ಬಹುತೇಕ ಸಂದರ್ಭಗಳಲ್ಲಿ ನಮ್ಮ ಸುತ್ತಲೂ ನಡೆದಿರುವ ದೊಡ್ಡದೊಂದು ಬದಲಾವಣೆ ಗಮನ ಸೆಳೆಯುವ ಮಟ್ಟಿಗೆ ನಮ್ಮ ಗ್ರಹಿಕೆಗೆ ಬಾರದೇ ಇರುತ್ತದೆ. ಕಾರಣವಿಷ್ಟೇ, ನಾವೂ ಆ ಪರಿವರ್ತನಾ ಪ್ರಕ್ರಿಯೆಯ ಅಂಗವಾಗಿರುತ್ತೇವೆ. ಬದಲಾವಣೆಯ ಪ್ರಕ್ರಿಯೆಯ ಏರಿಕೆಯ ಬೆಳವಣಿಗೆ –incremental
change ನಮ್ಮ ಮುಂದೆಯೇ ನಡೆದು ಹಂಚಿ ದೀರ್ಘವಾಗಿ ನಮ್ಮ ಅನುಭವಕ್ಕೆ ಸಿಕ್ಕಿದ್ದರಿಂದ, ಒತ್ತಟ್ಟಿಗೇ ನಮ್ಮ ಗ್ರಹಿಕೆಗೆ ಬಂದಾಗ ಆಗುವ ಅನುಭವ ಅಂತಹ ಸಂದರ್ಭದಲ್ಲಿ ಆಗುವುದಿಲ್ಲ. ಉದಾಹರಣೆಗೆ ಮಗನೋ ಮಗಳೋ ಬೆಳೆದು ನಿಂತದ್ದು ಒಂದಿಷ್ಟು ವರ್ಷಗಳ ನಂತರ ಭೇಟಿಯಾದ ಬಂಧುವಿನ ಅಥವಾ ಸ್ನೇಹಿತನ ಗಮನಕ್ಕೆ ಬರುವಷ್ಟು ಹುಟ್ಟಿಸಿದ ತಂದೆಯ ಗ್ರಹಿಕೆಗೇ ಬಂದಿರುವುದಿಲ್ಲ. ಆದ್ದರಿಂದ ಮಾರ್ಪಾಡಾಗಿದ್ದು ಮನದ ಕದತಟ್ಟುವ ಮಟ್ಟಿಗೆ ಗಮನಕ್ಕೆ ಬರಬೇಕೂ ಅಂತಾದರೆ ದೇಶಕಾಲಗಳ ಪರಿಧಿಯಿಮದ ಒಂದು ಮಟ್ಟಿನ ಅಂತರದಲ್ಲಿ ನಿಂತು ನೋಡುವುದು ಅನಿವಾರ್ಯ.

ಇನ್ನು ನಾವು ಬದುಕಿನ ಪಾಠ ಕಲಿತ ಶಾಲೆ ಎಂದೇ ಹೇಳಬಹುದಾದ ಎಬಿಎಮ್‍ಎಮ್ ಹಾಸ್ಟೆಲಿನ ಕಂಪೌಂಡಿನೊಳಗೆ ಬಂದರೆ “ಅಭಿವೃದ್ಧಿ” “ಡೆವೆಲೊಪ್‍ಮೆಂಟ್” ಹೆಸರಿನಲ್ಲಿ ನಡೆದ ಅನೇಕ ಬದಲಾವಣೆಗಳು ಕಾಣಸಿಗುತ್ತವೆ. ಕೆಲವರ್ಷಗಳ ಕೆಳಗೆ ನಾವೆಲ್ಲ ಬಟ್ಟೆ ಒಗೆದು ಒಣಗಿಸುತ್ತಿದ್ದ ಜಾಗದಲ್ಲಿದ್ದ ಸಾಲು ತೆಂಗಿನಮರಗಳನ್ನು ಕೆಡಗಿ ಮೇಲೆಬ್ಬಿಸಿದ ಕಲ್ಯಾಣ ಮಂಟಪದ ಕಟ್ಟಡ ತೆಂಗಿನ ಮರದ ಎತ್ತರವನ್ನೂ ಮೀರಿಸಿ ತಲೆಯೆತ್ತಿದೆ. ದೊಡ್ಡಭಟ್ಟರು ಗಲಗಲ ಅಲುಗಿಸಿ ಉದುರಿಸಿದ ಹೂವನ್ನು ದೇವರ ಪೂಜೆಗೆ ಆಯ್ದುಕೊಳ್ಳುತ್ತಿದ್ದ ಪಾರಿಜಾತದ ಗಿಡ, ನಾನು ವಾಸವಾಗಿದ್ದ ರೂಮಿನ ಏಣಿಯಮೇಲೆ ಬೆಳೆದು, ಹತ್ತಿಳಿಯುವಾಗ ಪರಿಮಳ ಬೀರುತ್ತಿದ್ದ ಮಲ್ಲಿಗೆ ಬಳ್ಳಿ, ಸಂದಿಯಲ್ಲಿ ಬೆಳೆದಿದ್ದ ಸೀತಾಫಲದ ಗಿಡ ಯಾವುದೂ ಈಗ ಕಾಣಿಸುವುದಿಲ್ಲ. ಮೆಸ್ ಹಾಲಿನ ಮುಂದಿದ್ದ ಮಾವಿನ ಮರ ಹೋಮ ಮಾಡುವ ಕೋಣೆಗೆ ಜಾಗಮಾಡಿಕೊಟ್ಟಿದೆ. ನಾವಿದ್ದಾಗ ಕೇವಲ ಐದಾರು ಟಾಯ್ಲೆಟ್ಟುಗಳಿದ್ದವು, ಈಗ ಇನ್ನೊಂದು ಮೂರ್ನಾಲ್ಕು ಜಾಸ್ತಿಯಾಗಿವೆ, ಆಗಬೇಕು, ಅತ್ಯಗತ್ಯ. ಮೆಸ್ ಹಾಲ್, ಟಿವಿ ರೂಮಿನ ಕತ್ತಲು ಇನ್ನಷ್ಟು ಹೆಚ್ಚಾಗಿದೆ. ಲೋಕಪ್ಪನ ಹಕ್ಕಲ ಮಕ್ಕಳಿಗೆಂದು ಶಾಲೆ ನಡೆಸುತ್ತಿದ್ದ ಕೋಣೆ ಕಾಣಿಸಿಲಿಲ್ಲ. ಗೇಟಿನ ಪಕ್ಕದಲ್ಲೇ ಅಂಗಡಿ ಮುಂಗಟ್ಟು ತಲೆಎತ್ತಿದೆ.
ಗಮನಕ್ಕೆ ಬಂದ ಇನ್ನೊಂದು ಮುಖ್ಯ ಅಂಶವನ್ನು ಇಲ್ಲಿ ಉಲ್ಲೇಖಿಸುವುದು ಒಳ್ಳೆಯದು. ಭಾನುವಾರ ಬೆಳಗಿನ ಎಂಟೂವರೆ ಒಂಭತ್ತರ ಹೊತ್ತು ಎಬಿಎಮ್‍ಎಮ್ ಹಾಸ್ಟೆಲಿನ ವಾತಾವರಣ ಹೇಗಿರುತ್ತಿತ್ತು ಅಂದರೆ- ಎರಡು ಕನ್ನಡ ಒಂದು ಇಂಗ್ಲೀಷ್ ಪೇಪರನ್ನು ಹದಿನೈದು ಮಂದಿ ಹಂಚಿಕೊಂಡು ಓದುತ್ತಿದ್ದೆವು ರೂಮ್ ನಂಬರ್ ಒಂದರ ಮುಂದೆ. ತಮ್ಮವರ ಕುಶಲವನ್ನು ಕೇಳಿ ಮನೆಗಳಿಂದ ಅಮ್ಮನೋ, ಅಪ್ಪನೋ ಅಕ್ಕನೋ ಮಾಡಿದ ಕಾಲ್‍ನಿಂದ ಮತ್ತೆ ಮತ್ತೆ ರಿಂಗಾಗುವ ಹಳೇ ಫೋನನ್ನು ಎತ್ತಿ ಮಲಗಿದ್ದವರನ್ನು ಕೂಗಿ ಕರೆದು ಎಬ್ಬಿಸುವ ಕೂಗಾಟ ಸದಾ ನಡೆಯುತ್ತಿತ್ತು. ಒಂದು ಕಡೆ ಭಾನುವಾರ ಬೆಳಗಿನ ಉಪಹಾರ ಅವಲಕ್ಕಿಗಾಗಿ ಮೆಸ್ ಹಾಲಿನ ಕಡೆಗೆ ತಾಟು ಲೋಟ ಹಿಡಿದು ಹೋಗುವವರ ಸಾಲು, ಇನ್ನೊಂದೆಡೆ ಬಾತ್‍ರೂಮ್ ಟಾಯ್ಲೆಟ್ ಕಡೆಗೆ ಬಕೆಟ್ ಟೂತ್‍ಬ್ರಶ್ ಹಿಡದು ಹೋಗಿ ಬರುವವರ ಸಾಲು, ಮಗದೊಂದು ಕಡೆ ಸಂಧ್ಯಾವಂದನೆಗೆ ಲೋಟ ಚಮಚ ಹಿಡಿದು ಹೋಗುವವರು, ಕ್ರಿಕೆಟ್ ಬ್ಯಾಟು ಬಾಲು ಹಿಡಿದು ವಾರ್ಡನ್ ಎದುರೇ ನಟ್ಟನಡುವಿನ ವರಾಂಡದಲ್ಲಿ ಆಡುವವರು, ನಡು ನಡುವೆ ಕುಶಲೋಪರಿ, ಹಾಸ್ಯ ಮಾತುಕತೆ ಒಟ್ಟಿನಲ್ಲಿ ಎಬಿಎಮ್‍ಎಮ್‍ನ ಭಾನುವಾರದ ಮುಂಜಾನೆ ಅತ್ಯಂತ ಜೀವಂತಿಕೆ ವೈಬ್ರನ್ಸಿಯಿಂದ ತುಳುಕುತ್ತಿತ್ತು. ಅಂದು ನಾನು ಎಬಿಎಮ್‍ಎಮ್ ಹಾಸ್ಟೆಲಿಗೆ ಹೋದಾಗ ಭಾನುವಾರ ಬೆಳಿಗ್ಗೆ ಸುಮಾರು ಎಂಟೂವರೆಯ ಹೊತ್ತು. ಮಾತನಾಡಿಸುವಾ ಎಂದರೆ ವರಾಂಡದಲ್ಲಿ ಒಂದು ನರಪಿಳ್ಳೆಯೂ ಕಾಣಿಸಲಿಲ್ಲ. ಟಿವಿ ಹಾಲಿನ ಕತ್ತಲೆಯಲ್ಲಿ ಮೂರ್ನಾಲ್ಕು ಮಂದಿ ಅವಲಕ್ಕಿ ಮೆಲ್ಲುತ್ತ ಅದೇ ಹಳೆ ಟಿವಿಯಲ್ಲಿ ಯಾವುದೋ ಕ್ರಿಕೆಟ್ ಮ್ಯಾಚು ನೋಡುತ್ತಿದ್ದರು. ರೂಮ್ ನಂಬರ್ ಒಂದರ ಎದುರು ಪೇಪರು ಕಾಣಲಿಲ್ಲ, ನಾವೆಲ್ಲ ಮನೆಯಿಂದ ಬರುವ ಫೋನಕರೆಗಾಗಿ ಕಾಯುತ್ತಿದ್ದ ಹಳೇ ಟೆಲಿಫೋನು ಕಾಣಿಸಲಿಲ್ಲ.
No comments:
Post a Comment