Tuesday, January 28, 2014

ಅಲ್ಪಸಂಖ್ಯಾತರ ಕಲ್ಯಾಣವೋ? ಓಲೈಕೆಯೋ? ಅಥವಾ ಮತೀಯ ವಿಭಜನೆಯ ಸಂಚೋ?

(ಪ್ರಕಟಿತ – ಪುಂಗವ 01/02/2014)


        ದೇಶದ ಪ್ರಧಾನಿ ಡಾ. ಮನಮೋಹನ ಸಿಂಗರು 2006 ಡಿಸೆಂಬರಿನಲ್ಲಿ ನ್ಯಾಶನಲ್ ಡೆವೆಲಪ್‍ಮೆಂಟ್ ಕೌನ್ಸಿಲ್ ಸಭೆಯಲ್ಲಿ ಮಾತನಾಡುತ್ತ “ಭಾರತದ ಸಂಪನ್ಮೂಲಗಳ ಮೇಲೆ ಪ್ರಥಮ ಅಧಿಕಾರವಿರುವುದು ಅಲ್ಪಸಂಖ್ಯಾತರಿಗೆ, ಅದರಲ್ಲೂ ವಿಶೇಷವಾಗಿ ಮುಸಲ್ಮಾನರಿಗೆ” ಎಂದು ಘೋಷಣೆ ಮಾಡಿದ್ದರು. ಭಾರತೀಯ ಮುಸಲ್ಮಾನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯ ವರದಿ ತಯಾರಿಸುವ ಉಲ್ಲೇಖದೊಂದಿಗೆ 2005ರಲ್ಲಿ ನ್ಯಾ. ರಾಜಿಂದರ್ ಸಾಚಾರ ನೇತೃತ್ವದಲ್ಲಿ ಏಳು ಸದಸ್ಯರ ಹೈ ಲೆವೆಲ್ ಸಮೀತಿಯನ್ನು ರಚಿಸಲಾಯಿತು. ನಂತರ 2006ರಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳಿಗಾಗಿ ಪ್ರತ್ಯೇಕ ಮಂತ್ರಾಲಯವನ್ನೇ ಸ್ಥಾಪಿಸಲಾಯಿತು. ಇಷ್ಟೇ ಅಲ್ಲದೇ ಸಾಚಾರ ವರದಿಯ ಸಲಹೆಗಳ ಅನುಷ್ಠಾನಕ್ಕಾಗಿ, 1994ರಿಂದ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವ್ಥದ್ಧಿ ಮತ್ತು ಹಣಕಾಸು ನಿಗಮಕ್ಕೆ(National Minorities Development and Finance Corporation (NMDFC)) ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಲಾಯಿತು. ಇವುಗಳ ಜೊತೆಗೆ 2011ರಿಂದ ಚರ್ಚೆಯಲ್ಲಿರುವ ಕಮ್ಯೂನಲ್ ವಯೊಲೆನ್ಸ್ ಬಿಲ್ ಸೇರಿದಂತೆ ಅಲ್ಪಾಸಂಖ್ಯಾತ ಕಲ್ಯಾಣವನ್ನು ನೆಪವಾಗಿಟ್ಟುಕೊಂಡು ಮುಸಲ್ಮಾನರನ್ನು ಓಲೈಸುವ ಸಲುವಾಗಿ ರೂಪಿತತವಾದ ಕೇಂದ್ರ ಸರ್ಕಾರದ ಅನೇಕ ನೀತಿಗಳು ಮತಬ್ಯಾಂಕನ್ನು ಭದ್ರಪಡಿಸಿಕೊಳ್ಳುವ ಕಾಂಗ್ರೆಸ್ ಪಕ್ಷದ ನೈಜ ಉದ್ಧೇಶವನ್ನು ಸ್ಪಷ್ಟಪಡಿಸುತ್ತವೆ. 

        ಸಾಚಾರ ಸಮೀತಿಯು ತನ್ನ ಇಪ್ಪತ್ತು ತಿಂಗಳ ಕಾರ್ಯಕಾಲದ ನಂತರ 2006 ನವೆಂಬರಿನಲ್ಲಿ ಸಲ್ಲಿಸಿದ ವರದಿಯಲ್ಲಿ ಎರಡು ಪ್ರಮುಖ ವಿಷಯಗಳನ್ನು ನವೀನ ಶೋಧಗಳು ಮತ್ತು ಅಪ್ಪಟ ಸತ್ಯಗಳು ಎಂಬಂತೆ ಉಲ್ಲೇಖಿಸಿದೆ. ಮೊದಲನೆಯದಾಗಿ ಭಾರತೀಯ ಮುಸಲ್ಮಾನರ ಜೀವನ ಸ್ಥಿತಿ ಮತ್ತು ಸ್ಥಾನಮಾನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಿಂತಲೂ ಕೀಳಾಗಿದೆ. ಎರಡನೆಯದಾಗಿ ಜನಸಂಖ್ಯೆಯಲ್ಲಿ 14% ಭಾಗ ಹೊಂದಿದ್ದರೂ ಸರ್ಕಾರಿ ಆಡಳಿತ ಮತ್ತು ನೌಕರಿಯಲ್ಲಿ ಮುಸ್ಲಿಂ ಪ್ರಾತಿನಿಧ್ಯ 2.5%ರಷ್ಟಿದೆ. ಇದಲ್ಲದೇ ಭಾರತೀಯ ಮುಸಲ್ಮಾನರು ಅತ್ಯಂತ ಬಡವರು ಮತ್ತು ಅವಕಾಶವಂಚಿತರು, ಸಾಮಾಜಿಕವಾಗಿ ತಾರತಮ್ಯಕ್ಕೊಳಗಾದವರು ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿದೆ. 

        2001ರ ಜನಗಣತಿಯನ್ನು ಆಧರಿಸಿ ತಯಾರಿಸಲಾದ ಸಾಚಾರ ವರದಿಯ ದೋಷ ಮತ್ತು ಪೂರ್ವಗ್ರಹಗಳನ್ನು ಋಜುವಾತುಪಡಿಸಲು ಬಹಳ ಪ್ರಯತ್ನ ಪಡಬೇಕಾದ ಅಗತ್ಯವಿಲ್ಲ. ಹಿಂದುಳಿದಿರುವಿಕೆಯ ಸೂಚ್ಯಂಕಗಳಾದ ಶಿಶು ಮರಣ, ಜನನ ಸಮಯದ ಆಯುರ್ಮಾನ ನಿರೀಕ್ಷೆ, ನಗರೀಕರಣ ಪ್ರಮಾಣ ಮುಂತಾದವುಗಳಲ್ಲಿ ಹಿಂದೂ ಸಮುದಾಯವು ಮುಸ್ಲಿಮರೂ ಸೇರಿದಂತೆ ಐದು ಅಲ್ಪಸಂಖ್ಯಾತ ಸಮುದಾಯಗಳಿಗಿಂತ ಹಿಂದೆ ಇದೆ ಎನ್ನುವುದು ತಜ್ಞರ ಅಧ್ಯಯನದಿಂದ ಧೃಢಪಟ್ಟಿದೆ. ಕಡುಬಡತನದಲ್ಲಿರುವವರ ಪ್ರಮಾಣ ಮುಸ್ಲಿಮರಿಗಿಂತ ಹಿಂದೂಗಳಲ್ಲಿ ಹೆಚ್ಚಿದೆ ಎಂದು ಸಂಶೋಧನೆಗಳು ಉಲ್ಲೇಖಿಸುವರ ಅಂಶಗಳನ್ನು ಸಮೀತಿಯು ಸಂಪೂರ್ಣ ನಿರ್ಲಕ್ಷಿಸಿದೆ. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಸಲ್ಮಾನರ ಸಾಕ್ಷರತಾ ಪ್ರಮಾಣ ಹಿಂದೂಗಳಿಗಿಂತ ಅಧಿಕವಾಗಿರುವದನ್ನು ಸ್ವತ: ಸಾಚಾರ ಸಮೀತಿಯು ಒಪ್ಪಿಕೊಂಡಿದೆ. ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರದ(Center of Studies for Developing Societies) ಡಾ. ಸಂಜಯಕುಮಾರರವರು ‘ಭಾರತದ ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನ ಹಾಗೂ ಜನಪ್ರಿಯ ಪರಿಕಲ್ಪನೆ’ ಎನ್ನುವ ಸಂಶೋಧನಾ ಪ್ರಬಂಧದಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯಲ್ಲಿ ಯಾವ ವ್ಯತ್ಯಾಸವೂ ಇಲ್ಲವೆಂಧು ಸಾಧಿಸಿ ತೋರಿಸಿದ್ದಾರೆ. ಈ ಸುವ್ಯವಸ್ಥಿತ ದಾಖಲೆಯನ್ನೂ ನ್ಯಾ. ಸಾಚಾರ ಗಣನೆಗೆ ತೆಗೆದುಕೊಳ್ಳಲಿಲ್ಲ. ಸುರೇಶ ತೆಂಡೂಲ್ಕರ ಸಮೀತಿಯ ವರದಿಯ ಪ್ರಕಾರ ಭಾರತದ ಜನಸಂಖ್ಯೆಯ ಒಟ್ಟೂ ಜನಸಂಖ್ಯೆಯ 37.2% ಜನರು ಬಡತನ ರೇಖೆಯ ಕೆಳಗಿದ್ದಾರೆ, ಅಂದರೆ 30ಕೋಟಿಗೂ ಅಧಿಕ ಹಿಂದೂಗಳು ಅದರಲ್ಲಿ ಸೇರಿದ್ದಾರೆ. 2011 ಫೆಬ್ರುವರಿಯಲ್ಲಿ ಲೋಕಸಭೆಯಲ್ಲಿ ಪ್ರಶ್ನೆಗೆ ಉತ್ತರಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ವಿನ್ಸೆಂಟ್ ಪಾಲಾ ‘ಮತಗಳ ಆಧಾರದಲ್ಲಿ ಬಡತನ ರೇಖೆಯ ಕೆಳಗಿರುವವರ ಅಂಕಿಅಂಶಗಳು ಸರ್ಕಾರದ ಬಳಿ ಇಲ್ಲ’ ಎಂದು ತಿಳಿಸಿದರು. ಹೀಗಿರುವಾಗ 2006ರ ಹೊತ್ತಿಗೇ ಯಾವ ಅಂಕಿಅಂಶಗಳ ಆಧಾರದ ಮೇಲೆ ಸಾಚಾರ ಸಮೀತಿಯು ಮುಸ್ಲಿಮರು ಮಾತ್ರ ಬಡವರು, ಎಂದು ಅಂಗೀಕರಿಸಿದೆ? 1947ರ ಸಂತರ ಇದುವರೆಗೆ ಭಾರತದ ರಾಷ್ಟ್ರಪತಿ ಸ್ಥಾನವನ್ನೂ ಸೇರಿ ಉನ್ನತ ಪದವಿಯನ್ನು ಅಲಂಕರಿಸಿದ, ಹಿಂದಿ ಚಿತ್ರರಂಗ, ಔದ್ಯಮಿಕ ಕ್ಷೇತ್ರಗಳೂ ಸೇರಿದಂತೆ ವಿವಿಧ ವರ್ಗಗಳಲ್ಲಿ ಸಾಧನೆಗೈದವರಲ್ಲಿ ಮುಸಲ್ಮಾನರೂ ಗಣನೀಯ ಪ್ರಮಾಣದಲ್ಲಿರುವಾಗ ಯಾವ ಮಾನದಂಡದವನ್ನಾಧರಿಸಿ ಮುಸ್ಲಿಮರು ಅವಕಾಶವಂಚಿತರು ಎನ್ನುವ ನಿರ್ಣಯಕ್ಕೆ ಬಂದಿದೆ?

      ಸಾಚಾರ ಸಮೀತಿಯ ಸಲಹೆಗಳ ಅನುಷ್ಠಾನ ಹಾಗೂ ಅಲ್ಪಸಂಖ್ಯಾತರ ಕಲ್ಯಾಣದ ನೆಪದಲ್ಲಿ ಕೊಟ್ಯಾಂತರ ರೂಪಾಯಿಗಳ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ:
  • ಪ್ರತಿವರ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ 25ಲಕ್ಷ ಮೆಟ್ರಿಕ್ ಪೂರ್ವ ವಿದ್ಯಾಥಿವೇತನ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಪಡೆದ ಸಾಲದ ಬಡ್ಡಿ ಮನ್ನಾ, ಮೌಲಾನಾ ಆಜಾದ್ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿವೇತನ, ಪದವಿ ಅಥವಾ ಹೈಯರ ಸೆಕೆಂಡರಿಯಲ್ಲಿ 50%ಕ್ಕೂ ಹೆಚ್ಚು ಅಂಕ ಪಡೆದ 20ಸಾವಿರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನ, ಎಂಫಿಲ್ ಹಾಗೂ ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಫೆಲೋಶಿಪ್, ಸ್ಪರ್ಧಾತ್ಮಕ ಪರೀಕ್ಷೆಗಾಗಿ ಉಚಿತ ತರಬೇತಿ ಇನ್ನೂ ಅನೇಕ ಯೋಜನೆಗಳು ವಿಶೇಷವಾಗಿ ಅಲ್ಪಸಂಖ್ಯಾತ ಮುಸ್ಲಿಮರಿಗಾಗಿ ರೂಪುಗೊಂಡಿವೆ. ಹಿಂದೂ ವಿದ್ಯಾರ್ಥಿಗಳು ಎಷ್ಟೇ ಕಡುಬಡವರಾದರೂ ಈ ನೆರವಿನ ಕನಸನ್ನು ಕಾಣುವಂತಿಲ್ಲ.
  • ಹಿಂದೂ ವಿದ್ಯಾರ್ಥಿಗಳು ಪಡೆದ ಶೈಕ್ಷಣಿಕ ಸಾಲಕ್ಕೆ 12-14% ಬಡ್ಡಿ ತೆತ್ತರೆ, ಅದೇ ಸಮಯದಲ್ಲಿ ಎನ್‍ಎಂಡಿಎಪ್‍ಸಿಯಿಂದ ಅಲ್ಪಸಂಖ್ಯಾತರು ಪಡೆಯುವ ಸಾಲಕ್ಕೆ 3-4% ಬಡ್ಡಿ ಕಟ್ಟಿದರೆ ಸಾಕು.
  • ಕೇಂದ್ರದ ಹಿಂದಿನ ಅಲ್ಪಸಂಖ್ಯಾತ ವ್ಯವಹಾರಗಳ ಮಂತ್ರಿಯಾಗಿದ್ದ ಸಲ್ಮಾನ ಖುರ್ಶೀದ್ ಕೊಚ್ಚಿಕೊಳ್ಳುವಂತೆ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಒಟ್ಟೂ 1.42ಲಕ್ಷ ವಿದ್ಯಾರ್ಥಿವೇತನಗಳನ್ನು ನೀಡಲಾಗಿದೆ, ಅದಕ್ಕಾಗಿ 2,709.5ಕೋಟಿ ರೂ.ಗಳನ್ನು ವೆಚ್ಚಮಾಡಲಾಗಿದೆ. 
  • ಅಲ್ಪಸಂಖ್ಯಾತ ಯುವ ಉದ್ಯಮಿಗಳಿಗಾಗಿ ಹೊಸ ವಾಣಿಜ್ಯ ಅಥವಾ ಉದ್ಯಮಕ್ಕಾಗಿ 5% ಮೂಲಬಂಡವಾಳವನ್ನು ಹೊಂದಿಸಿಕೊಂಡರೆ ಸಾಕು; ಉಳಿದ 35% ಹಣವನ್ನು ಎನ್‍ಎಂಡಿಎಪ್‍ಸಿಯು 3% ಬಡ್ಡಿದರದಲ್ಲಿ ನೀಡುತ್ತದೆ, ಇನ್ನುಳಿದ 60%ರಷ್ಟನ್ನು ವಾಣಿಜ್ಯ ಬ್ಯಾಂಕ್‍ಗಳು ಸಾಲವಾಗಿ ನೀಡುತ್ತವೆ. ಆದರೆ ಬಡ ಅಥವಾ ಹಿಂದುಳಿದ ಹಿಂದೂ ಯುವ ಉದ್ಯಮಿಗಾದರೆ 40% ಮೂಲಬಂಡವಾಳವನ್ನು ಹೊಂದಿಸಿಕೊಳ್ಳಬೇಕು ಮತ್ತು ಬ್ಯಾಂಕಿಗೆ 15-18% ಬಡ್ಡಿ ತೆರಬೇಕು.
  • ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆಂದು ನೀಡುತ್ತಿದ್ದ ಹಣವನ್ನು 2009-10ನೇ ಸಾಲಿನಲ್ಲಿ 74% ಏರಿಸಿತು. ಮುಸ್ಲಿಂ ಬಾಹುಳ್ಯದ 90ಜಿಲ್ಲೆಗಳಿಗೆ 3780ಕೋಟಿ ರೂ.ಗಳ ಪ್ಯಾಕೇಜ ನೀಡಲಾಯಿತು. ಇವುಗಳಲ್ಲಿ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರಿರುವ 9-10 ಜಿಲ್ಲೆಗಳೂ ಸೇರಿವೆ. ಆದರೆ ಬಿಹಾರ, ಓಡಿಶಾ, ಬುಂದೇಲಖಂಡಗಳ ಅತ್ಯಂತ ಹಿಂದೂ ವನವಾಸಿಗಳು ಅಧಿಕವಿರುವ ಹಿಂದುಳಿದ ಜಿಲ್ಲೆಗಳೂ ಅಭಿವೃದ್ಧಿ ಹೊಂದಬೇಕು ಎಂದು ಸರ್ಕಾರಕ್ಕೆ ಅನ್ನಿಸಲೇ ಇಲ್ಲ.
  • 11ನೇ ಪಂಚವಾರ್ಷಿಕ ಯೋಜನೆಯಲ್ಲಿ 90 ಅಲ್ಪಸಂಖ್ಯಾತ ಪ್ರಾಬಲ್ಯದ ಜಿಲ್ಲೆಗಳಲ್ಲಿ ಶಾಲೆ, ಹೆಚ್ಚುವರಿ ಕೊಠಡಿ, ವಿದ್ಯಾರ್ಥಿನಿಲಯ, ಐಟಿಐ, ಹಾಸ್ಟೆಲ್, ಆರೋಗ್ಯಕೇಂದ್ರ ಮುಂತಾದವುಗಳ ನಿರ್ಮಾಣಕ್ಕಾಗಿ 2,941ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ.
  • ಇವುಗಳಷ್ಟೇ ಅಲ್ಲದೇ ಬಿಹಾರದ ನಿತೀಶ ಕುಮಾರ, ಉತ್ತರ ಪ್ರದೇಶದ ಅಖಿಲೇಶ ಯಾದವ, ಪ.ಬಂಗಾಳದ ಮಮತಾ ಬ್ಯಾನರ್ಜಿ ಮುಂತಾದವರ ಸರ್ಕಾರಗಳು ಅಲ್ಪಸಂಖ್ಯಾತ, ಅಂದರೆ ಮುಸ್ಲಿಮರಿಗಾಗಿ ‘ಕಲ್ಯಾಣ’ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ, ಪ್ಯಾಕೇಜ್‍ಗಳನ್ನು ನೀಡುವಲ್ಲಿ ಕೇಂದ್ರ ಸರ್ಕಾರದೊಂದಿಗೆ ಪೈಪೋಟಿಗಿಳಿದಿವೆ.
        ಸಮಾನತೆಯ ಹಕ್ಕನ್ನು ನೀಡುವ ಭಾರತೀಯ ಸಂವಿಧಾನದ 15ನೇ ವಿಧಿಯು ಸರ್ಕಾರವು ಮತ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಮೇಲೇ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಆದ್ದರಿಂದ ಅಲ್ಪಸಂಖ್ಯಾತರ ಕಲ್ಯಾಣದ ಹೆಸರಿನಲ್ಲಿ ಸರ್ಕಾರಗಳು ನಡೆಸುವ ಇಂತಹ ಯೋಜನೆಗಳು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಷ್ಟೇ ಅಲ್ಲ 80% ಬಹುಸಂಖ್ಯಾತ ಹಿಂದುಗಳನ್ನು ಮೂರನೇ ದರ್ಜೆಯ ನಾಗರಿಕ ಸ್ಥಾನಕ್ಕೆ ತಳ್ಳುತ್ತಿವೆ. ಮತೀಯ ಅಲ್ಪಸಂಖ್ಯಾತರನ್ನು ಅದರಲ್ಲೂ ಮುಸಲ್ಮಾನರನ್ನು ಸಮಾಜದ ಮುಖ್ಯವಾಹಿನಿಯಿಂದ ಪ್ರತ್ಯೇಕಿಸುವ ಈ ತಾರತಮ್ಯ ಯೋಜನೆಗಳು ಸಹಜವಾಗಿಯೇ ನಾಗರಿಕರಲ್ಲಿ ಅಸಮಾಧಾನ ಹಾಗೂ ಸಮಾಜದ ವಿಘಟನೆಗೆ ಕಾರಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶದ ಸರ್ಕಾರವೇ ತನ್ನ ಪ್ರಜಾಸಮುದಾಯದ ವಿರುದ್ಧ ಸಮರ ನಡೆಸಿರುವ ಇಂತಹ ಉದಾಹರಣೆ ಜಗತ್ತಿನಲ್ಲಿಯೇ ಅಪರೂಪ. ಮೌಢ್ಯ ಮತ್ತು ಮೂಲಭೂತವಾದದ ಕಬಂಧ ಜಾಲದಲ್ಲಿ ಸಿಕ್ಕಿರುವ ಬಡ-ಹಿಂದುಳಿದ ಮುಸ್ಲಿಮರನ್ನು ಶಿಕ್ಷಣ ಮತ್ತು ಜಾಗೃತಿಯಿಂದ ಮುಖ್ಯವಾಹಿನಿಗೆ ತರಬೇಕಾದ ಸರ್ಕಾರ ಪ್ರತ್ಯೇಕತೆಯನ್ನೇ ಪ್ರೊತ್ಸಾಹಿಸುತ್ತಿರುವುದು ದುರದೃಷ್ಟಕರ. ರಾಜಕೀಯ ಲೆಕ್ಕಾಚಾರಗಳು, ಅಧಿಕಾರ ಲಾಲಸೆ ಮತ್ತು ವೋಟಬ್ಯಾಂಕ್‍ಗಾಗಿ ರಾಜಕೀಯ ಪಕ್ಷಗಳು ರಾಷ್ಟ್ರೀಯ ಹಿತಾಸಕ್ಕಿಯನ್ನೇ ಬಲಿಕೊಡುತ್ತಿರುವುದು ಕೇವಲ ಆತಂಕಕಾರಿಯಷ್ಟೇ ಅಲ್ಲ, ದೇಶದ ಗಂಭಿರ ಸಮಸ್ಯೆಯೂ ಹೌದು.


Thursday, January 9, 2014

ರಾಷ್ಟ್ರೀಯ ಏಕತೆಗಾಗಿ ಮತ್ತೆ ಸರ್ದಾರ ಪಟೇಲ್

(ಪ್ರಕಟಿತ: ಪುಂಗವ 15/01/2014)

           ‘ಒಂದು ಭಾರತ ಶ್ರೇಷ್ಠ ಭಾರತ’ ಎನ್ನುವ ಸಂದೇಶದೊಂದಿಗೆ ರಾಷ್ಟ್ರೀಯ ಭಾವೈಕ್ಯದ ಪುನರ್ ಜಾಗೃತಿಗಾಗಿ ಏಕತಾ ಪ್ರತಿಮೆಯ (Statue of Unity) ನಿರ್ಮಾಣ ಕಾರ್ಯ ಚಾಲನೆಯನ್ನು ಪಡೆದಿದೆ. ಸ್ವಾತಂತ್ರ್ಯಾನಂತರ ಹರಿದು ಹಂಚಿ ಹೋಗಬಹುದಾಗಿದ್ದ ಭಾರತದ ಏಕತೆಯನ್ನು ಸಧೃಢ ಸೂತ್ರದಲ್ಲಿ ಬಂಧಿಸಿದ ಭಾರತದ ಪ್ರಥಮ ಉಪಪ್ರಧಾನಿ ಹಾಗೂ ಗೃಹಮಂತ್ರಿ ಸರ್ದಾರ ವಲ್ಲಭ ಭಾಯಿ ಪಟೇಲರವರ ಸ್ಮøತಿಯಲ್ಲಿ ಗುಜರಾತಿನ ನರ್ಮದಾ ಸರೋವರ ಆಣೆಕಟ್ಟೆಯ ಹಿನ್ನೀರನ ಪ್ರದೇಶದಲ್ಲಿರುವ ಸಾಧು ಬೇಟ್ ನಡುಗಡ್ಡೆಯಲ್ಲಿ ಸರ್ದಾರ ಪಟೇಲ್ ಭವ್ಯ ಸ್ಮಾರಕ ‘ಏಕತಾ ಪ್ರತಿಮೆ’ ನಿರ್ಮಾಣವಾಗಲಿದೆ. 


          ಗುಜರಾತಿನ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿಯವರ ಕಲ್ಪನೆಯಲ್ಲಿ 2010ರಲ್ಲಿ ಬೀಜಾಂಕುರವಾದ ಏಕತಾ ಪ್ರತಿಮೆಯ ನಿರ್ಮಾಣಕ್ಕೆ ಸರ್ದಾರ ಪಟೇಲರ ಪುಣ್ಯತಿಥಿ ಅಕ್ಟೋಬರ 31ರಂದು ಶಿಲಾನ್ಯಾಸ ನೆರವೇರಿತು. ಭಾರತ ಕಂಡ ಒಬ್ಬ ಶ್ರೇಷ್ಠ ನಾಯಕ ಮುತ್ಸದ್ದಿ ಸರ್ದಾರ ಪಟೇಲರ ಪ್ರತಿಮೆ ಸ್ಥಾಪನೆ ಕಾರ್ಯದೊಂದಿದೆ ರಾಷ್ಟ್ರೀಯ ಏಕತೆಯನ್ನು ಪುನ: ಜಾಗೃತಗೊಳಿಸುವ ಆಂದೋಲನ ಅನೇಕ ವಿಶೇಷತೆಗಳನ್ನು ಒಳಗೊಂಡಿದೆ.


  • ನರ್ಮದೆಯ ಹಿನ್ನೀರನಲ್ಲಿ ಗರುಡೇಶ್ವರ ಕಿರು ಆಣೆಕಟ್ಟೆಯಿಂದ 3.2ಕಿಮೀ ಅಂತರದಲ್ಲಿ ನಿರ್ಮಾಣವಾವಾಗುತ್ತಿರವ ಸರ್ದಾರ ಪಟೇಲರ 182 ಮೀ ಎತ್ತರದ ಪ್ರತಿಮೆ ಪ್ರಪಂಚದಲ್ಲೇ ಅತೀ ಎತ್ತರದ ಮೂರ್ತಿಯಾಗಲಿದೆ. ಪ್ರತಿಮೆಯ ಎತ್ತರವೇ ಏಳು ಮಹಡಿಯಷ್ಟಾಗಲಿದ್ದು, 56ಮೀ ಎತ್ತರದ ತಳಮನೆಯೂ ಸೇರಿದಂತೆ ಒಟ್ಟೂ 240ಮೀ.ನ (787ಫೂಟ್) ಉನ್ನತ ಸ್ಮಾರಕ ನಿರ್ಮಾಣವಾಗಲಿದೆ. ಬೃಹತ್ ಏಕತಾ ಪ್ರತಿಮೆಯು ಅಮೇರಿಕದ ಸ್ಟಾಚ್ಯೂ ಆಫ್ ಲಿಬೆರ್ಟಿಯ ಎರಡು ಪಟ್ಟು, ಬ್ರೆಜಿಲ್‍ನ ಯೇಸು ಕ್ರಿಸ್ತನ ಪ್ರತಿಮೆಯ 5 ಪಟ್ಟು, ಜಪಾನಿನ ಉಶಿಕು ದೈಬುಟ್ಸು ಬುದ್ಧನ ಪ್ರತಿಮೆಯ ಒಂದೂವರೆ ಪಟ್ಟು ಮತ್ತು ಚೈನಾದ ಸ್ಪ್ರಿಂಗ ದೇವಾಲಯದ ಬುದ್ಧನ ಪ್ರತಿಮೆಗಿಂತಲೂ ಹಿರಿದಾಗಲಿದೆ.
  • ಸ್ಮಾರಕದ ಸುತ್ತಲಿನ ಪ್ರದೇಶವನ್ನು ವಿಶ್ವದರ್ಜೆಯ ಪ್ರವಾಸಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಸ್ಮಾರಕಕ್ಕೆ ಸಂಪರ್ಕ ಸೇತುವೆ, ನೆಲಮಹಡಿಯಲ್ಲಿ ಭಾರತದ ಇತಿಹಾಸ ಹಾಗೂ ಸರ್ದಾರ ಪಟೇಲರ ಜೀವನವನ್ನು ಪ್ರತಿಬಿಂಬಿಸುವ ಸಂಗ್ರಹಾಲಯ, ದೃಶ್ಯ ಮತ್ತು ಶೃವಣ ಪ್ರದರ್ಶನ ಗ್ಯಾಲರಿ, ಲೇಸರ್, ಬೆಳಕು ಮತ್ತು ಧ್ವನಿ ಪ್ರದರ್ಶನ, ಮನರಂಜನಾ ಪಾರ್ಕಗಳನ್ನು ನಿರ್ಮಾಣ ಮಾಡಲಾಗುವುದು. ಸಾತ್ಪುರ ಬೆಟ್ಟ ಶ್ರೇಣಿಗಳ ನಡುವಿನ ಸರ್ದಾರ ಸರೋವರ ಆಣೆಕಟ್ಟಿಯ ರಮಣೀಯ ದೃಶ್ಯದ ವೀಕ್ಷಣೆಯ ಸಲುವಾಗಿ 400ಫೂಟ ಎತ್ತರದ ದರ್ಶನಾ ಗ್ಯಾಲರಿಯನ್ನೂ ಸಹ ನಿರ್ಮಿಸಲಾಗುವುದು. 
  • ಸ್ಮಾರಕಕ್ಕೆ ಹೊಂದಿಕೊಂಡಂತೆ ಸರ್ದಾರ ಪಟೇಲರ ಪ್ರಿಯ ವಿಷಯಗಳಾಗಿದ್ದ ಗ್ರಾಮ ವಿಕಾಸ, ಬುಡಕಟ್ಟು ಅಭಿವೃದ್ಧಿ, ಕೃಷಿವಿಕಾಸ, ಜಲಸಂವರ್ಧನೆ, ಸುಶಾಸನ ಮುಂತಾದ ವಿಷಯಗಳ ಸಂಶೋಧನಾ ಮತ್ತು ಶಿಕ್ಷಣ ಕೇಂದ್ರಗಳನ್ನೂ ತೆರೆಯಲಾಗುವುದು.
  • ಏಕತಾ ಪ್ರತಿಮೆಯ ನಿರ್ಮಾಣ ಕೇವಲ ಸರ್ಕಾರಿ ಖಜಾನೆಯ ಕಾರ್ಯಕ್ರಮವಾಗಬಾರದು; ಇದು ದೇಶದ ಮೂಲೆಮೂಲೆಯ ಎಲ್ಲ ದೇಶಭಕ್ತ ನಾಗರಿಕರ ಪಾಲ್ಗೊಳ್ಳುವಿಕೆಯಲ್ಲಿ ಸಾಕಾರಗೊಳ್ಳಬೇಕು ಎನ್ನುವುದು ನರೇಂದ್ರ ಮೋದಿಯವರ ಕನಸು. ಇದಕ್ಕಾಗಿ ದೇಶದ ಆವಶ್ಯಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಮತ್ತು ಪ್ರಕಲ್ಪವನ್ನು ಕಾರ್ಯಗತಗೊಳಿಸುವ ಸಲುವಾಗಿ ಶ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ ರಾಷ್ಟ್ರೀಯ ಏಕತಾ ಟ್ರಸ್ಟನ್ನು ಘಟಿಸಲಾಗಿದೆ. ದೇಶದ ಏಕತೆಯ ಸಂಕೇತವಾಗಿ ನಿರ್ಮಾಣಗೊಳ್ಳುತ್ತಿರುವ ಪ್ರತಿಮೆಯ ಯೋಜನೆಯನ್ನು ಕಾರ್ಯಗತಗೊಳಿಸಲು ವಿಶ್ವದ ಶ್ರೇಷ್ಠ ನಿರ್ಮಾಣ ತಂತ್ರಜ್ಞರನ್ನು ನೇಮಿಸಲಾಗಿದೆ.
  • ‘ಲೋಹಸಂಗ್ರಹ’ ಅಭಿಯಾನದ ಅಂಗವಾಗಿ ದೇಶದ ಕೋಣೆಕೋಣೆಯ 7ಲಕ್ಷ ಗ್ರಾಮಗಳ ರೈತರಿಂದ ಕೃಷಿಯಲ್ಲಿ ಬಳಸಿದ ಆಯುಧದ ಲೋಹದ ತುಣುಕನ್ನು ಪಡೆಲಾಗುವುದು. ಸಂಗ್ರಹವಾದ ಲೋಹವನ್ನು ಕರಗಿಸಿ ಪ್ರತಿಮೆಯ ನಿರ್ಮಿತಿಯಲ್ಲಿ ಬಳಸಲಾಗುವುದು. ಜೊತೆಗೆ ದೇಶದ ಪ್ರತೀ ಗ್ರಾಮದಿಂದ ಹಿಡಿಯಷ್ಟು ಮಣ್ಣನ್ನು ತಂದು ಸಂಗ್ರಹಾಲಯದಲ್ಲಿ ಸಂಗ್ರಹಿಸಿಡಲಾಗುವುದು. ಲೋಹಸಂಗ್ರಹ ಕಾರ್ಯಕ್ಕಾಗಿ ಈಗಾಗಲೇ ಏಕತೆಯ ಸಂದೇಶ ಹೊತ್ತ ಸುಮಾರು 700 ಟ್ರಕ್‍ಗಳು ದೇಶದ ಕೋಣೆಕೋಣೆಯತ್ತ ತೆರಳಿವೆ. ಅಲ್ಲದೇ ದೇಶದ ಪ್ರತೀ ಗ್ರಾಮದ ಮುಖ್ಯಾ, ಸರಪಂಚ್ ಅಥವಾ ಅಧ್ಯಕ್ಷನ ಫೋಟೋ ಮತ್ತು ಗ್ರಾಮದ ಕಿರುಚರಿತ್ರೆಯುಳ್ಳ ಒಂದು ಬೃಹತ್ ಡಿಜಿಟಲ್ ಕೊಲಾಜ್‍ನ್ನು ರಚಿಸಲಾಗುವುದು. ಇವೆಲ್ಲವನ್ನು ಸಂಗ್ರಹಾಲಯದಲ್ಲಿ ಸಾರ್ವಜನಿಕ ಪ್ರದರ್ಶಕ್ಕಿಡಲಾಗುವುದು. ಅಂದರೆ ಪ್ರತಿಮೆಯ ನಿರ್ಮಾಣದೊಂದಿಗೆ ಇಡೀ ದೇಶದ ಗ್ರಾಮ ಗ್ರಾಮವನ್ನು ಬೆಸೆಯುವ ಶ್ರೇಷ್ಠ ಕಾರ್ಯವೂ ಆಂದೋಲನದ ಭಾಗವಾಗಿದೆ.
  • ಏಕತಾ ಪ್ರತಿಮಾ ಆಂದೋಲನದ ಅಂಗವಾಗಿ ಸರ್ದಾರ ಪಟೇಲರ ಜನ್ಮದಿನ ಡಿಸೆಂಬರ 15ರಂದು 565ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕತಾ ಓಟ(Run for Unity) ವನ್ನು ಆಯೋಜಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಸ್ಥಳಗಳ 40 ಲಕ್ಷಕ್ಕೂ ಹೆಚ್ಚು ಓಟಗಾರರು ತಮ್ಮ ಹೆಸರು ನೋಂದಾಯಿಸಿ ಪಾಲ್ಗೊಂಡ ಏಕತಾ ಓಟ ಏಕಕಾಲದಲ್ಲಿ ಒಂದು ಉದ್ಧೇದಿಂದ ಓಟ ನಡೆದ ವಿಶ್ವದಲ್ಲೇ ಅತಿ ದೊಡ್ಡ ಕಾರ್ಯಕ್ರಮವಾಗಿ ದಾಖಲೆ ಬರೆಯಿತು.
  • ಶಾಲೆ ಕಾಲೇಜು ವಿದ್ಯಾರ್ಥಿಗಳನ್ನೂ ಏಕತೆಯ ಆಂದೋಲನದಲ್ಲಿ ಬೆಸೆಯುವ ಉದ್ಧೇಶದಿಂದ ‘ರೈಟ್ ಫಾರ್ ಯುನಿಟಿ’ ಎನ್ನುವ ಪ್ರಭಂಧ ಮತ್ತು ಘೋಷಣಾ ರಚನೆಯ ಸ್ಪರ್ಧೆಯನ್ನು ವಿವಿಧ ಹಂತಗಳಲ್ಲಿ ದೇಶದಾದ್ಯಂತ ನಡೆಸಲಾಗುವುದು. 
  • ಆಡಳಿತ ಸುಧಾರಣೆಯ ನಿಟ್ಟಿನಲ್ಲಿ ಸುಶಾಸನದ ಬೇಡಿಕೆಗಾಗಿ ಸಹಿ ಸಂಗ್ರಹ ಅಭಿಯಾನ ‘ಇ-ಸುರಾಜ’ನ್ನು ನಡೆಸಲಾಗುವುದು. 2 ಕೋಟಿಗೂ ಅಧಿಕ ಜನರು ಪಾಲ್ಗೊಳ್ಳುವ ಈ ಅಭಿಯಾನ ವಿಶ್ವದಲ್ಲೇ ಅತೀ ದೊಡ್ಡ ಸಹಿ ಸಂಗ್ರಹ ಅಭಿಯಾನವಾಗಲಿದೆ.
            ಇವಿಷ್ಟೇ ಅಲ್ಲದೇ ಸ್ಥಳೀಯ ಸಭೆಗಳು, ನಾಯಕತ್ವ ಅಭಿಯಾನ, ಸಂಶೋಧನೆ ಮತ್ತು ಶಿಕ್ಷಣ, ಪರಿಸರ ಕಾಳಜಿ ಇನ್ನೂ ಹತ್ತು ಹಲವು ಆಯಾಮಗಳ ಸಮಗ್ರ ಯೋಜನೆ ಏಕತಾ ಪ್ರತಿಮಾ ಆಂದೋಲನದ ಅಡಿಯಲ್ಲಿ ನಡೆಯಲಿದೆ.

            ಸರ್ದಾರ ಪಟೇಲರ ಬೃಹತ ಪ್ರತಿಮೆಯ ನಿರ್ಮಿತಿಯಲ್ಲಿ ಇಡೀ ದೇಶದ ಜನರನ್ನು ಜೋಡಿಸುವುದು ಮತ್ತು ರಾಷ್ಟ್ರೈಕ್ಯದ ಭಾವವನ್ನು ಜಾಗೃತಗೊಳಿಸುವುದು ಭವ್ಯ ಭಾರತದ ಕನಸು ಕಂಡ ನಾಯಕನಿಗೆ ಸಲ್ಲಿಸುವ ಸೂಕ್ತ ಶೃದ್ಧಾ ಸುಮನ. ವಿಶ್ವದ ಭೂಪಟದಲ್ಲಿ ಗೌರವನೀಯ ಸ್ಥಾನ ಪಡೆಯುವ ಏಕತಾ ಪ್ರತಿಮೆ ಭಾರತದ ಶ್ರೇಷ್ಠ ಇತಿಹಾಸ ಮತ್ತು ಮಹಾಪುರುಷರ ಆದರ್ಶ ಜೀವನದ ಪ್ರತೀಕವಾಗಲಿದೆ. ಸ್ಮಾರಕವು ನಮ್ಮ ನಾಡಿನ ಚರಿತ್ರೆಯನ್ನು ವಿಶ್ವದೆದುರಲ್ಲಿ ತೆರೆದಿಡಲಿದೆ. ಸ್ಟಾಚ್ಯೂ ಆಫ್ ಯುನಿಟಿ ವಿಶ್ವದ ವಿಸ್ಮಯ ಪ್ರವಾಸೀ ಕೇಂದ್ರವಾಗುವುದರ ಜೊತೆಗೆ ಭಾರತೀಯರಿಗೆ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಪ್ರೇರಣಾ ಸ್ರೋತವಾಗಲಿದೆ.



ಸರ್ದಾರ ಪಟೇಲರ ಭವ್ಯ ಸ್ಮಾರಕವನ್ನು ನಿರ್ಮಿಸಿ ಶೃದ್ಧಾಸುಮನವನ್ನು ಅರ್ಪಿಸುವುದರ ಜೊತೆಗೆ ಇಡೀ ದೇಶವನ್ನು ರಾಷ್ಟ್ರೀಯ ಭಾವೈಕ್ಯದಲ್ಲಿ ಬೆಸೆಯುವ ಕನಸು ಕಂಡವರು ಗುಜರಾತಿನ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿ. ಏಕತಾ ಪ್ರತಿಮೆಯ ನಿರ್ಮಾಣಕ್ಕೆ ಒಂದು ರಾಷ್ಟ್ರೀಯ ಆಂದೋಲನದ ರೂಪ ನೀಡಿ ಜನರಲ್ಲಿ ದೇಶಭಕ್ತಿ ಮತ್ತು ಸ್ವಾಭಿಮಾನವನ್ನು ಎಬ್ಬಿಸುವ ಕಲ್ಪನೆ ಶ್ರೀ ಮೋದಿಯವರ ದೂರದೃಷ್ಟಿಯ ಪ್ರತೀಕವಾಗಿದೆ. ಜೊತೆಗೆ ಪ್ರತಿಮೆಯ ಎತ್ತರದಿಂದ ಹಿಡಿದು, ತತ್ಸಂಭಂಧಿತ ವ್ಯವಸ್ಥೆಗಳು, ಸಂಸ್ಥೆಗಳು ಮತ್ತು ಯೋಜನೆಗಳ ಸಮಗ್ರವಾದ ಬೃಹತ್ ಕಲ್ಪನೆ ಅವರ ಬುದ್ಧಿಯ ವೈಶಾಲ್ಯವನ್ನು ಬಿಂಬಿಸುತ್ತದೆ.                     

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...