(ವಿಶ್ವವಾಣಿ 26/10/2016)
ಅಕ್ಟೋಬರ್ 26 ಜಮ್ಮು ಕಾಶ್ಮೀರ ಭಾರತದಲ್ಲಿ ವಿಲೀನಗೊಂಡ ದಿವಸ, ತನ್ನಿಮಿತ್ತ ರಾಜ್ಯದ ವಿಲೀನವನ್ನು ವಿಶ್ಲೇಷಿಸುವ ಈ ಲೇಖನ.
ಅಕ್ಟೋಬರ್ 26 ಜಮ್ಮು ಕಾಶ್ಮೀರ ಭಾರತದಲ್ಲಿ ವಿಲೀನಗೊಂಡ ದಿವಸ, ತನ್ನಿಮಿತ್ತ ರಾಜ್ಯದ ವಿಲೀನವನ್ನು ವಿಶ್ಲೇಷಿಸುವ ಈ ಲೇಖನ.
1947ರ ಭಾರತದ ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟ ಬ್ರಿಟಿಷ್ ಇಂಡಿಯ ಮತ್ತು ಬ್ರಿಟಿಷರ ಸಾರ್ವಭೌಮತೆಯ ಅಡಿಗೆ ರಾಜರುಗಳ ಆಡಳಿತಕ್ಕೊಳಪಟ್ಟ ಪ್ರದೇಶ ಹೀಗೆ ಎರಡು ಭಾಗಗಳಾಗಿತ್ತು. ಭಾರತ ಸ್ವಾತಂತ್ರ್ಯ ಅಧಿನಿಯಮ 1947ರಂತೆ ಭಾರತ ಬ್ರಿಟಿಷರ ಆಡಳಿತದಿಂದ ಮುಕ್ತವಾದಮೇಲೆ ರಾಜರ ಆಡಳಿತವಿದ್ದ ಪ್ರದೇಶಗಳ ಮೇಲೆಯೂ ಬ್ರಿಟಿಷರ ಸಾರ್ವಭೌಮತೆ ಕೊನೆಗೊಂಡಿತು. ಹಾಗೆಯೇ ದೇಶದ ವಿಭಜನೆಯು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಭೂಭಾಗಕ್ಕೆ ಮಾತ್ರ ಅನ್ವಯವಾಗಿತ್ತು. ರಾಜಾಡಳಿತ ಸಂಸ್ಥಾನಗಳು ಮತ್ತು ಬ್ರಿಟಿಷ್ ಅಧಿಪತ್ಯದ ಸಂಬಂಧ ಬ್ರಿಟಿಷ್ ಸಾರ್ವಭೌಮತೆಯ ಸೂತ್ರ ಮತ್ತು ಅನೇಕ ಒಪ್ಪಂದಗಳಿಂದ ನಿಯಂತ್ರಣಕ್ಕೊಳಪಟ್ಟಿದ್ದವು, ಆದ್ದರಿಂದ ಬ್ರಿಟಿಷ್ ಸಾರ್ವಭೌಮತೆ ಕೊನೆಯಾಗುವುದರೊಂದಿಗೆ ಈ ಒಪ್ಪಂದಗಳು ಕೊನೆಗೊಂಡವು. ಹೊಸ ಆಡಳಿತದೊಂದಿಗೆ ಈ ಒಪ್ಪಂದಗಳು ಮುಂದುವರಿಯುವಂತಿರಲಿಲ್ಲ. ಬ್ರಿಟಿಷ್ ಸಾರ್ವಭೌಮತೆ ಕೊನೆಯಾಗುವುದೆಂದರೆ ರಾಜಾಡಳಿತ ರಾಜ್ಯಗಳ ಮೇಲೆ ಬ್ರಿಟಿಷ್ ಅಧಿಪತ್ಯಕ್ಕೆ ಇದ್ದ ಅಧಿಕಾರಗಳೆಲ್ಲವೂ ಪುನಃ ರಾಜ್ಯಕ್ಕೆ ಮರಳಿ ಅವು ಸ್ವತಂತ್ರಗೊಂಡವು. ಜೊತೆಗೆ ಭಾರತ ಮತ್ತು ಪಾಕಿಸ್ತಾನ ಡೊಮಿನಿಯನ್‌ಗಳೆಂಬ ಎರಡು ಹೊಸ ವ್ಯವಸ್ಥೆಗಳೊಡನೆ ಮಾತುಕತೆ ನಡೆಸಲು ಅವು ಮುಕ್ತವಾಗಿದ್ದವು. ರಾಜಾಡಳಿತ ಪ್ರಾಂತಗಳು ಸ್ವತಂತ್ರವಾಗಿ ಉಳಿಯುವುದು ಎಂದರೆ ಸನಾತನ ಕಾಲದಿಂದ ಒಂದು ರಾಷ್ಟ್ರವಾಗಿದ್ದ ಭಾರದ ಏಕತೆ ಭಂಗವಾದಂತೆ. ಮತ್ತು ಎರಡು ಶತಮಾನಗಳ ಬ್ರಿಟಿಷ ಆಡಳಿತದ ಸಮಯದಲ್ಲಿ ವ್ಯಾಪಾರ, ವ್ಯವಹಾರ ಅಭಿವೃದ್ಧಿ, ಸಂಪರ್ಕ ಸಾಧನಗಳು, ರೈಲು, ಬಂದರು, ನೀರಾವರಿ ವ್ಯವಸ್ಥೆ ಮೊದಲಾದ ಹಲವು ವಿಷಯಗಳಲ್ಲಿ ಬ್ರಿಟಿಷ್ ಆಡಳಿತ ಮತ್ತು ರಾಜ್ಯಗಳ ನಡುವೆ ಅನೇಕ ಒಪ್ಪಂದಗಳ ಸಂಕೀರ್ಣ ವ್ಯವಸ್ಥೆ ರೂಪುಗೊಂಡಿತ್ತು. ಆದ್ದರಿಂದ ಐದುನೂರ ಐವತ್ತಕ್ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಸಣ್ಣಪುಟ್ಟ ರಾಜ್ಯಗಳು ಭಾರತ ಅಥವಾ ಪಾಕಿಸ್ತಾನ ಒಕ್ಕೂಟವನ್ನು ಸೇರದೆ ಸ್ವತಂತ್ರವಾಗಿ ಆಳ್ವಿಕೆ ನಡೆಸುವುದು ಅಸಾಧ್ಯವಾಗಿತ್ತು. ಆದ್ದರಿಂದ ಭೌಗೋಳಿಕ ನಿರಂತರತೆಯನ್ನು ಗಮನದಲ್ಲಿಟ್ಟುಕೊಂಡು ತಿದ್ದುಪಡಿಗೊಂಡ ಭಾರತ ಸರ್ಕಾರ ಅಧಿನಿಯಮ 1935 ಅನ್ವಯವಾಗುವಂತೆ ಭಾರತ ಅಥವಾ ಪಾಕಿಸ್ತಾನ ಒಕ್ಕೂಟವನ್ನು ಸೇರುವಂತೆ ಸಂಸ್ಥಾನಗಳಿಗೆ ಸಲಹೆ ನೀಡಲಾಯಿತು. ಭಾರತ ಸ್ವಾತಂತ್ರ ಅಧಿನಿಯಮ 1947ರಲ್ಲಿ ಯಾವುದೇ ಸಂಸ್ಥಾನವು ಸ್ವತಂತ್ರವಾಗಿರುವ ಆಯ್ಕೆ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ರಾಜಾಡಳಿತ ಸಂಸ್ಥಾನಳೊಂದಿಗೆ ಭಾರತದ ರಾಜತಾಂತ್ರಿಕ ಸಂಭಂಧವನ್ನು ನಿರ್ಧರಿಸುವ ಸಲುವಾಗಿ ಅಂದಿನ ಗೃಹ ಮಂತ್ರಿ ಸರ್ದಾರ ಪಟೆಲ್ ಮತ್ತು ಕಾರ್ಯದರ್ಶಿ ವಿ ಪಿ ಮೆನನ್ ಎರಡು ಕರಾರು ಪತ್ರಗಳನ್ನು ತಯಾರಿಸಿದರು. ಮೊದಲನೆಯದು ಬ್ರಿಟಿಷ್ ಸಾರ್ವಭೌಮತೆ ಮತ್ತು ಸಂಸ್ಥಾನಗಳ ನಡುವೆ ಇದ್ದ ಆಡಳಿತ ವ್ಯವಸ್ಥೆಗಳು ಹೊಸದಾಗಿ ಸ್ಥಾಪನೆಗೊಂಡ ಭಾರತ ಡೊಮಿನಿಂiನ್ನಿನೊಡನೆ ಮುಂದುವರಿಯುತ್ತವೆ ಎನ್ನುವ ಸ್ಥಾಯಿ ಒಪ್ಪಂದ. ಎರಡನೆಯದು ರಾಜನು ತನ್ನ ರಾಜ್ಯವನ್ನು ಭಾರತದೊಂದಿಗೆ ವಿಲೀನಗೊಳಿಸುವ ವಿಲಯನ ಒಪ್ಪಂದ. ಈ ವಿಲಯನ ಒಪ್ಪಂದದ ಅಡಿಯಲ್ಲೇ ಮೈಸೂರು, ಟ್ರಾವಾಂಕೂರ್, ಪಟಿಯಾಲ, ಗ್ವಾಲಿಯರ್ ಮೊದಲಾದ ದೊಡ್ಡ ಪ್ರಾಂತಗಳೂ ಸೇರಿದಂತೆ ಇತರ ಐದುನೂರ ಐವತ್ತಕ್ಕೂ ಹೆಚ್ಚು ಸಣ್ಣಪುಟ್ಟ ರಾಜ್ಯಗಳು ಭಾರತ ಒಕ್ಕೂಟದಲ್ಲಿ ಸೇರ್ಪಡೆಯಾದವು. ಇದೇ ವಿಲಯನ ಒಪ್ಪಂದಕ್ಕೆ ತಮ್ಮ ಸಾರ್ವಭೌಮ ಅಧಿಕಾರವನ್ನು ಬಳಸಿ ಸಹಿ ಹಾಕುವ ಮೂಲ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಹಾರಾಜ ಹರಿಸಿಂಗ್ ತನ್ನ ರಾಜ್ಯವನ್ನು ಅಕ್ಟೋಬರ್ 26 1947ರಂದು ಭಾರತದಲ್ಲಿ ವಿಲೀನಗೊಳಿಸಿದರು.
ಜಮ್ಮು ಕಾಶ್ಮೀರ ನರೇಶ ಹಾಗೂ ಟಿಬೇಟ್ ಆದಿ ದೇಶಾಧಿಪತಿ ಎಂದು ಬಿರುದಿದ್ದ ಮಹಾರಾಜ ಹರಿಸಿಂಗ್ ಆಡಳಿತಕ್ಕೊಳಪಟ್ಟ ಕ್ಷೇತ್ರ 1947ರಲ್ಲಿ ಸುಮಾರು 2ಲಕ್ಷ 22ಸಾವಿರ ಚದರ ಕಿಮೀ. ಸುಮಾರು ಶೇ 76ರಷ್ಟು ಮುಸಲ್ಮಾನ ಜನಸಂಖ್ಯೆಯಿದ್ದ ಈ ಪ್ರಾಂತ ಪಾಕಿಸ್ತಾನ, ಅಪಘಾನಿಸ್ತಾನ, ತಜಕಿಸ್ತಾನ, ಟಿಬೇಟ್, ಚೀನ ಈ ಐದು ದೇಶಗಳೊಡನೆ ತನ್ನ ಗಡಿಯನ್ನು ಹಂಚಿಕೊಂಡಿತ್ತು. ಅತ್ಯಂತ ಆಯಕಟ್ಟಿನ ಪ್ರದೇಶವಾಗಿದ್ದ ಈ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪಾಕಿಸ್ತಾನ ಬಯಸಿತ್ತು ಹಾಗೂ ಮಹಾರಾಜ ಹರಿಸಿಂಗರನ್ನು ಬಗ್ಗಿಸುವ ಎಲ್ಲ ಪ್ರಯತ್ನಗಳನ್ನು ಮಹಮ್ಮದ್ ಅಲಿ ಜಿನ್ನಾ ಮಾಡಿದ್ದರು. ಎಲ್ಲ ಪ್ರಯತ್ನಗಳು ಫಲ ನೀಡದಿದ್ದಾಗ ಅಕ್ಟೋಬರ ೨೨ರಂದು ರಾಜ್ಯದ ಮೇಲೆ ಆಕ್ರಮಣ ಮಾಡಿದ ಪಾಕಿಸ್ತಾನ ಬಲಪೂರ್ವಕವಾಗಿ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಯಿತು. ಈ ಸಂದರ್ಭದಲ್ಲಿ ರಾಜ್ಯದ ರಕ್ಷಣೆಗಾಗಿ ಭಾರತೀಯ ಸೇನೆಯ ಸಹಾಯ ಬಯಸಿದ ಮಹಾರಾಜ ಹರಿಸಿಂಗ್ ವಿಲಯನ ಒಪ್ಪಂದಕ್ಕೆ ಸಹಿ ಹಾಕಿದರು. ಅಕ್ಟೋಬರ್ 27 1947ರಂದು ಭಾರತದ ಗವರ್ನರ್ ಜನರಲ್ ಮೌಂಟಬ್ಯಾಟನ್ ಅಂಕಿತದೊಂದಿಗೆ ಜಮ್ಮು ಕಾಶ್ಮೀರ ರಾಜ್ಯ ಭಾರತದಲ್ಲಿ ಸೇರ್ಪಡೆಯಾಯಿತು.
ಜಮ್ಮು ಕಾಶ್ಮೀರದ ಪ್ರತ್ಯೇಕತೆ ವಿಶೇಷ ಸ್ಥಾನಮಾನಗಳನ್ನು ಪ್ರತಿಪಾದಿಸುವವರು, ರಾಜ್ಯದ ವಿಲೀನವನ್ನೇ ಪ್ರಶ್ನಿಸುವವರು ಕೆಲವು ವಿಷಯಗಳನ್ನು ಗಮನಿಸಬೇಕು. ಉಳಿದ ರಾಜ್ಯಗಳ ವಿಲೀನದ ಮಾದರಿಯಲ್ಲೇ ಜಮ್ಮು ಕಾಶ್ಮೀರ ರಾಜ್ಯವೂ ಕೂಡ ಭಾರತ ಒಕ್ಕೂಟದಲ್ಲಿ ಸೇರ್ಪಡೆಯಾಯಿತು. ಮೈಸೂರು, ಟ್ರಾವಾಂಕೂರ, ಗ್ವಾಲಿಯರ್ ಮೊದಲಾದ ಸಂಸ್ಥಾನಗಳ ರಾಜರು ಅಂಕಿತ ಹಾಕಿದ ಯಾವುದೇ ಷರತ್ತಿಗೆ ಒಳಪಟ್ಟಿರದ ವಿಲಯನ ಒಪ್ಪಂದಕ್ಕೇ ಮಹಾರಾಜ ಹರಿಸಿಂಗ್ ಸಹಿ ಹಾಕಿದರು. ಈ ವಿಲೀನ ಒಪ್ಪಂದದ ಒಂದನೇ ವಿಧಿಯಲ್ಲ್ಲಿ ಭಾರತ ಅಧಿಪತ್ಯದ ಶಾಸಕಾಂಗ, ಒಕ್ಕೂಟದ ನ್ಯಾಯಾಂಗ ಮತ್ತು ಅಧಿಪತ್ಯದ ಉದ್ಧೇಶಗಳಿಗಾಗಿ ಸ್ಥಾಪಿತವಾಗುವ ಯಾವುದೇ ಅಧಿಕರಣಗಳಿರುವ ಭಾರತದ ಅಧಿಪತ್ಯಕ್ಕೆ ಸೇರಿಕೊಳ್ಳುವುದನ್ನು ಮತ್ತು ಸಂಭಂಧಿಸಿದ ಷರತ್ತುಗಳಿಗೆ ಅನುಗುಣವಾಗಿರಲು ಅಂಗೀಕರಿಸಿದ್ದೇನೆ. 9ನೇ ವಿಧಿಯಲ್ಲಿ ಹೇಳಿರುವಂತೆ ಈ ಒಪ್ಪಂದವನ್ನು ರಾಜ್ಯದ ಪರವಾಗಿ ಜಾರಿಗೊಳಿಸುವುದಾಗಿ ಮತ್ತು ಈ ಒಪ್ಪಂದದಲ್ಲಿನ ಉಲ್ಲೇಖ ನನ್ನನ್ನು ಅಥವಾ ರಾಜ್ಯದ ಆಡಳಿತಗಾರರನ್ನು ಮತ್ತು ನಂತರದ ವಾರಸುದಾರರಿಗೂ ಅನ್ವಯವಾಗುದು ಎಂದು ಜಾಹೀರುಪಡಿಸುತೇನೆ. ಎಂದು ಹೇಳಿದೆ.
ತನ್ನ ರಾಜ್ಯವನ್ನು ಸೇರ್ಪಡೆಗೊಳಿಸುವಲ್ಲಿ ಹರಿಸಿಂಗ್ ವಿಳಂಬ ಮಾಡಿದರು, ಅವರು ಜಮ್ಮು ಕಾಶ್ಮೀರವನ್ನು ಸ್ವತಂತ್ರವಾಗಿರಿಸ ಬಯಸಿದ್ದರು ಎಂದು ಆರೋಪ ಮಾಡಲಾಗುತ್ತದೆ. ಆದರೆ ವಾಸ್ತವದಲ್ಲಿ ಭಾರತದ ಸ್ವಾತಂತ್ರವನ್ನು ಪ್ರಬಲವಾಗಿ ಪ್ರತಿಪಾದಿಸುವವರಲ್ಲಿ ಹರಿಸಿಂಗ್ ಮುಂಚೂಣಿಯಲ್ಲಿದ್ದರು. 1947ರ ಜುಲೈ 18ರಂದು ಸರ್ದಾರ್ ಪಟೇಲರಿಗೆ ಬರೆದ ಪತ್ರದಲ್ಲಿ ಹರಿಸಿಂಗ್ ಭಾರತ ಒಕ್ಕೂಟವನ್ನು ಸೇರಲು ಉತ್ಸುಕರಾಗಿದ್ದರು ಎನ್ನುವ ಅಂಶ ಸ್ಪಷ್ಟವಾಗಿದೆ. ಆದರೆ ಪ್ರಥಮ ಪ್ರಧಾನಿ ನೆಹರು ಜಮ್ಮು ಕಾಶ್ಮೀರದ ಆಡಳಿತವನ್ನು ಶೇಖ್ ಅಬ್ದುಲ್ಲರಿಗೆ ಹಸ್ತಾಂತರಿಸಬೇಕೆಂಬ ಷರತ್ತು ಹಾಕಿದ್ದರು! ವಿಲೀನದ ನಂತರ ರಾಜ್ಯದ ಮಧ್ಯಂತರ ಆಡಳಿತ ಚುಕ್ಕಾಣಿಯನ್ನು ಶೇಖ್‌ಗೆ ಕೊಡಿಸುವಲ್ಲಿ ಯಶಸ್ವಿಯೂ ಆದರು. ನಂತರದ ಕಾಲಘಟ್ಟದಲ್ಲಿ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಭಂಧಿಸಿದಂತೆ ನೆಹರು-ಶೇಖ್, ಇಂದಿರಾ-ಶೇಖ್, ರಾಜೀವ್-ಪಾರೂಕ್ ಮುಂತಾದ ಒಪ್ಪಂದಗಳು ನಡೆದವು. ಶೇಖ್ ಮತ್ತವರು ಕುಟುಂಬದ ಮೇಲೆ ನೆಹರು-ಗಾಂಧಿ ಪರಿವಾರಕ್ಕಿದ್ದ ವ್ಯಾಮೋಹ ಇನ್ನೂ ನಿಗೂಢವಾಗಿದೆ.
1951ರಲ್ಲಿ ರಾಜ್ಯದಲ್ಲಿ ಸಂವಿಧಾನ ಸಭೆ ರಚನೆಯಾಯಿತು. ಇದರ ಎಲ್ಲ 75 ಸದಸ್ಯರೂ ಶೇಖ್ ನೇತೃತ್ವದ ನ್ಯಾಶನಲ್ ಕಾನ್ಫರೆನ್ಸ್‌ಗೆ ಸೇರಿದವರಾಗಿದ್ದರು. ಇದೇ ಶಾಸನ ಸಭೆಯು 1954ರ ಫೆಬ್ರುವರಿ 6ರಂದು ಭಾರತದಲ್ಲಿ ಜಮ್ಮು ಕಾಶ್ಮೀರದ ವಿಲೀನವನ್ನು ಊರ್ಜಿಗೊಳಿಸಿತು. ಇದೇ ಶಾಸನ ಸಭೆಯು ರಾಜ್ಯದ ಸಂವಿಧಾನವನ್ನು ರಚಿಸಿತು. ಜಮ್ಮು ಕಾಶ್ಮೀರ ರಾಜ್ಯದ ಸಂವಿಧಾನದ ಪ್ರಿಯಾಂಬಲ್ ಮತ್ತು ಮೂರನೇ ವಿಧಿಯಲ್ಲಿ ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಹೇಳಲಾಗಿದೆ. ಹಾಗೆಯೇ ವಿಧಿ ೪ರಲ್ಲಿ ರಾಜ್ಯದ ಭೌಗೋಳಿಕ ವಿಸ್ತಾರವು 17 ಆಗಸ್ಟ 1947ರಂದು ಇರುವಂತೆ ರಾಜರ ಆಳ್ವಿಕೆಗೆ ಸೇರಿದ ಪ್ರದೇಶ ಎಂದು ಹೇಳಲಾಗಿದೆ. ಅಂದರೆ ಇದರಲ್ಲಿ ಜಮ್ಮು, ಕಾಶ್ಮೀರ, ಪಾಕ್ ಆಕ್ರಮಿತ ಪ್ರದೇಶ, ಗಿಲ್ಗಿಟ್-ಬಾಲ್ಟಿಸ್ತಾನ, ಚೀನಾ ಆಕ್ರಮಿಸಿಕೊಂಡಿರುವ ಭೂಭಾಗವೂ ಸೇರಿದ ಲಢಾಕ್ ಈ ಎಲ್ಲ ಭಾಗಗಳೂ ಸೇರುತ್ತವೆ. ೫ನೇ ವಿಧಿಯು ರಾಜ್ಯಕ್ಕೆ ಸಂಭಂಧಿಸಿ ವಿಷಯಗಳಲ್ಲಿ ಸಂಸತ್ತಿಗೆ ಕಾನೂನು ರೂಪಿಸುವ ಅಧಿಕಾರವನ್ನು ನೀಡುತ್ತದೆ. ೧೪೭ನೇ ವಿದಿಯು ೩ನೇ ಮತ್ತು ೫ನೇ ವಿಧಿಯ ತಿದ್ದುಪಡಿಯನ್ನು ನಿಷೇಧಿಸಿದೆ. ಇದರಿಂದ ರಾಜ್ಯದ ಸಂವಿಧಾನ ಸಭೆಯ ಇಚ್ಛೆಯಂತೆ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಭಾರತದ ಸಾರ್ವಭೌಮತೆಯ ಅಂಗೀಕಾರ ಮತ್ತು ಇದನ್ನು ಅಪರಿವರ್ತನೀಯ ಎನ್ನುವ ಅಂಶ ಸ್ಪಷ್ಟವಾಗುತ್ತದೆ. ಭಾರತದ ಸಂಸತ್ತು ಅನೇಕ ಬಾರಿ ಜಮ್ಮು ಕಾಶ್ಮೀರದ ಮೇಲೆ ಭಾರತದ ಸಾರ್ವಭೌಮತೆಯನ್ನು ಎತ್ತಿ ಹಿಡಿದದ್ದಲ್ಲದೇ 1962 ಮತ್ತು 1994ರ ಠರಾವಿನಲ್ಲಿ ಸಂಪೂರ್ಣ ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎನ್ನುವ ನಿರ್ಣಯವನ್ನು ಅಂಗೀಕರಿಸಿದೆ.
ಇವೆಲ್ಲವುಗಳ ಜೊತೆಗೆ ರಾಜ್ಯದ ವಿಲೀನವನ್ನು ಪ್ರಶ್ನಿಸಿ ಜನಮತಗಣನೆ ನಡೆಸಬೇಕೆಂದು ವಿಶ್ವಸಂಸ್ಥೆಯ ನಿರ್ಣಯವನ್ನು ಉಲ್ಲೇಖಿಸುವವರು ಒಂದರೆಡು ಅಂಶಗಳನ್ನು ಗಮನಿಸುವುದು ಒಳಿತು. ಪಾಕ್ ಆಕ್ರಮಣದ ನಂತರ ಯುದ್ಧವಿರಾಮದ ಮಧ್ಯಸ್ಥಿಕೆವಹಿಸಿದ ವಿಶ್ವಸಂಸ್ಥೆಯ ರಕ್ಷಣಾ ಪರಿಷತ್ತು ತನ್ನ 47ನೇ ನಿರ್ಣಯದಲ್ಲಿ ರಾಜ್ಯದಲ್ಲಿ ಜನಮತಗಣನೆಯನ್ನು ನಡೆಸುವ ಮೊದಲು ಪಾಕಿಸ್ತಾನವು ತನ್ನ ಸೇನೆಯನ್ನು ಹಿಂತೆಗೆಯಬೇಕು ಮತ್ತು ಕಾನೂನು ಸುವ್ಯವಸ್ಥೆಗೆ ಬೇಕಾಗುವಷ್ಟು ಬಲವನ್ನು ಭಾರತ ನಿಯೋಜನೆಗೊಳಿಸಬೇಕು ಎಂದು ಹೇಳಿದೆ. ಆದರೆ ಆಜಾದ್ ಕಾಶ್ಮೀರ ಎಂದು ಕರೆಯುವ ಆಕ್ರಮಿತ ಪ್ರದೇಶದಿಂದ ಪಾಕ್ ಸೇನೆ ಇನ್ನೂ ಹೊರಹೋಗಿಲ್ಲ. ಪಾಕಿಸ್ತಾನ ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶವನ್ನು ತನ್ನ ಒಂದು ಪ್ರಾಂತವನ್ನಾಗಿ ಮಾಡಿಕೊಂಡಿದೆ. ಅಲ್ಲದೇ ಕಳೆದ ಆರೂವರೆ ದಶಕಗಳಲ್ಲಿ ರಾಜ್ಯದ ವ್ಯವಸ್ಥಿತವಾಗಿ ಜನಸಂಖ್ಯೆಯಲ್ಲಿ ಏರುಪೇರು ಮಾಡಲಾಗಿದೆ. ಹಾಗೆಯೇ ಇದುವರೆಗೆ ನಡೆದ ಚುನಾವಣೆಗಳಲ್ಲಿ ಪ್ರತ್ಯೇಕತಾವಾದಿಗಳ ಬಹಿಷ್ಕಾರದ ನಡುವೆಯೂ ಹೆಚ್ಚು ಪ್ರಮಾಣದ ಮತದಾನ ನಡೆಯುತ್ತಿದೆ. 2014ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 76 ಪ್ರತಿಶತ ಮತದಾನವಾಗಿದ್ದು ಇದಕ್ಕೇ ಸಾಕ್ಷಿ. ಇವುಗಳನ್ನು ಗಮನಿಸಿದಾಗ ಜನಮತಗಣನೆಯ ಕೂಗಿನ ಹಿಂದಿನ ಪೊಳ್ಳುತನ ಅರಿವಾಗುತ್ತದೆ.
ಯಾವ ದೃಷ್ಟಿಯಿಂದ ನೋಡಿದರೂ ಭಾರತದಲ್ಲಿ ಜಮ್ಮು ಕಾಶ್ಮೀರ ರಾಜ್ಯದ ಸಂಪೂರ್ಣ ವಿಲೀನ ಪ್ರಶ್ನಾತೀತ ಮತ್ತು ಅಪರಿವರ್ತನೀಯ. ಈ ವಿಷಯವನ್ನಿಟ್ಟುಕೊಂಡು ತಮ್ಮ ರಾಜಕೀಯ ಲಾಭವನ್ನು ಸಾಧಿಸುವವರು ದೇಶದ ಏಕತೆಗೆ ಭಂಗ ತರುವುದಷ್ಟೇ ಅಲ್ಲ ಕಾಶ್ಮೀರ ಕಣಿವೆಯ ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ ಇನ್ನೂ ಜೀವಂತವಾಗಿರುವ ಪ್ರತ್ಯೇಕತೆಯನ್ನು ಪೋಷಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಹುಳ್ಯದ ರಾಜ್ಯವೆಂದು ನಡೆಯುವ ತುಷ್ಟೀಕರಣದ ರಾಜಕೀಯವಾಗಲೀ ಅಥವಾ ಮಾಹಿತಿಯ ಕೊರತೆಯಿಂದ ಮಿಥ್ಯಾವಾದಗಳನ್ನೇ ನಂಬಿರುವ ಪ್ರತಿಪಾದನೆಗಳಾಗಲೀ ಜಮ್ಮು ಕಾಶ್ಮೀರದ ಹಿತದೃಷ್ಟಿಯಿಂದ ಕೊನೆಗೊಳ್ಳಬೇಕು.
No comments:
Post a Comment