Friday, January 1, 2010

ಆಗಾಗ ಉದುರಿದ ಹನಿ(ಗವನ)ಗಳು

೧.  

ಗಲಿಬಿಲಿಯ ಜಗದೊಳಗೆ ನಿಶ್ಚಲವಗೈದಿಹನು
ತನ್ನೊಳಗೆ ತನ್ನಿರವಿನರಿವ ಶೋಧಿಸುತಿಹನು
ನಗುವೋ? ಕರುಣೆಯೋ? ವಿಸ್ಮಯವೋ? ನೋಡುಗಗೆ
ಮೂಕನಲ್ಲನವ ಶಾಂತ ಮೌನಿಯಾಗಿಹನು


 

ಎತ್ತಲಿಂದಲೋ ಬಂದು
ಅತ್ತಿತ್ತ ನಲಿದಾಡಿ
ಕತ್ತ ಕೊಂಕಿಸಿ ಮತ್ತೆ
ಚಿತ್ತಕಲಕುತಲಿರಲು ಹಕ್ಕಿ ಜೋಡಿ
ನಿಮ್ಮಾಟದೊಳಗೆನ್ನ
ಕರೆದು ಕೊಂಬೆರೇ? ಎನುತ
ಕೇಳ ಹೋದೆನು ಬಳಿಗೆ
ಹಾರಿದವು ಪುರ್ರೆಂದು ನನ್ನ ನೋಡಿ


 

ಗಾಳಿಯೊಳು ಬೆರೆತಿರುವ ಮಲ್ಲಿಗೆಯ ಕಂಪಾಗಿ
ಪಾನಕದಿ ಕರಗಿರುವ ಸಕ್ಕರೆಯ ಸವಿಯಾಗಿ
ಬದುಕಬಯಸುವೆ ಬೆಳಕ ಕಿಡಿಯಾಗಿ ಸಂತಸದಿ
ಎಲ್ಲದರೊಳೊಂದಾಗಿ ಕಣ್ಣಿದಿರು ಮರೆಯಾಗಿ


 

ಏರುತಗ್ಗಿನ ಬೀದಿ ಬದಿಯಲಿ
ಕುರುಡನಡೆದಿಹನೊಂದೇ ಲಯದಲಿ
ಅವನ ಕಾಣುತ ಜಾರಿ ಬಿದ್ದೆನು
ಅಂಧ ನಾನೊಳಗಣ್ಣಲಿ




ಚಂದಿರನ ಎದೆಯಲ್ಲಿ ಮಾನವನ ಹೆಜ್ಜೆಗಳು
ಗಗನದೆಡೆ ಜಿಗಿಯುತಿವೆ ವ್ಯೋಮನೌಕೆಗಳು
ಮನುಜನಹಮ್ಮಿಕೆಯ ಮೆರವಣಿಗೆಯಬ್ಬರದಿ
ಕದಡದೇ ತಿಳಿಹಾಲು ಬೆಳದಿಂಗಳು ?


 

ರವಿಯ ರಥದ ಹಯಗಳ
ಅರಳುತಿರುವ ಸುಮಗಳ
ಸೊಬಗ ಮರೆತು ನೆನೆಯುತಿದ್ದೆ
ಕಳೆದು ಹೋದ ಕ್ಷಣಗಳ


 

ನಿಮಿಷ ನಿಲ್ಲದ ಕುಣಿತದಾಟ
ಕರ್ಣ ಕರ್ಕಶ ಕಿರುಚುವಾಟ
ಏನ ಹೇಳಲಿ ಮನುಜನೋರ್ವನು
ಬಾಲವಿಲ್ಲದ ಮರ್ಕಟ




ಅದೇಕೆ ಹೀಗೆ ಕಾಡುತಿರುವೆ ?
ಮನವನೇಕೆ ಕುಣಿಸುತಿರುವೆ ?
ಹೄದಯದಾಳ ತಳದಿ ಕುಳಿತು
ಕರುಣೆಮರೆತು ಕೊಲ್ಲುತಿರುವೆ ?


 

ಶುಭರಾತ್ರಿ ಶುಭೋದಯ
ನಿತ್ಯ ಸಂದೇಶ ವಿನಿಮಯ
ಏನು ಎಂದು ತಿಳಿಯೆ ನಾನು
ನಿನ್ನ ಮನದ ಬಯಕೆಯ


೧೦

ಮನದೊಳೇನೋ ಯಾತನೆ
ಮೈಯೊಳೆನಿತು ವೇದನೆ
ಪ್ರಿಯೆಯ ವಿರಹ ಬೇಗೆಯಲ್ಲ
ಜ್ವರವು ಬರುವ ಸೂಚನೆ !


೧೧ 

ಮನದ ತಳದ ತೊಳಲಿಕೆ
ಕವಿತೆಯಾಗಿ ಹರಿವಿಕೆ
ಬರೆವೆ ಕವನವೆನಗೆ ಸ್ಫೂರ್ತಿ
ಕಾವ್ಯದ್ವೇಷಿ ಕನ್ನಿಕೆ !


೧೨ 

ಹಗಲುಗನಸ ಹೊಸೆಯದಿರು
ಗಗನಕೇಣಿಯ ಚಾಚದಿರು
ಕಳೆವಕ್ಷಣವನಿನಿತು ನೆನೆದು
ಪ್ರಗತಿ ಪಥದಿ ನಡೆಯುತಿರು


೧೩ 

ಗಾಳಿಯಿರದ ಗಗನದಲ್ಲಿ ಹಕ್ಕಿಯಾಗಿ ಹಾರುವ
ನೀರೇ ಇರದ ಶರಧಿಯಲ್ಲಿ ಮೀನಿನಂತೆ ಈಜುವ
ಕೊನೆಯದೆಲ್ಲಿ ಕನಸುಗಳಿಗೆ ಹಗಲುಗನಸ ಲೋಕದಿ ?
ಜಗದ ಪರಿವೆ ಮರೆವ ಸುಳಿಗೆ ಸಿಲುಕಿ ಮನುಜ ನಲುಗುವ


೧೪ 

ಇದಿರುಬಂದ ನನ್ನ ಕಂಡು ನಡುಗಲವಳ ಕಾಲ್ಗಳು
ಎತ್ತನೋಡಲೆಂದು ತಡಕುಗೊಂಡವಾಗ ಕಣ್ಗಳು
ಸಹಜವೇನೋ ಹರಿವ ಹುಚ್ಚುಕೋಡಿ ಮನದ ವಯಸಿಲಿ
ಹೆಗಲ ಶಾಲ ಮೆಲ್ಲ ಮೇಲಕೆಳೆದುಕೊಳುವ ಕೈಗಳು


೧೫ 

ಎದೆಯಲಿ ಗಾಯ ಕ್ಷೀಣಕಾಯ
ಚಿತ್ತಶಾಂತಿಯೆಲ್ಲ ಮಾಯ
ನಲ್ಲೆ ತೊರೆದು ಹೋದ ಬಾಳು
ಲಯತಪ್ಪಿದ ನವ್ಯಕಾವ್ಯ


೧೬ 

ಎಲ್ಲಿಹೆಯೆಂಬುದನರಿಯೆನು ಗೆಳತಿ
ಕನಸಿನ ಸೌಧಕೆ ನಿನ್ನದೇ ಸ್ಫೂರ್ತಿ
ನಿನ್ನಯಕಲ್ಪನೆಯೆನ್ನಯಮನದಲಿ
ಇನ್ನೂ ಮುಗಿಯದ ಕಲಾಕೄತಿ



೧೭ 

ಅವಳ ಸೊಂಟವದೆಷ್ಟು ಅಗಲ !
ನಡೆದರಲುಗದೆ ನೆಲವು ಗಲಗಲ ?
ಹಾದಿಬೀದಿಯ ಪುಂಡ ಹುಡುಗರು
ನಗುತಲಿರುವರು ಕಿಲಕಿಲ


೧೮ 

ಹೊಸವರುಷ ಹೊಸಹರುಷ
ಮರಳುವುದು ಪ್ರತಿವರುಷ
ಗತಿಶೀಲ ಪ್ರಕೃತಿಯಲಿ
ಹೊಸ ಹೊಸತು ಪ್ರತಿನಿಮಿಷ

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...