Friday, November 22, 2013

ಪಟಗಾರ ಮಾಸ್ತರ್‍ರ ನೆನಪಿನಲ್ಲಿ

ಪಟಗಾರ ಮಾಸ್ತರ್‍ರು ತೀರಿಕೊಂಡ್ರಂತೆ ಎನ್ನುವ ಸುದ್ದಿ ಕೇಳಿದಾಗ ಇಪ್ಪತ್ತು ವರ್ಷಗಳ ಹಿಂದಿನಿಂದ ನೆನಪುಗಳು ಒತ್ತರಿಸಿ ಎದ್ದು ಬಂದವು. ಪಟಗಾರ ಮಾಸ್ತರರು ನಮ್ಮೂರು ವಾಲಗಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬರಾಬ್ಬರಿ ಹನ್ನೆರಡು ವರ್ಷ ಸರ್ವೀಸ್ ಮಾಡಿದವರು. ಅವರ ಪ್ರಭಾವ ಎಷ್ಟೂ ಅಂದರೆ ಇಂದಿಗೂ ನಮ್ಮೂರ ಶಾಲೆಯಲ್ಲಿ ಒಂದು ಕೋಣೆಗೆ 'ಪಟಗಾರ ಮಾಸ್ತರ್‍ರ ಕೋಲಿ' ಎಂದೇ ಕರೆಯಲಾಗುತ್ತದೆ. ಅವರ ಮನೆ ಇರುವುದು ಕುಮಟ ಹತ್ತಿರದ ಹಂದಿಗೋಣನಲ್ಲಿ. ನಮ್ಮೂರಿನಿಂದ ಹಂದಿಗೋಣ ರಸ್ತೆಯಲ್ಲಿ ದಾರಿಯಲ್ಲಿ ಎಂಟರಿಂದ ಹತ್ತು ಕಿಲೋಮೀಟರ ದೂರ ಇದೆ. ಕಾಲುದಾರಿಯಲ್ಲಿ, ಅಥವಾ ಒಳದಾರಿಯಲ್ಲಿ ಸುಮಾರು ನಾಲ್ಕರಿಂದ ಐದು ಕಿಲೋಮೀಟರ ಆಗಬಹುದು. ಈ ಒಳದಾರಿಯ ಬೇಲಿ ಪಾಗಾರದಂಚಿನ ಕಿರುಹಾದಿಯಲ್ಲಿ ದಣಪೆ, ಸೊರಗೋಲು(ಒಂದು ತರಹದ ಗೇಟ್)ಗಳನ್ನು ದಾಟಿ, ಹಾಳಿಕಂಟ (ಭತ್ತದ ಗದ್ದೆಯ ಬದು) ಕಾಲುಸಂಕಗಳ ಮೇಲೆ ನಡೆದು, ಅಲ್ಲೇ ಬೇಲಿಹಾರಿ ಗದ್ದೆಗಿಳಿಯಲು ನೋಡುತ್ತಿರುವ ಕಳ್ಳದನವನ್ನು ಓಡಿಸಿ, ಅಡಿಕೆ ತೋಟದ ದಾರಿಯಲ್ಲಿ ಬಿದ್ದ ಸೋಗೆಯನ್ನು ಕಾಲಿನಲ್ಲೇ ಬದಿಗೆ ಸರಿಸಿ, ಕರಾವಳಿಯ ಜಡಿಮಳೆಯಲ್ಲಿಯೂ ಕಾಟನ್ ಹೊದಿಕೆಯ ಬಂದೂಕು ಕೊಡೆ ಹಿಡಿದು, ಸಾಧಾರಣ ಚಳಿಗೂ ಮಪ್ಲರ ತೊಟ್ಟು, ಬೇಸಿಗೆಯ ಸುಡುಬಿಸಿಲಿನಲ್ಲಿ ತಲೆಗೆ ಕರ್ಚೀಪು ಸುತ್ತಿ ಹನ್ನೆರಡು ದೀರ್ಘ ವರ್ಷಗಳ ಕಾಲ ತಪ್ಪದೇ ಶಾಲೆಗೆ ಕಾಲ್ನಡಿಗೆಯಲ್ಲೇ ಬಂದು ನಮ್ಮೂರ ಮಕ್ಕಳಿಗೆ ಅಕ್ಷರ, ಮಗ್ಗಿ, ಲೆಕ್ಕ, ಹಾಡು ಕಲಿಸಿದವರು ಪಟಗಾರ ಮಾಸ್ತರ್‍ರು. ಅವರು ಐದು ಕಿಲೋಮೀಟರು ನಡೆದು ಬಂದರು ಒಂದು ದಿನವೂ ಬೆಳಿಗ್ಗೆ ಎಂಟುಗಂಟೆಯ ಪ್ರಾರ್ಥನೆಗೆ ತಡವಾಗಿ ಬಂದದ್ದನ್ನು ಕಂಡವರಿಲ್ಲ. ಮಧ್ಯಾಹ್ನ ಹಂದಿಗೋಣದವರೆಗೆ ಹೋಗಿಬರಲು ಸಮಯ ಮತ್ತು ತ್ರಾಣ ಸಾಕಾಗದೇ ಇರುವುದರಿಂದ ಹನ್ನೊಂದು ಗಂಟೆಗೆ ಶಾಲೆಯ ಬೆಳಗಿನ ಅವಧಿ ಮುಗಿದು ಮಕ್ಕಳು ಮತ್ತು ಉಳಿದ ಮಾಸ್ತರರು ಅಕ್ಕೋರುಗಳು ಮನೆಗೆ ಹೋದಮೇಲೆ ಪ್ಯಾಂಟು ಕಳಚಿ ಲುಂಗಿಯಟ್ಟು ಚಿಮಿಣಿ (ಸೀಮೆ) ಎಣ್ಣೆ ಸ್ಟವ್ ಹಚ್ಚಿ ಅನ್ನ ಬೇಯಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಬೇಕಾಗುವ ದಿನಸಿಯನ್ನು ಹದಿನೈದು ದಿನ ತಿಂಗಳಿಗೊಮ್ಮೆ ತಂದು ಮರದ ಪೆಟ್ಟಿಗೆಯಲ್ಲಿ ತುಂಬಿಡುತ್ತಿದ್ದರು. ಒಮ್ಮೊಮ್ಮೆ ತಿಳಿಸಾರು, ತೊವ್ವೆ ಮಾಡಿಕೊಳ್ಳುತ್ತಿದ್ದರು. ಬಾಟಲಿಯಲ್ಲಿ ಮನೆಯಿಂದ ತಂದ ಮಜ್ಜಿಗೆಯೊಂದಿಗೆ ಮಧ್ಯಾಹ್ನದ ಊಟವನ್ನು ತಮ್ಮ ಕೋಲಿಯಲ್ಲೇ ಮುಗಿಸುತ್ತಿದ್ದರು. ಎರಡು ಗಂಟೆಯ ಹೊತ್ತಿಗೆ ಮಕ್ಕಳು ಬರುವುದರ ಒಳಗೆ ಲುಂಗಿ ಬನಿಯನ್ನಿನಲ್ಲೇ ಒಂದು ನಿದ್ದೆ ತೆಗೆದು, ಎದ್ದು ಮುಖ ತೊಳೆದು, ಮತ್ತೆ ಪ್ಯಾಂಟನೇರಿಸಿ ಸಿದ್ಧರಾಗಿರುತ್ತಿದ್ದರು. ಮಾಸ್ತರ್‍ರಿಗೆ ಮಧ್ಯಾಹ್ನ ಚಹಾ ಕುಡಿಯುವ ಅಭ್ಯಾಸವಿತ್ತು. ಮೂರುವರೆಯ ಹೊತ್ತಿಗೆ ವಿಶ್ರಾಂತಿಗೆ ಬಿಟ್ಟಾಗ ಪ್ಯಾಂಟಿನಲ್ಲೇ ಸ್ಟವ್ ಹಚ್ಚಿ ಚಹಾ ತಯಾರಿಸುತ್ತಿದ್ದರು. ಪಟಗಾರ ಮಾಸ್ತರ ಈ ಅಭ್ಯಾಸದಿಂದ ಉಳಿದ ಮಾಸ್ತರು ಅಕ್ಕೋರುಗಳಿಗೂ ಚಹದ ವ್ಯವಸ್ಥೆ ಆದರೆ ಮಕ್ಕಳಾದ ನಮಗೆಲ್ಲ ಒಂದು ಸುತ್ತು ಆಟವಾಡುವಷ್ಟು ಸಮಯ ಸಿಗುತ್ತಿತ್ತು.

ಮುಲ್ಕಿ ಪಾಸಾದ ಮೇಲೆ ಪಟಗಾರರು ಮಾಸ್ತರಿಕೆ ಕೆಲಸಕ್ಕೆ ಸೇರಿದ್ದು (ಏಳನೇ ಇಯತ್ತೆಯನ್ನು ಮುಲ್ಕಿ ಎಂದು ಕರೆಯತ್ತಿದ್ದರು). ಶಾಲೆ ಕಲಿಯುವವರೇ ಅಪರೂಪವಾಗಿದ್ದ ಕಾಲದಲ್ಲಿ ಮುಲ್ಕಿ ಎಸ್‍ಎಸ್‍ಸಿ ಪಾಸಾದವರು ಶಿಕ್ಷಕರಾಗಬಹುದಿತ್ತು. ಆವಾಗ ಸಂಬಳ ಅಂತೇನೂ ಜಾಸ್ತಿ ಸಿಗುತ್ತಿರಲಿಲ್ಲ. ಪಟಗಾರ ಮಾಸ್ತರ್‍ರು ತಮ್ಮ ಸರ್ವೀಸಿನ ಉದ್ದಕ್ಕೂ ಒಂದರಿಂದ ನಾಲ್ಕನೇ ಇಯತ್ತೆ ಒಳಗೆ ಹೊರತು ಬೇರೆ ಯಾವ ಕ್ಲಾಸನ್ನೂ ತೆಗೆದುಕೊಂಡವರಲ್ಲ. ಐದನೆಯ ಇಯತ್ತೆಯಿಂದ ಇದ್ದ ಇಂಗ್ಲೀಷು ಹಿಂದಿ ವಿಷಯಗಳಿಂದ ಸ್ವಲ್ಪ ಸಮಸ್ಯೆಯಾಗುತ್ತಿದ್ದುದು ಹೌದಾದರೂ, ಒಂದನೇ ಇಯತ್ತೆಯ ಮಕ್ಕಳಿಗೆ ಅ ಆ ಇ ಈ ಬರೆಸಿ ಹಾಡು ಹೇಳಿಸಿ, ಎರಡನೇ ಮೂರನೇ ಇಯತ್ತೆಯ ಮಕ್ಕಳ ಹತ್ತಿರ ಮಗ್ಗಿ ಹೇಳಿಸಿ, ಗುಣಾಕಾರ ಭಾಗಕಾರ ಕಲಿಸಿ, ನಾಲ್ಕನೇ ಇಯತ್ತೆಯ ಮಕ್ಕಳಿಗೆ ಚರಿತ್ರೆಯ ಕತೆ ಹೇಳಿ, ಒಗಟು, ಮಾವಿನಹಣ್ಣು-ಬಾಳೆಹಣ್ಣು, ಅಂಗಡಿ ಸಾಮಾನು ಮುಂತಾದ ಲೆಕ್ಕ ಹಾಕಿ ಉತ್ತರ ಕಂಡುಹಿಡಿಯುವುದನ್ನು ಹೇಳಿಕೊಡುವುದರಲ್ಲಿ ಅವರಿಗೆ ಸಿಗುತ್ತಿದ್ದ ಆನಂದ ತೃಪ್ತಿ ಇನ್ನೆಲ್ಲೂ ಸಿಗುತ್ತಿರಲಿಲ್ಲ. ಪಟಗಾರ ಮಾಸ್ತರ್‍ರು ಬಳಪ ಹಿಡಿದು ಪಾಟಿಯ ಮೇಲೆ ಅಕ್ಷರ ತಿದ್ದಿಸಿದ ಮಕ್ಕಳೆಷ್ಟೋ? ಗಲಾಟೆ ಮಾಡಿದಾಗ ಪಟಗಾರ ಮಾಸ್ತರರ ತೆಳ್ಳಗಿನ ಕೋಲಿನಲ್ಲಿ ಕೈ ಮೇಲೆ ಕುಂಡೆಯ ಮೇಲೆ ಸಣ್ಣ ಪೆಟ್ಟು ತಿಂದವರೆಷ್ಟೋ? ಕಿವಿ ಹಿಂಡಿಸಿಕೊಂಡವರೆಷ್ಟೋ? ಒಮ್ಮೊಮ್ಮೆ ಅವರು ಪ್ರೀತಿಯಿಂದ ಕೊಟ್ಟ ಕಲ್ಲುಸಕ್ಕರೆ ಹಂದಿಗೋಣು ಶೇಂಗಾ ಮೆಲ್ಲುತ್ತ ಮಜಾಪಟ್ಟವರೆಷ್ಟೋ? ಬಗಲಲ್ಲೇ ಪಟ್ಟಿ ಪುಸ್ತಕ ತುಂಬಿದ ಪ್ಲಾಸ್ಟಿಕ್ ಚೀಲ ಹಿಡಿದು ಬರಿಗಾಲಲ್ಲಿ ಶಾಲೆಗೆ ಬರುವ ಮಕ್ಕಳನ್ನು ಕರುಣೆಯಿಂದ ವಿಚಾರಿಸಿದ್ದನ್ನು ಈಗಲೂ ನೆನಸಿಕೊಳ್ಳುವವರೆಷ್ಟೋ?

ಮಾಸ್ತರ್‍ರು, ಅಕ್ಕೋರು, ಬಾಯರು ಈ ಶಬ್ದಗಳು ಸರ್ ಮ್ಯಾಮ್‍ಗಳ ಲೋಕದಲ್ಲಿ ಕಳೆದುಹೋಗಿರುವ ಇಂದಿನ ಕಾಲದ ಸ್ಟೂಡೆಂಟ್‍ಗಳಿಗೆ ಅಪರಿಚಿತವಾಗಿದ್ದರೆ ಆಶ್ಚರ್ಯವಿಲ್ಲ. ದೌರ್ಭಾಗ್ಯವಶಾತ್ ಆ ಸಂಭೋಧನ ಶಬ್ದಗಳೊಂದಿಗೆ ಗುರು ಶಿಷ್ಯರ ನಡುವಿನ ಸಂಬಂಧದಲ್ಲಿನ ಮಾರ್ದವತೆ ಕೂಡ ಮರೆಯಾಗಿದೆ. ಮಾಸ್ತರ್‍ರಾಗಲೀ ಅಕ್ಕೋರಾಗಲೀ ಮಕ್ಕಳು ಮತ್ತವರ ಮನೆಯವರ ಪಾಲಿಗೆ ಕೇವಲ ಶಿಕ್ಷಕರಾಗಿರಲಿಲ್ಲ. ಊರಿನ ಶಾಲೆಯ ಮಾಸ್ತರುಗಳು ಇಡೀ ಊರಿನ ಹಿತೈಷಿಗಳಾಗಿ ಪರಿಗಣಿಸಲ್ಪಡುತ್ತಿದ್ದರು. ಮಾಸ್ತರ್‍ರು ಶಾಲೆಯ ಹೊರಗೂ ಮಾಸ್ತರ್‍ರೇ ಆಗಿದ್ದರು. ಹಳ್ಳಿಯಲ್ಲೇ ವಾಸವಾಗಿರುವ ಮಾಸ್ತರ್‍ರಿಗೆ ತನ್ನ ವಿದ್ಯಾರ್ಥಿಯ ಮನೆಯ ಸಂಪೂರ್ಣ ಪರಿಚಯವಿದ್ದದ್ದು ಇದರಿಂದಲೇ. ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರಗಳನ್ನು ಕಲಿಸುವವರು ಸರಿಯಾದ ದಾರಿಯಲ್ಲಿ ನಡೆಸುವವರು ಮಾಸ್ತರ್‍ರು ಎಂದು ಪಾಲಕರು ನಂಬಿದ್ದರು. ಅದಕ್ಕೇ ತನ್ನ ಮಗ ಪುಂಡು ಮಾಡಿದರೆ ಕುಂಡೆಯ ಮೇಲೆ ಎರಡು ಬಾರಿಸಿ ಎಂದು ತಂದೆಯೇ ಮಾಸ್ತರ್‍ರಿಗೆ ಅಧಿಕಾರ ಕೊಟ್ಟು ಹೋಗುತ್ತಿದ್ದ. ಮಾಸ್ತರ್‍ರ ಕೈಲಿ ಪೆಟ್ಟು ತಿಂದ ಹುಡುಗನೂ ತನ್ನ ಒಳ್ಳೆಯದಕ್ಕಾಗಿಯೇ ಮಾಸ್ತರ್‍ರು ಪೆಟ್ಟು ಕೊಟ್ಟದ್ದು ಕಿವಿ ಹಿಂಡಿದ್ದು ಎಂದು ನಂಬಿದ್ದ. ಏಕೆಂದರೆ ಶಿಕ್ಷೆಯ ಜೊತೆಗೆ ಮಾಸ್ತರ್‍ರ ಪ್ರೀತಿಯಲ್ಲೂ ವಿದ್ಯಾರ್ಥಿಗೆ ಪಾಲಿತ್ತು. ನಾನು ಮೂರನೇ ಕ್ಲಾಸಿನಲ್ಲಿದ್ದಾಗ ಮಳೆಗಾಲದಲ್ಲಿ ಬರಿಗಾಲಲ್ಲಿ ನಡೆದು ಶಾಲೆಗೆ ಹೋಗುವ ದಾರಿಯಲ್ಲಿ ಕಾಲಿಗೆ ಮುಳ್ಳು ಚುಚ್ಚಿಸಿಕೊಂಡು ಕುಂಟುತ್ತ ಕೋಣೆಯೊಳಗೆ ಬಂದದ್ದನ್ನು ಕಂಡ ನಮ್ಮ ನಾೈಕ್ ಮಾಸ್ತರ್‍ರು ನನ್ನ ಕಾಲಿನಿಂದ ಒಂಚೂರೂ ನೋವಾಗದಂತೆ ಮುಳ್ಳು ತೆಗೆದದ್ದನ್ನು ನೆನೆಸಿಕೊಂಡರೆ ನನ್ನ ಕಣ್ಣು ಒದ್ದೆಯಾಗದೇ ಇರಲು ಸಾಧ್ಯವೇ?

'ಬಾ ಬಾ ಗಿಳಿಯೇ ಬಣ್ಣದ ಗಿಳಿಯೇ, ಹಣ್ಣನು ಕೊಡುವೆನು ಬಾ ಬಾ.....' 'ಅಜ್ಜನ ಕೋಲಿದು ನನ್ನಯ ಕುದುರೆ.....' 'ಗಂಟೆಯ ನೆಂಟನೆ ಓ ಗಡಿಯಾರ....' ಇವೆಲ್ಲ ಪಟಗಾರ ಮಾಸ್ತರ್‍ರು ನಮಗೆಲ್ಲ ಶಾಲೆಯಲ್ಲಿ ಕಲಿಸಿದ ಹಾಡುಗಳು. ಇಂಗ್ಲೀಷ್ ಮೀಡಿಯಮ್‍ನಲ್ಲೇ ಅ ಆ ಇ ಈ ಕಲಿಯುವ ಇಂದಿನ ಕಾನ್ವೆಂಟ್ ಸ್ಕೂಲ್ ಮಕ್ಕಳು ಇಂತಹ ಹಾಡುಗಳನ್ನೆಲ್ಲ ಹಾಡುತ್ತಾರೋ ಇಲ್ಲವೋ? ಗೊತ್ತಿಲ್ಲ. ನಾನು ತಿಳಿದಂತೆ ಇಂಗ್ಲೀಷಿನಲ್ಲಿ 'ಟ್ವಿಂಕಲ್ ಟ್ವಿಂಕಲ್ ಲಿಟ್ಲ ಸ್ಟಾರ್...' ಬಿಟ್ಟು ಬೇರೆ ಹಾಡೇ ಇಲ್ಲ! ಅದಿರಲೀ. ತನ್ನ ಮಕ್ಕಳನ್ನು ಇಂಗ್ಲೀಷ್ ಮಿಡಿಯಮ್ಮಿನಲ್ಲಿ ಓದಿಸುವ ಸಲುವಾಗಿ ಪೇಟೆಯಲ್ಲೇ ಮನೆ ಮಾಡಿರುವ, ನಿತ್ಯ ನಾಲ್ಕು ಬಾರಿ ಮನೆಗೆ ಶಾಲೆಗೆ ಬೈಕಿನಲ್ಲೇ ಓಡಾಡುವ, ಆದರೂ ಹೆಚ್ಚಿನ ದಿವಸ ಬೆಳಿಗ್ಗಿನ ಪ್ರಾರ್ಥನೆಗೆ ತಡವಾಗಿ ಬರುವ, ಶಿಕ್ಷಕ ಸಂಘದ ಕೆಲಸ, ಗಣತಿ, ಮಧ್ಯಾಹ್ನದ ಬಿಸಿಯೂಟದ ಲೆಕ್ಕಾಚಾರಗಳ ನಡುವೆ ಪಾಠ ಮೇಡಬೇಕಾದ ಜವಾಬ್ದಾರಿಯನ್ನೂ ನಿಭಾಯಿಸುವ, ಶಾಲೆಯ ಪಾಠದ ಜೊತೆಗೆ ಟ್ಯೂಶನ್ನು ರಿಯಲ್ ಎಸ್ಟೇಟ್ ವ್ಯವಹಾರವನ್ನೂ ನಡೆಸುವ, ಅತ್ಯತ್ತಮ ಶಿಕ್ಷಕ ಪ್ರಶಸ್ತಿಯನ್ನೂ ಪಡೆದಿರುವ ಇಂದಿನ ಸರ್ಕಾರಿ ಶಾಲೆಯ ಸರ್‍ರಾದರೂ ಮಾಸ್ತರ್‍ರುಗಳಂತೆ ಹಾಡುಗಳನ್ನು ಹಾಡಿಸುತ್ತಾರೋ ಇಲ್ಲವೋ? ಗೊತ್ತಿಲ್ಲ.

5 comments:

  1. an excellent blog...! i really liked the vocab..:-) in fact i heard some of these words after a very long time.. and yes, in a life of race, we have completely lost ourselves., and have forgotten the meaning life, as for what we are living...

    ReplyDelete
  2. Good article. If I am not wrong I guess his name is Kaju Patgar? He is father of my frined Bhaskar Patgar

    ReplyDelete
    Replies
    1. howdu Ganapatanna, nanage Patagar mastarru hele roodhi; avaga sariyagi nenepu bandilla.

      Delete
  3. ನನಗೂ ನನ್ನ ಬಾಲ್ಯದ ದಿನಗಳು ನೆನಪಾದವು. ಇಂದಿಗೂ ಹಳ್ಳಿಯ ಹುಡುಗರು ಪಡುತ್ತಿರುವ ಕಷ್ಟಗಳೂ ನೆನಪಾದವು. ಇಂತಹ ಮೇಷ್ಟ್ರುಗಳಿಂದಲೇ ನಮ್ಮಂತಹ ಅದೆಷ್ಟೋ ಜನರು ಇಂದು ಒಂದು ಕೆಲಸ ಹಿಡಿದು ನೆಮ್ಮದಿ ಕಾಣಲು ಸಾಧ್ಯವಾಗಿದೆ.

    ಇಂದಿನ ಇಂಗ್ಲಿಷ್‌ ಮೀಡಿಯಮ್ಮಿನ ಮಕ್ಕಳು ಸ್ಲಾಂಟಿಂಗ್‌ ಲೈನ್‌, ಸ್ಲೀಪಿಂಗ್‌ ಲೈನ್‌ ಕಾಪಿ ಬರೆಯುವುದನ್ನು ನೋಡಿ ನನಗೆ ಸಂಕಟವಾಗುತ್ತದೆ. ’ರಾಮನು ಕಾಡಿಗೆ ಹೋದನು’ ಮೊದಲಾದ ಸಾಲುಗಳುಳ್ಳ ಶ್ರೀರಾಮ ಕಾಪಿ ಪುಸ್ತಕ ಇಂದು ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ, ರಾಮನೆಂಬುಬನು ದೇವಸ್ಥಾನದ ಒಬ್ಬ ದೇವರಾಗಿ ಉಳಿದಾನು. ರಾಮನನ್ನು ಸುಖಾಸುಮ್ಮನೆ ಕಾಡಿಗೆ ಕಳುಹಿಸಿದ್ದನ್ನು ಓದಿ, ಕೇಳಿ ಬೇಸರ ಪಡುವ, ಅವನನ್ನು ನಮ್ಮವನನ್ನೇ ಆಗಿಸಿಕೊಳ್ಳುವ ಭಾಗ್ಯ ಇಂದಿನ ಮಕ್ಕಳಿಗೆ ಶಾಲೆಯಲ್ಲಿ ಸಿಗಲಾರದು. ಮನೆಯವರಿಗೆ ಆ ಕತೆ ಹೇಳಲು ಪುರುಸೊತ್ತಿಲ್ಲ!

    ಪೇಟೆಯ ನಮ್ಮ ಮಕ್ಕಳಿಗೆ ಜೀವನವೆಂದರೇನು ಎನ್ನುವುದನ್ನು ಅರ್ಥ ಮಾಡಿಸುವುದರಲ್ಲಿ ಇರುವ ಸವಾಲುಗಳನ್ನು ನೆನೆದರಂತೂ ಹೆದರಿಕೆಯೇ ಆಗುತ್ತದೆ. ಇಂಗ್ಲಿಷಿನಲ್ಲಿ ಹಣವಿದೆ ಎನ್ನುವುದು ಕಹಿ ಸತ್ಯ. ಅದರಲ್ಲಿ ’ಬದುಕು’ ಇಲ್ಲ ಎನ್ನುವುದೂ ಅಷ್ಠೇ ಕಹಿ ಸತ್ಯ! ಇಂತಹ ಪರಿಸ್ಥಿತಿಯಲ್ಲಿ ಚಂದ್ರಶೇಖರ ದಾಮ್ಲೆಯವರ ಕನ್ನಡ ಶಾಲೆಗಳೂ, ಮೈಸೂರಿನ ಅರಿವು ಶಾಲೆಗಳೂ, ಬೇಸ್‌ ಸಂಸ್ಥೆಯ ವಲ್ಲೀಶ ಮತ್ತು ಸ್ನೇಹಿತರು ಪ್ರಾರಂಭಿಸಿರುವ ಓಪನ್‌ ಸ್ಕೂಲ್‌ಗಳೂ, ಪೂರ್ಣ ಪ್ರಮತಿ ಶಾಲೆಗಳೂ ಒಂದು ರೀತಿಯ ಭರವಸೆಯ ಆಶಾಕಿರಣ ಮೂಡಿಸುತ್ತಿವೆ.

    ReplyDelete

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...