ಒಂದು ಯುದ್ಧದ ಸಂದರ್ಭ. ಎಲ್ಲೆಲ್ಲೂ ಸೈನಿಕರ ಕೋಲಾಹಲ, ಚೀರಾಟ, ಅರಚಾಟ. ಹೆಂಗಸರೂ ಮಕ್ಕಳು ಎನ್ನದೇ ಸಿಕ್ಕಸಿಕ್ಕವರನ್ನೆಲ್ಲ ಯುದ್ಧಯಜ್ಞಕ್ಕೆ ಬಲಿಕೊಡಲಾಗುತ್ತಿತ್ತು. ಸೈನಿಕರು ವೈರಿದೇಶದ ಮನೆಮನೆಗಳನ್ನು ಶೋಧಿಸುತ್ತಿದ್ದರು. ಹೀಗೆ ಒಬ್ಬ ಸೈನಿಕ ಒಂದು ಮನೆಯೊಳಗೆ ನುಗ್ಗಿದ. ಅಲ್ಲೊಬ್ಬ ಮಧ್ಯವಯಸ್ಸಿನ ವ್ಯಕ್ತಿ ಮೂಲೆಯೊಂದರಲ್ಲಿ ಕುಳಿತು ಏನನ್ನೋ ಬರೆಯುತ್ತಿದ್ದ. ಸೈನಿಕನ ಜೋರಿನ ಧ್ವನಿ ಅವನನ್ನು ಎಚ್ಚರಿಸಲಿಲ್ಲ. ಸೈನಿಕ ತನ್ನ ಕೋವಿಯ ತುದಿಯಿಂದ ತಿವಿದು ಅವನನ್ನು ಎಚ್ಚರಿಸಿದ.
"ಯಾರು ನೀನು? ಏನು ಮಾಡುತ್ತಿರುವೆ?" ಸೈನಿಕ ಅವನನ್ನು ಕೇಳಿದ.
"ನಾನೊಬ್ಬ ಕವಿ. ಕವಿತೆಯನ್ನು ರಚಿಸುತ್ತಿರುವೆ" ಆತ ಶಾಂತನಾಗಿಯೇ ಉತ್ತರಿಸಿದ. ಸೈನಿಕನಿಗೆ ಅತ್ಯಾಶ್ಚರ್ಯ.
"ಹೊರಗಡೆ ಇಷ್ಟೊಂದು ಯುದ್ಧದ ಕೋಲಾಹಲ ನಡೆಯುತ್ತಿದೆ. ಅದು ಹೇಗೆ ನೀನು ಇಲ್ಲಿ ಇಷ್ಟು ಶಾಂತನಾಗಿ ಕುಳಿತು ಕವಿತೆಯನ್ನು ರಚಿಸಬಲ್ಲೆ?"
ಆ ವ್ಯಕ್ಕ್ತಿ ನಸುನಗುತ್ತ ಉತ್ತರಿಸಿದ "ಮಿತ್ರ, ಯುದ್ಧದ ಕೋಲಾಹಲ ಇರುವುದು ಹೊರಗೆ, ನನ್ನೊಳಗಲ್ಲವಲ್ಲ?"
ಸೈನಿಕನ ಮನ ಕರಗಿತು, ಕವಿಗೆ ವಂದಿಸಿ ಅಲ್ಲಿಂದ ನಡೆದ. (ಎಂದೋ ಓದಿದ ಕತೆ,ಬಹುಶಃ ಶ್ರೀ ಷಡಕ್ಷರಿಯವರ ವಿಕದಲ್ಲಿ ಬರುವ "ಆಣಿಮುತ್ತು" ಅಂಕಣದಲ್ಲಿನದಿರಬಹುದು)
ನಮ್ಮ ದಿನನಿತ್ಯದ ಬದುಕಿನ ಬಹುತೇಕ ಸಮಯವನ್ನು ಗೌಜು ಗದ್ದಲ ಕೋಲಾಹಲವಿರದ ಪರಿಸರದಲ್ಲಿ ಕಳೆಯುವುದು ಅಸಾಧ್ಯವೇ. ಎಲ್ಲಿ ಹೋದರು ಒಂದಲ್ಲ ಒಂದು ತರಹದ ಶಬ್ದ, ದಾಂಧಲೆ, ಕ್ಷೋಭೆ ಇದ್ದೇ ಇರುತ್ತದೆ. ನಮ್ಮ ಮನಸ್ಸನ್ನು ಒಂದು ಕೆಲಸದಲ್ಲಿ ನೆಲೆಗೊಳ್ಳಲು ಬಿಡದೇ ಅತ್ತಿತ್ತ ಎಳೆದಾಡುತ್ತಿರುತ್ತದೆ. ಕೆಲ ಸದ್ದು ಕೆಲವರಿಗೆ ಸಂಗೀತವಾದರೆ ಇನ್ನು ಕೆಲವರಿಗೆ ಅಪ್ರಿಯವಾಗಬಹುದು. ಆದರೆ ನಿಜವಾದ ಆನಂದವನ್ನು ಅರಸುವ ಪ್ರತಿಯೊಬ್ಬನೂ ಬಯಸುವುದು ಮನಶ್ಶಾಂತಿಯನ್ನು. ಮನಸ್ಸಿನ ಕ್ಷೋಭೆರಹಿತ ಸ್ಥಿತಿ ಮಾತ್ರ ಕಾರ್ಯದಕ್ಷತೆಯನ್ನು ಹೆಚ್ಚಿಸಬಲ್ಲದು, ಆನಂದದ ಅನುಭೂತಿಯನ್ನು ನೀಡಬಲ್ಲದು. ಕನ್ನಡದಲ್ಲಿ ಅವಧಾನಕಲೆಯನ್ನು ಪುನರುಜ್ಜೀವನಗೊಳಿಸಿದ ಶತಾವಧಾನಿ ಡಾ| ಆರ್. ಗಣೇಶರವರು ಅವಧಾನ ಪ್ರದರ್ಶನ ಸಂದರ್ಭದಲ್ಲಿ ಪ್ರಚ್ಛಕರ ಪ್ರಶ್ನೆ ನಿಬಂಧನೆಗಳ ನಡುವೆ, ಅದರಲ್ಲೂ ಅಪ್ರಸ್ತುತ ಪ್ರಸಂಗಿಯ ಪ್ರಶ್ನಕೋಲಾಹಲದ ನಡುವೆ, ಪ್ರೇಕ್ಷಕ ವರ್ಗದ ಸಂತೋಷದ ಕೇಕೆಯ ನಡುವೆ, ಹೇಗೆ ಅವಧಾನಿಯು ಹೊರಲೋಕದೊಡನೆ ಸರಸದಿಂದ ವ್ಯವಹರಿಸುತ್ತ ತನ್ನ ಒಳಮನದ ಶಾಂತಿಯನ್ನು ಕದಡಗೊಡದೇ ಇರಬೇಕು, ಎಂಬುದನ್ನು ತುಂಬ ಸುಂದರವಾಗಿ ವಿವರಿಸುತ್ತಾರೆ. (ಶ್ರೀ ಗಣೇಶರವರ "ಕನ್ನಡದಲ್ಲಿ ಅವಧಾನಕಲೆ" ಎಂಬ ಗ್ರಂಥವನ್ನು ನೋಡಬಹುದು, ಅದು ಅವರ ಡಿ. ಲಿಟ್. ಸಂಶೋಧನ ಪ್ರಬಂಧ ಕೂಡ ಹೌದು. ಅವಧಾನದ ಸಂದರ್ಭಗಳಲ್ಲಿ ರಚಿತವಾದ ಅನೇಕ ಅತ್ಯುತ್ತಮ ಕವಿತೆಗಳೂ ಈ ಪುಸ್ತಕದಲ್ಲಿವೆ).
ಹೀಗೆ ಸುತ್ತಮುತ್ತಲ ವಿಕ್ಷೋಭೆಯಲ್ಲಿ ವ್ಯವಹರಿಸುತ್ತ, ಹೊರಜಗತ್ತಿನ ಗದ್ದಲ ಒಳಮನದ tranquilityಯನ್ನು ಪ್ರಭಾವಿಸದಂತೆ ತಡೆಯಬಲ್ಲೆವಾದರೆ, ಒಳಮನಸ್ಸಿನ ಶಾಂತಿಯನ್ನು, ತನ್ಮೂಲಕ ಆನಂದವನ್ನು ಸದಾ ಉಳಿಸಿಕೊಳ್ಳಬಲ್ಲೆವಾದರೆ, ಬದುಕು ಎಷ್ಟು ಸುಮಧುರ, ಅಲ್ಲವೇ? ಅಸಾಧ್ಯವೇನೂ ಅಲ್ಲ. ಭಗವದ್ಗೇತೆಯಲ್ಲಿ ಹೇಳಿದಂತೆ ಅಭ್ಯಾಸ ಹಾಗೂ ವಿಷಯಸುಖ ವೈರಾಗ್ಯದಿಂದ ಸಾಧ್ಯವಾಗಬಲ್ಲದು. ಪೂಜ್ಯ ಡಿವಿಜಿಯವರು ಕಗ್ಗದಲ್ಲಿ ’ಮನ ಪ್ರಕೋಷ್ಠೀಕರಣ’ದ(compartmentalization of mind) ’ವರಯೋಗಸೂತ್ರ’ವೊಂದನ್ನು ಹೇಳಿದ್ದಾರೆ.
ಎರಡು ಕೋಣೆಗಳ ನೀಂ ಮಾಡುಮನದಾಲಯದಿ |
ಹೊರಕೋಣೆಯಲಿ ಲೋಗರಾಟಗಳನಾಡು ||
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ |
ವರಯೋಗಸೂತ್ರವಿದು - ಮಂಕುತಿಮ್ಮ ||
No comments:
Post a Comment