(ಪ್ರಕಟಿತ: ಪುಂಗವ 15/01/2014)
‘ಒಂದು ಭಾರತ ಶ್ರೇಷ್ಠ ಭಾರತ’ ಎನ್ನುವ ಸಂದೇಶದೊಂದಿಗೆ ರಾಷ್ಟ್ರೀಯ ಭಾವೈಕ್ಯದ ಪುನರ್ ಜಾಗೃತಿಗಾಗಿ ಏಕತಾ ಪ್ರತಿಮೆಯ (Statue of Unity) ನಿರ್ಮಾಣ ಕಾರ್ಯ ಚಾಲನೆಯನ್ನು ಪಡೆದಿದೆ. ಸ್ವಾತಂತ್ರ್ಯಾನಂತರ ಹರಿದು ಹಂಚಿ ಹೋಗಬಹುದಾಗಿದ್ದ ಭಾರತದ ಏಕತೆಯನ್ನು ಸಧೃಢ ಸೂತ್ರದಲ್ಲಿ ಬಂಧಿಸಿದ ಭಾರತದ ಪ್ರಥಮ ಉಪಪ್ರಧಾನಿ ಹಾಗೂ ಗೃಹಮಂತ್ರಿ ಸರ್ದಾರ ವಲ್ಲಭ ಭಾಯಿ ಪಟೇಲರವರ ಸ್ಮøತಿಯಲ್ಲಿ ಗುಜರಾತಿನ ನರ್ಮದಾ ಸರೋವರ ಆಣೆಕಟ್ಟೆಯ ಹಿನ್ನೀರನ ಪ್ರದೇಶದಲ್ಲಿರುವ ಸಾಧು ಬೇಟ್ ನಡುಗಡ್ಡೆಯಲ್ಲಿ ಸರ್ದಾರ ಪಟೇಲ್ ಭವ್ಯ ಸ್ಮಾರಕ ‘ಏಕತಾ ಪ್ರತಿಮೆ’ ನಿರ್ಮಾಣವಾಗಲಿದೆ.
ಗುಜರಾತಿನ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿಯವರ ಕಲ್ಪನೆಯಲ್ಲಿ 2010ರಲ್ಲಿ ಬೀಜಾಂಕುರವಾದ ಏಕತಾ ಪ್ರತಿಮೆಯ ನಿರ್ಮಾಣಕ್ಕೆ ಸರ್ದಾರ ಪಟೇಲರ ಪುಣ್ಯತಿಥಿ ಅಕ್ಟೋಬರ 31ರಂದು ಶಿಲಾನ್ಯಾಸ ನೆರವೇರಿತು. ಭಾರತ ಕಂಡ ಒಬ್ಬ ಶ್ರೇಷ್ಠ ನಾಯಕ ಮುತ್ಸದ್ದಿ ಸರ್ದಾರ ಪಟೇಲರ ಪ್ರತಿಮೆ ಸ್ಥಾಪನೆ ಕಾರ್ಯದೊಂದಿದೆ ರಾಷ್ಟ್ರೀಯ ಏಕತೆಯನ್ನು ಪುನ: ಜಾಗೃತಗೊಳಿಸುವ ಆಂದೋಲನ ಅನೇಕ ವಿಶೇಷತೆಗಳನ್ನು ಒಳಗೊಂಡಿದೆ.
- ನರ್ಮದೆಯ ಹಿನ್ನೀರನಲ್ಲಿ ಗರುಡೇಶ್ವರ ಕಿರು ಆಣೆಕಟ್ಟೆಯಿಂದ 3.2ಕಿಮೀ ಅಂತರದಲ್ಲಿ ನಿರ್ಮಾಣವಾವಾಗುತ್ತಿರವ ಸರ್ದಾರ ಪಟೇಲರ 182 ಮೀ ಎತ್ತರದ ಪ್ರತಿಮೆ ಪ್ರಪಂಚದಲ್ಲೇ ಅತೀ ಎತ್ತರದ ಮೂರ್ತಿಯಾಗಲಿದೆ. ಪ್ರತಿಮೆಯ ಎತ್ತರವೇ ಏಳು ಮಹಡಿಯಷ್ಟಾಗಲಿದ್ದು, 56ಮೀ ಎತ್ತರದ ತಳಮನೆಯೂ ಸೇರಿದಂತೆ ಒಟ್ಟೂ 240ಮೀ.ನ (787ಫೂಟ್) ಉನ್ನತ ಸ್ಮಾರಕ ನಿರ್ಮಾಣವಾಗಲಿದೆ. ಬೃಹತ್ ಏಕತಾ ಪ್ರತಿಮೆಯು ಅಮೇರಿಕದ ಸ್ಟಾಚ್ಯೂ ಆಫ್ ಲಿಬೆರ್ಟಿಯ ಎರಡು ಪಟ್ಟು, ಬ್ರೆಜಿಲ್‍ನ ಯೇಸು ಕ್ರಿಸ್ತನ ಪ್ರತಿಮೆಯ 5 ಪಟ್ಟು, ಜಪಾನಿನ ಉಶಿಕು ದೈಬುಟ್ಸು ಬುದ್ಧನ ಪ್ರತಿಮೆಯ ಒಂದೂವರೆ ಪಟ್ಟು ಮತ್ತು ಚೈನಾದ ಸ್ಪ್ರಿಂಗ ದೇವಾಲಯದ ಬುದ್ಧನ ಪ್ರತಿಮೆಗಿಂತಲೂ ಹಿರಿದಾಗಲಿದೆ.
- ಸ್ಮಾರಕದ ಸುತ್ತಲಿನ ಪ್ರದೇಶವನ್ನು ವಿಶ್ವದರ್ಜೆಯ ಪ್ರವಾಸಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಸ್ಮಾರಕಕ್ಕೆ ಸಂಪರ್ಕ ಸೇತುವೆ, ನೆಲಮಹಡಿಯಲ್ಲಿ ಭಾರತದ ಇತಿಹಾಸ ಹಾಗೂ ಸರ್ದಾರ ಪಟೇಲರ ಜೀವನವನ್ನು ಪ್ರತಿಬಿಂಬಿಸುವ ಸಂಗ್ರಹಾಲಯ, ದೃಶ್ಯ ಮತ್ತು ಶೃವಣ ಪ್ರದರ್ಶನ ಗ್ಯಾಲರಿ, ಲೇಸರ್, ಬೆಳಕು ಮತ್ತು ಧ್ವನಿ ಪ್ರದರ್ಶನ, ಮನರಂಜನಾ ಪಾರ್ಕಗಳನ್ನು ನಿರ್ಮಾಣ ಮಾಡಲಾಗುವುದು. ಸಾತ್ಪುರ ಬೆಟ್ಟ ಶ್ರೇಣಿಗಳ ನಡುವಿನ ಸರ್ದಾರ ಸರೋವರ ಆಣೆಕಟ್ಟಿಯ ರಮಣೀಯ ದೃಶ್ಯದ ವೀಕ್ಷಣೆಯ ಸಲುವಾಗಿ 400ಫೂಟ ಎತ್ತರದ ದರ್ಶನಾ ಗ್ಯಾಲರಿಯನ್ನೂ ಸಹ ನಿರ್ಮಿಸಲಾಗುವುದು.
- ಸ್ಮಾರಕಕ್ಕೆ ಹೊಂದಿಕೊಂಡಂತೆ ಸರ್ದಾರ ಪಟೇಲರ ಪ್ರಿಯ ವಿಷಯಗಳಾಗಿದ್ದ ಗ್ರಾಮ ವಿಕಾಸ, ಬುಡಕಟ್ಟು ಅಭಿವೃದ್ಧಿ, ಕೃಷಿವಿಕಾಸ, ಜಲಸಂವರ್ಧನೆ, ಸುಶಾಸನ ಮುಂತಾದ ವಿಷಯಗಳ ಸಂಶೋಧನಾ ಮತ್ತು ಶಿಕ್ಷಣ ಕೇಂದ್ರಗಳನ್ನೂ ತೆರೆಯಲಾಗುವುದು.
- ಏಕತಾ ಪ್ರತಿಮೆಯ ನಿರ್ಮಾಣ ಕೇವಲ ಸರ್ಕಾರಿ ಖಜಾನೆಯ ಕಾರ್ಯಕ್ರಮವಾಗಬಾರದು; ಇದು ದೇಶದ ಮೂಲೆಮೂಲೆಯ ಎಲ್ಲ ದೇಶಭಕ್ತ ನಾಗರಿಕರ ಪಾಲ್ಗೊಳ್ಳುವಿಕೆಯಲ್ಲಿ ಸಾಕಾರಗೊಳ್ಳಬೇಕು ಎನ್ನುವುದು ನರೇಂದ್ರ ಮೋದಿಯವರ ಕನಸು. ಇದಕ್ಕಾಗಿ ದೇಶದ ಆವಶ್ಯಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಮತ್ತು ಪ್ರಕಲ್ಪವನ್ನು ಕಾರ್ಯಗತಗೊಳಿಸುವ ಸಲುವಾಗಿ ಶ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ ರಾಷ್ಟ್ರೀಯ ಏಕತಾ ಟ್ರಸ್ಟನ್ನು ಘಟಿಸಲಾಗಿದೆ. ದೇಶದ ಏಕತೆಯ ಸಂಕೇತವಾಗಿ ನಿರ್ಮಾಣಗೊಳ್ಳುತ್ತಿರುವ ಪ್ರತಿಮೆಯ ಯೋಜನೆಯನ್ನು ಕಾರ್ಯಗತಗೊಳಿಸಲು ವಿಶ್ವದ ಶ್ರೇಷ್ಠ ನಿರ್ಮಾಣ ತಂತ್ರಜ್ಞರನ್ನು ನೇಮಿಸಲಾಗಿದೆ.
- ‘ಲೋಹಸಂಗ್ರಹ’ ಅಭಿಯಾನದ ಅಂಗವಾಗಿ ದೇಶದ ಕೋಣೆಕೋಣೆಯ 7ಲಕ್ಷ ಗ್ರಾಮಗಳ ರೈತರಿಂದ ಕೃಷಿಯಲ್ಲಿ ಬಳಸಿದ ಆಯುಧದ ಲೋಹದ ತುಣುಕನ್ನು ಪಡೆಲಾಗುವುದು. ಸಂಗ್ರಹವಾದ ಲೋಹವನ್ನು ಕರಗಿಸಿ ಪ್ರತಿಮೆಯ ನಿರ್ಮಿತಿಯಲ್ಲಿ ಬಳಸಲಾಗುವುದು. ಜೊತೆಗೆ ದೇಶದ ಪ್ರತೀ ಗ್ರಾಮದಿಂದ ಹಿಡಿಯಷ್ಟು ಮಣ್ಣನ್ನು ತಂದು ಸಂಗ್ರಹಾಲಯದಲ್ಲಿ ಸಂಗ್ರಹಿಸಿಡಲಾಗುವುದು. ಲೋಹಸಂಗ್ರಹ ಕಾರ್ಯಕ್ಕಾಗಿ ಈಗಾಗಲೇ ಏಕತೆಯ ಸಂದೇಶ ಹೊತ್ತ ಸುಮಾರು 700 ಟ್ರಕ್‍ಗಳು ದೇಶದ ಕೋಣೆಕೋಣೆಯತ್ತ ತೆರಳಿವೆ. ಅಲ್ಲದೇ ದೇಶದ ಪ್ರತೀ ಗ್ರಾಮದ ಮುಖ್ಯಾ, ಸರಪಂಚ್ ಅಥವಾ ಅಧ್ಯಕ್ಷನ ಫೋಟೋ ಮತ್ತು ಗ್ರಾಮದ ಕಿರುಚರಿತ್ರೆಯುಳ್ಳ ಒಂದು ಬೃಹತ್ ಡಿಜಿಟಲ್ ಕೊಲಾಜ್‍ನ್ನು ರಚಿಸಲಾಗುವುದು. ಇವೆಲ್ಲವನ್ನು ಸಂಗ್ರಹಾಲಯದಲ್ಲಿ ಸಾರ್ವಜನಿಕ ಪ್ರದರ್ಶಕ್ಕಿಡಲಾಗುವುದು. ಅಂದರೆ ಪ್ರತಿಮೆಯ ನಿರ್ಮಾಣದೊಂದಿಗೆ ಇಡೀ ದೇಶದ ಗ್ರಾಮ ಗ್ರಾಮವನ್ನು ಬೆಸೆಯುವ ಶ್ರೇಷ್ಠ ಕಾರ್ಯವೂ ಆಂದೋಲನದ ಭಾಗವಾಗಿದೆ.
- ಏಕತಾ ಪ್ರತಿಮಾ ಆಂದೋಲನದ ಅಂಗವಾಗಿ ಸರ್ದಾರ ಪಟೇಲರ ಜನ್ಮದಿನ ಡಿಸೆಂಬರ 15ರಂದು 565ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕತಾ ಓಟ(Run for Unity) ವನ್ನು ಆಯೋಜಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಸ್ಥಳಗಳ 40 ಲಕ್ಷಕ್ಕೂ ಹೆಚ್ಚು ಓಟಗಾರರು ತಮ್ಮ ಹೆಸರು ನೋಂದಾಯಿಸಿ ಪಾಲ್ಗೊಂಡ ಏಕತಾ ಓಟ ಏಕಕಾಲದಲ್ಲಿ ಒಂದು ಉದ್ಧೇದಿಂದ ಓಟ ನಡೆದ ವಿಶ್ವದಲ್ಲೇ ಅತಿ ದೊಡ್ಡ ಕಾರ್ಯಕ್ರಮವಾಗಿ ದಾಖಲೆ ಬರೆಯಿತು.
- ಶಾಲೆ ಕಾಲೇಜು ವಿದ್ಯಾರ್ಥಿಗಳನ್ನೂ ಏಕತೆಯ ಆಂದೋಲನದಲ್ಲಿ ಬೆಸೆಯುವ ಉದ್ಧೇಶದಿಂದ ‘ರೈಟ್ ಫಾರ್ ಯುನಿಟಿ’ ಎನ್ನುವ ಪ್ರಭಂಧ ಮತ್ತು ಘೋಷಣಾ ರಚನೆಯ ಸ್ಪರ್ಧೆಯನ್ನು ವಿವಿಧ ಹಂತಗಳಲ್ಲಿ ದೇಶದಾದ್ಯಂತ ನಡೆಸಲಾಗುವುದು.
- ಆಡಳಿತ ಸುಧಾರಣೆಯ ನಿಟ್ಟಿನಲ್ಲಿ ಸುಶಾಸನದ ಬೇಡಿಕೆಗಾಗಿ ಸಹಿ ಸಂಗ್ರಹ ಅಭಿಯಾನ ‘ಇ-ಸುರಾಜ’ನ್ನು ನಡೆಸಲಾಗುವುದು. 2 ಕೋಟಿಗೂ ಅಧಿಕ ಜನರು ಪಾಲ್ಗೊಳ್ಳುವ ಈ ಅಭಿಯಾನ ವಿಶ್ವದಲ್ಲೇ ಅತೀ ದೊಡ್ಡ ಸಹಿ ಸಂಗ್ರಹ ಅಭಿಯಾನವಾಗಲಿದೆ.
ಇವಿಷ್ಟೇ ಅಲ್ಲದೇ ಸ್ಥಳೀಯ ಸಭೆಗಳು, ನಾಯಕತ್ವ ಅಭಿಯಾನ, ಸಂಶೋಧನೆ ಮತ್ತು ಶಿಕ್ಷಣ, ಪರಿಸರ ಕಾಳಜಿ ಇನ್ನೂ ಹತ್ತು ಹಲವು ಆಯಾಮಗಳ ಸಮಗ್ರ ಯೋಜನೆ ಏಕತಾ ಪ್ರತಿಮಾ ಆಂದೋಲನದ ಅಡಿಯಲ್ಲಿ ನಡೆಯಲಿದೆ.
ಸರ್ದಾರ ಪಟೇಲರ ಬೃಹತ ಪ್ರತಿಮೆಯ ನಿರ್ಮಿತಿಯಲ್ಲಿ ಇಡೀ ದೇಶದ ಜನರನ್ನು ಜೋಡಿಸುವುದು ಮತ್ತು ರಾಷ್ಟ್ರೈಕ್ಯದ ಭಾವವನ್ನು ಜಾಗೃತಗೊಳಿಸುವುದು ಭವ್ಯ ಭಾರತದ ಕನಸು ಕಂಡ ನಾಯಕನಿಗೆ ಸಲ್ಲಿಸುವ ಸೂಕ್ತ ಶೃದ್ಧಾ ಸುಮನ. ವಿಶ್ವದ ಭೂಪಟದಲ್ಲಿ ಗೌರವನೀಯ ಸ್ಥಾನ ಪಡೆಯುವ ಏಕತಾ ಪ್ರತಿಮೆ ಭಾರತದ ಶ್ರೇಷ್ಠ ಇತಿಹಾಸ ಮತ್ತು ಮಹಾಪುರುಷರ ಆದರ್ಶ ಜೀವನದ ಪ್ರತೀಕವಾಗಲಿದೆ. ಸ್ಮಾರಕವು ನಮ್ಮ ನಾಡಿನ ಚರಿತ್ರೆಯನ್ನು ವಿಶ್ವದೆದುರಲ್ಲಿ ತೆರೆದಿಡಲಿದೆ. ಸ್ಟಾಚ್ಯೂ ಆಫ್ ಯುನಿಟಿ ವಿಶ್ವದ ವಿಸ್ಮಯ ಪ್ರವಾಸೀ ಕೇಂದ್ರವಾಗುವುದರ ಜೊತೆಗೆ ಭಾರತೀಯರಿಗೆ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಪ್ರೇರಣಾ ಸ್ರೋತವಾಗಲಿದೆ.
ಸರ್ದಾರ ಪಟೇಲರ ಭವ್ಯ ಸ್ಮಾರಕವನ್ನು ನಿರ್ಮಿಸಿ ಶೃದ್ಧಾಸುಮನವನ್ನು ಅರ್ಪಿಸುವುದರ ಜೊತೆಗೆ ಇಡೀ ದೇಶವನ್ನು ರಾಷ್ಟ್ರೀಯ ಭಾವೈಕ್ಯದಲ್ಲಿ ಬೆಸೆಯುವ ಕನಸು ಕಂಡವರು ಗುಜರಾತಿನ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿ. ಏಕತಾ ಪ್ರತಿಮೆಯ ನಿರ್ಮಾಣಕ್ಕೆ ಒಂದು ರಾಷ್ಟ್ರೀಯ ಆಂದೋಲನದ ರೂಪ ನೀಡಿ ಜನರಲ್ಲಿ ದೇಶಭಕ್ತಿ ಮತ್ತು ಸ್ವಾಭಿಮಾನವನ್ನು ಎಬ್ಬಿಸುವ ಕಲ್ಪನೆ ಶ್ರೀ ಮೋದಿಯವರ ದೂರದೃಷ್ಟಿಯ ಪ್ರತೀಕವಾಗಿದೆ. ಜೊತೆಗೆ ಪ್ರತಿಮೆಯ ಎತ್ತರದಿಂದ ಹಿಡಿದು, ತತ್ಸಂಭಂಧಿತ ವ್ಯವಸ್ಥೆಗಳು, ಸಂಸ್ಥೆಗಳು ಮತ್ತು ಯೋಜನೆಗಳ ಸಮಗ್ರವಾದ ಬೃಹತ್ ಕಲ್ಪನೆ ಅವರ ಬುದ್ಧಿಯ ವೈಶಾಲ್ಯವನ್ನು ಬಿಂಬಿಸುತ್ತದೆ.
No comments:
Post a Comment