Monday, May 25, 2015

ನೆಲಕ್ಕೆ ನೀರುಣಿಸಲು ನೂರಾರು ದಾರಿಗಳು

(ಪುಂಗವ 01/06/2015)

      ಪೃಥ್ವಿಯ ಮುಕ್ಕಾಲು ಪಾಲು ಜಲವಿದ್ದರೂ ಸಮಗ್ರ ಜೀವಸಂಕುಲ ನೀರಿಗಾಗಿ ಆಶ್ರಯಿಸಿದ್ದು ಮಳೆಯನ್ನೇ. ಸಮುದ್ರ, ನದಿಕೆರೆಗಳ ನೀರು ಆವಿಯಾಗಿ ಮತ್ತೆ ಮಳೆಯಾಗಿ ಭೂಮಿಯ ಮೇಲೆ ಸುರಿದು ವಿತರಣೆಯಾಗಿ, ನದಿಗಳಲ್ಲಿ ಹರಿದು, ಕೆರೆ ಬಾವಿಗಳನ್ನು ತುಂಬಿಸಿ ಮಣ್ಣಿನಲ್ಲಿ ಇಳಿದು ಅಂತರ್ಜಲಕ್ಕೆ ಮರುಪೂರಣೆಯಾಗುವ ಜಲಚಕ್ರದ ವ್ಯವಸ್ಥೆ ಜೀವಕೋಟಿಯ ನೀರಿನ ಅವಶ್ಯಕತೆಯನ್ನು ಪೋರೈಸುತ್ತಿತ್ತು. ಈ ಪ್ರಾಕೃತಿಕ ವ್ಯವಸ್ಥೆಯನ್ನು ಅರಿತಿದ್ದ ನಮ್ಮ ಪೂರ್ವಜರು ಅದಕ್ಕೆ ತಕ್ಕಂತೆ ಜಲಸಂರಕ್ಷಣೆ ಮತ್ತು ಬಳಕೆಯ ವಿಧಾನಗಳನ್ನು ವಿಕಸನಗೊಳಿಸಿದ್ದರು. ಮಳೆಯ ನೀರು ಸಂಗ್ರಹಣಾ(ಕ್ಯಾಚ್‌ಮೆಂಟ್) ಪ್ರದೇಶಗಳಿಂದ ಒಟ್ಟಾಗಿ ಹಳ್ಳ ಕೋಡಿಗಳಲ್ಲಿ ಹರಿದು ಕೆರೆಕಟ್ಟೆಗಳನ್ನು ತುಂಬಿಸುವುದು. ಹೀಗೆ ಸಂಗ್ರಹವಾದ ನೀರಿನಿಂದಾಗಿ ಕೆರೆಯ ಕೆಳಗಿನ ಪ್ರದೇಶದ ಹೊಲಗಳ ಬಾವಿ ಹಾಗೂ ಕಲ್ಯಾಣಿಗಳಲ್ಲಿ ಸದಾ ನೀರಿರುತ್ತಿದ್ದು ಕೃಷಿಗೆ, ದನಕರುಗಳು ಕುಡಿಯಲು ಹಾಗೂ ಗೃಹಕಾರ್ಯಗಳಿಗೆ ಬಳಕೆಯಾಗುತ್ತಿದ್ದವು. ಹಾಗೆಯೇ ಹೊಲ ತೋಟಗಳಲ್ಲೂ ಒಂದು ಗುಂಡಿ ಇರುತ್ತಿತ್ತು. ಮಳೆ ಬಂದಾಗ ಇವುಗಳಲ್ಲಿ ಶೇಖರವಾಗುವ ನೀರು ತರಕಾರಿ ಬೆಳೆಯಲು, ದನಗಳ ಮೈತೊಳೆಸಲು ಹೀಗೆ ವಿಧವಿಧವಾಗಿ ಬಳಕೆಯಾಗುವುದರ ಜೊತೆಗೆ ನಿಧಾನವಾಗಿ ನೆಲದಲ್ಲಿಯೂ ಇಂಗುತ್ತಿತ್ತು.


      ಆದರೆ ಇಂದು ಪ್ರಗತಿಯ ಹೆಸರಿನಲ್ಲಿ ನಡೆಯುತ್ತಿರುವ ವಿವೇಚನಾರಹಿತ ಸಂಪನ್ಮೂಲಗಳ ಬಳಕೆ, ನದಿ ಪಾತ್ರದ ಜಲಸಂಗ್ರಹಣಾ ಪ್ರದೇಶದಲ್ಲಿನ ಚಟುವಟಿಕೆಗಳು, ಕೆರೆಗಳ ಒತ್ತುವರಿ ಹಾಗೂ ನಿರ್ವಹಣೆಯ ಕೊರತೆ, ಅತಿಯಾಗಿ ಕೊಳವೆ ಬಾವಿಗಳನ್ನು ಕೊರೆಯುವುದು, ಕಾಡಿನ ನಾಶ ಮೊದಲಾದವುಗಳಿಂದ ಸಾಂಪ್ರದಾಯಿಕ ಜಲಮೂಲಗಳು ಬತ್ತಿಹೋಗುತ್ತಿವೆ. ಇದು ಒಂದೆರಡು ಊರುಗಳ ಸಮಸ್ಯೆಯಲ್ಲ. ಈ ಹಿನ್ನೆಲೆಯಲ್ಲಿ ಜಲಕ್ಷಾಮದ ಸಮಸ್ಯೆಯ ಗಂಭೀರತೆಯ ಪ್ರಜ್ಞೆ ಬೆಳೆದಿದ್ದರಿಂದ ಅನೇಕ ಪ್ರದೇಶಗಳಲ್ಲಿ ಮಳೆ ನೀರಿನ ಸಂಗ್ರಹ, ನೀರಿಂಗಿಸುವುದ ಕಾಡನ್ನು ಬೆಳೆಸುವುದು ಹೀಗೆ ಅನೇಕ ರೀತಿಯ ಜಲಸಂವರ್ಧನೆ ಕಾರ್ಯಗಳು ನಡೆಯುತ್ತಿರುವುದು ಸಮಾಧಾನಕರ ಸಂಗತಿ. ಬತ್ತಿಹೋಗಿರುವ ಕುಮುದ್ವತಿ ನದಿ ಪಾತ್ರದ ಹಳ್ಳಿಗಳಾದ ನೆಲಮಂಗಲ ತಾಲೂಕಿನ ಕಾಸರಘಟ್ಟ , ಮಹಿಮಾಪುರ, ಕೆರೆಕತ್ತಿಗನೂರು, ಆಲದಹಳ್ಳಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ನದಿ ಪುನಶ್ಚೇತನ, ಕೆರೆ ಕಲ್ಯಾಣಿ ಮುಂತಾದ ಜಲಮೂಲಗಳ ಸಂರಕ್ಷಣೆಯ ಕಾರ್ಯ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದು ಉತ್ತಮ ಪರಿಣಾಮ ಕಂಡುಬಂದಿದೆ. ಭಾರತೀಯ ಕಿಸಾನ ಸಂಘದ ಸ್ಥಳೀಯ ಕಾರ್ಯಕರ್ತರು ಗ್ರಾಮಸ್ಥರನ್ನು ಜೊತೆಗೂಡಿಸಿ ಕೆಲವು ಸಂಘಸಂಸ್ಥೆಗಳ ನೆರವಿನಿಂದ ಮಾದರಿ ಕಾರ್ಯವನ್ನು ನಡೆಸುತ್ತಿದ್ದಾರೆ. 


ಮರಗಿಡಗಳನ್ನು ಬೆಳೆಸುವ ಯೋಜನೆ
      ಮಳೆ, ಅಂತರ್ಜಲ ಹಾಗೂ ಮರಗಳಿಗೆ ತುಂಬ ಹತ್ತಿರದ ಸಂಬಂಧವಿದೆ. ಮರಗಳು ಮೋಡಗಳನ್ನು ತಡೆದು ವಾತಾವರಣವನ್ನು ತಂಪಾಗಿಸಿ ಮಳೆಸುರಿಸುವುದು ಒಂದಾದರೆ, ನೆಲದ ಆಳಕ್ಕೆ ಇಳಿಯುವ ಮರದ ಬೇರುಗಳು ನೀರು ಇಂಗಲು ಸಹಕಾರಿಯಾಗಿವೆ. ಇದನ್ನು ಅರಿತು ಮಹಿಮಾಪುರ, ಆಲದಹಳ್ಳಿ ಮತ್ತು ಸುತ್ತಲಿನ ಹಳ್ಳಿಗಳ ಗುಡ್ಡಗಾಗು ಪ್ರದೇಶದಲ್ಲಿ ದೊಡ್ಡಪ್ರಮಾಣದಲ್ಲಿ ಕಾಡನ್ನು ಬೆಳೆಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಮಹಿಮಾಪುರ ಗ್ರಾಮದ ಜಾತ್ರಾ ಮೈದಾನ, ಗುಂಡುತೋಪುಗಳಲ್ಲಿ ಗ್ರಾಮಸ್ಥರೇ ಸೇರಿ ಅತ್ತಿ, ಮಾವು, ನೇರಳೆ, ಹಿಪ್ಪಲಿ, ಆಲ, ಹಲಸು, ಸೀತಾಫಲ ಮುಂತಾದ ವಿವಿಧ ಜಾತಿಯ ಮರಗಳನ್ನು ಬೆಳೆಸುತ್ತಿದ್ದಾರೆ. ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಮೂಲಕ ಗಿಡಗಳಿಗೆ ನೀರುಣಿಸಿ ಆರೈಕೆ ಮಾಡಲಾಗುತ್ತದೆ. ಹೊಸದಾಗಿ ಕಾಡುಬೆಳಸುವುದರ ಜೊತೆಗೆ ಗುಂಡುತೋಪಿನ ಮರಗಳನ್ನು ಕಾಪಾಡುವುದಕ್ಕೂ ಆದ್ಯತೆ ನೀಡಲಾಗುತ್ತದೆ. ಬೆಂಗಳೂರು ಮುಂತಾದ ನಗರ ಪ್ರದೇಶದ ಕೆಲವು ಸ್ವಯಂಸೇವಕರು ಹಾಗೂ ಸಂಘಟನೆಗಳು ಗ್ರಾಮಸ್ಥರ ಜೊತೆಗೆ ಗಿಡನೆಡುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.


ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರು ಗ್ರಾಮದ ನಿವಾಸಿ ಪ್ರಗತಿಪರ ರೈತ, ಸಿಆಯ್‌ಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿದ ಮಾಜಿ ಯೋಧ ಶ್ರೀ ಗಂಗಣ್ಣನವರ ಪ್ರಕೃತಿ ಪ್ರೇಮ ಮತ್ತು ಅನುಭವ ಜ್ಞಾನ ವಿಸ್ಮಯವನ್ನು ಮೂಡಿಸುವಂತಹುದು. ತಮ್ಮ ಹಳ್ಳಿಯ ಸುತ್ತಲಿನ ಗುಡ್ಡಗಾಡಿನಲ್ಲಿ ಬೆಳೆಯುವ ಮರಗಳಿಂದ ಹಿಡಿದು ಸಣ್ಣ ಪೊದೆ-ಗಿಡಗಳು, ಬಳ್ಳಿ ಮೂಲಿಕೆಗಳು ಮತ್ತು ಅವುಗಳ ಔಶಧಿಯ ಗುಣಗಳನ್ನು ಆಳವಾಗಿ ತಿಳಿದುಕೊಂಡಿರುವ ಗಂಗಣ್ಣನವರು, ನೆಟ್ಟ ಪ್ರತಿಯೊಂದು ಗಿಡವನ್ನು ವಾತ್ಸಲ್ಯದಿಂದ ಆರೈಕೆ ಮಾಡಿ ಬೆಳೆಸುತ್ತಿದ್ದಾರೆ. ಅಂತರ್ಜಲದ ಕುರಿತು ಅವರು ಹೇಳುವ ಮಾತು ತುಂಬ ಪ್ರಸ್ತುತವಾಗಿದೆ: "ಅಂತರ್ಜಲ ಆಪತ್ಕಾಲದ ನಿಧಿ. ಆದ್ದರಿಂದ ಅತೀ ಅಗತ್ಯಬಿದ್ದಾಗ ಮಾತ್ರ ಬೋರವೆಲ್ ಅಗೆದು ಅದನ್ನು ಬಳಸಬೇಕು. ಇಂದು ಭೂಮಿಯ ಮೇಲ್ಪದರದಿಂದ ಮೂವತ್ತು ನಲವತ್ತು ಅಡಿ ಅಗೆದರೂ ತೇವಾಂಶ ಇರುವುದಿಲ್ಲ. ಹೀಗಾದರೆ ಗಿಡಮರಗಳು ಹೇಗೆ ಬದುಕಬಲ್ಲವು? ಆದ್ದರಿಂದ ಮೊದಲು ಭೂಮಿಯ ಮೇಲ್ಪದರದಲ್ಲಿ ನೀರನ್ನು ಇಂಗಿಸಿದರೆ ಅಂತರ್ಜಲ ತನ್ನಿಂದ ತಾನೇ ಪೂರಣವಾಗುತ್ತದೆ. ಭೂಮಿಯ ಆಳಕ್ಕೆ ಇಳಿಯುವ ಮರದ ಬೇರುಗಳು ನೀರನ್ನು ಇಂಗಿಸುವ ಕಾರ್ಯವನ್ನು ತಾವೇ ಮಾಡುತ್ತವೆ."

ನೀರಿಂಗಿಸುವ ಹೊಂಡಗಳು
      ಮಳೆಯ ನೀರನ್ನು ಸಂಗ್ರಹಿಸಿ ಭೂಮಿಯಲ್ಲಿ ಇಂಗಿಸುವ ಸಲುವಾಗಿ ತೋಪಿನಲ್ಲಿ ಅಲ್ಲಲ್ಲಿ ಹೊಂಡಗಳನ್ನು ತೋಡಲಾಗಿದೆ. ಮಹಿಮಾಪುರ ಗ್ರಾಮದ ತೋಪಿನಲ್ಲಿ ಅಗೆಯಲಾದ ಸುಮಾರು ೬೦ ಮೀ ಅಗಲ ೧೨೦ಮೀ ಇಂತಹ ಒಂದು ಹೊಂಡ ಸುಮಾರು ಎರಡು ಲಕ್ಷ ಲೀಟರಿಗೂ ಹೆಚ್ಚು ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅರ್ಧದಷ್ಟು ಆವಿಯಾದರೂ ಬಹುದೊಡ್ಡ ಪ್ರಮಾಣದಲ್ಲಿ ಹರಿದು ಹೋಗಬಹುದಾಗಿದ್ದ ನೀರು ಅಲ್ಲಿಯೇ ಮಣ್ಣಿನಲ್ಲಿ ಇಂಗಿ ಅಂತರ್ಜಲವನ್ನು ಸೇರುವುದು. ಈ ಇಂಗುಗುಂಡಿಯ ಪರಣಾಮದಿಂದಾಗಿ ಅಲ್ಲಿಯೇ ಹತ್ತಿರದಲ್ಲಿನ ಬತ್ತಿಹೋಗಿದ್ದ ಕೊಳವೆ ಬಾವಿಗೆ ಮತ್ತೆ ಜೀವ ಬಂದಿದೆ. ಹೊಂಡದ ಮಣ್ಣಿನ ಮೇಲ್ಪದರದಲ್ಲೂ ತೇವಾಂಶ ಹೆಚ್ಚಾಗಿರುವುದರಿಂದ ಸುತ್ತಲಿನ ಪರಿಸರದಲ್ಲಿ ಮರಗಳು ಮತ್ತು ಪೊದೆಗಳು ಹುಲುಸಾಗಿ ಬೆಳೆದಿವೆ.


ಸೀಡ್ ಬಾಲ್ ಗಳು ಮತ್ತು ಬೀಜ ಎರಚುವುದು


ಸೀಡ್ ಬಾಲ್ ಗಿಡಬೆಳೆಸುವ ಒಂದು ವಿಶಿಷ್ಟ ಹಾಗೂ ಸರಳ ವಿಧಾನ. ಮಣ್ಣಿನೊಂದಿಗೆ ದನದ ಸಗಣಿಯನ್ನು ಬೆರೆಸಿ ಉಂಡೆಕಟ್ಟುವ ಮಟ್ಟಿಗೆ ಹದಮಾಡಿಕೊಳ್ಳುವುದು. ಬೀಜಗಳನ್ನು ಹಾಕಿ ಮಣ್ಣಿನ ಉಂಡೆ (ಸೀಡ್‌ಬಾಲ್)ಗಳನ್ನು ಕಟ್ಟಿ ನೆರಳಿನಲ್ಲಿ ಒಣಗಿಸಿ ಸಂಗ್ರಹಿಸಿಟ್ಟುಕೊಳ್ಳುವುದು. ಮಳೆಗಾಲದ ಸಂದರ್ಭದಲ್ಲಿ ಪೊದೆಗಳ ಮಧ್ಯೆ, ಒಣಗಿ ಕಿತ್ತಿರುವ ಮರದ ಬುಡದಲ್ಲಿ, ಸಣ್ಣ ಸಣ್ಣ ಹೊಂಡಗಳಲ್ಲಿ ಹೀಗೆ ಇಂತಹ ಬೀಜ ಉಂಡೆಗಳನ್ನು ಬಿಸಾಡುವುದು. ತೇವಾಂಶ ಸಿಕ್ಕಾಗ ಉಂಡೆಯೊಳಗಿನ ಬೀಜವು ಮೊಳಕೆಯೊಡೆದು ಅಲ್ಲೇ ಬೇರು ಬಿಟ್ಟು ಗಿಡವಾಗುವುದು. ಇದು ಶಾಲಾ ಮಕ್ಕಳೂ ಆಟವಾಡುತ್ತ ಮಾಡುವ ಕೆಲಸ. ಹಾಗೆಯೇ ವಿವಿಧ ರೀತಿಯ ತರಕಾರಿ ಗಿಡಗಳು ಹಾಗೂ ಬಳ್ಳಿಗಳ ಬೀಜಗಳನ್ನು ಸಂಗ್ರಹಿಸಿ ಹದವಾದ ಮಣ್ಣಿರುವ ಕಡೆ, ಬಂಡೆಗಳ ನಡುವೆ ಹೀಗೆ ಸುಮ್ಮನೆ ಎರಚುವುದು. ಮಳೆಗಾಲದ ತೇವಾಂಶ ತಾಕಿದೊಡನೆ ಅವು ಮೊಳಕೆಯೊಡೆದು ಅಲ್ಲಿಯೇ ಬೆಳೆಯುತ್ತವೆ. ಹೀಗೆ ಬೀಜ ಎರಚುವುದರಿಂದ ಹುಟ್ಟುಕೊಂಡು ಬೆಳೆದಿರುವ ಬಳ್ಳಿಗಳು, ಗಿಡಗಳು, ಸೊಪ್ಪಿನ ಹಾಗೂ ತರಕಾರಿ ಸಸ್ಯಗಳು ಮಹಿಮಾಪುರದ ಮಹಿರಂಗ ಸ್ವಾಮಿ ದೇವಸ್ಥಾನ ಸುತ್ತಲಿನ ಪ್ರದೇಶದಲ್ಲಿ ಹುಲುಸಾಗಿ ಬೆಳೆದಿವೆ.                   

ಮಳೆನೀರಿನ ಹರಿವಿಗೆ ಅಡ್ಡದಾಗಿ ಒಡ್ಡು ಕಟ್ಟುವುದು, ಇಂಗು ಬಾವಿ
        ಮಳೆ ನೀರಿನ ಹರಿವಿಗೆ ಅಲ್ಲಲ್ಲಿ ಸಣ್ಣ ಸಣ್ಣ ಒಡ್ಡುಗಳನ್ನು ಕಟ್ಟುವುದು ಮಣ್ಣಿನಲ್ಲಿ ನೀರಿಂಗಿಸುವ ಇನ್ನೊಂದು ವಿಧಾನ. ಒಡ್ಡುಗಳಲ್ಲಿ ಸಂಗ್ರಹವಾದ ನೀರು ಸುತ್ತಲಿನ ಭೂಮಿಯ ತೇವಾಂಶವನ್ನು ಹೆಚ್ಚಿಸುವುದರಿಂದ ಆ ಪ್ರದೇಶಗಳಲ್ಲಿ ಮರಗಿಡಗಳು ಚೆನ್ನಾಗಿ ಬೆಳೆಯುವುವು. ಜೊತೆಗೆ ಆಳಕ್ಕಿಳಿದ ಬೇರುಗಳ ಸಂದಿನಲ್ಲಿ ನೀರು ಭೂಮಿಗೆ ಇಂಗುವುದು. ಒಡ್ಡುಗಳ ಜೊತೆಗೆ ಆಧುನಿಕ ಇಂಗುಬಾವಿಗಳನ್ನೂ ನಿರ್ಮಿಸಲಾಗಿದೆ. ಆದರೆ ಈ ಇಂಗುಬಾವಿಗಳ ನಿರ್ಮಾಣಕ್ಕೆ ವೆಚ್ಚ ಹೆಚ್ಚು ಆದರೆ ಪರಿಣಾಮ ಕಡಿಮೆ ಎನ್ನುವುದು ಕಾರ್ಯಕರ್ತರ ಅನಿಸಿಕೆ.

ಕಾಸರಘಟ್ಟದ ನೀರು ನಿರ್ವಹಣಾ ಸಹಕಾರಿ ಸಂಘ
      ಕಾಸರಘಟ್ಟ ಗ್ರಾಮದಲ್ಲಿ ನೀರು ನಿರ್ವಹಣೆಗಾಗಿಯೇ ಸಹಕಾರಿ ಸಂಘ ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು ಸುತ್ತಲಿನ ಕೆರೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ. ಕೆರೆಗಳಲ್ಲಿ ಮೀನು ಸಾಕಲು ವಾರ್ಷಿಕ ಗುತ್ತಿಗೆಯನ್ನು ನೀಡಲಾಗುತ್ತಿದ್ದು ಇದರಿಂದ ಕೆರಗಳು ಸ್ವಚ್ಛವಾಗಿರುವುದರ ಜೊತೆಗೆ ಸಂಘ ಆದಾಯವನ್ನೂ ಗಳಿಸುತ್ತಿದೆ. ಗ್ರಾಮಸ್ಥ ಕೃಷಿಕರೇ ಈ ಸಂಘದ ನಿರ್ದೇಶಕರಾಗಿದ್ದು ಊರಿನವರ ಸಹಕಾರದಿಂದ ಜಲಮೂಲಗಳ ಸಂರಕ್ಷಣೆಯ ಕಾರ್ಯವನ್ನು ಮಾಡುತ್ತಿದೆ. ಜೊತೆಗೆ ಕಾಡು ಬೆಳಸುವ ಯೋಜನೆ, ಗ್ರಾಮಸ್ಥರಲ್ಲಿ ನೀರಿನ ಬಳಕೆಯ ಕುರಿತು ಶಿಕ್ಷಣ ನೀಡುವ ಕಾರ್ಯದಲ್ಲೂ ಸಂಘ ತೊಡಗಿಕೊಂಡಿದೆ.

       ಇಂದು ಬಹುತೇಕ ಗ್ರಾಮಗಳು ಜಲಕ್ಷಾಮದ ಸಮಸ್ಯೆಯನ್ನು ಎದುರಿಸುತ್ತಿರುವುದಕ್ಕೆ ಕೇವಲ ಮಳೆಯ ಪ್ರಮಾಣದಲ್ಲಿನ ವ್ಯತ್ಯಾಸ ಕಾರಣವಲ್ಲ.  ನೀರಿನ ಮೂಲಗಳನ್ನು ಉಳಿಸುವುದರಲ್ಲಿನ ಉದಾಸೀನತೆ ಹಾಗೂ ವಿವೇಚನಾರಹಿತ ಬಳಕೆ ಜಲ ಸಮಸ್ಯೆಯ ಕಾರಣಗಳಲ್ಲಿ ಪ್ರಮುಖವಾದವು. ಕಾಸರಘಟ್ಟದ ಸುತ್ತಲಿನ ಗ್ರಾಮಸ್ಥರು ಅನುಸರಿಸುತ್ತಿರುವ ವಿಧಾನಗಳು ತುಂಬ ಸರಳ. ಅವರ ಪರಿಶ್ರಮದಿಂದಾಗಿ ಕೆರೆಕತ್ತಿಗನೂರಿನ ಕೆರೆಯಲ್ಲಿ ಬೇಸಿಗೆಯಲ್ಲಿಯೂ ಸಾಕಷ್ಟು ನೀರಿದೆ, ಅಲ್ಲಿನ ಕಲ್ಯಾಣಿ ಹಾಗೂ ಬಾವಿಗಳಲ್ಲಿಯೂ ನೀರಿದೆ.

         ನಮ್ಮ ನಮ್ಮ ಊರುಗಳಲ್ಲಿರುವ ಕೆರೆಗಳ ಪುನಶ್ಚೇತನ ಕಾರ್ಯದ ಜೊತೆಗೆ ಸ್ಥಳೀಯ ಪರಿಸರಕ್ಕೆ ಹೊಂದುವ ಜಲಸಂವರ್ಧನ ಕಾರ್ಯಗಳನ್ನು ಕೈಗೊಳ್ಳುವುದು ಇಂದು ಒಂದು ರೀತಿಯ ಆಂದೋಲನವಾಗಿ ನಡೆಯಬೇಕಾದ ಕೆಲಸವಾಗಿದೆ. ಏಕೆಂದರೆ ಜೀವಜಲ ಅಮೂಲ್ಯವಾದುದು.

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...