋಡಿ, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ. ಸರ್ಕಾರಗಳಷ್ಟೇ ಅಲ್ಲ, ಜಮ್ಮು ಕಾಶ್ಮೀರ ಬ್ಯಾಂಕ್ ಕೂಡ ಇವರಿಗೆ ಮೋಸ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಇವರ ಪೈಕಿ ಹೆಚ್ಚಿನವರ ಉಳಿತಾಯದ ಹಣವೆಲ್ಲ ಮೀರ್‍ಪುರದ ಬ್ಯಾಂಕಿನ ಶಾಖೆಯಲ್ಲಿತ್ತು. ವಿಭಜನೆಯ ಬಳಿಕ, ನಿರಾಶ್ರಿತರಾಗಿ ಬಂದಾಗ ಈ ಹಣವನ್ನಾದರೂ ತೆಗೆದುಕೊಳ್ಳೋಣವೆಂದು ಬ್ಯಾಂಕನ್ನು ವಿಚಾರಿಸಿದರು ಇವರೆಲ್ಲ. ಆ ದಾಖಲೆಗಳೆಲ್ಲಾ ಮೀರ್‍ಪುರ ಶಾಖೆಯಲ್ಲೇ ಇವೆ. ಈಗ ಅದು ಪಾಕಿಸ್ತಾನದ ವಶದಲ್ಲಿದೆ. ಹಾಗಾಗಿ, ನಾವೇನೂ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ಸಿದ್ಧವಿತ್ತು. ಈ ನಿರಾಶ್ರಿತರೇನಾದರೂ ಮುಸ್ಲಿಮರಾಗಿದ್ದರೆ, ಅವರಿಗೆ ಬಡ್ಡಿ ಸಮೇತ ಹಣ ಹಿಂತಿರುಗಿ ಬರುತ್ತಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೇ!
ಗಡಿ ಭಾಗದ ಯುದ್ಧ ಸಂತ್ರಸ್ತರು
ಪಾಕಿಸ್ತಾನದೊಂದಿಗೆ ಇದುವರೆಗೂ ನಡೆದ ಯುದ್ಧಗಳಲ್ಲಿ ನಿರಾಶ್ರಿತರಾದವರ ಸಂಖ್ಯೆ ಸುಮಾರು 3.5 ಲಕ್ಷ.ಅವರ್ಲಲಿ 2 ಲಕ್ಷದಷ್ಟು ಜನ ಚಂಬ್ ಪ್ರದೇಶವೊಂದರಿಂದಲೇ ಬಂದವರು.ಆ ಪ್ರದೇಶದ ಸುಚೇತಗಢ ಗ್ರಾಮದಿಂದ ಬಂದ ರಾಮಧಾನ್‍ಗೆ ಒಂದು ಕಾಲದಲ್ಲಿ ಎಕರೆಗಟ್ಟಲೆ ಜಮೀನಿತ್ತು. ಹುಲುಸಾದ ಬೆಳೆ ಬೆಳೆಯುತ್ತಿದ್ದರು. ಆದರೆ, ಈಗ ಅವರ ಮನೆಯವರೆಲ್ಲ ತಮ್ಮ ಜಮೀನು ಮನೆ ಎಲ್ಲವನ್ನೂ ಬಿಟ್ಟು ಸುಮಾರು 100 ಕಿ.ಮೀ. ದೂರದ ಹಳ್ಳಿಯಲ್ಲಿದ್ದಾರೆ. ಜೀವನೋಪಾಯಕ್ಕಾಗಿ ಕೂಲಿಯೇ ಗತಿ ಅವರಿಗೆ.
ಇವರೆಲ್ಲಾ ಮೊದಲು 1947ರಲ್ಲಿ ಪಾಕಿಸ್ತಾನ ಆಕ್ರಮಣ ಮಾಡಿದಾಗ ಅಲ್ಲಿಂದ ಸ್ಥಳಾಂತರಗೊಂಡರು.ಯುದ್ಧ ಮುಗಿದು ಅವರು ಹಿಂತಿರುಗಿ ಹೋಗಿ ನೋಡಿದರೆ, ಅವರ ಮನೆಗಳೆಲ್ಲ ಧ್ವಂಸವಾಗಿದ್ದವು, ಅಲ್ಲಿ ಬರಿಯ ಅವಶೇಷಗಳು ಮಾತ್ರ. ಹೈನುಗಾರಿಕೆ ಮಾಡೋಣವೆಂದರೆ, ಅವರ ದನಕರುಗಳಲ್ಲಿ ಹೆಚ್ಚಿನವು ಮುಸ್ಲಿಮರ ಹೊಟ್ಟೆ ಸೇರಿದ್ದರೆ, ಕೆಲವು ತಪ್ಪಿಸಿಕೊಂಡು ಕಾಡು ಸೇರಿದ್ದವು. ಅಂತೂ ಇಂತೂ ಪುನಃ ಶ್ರೀಗಣೇಶದಿಂದ ಶುರುಮಾಡಿ, ಜೀವನ ಕಟ್ಟಿಕೊಂಡರು. ಅಷ್ಟರಲ್ಲೇ 1965ರಲ್ಲಿ ಮತ್ತೊಂದು ಯುದ್ಧ. ಪುನಃ ಸ್ಥಳಾಂತರ. ಹಿಂತಿರುಗಿ ಹೋಗಿ ಅಂತೂ ಮುಗಿಯಿತು, ಎನ್ನುವಷ್ಟರಲ್ಲಿಯೇ 1971ರ ಯುದ್ಧ ಪ್ರಾರಂಭವಾಯಿತು. ಈ ಯುದ್ಧ ಹಿಂದಿನ ಯುದ್ಧದಂತಲ್ಲ. ಇವರಿಗೆ ಮತ್ತೆ ಮತ್ತೆ ಹಿಂದೆ ಮುಂದೆ ಹೋಗುವ ಪರಿಸ್ಥಿತಿ ಮತ್ತೆಂದೂ ಬರಲಿಲ್ಲ. 1971ರ ಯುದ್ಧದ ಬಳಿಕ ನಡೆದ ಶಿಮ್ಲಾ ಒಪ್ಪಂದದ ಪ್ರಕಾರ ಚಂಬ್ ಪ್ರದೇಶದ 40 ಗ್ರಾಮಗಳನ್ನು ಪಾಕಿಸ್ತಾನಕ್ಕೆ ಧರ್ಮಕ್ಕೆ ಬಿಟ್ಟುಕೊಡಲಾಯಿತು! ಹಾಗಾಗಿ ಪುನಃ ಹಿಂತಿರುಗಿ ಹೋಗುವ ಪ್ರಮೇಯವೇ ಇಲ್ಲ. ಶಾಶ್ವತವಾಗಿ ನಿರಾಶ್ರಿತರಾದರು ಈ ಎರಡು ಲಕ್ಷ ಜನರು. 1947ರಲ್ಲಿ ಪಾಕಿಸ್ತಾನದ ಯುದ್ಧದಲ್ಲಿ ಭಾರತದ ಸೇನೆಯೊಂದಿಗೆ ಕೈಜೋಡಿಸಿ ಶತ್ರುಗಳನ್ನು ಹಿಮ್ಮೆಟ್ಟಿಸಲು ಹೋರಾಡಿದ ದೇಶಭಕ್ತ ಜನರಿಗೆ ಸರ್ಕಾರ ನೀಡಿದ ಉಡುಗೊರೆ ಇದು!
1975ರವರೆಗೆ ಅವರನ್ನು ನಿರಾಶ್ರಿತರ ಶಿಬಿರದಲ್ಲಿಟ್ಟಿತು ಸರ್ಕಾರ.ಬಳಿಕ ಜಮ್ಮುವಿನ ಮೂರು ಜಿಲ್ಲೆಗಳಲ್ಲಿ ಅವರಿಗೇ ಪ್ರತ್ಯೇಕ ವಸತಿ ಪ್ರದೇಶ ನಿರ್ಮಾಣ ಮಾಡಿ ವಸತಿ ಕಲ್ಪಿಸಲಾಯಿತು.ಅವರಿಗೆ ಕೃಷಿಭೂಮಿ ಕೊಡುವುದಾಗಿ ಸರ್ಕಾರ ಮಾತು ಕೊಟ್ಟಿತ್ತಾದರೂ, ಅದು ಇನ್ನೂ ಈಡೇರಿಲ್ಲ. ಹಲವರು ನ್ಯಾಯಾಲಯದÀಲ್ಲಿ ಅದಕ್ಕಾಗಿ ಇಂದೂ ಹೋರಾಡುತ್ತಿದ್ದಾರೆ. ಕೆಲವರಿಗೆ ಸಿಕ್ಕಿತಾದರೂ, ಅಂತಹ ಬರಡು ಭೂಮಿ ಕೊಡದಿದ್ದರೇ ಒಳ್ಳೆಯದಿತ್ತು ಎನ್ನುತ್ತಾರೆ ಅವರು. ಹಾಗಾಗಿ, ಮಕ್ಕಳೆಲ್ಲಾ ಏಳನೇ ಎಂಟನೇ ತರಗತಿಯ ನಂತರ ಅನಿವಾರ್ಯವಾಗಿ ತರಕಾರಿ ಗಾಡಿಯೋ, ಗೂಡಂಗಡಿಯೋ ಮಾಡಿಕೊಂಡು ತಮ್ಮ ಕುಟುಂಬ ನಿರ್ವಹಣೆ ಮಾಡುವ ಅನಿವಾರ್ಯ ಪರಿಸ್ಥಿತಿಗೆ ಬಿದ್ದಿದ್ದಾರೆ. ವಿಭಜನೆಯ ಸಮಯದಲ್ಲಿ ದೇಶ ಬಿಟ್ಟು ಹೋದವರ ಭೂಮಿ ಕೆಲವರಿಗೆ ಸಿಕ್ಕಿದ್ದರೂ ಅವರಿಗೆ ಅದರ ಮಾಲಿಕತ್ವವನ್ನು ಮಾತ್ರ ಕೊಟ್ಟಿಲ್ಲ. ಸರಕಾರ ರಚಿಸಿದ ವಾಧ್ವಾ ಆಯೋಗವು ಅವರಿಗೆ ಭೂಮಿಯ ಹಕ್ಕು ಕೊಡಬೇಕೆಂದು ಹೇಳಿದ್ದರೂ ಅದು ಜಾರಿಯಾಗಲು ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಅಷ್ಟಕ್ಕ್ಕೂ ಜಮ್ಮು ಕಾಶ್ಮೀರದಲ್ಲಿರುವ ಸರ್ಕಾರಕ್ಕೆ ಹಿಂದುಗಳೂ ಮನುಷ್ಯರು ಎಂದು ಅನ್ನಿಸುವುದೇ ಇಲ್ಲವಲ್ಲ. ಹಾಗಿರುವಾಗ ಇದಕ್ಕಿಂತ ಹೆಚ್ಚು ಇನ್ನೇನನ್ನು ನಿರೀಕ್ಷಿಸಲಾದೀತು ಅವರಿಂದ?
ಚಂಬ್ ಪ್ರದೇಶವಲ್ಲದೇ, ನಿಯಂತ್ರಣ ರೇಖೆಯ ಇತರ ಭಾಗಗಳ ಬಳಿ ವಾಸಿಸುವವರದ್ದೂ ಇದೇ ಕಥೆ.ಯುದ್ಧ ಶುರುವಾದಾಗ ಬೇರೆಡೆಗೆ ಹೋಗುವುದು, ಪುನಃ ವಾಪಸ್ಸು ಬಂದು ಹಾಳಾದ ಮನೆಯನ್ನು ಸರಿಮಾಡಿಕೊಂಡು ಕೃಷಿ ಮಾಡುವುದು. ಅಂತಹವರ ಸಂಖ್ಯೆ ಸುಮಾರು 1.5 ಲಕ್ಷ ಎಂದು ಅಲ್ಲಿನ ವಿಭಾಗೀಯ ಆಯುಕ್ತರ ವರದಿ ಹೇಳುತ್ತದೆ. ಗಡಿ ಭಾಗದ ಸುಮಾರು 16,000 ಎಕರೆ ಜಾಗ ಸೇನೆಯ ವಶದಲ್ಲೇ ಇದೆ. ಗಡಿಯ ಆಸುಪಾಸಿನಲ್ಲಿ ನೆಲಬಾಂಬುಗಳನ್ನು ಹುಗಿದಿಟ್ಟಿದೆ ಸೇನೆ. ರೈತರ ಈ ಜಾಗಕ್ಕೆ ಪರಿಹಾರವೂ ಇಲ್ಲ, ಅವರು ಅಲ್ಲಿಗೆ ಹೋಗುವಂತೆಯೂ ಇಲ್ಲ, ಕೃಷಿ ಮಾಡುವಂತೆಯೂ ಇಲ್ಲ. ವಾಧ್ವಾ ಆಯೋಗವು ಅವರಿಗೆಲ್ಲ ಪರಿಹಾರ ನೀಡಬೇಕೆಂದೂ ಪುನರ್ವಸತಿ ಕಲ್ಪಿಸಬೇಕೆಂದೂ ಆದೇಶಿಸಿದೆ. ಆದರೆ, ಅದು ಕಾಗದದÀಲ್ಲಿ ಮಾತ್ರ ಉಳಿದಿದೆ.
ಕಾಶ್ಮೀರಿ ಪಂಡಿತರ ಕತೆ
ಕಾಶ್ಮೀರಿ ಪಂಡಿತರ ಗೋಳಂತೂ ನಮಗೆಲ್ಲಾ ಗೊತ್ತಿರುವಂಥದ್ದೇ. 1989ರಲ್ಲಿ ಹಿಂದುಗಳನ್ನು ಕಾಶ್ಮೀರದಿಂದ ಓಡಿಸಲು ನಡೆದ ಹಿಂಸಾಚಾರದಲ್ಲಿ ಮನೆ ಮಠ ಎಲ್ಲವನ್ನೂ ಹಾಗೆಯೇ ಬಿಟ್ಟು ಉಟ್ಟ ಬಟ್ಟೆಯಲ್ಲೇ ಜೀವಭಯ ಮಾನಭಯದಿಂದ ಓಡಿಬಂದವರು ಅವರು. 1989ರ ಸೆಪ್ಟೆಂಬರ್ 14ರಂದು ಬಿಜೆಪಿಯ ಉಪಾಧ್ಯಕ್ಷ ಟಿಕಾ ಲಾಲ್ ತಪ್ಲೂ ಅವರ ಕಗ್ಗೊಲೆಯಿಂಧ ಪ್ರಾರಂಭವಾದ ಈ ಭಯೋತ್ಪಾದನೆಗೆ ಅನಂತರದ ಬಲಿ ನ್ಯಾ| ನೀಲಕಾಂತ ಗಂಜೂ ಅವರು. ಜೆಕೆಎಲ್‍ಎಫ್‍ನ ಮಕ್ಬೂಲ್ ಭಟ್‍ಗೆ ಗಲ್ಲು ಶಿಕ್ಷೆ ವಿಧಿಸಿದ್ದ ಧೀರ ಅವರು. ಅನಂತರ ಹೀಗೆಯೇ ಹಿಂದು ನಾಯಕರ ಕೊಲೆ, ಹಿಂದು ಯುವಕರ ಕೊಲೆ, ಯುವತಿಯರ ಮಾನಭಂಗ ಹೀಗೇ ಸರಣಿ ಮುಂದುವರಿಯಿತು.ಇದೆಲ್ಲಾ ಮಿತಿಮೀರಿದರೂ ಹಿಂದುಗಳು ಅಲ್ಲಿಂದ ಕದಲದಿದ್ದಾಗ, ಜನವರಿ 19ರಂದು ಪ್ರತ್ಯೇಕತಾವಾದಿಗಳು ಒಂದೇ ದಿನದಲ್ಲಿ ಎಲ್ಲಾ ಹಿಂದುಗಳು ಕಾಶ್ಮೀರ ಕಣಿವೆ ಬಿಟ್ಟು ಹೊರಡಬೇಕೆಂದು ಕರೆ ಕೊಟ್ಟರು. ಅದೂ ಹೇಗೆ? ‘ನೀವು ಹೋಗಿ, ಆದರೆ, ನಿಮ್ಮ ಹೆಣ್ಣು ಮಕ್ಕಳನ್ನು ಇಲ್ಲೇ ಬಿಟ್ಟು ಹೋಗಿ’ - ಎಂತಹ ಲಜ್ಜೆಗೇಡಿತನ! ಕಾಶ್ಮೀರದ ಗಡಿಯಾರಗಳನ್ನು ಪಾಕಿಸ್ತಾನದ ಸಮಯಕ್ಕೆ ಸರಿಹೊಂದಿಸಿ ಇಡಲಾಯಿತು. ಹೆಣ್ಣುಮಕ್ಕಳು ಹಣೆಗೆ ಸಿಂಧೂರವನ್ನು ಇಡುವುದನ್ನು ನಿಷೇಧಿಸಲಾಯಿತು. ಪಾಕಿಸ್ತಾನದ ಕರೆನ್ಸಿಯನ್ನು ಚಲಾವಣೆಗೆ ತರುವ ಮಾತೂ ಕೇಳಿಬರುತ್ತಿತ್ತು.ನೀವು ಕಾಶ್ಮೀರದಲ್ಲಿ ಇರಬೇಕಾದರೆ, 'ಅಲ್ಲಾ ಹೋ ಅಕ್ಬರ್' ಹೇಳಿ ಎಂಬ ಘೋಷಣೆಗಳು ಮಸೀದಿಯಿಂದ ಕೇಳಿಬರಲು ಪ್ರಾರಂಭವಾದವು. ಅಲ್ಲಿಗೆ, ಇನ್ನು ನಮಗೆ ಉಳಿಗಾಲವಿಲ್ಲ ಎನ್ನುವುದು ಖಾತ್ರಿಯಾಯಿತು ಹಿಂದುಗಳಿಗೆ. ಅವರೆಲ್ಲಾ ರಾತ್ರೋರಾತ್ರಿ ಮನೆಬಿಟ್ಟು ಬಂದರು. ಜಮ್ಮುವಿನಲ್ಲಿ ಕೆಲವರು, ದೆಹಲಿಯಲ್ಲಿ ಕೆಲವರು ದೇಶದ ಇತರ ಭಾಗಗಳಲ್ಲಿ ಕೆಲವರು ನೆಲೆಸಿದರು. ಜಮ್ಮು ಮತ್ತು ದೆಹಲಿಯ ನಿರಾಶ್ರಿತರ ಶಿಬಿರದ ಸ್ಥಿತಿಯಂತೂ ಊಹಿಸಲೂ ಸಾಧ್ಯವಿಲ್ಲದ್ದು. ಅತ್ಯಂತ ಹೀನಾಯ ಪರಿಸ್ಥಿತಿ ಅವರದ್ದು. ತಳ್ಳುಗಾಡಿ, ಶೌಚಾಲಯ ಸ್ವಚ್ಛ ಮಾಡುವುದು, ದಿನಗೂಲಿ ಕೆಲಸವೇ ಅವರ ಜೀವನಾಧಾರ. ಅಂತಹವರ ಸಂಖ್ಯೆ ಸುಮಾರು 3 ಲಕ್ಷ! ಟೆಂಟ್‍ಗಳಲ್ಲಿ, ಒಂದು ರೂಮಿನ ಅಪಾರ್ಟ್‍ಮೆಂಟಿನಲ್ಲಿ 6-7 ಜನ ವಾಸಿಸಿದರೆ, ಅವರ ಜನಸಂಖ್ಯೆ ಹೇಗೆ ತಾನೇ ಹೆಚ್ಚಾದೀತು? ಅವರಿಗೆ ಖಾಸಗಿತನವೆಂಬುದೇ ಇಲ್ಲ. ಹಾಗಾಗಿ, ಕಾಶ್ಮೀರಿ ಪಂಡಿತರ ಸಂಖ್ಯೆ ಕುಸಿಯುತ್ತಲೇ ಇದೆ.
ನಿರಾಶ್ರಿತರ ಶಿಬಿರಗಳಲ್ಲಿರುವವರ ಕುರಿತು ಅಧ್ಯಯನ ಮಾಡಿದ CRY(Child Relief and You) ಸಂಸ್ಥೆ ತನ್ನ ವರದಿಯಲ್ಲಿ ಹೀಗೆ ಹೇಳಿದೆ – ‘ಇಲ್ಲಿನ 49.13% ಮಕ್ಕಳಿಗೆ ಡಯಾಬಿಟೀಸ್ ಇದೆ. 45% ಮಕ್ಕಳು ಪೆÇೀಷಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. 42.86% ಮಕ್ಕಳಿಗೆ ವಿವಿಧ ರೀತಿಯ ಚರ್ಮರೋಗಗಳಿವೆ. 57.14% ಮಕ್ಕಳಿಗೆ ಪದೇ ಪದೇ ಜ್ವರ ಬರುತ್ತಿದೆ. ಸರಿಯಾದ ಶೌಚಗೃಹವಿಲ್ಲದ, ಸ್ನಾನದ ಮನೆಯಿಲ್ಲದ ಮನೆಗಳೇ ಹೆಚ್ಚಾಗಿರುವುದರಿಂದ ಇಲ್ಲಿನ ಜನರಿಗೆ ಅನೇಕ ಆರೋಗ್ಯ ಸಮಸ್ಯೆಗಳು ಪದೇ ಪದೇ ಕಾಡುತ್ತಿವೆ.’ ಕೆಲವರನ್ನು ಸರ್ಕಾರ ಪ್ರತ್ಯೇಕ ಕಾಲೋನಿಗಳಿಗೆ ಸ್ಥಳಾಂತರಿಸಿ ಮನೆ ಕೊಟ್ಟಿದ್ದರೂ, ಕಾಶ್ಮೀರದ ಬಗೆಗಿನ ತುಡಿತ ಅವರಲ್ಲಿ ಇನ್ನೂ ಇದೆ. ಕಾಶ್ಮೀರದಲ್ಲಿ 10-20 ಎಕರೆ ಸೇಬಿನ ತೋಟ, ಮನೆ, ವಾಹನ ಎಲ್ಲ ಇದ್ದವರು ಎಲ್ಲವನ್ನೂ ಹಾಗೆಯೇ ಬಿಟ್ಟು ಬಂದಿರುವಾಗ ಹೇಗಿರಬೇಡ ಅವರ ಸ್ಥಿತಿ. ಬೆಂಗಳೂರಿನಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರೊಬ್ಬರು ಇತ್ತೀಚೆಗೆ ಅಲ್ಲಿಗೆ ಹೋಗಿ ತಮ್ಮ ಮನೆ ತೋಟ ಎಲ್ಲವನ್ನೂ ನೋಡಿಕೊಂಡು ಬಂದರು. ತಮ್ಮ ಮನೆಯ ಪಕ್ಕದಲ್ಲೇ ವಾಸಿಸುತ್ತಿಸುತ್ತಿದ್ದ ಮುಸ್ಲಿಮ್ ಕುಟುಂಬ ಅದನ್ನು ಈಗ ಆಕ್ರಮಿಸಿಕೊಂಡುಬಿಟ್ಟಿದೆಯಂತೆ. ಅದನ್ನು ಹೇಳುವಾಗ ಅವರ ಕಣ್ಣಲ್ಲಿ ನೀರು!
ವಾಸ್ತವವಾಗಿ, ಜಮ್ಮು ಕಾಶ್ಮೀರದಲ್ಲಿ ಹಿಂದುಗಳೇ ಅಲ್ಪಸಂಖ್ಯಾತರು, ಮುಸಲ್ಮಾನರಲ್ಲ. ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ವಜಾಹತ್ ಹಬೀಬುಲ್ಲಾ ಅವರು ಹಿಂದುಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂದು ಒಮ್ಮೆ ಹೇಳಿದ್ದರು. ಸುಪ್ರೀಂ ಕೋರ್ಟ್ ಕೂಡಾ ಅಲ್ಪಸಂಖ್ಯಾತ ಸ್ಥಾನಮಾನವು ರಾಜ್ಯ ಮಟ್ಟದಲ್ಲಿ ನಿರ್ಧರಿತವಾಗಬೇಕೆಂದೇ ಹೇಳಿದೆ. ಆದರೂ, ಜಮ್ಮು ಕಾಶ್ಮೀರ ಸರ್ಕಾರ ಮಾತ್ರ ಇದಕ್ಕೆ ಸೊಪ್ಪು ಹಾಕಲೇ ಇಲ್ಲ. ಅತೀ ಹೆಚ್ಚು ಸಂಖ್ಯೆಯಲ್ಲಿರುವವರು ಮುಸ್ಲಿಮರೇ ಆದರೂ ಅವರಿಗೇ ಅಲ್ಪಸಂಖ್ಯಾತ ಸ್ಥಾನಮಾನ, ಸರ್ಕಾರದ ಸವಲತ್ತುಗಳು.ಹಿಂದುಗಳು ದೇಶಾಂತರ ಹೋಗಬೇಕಾದ ಹೀನಸ್ಥಿತಿ. ಹೇಗಿದೆ ನೋಡಿ ವಿಪರ್ಯಾಸ!
ಇದು ಜಮ್ಮು ಕಾಶ್ಮೀರದಲ್ಲಿರುವ ನಿರಾಶ್ರಿತರ ಕತೆಯಾಗಿರುವಾಗ, ವಿಶ್ವಸಂಸ್ಥೆಯ ನಿರಾಶ್ರಿತರ ಆಯೋಗವು ಮಾತ್ರ ತನ್ನ ಯಾವುದೇ ವರದಿಯಲ್ಲಿ ಈ 20 ಲಕ್ಷ ನಿರಾಶ್ರಿತರ ಬಗ್ಗೆ ಚಕಾರವೆತ್ತಿಲ್ಲ. ಭಾರತ, ಪಾಕಿಸ್ತಾನ ಆಥವಾ ಜಮ್ಮು ಕಾಶ್ಮೀರ ಸರ್ಕಾರದೊಂದಿಗೆ ಇವರ ಬಗ್ಗೆ ಮಾತುಕತೆ ನಡೆಸಿಲ್ಲ. ಹಾಗಾದರೆ, ಇವರಿಗೆಲ್ಲ ಮಾನವ ಹಕ್ಕುಗಳಿಲ್ಲವೇ? ಪ್ರಪಂಚದ ಎಲ್ಲ ಆಗುಹೋಗುಗಳ ಬಗ್ಗೆ ತಲೆಕೆಡಿಸಿಕೊಳ್ಳುವ, ಕೆಲವೊಮ್ಮೆ ಅನಗತ್ಯ ಮೂಗು ತೂರಿಸುವ ವಿಶ್ವಸಂಸ್ಥೆಯ ಕಣ್ಣಿಗೆ ಇದೇಕೆ ಕಾಣುತ್ತಿಲ್ಲ. ಬದಲಾಗಿ, ಭಾರತದ ಸೇನೆಯಿಂದ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಗಮನಿಸಲು ಒಂದು ಸಮಿತಿಯನ್ನು ಜಮ್ಮು ಕಾಶ್ಮೀರದಲ್ಲಿ ನೇಮಿಸಿದೆ ಈ ವಿಶ್ವಸಂಸ್ಥೆ! ಎಂಬಲ್ಲಿಗೆ ಅವರ ಕಾಳಜಿ ಭಯೋತ್ಪಾದಕರ ಮೇಲೋ, ಅವರ ಸಮರ್ಥಕರ ಮೇಲೋ ಅಥವಾ ನಿರುಪದ್ರವಿಗಳಾದ ತಮ್ಮದಲ್ಲದ ತಪ್ಪಿಗೆ ನಿರಾಶ್ರಿತರಾಗಿ ಬದುಕುತ್ತಿರುವ ಹಿಂದುಗಳ ಮೇಲೋ ಎಂಬುದು ಸ್ಪಷ್ಟ ತಾನೇ?!
ಮಾನವ ಹಕ್ಕು ಎಂಬುದೊಂದು ಇರುವುದೇ ಹೌದಾದರೆ, ಈ ನಿರಾಶ್ರಿತರಿಗೆ ಅದು ಇಲ್ಲವೇ?ಎಂಬ ಪ್ರಶ್ನೆ ಮೂಡುತ್ತದೆ ಮನುಷ್ಯತ್ವವಿರುವವರಿಗೆ. ಆದರೆ, ನಮ್ಮ ದೇಶದ ಮಾನವ ಹಕ್ಕು ಹೋರಾಟಗಾರರ್ಯಾರಿಗೂ ಈ ನಿರಾಶ್ರಿತರ ಬಗ್ಗೆ ಕಾಳಜಿಯಿಲ್ಲ. ಎಲ್ಲೋ ಒಂದು ಕಡೆ ಪೆÇೀಲೀಸರು ಒಬ್ಬನಿಗೆ ಹೊಡೆದರೆ, ಅಫ್ಜಲ್ ಗುರುವಿನಂತಹ ದೇಶದ್ರೋಹಿಗೆ ಗಲ್ಲು ಹಾಕಿದರೆ, ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಸಹಾಯ ಮಾಡುವವರನ್ನು ಬಂಧಿಸಿದರೆ ಮಾನವ ಹಕ್ಕಿನ ಬಗ್ಗೆ ಬೊಬ್ಬೆ ಹೊಡೆಯುವ ಈ ಮಂದಿಗೆ ಹಿಂದು ನಿರಾಶ್ರಿತರ ಮೇಲೇಕೆ ಕರುಣೆಯಿಲ್ಲ? ಏಕೆ ಇವರಿಗಾಗಿ ಒಂದೇ ಒಂದು ಸೆಮಿನಾರನ್ನಾಗಲೀ, ಧರಣಿಯನ್ನಾಗಲೀ ನಡೆಸುತ್ತಿಲ್ಲ ಎನ್ನುವುದು ಒಂದು ಯಕ್ಷಪ್ರಶ್ನೆ. ಅವರಿಗೇನೂ ಇದೆಲ್ಲಾ ಗೊತ್ತಿಲ್ಲವೇ? ಗೊತ್ತಿಲ್ಲದೇ ಏನು ಧಾಡಿ? ಇದರ ಬಗ್ಗೆ ಅದೆಷ್ಟು ಮನವಿಗಳು ಮಾನವ ಹಕ್ಕು ಹೋರಾಟಗಾರರಿಗೆ, ಮಾನವ ಹಕ್ಕು ಆಯೋಗಕ್ಕೆ ಹೋಗಿವೆಯೋ ಲೆಕ್ಕವಿಟ್ಟವರಿಲ್ಲ.
ಮುಂದಿನ ದಾರಿ
ಹಾಗಾದರೆ ಜಮ್ಮು ಕಾಶ್ಮೀರ ಎಂದೂ ಪರಿಹಾರಗೊಳ್ಳದ ಸಮಸ್ಯೆಯೇ? ಜಮ್ಮು ಕಾಶ್ಮೀರ ಭಾರತದಿಂದ ಸಿಡಿದು ಬೇರ್ಪಡುವುದೊಂದೇ ಸಮಸ್ಯೆಯ ಕೊನೆಯೇ? ಇಲ್ಲಿ ನೆಲೆಸಿರುವ ಬಹುಸಂಖ್ಯೆಯ ಜನರ ಬವಣೆಗಳಿಗೆ ಅಂತ್ಯವಿಲ್ಲವೇ? ದ್ವೇಷ ಮತ್ತು ಸ್ವಾರ್ಥ ಪೀಡಿತ ರಾಜಕೀಯ ವಾತಾವರಣದಲ್ಲಿ ಪರಿಹಾರ ಸಾಧ್ಯವೇ? ಇಂತಹ ಅನೇಕ ಪ್ರಶ್ನೆಗಳು ಭಾರತವನ್ನು ಪ್ರೀತಿಸುವ, ದೇಶದ ಅಖಂಡತೆ ಗೌರವಗಳನ್ನು ಎತ್ತಿಹಿಡಿಯಬಯಸುವ ಜನಮಾನಸದಲ್ಲಿ ಆಗಾಗ ಏಳುತ್ತವೆ. ವಿಷಯ ಪರಿಣಿತರಾದವರು ರಾಜಕೀಯ ನೆಲೆಗಟ್ಟಿನಲ್ಲಿ ಅನೇಕ ಪರಿಹಾರ ಸೂತ್ರಗಳನ್ನು ಸೂಚಿಸಬಹುದು. ಸಾಮಾನ್ಯಜ್ಞಾನದಿಂದ ನೋಡಿದರೆ ಕಾಶ್ಮೀರದ ಮುಖ್ಯ ಸಮಸ್ಯೆ ಇರುವುದು ವಾಸ್ತವವನ್ನು ಮರೆಮಾಚುವುದರಲ್ಲಿ, ಆಳವಾಗಿ ಬೇರೂರಿರುವ ಮಿಥ್ಯಾವಾದಗಳಲ್ಲಿ, ಅಧ್ಯಯನ ಕೊರತೆಯಿಂದ ಬಳಲುತ್ತಿರುವ ನೀತಿ ನಿರೂಪಣೆಯ ಪ್ರಕ್ರಿಯೆಯಲ್ಲಿ. ವಾಸ್ತವವಾಗಿ, ಸಮಸ್ಯೆಯಿರುವುದು ಜಮ್ಮು ಕಾಶ್ಮೀರದಲ್ಲಲ್ಲ. ಅದಿರುವುದು ದೆಹಲಿಯಲ್ಲಿ. ಜಮ್ಮು ಕಾಶ್ಮೀರದ ನಗೆಗಿನ ದೆಹಲಿ ಸರ್ಕಾರದ ನೀತಿಯಲ್ಲಿ. ಪ್ರತ್ಯೇಕತಾವಾದಿಗಳಿಗೆ ಮಣೆ ಹಾಕಿ, ‘ಗಲಾಟೆ ಮಾಡಬೇಡಿ ಸುಮ್ಮನಿರಿ’ ಎಂದು ಹೇಳಿ ಪೂಸಿ ಹೊಡೆದು ಅಂತಹ ಸಂಘಟನೆಗಳಿಗೆ ನಮ್ಮ ಗುಪ್ತಚರ ಸಂಸ್ಥೆಗಳ ಮೂಲಕ ಹಿಂಬಾಗಿಲಿನಿಂದ ಹಣ ನೀಡುವ ಬದಲು (ಅದೇ ಹಣದಿಂದ ಅವರು ಕಲ್ಲು ತೂರಾಟಗಳನ್ನೂ, ಬಂದ್‍ಗಳನ್ನೂ, ಬಾಂಬ್ ಸ್ಫೋಟಗಳನ್ನೂ ನಡೆಸುವುದೆನ್ನುವುದು ಸರ್ಕಾರಕ್ಕೆ ತಿಳಿಯದ ರಹಸ್ಯವೇನಲ್ಲ!) ಅವರಿಗೆ ಸ್ಪಷ್ಟ ಶಬ್ದಗಳಲ್ಲಿ ಹೇಳಬಾರದೇಕೆ? – ನಮ್ಮ ದೇಶದ ಸಾರ್ವಭೌಮತ್ವವನ್ನು ಒಪ್ಪಿ ದೇಶದ ಇತರೆಲ್ಲಾ ಪ್ರಜೆಗಳಂತೆ ಇದ್ದರೆ ಲೇಸು, ಇಲ್ಲವಾದರೆ, ಸರ್ಕಾರದಿಂದ ಸಿಗುವ ಸವಲತ್ತುಗಳೂ ಸಿಗುವುದಿಲ್ಲ – ಎಂದು. ಜಮ್ಮು ಮತ್ತು ಲಡಾಖಿನ ರಾಷ್ಟ್ರೀಯವಾದಿಗಳನ್ನು ಮಾತುಕತೆಯ ಮೇಜಿಗೆ ಕರೆಯಲಿ, ಅಲ್ಲಿಗೆ ಅನುದಾನಗಳು ಹೆಚ್ಚಾಗಲಿ. ದೇಶಭಕ್ತರಿಗೆ ಮಾತ್ರ ನಮ್ಮ ಅನುದಾನ, ಅನುಕಂಪ ಎಂದು ಘೋಷಿಸಲಿ. ಜಮ್ಮು ಮತ್ತು ಲಡಾಖಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿ. ಖಾಲಿಯಿರುವ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಸಲಿ, ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ ನಿರಾಶ್ರಿತರಿಗೆ ಮತದಾನ ಮಾಡುವ ಅವಕಾಶ ನೀಡಲಿ. ಆಗ ಎಲ್ಲವೂ ತನ್ನಿಂದ ತಾನೇ ಸರಿಹೋಗದಿದ್ದರೆ ಕೇಳಿ! ತುಷ್ಟೀಕರಣವೆಂಬುದು ಉರಿಯುವ ಬೆಂಕಿಗೆ ತುಪ್ಪ ಹೊಯ್ದಂತೆ. ತುಪ್ಪ ಹೊಯ್ದಷ್ಟೂ ಬೆಂಕಿ ಹೆಚ್ಚಾದೀತೇ ಹೊರತು ಕಡಿಮೆಯಾದೀತೆಂದು ನಿರೀಕ್ಷಿಸುವ ಕೇಂದ್ರ ಸರ್ಕಾರಗಳಿಗೆ ಮೂರ್ಖರೆನ್ನದೇ ಬೇರೇನು ಹೇಳಲು ಸಾಧ್ಯ?
ಆದ್ದರಿಂದ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳನ್ನು ಯಥಾರ್ಥ ನೆಲೆಯಲ್ಲಿ ಅವಲೋಕಿಸಿವುದು ಮತ್ತು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಾಸ್ತವ ಆಧಾರಿತ ಮಾಹಿತಿಯನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಜಮ್ಮು ಕಾಶ್ಮೀರ ತನ್ನ ಸಮಸ್ಯೆಗಳ ಗರ್ಭದಿಂದ ಹೊರಬಂದು ಮತ್ತೊಮ್ಮೆ ಭಾರತದ ಹೆಮ್ಮೆಯ ಮುಕುಟವಾಗಲಿ ಎನ್ನುವುದೇ ರಾಷ್ಟ್ರಪ್ರೇಮಿಗಳ ಆಶಯ.

ಬಹಳ ಸೊಗಸಾಗಿ ಮತ್ತು ಅಚ್ಚುಕಟ್ಟಾಗಿವಿಷಯವನ್ನು ನಿರೂಪಿಸಿದ್ದೀರಿ. "ತುಷ್ಟೀಕರಣವೆಂಬುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ :-) '. ವಿಷಯ ಜನರಿಗೆ ತಲುಪುವ ಅವಶ್ಯಕತೆಯಿದೆ.
ReplyDeleteಧನ್ಯವಾದ ಶಿಶಿರ...
Deletechennaagide..... nimmella lekhanagalannu odide.. ishtavaytu.. :)
ReplyDelete