Wednesday, December 9, 2015

ತಲೆಯ ಮೇಲಿನ ತೂಗುಗತ್ತಿ - ಜಾಗತಿಕ ಹವಾಮಾನ ಬದಲಾವಣೆ


(ಪುಂಗವ 15/12/2015)

            ಒಂದು ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಸಮಾನವಾಗಿ ನಡೆದುಬಂದಿರುವ ಋತುಚಕ್ರವನ್ನೇ ಹವಾಮಾನ ಎನ್ನಲಾಗುವುದು. ಇದಕ್ಕನುಗುಣವಾಗಿ ಅಲ್ಲಿನ ಜೀವನಕ್ರಮ ರೂಪುಗೊಂಡಿರುತ್ತದೆ. ಆರ್ಥಿಕ ಪ್ರಗತಿಯ ಹಿಂದೆ ಬಿದ್ದಿರುವ ಮಾನವನ ಚಟುವಟಿಕೆಗಳಿಂದ ಜಾಗತಿಕ ಹವಾಮಾನದಲ್ಲಿ ಏರುಪೇರಾಗುತ್ತಿದ್ದು ಕಳೆದ ಕೆಲವು ವರ್ಷಗಳಿಂದ ಗಮನಿಸಿರುವಂತೆ ಹವಾಮಾನ ಬದಲಾವಣೆ ಮತ್ತು ತಾಪಮಾನ ಹೆಚ್ಚಳ ಪೃಥ್ವಿಯ ಭವಿಷ್ಯದ ಜೀವನಕ್ಕೆ ಕಂಟಕಪ್ರಾಯವಾಗಿದೆ. ಹವಾಮಾನ ಬದಲಾವಣೆಯ ಪ್ರಮುಖ ಕಾರಣ ಪೃಥ್ವಿಯ ಹೊರಮೈ ತಾಪಮಾನದಲ್ಲಿ ಹೆಚ್ಚಳ. ಇಂಗಾಲಾಮ್ಲ (ಕಾರ್ಬನ್ ಡೈ ಆಕ್ಸೈಡ್), ಮೀಥೇನ್, ನೈಟ್ರಸ್ ಆಕ್ಸೈಡ್ ಮೊದಲಾದ ಅನಿಲಗಳ ಪ್ರಮಾಣ ವಾತಾವರಣದಲ್ಲಿ ಹೆಚ್ಚುವುದರಿಂದ ಪೃಥ್ವಿಯ ತಾಪಮಾನದಲ್ಲಿ ಹೆಚ್ಚಳ ಉಂಟಾಗುವುದು, ಇದನ್ನು ಹಸಿರುಮನೆ ಪರಿಣಾಮ ಎಂದು ಕರಯಲಾಗುತ್ತದೆ. ಹವಾಮಾನ ಬದಲಾವಣೆ ಮತ್ತು ತಾಪಮಾನದ ಹೆಚ್ಚಳದಿಂದಾಗುವ ಪರಿಣಾಮವನ್ನು ವಿಶೇಷವಾಗಿ ವಿವರಿಸಬೇಕಾಗಿಲ್ಲ. ಒಂದೆರಡು ದುಃಷ್ಪರಿಣಾಮಗಳೆಂದರೆ, ಧ್ರುವಪ್ರದೇಶ, ಹಿಮಾಲಯ ಪ್ರದೇಶಗಳ ಹಿಮಗುಡ್ಡಗಳು ಕರಗಿ ಸಮುದ್ರಮಟ್ಟ ಏರುವುದರಿಂದ ತೀರಪ್ರದೇಶದ ಬಹುದೊಡ್ಡ ಭೂಭಾಗ ಹಾಗೂ ಅನೇಕ ನಡುಗಡ್ಡೆಗಳು ಮುಳುಗಿಹೋಗುವ ಆತಂಕ ವಿಶ್ವವನ್ನು ಕಾಡುತ್ತಿದೆ. ಹವಾಮಾನದ ವೈಪರಿತ್ಯದಿಂದ ಮಳೆಯ ಹಂಚಿಕೆಯಲ್ಲಿ ಏರುಪೇರು, ಋತುಚಕ್ರದಲ್ಲಿ ಬದಲಾವಣೆ, ಅತಿವೃಷ್ಟಿ ಅನಾವೃಷ್ಟಿ, ಆ ಮೂಲಕ ನೀರಿನ ಕೊರತೆ, ಆಹಾರೋತ್ಪಾನೆಯಲ್ಲಿ ಕಡಿತ ಮೊದಲಾದ ಸವಾಲುಗಳ ಸರಮಾಲೆ ವಿಶ್ವದೆದುರು ನಿಲ್ಲಲಿದೆ. 
             ಹವಾಮಾನ ಬದಲಾವಣೆಯ ಸಮಸ್ಯೆ ಜಾಗತಿಕ ಮಟ್ಟದ್ದು. ಕೈಗಾರಿಕಾ ಪ್ರಧಾನ ಐರೋಪ್ಯ ರಾಷ್ಟ್ರಗಳು, ಅರಬ್ ದೇಶಗಳು, ಅಮೇರಿಕ, ಚೀನಾ, ಕೊರಿಯ, ಜಪಾನ್, ಮೊದಲಾದ ರಾಷ್ಟ್ರಗಳು ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಸಿರುಮನೆ ಅನಿಲಗಳನ್ನು ಸೇರಿಸುತ್ತಿದ್ದರೂ ಅದರಿಂದಾಗುವ ದುಃಷ್ಪರಿಣಾಮ ಕೇವಲ ಈ ದೇಶಗಳಿಗೆ ಸೀಮಿತವಾಗಿಲ್ಲ. ಆಫ್ರಿಕ ಮತ್ತು ಏಷಿಯ ಖಂಡಗಳ ಆರ್ಥಿಕವಾಗಿ ಹಿಂದುಳಿದ ದೇಶಗಳು ಜಾಗತಿಕ ಹವಾಮಾನ ಬದಲಾವಣೆಯಿಂದಾಗುವ ಪರಿಣಾಮದ ಬಲಿಪಶುಗಳಾಗುತ್ತಿವೆ.
                   ಆದ್ದರಿಂದ ಈ ಗಂಭೀರ ಸವಾಲನ್ನು ಎದುರಿಸಲು ವಿಶ್ವಸಮುದಾಯ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಬೇಸರದ ಸಂಗತಿ ಎಂದರೆ ಕಳೆದ ಇಪ್ಪತ್ತೈದು ವರ್ಷಗಳಿಂದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (United Nations Environment Program) ಅಡಿಯಲ್ಲಿ ಮಾತುಕತೆ ಶೃಂಗಸಭೆಗಳು ಸಡೆಯುತ್ತಿದ್ದರೂ ಒಂದು ಸೂಕ್ತ ಮಾರ್ಗದರ್ಶಿ ಸೂತ್ರ ಇನ್ನೂ ಒಪ್ಪಂದ ರೂಪಕ್ಕೆ ಬಂದಿಲ್ಲ. ಕೈಗಾರಿಕಾ ಕೇಂದ್ರಿತ ಅರ್ಥವ್ಯವಸ್ಥೆಯಿಂದ ಶ್ರೀಮಂತವಾಗಿರುವ ಐರೋಪ್ಯ ದೇಶಗಳು, ಅಮೇರಿಕ, ತೈಲೋತ್ಪನ್ನಗಳಿಂದ ಶ್ರೀಮಂತ ಅರಬ್ ದೇಶಗಳು ಇನ್ನೂ ಅತಿಹೆಚ್ಚಿನ ಪ್ರಮಾಣದಲ್ಲಿ ವಾತಾವರಣವನ್ನು ಕಲಿಷಿತಗೊಳಿಸುತ್ತಿವೆ, ಆದರೆ ಗುಲಾಮಗಿರಿಯ ಕಾಲದಲ್ಲಿ ಇವರೇ ಲೂಟಿ ಮಾಡಿದ ಏಷಿಯ-ಆಫ್ರಿಕದ ಬಡದೇಶಗಳ ಸಮಸ್ಯೆಯನ್ನು ಪರಿಹರಿಸುವತ್ತ ಗಮನ ಹರಿಸುತ್ತಿಲ್ಲ. ಜೊತೆಗೆ ವಿಶ್ವದ ಆರ್ಥಿಕ ಶಕ್ತಿಯಾಗಿ ಮೆರೆಯುವ ಕನಸು ಕಾಣುತ್ತಿರುವ ಚೀನಾ, ಬಡತನದಲ್ಲಿರುವ ಜನಸಂಖ್ಯೆಯ ಬಹುದೊಡ್ಡ ಭಾಗವನ್ನು ಮೇಲೆತ್ತಲು ಹರಸಾಹಸಪಡುತ್ತಿರುವ ಭಾರತ, ಬ್ರಾಸಿಲ್ ಮೊದಲಾದ ದೇಶಗಳಲ್ಲಿ ವಾತಾವರಣಕ್ಕೆ ಸೇರುವ ಹಸಿರುಮನೆ ಅನಿಲಗಳ ಪ್ರಮಾಣ ಏರುತ್ತಿದೆ.
            ಈ ಸಂಕಷ್ಟದಿಂದ ಹೊರಬರಲು ಮಾರ್ಗವೊಂದೇ. ಪಾಶ್ಚಾತ್ಯ ಕೊಳ್ಳುಬಾಕ ಸಂಸ್ಕೃತಿ, ಮಾರುಕಟ್ಟೆ ಆಧಾರಿತ ಜೀವನಶೈಲಿಯಿಂದ ಸರಳ ಜೀವನಶೈಲಿಯನ್ನು ಅಳವಡಿಸಕೊಳ್ಳುವುದು. ಪ್ರಾಕೃತಿಕ ಸಂಪನ್ಮೂಲಗಳಿರುವುದು ಕೇವಲ ಮನುಷ್ಯನ ಭೋಗಕ್ಕೆ ಮಾತ್ರವಲ್ಲ ಪ್ರತಿಯೊಂದು ಜೀವಿಯ ಬದುಕನ್ನೂ ಪೋಷಿಸಲು ಹಾಗೂ ಭವಿಷ್ಯದ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎನ್ನುವ ಸತ್ಯವನ್ನು ಅರಿತು ನಡೆದರೆ ಭವಿಷ್ಯದಲ್ಲಿ ಈ ಭೂಮಿಯ ಮೇಲೆ ಜೀವಜಗತ್ತೂ ಜೀವನ ಇನ್ನೊಂದಿಷ್ಟು ಕಾಲ ಉಳಿಯುವ ಸಾಧ್ಯತೆಯಿದೆ.



ಎಚ್ಚರ ವಹಿಸಬೇಕಿದೆ ಭಾರತ

           ತಾಪಮಾನ ಏರಿಕೆಗೆ ಕಾರಣವಾದ ಹಸಿರುಮನೆ ಅನಿಲಗಳನ್ನು ಅತಿಹೆಚ್ಚು ಹೊರಸೂಸುವ ದೇಶಗಳ ಸಾಲಿನಲ್ಲಿ ಭಾರತ ಮೂರನೇ ಸ್ಥಾದದಲ್ಲಿದೆ. ಆದರೆ ತಲಾವಾರು ಅಂಕಿಅಂಶಗಳನ್ನು ತೆಗೆದುಕೊಂಡರೆ ಬಹುತೇಕ ಪಾಶ್ಚಾತ್ಯ ದೇಶಗಳು ಮತ್ತು ತೈಲ ಉತ್ಪಾದಿಸುವ ಅರಬ್ ದೇಶಗಳು ಮೊದಲ ಸ್ಥಾನಗಳಲ್ಲಿದ್ದರೆ ಚೀನಾ ಹಾಗೂ ಭಾರತ ಕ್ರಮವಾಗಿ 54 ಮತ್ತು 133ನೇ ಸ್ಥಾನಗಳಲ್ಲಿವೆ.

     2030ರ ಹೊತ್ತಿಗೆ ವಿಶ್ವದ ಜನಸಂಖ್ಯೆ 9 ಶತಕೋಟಿಯಾಗಲಿದ್ದು ಅದರಲ್ಲಿ 6ಶತಕೋಟಿಯಷ್ಟು ನಗರವಾಸಿಗಳಾಗಲಿದ್ದಾರೆ. ಭಾರತದಲ್ಲಿ ಜನಸಂಖ್ಯೆಯ ಅರ್ಧದಷ್ಟು (ಸುಮಾರು 60 ಕೋಟಿ) ಒಟ್ಟೂ 68ನಗರಗಳಲ್ಲಿ ವಾಸಿಸಲಿದ್ದಾರೆ. ಆತಂಕದ ಸಂಗತಿಯೆಂದರೆ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಅತಿಯಾಗಿ ಮಲಿನಗೊಂಡ ವಿಶ್ವದ ಇಪ್ಪತ್ತು ನಗರಗಳಲ್ಲಿ ಹದಿಮೂರು ನಗರಗಳು ಭಾರತದಲ್ಲಿವೆ. ಮಾಲಿನ್ಯಗೊಂಡ ನಗರಗಳ ಯಾದಿಯಲ್ಲಿ ದೇಶದ ರಾಜಧಾನಿ ನವದೆಹಲಿ ಅಗ್ರಸ್ಥಾನ ಪಡೆದರೆ ಪಟ್ನಾ, ಗ್ವಾಲಿಯರ್ ಮತ್ತು ರಾಯಪುರ್‌ಗಳು ನಂತರದ ಸ್ಥಾನಗಳಲ್ಲಿವೆ.

           ಬಡತನ ರೇಖೆಯ ಕೆಳಗಿರುವ ಜನಸಂಖ್ಯೆಯ ದೊಡ್ಡ ಭಾಗದ ಆರ್ಥಿಕ ಪ್ರಗತಿಗೆ ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಟಿಸುವುದು ಭಾರತದಂತಹ ದೇಶದಲ್ಲಿ ಅನಿವಾರ್ಯ.  ಆದರೆ ಆರ್ಥಿಕ ಪ್ರಗತಿಯ ಜೊತೆಗೆ ಪರಿಸರದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮಹತ್ವದ್ದಾಗಿದೆ. ಏಕೆಂದರೆ ಪರಿಸರ ಕಾಳಜಿಯಿಲ್ಲದ ಯೋಜನೆಗಳು ಭವಿಷ್ಯದಲ್ಲಿ ದೇಶದ ಆರ್ಥಿಕತೆಗೂ ಮಾರಕವಾಗಲಿವೆ. ಆದ್ದರಿಂದ ಪರಿಸರಸ್ನೇಹಿಯಾಗುವ ಅಭಿವೃಧ್ಧಿ ಯೋಜನೆಗಳನ್ನು ಜಾರಿಗೊಳಿಸುವುದು, ತಂತ್ರಜ್ಞಾನದ ಸದ್ಬಳಕೆಯಿಂದ ವಾತಾವರಣ ಪ್ರದೂಷಣೆಯನ್ನು ಕಡಿಮೆಗೊಳಿಸುವದಕ್ಕೆ ಆದ್ಯತೆ ನೀಡಬೇಕು. ಜೊತೆಗೆ ಗ್ರಾಮೀಣ ಜನಜೀವನವನ್ನು ಸುದೃಢಗೊಳಿಸಿ ನಗರಗಳಿಗೆ ವಲಸೆ ಹೋಗುವುದನ್ನು ನಿಯಂತ್ರಿಸವುದಕ್ಕೂ ಗಮನ ಹರಿಸಬೇಕಾಗಿದೆ. ಹಾಗೆಯೇ ಗ್ರಾಮಗಳು ನಗರಗಳಿಗೆ ಸಾಮಾನು ಸರಂಜಾಮುಗಳನ್ನೊದಗಿಸಿ ಪೋಷಿಸುವ ಕೇಂದ್ರಗಳಷ್ಟೇ ಆಗದಿರುವಂತೆ ನೋಡಿಕೊಳ್ಳಬೇಕಿದೆ.


ಪ್ಯಾರಿಸ್ ಶೃಂಗಸಭೆ - COP21

2015ನೇ ಸಾಲಿನ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆ ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್‌ನಲ್ಲಿ ನವಂಬರ್ 30ರಿಂದ ಡಿಸೆಂಬರ್ 11ರವರೆಗೆ ನಡೆಯಿತು. 1992ರಲ್ಲಿ ಬ್ರೆಸಿಲ್ ದೇಶದ ರಿಯೋ-ಡೆ-ಜನರಿಯೋದಲ್ಲಿ ನಡೆದ ಅರ್ಥ ಸಮಿಟ್ ಹೆಸರಿನ ಶೃಂಗಸಭೆಯ ವೈಶ್ವಿಕ ಪರಿಸರ ಒಪ್ಪಂದ (United Nations Framework Convention on Climate Change)  ಅನ್ವಯ ನಡೆಯುತ್ತಿರುವ ವಾರ್ಷಿಕ ಶೃಂಗಸಭೆಯ ಇಪ್ಪತ್ತೊಂದನೇ ಆವೃತ್ತಿಯಾದ ಈ ಸಮ್ಮೇಳನದಲ್ಲಿ ವಿಶ್ವದ 196 ದೇಶಗಳು ಪಾಲ್ಗೊಂಡಿವೆ. ಜಾಗತಿಕ ಹವಾಮಾನ ಬದಲಾವಣೆ ಮತ್ತು ತಾಪಮಾನ ಹೆಚ್ಚಳವನ್ನು ನಿಗರಹಿಸುವ ನಿಟ್ಟಿನಲ್ಲಿ ವೈಶ್ವಿಕ ಒಪ್ಪಂದವನ್ನು ಜಾರಿಗೆ ತರುವುದು ಈ ಸಭೆಯ ಮುಖ್ಯ ಉದ್ಧೇಶವಾಗಿದೆ. ಪ್ರಮುಖವಾಗಿ ಪೆಟ್ರೋಲಿಯಂ ತೈಲ, ಕಲ್ಲಿದ್ದಲು ಮೊದಲಾದ ಫಾಸಿಲ್ ಇಂಧನಗಳನ್ನು ಉರಿಸುವುದರಿಂದ ವಾತಾವರಣಕ್ಕೆ ಸೇರಲ್ಪಡುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಕಡಿತಗೊಳಿಸಿ ಸರಾಸರಿ ಜಾಗತಿಕ ತಾಪಮಾನ ಕೈಗಾರಿಕಾ ಕ್ರಾಂತಿಯ ಪೂರ್ವ ಕಾಲದ (ಅಂದರೆ 1750ನೇ ಇಸವಿಗಿಂತ ಹಿಂದೆ) ಸರಾಸರಿ ತಾಪಮಾನಕ್ಕಿಂತ 2 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಮಾತ್ರ ಹೆಚ್ಚಳವಾಗುವಂತೆ ನಿಯಂತ್ರಿಸಲು ಜಾಗತಿಕ ಮಟ್ಟದಲ್ಲಿ ಕ್ರಮಕೈಗೊಳ್ಳುವ ವಿಷಯದ ಕುರಿತು ಈ ಸಭೆ ಚರ್ಚಿಸಿತು.


ವಿಶ್ವ ಸೌರಶಕ್ತಿ ಗುಂಪಿಗೆ ಭಾರತದ ನೇತೃತ್ವ

ಪ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಬದಲಾವಣೆ ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅಂತರರಾಷ್ಟ್ರೀಯ ಸೌರಶಕ್ತಿ ಒಕ್ಕೂಟಕ್ಕೆ ಚಾಲನೆ ನೀಡಿದರು. ಸೌರಶಕ್ತಿಯ ತಂತ್ರಜ್ಞಾನದಲ್ಲಿ ಹೆಚ್ಚಿನ ಸಂಶೋಧನೆಯನ್ನು ಕೈಗೊಳ್ಳುವ ಸಲುವಾಗಿ ಈ ಗುಂಪಿಗೆ ಭಾರತ ನೇತೃತ್ವ ವಹಿಸಲಿದ್ದು ವಿಶ್ವದ 120ದೇಶಗಳು ಕೈಜೋಡಿಸಿವೆ. ಅಲ್ಲದೇ ಅನೇಕ ಉದ್ಯಮಪತಿಗಳು ಬಹುರಾಷ್ಟ್ರೀಯ ಕಂಪನಿಗಳು ಸಹಾಯಹಸ್ತ ನೀಡಿವೆ. ನವದೆಹಲಿಯಲ್ಲಿ ಈ ಒಕ್ಕೂಟದ ಕೇಂದ್ರ ಸ್ಥಾಪನೆಗೊಳ್ಳಲಿದೆ. 2030ರ ಹೊತ್ತಿಗೆ ವಾತಾವರಣವನ್ನು ಕಲುಷಿತಗೊಳಿಸದೇ ಪುನರುಜ್ಜೀವನಗೊಳಿಸಬಲ್ಲ ಮೂಲಗಳಿಂದ ಹೆಚ್ಚಿನ ವಿದ್ಯುತ್‌ನ್ನು ಉತ್ಪಾದನೆ ಮಾಡುವತ್ತ ಈ ಯೋಜನೆ ಪ್ರಯತ್ನ ಮಾಡಲಿದ್ದು, ಇದೊಂದು ಗೇಮ್ ಚೇಂಜರ್ ಎಂದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ. ಹಾಗೂ 2030ರವೇಳೆಗೆ ಭಾರತದ ಒಟ್ಟೂ ಅಗತ್ಯ ಶಕ್ತಿಯ ಶೇ. 40ರಷ್ಟು ಭಾಗವನ್ನು ಪುನರುಜ್ಜೀವನಗೊಳಿಸುವ ಮೂಲಗಳಿಂದ ಪೋರೈಸುವುದಾಗಿ ಭಾರತ ಘೋಷಿಸಿದೆ.


No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...