Saturday, April 1, 2017

ಮೀಸಲಾತಿ, ಆರೆಸ್ಸೆಸ್ ಮತ್ತು ಮಾಧ್ಯಮದ ಸುಳ್ಳು

(ವಿಕ್ರಮ 05/02/2017)

ನಮ್ಮ ಬ್ರೇಕಿಂಗ್ ನ್ಯೂಸ್ ಮಾಧ್ಯಮಗಳಿಗೆ ಅತ್ಯಂತ ಪ್ರಿಯ ವಿಷಯ ಎಂದರೆ ವಿವಾದಗಳು. ಮನಬಂದಂತೆ ತಿರುಚಿ ವರದಿ ಸಿದ್ಧಮಾಡಿ ವಿವಾದ ಎಬ್ಬಿಸುವ ಕಲೆಂiನ್ನು ಕರಗತ ಮಾಡಿಕೊಂಡ ಒಂದು ವರ್ಗ ಮಾಧ್ಯಮದಲ್ಲಿ ಸಕ್ರಿಯವಾಗಿದೆ. ಸುಳ್ಳನ್ನು ಒಕ್ಕೊರಲಿನಿಂದ ಮತ್ತೆ ಮತ್ತೆ ಹೇಳಿ ಅದನ್ನು ಸತ್ಯವೆಂದು ನಂಬಿಸುವ ಇವರ ಪ್ರಯತ್ನ ಹೊಸತೇನಲ್ಲ. ಇದಕ್ಕೆ ಇನ್ನೊಂದು ನಿದರ್ಶನ ಸಿಕ್ಕಿದ್ದು ರಾಜಸ್ಥಾನದ ಜೈಪುರದಲ್ಲಿ ನಡದ ವಿಶ್ವಪ್ರಸಿದ್ಧ ಸಾಹಿತ್ಯೋತ್ಸವದಲ್ಲಿ. ಜೈಪುರ ಸಾಹಿತ್ಯೋತ್ಸವದಲ್ಲಿ ಸ್ಯಾಫ್ರಾನ್ ಮತ್ತು ಸಂಘ ಎನ್ನುವ ಚರ್ಚೆಯಲ್ಲಿ ಮೀಸಲಾತಿಯ ಕುರಿತ ಪ್ರಶ್ನೆಗೆ ಉತ್ತರಿಸುತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ ಡಾ ಮನಮೋಹನ ವೈದ್ಯರವರು ನೀಡಿದ ಉತ್ತರವನ್ನು ತಪ್ಪಾಗಿ ವರದಿ ಮಾಡಲಾಯತಲ್ಲದೇ ಮೀಸಲಾತಿಯನ್ನು ಸಮಾಪ್ತಗೊಳಿಸಬೇಕು ಎನ್ನುವುದು ಸಂಘದ ನಿಲುವಾಗಿದೆ ಎಂದೇ ಅಪಪ್ರಚಾರ ಮಾಡಲಾಯಿತು.

ಅಷ್ಟಕ್ಕೂ ನಡದಿದ್ದೇನು? ಪರಿಶಿಷ್ಟ ಜಾತಿ ಪಂಗಡಗಳಿಗೆ ಮೀಸಲಾತಿ ನೀಡಿದಂತೆ ಅಲ್ಪಸಂಖ್ಯಾತರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳಿಗೆ ಮೀಸಲಾತಿ ಪರಿಹಾರವೇ ಎನ್ನುವ ಪ್ರಶ್ನೆಗೆ ಕೇಳಲಾದ ಪ್ರಶ್ನೆಗೆ ಡಾ ಮನಮೋಹನ ವೈದ್ಯ ಹೀಗೆ ಉತ್ತರಿಸಿದರು. -  ’ಭಾರತದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿಯನ್ನು ಒಂದು ವಿಶೇಷ ಕಾರಣದಿಂದ ನೀಡಲಾಗಿದೆ. ನಮ್ಮ ಸಮಾಜದ ಒಂದು ವರ್ಗವನ್ನು ಶಿಕ್ಷಣ ಅವಕಾಶಗಳಿಂದ ವಂಚಿತರನ್ನಾಗಿಡಲಾಯಿತು. ಇದನ್ನು ಸರಿ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲೆ ಇದೆ. ಕೇವಲ ಒಂದು ಜಾತಿಯಲ್ಲಿ ಹುಟ್ಟಿದ ಕಾರಣದಿಂದ ಅವರನ್ನು ದೂರ ಇರಸಿದ್ದು ತಪ್ಪು. ಆದ್ದರಿಂದ ಅವರನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಸಂವಿಧಾನದಲ್ಲಿ ಆರಂಭದಿಂದಲೇ ಮೀಸಲಾತಿಯನ್ನು ಜಾರಿಗೆ ತರಲಾಯಿತು. ಯಾವುದೇ ರಾಷ್ಟ್ರದಲ್ಲಿ ಶಾಶ್ವತವಾಗಿ ಮೀಸಲಾತಿ ಇರುವುದು ಒಳ್ಳೆಯದಲ್ಲ, ಆದಷ್ಟು ಬೇಗ ಇದರ ಅಗತ್ಯ ಕೊನೆಗೊಂಡು ಎಲ್ಲರಿಗೂ ಸಮಾನ ಅವಕಾಶ ಸಿಗುವಂತಾಗಬೇಕು ಎಂದು ಡಾ ಅಂಬೇಡ್ಕರ್‌ರವರೇ ಹೇಳಿದ್ದಾರೆ. ಆದ್ದರಿಂದ ಮೀಸಲಾತಿಯ ಬದಲು ಹೆಚ್ಚಿನ ಶಿಕ್ಷಣ ಅವಕಾಶಗಳನ್ನು ನೀಡುವ ಪ್ರಯತ್ನವೂ ನಡೆಯಬೇಕು. ಇದನ್ನೂ ಮೀರಿ [ಅಲ್ಪಸಂಖ್ಯಾತರಿಗೆ] ಮೀಸಲಾತಿಯನ್ನು ನೀಡುವುದರಿಂದ ಪ್ರತ್ಯೇಕತೆಯ ಭಾವ ಬೆಳಯಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಿಂದೆ ಇರುವುದಕ್ಕೆ ವರ್ಷಗಳಿಂದ ನಡೆದುಬಂದ ಅನ್ಯಾಯ ಕಾರಣವಾಗಿದೆ. ಆದರೆ ಉಳಿದವರ ವಿಷಯದಲ್ಲಿ ಹೀಗಿಲ್ಲ. ಆದ್ದರಿಂದ [ಅಲ್ಪಸಂಖ್ಯಾತರ] ಸ್ಥಿತಿಗಳಿಗೆ ಬೇರೆ ರೀತಿಯಲ್ಲಿ ಪರಿಹಾರ ಹುಡುಕಬೇಕು ಎಂದು ನನಗನ್ನಿಸುತ್ತದೆ.’
ಒಂದೂವರೆ ಗಂಟೆಗೂ ಮೀರಿದ ಸಂವಾದದ ಒಂದು ಸಾಲನ್ನು ತಮಗೆ ಬೇಕಾದಂತೆ ಅರ್ಥ ಮಾಡಿಕೊಂಡ ಮಾಧ್ಯಮಗಳು ತಮಗೆ ಅನುಕೂಲವಾದಂತೆ ವರದಿ ಮಾಡಿದವು. ಮೀಸಲಾತಿಯನ್ನು ಕೊನೆಗೊಳಿಸಬೇಕೆಂದು ಆರೆಸ್ಸೆಸ್ ಹೇಳುತ್ತದೆ, ಮೀಸಲಾತಿ ಪ್ರತ್ಯೇಕತೆಯನ್ನು ಬೆಳೆಸುವುದೆಂದು ಆರೆಸ್ಸೆಸ್ ಹೇಳುತ್ತದೆ, ಆರೆಸ್ಸೆಸ್ ಮೀಸಲಾತಿ ವಿರೋಧಿ ಇತ್ಯಾದಿಯಾಗಿ ಮಾಧ್ಯಮಗಳಲ್ಲಿ ಹುಯಿಲೆಬ್ಬಿಸಲಾಯಿತು. ಟಿವಿ ಚಾನೆಲ್‌ಗಳಲ್ಲಿ ಚರ್ಚೆಗಳು ನಡೆದವು. ಉತ್ತರ ಪ್ರದೇಶ ಚುನಾವಣೆಗೆ ಇದನ್ನು ಜೋಡಿಸಿ ಒಂದರ ಮೇಲೊಂದು ವಿಶ್ಲೇಷಣೆಗಳು ನಡೆದವು. ತತ್‌ಕ್ಷಣಕ್ಕೆ ಚುರುಕಾದ ಬಿಜೆಪಿಯ ವಿರೋಧಿ ಪಕ್ಷಗಳ ನೇತಾರರು ರಾಜಕೀಯ ಲಾಭ ಪಡೆದುಕೊಳ್ಳಲು ಧಾವಿಸಿದರು. ಅಂತರ್ಜಾಲದ ಸುದ್ದಿ ಪೋರ್ಟಲ್‌ಗಳಲ್ಲಿ ವಿಶ್ಲೇಷಣೆಯ ಲೇಖನಗಳು ಬಂದವು. ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್‌ಗಳು ಹರಿದಾಡಿದವು. ಒಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮೀಸಲಾತಿಯ ವಿರೋಧಿ ಹಾಗೂ ಸಂಘದೊಂದಿಗೆ ಸಂಬಂಧವುಳ್ಳ ಬಿಜೆಪಿ ಪಕ್ಷವೂ ಮೀಸಲಾತಿಯ ಪರವಾಗಿಲ್ಲ ಎನ್ನುವ ಸಮೀಕರಣವನ್ನು ಸಾಧಿಸುವ ಎಲ್ಲ ಪ್ರಯತ್ನವನ್ನು ನಡೆಸಲಾಯಿತು.

ಮೀಸಲಾತಿಯ ವಿಷಯದಲ್ಲಿ ವಿವಾದ ಎಬ್ಬಿಸುವುದು ಇಂದಿನದಲ್ಲ. ಕೆಲ ಕಾಲದ ಹಿಂದೆ ಬಿಹಾರ ಚುನಾವಣೆಗೆ ಮೊದಲು ಸಂಘದ ಸರಸಂಘಚಾಲಕ ಶ್ರೀ ಮೋಹನ ಭಾಗವತ್‌ರವರು ಈ ವಿಷಯದಲ್ಲಿ ಹೇಳಿದ್ದನ್ನು ತಿರುಚಿ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದನ್ನು ಇಲ್ಲ ನೆನಪಿಸಿಕೊಳ್ಳಬಹುದು. ನಮ್ಮ ದೇಶದಲ್ಲಿ ಮೀಸಲಾತಿಯ ವಿಷಯವನ್ನಿಟ್ಟುಕೊಂಡೇ ರಾಜಕೀಯ ಬೆಳೆ ತೆಗೆಯುವ ಪಕ್ಷಗಳೂ ಇವೆ. ಆದರೆ ರಚನಾತ್ಮಕ ಹಾಗೂ ದೇಶಹಿತದ ಕಾರ್ಯದಲ್ಲಿ ನಿರತವಾಗಬೇಕಿದ್ದ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಭಾವಿಸಲಾಗುವ ಮಾಧ್ಯಮ ಅಸತ್ಯದ ಪ್ರಚಾರ ಮತ್ತು ರಾಜಕೀಯ ಮೇಲಾಟದ ದಾಳವಾಗಿ ಬಳಕೆಯಾಗುತ್ತಿರುವುದು ಅತ್ಯಂತ ಖೇದಕರವಾಗಿದೆ.

ಮತ್ತೆ ಮತ್ತೆ ಮರುಕಳಿಸುತ್ತಿರುವ ಇಂತಹ ಘಟನೆಗಳಿಂದ ಕೆಲವು ಕಳವಳಕಾರಿಯಾದ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಒಂದೂವರೆ ಗಂಟೆಗೂ ಹೆಚ್ಚಿನ ಕಾಲ ಗಂಭೀರ ವಿಷಯಗಳ ಮೇಲೆ ನಡೆದ ಸಂವಾದದಲ್ಲಿ ಉಳಿದೆಲ್ಲವನ್ನು ಒಂದೆರಡು ಸಾಲನ್ನು ತನಗೆ ಬೇಕಾದಂತೆ ಅರ್ಥೈಸಿಕೊಳ್ಳುವ ವರದಿಗಾರನ ಗ್ರಹಿಕೆಯ ಮಟ್ಟ ಹೇಗಿರಬಹುದು? ದೇಶ, ಸಮಾಜ ಹಾಗೂ ಜನಹಿತವನ್ನು ಕುರಿತಂತೆ ಆತನಿಗೆ ಜವಾಬ್ದಾರಿಯ ಅರಿವಿದೆಯೇ?  ತಂತ್ರಜ್ಞಾನ ಬೆಳೆದಿರುವ ಇಂದಿನ ಮಾಹಿತಿಯ ಯುಗದಲ್ಲಿ  ಈ ರೀತಿಯ ಅಸತ್ಯವನ್ನು ಹೆಚ್ಚು ಕಾಲ ಉಳಿಸಲು ಸಾಧ್ಯವಿಲ್ಲ. ಪ್ರಜ್ಞಾವಂತ ನಾಗರಿಕರು ಸತ್ಯವನ್ನು ಅರಿಯಲು ತಂತ್ರಜ್ಞಾನ ಸಹಕಾರಿಯಾಗಿದೆ. ಹಾಗಾಗಿ ಅಸತ್ಯ ಪ್ರಚಾರದ ಆಧಾರದಲ್ಲಿ ನಿಂತ ಮಾಧ್ಯಮಗಳು ದಿನದಿಂದ ದಿನಕ್ಕೆ ತಮ್ಮ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವುದನ್ನೂ ನಾವು ಕಾಣುತ್ತಿದ್ದೇವೆ.

ಈ ವರ್ಷ ದಶಕವನ್ನು ಪೋರೈಸಿದ ಜೈಪುರ ಸಾಹಿತ್ಯೋತ್ಸವದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಅಧಿಕಾರಗಳಾದ ಸಹಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ, ಪ್ರಚಾರ ಪ್ರಮುಖ್ ಡಾ. ಮನಮೋಹನ ವೈದ್ಯ ಆಹ್ವಾನಿನತರಾಗಿ ಪಾಲ್ಗೊಂಡರು.  ಸಂಘಕ್ಕೆ ಆಹ್ವಾನ ನೀಡಿದ್ದಕ್ಕೆ ಎಡಪಂಥೀಯ ವಿಚಾರದವರು ವಿರೋಧ ವ್ಯಕ್ತಪಡಿಸಿದರು.  ಹಿಂದುಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿರುವಂತೆ ಭಾರತೀಯ ಜನತಾಪಾರ್ಟಿಯ ವೈಚಾರಿಕತೆ ಮೂಲವಾದ ಹಾಗೂ ಯಾವುದೇ ಸ್ಪಷ್ಟ ಸಾಹಿತ್ಯಿಕ ಮೌಲ್ಯವಿಲ್ಲದ ಆರೆಸ್ಸೆಸ್ ವಿಶ್ವದ ಅತಿದೊಡ್ಡ ಸಾಹಿತ್ಯ ಪ್ರದರ್ಶನದಲ್ಲಿ ಚೊಚ್ಚಲ ಬಾರಿಗೆ ಪಾಲ್ಗೊಳ್ಳುತ್ತಿದೆ? ಅದೂ ಸಾಹಿತ್ಯೋತ್ಸವವು ಹತ್ತನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ! ಇದು ಸಂಘಕ್ಕೆ ಆಹ್ವಾನ ನೀಡಿದ್ದನ್ನು ವಿರೋಧಿಸುವವರ ಚಿಂತೆ.  ಇವರಲ್ಲಿ ಅವಾರ್ಡ ವಾಪಸಿ ತಂಡದ ಲೇಖಕರುಗಳೇ ಪ್ರಮುಖರು.  ಇವರು ಮತ್ತು ಎಡಪಕ್ಷಗಳಿಗೆ ಸೇರಿದ ಕೆಲವರು ಆರೆಸ್ಸೆಸ್‌ಗೆ ನೀಡಿದ ಆಹ್ವಾನವನ್ನು ವಿರೋಧಿಸ ಸಾಹಿತ್ಯೋತ್ಸವವನ್ನು ಬಹಿಷ್ಕರಿಸಿ ಪಲಾಯನಗೈದರು.  ಇದು ದೇಶದಲ್ಲಿ ಅಸಹಿಷ್ಣುತೆ ಇದೆಯೆಂದು ಗುಲ್ಲೆಬ್ಬಿಸುವವರು ಇನ್ನೊಂದು ವಿಚಾರಧಾರೆಯ ಜನರನ್ನು ಸ್ವೀಕರಿಸುವ ರೀತಿ.  ಈ ಅಸಹಿಷ್ಣುತೆಯೂ ಸಹ ಹೊಸತೇನಲ್ಲ, ಉದಾಹರಣೆಗೆ 2012ರಲ್ಲಿ ಲೇಖಕ ಸಲ್ಮಾನ್ ರಶ್ದಿ ಜೈಪುರ ಸಾಹಿತ್ಯೋತ್ಸವಕ್ಕೆ ಬರದಂತೆ ತಡೆಯಲಾಗಿತ್ತು. ಆದರೆ ಜನಜೀವನದ ಪ್ರತಿಬಿಂಬವಾದ ಸಾಹಿತ್ಯ ಕಲೆ ಸಂಸ್ಕೃತಿಗಳಿಗೆ ಸಂಬಂಧಿಸಿದ ಉನ್ನತ ಮಟ್ಟದ ಚರ್ಚೆಗೆ ವೇದಿಕೆಗಳಾಗಬೇಕಿದ್ದ ಸಾಹಿತ್ಯ ಸಮ್ಮೇಳನಗಳು ರಾಜಕೀಯ ಗುಂಪುಗಾರಿಕೆಗೆ ಬಲಿಯಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. 




ಎಸ್ ಗುರುಮೂರ್ತಿ ಕಂಡಂತೆ 'ಗುರೂಜಿ ಮತ್ತು ಸಮಕಾಲೀನ ಭಾರತ'

(ಪುಂಗವ 15/03/2017)


ಆರೆಸ್ಸೆಸ್ ಮತ್ತು ಗೋಳ್ವಲ್ಕರ್‌ರನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವಿಲ್ಲ ಏಕೆಂದರೆ ಆರೆಸ್ಸೆಸ್ಸಿನ ಸಿದ್ಧಾಂತ, ಕಾರ್ಯಪದ್ಧತಿ, ಚರಿತ್ರೆ, ಶಿಸ್ತು, ತರಬೇತಿಯ ಮಾದರಿ, ಸಾರ್ವಜನಿಕ ಚಿತ್ರಣ ಇವೆಲ್ಲ ಒಟ್ಟಿಗೆ ಹೊಂದಿಕೊಂಡಿವೆ. ಕಳೆದ ಅನೇಕ ದಶಕಗಳಲ್ಲಿ  ಬಹುಶಃ ಅತಿಹೆಚ್ಚು ಪ್ರಶಂಸೆಗೆ ಮತ್ತು ಅಷ್ಟೇ ಪ್ರಮಾಣದ ತೆಗಳಿಕೆಗೆ ಒಳಗಾದ ಸಂಘಟನೆ ಆರೆಸ್ಸೆಸ್ ಹಾಗೆಯೇ ಗುರೂಜೀ ಗೋಳ್ವಲ್ಕರ್ ಕೂಡ. ಸಾಮಾಜಿಕವಾಗಿ ಪ್ರಶಂಸಿಲ್ಪಡುವ ಆರೆಸ್ಸೆಸ್ ರಾಜಕೀಯ ಕಾರಣಗಳಿಂದಾಗಿ ವಿರೋಧಕ್ಕೆ ಒಳಗಾಗಿದೆ. ಇದೇ ರೀತಿ ಗುರೂಜೀಯವರು ಸತ್ಯ ಅಥವಾ ಅಪಾರ್ಥಕ್ಕೆ, ಪ್ರಶಂಸೆ ಅಥವಾ ಟೀಕೆಗೆ ಒಳಗಾದರು. ಆದರೆ ಪ್ರಶಂಸೆ ಅಥವಾ ಟೀಕೆಯ ಮಿತಿಯನ್ನು ದಾಟದ ಹೊರತು ಕೇವಲ ತನ್ನ ತಾಯ್ನಾಡಿಗಷ್ಟೇ ಅಲ್ಲ ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲ ದೃಷ್ಟಿಕೋನ ಹೊಂದಿದ್ದ ಶ್ರೇಷ್ಟ ತತ್ವಜ್ಞ ಚಿಂತಕರಾಗಿದ್ದ ಗುರೂಜಿಯವರ ಪೂರ್ಣ ವ್ಯಕ್ತಿತ್ವದ ಪರಿಚಯ ದೊರಕುವುದಿಲ್ಲ. ಹಾಗೆಯೇ ಗುರೂಜಿಯವರನ್ನು ಕೇವಲ ಭಾರತಕ್ಕೆ ಸೀಮಿತಗೊಳಿಸುವ ಪ್ರಯತ್ನವನ್ನು ಕೆಲವರು ಮಾವುತ್ತಾರೆ, ಇದೂ ಸರಿಯಾದುದಲ್ಲ. ಸಂಘವನ್ನು ವಿಶ್ಲೇಷಣೆ ಮಾಡದೇ ಗುರೂಜೀಯವರ ವ್ಯಕ್ತಿತ್ವವನ್ನು ವಿಶ್ಲೇಷಣೆ ಮಾಡುವುದು ಸಾಧ್ಯವಿಲ್ಲ, ಈ ಎರಡು ವ್ಯಕ್ತಿತ್ವಗಳು ಬೇರ್ಪಡಿಸಲಾರದಂತೆ ಬೆರೆತಿವೆ. 33 ವರ್ಷಗಳ ಕಾಲ ಅತ್ಯಂತ ಕಠಿಣ ಸಮಯದಲ್ಲಿ ಅವರು ಸಂಘಕ್ಕೆ ಮಾರ್ಗದರ್ಶನ ನೀಡಿದರು. ದೇಶಹಿತ, ಹಿಂದೂ ಹಿತದಲ್ಲಿ ಸಂಘವನ್ನು ರೂಪಿಸಿದರು. 

ಯಾವುದೇ ವ್ಯಕ್ತಿ ಅಥವಾ ಸಿದ್ಧಾಂತವನ್ನು ಟೀಕೆಗೆ ಒಳಪಡಿಸಬೇಕಾದಾಗ ಅವರ ಬಗ್ಗೆ ಆಳವಾಗಿ ಅಧ್ಯಯನ ಮಾಡಿರಬೇಕು ಇಲ್ಲವಾದರೆ ಟೀಕಿಸುವ ಅಧಿಕಾರ ನಮಗೆ ಬರುವುದಿಲ್ಲ. ಆದರೆ ಗೋಲ್ವಲ್ಕರ್ ಮತ್ತು ಸಂಘದ ಮೇಲಿನ ಎಲ್ಲಾ ಟೀಕೆಗಳ ಹಿಂದೇ ಯಾವುದೇ ಅಧ್ಯಯನವೇ ಇಲ್ಲ. ಇದನ್ನು ಕಮ್ಯುನಿಸ್ಟ ಚಿಂತಕರೇ ಒಪ್ಪಿಕೊಂಡಿದ್ದಾರೆ.

1940ರವರೆಗೆ ಆರೆಸ್ಸೆಸ್ ವಿಚಾರಧಾರೆ ಮತ್ತು ದೇಶದ ಉಳಿದ ರಾಜಕೀಯ, ಸಾಮಾಜಿಕ, ಆರ್ಥಿಕ ಚಿಂತಕರ ವಿಚಾರಗಳಲ್ಲಿ ಬಹುತೇಕ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಭಾರತದ ಹೊರಗೂ ಸಹ ಬೇರೆ ಬೇರೆ ಎಡಪಂಥೀಯ ಚಿಂತಕರು ಭಾರತವನ್ನು ನೋಡಿದ ದೃಷ್ಟಿಯು ಆರೆಸ್ಸೆಸ್ ವಿಚಾರಕ್ಕಿಂತ ಬರಳ ಭಿನ್ನವಾಗಿರಲಿಲ್ಲ. 1940ರವರೆಗೆ ಕಮ್ಯುನಿಸ್ಟರು, ಗಾಂಧೀಜೀ, ನೆಹರು ಇವರೆಲ್ಲರ ವಿಚಾರಗಳಲ್ಲಿ ಭಾರತದ ಹಿಂದೂ ಗುರುತಿನ ಬಗ್ಗೆ ಒಮ್ಮತವಿತ್ತು. ಈ ದಾಖಲೆಗಳನ್ನು ಪುನಃ ಬರೆದು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ 1940ರಲ್ಲಿ ಮುಸ್ಲಿಂ ಲೀಗ್ ಪಾಕಿಸ್ತಾನವನ್ನು ನಿರ್ಮಿಸುವ ನಿರ್ಣಯವನ್ನು ಅಂಗೀಕರಿಸಿದ ನಂತರ ಇವೆಲ್ಲವೂ ಬದಲಾದವು. ಇದರಿಂದ ಇಡೀ ರಾಜಕೀಯ ಚರ್ಚೆಯೇ ಬದಲಾಯಿತು. ಹಿಂದು, ಹಿಂದುತ್ವದ ತತ್ವ ಮತ್ತು ಸಂಸ್ಕೃತಿಯೊಂದಿಗೆ ಭಾರತದ ಗುರುತು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತ ಸಂಪೂರ್ಣ ಭಾರತಕ್ಕಲ್ಲ ಎನ್ನುವ ರಾಜಕೀಯ ವ್ಯಾಖ್ಯೆ 1940ರ ನಂತರ ಆರಂಭವಾಯಿತು. ಭಾರತದ ಹಿಂದೂ ಗುರುತಿನ ಕುರಿತು ಸಾಮಾನ್ಯ ಒಮ್ಮತವಿದ್ದ ವಿಚಾರ ಬದಲಾಗುತ್ತಿರುವ ಸಮಯದಲ್ಲಿ ಗೋಳ್ವಲ್ಕರ್ ಸಂಘದ ನೇತೃತ್ವ ವಹಿಸಿಕೊಂಡರು. ಇಂತಹ ನಿರ್ಣಾಯಕ ಕಾಲದಲ್ಲಿ ಅವರು ಸಂಘವನ್ನು ಮುನ್ನಡೆಸಿದರು. ಸಂಘ 1940ರವರೆಗೆ ಭಾರತದ ಹಿಂದೂ ಅಸ್ಮಿತೆಯ ಕುರಿತು ಇಡೀ ದೇಶದಲ್ಲೇ ಸ್ಥಾಪಿತವಾಗಿದ್ದ ವಿಚಾರದ ಪರವಾಗಿ ಆರೆಸ್ಸೆಸ್ ನಿಂತಿದೆಯೇ ಹೊರತು ಹೊಸದೊಂದು ವಿಚಾರವನ್ನು ಹುಟ್ಟುಹಾಕಿಲ್ಲ. ಆರೆಸ್ಸೆಸ್ ಹಿಂದೂ ರಾಷ್ಟ್ರೀಯತೆಯೆ ವಿಚಾರವನ್ನು ಹುಟ್ಟುಹಾಕಿಲ್ಲ, ಬದಲಿಗೆ 1940ರವರೆಗೆ ಸಾಮಾನ್ಯವಾಗಿ ಎಲ್ಲ ವರ್ಗದವರೂ ಒಪ್ಪಿದ್ದ ಭಾರತದ ಹಿಂದೂ ರಾಷ್ಟ್ರೀಯತೆಯ ಗುರುತನ್ನೇ ಪ್ರತಿಪಾದಿಸಿತು. ಆರೆಸ್ಸೆಸ್ ಗುರೂಜಿಯವರ ನೇತೃತ್ವದಲ್ಲಿ ಭಾರತದ ಪುರಾತನ ಏಕತೆಯನ್ನು ಪುನಃ ಸ್ಥಾಪಿಸಲು ಕಾರ್ಯಮಾಡತೊಡಗಿತು. 


ಅಮೇರಿಕದ ಶಿಕಾಗೋ ವಿಶ್ವವಿದ್ಯಾಲಯ ನಡೆಸಿದ "ಫಂಡಮೆಂಟಲಿಸಂ" ಹೆಸರಿನಲ ಅಧ್ಯಯದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ವಿವಿಧ ಮತ ಮತ್ತು ಆರೆಸ್ಸೆಸ್  ಸೇರಿದ್ಂತೆ ವಿವಿಧ್ ಸಂಘಟನೆಗಳಲ್ಲಿ ಮತೀಯ ಮೂಲಭೂತವಾದವನ್ನು ಕುರಿತು ಅಧ್ಯಯನ ನಡೆಸಿತು. ಈ ಅಧ್ಯಯನವು ಹಿಂದುತ್ವ, ಹಿಂದೂರಾಷ್ಟ್ರ, ಹಿಂದೂ ಸಾಂಸ್ಕೄತಿಕ ರಾಷ್ಟ್ರೀಯತೆ ಈ ವಿಷಯಗಳ ಕುರಿತಾದ ಗುರೂಜಿಯವರ ವಿಚಾರಗಳಿಗೆ ಬೆಂಬಲ ಸೂಚಿಸಿದೆ. 


ಆರೆಸ್ಸೆಸ್ ಕುರಿತು ಮಾತನಾಡುವಾಗಲೆಲ್ಲ ಇದೊಂದು ಹಿಂದೂ ಪುನರುತ್ಥಾನ ಮಾಡುವ, ಪ್ರತಿಕ್ರಿಯಾತ್ಮಕ ಸಂಘಟನೆ ಎಂದು ಹೇಳಲಾಗುತ್ತಿತ್ತು, ಆದರೆ ಈ ವ್ಯಾಖ್ಯಾನಗಳು ಹಿಂದುತ್ವಕ್ಕೆ ಒಪ್ಪುವಂತವಲ್ಲ ಏಕೆಂದರೆ ಯಾರಿಗೂ ಪ್ರತಿಕ್ರಿಯೆ ನೀಡುವವರಲ್ಲ, ನಾವು ಸರ್ವವೂ ಸೇರಿರುವ ಸಂಘಟನೆ, ನಾವು ಎಲ್ಲರನ್ನೂ ಒಪ್ಪುತ್ತೇವೆ. ಎನ್ನುವುದು ಗುರೂಜೀಯವರ ಅಭಿಪ್ರಾಯವಾಗಿತ್ತು. ರಾಷ್ಟ್ರ ಮತ್ತು ರಾಜ್ಯ (ನೇಶನ್ ಮತ್ತು ಸ್ಟೇಟ್) ಇವೆರಡೂ ಬೇರೆ ಬೇರೆ, ಉಳಿದೆಲ್ಲ ದೇಶಗಳಲ್ಲಿ ರಾಜ್ಯವು ರಾಷ್ಟ್ರವನ್ನು ನಿರ್ಮಿಸಿದರೆ ನಮ್ಮಲ್ಲಿ ರಾಜ್ಯವಿಲ್ಲದೆಯೇ ರಾಷ್ಟ್ರವಿತ್ತು, ವಿರೋಧೀ ರಾಜ್ಯವಿದ್ದರೂ ರಾಷ್ಟ್ರವಿತ್ತು. ರಾಷ್ಟ್ರ ಎನ್ನುವುದು ಪ್ರೇಮ ಮತ್ತು ಏಕತೆಯ ಮೇಲೆ ನಿಂತಿರುವ ಮಾನಸಿಕ ಸ್ಥಿತಿ, ಅದು ಎರಡು ಸಾವಿರ ವರ್ಷಗಳಿಂದ ರಾಜ್ಯವಿಲ್ಲದೇ ನಿಲ್ಲಬಲ್ಲದ್ದು, ಇಸ್ರೇಲಿನ ಯಾವುದೇ ಭೂಭಾಗವು ನಿಯಂತ್ರಣದಲ್ಲಿರದಿದ್ದರೂ ಜ್ಯೂ ರಾಷ್ಟ್ರವು ಜ್ಯೂಗಳ ಹೃದಯದಲ್ಲಿ ನೆಲೆಸಿತ್ತು. ರಾಷ್ಟ್ರ ಎನ್ನುವುದು ಜನರ ಮನೋಬುದ್ಧಿ ಹೃದಯಗಳಲ್ಲಿ ಜೀವಂತವಾಗಿರುತ್ತದೆ, ಆದರೆ ರಾಜ್ಯಕ್ಕೆ ಸ್ವತಂತ್ರವಾದ ಅಸ್ತಿತ್ವ ಇದೆ ಎನ್ನುವುದು ಗುರೂಜೀಯವರ ಅಭಿಪ್ರಾಯವಾಗಿತ್ತು.

ಗುರೂಜೀಯವರ ವಿಚಾರಗಳು ಶಿಕಾಗೋ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಪ್ರತಿಧ್ವನಿತವಾಗಿವೆ. ಹಾಗೆಯೇ ಭಾರತದ ಸರ್ವೋಚ್ಛ ನ್ಯಾಯಾಲಯದ ಹಿಂದುತ್ವ ಜಡ್ಜಮೆಂಟಿನಲ್ಲಿಯೂ ಗುರೂಜೀಯವರು ಬಂಚ್ ಆಫ್ ಥಾಟ್ನಜಲ್ಲಿ ಹೇಳಿರುವ ಶಬ್ದಗಳೇ ಉಲ್ಲೇಖಗೊಂಡಿವೆ. 

ಪರಿಪೂರ್ಣ ವ್ಯಕ್ತಿತ್ವದ ಗುರೂಜೀ ಕೇವಲ ಆರೆಸ್ಸೆಸ್ಸಿಗ್ನಷ್ಟೇ ಅಲ್ಲ ಸಂದಿಗ್ದ ಕಾಲದಲ್ಲಿ ದೇಶಕ್ಕೂ ಮಾರ್ಗದರ್ಶನ ನೀಡಿದರು. ಅವರ ಸಾತ್ವಿಕ ಶಕ್ತಿ ಮತ್ತು ಪರಿಶುದ್ಧತೆ ಎಷ್ಟು ಶ್ರೇಷ್ಟವಾಗಿತ್ತೆಂದರೆ ಆರೆಸ್ಸೆಸ್ ವಿರೋಧೀ ವಾತಾವರಣ ತೀವ್ರವಾಗಿದ್ದ ಸಮಯದಲ್ಲಿ ಗುರೂಜೀ ಮೃತರಾದಾಗ ಸಂಸತ್ತು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು, ಸಂಸತ್ತಿನಲ್ಲಿ ಚರ್ಚೆಯ ನೇತೃತ್ವ ವಹಿಸಿದ್ದವರು ಗುರೂಜೀಯವರೊಂದಿಗೆ ಬಹಳ ವೈಚಾರಿಕ ಭಿನ್ನಾಭಿಪ್ರಾಯ ಹೊಂದಿದ್ದ ಸ್ವಯಂ ಇಂದಿರಾ ಗಾಂಧಿ. ಅವರು ಎಷ್ಟು ಪ್ರಸ್ತುತ ಎಂದರೆ ಸಂಘವಷ್ಟೇ ಅಲ್ಲ ದೇಶದ ವಿಷಯದಲ್ಲಿ  ಅವರ ಪರಿಕಲ್ಪನೆಯಲ್ಲಿ ಮೂಡಿದ, ಹೇಳಿದ, ಮಂಡಿಸಿದ್, ರೂಪಗೊಳಿಸಿದ ವಿಚಾರಗಳನ್ನು  ತದನಂತರದ ಸಮಯದಲ್ಲಿ ನಡೆದ ಘಟನೆಗಳು ಪುಷ್ಟೀಕರಿಸಿವೆ. ಉದಾಹರಣೆಗೆ ಚೀನಾದ ಕುರಿತು ಕೇಳಿದ ಪ್ರಶ್ನೆಗೆ ’ಕಮ್ಯುನಿಸ್ಟ ಚೀನಾದಿಂದ ಕನ್ಫ್ಯೂಶಿಯನ್ ಚೀನಾ ಹುಟ್ಟುವುದು, ಆದರೆ ಅದರ ಸಾಮ್ರಾಜ್ಯಶಾಹಿ ಪ್ರವೃತ್ತಿ ಹಾಗೇ ಬೆಳೆಯುವುದು’ ಎಂದು ಹೇಳಿದ್ದರು. ಹಾಗೆಯೇ ಪಾಕಿಸ್ತಾನದ ಕುರಿತು ’ಅದು ವಿಶ್ವಕ್ಕೆ ಸದಾ ಉಪದ್ರವಕಾರಿಯಾಗಿರಲಿದೆ’ ಎಂದು ಹೇಳಿದ್ದರು. ಇಂದು ನಾವು ಇದನ್ನೇ ಕಾಣುತ್ತಿದ್ದೇವೆ. ಅವರು ಕೇವಲ ಆಯಾ ಸಾಂದರ್ಭಿಕ ಸನ್ನಿವೇಶಕ್ಕೆ ಸೀಮಿತರಾಗಿರಲಿಲ್ಲ. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಅವರೊಬ್ಬರು ಋಷಿಯಾಗಿದ್ದರು.


(ಆರೆಸ್ಸೆಸ್ ದ್ವಿತೀಯ ಸರಸಂಘಚಾಲಕ ಶ್ರೀ ಗುರೂಜಿ(ಮಾಧವ ಸದಾಶಿವರಾವ್ ಗೋಳ್ವಲ್ಕರ್) ಜನ್ಮದಿನದ ನಿಮಿತ್ತ ಬೆಂಗಳೂರಿನ ಮಂಥನ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಆರ್ಥ ತಜ್ಞ, ಹಿರಿಯ ಪತ್ರಕರ್ತ ಎಸ್ ಗುರುಮೂರ್ತಿ ನೀಡಿದ ಉಪನ್ಯಾಸದ ತುಣುಕುಗಳು)

ಬರದ ಬಿಸಿಯಲ್ಲಿ ಬಸವಳಿಯುತ್ತಿದೆ ಬದುಕು, ಇನ್ನೂ ಎಚ್ಚರಗೊಳ್ಳದಿದ್ದರೆ ವಿನಾಶ ಖಚಿತ

(ಪುಂಗವ 01/03/2017)

ಬರಗಾಲ ಬರದ ವರ್ಷವನ್ನೇ ನಾವು ಇತ್ತೀಚೆಗೆ ನೋಡಿಲ್ಲ, ಕರ್ನಾಟಕದ ಮಟ್ಟಿಗೆ ಅನಾವೃಷ್ಠಿ ಮತ್ತು ಬರ ಅಷ್ಟು ಸಾಮಾನ್ಯವಾಗಿ ಹೋಗಿದೆ. ವರ್ಷದಿಂದ ವರ್ಷಕ್ಕೆ ಬರದ ತೀವ್ರತೆ ಮಾತ್ರ ಹೆಚ್ಚಾಗುತ್ತಿದೆ. ಈ ವರ್ಷದ ಬರಗಾಲವನ್ನು ಕಳೆದ ೪೫  ವರ್ಷಗಳಲ್ಲೇ ಅತ್ಯಂತ ಭೀಕರ ಎನ್ನಲಾಗುತ್ತಿದೆ. ಬೇಸಿಗೆ ಸರಿಯಾಗಿ ಆರಂಭವಾಗುವ ಮೊದಲೇ ಬಿಸಿಲಿನ ಬೇಗೆ ತೀವ್ರವಾಗಿ  ಹೆಚ್ಚುತ್ತಿದೆ. ನಗರಗಳಲ್ಲಿ ನೀರಿನ ಟ್ಯಾಂಕರ್‌ಗಳ ಓಡಾಟ ಹೆಚ್ಚುತ್ತಿರುವಂತೆಯೇ ಹಳ್ಳಿಗಳ ಸಾರ್ವಜನಿಕ ಹ್ಯಾಂಡ್‌ಪಂಪ್‌ಗಳು, ನೀರಿನ ಟ್ಯಾಂಕ್‌ಗಳ ಮುಂದೆ ಪ್ಲಾಸ್ಟಿಕ್ ಕೊಡಪಾನಗಳ ಸಾಲು ಬೆಳೆಯುತ್ತಿದೆ. ಅನೇಕ ಊರುಗಳಲ್ಲಿ ಇಡೀ  ಗ್ರಾಮಕ್ಕೇ ನೀರುಣಿಸುತ್ತಿದ್ದ  ತೆರೆದ ಬಾವಿಗಳು ಬತ್ತಿಹೋಗಿ ವರ್ಷಗಳೇ ಕಳೆದವು.  ಕೊಳವೆ ಬಾವಿಗಳ ಆರ್ಭಟಕ್ಕೆ ಅಂತರ್ಜಲದ ಮಟ್ಟ ದಿನೇದಿನೇ ಕುಸಿಯುತ್ತಿದೆ. ಹಸುರಿನಿಂದ ಸಮೃದ್ಧವಾಗಿರುತ್ತಿದ್ದ ಮಲೆನಾಡು ಪ್ರದೇಶವೂ ನೀರಿನ ಬರಕ್ಕೆ ತುತ್ತಾಗುತ್ತಿರುವುದು ಕಳವಳಗೊಳಿಸುವ ವಿಷಯವಾಗಿದೆ.

ಈ ವರ್ಷ ರಾಜ್ಯದ 176 ತಾಲೂಕುಗಳಲ್ಲಿ 139 ತಾಲೂಕುಗಳು ಬರಪೀಡಿತ ಎಂದು ಈಗಾಗಲೇ ಘೋಷಿಸಲಾಗಿದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಮೀಕ್ಷೆ ನಡಸಿದೆ ಕೇಂದ್ರೀಯ ಅಂತರ್ಜಲ ಮಂಡಲಿಯು ಅಂತರ್ಜಲ ಮಟ್ಟದಲ್ಲಿ ೨ರಿಂದ ೪ ಮೀಟರಿನಷ್ಟು ಕುಸಿತವಾಗಿದೆ ಎಂದು ವರದಿ ನೀಡಿದೆ. ಇದಕ್ಕೆ ಮಳೆಯ ಕೊರತೆ ಒಂದು ಕಾರಣವಾದರೆ ಅಂತರ್ಜವನ್ನು ಅತಿಯಾಗಿ ಹೊರತೆಗೆಯುತ್ತಿರುವ ಕಾರಣವೂ ಇದೆ.

ಅನೇಕ ಕಡೆ ಕಾಳ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು ನಾಗರಹೊಳೆ ಬಂಡಿಪುರ ರಕ್ಷಿತ ಅರಣ್ಯ ಪ್ರದೇಶದಲ್ಲಿಯೇ ಕಾಳ್ಗಿಚ್ಚಿನಿಂದ ನೂರಾರು ಎಕರೆ ಅರಣ್ಯ ನಾಶವಾಗಿದ್ದು ವರದಿಯಾಗಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಕಲ್ಕೆರೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚನ್ನು ನಂದಿಸುವ ಸಂದರ್ಭದಲ್ಲಿ ಅರಣ್ಯಾಧಿಕಾರಿಯೋರ್ವರು ಮೃತಪಟ್ಟಿದ್ದೂ ವರದಿಯಾಗಿದೆ. ಒಣಗಿ ಗರಿಗರಿಯಾಗಿರುವ ಮರ ಹುಲ್ಲು ತರಗೆಲೆಗಳ ನಡುವೆ ಬಿದಿರುಗಳ ತಿಕ್ಕಾಟದಿಂದ ಒಂದು ಸಣ್ಣ ಕಿಡಿ ಹುಟ್ಟಿದರೂ ಅದರಿಂದ ಭಗ್ಗೆಂದು ಹೊತ್ತಿಕೊಂಡು ಉರಿಯುವ ಕಾಳ್ಗಿಚ್ಚನಿಂದ ಅರಣ್ಯವನ್ನು ರಕ್ಷಿಸುವುದು ವನಪಾಲಕರಿಗೆ ದೊಡ್ಡ ಸವಾಲಾಗಿದೆ. ಕಾಡಂಚಿನ ಗ್ರಾಮಗಳೂ ಕಾಳ್ಗಿಚ್ಚಿನ  ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಇದರ ಜೊತೆಗೆ ಕಾಡಿನಲ್ಲಿರುವ ಜಲಮೂಲಗಳು ಕೆರೆತೊರೆಗಳು ಬತ್ತಿ ವನ್ಯಜೀವಿಗಳು ನೀರಿಲ್ಲದೇ ಪರಿತಪಿಸುತ್ತಿರುವುದು ಇನ್ನೊಂದು ಸಮಸ್ಯೆಯಾಗಿದೆ. ಹುಲಿ ಸಂರಕ್ಷಿತ ಅರಣ್ಯವಾದ ಸುಮಾರು ೯೦೦ ಚದರ ಕೀಮೀ ವ್ಯಾಪ್ತಿಯ ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿದ್ದ ೧೫೦ ಕೆರೆಕಟ್ಟೆಗಳ ಪೈಕಿ ೧೨೦ರಷ್ಟು ಬತ್ತಿಹೋಗಿವೆ.ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮ, ಕಬಿನಿ ರಾಷ್ಟ್ರೀಯ ಉದ್ಯಾನ, ಬಿಳಿಗಿರಿರಂಗಸ್ವಾಮಿ ವನ್ಯಧಾಮ, ಮಲೆಮಹದೇಶ್ವರ ಬೆಟ್ಟ ಪ್ರದೇಶಗಳಲ್ಲಿಯೂ ನೀರಿನ ಬರ ತೀವ್ರವಾಗಿದೆ. ವನ್ಯಜೀವಿಗಳಿಗೂ ಬೋರ್‌ವೆಲ್ ನೀರನ್ನು ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಬೇಕಾದ ಸನ್ನಿವೇಶ ಬಂದಿದೆಯೆಂದರೆ ಬರ ತಂದೊದಗಿದ ಪರಿಸ್ಥಿತಿಯನ್ನು ಊಹಿಸಬಹುದು.

ಒಟ್ಟಿನ ತಾತ್ಪರ್ಯವಿಷ್ಟೇ. ನೀರು, ಜಲಮೂಲಗಳು  ಮತ್ತು ಕಾಡಿನ ಸಂರಕ್ಷಣೆಗೆ  ಇನ್ನೂ ನಾವುಎಚ್ಚೆತ್ತುಕೊಳ್ಳದಿದ್ದರೆ ಮನುಕುಲ ವಿನಾಶದ ಕಡೆಗೆ ನಡೆಯುವುದನ್ನು ತಪ್ಪಿಸುವುದು ಸಾಧ್ಯವಿಲ್ಲ. ಭೂಮಿಯನ್ನು ಕೊರೆದು ಅಂತರ್ಜಲವನ್ನು ಹೊರತೆಯುವಲ್ಲಿ ಬೆಳೆದಿರುವ ತಂತ್ರಜ್ಞಾನ ಮತ್ತು ಶ್ರಮ ಮಳೆಯ ನೀರಿನ ಸಂಗ್ರಹ, ನೀರಿಂಗಿಸುವಿಕೆ, ನೀರಿನ ಮಿತಬಳಕೆಯಲ್ಲೂ ಆಗಬೇಕು.ಕಾಡನ್ನು ಕಡಿದು ಮತ್ತು  ಕಾಡಿನ ಉತ್ಪನ್ನಗಳನ್ನು  ತಂದು ನಗರಗಳನ್ನು ನಿರ್ಮಿಸುವಲ್ಲಿ  ವ್ಯಯಗೊಳಿಸುವ ಹಣ ಹಾಗೂ ಶಕ್ತಿ ಕಾಡನ್ನು ಬೆಳೆಸುವಲ್ಲಿಯೂ ವೆಚ್ಚವಾಗಬೇಕು.  ಏಕೆಂದರೆ  ಆರ್ಥಿಕ ಪ್ರಗತಿಯೆಡೆಗಿನ ಧಾವಂತ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾದಾಗ ಅದು ಬದುಕಿಗೇ ಮಾರಕವಾಗುವುದು ಎನ್ನುವ ವಾಸ್ತವವನ್ನು ಅರಿಯದಿದ್ದಲ್ಲಿ ವಿನಾಶ ಖಚಿತ.

ಮೇವಿನ ಬರದಿಂದ ಸಂಕಷ್ಟದಲ್ಲಿರುವ ಗೋವುಗಳು
ಬರದ ನೇರ ಪರಿಣಾಮ ಉಂಟಾಗುವುದು ಜಾನುವಾರುಗಳ ಮೇವಿನ ಮೇಲೆ ಮತ್ತು ದನಗಳನ್ನೇ ಆಶ್ರಯಿಸಿರುವ ರೈತಾಪಿಗಳ ಮೇಲೆ. ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿರುವ ಸುಮಾರು 4 ಸಾವಿರ ದನಗಳು ನೀರು ಮತ್ತು ಮೇವಿನ ಕೊರತೆಯಿಂದ ಸಂಕಷ್ಟಕ್ಕೊಳಗಾಗಿರುವುದನ್ನು ರಾಜ್ಯದ ಪ್ರಮುಖ ದಿನಪತ್ರಿಕೆಯೊಂದು ವರದಿ ಮಾಡಿದೆ. ಇದು ಕೇವಲ ಒಂದು ಪ್ರದೇಶದ ಸಮಸ್ಯೆಯಲ್ಲಿ. ಬರಗಾಲದಿಂದ ಗುಳೆ ಹೋಗುವ ಉತ್ತರ ಕರ್ನಾಟಕದ ಅನೇಕ ಊರುಗಳಲ್ಲಿನ ಜಾನುವಾರುಗಳ ಕಥೆ ಇನ್ನೂ ಕರುಣಾಜನಕ. ಪೌಷ್ಟಿಕ ಮೇವಿನ ಕೊರತೆಯಿಂದ ಹಾಲಿನ ಉತ್ಪಾದನೆಯೂ ಕಡಿಮೆಯಾಗುತ್ತಿದ್ದು  ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತಾಪಿ ವರ್ಗವು ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿದೆ. ಮೇವಿನ ಕೊರತೆ ದನಗಳಿಗಷ್ಟೇ ಅಲ್ಲಿದೆ ಕುರಿಮಂದೆಗಳನ್ನು ಊರಿಂದ ಊರಿಗೆ ಹೊಡೆದುಕೊಂಡು ಹೋಗುವ ಕುರಿಗಾಹಿಗಳನ್ನೂ ತಟ್ಟಿದೆ.

ಅನೇಕ ಕಡೆಗಳಲ್ಲಿ ಸರ್ಕಾರ ತಾತ್ಕಾಲಿಕ ಗೋಶಾಲೆಗಳನ್ನು ತೆರೆದು ಮೇವು ಮತ್ತು ನೀರನ್ನು ಒದಗಿಸುವ ಪ್ರಯತ್ನ ನಡೆಸಿದ್ದರೂ ಬರದ ತೀವ್ರತೆಗೆ ಇದು ಏನೂ ಸಾಲದಾಗಿದೆ. ಮಲೆಮಹದೇಶ್ವರ ಬೆಟ್ಟದಂತೆಯೇ ಅನೇಕ ಅರಣ್ಯ ಪ್ರದೇಶಗಳಲ್ಲಿ ಮೇವಿದ್ದರೂ ಅರಣ್ಯ ಇಲಾಖೆಯು ದನಗಳನ್ನು ಮೇಯಿಸುವುದಕ್ಕೆ ನಿರ್ಭಂದ ಹೇರಿರುವ ಕಾರಣದಿಂದ ಮೊದಲು ಕಾಡಿನಲ್ಲಿ ದೊಡ್ಡಿಗಳನ್ನು ನಿರ್ಮಿಸಿ ದನಗಳನ್ನು ಮೇಯಿಸುತ್ತಿದ್ದ ದನಗಾಹಿಗಳು ದಾರಿಕಾಣದಾಗಿದ್ದಾರೆ. ಅತಿಯಾಗಿ ಮೇಯಿಸುವುದರಿಂದ ಕಾಡು ಹಾಳಾಗಬಹುದೆಂಬ ಅರಣ್ಯ ಇಲಾಖೆಯ ಆತಂಕ ಸರಿಯಾದರೂ ಅರಣ್ಯದ ಮೇವನ್ನೇ ಆಶ್ರಯಿಸಿರುವ ಜಾನುವಾರುಗಳ ಕಷ್ಟವನ್ನು ಗಮನಿಸಬೇಕು. ಆಫ್ರಿಕ ಮತ್ತು ದಕ್ಷಿಣ ಅಮೇರಿಕದ ಪ್ರದೇಶಗಳಲ್ಲಿ ದನಗಳ ಓಡಾಟದಿಂದ ಭೂಮಿ ಸಡಿಲಗೊಂಡು ಮತ್ತು ಅವು ಚೆಲ್ಲುವ ಗಂಜಲ ಸೆಗಣಿಗಳಿಂದ ಕಾಡು ಬೆಳೆದಿರುವ ಉದಾಹರಣೆಗಳು ಇವೆ. ಆದ್ದರಿಂದ ಅರಣ್ಯ ಪ್ರದೇಶದಲ್ಲಿ ದನಗಳನ್ನು ಮೇಯಿಸುವುದಕ್ಕೆ ನಿರ್ಭಂದ ಹೇರುವ ಬದಲು ಸರಿಯಾದ ನಿಯಮಗಳನ್ನು ರೂಪಿಸಿ ಜಾನುವಾರುಗಳನ್ನು ಮೇಯಿಯಸುವುದಕ್ಕೆ ಅವಕಾಶ ಮಾಡಿಕೊಡುವುದು ಸೂಕ್ತ.

ಗೋಪ್ರೇಮಿಗಳು  ಮತ್ತು ಗೋವಂಶದ ರಕ್ಷಣೆಗಾಗಿ ಹೋರಾಡುತ್ತಿರುವ ಸಜ್ಜನರು ಗೋವಿನ ಹಾಗೂ ಗೋಪಾಲಕರ ನೆರವಿಗೆ ಬರಲು ಇದು ಸಕಾಲವಾಗಿದೆ. ಹೈನುಗಾರಿಕೆಯನ್ನು ಅವಲಂಬಿಸಿರುವ ಹಾಗೂ ಕೃಷಿಯೊಂದಿಗೆ ದನಗಳನ್ನು ಸಾಕುವ ದೊಡ್ಡ ಕೃಷಿಕ ವರ್ಗ ನಮ್ಮ ರಾಜ್ಯದಲ್ಲಿದೆ. ಹಾಗೆಯೇ ಮುದಿ ಆಶಕ್ತ ದನಗಳನ್ನು ಸಾಕುವ ಪಿಂಜಾರಪೋಳ್ ಸಂಸ್ಥಯಂತೆ, ದೇಶಿ ಹಸುತಳಿಗಳ ಸಂವರ್ಧನೆಯಲ್ಲಿ ತೊಡಗಿಸಿಕೊಂಡಿರುವ ಸುಮಾರು 140ಕ್ಕೂ ಹೆಚ್ಚು ಗೋಶಾಲೆಗಳು ನಮ್ಮ ರಾಜ್ಯದಲ್ಲಿ ಸಕ್ರಿಯವಾಗಿವೆ. ಎಲ್ಲವೂ ಆರ್ಥಿಕವಾಗಿ ಸುದೃಢವಾಗಿಲ್ಲ, ಹೆಚ್ಚು ಹಣವನ್ನು ತೆತ್ತು ಮೇವನ್ನು ಹೊಂದಿಸುವ ಶಕ್ತಿ ಎಲ್ಲರಲ್ಲೂ ಇಲ್ಲ. ಆದ್ದರಿಂದ ಇಂತಹ ರೈತರ ಹಾಗೂ ಗೋಶಾಲೆಗಳಿಗೆ ಮೇವಿನ ನೆರವು ನೀಡುವುದರ ಮೂಲಕ ಸಹಾಯ ಮಾಡಬಹುದು. ಹಾಗೆಯೇ ಮೇವಿನ ದಾಸ್ತಾನು ಇರುವ ಮಾಹಿತಿ ಹಂಚಿಕೊಂಡು ಹಾಗೂ ಸಾಗಾಣಿಕೆಗೆ ಸಹಕಾರ ನೀಡಬಹುದು. ಅಗತ್ಯವಿದ್ದಲ್ಲಿ ಗೋಶಾಲೆ ಮೇವು ಬ್ಯಾಂಕ್‌ಗಳನ್ನು ಆರಂಭಿಸಿ ನೆರವಾಗಬಹುದು. ಆಹಾರದ ಕೊರತೆಯಿಂದ ಅಶಕ್ತಗೊಂಡು ಸಾವನ್ನಪ್ಪುವ ಅಥವಾ ಕಟುಕರ ಪಾಲಾಗುವ ಗೋವನ್ನು ಸಂರಕ್ಷಿಸಲು ಸಮಾಜ ಮುಂದಾಗಬೇಕಿದೆ.

ಗೋಮಾಳ ಜಮೀನಿನ ಕಬಳಿಕೆಯ ಸಕ್ರಮವೇಕೆ?
ರಾಜ್ಯದಲ್ಲಿ ಗೋಮಾಳ, ಹುಲ್ಲುಗಾವಲು ಸೇರಿದಂತೆ ಸುಮಾರು 12 ಲಕ್ಷ ಎಕರೆಯಷ್ಟು ಸರಕಾರಿ ಜಮೀನು ಒತ್ತುವರಿಯಾಗಿದೆಯೆಂದು ಸರ್ಕಾರ ಹೇಳಿದೆ. ಒತ್ತುವರಿಯಿಂದ ಕಬಳಿಕೆ ಮಾಡಿದ ಗೋಮಾಳಗಳ ಭೂಮಿಯನ್ನು ಸಕ್ರಮ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಗೋವಿನ ಮೇವನ್ನು ಕಸಿಯುವ ಸರ್ಕಾರದ ಈ ನಿರ್ಧಾರವು ಅತ್ಯಂತ ಖಂಡನೀಯವಾಗಿದೆ. ಹೆಚ್ಚಿನ ದೇಸಿ ಗೋ ತಳಿಗಳನ್ನು ಬಯಲಿನಲ್ಲಿ ಮೇಯಿಸಿ ಸಾಕಲಾಗುತ್ತದೆ, ವಿದೇಶಿ ತಳಿಗಳಂತೆ ಹಟ್ಟಿಯಲ್ಲಿ ಕಟ್ಟಿ ಹಾಕಲಾಗುದಿಲ್ಲ. 2012ರ ಜಾನುವಾರು ಗಣತಿಯ ಪ್ರಕಾರ ಕರ್ನಾಟಕದಲ್ಲಿ ಕಳೆದ ಎರಡು ದಶಕಗಳಲ್ಲಿ ಭಾರತೀಯ ತಳಿಯ ಗೋವುಗಳ ಸಂಖ್ಯೆ 64 ಲಕ್ಷದಿಂದ 38 ಲಕ್ಷಕ್ಕೆ ಇಳಿದಿದೆ, ಆದರೆ ವಿದೇಶ ಮತ್ತು ಮಿಶ್ರ ತಳಿಗಳ ಸಂಖ್ಯೆ 6ರಿಂದ 29 ಲಕ್ಷಕ್ಕೆ ಏರಿದೆ. ಸರ್ಕಾರದ ಈ ನಿರ್ಧಾರದಿಂದ ದನಗಳನ್ನು ಮೇಯಿಸುವ ಜಾಗ ಕಡಿಮೆಯಾಗಿ ಭಾರತೀಯ  ಗೋತಳಿಗಳ ಸಂವರ್ಧನೆಗೆ ಹೊಡೆತ ಬೀಳಲಿದೆ. ಇದರಿಂದ ನೇರವಾಗಿ ತೊಂದರೆಗೀಡಾಗುವವರು ಮನೆಗಳಲ್ಲಿ ಒಂದಿಷ್ಟು ದನಸಾಕುವ ಗ್ರಾಮೀಣ ಕೃಷಿಕರು  ಮತ್ತು ಹೈನುಗಾರಿಕೆಯನ್ನೇ ಅವಲಂಬಿಸಿರುವ ದನಗಾಹಿಗಳು. 

ಕಪ್ಪು ಹಣದ ವಿರುದ್ಧ ಅಪನಗದೀಕರಣದ ಅಸ್ತ್ರ

(ಪುಂಗವ 01/12/2016)

ಕಳೆದ ಕೆಲವು ದಿನಗಳಿಂದ ಎಲ್ಲೆಡೆ 500ಹಾಗೂ 1000ರೂ ನೋಟು ಅಪನಗದೀಕರಣ ಮತ್ತು ಕಪ್ಪು ಹಣದ ಸುದ್ದಿಗಳೇ ಹರಿದಾಡುತ್ತಿವೆ. ರಾಜಕೀಯ ಅಪಸ್ವರಗಳನ್ನು ಹೊರತುಪಡಿಸಿ ಹೆಚ್ಚಿನ ಜನರು ಸರ್ಕಾರದ ಈ ಕ್ರಮವನ್ನು ಶ್ಲಾಘಿಸಿದ್ದಾರೆ, ಕಪ್ಪು ಹಣ ನಿಯಂತ್ರಣದಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆ ಎಂದೇ ವಿಶ್ವದ ಅನೇಕ ಆರ್ಥಿಕ ತಜ್ಞರು ಬಣ್ಣಿಸಿದ್ದಾರೆ. ಜೊತೆಗೆ ಬ್ಯಾಂಕು ಎಟಿಎಮ್‌ಗಳ ಸರತಿ ಸಾಲಿನಲ್ಲಿ ಸೋತು ಸ್ವಲ್ಪ ಬೇಸರಿಸಿಕೊಂಡವರು, ಬಚ್ಚಿಟ್ಟಿದ್ದ ಹಣವನ್ನು ದಾಟಿಸಲಾಗದೆ ಒಳಗೊಳಗೇ ಸಂಕಟಪಡುವವರೂ, ನ್ಯಾಯವಾಗಿ ಗಳಿಸಿದ ಹಣವಾದರೂ ಬ್ಯಾಂಕ್‌ನಲ್ಲಿಡದೇ ಮನೆಯಲ್ಲೇ ನಗದಿನ ರೂಪದಲ್ಲಿ ಕಾಪಿಟ್ಟುಕೊಂಡು ತಲೆಕೆಡಿಸಿಕೊಂಡವರೂ ಕೆಲವರಿದ್ದಾರೆ. ಜೊತೆಗೆ ಇದೇ ಸಮಯ ಎಂದು ದೊಡ್ಡ ಮೊತ್ತದ ಕಪ್ಪು ಹಣವನ್ನು ದಾಟಿಸಿ ಬಿಳಿ ಮಾಡಿಸಿಕೊಟ್ಟು ಕಮೀಷನ್ ವ್ಯವಹಾರ ಕುದುರಿಸುವವರೂ ಇದ್ದಾರೆ. ಆದರೆ ಸರ್ಕಾರದ ಈ ನಿರ್ಧಾರ ಕಾಳಧನಿಕರ, ಸುಳ್ಳು ಲೆಕ್ಕ ತೋರಿಸಿ ತೆರಿಗೆ ವಂಚನೆ ಮಾಡುತ್ತಿದ್ದವರ, ಭ್ರಷ್ಟ ಲಂಚಕೋರರು ಮತ್ತು ರಾಜಕೀಯ ನೇತಾರರ ನಿದ್ದೆ ಕೆಡಿಸಿದ್ದಂತೂ ನಿಜ.

ಒಟ್ಟೂ ಚಲಾವಣೆ ಅಥವಾ ಕೂಡಿಟ್ಟ ಸುಮಾರು 16.5 ಲಕ್ಷ ಕೋಟಿ ನಗದಿನ ಪೈಕಿ ಸುಮಾರು 86 ಶೇಕಡ ಐದುನೂರು ಮತ್ತು ಒಂದು ಸಾವಿರ ಮುಖಬೆಲೆಯ ನೋಟುಗಳಾಗಿದ್ದು ಸುಮಾರು 14 ಲಕ್ಷ ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ನಗದನ್ನು ಬದಲಾಯಿಸುವ ಕಾರ್ಯ ಒಂದು ಸವಾಲೇ ಸರಿ. ಹಾಗೆಯೇ ಅತ್ಯಂತ ಕ್ಲಿಷ್ಟ ಹಾಗೂ ಸವಾಲಿನ ಈ ಯೋಜನೆಯ ಅನುಷ್ಟಾನಕ್ಕೆ ಮುಂಚೆ ಗೋಪ್ಯತೆ ಕಾಯ್ದುಕೊಂಡು ವಂಚಕರಿಗೆ ಸರಿಯಾದ ಸಮಯದಲ್ಲಿ ಬಲವಾದ ಪೆಟ್ಟು ನೀಡಿದ ಪ್ರಧಾನಿ ಮೋದಿ ನೇತೃತ್ವದ ತಂಡದ ಕಾರ್ಯ ಪ್ರಶಂಸನೀಯವಾಗಿದೆ.

ಅಷ್ಟಕ್ಕೂ ಏಕೆ ಈ ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕಾಯಿತು? ಚಲಾವಣೆಯಲ್ಲಿರುವ ಹಣದ ಶೇ ೮೬ ರಷ್ಟಾಗುವ ನೋಟುಗಳನ್ನು ವಿನಿಮಯ ಮಾಡುವಂತಂತಹ ಬೃಹತ್ ಕಾರ್ಯದಿಂದಾಗುವ ಲಾಭವಾದರೂ ಏನು? ಅಥವಾ ವ್ಯವಹಾರ ವ್ಯಾಪಾರದಲ್ಲಷ್ಟೇ ಅಲ್ಲದೇ ಸಾಮಾನ್ಯ ಜನಜೀವನದಲ್ಲೂ ಏರುಪೇರು ಮಾಡುತ್ತಿರುವುದು ಈ ನಿರ್ಣಯ ಸಮಂಜಸವೇ? ಇದೊಂದು ನಿಃಷ್ಪ್ರಯೋಜಕ ಪ್ರಯತ್ನವೇ? ಇಂತಹ ಪ್ರಶ್ನೆಗಳು ಸಾಮಾನ್ಯ ನಾಗರಿಕರಲ್ಲಿ ಏಳುವುದು ಸಹಜ.
ಕೆಲವೊಂದು ಪ್ರಮುಖ ಕಾರಣಗಳನ್ನು ಗಮನಿಸುವುದಾದರೆ,
  • ಲಂಚ, ಭ್ರಷ್ಟಾಚಾರ ಹಾಗೂ ಅಕ್ರಮ ವ್ಯವಹಾರಗಳಿಂದ ಅಗಾಧ ಪ್ರಮಾಣದಲ್ಲಿ ನಗದಿನ ರೂಪದಲ್ಲಿ ಕೂಡಿಟ್ಟಿದ್ದ ಕಪ್ಪು ಹಣ ಸರ್ಕಾರದ ಬೊಕ್ಕಸಕ್ಕೆ ಅಥವಾ ಮುಖ್ಯವಾಹಿನಿಗೆ ಬರುವಂತೆ ಮಾಡುವುದು.
  • ದೇಶದ ಆರ್ಥಿಕ ವ್ಯವಸ್ಥೆಗೇ ಧಕ್ಕೆಯಾಗುವ ಲೆಕ್ಕಕ್ಕೆ ಸಿಗದ ಸಮಾನಾಂತರ ಆರ್ಥಿಕತೆ, ಹವಾಲಾ ಧಂದೆಗಳನ್ನು ನಿಯಂತ್ರಿಸುವುದು. ವಿಶ್ವಬ್ಯಾಂಕ್ ೨೦೦೭ರಲ್ಲೇ ಅಂದಾಜಿಸಿದಂತೆ ದೇಶದ ಜಿಡಿಪಿಯ 22.2 ಶೇಕಡರಷ್ಟು - ಸುಮಾರು 35 ಸಾವಿರ ಶತಕೋಟಿ ರೂಪಾಯಿಗಳಷ್ಟು ಕಪ್ಪು ಆರ್ಥಿಕತೆ ಬೃಹತ್ತಾಗಿ ಬೆಳೆದಿದೆ.
  • ಭೂಮಿ, ಚಿನ್ನ, ಆಸ್ತಿ, ಷೇರು, ವಿದೇಶಿ ಕರೆನ್ಸಿ ಮುಂತಾದ ರೂಪದಲ್ಲಿಯೂ ಕಪ್ಪು ಹಣ ಇದೆ, ಆದರೆ ನಗದಿನ ರೂಪದಲ್ಲಿಯೂ ಗಣನೀಯ ಪ್ರಮಾಣದಲ್ಲಿದೆ. ಜೊತೆಗೆ ನಗದು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಗೆ ಸಿಗುವಂಥದ್ದಾಗಿದ್ದು ಕಪ್ಪು ವ್ಯವಹಾರದ ಬೆಳವಣಿಗೆಗೆ ಸಹಕಾರಿಯಾಗಿದೆ.
  • ಹೆಚ್ಚಿನ ವ್ಯವಹಾರಗಳು ಬ್ಯಾಂಕುಗಳ ಮೂಲಕ ಪಾರದರ್ಶಕವಾಗಿ ನಡೆಯುವಂತೆ ಮಾಡಿ ಸರ್ಕಾರಿ ಬೊಕ್ಕಸದಿಂದ ತೆರಿಗೆ ಸೋರಿಕೆಯಾಗುವುದನ್ನು ತಪ್ಪಿಸುವುದು. ಕಳೆದ ಸಪ್ಟಂಬರ್‌ವರೆಗೆ ಜಾರಿಯಲ್ಲಿದ್ದ ಸ್ವಯಂಪ್ರೇರಿತ ಕಪ್ಪು ಹಣ ಘೋಷಣೆ ಯೋಜನೆಯ ಅಡಿಯಲ್ಲಿ ಸರ್ಕಾರ ಬೊಕ್ಕಸಕ್ಕೆ 29 ಸಾವಿರ ಕೋಟಿ ರೂ ನಷ್ಟು ಸಂಗ್ರಹವಾಗಿದೆ. ಇದರಿಂದ ತೆರಗೆ ವಂಚನೆ ಎಷ್ಟು ಆಳವಾಗಿದೆ ಎನ್ನುವುದನ್ನು ಅಂದಾಜಿಸಬಹುದು. 
  • ಒಂದು ಅಂದಾಜಿನ ಪ್ರಕಾರ ಎರಡು ಲಕ್ಷ ನೋಟುಗಳಲ್ಲಿ 250ರಷ್ಟು ನಕಲಿ ಚಲಾವಣೆಯಲ್ಲಿದ್ದು ಇವುಗಳಲ್ಲಿ ಬಹುತೇಕ ಐದುನೂರು ಮತ್ತು ಸಾವಿರ ಮುಖಬೆಲೆಯವಾಗಿವೆ. ನಕಲಿ ನೋಟುಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ನುಸುಳಿ ಬರುತ್ತಿದ್ದು ಭಯೋತ್ಪಾದಕ ಚಟುವಟಿಗೆ ಬಂಡವಾಳವನ್ನು ಓದಗಿಸುತ್ತಿರುವುದು ತನಿಖೆಗಳಿಂದ ಸ್ಪಷ್ಟವಾಗಿದೆ. ಪಶ್ಚಿಮ ಬಂಗಾಳದ ಮಾಲ್ಡಾದಂತಹ ಗಡಿಯ ಜಿಲ್ಲೆಗಳು ನಕಲಿ ನೋಟು ತಯಾರಿಕೆಯ ಕಾರ್ಖಾನೆಗಳಾಗಿವೆ.
  • ಗಡಿಯಾಚೆಯಿಂದ ಅದರಲ್ಲೂ ವಿಶೇಷವಾಗಿ ಪಾಕಿಸ್ತಾನದಿಂದ ಭಯೋತ್ಪಾದಕ ಚಟುವಟಿಕೆಗಳಿಗೆ ಅಗಾಧ ಪ್ರಮಾಣದ ಹಣ ಪೋರೈಕೆಯಾಗುತ್ತಿದ್ದು ಇತ್ತೀಚಿನ ಕಾಶ್ಮೀರ ಕಣಿವೆಯ ಹಿಂಸಾಚಾರಗಳ ಮೂಲ ಇದರಲ್ಲಡಗಿದೆ. ಜೊತೆಗೆ ನಕ್ಸಲ್-ಮಾವೋವಾದಿ ಭಯೋತ್ಪಾದನೆಗಳಿಗೆ ಕಪ್ಪು ಹಣ ಬಳಕೆಯಾಗುತ್ತಿದೆ.
  • ಚುನಾವಣೆಗಳಲ್ಲಿ ಕಪ್ಪು ಹಣದ ಆಟ ತುಂಬಾ ಜೋರಾಗಿ ನಡೆಯವುದು ಸ್ಪಷ್ಟವಾಗಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ.
  • ಮಾದಕದ್ರವ್ಯ ಸಾಗಣೆಯ ಜಾಲ ನಿಂತಿರುವುದ ಕಪ್ಪು ಹಣದ ಮೇಲೆ, ವಿಶೇಷವಾಗಿ ಪಂಜಾಬ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ವ್ಯವಸ್ಥಿತವಾಗಿ ಹರಡಿರುವ ಈ ಜಾಲ ದೇಶದ ಯುವಜನತೆಯ ಬದುಕನ್ನೇ ನಾಶಮಾಡುತ್ತದೆ.
  • ರಿಯಲ್ ಎಸ್ಟೇಟ್ ಮಾಫಿಯ, ಸ್ಮಗ್ಲಿಂಗ್ ಮಾಫಿಯಾ, ಫೈನಾನ್ಸ್ ಲೇವಾದೇವಿ ಮಾಫಿಯ, ಕಳ್ಳಭಟ್ಟಿ, ಶಸ್ತ್ರಾಸ್ತ್ರ ಕಳ್ಳಸಾಗಣೆ ಮೊದಲಾದ ವ್ಯವಹಾರಗಳಿಗೆ ಕಪ್ಪು ಹಣವೇ ಆಧಾರ.


ಸರ್ಕಾರದ ಈ ದಿಟ್ಟ ಕ್ರಮದಿಂದ ಈಗಲೇ ಅನೇಕ ಧನಾತ್ಮಕ ಪರಿಣಾಮಗಳು ಗೋಚರವಾಗುತ್ತಿವೆ.
  • ಕೇವಲ ಏಳು ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಜಮೆಯಾಗಿರುವ ಮೊತ್ತ 4 ಲಕ್ಷ ಕೋಟಿ ರೂಪಾಯಿಗೂ ಅಧಿಕ
  • ಭಯೋತ್ಪಾದಕ ಕೃತ್ಯಗಳಿಗೆ ಬಳಕೆಯಾಗುತ್ತಿದ್ದ ಕಪ್ಪು ಹಣಕ್ಕೆ ನಿಯಂತ್ರಣ ಹಾಕಿದಂತಾಗಿದೆ. ಹಾಗಯೇ ನಕ್ಸಲ್ ಚಟುವಟಿಕೆಗಳಿಗೂ ಲಗಾಮು ಹಾಕಿದಂತಾಗಿದೆ. ಇದ್ದಕ್ಕಿದ್ದಂತೇ ಕಾಶ್ಮೀರದ ಕಲ್ಲೆಸೆತಗಾರರು ಮಾಯವಾಗಿದ್ದು ಕಣಿವೆಯಲ್ಲಿ ಶಾಂತಿ ಮರುಕಳಿಸಿದೆ, ಜನಜೀವನ ಸಹಜವಾಗಿದೆ.
  • ಆದಾಯ ತೆರಿಗೆ ಇಲಾಖೆಯ ದಾಳಿಗಳಲ್ಲಿ ಅಡಗಿಸಿಟ್ಟ ಅಪಾರ ಪ್ರಮಾಣದ ಕಪ್ಪು ಹಣ ಸಿಗುತ್ತಿದೆ, ಅನೇಕ ಧನಿಕ ಖುಳಗಳು ಬೆತ್ತಲಾಗುತ್ತಿದ್ದಾರೆ. ಕಪ್ಪು ಹಣ ಕಳ್ಳಸಾಗಣೆಯ ವೇಳೆ ಪೋಲೀಸರ ಕೈವಶವಾದ ಅನೇಕ ಪ್ರಕರಣಗಳು ವರದಿಯಾಗಿವೆ.
  • ಒಂದೇ ಹೊಡೆತಕ್ಕೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಹರಿದು ಬರುತ್ತಿದ್ದ ಖೋಟಾ ನೋಟುಗಳು ನಿಃಷ್ಪ್ರಯೋಜಕಗೊಂಡಿವೆ .
  • ಕಾನೂನು ಬಾಹಿರವಾಗಿ ಮತಾಂತರದಲ್ಲಿ ತೊಡಗಿದ್ದ ಹಲವು ಸಂಘಟನೆಗಳ ಹಣದ ಓಳಹರಿವಿನ ಮೂಲಗಳಿಗೆ ಕೊಡಲಿ ಏಟು ನೀಡಿದಂತಾಗಿದೆ.
  • ವಿದ್ಯುತ್ ಬಿಲ್ ಹಾಗೂ ಭೂ ಕಂದಾಯ ಪಾವತಿಸಲು ಹಳೇ ನೋಟನ್ನು ಸ್ವೀಕರಿಸುತ್ತಿರುವುದರಿಂದ, ಬಾಕಿಯಿದ್ದ ತೆರಿಗೆ, ಕಂದಾಯ, ವಿದುಯುತ್ ಬಿಲ್ ಇತ್ಯಾದಿಗಳು ದಾಖಲೆಯ ವೇಗದಲ್ಲಿ ಪಾವತಿಯಾಗುತ್ತಿವೆ.
  • ಮುಂದಿನ ದಿನಗಳಲ್ಲಿ ನಿವೇಶನಗಳು ಹಾಗೂ ಮನೆಗಳ ಬೆಲೆಗಳು ಇಳಿಕೆಯಾಗಲಿದ್ದು, ಹೂಡಿಕೆಗಾಗಿ ಖರೀದಿಸುವವರಿಗಿಂತ, ಸ್ವಂತ ಸೂರಿಗಾಗಿ ಖರೀದಿಸುವವರಿಗೆ ಇದರ ಹೆಚ್ಚಿನ ಲಾಭ ದೊರೆಯಲಿದೆ ಎನ್ನುವುದು ತಜ್ಞರ ಅಭಿಪ್ರಾಯ
  • ಹಣಕಾಸಿನ ವ್ಯವಹಾರಗಳು ನಗದಿನ ಬದಲು ಬ್ಯಾಂಕ್‌ಗಳ ಮೂಲಕ ಹೆಚ್ಚಾಗಿ ನಡೆಯುದರಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಉತ್ತೇಜನ  ದೊರಕಲಿದ್ದು, ಸಾಲಗಳ ಮೇಲಿನ ಬಡ್ಡಿದರಗಳೂ ಕಡಿಮೆಯಾಗುವ ಸಾದ್ಯತೆಯಿದೆ. ಸರ್ಕಾರ ಇದರ ಸೂಚನೆಯನ್ನು ನೀಡಿದೆ
  • ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆ ಮೊಬೈಲ್ ಮುಖಾಂತರ ಹಣಕಾಸಿನ ವಿನಿಮಯ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಬಳಕೆ ಗಣನೀಯವಾಗಿ ಏರಿಕೆಯಾಗಲಿದ್ದು ಆರ್ಥಿಕ ವ್ವವಸ್ಥೆ ಕ್ಯಾಶ್‌ಲೆಸ್ ಆಗುವತ್ತ ಮುನ್ನಡೆಯಲಿದೆ.
  • ಆದಾಯ ತೆರಿಗೆ ಪಾವತಿದಾರರ ಸಂಖ್ಯೆ ಪ್ರಸ್ತುತ ಕೆವಲ 3% ಆಗಿದ್ದು ಈ ಸಂಖ್ಯೆಯಲ್ಲಿ ಮಹತ್ತರ ಏರಿಕೆಯಾಗಲಿದೆ. ಇದರಿಂದ ಒಟ್ಟಾರೆ ತೆರಿಗೆ ದರದಲ್ಲಿ ಇಳಿಕೆಯಾಗಲಿದ್ದು  ಪ್ರಾಮಾಣಿಕ ತೆರಿಗೆದಾರರ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
  • ಸರ್ಕಾರಕ್ಕೆ ಬರುವ ಹೆಚ್ಚಿನ ಆಧಾಯದಿಂದಾಗಿ ರಕ್ಷಣೆ, ವಿದ್ಯುತ್, ಶಿಕ್ಷಣ, ಆರೋಗ್ಯ ಹಾಗೂ ವಸತಿ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಸಾದ್ಯತೆಯಿದ್ದು, ಸಮಾಜ ಕಲ್ಯಾಣ ಯೋಜನೆಗಳಿಗೆ ನೀಡುವ ಅನುದಾನದಲ್ಲಿ ವೃದ್ಧಿಯಾಗಲಿದೆ.
  • ಕಳೆದ ಎರಡು ವರ್ಷಗಳಿಂದ ಆರ್ಥಿಕ ಸಮಾನತೆ ಗುರಿಯೊಂದಿಗೆ ಸರ್ವರಿಗೂ ಬ್ಯಾಂಕ್ ಖಾತೆ ತೆರೆಯಲು ಫ್ರಧಾನಿ ನೀಡಿದ್ದ ಕರೆ ಹಾಗೂ ಜನ್-ಧನ್ ಯೋಜನೆಯಡಿ ತೆರೆಯಲಾಗಿದ್ದ 25 ಕೋಟಿ ಬ್ಯಾಂಕ್ ಖಾತೆಗಳ ಬಳಕೆ ಹೆಚ್ಚಾಗಿದೆ.
  • ನಗದು ಬದಲಾವಣೆ ಅಥವಾ ಠೇವಣಿಗಳ ಮೂಲಕ 14 ಲಕ್ಷ ಕೋಟಿಗಳಲ್ಲಿ ಶೇಕಡ 75ರಷ್ಟು ಬ್ಯಾಂಕುಗಳಿಗೆ ಜಮೆಯಾದರೂ ಸುಮಾರು 10.5 ಲಕ್ಷ ಕೋಟಿಯಷ್ಟು ಅಗಾಧ ಪ್ರಮಾಣದ ಹಣ ಬ್ಯಾಂಕಿಂಗ್ ಕ್ಷೇತ್ರದ ವ್ಯವಹಾರಕ್ಕೆ ಸಿಕ್ಕಿದಂತೆ ಆಗುತ್ತದೆ. ಉಳಿದ ಕಪ್ಪು ಹಣ ನಷಿಸಿ ಹೋಗುವುದರಿಂದ ಕಪ್ಪು ಆರ್ಥಿಕತೆಗೆ ದೊಡ್ಡ ನಷ್ಟವಾಗುವುದಂತೂ ನಿಜ. 


ಅಪನಗದೀಕರಣದಿಂದಾಗಿ ನಗದಿನ ನಡೆಯುವ ವಹಿವಾಟುಗಳು ಮಂದಗತಿಯಲ್ಲಿ ಸಾಗುವುದು ಮತ್ತು ಸಾಮಾನ್ಯ ನಾಗರಿಕರಿಗೆ ಕೆಲವು ಕಾಲ ತೊಂದರೆಯಾಗುವುದು ನಿಜವಾದರೂ ಒಟ್ಟಾರೆ ದೇಶದ ಆರ್ಥಿಕ ಪ್ರಗತಿಗೆ ಮತ್ತು ಭವಿಷ್ಯದಲ್ಲಿ ಎಲ್ಲ ವರ್ಗಗಳಿಗೂ ಇದು ಹಿತವಾಗಿ ಪರಿಣಮಿಸುವುದು ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ಜೊತೆಗೆ ಕಪ್ಪು ಹಣದ ವಿರುದ್ಧದ ಹೋರಾಟದ ಗೆಲುವು ಸೋಲು ದೇಶದ ನಾಗರಿಕರು ಹೇಗೆ ಸ್ಪಂದಿಸುತ್ತಾರೆ ಎನ್ನುವುದರ ಮೇಲೂ ನಿಂತಿದೆ.

ಜಮ್ಮು ಕಾಶ್ಮೀರದ ನಿರಾಶ್ರಿತರ ದಶಕಗಳ ನೋವಿಗೆ ಒಂದಿಷ್ಟು ಸಾಂತ್ವನ

(ವಿಕ್ರಮ 22/01/2017)

ವಿಶ್ವಸಂಸ್ಥೆಯ ನಿರಾಶ್ರಿತರ ಕಲ್ಯಾಣ ಸಂಸ್ಥೆ (UNHRC) ಪ್ರಕಾರ ಶೋಷಣೆ, ಯುದ್ಧ ಅಥವಾ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ತನ್ನ ದೇಶ ಬಿಟ್ಟು ವಲಸೆಹೋಗುವವರನ್ನು ನಿರಾಶ್ರಿತರು ಎನ್ನಲಾಗುತ್ತದೆ. ಈ ವಲಸೆಗೆ ಜನಾಂಗೀಯ, ಮತೀಯ ಅಥವಾ ರಾಜಕೀಯ ಹಿಂಸೆಗಳು ಕಾರಣವಾಗಿರಬಹುದು. ಇಂತಹ ವಲಸೆ ಬಹುತೇಕ ಅವರು ಪುನಃ ತಮ್ಮ ಸ್ಥಳಗಳಿಗೆ ಮರಳಲು ಅಸಾಧ್ಯವಾಗಿರುವ ಸನ್ನಿವೇಶ ನಿರ್ಮಾಣವಾದಾಗ ನಡೆಯುತ್ತದೆ.  ಹಾಗೆಯೇ ಆಂತರಿಕ ಸ್ಥಳಾಂತರ ಒಳಗಾದ ವ್ಯಕ್ತಿಗಳು(internal displaced persons) ಎನ್ನುವ ಇನ್ನೊಂದು ರೀತಿಯ ನಿರಾಶ್ರಿತರು ಈ ಮೇಲಿನ ಕಾರಣಗಳಿಗೆ ತಮ್ಮ ಮನೆಗಳನ್ನು ಬಿಟ್ಟು ಅದೇ ದೇಶದ ಬೇರೆ ಪ್ರದೇಶಕ್ಕೆ ವಲಸೆ ಹೋಗಿರುತ್ತಾರೆ, ಅಂದರೆ ಅಂತರರಾಷ್ಟ್ರೀಯ ಗಡಿಯನ್ನು ದಾಟಿರುವುದಿಲ್ಲ. ಇನ್ನೊಂದು ರೀತಿಯ ನಿರಾಶ್ರಿತರನ್ನು ಸ್ಟೇಟ್‌ಲೆಸ್ ಸಿಟಿಜನ್ ಎನ್ನಲಾಗುತ್ತದೆ. ಯಾವುದೇ ದೇಶದ ನಾಗರಿಕತೆಯನ್ನು ಹೊಂದಿರದ ಇವರನ್ನೂ ನಿರಾಶ್ರಿತರ ಪಟ್ಟಿಯೊಳಗೆ ಸೇರಿಸಬಹುದು. ಇಂತಹ ಲಕ್ಷಾಂತರ ಜನರು ನಿರಾಶ್ರಿತರಾಗಿ ಕಳೆದ ಎಪ್ಪತ್ತು ವರ್ಷಗಳಿಂದ ಮೂಲಭೂತ ಹಕ್ಕುಗಳಿಂದ ವಂಚಿತರಾಗಿ ನಮ್ಮದೇ ದೇಶದ ಜಮ್ಮು ಕಾಶ್ಮೀರದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಒಂದು ರೀತಿಯಲ್ಲಿ ಜಮ್ಮುವನ್ನು ನಿರಾಶ್ರಿತರ ಕೇಂದ್ರ ಎಂದೇ ಕರೆಯಬಹುದು. ಜಮ್ಮುವಿನ ನಿರಾಶ್ರಿತರ ಒಟ್ಟೂ ಸಂಖ್ಯೆ ಇಪ್ಪತ್ತು ಲಕ್ಷಕ್ಕೂ ಹೆಚ್ಚು. ಇವರಲ್ಲಿ 1947 ದೇಶ ವಿಭಜನೆ, 1965, 1971ರ ಯುದ್ಧ ಸಂದರ್ಭಗಳಲ್ಲಿ ಪಶ್ಚಿಮ ಪಾಕಿಸ್ತಾನದಿಂದ ಪಲಾಯನಗೈದು ಬಂದ ಹಿಂದೂ ಹಾಗೂ ಸಿಖ್ ನಿರಾಶ್ರಿತರು, ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಪ್ರದೇಶದಿಂದ ಹೊರದಬ್ಬಲ್ಪಟ್ಟವರು, ಪೂಂಛ್ ಮೊದಲಾದ ಗಡಿಪ್ರದೇಶಗಳಲ್ಲಿ ಯುದ್ಧ ಸಮಯದಲ್ಲಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದವರು, 1985ರಿಂದ 1995ರವರೆಗೆ ಕಾಶ್ಮೀರ ಕಣಿವೆಯ ಮತಾಂಧ ಮುಸಲ್ಮಾನರ ದೌರ್ಜನ್ಯಕ್ಕೆ ಬಲಿಯಾಗಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡ ಕಾಶ್ಮೀರಿ ಪಂಡಿತರು ಸೇರಿದ್ದಾರೆ. ಇವರ ಜೊತೆಗೆ, 1957ರಲ್ಲಿ ಸಫಾಯಿ ಕರ್ಮಚಾರಿ ಕೆಲಸಕ್ಕೆಂದು ಹೊರರಾಜ್ಯಗಳಿಂದ ವಾಲ್ಮೀಕಿ ದಲಿತ ಸಮುದಾಯದ 70 ಕುಟುಂಬಗಳನ್ನು ರಾಜ್ಯಕ್ಕೆ ಕರೆಸಿಕೊಳ್ಳಲಾಯಿತು. ಇಂದು ಈ ಸಮುದಾಯಕ್ಕೆ ಸೇರಿದ 500 ಕುಟುಂಬಗಳಿಗೆ ರಾಜ್ಯದ ಖಾಯಂ ನಿವಾಸಿಗಳೆಂದು ಮಾನ್ಯತೆ ಸಿಕ್ಕಿಲ್ಲ. ಅವರೂ ಒಂದು ರೀತಿಯ ನಿರಾಶ್ರಿತರೇ.

ಜಮ್ಮು ಕಾಶ್ಮೀರದ ನಿರಾಶ್ರಿತರ ಬವಣೆಗಳ ಕಥೆ ಬಗೆದಷ್ಟೂ ಆಳಕ್ಕೆ ಇಳಿಯುತ್ತದೆ. ಮುಸ್ಲಿಂ ಮೂಲಭೂತವಾದ ಪ್ರೇರಿತ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿಗಳು, ರಾಜ್ಯದ ರಾಜಕೀಯ ಮತ್ತು ದಿಕ್ಕು ದಿಸೆಯಿಲ್ಲದ ಕೇಂದ್ರ ಸರ್ಕಾರದ ನೀತಿಗಳು ಇವುಗಳ ನಡುವೆ ನಿಜವಾಗಿಯೂ ಶೋಷಣೆಗೊಳಗಾದವರು ಈ ನಿರಾಶ್ರಿತರು. ಆಗೊಮ್ಮೆ ಈಗೊಮ್ಮೆ ನಿರಾಶ್ರಿತ ಪುನರ್ವಸತಿ, ಪರಿಹಾರ, ಸ್ಟೇಟ್ ಸಬ್ಜೆಕ್ಟ್ ಪ್ರಮಾಣಪತ್ರ ನೀಡುವ ಕುರಿತು ಚರ್ಚೆಗಳು ನಡೆದರೂ ಒಂದಲ್ಲ ಒಂದೂ ನೆವ ನೀಡಿ ಯೋಜನೆಯನ್ನು ದಾರಿತಪ್ಪಿಸುವ ಕೆಲಸ ನಿರಂತರ ನಡೆದು ಬಂದಿದೆ. ಈ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಕಾರಾತ್ಮಕ ನೀತಿಯಿಂದ ಇತ್ತೀಚೆಗೆ ಎರಡು ಯೋಜನೆಗಳು ಪ್ರಚಲಿತಕ್ಕೆ ಬಂದವು. ಒಂದು ಸ್ಟೇಟ್ ಸಬ್ಜೆಕ್ಟ್ ಪ್ರಮಾಣಪತ್ರಕ್ಕಾಗಿ ಕಳೆದ ಏಳು ದಶಕಗಳಿಂದ ಹಕ್ಕೊತ್ತಾಯ ಮಾಡುತ್ತಿರುವ ಪಶ್ಚಿಮ ಪಾಕಿಸ್ತಾನದಿಂದ ನಿರಾಶ್ರಿತರಾಗಿ ವಲಸೆ ಬಂದವರಿಗೆ ನಿವಾಸಿ ಪ್ರಮಾಣಪತ್ರ ನೀಡುವ ಯೋಜನೆ. ಇನ್ನೊಂದು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಛಂಬ್ ಪ್ರದೇಶಗಳಿಂದ ಮನೆ ಮತ್ತು ಆಸ್ತಿಪಾಸ್ತಿ ಕಳೆದುಕೊಂಡು ವಲಸೆ ಬಂದವರಿಗೆ ಪರಿಹಾರ ನೀಡಲು ೨೦೦೦ ಕೋಟಿ ರೂಪಾಯಿಗಳ ಹಣ ಬಿಡುಗಡೆ.

ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರಿಗೆ ನಿವಾಸಿ ಹಾಗೂ ಗುರುತಿನ ಪ್ರಮಾಣಪತ್ರ
ದೇಶವಿಭಜನೆಯ ನಂತರ ನಡೆದ 1951ರ ಜನಗಣತಿಯಲ್ಲಿ 72 ಲಕ್ಷ 95ಸಾವಿರದಷ್ಟು ಜನ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನದಿಂದ(ಇಂದಿನ ಬಾಂಗ್ಲಾದೇಶದಿಂದ) ಭಾರತಕ್ಕೆ ವಲಸೆ ಬಂದರು. ಹೀಗೆ ಪಶ್ಚಿಮ ಪಾಕಿಸ್ತಾನದಿಂದ ವಲಸೆ ಬಂದ ಸುಮಾರು 47ಲಕ್ಷ ಜನರಲ್ಲಿ ಬಹುತೇಕ ಹಿಂದೂ ಮತ್ತು ಸಿಖ್ ಸಮುದಾಯಗಳಿಗೆ ಸೇರಿದವರು. ಇವರೆಲ್ಲ ಪಂಜಾಬ್, ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಮುಂಬೈ ಮೊದಲಾದ ದೇಶದ ವಿವಿಧ ಭಾಗಗಳಿಗೆ ಹೋಗಿ ನೆಲೆಸಿದರು. ಆದರೆ ಇವರಲ್ಲಿ 567 ಕುಟುಂಬಗಳು ನೆಲೆಗೊಳ್ಳಲು ಜಮ್ಮು ಕಾಶ್ಮೀರವನ್ನು ಆಯ್ದುಕೊಂಡರು, ಕಾರಣ ಸಿಯಾಲಕೊಟ್ ಮತ್ತು ಶಕರ್‌ಘರ್ ಪ್ರದೇಶಗಳಿಂದ ವಲಸೆ ಬಂದ ಅವರಿಗೆ ಮಾನಸಿಕವಾಗಿ ಜಮ್ಮು ಕಾಶ್ಮೀರ ಹತ್ತಿರವಾಗಿತ್ತು, ಇಲ್ಲಿದ್ದರೆ ತಮ್ಮ ಬೇರಿನೊಂದಿಗೆ ಜೋಡಿಕೊಂಡಿರಬಹುದೆಂದು ಅವರು ಭಾವಿಸಿದ್ದರು. ದೇಶದ ಉಳಿದ ರಾಜ್ಯಗಳಿಗೆ ತೆರಳಿ ವಾಸವಾದವರೆಲ್ಲ ಭಾರತದ ನಾಗರಿಕರಾದರು. ಪಾಕಿಸ್ತಾನದಿಂದಲೇ ಬಂದ ಐಕೆ ಗುಜ್ರಾಲ್, ಮನಮೋಹನ್ ಸಿಂಗ್ ದೇಶದ ಪ್ರಧಾನ ಮಂತ್ರಿಗಳೂ ಆದರು, ಇಂದು ಪಾಕಿಸ್ತಾನವಾಗಿರುವ ಪ್ರದೇಶದನಲ್ಲೇ ಜನಿಸಿದ ಲಾಲ್‌ಕೃಷ್ಣ ಆಡ್ವಾಣಿ ದೇಶದ ಉಪಪ್ರಧಾನಿಯೂ ಆದರೆ. ಇವರೊಂದಿಗೇ ವಲಸೆ ಬಂದು ಜಮ್ಮು ಕಾಶ್ಮೀರದಲ್ಲಿ ನೆಲೆಸಿದವರು ಭಾರತದ ನಾಗರಿಕರಾಗಿದ್ದಾರೆ ನಿಜ ಆದರೆ ಇನ್ನೂ ಜಮ್ಮು ಕಾಶ್ಮೀರದ ಖಾಯಂ ನಿವಾಸಿಗಳಲ್ಲ! ಜಮ್ಮು ಕಾಶ್ಮೀರ ಸಂವಿಧಾನದ ವಿಧಿ 6ರ ದುರುಪಯೋಗದಿಂದ ಇವರಿಗೆ ರಾಜ್ಯದ ಖಾಯಂ ನಿವಾಸಿ(ಸ್ಟೇಟ್ ಸಬ್ಜೆಕ್ಟ್) ಮಾನ್ಯತೆ ನೀಡದೇ ವಂಚಿಸಲಾಗಿದೆ. ಆದ್ದರಿಂದ 70 ವರ್ಷಗಳ ನಂತರ ಇವರ ಮೂರನೇ ತಲೆಮಾರಿನ 19 ಸಾವಿರಕ್ಕೂ ಹೆಚ್ಚು ಕುಟುಂಬಗಳು ಇನ್ನೂ ಯಾವುದೇ ರಾಜ್ಯದ ಆಶ್ರಯ ಸವಲತ್ತುಗಳಿಲ್ಲದೆ, ಅದಕ್ಕಿಂತ ಹೆಚ್ಚಾಗಿ ರಾಜ್ಯದ ನಿವಾಸಿಗಳೆಂಬ ಮಾನ್ಯತೆಯೇ ಇಲ್ಲದೆ ಜೀವನ ಸಾಗಿಸುತ್ತಿವೆ. ರಾಜ್ಯ ಸರ್ಕಾರದ ನೌಕರಿ, ಶಿಕ್ಷಣ, ವೈದ್ಯಕೀಯ ಹಾಗೂ ಇತರೆ ಸವಲತ್ತುಗಳನ್ನು ಪಡೆದುಕೊಳ್ಳುವ ಹಕ್ಕು ಇವರಿಗಿಲ್ಲ. ಭಾರತದ ನಾಗರಿಕರಾಗಿ ಲೋಕಸಭೆಯ ಚುನಾವಣೆಯಲ್ಲಿ ಮತ ಚಲಾಯಿಸಬಹುದು, ಸ್ಫರ್ಧಿಸಲೂ ಬಹುದು ಆದರೆ ರಾಜ್ಯ ವಿಧಾನಸಭೆ, ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಾಲ್ಗೊಳ್ಳುವಂತೆ ಇಲ್ಲ ಮತಾಧಿಕಾರವೂ ಇವರಿಗಿಲ್ಲ.

ತಮ್ಮನ್ನು ರಾಜ್ಯದ ಖಾಯಂ ನಿವಾಸಿಗಳೆಂದು ಪರಿಗಣಿಸಿ ಸ್ಟೇಟ್ ಸಬ್ಜೆಕ್ಟ್ ಮಾನ್ಯತೆ ನೀಡಬೇಕೆನ್ನುವುದು ಈ ನಿರಾಶ್ರಿತರ ದಶಕಗಳ ಬೇಡಿಕೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸರ್ಕಾರವು ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರಿಗೆ ಕೇಂದ್ರ ಗೃಹ ಮಂತ್ರಾಲಯದ ನಿರ್ದೇಶನದ ಅನ್ವಯ ನಿವಾಸಿ/ಗುರುತಿನ ಪ್ರಮಾಣಪತ್ರ (nativity/identity certificate) ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಪ್ರಮಾಣಪತ್ರವು ಇದನ್ನು ಹೊಂದಿರುವವನು ಪಶ್ಚಿಮ ಪಾಕಿಸ್ತಾನದ ನಿರಾಶ್ರಿತನಾಗಿದ್ದು ದೇಶವಿಭಜನೆಯ ನಂತರ ಜಮ್ಮು ಕಾಶ್ಮೀರದಲ್ಲಿ ನೆಲೆಸಿಸದ್ದಾನೆ ಎಂದಷ್ಟೇ ಪ್ರಮಾಣೀಕರಿಸಿಲಿದೆ. ಆದರೆ ಇದು ಜಮ್ಮು ಕಾಶ್ಮೀರದ ನಾಗರಿಕರಿಗೆ ಸಮಾನವಾದ ಸ್ಟೇಟ್ ಸಬ್ಜೆಕ್ಟ್ ಮಾನ್ಯತೆಯಲ್ಲ ಎಂದೂ ಸ್ಪಷ್ಟಪಡಿಸಿದೆ. ಏನೇ ಆದರೂ ಈ ನಿರ್ಧಾರವು ಮುಂಬರುವ ದಿನಗಳಲ್ಲಿ ಪಾಕ್ ನಿರಾಶ್ರಿತರು ರಾಜ್ಯದ ನಾಗರಿಕತ್ವ ಪಡೆಯುವ ನಿಟ್ಟಿನಲ್ಲಿ ಒಂದು ಆಶಾಭಾವವನ್ನು ಹೆಚ್ಚಿಸಿದೆ.

ಆದರೆ ದುರದೃಷ್ಟದ ಸಂಗತಿಯೆಂದರೆ ಎಂದಿನಂತೆ ಕಾಶ್ಮೀರಿ ಕಣಿವೆಯ ವಿರೋಧ ಪಕ್ಷಗಳು ಸರ್ಕಾರ ಗುರುತಿನ ಚೀಟಿ ನೀಡುವುದನ್ನೂ ವಿರೋಧಿಸಿವೆ. ಎಂದಿನಂತೆ ಪ್ರತ್ಯೇಕತಾವಾದಿಗಳು ಹರತಾಳ, ಪ್ರದರ್ಶನ, ಹಿಂಸಾಚಾರಕ್ಕೆ ಮುಂದಾಗುತ್ತಿದ್ದಾರೆ. ರಾಜ್ಯದ ಜನಸಂಖ್ಯಾ ಸಮತೋಲನವನ್ನು ಬದಲಾಯಿಸಲಾಗುತ್ತಿದೆ, ಜಮ್ಮು ಕಾಶ್ಮೀರದ ಸ್ವಾಯತ್ತತೆಗೆ ಭಂಗವಾಗುತ್ತಿದೆ, 370ನೇ ವಿಧಿಯ ಭಂಗವಾಗುತ್ತಿದೆ ಇತ್ಯಾದಿಯಾಗಿ ಬೊಬ್ಬಿರಿಯಲಾಗುತ್ತಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಆಂತರಿಕ ಸ್ಥಳಾಂತರಿತ ನಿರ್ವಸಿತರಿಗೆ ಪರಿಹಾರ
1947ರಲ್ಲಿ ಸ್ವಾತಂತ್ರ ಬಂದ ಹೊಸ್ತಿಲಲ್ಲಿ ಪಾಕಿಸ್ತಾನ ಜಮ್ಮು ಕಾಶ್ಮೀರದ ಮೇಲೆ ಆಕ್ರಮಣ ಮಾಡಿ ಮುಜಾಫರಾಬಾದ್, ಮಿರಪುರ್, ಪೂಂಛ್, ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶಗಳ ಒಂದಿಷ್ಟು ಭಾಗವನ್ನು ಆಕ್ರಮಿಸಿಕೊಂಡಾಗ ಅಲ್ಲಿನ ಬಹುತೇಕ ಹಿಂದೂ ಮತ್ತು ಸಿಖ್ ನಿವಾಸಿಗಳು ಹೊರದಬ್ಬಲ್ಪಟ್ಟರು. ಹೀಗೆ ಮನೆ ಮಠ ಆಸ್ತಿ ಪಾಸ್ತಿ ಎಲ್ಲವನ್ನೂ ಕಳೆದುಕೊಂಡ ಈ ಕುಟುಂಬಗಳಿಗೆ ಜಮ್ಮುವಿನ ನಿರಾಶ್ರಿತ ಶಿಬಿರಗಳಲ್ಲಿ ವಸತಿ ಕಲ್ಪಿಸಲಾಯಿತು. ನಂತರ ಭಾರತೀಯ ಸೇನೆಯ ಪರಾಕ್ರಮದಿಂದ ಯುದ್ಧವೇನೋ ನಿಂತಿತು. ಆದರೆ ಅಂದಿನ ಪ್ರಧಾನಿ ನೆಹರು ಪ್ರಣೀತ ವಿದೇಶಿ ನೀತಿಯಿಂದ ವಿಶ್ವಸಂಸ್ಥೆಗೆ ವಿವಾದವನ್ನು ಕೊಂಡೊಯ್ಯಲಾಗಿ ರಾಜ್ಯದ ದೊಡ್ಡ ಭಾಗ (ಇಂದಿನ ಪಾಕ್ ಆಕ್ರಮಿತ ಕಾಶ್ಮೀರ) ಪಾಕಿಸ್ತಾನದ ವಶದಲ್ಲೇ ಉಳಿಯಿತು. ಈ ಪ್ರದೇಶದಿಂದ ನಿರ್ವಸಿತರಾದವರಿಗೆ ಸಮಸ್ಯೆ ಪರಿಹಾರವಾದ ಬಳಿಕ ಮರಳಿ ತಮ್ಮ ಪ್ರದೇಶಗಳಿಗೆ ತೆರಳಬಹುದು, ಪುನಃ ತಮ್ಮ ಮನೆ ಆಸ್ತಿಗಳನ್ನು ಪಡೆದುಕೊಂಡು ಜೀವನ ಸಾಗಿಸಬಹುದೆಂದು ಹೇಳುತ್ತಲೇ ಬರಲಾಯಿತು. ಆದರೆ ಎಪ್ಪತ್ತು ವರ್ಷಗಳ ದೀರ್ಘ ಕಾಲದ ನಂತರ, ಈ ನಿರ್ವಸಿತ ಜನರ ಮೂರು ತಲೆಮಾರು ಕಳೆದರೂ ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆ ಪರಿಹಾರವಾಗಬಹುದು ಎನ್ನುವುದು ನಂಬಲರ್ಹವಲ್ಲವಾಗಿಲ್ಲ. ಇವರ ಜೊತೆಗೆ 1965 ಮತ್ತು 1971ರ ಯುದ್ಧ ಸಂದರ್ಭಗಳಲ್ಲಿ ಛಂಬ್ ಸೆಕ್ಟರ್ ಮೊದಲಾದ ಗಡಿ ಪ್ರದೇಶಗಳಿಂದ ನಿರ್ವಸಿತರಾದವರೂ ಸಹ ನಿರಾಶ್ರಿತರ ಶಿಬಿರಗಳಲ್ಲಿ ಸೇರಿಕೊಂಡರು.
ರಾಜ್ಯದ ನಾಗರಿಕರೇ(ಸ್ಟೇಟ್ ಸಬ್ಜೆಕ್ಟ್) ಆದರೂ ಆಂತರಿಕ ಸ್ಥಳಾಂತರದಿಂದ ನಿರಾಶ್ರಿತರಾದ ಇಂತಹ 36ಸಾವಿರಕ್ಕೂ ಹೆಚ್ಚು ಕುಟುಂಬಗಳು ಪರಿಹಾರದ ನಿರೀಕ್ಷೆಯಲ್ಲಿ ದಶಕಗಳನ್ನು ಕಳೆದಿವೆ.

ಈ ನಿಟ್ಟಿನಲ್ಲಿ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ ನಿರ್ವಸಿತಿರಿಗೆ ಪರಿಹಾರ ನೀಡುವ ಸಲುವಾಗಿ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೆಜ್ ಅಡಿಯಲ್ಲಿ 2000 ಕೋಟಿ ರೂಪಾಯಿಗಳ ಪುನರ್ವಸತಿ ನಿಧಿಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ನಿರಾಶ್ರಿತ ಕುಟುಂಬದ ಪ್ರತಿ ಸದಸ್ಯನಿಗೆ 5.5ಲಕ್ಷ ರೂಪಾಯಿಯಂತೆ ಅವರ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುವುದು ಹಾಗೂ ಕೇಂದ್ರ ಗೃಹ ಮಂತ್ರಾಲಯ ಇದರ ಮೇಲುಸ್ತುವಾರಿ ನೋಡಿಕೊಳ್ಳುವುದು. ಈಗಾಗಲೇ ಜಮ್ಮು ಕಾಶ್ಮೀರ ಸರ್ಕಾರವು 36384 ನಿರ್ವಸಿತ ಕುಟುಂಬಗಳನ್ನು ಗುರುತಿಸಿದೆ.

ನಿರ್ವಸಿತ ಸಮುದಾಯದವರು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದರೂ ಪ್ರತಿ ವ್ಯಕ್ತಿಗೆ 30ಲಕ್ಷದಂತೆ ಒಟ್ಟೂ 9200ಕೋಟಿ ರೂಪಾಯಿಗಳ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿವೆ. ಒಟ್ಟಿನಲ್ಲಿ ರಾಜ್ಯದ ನಾಗರಿಕರೇ ಆದ ಪಾಕ್ ಆಕ್ರಮಿತ ಪ್ರದೇಶದ ನಿರ್ವಸಿತರಿಗೆ ಈ ಯೋಜನೆಯಿಂದ ಒಂದಿಷ್ಟು ಸಾಂತ್ವದ ದೊರೆಯಲಿದೆ.

ಜಮ್ಮು ಕಾಶ್ಮೀರದ ರಾಜಕೀಯ ಅಸ್ಥರತೆ ಪ್ರತ್ಯೇಕತಾವಾದ ಭಯೋತ್ಪಾದನೆಗಳು ಕೊನೆಗೊಳ್ಳುವುದರ ಜೊತೆಗೆ ನಿರಾಶ್ರಿತರಾದವರಿಗೆ ಪರಿಹಾರ ಪುನರ್ವಸತಿ ಒದಗಿಸುವುದೂ ಅಷ್ಟೇ ಮಹತ್ವದ್ದಾಗಿದೆ. ಇಷ್ಟು ವರ್ಷಗಳ ಕಾಲ ಜಮ್ಮು ಕಾಶ್ಮೀರ ರಾಜ್ಯಕ್ಕೆ ಕೇಂದ್ರದಿಂದ ಕೋಟ್ಟಂತರ ರೂಪಾಯಿಗಳ ಆರ್ಥಿಕ ಪ್ಯಾಕೇಜ್‌ಗಳು ದೊರಕುತ್ತಿದ್ದರೂ ಅದರಲ್ಲಿ ಹೆಚ್ಚಿನ ಪಾಲು ಕಣಿವೆಯ ಪ್ರತ್ಯೇಕತಾವಾದಿಗಳನ್ನು ಸಮಾಧಾನಪಡಿಸುವುದರಲ್ಲೇ ವ್ಯಯವಾಗುತ್ತಿತ್ತು, ರಾಜ್ಯದ ಎರಡು ಪ್ರಮುಖ ಪ್ರಾಂತಗಳಾದ ಜಮ್ಮು ಮತ್ತು ಲಢಾಕ್ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿ ಭಿನ್ನ ದಾರಿಯಲ್ಲಿ ಸಾಗುತ್ತಿದ್ದು ಜಮ್ಮು ಕಾಶ್ಮೀರದ ಸಮಸ್ಯೆ ಪರಿಹಾರವಾಗಬಹುದೆಂಬ ಆಶಾಭಾವನೆ ಮೂಡುತ್ತಿದೆ

ಸಹಸ್ರಮಾನದ ಅಪೂರ್ವ ಪ್ರತಿಭೆ ಆಚಾರ್ಯ ಅಭಿನವಗುಪ್ತ


(ವಿಕ್ರಮ 22/01/2017)

(ಆಚಾರ್ಯ ಅಭಿನವಗುಪ್ತ ಸಹಸ್ರಾಬ್ದಿ ವರ್ಷಾಚರಣೆಯ ಸಮಾರೋಪ ಮತ್ತು ವಿದ್ವತ್ ಗೋಷ್ಠಿಯ ವರದಿ)

ಕಾಶ್ಮೀರಿ ಶೈವ ಸಂಪ್ರದಾಯದ ಮೂರ್ಧನ್ಯ ಆಚಾರ್ಯ ಶ್ರೇಷ್ಠ ತತ್ವಜ್ಙ ಹಾಗೂ ಭಾರತೀಯ ಕಾವ್ಯ ಕಲೆ ಸಾಹಿತ್ಯ ಸಂಸ್ಕೃತಿಗಳ ಮೇಲೆ ತನ್ನ ಅಚ್ಚಳಿಯದ ಪ್ರಭಾವನ್ನು ಬೀರಿದ ಆಚಾರ್ಯ ಅಭಿನವ ಗುಪ್ತ ಇಂದಿಗೆ ಸಾವಿರ ವರ್ಷಗಳ ಕೆಳಗೆ ಕಾಶ್ಮೀರದ ಭೈರವ ಗುಹೆಯೊಳಗೆ ತನ್ನ 1200ಶಿಷ್ಯರೊಡನೆ ಪ್ರವೇಶ ಮಾಡಿದರು. ಇಂದು ವಿಶ್ವದ ಐವತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಅಭಿನವ ಗುಪ್ತರ ಕೃತಿ ಕಾರ್ಯಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಆಚಾರ್ಯ ಅಭಿನವ ಗುಪ್ತರ ಜೀವನ ಸಾಧನೆಯನ್ನು ನೆನಪಿಸುವ ಸಹಸ್ರಾಬ್ದಿ ವರ್ಷಾಚರಣೆ ಕಳೆದ ವರ್ಷದ ಫೆಬ್ರುವರಿಯಲ್ಲಿ ಆರಂಭವಾಯಿತು. ಭಾರತೀಯ ತತ್ವ ಕಲೆ ಕಾವ್ಯ ಶಾಸ್ತ್ರಗಳಿಗೆ ಅಭಿನವ ಗುಪ್ತರ ಕೊಡುಗೆಗಳ ಜೊತೆಗೆ ಕಾಶ್ಮೀರ ಶೈವ ದರ್ಶನವನ್ನೂ ಪರಿಚಯಿಸುವ ಅಭಿನವ ಸಂದೇಶ ಯಾತ್ರೆ, ಅನೇಕ ಗೋಷ್ಠಿ ಸಂವಾದಗಳು ದೇಶದ ವಿವಿಧ ಪ್ರದೇಶಗಳಲ್ಲಿ ಆಯೋಜನೆಗೊಂಡವು. ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ವಿವಿಧ ಆಯಾಮಗಳ ಅಧ್ಯಯನ ಮತ್ತು ಜಾಗೃತಿಯ ವಿಷಯದಲ್ಲಿ ಕಾರ್ಯ ನಡೆಸುತ್ತಿರುವ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಘಟನೆಗೊಂಡ ಅಭಿನವ ಗುಪ್ತ ಸಹಸ್ರಾಬ್ದಿ ವರ್ಷಾಚರಣ ಸಮಿತಿಯ ಕಾರ್ಯಕ್ರಮಗಳ ಸಮಾರೋಪ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದ ಪರಿಸದಲ್ಲಿ ಇದೇ ಜನವರಿಯ 6 ಮತ್ತು 7ರಂದು ಸಂಪನ್ನಗೊಂಡಿತು. ಸಮಾರೋಪದ ಅಂಗವಾಗಿ ರಾಷ್ಟ್ರೀಯ ವಿದ್ವತ್ ಗೋಷ್ಠಿಯು ಆಯೋಜನೆಗೊಂಡಿತು.

ಉದ್ಘಾಟನೆ
ಅಭಿನವ ಗುಪ್ತ ಸಹಸ್ರಾಬ್ದಿ ವರ್ಷಾಚರಣಾ ಸಮಿತಿಯ ಅಧ್ಯಕ್ಷರೂ ಆದ ಅಂತರರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಸಮಾರೋಪ ಹಾಗೂ ವಿದ್ವತ್ ಗೋಷ್ಠಿಯನ್ನು ಉದ್ಘಾಟನೆ ಮಾಡಿದರು. ಸಮಾರೋಪ ಸಮಾರಂಭದಲ್ಲಿ ಜಮ್ಮು ಕಾಶ್ಮೀರದ ಉಪಮುಖ್ಯಮಂತ್ರಿ ಡಾ ನಿರ್ಮಲ್ ಸಿಂಘ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಪ್ರಚಾರ ಪ್ರಮುಖ ಜೆ ನಂದಕುಮಾರ ಹಾಗೂ ದೇಶದ ವಿವಿಧ ಮೂಲೆಗಳಿಂದ ಬಂದ ಪ್ರತಿನಿಧಿಗಳು ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ ನಿರ್ಮಲ್ ಸಿಂಗ್ ಕಾಶ್ಮೀರದ ಜನರನ್ನು ಅದರಲ್ಲೂ ವಿಶೇಷವಾಗಿ ಯುವಕರನ್ನು ಧೃವೀಕರಣಗೊಳಿಸಲು ಭಾರತ ವಿರೋಧಿ ಶಕ್ತಿಗಳು ಸತತವಾಗಿ ಪ್ರಯತ್ನಿಸುತ್ತಿವೆ. ಇತ್ತೀಚಿನ ಪ್ರಕ್ಷುಬ್ಧತೆ ಇದರ ಒಂದು ನಿದರ್ಶನ. ಹಾಗೆಯೇ ಜಮ್ಮು ಕಾಶ್ಮೀರದ ಕಳೆದ ಮೂರು ತಲೆಮಾರುಗಳ ನಾಯಕತ್ವವೂ ಸಹ ಜನರನ್ನು ದಿಕ್ಕು ತಪ್ಪಿಸಿದೆ. ಹೀಗಿದ್ದರೂ ಧನಾತ್ಮಕ ವಾತಾವರಣವನ್ನು ನಿರ್ಮಿಸಲು ಇಂದಿಗೂ ಸಾಕಷ್ಟು ಅವಕಾಶಗಳಿವೆ.ಎಂದು ನುಡಿದರು. ಆಚಾರ್ಯ ಅಭಿನವಗುಪ್ತರ ಕಾರ್ಯ ಮತ್ತು ತತ್ವಗಳು ಕಾಶ್ಮೀರದ ಸಾಂಸ್ಕೃತಿಕ ಪರಂಪರೆಯನ್ನು  ಬಿಂಬಿಸುತ್ತವೆ. ಇದನ್ನು ಸರಿಯಾದ ಸಂದರ್ಭದಲ್ಲಿ ಅರ್ಥೈಸಿಕೊಂಡು, ಸಂಶೋಧನೆಗಳನ್ನು ನಡೆಸಿ ಜನಪ್ರಿಯಗೊಳಿಸಬೇಕು. ಸಹಸ್ರ ವರ್ಷಗಳ ಹಿಂದನಂತೆ ಇಂದಿಗೂ ಸಹ ಅಭಿನವ ಗುಪ್ತರ ತತ್ವ ಹಾಗೂ ಕಾರ್ಯಗಳು  ಪ್ರಸ್ತುತವಾಗಿವೆ. ಯುವಜನತೆ ತಮ್ಮ ಬೇರಿನೊಂದಿಗೆ ಸಂಬಂಧವನ್ನು ಅರಿತಾಗ ಋಣಾತ್ಮಕ ಶಕ್ತಿಗಳನ್ನು ತಡೆಯುವ ಸಾಮರ್ಥ್ಯ ಪಡೆಯುವರು ಎಂದು ಅವರು ಅಭಿಪ್ರಾಯ ಪಟ್ಟರು.
ದಿಕ್ಸೂಚಿ ಭಾಷಣ ಮಾಡಿದ ಆರೆಸ್ಸೆಸ್‌ನ ಜೆ ನಂದಕುಮಾರ್  ಆಚಾರ್ಯ ಅಭಿನವ ಗುಪ್ತ ಭಾರತೀಯ ಋಷಿ ಪರಂಪರೆಯ ಮೂರ್ತಿವೆತ್ತಂತಿದ್ದರು. ಭಾರತದ ಇತಿಹಾಸದಲ್ಲಿ ನಿರಂತರ ನವೋದಯವನ್ನು  ನಾವು ಕಾಣಬಹುದು. ಅನೇಕ ಮಹನೀಯರು ನಮ್ಮ ಸಂಸ್ಕೃತಿ, ಮೌಲ್ಯಗಳು ಮತ್ತು ದರ್ಶನಗಳಿಗೆ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ. ಅವರಲ್ಲಿ ಆಚಾರ್ಯ ಅಭಿನವ ಗುಪ್ತ ಅಗ್ರಗಣ್ಯರಾದವರು. ಎಂದು ಹೇಳಿದರು. ಭಾರತೀಯ ದರ್ಶನ ಮತ್ತು ಪರಂಪರೆಗಳನ್ನು ಕಡೆಗಣಿಸುವ ಸತತ ಪ್ರಯತ್ನಗಳನ್ನು ನೆನಪು ಮಾಡಿಕೊಂಡ ಅವರು ಸ್ವತಂತ್ರ ಭಾರತದ ನಾಯಕರೂ ಸಹ ಬ್ರಿಟಿಷರ ಮಾರ್ಗವನ್ನು ಹಿಡಿದದ್ದು ದುರದೃಷ್ಟಕರ ಎಂದು ಹೇಳಿದರು. ಆಚಾರ್ಯ ಅಭಿನವ ಗುಪ್ತರ ಕುರಿತು ಇಂದಿಗೂ ಹೆಚ್ಚಿನ ಸಂಶೋಧನೆ ಚರ್ಚೆಗಳು ನಡೆಯುತ್ತಿಲ್ಲ. ನಮ್ಮ ಇತಿಹಾಸ ಮತ್ತು ದರ್ಶನಗಳನ್ನು ಸರಿಯಾದ ದೃಷ್ಟಿಕೋನದಲ್ಲಿ ತಿಳಿಯುವ ಅಗತ್ಯವಿದೆ. ಭಾರತೀಯ ಸಂಸ್ಕೃತಿಯು ವೇದ ತಂತ್ರ ಮತ್ತು ಯೋಗಗಳ ತ್ರಿವೇಣಿ ಸಂಗಮ. ಅಭಿನವ ಗುಪ್ತ ಇದರ ಅವಿಭಾಜ್ಯ ಅಂಗ ಎಂದು ಅವರು ಅಭಿಪ್ರಾಯಪಟ್ಟರು.

ಉದ್ಘಾಟನಾ ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀ ಶ್ರೀ ರವಿಶಂಕರ ಕಾರ್ಯಕ್ರಮದ ಯಶಸ್ಸಿಗೆ ಆಶೀರ್ವಚನ ನೀಡಿದರು.

ರಾಷ್ಟ್ರೀಯ ವಿದ್ವತ್ ಗೋಷ್ಠಿ
ಆಚಾರ್ಯ ಅಭಿನವಗುಪ್ತ ಸಹಸ್ರಾಬ್ದಿ ವರ್ಷಾಚರಣೆಯ ಸಮಾರೋಪದ ಅಂಗವಾಗಿ ಎರಡು ದಿನಗಳ ರಾಷ್ಟ್ರೀಯ ವಿದ್ವತ್ ಗೋಷ್ಠಿ ಆಯೋಜನೆಗೊಂಡಿತು. ಈ ಗೋಷ್ಠಿಗಳಲ್ಲಿ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಜೊತೆಗೆ ಭುವನೇಶ್ವರದ ಶ್ರೀ ಶ್ರೀ ರವಿಶಂಕರ ವಿಶ್ವವಿದ್ಯಾಲಯ, ನವದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ನವದೆಹಲಿಯ ಭಾರತೀಯ ತತ್ವಶಾಸ್ತ್ರ ಸಂಶೋಧನಾ ಸಂಘ, ಭೋಪಾಲಿನ ಮಾಖನ್‌ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ಮತ್ತು ಸಂವಹನ ವಿಶ್ವವಿದ್ಯಾನಿಲಯಗಳು ಕೈಜೋಡಿಸಿದವು. ಗಂಭೀರ ವಿಷಯಗಳ ಕುರಿತು ವಿದ್ವತ್ ಪೂರ್ಣ ವಿಚಾರ ಮಂಡನೆ ಚರ್ಚೆಗಳು ನಡೆದ ದೇಶದ ವಿವಿಧೆಡೆಗಳಿಂದ ಆಗಮಿಸಿದ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಸಂಶೋಧಕರು, ವಿದ್ವಾಂಸರು, ಹಿರಿಯ ನ್ಯಾಯವಾದಿಗಳು, ಪತ್ರಕರ್ತರು, ಸಮಾಜದ ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಗಣಮಾನ್ಯ ವ್ಯಕ್ತಿಗಳು ಸೇರಿ 350ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡರು.

ಒಟ್ಟು ಐದು ಅವಧಿಗಳಲ್ಲಿ ಎಂಟು ಸಮಾನಾಂತರ ಗೋಷ್ಠಿಗಳಲ್ಲಿ ವಿಷಯ ಮಂಡನೆ, ಚರ್ಚೆ ಸಂವಾದಗಳು ನಡೆದವು. ಈ ಕೆಳಗೆ ಪಟ್ಟಿ ಮಾಡಿರುವ ವಿಷಯಗಳಲ್ಲಿ ಆಯಾ ವಿಷಯಗಳ ಪರಿಣತರು ಗೋಷ್ಠಿಗಳನ್ನು ನಡೆಸಿಕೊಟ್ಟರು.
1. ಜಮ್ಮು ಕಾಶ್ಮೀರದ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಸ್ಥಿತಿಗತಿ
2. ಇತಿಹಾಸದಲ್ಲಿ ಜಮ್ಮು ಕಾಶ್ಮೀರ
3. ಹಿಮಾಯಲ ಪ್ರದೇಶದ ಭೌಗೋಳಿಕ-ರಾಜಕೀಯ ವ್ಯವಸ್ಥೆ
4. ಆಚಾರ್ಯ ಅಭಿನವಗುಪ್ತ ಮತ್ತು ಮಾಧ್ಯಮ ಹಾಗೂ ಸಂವಹನ
5. ಆಚಾರ್ಯ ಅಭಿನವಗುಪ್ತ ಮತ್ತು ಸಾಂಸ್ಕೃತಿಕ ಅಧ್ಯಯನ
6. ಆಚಾರ್ಯ ಅಭಿನವಗುಪ್ತ ಮತ್ತು ಭಾರತೀಯ ಸಾಹಿತ್ಯ
7. ಆಚಾರ್ಯ ಅಭಿನವಗುಪ್ತ ಮತ್ತು ನಾಗರಿಕತೆಯ ಅಧ್ಯಯನ
8. ಆಚಾರ್ಯ ಅಭಿನವಗುಪ್ತ ಮತ್ತು ದರ್ಶನ, ಆಧ್ಯಾತ್ಮ ಮತ್ತು ಸಾಧನೆ

ಈ ಗೋಷ್ಠಿಗಳು ಜಮ್ಮು ಕಾಶ್ಮೀರವನ್ನಷ್ಟೇ ಅಲ್ಲದೇ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಮೆಲುಕು ಹಾಕುವ ಪ್ರಯತ್ನ ಮಾಡಿದವು. ಜೊತೆಗೆ ಆಚಾರ್ಯ ಅಭಿನವಗುಪ್ತರ ಕಾರ್ಯವನ್ನು ನೆನಪಿಸುವುದರ ಜೊತೆಗೆ ಇಂದಿನ ಸನ್ನಿವೇಶದಲ್ಲಿ ಅಭಿನವಗುಪ್ತರ ಕಾರ್ಯದ ಪ್ರಸ್ತುತತೆಯನ್ನು ಚರ್ಚಿಸಿದವು.

ಸಮಾರೋಪ

ಆರ್ಟ್ ಆಫ್ ಲಿವಿಂಗ್ ಆಶ್ರಮದ ಪರಿಸರದಲ್ಲಿ ನಡೆದ ಆಚಾರ್ಯ ಅಭಿನವ ಗುಪ್ತ ಸಹಸ್ರಾಬ್ದಿ ವರ್ಷಾಚರಣೆ ಮತ್ತು ಅದರ ಅಂಗವಾಗಿ ಆಯೋಜಿಸಲ್ಪಟ್ಟ ವಿದ್ವತ್ ಗೋಷ್ಠಿಗಳ ಸಮಾರೋಪದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಗ ಮಾನನೀಯ ಭಯ್ಯಾಜೀ(ಸುರೇಶ್) ಜೋಶಿ, ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ಪ್ರಕಾಶ ಜಾವಡೇಕರ ಪಾಲ್ಗೊಂಡರು. ಶ್ರೀ ಶ್ರೀ ರವಿಶಂಕರ ಗುರೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಚಾರ್ಯ ಅಭಿನವಗುಪ್ತರನ್ನು ಪೃಥ್ವಿಯ ಓರ್ವ ಶ್ರೇಷ್ಠ ಧಾರ್ಶನಿಕ ಎಂದು ಬಣ್ಣಿಸಿದ ಪ್ರಕಾಶ ಜಾವಡೇಕರ್, ಸಾವಿರ ವರ್ಷಗಳ ಹಿಂದೆಯೂ ಭಾರತವು ವಿಶ್ವದಲ್ಲಿ ಜ್ಞಾನದ ಕೇಂದ್ರವಾಗಿತ್ತು. ಆ ಕಾಲದಲ್ಲಿ ಅಂತರರಾಷ್ಟ್ರೀಯ ರ‍್ಯಾಂಕಿಂಗ್ ವ್ಯವಸ್ಥೆ ಇದ್ದಿದ್ದರೆ ಭಾರತೀಯ ವಿದ್ವಾಂಸರು ಒಂದರಿಂದ ಹತ್ತರವರೆಗಿನ ಎಲ್ಲ ರ‍್ಯಾಂಕಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು.  ಎಂದು ನುಡಿದರು. ಆಚಾರ್ಯ ಅಭಿನವಗುಪ್ತರ ಕುರಿತ ಸಂಶೋಧನೆಗೆ ಎಲ್ಲ ಸಹಕಾರ ನೀಡುವ ಭರವಸೆಯನ್ನು ಮಾನ್ಯ ಸಚಿವರು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರೆಸ್ಸೆಸ್ ಸರಕಾರ್ಯವಾಹ ಭಯ್ಯಾಜೀ ಜೋಶಿ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದರೆ ಅದು ರಾಜಕೀಯ ಅರ್ಥದಲ್ಲಿ ಅಲ್ಲವೇ ಅಲ್ಲ. ಸಾವಿರಾರು ವರ್ಷಗಳ ಹಿಂದಿನಿಂದಲೂ ಇದು ಎಲ್ಲ ರೀತಿಯಿಂದಲೂ ಸ್ವಾಭಾವಿಕವಾಗಿ ಭಾರತದ ಭಾಗವಾಗಿತ್ತು. ನಾವು ಇಂದು ಅಭಿನವ ಗುಪ್ತರ ಸಹಸ್ರಾಬ್ದ ವರ್ಷವನ್ನು ಆಚರಿಸುತ್ತಿದ್ದೇವೆ, ಅವರು ಶೈವ ದರ್ಶನದ ಮೂಲಕ ಭಾರತೀಯ ವಿಚಾರವನ್ನು ಉತ್ತರದ ಕಾಶ್ಮೀರದಿಂದ ದಕ್ಷಿಣದ ತುದಿಯವರೆಗೆ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಎಂದು ನುಡಿದರು. ಮಾತೆ ವೈಶ್ಣೋದೇವಿ,  ಖೀರ ಭವಾನಿ ಮಂದಿರಗಳುಳ್ಳ ಜಮ್ಮು ಕಾಶ್ಮೀರವು ಶಕ್ತಿಯ ಸ್ಥಾನ. ಇದು ಸಾಂಸ್ಕೃತಿಕ ಮೌಲ್ಯಗಳ ಭೋದನೆಗಳ ಮೂಲ ಸ್ಥಾನ. ಕಾಶ್ಮೀರವನ್ನು ಹಿಂದಿದ್ದ ರೀತಿಯ ಜ್ಞಾನ ಮತ್ತು ಶಾಂತಿಯ ಕ್ಷೇತ್ರವಾಗಿ ಪುನಃ ಎದ್ದು ನಿಲ್ಲಸಲು ಕೆಲಸ ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.

ಶತಮಾನಗಳ ನಂತರ ಒಬ್ಬ ನಿಜವಾದ ತತ್ವಜ್ಞರನ್ನು ನೆನೆಸಿಕೊಳ್ಳುತ್ತಿದ್ದೇವೆ. ಇಂದಿನ ಕಾರ್ಯಕ್ರಮವು ಕಳೆದ ಒಂದು ವರ್ಷದ ಕಾರ್ಯಕ್ರಮಗಳ ಸಮಾರೋಪವಷ್ಟೇ. ಆದರೆ ಆಚಾರ್ಯ ಅಭಿನವ ಗುಪ್ತರ ಸಂದೇಶವನ್ನು ದೇಶ ಹಾಗೂ ವಿಶ್ವದಾದ್ಯಂತ ತೆಗೆದುಕೊಂಡು ಹೋಗಬೇಕು ಎಂದು ಶ್ರೀ ಶ್ರೀ ರವಿಶಂಕರ ಗುರೂಜಿ ನುಡಿದರು. ಅವರ ಮೊದಲಿನ ಪ್ರವಚನಗಳು ಶಿವ ಸೂತ್ರಗಳ ಮೇಲೆ ಆಧರಿಸದ್ದನ್ನು ನೆನಪಿಸಿಕೊಳ್ಳುತ್ತ ಓಂ ನಮಃ ಶಿವಾಯ, ಈ ಮಂತ್ರವು ಕಾಶ್ಮೀರದಿಂದ ರಾಮೇಶ್ವರಂವರೆಗೆ ಭಾರತವನ್ನು ಜೋಡಿಸುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಆರೆಸ್ಸೆಸ್ ಪ್ರಚಾರಕ, ರಾಷ್ಟ್ರೀಯ ಕಾರ್ಯಕಾರಣಿಯ ಸದಸ್ಯ ಹಾಗೂ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ನಿರ್ದೇಶಕರೂ ಆದ ಶ್ರೀ ಅರುಣಕುಮಾರ್ ಜಮ್ಮು ಕಾಶ್ಮೀರದ ಕುರಿತು ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಸಮ್ಮೇಳನದ ಉದ್ಧೇಶ ಇಲ್ಲಿ ನಡೆದ ಚರ್ಚೆಯ ವಿಷಯ ಇಡೀ ದೇಶದಲ್ಲಿ ಚರ್ಚೆಯಾಗಬೇಕು ಎನ್ನುವುದಾಗಿದೆ. ಚಿಂತಕರು, ಶೈಕ್ಷಣಿಕ ಕ್ಷೇತ್ರದ ವಿದ್ವಾಂಸರು, ಮಾಧ್ಯಮ, ನೀತಿ ನಿರೂಪಕ ಸಂಸ್ಥೆಗಳು ಇಲ್ಲಿ ಚರ್ಚಿತವಾದ ವಿಷಯಗಳನ್ನು ಅರಿಯಬೇಕು. ರಾಷ್ಟ್ರೀಯ ವಿದ್ವತ್ ಗೋಷ್ಠಿಯಲ್ಲಿ ಪರಿಣಿತರು ನಿರ್ಣಯಿಸಿದ ವಿಷಯಗಳನ್ನು ದೇಶದಾದ್ಯಂತ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ನಾವು  ಮಾಡುತ್ತೇವೆ. ಇಂದಿನ ಜಮ್ಮು ಕಾಶ್ಮೀರ ಸಮಸ್ಯೆಗೆ ಎರಡು ಪ್ರಮುಖವಾದ ಮೂಲ ಕಾರಣಗಳಿವೆ, ಒಂದು ಜಮ್ಮು ಕಾಶ್ಮೀರದಲ್ಲಿ ಹರಡಿರುವ ತಪ್ಪು ಮಾಹಿತಿ ಇನ್ನೊಂದು ದೇಶದ ಉಳಿದ ಭಾಗದಲ್ಲಿ ಮಾಹಿತಿಯ ಕೊರತೆ. ಮಾಹಿತಿಯ ಕೊರತೆ ಇದ್ದಾಗ ತಪ್ಪು ಗ್ರಹಿಕೆ ಉಂಟಾಗುತ್ತದೆ, ಈ ತಪ್ಪು ಗ್ರಹಿಕೆ ಸಮಂಜಸವಲ್ಲದ ನಿರ್ಣಯಗಳಿಗೆ ಎಡೆಮಾಡಿಕೊಡುತ್ತದೆ. ರಾಜ್ಯ ಮತ್ತು ದೇಶದ ಇತರೆಡೆ ಜಮ್ಮು ಕಾಶ್ಮೀರ ಕುರಿತ ತಪ್ಪು ಗ್ರಹಿಕೆಗಳನ್ನು ಬದಲಾಯಿಸಬೇಕೆಂಬ ಗುರಿಯನ್ನು ಇಟ್ಟುಕೊಂಡರೆ ನಾವು ಸರಿಯಾದ ಮಾಹಿತಿಯನ್ನು ಪ್ರಚುರಪಡಿಸಬೇಕು. ಇದಕ್ಕಾಗಿ ದೇಶದ ಮೂಲೆ ಮೂಲೆಗೆ ಸರಿಯಾದ ವಿಷಯ ತಲುಪಬೇಕು ಮತ್ತು ತನ್ಮೂಲಕ ಜಮ್ಮು ಕಾಶ್ಮೀರ ಕುರಿತಂತೆ ಸರಿಯಾದ ಅಭಿಪ್ರಾಯ ಮತ್ತು ಸಾರ್ವಜನಿಕ ಚರ್ಚೆ ಬೆಳೆಯಬೇಕು, ಇದು ಇಂದಿನ ಅಗತ್ಯವಾಗಿದೆ ಎಂದು ನುಡಿದರು.

ಜಮ್ಮು ಕಾಶ್ಮೀರವನ್ನು ಕುರಿತ ಎರಡು ದಿನಗಳ ಚಿಂತನಾ ಗೋಷ್ಠಿ ಕಾಶ್ಮೀರದ ಸಾಂಸ್ಕೃತಿಕ ಪರಂಪರೆಯನ್ನು ಸರಿಯಾದ ದೃಷ್ಟಿಕೋನದಲ್ಲಿ ಮುಂದಿರಿಸಿ ಪ್ರಚಾರಗೊಳಿಸುವ ಮೂಲಕ ಸಾರ್ವಜನಿಕ ಅಭಿಪ್ರಾಯ ಮತ್ತು ಚರ್ಚೆಯನ್ನು ಬದಲಿಸುವ ನಿರ್ಣಯವನ್ನು ಕೈಗೊಂಡು ಸಮಾರೋಪಗೊಂಡಿತು.

Friday, November 11, 2016

ಆಂತರಿಕ ಭದ್ರತೆಗೆ ಜಿಹಾದಿಗಳ ಸವಾಲು

(ಪುಂಗವ  15/11/2016)

ರಾಜಕೀಯ ಹಿಂಸಾಚಾರಕ್ಕೆ ಮತೀಯ ಉಗ್ರವಾದದ ನಂಟು  -  ರಾಜ್ಯದಲ್ಲಿ ನಡೆದಿದೆ ಆರೆಸ್ಸೆಸ್ ಕಾರ್ಯಕರ್ತರ ಸರಣಿ ಕೊಲೆಗಳು

ರಾಜ್ಯದಲ್ಲಿ ಕಳೆದ ಇಪ್ಪತ್ತೊಂದು ತಿಂಗಳುಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ಪರಿವಾರ ಸಂಘಟನೆಗಳಿಗೆ ಸೇರಿದ ಎಂಟು ಮಂದಿಯ ಹತ್ಯೆಯಾಗಿದೆ. 2015ರ ಫೆಬ್ರುವರಿ 19ರಂದು ಶಿವಮೊಗ್ಗದಲ್ಲಿ ಚೂರಿ ಇರತಕ್ಕೆ ಬಲಿಯಾದ ವಿಶ್ವನಾಥ, 2015 ನವಂಬರ 10ರಂದು ಟಿಪ್ಪು ಜಯಂತಿ ಮೆರವಣಿಗೆಯ ದೊಂಬಿಯಲ್ಲಿ ಹಲ್ಲೆಗೀಡಾಗಿ ಮೃತರಾದ ಕೊಡಗಿನ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ, 2016ರ ಅಕ್ಟೋಬರ್ 16ರಂದು ವಿಜದಶಮಿಯ ಪಥಸಂಚಲ ಮುಗಿಸಿ ಮನೆಗೆ ಹೊರಟಿದ್ದಾಗ ಸಂಘದ ಗಣವೇಶದಲ್ಲೇ ಕೊಲೆಯಾದ ಬೆಂಗಳೂರಿನ ಶಿವಾಜಿನಗರದ ರುದ್ರೇಶ್ ಇವರೆಲ್ಲರ ಕೊಲೆಯ ಸಂಚಿನ ಹಿಂದೆ ಪ್ರಮುಖವಾಗಿ ಒಂದೇ ಸಂಘಟನೆಯ ಹೆಸರು ಕೇಳಿ ಬರುತ್ತಿದೆ.. ಮೂಡುಬಿದಿರೆಯ ಬಜರಂಗದಳ ಕಾರ್ಯಕರ್ತ ಪ್ರಶಾಂತ ಪೂಜಾರಿ, ಮೈಸೂರಿನ ಉದಯಗಿರಿ ಬಡಾವಣೆಯಲ್ಲಿ ಹತ್ಯೆಗೀಡಾದ ಬಿಜೆಪಿಯ ಕ್ಯಾತಮಾರನಹಳ್ಳಿ ರಾಜು, ಕುಶಾಲನಗರದ ಪ್ರವೀಣ ಪೂಜಾರಿ, ಮಂಗಳೂರಿನ ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ ರಾಜ್, ಮೈಸೂರಿನ ಬಿಜೆಪಿ ಮುಖಂಡ ಮಾಗಳಿ ರವಿ ಇವರುಗಳ ಹತ್ಯೆಯ ಹಿಂದೆಯೂ ಒಂದೇ ಸಂಘಟನೆಗೆ ಸೇರಿದ ಜನರ ಹೆಸರು ಬಲವಾಗಿ ಕೇಳಿಬರುತ್ತಿದೆ. ಅಲ್ಲದೇ ಹಲವಾರು ಬಾರಿ ಸಂಘದ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿವೆ. ಬೆಂಗಳೂರಿನ ರುದ್ರೇಶ್ ಹತ್ಯೆಯಲ್ಲಿ ಬಂಧಿತರಾದ ನಾಲ್ವರು ಪ್ರಮುಖ ಆರೋಪಿಗಳಾದ ವಾಸೀಂ ಅಹ್ಮದ್, ಮುಜೀಬ್, ಮೊಹಮದ್ ಮಜರ್ ಮತ್ತು ಇರ್ಫಾನ್ ಪಾಷಾ ವಿಚಾರಣಾ ಸಂದರ್ಭದಲ್ಲಿ ಪೋಲೀಸರಿಗೆ ನೀಡಿದ ಮಾಹಿತಿಯಿಂದ ಸಂಘಪರಿವಾರದ ಕಾರ್ಯಕರ್ತರ ಹತ್ಯೆಯ ವ್ಯವಸ್ಥಿತ ಸಂಚು ಮತ್ತು ಇವೆಲ್ಲದರೊಡನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಅಥವಾ ಪಿಎಫ್‌ಐ ಹೆಸರಿನ ಈ ಸಂಘಟನಯೊಂದಿಗಿನ ನಂಟು ದೃಢಗೊಂಡಿದೆ. ರುದ್ರೇಶ್ ಹತ್ಯೆಯನ್ನು ಕಾರ್ಯಗತಗೊಳಿಸಿದ ಈ ನಾಲ್ವರು ಪಿಎಫ್‌ಐ ಮತ್ತು ಎಸ್‌ಡಿಪಿಐನ ಸದಸ್ಯರಾಗಿದ್ದಲ್ಲದೇ ಇವರಿಗೆ ಸೂಚನೆ ನೀಡಿದ ಪಿಎಫ್‌ಐ ಸಂಘಟನೆಯ ಬೆಂಗಳೂರು ಜಿಲ್ಲಾಧ್ಯಕ್ಷ ಅಸೀಂ ಷರೀಫ್ ಕೂಡ ಬಂಧನಕ್ಕೊಳಗಾಗಿದ್ದಾನೆ. ಈ ಹಿಂದೆ ಮೂಡುಬಿದಿರೆಯ ಪ್ರಶಾಂತ ಪೂಜಾರಿ ಹತ್ಯೆಯಲ್ಲಿ ಬಂಧಿತರಾದ ಏಳು ಜನ ಪಿಎಫ್‌ಐ ಸದಸ್ಯರಾಗಿದ್ದರು, ಅವರಲ್ಲೊಬ್ಬ ವಲಯ ಅಧ್ಯಕ್ಷನೂ ಸೇರಿದ್ದ. ಕುಟ್ಟಪ್ಪ ಹತ್ಯೆ, ರಾಜು ಹತ್ಯೆಯ ಆರೋಪಿಗಳಿಗೂ, ಅನೇಕ ಬಾರಿ ಸಂಘದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರಿಗೂ ಪಿಎಫ್‌ಐ ನಂಟಿದ್ದಿದು ಸಾಬೀತಾಗಿದೆ. ಹಾಗೆಯೇ ಈ ಎಲ್ಲ ಕೊಲೆಗಳಲ್ಲೂ ಒಂದು ರೀತಿ ಸಾಮ್ಯತೆ ಕಾಣುತ್ತದೆ.

ರುದ್ರೇಶ್ ಕೊಲೆ ಪ್ರಕರಣದಲ್ಲಿ ಬಂಧಿತರಾದ ನಾಲ್ವರು ನೀಡಿದ ಮಾಹಿತಿಗಳು ಇನ್ನೂ ಬೆಚ್ಚಿ ಬೀಳಿಸುವಂತವು. ತನಿಖೆ ನಡೆಸುತ್ತಿರುವ ಪೋಲೀಸರೇ ಹೇಳುವಂತೆ ಹತ್ಯೆಗೂ ಮೊದಲು ಅವರು ಉಗ್ರ ಸಂಘಟನೆಯಿಂದ ತರಬೇತಿ ಪಡೆದಿದ್ದರು. ಅವರ ಮನೆಯವರೇ ಪೋಲೀಸರಿಗೆ ನೀಡಿದ ಮಾಹಿತಿಯಂತೆ ಆಗಾಗ ಕೆಲವು ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೇರಳ ಮತ್ತು ಆಂಧ್ರ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಹಾಗೆಯೇ ರುದ್ರೇಶ್ ಜೊತೆಗೆ ಇನ್ನೋರ್ವ ಆರೆಸ್ಸೆಸ್ ಕಾರ್ಯಕರ್ತನನ್ನು ಕೊಲೆ ಮಾಡಿ ಸಂಘದ ಕಾರ್ಯಕರ್ತರಲ್ಲಿ ಭಯವನ್ನು ಹುಟ್ಟಿಸಲು ಬಯಸಿದ್ದರು ಎನ್ನುವ ಮಾಹಿತಿಯನ್ನು ಅವರು ನೀಡಿದ್ದಾರೆ. ಜೊತೆಗೆ ಮೈಸೂರಿನ ಸಂಸದ ಪ್ರತಾಪ ಸಿಂಹ ಸೇರಿದಂತೆ ಇನ್ನು ಕೆಲವು ಮುಖಂಡರನ್ನು ಕೊಲ್ಲಲು ಸಂಚು ನಡೆದಿತ್ತು ಎನ್ನುವ ವರದಿಗಳೂ ಬಂದಿವೆ. ಇವುಗಳಿಂದ ಸಂಘ ಪರಿವಾರಗಳಿಗೆ ಸೇರಿದ ಕಾರ್ಯಕರ್ತರ ಕೊಲೆ ಮತ್ತು ಹಲ್ಲೆಗಳ ಹಿಂದೆ ಸಂಘವನ್ನು ಬೆದರಿಸುವ ಒಂದು ವ್ಯವಸ್ಥಿತ ಸಂಚು ನಡೆದಿದ್ದು ಸ್ಪಷ್ಟ. ಜೊತೆಗೆ ಈ ಹಿಂಸೆಯ ಹಿಂದೆ ರಾಜಕೀಯ ಕುತಂತ್ರವೂ ಅಡಗಿದ್ದು ಪಿಎಫ್‌ಐನ ರಾಜಕೀಯ ಅಂಗವಾದ ಸೊಷಯಲಿಸ್ಟ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ (ಎಸ್‌ಡಿಪಿಐ) ವನ್ನು ಮುಸ್ಲಿಮರ ಪಕ್ಷವಾಗಿ ದಕ್ಷಿಣ ಭಾರತದಲ್ಲಿ ನೆಲೆಗೊಳಿಸುವ ಹುನ್ನಾರವೂ ಅಡಗಿದೆ. 

ಟಿಪ್ಪು ಜಯಂತಿ ಆಚರಣೆಯ ವಿರೋಧದಲ್ಲಿ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದ್ದು ಸಂಘ ಅದರ ಮುಂಚೂಣಿಯಲ್ಲಿರುವುದೂ ಇತ್ತೀಚಿಗೆ ಸಂಘರಿವಾರದ ಕಾರ್ಯಕರ್ತರ ಮೇಲೆ ಹಿಂಸಾಚಾರ ಹೆಚ್ಚಾಗಲು ಇನ್ನೊಂದು ಕಾರಣ. ಇದೇ ನವೆಂಬರ ೪ರಂದು ಮೈಸೂರಿನ ಪಿರಿಯಾಪಟ್ಟಣದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಂಭಂಧಿಸಿದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗಲೇ ಮಾಗಳಿ ರವಿ ಸಂಶಯಾಸ್ಪದ ರೀತಿಯಲ್ಲಿ ಮರಣ ಹೊಂದಿದರು, ಸನ್ನಿವೇಶವನ್ನು ನೋಡಿದರೆ ಇದು ವ್ಯವಸ್ಥಿತ ಕೊಲೆ ಎನ್ನುವುದು ಗೋಚರವಾಗುತ್ತದೆ. ಟಿಪ್ಪು ಜಯಂತಿ ಆಚರಣೆ ಮುಸ್ಲಿಂ ಮತಗಳನ್ನು ಸೆಳೆಯುವ ರಾಜಕೀಯ ಲಾಭಕ್ಕಾಗಿ ದುರುದ್ಧೇಶದಿಂದ ಕೂಡಿದ್ದು ಎನ್ನುವುದು ಸ್ಪಷ್ಟ. ಕ್ರೂರಿ ಮತಾಂಧ ಟಿಪ್ಪುವಿನ ಐತಿಹಾಸಿಕ ನಿಜಸ್ವರೂಪವನ್ನು ಬಯಲು ಮಾಡಿದ್ದಲ್ಲದೆ ಆತನ ಜಯಂತಿ ಆಚರಣೆಯ ಹಿಂದಿನ ರಾಜಕೀಯ ದುರದ್ಧೇಶದ ವಿರುದ್ಧ ಪ್ರಬಲವಾದ ಜನಾಭಿಪ್ರಾಯವು ರೂಪುಗೊಂಡಿದ್ದು ಅವರನ್ನು ಕೆರಳಿಸಿದೆ. ದುರದೃಷ್ಟದ ಸಂಗತಿಯೆಂದರೆ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರ ಇಂತಹ ಸಮಾಜಘಾತುಕ ಶಕ್ತಿಗಳ ರಕ್ಷಣೆಗೆ ನಿಂತಿರುವಂತೆ ಕಾಣುತ್ತಿದೆ. ಪ್ರತಿಯೊಂದು ಬಾರಿ ಸಂಘಪರಿವಾರದ ಕಾರ್ಯಕರ್ತರ ಕೊಲೆಯಾದಾಗಲೂ ವೈಯಕ್ತಿಕ ದ್ವೇಷದಿಂದ ಕೊಲೆ, ಅಪಘಾತದಿಂದ ಸಾವು ಇತ್ಯಾದಿ ವಾದಗಳನ್ನು ತೇಲಿಬಿಟ್ಟು ತನಿಖೆಯ ದಾರಿತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಹತ್ಯೆಗೀಡಾದವರಿಗೆ ಮಸಿ ಬಳಿಯುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.

ಪಿಎಫ್‌ಐನಂತಹ ಉಗ್ರವಾದಿ ಸಂಘಟನೆಯ ರಕ್ಷಣೆ ಅಥವಾ ಮತೀಯ ಮೂಲಭೂತವಾದವನ್ನು ಪೋಷಿಸುವ ನೀತಿಯಿಂದ ಮುಸ್ಲಿಂ ಮತಗಳ ಧ್ರುವೀಕರಣದಿಂದ ರಾಜಕೀಯ ಲಾಭವಾಗಬಹುದೆಂದು ಕಾಂಗ್ರೆಸ್ ಮತ್ತಿತರ ತಥಾಕಥಿತ ಸೆಕ್ಯುಲರ್ ಪಕ್ಷಗಳು ಭಾವಿಸಬಹುದು. ಆದರೆ ಇಂತಹ ನೀತಿಯು ಸಮಾಜಘಾತುಕ ದೇಶವಿರೋಧಿ ಎನ್ನುವ ಎಚ್ಚರಿಕೆ ಇರಬೇಕು. ಹಾಗೆಯೇ ಇಂತಹ ಹಿಂಸಾಚಾರ ವಿರೋಧಗಳಿಂದ ಸಂಘ ಇನ್ನಷ್ಟು ಬಲಗೊಳ್ಳುವುದೇ ವಿನಹ ಎಂದಿಗೂ ಬೆದರಿಸಲಾರವು. ಏಕೆಂದರೆ ಸಂಘ ಸಮಾಜ ಸಂಘಟನೆ ಮತ್ತು ರಾಷ್ಟ್ರೀಯ ಮುನರುತ್ಥಾನದ ಉನ್ನತ ಧ್ಯೇಯಕ್ಕಾಗಿ ಕಾರ್ಯ ಮಾಡುತ್ತಿದೆಯೇ ಹೊರತು, ಯಾವುದೇ ರಾಜಕೀಯ ಅಧಿಕಾರದ ಆಕಾಂಕ್ಷೆಗಳಿಗಲ್ಲ.


ಏನಿದು ಪಿಎಫ್‌ಐ?
ಕೇರಳದಲ್ಲಿ ಮೂಲವನ್ನು ಹೊಂದಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಥವಾ ಪಿಎಫ್‌ಐ ೨೦೦೬ರಲ್ಲಿ ಪ್ರಾರಂಭಗೊಂಡ ಒಂದು ಮುಸ್ಲಿಂ ಮೂಲಭೂತವಾದಿ ಸಂಘಟನೆಯಾಗಿದೆ. ನಿಷೇಧಿತ ಉಗ್ರ ಸಂಘಟನೆ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ ಇಂಡಿಯಾ- ಸಿಮಿಯ ಹೊಸ ರೂಪ ಎಂದೇ ಹೇಳಬಹುದಾದ ಪಿಎಫ್‌ಐನ ಮುಖಂಡರು ಬಹುತೇಕ ಸಿಮಿಯ ಕಾರ್ಯಕರ್ತರೇ ಆಗಿದ್ದಾರೆ. ಉದಾಹರಣೆಹೆ ಪಿಎಫ್‌ಐನ ಸಂಸ್ಥಾಪಕರಲ್ಲೊಬ್ಬ ಅಬ್ದುಲ್ ರೆಹಮಾನ್ ಸಿಮಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ, ಕೇರಳದ ಸೆಕ್ರೆಟರಿ ಅಬ್ದುಲ್ ಹಮೀದ್ ಮಾಸ್ಟರ್ ಸಿಮಿಯ ಕೇರಳ ಸೆಕ್ರೆಟರಿಯಾಗಿದ್ದ.  ಈ ಸಂಘಟನೆ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಸಮಾಜಘಾತುಕ ಮತ್ತು ದೇಶವಿರೋಧಿ ಕಾರ್ಯಗಳಿಗಾಗಿ ಸದಾ ಸುದ್ದಿಯಲ್ಲಿದೆ. ಕಿಡ್ನಾಪ್, ಕೊಲೆ, ಬೆದರಿಕೆ ಹಾಕುವುದು, ಗಲಭೆ ಹುಟ್ಟಿಸುವುದು, ದ್ವೇಷದ ಹರಡುವುದು ಮೊದಲಾದವುಗಳಿಂದ ಹಿಡಿದು ಮತೀಯ ಮೂಲಭೂತವಾದ, ಲವ್ ಜಿಹಾದ್, ಇಸ್ಲಾಂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಭಂಧ ಇವೆ ಎನ್ನುವವರೆಗೆ ಅನೇಕ ಆರೋಪಗಳು ಪಿಎಫ್‌ಐ ಮೇಲೆ ನಿರಂತರ ಕೇಳಿ ಬಂದಿವೆ. ನ್ಯಾಶನಲ್ ಡೆವೆಲೊಪ್‌ಮೆಂಟ್ ಫ್ರಂಟ್(ಎನ್‌ಡಿಎಫ್), ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ(ಕೆಎಫ್‌ಡಿ), ಮನಿತ ನೀತಿ ಪಸರೈ(ಎಮ್‌ಎನ್‌ಪಿ) ಮೊದಲಾದ ಸಂಘಟನೆಗಳು ಪಿಎಫ್‌ಐನಲ್ಲಿ ವಿಲೀನಗೊಂಡು ದಕ್ಷಿಣ ಭಾರತದ ರಾಜ್ಯಗಳಿಗೆ ಪಿಎಫ್‌ಐ ಹರಡಿಕೊಂಡಿದೆ. ನ್ಯಾಶನಲ್ ವುಮನ್ಸ್ ಫ್ರಂಟ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮೊದಲಾದ ವಿವಿಧ ಮೋರ್ಚಾಗಳ ಮೂಲಕ ತನ್ನ ಜಾಲವನ್ನು ವಿಸ್ತರಿಸಿದ್ದು ೮೦ ಸಾವಿರಕ್ಕು ಹೆಚ್ಚು ಸದಸ್ಯತ್ವ ಇದೆ ಎಂದು ಹೇಳಿಕೊಳ್ಳುತ್ತದೆ. ಸಮಾನತೆಯ ಸಮಾಜ ಸ್ಥಾಪನೆಗಾಗಿ ಹೋರಾಡುವ ಸಾಮಾಜಿಕ ಸಂಘಟನೆ ಎಂದು ಹೇಳಿಕೊಳ್ಳುವ ಈ ಸಂಘಟನೆಯ ಸದಸ್ಯರೆಲ್ಲರೂ ಮುಸ್ಲಿಮರೇ. ಸೋಷಯಲಿಸ್ಟ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಅಥವಾ ಎಸ್‌ಡಿಪಿಐ ಪಿಎಫ್‌ಐ ಹುಟ್ಟುಹಾಕಿದ ರಾಜಕೀಯ ಪಕ್ಷವಾಗಿದ್ದು ಆಸ್ಸಾಮಿನ ಬದ್ರುದ್ದೀನ ಅಜ್ಮಲ್‌ನ ಏಐಯುಡಿಎಫ್ ಮತ್ತು ಹೈದರಾಬಾದಿನ ಓವೈಸಿಯ ಎಮ್‌ಐಎಮ್ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮುಸಲ್ಮಾನರ ಪಕ್ಷವಾಗಿ ನೆಲೆಗೊಳ್ಳಲು ಪ್ರಯತ್ನಿಸುತ್ತಿದೆ. 

ಏಪ್ರಿಲ್ 2013ರಲ್ಲಿ ಕೇರಳದ ಕಣ್ಣೂರಿನ ನಾರತ್‌ನಲ್ಲಿ ಪಿಎಫ್‌ಐ ತರಬೇತಿ ಕೇಂದ್ರದಲ್ಲಿ ಪೋಲಿಸರು ದಾಳಿ ಮಾಡಿದಾಗ ನಾಡಬಾಂಬುಗಳು, ಮಚ್ಚು ಮೊದಲಾದ ಆಯುಧಗಳು, ಬಾಂಬ್ ತಯಾರಿಕಾ ಕಚ್ಚಾವಸ್ತುಗಳು ದೊರೆತವು, 21 ಪಿಎಫ್‌ಐ ಕಾರ್ಯಕರ್ತರು ಬಂಧಿತರಾದರು. 2011ರಲ್ಲಿ ಮೈಸೂರಿನಲ್ಲಿ ಇಬ್ಬರು ಹುಡುಗರನ್ನು ಅಪಹರಿಸಿದ ಕೆಎಫ್‌ಡಿಯ ಕಾರ್ಯಕರ್ತರು ಸಂಘಟನೆಯ ಫಂಡಿಗಾಗಿ ೫ಕೋಟಿ ಒತ್ತೆ ಹಣದ ಬೇಡಿಕೆ ಇಟ್ಟಿದ್ದರು. ಆ ಇಬ್ಬರೂ ಹುಡುಗರನ್ನು ಸಾಯಿಸಲಾಯಿತು. 2012ರಲ್ಲಿ ಕೇರಳ ಸರ್ಕಾರ ಉಚ್ಛ ನ್ಯಾಯಾಲಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಪಿಎಫ್‌ಐ ಆರೆಸ್ಸೆಸ್ ಮತ್ತು ಸಿಪಿಐ(ಎಮ್)ನ ಕಾರ್ಯಕರ್ತರ ಕೊಲೆಯ ೨೭ ಪ್ರಕರಣಗಳಲ್ಲಿ ಪಿಎಫ್‌ಐ ಕೈವಾಡ ಇದೆ ಎಂದು ಹೇಳಿದೆ. ೨೦೧೨ರಲ್ಲಿ ಪುನಾ, ಚೆನ್ನೈ, ಹೈದರಾಬಾದ ದೆಹಲಿಗಳಿಂದ ಲಕ್ಷಾಂತರ ಎಸ್‌ಎಮ್‌ಎಸ್‌ಗಳನ್ನು ಕಳುಹಿಸಿ ಇತರ ನಗರಗಳಲ್ಲಿ ನೆಲೆಸಿರುವ ಪೂರ್ವೋತ್ತರ ರಾಜ್ಯದ ಜನರನ್ನು ಬೆದರಿಸುವ ಪ್ರಚಾರಕಾರ್ಯದ ಹಿಂದೆ ಪಿಎಫ್‌ಐನ ಅಂಗ ಸಂಸ್ಥೆಗಳಾದ ಕೆಎಫ್‌ಡಿ, ಎಮ್‌ಎನ್‌ಪಿಗಳಿದ್ದವು. ಇವುಗಳಲ್ಲಿ ಕೆಲವು ಎಸ್‌ಎಮ್‌ಎಸ್‌ಗಳು ಪಾಕಿಸ್ತಾನದಿಂದಲೂ ಕಳುಹಿಸಲ್ಪಟ್ಟಿದ್ದವು. ಇತ್ತೀಚಿನ  ಪಿಎಫ್‌ಐಗೆ ಸೇರಿದ ಕೆಲವು ಉಗ್ರರು ಐಎಸ್‌ಐಎಸ್‌ನ್ನು ಸೇರಿದ್ದು ವರದಿಯಾಗಿವೆ.

ಹಿಂದೂ ಹೃದಯ ಸಾಮ್ರಾಟನಾದ ಮರಾಠಿ ಮಾಣೂಸ್‌

 (ವಿಕ್ರಮ - 25 ಜನವರಿ 2026) ಸುದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿ ನಿರಂತರ ಸಕ್ರಿಯರಾಗಿದ್ದು, ಜೊತೆಗೆ ಪ್ರಸ್ತುತರೂ ಆಗಿದ್ದು ತಮ್ಮ ಬದುಕಿನ ನಂತರವೂ ಪ್ರಭಾವಿಯಾಗಿರು...