Sunday, December 29, 2013

ಭ್ರಷ್ಟರೇ ಎಚ್ಚರ! ಅಸ್ತಿತ್ವಕ್ಕೆ ಬರಲಿದೆ ಲೋಕಪಾಲ

(ಪ್ರಕಟಿತ: ಪುಂಗವ ,1/1/2014)


          1968ರಲ್ಲಿ ಮೊದಲ ಬಾರಿ ಸಂಸತ್ತಿನಲ್ಲಿ ಮಂಡಿಸಲ್ಪಟ್ಟು ನಲವತ್ತೆರಡು ವರ್ಷಗಳ ಕಾಲ ಅನೇಕ ಆವೃತ್ತಿಗಳನ್ನು ಕಂಡ ಲೋಕಪಾಲ ಮಸೂದೆ ಕೊನೆಗೂ ಸಂಸತ್ತಿನ ಪರೀಕ್ಷೆಯಲ್ಲಿ ತೇರ್ಗಡೆಯಾಗಿದೆ. ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ನೀಡುವ ದೂರುಗಳ ವಿಚಾರಣೆ ನಡೆಸುವ ಸಲುವಾಗಿ ಕೇಂದ್ರದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆಗಳನ್ನು ನೇಮಿಸುವ ಸಲುವಾಗಿ ಮಂಡಿಸಲಾಗಿದ್ದ ‘ಲೋಕಪಾಲ ಮತ್ತು ಲೋಕಾಯುಕ್ತ ಕಾಯಿದೆ 2011’ ಮಸೂದೆಯನ್ನು ಲೋಕಸಭೆ ಡಿಸೆಂಬರ್ 2011ರಲ್ಲಿ ಪಾಸುಮಾಡಿತ್ತು. ಬಳಿಕ ರಾಜ್ಯಸಭೆಯಲ್ಲಿ ಕೆಲವು ಮಹತ್ತ್ವಪೂರ್ಣ ತಿದ್ದುಪಡಿಗಳ ಸಂಭಂಧದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ನಡೆದ ಜಗ್ಗಾಟದಿಂದ ಬಿಕ್ಕಟ್ಟಿನಲ್ಲಿ ಸಿಕ್ಕಿದ್ದ ಮಸೂದೆಯನ್ನು ರಾಜ್ಯಸಭೆಯ ಆಯ್ಕೆ ಸಮೀತಿಯು (select committee) ಪರಿಷ್ಕರಿಸಿತು. ಪ್ರಸ್ತುತ ಬದಲಾದ ರಾಜಕೀಯ ಸನ್ನಿವೇಶ, ಸಮೀಪಿಸುತ್ತಿರುವ ಲೋಕಸಭೆಯ ಚುನಾವಣೆಯ ಮತ್ತು ಬಿಸಿಯೇರುತ್ತಿರುವ ಸಾರ್ವಜನಿಕ ಹೋರಾಟದ ಅನಿವಾರ್ಯ ಸನ್ನಿವೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ತನ್ನ ಪಟ್ಟನ್ನು ಸಡಿಲಿಸಿದ್ದರಿಂದ ಮಸೂದೆಯು ಎರಡೂ ಸದನಗಳಲ್ಲಿ ತೇರ್ಗಡೆಯಾಗಿ ಲೋಕಪಾಲ ಕಾನೂನು ಜಾರಿಗೆ ಬರಲು ಸಾಧ್ಯವಾಯಿತು.

        ಲೋಕಪಾಲ ಸಂಸ್ಥೆಯ ಮೂಲ ಕಲ್ಪನೆ ಸ್ಕಾಂಡಿನೇವಿಯನ್ ದೇಶಗಳಾದ ಫಿನ್‍ಲ್ಯಾಂಡ್, ನಾರ್ವೇ, ಸ್ವೀಡನ ಮೊದಲಾದ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ‘ಒಂಬುಡ್ಸಮನ್’ನಿಂದ ಎರವಲು ಪಡೆದದ್ದಾಗಿದೆ. ಸ್ವೀಡಿಷ್ ಭಾಷೆಯ ಶಬ್ದವಾದ ‘ಒಂಬುಡ್ಸಮನ್’ ಸರ್ಕಾರಿ ನೌಕರರ ವಿರುದ್ಧ ಸಾರ್ವಜನಿಕರು ನೀಡುವ ದೂರುಗಳನ್ನು ವಿಚಾರಣೆ ನಡೆಸುವ ಅಧಿಕಾರಿಯನ್ನು ಸೂಚಿಸುತ್ತದೆ. ಸ್ವೀಡನ್ ದೇಶದಲ್ಲಿ 1809ರಿಂದಲೇ ಒಂಬುಡ್ಸಮನ್ ಅಸ್ತಿತ್ವದಲ್ಲಿದೆ. ಭಾರತದಲ್ಲಿ 1960ರ ದಶಕದಲ್ಲೇ ಆಡಳಿತದಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸುವ ಸಲುವಾಗಿ ಒಂದು ವ್ಯವಸ್ಥೆಯನ್ನು ರೂಪಿಸಬೇಕಾದ ಅಗತ್ಯ ವ್ಯಕ್ತವಾಗಿತ್ತು. ಸಂಸದರಾಗಿದ್ದ ಎಲ್ ಎಮ್ ಸಿಂಘ್ವಿಯವರು 1963ರಲ್ಲಿ ಲೋಕಪಾಲದ ಕಲ್ಪನೆಯನ್ನು ಮುಂದಿಟ್ಟರು. ಆನಂತರ ನೇಮಕವಾದ ಮೋರಾರ್ಜಿ ದೇಸಾಯಿ ನೇತೃತ್ವದ ಆಡಳಿತ ಸುಧಾರಣಾ ಸಮೀತಿಯು ತನ್ನ ವರದಿಯಲ್ಲಿ ಲೋಕಪಾಲ ನೇಮಕಕ್ಕೆ ಶಿಪಾರಸ್ಸು ಮಾಡಿತು. ಅದರಂತೆ 1968ರಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಲೋಕಪಾಲ ಮಸೂದೆಯನ್ನು ಮಂಡಿಸಿ ಪಾಸುಮಾಡಲಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಮಸೂದೆಯು ಪಾಸಾಗುವುದರ ಒಳಗೆ ಲೋಕಸಭೆಯ ಕಾರ್ಯಾವಧಿ ಕೊನೆಗೊಂಡು ಮೊದಲ ಪ್ರಯತ್ನ ಅಲ್ಲಿಗೆ ಕೊನೆಗೊಂಡಿತು. ಅಲ್ಲಿಂದ ಇತ್ತೀಚಿನ 2008ರ ಮಸೂದೆಯವರೆಗೆ ಒಟ್ಟೂ ಹತ್ತು ಬಾರಿ ಲೋಕಪಾಲ ಕಾನೂನನ್ನು ತರುವ ಪ್ರಯತ್ನಗಳು ನಡೆದಿವೆ. ಪ್ರತಿಯೊಂದು ಮಸೂದೆಯು ಒಂದಲ್ಲ ಒಂದು ರಗಳೆಯಿಂದಾಗಿ ಸಂಸತ್ತಿನ ಸಮೀತಿಗಳಲ್ಲಿ ಕೊಳೆತು ಕೊನೆಯನ್ನು ಕಂಡವು. ಆದರೆ 2009-10ರ ಹೊತ್ತಿಗೆ ಸರ್ಕಾರಿ ಆಡಳಿತದಲ್ಲಿ ಮಿತಿಮೀರಿದ ಭ್ರಷ್ಟಾಚಾರ, 2ಜಿ, ಕಾಮನ್‍ವೆಲ್ತ್ ಗೇಮ್ಸ ಮುಂತಾದ ಹಿಂದೆಂದೂ ಕಾಣದ ಪ್ರಮಾಣದ ಹಗರಣಗಳಿಂದ ಜನರಲ್ಲಿ ಮೂಡಿದ ಆಕ್ರೋಷವು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಯೋಗಗುರು ಬಾಬಾ ರಾಮದೇವ ಮುಂತಾದವರ ನಾಯಕತ್ವದಲ್ಲಿ ಜನಾಂದೋಲನದ (India Against Corruption) ರೂಪ ಪಡೆದುಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಮರ್ಥವಾದ ಕಾನೂನಿನ ಅಗತ್ಯವನ್ನು ಮನಗಾಣಿಸಿತು. ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹ ಹಾಗೂ ಜನಾಂದೋಲನವು ತಾರಕಕ್ಕೇರಿದ ಸಂಧರ್ಭದಲ್ಲಿ ನಡೆಸಿದ ಸರ್ಕಾರ ಮತ್ತು ಜನಸಂಘಟನಾ ಪ್ರತಿನಿಧಿಗಳು ಜಂಟಿಯಾಗಿ ಕಾನೂನು ಕರಡನ್ನು ರಚಿಸುವ ಪ್ರಯೋಗವೂ ವಿಫಲವಾಯಿತು. ಈ ನಡುವೆ 2011ರಲ್ಲಿ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯು ಅನೇಕ ನ್ಯೂನತೆಗಳ ಹೊರತಾಗಿಯೂ ಪಾಸಾಯಿತು. ಆದರೆ ರಾಜ್ಯಸಭೆಯಲ್ಲಿ ಪ್ರಮುಖ ವಿರೋಧ ಪಕ್ಷ ಬಿಜೆಪಿಯ ಮುಂದಿಟ್ಟ ತಿದ್ದುಪಡಿಗಳನ್ನು ಒಪ್ಪದೇ ಮತವಿಭಜನೆಗೆ ಅವಕಾಶ ಕೊಡದೇ ಮಧ್ಯರಾತ್ರಿ ಸದನವನ್ನು ಮುಂದೂಡಿದ ಸರ್ಕಾರದ ಹಠದಿಂದಾಗಿ ಲೋಕಪಾಲ ಮತ್ತೆ ನೆನೆಗುದುಗೆ ಬಿದ್ದಿತು. ಎರಡು ವರ್ಷಗಳ ಕಾಲ ರಾಜ್ಯಸಭೆಯ ಆಯ್ಕೆ ಸಮೀತಿಯಿಂದ ಪರಿಷ್ಕøತಗೊಂಡ ಮಸೂದೆಯು ಕೊನೆಗೂ ಸಂಸತ್ತಿನ ಅನುಮೋದನೆ ಪಡೆದು ಕಾನೂನಾಗುತ್ತಿರುವುದು ಇವೆಲ್ಲ ಗೊಂದಲಗಳ ನಡುವೆಯೂ ಒಂದು ಸಂತಸದ ಸಂಗತಿ.



ಲೋಕಪಾಲ ಕಾಯಿದೆಯೊಳಗೆ

ಸಂಸತ್ತಿನ ಒಪ್ಪಿಗೆಯಾಗಿ ರಾಷ್ಟ್ರಪತಿಗಳ ಅಂಕಿತದೊಂದಿಗೆ ಕಾನೂನಾಗುವ ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ 2011ರಂತೆ ಜಾರಿಗೆ ಬರುವ ಲೋಕಪಾಲ ಸಂಸ್ಥೆಯು ಭಾರತೀಯ ದಂಡಸಂಹಿತೆ ಮತ್ತು 1988ರ ಭ್ರಷ್ಟಾಚಾರ ತಡೆ ಕಾನೂನಿನ ಅಡಿಯಲ್ಲಿ ಬರುವ ಬ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡುವ ಅಧಿಕಾರ ಹೊಂದಿದೆ.

ಲೋಕಪಾಲನಲ್ಲಿ ಓರ್ವ ಚೇರಮನ್ ಮತ್ತು ಗರಿಷ್ಠ ಎಂಟು ಮಂದಿ ಸದಸ್ಯರಿರಬಹುದು, ಅವರಲ್ಲಿ 50% ನ್ಯಾಯಾಂಗ ಹಿನ್ನೆಲೆಯ ಸದಸ್ಯರಾಗಿರಬೇಕು. ಒಟ್ಟೂ ಸದಸ್ಯರಲ್ಲಿ 50% ಸದಸ್ಯರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಮಹಿಳೆ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅಥವಾ ಹಾಲೀ ಅಥವಾ ಮಾಜಿ ನ್ಯಾಯಾಧೀಶರು ಅಥವಾ ವಿಶೇಷ ಅರ್ಹತೆಯುಳ್ಳ ನ್ಯಾಯಾಂಗದ ಹೊರಗಿನವರನ್ನು ಚೇರಮನ್‍ರಾಗಿ ನೇಮಿಸಬಹುದು.

ಪ್ರಧಾನಮಂತ್ರಿ, ಲೋಕಸಭೆಯ ಸ್ಪೀಕರ, ಲೋಕಸಭೆಯ ವಿರೋಧ ಪಕ್ಷದ ನಾಯಕ, ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ಹಿರಿಯ ಕಾನೂನು ತಜ್ಞರನ್ನೊಳಗೊಂಡ ಸಮೀತಿಯು ಲೋಕಪಾಲ್‍ನ ಚೇರಮನ್ ಮತ್ತು ಸದಸ್ಯರ ಆಯ್ಕೆ ಮಾಡುವುದು. ಆಯ್ಕೆ ಸಮೀತಿಯ ಮೊದಲ ನಾಲ್ಕು ಜನರು ಸೇರಿ ಐದನೆಯ ಸದಸ್ಯ ಅಂದರೆ ಹಿರಿಯ ಕಾನೂನು ತಜ್ಞರನ್ನು ನೇಮಕ ಮಾಡುವುದು.

ಸಿಬಿಐನ ಸ್ವಾಯತ್ತತೆಗಾಗಿ ತನಿಖಾ ನಿರ್ದೇಶನಾಲಯವನ್ನು ಘಟಿಸಲಾಗುವುದು. ಸೆಂಟ್ರಲ ವಿಜಿಲೆನ್ಸ್ ಕಮಿಶನರ್‍ರ ಶಿಪಾರಸ್ಸಿನ ಮೇಲೆ ತನಿಖಾ ನಿರ್ದೇಶಕರನ್ನು ನೇಮಿಸಲಾಗುವುದು. ವಿಚಾರಣಾಧೀನ ಪ್ರಕರಣಗಳಲ್ಲಿ ತೊಡಗಿರುವ ಸಿಬಿಐನ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಲೋಕಪಾಲ್‍ನ ಅನುಮತಿಯ ಅಗತ್ಯವಿರುವುದು.

ಭಾರತದ ಪ್ರಧಾನಮಂತ್ರಿಯೂ ಲೋಕಪಾಲದ ವ್ಯಾಪ್ತಿಗೊಳಪಡುವರು.

ಸರ್ಕಾರಿ ಅನುದಾನ ಪಡೆಯುವ, ವಿದೇಶಿ ದೇಣಿಗೆ ಪಡೆಯುವ ಧಾರ್ಮಿಕ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಹಾಗೂ ಟ್ರಸ್ಟಗಳು ಲೋಕಪಾಲದ ವ್ಯಾಪ್ತಿಯಲ್ಲಿ ಬರುವವು. ಆದರೆ ಎಂಡೋವಮೆಂಟ ಅಡಿಯಲ್ಲಿ ಕಾರ್ಯನಿರ್ವಹಿಸುವ ಧಾರ್ಮಿಕ ಮತ್ತು ಚಾರಿಟೇಬಲ್ ಟ್ರಸ್ಟಗಳನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ.

ದೂರಿನ ವಿಚಾರಣೆಯು 60 ದಿನಗಳಲ್ಲಿ ಹಾಗೂ ತನಿಖೆಯು 6ತಿಂಗಳ ಒಳಗೆ ಪೂರ್ಣವಾಗಬೇಕು. ಸರ್ಕಾರಿ ನೌಕರರಿಗೆ ಉತ್ತರಿಸುವ ಅವಕಾಶ ಕೊಟ್ಟಮೇಲೆ ತನಿಖೆಗೆ ಆದೇಶಿಸಬಹುದು.

ಸುಳ್ಳು ದೂರು ನೀಡಿದರೆ ಒಂದು ವರ್ಷದವರೆಗೆ ಜೈಲು ಮತ್ತು 1ಲಕ್ಷ ದಂಡ ವಿಧಿಸಬಹುದು. ಸರ್ಕಾರಿ ನೌಕರರಿಗೆ ಏಳು ವರ್ಷದವರೆಗೆ ಜೈಲುಶಿಕ್ಷೆ ವಿಧಿಸಬಹುದು. ಅಯೋಗ್ಯ ವರ್ತನೆ ಮತ್ತು ಮತ್ತೆ ಮತ್ತೆ ಭ್ರಷ್ಟಾಚಾರದಲ್ಲಿ ತೊಡಗಿದರೆ 10ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು.

ಎಲ್ಲ ರಾಜ್ಯಗಳು 365 ದಿನಗಳ ಒಳಗೆ ಲೋಕಾಯುಕ್ತ ಸಂಸ್ಥೆಯನ್ನು ಜಾರಿಗೆ ತರಬೇಕು. ಮಾದರಿ ಲೋಕಾಯುಕ್ತ ಕಾನೂನನ್ನು ನೀಡಲಾಗಿದ್ದು ರಾಜ್ಯಗಳು ಲೋಕಾಯುಕ್ತ ಕಾನೂನನ್ನು ರೂಪಿಸಲು ಸ್ವಾತಂತ್ರ ನೀಡಲಾಗಿದೆ.


ಲೋಕಪಾಲ ಮಸೂದೆ, ಕಾಂಗ್ರೆಸ್ ಮತ್ತು ಸ್ವಾರ್ಥ ಹಿತಾಸಕ್ತಿಗಳು


        ಇಂಡಿಯ ಅಗೇನಸ್ಟ್ ಕರಪ್ಷನ್‍ನ ಹೆಸರಿನಲ್ಲಿ 2009-10ರಲ್ಲಿ ಪ್ರಾರಂಭವಾದ ಭ್ರಷ್ಟಾಚಾರದ ವಿರುದ್ಧದ ಹೋರಾಟವು ದೇಶದಾದ್ಯಂತ ಅಭೂತಪೂರ್ವ ಜನಬೆಂಬಲ ಪಡೆಯಿತಾದರೂ ಲೋಕಪಾಲ ಕಾನೂನು ಜಾರಿಗೆ ಬರಲು ವಿಳಂಬವಾಗಿದ್ದೇಕೆ? ಎನ್ನುವ ಪ್ರಶ್ನೆ ಕಾಡದೇ ಇರುವುದಿಲ್ಲ. ಕಾಂಗ್ರೆಸ್ ಸರ್ಕಾರ ತನ್ನ ಮೂಗಿನಡಿ ನಡೆದ ಹಗರಣಗಳನ್ನು ಮುಚ್ಚಿಹಾಕಿ ಭ್ರಷ್ಟರನ್ನು ರಕ್ಷಿಸಲು ಪ್ರಯತ್ನಸಿತು ಎಂಬ ಆರೋಪದಲ್ಲೂ ಹುರುಳಿದೆ. ಹಾಗೆಯೇ ರಾಜಕೀಯ ಪಕ್ಷಗಳು ದುರ್ಬಲ ಲೋಕಪಾಲ ಸಂಸ್ಥೆಯನ್ನು ನಿರ್ಮಿಸ ಬಯಸಿದ್ದವು ಎಂದೂ ಆರೋಪಿಸಲಾಗುತ್ತದೆ. ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ಮೊಂಡುತನದ ಜೊತೆಗೆ ಜನಸಂಘಟನೆಗಳ ನೇತೃತ್ವ ವಹಿಸಿದ್ದ ಕೆಲವು ವ್ಯಕ್ತಿಗಳ ಸ್ವಾರ್ಥ ಲೆಕ್ಕಾಚಾರಗಳು, ತಾವು ರಚಿಸಿದ ಕರಡು ಪ್ರತಿಯೇ ಕಾನೂನಾಗಬೇಕೆಂಬ ಅಹಂಕಾರ, ಜನಾಂದೋಲನದ ಯಶಸ್ಸಿನ ಶ್ರೇಯಸ್ಸನ್ನು ಪಡೆದುಕೊಳ್ಳಲು ಪೈಪೋಟಿ ಇತ್ಯಾದಿಗಳು ಲೊಕಪಾಲ ಕಾನೂನು ತಯಾರಾಗುವ ಪ್ರಕ್ರಿಯೆಯ ಹಳಿ ತಪ್ಪಿಸಿತು. ಈ ನಡತೆಗಳು ಇಂದಿಗೂ ಕಂಡುಬರುತ್ತಿವೆ. ಅಣ್ಣಾ ಹಜಾರೆಯವರ ಅನೇಕ ಉಪವಾಸ ಸತ್ಯಾಗ್ರಹಗಳು, ಸಾರ್ವಜನಿಕ ಒತ್ತಡ, ವಿರೋಧ ಪಕ್ಷಗಳ ತಿದ್ದುಪಡಿ ಮತ್ತು ಸಹಕಾರ ಇವೆಲ್ಲದರ ನಡುವೆ ಅಂತೂ ಸಂಸತ್ತಿನಲ್ಲಿ ಮಸೂದೆ ತೇರ್ಗಡೆಯಾಗಿದೆ. ಆದರೆ ಕಾಂಗ್ರೆಸ್ಸಿಗರು ಅದರ ಶ್ರೇಯಸ್ಸನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ ಗಾಂಧಿಯವರ ತಲೆಗೆ ಕಟ್ಟುವ ಲಜ್ಜೆಗೆಟ್ಟ ಪ್ರಯತ್ನ ನಡೆಸಿದ್ದಾರೆ!


ವ್ಯತಿರಿಕ್ತ ವಾದ: ಅಪರಾಧ ತಡೆ, ಭ್ರಷ್ಟಾಚಾರ ತಡೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚು ಹೆಚ್ಚು ಕಾನೂನುಗಳು, ಪೋಲೀಸ ಠಾಣೆಗಳು, ಜೈಲುಗಳು, ಲೋಕಾಯುಕ್ತ, ವಿಜಿಲೆನ್ಸ್ ಕಮೀಶನ್, ಸಿಬಿಐ, ಸಿಐಡಿ ಇತ್ಯಾದಿಗಳ ಅಗತ್ಯ ಇದೆ ಎಂದಾದರೆ ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಭಾವಿಸಬಹುದು?




No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...