Thursday, May 7, 2015

ಓ ಹುಡುಗಿಯರೇ ನೀವೇಕೆ ಹೀಗೆ ?

          ಕೆಲವು ವರ್ಷಗಳ ಹಿಂದಿನ ಮಾತು. ನಾನು ಕೆಲಸ ಮಾಡುವ ಸಂಸ್ಥೆಗೆ ಬಂದಿದ್ದ ಓರ್ವ ಅಮೇರಿಕದ ಕ್ಲೈಂಟ್ನೊಟ್ಟಿಗೆ ಊಟಕ್ಕೆ ಕುಳಿತಿದ್ದಾಗ ಮಾತು ಕುಟುಂಬ ಮದುವೆಗಳ ಕಡೆಗೆ ಹೊರಳಿತ್ತು. ಈಗಾಗಲೆ ಎರಡು ಮೂರು ಮದುವೆಯಾಗಿ ವಿಚ್ಛೇದನವೂ ಆಗಿ ಹೊಸ ಗರ್ಲ್ಫ್ರೆಂಡ್ ಒಟ್ಟಿಗೆ ಮುಂದಿನ ಮದುವೆಯ ಯೋಜನೆಗೆ ತೊಡಗಿದ್ದ ಆತ ಕೇಳಿದ್ದಭಾರತದಲ್ಲಿ ಯಾಕೆ ಮದುವೆಗಳು ಅಷ್ಟು ಮುರಿದು ಬೀಳುವುದಿಲ್ಲ?’ (why marriages last so long in India and will not breakup much?). ಆತನಿಗೆ ಅದೊಂದು ವಿಸ್ಮಯವಾಗಿತ್ತು. ಅಂದು ಸಹೋದ್ಯೋಗಿಯೊಬ್ಬರು ನೀಡಿದ್ದ ಉತ್ತರ ತುಂಬ ಸೂಕ್ತವಾಗಿತ್ತು. ಭಾರತದಲ್ಲಿ ಮದುವೆಗಳು ನಡೆಯುವುದು ಕೇವಲ ಗಂಡು ಹೆಣ್ಣು ಇಬ್ಬರ ನಡುವೆ ಮಾತ್ರವಲ್ಲ. ವಿವಾಹ ಎರಡು ಕುಟುಂಬಗಳ ನಡುವೆ, ಎರಡು ಪರಿವಾರಗಳ ನಡುವೆ ಸಂಬಂಧವನ್ನು ಬೆಸೆಯುತ್ತದೆ. (marriage builds relation between two families). ಇದು ನಮ್ಮ ಅನುಭವ. ಕನ್ಯಾ ವರಯತೇ ರೂಪಮ್ ಮಾತಾ ವಿತ್ತಂ ಪಿತಾ ಶ್ರುತಮ್| ಬಾಂಧವಾಃ ಕುಲಮಿಚ್ಛಂತಿ ಮೃಷ್ಟಾನ್ನಮ್ ಇತರೇ ಜನಾಃ|| - ವಧುವು ಹುಡುಗನ ರೂಪವನ್ನೂ, ವಧುವಿನ ತಾಯಿಯು ಸಂಪತ್ತನ್ನು ನೋಡಿದರೂ ತಂದೆಯಾದವನು ವರನ ಗುಣಾವಗುಣಗಳು, ಕೌಟುಂಬಿಕ ಹಿನ್ನೆಲೆಗಳ ಬಗ್ಗೆ ಜನರು ಹೇಳುವುದನ್ನು ಮತ್ತು ಬಂಧುವರ್ಗದವರು ಕುಲ ಪರಿವಾರಗಳನ್ನು ಮಹತ್ತೆಂದು ನೋಡುತ್ತಾರೆ ಎನ್ನುವಲ್ಲಿ ನಮ್ಮಲ್ಲಿ ವೈವಾಹಿಕ ಸಂಬಂಧವನ್ನು ಬೆಳೆಸುವಲ್ಲಿನ ಮಾನದಂಡದ ಅರಿವಾಗುತ್ತದೆ. ಹಾಗೇಯೇ ಗುಣಮ್ ಪೃಚ್ಛಸ್ವ ಮಾ ರೂಪಮ್ ಶೀಲಮ್ ಪೃಚ್ಛಸ್ವ ಮಾ ಕುಲಮ್ ಸಿದ್ಧಿಮ್ ಪೃಚ್ಛಸ್ವ ಮಾ ವಿದ್ಯಾಮ್ ಸುಖಮ್ ಪೃಚ್ಛಸ್ವ ಮಾ ಧನಮ್ ಎನ್ನುವ ಸುಭಾಷಿತದಲ್ಲಿ ಹೇಳುವಂತೆ ರೂಪಕ್ಕಿಂತ ಆತನ ಗುಣ, ಕುಲಕ್ಕಿಂತ ಆತನ ನಡತೆ, ವಿದ್ಯೆಗಿಂತ ಆತ ಗಳಿಸಿದ ಸಿದ್ಧಿ, ವಿದ್ಯೆಯನ್ನು ವಿನಿಯೋಗಿಸಬಲ್ಲ ಕ್ಷಮತೆ, ಧನಸಂಪತ್ತಿಗಿಂತ ಮಿಗಿಲಾಗಿ ಆತನ ಜೀವನ ಸುಖ ಇವು ಒಬ್ಬ ವ್ಯಕ್ತಿಯನ್ನು ಅಳೆಯಬಲ್ಲ ಸೂಕ್ತ ಅಳತೆಗೋಲುಗಳು. ರೀತಿಯ ಮಾನದಂಡಗಳಿಂದ ವರಸಾಮ್ಯ ಗುಣದೋಷಗಳನ್ನು ಗ್ರಹಿಬಲ್ಲ ಹಿರಿಯರಿಂದ ನಿಶ್ಚಯವಾಗಿ ಪರದೆ ಸರಿಯುವವರೆಗೂ ಒಬ್ಬರನ್ನೊಬ್ಬರು ಮುಖವನ್ನೂ ನೋಡಿರದ ಗಂಡು-ಹೆಣ್ಣುಗಳ ವೈವಾಹಿಕ ಸಂಬಂಧಗಳು ಬಹುತೇಕ ಸುಖೀ ದಾಂಪತ್ಯವಾಗುವುದು ನಮ್ಮ ನಡುವಿನ ಸಮಾಜದಲ್ಲಿ ಸಹಜವಾಗಿತ್ತು.

         ಆದರೆ ಕಾಲಾಚಾರಗಳು ಬದಲಾಗಿವೆ. ಕಾಲೇ ಕಾಲೇ ನವಾಚಾರಃ ನವಾ ವಾಣೀ ಮುಖೇ ಮುಖೇ ಎನ್ನುವಂತೆ ಆಚಾರಗಳೂ ಬದಲಾಗಿವೆ, ಬದಲಾಗತಕ್ಕದ್ದೇ, ಅದು ಪ್ರಕೃತಿಯ ನಿಯಮ. ಇಂದಿನ ಕಾಲದಲ್ಲಿ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಸಾಮಾನ್ಯವಾಗಿ ಇದೆ, ಅದರಲ್ಲೂ ಹುಡುಗಿಯರಿಗೆ ಸ್ವಲ್ಪ ಜಾಸ್ತಿಯೇ ಇದೆ. ಜೊತೆಗೆ ಕೆಲವು ಸಮುದಾಯಗಳಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆ ಕಡಿಮೆಯಿದೆ ಎಂಬ ಸ್ವಲ್ಪ ವಾಸ್ತವ ಆದರೆ ಹೆಚ್ಚಿನ ಗುಲ್ಲು ಹಬ್ಬಿದಾಗಿನಿಂದ ಹುಡುಗಿಯರ ಆಯ್ಕೆಯ ಸ್ವಾತಂತ್ರ್ಯದ ವ್ಯಾಪ್ತಿ  ಹಿಗ್ಗಿದ್ದಷ್ಟೇ ಅಲ್ಲ ಆಯ್ಕೆ ಚೌಕಾಶಿಯ ವ್ಯವಹಾರದ ಮಟ್ಟಕ್ಕೆ ಇಳಿದಿದೆಯೆಂದರೆ ಅತಿಶಯೋಕ್ತಿಯೇನೂ ಅಲ್ಲ. ಗಂಡನ್ನುಆರಿಸುವಾಗ ಹೇಗೇಗಿರಬೇಕು ಏನೇನಿರಬೇಕು ಎಂದು ಹುಡುಗಿಯೋ ಅವಳ ಹೆತ್ತವರೋ ಮುಂದಿಡುವ ಕಂಡೀಶನ್ನುಗಳು ಕಳವಳಕಾರಿಯಾದರೂ ಕೇಳಲೂ ಬಹಳ ಮಜವಾಗಿವೆ. ಕೃಷಿ ಕೆಲಸ ಮಾಡುತ್ತ ಅಥವಾ ಇನ್ನು ಯಾವುದೋ ವ್ಯವಹಾರ ಮಾಡುತ್ತ ಊರಿನ ಕಡೆ ಮನೆಯಲ್ಲಿ ತಂದೆತಾಯಿಯರೊಡನೆ ತುಂಬು ಕುಟುಂಬದಲ್ಲಿ(?) ವಾಸವಾಗಿರುವ ಮಾಣಿಗೆ ಹೆಣ್ಣು ಸಿಗುವುದಿಲ್ಲ ಎನ್ನುವುದು ಬಹಳ ಹಳೆಯ ವಿಚಾರವಾಯಿತು. ಕೆಲವು ವರ್ಷಗಳ ಕೆಳಗೆ ಸ್ಟಾರ್ ವ್ಯಾಲ್ಯೂ ಹೊಂದಿದ್ದ ಸಾಫ್ಟವೇರ್ ಗಂಡಿಗೂ ಈಗ ಸುಲಭವಿಲ್ಲ.

        ಹೀಗಿರುವ ಸನ್ನಿವೇಶದಲ್ಲಿ ಮದುವೆವ್ಯವಹಾರ  ಚೌಕಾಶಿಯ ನಡುವೆ ಅಲ್ಪಸ್ವಲ್ಪ ಸ್ವಾನುಭವ ಪಡೆದ ಆಧಾರದ ಮೇಲೆ ಇತ್ತೀಚಿಗೆ ಹಾದುಹೋದ ಒಂದು ರಿಕ್ವೈರ್ಮೆಂಟ್ನ್ನು ಸ್ಯಾಂಪಲ್ಲಿಗಾಗಿ ಉಲ್ಲೇಖಿಸುವುದಾದರೆ - ತಂದೆ ತಾಯಿಯ ಒಬ್ಬನೇ ಮಗನಾಗಿರಬೇಕು ಆದರೆ ಮನೆಯಲ್ಲಿ ಅತ್ತೆಮಾವ(ಲಗೇಜು !) ಇರಬಾರದು, ಬೆಂಗಳೂರಿನಲ್ಲಿ ಮಲ್ಟಿನ್ಯಾಶನಲ್ ಕಂಪನಿಯಲ್ಲಿ ಕೆಲಸದಲ್ಲಿರಬೇಕು. ಊರಿನಲ್ಲಿ ಮನೆ ಜಮೀನು ಇರಬೇಕು, ಆದರೆ ವಾಪಾಸು ಮನೆಗೆ ಹೋಗಿ ಜಮೀನು ಮತ್ತು ತಂದೆತಾಯಿರನ್ನು ನೋಡಿಕೊಂಡಿರುವ ವಿಷಯ ಎತ್ತಬಾರದು. ಬೆಂಗಳೂರಿನಲ್ಲಿ ಸೈಟು ಫ್ಲಾಟು ಮಾಡಬೇಕು!!

        ಇಂತಹ ಷರತ್ತುಗಳ, ಹೇಗೇಗಿರಬೇಕುಗಳ ಪಟ್ಟಿ ಮಾಡಿ ಹುಡುಗಿಯರೇ ನೀವೇಕೆ ಹೀಗೆ? ಎಂದು ಸವಾಲು ಹಾಕುವುದು ಇಲ್ಲಿ ಪ್ರಸ್ತುತವಾದರೂ ಅಪ್ರಯೋಜಕ ಮತ್ತು ಅಪೇಕ್ಷಣೀಯವಲ್ಲ. ಕಾರಣವಿಷ್ಟೇ. ತನಗೊಪ್ಪುವ ಸಂಗಾತಿಯೊಂದಿಗೆ ಬದುಕುವ, ತನಗೆ ಸರಿಯಾದ ವರನನ್ನು ವರಿಸುವುದು ವರಮಾಲೆ ಕೈಯಲ್ಲಿ ಹಿಡಿದ ಪ್ರತಿಯೊಬ್ಬ ವಧುವಿನ ಆಯ್ಕೆಗೆ, ಅವಳ ಹೆತ್ತವರ ಆಯ್ಕೆಗೆ ಬಿಟ್ಟ ವಿಷಯ. ಇಲ್ಲಿ ಸರಿತಪ್ಪುಗಳ ವಿಶ್ಲೇಷಣೆಗಿಂತ ಅವರವರ ಇಷ್ಟವನ್ನು ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯ. ಮೂರನೆಯ ವ್ಯಕ್ತಿ ಅದನ್ನು ಪ್ರಶ್ನಿಸತಕ್ಕದ್ದಲ್ಲ, ಅದಕ್ಕೆ ಆಕ್ಷೇಪಿಸತಕ್ಕದ್ದಲ್ಲ.

       ಆದರೂ ಇಂತಹಇರಬೇಕುಗಳಪಟ್ಟಿಯನ್ನು ಮುಂದಿಟ್ಟಿರುವ ಕನ್ಯಾಮಣಿ ಮತ್ತವರ ಹೆತ್ತವರು ಅರಸುತ್ತಿರುವುದೇನು? ಎಂದು ಪ್ರಶ್ನಿಸಿಕೊಳ್ಳುವುದು ಖಂಡಿತ ಅಸಾಧುವಲ್ಲ. ಸುಖೀ ಜೀವನಕ್ಕೆ ಆರ್ಥಿಕ ಸಂಪನ್ಮೂಲ, ನೌಕರಿ, ಸೌಕರ್ಯ ಸಾಧನಗಳು ಬೇಕು ನಿಜ. ಆದರೆ ಕೌಟುಂಬಿಕ ಜೀವನದ ಸುಖ ಸಂತೋಷಗಳನ್ನು ಕೇವಲ ಹಣದಿಂದ ಕೊಂಡುಕೊಳ್ಳಲು ಸಾಧ್ಯವಿದೆಯೇ? ನಗರದ ಐಶಾರಾಮಿ ಬದುಕಿನ ದೊಡ್ಡಸ್ತಿಕೆ ಕೊನೆಯವರೆಗೆ ಸಾರ್ಥಕತೆಯ ಅನುಭವವನು ನೀಡಬಲ್ಲದೇ? ಸಂಬಂಧ ಬೆಳಸುವಲ್ಲಿ ಹಣ ಐಶ್ವರ್ಯ ಅಂತಸ್ತುಗಳೇ ಪ್ರಮುಖವಾದರೆ ಪರಿವಾರದಲ್ಲಿ ಪ್ರೀತಿ ಸ್ನೇಹಗಳಿಗೆಲ್ಲಿ ಜಾಗ. ಮದುವೆ ಅನುಕೂಲಕ್ಕೆ, ಗಂಡು ಅನೂಕೂಲಸ್ಥನಾಗಿದ್ದರೆ ಸಾಕೋ? ಅಥವಾ ಅನುರೂಪನಾಗಿರಬೇಕೋ? ಇದೆಲ್ಲದರ ಜೊತೆಗೆ ಹೆಣ್ಣು ಗಂಡಿನಂತೆಯೇ ಓರ್ವ ಜೀವಂತ ವ್ಯಕ್ತಿಯೇ ಹೊರತು ಹಣವಂತನಿಗೆ ಮಾರಾಟವಾಗಬಲ್ಲ ವಸ್ತುವಲ್ಲವಲ್ಲ.

       ಬದುಕು ಹಣ-ಸಂಪತ್ತಿನಿಂದ ತುಂಬಿ ತುಳುಕುತ್ತಿರಬೇಕೆಂದಿಲ್ಲ, ಆದರೆ ಸಮೃದ್ಧವಾಗಿರಬೇಕು-ಪ್ರೀತಿ ಆತ್ಮೀಯತೆಗಳಿಂದ, ನಾವು-ನಮ್ಮವರೆಂಬ ಆರ್ದ್ರ ಸಂಬಂಧಗಳಿಂದ, ಇತರರ ಸುಖ ದುಃಖಗಳಿಗೆ ಸಂವೇದನಶೀಲವಾದ ನಡವಳಿಕೆಯಿಂದ, ಮಕ್ಕಳು ಕಿರಿಯರನ್ನು ಸರಿಯಾದ ಮಾರ್ಗದಲ್ಲಿ ನಡೆಸಬಲ್ಲ ಕರ್ತವ್ಯ ನಿರ್ವಹಣೆಯಿಂದ, ಪ್ರಕೃತಿಯ ಅಗಾಧತೆಯಲ್ಲಿ ವಿಶಾಲತೆ ಗಳಿಸಬಲ್ಲ ಬುದ್ಧಿಯಿಂದ, ನಿಸರ್ಗದ ಸೊಬಗ ಸವಿಯಬಲ್ಲ, ಕಲೆ- ಕಾವ್ಯ- ಸಂಗೀತ- ಕ್ರೀಡೆ-ಹಣ್ಣು ಹಂಪಲು ತಿಂಡಿ ತಿನಿಸುಗಳನ್ನು ಆಸ್ವಾದಿಸಬಲ್ಲ ಸಹೃದಯತೆಯಿಂದ, ಜೀವನಪ್ರೀತಿಯಿಂದ.

     ಇನ್ನು ಇಂದಿನ ನಗರೀಕೃತ ಬದುಕಿನ ಆಕರ್ಷಣೆಯ ಪ್ರಭಾವದಲ್ಲಿ ಕಳೆದುಹೋಗಿರುವ ಹುಡುಗಿಯರನ್ನೇ ಉದ್ಧೇಶಿಸಿ ನೇರವಾದ ಮಾತೊಂದನ್ನು ಹೇಳುವುದಾದರೆ - ಕೃಷಿ ಅಥವಾ ಇನ್ನು ಯಾವುದೋ ವ್ಯವಹಾರವನ್ನು ಮಾಡುತ್ತ ತಂದೆ ತಾಯಿ ಬಳಗದೊಟ್ಟಿಗೆ ಊರಿನ ಸ್ವಂತ ಮನೆಯಲ್ಲಿರುವ ಹುಡುಗನೋ ಅಥವಾ ಉದ್ಯೋಗ ನಿಮಿತ್ತ ಬೆಂಗಳೂರಿನಂತಹ ಪಟ್ಟಣದೊಳಗೆ ನೆಲೆಸಿದ್ದರೂ ಊರಿನೆಡೆಗೆ ಸೆಳೆತ ಹೊಂದಿರುವ ಹುಡುಗನೂ ಗಂಡಸೇ! ನಿಜ, ಅವನು ಜೆಹಾದಿ ಸಾಬಿಯಂತೆ ಅರೇಬಿಯಾದಿಂದ ಆಮದಾದ ಸೆಂಟಿನ ಪರಿಮಳದಿಂದ ಸೆಳೆಯಲಾರ, 250 ಸಿಸಿಯ ಬೈಕಿನ ಎತ್ತರದ ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿಕೊಂಡು ಪಾರ್ಕು ಮಾಲುಗಳಿಗೆ ಓಡಾಡಿಸಲಾರ, ಯಾರೂ ಸುಳಿಯದ ಊರಹೊರಗಿನ ಕಲ್ಲುಬಂಡೆಯ ಮೇಲೆ ಮೈಬೆಚ್ಚಾಗಾಗುವಂತೆ ತಾಗಿ ಕುಳಿತು ಸರಸ ಸಲ್ಲಾಪ ನಡೆಸಲಾರ. ಉತ್ತರದ ಹಿಂದೀ ಪ್ರದೇಶದ ತರುಣನಂತೆ ಬಾಲಿವುಡ್ಡಿನ ಹಿಂದಿ ಹಾಡಿನ ಅಂತ್ಯಾಕ್ಷರಿ ಹಾಡಿ ಮನಮೋಹಿಸಲಾರ, ಮೊಬೈಲಿಗೆ ರೊಮ್ಯಾಂಟಿಕ್ ಆದ ಶಾಯಿರಿ ಎಸ್ಸೆಮ್ಮೆಸ್ಗಳನ್ನು ಕಳಿಸಿ ಬಣ್ಣದ ಮಾತುಗಳಲ್ಲೇ ತೇಲಿಸಲಾರ. ಮೆಟ್ರೋ ನಗರದಲ್ಲಿ ಬೆಳೆದ ಯುವಕನಂತೆ ಇಂಗ್ಲಿಷ್ ಸಿನಿಮಾದ ಕತೆಯನ್ನು ಹೇಳುತ್ತಲೋ, ಗಿಟಾರಿನ ಒಂದೇ ತಂತಿಯನ್ನು ಮೀಟುತ್ತ ತಲೆಯನ್ನು ಜಾಸ್ತಿಯೇ ಅಲ್ಲಾಡಿಸಿ ರಾಕ್ ಮ್ಯೂಸಿಕ್ಕಿನ ಟ್ಯೂನನ್ನು ಗುನುಗುನಿಸಿ ಇಂಗ್ಲೀಷಿನಲ್ಲಿ ಪಟಪಟನೆ ಮಾತನಾಡಿ ಬೀಳಿಸಿಲಾರ. ಅಸಾಧ್ಯವೆಂದಲ್ಲ, ಅಸಕ್ತಿಯಿಲ್ಲ ಅಷ್ಟೇ. ಆದರೆ ನೆನಪಿರಲಿ ಗ್ರಾಮ್ಯಮನದ ಹುಡುನಲ್ಲಿಯೂ ಪ್ರೇಮಿಸಬಲ್ಲ ಹೃದಯವಿದೆ. ಸಂಸಾರದ ಸಂಕಷ್ಟಗಳಲ್ಲಿ ಭದ್ರತೆ ನೀಡಬಲ್ಲ ಸಾಮರ್ಥ್ಯವಿದೆ, ಬಾಳಕೊನೆಯವರೆಗೆ ಜೊತೆಯಾಗಿ ನಡೆಯಬಲ್ಲ ಮನವಿದೆ.

       ಎಲ್ಲರೂ ಹೀಗೆಂದಲ್ಲ. ಜೀವನಪ್ರೀತಿಯ ಪ್ರತಿಬಿಂಬದಂತಿರುವ, ಕುಟುಂಬದ ಜನರ ನಡುವಿನ ಕೊಂಡಿಯಂತೆ ಹಲವು ಸಂಕಷ್ಟಗಳ ನಡುವೆಯೂ ಆದರ್ಶ ದಾಂಪತ್ಯ ಜೀವನ ನಡೆಸುತ್ತಿರುವ ಅನೇಕ ಸೋದರಿಯರ, ಮಾತೆಯರ ಉದಾಹರಣೆಗಳನ್ನು ನಮ್ಮ ಸುತ್ತಲೇ ಕಾಣಬಹದು. ಪ್ರೇಮಕವಿಯೆಂದೇ ಪ್ರಸಿದ್ಧರಾಗಿದ್ದ ಕೆ ಎಸ್ ನರಸಿಂಹಸ್ವಾಮಿಯವರ ಒಂದು ಸುಂದರ ಕವನನೀವಲ್ಲವೇ?’ ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಸುಳಿದವರು ನೀವಲ್ಲವೇ ಎಂದು ಪ್ರಾರಂಭವಾಗುವ ಕವನದಲ್ಲಿ ಒಲ್ಮೆಯ ದಾಂಪತ್ಯದಲ್ಲಿ ಸಾರ್ಥಕ್ಯ ಕಾಣುತ್ತಿರುವ ಹೆಂಡತಿ ತನ್ನ ಗಂಡನನ್ನು ವರ್ಣಿಸುವುದನ್ನು ಕವಿ ಸುಂದರ ಸಾಲುಗಳಲ್ಲಿ ಪೋಣಿಸಿದ್ದಾರೆ. ಅದರ ಕೊನೆಯ ಚರಣದ ಕೊನೆಯ ಸಾಲು ಹೀಗಿದೆ ಗಂಡನಿಗೆ ಒಪ್ಪಾಗಿ ಕಂದನಿಗೆ ದಿಕ್ಕಾಗಿ ಪಯಣದಲಿ ಜೊತೆಯಾಗಿ ನಾನಿಲ್ಲವೇ?ನರಸಿಂಹಸ್ವಾಮಿಯವರಿಗೆನೋ ಬಾಳಪಯಣದಲ್ಲಿ ಜೊತೆಯಾಗಿ ವೆಂಕಮ್ಮನವರಿದ್ದರು. ಆದರೆ ನಾನು ನನ್ನಂತವರು . . . .? ಕಾದು ನೋಡಬೇಕು.

ಹಿಂದೆ ನಡೆದ ಹಾದಿಗಳಲಿ ಒಂದೆರಡು ಹೆಜ್ಜೆಗಳು

                ಬಹುತೇಕ ಸಂದರ್ಭಗಳಲ್ಲಿ ನಮ್ಮ ಸುತ್ತಲೂ ನಡೆದಿರುವ ದೊಡ್ಡದೊಂದು ಬದಲಾವಣೆ ಗಮನ ಸೆಳೆಯುವ ಮಟ್ಟಿಗೆ ನಮ್ಮ ಗ್ರಹಿಕೆಗೆ ಬಾರದೇ ಇರುತ್ತದೆ. ಕಾರಣವಿಷ್ಟೇ, ನಾವೂ ಆ ಪರಿವರ್ತನಾ ಪ್ರಕ್ರಿಯೆಯ ಅಂಗವಾಗಿರುತ್ತೇವೆ. ಬದಲಾವಣೆಯ ಪ್ರಕ್ರಿಯೆಯ ಏರಿಕೆಯ ಬೆಳವಣಿಗೆ –incremental change ನಮ್ಮ ಮುಂದೆಯೇ ನಡೆದು ಹಂಚಿ ದೀರ್ಘವಾಗಿ ನಮ್ಮ ಅನುಭವಕ್ಕೆ ಸಿಕ್ಕಿದ್ದರಿಂದ, ಒತ್ತಟ್ಟಿಗೇ ನಮ್ಮ ಗ್ರಹಿಕೆಗೆ ಬಂದಾಗ ಆಗುವ ಅನುಭವ ಅಂತಹ ಸಂದರ್ಭದಲ್ಲಿ ಆಗುವುದಿಲ್ಲ. ಉದಾಹರಣೆಗೆ ಮಗನೋ ಮಗಳೋ ಬೆಳೆದು ನಿಂತದ್ದು ಒಂದಿಷ್ಟು ವರ್ಷಗಳ ನಂತರ ಭೇಟಿಯಾದ ಬಂಧುವಿನ ಅಥವಾ ಸ್ನೇಹಿತನ ಗಮನಕ್ಕೆ ಬರುವಷ್ಟು ಹುಟ್ಟಿಸಿದ ತಂದೆಯ ಗ್ರಹಿಕೆಗೇ ಬಂದಿರುವುದಿಲ್ಲ. ಆದ್ದರಿಂದ ಮಾರ್ಪಾಡಾಗಿದ್ದು ಮನದ ಕದತಟ್ಟುವ ಮಟ್ಟಿಗೆ ಗಮನಕ್ಕೆ ಬರಬೇಕೂ ಅಂತಾದರೆ ದೇಶಕಾಲಗಳ ಪರಿಧಿಯಿಮದ ಒಂದು ಮಟ್ಟಿನ ಅಂತರದಲ್ಲಿ ನಿಂತು ನೋಡುವುದು ಅನಿವಾರ್ಯ.

              ಇಷ್ಟೊಂದು ಪೀಠೀಕೆ ಹಾಕಲಿಕ್ಕೂ ಕಾರಣವುಂಟು. ದಶಕದ ಹಿಂದೆ ವಿದ್ಯಾರ್ಥಿ ದೆಶೆಯಲ್ಲಿ ಆಶ್ರಯ ನೀಡಿದ್ದ ಹುಬ್ಬಳ್ಳಿಯ ಎಬಿಎಮ್‍ಎಮ್ ವಸತಿ ನಿಲಯದ ಆವರಣದಲ್ಲಿ ಹಾಗೂ ಓಡಾಡಿದ ವಿದ್ಯಾನಗರದ ಬೀದಿಗಳಲ್ಲಿ ನಾಲ್ಕಾರು ಹೆಜ್ಜೆ ನಡೆದಾಡುವ ಅವಕಾಶ ಅಚಾನಕ್ಕಾಗಿ ಇತ್ತೀಚೆಗೆ ಒದಗಿಬಂದಿತ್ತು. ಹತ್ತು ವರ್ಷಗಳಲ್ಲಿ ಹಾಸ್ಟೆಲ್ ಹಾಗೂ ವಿದ್ಯಾನಗರ ಪರಿಸರದಲ್ಲಿಯೂ ಸಾಕಷ್ಟು ಬದಲಾವಣೆಯಾಗಿದ್ದು ಸಹಜವೇ. ರಸ್ತೆಯ ಇಕ್ಕೆಲಗಲ್ಲಿ ಖಾಲಿಯಿದ್ದ ಸೈಟುಗಳಲ್ಲಿ ಬಹುಮಹಡಿ ಕಟ್ಟಡಗಳೆದ್ದಿವೆ. ಬೆರೆಳೆಣಿಕೆಯಷ್ಟೇ ಇದ್ದ ಜಾಲಿಯ ಮರಗಳೂ ಉರುಳಿವೆ. ನಾವೆಲ್ಲ ಕ್ರಿಕೆಟ್ ಆಡುತ್ತಿದ್ದ ಹಾಸ್ಟೆಲ್ ಮುಂದಿನ ಲೋಕಪ್ಪನ ಹಕ್ಕಲ ಧೂಳಿನ ಮೈದಾನವನ್ನು ಶಾಪಿಂಗ್ ಕಾಂಪ್ಲೆಕ್ಸ್, ಬೇಬಿ ಸಿಟ್ಟಿಂಗ್, ಕಿಂಡರ್‍ಗಾರ್ಡನ್ ಉದ್ಯಮಗಳು ಆಕ್ರಮಿಸಿಕೊಂಡಿವೆ. ಪಕ್ಕದ ಉದ್ಯಾನದಲ್ಲಿದ್ದ ದೇವಸ್ಥಾನದ ಸುತ್ತಲಿನ ಹಸಿರು ಕಾಣೆಯಾಗಿದೆ. ನಮ್ಮ ನಿತ್ಯ ಮುಂಜಾನೆಯ ಉಪಹಾರದ ತಾಣವಾಗಿದ್ದ ಉಡುಪಿ ದರ್ಶಿನಿಯ ಶೆಟ್ಟರು ಬೆಂಗಳೂರಿಗೆ ಸೇರಿ ಐದಾರು ವರ್ಷವೇ ಆಯಿತಂತೆ. ಅಲ್ಲೇ ಪಕ್ಕದ ಶಿವಶಕ್ತಿ ಕಾಂಡಿಮೆಂಟ ಅಂಗಡಿಯ ಅಂಕಲ್ ತಲೆಯ ಕೂದಲು ಕರ್ರಗಿದೆ ಆದರೆ ಕಿರುಗಡ್ಡ ಮೀಸೆ ಹಾಲಿನಷ್ಟು ಬೆಳ್ಳಗಾಗಿವೆ, ಜೊತೆಗೆ “ಅಂಗಡಿ ಮಾರಾಟಕ್ಕಿದೆ” ಬೋರ್ಡು ನೇತಾಡುತ್ತಿದೆ ಗೋಡೆಯ ಮೇಲೆ. ಸರತಿ ಸಾಲಿನಲ್ಲಿ ನಿಂತು ಮನೆಗೆ ಫೋನ್ ಮಾಡಲು ಕಾಯುತ್ತಿದ್ದ ಕರಿ ತೆಲುಗು ಕಿರಸ್ತನ ಟೆಲಿಫೋನ್ ಕಾಲದ ಗಾಳಿಯಲ್ಲಿ ಎಂದೋ ಉರುಳಿ ಹೋಗಿದೆ, ಎಲ್ಲಕಡೆಯಂತೆ. ಪಕ್ಕದ ಧೋಬಿ ಕುಟುಂಬದ ಹೆಣ್ಣುಮಕ್ಕಳು ಬಟ್ಟೆಯನ್ನು ಧಬಧಬನೆ ಕಲ್ಲಿನೆ ಮೇಲೆ ಕುಕ್ಕಿ ಹಿಂಡಿ ಎರಡು ಎಳೆಗಳನ್ನು ನೇಯ್ದು ಕಟ್ಟಿದ್ದ ಹಗ್ಗಕ್ಕೆ ಸಿಕ್ಕಿಸ ಒಣಗಿಸುತ್ತಿದ್ದದ್ದು ಕಾಣಸಿಗಲಿಲ್ಲ. ಮೊಯ್ನು ಪಾನ್ ಅಂಗಡಿ, ಕಿನ್ನಾಳ ಜಿಮ್ ನೋಡಲು ಮರೆತೆ!
ಇನ್ನು ನಾವು ಬದುಕಿನ ಪಾಠ ಕಲಿತ ಶಾಲೆ ಎಂದೇ ಹೇಳಬಹುದಾದ ಎಬಿಎಮ್‍ಎಮ್ ಹಾಸ್ಟೆಲಿನ ಕಂಪೌಂಡಿನೊಳಗೆ ಬಂದರೆ “ಅಭಿವೃದ್ಧಿ” “ಡೆವೆಲೊಪ್‍ಮೆಂಟ್” ಹೆಸರಿನಲ್ಲಿ ನಡೆದ ಅನೇಕ ಬದಲಾವಣೆಗಳು ಕಾಣಸಿಗುತ್ತವೆ. ಕೆಲವರ್ಷಗಳ ಕೆಳಗೆ ನಾವೆಲ್ಲ ಬಟ್ಟೆ ಒಗೆದು ಒಣಗಿಸುತ್ತಿದ್ದ ಜಾಗದಲ್ಲಿದ್ದ ಸಾಲು ತೆಂಗಿನಮರಗಳನ್ನು ಕೆಡಗಿ ಮೇಲೆಬ್ಬಿಸಿದ ಕಲ್ಯಾಣ ಮಂಟಪದ ಕಟ್ಟಡ ತೆಂಗಿನ ಮರದ ಎತ್ತರವನ್ನೂ ಮೀರಿಸಿ ತಲೆಯೆತ್ತಿದೆ. ದೊಡ್ಡಭಟ್ಟರು ಗಲಗಲ ಅಲುಗಿಸಿ ಉದುರಿಸಿದ ಹೂವನ್ನು ದೇವರ ಪೂಜೆಗೆ ಆಯ್ದುಕೊಳ್ಳುತ್ತಿದ್ದ ಪಾರಿಜಾತದ ಗಿಡ, ನಾನು ವಾಸವಾಗಿದ್ದ ರೂಮಿನ ಏಣಿಯಮೇಲೆ ಬೆಳೆದು, ಹತ್ತಿಳಿಯುವಾಗ ಪರಿಮಳ ಬೀರುತ್ತಿದ್ದ ಮಲ್ಲಿಗೆ ಬಳ್ಳಿ, ಸಂದಿಯಲ್ಲಿ ಬೆಳೆದಿದ್ದ ಸೀತಾಫಲದ ಗಿಡ ಯಾವುದೂ ಈಗ ಕಾಣಿಸುವುದಿಲ್ಲ. ಮೆಸ್ ಹಾಲಿನ ಮುಂದಿದ್ದ ಮಾವಿನ ಮರ ಹೋಮ ಮಾಡುವ ಕೋಣೆಗೆ ಜಾಗಮಾಡಿಕೊಟ್ಟಿದೆ.  ನಾವಿದ್ದಾಗ ಕೇವಲ ಐದಾರು ಟಾಯ್ಲೆಟ್ಟುಗಳಿದ್ದವು, ಈಗ ಇನ್ನೊಂದು ಮೂರ್ನಾಲ್ಕು ಜಾಸ್ತಿಯಾಗಿವೆ, ಆಗಬೇಕು, ಅತ್ಯಗತ್ಯ. ಮೆಸ್ ಹಾಲ್, ಟಿವಿ ರೂಮಿನ ಕತ್ತಲು ಇನ್ನಷ್ಟು ಹೆಚ್ಚಾಗಿದೆ. ಲೋಕಪ್ಪನ ಹಕ್ಕಲ ಮಕ್ಕಳಿಗೆಂದು ಶಾಲೆ ನಡೆಸುತ್ತಿದ್ದ ಕೋಣೆ ಕಾಣಿಸಿಲಿಲ್ಲ. ಗೇಟಿನ ಪಕ್ಕದಲ್ಲೇ ಅಂಗಡಿ ಮುಂಗಟ್ಟು ತಲೆಎತ್ತಿದೆ. 

         ಗಮನಕ್ಕೆ ಬಂದ ಇನ್ನೊಂದು ಮುಖ್ಯ ಅಂಶವನ್ನು ಇಲ್ಲಿ ಉಲ್ಲೇಖಿಸುವುದು ಒಳ್ಳೆಯದು. ಭಾನುವಾರ ಬೆಳಗಿನ ಎಂಟೂವರೆ ಒಂಭತ್ತರ ಹೊತ್ತು ಎಬಿಎಮ್‍ಎಮ್ ಹಾಸ್ಟೆಲಿನ ವಾತಾವರಣ ಹೇಗಿರುತ್ತಿತ್ತು ಅಂದರೆ- ಎರಡು ಕನ್ನಡ ಒಂದು ಇಂಗ್ಲೀಷ್ ಪೇಪರನ್ನು ಹದಿನೈದು ಮಂದಿ ಹಂಚಿಕೊಂಡು ಓದುತ್ತಿದ್ದೆವು ರೂಮ್ ನಂಬರ್ ಒಂದರ ಮುಂದೆ. ತಮ್ಮವರ ಕುಶಲವನ್ನು ಕೇಳಿ ಮನೆಗಳಿಂದ ಅಮ್ಮನೋ, ಅಪ್ಪನೋ ಅಕ್ಕನೋ ಮಾಡಿದ ಕಾಲ್‍ನಿಂದ ಮತ್ತೆ ಮತ್ತೆ ರಿಂಗಾಗುವ ಹಳೇ ಫೋನನ್ನು ಎತ್ತಿ ಮಲಗಿದ್ದವರನ್ನು ಕೂಗಿ ಕರೆದು ಎಬ್ಬಿಸುವ ಕೂಗಾಟ ಸದಾ ನಡೆಯುತ್ತಿತ್ತು. ಒಂದು ಕಡೆ ಭಾನುವಾರ ಬೆಳಗಿನ ಉಪಹಾರ ಅವಲಕ್ಕಿಗಾಗಿ ಮೆಸ್ ಹಾಲಿನ ಕಡೆಗೆ ತಾಟು ಲೋಟ ಹಿಡಿದು ಹೋಗುವವರ ಸಾಲು, ಇನ್ನೊಂದೆಡೆ ಬಾತ್‍ರೂಮ್ ಟಾಯ್ಲೆಟ್ ಕಡೆಗೆ ಬಕೆಟ್ ಟೂತ್‍ಬ್ರಶ್ ಹಿಡದು ಹೋಗಿ ಬರುವವರ ಸಾಲು, ಮಗದೊಂದು ಕಡೆ ಸಂಧ್ಯಾವಂದನೆಗೆ ಲೋಟ ಚಮಚ ಹಿಡಿದು ಹೋಗುವವರು, ಕ್ರಿಕೆಟ್ ಬ್ಯಾಟು ಬಾಲು ಹಿಡಿದು ವಾರ್ಡನ್ ಎದುರೇ ನಟ್ಟನಡುವಿನ ವರಾಂಡದಲ್ಲಿ ಆಡುವವರು, ನಡು ನಡುವೆ ಕುಶಲೋಪರಿ, ಹಾಸ್ಯ ಮಾತುಕತೆ ಒಟ್ಟಿನಲ್ಲಿ ಎಬಿಎಮ್‍ಎಮ್‍ನ ಭಾನುವಾರದ ಮುಂಜಾನೆ ಅತ್ಯಂತ ಜೀವಂತಿಕೆ ವೈಬ್ರನ್ಸಿಯಿಂದ ತುಳುಕುತ್ತಿತ್ತು. ಅಂದು ನಾನು ಎಬಿಎಮ್‍ಎಮ್ ಹಾಸ್ಟೆಲಿಗೆ ಹೋದಾಗ ಭಾನುವಾರ ಬೆಳಿಗ್ಗೆ ಸುಮಾರು ಎಂಟೂವರೆಯ ಹೊತ್ತು. ಮಾತನಾಡಿಸುವಾ ಎಂದರೆ ವರಾಂಡದಲ್ಲಿ ಒಂದು ನರಪಿಳ್ಳೆಯೂ ಕಾಣಿಸಲಿಲ್ಲ. ಟಿವಿ ಹಾಲಿನ ಕತ್ತಲೆಯಲ್ಲಿ ಮೂರ್ನಾಲ್ಕು ಮಂದಿ ಅವಲಕ್ಕಿ ಮೆಲ್ಲುತ್ತ ಅದೇ ಹಳೆ ಟಿವಿಯಲ್ಲಿ ಯಾವುದೋ ಕ್ರಿಕೆಟ್ ಮ್ಯಾಚು ನೋಡುತ್ತಿದ್ದರು. ರೂಮ್ ನಂಬರ್ ಒಂದರ ಎದುರು ಪೇಪರು ಕಾಣಲಿಲ್ಲ, ನಾವೆಲ್ಲ ಮನೆಯಿಂದ ಬರುವ ಫೋನಕರೆಗಾಗಿ ಕಾಯುತ್ತಿದ್ದ ಹಳೇ ಟೆಲಿಫೋನು ಕಾಣಿಸಲಿಲ್ಲ. 

           
            ಎಲ್ಲವೂ ಹೀಗೆ ಎಂದಲ್ಲ. ಕಾಲದ ಧಾವಂತದಲ್ಲಿ ತಮ್ಮತನವನ್ನು ಉಳಿಸಿಕೊಂಡವರೂ ಇಲ್ಲದಿಲ್ಲ. ಸುಮ್ಮನೆ ಹಾಸ್ಟಲಿನ ಅಡುಗೆ ಮನೆಯ ಕಡೆಗೆ ಇಣುಕಿ ನೋಡಿದಾಗೆ ಚಪಾತಿ ರೊಟ್ಟಿ ಮಾಡುವ ಬಾಯರು ಕಂಡು ಅವರೇ ಗುರುತಿಸಿ ‘ಆರಾಮಿದ್ದೀ ಇಲ್ಲೋ?’ ಎಂದು ವಿಚಾರಿಸಿ ಮಾತನಾಡಿಸಿದರು. ಸ್ವಲ್ಪ ವಯಸ್ಸಾಗಿದೆ, ಇನ್ನೊಂದೆರಡು ಹಲ್ಲುಗಳು ಉದುರಿವೆ, ಮುಖದ ಮೇಲಿನ ಸುಕ್ಕು ತಲೆಮೇಲಿನ ಬಿಳಿಕೂದಲುಗಳು ಜಾಸ್ತಿಯಾಗಿವೆ. ಆದರೆ ಬಾಯರ ವಾತ್ಸಲ್ಯ ಒಂಚೂರು ಕಡಿಮೆಯಾಗಿಲ್ಲ. ವಾರ್ಡನ್ನರನ್ನು ಹುಡುಕಿದೆ ಕಾಣಿಸಿಲಿಲ್ಲ. ನಮ್ಮ ವಾರ್ಡನ ರಘುಪತಿ ತಂತ್ರಿಗಳೆಂದೂ ಬದಲಾಗುವವರಲ್ಲ ಬಿಡಿ. ಹಾಗೆಯೇ ಉಡುಪಿ ದರ್ಶಿನಿಯಲ್ಲಿ ಚಹಾ ಕುಡಿಯೋಣ ಎಂದು ಬಂದೆ. ಶೆಟ್ಟರಿರಲಿಲ್ಲ, ಬೆಂಗಳೂರಿಗೆ ಹೊಗಿ ಐದು ವರ್ಷ ಆಯಿತು ಎಂದು ಪಕ್ಕದ ಶಿವಶಕ್ತಿ ಕಿರಾಣಿ ಅಂಗಡಿಯ ಅಂಕಲ್ ಹೇಳಿದರು. ಅಂಕಲ್ ನಗು ಮಾತ್ರ ಮಾಸಿಲ್ಲ, ಮೊದಲಿನಂತೇ ಮಾತು ಅದೇ ಆತ್ಮೀಯತೆ ಅವರ ಅಂಗಡಿಯಲ್ಲೂ ಅವೇ ಸಾಮಾನುಗಳು. ಎದುರಿನ ವಿಘ್ನೇಶ್ವರ ಪ್ರೌಢಶಾಲೆಯ ಕೊಠಡಿಗಳ ಸಂಖ್ಯೆ ಹೆಚ್ಚಾಗಿಲ್ಲ, ಅಷ್ಟೇ ಇದೆ. ಪ್ರೌಢಶಾಲೆಯ ಮೈದಾನದಲ್ಲಿ ಭಾನುವಾರದ ಸಂತೆ ಈಗಲೂ ನಡೆಯತ್ತಿದೆ. ಪಕ್ಕದ ಚರಂಡಿಯಲ್ಲಿ ಹೊರಳಾಡಿ ಎದ್ದ ನಾಡಹಂದಿಗಳು ಈಗಲೂ ಅದೇ ರೀತಿ ಗುಟುರು ಹಾಕುತ್ತ ಓಡುತ್ತಿವೆ ಜಾಲಿಗಿಡಗಳ ಪೊದೆಗಳ ನಡುವೆ.

Tuesday, November 11, 2014

ಬಂಗಾಲದ ಭೂಮಿಯಲ್ಲಿ ಇಳಿಯುತ್ತಿವೆ ಭಯೋತ್ಪಾದನೆಯ ಬೇರುಗಳು

(ಪುಂಗವ 15/11/2014)

      ಬರ್ದ್ವಾನ್ ಪಶ್ಚಿಮ ಬಂಗಾಳ ರಾಜ್ಯದ ಅದೇ ಹೆಸರಿನ ಜಿಲ್ಲೆಯ ಜಿಲ್ಲಾಕೇಂದ್ರ. 24ನೇ ಜೈನ ತೀರ್ಥಂಕರ ವರ್ಧಮಾನ ಮಹಾವೀರ ಇಲ್ಲಿ ಕೆಲ ಕಾಲ ತಂಗಿದ್ದ ನೆನಪಿಗಾಗಿ ಬರ್ಧಮಾನ ಎಂಬ ಹೆಸರು ಹೊತ್ತು ಬ್ರಿಟಿಷರ ಕಾಲದಲ್ಲಿಬರ್ದ್ವಾನ್’ ಆಗಿ ಬದಲಾದ ನಗರಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಇದೇ ಬರ್ದ್ವಾನ್ನ ಖಾಗ್ರಾಘರ್ ಪ್ರದೇಶದಲ್ಲಿ ಕಳೆದ ಅಕ್ಟೋಬರ್ 2ರಂದು ನಡೆದ ಬಾಂಬ್ ಸ್ಫೋಟ ಬಂಗಾಲದ ನೆಲದಲ್ಲಿ ಕಳೆದ ಹಲವಾರು ವರ್ಷಗಳಿಂದ ಬೇರುಬಿಡುತ್ತಿರುವ ಇಸ್ಲಾಮೀ ಭಯೋತ್ಪಾದನೆಯ ಎಳೆಗಳನ್ನು ಹೊರಹಾಕಿದೆ.

ಹಿನ್ನೆಲೆ
      ಬರ್ದ್ವಾನ್ನ ಖಾಗ್ರಾಘರ್ ಪ್ರದೇಶದಲ್ಲಿ ನುರುಲ್ ಹಸನ್ ಚೌಧರಿ ಎಂಬ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕನಿಗೆ ಸೇರಿದ ಎರಡಂತಸ್ತಿನ ಕಟ್ಟಡದಲ್ಲಿ ಕಳೆದ ಅಕ್ಟೋಬರ್ 2ರಂದು ಸಂಭವಿಸಿದ ಸ್ಫೋಟದಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಮೃತಪಟ್ಟು ಇನ್ನೊಬ್ಬನಿಗೆ ಗಂಭೀರ ಗಾಯಗಳಾದವು. ನಂತರ ನಡೆದ ಪೋಲೀಸ್ ತನಿಖೆಯಲ್ಲಿ 50ಕ್ಕೂ ಹೆಚ್ಚು ಬಾಂಬ್‍ಗಳು(IED), ದೊಡ್ಡ ಪ್ರಮಾಣದ ಆರ್‍ಡಿಎಕ್ಸ್, ಕೈಗಡಿಯಾರದ ಡಯಲ್‍ಗಳು, ಸಿಮ್ ಕಾರ್ಡ, ನಕಾಶೆಗಳು, ಮೆಮರಿ ಕಾರ್ಡಗಳು, ನಕಲಿ ಪಾಸ್‍ಪೋರ್ಟ, ಮತದಾರರ ಗುರತಿನ ಪತ್ರ, ಅಲ್‍ಕೈದಾ ಮೊದಲಾದ ಇಸ್ಲಾಮೀ ಸಂಘಟನೆಗಳ ವೀಡಿಯೋ, ಕರಪತ್ರ ಮುಂತಾದವುಗಳನ್ನು ವಶಪಡಿಸಿಕೊಳ್ಳಲಾಯಿತು. ಪೋಲೀಸರಿಗೆ ಬಂದೂಕು ತೋರಿಸಿ ತನಿಖೆಗೆ ಅಡ್ಡಿಪಡಿಸಿ ದಾಖಲೆಗಳನ್ನು ನಾಶಪಡಿಸುವ ಯತ್ನ ಮಾಡಿದ ಉಗ್ರರ ಪತ್ನಿಯರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

      ಇದೇ ಕಟ್ಟಡದ ನೆಲೆಮಹಡಿ ಚುನಾವಣೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಾಲಯವಾಗಿತ್ತು. ಇಂಡಿಯನ್ ಮುಜಾಹಿದ್ದೀನ್‍ನ ಉಗ್ರ ಶಕೀಲ್ ಅಹ್ಮದ್ ಇದನ್ನು ಬಾಡಿಗೆಗೆ ಪಡೆದಿದ್ದು ಇಲ್ಲೊಂದು ಬಾಂಬ್ ತಯಾರಿಕಾ ಕಾರ್ಖಾನೆ ಕಾರ್ಯನಿರ್ವಹಿಸುತ್ತಿತ್ತು.


ಬಾಂಗ್ಲಾದೇಶದ ಜಮಾತ-ಉಲ್-ಮುಜಾಹಿದ್ದೀನ್ ನಂಟು
      ಬರ್ದ್ವಾನ್ ಸ್ಪೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾದಳ (NIA) ನಡೆಸುತ್ತಿರುವ ತನಿಖೆಯಿಂದ ಹೊರಬರುತ್ತಿರುವ ತಥ್ಯಗಳು ಪಶ್ಚಿಮ ಬಂಗಾಳದಲ್ಲಿ ಇಸ್ಲಾಮೀ ಮೂಲಭೂತವಾದ ಆತಂಕಕಾರಿ ಬೆಳವಣಿಗೆ ಮತ್ತು ರಾಜಕೀಯ ಲಾಭಕ್ಕಾಗಿ ದೇಶದ ಸುರಕ್ಷತೆಯನ್ನೆ ಬಲಿಕೊಡುವ ರಾಜ್ಯದ ಅಪ್ರಬುದ್ಧ ನಾಯಕತ್ವದ ಧೋರಣೆಯನ್ನು ಬಿಚ್ಚಿಡುತ್ತಿದೆ. ಬಾಂಗ್ಲಾದೇಶದ ಜಮಾತ್--ಇಸ್ಲಾಮಿ ಸಂಘಟನೆಯ ಭಯೋತ್ಪಾದಕ ಅಂಗವಾಗ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶದ (JMB) ಉಗ್ರ ಚಟುವಟಿಕೆಗಳಿಗೆ ಪಶ್ಚಿಮ ಬಂಗಾಲದ ಬದ್ರ್ವಾನ್, ಬಿರ್ಭುಮ್ ಮತ್ತು ಮುರ್ಶಿದಾಬಾದ್ ಜಿಲ್ಲೆಗಳಿಂದ ಸ್ಫೋಟಕಗಳ ಪೋರೈಕೆಯಾಗುತ್ತಿತ್ತು ಎಂದು ಕಂಡುಬಂದಿದೆ. ಅಂದರೆ ಬಾಂಗ್ಲಾದೇಶದ ಪ್ರಸಕ್ತ  ಶೇಖ್ ಹಸೀನಾ ನೇತೃತ್ವದ ಆವಾಮಿ ಲೀಗ್ ಸರ್ಕಾರದ ಕಠಿಣ ನಿರ್ಧಾರಗಳಿಂದ ಉಗ್ರ ಚಟುವಟಿಕೆಗಳಿಗೆ ಹಿನ್ನೆಡೆಯಾದಾಗ ಪಶ್ಚಿಮ ಬಂಗಾಳವನ್ನು ತಮ್ಮ ಕಾರಸ್ಥಾನವನ್ನಾಗಿ ಮಾಡಿಕೊಂಡು ಬಾಂಗ್ಲಾದೇಶದ ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ ನಡೆದದ್ದು ಸ್ಫಷ್ಟವಾಗುತ್ತದೆ. 2013ರಲ್ಲಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ  9000ಕ್ಕೂ ಹೆಚ್ಚು ಬಾಂಬ್‍ಗಳನ್ನು ಮತ್ತು 2285ಕೆಜಿಯಷ್ಟು ಆರ್‍ಡಿಎಕ್ಸ್‍ನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳಲ್ಲಿ 80ಪ್ರತಿಶತ ಬರ್ದ್ವಾನ್, ಬಿರ್ಭುಮ್ ಮತ್ತು ಮುರ್ಶಿದಾಬಾದ್ ಜಿಲ್ಲೆಗಳಲ್ಲಿ ದೊರಕಿವೆ. ತನಿಖೆಗೆ ಸಂಬಂಧಿಸಿದಂತೆ ಬದ್ರ್ವಾನಿನ ಸಿಮುಲಿಯಾದ ಹೆಣ್ಣುಮಕ್ಕಳ ಮದರಸಾವನ್ನು ಹುಡುಕಾಡಿದಾಗ ಅಲ್ಲಿ ಬಾಂಬ್‍ಗಳನ್ನು ಜೋಡಿಸಲಾಗುತ್ತಿತ್ತೆಂಬುದು ಕಂಡುಬಂದಿದೆ.

ಶಾರದಾ ಚಿಟ್‍ಫಂಡ, ಜಮಾತ ಮತ್ತು ಮಮತಾ ಬ್ಯಾನರ್ಜಿ
      ಬಡ ಮತ್ತು ಮಧ್ಯಮ ವರ್ಗದ ಆದಾಯವುಳ್ಳ ಸುಮಾರು 17ಲಕ್ಷ ಹೂಡಿಕೆದಾರರಿಗೆ ಪಂಗನಾಮ ಹಾಕಿದ ಸುಮಾರು 5000ಕೋಟಿ ರೂಪಾಯಿಗಳ ಶಾರದಾ ಚಿಟ್ ಫಂಡ್ ಹಗರಣ ರಾಷ್ಟ್ರವ್ಯಾಪಿ ಚರ್ಚೆಯಾಗಿದೆ. ಆದರೆ ಶಾರದಾ ಹಗರಣದಿಂದ ಗಳಿಸಿದ ಹಣ ಜಮಾತ-ಉಲ್-ಮುಜಾಹಿದ್ದೀನ ಉಗ್ರಚಟುವಟಿಕೆಗಳಿಗೆ ರವಾನೆಯಾಗಿದೆ ಎಂಬ ವಿಷಯವನ್ನು ಬಂಗಾಲದ ಪ್ರಸಿದ್ಧ ಆನಂದಬಾಜಾರ್ ಪತ್ರಿಕೆ ವರದಿ ಮಾಡಿದೆ. ತೃಣಮೂಲ ಕಾಂಗ್ರೆಸ್ ಮುಖಂಡ ಸುದಿಪ್ತೋ ಸೇನ್‍ಗೆ ಸೇರಿದ ಶಾರದಾ ಗ್ರುಪ್‍ನ ಚಿಟ್‍ಫಂಡ್ ಹಣವನ್ನು ಬಾಂಗ್ಲಾದೇಶಕ್ಕೆ ಸಾಗಿಸುವ ಕೆಲಸವನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಅಹ್ಮದ್ ಹಸನ್ ಇಮ್ರಾನ ನಿರ್ವಹಿಸರುವುದನ್ನು ಪತ್ರಿಕೆ ವರದಿ ಮಾಡಿದೆ. ವಿದ್ಯಾರ್ಥಿ ದೆಸೆಯಲ್ಲಿ ನಿಷೇಧಿತ ಸಂಘಟನೆ ಸಿಮಿಯ ಕಾರ್ಯಕರ್ತ ಮತ್ತು ಅಧ್ಯಕ್ಷನೂ ಆಗಿದ್ದ ಅಹ್ಮದ್ ಹಸನ್ ಬಾಂಗ್ಲಾದೇಶದ ಜಮಾತ ಜೊತೆ ನಿಕಟ ಸಂಬಂಧವನ್ನು ಹೊಂದಿದ್ದಾನೆ. ಹಸನ್ ಸಂಪಾದಕನಾಗಿರುವ ಬಂಗಾಲಿ ದಿನಪತ್ರಿಕೆದೈನಿಕ್ ಕಲಮ್ಜಿಹಾದಿ ಸಂದೇಶವನ್ನು ಹರಡವಲ್ಲಿ ನಿರತವಾಗಿದೆಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಆಪ್ತನಾಗಿರುವ ಅಹ್ಮದ್ ಹಸನ್ ಪಕ್ಷದ ಟಿಕೆಟ್ ಮೇಲೆ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾಗಿದ್ದಾನೆ. ಜೊತೆಗೆ ಬಾಂಗ್ಲಾದೇಶದ ಜಮಾತ್ ಸಂಘಟನೆ 2011 ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್‍ನ ವೆಚ್ಚಕ್ಕಾಗಿ ಧನಸಹಾಯ ಮಾಡಿತ್ತು ಎಂಬ ಗಂಭೀರ ಮಾಹಿತಿಯು ವರದಿಯಾಗಿದೆ. ಬದ್ರ್ವಾನ ಸ್ಫೋಟದ ತನಿಖೆಯಲ್ಲಿ ರಾಜ್ಯ ಸರ್ಕಾರವು ತನಿಖೆಗೆ ಅಸಹಕಾರ ನೀಡುತ್ತಿರುವುದರ ಜೊತೆಗೆ ರಾಷ್ಟ್ರೀಯ ತನಿಖಾದಳದ ತನಿಖೆಯನ್ನು ವಿರೋಧಿಸಿದೆ. ರಾಜ್ಯದ ಭಯೋತ್ಪಾದಕ ಸೆಲ್‍ಗಳು, ಗಡಿಯಲ್ಲಿ ಹೆಚ್ಚುತ್ತಿರುವ ಬಾಂಗ್ಲಾದೇಶೀಯರ ಒಳನುಸುಳುವಿಕೆ, ದಿನೇ ದಿನೇ ಹೊರಬರುತ್ತಿರವ ಸ್ಫೊಟಕ ಮಾಹಿತಿಗಳ ವಿಷಯದಲ್ಲಿ ಮೌನ ವಹಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರು, ಭಾರತೀಯ ಜನತಾ ಪಾರ್ಟಿ ಮತ್ತು ಕಮ್ಯುನಿಸ್ಟ್ ಪಕ್ಷಗಳು ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಎಂದು ದೂರಿದ್ದಾರೆ. ಇವುಗಳನ್ನು ಗಮನಿಸಿದರೆ ಪಶ್ಚಿಮ ಬಂಗಾಳ ಸರ್ಕಾರ ಉಗ್ರರನ್ನು ರಕ್ಷಿಸುತ್ತಿದೆಯೇ? ಬಾಂಗ್ಲಾದೇಶ ವಿರೋಧಿ ಉಗ್ರ ಸಂಘಟನೆಗಳನ್ನು ಪೋಷಿಸುತ್ತಿದೆಯೇ? ಎಂಬ ಸಂದೇಹ ಬರುವುದರ ಜೊತೆಗೆ, ತೃಣಮೂಲ ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ದೇಶದ ಸುರಕ್ಷೆಯನ್ನೇ ಬಲಿಕೊಡಲು ಮುಂದಾಯಿತೇ? ಎಂಬ ಸಂಶಯ ಸಹಜವಾಗಿ ಮೂಡುತ್ತದೆ.

ಬೃಹತ್ ಬಾಂಗ್ಲಾದೇಶದ ಸ್ಥಾಪನೆಯೇ ಗುರಿ
      ಬರ್ದ್ವಾನ್ ಸ್ಫೋಟಕ್ಕೆ ಸಂಬಂಧಿಸಿದಂತೆ ಭಾರತ ಬಾಂಗ್ಲಾದೇಶ ಸರ್ಕಾರಕ್ಕೆ ನೀಡಿದ ಕಡತದಲ್ಲಿ ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶದಲ್ಲಿ ವಿಲೀನಗೊಳಿಸಿ ಬೃಹತ್ ಬಾಂಗ್ಲಾದೇಶವನ್ನು ಸ್ಥಾಪಿಸುವುದು ಉಗ್ರ ಸಂಘಟನೆಗಳ ಗುರಿ ಎಂದು ಹೇಳಿದೆ. ಇದರ ಮೊದಲ ಹೆಜ್ಜೆಯೇ ಪಶ್ಚಿಮ ಬಂಗಾಳ, ಆಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ಉಗ್ರಗಾಮಿ ಸೆಲ್‍ಗಳನ್ನು ಆರಂಭಿಸಿ ಅನೇಕ ಮಿನಿ ಬಾಂಗ್ಲಾದೇಶಗಳನ್ನು ಸ್ಥಾಪಿಸುವುದು. ಬಾಂಗ್ಲದೇಶದ ಬಂದರ್‍ಬನ್ ಮತ್ತು ಚಿತಗೊಂಗ್‍ಗಳಲ್ಲಿರುವ ಜಮಾತ್-ಉಲ್-ಮುಜಾಹಿದ್ದೀನಿನ ಕ್ಯಾಂಪ್‍ಗಳನ್ನು ಭಾರತದಲ್ಲಿ ಭಯೋತ್ಪಾದಕತೆಯನ್ನು ಬೆಳೆಸಲು ಲಾಂಚ್ ಪ್ಯಾಡ್‍ಗಳನ್ನಾಗಿ ಬಳಸಲಾಗುತ್ತಿದೆ. ಬಾಂಗ್ಲಾದೇಶದ ಅನ್ಸಾರುಲ್ಲಾ ಬಾಂಗ್ಲಾ, ಜಮಾಯತುಲ್ ಮುಸ್ಲಿಮೀನ್, ಹೆಪಾಜತ್ ಇಸ್ಲಾಮ್, ತಂಜಿಮ್ ತಮಿರುದ್ದೀನ ಮುಂತಾದ ಸಂಘಟನೆಗಳು ಜಮಾತ್‍ನ ಕೆಲಸದಲ್ಲಿ ಸಹಕಾ ನೀಡುತ್ತಿವೆ ಎಂದು ಭಾರತ ಬಾಂಗ್ಲಾ ಸರ್ಕಾರಕ್ಕೆ ತಿಳಿಸಿದೆ. ಅಲ್ಲದೇ ಜಮಾತ್ ಬೃಹತ್ ಬಾಂಗ್ಲಾದೇಶದ ಸಾಕಾರಕ್ಕಾಗಿ ಅಲ್‍ಕೈದಾ ಮೊದಲಾದ ಸಂಘಟನೆಗಳೊಡನೆ ಕೈಜೋಡಿಸುತ್ತಿದೆ.

       ಭಾರತದ ಪರವಾಗಿರುವ ಶೇಖ ಹಸೀನಾ ನೇತೃತ್ವದ ಬಾಂಗ್ಲಾದೇಶದ ಪ್ರಸಕ್ತ ಸರ್ಕಾರ ಭಯೋತ್ಪಾದಕ ಸಂಘಟನೆಗಳನ್ನು ಮಟ್ಟ ಹಾಕಲು ಎಲ್ಲ ಸಹಕಾರಗಳನ್ನು ನೀಡಲು ಸಿದ್ಧವಾಗಿರುವಾಗಲೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸ್ವಾರ್ಥ, ಮತಬ್ಯಾಂಕ್ ರಾಜಕೀಯ ಮತ್ತು ಮೊಂಡುತನದಿಂದಾಗಿ ಪಶ್ಚಿಮ ಬಂಗಾಳ ಇಸ್ಲಾಮೀ ಉಗ್ರರ ಕಾರಸ್ಥಾನವಾಗಿ ಬದಲಾಗುತ್ತಿದೆ. ಎರಡೂ ದೇಶಗಳ ರಾಷ್ಟ್ರೀಯ ಸುರಕ್ಷೆಗೆ ಕಂಟಕವಾಗಿರುವ ಜಮಾತ್‍ನಂತಹ ಭಯೋತ್ಪಾದಕ ಸಂಘಟನೆಗಳನ್ನು ಮಟ್ಟಹಾಕಲು ಸರ್ಕಾರಗಳ ನಡುವೆ ಸಹಕಾರ ಅನಿವಾರ್ಯವಾಗಿದೆ. ಹಾಗೆಯೇ ರಾಜಕೀಯ ಲಾಭದ ಲೆಕ್ಕಾಚಾರದಿಂದ ಹೊರಬಂದು ದೇಶದ ಸುರಕ್ಷೆಯ ಮಹತ್ವವನ್ನು ಅರಿಯುವುದನ್ನು ಮಮತಾರಂತಹ ರಾಜಕೀಯ ನಾಯಕರು ರೂಢಿಸಿಕೊಳ್ಳಬೇಕಾಗಿದೆ.

ಹಿಂದೂ ಹೃದಯ ಸಾಮ್ರಾಟನಾದ ಮರಾಠಿ ಮಾಣೂಸ್‌

 (ವಿಕ್ರಮ - 25 ಜನವರಿ 2026) ಸುದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿ ನಿರಂತರ ಸಕ್ರಿಯರಾಗಿದ್ದು, ಜೊತೆಗೆ ಪ್ರಸ್ತುತರೂ ಆಗಿದ್ದು ತಮ್ಮ ಬದುಕಿನ ನಂತರವೂ ಪ್ರಭಾವಿಯಾಗಿರು...