Monday, October 10, 2016

ಜಮ್ಮು ಕಾಶ್ಮೀರದ ಕುರಿತು ತಿಳಿದುಕೊಳ್ಳಬೇಕಾದ ಒಂದಿಷ್ಟು

(ವಿಕ್ರಮ, ವಿಜಯದಶಮಿ ವಿಶೇಷಾ೦ಕ 2016 )

        ಸ್ವತಂತ್ರ ಭಾರತ ಉಗಮಗೊಂಡು ಏಳು ದಶಕಗಳು ಕಳೆದರು ದೇಶದ ಒಂದು ಪ್ರಮುಖ ರಾಜ್ಯ ಸಮಸ್ಯೆಯಾಗಿ ಉಳಿದಿದೆ ಹಾಗೂ ಇಂದಿಗೂ ಅದರ ವಿಲೀನದ ಪ್ರಶ್ನೆಯನ್ನು ಎತ್ತಲಾಗುತ್ತಿದೆ ಎನ್ನುವ ಅಂಶವೇ ಜಮ್ಮು ಕಾಶ್ಮೀರವನ್ನು ಕುರಿತು ಕುತೂಹಲವನ್ನು ಹುಟ್ಟಿಸುತ್ತದೆ. ಮಗ್ಗುಲ ಮುಳ್ಳು ಎಂದೇ ಕರೆಯಬಹುದಾದ ನೆರೆಯ ಪಾಕಿಸ್ತಾನ ಅವಕಾಶ ಸಿಕ್ಕಾಗಲೆಲ್ಲ ಭಾರತಕ್ಕೆ ಮಸಿಬಳಿಯಲು ಕಾಶ್ಮೀರ ವಿಷಯವನ್ನು ಎತ್ತುತ್ತದೆ. ಭಾರತದೊಂದಿಗಿನ ನಡೆಸಿದ ನೇರ ಯುದ್ಧದಲ್ಲಿ ಸೋಲುಂಡ ಪಾಕಿಸ್ತಾನ ಭಯೋತ್ಪಾದನೆಯ ಮೂಲಕ ಛಾಯಾ ಸಮರಮಾರ್ಗವನ್ನು ಹಿಡಿದಿದ್ದು ಕಾಶ್ಮೀರ ಅದರ ಪ್ರಥಮ ಗುರಿ ಎನ್ನುವುದು ಸುಸ್ಪಷ್ಟವಾಗಿದೆ. ಇನ್ನೊಂದೆಡೆ ಪೂರ್ವದ ಅರುಣಾಚಲವು ತನ್ನದು ಎಂದು ಹೇಳುವ ಚೀನಾ ಲಢಾಕ್ ಪ್ರದೇಶದ ಭೂಭಾಗವನ್ನು ಕಬಳಿಸಿದ್ದಲ್ಲದೇ ಆಗಾಗ ಗಡಿಯಲ್ಲಿ ತಂಟೆ ನಡೆಸುತ್ತದೆ. ಪಾಕಿಸ್ತಾನ, ಅಪಘಾನಿಸ್ತಾನ, ಚೀನಾ-ಟಿಬೇಟ್ ದೇಶಗಳೊಡನೆ ಗಡಿಹಂಚಿಕೊಂಡಿರುವ ಜಮ್ಮು ಕಾಶ್ಮೀರ ಪ್ರದೇಶ ಸರ್ವವಿಧದಲ್ಲೂ ಅತ್ಯಂತ ಆಯಕಟ್ಟಿನ ಪ್ರದೇಶ. ಮಧ್ಯ ಏಷಿಯಾ ಮತ್ತು ಯೂರೋಪಗಳಿಗೆ ಕಾಶ್ಮೀರದ ಮೂಲಕ ರಸ್ತೆ ಸಂಪರ್ಕ ಸಾಧ್ಯವಿದೆ. ಇತಿಹಾಸ ಪ್ರಸಿದ್ಧ ವ್ಯಾಪಾರಿ ಮಾರ್ಗ ಸಿಲ್ಕ್ ರೂಟ್ ಕಾಶ್ಮೀರದ ಗಿಲ್ಗಿಟ್ ಮೂಲಕವೇ ಹಾದುಹೋಗುವುದು. ದಕ್ಷಿಣ ಏಷಿಯಾಕ್ಕೆ ನೀರುಣಿಸುವ ಅನೇಕ ನದಿಗಳ ಉಗಮ ಸ್ಥಾನ ರಾಜ್ಯದ ಹಿಮಾಲಯ ಪ್ರದೇಶ. ಒಂದು ರೀತಿಯಲ್ಲಿ ಈ ಆಯಕಟ್ಟಿನ ಪ್ರದೇಶವನ್ನು ನಿಯಂತ್ರಿಸುವವರು ಇಡೀ ಏಷಿಯಾವನ್ನು ಪ್ರಭಾವಿಸಬಲ್ಲರು. ಆದ್ದರಿಂದ ಜಮ್ಮು ಕಾಶ್ಮೀರ ಭಾರತದ ಮಟ್ಟಿಗೆ ಅತ್ಯಂತ ಮಹತ್ವದ ಪ್ರದೇಶವಾಗಿದೆ.


      ಇದಲ್ಲದೇ ಜಮ್ಮು ಕಾಶ್ಮೀರದ ಕುರಿತು ತಿಳಿದುಕೊಳ್ಳಲು ಇನ್ನೂ ಕೆಲವು ಕಾರಣಗಳಿವೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಾನವ ಹಕ್ಕು ಉಲ್ಲಂಘನೆಯ ವಿಷಯ ಬಂದಾಗಲೆಲ್ಲ ಭಾರತಕ್ಕೆ ಮಸಿ ಬಳಿಯಲು ಕಾಶ್ಮೀರದ ವಿಷಯ ತರಲಾಗುತ್ತದೆ. ಭಾರತೀಯ ಸೇನೆ ಕಾಶ್ಮೀರದಲ್ಲಿ ಅಕ್ಷಮ್ಯ ಅಪರಾಧವನ್ನೆಸಗಿದೆ ಎಂದು ಗುಲ್ಲೆಬ್ಬಿಸಲಾಗುತ್ತದೆ. ಮಾನವ ಹಕ್ಕು ವಿಷಯವನ್ನೇ ವ್ಯಪಾರಿ ಬಂಡವಾಳ ಮಾಡಿಕೊಂಡಿರುವ ಕೆಲವು ಸಂಸ್ಥೆಗಳು ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲೂ ಕಾಶ್ಮೀರಿ ವಿಷಯವನ್ನಿಟ್ಟುಕೊಂಡು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿವೆ. ಜೊತೆಗೆ ನಮ್ಮದೇ ದೇಶದ ಒಂದು ವರ್ಗದ ಬುದ್ಧಿಜೀವಿಗಳು ಶೈಕ್ಷಣಿಕ, ರಾಜಕೀಯ ಹಾಗೂ ನೀತಿ ನಿರೂಪಕ ವರ್ಗದ ವ್ಯಕ್ತಿಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಜಮ್ಮು ಕಾಶ್ಮೀರ ರಾಜ್ಯವನ್ನು ಕುರಿತು ತಪ್ಪು ಮಾಹಿತಿಯನ್ನು ಹರಡುವಲ್ಲಿ ಸಕ್ರಿಯರಾಗಿದ್ದಾರೆ. ನಿಯಂತ್ರಣ ರೇಖೇಯನ್ನೆ ಭಾರತ ಪಾಕಿಸ್ತಾನದ ಶಾಶ್ವತ ಗಡಿಯನ್ನಾಗಿ ಮಾಡಬೇಕೆನ್ನುವುದರಿಂದ ಹಿಡಿದು, ಕಾಶ್ಮೀರ ಸ್ವಾಯತ್ತವಾಗಲಿ, ಪಾಕಿಸ್ತಾನಕ್ಕೇ ಸೇರಲಿ ಎಂದು ಪ್ರತಿಪಾದಿಸುವವರೂ ನಮ್ಮಲ್ಲಿದ್ದಾರೆ.
        ಎರಡನೆಯದಾಗಿ ಜಮ್ಮು ಕಾಶ್ಮೀರ ರಾಜ್ಯದ ಜನಸಂಖ್ಯೆ 1.2ಕೋಟಿ. ಅಂದರೆ ದೇಶದ ಜನಸಂಖ್ಯೆಯ ಶೇ 1ರಷ್ಟು ಮಾತ್ರ ಆದರೆ 2000ದಿಂದ 2014ರವರೆಗಿನ ಕಾಲದಲ್ಲಿ ಕೇಂದ್ರದಿಂದ ಜಮ್ಮು ಕಾಶ್ಮೀರ ಪಡೆದ ಅನುದಾನ ಶೇ 10ರಷ್ಟು (ಸುಮಾರು 1.14ಲಕ್ಷ ಕೋಟಿ ರೂಪಾಯಿಗಳು), ತಲಾವಾರು ಲೆಕ್ಕ ಮಾಡಿದಾಗ ಇದು ಉತ್ತರಪ್ರದೇಶದಂತಹ ರಾಜ್ಯದ ತುಲನೆಯಲ್ಲಿ 21 ಪಟ್ಟು ಹೆಚ್ಚು. ಜೊತೆಗೆ ಕಣಿವೆಯಲ್ಲಿನ ಭಯೋತ್ಪಾದನೆ ನಿಗ್ರಹ ಮತ್ತು ಶಾಂತಿ ಸ್ಥಾಪನೆಯ ಸಲುವಾಗಿ ಸೇನೆಯನ್ನು ನಿಯೋಜಿಸಿದ್ದರ ವೆಚ್ಚವನ್ನೂ ಸೇರಿಸಬಹುದು. ರಾಜ್ಯವೊಂದರಲ್ಲಿ ಆಗಾಗ ಭುಗಿಲೇಳುವ ವಿರೋಧಿ ಶಕ್ತಿಗಳನ್ನು ಸಂತೈಸಲು ಇಷ್ಟೊಂದು ಸಂಪನ್ಮೂಲ ಪೋಲಾಗಬೇಕೆ? ಎನ್ನುವುದು ಒಂದು ಗಹನವಾದ ಪ್ರಶ್ನೆ.
      ಮೂರನೆಯದಾಗಿ, ಭಯೋತ್ಪಾದನಾ ಚಟುವಟಿಕೆಗಳ ಮಾಹಿತಿ ಕಲೆಹಾಕುವ ಸಂಸ್ಥೆ ಸೌತ್ ಏಷಿಯಾ ಟೆರರಿಸಂ ಪೋರ್ಟಲ್‌ನ ಅಂಕಿ ಅಂಶಗಳ ಪ್ರಕಾರ 1988ರಿಂದ ಇಂದಿನವರೆಗೆ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಭಯೋತ್ಪಾದನೆಯ ಹುಸಿಯುದ್ಧದಲ್ಲಿ 6229 ಯೋಧರು ಪ್ರಾಣಾರ್ಪಣೆಗೈದಿದ್ದಾರೆ. ಇತ್ತೀಚೆಗೆ ಹುತಾತ್ಮರಾದ ಗೋಕಾಕಿನ ಬಸವರಾಜ ಚನ್ನಪ್ಪಾ ಪಾಟಿಲ್, ನವಲಗುಂದದ ಹಸನಸಾಬ್  ಕುಡವಂದ್‌ರಂತಹ ಕರ್ನಾಟಕದ ಯೋಧರು ದೂರದ ಕಾಶ್ಮೀರದಲ್ಲಿ ಉಗ್ರಗಾಮಿಗಳ ಹೋರಾಟದಲ್ಲಿ ಪ್ರಾಣ ತೆತ್ತಿದ್ದಾರೆ. ಜೊತೆಗೆ ಸುಮಾರು 14 ಸಾವಿರಕ್ಕೂ ಹೆಚ್ಚು ನಾಗರಿಕರು, 23 ಸಾವಿರಕ್ಕೂ ಹೆಚ್ಚು ಉಗ್ರಗಾಮಿಗಳು ಬಲಿಯಾಗಿದ್ದಾರೆ. ಭಯೋತ್ಪಾದನೆಯ ಮೂಲಕ ಭಾರತದ ಮೇಲೆ ಛಾಯಾ ಸಮರದ ಮಾರ್ಗ ಹಿಡಿದಿರುವ ಪಾಕಿಸ್ತಾನದ ಪ್ರಮುಖ ಗುರಿ ಕಾಶ್ಮೀರ. ಕೊನೆಯದಾಗಿ ಒಂದು ಪ್ರದೇಶ ಮುಸಲ್ಮಾನ ಬಹುಸಂಖ್ಯವಾಗಿ ಪರಿವರ್ತಿತವಾದಾಗ ಉಂಟಾಗುವ ಸನ್ನಿವೇಶದ ಅಧ್ಯಯನ ಮಾದರಿಯನ್ನು ಕಾಶ್ಮೀರ ಕಣಿವೆಯಲ್ಲಿ ಕಾಣಬಹುದು.

ಜಮ್ಮು ಮತ್ತು ಕಾಶ್ಮೀರದ ಭೌಗೋಳಿಕ ಹರಹು ಮತ್ತು ಜನಸಮುದಾಯ
        2,22,236ಚದರ ಕಿಮೀ ವ್ಯಾಪ್ತಿಯ ಜಮ್ಮು ಕಾಶ್ಮೀರದಲ್ಲಿ ಮೂರು ಪ್ರಾಂತಗಳಿವೆ. 36 ಸಾವಿರ ಚದರ ಕಿಮೀ ವಿಸ್ತೀರ್ಣದ ಜಮ್ಮು, ಸುಮಾರು 22 ಸಾವಿರ ಚದರ ಕಿಮೀ ವಿಸ್ತೀರ್ಣದ ಕಾಶ್ಮೀರ ಹಾಗೂ 1 ಲಕ್ಷದ 64 ಸಾವಿರ ಚದರ ಕಿಮೀ ವಿಸ್ತೀರ್ಣವುಳ್ಳ ಲಢಾಕ್. ಇದರಲ್ಲಿ 78 ಸಾವಿರ ಚದರ ಕಿಮೀ (ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಪಿಒಕೆ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ) ಪಾಕಿಸ್ತಾನದ ವಶದಲ್ಲಿಯೂ ಹಾಗೂ ಲಢಾಕ ಪ್ರಾಂತದ 27.5 ಸಾವಿರ ಚದರ ಕಿಮೀ ಮತ್ತು ಪಾಕಿಸ್ತಾನದಿಂದ ಉಡುಗೊರೆಯಾಗಿ ಪಡೆದ ಉತ್ತರ ಭಾಗದ 5 ಸಾವಿರ ಚದರ ಕಿಮೀ ಚೀನಾದ ವಶದಲ್ಲಿಯೂ ಇದೆ. ಅಂದರೆ ವಾಸ್ತವವಾಗಿ ಕಾಶ್ಮೀರ ಬ್ರಿಟಿಷರ ಕಾಲದ ಅಥವಾ ಮಹಾರಾಜ ಹರಿಸಿಂಗ್‌ರ ಆಳ್ವಿಕೆಗೆ ಒಳಪಟ್ಟಿದ್ದ ಜಮ್ಮು ಕಾಶ್ಮೀರ ರಾಜ್ಯದ 7.16% ಕ್ಷೇತ್ರ ಹಾಗೂ ಪ್ರಸ್ತುತ ಭಾರತೀಯ ಆಡಳಿತಕ್ಕೊಳಪಟ್ಟ ರಾಜ್ಯದ 15.63% ಕ್ಷೇತ್ರ ಮಾತ್ರ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಜಮ್ಮು ಕಾಶ್ಮೀರ ಮುಸಲ್ಮಾನ ಜನಸಂಖ್ಯಾ ಬಾಹುಳ್ಯವಿದೆ ಎನ್ನುವುದು ನಿಜವಾದರು ಅದು ಕೇವರ ಕಾಶ್ಮೀರ ಕಣಿವೆಯಲ್ಲಿ ಮಾತ್ರ. ಜಮ್ಮು ಕಾಶ್ಮೀರದಲ್ಲಿ ಸುನ್ನಿ ಮುಸಲ್ಮಾನರನ್ನು ಹೊರತುಪಡಿಸಿ ಶಿಯಾ, ಡೋಗ್ರಾ, ಕಾಶ್ಮೀರಿ ಪಂಡಿತ, ಸಿಖ್, ಬೌದ್ಧ, ಗುಜ್ಜರ, ಬಕರ್‌ವಾಲಾ, ಪಹಾರಿ,ಬಾಲ್ಟಿ, ಕ್ರಿಶ್ಚಿಯನ್ ಇತ್ಯಾದಿ ಬೇರೆ ಬೇರೆ ಮತೀಯ ಸಂಪ್ರದಾಯಗಳಿಗೆ ಸೇರಿದ 14 ಪ್ರಮುಖ ಕೋಮುಗಳಿವೆ. ಲಢಾಕಿನಲ್ಲಿ ಲೇಹ್ ಮತ್ತು ಕಾರ್ಗಿಲ್ ಎರಡು ಪ್ರಮುಖ ಪ್ರದೇಶಗಳು. ಲೆಹ್‌ನಲ್ಲಿ 77% ಬೌದ್ಧ ಸಮುದಾಯ ಹಾಗೂ ಇತರೆ ಷಿಯಾ ಮುಸ್ಲಿಂ ಮತ್ತು ಹಿಂದೂ ಜನವಸತಿಯಿದೆ. ಕಾರ್ಗಿಲ್ ಜಿಲ್ಲೆಯಲ್ಲಿ 80% ಪಹಾರಿ, ಗುಜ್ಜರ್ ಇತ್ಯಾದಿ ಗುಡ್ಡಗಾಡು ಮುಸ್ಲಿಂ ಸಮುದಾಯ ಹಾಗೂ ಇತರೆ ಅಲ್ಪಸಂಖ್ಯೆಯಲ್ಲಿ ಬೌದ್ಧರಿದ್ದಾರೆ. ಜಮ್ಮು ಪ್ರಾಂತದಲ್ಲಿ ಹಿಂದೂ-ಸಿಖ್ ಮತ್ತು ಮುಸ್ಲಿಂ ಜನಸಂಖ್ಯೆಯ ಅನುಪಾತ 70:30 ಪ್ರತಿಶತದಷ್ಟಿದೆ. ಇವರಲ್ಲಿ 15 ಲಕ್ಷಕ್ಕೂ ಅಧಿಕ ನಿರ್ವಸಿತರಿದ್ದಾರೆ. ಕಾಶ್ಮೀರ ಪ್ರಮುಖವಾಗಿ ಎರಡು ಪ್ರದೇಶಗಳನ್ನು ಒಳಗೊಂಡಿದೆ; ೭೦% ಭೂಭಾಗವುಳ್ಳ ಗುಡ್ಡಗಾಡು ಪ್ರದೇಶ ಮತ್ತು ಉಳಿದಂತೆ ಕಾಶ್ಮಿರಿ ಕಣಿವೆ ಪ್ರದೇಶ. ಗುಡ್ಡಗಾಡು ಪ್ರದೇಶದಲ್ಲಿ ಜನಾಂಗೀಯವಾಗಿ ಕಾಶ್ಮೀರಿಗಳಲ್ಲದ ಗುಜ್ಜರ, ಬಾಕೆರ್ವಾಲ್, ದಾರ್ದ, ಬಾಲ್ಟಿ ಇತ್ಯಾದಿ ಬುಡಕಟ್ಟು ಮುಸ್ಲಿಂ ಜನಾಂಗಗಳು ವಾಸವಾಗಿದ್ದರೆ ಕಾಶ್ಮೀರ ಕಣಿವೆಯಲ್ಲಿ ಬಹುಸಂಖೈಯಲ್ಲಿ ಸುನ್ನಿ ಮುಸ್ಲಿಂ ವಸತಿಯಿದೆ. ಅಂದರೆ ಕಾಶ್ಮೀರದಲ್ಲಿ 97% ಮುಸ್ಲಿಂ ಸಮುದಾಯವಿದ್ದರೂ ಪಂಗಡಗಳಾಗಿ ವಿಂಗಡನೆಗೊಂಡಿವೆ.
       ಕಾಶ್ಮೀರದ ಬಹುಸಂಖ್ಯೆಯ ಜನರು ಕಾಶ್ಮೀರಿ ಭಾಷೆಯನ್ನು ಮಾತನಾಡುವುದಿಲ್ಲ. ಲಢಾಕಿನ ಮುಖ್ಯ ಭಾಷೆ ಬಾಲ್ಟಿ ಮತ್ತು ಲಢಾಕಿ. ಹಾಗೆಯೇ ಜಮ್ಮುವಿನ ಮುಖ್ಯ ಭಾಷೆ ಡೋಗ್ರಿ.  ಇನ್ನೊಂದು ಆಸಕ್ತಿಕರ ವಿಷಯವೆಂದರೆ ರಾಜ್ಯದ ಬಳಕೆಯಲ್ಲಿರುವ ಭಾಷೆಗಳ ಶೇಕಡಾವಾರು ಪ್ರಮಾಣವನ್ನು ನೋಡಿದರೆ ಕಾಶ್ಮೀರಿ 35%, ಡೊಗ್ರಿ 21%, ಹಿಂದಿ 18%ರಷ್ಟಿದೆ. ಆದರೂ 1%ಕ್ಕಿಂತಲೂ ಕಡಿಮೆ ಜನರ ಬಳಕೆಯ ಭಾಷೆಯಾದ ಉರ್ದು ರಾಜ್ಯದ ಅಧಿಕೃತ ಭಾಷೆಯಾಗಿದೆ. ಉರ್ದು ದಕ್ಷಿಣ ಏಷಿಯಾ ದೇಶಗಳಲ್ಲಿರುವ ಮುಸ್ಲಿಮರೊಟ್ಟಿಗೆ ಗುರುತಿಸಿಕೊಂಡಿದೆ ಎನ್ನುವುದನ್ನು ಗಮನಿಸಬಹುದು.
ಕಾಶ್ಮೀರ, ಲಢಾಕ್ ಮತ್ತು ಜಮ್ಮು ಈ ಮೂರೂ ಪ್ರದೇಶಗಳು ಭೌಗೋಲಿಕವಾಗಿ, ಐತಿಹಾಸಿಕವಾಗಿ, ಸಂಪ್ರದಾಯ, ಧಾರ್ಮಿಕ ಆಚರಣೆ, ಭಾಷೆಗಳ ದೃಷ್ಟಿಯಿಂದ ಒಂದಕ್ಕಿಂತ ಇನ್ನೊಂದು ಭಿನ್ನ, ಇವುಗಳ ನಡುವೆ ಯಾವುದರಲ್ಲೂ ಹೋಲಿಕೆಯಿಲ್ಲ. ಜಮ್ಮು ಮತ್ತು ಲಢಾಕ್ ಪ್ರಾಂತಗಳು ಆರ್ಥಿಕ ಅಭೀವೃದ್ಧಿಯ ದೃಷ್ಟಿಯಿಂದಲೂ ಕಡೆಗಣಿಸಲ್ಪಟ್ಟಿವೆ.

ಪ್ರತ್ಯೇಕತೆಯೆ ಧ್ವನಿ ಇರುವುದು ಕಾಶ್ಮೀರ ಪ್ರಾಂತದ ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ
       ಪ್ರತೀ ಬಾರಿ ಪ್ರತ್ಯೇಕತೆಯ ಕೂಗು ಹೆಚ್ಚಾಗಿ ಹಿಂಸಾಚಾರ ಬುಗಿಲೆದ್ದಾಗಲೂ ಇಡೀ ಜಮ್ಮು ಕಾಶ್ಮೀರ ಹೊತ್ತುರಿಯುತ್ತಿದೆ ಎಂದು ಮಾಧ್ಯಮಗಳು ಬಿಂಬಿಸುತ್ತವೆ. ಆದರೆ ಇದು ಭಾರತವಿರೋಧಿ ಬೇರಿರುವುದು ರಾಜ್ಯದ ಒಂದು ಸೀಮಿತ ಪ್ರದೇಶದಲ್ಲಿ ಎನ್ನುವುದ ತಥ್ಯ. ಜಮ್ಮು ಕಾಶ್ಮೀರದಲ್ಲಿ ಒಟ್ಟೂ 22 ಜಿಲ್ಲೆಗಳಿವೆ ಅವುಗಳಲ್ಲಿ ಕೇವಲ ಶ್ರೀನಗರ, ಬಾರಾಮುಲ್ಲಾ, ಅನಂತನಾಗ್, ಕುಲ್‌ಗಾಮ್, ಪುಲ್‌ವಾಮಾ ಈ ಐದು ಜಿಲ್ಲೆಗಳಲ್ಲಿ ಮಾತ್ರ ಪ್ರತ್ಯೇಕತೆಯ ಚಳುವಳಿ ಹೋರಾಟ ನಡೆಯುವುದು. ಉಳಿದ 17 ಜಿಲ್ಲೆಗಳಲ್ಲಿ ಇದುವರೆಗೆ ಒಮ್ಮೆಯೂ ಭಾರತ ವಿರೋಧಿ ಪ್ರದರ್ಶನ ಹರತಾಳಗಳು ನಡೆದಿಲ್ಲ. ಇನ್ನೊಂದು ಮುಖ್ಯ ಅಂಶ ಎಂದರೆ ಈ ಐದು ಜಿಲ್ಲೆಗಳು ಪಾಕಿಸ್ತಾನದ ಗಡಿ ಮತ್ತು ಗಡಿನಿಯಂತ್ರಣ ರೇಖೆಯಿಂದ ಸಾಕಷ್ಟು ದೂರದಲ್ಲಿವೆ. ಗಡಿನಿಯಂತ್ರಣ ರೇಖೆಗೆ ತಾಗಿರುವ ಪೂಂಛ್ ಮತ್ತು ಕಾರ್ಗಿಲ್ ಜಿಲ್ಲೆಗಳು ಶೇ. 90ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿವೆ. ಆದರೆ ಈ ಜಿಲ್ಲೆಗಳಲ್ಲಿ ಇದುವರೆಗೆ ಒಬ್ಬನೇ ಒಬ್ಬ ಪ್ರತ್ಯೇಕತಾವಾದಿ ನಾಯಕ ಹುಟ್ಟಿಲ್ಲ, ಎಂದೂ ಭಾರತವಿರೋಧಿ ಪ್ರದರ್ಶನ ನಡೆದಿಲ್ಲ.
      1947ರ ಸಂತರದ ಕಾಶ್ಮೀರದ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಸುನ್ನಿ ಮುಸಲ್ಮಾನ ಕೇಂದ್ರಿತ ರಾಜಕೀಯ ವ್ಯವಸ್ಥೆ ತನ್ನ ಬೇರನ್ನು ಆಳವಾಗಿ ಇಳಿಸಿದೆ ಎನ್ನುವುದನ್ನು ಸ್ಪಷ್ಟವಾಗಿ ಕಾಣುಬಹುದು. ರಾಜ್ಯದ ಶೇ 15ರಷ್ಟು ಪ್ರದೇಶದ ಮೂಲದಲ್ಲಿರುವ ಸುಮಾರು 33%ರಷ್ಟಿರುವ ಕಾಶ್ಮೀರಿ ಮಾತನಾಡುವ ಸುನ್ನಿ ಮುಸಲ್ಮಾನ ಸಮುದಾಯಕ್ಕೆ ಸೇರಿದ ಜನರು ಜಮ್ಮು ಕಾಶ್ಮೀರ ಆಡಳಿತ, ವ್ಯಾಪಾರ ವಹಿವಾಟು, ಕೃಷಿ ಎಲ್ಲವನ್ನೂ ನಿಯಂತ್ರಿಸುತ್ತಾರೆ. ಪ್ರತ್ಯೇಕತಾವಾದಿ ಹುರಿಯತ್ ಕಾನ್ಪರೆನ್ಸ್ ಹಾಗೂ ರಾಜ್ಯದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ(ಪಿಡಿಪಿ) ಮತ್ತು ನ್ಯಾಶನಲ್ ಕಾನ್ಫರೆನ್ಸ್(ಎನ್‌ಸಿ)ಗಳ ನೀತಿಗಳನ್ನು ಇದೇ ಗುಂಪು ನಿರೂಪಿಸುತ್ತದೆ. ಕಾಂಗ್ರೆಸ್‌ನ ನೀತಿಯನ್ನು ಕೂಡ ಪ್ರಭಾವಿಸುತ್ತದೆ.
        ಹುರಿಯತ್ ಕಾನ್ಫರೆನ್ಸ್ ಮುಂತಾದ ಪ್ರತ್ಯೇಕತಾವಾದಿ ಸಂಘಟನೆಗಳು, ಸ್ವಾಯತ್ತತೆಯ ಬೇಡಿಕೆಯಿಡುವ ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ ಮೊದಲಾದ ರಾಜಕೀಯ ಪಕ್ಷಗಳು, ಪಾಕಿಸ್ತಾನಿ ಭಯೊತ್ಪಾದಕರ ಒಳನುಸುಳುವಿಕೆಗೆ ಸಹಾಯ ಮಾಡುವ ಗುಂಪುಗಳು, ಪ್ರತಿಭಟನೆಯ ಹೆಸರಿನಲ್ಲಿ ಕಲ್ಲೆಸೆದು ಹಿಂಸಾಚಾರ ಮಾಡುವವರು, ದೆಹಲಿಯ ಬುದ್ದಿಜೀವಿ ವರ್ಗಗಳಲ್ಲಿ ಪ್ರತ್ಯೇಕತೆಯ ಭಾಷಣ ಬಿಗಿಯುವವರು, ಮಾಧ್ಯಮಗಳಲ್ಲಿ ಕಾಶ್ಮೀರವನ್ನು ಪ್ರತಿನಿಧಿಸುವವರು ಇವರೆಲ್ಲರೂ ಕಾಶ್ಮೀರಿ ಕಣಿವೆಯ ಸುನ್ನಿ ಮುಸಲ್ಮಾನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜಮ್ಮು ಕಾಶ್ಮೀರದ ನಾಯಕರೆಂದು ಪ್ರತಿಬಿಂಬಿಸಲ್ಪಡುವ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಮಂತ್ರಿ ನ್ಯಾಶನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲ, ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸೈಫ್ ಉದ್ದೀನ ಸೋಜ್, ಗುಲಾಮ್ ನಬೀ ಆಜಾದ್, ಮಾಜಿ ಪ್ರತ್ಯೇಕತಾ ಹೋರಾಟಗಾರ ರಾಜ್ಯಸಂಪುಟದಲ್ಲಿ ಹಾಲಿ ಮಂತ್ರಿ ಸಜಾದ್ ಲೋನ್, ಪ್ರತ್ಯೇಕತಾವಾದಿ ಮುಂದಾಳುಗಳಾದ ಅಬ್ದುಲ್ ಗನಿ ಭಟ್, , ಯಾಸಿನ್ ಮಲಿಕ, ಶಬ್ಬೀರ್ ಶಾ, ಗ್ರ್ಯಾಂಡ್ ಮುಫ್ತಿ, ಹುರಿಯತ್ ಕಾನ್ಫರೆನ್ಸ್‌ನ ಸೈಯ್ಯದ್ ಅಲಿ ಶಾ ಗಿಲಾನಿ, ಮಿರ್ಜ್ವಾ ಉಮರ್ ಫಾರೂಕ್ ಇವರೆಲ್ಲ ಒಂದೇ ಪಂಗಡಕ್ಕೆ ಸೇರಿದವರು, ’ಕಾಶ್ಮೀರಿ ಸುನ್ನಿ ಮುಸಲ್ಮಾನ’. ಅದಲ್ಲದೆ ಜಮ್ಮು ಕಾಶ್ಮೀರ ಹೈಕೋರ್ಟ ಬಾರ್ ಅಸೋಸಿಯೇಶನ್ ಅಧ್ಯಕ್ಷ, ಜಮ್ಮು ಕಾಶ್ಮೀರ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ಅಧ್ಯಕ್ಷ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಇವರೆಲ್ಲ ಕಾಶ್ಮೀರಿ ಸುನ್ನಿ ಸಮುದಾಯಕ್ಕೆ ಸೇರಿದವರೇ. 99% ಕಾಶ್ಮೀರಿ ವ್ಯಾಖ್ಯಾನಕಾರರು, ವರದಿಗಾರರು ಸುನ್ನಿ ಮುಸ್ಲಿಮರು, ಕಾಶ್ಮೀರದ ಬಹುತೇಕ ಎಲ್ಲಾ ಸಾಮಾಜಿಕ ಜನಸಂಘಟನೆಗಳು ಸುನ್ನಿ ಮುಸಲ್ಮಾನರ ನಿಯಂತ್ರಣದಲ್ಲೇ ಇದೆ. ರಾಜ್ಯದ ಆಡಳಿತ ಮತ್ತು ಆಡಳಿತಾತ್ಮಕ ಸೇವೆಗಳಲ್ಲಿ ಕಾಶ್ಮೀರಿ ಕಣಿವೆಯ ಸುನ್ನಿ ಮುಸ್ಲಿಮರದೇ ಪ್ರಾಬಲ್ಯವಿದೆ. ಆದರೆ, ಉಳಿದಂತೆ ಷಿಯಾ ಮತ್ತು ಗುಡ್ಡಗಾಡು ಪ್ರದೇಶದ ಗುಜ್ಜರ, ಪಹಾಡಿ ಇತ್ಯಾದಿ ಮುಸ್ಲಿಂ ಜನರ ನಡುವಿನಿಂದ ಅಥವಾ ರಾಜ್ಯದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ೮೫%ಗೂ ಮಿಕ್ಕಿ ಭೂಭಾಗ ಹೊಂದಿರುವ ಜಮ್ಮು ಮತ್ತು ಲಢಾಕ್ ಪ್ರಾಂತಗಳ ಜನರಿಗೆ ರಾಜ್ಯದ ಆಡಳಿತ, ವ್ಯಾಪಾರ, ಪ್ರವಾಸೋದ್ಯಮಗಳಲ್ಲಿ ಸರಿಯಾದ ಪ್ರಾತಿನಿಧ್ಯ ಇದುವರೆಗೂ ದೊರಕಿಲ್ಲ.

ಸಂವಿಧಾನದ 370ನೇ ವಿಧಿ ತಾತ್ಕಾಲಿಕ, ನಮಗೆ ಗೊತ್ತಿರದ 35A!
ಭಾರತದೊಂದಿಗಿನ ಜಮ್ಮು ಕಾಶ್ಮೀರ ವಿಲೀನವೇ ಪೂರ್ಣವಾಗಿಲ್ಲ, ರಾಜ್ಯದಲ್ಲಿ ಜನಮತಗಣನೆ ನಡೆಸಬೇಕು ಮತ್ತು ಸ್ವಾಯತ್ತv ನೀಡಬೇಕು ಮುಂತಾದ ಬೇಡಿಕೆಗಳನ್ನು ಆಗಾಗ ಮುಂದಿಡಲಾಗುತ್ತದೆ. ಕಾಶ್ಮೀರ ಭಾರತ ರಾಷ್ಟ್ರದ ಅಭಿನ್ನ ಅಂಗವಾಗಿತ್ತು ಎನ್ನುವುದು ಐತಿಹಾಸಿಕ ಸತ್ಯ. 1947 ಆಗಸ್ಟ 15ರ ಮಧ್ಯರಾತ್ರಿಗೆ ಭಾರತೀಯ ಸ್ವಾತಂತ್ರ್ಯ ಕಾಯಿದೆ 1947 (India Independence Act 1947)ರ ಅನ್ವಯ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟ ಪ್ರಾಂತಗಳ ಮೇಲೆ ಬ್ರಿಟನ್ನಿನ ಸಾರ್ವಭೌಮತೆ ಕೊನೆಗೊಂಡುಹೊಸದಾಗಿ ನಿರ್ಮಿತವಾದ ಡೊಮಿನಿಯನ್‌ಗಳಾದ ಭಾರತ ಮತ್ತು ಪಾಕಿಸ್ತಾನಗಳಿಗೆ ಅಧಿಕಾರ ಹಸ್ತಾಂತರಗೊಂಡಿತು. ಹಾಗೆಯೇ ಸಾರ್ವಭೌಮತೆ ಪಡೆದ ಸಂಸ್ಥಾನ ರಾಜ್ಯಗಳು ಒಂದೊಂದಾಗಿ ಭಾರತ ಮತ್ತು ಪಾಕಿಸ್ತಾನಗಳಲ್ಲಿ ವಿಲೀನಗೊಂಡವು. ಮೈಸೂರು, ಟ್ರಾವಾಂಕುರ್, ಪಟಿಯಾಲ ಮೊದಲಾದ ಸಂಸ್ಥಾನಗಳು ಭಾರತದೊಂದಿಗೆ ವಿಲಯನ ಒಪ್ಪಂದಕ್ಕೆ ಸಹಿಹಾಕಿದ ಮಾದರಿಯಲ್ಲೇ ಮಹಾರಾಜ ಹರಿಸಿಂಗ್ ಆಳ್ವಿಕೆಗೆ ಒಳಪಟ್ಟಿದ್ದ ಜಮ್ಮು ಕಾಶ್ಮೀರ 1947ರ ಅಕ್ಟೋಬರ್ 26ರಂದು ಭಾರತದಲ್ಲಿ ವಿಲೀನವಾಯಿತು. ಆದ್ದರಿಂದ ಜಮ್ಮು ಕಾಶ್ಮೀರದ ವಿಲೀನ ಅಂತಿಮ ಮತ್ತು ರಾಜ್ಯವು ಭಾರತ ಗಣತಂತ್ರದ ಅವಿಭಾಜ್ಯ ಅಂಗವಾಗಿದೆ. 1947ರಲ್ಲಿ ಪಾಕಿಸ್ತಾನ ಜಮ್ಮು ಕಾಶ್ಮೀರದ ಮೇಲೆ ಆಕ್ರಮಣ ನಡೆಸಿ ರಾಜ್ಯದ ಒಂದಿಷ್ಟು ಭಾಗವನ್ನು ಕಬಳಿಸಿತು. ಪ್ರಧಾನಿ ನೆಹರು ಈ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದ ಪರಿಣಾಮವಾಗಿ ಈ ವಿಷಯಕ್ಕೆ ಶೀಘ್ರ ಪರಿಹಾರ ಸಾಧ್ಯವಿರಲಿಲ್ಲ. 1950ರಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದ್ದರಿಂದ ಯುದ್ಧಪೀಡಿತ ಪ್ರದೇಶವಾದ ಜಮ್ಮು ಕಾಶ್ಮೀರ ರಾಜ್ಯಕ್ಕೆ ಭಾರತದ ಸಂವಿಧಾನವನ್ನು ವಿಸ್ತರಿಸುವ ಸಲುವಾಗಿ ರಾಜ್ಯದ ಶಾಸಕಾಂಗ ಸಭೆಯನ್ನು ರಚಿಸಿ ಒಪ್ಪಿಗೆ ಪಡೆಯುವುದು ಸಾಧ್ಯವಿರಲಿಲ್ಲ. ಆದ್ದರಿಂದ ರಾಜ್ಯದಲ್ಲಿ ಭಾರತ ಗಣತಂತ್ರದ ಸಂವಿಧಾನವನ್ನು ಜಾರಿಗೆ ತರುವ ತಾತ್ಕಾಲಿಕ ಮತ್ತು ಸಂಕ್ರಮಣ ಮಾರ್ಗವಾಗಿ 370ನೇ ವಿಧಿಯನ್ನು ಸೇರಿಸಿ ರಾಷ್ಟ್ರಾಧ್ಯಕ್ಷರಿಗೆ ಸಂವಿಧಾನ ಮತ್ತು ಸಂಸತ್ತು ಅಂಗೀಕರಿಸಿದ ಇತರ ಕಾನೂನುಗಳನ್ನು ಜಾರಿಗೊಳಿಸುವ ಪರಮಾಧಿಕಾರವನ್ನು ನೀಡಲಾಯಿತು. 370ನೇ ವಿಧಿಯಲ್ಲಿ ಶೇಖ್ ಅಬ್ದುಲ್ಲನ ಅಣತಿಯಂತೆ ಕೇಂದ್ರದ ಯಾವುದೇ ಕಾನೂನನ್ನು ಜಾರಿಗೊಳಿಸಬೇಕಾದರೆ ರಾಜ್ಯ ಶಾಸನಸಭೆಯ ಒಪ್ಪಿಗೆ ಪಡೆಯಬೇಕೆಂಬ ವಿಷಯವನ್ನೂ ಸೇರಿಸಲಾಯಿತು. 370ನೇ ವಿಧಿಯು ಕೇವಲ ತಾತ್ಕಾಲಿಕ ಮತ್ತು ಇದು ಜಮ್ಮು ಕಾಶ್ಮೀರ ರಾಜ್ಯಕ್ಕೆ ಸ್ವಾಯುತ್ತತೆಯನ್ನು ನೀಡುತ್ತದೆ ಎನ್ನುವುದು ಸತ್ಯಕ್ಕೆ ದೂರವಾದುದು. ದುರದೃಷ್ಟದ ವಿಷಯವೆಂದರೆ ಶೇಖ್ ಅಬ್ದುಲ್ಲ ಹಾಗೂ ತದನಂತರದ ಜಮ್ಮು ಕಾಶ್ಮೀರದ ಸರ್ಕಾರಗಳು 370ನೇ ವಿಧಿಯ ದುರುಪಯೋಗವನ್ನು ನಿರಂತರವಾಗಿ ನಡೆಸಿಕೊಂಡು ಬಂದಿವೆ. ತಾತ್ಕಾಲಿಕ ಪ್ರಾವಧಾನವಾಗಿದ್ದ 370ನೇ ವಿಧಿ ಇನ್ನೂ ರದ್ದಾಗಿಲ್ಲ. ಇದರ ಜೊತೆಗೆ ನೆಹರು ಶೇಖ್ ಸ್ನೇಹದ ಕೊಡುಗೆಯಾಗಿ 1954ರಲ್ಲಿ ಸಂವಿಧಾನ ತಿದ್ದುಪಡಿಯ ಸಂಸತ್ತಿನ ಪರಮಾಧಿಕಾರವನ್ನೂ ಬೈಪಾಸ್ ಮಾಡಿ ಸಂವಿಧಾನ ಆಜ್ಞೆಯ ಮೂಲಕ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಭಂಧಿಸಿದಂತೆ 35A ಎನ್ನುವ ಹೊಸ ವಿಧಿಯನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಈ ವಿಧಿಯಲ್ಲಿ ಹೇಳಿದಂತೆ ರಾಜ್ಯ ಸರ್ಕಾರದ ನೌಕರಿ, ರಾಜ್ಯದಲ್ಲಿ ಸ್ಥರಾಸ್ತಿಯನ್ನು ಖರೀದಿಸುವುದು, ನಿವಾಸ ಮಾಡುವುದು, ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ ಮೊದಲಾದ ವಿಷಯಗಳಲ್ಲಿ ರಾಜ್ಯ ಮಾಡುವ ಕಾನೂನುಗಳು ಭಾರತ ಸಂವಿಧಾನ ನೀಡುವ ಮೂಲಭೂತ ಹಕ್ಕುಗಳ ವ್ಯಾಪ್ತಿಯಿಂದ ಪ್ರಶ್ನಾತೀತವಾಗಿವೆ. ಉದಾಹರಣೆಗಾಗಿ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಬೇರೆ ರಾಜ್ಯದ ಜನರು ಭೂಮಿ ಖರೀದಿಸ ವಾಸ ಮಾಡವುದು ಸಾಧ್ಯವಿಲ್ಲ ಎಂದು ಕಾನೂನು ಮಾಡಲಾಗಿದೆ. ಇದು ಭಾರತದ ಸಂವಿಧಾನದ ಪ್ರಕಾರ ಮೂಲಭೂತ ಹಕ್ಕಿಗೆ ವಿರುದ್ಧವಾದುದು ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಾಗಿಲ್ಲ. ಹೀಗೆ ಸಂವಿಧಾನ 370 ಮತ್ತು 35A ವಿಧಿಗಳ ದುರ್ಬಳಕೆಯಿಂದ ಜಮ್ಮು ಕಾಶ್ಮೀರದಲ್ಲಿ ಘೋರ ತಾರತಮ್ಯ ನಿರಂತರ ನಡೆದು ಬಂದಿದೆ. ಆಸಕ್ತಿಯ ವಿಷಯವೆಂದರೆ 35A ವಿಧಿ ಸಂವಿಧಾನದ ಪಠ್ಯದಲ್ಲೆಲ್ಲೂ ಕಾಣಸಿಗುವುದಿಲ್ಲ.

ನಿರಾಶ್ರಿತರ ಕೇಂದ್ರ ಜಮ್ಮು
ಸಾಮಾನ್ಯವಾಗಿ ಕಾಶ್ಮೀರದಲ್ಲಿ ಹಿಂದೂಗಳ ಮೇಲಾಗುವ ದೌರ್ಜನ್ಯದ ವಿಷಯ ಬಂದಾಗ ಕಣಿವೆ 1985ರಿಂದ 95ರ ಕಾಲದಲ್ಲಿ ಇಸ್ಲಾಂ ಮೂಲಭೂತವಾದಿಗಳ ತೀವ್ರ ಹಿಂಸೆ ಅತ್ಯಾಚಾರಕ್ಕೊಳಗಾಗಿ ಕಾಶ್ಮೀರಿ ಕಣಿವೆಯಲ್ಲಿ ತಮ್ಮ ಮನೆ ಆಸ್ತಿಪಾಸ್ತಿ ತೊರೆದ ಜೀವವನ್ನು ಕೈಹಿಡಿದು ಓಡಿಬಂದ ಸಹಸ್ರಾರು ಕಾಶ್ಮೀರಿ ಪಂಡಿತ ಕುಟುಂಬಗಳನ್ನು ಉಲ್ಲೇಖಿಸಲಾಗುತ್ತದೆ. ಈಗಲೂ ಜಮ್ಮು ಮತ್ತು ದೆಹಲಿಯ ನಿರಾಶ್ರಿತ ಶಿಬಿರಗಳಲ್ಲಿ ಪುನಃ ತಮ್ಮ ಮನೆಗೆ ವಾಪಸ್ಸು ಹೋಗುವ ಕನಸನ್ನು ಇಟ್ಟುಕೊಂಡಿರುವ ಲಕ್ಷಾಂತರ ಮಂದಿ ಪಂಡಿತ ಸಮುದಾಯದ ಸಂತ್ರಸ್ತರಿದ್ದಾರೆ. ಆದರೆ ಪಂಡಿತ ಸಮುದಾಯಕ್ಕೆ ಸೇರಿರದ ಸುಮಾರು 15 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ದಶಕಗಳಿಂದ ಜಮ್ಮುವಿನ ನಿರಾಶ್ರಿತ ಶಿಬಿರಗಳಲ್ಲಿ ದಯನೀಯ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದಾರೆ. ಇವರಲ್ಲಿ ಏಳು ದಶಕಗಳ ಹಿಂದೆ ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಿಂದ ವಲಸೆ ಬಂದ ಸುಮಾರು 2 ಲಕ್ಷ ಜನರಲ್ಲಿ ಮೂರನೇ ತಲೆಮಾರು ಈಗ ನಡೆದಿದೆ. ಪಾಕಿಸ್ತಾನದೊಂದಿಗೆ ಪ್ರತಿಬಾರಿ ಯುದ್ಧವಾದಾಗಲೂ ಅನಿವಾರ್ಯವಾಗಿ ಹೊರದೂಡಲ್ಪಟ್ಟ ಗಡಿ ಪ್ರದೇಶದ ನಿವಾಸಿಗಳು ತಮ್ಮ ರಾಜ್ಯದಲ್ಲೇ ನಿರಾಶ್ರಿತರು! ಇವರ ಸಂಖ್ಯೆ ಸುಮಾರು 3.5ಲಕ್ಷ. ಇನ್ನೂ 1947ರಲ್ಲಿ ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆಯ ಮೂಲಕ ಆಕ್ರಮಿಸಿಕೊಂಡ ಪ್ರದೇಶದ ನಿರಾಶ್ರಿತರು ಸುಮಾರು 12ಲಕ್ಷ, ಇವರೊಟ್ಟಿಗೆ ಕಣಿವೆಯಿಂದ ಹೊರದಬ್ಬಲ್ಪಟ್ಟು ಜಮ್ಮುವಿನಲ್ಲಿ ಆಶ್ರಯ ಪಡೆದ ಸುಮಾರು ೩ಲಕ್ಷ ಜನರನ್ನು ಸೇರಿಸಿದರೆ ರಾಜ್ಯದಲ್ಲಿ ಸುಮಾರು 20ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದು ಜಮ್ಮುವನ್ನು ನಿರಾಶ್ರಿತರ ಕೇಂದ್ರವೆಂದೇ ಕರೆಯಬಹುದೇನೋ!.

      ಇವುಗಳಲ್ಲದೇ ಜಮ್ಮು ಕಾಶ್ಮೀರಕ್ಕೆ ಸಂಭಂಧಿಸಿದ ಇನ್ನೂ ಅನೇಕ ಸತ್ಯಗಳು, ಬೆಳಕು ಕಾಣದ ನೋವಿನ ಕಥೆಗಳು ಕಾಲಗರ್ಭದಲ್ಲಿ ಅಡಗಿವೆ. ದುರದೃಷ್ಟವೆಂದರೆ ಮಿಥ್ಯಾವಾದಗಳೇ ಇನ್ನೂ ತನ್ನ ಪ್ರಭಾವವನ್ನು ಉಳಿಸಿಕೊಂಡಿವೆ ಮತ್ತು ಜಮ್ಮು ಕಾಶ್ಮೀರದ ರಾಜಕೀಯ ಹಾಗೂ ಆಡಳಿತಾತ್ಮಕ ನೀತಿಗಳನ್ನು ದಾರಿತಪ್ಪಿಸುತ್ತಿವೆ. ವಾಸ್ತವದ ನೆಲೆಗಟ್ಟಿನ ಮೇಲೆ ಜಮ್ಮು ಕಾಶ್ಮೀರವನ್ನು ಕಾಣುವುದು ದೇಶಹಿತದ ದೃಷ್ಟಿಯುಂದ ಅತ್ಯಂತ ಅಗತ್ಯವಾಗಿದೆ

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...