Sunday, December 29, 2013

ಜನವರಿ 1 - ನಮಗಿದು ಹೊಸವರ್ಷವೇ? ಅರ್ಥಪೂರ್ಣ ಹೊಸವರ್ಷವನ್ನು ಆಚರಿಸೋಣ

(ಪ್ರಕಟಿತ: ಪುಂಗವ 1/1/2014)
        
       ದಿನಾಂಕ ಬದಲಾಗುವುದು ಮಧ್ಯರಾತ್ರಿ ಹನ್ನೆರಡು ಘಂಟೆಗಾದರೂ ಹೊಸದಿನ ಪ್ರಾರಂಭವಾಗುವುದು ಸೂರ್ಯೋದಯದೊಂದಿಗೇ. ಯಾಕೆಂದರೆ ಪ್ರಕೃತಿಯೊಂದಿಗೆ ಜೋಡಿಕೊಂಡಿರುವ ನಮ್ಮ ಬದುಕಿನ ವ್ಯವಹಾರಗಳು ಹೆಚ್ಚು ಅರ್ಥಪೂರ್ಣ. ಹಾಗಾಗಿ ಸೂರ್ಯ ಚಂದ್ರ ಗ್ರಹಗಳ ಚಲನೆಯನ್ನಾಧರಿಸಿದ ಭಾರತೀಯ ಕಾಲನಿರ್ಣಯ ಪದ್ಧತಿಯು ಅಧಿಕ ವೈಜ್ಞಾನಿಕವಾಗಿದೆ. ನಮ್ಮ ಪಂಚಾಂಗವು ನಿಖರವಾಗಿ ಋತುಗಳ ಬದಲಾವಣೆಯನ್ನು ನಿರ್ಣಯಿಸುತ್ತದೆ. ಆದ್ದರಿಂದಲೇ ಋತುಗಳಿಗೆ ಅನುಗುಣವಾಗಿ ಆಚರಿಸಲ್ಪಡುವ ನಮ್ಮ ಹಬ್ಬಗಳು ಮತ್ತು ಅವುಗಳ ಸುತ್ತ ಬೆಳೆದಿರುವ ಆಚರಣೆಗಳು, ತಿಂಡಿತಿನಿಸು, ಕಲೆ, ಉಡುಗೆಗಳಿಗೆ ವಿಶಿಷ್ಟವಾದ ಮಹತ್ವವಿದೆ.

        ಈ ದೃಷ್ಟಿಯಲ್ಲಿ ಕಂಡಾಗ ವಸಂತ ಋತುವಿನ ಎಳೆಬಿಸಿಲಿನಲ್ಲಿ ಹೊಸಚಿಗುರು ಕಂಗೊಳಿಸುವ ಸಮಶೀತೋಷ್ಣ ಉಲ್ಲಸಿತ ವಾತಾವರಣ ಭಾರತದ ಮಟ್ಟಿಗೆ ಹೊಸವರ್ಷವಾಗಿರುವುದರ ಹಿಂದಿನ ವೈಜ್ಞಾನಿಕ ಚಿಂತನೆ ಸ್ಪಷ್ಟವಾಗುತ್ತದೆ. ಹಾಗೆಯೇ ದೇಶದ ವಿವಿಧ ಪ್ರದೇಶಗಳಲ್ಲಿನ ವೈವಿಧ್ಯಮಯ ಆಚರಣೆಗಳನ್ನು ಗಮನಿಸಿದರೆ ನಮ್ಮ ಸಂಸ್ಕøತಿಯ ಹೊಸವರ್ಷದ ಕಲ್ಪನೆ ನಿಸರ್ಗದ ನಿಯಮಗಳಿಗೆ ಎಷ್ಟು ಹತ್ತಿರವಾಗಿತ್ತು ಎನ್ನುವುದನ್ನು ಕಾಣಬಹುದು. 


ಸಾಮಾನ್ಯವಾಗಿ ಚೈತ್ರ – ವೈಶಾಖ ಮಾಸಗಳಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಭಿನ್ನ ಭಿನ್ನ ಹೆಸರುಗಳಿಂದ ಆಚರಿಸಲ್ಪಡುವ ನವವರ್ಷ ಪರ್ವಗಳು:

ಯುಗಾದಿ : ದಕ್ಷಿಣ ಭಾರತದ ಬಹುಭಾಗಗಳಲ್ಲಿ, ವಿಶೇಷವಾಗಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಆಚರಿಸಲಾಗುತ್ತದೆ. ಬೆಲ್ಲದೊಂದಿಗೆ ಬೇವನ್ನೂ ಸೇವಿಸುವ ಈ ಹಬ್ಬ ಹೊಸ ಪಂಚಾಂಗದೊಂದಿಗೆ ಹೊಸ ಯುಗಾರಂಭವನ್ನು ಸೂಚಿಸುತ್ತದೆ.

ಗುಡಿ ಪಡವಾ: ಮಹಾರಾಷ್ಟ್ರದಲ್ಲಿ ಆಚರಿಸಲ್ಪಡುವ ಗುಡಿ ಪಡವಾ ಚಂದ್ರನ ಪ್ರಕಾಶಮಾನವಾದ ಹಂತದ ಮೊದಲ ದಿನವನ್ನು ಸುಚಿಸುತ್ತದೆ. ಈ ಹಬ್ಬದಲ್ಲಿ ಬಿದಿರಗೆ ಹಳದಿ ಬಣ್ಣದ ಬಟ್ಟೆ ಕಟ್ಟಿ ಮೇಲೆ ಕಂಚಿನ ಕಲಶವಿಟ್ಟ ‘ಗುಡಿ’ ಎಂದು ಕರೆಯುವ ಧ್ವಜವನ್ನು ಹಾರಿಸಲಾಗುತ್ತದೆ. ಈ ಧ್ವಜವು ಮರಾಠಾ ರಾಜರ ವಿಜಯದ ಸಂಕೇತವೂ ಹೌದು.

ವಸಂತ ಪಂಚಮಿ: ವಿಶೇಷವಾಗಿ ಪೂರ್ವೋತ್ತರ ಭಾರತದಲ್ಲಿ ಆಚರಿಸಲಾಗುವ ವಸಂತ ಪಂಚಮಿ ಋತುಚಕ್ರದ ಬದಲಾವಣೆಯನ್ನು ಬಿಂಬಿಸುತ್ತದೆ.

ರೊಂಗಾಲಿ ಬಿಹು: ಆಸ್ಸಾಂ ಮತ್ತು ಪಶ್ಚಿಮ ಬಂಗಾಲದ ಕೆಲವು ಪ್ರದೇಶಗಳಲ್ಲಿ ಆಚರಿಸುವ ಸೌರಮಾನ ಹೊಸವರ್ಷ.
ಚೇಟಿ ಚಾಂದ: ಸಿಂಧಿ ಪ್ರಾಂತದಲ್ಲಿ ಆಚರಿಸಲಾಗುವ ನವವರ್ಷ. ಇದು ಶ್ರೇಷ್ಠ ಸಿಂಧಿ ಸಂತ ಝೂಲೇಲಾಲರ ಹುಟ್ಟಿದ ದಿನವೂ ಹೌದು.

ಬೈಸಾಖಿ: ಉತ್ತರ ಭಾರತ ಅದರಲ್ಲೂ ವಿಷೇಶವಾಗಿ ಸಿಖ್ಖ ಸಮುದಾಯದವರು ಆಚರಿಸುವ ಈ ಪರ್ವವು ಖಾಲ್ಸಾ ಪಂಥದ ಪ್ರವರ್ತಕ ಗುರು ಗೋವಿಂದರ ಕೊಡುಗೆಗಳ ಸ್ಮರಣೆಯೂ ಹೌದು.

ವಿಶು: ಕೇರಳದಲ್ಲಿ ಆಚರಿಸಲಾಗುವ ಹೊಸವರ್ಷ ವಿಶು ಹಬ್ಬದಲ್ಲಿ ಹೂವು, ಹಣ್ಣು, ತರಕಾರಿ, ಚಿನ್ನ ಬೆಳ್ಳಿಯ ನಾಣ್ಯಗಳು ಹಾಗೂ ದೀಪಗಳಿಂದ ಮಾಡುವ ಅಲಂಕಾರವು ವಿಶಿಷ್ಟವಾಗಿದೆ.

ಪದಂಡು: ತಮೀಳು ಹೊಸವರ್ಷ ಪದಂಡುವನ್ನು ತಮೀಳುನಾಡು, ಶ್ರೀಲಂಕಾಗಳಲ್ಲಷ್ಟೇ ಅಲ್ಲದೇ ಮಲೇಷಿಯ, ಸಿಂಗಾಪುರ, ಮಾರಿಶಸ್ ದೇಶಗಳಲ್ಲೂ ಆಚರಿಸಲಾಗುತ್ತದೆ.

ನವ್ರೇಹ: ಕಾಶ್ಮೀರೀ ಹೊಸವರ್ಷ ‘ನವ್ರೇಹ್’ನ ಉಲ್ಲೇಖ ರಾಜತರಂಗಿಣಿ, ನಿಲ್ಮತ ಪುರಾಣ ಮುಂತಾದ ಗ್ರಂಥಗಳಲ್ಲೂ ಕಂಡುಬರುತ್ತದೆ.

ಇವಿಷ್ಟೇ ಅಲ್ಲದೇ ಭಾರತದ ಇನ್ನೂ ಅನೇಕ ಪ್ರದೇಶಗಳಲ್ಲಿ ಭಿನ್ನ ಭಿನ್ನ ಹೆಸರುಗಳಲ್ಲಿ ಹೊಸವರ್ಷಾಚರಣೆ ನಡೆಯುತ್ತದೆ. ಭಾರತದ ರಾಷ್ಟ್ರೀಯ ಕ್ಯಾಲೆಂಡರ್ ಆದ ಶಕ ಕ್ಯಾಲೆಂಡರ ಪ್ರಕಾರವೂ ಹೊಸ ವರ್ಷದ ಪ್ರಾರಂಭವೂ ಕೂಡ ಚೈತ್ರ ಮಾಸವಾಗಿದೆ (ಮಾರ್ಚ 22ಕ್ಕೆ, ಅಧಿಕ ವರ್ಷದಲ್ಲಿ ಮಾರ್ಚ 21).

        ನಮ್ಮಲ್ಲಿರುವ ಹೊಸ ವರ್ಷದ ಆಚರಣೆಯ ವೈಶಿಷ್ಟ್ಯಗಳನ್ನು ಕಂಡಾಗ ಗ್ರೇಗೋರಿಯನ್ ಕ್ಯಾಲೆಂಡರಿನ ಜನವರಿ ಒಂದು ಭಾರತದ ಮಟ್ಟಿಗೆ ಏಕೆ ಹೊಸವರ್ಷದ ದಿನವಾಗಬೇಕು? ಎನ್ನುವ ಪ್ರಶ್ನೆ ಏಳದೇ ಇರುವುದಿಲ್ಲ. ಮಾಧ್ಯಮ ಹಾಗೂ ಮಾರುಕಟ್ಟೆಗಳಲ್ಲಿ ವ್ಯಾಪಕ ಪ್ರಚಾರ ಪಡೆದುಕೊಳ್ಳುತ್ತಿರುವ ಈ Happy New Year ಉದ್ಯಮದ ಹಿಂದೆ ವ್ಯಾಪಾರೀ ಹಿತಾಸಕ್ತಿಗಳು ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿವೆ. ನ್ಯೂ ಇಯರ್ ಆಚರಣೆಯ ಹೆಸರಿನಲ್ಲಿ ನಡೆಯುವ ಮಧ್ಯರಾತ್ರಿಯ ಮದ್ಯಾರಾಧನೆಗಳು, ವಿಕಾರ ಅರಚಾಟ ಚೀರಾಟಗಳ ಮೂಲಕ ಹೊಸವರ್ಷವನ್ನು ಸ್ವಾಗತಿಸುವ ವಿಕೃತ ಪದ್ಧತಿಗಳು ವರ್ಷದಿಂದ ವರ್ಷಕ್ಕೆ ಬೆಳೆದು ಬರುತ್ತಿವೆ. ಇಷ್ಟೇ ಅಲ್ಲದೇ ಹೊಸವರ್ಷದ ಹೆಸರಿನಲ್ಲಿ ಜನವರಿ ಒಂದರಂದು ದೇವಸ್ಥಾನಗಳಲ್ಲಿ ವಿಷೇಶ ಪೂಜೆಗಳನ್ನು ಏರ್ಪಡಿಸುವ ಸಂಪ್ರದಾಯಗಳೂ ಬೆಳೆದುಬರುತ್ತಿವೆ. ಶ್ರೇಷ್ಠ ಸಾಂಸ್ಕøತಿಕ ಹಿನ್ನೆಲೆಯುಳ್ಳ ಹಬ್ಬ ಹರಿದಿನಗ

ಳ ಆಚರಣೆಗಳು ಆನಂದದ ಜೊತೆಗೆ ಸಂಸ್ಕಾರವನ್ನೂ ನೀಡಿ ಮಾನವ ಬದುಕನ್ನು ಸಮೃದ್ಧಗೊಳಿಸುವುವು.  ಮನೋರಂಜನಾ ಉದ್ರೇಕ ಮತ್ತು ಅಂಧಾನುಕರಣೆಯೇ ಮೂಲವಾಗಿರುವ Happy New Year ಆಚರಣೆ ಯಾವ ಉತ್ತಮ ಸಂಸ್ಕಾರಗಳನ್ನು ನೀಡಬಹುದು? ಎಂತಹ ಸಂಸ್ಕøತಿಯನ್ನು ಸಮೃದ್ಧಗೊಳಿಸಬಲ್ಲದು?



ಹೀಗಿರಲಿ ಹೊಸವರ್ಷಾಚರಣೆ

ನಮ್ಮ ಹೊಸವರ್ಷಗಳು ಭಾರತೀಯ ಪಂಚಾಂಗ ಮತ್ತು ಸ್ಥಳೀಯ ಆಚರಣೆಗಳಂತೆ ನಡೆಯಲಿ.  

ಹೊಸವರ್ಷದ ಶುಭಾಶಯ ವಿನಿಮಯಗಳು ಯುಗಾದಿ, ಗುಡಿ ಪಡವಾ, ವಸಂತ ಪಂಚಮಿ, ವಿಶು, ಪದಂಡು ಮುಂತಾದ ಹಬ್ಬಗಳಂದು ನಡೆಯಲಿ. 

ದೇವಸ್ಥಾನಗಳಲ್ಲಿ ಭಾರತೀಯ ಹೊಸವರ್ಷದಂದು ವಿಶೇಷ ಪೂಜೆಗಳು ನಡೆಯಲಿ. 

ನಮ್ಮ ಹೊಸವರ್ಷದ ಆಚರಣೆಯಲ್ಲಿ ಭಾರತೀಯ ಜೀವನಶೈಲಿಗೆ ಪೂರಕವಾಗುವಂತಹ ಹಬ್ಬದ ವಿಷೇಶ ತಿಂಡಿ ತಿನಿಸುಗಳು, ಉಡುಗೆ ತೊಡುಗೆಗಳೂ, ಅಲಂಕಾರಗಳು ಜಾಗ ಪಡೆಯಲಿ.


1 comment:

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...