('ಉತ್ಥಾನ' ಮಾಸಿಕ, ಜನವರಿ 2025, 'ಸಂಕ್ರಾಂತಿ ಗಣರಾಜ್ಯೋತ್ಸವ ವಿಶೇಷಾಂಕ')
ಪರಿಸರ
ಸಂರಕ್ಷಣೆ ಆಂದೋಲನ – ‘ಎನ್ವಿರಾನ್ಮೆಂಟಲ್ ಎಕ್ಟಿವಿಸಮ್’ ಎನ್ನುವುದು ಇಂದಿನ ಜಗತ್ತಿನ ಒಂದು ಅನಿವಾರ್ಯ
ಹೋರಾಟವೆಂದೇ ಪರಿಗಣಿಸಲ್ಪಟ್ಟಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ, ಅರಣ್ಯನಾಶ,
ಮರುಭೂಮೀಕರಣ, ಪ್ಲಾಸ್ಟಿಕ್ ಮಾಲಿನ್ಯ, ಜೀವವೈವಿಧ್ಯ ನಾಶ, ಮಣ್ಣು ಸವಕಳಿ, ಧ್ರುವ ಪ್ರದೇಶದ ಮಂಜುಗಡ್ಡೆ
ಕರಗುವುದು, ಗ್ರೀನ್ಹೌಸ್ ಗ್ಯಾಸ್ ಎಮಿಶನ್, ಜೀವಜಲದ ಮಾಲಿನ್ಯ ಮತ್ತು ನೀರಿನ ಕೊರತೆ, ವಾಯು
ಗುಣಮಟ್ಟ ಸೂಚ್ಯಂಕ ಕುಸಿತ, ಹವಳದ
ದಿಬ್ಬಗಳ ಬ್ಲೀಚಿಂಗ್ ಇತ್ಯಾದಿ ಹತ್ತು
ಹಲವು ಪರಿಸರ ಸಂಬಂಧೀ ವ್ಯಾಧಿಗಳ ಕುರಿತು ನೂರಾರು ವೈಶ್ವಿಕ ವೇದಿಕೆಗಳು, ಶೃಂಗಸಭೆಗಳು, ಸೆಮಿನಾರುಗಳು,
ಘೋಷಣೆ-ಘೋಷವಾಕ್ಯಗಳು, ಬಿಲಿಯನ್ಗಟ್ಟಲೇ ಡಾಲರುಗಳನ್ನು ಮೀಸಲಿಡುವ ವಾಗ್ದಾನಗಳು, ನವೀನ ತಂತ್ರಜ್ಞಾನದ
ಮೂಲಕವೇ ಪರಿಹಾರ ಎನ್ನುವ ವಾದಗಳು ಈ ಎಲ್ಲ ಯಾವ ಪ್ರಯತ್ನಗಳಿಂದಲೂ ಪ್ರಕೃತಿಯ ನಿರಂತರ ನಾಶವನ್ನು ನಿಲ್ಲಿಸಲು
ಸಾಧ್ಯವಾಗಿಲ್ಲ, ಅವನತಿಯ ಹಾದಿಯಿಂದ ವಿಮುಖವಾಗಲಿಲ್ಲ. ಅನೇಕ ಅಧ್ಯಯನಗಳ ಪ್ರಕಾರ ಪರಿಸರ ನಾಶದಿಂದಾಗಿ
ಉಂಟಾಗುತ್ತಿರುವ ನಷ್ಟ, ಆಧುನಿಕ ಪರಿಭಾಷೆಯಲ್ಲಿಯೇ ಹೇಳುವುದಾದರೆ ವಾರ್ಷಿಕ 25 ಟ್ರಿಲಿಯನ್ ಡಾಲರಿಗಿಂತಲೂ
ಹೆಚ್ಚು.
ಪರಿಸರದ
ಈ ಅಧೋಗತಿಯ ಹಿಂದಿರುವ ಮೂಲ ಕಾರಣ ಮನುಷ್ಯನ ಆದ್ಯತೆಗಳು, ಆತನ ಸುಖದ ಕಲ್ಪನೆ, ಪ್ರಗತಿಯ ಕಲ್ಪನೆ.
ನಿಜವಾದ ಸಮೃದ್ಧಿಯ ಬದಲು ಕೇವಲ ಜಿಡಿಪಿ, ಆರ್ಥಿಕತೆಯ ಗಾತ್ರ ಹಿಗ್ಗುವುದೇ ಪ್ರಗತಿ ಎಂದಾಗಿದೆ. ಉದಾಹರಣೆಗೆ
ನದಿಯಲ್ಲಿ ಪರಿಶುದ್ದ ನೀರು ಉಗಮದಿಂದ ಕಡಲು ಸೇರುವವರೆಗೆ ಸದಾ ತುಂಬಿ ಹರಿದು ಜಲಚರಗಳನ್ನು, ಇಕ್ಕೆಲಗಳ
ಜೀವರಾಶಿಯನ್ನು ಪೋಷಿಸುತ್ತ ಅದೇ ಗಾಂಭೀರ್ಯದಲ್ಲಿ ಸಾಗರವನ್ನು ಸೇರಿದರೆ ಅದು ಸಮೃದ್ಧಿ. ಆದರೆ ಅದಕ್ಕೊಂದು
ಅಣೆಕಟ್ಟು ಕಟ್ಟಿ ಸಹಸ್ರಾರು ಹೆಕ್ಟೇರ್ ಕಾಡು ನಾಡುಗಳನ್ನು ಮುಳುಗಿಸಿ, ಕೆಳಗಿನ ನದೀಪಾತ್ರವನ್ನು
ಒಣಗಿಸಿ, ನಡೆಯುವ ವಿದ್ಯುತ್ ಉತ್ಪಾದನೆಯೋ, ಕೆನಾಲುಗಳಲ್ಲಿ ನೀರು ಹರಿಸುವುದೋ ಇಂದು ಪ್ರಗತಿ ಎನಿಸಿಕೊಳ್ಳುತ್ತದೆ.
ಅನ್ನದಾತದ ತೋಟದಲ್ಲಿ ಬೇರೆ ಬೇರೆ ಜಾತಿಯ ಗಿಡಮರಬಳ್ಳಿಗಳು ಹಚ್ಚಹಸುರಾಗಿ ಆರೋಗ್ಯವಾಗಿ ಬೆಳೆದು ಬಗೆಬಗೆಯ
ಹೂವುಹಣ್ಣುಗಳನ್ನು ತಳೆದು ನಂದನವನವಾದರೆ, ಮನುಷ್ಯನ ಜೊತೆಗೆ ಪ್ರಾಣಿಪಕ್ಷಿ ಜೆನ್ನೊಣ ಚಿಟ್ಟೆಗಳಾದಿಯಾಗಿ
ಕೀಟಗಳೆಲ್ಲವುಗಳ ತನುಮನಗಳನ್ನು ತಣಿಸುವುದು ಸಮೃದ್ಧಿಯಾದರೆ ಅಂತಹ ಜಮೀನಿನಲ್ಲಿ ಅಣೆಕಟ್ಟಿನ ಕೆನಾಲಿನಿಂದ
ಬರುವ ನೀರಿನಿಂದಲೋ ಅಥವಾ ಎಂಟನೂರು ಅಡಿ ಆಳದ ಬೋರ್ವೆಲ್ಲಿನಿಂದ ಎತ್ತಿದ ನೀರನ್ನು ಬಳಸಿ, ರಾಸಾಯನಿಕ
ಗೊಬ್ಬರ, ಕೀಟನಾಶಕಗಳನ್ನು ಸುರಿದು ವಾಣಿಜ್ಯ ಬೆಳೆಗಳನ್ನು ಬೆಳೆದು ಕೈತುಂಬ ಹಣಗಳಿಸುವವನು ‘ಪ್ರಗತಿಪರ
ಕೃಷಿಕ’ ಎಂದು ಸನ್ಮಾನಿತನಾಗುತ್ತಾನೆ.
ಕಾಲದ
ಅನಿವಾರ್ಯದಲ್ಲಿ ಸಿಲುಕಿರುವ ಭಾರತವೂ ಸಹ ಇದೇ ಮಾದರಿಯನ್ನು ಅನುಸರಿಸುತ್ತಿರುವುದು ವಿದಿತವಾದರರೂ
ಮೂಲ ಭಾರತೀಯ ಚಿಂತನೆಯಲ್ಲಿ ಪರಿಸರವನ್ನು ನೋಡುವ ದೃಷ್ಟಿ ಭಿನ್ನವಾಗಿರುವುದು ಕಂಡುಬರುತ್ತದೆ. ಹಾಗೂ
ಭಾರತೀಯ ಪ್ರಕೃತಿ ಚಿಂತನೆ ನಮ್ಮ ಸಂಸ್ಕೃತಿ, ಆಚರಣೆಗಳನ್ನು ಹಾಸುಹೊಕ್ಕಾಗಿ ಇಂದಿಗೂ ಜೀವಂತವಾಗಿರುವುದೂ
ಕಾಣಿಸುತ್ತದೆ. ಅವುಗಳನ್ನು ಮತ್ತೆ ಜ್ಞಾಪಿಸಿಕೊಂಡರೆ ಪ್ರಪಂಚ ಇಂದು ಎದುರಿಸುತ್ತಿರುವ ಅನೇಕ ಸವಾಲುಗಳಿಗೆ
ಪರಿಹಾರ ಸಿಗಬಹುದು.
ಸೃಷ್ಟಿ – ಪಂಚ
ಮಹಾಭೂತಗಳು
ಸೃಷ್ಟಿಯೆಲ್ಲವೂ ಪರಮಾತ್ಮ ವಾಸಸ್ಥಾನ ಎಂದು ಈಶಾವಾಸ್ಯೋಪನಿಷತ್ತಿನ
ಮೊದಲ ಮಂತ್ರದಲ್ಲಿಯೇ ಹೇಳಿದೆ ‘ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್’. ಅದು ಪೂಜನೀಯವಾದದ್ದು,
ಶೋಷಣೀಯವಾದದ್ದಲ್ಲ. ಆದ್ದರಿಂದ ತ್ಯಾಗ ಮನೋಭಾವದಿಂದ ಬದುಕಬೇಕೇ ಹೊರತು ಲೋಭದಿಂದಲ್ಲ. ಭಾರತೀಯ ಚಿಂತನೆಯಲ್ಲಿ
ಯಾವುದೂ ಜಡವಲ್ಲ. ಮಾನವನ ಭೌತಿಕ ಶರೀರವೂ ಸೇರಿದಂತೆ ಸರ್ವವೂ ಪಂಚಭೂತಗಳ ಸೃಷ್ಟಿ.
ಭಾರತೀಯ ಪರಿಕಲ್ಪನೆಯಲ್ಲಿ ಮಾನವ ಪ್ರಕೃತಿ ಒಂದು ಭಾಗವೇ ಹೊರತು ಮಾಲೀಕನಲ್ಲ.
ಸಕಲ ಚರಾಚರ ಜೀವಿಗಳಂತೇ ಮಾನವನೂ ಸಹ ಪ್ರಕೃತಿಯಿಂದ ಪೋಷಣೆ ಪಡೆಯಬೇಕಾದವನು. ಅಲ್ಲಿರುವುದು ತಾಯಿ ಮಕ್ಕಳ
ಸಂಬಂಧ. ಅಥರ್ವವೇದದ 'ಪೃಥ್ವಿ ಸೂಕ್ತ'ವನ್ನು ನಾವು ಜಗತ್ತಿನ ಅತ್ಯಂತ ಪುರಾತನ ಪರಿಸರ ಗೀತೆ
ಎಂದು ಕರೆಯಬಹುದು. ಅದರಲ್ಲಿ ಭೂಮಿಯನ್ನು ಕುರಿತು ಹೀಗೆ ಪ್ರಾರ್ಥಿಸಲಾಗಿದೆ "ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ" - ಭೂಮಿಯು ತಾಯಿ, ನಾನು ಅವಳ ಮಗ. ಮುಂದುವರಿದು, ಇನ್ನೂ ಒಂದು ಅದ್ಭುತವಾದ
ಸಾಲು ಬರುತ್ತದೆ - "ಹೇ ತಾಯಿ ಭೂಮಿ, ನಿನ್ನನ್ನು ನಾನು ಅಗೆಯುತ್ತೇನೆ
ಅದರಿಂದ ನಿನ್ನ
ಹೃದಯಕ್ಕೆ ಧಕ್ಕೆಯಾಗದಂತಿರಲಿ, ನಿನ್ನ ಮರ್ಮಸ್ಥಾನಗಳಿಗೆ ನೋವಾಗದಂತಿರಲಿ." – “ಯತ್ ತೇ ಭೂಮೇ ವಿಖನಾಮಿ ಕ್ಷಿಪ್ರಂ ತದಪಿ ರೋಹತು, ಮಾ ತೇ ಮರ್ಮ ವಿಮಗ್ವರಿ
ಮಾ ತೇ ಹೃದಯಮರ್ಪಿಪಮ್” ಮನೆ ಕಟ್ಟುವಾಗ, ಕೃಷಿ ಮಾಡುವಾಗ, ಗಣಿಗಾರಿಕೆಗೆ ಭೂಮಿಯ ಒಡಲನ್ನು
ಬಗೆಯಬೇಕಾಗುತ್ತದೆ. ಆದರೆ ಅದು ಭೂಮಿ ತಾಯಿಗೆ
ನೋವಾಗದಂತೆ, ಆಕೆ ಮತ್ತೆ ಚೇತರಿಸಿಕೊಳ್ಳುವಂತೆ ಇರಬೇಕು ಎಂಬ ಎಚ್ಚರಿಕೆ ಸಹಸ್ರಾರು
ವರ್ಷಗಳ ಹಿಂದೆಯೇ ನಮ್ಮ ಹಿರಿಯರಿಗಿತ್ತು.
ಪರ್ವತಗಳನ್ನು ತಂದೆಯ ಸ್ಥಾನದಲ್ಲಿ, ನದಿಗಳನ್ನು ತಾಯಿಯಂತೆ ಕಾಣುವ ಸಂಸ್ಕೃತಿ
ನಮ್ಮದು. ಹಾಗಾಗಿಯೇ ಪ್ರತಿಯೊಂದು ನದಿಪರ್ವತಗಳಿಗೆ ನಮ್ಮಲ್ಲಿ ಅರ್ಥಪೂರ್ಣ ಹೆಸರಗಳಿವೆ. ಅವುಗಳನ್ನು
ಪೂಜಿಸಲಾಗುತ್ತದೆ, ಪೂಜ್ಯ ದೃಷ್ಟಿಯಿಂದ ಕಾಣಲಾಗುತ್ತದೆ. ಪ್ರತಿಯೊಂದು ಮನೆಯಲ್ಲೂ
ನಡೆಯುತ್ತಿದ್ದ ಯಜ್ಞ-ಯಾಗಾದಿಗಳು, ಅಗ್ನಿಹೋತ್ರ ಮೊದಲಾದವು ವಾತಾವರಣವನ್ನು
ಶುದ್ಧೀಕರಿಸುವ ಪ್ರಕ್ರಿಯೆಗಳಾಗಿದ್ದವು. ಅಗ್ನಿಯನ್ನು ಮನುಷ್ಯ ಮತ್ತು ದೇವರ ನಡುವಿನ ಕೊಂಡಿ
ಎಂದು ಭಾವಿಸಲಾಗಿತ್ತು. ಯಾಗಗಳಲ್ಲಿ ಸಮರ್ಪಿಸುವ
ಹವಿಸ್ಸನ್ನು ದೇವತೆಗಳಿಗೆ ತಲುಪಿಸುವುದು ಅಗ್ನಿದೇವನ ಕಾರ್ಯ ಎಂದು ವೇದಗಳಲ್ಲೇ ಹೇಳಿದೆ.
ನಿರಾಕಾರನಾದರೂ ಸರ್ವವ್ಯಾಪಿಯಾದ ಪರಮಾತ್ಮನು ಎಲ್ಲ ರೂಪಗಳಲ್ಲಿಯೂ ವ್ಯಕ್ತನಾಗುತ್ತಾನೆ
ಎನ್ನುವ ನಂಬಿಕೆ ನಮ್ಮದು. ಹಾಗಾಗಿಯೇ ನಮಗೆ ಪ್ರಾಣಿಪಕ್ಷಿಯಾದಿ ಸಕಲ ಚರಾಚರಗಳಲ್ಲಿ ಭಗವಂತನನ್ನು ಕಾಣಲು
ಸಾಧ್ಯ, ಕಲ್ಲಿನಲ್ಲಿ ಪರಮಾತ್ಮನ್ನು ನಾವು ಪ್ರತಿಷ್ಠಾಪಿಸಬಲ್ಲೆವು. ಪ್ರಾಣಿಪಕ್ಷಿಗಳ ರೂಪದಲ್ಲಿಯೂ
ದೇವರುಗಳನ್ನು ಕಲ್ಪಿಸಿಕೊಂಡು ಪೂಜಿಸಲುತ್ತೇವೆ.
=========================================================================
‘Conquest of nature’,
‘Bending nature to our will’, ‘Man verses nature’, ‘Taming the wilderness’,
‘Nature as something to be dissected’, ‘Overcoming natural limits’, ‘Defying
nature’ ಇತ್ಯಾದಿ ಹತ್ತು ಹಲವು ನುಡಿಗಟ್ಟುಗಳನ್ನು ನಾವು ಕೇಳಿರಬಹುದು. ವಿಶೇಷವಾಗಿ ಇವು ಪಾಶ್ಚಾತ್ಯ
ಜಗತ್ತಿನ ಸಾಹಿತ್ಯ, ತತ್ವಶಾಸ್ತ್ರ,
ರಾಜಕೀಯ, ವಸಾಹತುಶಾಹಿ ಕಥನಗಳು, ಕೈಗಾರಿಕಾ ಪ್ರಗತಿಯ ಚರ್ಚೆಗಳು, ಮತ್ತು ಸಾಮಾನ್ಯ ಜನಮಾನಸ ಸಂಸ್ಕೃತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಇವೆಲ್ಲವೂ
ಪ್ರಕೃತಿಯ ಮೇಲೆ ಮಾನವ ಪ್ರಾಬಲ್ಯ, ನಿಯಂತ್ರಣ ಅಥವಾ ಮಾಲೀಕತ್ವವನ್ನು ಸೂಚಿಸುವ ಸಾಮಾನ್ಯ ಪಾಶ್ಚಿಮಾತ್ಯ ಮೂಲದ ನುಡಿಗಟ್ಟುಗಳು ಅಥವಾ ರೂಪಕಗಳು. ಇಂತಹ ರೂಪಕಗಳ ಮೂಲವಿರುವುದು ಜುಡೆಯೋ-ಕ್ರಿಶ್ಚಿಯನ್ ಚಿಂತನೆಯಲ್ಲಿ,
ನಂತರ ಯುರೋಪಿನ ಜ್ಞಾನೋದಯ ಮತ್ತು ಕ್ರಾಂತಿಯ ಯುಗ (Enlightenment and Scientific
Revolution) ಹಾಗೂ ಕೈಗಾರಿಕೀಕರಣ, ವಸಾಹತುಯುಗಗಳಲ್ಲಿ ಇವು ಇನ್ನೂ ಬೆಳೆದವು. ಪ್ರಕೃತಿ ಎನ್ನುವುದು
ಪ್ರಶ್ನಿಸಬೇಕಾದ, ತಿದ್ದಬೇಕಾದ-ತರಬೇತುಗೊಳಿಸಬೇಕಾದ, ಗೆಲ್ಲಬೇಕಾದ, ಮಾನವನ ಭೋಗಕ್ಕೆ ಇರುವ ಸಂಗತಿ
ಎನ್ನುವ ಕಥನ ಬೆಳೆದು ಬಂತು. ದುರದೃಷ್ಟಕರವೆಂದರೆ ಈ ಚಿಂತನೆಯೇ ಪ್ರಪಂಚದಲ್ಲಿ ಇಂದು ಪ್ರಬಲವಾಗಿದೆ.
ಪ್ರಕೃತಿಯೊಂದಿಗೆ ಸಾಮರಸ್ಯ, ಪರಸ್ಪರ ಅವಲಂಬನೆ ಅಥವಾ
ಪರಸ್ಪರ ಸಂಬಂಧವನ್ನು ಒತ್ತಿಹೇಳುವ ಭಾರತೀಯ ಮತ್ತು ಕೆಲವು ಪೌರ್ವಾತ್ಯ
ದೃಷ್ಟಿಕೋನಗಳೊಂದಿಗೆ ಇದನ್ನು ಹೋಲಿಸಿ ನೋಡಬಹುದು.
==========================================================================
ಜ್ಞಾನ ಮತ್ತು ಕಲೆಗಳ
ಮೂಲ ಗುರುವೇ ಪೃಕೃತಿ
ಭಾರತೀಯ
ಪ್ರಕೃತಿ ಚಿಂತನೆ ಕೇವಲ ಚಿಂತನೆಯ ಸ್ತರಕ್ಕೆ ಸೀಮಿತವಲ್ಲ, ನಮ್ಮ ಎಲ್ಲ ಧಾರ್ಮಿಕ ಸಾಂಸ್ಕೃತಿಕ ಆಚರಣೆಗಳಲ್ಲಿ
ಹಾಸುಹೊಕ್ಕಾಗಿದೆ. ಭಾರತೀಯರಿಗೆ ಎಲ್ಲ ಜ್ಞಾನ ಮತ್ತು ಕಲೆಗಳ ಮೂಲ ಪ್ರಕೃತಿಯೇ ಆಗಿದೆ. ಗುರುವಿನ ಗುರು
ಎಂದೇ ಗೌರವಿತನಾದ ದತ್ತಾತ್ರೇಯ ಪ್ರಕೃತಿಯಲ್ಲಿಯೇ ಗುರುವನ್ನು ಕಂಡವನು. ಭೂಮಿ, ನೀರು, ಗಾಳಿ, ಅಗ್ನಿ,
ಆಕಾಶ, ಸೂರ್ಯ-ಚಂದ್ರ, ಸಾಗರ, ಜೇನುಗೂಡು, ಹೆಬ್ಬಾವು, ಮೀನು, ಆನೆ, ಜಿಂಕೆ ಮೊದಲಾಗಿ 24 ಗುರುಗಳಿಂದ
ಪಾಠ ಕಲಿತೆ ಎಂದು ದತ್ತಗುರು ಹೇಳುತ್ತಾನೆ. ಯೋಗ ಆಯುರ್ವೇದಗಳು ಪ್ರಕೃತಿಯಿಂದ ಮಾನವ ಕಲಿತ ಪಾಠಗಳು.
ಆರೋಗ್ಯವನ್ನು ನಮ್ಮ ದೇಹ, ಮನಸ್ಸು, ಚೈತನ್ಯ ಮತ್ತು ಪರಿಸರದ ಒಳಗೆ ಮತ್ತು ಅವುಗಳ ನಡುವಿನ ಸಾಮರಸ್ಯದ
ಸ್ಥಿತಿ ಎಂದು ಆಯುರ್ವೇದದಲ್ಲಿ ವ್ಯಾಖ್ಯಾನಿಸಲಾಗಿದೆ. ನಮ್ಮ ಶಾರೀರಿಕ ಹಾಗೂ ಮಾನಸಿಕ
ಪ್ರಕೃತಿ ಮತ್ತು ನಾವು ಪರಿಸರದ ಚಕ್ರದೊಂದಿಗೆ ಸಂವಹನ ನಡೆಸುವ ವಿಧಾನಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಈ ಸಾಮರಸ್ಯವನ್ನು ಸಾಧಿಸಬಹುದು. ಸೃಷ್ಟಿಯ ಐದು ಅಂಶಗಳಾದ ಭೂಮಿ, ನೀರು, ಬೆಂಕಿ,
ಗಾಳಿ ಮತ್ತು ಆಕಾಶ ಇವುಗಳು ನಮ್ಮ ಶಾರೀರಿಕ ಮತ್ತು ಮಾನಸಿಕ
ಕಾರ್ಯಗಳನ್ನು ನಿಯಂತ್ರಿಸುವ ಮೂರು ದೋಷಗಳಾದ ವಾತ, ಪಿತ್ತ ಮತ್ತು ಕಫದಲ್ಲಿ ವ್ಯಕ್ತವಾಗುತ್ತವೆ. ಹಾಗೂ ಈ ತ್ರಿದೋಷಗಳು ಬದಲಾಗುತ್ತಿರುವ ಋತುಗಳು,
ದಿನದ ಸಮಯಗಳು ಮತ್ತು ನಾವು ತಿನ್ನುವ ಆಹಾರಗಳಿಂದ ಪ್ರಭಾವಿತವಾಗಿರುತ್ತದೆ. ಹಾಗಾಗಿ ‘ಋತುಚರ್ಯೆ’ ಅಂದರೆ
ಋತುಮಾನದ ಬದಲಾವಣೆಗಳಿಗೆ ಅನುಗುಣವಾಗಿ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು
ಮಾರ್ಪಡಿಸಿಕೊಳ್ಳುವುದನ್ನು ಆಯುರ್ವೇದ ಪ್ರತಿಪಾದಿಸುತ್ತದೆ. ಅದರಂತೆಯೇ ಋತುಗಳಿಗನುಸಾರವಾಗಿ
ನಮ್ಮ ಹಬ್ಬಹರಿದಿನ ಆಚರಣೆಗಳು, ಪ್ರತಿಯೊಂದು ಆಚರಣೆಗಳ ವಿಶೇಷತೆಗಳು, ಆಹಾರ-ವ್ಯವಹಾರ ಕ್ರಮ ಒಟ್ಟಾರೆ
ಜೀವನಶೈಲಿ ರೂಪಿತವಾಗಿರುವುದನ್ನು ನಾವು ಗಮನಿಸಬಹುದು.
ಪ್ರಕೃತಿಯ ಮೇಲೆ ಗೆಲುವು ಸಾಧಿಸುವುದೂ ಅಲ್ಲ, ಅದು ತನ್ನ ಭೋಗದ ವಸ್ತು
ಎನ್ನುವ ಭಾವನೆಯೂ ಅಲ್ಲ, ಬದಲಾಗಿ ಪ್ರಕೃತಿಯ ಕುರಿತು ವಿನೀತಭಾವ ಭಾರತೀಯ ಸಂಸ್ಕೃತಿಯ ಲಕ್ಷಣ. ಇಂದಿಗೂ ಮನೆ ಕಟ್ಟುವ ಮೊದಲು, ಯಾವುದೇ ನಿರ್ಮಾಣ ಆರಂಭಕ್ಕೆ ಮೊದಲು, ಕೃಷಿ ಕಾರ್ಯವನ್ನು ಆರಂಭಿಸುವ ಮೊದಲು 'ಭೂಮಿ ಪೂಜೆ'
ಮಾಡುವ
ಸಂಪ್ರದಾಯವಿದೆ. "ನನ್ನ ವಾಸಕ್ಕಾಗಿ ನಿನ್ನ ಮೇಲೆ ಭಾರ ಹಾಕುತ್ತಿದ್ದೇನೆ, ನಿನ್ನನ್ನು
ಅಗೆಯುತ್ತಿದ್ದೇನೆ, ನನ್ನನ್ನು ಕ್ಷಮಿಸು ತಾಯಿ" ಎಂದು ಪ್ರಾರ್ಥಿಸುವ ಸಂಸ್ಕೃತಿ
ಜಗತ್ತಿನಲ್ಲಿ ಬೇರೆಲ್ಲಿಯೂ ಕಾಣುವುದಿಲ್ಲ. ಹಾಗೆಯೇ ಮನೆಯನ್ನು ಕಟ್ಟುವಾಗ ಅನೇಕ ಜೀವಜಂತುಗಳು ಅನಿವಾರ್ಯವಾಗಿ ನಾಶವಾಗುತ್ತವೆ,
ಹಾಗಾಗಿ ಪಾಪಪರಿಹಾರಾರ್ಥವಾಗಿ ದಾನಧರ್ಮಗಳನ್ನು ಮಾಡಬೇಕೆನ್ನುವ ಶಾಸ್ತ್ರವಿದೆ.
ಪ್ರಗತಿ – ಡೆವೆಲಪ್ಮೆಂಟ್ನ ಪರಿಕಲ್ಪನೆ
ಹಾಗೆಂದು ಆಧುನಿಕವಾದುದೆಲ್ಲವನ್ನೂ ಅಥವಾ ವೈಜ್ಞಾನಿಕ ಎಂದು ಕರೆಯಲ್ಪಡುವುದೆಲ್ಲವನ್ನೂ
ತಿರಸ್ಕರಿಸುವುದು ಭಾರತೀಯ ದೃಷ್ಟಿಯಲ್ಲ. ಹಾಗಿದ್ದಿದ್ದರೆ ಪ್ರಾಚೀನ ಭಾರತದಲ್ಲಿ ಕಂಡುಬರುವ ಇಂದಿನ
ವೈಜ್ಞಾನಿಕ ಜಗತ್ತೂ ವಿಸ್ಮಯಗೊಳ್ಳುವಂತಹ ಅನ್ವೇಷಣೆಗಳು ಸಾಧ್ಯವಾಗುತ್ತಿರಲಿಲ್ಲ. ಆದರೆ ಆಧುನಿಕತೆಯ
ಮಾದರಿ ಯಾವುದು? ಎನ್ನುವ ಪ್ರಶ್ನೆ ಬಂದಾಗ ಪ್ರಕೃತಿಗೆ ಹಾನಿಯುಂಟುಮಾಡುವ ಮಾರ್ಗವನ್ನು ಭಾರತ ಆಯ್ದುಕೊಳ್ಳಲಿಲ್ಲ.
ಬೌದ್ಧಿಕ ಮಟ್ಟದಲ್ಲಿ ಉಳಿದೆಲ್ಲ ಜೀವಜಂತುಗಳಿಗಿಂತ ಮೇಲನ ಸ್ತರದಲ್ಲಿರುವ ಮಾನವ ಪ್ರಪಂಚನವನ್ನು ತನ್ನ
ಭೋಗಕ್ಕೆ ಮಾತ್ರ ಬಳಸುವುದಲ್ಲ ಬದಲಿಗೆ ತಾನೂ ಅದರ ಭಾಗವಾಗಿರುವುದರಿಂದ ಅದನ್ನು ಕಾಪಾಡುವ ಹೊಣೆಯೂ
ತನ್ನ ಮೇಲಿದೆ ಎನ್ನುವ ಸತ್ಯವನ್ನು ಭಾರತೀಯ ಸಂಸ್ಕೃತಿ ಕಂಡುಕೊಂಡಿತ್ತು. ಅದಕ್ಕನುಗುಣವಾಗಿ ನಮ್ಮ
ಬದುಕುವ ರೀತಿ, ಜೀವನಶೈಲಿ ರೂಪುಗೊಂಡಿತು. ಪ್ರಕೃತಿಯೊಂದಿಗೆ ಸಮರಸ ಬದುಕು ನಡೆಸುವ ಕಾರಣ, ಪರಿಸರ ನಾಶ ಹಾಗೂ ಮಾಲಿನ್ಯದ ಪ್ರಶ್ನೆ
ಹುಟ್ಟಲಿಲ್ಲ. ಪರಿಸರ ಸಂರಕ್ಷಣೆಯ ವಿಶೇಷ ಅಗತ್ಯ ಪ್ರಾಚೀನ ಭಾರತೀಯರಿಗೆ ಬರಲಿಲ್ಲ.
ಪ್ರಕೃತಿಯ
ಮೇಲೆ ಮಾನವನ ದೌರ್ಜನ್ಯದ ಪ್ರತಿಫಲವನ್ನು ನಾವಿಂದು ಕಲುಷಿತ ವಾತಾವರಣ, ಹವಾಮಾನ ವೈಪರಿತ್ಯ, ಋತುಗಳ
ಏರುಪೇರು, ತಾಪಮಾನ ಏರಿಕೆ, ಅತವೃಷ್ಟಿ-ಅನಾವೃಷ್ಟಿ ಮೊದಲಾದವುಗಳ ಮೂಲಕ ಪಡೆಯುತ್ತಿದ್ದೇವೆ. ಇವುಗಳಿಗೆ
ಮೂಲ ಕಾರಣ ಮಾನವನೇ ಆದರೂ ನಿರಪರಾಧಿಗಳಾದ ಪೃಥ್ವಿಯ ಉಳಿದ ಜೀವಜಂತುಗಳು ಶಿಕ್ಷೆಯನ್ನು ಅನುಭವಿಸುತ್ತಿವೆ.
ಪ್ರಕೃತಿಯೇ ಸಹನೆ ಮೀರಿ ಉಗ್ರ ಪ್ರತೀಕಾರಕ್ಕೆ ಮುಂದಾಗುವ ಮೊದಲು ಮಾನವ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ.
ಪ್ರಾಚೀನ ಭಾರತ ತೋರಿದ ಸಾಮರಸ್ಯದ ದಾರಿ ನಮ್ಮಲ್ಲಿ ಅಲ್ಪ ಪ್ರಮಾಣದಲ್ಲಿಯಾದರೂ ಜೀವಂತವಿದೆ. ಅದನ್ನು
ಮತ್ತೆ ಜ್ಞಾಪಿಸಿಕೊಂಡು ಆ ಜ್ಞಾನದ ಬೆಳಕನ್ನು ವಿಶ್ವದ ಮುಂದಿಡಲು ಭಾರತ ಸನ್ನದ್ಧವಾಗಬೇಕಿದೆ.
ವೃಕ್ಷರಕ್ಷಣೆ
‘ದಶಪುತ್ರ ಸಮೋ ದ್ರುಮಃ’ ಎಂದು ಒಂದು ಸುಭಾಷಿತ ಹೇಳುತ್ತದೆ, ಅಂದರೆ ಒಂದು ವೃಕ್ಷವು ಹತ್ತು ಮಕ್ಕಳಿಗೆ
ಸಮ. ಗಿಡಮರಗಳನ್ನು ಮಕ್ಕಳಂತೇ ಭಾವಿಸಿ ಸಲಹಿದ ಸಾಲುಮರದ ತಿಮ್ಮಕ್ಕನಂತವರ, ತುಳಿಸಿ ಗೌಡರಂತವರ ವೃಕ್ಷಮಾತೆಯರ
ನಾಡು ನಮ್ಮ ನೆಲ. ಇಂದಿಗೂ ಕರ್ನಾಟಕದ ಮೂಲೆ ಮೂಲೆಗಳಲ್ಲಿ ದೇವರಕಾಡುಗಳು ಕಾಣಸಿಗುತ್ತವೆ. ಅದು ಊರ ದೇವರು
ನೆಲೆಸಿರುವ ಕಾಡು, ಅದನ್ನು ಹಾಳು ಮಾಡಬಾರದು
ಎನ್ನುವ ಶ್ರದ್ಧೆ ಜನರಲ್ಲಿದೆ. ಹಾಗೆಯೇ ನವಗ್ರಹ ವನಗಳ ಕಲ್ಪನೆಯಿದೆ. ಪ್ರತಿಯೊಂದು ಗ್ರಹದ ಪ್ರತೀಕ
ಗಿಡವನ್ನು ನೆಟ್ಟು ಪೋಷಿಸಿ, ಅದನ್ನು ಪೂಜಿಸಿ ಪ್ರದಕ್ಷಿಣೆ ಹಾಕುವುದರಿಂದ ದೋಷಪರಿಹಾರವಾಗುತ್ತದೆ
ಎನ್ನುವ ನಂಬಿಕೆಯಿದೆ. ಬಸುರಿ ಹೆಂಗಸರು, ಮಕ್ಕಳನ್ನು ಬಯಸುವವರು ಅಶ್ವತ್ಥ ವೃಕ್ಷದ ಪ್ರದಕ್ಷಿಣೆ ಹಾಕುವುದರಿಂದ
ಸತ್ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವು ನಂಬಿಕೆಯ ಹಿಂದೆ ಆರೋಗ್ಯದ ಜೊತೆಗೆ ಪರಿಶುದ್ಧ ಗಾಳಿಯನ್ನು
ನೀಡುವ ಅಶ್ವತ್ಥ ವೃಕ್ಷದ ಸಂರಕ್ಷಣೆಯೂ ಇದೆ. ಭಾರತೀಯ ಸಂಸ್ಕೃತಿಯಲ್ಲಿ ಅಶ್ವತ್ಥ ವೃಕ್ಷಕ್ಕೆ ವಿಶೇಷ
ಸ್ಥಾನವಿದೆ. ಅಶ್ವತ್ಥ ವೃಕ್ಷಕ್ಕೆ ಉಪನಯನ ಮಾಡಲಾಗುತ್ತದೆ. ವಿವಾಹ ಮಾಡಲಾಗುತ್ತದೆ. ಪೂಜಿಸಲಾಗುತ್ತದೆ.
ಗ್ರಾಮದ ಪಂಚಾಯತಿಗಳು ನಡೆಯವುದು, ಎಲ್ಲರೂ ಸೇರಿ ಕಷ್ಟಸುಖಗಳನ್ನು ಹಂಚಿಕೊಳ್ಳುವುದು ಊರಿನ ಅರಳೀಕಟ್ಟೆಯ
ಮೇಲೆಯೇ. ತುಳಸೀ ವಿವಾಹ, ವನಭೋಜನ, ನಾಗಬನ-ನಾಗಾರಾಧನೆ ಇತ್ಯಾದಿ ಆಚರಣೆಗಳನ್ನು ಪ್ರಕೃತಿ ಸಂರಕ್ಷಣೆಯ
ಹಿನ್ನೆಲೆಯಲ್ಲಿ ಕಾಣಬಹುದು.
‘ಅಶ್ವತ್ಥಮೇಕಂ ಪಿಚುಮಂದಮೇಕಂ ನ್ಯಗ್ರೋಧಮೇಕಂ ದಶತಿಂತ್ರಿಣೀಕಂ| ಕಪಿತ್ಥಬಿಲ್ವಾಮಲಕ
ತ್ರಯಂಚ ಪಂಚಾಮ್ರರೋಪೀ ನರಕಂನಯಾತಿ||’
- ಒಂದು ಅಶ್ವತ್ಥ, ಒಂದು ಬೇವು, ಒಂದು ಆಲ, 10 ಹುಣಿಸೆ,
ತಲಾ ಮೂರು ಬೇಲ, ಬಿಲ್ವ, ನೆಲ್ಲಿ ಮತ್ತು ಐದು ಮಾವು ಇವಿಷ್ಟು ಗಿಡಗಳನ್ನು ನೆಟ್ಟು ಮರವಾಗಿ ಮಾಡಿದವನು ನರಕಕ್ಕೆ ಹೋಗುವುದಿಲ್ಲ ಎನ್ನುತ್ತದೆ ಗರುಡಪುರಾಣದ ಈ ಶ್ಲೋಕ.ಈ ಒಂದಲ್ಲ ಒಂದು ರೀತಿ ಪ್ರಯೋಜನಕಾರಿ,
ಆಯುರ್ವೇದೀಯ
ಮಹತ್ತ್ವ ಉಳ್ಳವು ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತಿದೆ. ವಿವಿಧ ಜಾತಿಯ ಮರಗಿಡಗಳು ಯಥೇಚ್ಚವಾಗಿದ್ದ ಕಾಲದಲ್ಲೇ ನಮ್ಮ ಪ್ರಾಚೀನರು ಹೀಗೆ
ಎಚ್ಚರವಹಿಸಿ ಮರಗಿಡಗಳನ್ನು ನೆಟ್ಟು ಬೆಳೆಸಬೇಕಾದ
ಮಹತ್ವವನ್ನು ಸಾರಿದ್ದರು.
ವೃಕ್ಷರಕ್ಷಣೆ ಪ್ರಾಚೀನ
ಕಾಲದಿಂದ ನಮ್ಮ ಧಾರ್ಮಿಕ ಸಂಪ್ರದಾಯಗಳಲ್ಲಿಯೇ ಬೆರೆತುಕೊಂಡಿದೆ. ಉದಾಹರಣೆಗೆ ಸಂತ ಗುರು ಜಂಬಾಜಿ ಮಹಾರಾಜ
ಅವರಿಂದ ಸ್ಥಾಪನೆಯಾದ ಬಿಷ್ಣೋಯ್ ಸಮಾಜ ಪರಿಸರ ಸಂರಕ್ಷಣೆಯನ್ನೇ ಮೂಲ ಧ್ಯೇಯವಾಗಿ ಹೊಂದಿದೆ. ಉತ್ತರ
ಭಾರತದಲ್ಲಿ ವಿಶೇಷವಾಗಿ ರಾಜಸ್ಥಾನ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಷ್ಣೋಯ್ ಸಮಾದ 29
ತತ್ವಗಳ ಪೈಕಿ ಹೆಚ್ಚಿನವು ಪ್ರಕೃತಿ ಗಿಡಮರ ಪ್ರಾಣಿಪಕ್ಷಿಗಳ ರಕ್ಷಣೆಯನ್ನು ಧಾರ್ಮಿಕ ಕರ್ತವ್ಯವ ಎಂದೇ
ವಿಧಿಸುತ್ತವೆ. ಬಿಷ್ಣೋಯ್ ಸಂಪ್ರದಾಯ ಸ್ಥಾಪನೆಯಾಗಿ ಸುಮಾರು 300 ವರ್ಷಗಳ ನಂತರ 1730ರಲ್ಲಿ ಜೋದಪುರ
ಸಮೀಪದ ಖೇಜರ್ಲಿ ಗ್ರಾಮದಲ್ಲಿ ನಡೆದ ಘಟನೆ – ಅಲ್ಲಿ ದೊಡ್ಡ ಪ್ರಮಾಣದಲ್ಲಿ ಬನ್ನಿ ಮರಗಳ ಕಾಡು ಬೆಳೆದಿತ್ತು.
ಜೋಧಪುರದ ಮಹಾರಾಜ ಒಂದು ಅರಮನೆಯನ್ನು ನಿರ್ಮಿಸಲು ಬಯಸಿದಾಗ ಅರಮನೆ ಕಟ್ಟಲು ಬೇಕಾಗಿದ್ದ ಮರಗಳನ್ನು
ಆ ಕಾಡಿನಿಂದ ಕಡಿದು ತರಲು ಸೈನಿಕರನ್ನು ಅಟ್ಟಿದ. ಮರಗಳ ರಕ್ಷಣೆಗೆ ಕರ್ತವ್ಯಬದ್ಧರಾಗಿದ್ದ ಬಿಷ್ಣೋಯಿಗಳು
ವಿರೋಧಿಸಿದರು. ರಾಜಾಜ್ಞೆಯಂತೆ ಮರಗಳ ಕಟಾವಿಗೆ ನಿಂತಿದ್ದ ಸೈನಿಕರು ವಿರೋಧವನ್ನು ಲೆಕ್ಕಿಸದೇ ಇದ್ದಾಗ,
ಕಣ್ಣ ಮುಂದೆಯೇ ತಮ್ಮ ನಂಬಿಕೆ ಮತ್ತು ಕಾಡು ಎರಡೂ ನಾಶವಾಗುತ್ತಿದ್ದುದನ್ನು ಸಹಿಸದ ಅಮೃತಾ ದೇವಿ ಎಂಬ
ಹೆಸರಿನ ಬಿಷ್ಣೋಯಿ ಮಹಿಳೆ ಮರವನ್ನು ಅಪ್ಪಿಕೊಂಡು ಮರಕಡಿಯುವ ಮೊದಲು ತನ್ನ ತಲೆಕಡಿಯಿರಿ ಎಂದು ಸವಾಲು
ಹಾಕಿದಳು. ಮರರಕ್ಷಣೆಗಾಗಿ ಸೈನಿಕರ ಕತ್ತಿಗೆ ಕೊರಳೊಡ್ಡಿದಳು. ಅವಳಿಂದ ಪ್ರೇರಣೆ ಪಡೆದ ಸುಮಾರು 350ಕ್ಕೂ
ಹೆಚ್ಚು ಗ್ರಾಮಸ್ಥರು ಮರವನ್ನು ಅಪ್ಪಿಕೊಂಡು ಆತ್ಮಾಹುತಿಗೈದರು. ಸುದ್ದಿ ರಾಜನಿಗೆ ತಲುಪಿತು. ಪಶ್ಚಾತ್ತಾಪಗೊಂಡ
ರಾಜ ಆ ಗ್ರಾಮಕ್ಕೆ ಬಂದು ಕ್ಷಮಾಪಣೆ ಕೇಳಿದ ಮತ್ತು ಆ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿ
ಯಾವುದೇ ಮರಗಿಡಗಳನ್ನು ಕಡಿಯಬಾರದು, ಪ್ರಾಣಿಗಳನ್ನು ಸಾಯಿಸಬಾರದು ಎಂದು ಕಾನೂನು ಜಾರಿಗೊಳಿಸಿದ. ಇಂದಿಗೂ
ಸಹ ಈ ಕಾನೂನು ಜಾರಿಯಲ್ಲಿದೆ.
***************************************************************************************************
