ಸ್ನೇಹಿತನೊಬ್ಬ ಮೊನ್ನೆಯಿಂದ ನನ್ನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡುಬಿಟ್ಟಿದ್ದಾನೆ. ಕಾರಣ ಇಷ್ಟೇ, ಹೀಗೆ ನಾವೊಂದಿಷ್ಟು ಗೆಳೆಯರು ಸಂಜೆ ಹೊತ್ತಿಗೆ ಮಾಮೂಲು ಹರಟೆ ಹೊಡೆಯುತ್ತಿದ್ದೆವು. ಒಬ್ಬ "ಮಂದಿ ನಾಯಿ ಯದಕ ಸಾಕ್ತಾರ್ ಗೊರ್ತನ.s..?" ಅಂದ. "ಯಾಕಂದ್ರೆ,ಅವರಿಗೆ ಮನೆನಲ್ಲಿ ಕಿಮ್ಮತ್ತು ಕೊಡೋರು ಯಾರೂ ಇರಲ್ಲ, at leastಒಂದು ನಾಯಿನಾದ್ರೂ ಇರಲಿ ಅಂತ. ಇವರು ಹಾಕಿದ ಬಿಸ್ಕಿಟ್ ತಿಂದು ಬಾಲ ಅಲ್ಲಾಡಿಸ್ತಾ ಇರ್ತದಲ್ಲಾ?" ಅಂತ ನಾನು ಆಣಿಮುತ್ತು ಉದುರಿಸಿಬಿಟ್ಟೆ. ನನ್ನ ಮೇಲೆ ಮುನಿಸಿಕೊಂಡ ಸ್ನೇಹಿತ ಅಂದೆನಲ್ಲಾ, ಆ ಮನುಷ್ಯ ಒಂದಲ್ಲ, ಎರಡಲ್ಲ ಒಟ್ಟೂ ಎಂಟು ನಾಯಿ ಸಾಕಿದ್ದ ! ಅವುಗಳ ಹೆಸರು ಕೇಳಿ, ಶಿವ, ರಾಮ, ಗೌರಿ ಇತ್ಯಾದಿ. ಈ ಹೆಸರುಗಳಿಂದಾಗಿ ಒಮ್ಮೊಮ್ಮೆ ಮಿತ್ರವರ್ಗದ ಸಂಪ್ರದಾಯಸ್ತರೊಡನೆ, ಹತ್ತಿರದಲ್ಲೇ ಇರುವ ದೇವಸ್ಥಾನದ ಅರ್ಚಕರೊಡನೆ ವಾಗ್ವಾದ ಆಗ್ತಾ ಇರತ್ತೆ. ಹೆಸರಲ್ಲೇನು ತಪ್ಪಿಲ್ಲ ಬಿಡಿ. ಯಾರೊಳಗೆ, ಯಾವುದರೊಳಗೆ ದೇವರಿಲ್ಲ ಹೇಳಿ? ಅವನ ಹಾಗೂ ಅವನ ಪತ್ನಿಯ ನಾಯಿಪ್ರೇಮ ಮಾತ್ರ ಪ್ರಶಂಸನೀಯವೇ. ಎಲ್ಲ ನಾಯಿಗಳೂ ಬೀದಿಯಲ್ಲಿ ಸಿಕ್ಕಂತವು. ಇವನು ತಂದು ಸಾಕಿಕೊಂಡಿದ್ದ. ರಾತ್ರಿ ಯಾವತ್ತಾದರು ಫೋನ್ ಮಾಡಿದಾಗ "ಊಟ ಆಯ್ತಾ?" ಅಂತ ಕೇಳಿದರೆ "ನನ್ನ ಮಕ್ಕಳದು ಆಯ್ತು, ನಾವಿನ್ನೂ ಮಾಡ್ಬೆಕು" ಇದು ಉತ್ತರ. ಅವರ ಮನೆಯಲ್ಲಿ ಎರಡು ಕಾಲಿನ ಮಕ್ಕಳಿಲ್ಲ, ನಾನು ತಿಳಿದ ಹಾಗೆ. ಅಂದಹಾಗೆ ಆತನಿಗೆ ಕನ್ನಡ ಓದಲು ಬರುವುದಿಲ್ಲ(ಅಂದುಕೊಂಡಿದ್ದೇನೆ),ಹಾಗಾಗಿ ಧೈರ್ಯವಾಗಿ ಇಲ್ಲಿ ಉಲ್ಲೇಖಿಸುತ್ತಿದ್ದೇನೆ.
ಇನ್ನೊಂದು ಪ್ರಸಂಗ; ನಮ್ಮ ಪಕ್ಕದಮನೆಯ ಅಂಕಲ್ ಒಂದು ಕಪ್ಪು ಬಣ್ಣದ ಗಂಡು ನಾಯಿಯನ್ನು ಸಾಕಿದ್ದಾರೆ. ಖಾಯಂ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಅವರ ’ನಾಯಿ’ವಿಹಾರ ನಡೆಯುತ್ತ ಇರುತ್ತದೆ. ಒಮ್ಮೆ ಹೀಗೆ ಹರಟುತ್ತ ಸ್ನೇಹಿತನೊಬ್ಬನಿಗೆ ಅಂಕಲ್ ಗಂಡುನಾಯಿಪ್ರೇಮದ ಬಗ್ಗೆ ಹೇಳುತ್ತ ಇದ್ದೆ, "ಅವರಿಗೆ ಇಬ್ಬರು ಹೆಣ್ಣುಮಕ್ಕಳು, ಪಾಪ ಗಂಡು ಸಂತಾನದ ಆಸೆ ಇರೊಲ್ವೇ?" ಎಂದು ಬಿಟ್ಟೆ. ’ನಾಯಿ’ವಿಹಾರದಲ್ಲಿ ನಿರತನಾಗಿದ್ದ ಆಸಾಮಿಗೆ ಕೇಳೇಬಿಡಬೇಕೆ ! ನನ್ನ ಪುಣ್ಯ, ಅವರ ಪುತ್ರಸಮಾನ ನಾಯಿ ಸಣಕಲು ದೇಹದ ಅವರನ್ನೇ ಎಳೆದುಕೊಂಡು ಮುಂದೆ ಹೋಯಿತು. ಮಂತ್ರಾರ್ಚನೆ, ಪೂಜೆ ಸ್ವಲ್ಪದರಲ್ಲೇ ತಪ್ಪಿತು. ಒಂದು ವಾರ ತಲೆಮರೆಸಿಕೊಂಡು ಓಡಾಡಿದೆ ಆಮೇಲೆ.
ನಾನೇನೂ ಸಾಕುನಾಯಿ, ನಾಯಿಸಾಕುವವರ ವಿರೋಧಿಯಲ್ಲ. ನಾಯಿಪ್ರೇಮಿಯೇ. ನಮ್ಮ ಮನೆಯಲ್ಲಿ ಪ್ರೀತಿಯ ನಾಯಿ ’ದಿವಂಗತ’ವಾದಾಗ ನನ್ನಷ್ಟು ದುಃಖಗೊಂಡವರಿಲ್ಲ. ಈ ಪ್ರಪಂಚದಲ್ಲಿ ಸ್ವಲ್ಪವಾದರೂ ನಿಷ್ಠೆ, ನಿಯತ್ತು ಉಳಿದಿದ್ದರೆ ಅದು ನಾಯಿಕುಲದಲ್ಲಿ ಮಾತ್ರ. ಅಲ್ಲದೆ ಇತ್ತೀಚೆಗೆ ನಗರಗಳಲ್ಲಿ ನಾಯಿಪ್ರೇಮಿಗಳ ವೃದ್ಧಿಯಿಂದಾಗಿ ನಾಯಿ ಬಿಸ್ಕತ್ತಿಂದ ಹಿಡಿದು ಕೊರಳಪಟ್ಟಿ ಇತ್ಯಾದಿಗಳನ್ನು ಮಾರುವ ಅಂಗಡಿಗಳು,ಚಿಕಿತ್ಸಾಲಯಗಳು, ಟ್ರೈನಿಂಗ್ ಇನ್ಸ್ಟಿಟ್ಯೂಟ್‍ಗಳು ’ನಾಯಿ’ಕೊಡೆಗಳಂತೆ ಹುಟ್ಟಿಕೊಂಡಿವೆ. ಹೊಸ ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ನಾಯಿಸಂಕುಲದ ಯೋಗದಾನವನ್ನು ನೆನೆಯದಿರಲಾದೀತೇ?
ಹಾಗಾದರೆ ವಿರೋಧ ಇಲ್ಲವೇ? ಖಂಡಿತ ಇದೆ. ಈ ಕೆಳಗಿನ ಅಂಶಗಳ ಬಗ್ಗೆ:
೧. ಪ್ರಾತಃಕಾಲದಲ್ಲಿ ಅರ್ಧರಸ್ತೆಯನ್ನಾಕ್ರಮಿಸುವ ನಾಯಿವಿಹಾರಿಗಳು ಬೀದಿಯಲ್ಲಿ ತಿರುಗಾಡುವವರಲ್ಲಿ ಅದರಲ್ಲೂ ಸಣ್ಣ ಸಣ್ಣ ಮಕ್ಕಳಲ್ಲಿ ಒಂದು ತೆರನಾದ ಭಯೋತ್ಪಾದನೆಯನ್ನುಂಟುಮಾಡುತ್ತಾರೆ.
೨. ಮನೆಯ ಮುಂದೆ ಬರೆದ ಸುಂದರವಾದ ಬಿಳಿರಂಗೋಲಿಯ ಮೇಲೆ ಇವರ ನಾಯಿ ಕಪ್ಪು/ಕಂದು ಚುಕ್ಕೆ ಇಟ್ಟು ಹೋಗುತ್ತದೆ.
೩. ಬೀದಿಯ ಸ್ವಚ್ಛತೆಯ ಬಗ್ಗೆ ನಗರಪಾಲಿಕೆಯ ಕಸ ಗುಡಿಸುವವರನ್ನು ದೂಷಿಸಲಾಗುತ್ತದೆ. ಗಲೀಜು ಮಾಡಿದ್ದು ಇವರ ಪ್ರೀತಿಪಾತ್ರ ನಾಯಿಯೆ, ಇವರೊಟ್ಟಿಗೆ ವಿಹಾರಾರ್ಥವಾಗಿ ಬಂದಾಗಲೇ. ಕಸ ಗುಡಿಸುವವರೂ ಮನುಷ್ಯರು ಸ್ವಾಮಿ.
೪. ರಸ್ತೆ ಪಕ್ಕ ನಿಲ್ಲಿಸಿಟ್ಟ ವಾಹನಗಳಿಗೆ ಇವರ ನಾಯಿ ಪಿಚಕಾರಿ ಹಾರಿಸುತ್ತದೆ, ಅದರ ಸಹಜ ಸ್ವಭಾವ. ವಾಸನೆಯಾಗುವುದಿಲ್ಲವೇ?ಲವಣದ್ರವದ ಅಭಿಷೇಕದಿಂದ ಕಬ್ಬಿಣ ತುಕ್ಕು ಹಿಡಿಯುವುದಿಲ್ಲವೇ?
೫. ಮನೆಗೆ ಬಂದ ನೆಂಟರೊಂದಿಗೆ, ಕುಶಲೋಪರಿ ವಿಚಾರಿಸುವುದು ಬಿಟ್ಟು ತಮ್ಮ ನಾಯಿಯ (ತಮ್ಮಗೂ ಇಲ್ಲದ) ಬುದ್ಧಿವಂತಿಕೆಯ ವರ್ಣನೆಯಲ್ಲಿ ತೊಡಗುತ್ತಾರೆ.
೬. ಇವರ ನಾಯಿಯ ಬೊಗಳಾಟ, ಅಕ್ಕ ಪಕ್ಕದವರ ನಿದ್ರೆ,ಮನಶ್ಶಾಂತಿಯನ್ನು ಭಂಗಗೊಳಿಸುತ್ತದೆ.
೭. ಇನ್ನು ಕೆಲವರು ನಾಯಿ ಬೊಗಳಬಾರದೆಂದು ಅದರ ಬಾಯಿಗೆ ಪಟ್ಟಿ ಬಿಗಿದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಹರಣಮಾಡುತ್ತರೆ.
೮. ಶ್ರಾವಣ ಮಾಸದ ನಾಯಿಗಳ ಸಹಜ ಮಿಲನ ಮಹೋತ್ಸವಕ್ಕೆ ಸಾಕುನಾಯಿಗಳಿಗೆ ಅವಕಾಶವೇ ಇಲ್ಲ. (ಇತ್ತೀಚೆಗೆ ನಗರದ ಬೀದಿನಾಯಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವು ಮಾಸಧರ್ಮವನ್ನು ಪಾಲಿಸುವ ಬಗ್ಗೆ ಸಂಶಯ ಮೂಡುತ್ತದೆ. ಮನುಷ್ಯನ ಸಹವಾಸ ಏನೇನು ಬದಲಾವಣೆ ತರಬಹುದೋ?)
೯. sterilisation ಹೆಸರಿನಲ್ಲಿ ಗಂಡುನಾಯಿಗಳ ವೃಷಣ ಹರಣ ಮಾಡಲಾಗುತ್ತದೆ, ಹೆಣ್ಣು ನಾಯಿಗಳ ಗರ್ಭಚೀಲವನ್ನೇ ಕೀಳಲಾಗುತ್ತದೆ.
೧೦. ಟ್ರೈನಿಂಗಿನ ಹೆಸರಿನಲ್ಲಿ ಅವುಗಳನ್ನು ಹಿಂಸಿಸಲಾಗುತ್ತದೆ.
೧೧. ಎರಡು ನಾಯಿಗಳು ಒಂದನ್ನೊಂದು ಕಂಡಾಗ ಗುರ್‌ಗುಡುತ್ತವೆ, ಅವುಗಳ ಸಹಜ ಸ್ವಭಾವ. ನಾಯಿಮಾಲಿಕರು ತಮ್ಮ ತಮ್ಮ ನಾಯಿಗಳ ಬೆಂಬಲಕ್ಕೆ ನಿಲ್ಲುತ್ತ, ನಡುರಸ್ತೆಯಲ್ಲೊಂದು ಸೀನ್ ಕ್ರಿಯೇಟ್ ಮಾಡುತ್ತಾರೆ. ನಾಯಿಗಳು ಸ್ನೇಹಿತರಾದರೂ, ಒಡೆಯರ ಬಾಯಿ ನಿಲ್ಲುವುದಿಲ್ಲ. ಕೊನೆ ಎಲ್ಲಿ ಮುಟ್ಟುತ್ತೋ ?
೧೨. ಸುಂದರಾಂಗದ ಸುಂದರೀಯರು ಪಮೇರಿಯನ್ ನಾಯಿಗಳನ್ನು ಪಬ್ಲಿಕ್‍ನಲ್ಲಿ ಮುತ್ತಿಡುತ್ತ ಮುದ್ದಿಸುತ್ತ, ಯುವಕರಲ್ಲಿ ’ಛೆ,ನಾನೂ ಈ ನಾಯಿಯಾಗಿ ಹುಟ್ಟಿದ್ದರೆ?’ ಎಂಬ ಹುಚ್ಚು ಹಗಲುಗನಸನ್ನು ಹೊತ್ತಿಸುತ್ತಾರೆ.
ಇಂತಹ ಪಟ್ಟಿಮಾಡಿಮುಗಿಸಲಾಗದ ಸಾರ್ವಜನಿಕ ನಾಯಿಬಾಧೆಗೆ ಪರಿಹಾರವಿಲ್ಲವೇ?
ಸಮಸ್ಯೆ ನಮ್ಮ ನಗರಗಳಲ್ಲಿ ಮಾತ್ರ ಇಲ್ಲ. ಅನೇಕ ಪಾಶ್ಚಾತ್ಯ ದೇಶಗಳು ಸಾಕುಪ್ರಾಣಿಗಳಿಗೆ ಸಂಭಂದಿಸಿದಂತೆ ತೆರತೆರನಾದ ಕಾನೂನುಗಳನ್ನು ಮಾಡಿವೆ. ಅಮೆರಿಕದ ಬಹುತೇಕ ರಾಜ್ಯಗಳಲ್ಲಿ,ಐರ್ಲೆಂಡ್, ಇಂಗ್ಲಂಡ್, ಆಸ್ಟೇಲಿಯ, ಕೆನಡ ಮುಂತಾದ ದೇಶಗಳಲ್ಲಿ ನಾಯಿ ಸಾಕುವವರು ಕಡ್ಡಾಯವಾಗಿ ಲೈಸನ್ಸ್ ಪಡೆದಿರಬೇಕು. ಸಾಕುಪ್ರಾಣಿಗಳ ಆರೋಗ್ಯದ ಪ್ರಮಾಣಪತ್ರವನ್ನು ಹೊಂದಿರಬೇಕು. ಜರ್ಮನಿಯಲ್ಲಿ ನಾಯಿಸಾಕುವುದಕ್ಕೆ "dog tax" ಕೂಡ ಕಟ್ಟಬೇಕು. ಅದರಲ್ಲೂ ಡೇಂಜರಸ್ ಎಂದು ಪರಿಗಣಿಸಲ್ಪಡುವ ತಳಿಯ ನಾಯಿಗಳಿಗೆ ಟ್ಯಾಕ್ಸ್ ಜಾಸ್ತಿ. ನ್ಯೂಜಿಲ್ಯಾಂಡಿನಲ್ಲಂತೂ "Dog Control Act"ಎಂಬ ಬರೋಬ್ಬರಿ 80 ಆರ್ಟಿಕಲ್‍ಗಳುಳ್ಳ ಕಾನೂನೇ ಇದೆ. ಸಿಂಗಾಪುರದಲ್ಲಿ ಗಂಡು ನಾಯಿ ಹಾಗೂ sterilised ಹೆಣ್ಣು ನಾಯಿಗೆ$14 ತೆತ್ತು ಲೈಸನ್ಸ್ ಪಡೆದುಕೊಳ್ಳಬೇಕು. sterilised ಅಲ್ಲದ ಹೆಣ್ಣು ನಾಯಿಗಾದರೆ $70 ತೆರಬೇಕು (ಎಂತಹ ತಾರತಮ್ಯ ನೋಡಿ !). ಪ್ರತಿವರ್ಷ ಲೈಸನ್ಸನ್ನು renewal ಮಾಡಿಸಿಕೊಳ್ಳಬೇಕು. ಮೈಕ್ರೋಚಿಪ್ ಇರುವ ಕಾಲರನ್ನು ನಾಯಿಯ ಕುತ್ತಿಗೆಗೆ ಬಿಗಿಯಲಾಗುತ್ತದೆ. ನಾಯಿಯ ಹೆಜ್ಜೆಗಳನ್ನು GPS ಮುಖಾಂತರ ಹಿಡಿಯಬಹುದು! ಅನೇಕ ದೇಶಗಳಲ್ಲಿ ನಾಯಿಯು ಪಬ್ಲಿಕ್‍ನಲ್ಲಿ ಗಲೀಜು ಮಾಡುವುದು, ಬೇಕಾಬಿಟ್ಟಿ ಬೊಗಳುವುದು ಅಪರಾಧ. ಅದಕ್ಕಾಗಿ ನಾಯಿಯ ಮಾಲಿಕನನ್ನು ಶಿಕ್ಷಿಸಲಾಗುತ್ತದೆ. ನಾಯಿವಿಹಾರಿಗಳು ಜೊತೆಗೊಂದು ಪ್ಲಾಸ್ಟಿಕ್ ಬ್ಯಾಗ್ ಕೊಂಡೊಯ್ಯುತ್ತಾರೆ. ಬೀದಿಯಲ್ಲಿ ಅವರ ನಾಯಿ ಮಾಡಿದ ಗಲೀಜನ್ನು ಅವರೇ ಸ್ವಚ್ಛಗೊಳಿಸುತ್ತಾರೆ, ಪಾಲಿಕೆಗಾಗಿ ಬಿಡುವುದಿಲ್ಲ ನಮ್ಮವರಂತೆ. (ಫಾರಿನ್ ದೇಶಗಳ ಉಲ್ಲೇಖಕ್ಕೆ ಕಾರಣವಿಷ್ಟೇ, ನಮಗೆ ಅಮೆರಿಕ ಸಿಂಗಾಪುರಗಳೇ ಆದರ್ಶವಾಗಿವೆಯಲ್ಲಾ !!)
ಅಂದರೆ ನಮ್ಮಲ್ಲೂ ಇಂತಹ ನಿಯಮಗಳ ಅಗತ್ಯ ಇದೆಯೇ ?
ಕಾನೂನು ನಿಯಮಗಳೇನಿದ್ದರೂ ಅದನ್ನು ಆಚರಣೆಗೆ ತರುವ ಜನರ ಮಾನಸಿಕತೆಯನ್ನವಲಂಬಿಸಿರುತ್ತವೆ. ಕಾನೂನು ಶಿಕ್ಷೆಯ ಭಯವನ್ನು ಹುಟ್ಟಿಸಬಹುದೇ ಹೊರತು ಬದಲಾವಣೆಯನ್ನು ತರಲಾರದು. ಬದಲಾವಣೆಯ ಬೀಜವೇನಿದ್ದರೂ ಮನದಲ್ಲಿ ಮೊಳಕೆಯೊಡೆಯಬೇಕು. ವನಮಹೋತ್ಸವದ ಮೊದಲ ಸಸಿಯನ್ನು ಎದೆಯಲ್ಲಿ ನೆಡಬೇಕು ಎನ್ನುತ್ತಾರಲ್ಲ, ಹಾಗೇ.
ನಮ್ಮ ನಗರದ ಅಕ್ಷರಸ್ಥ, ಆದರೂ ಅವಿದ್ಯಾವಂತರಂತಿರುವ ನಾಯಿಪ್ರೇಮಿ ನಾಗರಿಕರು, ಸ್ವಲ್ಪ responsible ಆಗಬಲ್ಲರೇ ?
No comments:
Post a Comment