ಆಕೆ ನಿಜವಾಗಿಯೂ ಹೂವಾಡಗಿತ್ತಿಯೇ? ಕೈಯಲ್ಲಿ ಹಿಡಿದಿರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍ನಲ್ಲಿ ಅಬ್ಬಬ್ಬಾ ಎಂದರೆ ಎರಡು..ಎರಡೂವರೆ ಮಾರು ಉದ್ದದ ಕನಕಾಂಬರ ಹೂವಿನ ಮಾಲೆ ಇರಬಹುದು ಅಷ್ಟೆ. ಅದನ್ನು ಮಾರಿ ಬಂದ ಹಣ ಒಂದು ಪ್ಲೇಟ್ ಇಡ್ಲಿಗೂ ಸಾಲುವುದಿಲ್ಲ. ಬಹುಶಃ ಅದುರುವ ಕೈಗಳು ಮಾಲೆಯನ್ನು ಕಟ್ಟುತ್ತ ಸೋತಿರಬಹುದು.
ಇಂದು ಇನ್ನೊಮ್ಮೆ ದಾರಿಗಡ್ಡವಾದಳು. "ಅಣ್ಣಾ" ಎಂದು ಕರೆದಳು. ’ಅಂಕಲ್’ಗಿಂತ ’ಅಣ್ಣಾ’ ಎಂಬ ಸಂಬೋಧನೆ ಬೇರೆಯದೇ ಭಾವವನ್ನು ಹುಟ್ಟಿಸಿಬಿಡುತ್ತದೆ ಅಲ್ಲಾ? ನಾನು ಎರಡು ಹೆಜ್ಜೆ ಮುಂದೆ ಹೋಗಿ ನಿಂತು ಹಿಂತಿರುಗಿ ನೋಡಿದೆ. ಮತ್ತದೇ ಬಿಳಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಅದರೊಳಗೇ ಮತ್ತದೇ ಕನಕಾಂಬರ ಹೂವಿನ ಮಾಲೆ, ಅಷ್ಟೇ ಉದ್ದ ಅಬ್ಬಬ್ಬಾ ಅಂದರೆ ಎರಡೂವರೆ ಮಾರು ಇರಬಹುದು, ಮತ್ತದೇ ಭಂಗಿಯಲ್ಲಿ ಅದುರುವ ಕೈ ಒಂದು ಮೊಳ ಹೂಮಾಲೆಯನ್ನು ಮೇಲಕ್ಕೆಳೆದಿತ್ತು.
ಹಿಂತಿರುಗಿ ನಿಂತ ನನ್ನನ್ನು ನೋಡಿ "ಒಂದ್‍ನಿಮಿಷ, ಏನೂ ಮಾಡುವುದಿಲ್ಲ" ಎಂದಳು. ಹೀಗೇಕಂದಳು? ನಾನೇನು ಅವಳನ್ನು ನೋಡಿ ಭಯಗೊಂಡಂತೆ ಕಂಡೆನೇ? ಇರಲಿಕ್ಕಿಲ್ಲ. ರಸ್ತೆಯಲ್ಲಿ ನಡೆದವರನ್ನು ಅಡ್ಡಗಟ್ಟಿ ಹೂವು ಮಾರುವ ಅವಳ ಈ ವಿಲಕ್ಷಣ ವ್ಯಾಪಾರಿ ಪದ್ಧತಿಯಿಂದ, ಜನರು, ಅದರಲ್ಲೂ ಗಂಡಸರು ’ಈಕೆ ಮಾರುವುದು ಹೂವೋ?’ ಎಂದುಕೊಂಡು ಹುಬ್ಬೇರಿಸುವುದನ್ನು ಅನುಭವದಿಂದ ತಿಳಿದಿರಬಹುದು. ಈ ಹಿನ್ನೆಲೆಯಲ್ಲೇ ’ಸೆರಗ ಹಾಸುವೆ ಬಾ’ ಎಂದು ಕರೆದಿರಬಹುದು, ಎಂದು ನಾನಂದುಕೊಂಡೆ, ಎಂದು ಬಗೆದಳೋ? ಬಹುಶಃ ಸಂಬೋಧನೆ ’ಅಂಕಲ್’ನಿಂದ ’ಅಣ್ಣಾ’ ಎಂದು ಬದಲಾಗಲು ಇದೇ ಕಾರಣವೇನೋ?
ಏನೋ? ಆದರೆ ಧ್ವನಿ ಅಂದಿಗಿಂತ ಇಂದು ಇನ್ನೂ ಬೆದರಿದಂತಿತ್ತು, ಕ್ಷೀಣವಾಗಿತ್ತು. ಕಣ್ಣುಗಳನ್ನು ನೋಡಿದೆ. ನೀರ ಹನಿ ಅಂಚಿನಲ್ಲಿ ನಿಂತಿತ್ತು, ರೆಪ್ಪೆ ಬಡಿದು ತನ್ನನ್ನು ಉದುರಿಸಲೆಂದು ಕಾಯುತ್ತಿತ್ತು. ಆದರೆ ಇಂದು "ಹೂವು ಬೇಕೆ?" ಎಂದು ಕೇಳಲಿಲ್ಲ. ಮುಖಲಕ್ಷಣದಿಂದಲೇ ’ಇವನು ಇಂಥವನು’ ಎಂದು ಅಳೆಯುವ ವಿದ್ಯೆಯನ್ನು ’ವ್ಯಾಪಾರಿ’ ಅನುಭವ ಕಲಿಸಿರಬಹುದು. "ಅಣ್ಣಾ ಪರೀಕ್ಷೆಗೆ ಫೀಸು ತುಂಬೋಕೆ ನೂರು ರೂಪಾಯಿ...." ಮುಂದಿನ ಮಾತುಗಳು ಹೊರಬೀಳಲಿಲ್ಲ. ಸಣ್ಣಗೆ ಬಿಕ್ಕುತ್ತಿದ್ದಳು. ರೆಪ್ಪೆ ಬಡಿದಿದ್ದಳು, ಕಣ್ಣಂಚಿನ ಹನಿಗಳು ಕೆನ್ನೆಯ ಮೇಲೆ ಜಾರಿ ಇನ್ನೂ ಕಣ್ಣೀರ ಉತ್ಪತ್ತಿಗ ಸ್ಥಳಾವಕಾಶ ಮಾಡಿಕೊಟ್ಟಿದ್ದವು.
ಕಣ್ಣೀರಿಗೆ ಕರಗದ ಹೃದಯವಿದೆಯೇ? ಇರಬಹುದು! ಆದರೆ ನನ್ನಲ್ಲಿಲ್ಲ. ಅಷ್ಟರಲ್ಲೇ ನನ್ನ ಕೈ ಅಂಗಿ ಕಿಸೆಯಿಂದ ಒಂದು ನೋಟನ್ನು ಹೊರತೆಗೆದಿತ್ತು. ’ಸ್ವಲ್ಪ ಜಾಸ್ತಿಯಾಯ್ತು, ಹತ್ತು ಸಾಕು’ ಎಂದು ಬುದ್ಧಿ, ಬುದ್ಧಿಹೇಳಿತು. ಹತ್ತರ ನೋಟೊಂದು ನನ್ನ ಕಿಸೆಯಿಂದ ಆಕೆಯ ಕೈಸೇರಿತು. ಅದೇಕೋ ನೆಲದ ಕಡೆ ನೋಡಿದೆ, ಆಕೆಯ ಪಾದಗಳು ಕಂಡವು. ಪ್ರತಿಕಾಲಿನ ಎರಡು ಬೆರಳುಗಳನ್ನು ಬೆಳ್ಳಿಯ(ಬಣ್ಣದ) ಕಾಲುಂಗುರಗಳು ಅಲಂಕರಿಸಿದ್ದವು. ಮದುವೆಯಾಗಿರಬೇಕು.
ನಾನು ನನ್ನ ದಾರಿ ಹಿಡಿದೆ. ಆಕೆಗೆ ಅವಳ ದಾರಿ. ಫೀಸಿಗೆ ಇನ್ನೂ ತೊಂಭತ್ತು ರೂಪಾಯಿ ಕಡಿಮೆ ಇದೆಯಲ್ಲ. ನನ್ನಲ್ಲಿ ಉಳಿದಿದ್ದ ಐವತ್ತನ್ನೂ ಕೊಟ್ಟುಬಿಡಬೇಕಿತ್ತು. ಥತ್... ಇವಳ ಕಾಲಿಗೆ ಉಂಗುರ ಹಾಕಿಸಿದ ಗಂಡ ಯಾವನಪ್ಪಾ? ಶಿಖಾಮಣಿ. ’ಏನು ಪರೀಕ್ಷೆ?’ ಎಂದು ಕೇಳಲು ಮರೆತೆ. ಫೀಸ್ ತುಂಬಬೇಕಾದ ಪರೀಕ್ಷೆ ಇವಳಿಗೋ? ಇವಳ ಮಗುವಿಗೋ? ಅಯೋಗ್ಯ ಗಂಡನಿಗೋ? ನಿತ್ಯವೂ ತುಂಬಬೇಕಾದ ಹೊಟ್ಟೆಗೋ? ಅಥವಾ ಪರೀಕ್ಷೆ ನನಗೋ?
No comments:
Post a Comment