Friday, July 11, 2014

ಪಂಚಶೀಲದ ಕಪಟವನ್ನು ಮೀರಿ


        ಭಾರತ-ಚೀನಾ ಸಂಭಂಧದಲ್ಲಿ ಬಹುದೊಡ್ಡ ಸಮಸ್ಯೆಯೆಂದರೆ ಸೃಜನಶೀಲ ಚಿಂತನೆ ಮತ್ತು ಹೊಸತನದ ಸಂಪೂರ್ಣ ಕೊರತೆ. ಆರು ದಶಕಗಳ ಹಿಂದೆ ಪಂಚಶೀಲ ಒಪ್ಪಂದದೊಂದಿಗೆ ಔಪಚಾರಿಕವಾಗಿ ಆರಂಭಗೊಂಡ ದ್ವಿಪಕ್ಷೀಯ ಸಂಭಂಧದಲ್ಲಿ 1962 ಯುದ್ಧದ ಕಾರಣ ಬಿರುಕು ಕಾಣಿಸಿ ಐದು ದಶಕಗಳೇ ಕಳೆದರೂ ಎರಡೂ ದೇಶದ ನಾಯಕರು ಸಂಭಂಧವನ್ನು ಬಲಗೊಳಿಸುವ ನಿಟ್ಟಿನಲ್ಲಿ ಹೊಸ ಮತ್ತು ಅಸಾಂಪ್ರದಾಯಿಕ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಇನ್ನೂ ಒದ್ದಾಡುತ್ತಿದ್ದಾರೆ. ಹೊಸ ಆಲೋಚನೆಗಳು ಮೂಡದೇ ಇದ್ದಾಗ ಸಾಂಕೇತಿಕ ಆಚರಣೆಗಳನ್ನೇ ಆಶ್ರಯಿಸಲಾಗುತ್ತದೆ. ಈ ಸಾಂಕೇತಿಕ ಆಚರಣೆಗಳಿಗೇ ದ್ವಿಪಕ್ಷೀಯ ಸಂಭಂಧಗಳನ್ನು ವರ್ಧಿಸುವ ಹೊಸ ಉಪಾಯಗಳೆಂದು ದೊಡ್ಡದಾಗಿ ಪ್ರಚಾರ ಮಾಡಲಾಗುತ್ತದೆ. ಆದರೆ ಇವೆಲ್ಲ ಮಾರ್ಗಗಳೂ ಕಳೆದ ಕೆಲವು ದಶಕಗಳಲ್ಲಿ ಬಳಸಿ ಪರೀಕ್ಷಿಸಿ ವಿಫಲಗೊಂಡು ಹಳಸಿದ ಉಪಾಯಗಳೇ ಆಗಿವೆ.

      ಪಂಚಶೀಲ ಒಪ್ಪಂದವೂ ಕೂಡ ಕಳೆದ ಐದು ದಶಕಗಳಲ್ಲಿ ವಿವಿಧ ಸರ್ಕಾರಗಳು ತಪ್ಪದೇ ನಡೆಸಿಕೊಂಡು ಬರುತ್ತಿರುವ ಒಂದು ಸಾಂಕೇತಿಕ ಆಚರಣೆ ಅಷ್ಟೆ! 

ಏನಿದು ಪಂಚಶೀಲ?
        ಆರು ದಶಕಗಳ ಹಿಂದೆ (28 ಜೂನ್ 1954) ಭಾರಕ್ಕೆ ಭೇಟಿ ನೀಡಿದ್ದ ಚೀನಾದ ಪ್ರೀಮಿಯರ್ ಚೌ ಎನ್ ಲಾೈ ಮತ್ತು ಭಾರತದ ಪ್ರಧಾನಿ ನೆಹರುರವರು ‘ಪ್ರಪಂಚವನ್ನು ವ್ಯಾಪಿಸಿರುವ ಹಗೆತನದ ಒತ್ತಡವನ್ನು ತಗ್ಗಿಸಿ ಶಾಂತಿಯ ವಾತಾವರಣವನ್ನು ನೆಲೆಗೊಳಸುವ’ ಸಲುವಾಗಿ ಐದು ಮಹತ್ವದ ವಿಷಯಗಳನ್ನೊಳಗೊಂಡ ಪಂಚಶೀಲ ತತ್ವಕ್ಕೆ ತಮ್ಮ ಪ್ರತಿಬದ್ಧತೆಯನ್ನು ಪ್ರದರ್ಶಿಸುವ ಐತಹಾಸಿಕ ಹೇಳಿಕೆಯನ್ನು ನೀಡಿದ್ದರು. ವಾಸ್ತವದಲ್ಲಿ ಪಂಚಶೀಲ ಒಪ್ಪಂದವು ಭಾರತ ಮತ್ತು ಚೀನಾದ ಟಿಬೇಟಿ ಪ್ರದೇಶದೊಂದಿಗಿನ ‘ವ್ಯಾಪಾರ ಮತ್ತು ಸಂಪರ್ಕದ’ ಒಪ್ಪಂದ. ಇದರಲ್ಲಿ ಪರಸ್ಪರ ಗೌರವ, ಆಕ್ರಮಣ ನಡೆಸದಿರುವುದು, ಪರಸ್ಪರ ಹಿತ, ಶಾಂತಿಯುತ ಸಹಬಾಳ್ವೆ ಮೊದಲಾದ ಐದು ತತ್ವಗಳು ಒಳಗೊಂಡಿರಲಿಲ್ಲ. ಆದರೆ ಈ ಸಣ್ಣ ಒಪ್ಪಂದವು ಭಾರತದ ಪಾಲಿಗೆ ದೊಡ್ಡದಾದ ಹಿನ್ನೆಡೆಯಾಗಿತ್ತು. ಚೀನಾದೊಂದಿಗೆ 1912ರ ಶಿಮ್ಲಾ ಒಪ್ಪಂದ ಹೊಂದಿದ್ದ ಬ್ರಿಟಿಶರು ಭಾರತ ಬಿಡುವವರೆಗೆ ಎಂದೂ ಟಿಬೇಟ್ ಚೀನಾದ ಭಾಗ ಎನ್ನುವುದನ್ನು ಮನ್ನಿಸಲಿಲ್ಲ. ಪಂಚಶೀಲಕ್ಕೆ ಸಹಿಹಾಕಿ ಟಿಬೇಟ್ ಚೀನಾದ ಭಾಗ ಎಂದು ಅಧಿಕೃತವಾಗಿ ಒಪ್ಪಿಕೊಂಡಿದ್ದು ದುರದೃಷ್ಟಕರವಾಗಿ ನೆಹರು ಸರ್ಕಾರದ ವಿದೇಶಿ ನೀತಿಯ ಮೊದಲ ವಿಚಲನವಾಗಿದೆ. ಶಾಂತಿಯುತ ಸಹಬಾಳ್ವೆಯ ಸಲುವಾಗಿ ಸಹಿ ಹಾಕಲಾದ ಪಂಚಶೀಲ ಒಪ್ಪಂದವು ಟಿಬೇಟಿನ ಸ್ವಾತಂತ್ರ್ಯಕ್ಕೆ ಬರೆದ ಶ್ರದ್ಧಾಂಜಲಿಯಾಗಿದೆ. ಅದರಿಂದಲೇ ಆಚಾರ್ಯ ಕೃಪಲಾನಿಯವರು ಈ ಒಪ್ಪಂದವನ್ನು ‘ಪಾಪದ ಕೂಸು’ ಎಂದು ಕರೆದರು.

ಮುಂದುವರೆದ ಆಚರಣೆಗಳು
       ಪಂಚಶೀಲ ಒಪ್ಪಂದಕ್ಕೆ ಸಹಿಬಿದ್ದು ಮೂರು ತಿಂಗಳು ಕಳೆಯುವುದರೊಳಗೇ ಚೀನಾ ಲಢಾಕ್ ಪ್ರದೇಶದಲ್ಲಿ ಗಡಿ ಉಲ್ಲಂಘನೆ ಮಾಡಿರುವುದು ವರದಿಯಾಗತೊಡಗಿತು. 1962ರಲ್ಲಿ ಭಾರತ-ಚೀನಾ ಯುದ್ಧ ಆರಂಭವಾಗುವ ಕೆಲವು ತಿಂಗಳುಗಳ ಮೊದಲು ಚೀನಾದ ಸರ್ವಾಧಿಕಾರಿ ಮಾವೋ ಚೇಷ್ಟೆಯ ಧ್ವನಿದಲ್ಲಿ ಚೌ ಎನ್ ಲಾೈಯೊಂದಿಗೆ ಮಾತನಾಡುತ್ತ ‘ಭಾರತ ಮತ್ತು ಚೀನಾ ಶಾಂತಿಯುತ ಸಹಬಾಳ್ವೆಯನ್ನಲ್ಲ ಶಸ್ತ್ರಯುತ ಸಹಬಾಳ್ವೆಯನ್ನು ರೂಢಿಸಿಕೊಳ್ಳಬೇಕು’ ಎಂದು ನುಡಿದರು. ಮುಂದೆ ನಡೆದ ಯುದ್ಧವು ಭಾರತದ ಪಾಲಿಗೆ ಅತಿ ಘೋರವಾದ ಅಪಮಾನಕ್ಕೆ ಮತ್ತು ಗಣನೀಯ ಭೂಭಾಗ ಕೈತಪ್ಪಲು ಕಾರಣವಾಯಿತು. ಭಾರತ ಚೀನಾ ಸಂಭಂಧದ ಕಳೆದ ಐದು ದಶಕಗಳ ಇತಿಹಾಸವನ್ನು ಅವಲೋಕಿಸಿದರೆ ಸಾರ್ವಭೌಮತೆಯನ್ನು ಉಲ್ಲಂಘಿಸುವ, ಪರಸ್ಪರ ವೈರದ ಅನೇಕ ದೃಷ್ಟಾಂತಗಳು ಗೋಚರವಾಗುತ್ತವೆ. ಬಹುತೇಕ ಸಂಧರ್ಭಗಳಲ್ಲಿ ಶಾಂತಿಯುತ ಸಹಬಾಳ್ವೆಯ ಪಂಚತತ್ವಗಳಿಂದ ತಪ್ಪು ಬದಿಯಲ್ಲಿ ಚೀನಾ ನಿಂತಿರುವುದು ಸ್ಪಷ್ಟವಾಗುತ್ತದೆ. ಆದರೆ ದಶಕಗಳೇ ಕಳೆದು ಸರ್ಕಾರಗಳು ಬದಲಾದರೂ ನೆಹರು ನರಸಿಂಹ ರಾವ್ ವಾಜಪೇಯಿಯವರವರೆಗೂ ದ್ವಿಪಕ್ಷೀಯ ಭೇಟಿಯ ಸಂಧರ್ಭದಲ್ಲಿ ಪಂಚಶೀಲದ ಕುರಿತು ಸಹಾನುಭೂತಿಯಿಂದ ನುಡಿಯುವ ಆಚರಣೆ ನಿರಂತರ ನಡೆದಿದೆ. ಒಂದು ಒಳ್ಳೆಯ ಅಂಶವೆಂದರೆ ವಾಜಪೇಯಿಯವರ ಕಾಲದಲ್ಲಿ ಈ ಆಚರಣೆ ಮುಂದುವರೆದರೂ, ಆದ ಒಂದು ಗಣನೀಯ ಬದಲಾವಣೆಯೆಂದರೆ ಅವರು ಪಂಚಶೀಲದ ತತ್ವವನ್ನು ಅನುಸರಿಸಿರುವ ಸಲುವಾಗಿ ಚೀನಾವನ್ನು ಪ್ರಶಂಶಿಸಲು ನಿರಾಕಿಸಿದರು. ಅಲ್ಲದೇ ‘ಒಬ್ಬರು ಇನ್ನೊಬ್ಬರಿಗೆ ಸಂಭಂಧಿಸಿದ ವಿಷಯಗಳಲ್ಲಿ ಪರಸ್ಪರ ಸಂವೇದನೆ’ ಮತ್ತು ‘ಸಮಾನತೆಗೆ ಗೌರವ ನೀಡುವ’ ಅಗತ್ಯವನ್ನು ಅವರು ಪ್ರಬಲವಾಗಿ ಪ್ರತಿಪಾದಿಸಿದರು.

ಹೊಸ ಚೌಕಟ್ಟು
       ಚೀನಾದ ರಾಜಧಾನಿ ಬೀಜಿಂಗ್‍ನಲ್ಲಿ ಪಂಚಶೀಲಕ್ಕೆ ಆರು ದಶಕ ಸಂದ ಆಚರಣೆ ನಡೆಯುತ್ತಿರುವ ಈ ಸಂಧರ್ಭದಲ್ಲಿ ಭಾರತ-ಚೀನಾ ಸಂಭಂಧದಲ್ಲಿ ಪಂಚಶೀಲಕ್ಕೆ ಹೊರತಾದ ಹೊಸ ಆಯಾಮವನ್ನು ಕಂಡುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಪರಸ್ಪರ ಸಂವೇದನೆ ಮತ್ತು ಸಮಾನತೆಯನ್ನು ಪ್ರತಿಪಾದಿಸಿ ವಾಜಪೇಯಿಯವರು ಈ ನಿಟ್ಟಿನಲ್ಲಿ ಹೊಸಚಿಂತನೆಯ ನೆಲಗಟ್ಟನ್ನು ಈಗಾಗಲೇ ಸ್ಥಾಪಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಪ್ರೀಮಿಯರ್ ಕ್ಸಿ ಜಿನ್‍ಪಿಂಗ್ ಪಂಚಶೀಲ ಚೌಕಟ್ಟಿನಿಂದ ಹೊರಬಂದು ಹೊಸಚಿಂತನೆಯಲ್ಲಿ ದ್ವಿಪಕ್ಷೀಯ ಸಂಭಂಧವನ್ನು ಬೆಳೆಸುವತ್ತ ಪ್ರಯತ್ನಿಸಿದರೆ ಎರಡೂ ದೇಶಗಳಿಗೂ ಓಳಿತಾಗುವುದು. ನೆಹರು ಮತ್ತು ಮಾವೋಗಿಂತಲೂ ಭಿನ್ನವಾದ ಹಿನ್ನೆಲೆಯುಳ್ಳ ಈ ಇಬ್ಬರೂ ನಾಯಕರಲ್ಲಿ ಆ ಸಾಮಥ್ರ್ಯವಿದೆ. ಅಲ್ಲದೇ ಇಬ್ಬರಿಗೂ ತಮ್ಮ ದೇಶದ ಜನತೆಯ ನಂಬಿಕೆ ಮತ್ತು ವಿಶ್ವಾಸದ ಬೆಂಬಲವಿದೆ. ಇನ್ನೂ ಮಹತ್ವದ ವಿಚಾರವೆಂದರೆ ಇಬ್ಬರೂ ಅಸಾಂಪ್ರದಾಯಿಕ ಚಿಂತನೆಯ ನಾಯಕರಾಗಿದ್ದಾರೆ. 

       ಭಾರತ ಮತ್ತು ಚೀನಾ ಸಾರ್ವಭೌಮ ಸಮಾನತೆ ಮತ್ತು ಪರಸ್ಪರ ಸಂವೇದನೆಯ ತತ್ವಗಳ ಆಧಾರದ ಮೇಲೆ ದ್ವಿಪಕ್ಷೀಯ ಸಹಕಾರಗಳನ್ನು ವೃದ್ಧಿಸಿಕೊಳ್ಳಬಹುದು. ಇಂದು ಚೀನಾ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದರೂ ಅನೇಕ ಆಂತರಿಕ ಮತ್ತು ಬಾಹ್ಯ ವಿಪತ್ತುಗಳಿಗೆ ಒಡ್ಡಿಕೊಂಡಿದೆ. ನೆರೆಹೊರೆಯ ಹದಿಮೂರು ದೇಶಗಳೊಂದಿಗೆ ಒಂದಲ್ಲ ಒಂದು ತಗಾದೆಯನ್ನು ಹೊಂದಿದ್ದರೂ ಬಾಹ್ಯ ಸುರಕ್ಷೆಗಿಂತಲೂ ಆಂತರಿಕ ಸುರಕ್ಷೆಯ ಸಲುವಾಗಿಯೇ ಹೆಚ್ಚು ವೆಚ್ಚ ಮಾಡುತ್ತಿರುವುದನ್ನು ಗಮನಿಸಿದರೆ ಚೀನಾದ ಆಂತರಿಕ ಅಸ್ಥಿರತೆ ಗೋಚರವಾಗುತ್ತದೆ. ಆದರೆ ಭಾರತ ಚೀನಾದಷ್ಟು ದೊಡ್ಡ ಆರ್ಥಿಕ ಶಕ್ತಿಯಲ್ಲದಿದ್ದರೂ ಸುರಕ್ಷೆಯ ದೃಷ್ಟಿಯಲ್ಲಿ ಚೀನಾಕ್ಕಿಂತಲೂ ಉತ್ತಮ ಸ್ಥಾನದಲ್ಲಿದೆ. 

      ಈ ಹಿನ್ನೆಲೆಯಲ್ಲಿ ಮೋದಿ ಮತ್ತು ಜಿನ್‍ಪಿಂಗ್ ದಶಕಗಳಿಂದ ನಡೆದು ಬಂದಿರುವ ಸಾಂಕೇತಿಕ ಆಚರಣೆಗಳ ಸಂಕೋಲೆಗಳಿಂದ ತಮ್ಮನ್ನು ವಿಮುಕ್ತಗೊಳಿಸಿಕೊಂಡರೆ ಭಾರತ-ಚೀನಾ ಸಂಭಂಧದಲಿ ಭಿನ್ನವಾದ ಹೊಸ ಮಾರ್ಗವನ್ನು ಕಂಡುಕೊಳ್ಳಬಹುದು.

(ಇಂಗ್ಲೀಷ್ ಮೂಲ: ಶ್ರೀ ರಾಮ ಮಾಧವ 
http://samvada.org/2014/news/going-beyond-panchsheel-article-by-ram-madhav-on-indo-china-relations/)


ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...