Sunday, November 15, 2015

ಗೋಸಂಪತ್ತಿನ ಸಂರಕ್ಷಣೆ - ಸಂವರ್ಧನೆಗಾಗಿ ಗೋಶಾಲೆಗಳು


(ಪುಂಗವ 15/11/2015)

ವಿಶ್ವದಲ್ಲೇ ಅತಿಹೆಚ್ಚು ಪಶುಸಂಪತ್ತುಳ್ಳ ದೇಶ ಭಾರತ. ಗೋವಂಶದಿಂದ ಮನುಷ್ಯನಿಗಾಗುವ ಪ್ರಯೋಜನವನ್ನು ಮನಗಂಡದ್ದಿಂದಲೇ ನಮ್ಮ ಪೂರ್ವಜರು ದನಕರುಗಳ ಸಂರಕ್ಷಣೆಗೆ ಮಹತ್ವ ನೀಡಿದ್ದಲ್ಲದೇ ಗೋವಿಗೆ ಪೂಜ್ಯ ಸ್ಥಾನವನ್ನೂ ನೀಡಿದ್ದರು. ಪ್ರಸಕ್ತ ಸನ್ನಿವೇಶದಲ್ಲಿ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಯ ಕುರಿತ ರಾಜಕೀಯ ಮೇಲಾಟಗಳ ನಡುವೆಯೂ ನಮ್ಮ ದೇಶದ ಹೆಚ್ಚಿನ ಮನೆಗಳಲ್ಲಿ ಇಂದಿಗೂ ಗೋಸೇವೆಯೊಂದಿಗೇ ದಿನನಿತ್ಯದ ಚಟುವಟಿಕೆಗೆಳು ಆರಂಭವಾಗುವುದು. ಹಾಗೆಯೇ ಭಾರತೀಯ ಗೋವಂಶ ಉಳಿವಿಗಾಗಿ ಸಾವಿರಾರು ಸಂರಕ್ಷಣಾ ಕೇಂದ್ರಗಳು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಕರ್ನಾಟಕ ರಾಜ್ಯದಲ್ಲೇ ಸುಮಾರು ಎಂಭತ್ತು ಗೋಶಾಲೆಗಳಿವೆ. ದೇಸೀ ಗೋತಳಿಗಳ ಸಂರಕ್ಷಣೆ ಈ ಎಲ್ಲ ಗೋಶಾಲೆಗಳ ಮೂಲ ಉದ್ಧೇಶವಾದರೂ ಪ್ರತಿಯೊಂದು ಕೇಂದ್ರದ ಕಾರ್ಯವಿಧಾನವೂ ತನ್ನದೇ ಆದ ವಿಶೇಷತೆ ಹಾಗೂ ಹೊಸತನವನ್ನು ಅಳವಳಡಿಸಿಕೊಳ್ಳುವ ಮೂಲಕ ಭಿನ್ನವಾಗಿದೆ. ಈ ಹಿನ್ನೆಲೆಯಲ್ಲಿ ಒಂದೆರಡು ಗೋಶಾಲೆಗಳ ಕಿರುಪರಿಚಯವನ್ನು ಇಲ್ಲಿ ನೀಡಲಾಗಿದೆ. 
ಭುಕ್ತ್ವಾ  ತೃಣಾನಿ ಶುಷ್ಕಾನಿ ಪೀತ್ವಾ ತೋಯಂ ಜಲಾಶಯಾತ್ | ದುಗ್ಧಂ ದದಾತಿ ಲೋಕೇಭ್ಯಃ ಗಾವೋ ವಿಶ್ವಸ್ಯ ಮಾತರಃ ||
ಒಣ ಹುಲ್ಲನ್ನು ತಿಂದು, ಜಲಾಶಯದ ನೀರನ್ನು ಕುಡಿದು ಲೋಕದ ಜನರಿಗೇ ಹಾಲನ್ನು ಕೊಟ್ಟು ಸಲಹುವ ಗೋವುಗಳೇ ವಿಶ್ವದ ಮಾತೆಯರು.


ರಾಷ್ಟ್ರೋತ್ಥಾನ ಗೋಶಾಲೆ - ಗೋಸಂರಕ್ಷಣೆ - ಸಂವರ್ಧನೆ - ಸಂಶೋಧನೆ

ರಾಜಸ್ಥನದ ಕಾಂಕ್ರೇಜ್ 

ಹಳ್ಳಿಕಾರ್ 
ದೊಡ್ಡಬಳ್ಳಾಪುರ ಜಿಲ್ಲೆಯ ಘಾಟಿ ಸುಬ್ರಮಣ್ಯದ ಹತ್ತಿರ ಸುಮಾರು ನೂರೈವತ್ತು ಎಕರೆ ವಿಶಾಲವಾದ ಪ್ರದೇಶದಲ್ಲಿ ರಾಷ್ಟ್ರೋತ್ಥಾನ ಗೋಶಾಲೆ ಕಾರ್ಯನಿರ್ವಹಿಸುತ್ತಿದ್ದು ದೇಸಿ ತಳಿಯ ಸುಮಾರು ಐದುನೂರು ದನಕರುಗಳು ಇಲ್ಲಿ ಆಶ್ರಯ ಪಡೆದಿವೆ. ದೂರದ ರಾಜಸ್ಥಾನದಿಂದ ಕಾಂಕ್ರೇಜ್, ಗುಜರಾತಿನಿಂದ ಗೀರ್, ಮಧ್ಯಭಾರತದಿಂದ ಸಾಹೀವಾಲ್ ಮಹಾರಾಷ್ಟ್ರದಿಂದ ದೇವನಿ ಮೊದಲಾದ ತಳಿಗಳನ್ನು ತರಿಸಲಾಗಿದ್ದು ಸ್ಥಳೀಯ ವಾತಾವರಣಕ್ಕೆ ಅವುಗಳು ಹೊಂದಿಕೊಳ್ಳುವಂತೆ ವಿಶೇಷ ಕಾಳಜಿವಹಿಸಿ ಸಾಕಲಾಗುತ್ತಿದೆ. ಕೇವಲ ಗೋಸಂರಕ್ಷಣೆಗಷ್ಟೇ ಸೀಮಿತವಾಗದೇ ಪ್ರತಿಯೊಂದು ತಳಿಯ ಭೌತಿಕ ಅಗತ್ಯಗಳು, ಆಹಾರ, ಹಾಲು ಮೊದಲಾದ ಗೋಉತ್ಪನ್ನಗಳ ಪ್ರಮಾಣ ಪ್ರಯೋಜನಗಳು ಮೊದಲಾದ ವಿಷಯಗಳಲ್ಲಿ ಸಂಶೋಧನೆ ಇಲ್ಲಿ ನಡೆಯುತ್ತಿದೆ. ಉದಾಹರಣೆ ಅತಿ ಹೆಚ್ಚು ಹಾಲು ಕೊಡುವ ಗುಜರಾತಿನ ಗೀರ್ ಮತ್ತು ರಾಜಸ್ಥಾನದ ಕಾಂಕ್ರೇಜ್ ತಳಿಗಳನ್ನು ತಂದು ಅವು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗಿದೆ. ಈ ತಳಿಗಳು ದಿನಕ್ಕೆ 15ರಿಂದ 18 ಲೀಟರಿನವರೆಗೆ ಹಾಲನ್ನು ನೀಡುವುದ ಇಲ್ಲಿನ ಸಂಶೋಧನೆಯಿಂದ ದೃಢಪಟ್ಟಿದೆ.

ಗುಜರಾತಿನ ಗೀರ್ 
ಸುತ್ತಲಿನ ಗ್ರಾಮಗಳ ರೈತರಿಗೆ ಹೋರಿಗಳನ್ನು ಸಾಕಲು ನೀಡುವದು, ಗ್ರಾಮವನ್ನು ದತ್ತು ತೆಗೆದುಕೊಂಡು ಗೋಕೇಂದ್ರಿತ ಉಳುಮೆ ಹಾಗೂ ಸಾವಯವ ಕೃಷಿಯ ಮೂಲಕ ಅಭಿವೃದ್ಧಿಪಡಿಸುವುದು, ಗೋಬರ್ ಗ್ಯಾಸ ಘಟಕವನ್ನು ನಿರ್ಮಿಸುವುದು ಮೊದಲಾದ ಅನೇಕ ಕಾರ್ಯಗಳನ್ನು ರಾಷ್ಟ್ರೋತ್ಥಾನ ಗೋಶಾಲೆ ಹಮ್ಮಿಕೊಂಡಿದೆ. ಜನಪರ ಸಂಸ್ಥೆಯೊಂದು ಸಮರ್ಥವಾಗಿ ನಡೆಸುವ ಗೋಸಂರಕ್ಷಣಾ ಕಾರ್ಯದ ಮಾದರಿಯನ್ನು ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಕಾಣಬಹುದು.



ನಾಟಿ ಗೋಶಾಲೆ - ಗೋ ಆಧಾರಿತ ಕಿರು ಉದ್ಯಮದ ಪ್ರಾಯೋಗಿಕ ಮಾದರಿ

ನಾಟಿ ಗೋಶಾಲೆ 
ಚಿಕ್ಕ ಪ್ರದೇಶದಲ್ಲಿ ದೇಸಿ ಗೋ ಉತ್ಪನ್ನಗಳನ್ನೇ ಆಧರಿಸಿ ನಡೆಸಬಹುದಾದ ಯಶಸ್ವೀ ಉದ್ಯಮದ ಮಾದರಿಯನ್ನು ನಾಟಿ ಗೋಶಾಲೆಯಲ್ಲಿ ನೋಡಬಹುದು. ಸುಮಾರು ಒಂದೂವರೆ ಎಕರೆ ವಿಸ್ತೀರ್ಣದ ಹರಡಿಕೊಂಡಿರುವ ನಾಟಿ ಗೋಶಾಲೆಯ ಕಂಪೌಂಡಿನೊಳಗೆ ಕಾಲಿಡುತ್ತಿದ್ದಂತೇ ಗ್ರಾಮೀಣ ಪ್ರದೇಶದ ಹಟ್ಟಿಯ ಶುದ್ಧ ಸುಗಂಧ ಮೂಗಿಗೆ ಬಡಿಯುತ್ತದೆ. ವೃತ್ತಿಯಲ್ಲಿ ಚಾರ್ಟರ್ಡ ಅಕೌಂಟಂಟ್ ಆಗಿರುವ ಶ್ರೀ ಸುಧೀಂದ್ರರವರು ತಾಯಿ ಶ್ರೀಮತಿ ಪಾರ್ವತಮ್ಮನವರ ಒತ್ತಾಸೆಯ ಮೇಲೆ ಆರಂಭಿಸಿರುವ ಈ ಗೋಶಾಲೆಯಲ್ಲಿ ಗೀರ್, ಸಾಹಿವಾಲ್, ಹಳ್ಳಿಕಾರ್, ಮಲೆನಾಡ ಗಿಡ್ಡ, ವಚ್ಚೂರ್ ಮೊದಲಾದ ವಿವಿಧ ತಳಿಗಳ ನೂರಕ್ಕೂ ಹೆಚ್ಚು ದನಗಳನ್ನು ಸಾಕಿ ಸಲಹಲಾಗುತ್ತಿದೆ. ದನಗಳಿಗಾಗಿ ಸ್ನಾನದ ಕೊಳ, ಬಿಸಿಲಿನ ಪ್ರದೇಶ, ಗೋಬರ್ ಗ್ಯಾಸ್ ಘಟಕ, ಬಯೋಫೀನ್- ಹುಲ್ಲು ಮೇವಿನ ಘಟಕ, ಜಲ ಶುದ್ಧೀಕರಣ ಘಟಕ ಇವೆಲ್ಲದ ಜೊತೆಗೆ ಅವರು ವಾಸವಾಗಿರುವ ಮನೆ, ಕೆಲಸಮಾಡುವ ಆಳುಗಳ ವಸತಿ ಇವೆಲ್ಲವೂ ಕೇವಲ ಒಂದೂವರೆ ಎಕರೆ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಹರಡಿವೆ.  

ಸುವ್ಯವಸ್ಥಿತ ನಾಟಿ ಗೋಶಾಲೆ 
ಗೋಮೂತ್ರ, ಗೋಮಯಗಳಿಂದ ಘನಜೀವಾಮೃತ, ಅಗ್ನಿ ಅಸ್ತ್ರ, ಪಂಚಾಮೃತ ಮೊದಲಾದ ಹಲವಾರು ಸಾವಯವ ಕೃಷಿಗೆ ಉಪಯೋಗಿಸಬಹುದಾದ ಗೊಬ್ಬರ ಔಶಧಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ. ಹಾಲು ಆಕಳಿಂದ ಸಿಗುವ ಉಪ ಉತ್ಪನ್ನ ಗೋಮಯ ಗೋಮೂತ್ರಗಳೇ ದನದಿಂದ ಸಿಗುವ ಪ್ರಮುಖ ಉತ್ಪನ್ನಗಳು ಎನ್ನುವುದು ಅವರ ಅನಿಸಿಕೆ.


ಆನ್‍ಲೈನ್ ಮೂಲಕ ಗೋ ಉತ್ಪನ್ನಗಳನ್ನು ಮಾರಾಟಮಾಡಲು http://www.pasuthai.com/ ಎನ್ನುವ ವೆಬ್‍ಸೈಟನ್ನು ನಿರ್ವಹಿಸುತ್ತಿದ್ದಾರೆ. ISO 2008-9001  ಮಾನ್ಯತೆ ಪಡೆದುಕೊಂಡ ಮೊದಲ ಗೋಶಾಲೆ ಎಂಬ ಹೆಗ್ಗಳಿಕೆಗೆ ನಾಟಿ ಗೋಶಾಲೆ ಪಾತ್ರವಾಗಿದೆ. ಹಾಗೆಯೇ ಸಾವಯವ ಉತ್ಪನ್ನ ಪ್ರಮಾಣಪತ್ರವನ್ನೂ ಕೂಡ ಈ ಗೋಶಾಲೆ ಗಳಿಸಿದೆ. 


ಸುರಭೀ ಗೋ-ಸಂರಕ್ಷಣಾ ಕೇಂದ್ರ ಮಧುಗಿರಿ
ಮಧುಗಿರಿಯ ಸುರಭಿ ಗವ್ಯೋತ್ಪನ್ನ ಕೆಂದ್ರ 
ಮಧುಗಿರ ತಪ್ಪಲಿನ ರಮಣೀಯ ಪ್ರದೇಶ ಶ್ರೀರಾಮಕ್ಷೇತ್ರದಲ್ಲಿ 2006ರಿಂದ ಸುರಭಿ ಗೋಶಾಲೆ ಕಾರ್ಯನಿರ್ವಹಿಸುತ್ತಿದೆ. ದೇಸೀ ಗೋತಳಿಗಳನ್ನೇ ಸಾಕಿ ಸ್ವಾವಲಂಬಿಯಾದಂತಹ ಗೋಶಾಲೆಯನ್ನು ನಡೆಸಬೇಕೆಂಬ ಉದ್ಧೇಶದಿಂದ ಶ್ರೀ ಮಧುಸೂದನರವರು ಆರಂಭಿಸಿದ ಸುರಭಿ ಗೋಶಾಲೆಯಲ್ಲಿ ಇದುವರೆಗೂ ಕಟುಕರಿಂದ ರಕ್ಷಿಸಲ್ಪಟ್ಟ ನೂರಾರು ದನಗಳು ಆಶ್ರಯ ಪಡೆದಿವೆ. ವಿವಿಧ ದೇಸೀ ತಳಿಯ ದನಗಳ ಜೊತೆಗೆ ಗಾಯಗೊಂಡಿರುವ, ಮುದಿಯಾದ, ಮಾನಸಿಕವಾಗಿ ಅಸ್ವಸ್ಥಗೊಂಡಿರುವ, ವಿಕಲಾಂಗ ಹೀಗೆ ಅನೇಕ ತರಹದ ದನಕರುಗಳನ್ನು ಶ್ರೀ ಮಧುಸೂದನ ದಂಪತಿ ತಮ್ಮ ಗೋಶಾಲೆಯಲ್ಲಿ ಆರೈಕೆ ನೀಡಿ ಸಲಹುತ್ತಿದ್ದಾರೆ. ಹಾಲಿನ ಹೊರತಾಗಿ ಗೋಮೂತ್ರ, ಗೋಮಯ ಗೊಬ್ಬರ ಮುಂತಾದ ಉಪ ಉತ್ಪನ್ನಗಳಿಂದ ಆದಾಯಗಳಿಸಿ ಸ್ವಾವಲಂಬಿ ಗೋಶಾಲೆಯನ್ನು ನಡೆಸಬಹುದು ಎಂದು ಅವರು ಪ್ರತಿಪಾದಿಸುತ್ತಾರೆ. ಇಲ್ಲಿ ಸುಮಾರು ಒಂಭತ್ತು ಬಗೆಯ ಗೋ ಉತ್ಪನ್ನಗಳನ್ನು ತಯಾರಿಸಿ ಮಾರಾಟಮಾಡಲಾಗುತ್ತದೆ, ಅಲ್ಲದೇ ಆಸಕ್ತರಗೆ ಈ ಕುರಿತು ತರಬೇತಿಯನ್ನೂ ನೀಡಲಾಗುತ್ತದೆ.


ಸುರಭಿ ಗೋಶಾಲೆಯ ರಮಣೀಯ ಪರಿಸರ 
ರಮಣೀರ ಪ್ರಾಕೃತಿಕ ಪ್ರದೇಶದಲ್ಲಿರುವ ಸುರಭಿ ಗೋಶಾಲೆ ಒಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಪಕ್ಕದಲ್ಲಿರುವ ಬೃಹತ್  ಶಿಲಾಬೆಟ್ಟದಿಂದ ಹರಿದು ಬರುವ ನೀರನ್ನು ಸಂಗ್ರಹಿಸಲು ಕೊಳವೊಂದನ್ನು ನಿರ್ಮಿಸಲಾಗಿದ್ದು ನಟ್ಟನಡುವಿನಲ್ಲಿ ಪಂಚಮುಖ ಶ್ರೀ ಪಶುಪತಿನಾಥ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶಾಲಾವಿದ್ಯಾರ್ಥಿಗಳು ಗೋವಿನ ಬಗ್ಗೆ ಶೈಕ್ಷಣಿಕ ಮಾಹಿತಿ ಪಡೆಯುವುದರ ಜೊತೆಗೆ ಪರಿಸರದ ಸೌಂದರ್ಯವನ್ನು ಸವಿಯುಲು, ಕುಟುಂಬ ಸಮೇತ ಒಂದು ದಿನದ ಪ್ರವಾಸ ಕೈಗೊಳ್ಳಲು ಹಾಗೆಯೇ ಕಸುವುಳ್ಳವರಿಗೆ ಚಾರಣ ಮಾಡಲು ಇದು ಹೇಳಿ ಮಾಡಿಸಿದಂತಹ ಸ್ಥಳ.


ರೈತರಿಗೆ ಉಚಿತವಾಗಿ ಎತ್ತುಗಳನ್ನು ಕೊಡುವ ಯೋಜನೆ
ಕಾಂಕ್ರೇಜ್ ಹೋರಿ 
ಅರ್ಹ ರೈತರಿಗೆ ಉಳುಮೆಗಾಗಿ ಎತ್ತಿನ ಜೋಡಿಯನ್ನು ಉಚಿತವಾಗಿ ಕೊಡುವ ಯೋಜನೆ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಜಾರಿಯಲ್ಲಿದೆ. ರೈತರಿಂದ ಅರ್ಜಿಯನ್ನು ಪಡೆದು ಯೋಗ್ಯತಾ ಪರೀಕ್ಷೆಯ ನಂತರ ಎತ್ತಿನ ಜೋಡಿಯನ್ನು ಉಚಿತವಾಗಿ ನೀಡಲಾಗುತ್ತದೆ. ಅಂತಹ ಫಲಾನುಭವಿ ರೈತರಿಗೆ ನೀಡಿದ ಜಾನುವಾರಿನ ಆರೋಗ್ಯ ಹಾಗೂ ಬಳಕೆಯ ಕುರಿತು ಕಾಲಕಾಲಕ್ಕೆ ಅಧಿಕೃತ ತಪಾಸಣೆ ನಡೆಸಿ ವೀಡಿಯೋ ಚಿತ್ರೀಕರಣದ ದಾಖಲೆಗಳನ್ನು ಮಾಡಲಾಗುತ್ತದೆ. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಯುವವರಿಗೆ ಮಾತ್ರ ಎತ್ತಿನ ಜೋಡಿಗಳನ್ನು ನೀಡುವುದು ಇನ್ನೊಂದು ವಿಶೇಷತೆ. ಇದುವರೆಗೂ ನೂರಕ್ಕೂ ಹೆಚ್ಚು ಎತ್ತಿನ ಗೋಡಿಗಳನ್ನು ಉಳುಮೆಗಾಗಿ ನೀಡಲಾಗಿದ್ದು ಹತ್ತಾರು ರೈತಾಪಿ ಕುಟುಂಬಗಳು ಪ್ರಯೋಜನ ಪಡೆದಿವೆ. 


ಸ್ಥಳೀಯ ರೈತರೊಂದಿಗೆ ಹುಲ್ಲು ಮೇವಿನ ಬದಲಾಗಿ ಗೊಬ್ಬರದ ವಿನಿಮಯ
ದೊಡ್ಡ ಸಂಖ್ಯೆಯಲ್ಲಿ ದನಗಳಿದ್ದಾಗ ಅಗತ್ಯವಿರುವ ಮೇವನ್ನು ಕಾಲಕಾಲಕ್ಕ ಒದಗಿಸುವುದು ಗೋಶಾಲೆ ನಡೆಸುವವರ ಮುಂದಿರುವ ಸವಾಲುಗಳಲ್ಲೊಂದು. ಅದರಲ್ಲೂ ಬರಗಾಲ ಅನಾವೃಷ್ಠಿ ಬೆಳೆನಾಶ ಮೊದಲಾದ ಸಮಯಗಳಲ್ಲಿ ಹುಲ್ಲಿನ ದರವೂ ಗಗನಕ್ಕೇರುವುದರಿಂದ ಮೇವನ್ನು ಹೊಂದಿಸುವುದು ಕಷ್ಟವಾಗುವ ಸಂಧರ್ಭವೊದಗುತ್ತದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಸುರಭಿ ಗೋಶಾಲೆಯಲ್ಲಿ ಸರಳವಾದ ಉಪಾಯವನ್ನು ಕಂಡುಕೊಂಡಿದ್ದಾರೆ. ಸುತ್ತಲಿನ ಗ್ರಾಮಗಳ ರೈತರೊಂದಿಗೆ ಹುಲ್ಲಿನ ಬದಲಾಗಿ ಗೊಬ್ಬರವನ್ನು ವಿನಿಮಯ ಮಾಡಿಕೊಳ್ಳುವ ಪದ್ಧತಿಯನ್ನು ಬೆಳೆಸಿಕೊಂಡಿದ್ದಾರೆ. ಗೋಶಾಲೆಯಲ್ಲೊಂದು ಟ್ರಾಕ್ಟರ್ ಇದೆ. ಟ್ರಾಕ್ಟರಿಗೆ ಗೊಬ್ಬರ ತುಂಬಿಸಿ ಕಳುಹಿಸುವುದು ಗೋಶಾಲೆಯ ಜವಾಬ್ದಾರಿಯಾದರೆ, ಮಾರ್ಗ ವೆಚ್ಚದ ಡೀಸೆಲ್ ತುಂಬಿಸಿ ಹುಲ್ಲನ್ನು ತುಂಬಿಸಿ ಕಳುಹಿಸುವ ಜವಾಬ್ದಾರಿ ರೈತರದು. ಇದರಿಂದ ಗೋಶಾಲೆಯ ದನಗಳಿಗೆ ಅಗತ್ಯ ಮೇವು ಕಾಲಕಾಲಕ್ಕೆ ಪೋರೈಕೆಯಾಗುವುದು ಒಂದಾದರೆ ರೈತರ ಹೊಲಗಳಿಗೆ ಸಮೃದ್ಧ ಸಾವಯವ ಗೊಬ್ಬರವು ದೊರಕಿ ಬಂಗಾರದ ಬೆಳೆ ಬರುತ್ತಿದೆ. ಜೊತೆಗೆ ಸ್ಥಳೀಯ ರೈತರಿಗೆ ಗೋಶಾಲೆಯೊಂದಿಗೆ ಭಾವನಾತ್ಮಕ ಸಂಭಂಧವೂ ಬೆಳೆದಿದೆ.


ಗ್ರಾಮಕ್ಕೊಂದು ಗೋಶಾಲೆ - ಹೀಗೊಂದು ಪ್ರಯೋಗ ಮಾಡಬಹುದೇ?
ಕೃಷಿಯೇ ಪ್ರಧಾನ ಉದ್ಯೋಗವಾಗಿದ್ದ ನಮ್ಮ ದೇಶದಲ್ಲಿ ಅದರ ಅಗತ್ಯಕ್ಕೆ ತಕ್ಕಂತೇ ಗೊಬ್ಬರ, ಉಳುಮೆ ಹಾಗೂ ಹಾಲು ಮೊದಲಾದವುಗಳಿಗಾಗಿ ಗ್ರಾಮೀಣ ಪ್ರದೇಶದ ಬಹುತೇಕ ಮನೆಗಳಲ್ಲಿ ದನಕರುಗಳನ್ನು ಸಾಕುವ ಪದ್ಧತಿ ಬೆಳೆದುಬಂದಿದೆ. ಇಂದು ಆರ್ಥಿಕ ಪ್ರಗತಿಯ ಹಾದಿಯಲ್ಲಿ ಬದಲಾದ ಕಾಲಕ್ಕನುಗುಣವಾಗಿ ಜೀವನ ನಿರ್ವಹಣೆಗಾಗಿ ಹೆಚ್ಚಿನ ಜನರು ಕೃಷಿಯೇತರ ಉದ್ಯೋಗವನ್ನು ಅವಂಬಿಸಬೇಕಾದುದು ಅನಿವಾರ್ಯವಾಗಿದೆ. ಅದರಿಂದಾಗಿ ಬೇರೆ ಊರುಗಳಿಗೆ ವಲಸೆ ಹೋಗುವುದು, ಚಿಕ್ಕ ಕುಟುಂಬ, ಸಮಯದ ಅಭಾವ ಮುಂತಾದ ಕಾರಣಗಳಿಂದ ಮುಂಚಿನಂತೆ ಮನೆಮನೆಗಳಲ್ಲೂ ದನಕರುಗಳನ್ನು ಸಾಕುವುದು ಇಂದಿನ ಪರಿಸ್ಥಿತಿಯಲ್ಲಿ ಕಷ್ಟಕರ. ಅಂತೆಯೇ ಹತ್ತಿಪ್ಪತ್ತು ದನಕರುಗಳಿಂದ ತುಂಬಿರುತ್ತಿದ್ದ ಕೊಟ್ಟಿಗೆಗಳಲ್ಲಿ ಕೇವಲ ಒಂದೆರಡು ದನಗಳು ಅಥವಾ ಜೆರ್ಸಿ ಆಕಳುಗಳು ಇರುವುದನ್ನು ನಾವು ಇಂದು ಕಾಣಬಹುದು. ಇದರಿಂದಾಗಿ ದೇಸಿ ಪಶುಸಂಪತ್ತು ಅಳಿವನಂಚಿಗೆ ಸಾಗುತ್ತಿದೆ ಎನ್ನುವ ಕಳವಳ ಒಂದು ಕಡೆಯಾದರೆ ಗೋವಿನಿಂದ ಸಿಗುವ ಪ್ರಯೋಜನ, ಆಕಳ ಹಾಲಿನಿಂದ ಸಿಗುವ ಪೋಷಣೆ, ಗೋಮೂತ್ರದ ಔಶಧೀಯ ಗುಣಗಳಿಂದ ಸಿಗುವ ಲಾಭ, ಗೊಬ್ಬರ, ಗೋಬರ್ ಗ್ಯಾಸ್ ಮುಂತಾದವುಳಿಂದ ಸಿಗುವ ಆರ್ಥಿಕ ಲಾಭದಿಂದ ನಾವು ವಂಚಿತರಾಗುತ್ತಿದ್ದೇವೆ.

ಆದ್ದರಿಂದ ದನಕರುಗಳನ್ನು ಸಾಕುವ ಸಲುವಾಗಿ ಸಮಾನ ಮನಸ್ಕರು ಕೈಜೋಡಿಸಿ ಸೇರಿ ಗ್ರಾಮಕ್ಕೊಂದು ಗೋಶಾಲೆಯನ್ನು ನಡೆಸಬಹುದು. ಹಲವು ಜನರ ಸಹಭಾಗಿತ್ವದಲ್ಲಿ ನಡೆಸುವ ಗೋಶಾಲೆಯು ನಮ್ಮ ಗ್ರಾಮಕ್ಕೆ ಬೇಕಾದ ಹಾಲು ಮತ್ತು ಹಾಲಿನ ಉತ್ಪನ್ನಗಳ ಅಗತ್ಯವನ್ನು ಪೋರೈಸುವುದು. ಜೊತೆಗೆ ಗೋ ಉತ್ಪನ್ನಗಳನ್ನು ತಯಾರಿಸುವ ಕಿರು ಉದ್ಯಮವನ್ನು ನಡೆಸಿ ಕೆಲವರಿಗೆ ಉದ್ಯೋಗ ನೀಡಬಹುದು, ಗೋಬರ್ ಗ್ಯಾಸ್ ಅದರ ಮೂಲಕ ವಿದ್ಯುತ್ ಉತ್ಪಾದನೆ, ಸಾವಯವ ಗೊಬ್ಬರ ತಯಾರಿ ಹೀಗೆ ಅನೇಕ ಗೋಶಾಲೆ ಕೇಂದ್ರಿತ ಆರ್ಥಿಕ ಚಟುವಟಿಕೆಗಳನ್ನು ನಡೆಸಬಹುದು. 

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...