Wednesday, June 29, 2016

ಯೋಗದಲ್ಲಿ ಒಂದುಗೂಡಲಿ ವಿಶ್ವ

(ಪುಂಗವ  15/06/2016)      

      ಪ್ರಾಚೀನ ಭಾರತದಲ್ಲಿ ವಿಕಸನಗೊಂಡ ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ಸಾಧನೆಯ ಒಂದು ಅಭ್ಯಾಸಮಾರ್ಗ ಯೋಗ. ಸಂಸ್ಕೃತಮೂಲದ ಯುಜ್ ಶಬ್ದದಿಂದ ’ಯೋಗ’ ಹುಟ್ಟದೆ. ಈ ಪದಕ್ಕೆ ಒಂದುಗೂಡಿಸುವುದು, ಸೇರಿಸುವುದು, ಐಕ್ಯವಾಗುವುದು, ಒಗ್ಗಟ್ಟಾಗುವುದು ಮೊದಲಾದ ಅರ್ಥವಿದೆ. ಹಿಂದೂ ತತ್ವಶಾಸ್ತ್ರ, ಉಪನಿಷತ್ತುಗಳು, ಸಂಹಿತೆಗಳು, ಬಗವದ್ಗೀತೆ ಮುಂತಾದ ಗ್ರಂಥಗಳಲ್ಲಿ ಯೊಗದ ವಿವರಗಳಿವೆ. ಜೈನ ಹಾಗೂ ಬೌದ್ಧ ಸಾಹಿತ್ಯವಷ್ಟೇ ಅಲ್ಲದೇ ಮಹರ್ಷಿ ಪತಂಜಲಿ ರಚಿಸಿದ ಯೋಗಸೂತ್ರಗಳು, ಹಠಯೋಗ ಪ್ರದೀಪಿಕೆ, ಶಿವಸಂಹಿತೆ ಮೊದಲಾದ ಗ್ರಂಥಗಳು ಯೋಗ ಸಾಧನೆಯ ಕುರಿತು ವಿವರಗಳನ್ನು ನೀಡುತ್ತವೆ. ಪ್ರಾಚೀನ ಕಾಲದಿಂದ ಭಾರತೀಯ ಜನಜೀವನದಲ್ಲಿ ಶರೀರ ಮನೋಬುದ್ಧಿಗಳ ವಿಕಸನದ ಶಿಕ್ಷಣ ಹಾಗೂ ಸಾಧನೆಯ ಅಭ್ಯಾಸ ಪದ್ಧತಿ ಯೋಗವಾಗಿತ್ತು ಎನ್ನುವುದು ಇದರಿಂದ ತಿಳಿಯುತ್ತದೆ. ಜನರ ಆಡುಭಾಷೆಯಲ್ಲಿಯೂ ’ಯೋಗ’ ಎನ್ನುವ ಈ ಪದವು ಎಷ್ಟು ಪ್ರಚಲಿತದಲ್ಲಿದೆ ಎಂದರೆ ಮಾನವ ಪ್ರಯತ್ನ ಮತ್ತು ದೈವಾನುಗ್ರಹ ಒಂದುಗೂಡಿ ಏನೇ ಒಳ್ಳೆಯದಾದರೂ ಎಂತಹ ಸುಯೋಗ, ಆತನ ಯೋಗ ಚೆನ್ನಾಗಿತ್ತು, ಯೋಗಾಯೋಗದಿಂದ ಒಳ್ಳೆಯದಾಯಿತು ಇತ್ಯಾದಿಯಾಗಿ ಹೇಳಲಾಗುತ್ತದೆ. ಅಂದರೆ ಭಾರತೀಯರ ಮಟ್ಟಿಗೆ ಯೋಗದ ಅರ್ಥವ್ಯಾಪ್ತಿ ತುಂಬಾ ವಿಶಾಲವಾಗಿರುವುದು ತಿಳಿಯುತ್ತದೆ.
       ಬೌತಿಕ ಹಾಗೂ ಬೌದ್ಧಿಕ ಸ್ವಾಸ್ಥ್ಯ ಯೋಗಾಭ್ಯಾಸದಿಂದ ಸಿಗುತ್ತದೆ ಎನ್ನುವುದು ಇಂದು ಎಲ್ಲರೂ ಅರಿತಿರುವ ವಿಚಾರ. ಆದರೆ ಯೋಗವೆಂದರೆ ಕೇವಕ ಶಾರೀರಿಕ ಕಸರತ್ತಲ್ಲ. ಸ್ವಸ್ಥ ಸಮಾಜಜೀವವನ್ನು ಸ್ಥಾಪಿಸುವ ಮಾರ್ಗವೂ ಹೌದು. ವ್ಯಕ್ತಿಯ ಶಾರೀರಿಕ ಮಾನಸಿಕ ಆರೋಗ್ಯ ಸರಿ ಇದ್ದರೆ, ಆತನ ಬುದ್ಧಿಗೆ ಸುಸಂಸ್ಕೃತ ಸಂಸ್ಕಾರ ದೊರಕಿದರೆ ತನ್ನಿಂದ ತಾನೆ ಕುಟುಂಬದಲ್ಲಿ ನೆಮ್ಮದಿ ಹಾಗೂ ಉತ್ತಮ ವಾತಾವರಣ ನೆಲೆಸುತ್ತದೆ. ಅಂತಹ ಕುಟುಂಬದ ಪ್ರಭಾವ ನೆರೆಹೊರೆಯಲ್ಲೂ ಹರಡುವುದರ ಮೂಲಕ ಸುಸಂಸ್ಖೃತ ಸಮಾಜ ನೆಲೆಯಾಗಲು ಸಾಧ್ಯವಾಗುತ್ತದೆ. ದೇಶವು ಸ್ವಸ್ಥ ಹಾಗೂ ಸುದೃಢವಾದಾಗ ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸಲು ನೇತೃತ್ವವಹಿಸಬಲ್ಲದು.


ಈ ಹಿನ್ನೆಲೆಯಲ್ಲಿ ರಾಜಕೀಯ ವೈಶಮ್ಯ, ಜಾತೀಯತೆ, ಮತಾಂಧತೆ, ಭ್ರಷ್ಟಾಚಾರಗಳಲ್ಲಿ ಹಂಚಿರುವ ನಮ್ಮ ಸಮಾಜವನ್ನು ಒಂದುಗೂಡಿಸುವುದು ಯೋಗಮಾರ್ಗದಿಂದ ಸಾಧ್ಯ. ಆರ್ಥಿಕ ವಿಷಮತೆ, ಭಯೋತ್ಪಾದನೆ, ಯುದ್ಧಸನ್ನಾಹದ ಶಸ್ತ್ರಾಸ್ತ್ರ ಸಂಗ್ರಹಣೆಗಳ ಮೂಲಕ ಸದಾ ಒಂದು ರೀತಿಯ ಭಯದ ನೆರಳಲ್ಲಿರುವ ವಿಶ್ವದಲ್ಲಿ ಶಾಂತಿಯನ್ನು ನೆಲೆಸಲು ಅಂತರರಾಷ್ಟ್ರೀಯ ಯೋಗದಿವಸ ಪ್ರೇರಣೆಯಾಗಲಿ. ವಿಶ್ವ ಯೋಗದಲ್ಲಿ ಒಂದುಗೂಡಲಿ.

ಸಮತ್ವವೇ ಯೋಗ 
ಯೋಗಸ್ಥಃ ಕುರು ಕರ್ಮಾಣಿ ಸಂಗಮ್ ತ್ಯಕ್ತ್ವಾ ಧನಂಜಯ| 
ಸಿದ್ಧಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಮ್ ಯೋಗ ಉಚ್ಯತೇ||   ...... ಶ್ರೀಮದ್ ಭಗವದ್ಗೀತೆ
ಕರ್ಮಫಲದ ಆಸಕ್ತಿಯನ್ನು ತ್ಯಜಿಸಿ ಯಶಸ್ಸು ಅಪಯಶಸ್ಸುಗಳನ್ನು ಸಮಾನವಾಗಿ ಸ್ವೀಕರಿಸಿ ಯೋಗ ಮನಸ್ಥಿತಿಯಲ್ಲಿ ನೆಲೆನಿಂತು ಕರ್ತವ್ಯವನ್ನು ನಿರ್ವಹಿಸು. ಎಲ್ಲವನ್ನೂ ಸಮದ್ಥಷ್ಟಿಯಲ್ಲಿ, ಏಕರೀತಿಯಲ್ಲಿ ಕಾಣುವುದೇ ಯೋಗ. 
ಶ್ರೀಕೃಷ್ನನು ಅರ್ಜುನನಿಗೆ ರಣಾಂಗಣದ ನಟ್ಟನಡುವೆ ಹೇಳಿದಂತೆ ಎಲ್ಲ ತರಹದ ಸನ್ನಿವೇಶದಲ್ಲೂ ಸಮಚಿತ್ತರಾಗಿ ಪ್ರತಿಫಲದ ಬಗ್ಗೆ ಅನಾಸಕ್ತರಾಗಿ ಲಾಭ ನಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಸಿನಿಂದ ಕೆಲಸ ಮಾಡಬೇಕು. ಹಾಗಾದಾಗ ಬದುಕು ಅರ್ಥಪೂರ್ಣ ಹಾಗೂ ಆನಂದಮಯವಾಗುವುದರಲ್ಲಿ ಸಂಶಯವಿಲ್ಲ. ಅಂತಹ ಮನಸ್ಸಿನ ಸಮತ್ವದ ಸ್ಥಿತಿ ಯೋಗಸಾಧನೆಯಿಂದ ಲಭಿಸುತ್ತದೆ. ಇಂತಹ ಸಮತೋಲಿತ ಜೀವನವೇ ಯೋಗ.

ಮಹರ್ಷಿ ಪತಂಜಲಿ
ಒಂದಾನೊಂದು ಕಾಲದಲ್ಲಿ ಪೃಥ್ವಿಯ ಮೇಲಿನ ಋಷಿಗಳೆಲ್ಲ ಸೇರಿ ಮಹಾವಿಷ್ಣುವಿನ ಬಳಿ ಸಮಸ್ಯೆಯೊಂದನ್ನು ತೆಗೆದುಕೊಂಡು ಹೋದರು. ಮಹಾವಿಷ್ಣುವೇ ಧನ್ವಂತರಿಯ ರೂಪದಲ್ಲಿ ಅವತರಿಸಿ ರೋಗ ರುಜಿನಗಳ ನಿವಾರಣೆಗಾಗಿ ಆಯುರ್ವೇದವನ್ನು ನೀಡಿದರೂ ಜನರು ಮತ್ತೆ ಮತ್ತೆ ಕಾಯಿಲೆಗೆ ಬೀಳುತ್ತಿರುವರು. ಇದಕ್ಕೆ ಪರಿಹಾರವನ್ನು ನೀನೇ ನೀಡಬೇಕುಎನ್ನುವುದು ಅವರ ಅಳಲಾಗಿತ್ತು. ಹಾಗೆಯೇ ಕೇವಲ ಶಾರೀರಿಕ ವ್ಯಾಧಿಗಳಷ್ಟೇ ಅಲ್ಲದೇ, ಮಾನಸಿಕ ಕ್ಲೇಷಗಳು, ಸಿಟ್ಟು, ಅಸೂಯೆ, ಅಹಂಕಾರ, ಮಾತ್ಸರ್ಯ ಮುಂತಾದವುಗಳಿಂದ ಮುಕ್ತಿಯನ್ನು ಪಡೆದು ಶ್ರೇಯಸ್ಸಿನ ಕಡೆ ನಡೆಯುವ ಮಾರ್ಗ ಯಾವುದು ಎನ್ನುವುದು ಅವರ ಹುಡುಕಾಟವಾಗಿತ್ತು. 

ಸಾವಿರ ಹೆಡಗಳ ಆದಿಶೇಷನ ಮೇಲೆ ಮಲಗಿದ್ದ ಮಹಾವಿಷ್ಣುವು ಋಷಿಗಳ ಅಳಲಿಗೆ ಸ್ಪಂದಿಸಿ ಜಾಗೃತ ಪ್ರಜ್ಞೆಯ ಪ್ರತೀಕವಾದ ಆದಿಶೇಷನನ್ನೇ ಭೂಲೋಕಕ್ಕೆ ಕಳುಹಿಸಿಕೊಟ್ಟನು. ಆದಿಶೇಷನೇ ಮಹರ್ಷಿ ಪತಂಜಲಿಯ ರೂಪದಲ್ಲಿ ಅವತರಿಸಿದನು. ಹೀಗೆ ಜನಿಸಿದ ಪತಂಜಲಿಯು ಶರೀರ ಮನೋಬುದ್ಧಿಗಳ ಸರ್ವಾಂಗೀಣ ವಿಕಾಸ ಸಾಧನಾ ಮಾರ್ಗವಾದ ಯೋಗವನ್ನು ನೀಡಿ ಜಗತ್ತನ್ನು ಉದ್ಧರಿಸಿದನು. ಕೇವಲ ಯೋಗಸೂತ್ರಗಳನ್ನಷ್ಟೇ ಅಲ್ಲದೇ ವೈದ್ಯಕೀಯ ಸೂತ್ರದ ಮೂಲಕ ಶರೀರವನ್ನೂ, ವ್ಯಾಕರಣದ ಮೂಲಕ ಭಾಷೆಯನ್ನು ಶುದ್ಧಗೊಳಿಸಿದ ಶ್ರೇಯಸ್ಸು ಮಹರ್ಷಿ ಪತಂಜಲಿಗೆ ಸಲ್ಲುತ್ತದೆ. ಅಂತಹ ಮಹರ್ಷಿ ಪತಂಜಲಿಗೆ ಮಾನವಕುಲ ಸದಾ ಋಣಿಯಾಗಿದೆ.




ಯೋಗೇನ ಚಿತ್ತಸ್ಯ ಪದೇನ ವಾಚಾಮ್, ಮಲಂ ಶರೀರಸ್ಯ ಚ ವೈದ್ಯಕೇನ| 
ಯೋಪಾಕರೋತ್ತಂ ಪ್ರವರಮ್ ಮುನೀನಾಮ್, ಪತಂಜಲಿಮ್ ಪ್ರಾಂಜಲಿರಾನತೋಸ್ಮಿ||

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...