Wednesday, March 31, 2010

ನಗುವೊಂದು ರಸಪಾಕ

          ಹಿಂದೆ ಚೀನಾ ದೇಶದಲ್ಲಿ ನಗುವ ಸಂತ(laughing monks)ರೆಂದೇ ಪ್ರಸಿದ್ಧರಾದ ಮೂವರು ಪರಿವ್ರಾಜಕರಿದ್ದರು. ಮೂವರು ಒಟ್ಟಿಗೆ ನಗುತ್ತ ನಗಿಸುತ್ತ ತಮ್ಮ ಜೀವಮಾನವನ್ನೇ ಕಳೆದರು. ಸಂತೆ, ಮಾರುಕಟ್ಟೆ ಮುಂತಾದ ಜನನಿಬಿಡ ಪ್ರದೇಶದಲ್ಲಿ ಎತ್ತರದ ಜಾಗವನ್ನು ಏರಿ ಮೂವರು ಅವರ ಪಾಡಿಗೆ ಅವರು ನಗುತ್ತಿದ್ದರು. ನಗು ಸಾಂಕ್ರಾಮಿಕ ಅನ್ನುತ್ತಾರಲ್ಲ, ಇವರನ್ನು ನೋಡಿ ಜನ ನಗುತ್ತಿದ್ದರು. ಕ್ರಮೇಣ ಅವರ ಪ್ರಸಿದ್ಧಿ ಬೆಳೆಯಿತು. ಅವರು ಹೋದಲ್ಲೆಲ್ಲ ನಗೆಯ ಅಲೆಗಳು ಏಳತೊಡಗಿದವು. ಈ ನಡುವೆ ಮೂವರಲ್ಲಿ ಓರ್ವ ಸಂತ ಮರಣಹೊಂದಿದ. ಸಾಯುವ ಮೊದಲು ನಾನು ಜೀವಮಾನದಲ್ಲಿ ಒಮ್ಮೆಯೂ ಸ್ನಾನ ಮಾಡಿಲ್ಲ, ಆದ್ದರಿಂದ ಚಿತೆಯಲ್ಲಿ ಸುಡುವ ಮೊದಲು ನನ್ನ ದೇಹಕ್ಕೆ ಸ್ನಾನ ಮಾಡಿಸಬಾರದು, ನಾನು ಉಟ್ಟ ಬಟ್ಟೆಯನ್ನು ಬಿಚ್ಚಬಾರದುಎಂದು ಆತ ಉಳಿದಿಬ್ಬರಿಗೆ ಸೂಚನೆ ಕೊಟ್ಟಿದ್ದ. ಸರಿ, ಆತನ ಇಚ್ಛೆಯಂತೇ ಸಾಗಿದ ಅಂತಿಮಕ್ರಿಯೆಯಲ್ಲಿ ಬಾರಿ ಜನಸ್ತೋಮ ನೆರೆದಿತ್ತು. ಚಿತೆಗೆ ಅಗ್ನಿಸ್ಪರ್ಶ ಮಾಡಿದೊಡನೆಯೆ ಚಿತೆಯಿಂದ ಡಂ ಡಂ ಎಂಬ ಸಿಡಿಮದ್ದುಗಳ ಸ್ಫೋಟದ ಶಬ್ದ ಹೊರಡಲಾರಂಬಿಸಿತು. ಜನ ಗಾಬರಿಯಾಗಿ ಅತ್ತಿತ್ತ ಓಡಿ ಅವಿತುಕೊಂಡು ನೋಡತೊಡಗಿದರು. ಆ ಸಂತ ತನ್ನ ಬಟ್ಟೆಯಲ್ಲಿ ಪಟಾಕಿಗಳನ್ನು ಬಚ್ಚಿಟ್ಟುಕೊಂಡಿದ್ದ. ನೋಡನೋಡುತ್ತಲೆ ಸಿಡಿಮದ್ದು ಸುಡುಬಾಣಗಳು ಸ್ಫೋಟಗೊಂಡು ಸದ್ದು ಮಾಡುತ್ತ, ಆಕಾಶದಲ್ಲಿ ಬೆಳಕಿನ ವಿವಿಧ ಚಿತ್ತಾರಗಳನ್ನು ಮೂಡಿಸುತ್ತ ಹಬ್ಬದ ವಾತಾವರಣವನ್ನು ಮೂಡಿಸಿಬಿಟ್ಟವು. ಜನ ಮತ್ತೆ ನಗತೊಡಗಿದರು. ಸಂತ ಸಾವಿನಲ್ಲೂ ನಗಿಸಿದ್ದ.
          "ನಗುವೊಂದು ರಸಪಾಕ......ನಗುವಾತ್ಮ ಪರಿಮಳವ ಪಸರಿಸುವ ಕುಸುಮ" ಎನ್ನುತ್ತಾರೆ ತಿಮ್ಮಗುರು ಡಿವಿಜಿ. ನಗುವುದು ನಗಿಸುವುದು ಸಜೀವ ಜೀವನದ ಲಕ್ಷಣ. ಮನುಷ್ಯನನ್ನು ಹೊರತು ಸೃಷ್ಟಿಯ ಉಳಿದ ಯಾವ ಜೀವಿಯೂ ನಗುವ ಭಾಗ್ಯವನ್ನು ಪಡೆದು ಹುಟ್ಟಿಲ್ಲ. ಸದಾ ಮುಖ ಗಂಟಿಕ್ಕಿಕೊಡಿರುವ ಸಿಟ್ಟು ಸಿಡುಕಿನ, ಕಟ್ಟುನಿಟ್ಟಿನ ವ್ಯಕ್ತಿಯೂ ಒಂದಲ್ಲ ಒಂದು ಸಾರಿ ನಕ್ಕಿರುತ್ತಾನೆ. ಒಂದು ಸಣ್ಣ ಘಟನೆ, ಮಾತು, ಜೋಕು, ಚಿತ್ರ, ಸನ್ನಿವೇಶ, ದೃಶ್ಯ ನಗುವನ್ನು ಚಿಮ್ಮಿಸಬಲ್ಲದು. ಆದರೂ ಕೆಲವೊಮ್ಮೆ ನಗುವುದು ಅಷ್ಟೊಂದು ಕಷ್ಟವೇ ಅನ್ನಿಸಿಬಿಡುತ್ತದೆ, ಉದಾಹರಣೆಗೆ ನಗರಗಳಲ್ಲಿನ ನಗೆಯೋಗ ಕೂಟಗಳಲ್ಲಿ ಮುದುಕರನ್ನು ನೋಡಿದಾಗ. ಚಪ್ಪಾಳೆ ಹಾಕುತ್ತ rythemic ಆಗಿ ನಗಲು ಪ್ರಯತ್ನಿಸಿದರೂ ನಗು ಮಾತ್ರ ಅವರಿಂದ ದೂರ ದೂರ ಸಾಗುತ್ತಿರುತ್ತದೆ, ಅವರನ್ನು ನೋಡುತ್ತಿರುವವರ ಬಳಿಗೆ. ಒಮ್ಮೊಮ್ಮೆ ನಾನೇಕೆ ಒಂದೆರಡು ಜೋಕುಗಳನ್ನು ಹೇಳಿ ಸ್ವಲ್ಪ ನಗಿಸಲು ಪ್ರಯತ್ನಿಸಬಾರದು ಅಂದುಕೊಳ್ಳುತ್ತೇನೆ. ಮುದುಕರ ಸಹವಾಸ ಅಂದುಕೊಂಡು ಸುಮ್ಮನಾಗುತ್ತೇನೆ (ಸೀನಿಯರ್ ಸಿಟಿಜೆನ್‍ಗಳು ಬೇಜಾರು ಮಾಡಿಕೊಳ್ಳಬೇಡಿ, ಸುಮ್ಮನೆ ಕಿಚಾಯಿಸುವುದಕ್ಕೆ ಹೇಳಿದ್ದು)
          ಎಲ್ಲ ಸರಿ, ನಾವೇಕೆ ನಗುತ್ತೇವೆ?
          ಯಾಕೆ ಅಂದರೆ? ನಗು ಬರುತ್ತದೆ, ನಗ್ತೀವಪ್ಪ.
          ಅದೇ ನಗು ಯಾಕೆ ಬರುವುದು ಅಂತ?
          ತಾರ್ಕಿಕ(logical)ವಾಗಿ ಗ್ರಹಿಸುತ್ತಿರುವ ಬುದ್ದಿಗೆ ಒಮ್ಮೆಲೆ ಅತಾರ್ಕಿಕವಾದ ತಿರುವೊಂದು ಎದುರಾದಾಗ ನಗು ಹುಟ್ಟುತ್ತದೆ. ಉದಾಹರಣೆಗೆ ನಗೆಹನಿಯನ್ನು ತೆಗೆದುಕೊಳ್ಳೋಣ. ಯಾವುದೇ ಕಥೆಯಾಗಲೀ, ಜೋಕಾಗಲೀ ಅದರ ಬಹುಮುಖ್ಯ ಅಂಶ ಮುಂದೇನಾಗುತ್ತದೆ ಎಂಬ ಕುತೂಹಲ, element of curiosity. ಕುತೂಹಲದಿಂದಾಗಿ ನಮ್ಮ ಬುದ್ಧಿ ಯಾವುದೇ ಒಂದು ವಿಷಯವನ್ನು ತಾರ್ಕಿಕವಾಗಿ ಹಿಂಬಾಲಿಸುತ್ತ ಗ್ರಹಿಸುತ್ತ ಅದರೊಟ್ಟಿಗೆ ಸಾಗುತ್ತಿರುತ್ತದೆ, ’ಮುಂದೆ ಇದಾಗಬಹುದುಎಂದು expect ಮಾಡುತ್ತ, logical ಆಗಿ ಊಹಿಸುತ್ತ ಇರುತ್ತದೆ. expectation, suspenseನಿಂದಾಗಿ ಒಂದು ರೀತಿಯ ಸಣ್ಣ tension, ಒತ್ತಡದ ನಿರ್ಮಾಣವಾಗುತ್ತದೆ. ವಿಷಯ ತಾರ್ಕಿಕವಾಗಿ ಕೊನೆಗೊಂಡರೆ ಒತ್ತಡ ನಿಧಾನವಾಗಿ ಇಳಿದು ಬಿಡುತ್ತದೆ. ಆವಾಗ ಜೋಕು "ಜೋಕ್" ಅನ್ನಿಸಿಕೊಳ್ಳುವುದಿಲ್ಲ. ಆದರೆ ಒಮ್ಮೆಲೆ ವಿಷಯ ಅತಾರ್ಕಿಕ ತಿರುವು ಪಡೆದರೆ, illogical, irrational turn ತೆಗೆದುಕೊಂಡರೆ, ತಾರ್ಕಿಕ ಬುದ್ದಿ ಊಹಿಸಲಾರದ್ದು, ಗ್ರಹಿಸಲಾರದ್ದು ನಡೆದರೆ, ಒಮ್ಮೆಲೆ ಒತ್ತಡ ಸ್ಫೋಟಗೊಡುಬಿಡುತ್ತದೆ, accumulated tension ಒಮ್ಮೆಲೆ  ಸಡಿಲ(relax)ಗೊಂಡುಬಿಡುತ್ತದೆ. relaxation ನಗೆಯಾಗಿ ಚಿಮ್ಮುತ್ತದೆ.
          ಇಷ್ಟೆಲ್ಲ ಕತೆ ಹೇಳಿ ಒಂಚೂರೂ ನಗೆಯಿಲ್ಲದಿದ್ದರೆ ಹೇಗೆ!
          ಅಲ್ಲಿಲ್ಲಿಂದ ಎತ್ತಿದ ಒಂದೆರಡು ನಗೆಮಾತ್ರೆಗಳ ಸ್ಯಾಂಪಲ್‍ಗಳು, ನಿಮಗಾಗಿ, ನಕ್ಕುಬಿಡಿ ಕೊಂಚ !!
         
.       ವಿವಾಹಾಕಾಂಕ್ಷಿ ತರುಣಿಯೊಬ್ಬಳು ನಿತ್ಯ ದೇವಸ್ಥಾನಕ್ಕೆ ಹೋಗುತ್ತಿದ್ದಳು, ದೇವರನ್ನು ಭಕ್ತಿಯಿಂದ ಪ್ರಾರ್ಥಿಸುತ್ತಿದ್ದಳು. ಒಂದು ದಿನ ದೇವರಿಗೆ ಕರುಣೆ ಬಂತು, ಪ್ರತ್ಯಕ್ಷನಾದ, ’ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ಮಗಳೇ, ನಿನಗೇನು ವರ ಬೇಕು, ಕೇಳುಎಂದ.
          ಓ ದೇವರೆ, ಒಬ್ಬ ಒಳ್ಳೆ ತಿಳುವಳಿಕೆ ಉಳ್ಳ ಹುಡುಗ ನನ್ನ ಗಂಡನಾಗುವಂತೆ ಹರಸುಎಂದು ಬೇಡಿದಳು ತರುಣಿ
          ಅದೊಂದನ್ನು ಬಿಟ್ಟು ಬೇರೆ ವರವನ್ನು ಕೇಳು ಮಗಳೆಎಂದ ದೇವರು
          ತರುಣಿ ಹಠ ಮಾಡಿದಳು ವರವನ್ನು ಕೊಡಲಾಗದುದಕ್ಕೆ ಕಾರಣ ಕೇಳಿದಳು
          ದೇವರೆಂದ ಯಾಕೆಂದರೆ, "ತಿಳುವಳಿಕೆ" ಉಳ್ಳವರು ಯಾರೂ ಮದುವೆಯಾಗುವುದಿಲ್ಲ ಮಗಳೆ

       ಬೀchiಯವರ ಒಂದಿಷ್ಟು ಸಾಲುಗಳು
          "ಬೇರೆ ಅಂಗಡಿಗೆ ಹೋಗಿ ಮೋಸಹೋಗಬೇಡಿ, ನಮ್ಮ ಅಂಗಡಿಗೇ ಬನ್ನಿ" ಒಂದು ಅಂಗಡಿಯ ಮುಂದಿನ ಬೋರ್ಡು

          ವಿದ್ಯಾರ್ಥಿಯಾದ ತಿಂಮ ಮಾಸ್ತರರಿಂದ ವಾರದ ಆರುದಿನವು ಪೆಟ್ಟುತಿನ್ನುತ್ತಿದ್ದ. ಇದಕ್ಕೆ ಕಾರಣ ತಿಮ್ಮನ ದಡ್ಡತನವೋ ಮಾಸ್ತರರ ಅಭ್ಯಾಸಬಲವೋ!

          ಅನೇಕರು ಅನೇಕ ಬಗೆಯ ಜೀವನೋಪಾಯಗಳನ್ನು ಹುಡುಕಿಕೊಳ್ಳುತ್ತಾರೆ. ಕೆಲವರು ಮದುವೆಯಾಗಿಬಿಡುತ್ತಾರೆ. ಶ್ರೀಮಂತ ಮಾವ ದೊರೆತರೆ.

          ಬೆಳೆದು ನಿಂತಿದ್ದ ಮಗಳನ್ನು ತಿಂಮ ಕೇಳಿದ, ’ಅಮ್ಮ ನಿನಗೆ ಎಂಥ ಗಂಡ ಬೇಕಮ್ಮ, ನೀನು ಯಾರನ್ನು ಮದುವೆಯಾಗಿತ್ತೀಯ?’
          ಒಬ್ಬ ’ಪ್ರಾಮಣಿಕ’ ’ವಕೀಲ’ನನ್ನಾದರೆ ಮದುವೆಯಾಗುತ್ತೇನಪ್ಪಎಂದಳು ಮಗಳು.
          ತಿಂಮ ಗಾಬರಿಯಾಗಿ ಹೇಳಿದ ಅಯ್ಯೋ, ಇಬ್ಬಿಬ್ಬರನ್ನು ಹೇಗೆ ಮದುವೆಯಾಗಕ್ಕಾಗುತ್ತೇ?’

          ವಕೀಲರ ಬಗ್ಗೆ ಒಂದು ಮಾತಿದೆ "ತೊಂಭತ್ತೊಂಭತ್ತು ಪ್ರತಿಶತ ವಕೀಲರು ಮಿಕ್ಕುಳಿದವರಿಗೆ ಕೆಟ್ಟ ಹೆಸರು ತರುತ್ತಾರೆ"  (99% lawyers bring bad name to the remaining)

       ಓಶೋ ಜೋಕು ಹೇಳುವುದರಲ್ಲಿ ನಿಸ್ಸೀಮರು, ಒಂದು ಸ್ಯಾಂಪಲ್ ಇಲ್ಲಿದೆ
          ಒಬ್ಬ ಹುಡುಗ ಒಂದು ಆಕಳನ್ನು ಹೊಡೆದುಕೊಂಡು ಹೊರಟಿದ್ದ. ದಾರಿಯಲ್ಲಿ ಅವನ ಶಾಲೆಯ ಮಾಸ್ತರರು ಎದುರಾದರು. ದನಕಾಯುತ್ತಿರುವ ತಮ್ಮ ವಿದ್ಯಾರ್ಥಿಯನ್ನು ಕಂಡು ಕೇಳಿದರು. ’ಆಕಳನ್ನು ಹೊಡಕೊಂಡು ಎಲ್ಲಿಗೆ ಹೊರಟಿದ್ದಿ?’
          ಆಕಳಿಗೆ ನೆಸೆ ಬಂದಿದೆ, ಎತ್ತಿನ ಹತ್ತಿರಕ್ಕೆ ಕರಕೊಂಡ್ ಹೊಂಟಿದೀನಿಹುಡುಗ ಉತ್ತರಿಸಿದ
          ಯಾಕೆ? ನಿಮ್ಮಪ್ಪ ಆ ಕೆಲಸ ಮಾಡಕಾಗಲ್ವಾ?’ ಎಂದು ಮಾಸ್ತರರು ಸ್ವಲ್ಪ ಕೋಪದಲ್ಲೇ ಕೇಳಿದರು.
          ಹುಡುಗ ಸ್ವಲ್ಪ ವಿಚಾರ ಮಾಡಿ ಉತ್ತರ ಹೇಳಿದ
          ಆಗಲ್ಲ, ಎತ್ತೇ ಬೇಕು

Tuesday, March 30, 2010

ಬೆಂಗಳೂರಿಗರಿಗೆಲ್ಲಿ ಬೆಳದಿಂಗಳ ಭಾಗ್ಯ?

          ಕವಿ ರವೀಂದ್ರನಾಥ ಟಾಗೂರರು ಒಮ್ಮೆ ತಮ್ಮ ಕೋಣೆಯಲ್ಲಿ ಮೊಂಬತ್ತಿಯ ಬೆಳಕಿನಲ್ಲಿ ಏನನ್ನೋ ಓದುತ್ತ, ಇನ್ನೇನನ್ನೋ ಚಿಂತಿಸುತ್ತ ಕುಳಿತಿದ್ದರು. ಮೊಂಬತ್ತಿಯ ಮೇಣ ಕರಗಿ ಜ್ವಾಲೆ ಆರಿಹೋಯಿತು, ಕೋಣೆಯಲ್ಲಿ ಕತ್ತಲು ವ್ಯಾಪಿಸಿತು. ಆಗ ಕಿಟಕಿಯ ಸಂದಿನಿಂದ ಕೋಣೆಯೊಳಗೆ ಇಣುಕಿದ ಬೆಳದಿಂಗಳ ಎಳೆಯೊಂದು ರವೀಂದ್ರರನ್ನು ಸೆಳೆಯಿತು. ಕೋಣೆಯಿಂದ ಹೊರಬಂದ ರವೀಂದ್ರರ ಕವಿಹೃದಯ ಬೆಳದಿಂಗಳ ಸೊಬಗಿಗೆ ಸಂಪೂರ್ಣ ಸೂರೆಗೊಂಡಿತು. ಕವಿ ತನ್ನನ್ನು ತಾನು ಮರೆತರು. ಹುಣ್ಣಿಮೆಯ ಹಾಲುಬೆಳದಿಂಗಳಿಗೆ ಸೋಲದ ಮನೆವೆಲ್ಲಿದೆ ಹೇಳಿ. ಅಂತಹ ಸೋತ ಮನವೇ ಗೀತಾಂಜಲಿಯಂತಹ ಮೇರು ಕೃತಿಯನ್ನು ಸೃಷ್ಟಿಸಬಲ್ಲದು. ಪ್ರೇಮಕವಿಗಳನ್ನು ಬೆಳದಿಂಗಳು ಕಾಡಿದಷ್ಟು ಇನ್ನಾರೂ ಕಾಡಿರಲಿಕ್ಕಿಲ್ಲ. ತನ್ನ ಕಂದನಿಗೆ ಉಣ್ಣಿಸುವಾಗಲೂ ಅಮ್ಮನಿಗೆ ಆ ಚಂದಮಾಮನೇ ಬೇಕು.
          ಆದರೆ ಕೋಣೆಯಲ್ಲಿನ ಮೊಂಬತ್ತಿ ಇಷ್ಟು ಹೊತ್ತು ಬೆಳದಿಂಗಳ ಬೆಳಕನ್ನು ಮರೆಮಾಡಿತ್ತಲ್ಲ.
          ಬೆಂಗಳೂರಿನಂತಹ ನಗರಪ್ರದೇಶಗಳಲ್ಲಿ, ಸಂಜೆ ಆರುಗಂಟೆಗೆ, ಇನ್ನೂ ಸೂರ್ಯನ ಬಿಸಿಲು ಚೆಲ್ಲುತ್ತಿದ್ದರೂ ಮನೆ ಒಳಗೆ, ಹೊರಗೆ, ಬಣ್ಣಬಣ್ಣದ ಅಲಂಕಾರಿಕ ದೀಪಗಳು, ಬೀದಿದೀಪಗಳು, ವಾಹನಗಳ ದೀಪಗಳು, ಹೈಮಾಸ್ಕ್ ಲಾಂಪ್‍ಗಳು, ಹೆಲೊಜಿನ್ ಲೈಟ್‍ಗಳು ಒಂದೊದಾಗಿ ಹೊತ್ತಿಕೊಳ್ಳುತ್ತವೆ. ವಿದ್ಯುತ್ತಿಗೆ ಎಷ್ಟೇ ತತ್ವಾರವಿದ್ದರೂ ರಾತ್ರಿಯಿಡೀ ಲಕ್ಷದೀಪೋತ್ಸವ ನಡೆಯುತ್ತದೆ. ಸೂರ್ಯನೊಡನೆಯೇ ಸ್ಪರ್ಧೆಗಿಳಿಯುವ ಈ ಬೆಳಕಿನ ಮುಂದೆ ಚಂದಮಾಮನ ಬೆಳದಿಂಗಳ ಆಟವೆಲ್ಲಿ ನಡೆದೀತು? ಬೆಳದಿಂಗಳನ್ನೇ ಕಾಣದೇ, ಅದರ ಸೊಬಗನ್ನ ಅನುಭವಿಸದೇ ತಮ್ಮ ಜೀವಮಾನವನ್ನೇ ಕಳೆದ ನಗರವಾಸಿಗಳೆಷ್ಟೋ? ಬೆಂಗಳೂರಿಗರಿಗೆಲ್ಲಿ ಬೆಳದಿಂಗಳ ಭಾಗ್ಯ? ಇನ್ನು ಹೊಟ್ಟೆಪಾಡಿಗೆಂದು ಕೆಟ್ಟು ಪಟ್ಟಣ ಸೇರಿದವರು ಹಳ್ಳಿಗಳಲ್ಲಿ ಕಳೆದ ತಮ್ಮ ಬಾಲ್ಯದ ದಿನಗಳಲ್ಲೇ ಬೆಳದಿಂಗಳ ನೆನಪನ್ನು ಬಗೆಯಬೇಕು.
          ಸ್ವಲ್ಪ ವಿಷಯಾಂತರ ಮಾಡೋಣ,
          ಸ್ಸ್ಕೂಲು-ಹೈಸ್ಕೂಲುಗಳ ಪರೀಕ್ಷೆಗಳು ಮುಗಿದಿವೆ. ಇಷ್ಟು ದಿನ ಪರೀಕ್ಷಾಗ್ರಸ್ತರಾಗಿದ್ದ ನಗರದ ಹುಡುಗರು ಅಲ್ಲಲ್ಲಿ ಮನೆ ಅಪಾರ್ಟ್‍ಮೆಂಟ್‍ಗಳ ಮುಂದಿನ ರಸ್ತೆಯಲ್ಲಿ ಬ್ಯಾಟು ಬಾಲು, ಹಿಡಿದು ಕಾಣಿಸಿಕೊಳ್ಳುತ್ತಿದ್ದಾರೆ. ಕೆಲದಿನಗಳು ಅಷ್ಟೆ. ನಂತರ ಅವರನ್ನು ಬೇಸಿಗೆ ಶಿಬಿರ summer campಗಳಿಗೋ, ಇನ್ಯಾವುದೋ brain gymಗೋ, ಕರಾಟೆ ಕ್ಲಾಸಿಗೋ, ಹೆಣ್ಣುಮಕ್ಕಳಾದರೆ ಸಂಗೀತ, ನೃತ್ಯದ ಕ್ಲಾಸುಗಳಿಗೋ, ಚಿತ್ರಕಲೆಯ ವರ್ಗಗಳಿಗೋ, ಇಲ್ಲಾ ಮುಂದಿನ ವರ್ಷದ ವಿಷಯಗಳ ಟ್ಯೂಶನ್ನಿಗೋ ಅಟ್ಟಲಾಗುತ್ತದೆ. ಬೇಸಿಗೆ ಪ್ರವಾಸ ಅಂದರೂ ಒಂದೆರಡು ದಿನ ಅಪ್ಪ-ಅಮ್ಮ ಯಾವುದೋ ದೇವಸ್ಥಾನದ ಊರಿಗೋ ಇಲ್ಲ ಇನ್ಯಾವುದೋ ಪ್ರವಾಸಿ ಸ್ಥಳಕ್ಕೋ ಕರೆದುಕೊಂಡು ಹೋಗಿ ಮುಗಿಸಿಬಿಡುತ್ತಾರೆ. ಕಲಿಯಲಿ. ಕರಾಟೆ, ಸಂಗೀತ, ನೃತ್ಯ, ಚಿತ್ರಕಲೆಗಳೂ ಮನುಷ್ಯನ ವಿಕಾಸಕ್ಕೆ ಅಗತ್ಯ. ಆದರೆ ಸಾವಿರಾರು ರೂಪಾಯಿ ತೆತ್ತು ಮಕ್ಕಳನ್ನು ಶಿಬಿರ ಟ್ಯೂಶನ್‍ಗಳಿಗೆ ಸೇರಿಸಿದ ಮಾತ್ರಕ್ಕೆ ಮನಸ್ಸು ಬೆಳೆಬಲ್ಲದೇ? ಬುದ್ಧಿಯ ಸರ್ವಾಂಗೀಣ ವಿಕಾಸವಾಗಬಲ್ಲದೇ?
          ಬೇಸಿಗೆಯ ರಜೆಯಲ್ಲಿ ಗಾಳಹಾಕಿ ಕಾದುಕುಳಿತಿರುವ ನಗರಗಳ ನೂರೆಂಟು ಶಿಬಿರಗಳನ್ನು ಬಿಟ್ಟು, ನಮ್ಮ ಮಕ್ಕಳನ್ನು ಹಳ್ಳಿಗಳಲ್ಲಿರುವ ಅಜ್ಜನ ಮನೆಯೋ, ಅಜ್ಜಿಯ ಮನೆಯೋ, ಮಾವ, ಅತ್ತೆ, ದೊಡ್ಡಮ್ಮ, ಚಿಕ್ಕಮ್ಮನ ಅಥವ ಸಂಭಂದಿ ಸ್ನೇಹಿತರ ಮನೆಗೋ ಒಂದೆರಡು ವಾರ ಕಳುಹಿಸಬಹುದಲ್ಲ?
          ಸ್ಕೂಲ್ ವ್ಯಾನಗಳಲ್ಲಿ, ಆಟೋಗಳಲ್ಲಿ ಮುದುಡಿಕುಳಿತು ಶಾಲೆಗೆ ಹೋಗುವ ನಮ್ಮ ಮಕ್ಕಳು ಹಳ್ಳಿಯ ಸ್ವಚ್ಛಂದ ಬಯಲಿನಲ್ಲಿ ಒಮ್ಮೆ ಓಡಾಡಲಿ, ನಾಲ್ಕು ಗೋಡೆಗಳ ಮಧ್ಯೆ ಸದಾ ತಮ್ಮ ತಮ್ಮ ಕೆಲಸದಲ್ಲೇ ನಿರತರಾಗಿರುವ ಅಪ್ಪ ಅಮ್ಮರನ್ನು ಸ್ವಲ್ಪ ದಿನ ಬಿಟ್ಟು ಇತರ ಸಂಭಂದಿಗಳ ಸ್ನೇಹ ಪ್ರೀತಿಯನ್ನೂ ಕೆಲದಿನ ಸವಿಯಲಿ. ಹಳ್ಳಿಯ ಹುಡುಗ ಹುಡುಗಿಯರೊಡನೆ ಸ್ಕೂಲ್‍ಗಳ ಟೀಚರುಗಳ ಭಯವಿಲ್ಲದೇ ಸವಿಗನ್ನಡದಲ್ಲಿ ಬಾಯ್ತುಂಬ ಹರಟೆಹೊಡೆಯಲಿ. ಗುಡ್ಡಗಳ ಕರಿಬಂಡೆಗಳ ಮೇಲೆ ಕುಣಿದಾಡಲಿ, ಎತ್ತರದ ಬೆಟ್ಟದ ಮೇಲೆ ನಿಂತು ಕಿಟಾರನೆ ಕಿರುಚಲಿ, ಹಾಗೆ ಕಿರುಚಿದ ಧ್ವನಿಯ ಪ್ರತಿಧ್ವನಿಗೆ ಒಮ್ಮೆ ಬೆಚ್ಚಿ ಬೀಳಲಿ, ವಿಸ್ಮಯಗೊಳ್ಳಲಿ. ಮರಗಳ ಕೊಂಬೆಗಳ ಮೇಲೆ ಹಳ್ಳಿಯ ಗೆಳೆಯ ಗೆಳತಿಯರೊಡನೆ ಮಂಗಗಳಂತೆ ಜಿಗಿದಾಡಲಿ. ಅಡಿಕೆ ಮರಹತ್ತುವ ಕೊನೆಗೌಡನನ್ನು ಕಂಡು ತಾನೂ ಹತ್ತುತ್ತೇನೆಂದು ಹೋಗಿ, ಜಾರಿ ಬಿದ್ದು ತೊಡೆ ತೆರೆಚಿಕೊಳ್ಳಲಿ. ಮಾವು, ಪೇರಲ, ಹಲಸು, ಜಂಬೆ, ಸಕ್ಕರೆ ಕಂಚಿ, ನೇರಳ, ಸಂಪಿಗೆ ಹಣ್ಣುಗಳನ್ನು ತಾವೇ ಮರದಿಂದ ಕಿತ್ತು ತಿನ್ನಲಿ. ಮಾವಿನ ಮರಕ್ಕೆ ಕಲ್ಲು ಹೊಡೆದಾಗ ರಟ್ಟೆಯಲ್ಲಿ ಆಗುವ, ಆಡುವಾಗ ಬಿದ್ದು ಮಂಡಿಯಲ್ಲಿ ಗಾಯ ಮಾಡಿಕೊಂಡಾಗ ಆಗುವ ಮಧುರ ನೋವನ್ನು ಅನುಭವಿಸಲಿ. ಹಸಿಗೇರುಬೀಜ ಸುಲಿಯಲು ಹೋಗಿ ಕೈಯೆಲ್ಲ ಕಲೆ ಮಾಡಿಕೊಳ್ಳಲಿ, ಹಲಸಿನ ಮೇಣವನ್ನು ತುಟಿಗೆ ಬಡಿದುಕೊಂಡು ಗುದ್ದಾಡಲಿ. ಮಾವಿನ ಸೊನೆಯನ್ನು ಮೂಗಿಗೆ ಬಡಿದುಕೊಂದು ಹುಣ್ಣೆಬ್ಬಿಸಿಕೊಳ್ಳಲಿ. ಬಯಲುಸೀಮೆಯ ಹತ್ತಿ ಸೂರ್ಯಕಾಂತಿ ಬೆಳೆದು ಕಟಾವು ಮಾಡಿದ ಬಟಾಬಯಲಿನಲ್ಲಿ ಕುಣಿದಾಡಿ ಧೂಳನ್ನೆಬ್ಬಿಸಲಿ. ಬಯಲಿನಲ್ಲಿ ಕಣ್ಣಳತೆಗೂ ನಿಲುಕದ ದೂರದಲ್ಲಿ ಆಕಾಶ ಭೂಮಿ ಸೇರುವಲ್ಲಿ ಸೂರ್ಯನ ಉದಯವನ್ನು ಅಸ್ತವನ್ನು ಕಣ್ಣಲ್ಲಿ ತುಂಬಿಕೊಳ್ಳಲಿ, ವಿಶಾಲ ಬಯಲಿನ ನಟ್ಟನಡುವೆ ಹಾದುಹೋಗುವ ರೈಲು ಟ್ರಾಕಿನ ಹಳಿಯ ಮೇಲೆ ಬ್ಯಾಲೆನ್ಸ್ ಮಾಡುತ್ತ ನಡೆಯಲಿ. ಈಗಷ್ಟೇ ನೆಟ್ಟಿರುವ ಕಬ್ಬಿನ ಗದ್ದೆಯ ಬದುವಿನ ಮೇಲೆ ನಿಧಾನ ನಡೆಯಲಿ. ಸಮುದ್ರದ ದಂಡೆಯ ಮೇಲೆ ಮರಳಿನ ಗುಹೆ ತೋಡಲಿ. ಮರಳಿನ ಮೇಲೆ ತಮ್ಮ ಹೆಸರನ್ನು ಬರೆದು ಅಲೆಯೊಂದು ಬಂದು ಅದನ್ನು ಅಳಿಸುವುದನ್ನು ಕಂಡು ಕುಣಿಯಲಿ, ಮರಳಿನ ಮೇಲೆ ಹೊರಳಾಡಲಿ. ಮಟ ಮಟ ಮಧ್ಯಾಹ್ನ ಬಾಯಾರಿ ಮನೆಗೆ ಓಡಿ ಬಂದಾಗ ಸಿಗುವ ತಂಪಾದ ಬೆಲ್ಲ ಬೆರೆಸಿದ ಮಜ್ಜಿಗೆಯ ರುಚಿಯನ್ನು ಸವಿಯಲಿ. ಬೆಳಬೆಳಿಗ್ಗೆ ಹಾಸಿಗೆಯಿಂದ ಏಳುವ ಮೊದಲೆ ಅಡುಗೆ ಮನೆಯಿಂದ ಬರುವ "ಸುಂಯ್" ಎನ್ನುವ ದೋಸೆ ಎರೆಯುವ ಸದ್ದನ್ನು ಕಿವಿತುಂಬಿಸಿಕೊಳ್ಳಲಿ. ಆಕಳ ಕೆಚ್ಚಲಿಗೆ ಬಾಯಿಟ್ಟು ಹಾಲಿನ ನೊರೆಯೆಬ್ಬಿಸುವ, ಹಾಲುಂಡು ಛಂಗನೆ ನೆಗೆಯುವ ಕರುವಿನ ಉತ್ಸಾಹವನ್ನು ಕಂಡು ನಲಿಯಲಿ. ಸಂಜೆಯಹೊತ್ತಿಗೆ ಮೆಂದು ಮನೆಯ ಕಡೆ ಹೊರಡುವ ದನಕರುಗಳು ನಡೆದು ಮಾಡಿದ ದಾರಿಗುಂಟ ನಡೆಯಲಿ. ಮಧ್ಯಾಹ್ನದ ವೇಳೆ ಬಯಲುಸೀಮೆಯ ಕೆಸರು ಹೊಂಡಗಳಲ್ಲು ಮುಳುಗಿ, ತಲೆಯನ್ನಷ್ಟೇ ಮೇಲೆತ್ತಿ ಬುಸ್ಸೆಂದು ಉಸಿರು ಬಿಡುವ ಎಮ್ಮೆ ಕೋಣಗಳಂತೆ ನಿಟ್ಟುಸಿರು ಬಿಡಲಿ. ತಿಳಿನೀರ ಹಳ್ಳ ಕೆರೆಗಳ ತಳದಲ್ಲಿ ಕುಳಿತಿರುವ ಕೆಸರನ್ನು ಕುಣಿದಾಡಿ ಮೇಲೆಬ್ಬಿಸಲಿ. ಸಂಜೆಯ ಹೊತ್ತಿಗೆ ಪಂಪ್‍ಸೆಟ್ಟಿನ ಪೈಪಿನಿಂದ ಬರುವ ನೀರಿನ ಧಾರೆಗೆ ತಲೆಕೊಟ್ಟು ಸ್ನಾನ ಮಾಡಲಿ. ಯಾರೂ ಇಲ್ಲದ ಊರಿನ ದೇವಸ್ಥಾನದ ಮೈಲಿಯಲ್ಲಿ ಬೇಕಾದಷ್ಟು ಬಾರಿ ಸುತ್ತು ಹೊಡೆಯಲಿ. ಊರಿನ ಹಬ್ಬ ಜಾತ್ರೆ ಪೇಟೆಗಳಲ್ಲಿ ಗೆಳೆಯರ ಕೈ ಕೈ ಹಿಡಿದು ಓಡಾಡಲಿ, ದೇವರ ಪಲ್ಲಕ್ಕಿಯ ಹಿಂದೆ ಇಡೀ ಊರನ್ನು ಸುತ್ತಲಿ. ಬಣ್ಣಬಣ್ಣದ ಬಾಂಬೆ ಮಿಠಾಯಿ, ಆಯ್ಸ್ ಕ್ಯಾಂಡಿಗಳನ್ನು ಸವಿಯಲಿ. ಜಾತ್ರೆ ಪೇಟೆಯಲ್ಲಿ ರಾಗಿನೀರು, ಎಳ್ಳುನೀರು, ನಿಂಬೆ ಪಾನಕ ಕುಡಿದು ತಂಪಾಗಲಿ. ಕೆಂಡ ಹಾಯುವವನ ಸಾಹಸವನ್ನು ಕಂಡು ಅಚ್ಚರಿಗೊಳ್ಳಲಿ. ರಾತ್ರಿ ನಿದ್ದೆಗಣ್ಣಲ್ಲಿ ಒಬ್ಬರೆ ಉಚ್ಚೆ ಹೊಯ್ಯಲೆಂದು ಮನೆಯಮುಂದಿನ ತೆಂಗಿನ ಮರದ ಬಳಿಗೆ ಬಂದಾಗ ಬೆಳದಿಂಗಳಲ್ಲಿ ದೂರದ ಗಿಡದ ನೆರಳೊಂದು ಅಲುಗಿದಾಗ, ದೂರದಲ್ಲಿ ನಾಯಿಯೋ, ನರಿಯೋ ಕೂಗಿದಾಗ ಭೂತ ಎಂದು ಭಾವಿಸಿ ಸಣ್ಣಗೆ ಬೆವರಲಿ. ಮುಸ್ಸಂಜೆಯ ಮುನ್ನ ಕಾದಿರುವ ನೆಲದ ಮೇಲೆ ಪಟಪಟನೆ ಉದುರುವ ಮಳೆಹನಿ ಎಬ್ಬಿಸುವ ಮಣ್ಣಿನ ಪರಿಮಳವನ್ನು ಮೂಗಿನ ತುಂಬ ತುಂಬಿಕೊಳ್ಳಲಿ. ... ... ... .. .. ನಗರದ ಹೊರಗೂ ಬದುಕಿದೆ ಎಂದು ಸ್ವಲ್ಪವಾದರೂ ತಿಳಿಯಲಿ.
          ಇವೆಲ್ಲ ಅನುಭವಗಳಿಂದ ದೂರವಿಟ್ಟು ನಗರವಾಸಿಗಳು ತಮ್ಮ ಮಕ್ಕಳಿನ್ನು ವಂಚಸುತ್ತಿದ್ದಾರೆ ಅನ್ನುಸುವುದಿಲ್ಲವೇ?
          ನಮ್ಮ ಮಕ್ಕಳು ಬೆಳದಿಂಗಳನ್ನು ಕಾಣದೇ ತಮ್ಮ ಬಾಲ್ಯವನ್ನು ಕಳೆಯುವಂತಾಗಬಾರದು ಅಲ್ಲ

Monday, March 22, 2010

ಸಾತ್ತ್ವಿಕ ಸುಳ್ಳು

          ’ಅಶ್ವತ್ಥಾಮೋ ಹತಃ ಇತಿ, ನರೋ ವಾ ಕುಂಜರೋ ವಾ’; ಆ ಧರ್ಮರಾಜನ ಬಾಯಿಂದಲೇ ಕೃಷ್ಣ ಅರ್ಧಸತ್ಯವನ್ನು ಹೇಳಿಸಿದನಲ್ಲ. ಧರ್ಮರಾಜನಿಗೆ ಗೊತ್ತಿತ್ತು, ಭೀಮ ಕೊಂದಿದ್ದು ಅಶ್ವತ್ಥಾಮ ಎಂಬ ಹೆಸರಿನ ಆನೆಯನ್ನು ಎಂದು. ಆದರೂ ’ನರೋ ವಾ ಕುಂಜರೋ ವಾ’ ಎಂದು ಸಣ್ಣ ಧ್ವನಿಯಲ್ಲಿ ಹೇಳಿದ. ಅದನ್ನೂ ಕೃಷ್ಣ ತನ್ನ ಪಾಂಚಜನ್ಯದ ಧ್ವನಿಯಿಂದ ಮರೆಮಾಚಿಸಿದ. ಸುಳ್ಳು ದ್ರೋಣನಿಗೆ ಸತ್ಯವಾಗಿ ಕೇಳುವಂತೆ ಮಾಡಿದ. ಪರಿಣಾಮ ದ್ರೋಣನಿಗೆ ತನ್ನ ಮಗನ ಚಿರಂಜೀವತ್ವದ ಮೇಲೆಯೇ ನಂಬಿಕೆಯಿರದಾಯಿತು. ಸೇನಾಪತಿತ್ವದ ಕರ್ತವ್ಯಕ್ಕಿಂತ ಪುತ್ರಮೋಹವೇ ಮೇಲಾಯಿತು. ಕುರುಕ್ಷೇತ್ರ ಯುದ್ಧದ ನಡೆಯೇ ಬದಲಾಯಿತು.
          ನಾವೆಲ್ಲರೂ ಹೇಳಿರುತ್ತೇವೆ, ಸುಳ್ಳನ್ನು. ಸುಳ್ಳಿಗೇ ಹೆಸರುವಾಸಿಯಾದ ರಾಜಕಾರಣಿಗಳನ್ನು ಬಿಡಿ, ’ಸತ್ಯದೊಂದಿಗೆ ಪ್ರಯೋಗ’ವನ್ನೇ ಮಾಡಿದ ಮಹಾತ್ಮಾ ಗಾಂಧಿಯವರೂ ಹೇಳಿರುತ್ತಾರೆ. ಹಾಗೆ ನೋಡಿದರೆ ಕವಿ ಹೇಳುವುದು ಸುಳ್ಳಿನ ಕಂತೆ. ಹೇಗೆ ಕೇಳುವಿರಾ? ಕವಿಯ ಅಭಿವ್ಯಕ್ತಿಯ ಹೆಚ್ಚಿನ ಭಾಗ ಕಲ್ಪನೆ, ಅಂದರೆ ಅವಾಸ್ತವ, ಅಂದರೆ ವಸ್ತುಸ್ಥಿತಿಯಲ್ಲಿ ಇಲ್ಲದಿರುವುದು, not existing in reality, ಅಸತ್ಯ, ಸುಳ್ಳು! ಸುಳ್ಳಿರದೇ ವಕೀಲೀ, ಜ್ಯೋತಿಷ್ಯ, ವ್ಯಾಪಾರಾದಿ ವೃತ್ತಿಗಳು ನಡೆಯಲು ಸಾಧ್ಯವೇ? ನಮ್ಮ ನಮ್ಮ ಮೇಲಧಿಕಾರಿಗಳಲ್ಲಿ ನಾವೇ ಎಷ್ಟು ಸುಳ್ಳುಗಳನ್ನು ಹೇಳಿಲ್ಲ? ಇನ್ನು ’ದೇವರು’ ಮತ್ತು ಅವನಿಗೆ/ಅವಳಿಗೆ/ಅದಕ್ಕೆ ಇರುವ (ನಾವು ಇಟ್ಟಿರುವ) ಅಗಣ್ಯ ನಾಮ ರೂಪಾದಿಗಳಿಗಿಂತ ಬೇರೆ ದೊಡ್ಡ ಸುಳ್ಳು ಬೇಕೇ? (ಪ್ರಪಂಚವನ್ನು ನಡೆಸುತ್ತಿರುವ, ಪ್ರಪಂಚವೇ ಆಗಿರುವ ಅವಚನೀಯ ಚೈತನ್ಯದ ಬಗ್ಗೆಯೇನು ನನ್ನ ತಕರಾರಿಲ್ಲ)
          ಆದರೆ...
          ನಮ್ಮ ನಡುವೆಯೇ ಓಡಾಡುತ್ತಿರುವ, ಒಮ್ಮೊಮ್ಮೆ ನಮ್ಮ ಜೀವನದ ಭಾಗವೇ ಎನ್ನಬಹುದಾದ ಕೆಲ ವರ್ಗದ ಸುಳ್ಳುಗಳಿಗೆ ಒಳ್ಳೆಯ ಉದ್ಧೇಶವಿರುತ್ತದೆ. ಅಮ್ಮ ಹಾಲುಕುಡಿಯದ, ಅನ್ನವುಣ್ಣದ, ಮಲಗದ ಕಂದನಿಗೆ ’ಗುಮ್ಮ ಬರುತ್ತಾನೆ, ನಿನ್ನ ಎತ್ತಿಕೊಂಡು ಒಯ್ಯುತ್ತಾನೆ’ ಎಂದು ಸುಳ್ಳು ಹೇಳಿ ಸಂಭಾಳಿಸುತ್ತಾಳೆ. ಮರಣಶಯ್ಯೆಯಲ್ಲಿ ಮಲಗಿರುವ ರೋಗಿಗೆ, ಆತನ ಬಂಧುವರ್ಗದವರಿಗೆ, ’ಏನಿಲ್ಲ, ಸಣ್ಣ ಕಾಯಿಲೆ, ಗುಣವಾಗುತ್ತೆ’ ಎಂದು ವೈದ್ಯ ಸುಳ್ಳು ಸಮಾಧಾನವನ್ನು ಹೇಳುತ್ತಾನೆ. ಫೋನ್ ಮಾಡಿದ ಸ್ನೇಹಿತನೋ, ಅಪರೂಪಕ್ಕೆ ಮನೆಗೆ ಬಂದ ಅತಿಥಿಯೋ ಆರೋಗ್ಯ ಕುಶಲ ವಿಚಾರಿಸಿದಾಗ ಬೆಳಿಗ್ಗೆಯಷ್ಟೆ ಟೈಫಾಯ್ಡ್ ಜ್ವರದಿಂದ ಎದ್ದಿದ್ದರೂ, ಮನೆತುಂಬ ತಾಪತ್ರಯವೇ ತುಂಬಿದ್ದರೂ ಆರೋಗ್ಯವಾಗಿ ಸಂತೋಷದಿಂದ ಇರುವಂತೆ ತೋರಿಸಿಕೊಳ್ಳುತ್ತೇವೆ, ನಮ್ಮ ಸಮಸ್ಯೆಗಳನ್ನು ತೋರಗೊಡದೇ. performance ಅತ್ಯಂತ ಖರಾಬ್ ಆಗಿದ್ದರೂ ಗಾಯಕ, ವಾದಕ, ನಟ, ನರ್ತಕ, ಭಾಷಣಕಾರ, ಕ್ರೀಡಾಪಟು ಮುಂತಾದವರನ್ನು ಎದುರು ತೆಗಳುವುದಿಲ್ಲ, ಬದಲಿಗೆ ’you have done great’ ಎಂದು ಸುಳ್ಳೇ ಹೊಗಳಿಬಿಡುತ್ತೇವೆ. ’ಸಾವಿರ ಸುಳ್ಳನ್ನು ಹೇಳಿಯಾದರೂ ಒಂದು ಮದುವೆ ಮಾಡು’ ಎಂಬ ಗಾದೆಮಾತೇ ಇದೆಯಲ್ಲ.
          ಇತ್ಯಾದಿ ಇತ್ಯಾದಿ
          ಇಂತಹ ’ಸಾತ್ತ್ವಿಕ’ ಉದ್ಧೇಶ ಹೊಂದಿದ ’ಸುಳ್ಳು’ಗಳನ್ನು ಏನೆಂದು ಕರೆಯೋಣ ?
          "ಸಾತ್ತ್ವಿಕ ಸುಳ್ಳು" !!!

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...