Thursday, February 25, 2010

ನಾಯಿಪ್ರೇಮಿಗಳಲ್ಲೊಂದು ಬಿನ್ನಪ

          ಸ್ನೇಹಿತನೊಬ್ಬ ಮೊನ್ನೆಯಿಂದ ನನ್ನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡುಬಿಟ್ಟಿದ್ದಾನೆ. ಕಾರಣ ಇಷ್ಟೇಹೀಗೆ ನಾವೊಂದಿಷ್ಟು ಗೆಳೆಯರು ಸಂಜೆ ಹೊತ್ತಿಗೆ ಮಾಮೂಲು ಹರಟೆ ಹೊಡೆಯುತ್ತಿದ್ದೆವು. ಒಬ್ಬ "ಮಂದಿ ನಾಯಿ ಯದಕ ಸಾಕ್ತಾರ್ ಗೊರ್ತನ.s..?" ಅಂದ. "ಯಾಕಂದ್ರೆ,ಅವರಿಗೆ ಮನೆನಲ್ಲಿ ಕಿಮ್ಮತ್ತು ಕೊಡೋರು ಯಾರೂ ಇರಲ್ಲat leastಒಂದು ನಾಯಿನಾದ್ರೂ ಇರಲಿ ಅಂತ. ಇವರು ಹಾಕಿದ ಬಿಸ್ಕಿಟ್ ತಿಂದು ಬಾಲ ಅಲ್ಲಾಡಿಸ್ತಾ ಇರ್ತದಲ್ಲಾ?" ಅಂತ ನಾನು ಆಣಿಮುತ್ತು ಉದುರಿಸಿಬಿಟ್ಟೆ. ನನ್ನ ಮೇಲೆ ಮುನಿಸಿಕೊಂಡ ಸ್ನೇಹಿತ ಅಂದೆನಲ್ಲಾಆ ಮನುಷ್ಯ ಒಂದಲ್ಲಎರಡಲ್ಲ ಒಟ್ಟೂ ಎಂಟು ನಾಯಿ ಸಾಕಿದ್ದ ! ಅವುಗಳ ಹೆಸರು ಕೇಳಿಶಿವರಾಮಗೌರಿ ಇತ್ಯಾದಿ. ಈ ಹೆಸರುಗಳಿಂದಾಗಿ ಒಮ್ಮೊಮ್ಮೆ ಮಿತ್ರವರ್ಗದ ಸಂಪ್ರದಾಯಸ್ತರೊಡನೆಹತ್ತಿರದಲ್ಲೇ ಇರುವ ದೇವಸ್ಥಾನದ ಅರ್ಚಕರೊಡನೆ ವಾಗ್ವಾದ ಆಗ್ತಾ ಇರತ್ತೆ. ಹೆಸರಲ್ಲೇನು ತಪ್ಪಿಲ್ಲ ಬಿಡಿ. ಯಾರೊಳಗೆಯಾವುದರೊಳಗೆ ದೇವರಿಲ್ಲ ಹೇಳಿಅವನ ಹಾಗೂ ಅವನ ಪತ್ನಿಯ ನಾಯಿಪ್ರೇಮ ಮಾತ್ರ ಪ್ರಶಂಸನೀಯವೇ. ಎಲ್ಲ ನಾಯಿಗಳೂ ಬೀದಿಯಲ್ಲಿ ಸಿಕ್ಕಂತವು. ಇವನು ತಂದು ಸಾಕಿಕೊಂಡಿದ್ದ. ರಾತ್ರಿ ಯಾವತ್ತಾದರು ಫೋನ್ ಮಾಡಿದಾಗ "ಊಟ ಆಯ್ತಾ?" ಅಂತ ಕೇಳಿದರೆ "ನನ್ನ ಮಕ್ಕಳದು ಆಯ್ತುನಾವಿನ್ನೂ ಮಾಡ್ಬೆಕು" ಇದು ಉತ್ತರ. ಅವರ ಮನೆಯಲ್ಲಿ ಎರಡು ಕಾಲಿನ ಮಕ್ಕಳಿಲ್ಲನಾನು ತಿಳಿದ ಹಾಗೆ. ಅಂದಹಾಗೆ ಆತನಿಗೆ ಕನ್ನಡ ಓದಲು ಬರುವುದಿಲ್ಲ(ಅಂದುಕೊಂಡಿದ್ದೇನೆ),ಹಾಗಾಗಿ ಧೈರ್ಯವಾಗಿ ಇಲ್ಲಿ ಉಲ್ಲೇಖಿಸುತ್ತಿದ್ದೇನೆ.
          ಇನ್ನೊಂದು ಪ್ರಸಂಗನಮ್ಮ ಪಕ್ಕದಮನೆಯ ಅಂಕಲ್ ಒಂದು ಕಪ್ಪು ಬಣ್ಣದ ಗಂಡು ನಾಯಿಯನ್ನು ಸಾಕಿದ್ದಾರೆ. ಖಾಯಂ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಅವರ ’ನಾಯಿ’ವಿಹಾರ ನಡೆಯುತ್ತ ಇರುತ್ತದೆ. ಒಮ್ಮೆ ಹೀಗೆ ಹರಟುತ್ತ ಸ್ನೇಹಿತನೊಬ್ಬನಿಗೆ ಅಂಕಲ್ ಗಂಡುನಾಯಿಪ್ರೇಮದ ಬಗ್ಗೆ ಹೇಳುತ್ತ ಇದ್ದೆ, "ಅವರಿಗೆ ಇಬ್ಬರು ಹೆಣ್ಣುಮಕ್ಕಳುಪಾಪ ಗಂಡು ಸಂತಾನದ ಆಸೆ ಇರೊಲ್ವೇ?" ಎಂದು ಬಿಟ್ಟೆ. ’ನಾಯಿ’ವಿಹಾರದಲ್ಲಿ ನಿರತನಾಗಿದ್ದ ಆಸಾಮಿಗೆ ಕೇಳೇಬಿಡಬೇಕೆ ! ನನ್ನ ಪುಣ್ಯಅವರ ಪುತ್ರಸಮಾನ ನಾಯಿ ಸಣಕಲು ದೇಹದ ಅವರನ್ನೇ ಎಳೆದುಕೊಂಡು ಮುಂದೆ ಹೋಯಿತು. ಮಂತ್ರಾರ್ಚನೆಪೂಜೆ ಸ್ವಲ್ಪದರಲ್ಲೇ ತಪ್ಪಿತು. ಒಂದು ವಾರ ತಲೆಮರೆಸಿಕೊಂಡು ಓಡಾಡಿದೆ ಆಮೇಲೆ.  
          ನಾನೇನೂ ಸಾಕುನಾಯಿನಾಯಿಸಾಕುವವರ ವಿರೋಧಿಯಲ್ಲ. ನಾಯಿಪ್ರೇಮಿಯೇ. ನಮ್ಮ ಮನೆಯಲ್ಲಿ ಪ್ರೀತಿಯ ನಾಯಿ ’ದಿವಂಗತ’ವಾದಾಗ ನನ್ನಷ್ಟು ದುಃಖಗೊಂಡವರಿಲ್ಲ. ಈ ಪ್ರಪಂಚದಲ್ಲಿ ಸ್ವಲ್ಪವಾದರೂ ನಿಷ್ಠೆನಿಯತ್ತು ಉಳಿದಿದ್ದರೆ ಅದು ನಾಯಿಕುಲದಲ್ಲಿ ಮಾತ್ರ. ಅಲ್ಲದೆ ಇತ್ತೀಚೆಗೆ ನಗರಗಳಲ್ಲಿ ನಾಯಿಪ್ರೇಮಿಗಳ ವೃದ್ಧಿಯಿಂದಾಗಿ ನಾಯಿ ಬಿಸ್ಕತ್ತಿಂದ ಹಿಡಿದು ಕೊರಳಪಟ್ಟಿ ಇತ್ಯಾದಿಗಳನ್ನು ಮಾರುವ ಅಂಗಡಿಗಳು,ಚಿಕಿತ್ಸಾಲಯಗಳುಟ್ರೈನಿಂಗ್ ಇನ್ಸ್ಟಿಟ್ಯೂಟ್‍ಗಳು ’ನಾಯಿ’ಕೊಡೆಗಳಂತೆ ಹುಟ್ಟಿಕೊಂಡಿವೆ. ಹೊಸ ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ನಾಯಿಸಂಕುಲದ ಯೋಗದಾನವನ್ನು ನೆನೆಯದಿರಲಾದೀತೇ?
          ಹಾಗಾದರೆ ವಿರೋಧ ಇಲ್ಲವೇಖಂಡಿತ ಇದೆ. ಈ ಕೆಳಗಿನ ಅಂಶಗಳ ಬಗ್ಗೆ:
          ೧. ಪ್ರಾತಃಕಾಲದಲ್ಲಿ ಅರ್ಧರಸ್ತೆಯನ್ನಾಕ್ರಮಿಸುವ ನಾಯಿವಿಹಾರಿಗಳು ಬೀದಿಯಲ್ಲಿ ತಿರುಗಾಡುವವರಲ್ಲಿ ಅದರಲ್ಲೂ ಸಣ್ಣ ಸಣ್ಣ ಮಕ್ಕಳಲ್ಲಿ ಒಂದು ತೆರನಾದ ಭಯೋತ್ಪಾದನೆಯನ್ನುಂಟುಮಾಡುತ್ತಾರೆ.
          ೨. ಮನೆಯ ಮುಂದೆ ಬರೆದ ಸುಂದರವಾದ ಬಿಳಿರಂಗೋಲಿಯ ಮೇಲೆ ಇವರ ನಾಯಿ ಕಪ್ಪು/ಕಂದು ಚುಕ್ಕೆ ಇಟ್ಟು ಹೋಗುತ್ತದೆ.
          ೩. ಬೀದಿಯ ಸ್ವಚ್ಛತೆಯ ಬಗ್ಗೆ ನಗರಪಾಲಿಕೆಯ ಕಸ ಗುಡಿಸುವವರನ್ನು ದೂಷಿಸಲಾಗುತ್ತದೆ. ಗಲೀಜು ಮಾಡಿದ್ದು ಇವರ ಪ್ರೀತಿಪಾತ್ರ ನಾಯಿಯೆಇವರೊಟ್ಟಿಗೆ ವಿಹಾರಾರ್ಥವಾಗಿ ಬಂದಾಗಲೇ. ಕಸ ಗುಡಿಸುವವರೂ ಮನುಷ್ಯರು ಸ್ವಾಮಿ.
          ೪. ರಸ್ತೆ ಪಕ್ಕ ನಿಲ್ಲಿಸಿಟ್ಟ ವಾಹನಗಳಿಗೆ ಇವರ ನಾಯಿ ಪಿಚಕಾರಿ ಹಾರಿಸುತ್ತದೆಅದರ ಸಹಜ ಸ್ವಭಾವ. ವಾಸನೆಯಾಗುವುದಿಲ್ಲವೇ?ಲವಣದ್ರವದ ಅಭಿಷೇಕದಿಂದ ಕಬ್ಬಿಣ ತುಕ್ಕು ಹಿಡಿಯುವುದಿಲ್ಲವೇ?
          ೫. ಮನೆಗೆ ಬಂದ ನೆಂಟರೊಂದಿಗೆಕುಶಲೋಪರಿ ವಿಚಾರಿಸುವುದು ಬಿಟ್ಟು ತಮ್ಮ ನಾಯಿಯ (ತಮ್ಮಗೂ ಇಲ್ಲದ) ಬುದ್ಧಿವಂತಿಕೆಯ ವರ್ಣನೆಯಲ್ಲಿ ತೊಡಗುತ್ತಾರೆ.
          ೬. ಇವರ ನಾಯಿಯ ಬೊಗಳಾಟಅಕ್ಕ ಪಕ್ಕದವರ ನಿದ್ರೆ,ಮನಶ್ಶಾಂತಿಯನ್ನು ಭಂಗಗೊಳಿಸುತ್ತದೆ.
          ೭. ಇನ್ನು ಕೆಲವರು ನಾಯಿ ಬೊಗಳಬಾರದೆಂದು ಅದರ ಬಾಯಿಗೆ ಪಟ್ಟಿ ಬಿಗಿದುಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಹರಣಮಾಡುತ್ತರೆ.
          ೮. ಶ್ರಾವಣ ಮಾಸದ ನಾಯಿಗಳ ಸಹಜ ಮಿಲನ ಮಹೋತ್ಸವಕ್ಕೆ ಸಾಕುನಾಯಿಗಳಿಗೆ ಅವಕಾಶವೇ ಇಲ್ಲ. (ಇತ್ತೀಚೆಗೆ ನಗರದ ಬೀದಿನಾಯಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆಅವು ಮಾಸಧರ್ಮವನ್ನು ಪಾಲಿಸುವ ಬಗ್ಗೆ ಸಂಶಯ ಮೂಡುತ್ತದೆ. ಮನುಷ್ಯನ ಸಹವಾಸ ಏನೇನು ಬದಲಾವಣೆ ತರಬಹುದೋ?)
          ೯. sterilisation ಹೆಸರಿನಲ್ಲಿ ಗಂಡುನಾಯಿಗಳ ವೃಷಣ ಹರಣ ಮಾಡಲಾಗುತ್ತದೆಹೆಣ್ಣು ನಾಯಿಗಳ ಗರ್ಭಚೀಲವನ್ನೇ ಕೀಳಲಾಗುತ್ತದೆ.
          ೧೦. ಟ್ರೈನಿಂಗಿನ ಹೆಸರಿನಲ್ಲಿ ಅವುಗಳನ್ನು ಹಿಂಸಿಸಲಾಗುತ್ತದೆ.
          ೧೧. ಎರಡು ನಾಯಿಗಳು ಒಂದನ್ನೊಂದು ಕಂಡಾಗ ಗುರ್‌ಗುಡುತ್ತವೆಅವುಗಳ ಸಹಜ ಸ್ವಭಾವ. ನಾಯಿಮಾಲಿಕರು ತಮ್ಮ ತಮ್ಮ ನಾಯಿಗಳ ಬೆಂಬಲಕ್ಕೆ ನಿಲ್ಲುತ್ತನಡುರಸ್ತೆಯಲ್ಲೊಂದು ಸೀನ್ ಕ್ರಿಯೇಟ್ ಮಾಡುತ್ತಾರೆ. ನಾಯಿಗಳು ಸ್ನೇಹಿತರಾದರೂಒಡೆಯರ ಬಾಯಿ ನಿಲ್ಲುವುದಿಲ್ಲ. ಕೊನೆ ಎಲ್ಲಿ ಮುಟ್ಟುತ್ತೋ ?
          ೧೨. ಸುಂದರಾಂಗದ ಸುಂದರೀಯರು ಪಮೇರಿಯನ್ ನಾಯಿಗಳನ್ನು ಪಬ್ಲಿಕ್‍ನಲ್ಲಿ ಮುತ್ತಿಡುತ್ತ ಮುದ್ದಿಸುತ್ತಯುವಕರಲ್ಲಿ ’ಛೆ,ನಾನೂ ಈ ನಾಯಿಯಾಗಿ ಹುಟ್ಟಿದ್ದರೆ?’ ಎಂಬ ಹುಚ್ಚು ಹಗಲುಗನಸನ್ನು ಹೊತ್ತಿಸುತ್ತಾರೆ.
          ಇಂತಹ ಪಟ್ಟಿಮಾಡಿಮುಗಿಸಲಾಗದ ಸಾರ್ವಜನಿಕ ನಾಯಿಬಾಧೆಗೆ ಪರಿಹಾರವಿಲ್ಲವೇ?
          ಸಮಸ್ಯೆ ನಮ್ಮ ನಗರಗಳಲ್ಲಿ ಮಾತ್ರ ಇಲ್ಲ. ಅನೇಕ ಪಾಶ್ಚಾತ್ಯ ದೇಶಗಳು ಸಾಕುಪ್ರಾಣಿಗಳಿಗೆ ಸಂಭಂದಿಸಿದಂತೆ ತೆರತೆರನಾದ ಕಾನೂನುಗಳನ್ನು ಮಾಡಿವೆ. ಅಮೆರಿಕದ ಬಹುತೇಕ ರಾಜ್ಯಗಳಲ್ಲಿ,ಐರ್ಲೆಂಡ್ಇಂಗ್ಲಂಡ್ಆಸ್ಟೇಲಿಯಕೆನಡ ಮುಂತಾದ ದೇಶಗಳಲ್ಲಿ ನಾಯಿ ಸಾಕುವವರು ಕಡ್ಡಾಯವಾಗಿ ಲೈಸನ್ಸ್ ಪಡೆದಿರಬೇಕು. ಸಾಕುಪ್ರಾಣಿಗಳ ಆರೋಗ್ಯದ ಪ್ರಮಾಣಪತ್ರವನ್ನು ಹೊಂದಿರಬೇಕು. ಜರ್ಮನಿಯಲ್ಲಿ ನಾಯಿಸಾಕುವುದಕ್ಕೆ "dog tax" ಕೂಡ ಕಟ್ಟಬೇಕು. ಅದರಲ್ಲೂ ಡೇಂಜರಸ್ ಎಂದು ಪರಿಗಣಿಸಲ್ಪಡುವ ತಳಿಯ ನಾಯಿಗಳಿಗೆ ಟ್ಯಾಕ್ಸ್ ಜಾಸ್ತಿ. ನ್ಯೂಜಿಲ್ಯಾಂಡಿನಲ್ಲಂತೂ "Dog Control Act"ಎಂಬ ಬರೋಬ್ಬರಿ 80 ಆರ್ಟಿಕಲ್‍ಗಳುಳ್ಳ ಕಾನೂನೇ ಇದೆ. ಸಿಂಗಾಪುರದಲ್ಲಿ ಗಂಡು ನಾಯಿ ಹಾಗೂ sterilised ಹೆಣ್ಣು ನಾಯಿಗೆ$14 ತೆತ್ತು ಲೈಸನ್ಸ್ ಪಡೆದುಕೊಳ್ಳಬೇಕು. sterilised ಅಲ್ಲದ ಹೆಣ್ಣು ನಾಯಿಗಾದರೆ $70 ತೆರಬೇಕು (ಎಂತಹ ತಾರತಮ್ಯ ನೋಡಿ !). ಪ್ರತಿವರ್ಷ ಲೈಸನ್ಸನ್ನು renewal ಮಾಡಿಸಿಕೊಳ್ಳಬೇಕು. ಮೈಕ್ರೋಚಿಪ್ ಇರುವ ಕಾಲರನ್ನು ನಾಯಿಯ ಕುತ್ತಿಗೆಗೆ ಬಿಗಿಯಲಾಗುತ್ತದೆ. ನಾಯಿಯ ಹೆಜ್ಜೆಗಳನ್ನು GPS ಮುಖಾಂತರ ಹಿಡಿಯಬಹುದು! ಅನೇಕ ದೇಶಗಳಲ್ಲಿ ನಾಯಿಯು ಪಬ್ಲಿಕ್‍ನಲ್ಲಿ ಗಲೀಜು ಮಾಡುವುದುಬೇಕಾಬಿಟ್ಟಿ ಬೊಗಳುವುದು ಅಪರಾಧ. ಅದಕ್ಕಾಗಿ ನಾಯಿಯ ಮಾಲಿಕನನ್ನು ಶಿಕ್ಷಿಸಲಾಗುತ್ತದೆ. ನಾಯಿವಿಹಾರಿಗಳು ಜೊತೆಗೊಂದು ಪ್ಲಾಸ್ಟಿಕ್ ಬ್ಯಾಗ್ ಕೊಂಡೊಯ್ಯುತ್ತಾರೆ. ಬೀದಿಯಲ್ಲಿ ಅವರ ನಾಯಿ ಮಾಡಿದ ಗಲೀಜನ್ನು ಅವರೇ ಸ್ವಚ್ಛಗೊಳಿಸುತ್ತಾರೆಪಾಲಿಕೆಗಾಗಿ ಬಿಡುವುದಿಲ್ಲ ನಮ್ಮವರಂತೆ. (ಫಾರಿನ್ ದೇಶಗಳ ಉಲ್ಲೇಖಕ್ಕೆ ಕಾರಣವಿಷ್ಟೇನಮಗೆ ಅಮೆರಿಕ ಸಿಂಗಾಪುರಗಳೇ ಆದರ್ಶವಾಗಿವೆಯಲ್ಲಾ !!)
          ಅಂದರೆ ನಮ್ಮಲ್ಲೂ ಇಂತಹ ನಿಯಮಗಳ ಅಗತ್ಯ ಇದೆಯೇ ?
          ಕಾನೂನು ನಿಯಮಗಳೇನಿದ್ದರೂ ಅದನ್ನು ಆಚರಣೆಗೆ ತರುವ ಜನರ ಮಾನಸಿಕತೆಯನ್ನವಲಂಬಿಸಿರುತ್ತವೆ. ಕಾನೂನು ಶಿಕ್ಷೆಯ ಭಯವನ್ನು ಹುಟ್ಟಿಸಬಹುದೇ ಹೊರತು ಬದಲಾವಣೆಯನ್ನು ತರಲಾರದು. ಬದಲಾವಣೆಯ ಬೀಜವೇನಿದ್ದರೂ ಮನದಲ್ಲಿ ಮೊಳಕೆಯೊಡೆಯಬೇಕು. ವನಮಹೋತ್ಸವದ ಮೊದಲ ಸಸಿಯನ್ನು ಎದೆಯಲ್ಲಿ ನೆಡಬೇಕು ಎನ್ನುತ್ತಾರಲ್ಲಹಾಗೇ.
          ನಮ್ಮ ನಗರದ ಅಕ್ಷರಸ್ಥಆದರೂ ಅವಿದ್ಯಾವಂತರಂತಿರುವ ನಾಯಿಪ್ರೇಮಿ ನಾಗರಿಕರುಸ್ವಲ್ಪ responsible ಆಗಬಲ್ಲರೇ ?  

Tuesday, February 16, 2010

ಮನದಲ್ಲೇ ಉಳಿದ ಮನದ ಮಾತುಗಳು

          ಮನ ಮೇ ಹಿ ರಹ ಗಯೀ
          ಮನ ಕಿ ಬಾತ್
          ಜಬ್ ದೇಖೀ ಸೋಹನ ಶ್ಯಾಮ ಕೋ
          ಗೋಪಿಕೆಯೊಬ್ಬಳ ಅಳಲು ನೋಡಿ, ಶ್ಯಾಮನಲ್ಲಿ ತನ್ನ ಪ್ರೇಮವನ್ನು ನಿವೇದಿಸಲು ಬಂದಳು, ಆದರೆ ಆತನೆದರು ಏನನ್ನೂ ಹೇಳಲಾರಳು, ಮನದ ಮಾತುಗಳು ಮನದಲ್ಲೇ ಉಳಿದವು.

          ’ಪ್ರೇಮಿಗಳ ದಿನ’. ಈ ದಿನಕ್ಕಾಗಿ ಕಾದಿದ್ದವರೆಷ್ಟೋ? ತಮ್ಮ ಮನಸೆಳೆದವರಲ್ಲಿ ಮನದ ಪಿಸುಮಾತುಗಳನ್ನು ನಿವೇದಿಸಲೆಂದು ಕಾತರಿಸಿದವರೆಷ್ಟೋ? ದಿನಗಳನ್ನೆಣಿಸುತ್ತಿದ್ದವರೆಷ್ಟೋ? ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಜಿಮ್‍ಗಳನ್ನು, ಯೋಗ ತರಗತಿಗಳನ್ನು ಸೇರಿದವರೆಷ್ಟೋ? ಕನ್ನಡಿಯಮುಂದೆ, ಬಾತ್‍ರೂಮಿನಲ್ಲಿ ತಾಲೀಮು ನಡೆಸಿದವರೆಷ್ಟೋ? ಪ್ರೇಮಪತ್ರವನ್ನು ಬರೆದು, ಮತ್ತೆ ಮತ್ತೆ ತಿದ್ದಿ ತೀಡಿ ಹರಿದು ಗೀಚಿದವರೆಷ್ಟೋ? ಇನ್ನ್ಯಾರಿಂದಲೋ ಪ್ರೇಮಪತ್ರವನ್ನು ಬರೆಯಿಸಿಕೊಂಡು ಆಗಾಗ ತೆರೆದು ನೋಡಿ ಪುಳಕಗೊಂಡವರೆಷ್ಟೋ? internetನಲ್ಲಿ Love SMSಗಾಗಿ ತಡಕಾಡಿದವರೆಷ್ಟೋ?
          ಪ್ರೇಮಿಸಿದವರು, ಪ್ರೇಮಿಸದವರು ಹಾಗೂ ಪ್ರೇಮಿಸಬಯಸುವವರು ಕಾತರದಿಂದ ಕಾಯುತ್ತಿದ ಆ ದಿನ ಬಂದಿದೆ. ಕೆಲವರ ವಿರೋಧ; ಕೆಲವರ ಪರವಾದ; ಕೆಲವರಿಗೆ ನೈತಿಕತೆಯ; ಸಂಸ್ಕೃತಿಯ ರಕ್ಷಣೆಯ ಹೋರಾಟ; ಇನ್ನು ಕೆಲವರಿಗೆ ರಾಜಕೀಯದಾಟ; ವೃತ್ತಪತ್ರಿಕೆ, TV ಮಾಧ್ಯಮದವರಿಗೆ ಸುದ್ದಿಗಳ ಭೂರಿಊಟ; ಹೋಟೆಲ್, ಮಾಲ್, ಮಲ್ಟಿಪ್ಲೆಕ್ಸ್, ಬಾರ್, ಪಬ್‍ಗಳಿಗೆ ಬಂಪರ್ ವ್ಯಾಪಾರದ ಹಬ್ಬ; ಕೆಲವರಿಗೆ ಮೋಜು; ಕೆಲವರಿಗೆ ಕಾಮ; ಕೆಲವರಿಗೆ ನಿತ್ಯದಾಂಪತ್ಯಪ್ರೇಮದ ಬಾಳಿನ ಇನ್ನೊಂದು ದಿನ; ಇನ್ನು ಕೆಲವರು ಅವರದೇ ಆದ ಕನಸಿನ ಲೋಕದಲ್ಲಿರುವವರು, ಬಹುದಿನದಿಂದ ಕಾಯುತ್ತಿದ್ದವರು ಪ್ರಥಮ ಪ್ರೇಮನಿವೇದನೆಯ ಒಂಥರ adventurous ಕ್ಷಣಕ್ಕಾಗಿ.
          ಕೆಲವರು ಸಾಹಸಿಗರು. ಹೇಳಿಬಿಟ್ಟರು, ಪ್ರೇಮಪತ್ರವನ್ನು ಇನ್ನೊಂದು ಕೈಗೆ ದಾಟಿಸಿಬಿಟ್ಟರು, SMSನ್ನು ಕಳಿಸಿಬಿಟ್ಟರು. ಪರಿಣಾಮವನ್ನು ಕಂಡು ಕೆಲವರು ನಕ್ಕರು, ದಿನವಿಡೀ ನಲಿದರು. ಇನ್ನು ಕೆಲವರು ಹೊಕ್ಕರು ಬಾರಿನೊಳಗೆ, ತಮ್ಮ ಕೋಣೆಯೊಳಗೆ, ಹಾಸಿಗೆಯ ಮುಸುಕಿನೊಳಗೆ, ತಮ್ಮ ಭಾರದ ಎದೆಯೊಳಗೆ.
          ಇನ್ನು ಕೆಲವರು ತಮ್ಮ ಪ್ರೇಮವನ್ನು ನಿವೇದಿಸಲಾರರು. ಅವರು ಪರಿಣಾಮದ ಬಗ್ಗೆ ಭಯಗೊಂಡರು. ಅನುತ್ತೀರ್ಣಗೊಂಡರೆ? ನೋವನ್ನು ತಾಳಲಾರರು, ಉತ್ತೀರ್ಣರಾದರೆ? ಸಂತಸವನ್ನು ತಡೆಯಲಾರರು. initiative ಆ ಕಡೆಯಿಂದಲೇ ಆಗಲಿ ಎಂದುಕೊಂಡರು, ಮುಂಜಾನೆಯಿಂದ ಕಾದೇ ಕಾದರು; ಒಂದು phone callಗಾಗಿ, ಒಂದು SMSಗಾಗಿ. ಆಗಾಗ missed callಏನಾದರು ಇದೆಯೇ? ಎಂದು ನೋಡಿದರು, mobile network ಸರಿಯಾಗಿದೆಯೇ ಎಂದು ಆಗಾಗ confirm ಮಾಡಿಕೊಂಡರು. ಒಂದು ಕಡೆ ಶಾಂತಿಯಿಂದ ಕೂತಿರಲಾರರು, ಗಡಿಯಾರದ ಮುಳ್ಳುಗಳು ಒಮ್ಮೊಮ್ಮೆ ವೇಗವಾದಂತೆ, ಒಮ್ಮೊಮ್ಮೆ ನಿಧಾನವಾದಂತೆ ಅನ್ನಿಸುತ್ತಿತ್ತು. ಏನೋ ಒಂಥರದ ’ಮಧುರ ಯಾತನೆ’. ರಾತ್ರಿಯಾಗಿತ್ತು, ಮಲಗಿದರೆ ನಿದ್ದೆ ಹತ್ತಿರ ಸುಳಿಯಲೊಲ್ಲದು. ಮತ್ತೆ ಮತ್ತೆ ಕೈ ಮೊಬೈಲಿನತ್ತ ಚಾಚುತ್ತಿಲಿತ್ತು, ಅರೆನಿದ್ರೆಯಲ್ಲೂ.
          ಸೂರ್ಯ ಹೊಸಬೆಳಕ ಚೆಲ್ಲಿದ್ದ. ಮರುದಿನ ಪ್ರಾರಂಭವಾಗಿತ್ತು. ಅವರ ಮನದ ಮಾತುಗಳು ಮನದೊಳಗೇ ಉಳಿದಿದ್ದವು. ಮತ್ತೆ ಆ ದಿನಕ್ಕಾಗಿ ಅವರು ಇನ್ನೂ ಒಂದು ವರುಷ ಕಾಯಬೇಕು, ತಾಲೀಮು ನಡೆಸುತ್ತ.
          ಮನ ಮೇ ಹೀ ರಹ ಗಯೀ
          ಮನ ಕಿ ಬಾತ್

Tuesday, February 9, 2010

ಮನ ಪ್ರಕೋಷ್ಠೀಕರಣ

         ಒಂದು ಯುದ್ಧದ ಸಂದರ್ಭ. ಎಲ್ಲೆಲ್ಲೂ ಸೈನಿಕರ ಕೋಲಾಹಲ, ಚೀರಾಟ, ಅರಚಾಟ. ಹೆಂಗಸರೂ ಮಕ್ಕಳು ಎನ್ನದೇ ಸಿಕ್ಕಸಿಕ್ಕವರನ್ನೆಲ್ಲ ಯುದ್ಧಯಜ್ಞಕ್ಕೆ ಬಲಿಕೊಡಲಾಗುತ್ತಿತ್ತು. ಸೈನಿಕರು ವೈರಿದೇಶದ ಮನೆಮನೆಗಳನ್ನು ಶೋಧಿಸುತ್ತಿದ್ದರು. ಹೀಗೆ ಒಬ್ಬ ಸೈನಿಕ ಒಂದು ಮನೆಯೊಳಗೆ ನುಗ್ಗಿದ. ಅಲ್ಲೊಬ್ಬ ಮಧ್ಯವಯಸ್ಸಿನ ವ್ಯಕ್ತಿ ಮೂಲೆಯೊಂದರಲ್ಲಿ ಕುಳಿತು ಏನನ್ನೋ ಬರೆಯುತ್ತಿದ್ದ. ಸೈನಿಕನ ಜೋರಿನ ಧ್ವನಿ ಅವನನ್ನು ಎಚ್ಚರಿಸಲಿಲ್ಲ. ಸೈನಿಕ ತನ್ನ ಕೋವಿಯ ತುದಿಯಿಂದ ತಿವಿದು ಅವನನ್ನು ಎಚ್ಚರಿಸಿದ.
"ಯಾರು ನೀನು?  ಏನು ಮಾಡುತ್ತಿರುವೆ?" ಸೈನಿಕ ಅವನನ್ನು ಕೇಳಿದ.
"ನಾನೊಬ್ಬ ಕವಿ. ಕವಿತೆಯನ್ನು ರಚಿಸುತ್ತಿರುವೆ" ಆತ ಶಾಂತನಾಗಿಯೇ ಉತ್ತರಿಸಿದ. ಸೈನಿಕನಿಗೆ ಅತ್ಯಾಶ್ಚರ್ಯ.
"ಹೊರಗಡೆ ಇಷ್ಟೊಂದು ಯುದ್ಧದ ಕೋಲಾಹಲ ನಡೆಯುತ್ತಿದೆ. ಅದು ಹೇಗೆ ನೀನು ಇಲ್ಲಿ ಇಷ್ಟು ಶಾಂತನಾಗಿ ಕುಳಿತು ಕವಿತೆಯನ್ನು ರಚಿಸಬಲ್ಲೆ?"
ಆ ವ್ಯಕ್ಕ್ತಿ ನಸುನಗುತ್ತ ಉತ್ತರಿಸಿದ "ಮಿತ್ರ, ಯುದ್ಧದ ಕೋಲಾಹಲ ಇರುವುದು ಹೊರಗೆ, ನನ್ನೊಳಗಲ್ಲವಲ್ಲ?"
ಸೈನಿಕನ ಮನ ಕರಗಿತು, ಕವಿಗೆ ವಂದಿಸಿ ಅಲ್ಲಿಂದ ನಡೆದ. (ಎಂದೋ ಓದಿದ ಕತೆ,ಬಹುಶಃ ಶ್ರ‍ೀ ಷಡಕ್ಷರಿಯವರ ವಿಕದಲ್ಲಿ ಬರುವ "ಆಣಿಮುತ್ತು" ಅಂಕಣದಲ್ಲಿನದಿರಬಹುದು)
         ನಮ್ಮ ದಿನನಿತ್ಯದ ಬದುಕಿನ ಬಹುತೇಕ ಸಮಯವನ್ನು ಗೌಜು ಗದ್ದಲ ಕೋಲಾಹಲವಿರದ ಪರಿಸರದಲ್ಲಿ ಕಳೆಯುವುದು ಅಸಾಧ್ಯವೇ. ಎಲ್ಲಿ ಹೋದರು ಒಂದಲ್ಲ ಒಂದು ತರಹದ ಶಬ್ದ, ದಾಂಧಲೆ, ಕ್ಷೋಭೆ ಇದ್ದೇ ಇರುತ್ತದೆ. ನಮ್ಮ ಮನಸ್ಸನ್ನು ಒಂದು ಕೆಲಸದಲ್ಲಿ ನೆಲೆಗೊಳ್ಳಲು ಬಿಡದೇ ಅತ್ತಿತ್ತ ಎಳೆದಾಡುತ್ತಿರುತ್ತದೆ. ಕೆಲ ಸದ್ದು ಕೆಲವರಿಗೆ ಸಂಗೀತವಾದರೆ ಇನ್ನು ಕೆಲವರಿಗೆ ಅಪ್ರಿಯವಾಗಬಹುದು. ಆದರೆ ನಿಜವಾದ ಆನಂದವನ್ನು ಅರಸುವ ಪ್ರತಿಯೊಬ್ಬನೂ ಬಯಸುವುದು ಮನಶ್ಶಾಂತಿಯನ್ನು. ಮನಸ್ಸಿನ ಕ್ಷೋಭೆರಹಿತ ಸ್ಥಿತಿ ಮಾತ್ರ ಕಾರ್ಯದಕ್ಷತೆಯನ್ನು ಹೆಚ್ಚಿಸಬಲ್ಲದು, ಆನಂದದ ಅನುಭೂತಿಯನ್ನು ನೀಡಬಲ್ಲದು. ಕನ್ನಡದಲ್ಲಿ ಅವಧಾನಕಲೆಯನ್ನು ಪುನರುಜ್ಜೀವನಗೊಳಿಸಿದ ಶತಾವಧಾನಿ ಡಾ| ಆರ್. ಗಣೇಶರವರು ಅವಧಾನ ಪ್ರದರ್ಶನ ಸಂದರ್ಭದಲ್ಲಿ ಪ್ರಚ್ಛಕರ ಪ್ರಶ್ನೆ ನಿಬಂಧನೆಗಳ ನಡುವೆ, ಅದರಲ್ಲೂ ಅಪ್ರಸ್ತುತ ಪ್ರಸಂಗಿಯ ಪ್ರಶ್ನಕೋಲಾಹಲದ ನಡುವೆ, ಪ್ರೇಕ್ಷಕ ವರ್ಗದ ಸಂತೋಷದ ಕೇಕೆಯ ನಡುವೆ, ಹೇಗೆ ಅವಧಾನಿಯು ಹೊರಲೋಕದೊಡನೆ ಸರಸದಿಂದ ವ್ಯವಹರಿಸುತ್ತ ತನ್ನ ಒಳಮನದ ಶಾಂತಿಯನ್ನು ಕದಡಗೊಡದೇ ಇರಬೇಕು, ಎಂಬುದನ್ನು ತುಂಬ ಸುಂದರವಾಗಿ ವಿವರಿಸುತ್ತಾರೆ. (ಶ್ರೀ ಗಣೇಶರವರ "ಕನ್ನಡದಲ್ಲಿ ಅವಧಾನಕಲೆ" ಎಂಬ ಗ್ರಂಥವನ್ನು ನೋಡಬಹುದು, ಅದು ಅವರ ಡಿ. ಲಿಟ್. ಸಂಶೋಧನ ಪ್ರಬಂಧ ಕೂಡ ಹೌದು. ಅವಧಾನದ ಸಂದರ್ಭಗಳಲ್ಲಿ ರಚಿತವಾದ ಅನೇಕ ಅತ್ಯುತ್ತಮ ಕವಿತೆಗಳೂ ಈ ಪುಸ್ತಕದಲ್ಲಿವೆ).
         ಹೀಗೆ ಸುತ್ತಮುತ್ತಲ ವಿಕ್ಷೋಭೆಯಲ್ಲಿ ವ್ಯವಹರಿಸುತ್ತ, ಹೊರಜಗತ್ತಿನ ಗದ್ದಲ ಒಳಮನದ tranquilityಯನ್ನು ಪ್ರಭಾವಿಸದಂತೆ ತಡೆಯಬಲ್ಲೆವಾದರೆ, ಒಳಮನಸ್ಸಿನ ಶಾಂತಿಯನ್ನು, ತನ್ಮೂಲಕ ಆನಂದವನ್ನು ಸದಾ ಉಳಿಸಿಕೊಳ್ಳಬಲ್ಲೆವಾದರೆ, ಬದುಕು ಎಷ್ಟು ಸುಮಧುರ, ಅಲ್ಲವೇ? ಅಸಾಧ್ಯವೇನೂ ಅಲ್ಲ. ಭಗವದ್ಗೇತೆಯಲ್ಲಿ ಹೇಳಿದಂತೆ ಅಭ್ಯಾಸ ಹಾಗೂ ವಿಷಯಸುಖ ವೈರಾಗ್ಯದಿಂದ ಸಾಧ್ಯವಾಗಬಲ್ಲದು. ಪೂಜ್ಯ ಡಿವಿಜಿಯವರು ಕಗ್ಗದಲ್ಲಿ ’ಮನ ಪ್ರಕೋಷ್ಠೀಕರಣ’ದ(compartmentalization of mind) ’ವರಯೋಗಸೂತ್ರ’ವೊಂದನ್ನು ಹೇಳಿದ್ದಾರೆ.
        ಎರಡು ಕೋಣೆಗಳ ನೀಂ ಮಾಡುಮನದಾಲಯದಿ |
        ಹೊರಕೋಣೆಯಲಿ ಲೋಗರಾಟಗಳನಾಡು ||
        ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ |
        ವರಯೋಗಸೂತ್ರವಿದು - ಮಂಕುತಿಮ್ಮ ||

Saturday, February 6, 2010

"ಜಿಲೇಬಿ"ಯ ಮೆಲುಕು

ಒಟ್ಟೂ ಮೂವತ್ತೈದು ’ಜಿಲೇಬಿ’ಗಳಿರುವ ಪೊಟ್ಟಣ, ಕವಿ ಶ್ರೀ ಜಯಂತ ಕಾಯ್ಕಿಣಿಯವರ ಕವನ ಸಂಕಲನ ’ಒಂದು ಜಿಲೇಬಿ’. ಇದರಲ್ಲಿರುವ ’ಜಿಲೇಬಿ’ಗಳು ಒದ್ದಕ್ಕಿಂತ ಒಂದು ಸ್ವಾದಿಷ್ಟ. ಸೂಕ್ಷ್ಮಾತಿಸೂಕ್ಷ್ಮ, ಸಾಮಾನ್ಯ ಅಥವಾ ಕ್ಷುಲ್ಲಕ ಎನಿಸಬಹುದಾದ ವಸ್ತು, ವಿಷಯಗಳೂ ಒಂದು ಪ್ರಬುದ್ಧ ಸಂವೇದನಶೀಲ ಕವಿಮನಸ್ಸನ್ನು ತಟ್ಟಿದಾಗ ಹೇಗೆ ಆಕಾರ, ಸ್ವಾದವನ್ನು ಪಡೆಯಬಲ್ಲದು ಎಂಬುದನ್ನು ’ಜಿಲೇಬಿ’ಯ ತುಂಬ ಕಾಣಬಹುದು. ಇಲ್ಲಿನ ಕೆಲವು ಪಂಕ್ತಿಗಳು ನಾವು ಎಂದೋ ನೋಡಿದ  ದೃಶ್ಯವನ್ನು ಕಣ್ಣಮುಂದೆ ಮೂಡಿಸುತ್ತವೆ, ಇನ್ನು ಕೆಲವು ಬಾಲ್ಯದ ಯಾವುದೋ ನೆನಪನ್ನು ನೆನಪಿಸುತ್ತವೆ, ಮತ್ತೆ ಕೆಲವು ಬವಿಷ್ಯದ ಕನಸನ್ನು ಸ್ಫುರಿಸುತ್ತವೆ,  ಇನ್ನು ಕೆಲವು ಸಾಲುಗಳು ನಮ್ಮೊಳಗಿನ ಮುಗ್ಧತೆಯನ್ನು ಜಾಗ್ರತಗೊಳಿಸುತ್ತವೆ, ಒಂದು ತರಹದ ಅವ್ಯಕ್ತ ಆನಂದದಿಂದ, ಸಣ್ಣ ನೋವಿನಿಂದ ಕಣ್ಣುಗಳನ್ನು ತೇವಗೊಳಿಸುತ್ತವೆ, ಮನುಷ್ಯ ಮನುಷ್ಯರ ನಡುವಿನ ಸಂಬಂಧ ಬೆಸೆಯುವ ಸ್ನೇಹವನ್ನು ಎದೆಯಲ್ಲಿ ಚಿಮ್ಮಿಸುತ್ತವೆ.
ಉದಾಹರಣೆಗಾಗಿ ಒಂದೆರಡು ಪಂಕ್ತಿಗಳನ್ನು ನೋಡುವುದಾದರೆ...
’ಸುಂಕ’ ಎಂಬ ಕವನದ ಸಾಲುಗಳು
ಹಳೇ ಸಂಕ ಲಡ್ಡಾಗಿದೆ
ಅದರ ಮೇಲೆ ಬರೇ ತಂಗಾಳಿಯ ಪದಯಾತ್ರೆ
ಪಕ್ಕದಲ್ಲೇ ಹೊಸ ಸೇತುವೆ ವಾಹನಗಳಿಗೆ
ಈ ಸಾಲುಗಳು ಕಟ್ಟಿಕೊಡುವ ಚಿತ್ರವನ್ನು ನೋಡೋಣ, ಒಂದು ಹಳೆಯ ಸಂಕ; (ಸಂಕ ಅಂದರೆ ಸಣ್ಣ ಹೊಳೆಗೆ ಕಟ್ಟಿರುವ ಸೇತುವೆ, ಮರದ ದಿಮ್ಮಿಯನ್ನೋ, ಅಡಿಕೆ ಮರವನ್ನೋ ಅಡ್ಡಹಾಕಿ ಮಾಡಿರುತ್ತಾರೆ, ಕರಾವಳಿ/ಮಲೆನಾಡಿನ ಕಡೆ ಕಾಣಬಹುದು), ಅದರ ಪಕ್ಕದಲ್ಲಿ ಹೊಸದಾಗಿ ವಾಹನ ಸಂಚಾರಕ್ಕಾಗಿ ನಿರ್ಮಿಸಿರುವ ಹೊಸ ಸೇತುವೆ, ಹೊಸ ಸೇತುವೆ ತೆರೆದಿದ್ದರೂ ಹಳೆಯ ಸಂಕ ಇನ್ನೂ ಇದೆ, ಅದನ್ನು ಈಗ ಯಾರೂ ಬಳಸುತ್ತಿಲ್ಲ, ಅದರ ಮೇಲೆ ತಂಗಾಳಿ ಮಾತ್ರ ಬೀಸುತ್ತದೆ. ಮುಂದುವರಿಯುತ್ತ....
ಹಳೇ ಸಂಕದ ಕಂಬಗಳು ಇನ್ನೂ ಮಜಬೂತು
ಹೊಳೆ ಪೂರ್ತಿ ದಾಟಲು ಮನಸ್ಸಿಲ್ಲದೆ
ಅರ್ಧಕ್ಕೆ ನಿಂತು ನಗುವ ಅಜ್ಜನ
ಉಬ್ಬು ಧಮನಿಯ ಕಾಲುಗಳಂತೆ
ಇಲ್ಲಿ ನರಗಳು ಉಬ್ಬಿಕೊಂಡಿರುವ ಅಜ್ಜನ ಕಾಲುಗಳನ್ನು ಗಮನಿಸಿರುವ ಸೂಕ್ಷ್ಮತೆಯನ್ನು ಕಾಣಬಹುದು, ಹಾಗೆಯೇ ಸಂಕದ ಕಂಬಗಳನ್ನು ಅಜ್ಜನ ಸದೃಢ ಕಾಲುಗಳಿಗೆ ಹೋಲಿಸಿರುವುದು ತುಂಬ ಸ್ವಾರಸ್ಯಕರವಾಗಿದೆ.

’ಸಣ್ಣಸೊಲ್ಲು’ ಎಂಬ ಕವನ ನಮ್ಮ ದಿನನಿತ್ಯದ (ಹೆಚ್ಚಾಗಿ ಋಣಾತ್ಮಕ ವಿಚಾರ ಉಳ್ಳವರ)ಬದುಕಿನಲ್ಲಿ ಆಗಾಗ ಘಟಿಸುವ ’ತಾನೊಂದು ಬಗೆದರೆ.....’ ಎಂಬಂತಹ ವಿಷಯಗಳ ಸುತ್ತಮುತ್ತ ಸುತ್ತಿಕೊಂಡಿದೆ. ಉದಾಹರಣೆಗೆ
ಅಂಗಿ ಅಂಗಡಿಯಲ್ಲಿ ಅಳತೆಗಳ ರಗಳೆ
ಸರಿ ಸೈಜು ಸಿಕ್ಕಿದರೆ ಅಡ್ನಾಡಿ ಬಣ್ಣ
ಆದರೂ ಕೊಂಡು ನಡೆದರೆ ಅದಕೆ
ಮುಂದಿನಂಗಡಿಯಲ್ಲಿ ಅರ್ಧ ಬೆಲೆಯಣ್ಣ
ಈ ಸಾಲುಗಳಲ್ಲಿರುವ ತಿಳಿಹಾಸ್ಯವನ್ನು ಗಮನಿಸಬಹುದು.

’ಪೋರ’ ಎಂಬ ಕವನದ ಒಂದು ಸಾಲು
’ಶಾಲೆ ಬೇಗ ಬಿಡಿಸಿಕೊಂಡು ಬಂದವನಂತೆ ಚಿಮ್ಮಿ ಬರುವ...’
ನಮ್ಮ ಶಾಲದಿನಗಳಲ್ಲಿ ಅವಧಿಗೆ ಮೊದಲೇ ಹೊಟ್ಟೆನೋವು ಅಂತಲೋ, ಮನೆಗೆ ನೆಂಟರು ಬಂದಿದ್ದಾರೆ ಅಂತಲೋ ಅಥವಾ ಇನ್ಯಾವುದೋ ನೆವ ಹೇಳಿ ಮಾಸ್ತರರು/ಅಕ್ಕೋರು(ಸರ್/ಮ್ಯಾಡಮ್)ಗಳಿಂದ ಅನುಮತಿ ಪಡೆದು ಭತ್ತದ ಗದ್ದೆಬಯಲಿನ ಹಾಳಿಕಂಟ(ಬದು)ದ ಮೇಲೆ ಓಡಿ ಮನೆಗೆ ಬರುವ ಮಜ ಇತ್ತಲ್ಲ,  ಈ ಮೇಲಿನ ಸಾಲು ಮತ್ತೊಮ್ಮೆ ನಮ್ಮನ್ನು ಆ ಉತ್ಸಾಹಪೂರ್ಣ ಬಾಲ್ಯಕ್ಕೆ ಎಳೆದುಕೊಂಡುಹೊಗಿಬಿಡುತ್ತದೆ. ಹಳ್ಳಿಯ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಲಿತವರು ಇದನ್ನು ಅನುಭವಿಸಬಲ್ಲರು.

ಓದುವ ಮುನ್ನ.....
ಇಲ್ಲಿನ ಕವನಗಳಲ್ಲಿ ಕರಾವಳಿಯ ಪರಿಮಳ ಯಥೇಚ್ಛವಾಗಿದೆ, ಕೆಲವೆಡೆ ಕಾಮಾಟಿಪುರದ ಹುಡುಗಿಯ ಮನದ ಕಮಟಿದೆ, ನಗರದ ಬದುಕಿನ ವಾಸನೆಯಿದೆ. ಅನೇಕ ವಿಷಯಗಳು, ಶಬ್ದಗಳು(ಅಡ್ನಾಡಿ, ಪೋರ, ಶಾಲೆ ಬಿಡಿಸಿಕೊಂಡು... ಇತ್ಯಾದಿ) ಕರಾವಳಿಯ ಬದುಕಿನಲ್ಲಿ ಚಿರಪರಿಚಿತವಾದವು. ಕವಿಯ ಬದುಕಿನ ಹಾಗೂ ಕರಾವಳಿಯ ಪರಿಸರದ, ಜೀವನದ ಪರಿಚಯ ಉಳ್ಳವರು ಇಲ್ಲಿನ ಸಾಲುಗಳನ್ನು ಇನ್ನೂ ಆನಂದಿಸಬಲ್ಲರು. ಜಯಂತ ಗೋಕರ್ಣದ ಕಡಲ ಕಿನಾರೆಯ ಗಾಳಿ ಸೇವಿಸುತ್ತ ಬೆಳೆದವರು, ಮುಂಬಯಿ ಮಹಾನಗರದಲ್ಲಿ ಊಳಿಗ ಮಾಡಿದವರು, ಅನೇಕ ಊರುಗಳನ್ನು ಸುತ್ತಿದವರು. ಅವರ ಕವನಗಳನ್ನು ಆಸ್ವಾದಿಸುವ ಮೊದಲು, ಅವರದೇ ಆದ ಉತ್ಕೃಷ್ಟ ಬರಹಗಳ ಸಂಕಲನ ’ಬೊಗಸೆಯಲ್ಲಿ ಮಳೆ’ ಮತ್ತು ’ಶಬ್ದ ತೀರ’ಗಳನ್ನು ಓದಬಹುದು. ಕವನದಲ್ಲಿರುವ ಸಂಕೀರ್ಣತೆ ಮತ್ತು ಪ್ರತಿಮೆಗಳ ಬಳಕೆ ಗದ್ಯದಲ್ಲಿ ಕಡಿಮೆ ಇರುವುದರಿಂದ ಸುಲಭವಾಗಿ ಆನಂದಿಸಬಹುದು, ಹಾಗೆಯೇ ಕವನದ ಕೆಲ ಸಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಬಲ್ಲದು. ಉದಾಹರಣೆಗೆ ಕೀರ್ತಿಶೇಷರಾದ ಶ್ರೀ ಶಿವರಾಮ ಕಾರಂತರ ಮರಣದ ಸಂದರ್ಭದಲ್ಲಿ ಹುಟ್ಟಿದ ’ತೀರದ ಭಾರ್ಗವ’ ಎಂಬ ಕವನದ ಭಾವವನ್ನು ’ಬೊಗಸೆಯಲ್ಲಿ ಮಳೆ’ ಸಂಕಲನದ ’ಬಾಲವನದ ಒಂಟಿ ಜೋಕಾಲಿ’ ಎಂಬ ಲೇಖನದಲ್ಲಿ ಸ್ಪಷ್ಟವಾಗಿ ಕಾಣಬಹುದು.
’ಒಂದು ಜಿಲೇಬಿ’ ಕವನ ಸಂಕಲನ ಚಿತ್ರಾನ್ನ ತಿಂದಹಾಗೆ ಗಬಗಬನೆ ತಿಂದು, ಓದಿ ಮುಗಿಸುವ ಗ್ರಂಥವಲ್ಲ. ಜಿಲೇಬಿಯ ಒಂದೊಂದು ಕಾಲನ್ನು ಬಾಯಲ್ಲಿಟ್ಟು ಮೆಲ್ಲನೆ ಮೆಲುಕುತ್ತ ಅಸ್ವಾದಿಸುವಂಥದ್ದು.

Tuesday, February 2, 2010

ಅಡ್ಡಬಂದವಳು

ಆಕೆ ಇಂದು ಎರಡನೇ ಬಾರಿಗೆ ದಾರಿಗೆ ಅಡ್ಡಬಂದಳು. ಅಂದು ’ಅಂಕಲ್’ ಎಂದು ಸಂಬೋಧಿಸಿದ್ದಳು , "ಹೂವು ಬೇಕಾ?" ಎಂದು ಕೇಳಿದ್ದಳು, ನಡುಗುವ ಧ್ವನಿಯಲ್ಲಿ. ಅದುರುವ ಕೈ ಬಿಳಿ ಬಣ್ಣದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ನಿಂದ ಒಂದು ಮೊಳದಷ್ಟು ಕನಕಾಂಬರ ಹೂವಿನ ಮಾಲೆಯನ್ನು ಮೇಲಕ್ಕೆಳೆದಿತ್ತು. ನನ್ನ ನೊಡಿ ನಕ್ಕವು ಹೂಗಳು ಆಸೆಯಿಂದಲೋ? ಅಣಕಿಸಲೋ? ನಾನು ದೇವರಿಂದಲೂ ದೂರ, ಮುಡಿಯಿಂದಲೂ ದೂರ. ನನಗೇಕೆ ಹೂಮಾಲೆ? "ಬೇಡಮ್ಮಾ" ಎಂದೆ, ನಿಲ್ಲದೇ ಮುಂದೆ ನಡೆದೆ. ಆಕೆ ಅದುರುವ ಕೈಗಳಿಂದ ಒಂದು ಮೊಳ ಮೇಲಕೆಳೆದಿದ್ದ ಹೂಮಾಲೆಯನ್ನು ಪುನಃ ಪ್ಲಾಸ್ಟಿಕ್ಕಿನೊಳಗೆ ಸೇರಿಸಿದಳು, ನಡೆದಳು, ಮುಂದಿನ ಗಿರಾಕಿಯನ್ನು ಹುಡುಕುತ್ತ.
ಆಕೆ ನಿಜವಾಗಿಯೂ ಹೂವಾಡಗಿತ್ತಿಯೇ? ಕೈಯಲ್ಲಿ ಹಿಡಿದಿರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍ನಲ್ಲಿ ಅಬ್ಬಬ್ಬಾ ಎಂದರೆ ಎರಡು..ಎರಡೂವರೆ ಮಾರು ಉದ್ದದ ಕನಕಾಂಬರ ಹೂವಿನ ಮಾಲೆ ಇರಬಹುದು ಅಷ್ಟೆ. ಅದನ್ನು ಮಾರಿ ಬಂದ ಹಣ ಒಂದು ಪ್ಲೇಟ್ ಇಡ್ಲಿಗೂ ಸಾಲುವುದಿಲ್ಲ. ಬಹುಶಃ ಅದುರುವ ಕೈಗಳು ಮಾಲೆಯನ್ನು ಕಟ್ಟುತ್ತ ಸೋತಿರಬಹುದು.
ಇಂದು ಇನ್ನೊಮ್ಮೆ ದಾರಿಗಡ್ಡವಾದಳು. "ಅಣ್ಣಾ" ಎಂದು ಕರೆದಳು. ’ಅಂಕಲ್’ಗಿಂತ ’ಅಣ್ಣಾ’ ಎಂಬ ಸಂಬೋಧನೆ ಬೇರೆಯದೇ ಭಾವವನ್ನು ಹುಟ್ಟಿಸಿಬಿಡುತ್ತದೆ ಅಲ್ಲಾ? ನಾನು ಎರಡು ಹೆಜ್ಜೆ ಮುಂದೆ ಹೋಗಿ ನಿಂತು ಹಿಂತಿರುಗಿ ನೋಡಿದೆ. ಮತ್ತದೇ ಬಿಳಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಅದರೊಳಗೇ ಮತ್ತದೇ ಕನಕಾಂಬರ ಹೂವಿನ ಮಾಲೆ, ಅಷ್ಟೇ ಉದ್ದ ಅಬ್ಬಬ್ಬಾ ಅಂದರೆ ಎರಡೂವರೆ ಮಾರು ಇರಬಹುದು, ಮತ್ತದೇ ಭಂಗಿಯಲ್ಲಿ ಅದುರುವ ಕೈ ಒಂದು ಮೊಳ ಹೂಮಾಲೆಯನ್ನು ಮೇಲಕ್ಕೆಳೆದಿತ್ತು.
ಹಿಂತಿರುಗಿ ನಿಂತ ನನ್ನನ್ನು ನೋಡಿ "ಒಂದ್‍ನಿಮಿಷ, ಏನೂ ಮಾಡುವುದಿಲ್ಲ" ಎಂದಳು. ಹೀಗೇಕಂದಳು? ನಾನೇನು ಅವಳನ್ನು ನೋಡಿ ಭಯಗೊಂಡಂತೆ ಕಂಡೆನೇ? ಇರಲಿಕ್ಕಿಲ್ಲ. ರಸ್ತೆಯಲ್ಲಿ ನಡೆದವರನ್ನು ಅಡ್ಡಗಟ್ಟಿ ಹೂವು ಮಾರುವ ಅವಳ ಈ ವಿಲಕ್ಷಣ ವ್ಯಾಪಾರಿ ಪದ್ಧತಿಯಿಂದ, ಜನರು, ಅದರಲ್ಲೂ ಗಂಡಸರು ’ಈಕೆ ಮಾರುವುದು ಹೂವೋ?’ ಎಂದುಕೊಂಡು ಹುಬ್ಬೇರಿಸುವುದನ್ನು ಅನುಭವದಿಂದ ತಿಳಿದಿರಬಹುದು. ಈ ಹಿನ್ನೆಲೆಯಲ್ಲೇ ’ಸೆರಗ ಹಾಸುವೆ ಬಾ’ ಎಂದು ಕರೆದಿರಬಹುದು, ಎಂದು ನಾನಂದುಕೊಂಡೆ, ಎಂದು ಬಗೆದಳೋ? ಬಹುಶಃ ಸಂಬೋಧನೆ ’ಅಂಕಲ್’ನಿಂದ ’ಅಣ್ಣಾ’ ಎಂದು ಬದಲಾಗಲು ಇದೇ ಕಾರಣವೇನೋ?
ಏನೋ? ಆದರೆ ಧ್ವನಿ ಅಂದಿಗಿಂತ ಇಂದು ಇನ್ನೂ ಬೆದರಿದಂತಿತ್ತು, ಕ್ಷೀಣವಾಗಿತ್ತು. ಕಣ್ಣುಗಳನ್ನು ನೋಡಿದೆ. ನೀರ ಹನಿ ಅಂಚಿನಲ್ಲಿ ನಿಂತಿತ್ತು, ರೆಪ್ಪೆ ಬಡಿದು ತನ್ನನ್ನು ಉದುರಿಸಲೆಂದು ಕಾಯುತ್ತಿತ್ತು. ಆದರೆ ಇಂದು "ಹೂವು ಬೇಕೆ?" ಎಂದು ಕೇಳಲಿಲ್ಲ. ಮುಖಲಕ್ಷಣದಿಂದಲೇ ’ಇವನು ಇಂಥವನು’ ಎಂದು ಅಳೆಯುವ ವಿದ್ಯೆಯನ್ನು ’ವ್ಯಾಪಾರಿ’ ಅನುಭವ ಕಲಿಸಿರಬಹುದು. "ಅಣ್ಣಾ ಪರೀಕ್ಷೆಗೆ ಫೀಸು ತುಂಬೋಕೆ ನೂರು ರೂಪಾಯಿ...." ಮುಂದಿನ ಮಾತುಗಳು ಹೊರಬೀಳಲಿಲ್ಲ. ಸಣ್ಣಗೆ ಬಿಕ್ಕುತ್ತಿದ್ದಳು. ರೆಪ್ಪೆ ಬಡಿದಿದ್ದಳು, ಕಣ್ಣಂಚಿನ ಹನಿಗಳು ಕೆನ್ನೆಯ ಮೇಲೆ ಜಾರಿ ಇನ್ನೂ ಕಣ್ಣೀರ ಉತ್ಪತ್ತಿಗ ಸ್ಥಳಾವಕಾಶ ಮಾಡಿಕೊಟ್ಟಿದ್ದವು.
ಕಣ್ಣೀರಿಗೆ ಕರಗದ ಹೃದಯವಿದೆಯೇ? ಇರಬಹುದು! ಆದರೆ ನನ್ನಲ್ಲಿಲ್ಲ. ಅಷ್ಟರಲ್ಲೇ ನನ್ನ ಕೈ ಅಂಗಿ ಕಿಸೆಯಿಂದ ಒಂದು ನೋಟನ್ನು ಹೊರತೆಗೆದಿತ್ತು. ’ಸ್ವಲ್ಪ ಜಾಸ್ತಿಯಾಯ್ತು, ಹತ್ತು ಸಾಕು’ ಎಂದು ಬುದ್ಧಿ, ಬುದ್ಧಿಹೇಳಿತು. ಹತ್ತರ ನೋಟೊಂದು ನನ್ನ ಕಿಸೆಯಿಂದ ಆಕೆಯ ಕೈಸೇರಿತು. ಅದೇಕೋ ನೆಲದ ಕಡೆ ನೋಡಿದೆ, ಆಕೆಯ ಪಾದಗಳು ಕಂಡವು. ಪ್ರತಿಕಾಲಿನ ಎರಡು ಬೆರಳುಗಳನ್ನು ಬೆಳ್ಳಿಯ(ಬಣ್ಣದ) ಕಾಲುಂಗುರಗಳು ಅಲಂಕರಿಸಿದ್ದವು. ಮದುವೆಯಾಗಿರಬೇಕು.
ನಾನು ನನ್ನ ದಾರಿ ಹಿಡಿದೆ. ಆಕೆಗೆ ಅವಳ ದಾರಿ. ಫೀಸಿಗೆ ಇನ್ನೂ ತೊಂಭತ್ತು ರೂಪಾಯಿ ಕಡಿಮೆ ಇದೆಯಲ್ಲ. ನನ್ನಲ್ಲಿ ಉಳಿದಿದ್ದ ಐವತ್ತನ್ನೂ ಕೊಟ್ಟುಬಿಡಬೇಕಿತ್ತು. ಥತ್... ಇವಳ ಕಾಲಿಗೆ ಉಂಗುರ ಹಾಕಿಸಿದ ಗಂಡ ಯಾವನಪ್ಪಾ? ಶಿಖಾಮಣಿ. ’ಏನು ಪರೀಕ್ಷೆ?’ ಎಂದು ಕೇಳಲು ಮರೆತೆ. ಫೀಸ್ ತುಂಬಬೇಕಾದ ಪರೀಕ್ಷೆ ಇವಳಿಗೋ? ಇವಳ ಮಗುವಿಗೋ? ಅಯೋಗ್ಯ ಗಂಡನಿಗೋ? ನಿತ್ಯವೂ ತುಂಬಬೇಕಾದ ಹೊಟ್ಟೆಗೋ? ಅಥವಾ ಪರೀಕ್ಷೆ ನನಗೋ?

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...