Saturday, April 1, 2017

ಕಪ್ಪು ಹಣದ ವಿರುದ್ಧ ಅಪನಗದೀಕರಣದ ಅಸ್ತ್ರ

(ಪುಂಗವ 01/12/2016)

ಕಳೆದ ಕೆಲವು ದಿನಗಳಿಂದ ಎಲ್ಲೆಡೆ 500ಹಾಗೂ 1000ರೂ ನೋಟು ಅಪನಗದೀಕರಣ ಮತ್ತು ಕಪ್ಪು ಹಣದ ಸುದ್ದಿಗಳೇ ಹರಿದಾಡುತ್ತಿವೆ. ರಾಜಕೀಯ ಅಪಸ್ವರಗಳನ್ನು ಹೊರತುಪಡಿಸಿ ಹೆಚ್ಚಿನ ಜನರು ಸರ್ಕಾರದ ಈ ಕ್ರಮವನ್ನು ಶ್ಲಾಘಿಸಿದ್ದಾರೆ, ಕಪ್ಪು ಹಣ ನಿಯಂತ್ರಣದಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆ ಎಂದೇ ವಿಶ್ವದ ಅನೇಕ ಆರ್ಥಿಕ ತಜ್ಞರು ಬಣ್ಣಿಸಿದ್ದಾರೆ. ಜೊತೆಗೆ ಬ್ಯಾಂಕು ಎಟಿಎಮ್‌ಗಳ ಸರತಿ ಸಾಲಿನಲ್ಲಿ ಸೋತು ಸ್ವಲ್ಪ ಬೇಸರಿಸಿಕೊಂಡವರು, ಬಚ್ಚಿಟ್ಟಿದ್ದ ಹಣವನ್ನು ದಾಟಿಸಲಾಗದೆ ಒಳಗೊಳಗೇ ಸಂಕಟಪಡುವವರೂ, ನ್ಯಾಯವಾಗಿ ಗಳಿಸಿದ ಹಣವಾದರೂ ಬ್ಯಾಂಕ್‌ನಲ್ಲಿಡದೇ ಮನೆಯಲ್ಲೇ ನಗದಿನ ರೂಪದಲ್ಲಿ ಕಾಪಿಟ್ಟುಕೊಂಡು ತಲೆಕೆಡಿಸಿಕೊಂಡವರೂ ಕೆಲವರಿದ್ದಾರೆ. ಜೊತೆಗೆ ಇದೇ ಸಮಯ ಎಂದು ದೊಡ್ಡ ಮೊತ್ತದ ಕಪ್ಪು ಹಣವನ್ನು ದಾಟಿಸಿ ಬಿಳಿ ಮಾಡಿಸಿಕೊಟ್ಟು ಕಮೀಷನ್ ವ್ಯವಹಾರ ಕುದುರಿಸುವವರೂ ಇದ್ದಾರೆ. ಆದರೆ ಸರ್ಕಾರದ ಈ ನಿರ್ಧಾರ ಕಾಳಧನಿಕರ, ಸುಳ್ಳು ಲೆಕ್ಕ ತೋರಿಸಿ ತೆರಿಗೆ ವಂಚನೆ ಮಾಡುತ್ತಿದ್ದವರ, ಭ್ರಷ್ಟ ಲಂಚಕೋರರು ಮತ್ತು ರಾಜಕೀಯ ನೇತಾರರ ನಿದ್ದೆ ಕೆಡಿಸಿದ್ದಂತೂ ನಿಜ.

ಒಟ್ಟೂ ಚಲಾವಣೆ ಅಥವಾ ಕೂಡಿಟ್ಟ ಸುಮಾರು 16.5 ಲಕ್ಷ ಕೋಟಿ ನಗದಿನ ಪೈಕಿ ಸುಮಾರು 86 ಶೇಕಡ ಐದುನೂರು ಮತ್ತು ಒಂದು ಸಾವಿರ ಮುಖಬೆಲೆಯ ನೋಟುಗಳಾಗಿದ್ದು ಸುಮಾರು 14 ಲಕ್ಷ ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ನಗದನ್ನು ಬದಲಾಯಿಸುವ ಕಾರ್ಯ ಒಂದು ಸವಾಲೇ ಸರಿ. ಹಾಗೆಯೇ ಅತ್ಯಂತ ಕ್ಲಿಷ್ಟ ಹಾಗೂ ಸವಾಲಿನ ಈ ಯೋಜನೆಯ ಅನುಷ್ಟಾನಕ್ಕೆ ಮುಂಚೆ ಗೋಪ್ಯತೆ ಕಾಯ್ದುಕೊಂಡು ವಂಚಕರಿಗೆ ಸರಿಯಾದ ಸಮಯದಲ್ಲಿ ಬಲವಾದ ಪೆಟ್ಟು ನೀಡಿದ ಪ್ರಧಾನಿ ಮೋದಿ ನೇತೃತ್ವದ ತಂಡದ ಕಾರ್ಯ ಪ್ರಶಂಸನೀಯವಾಗಿದೆ.

ಅಷ್ಟಕ್ಕೂ ಏಕೆ ಈ ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕಾಯಿತು? ಚಲಾವಣೆಯಲ್ಲಿರುವ ಹಣದ ಶೇ ೮೬ ರಷ್ಟಾಗುವ ನೋಟುಗಳನ್ನು ವಿನಿಮಯ ಮಾಡುವಂತಂತಹ ಬೃಹತ್ ಕಾರ್ಯದಿಂದಾಗುವ ಲಾಭವಾದರೂ ಏನು? ಅಥವಾ ವ್ಯವಹಾರ ವ್ಯಾಪಾರದಲ್ಲಷ್ಟೇ ಅಲ್ಲದೇ ಸಾಮಾನ್ಯ ಜನಜೀವನದಲ್ಲೂ ಏರುಪೇರು ಮಾಡುತ್ತಿರುವುದು ಈ ನಿರ್ಣಯ ಸಮಂಜಸವೇ? ಇದೊಂದು ನಿಃಷ್ಪ್ರಯೋಜಕ ಪ್ರಯತ್ನವೇ? ಇಂತಹ ಪ್ರಶ್ನೆಗಳು ಸಾಮಾನ್ಯ ನಾಗರಿಕರಲ್ಲಿ ಏಳುವುದು ಸಹಜ.
ಕೆಲವೊಂದು ಪ್ರಮುಖ ಕಾರಣಗಳನ್ನು ಗಮನಿಸುವುದಾದರೆ,
  • ಲಂಚ, ಭ್ರಷ್ಟಾಚಾರ ಹಾಗೂ ಅಕ್ರಮ ವ್ಯವಹಾರಗಳಿಂದ ಅಗಾಧ ಪ್ರಮಾಣದಲ್ಲಿ ನಗದಿನ ರೂಪದಲ್ಲಿ ಕೂಡಿಟ್ಟಿದ್ದ ಕಪ್ಪು ಹಣ ಸರ್ಕಾರದ ಬೊಕ್ಕಸಕ್ಕೆ ಅಥವಾ ಮುಖ್ಯವಾಹಿನಿಗೆ ಬರುವಂತೆ ಮಾಡುವುದು.
  • ದೇಶದ ಆರ್ಥಿಕ ವ್ಯವಸ್ಥೆಗೇ ಧಕ್ಕೆಯಾಗುವ ಲೆಕ್ಕಕ್ಕೆ ಸಿಗದ ಸಮಾನಾಂತರ ಆರ್ಥಿಕತೆ, ಹವಾಲಾ ಧಂದೆಗಳನ್ನು ನಿಯಂತ್ರಿಸುವುದು. ವಿಶ್ವಬ್ಯಾಂಕ್ ೨೦೦೭ರಲ್ಲೇ ಅಂದಾಜಿಸಿದಂತೆ ದೇಶದ ಜಿಡಿಪಿಯ 22.2 ಶೇಕಡರಷ್ಟು - ಸುಮಾರು 35 ಸಾವಿರ ಶತಕೋಟಿ ರೂಪಾಯಿಗಳಷ್ಟು ಕಪ್ಪು ಆರ್ಥಿಕತೆ ಬೃಹತ್ತಾಗಿ ಬೆಳೆದಿದೆ.
  • ಭೂಮಿ, ಚಿನ್ನ, ಆಸ್ತಿ, ಷೇರು, ವಿದೇಶಿ ಕರೆನ್ಸಿ ಮುಂತಾದ ರೂಪದಲ್ಲಿಯೂ ಕಪ್ಪು ಹಣ ಇದೆ, ಆದರೆ ನಗದಿನ ರೂಪದಲ್ಲಿಯೂ ಗಣನೀಯ ಪ್ರಮಾಣದಲ್ಲಿದೆ. ಜೊತೆಗೆ ನಗದು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಗೆ ಸಿಗುವಂಥದ್ದಾಗಿದ್ದು ಕಪ್ಪು ವ್ಯವಹಾರದ ಬೆಳವಣಿಗೆಗೆ ಸಹಕಾರಿಯಾಗಿದೆ.
  • ಹೆಚ್ಚಿನ ವ್ಯವಹಾರಗಳು ಬ್ಯಾಂಕುಗಳ ಮೂಲಕ ಪಾರದರ್ಶಕವಾಗಿ ನಡೆಯುವಂತೆ ಮಾಡಿ ಸರ್ಕಾರಿ ಬೊಕ್ಕಸದಿಂದ ತೆರಿಗೆ ಸೋರಿಕೆಯಾಗುವುದನ್ನು ತಪ್ಪಿಸುವುದು. ಕಳೆದ ಸಪ್ಟಂಬರ್‌ವರೆಗೆ ಜಾರಿಯಲ್ಲಿದ್ದ ಸ್ವಯಂಪ್ರೇರಿತ ಕಪ್ಪು ಹಣ ಘೋಷಣೆ ಯೋಜನೆಯ ಅಡಿಯಲ್ಲಿ ಸರ್ಕಾರ ಬೊಕ್ಕಸಕ್ಕೆ 29 ಸಾವಿರ ಕೋಟಿ ರೂ ನಷ್ಟು ಸಂಗ್ರಹವಾಗಿದೆ. ಇದರಿಂದ ತೆರಗೆ ವಂಚನೆ ಎಷ್ಟು ಆಳವಾಗಿದೆ ಎನ್ನುವುದನ್ನು ಅಂದಾಜಿಸಬಹುದು. 
  • ಒಂದು ಅಂದಾಜಿನ ಪ್ರಕಾರ ಎರಡು ಲಕ್ಷ ನೋಟುಗಳಲ್ಲಿ 250ರಷ್ಟು ನಕಲಿ ಚಲಾವಣೆಯಲ್ಲಿದ್ದು ಇವುಗಳಲ್ಲಿ ಬಹುತೇಕ ಐದುನೂರು ಮತ್ತು ಸಾವಿರ ಮುಖಬೆಲೆಯವಾಗಿವೆ. ನಕಲಿ ನೋಟುಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ನುಸುಳಿ ಬರುತ್ತಿದ್ದು ಭಯೋತ್ಪಾದಕ ಚಟುವಟಿಗೆ ಬಂಡವಾಳವನ್ನು ಓದಗಿಸುತ್ತಿರುವುದು ತನಿಖೆಗಳಿಂದ ಸ್ಪಷ್ಟವಾಗಿದೆ. ಪಶ್ಚಿಮ ಬಂಗಾಳದ ಮಾಲ್ಡಾದಂತಹ ಗಡಿಯ ಜಿಲ್ಲೆಗಳು ನಕಲಿ ನೋಟು ತಯಾರಿಕೆಯ ಕಾರ್ಖಾನೆಗಳಾಗಿವೆ.
  • ಗಡಿಯಾಚೆಯಿಂದ ಅದರಲ್ಲೂ ವಿಶೇಷವಾಗಿ ಪಾಕಿಸ್ತಾನದಿಂದ ಭಯೋತ್ಪಾದಕ ಚಟುವಟಿಕೆಗಳಿಗೆ ಅಗಾಧ ಪ್ರಮಾಣದ ಹಣ ಪೋರೈಕೆಯಾಗುತ್ತಿದ್ದು ಇತ್ತೀಚಿನ ಕಾಶ್ಮೀರ ಕಣಿವೆಯ ಹಿಂಸಾಚಾರಗಳ ಮೂಲ ಇದರಲ್ಲಡಗಿದೆ. ಜೊತೆಗೆ ನಕ್ಸಲ್-ಮಾವೋವಾದಿ ಭಯೋತ್ಪಾದನೆಗಳಿಗೆ ಕಪ್ಪು ಹಣ ಬಳಕೆಯಾಗುತ್ತಿದೆ.
  • ಚುನಾವಣೆಗಳಲ್ಲಿ ಕಪ್ಪು ಹಣದ ಆಟ ತುಂಬಾ ಜೋರಾಗಿ ನಡೆಯವುದು ಸ್ಪಷ್ಟವಾಗಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ.
  • ಮಾದಕದ್ರವ್ಯ ಸಾಗಣೆಯ ಜಾಲ ನಿಂತಿರುವುದ ಕಪ್ಪು ಹಣದ ಮೇಲೆ, ವಿಶೇಷವಾಗಿ ಪಂಜಾಬ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ವ್ಯವಸ್ಥಿತವಾಗಿ ಹರಡಿರುವ ಈ ಜಾಲ ದೇಶದ ಯುವಜನತೆಯ ಬದುಕನ್ನೇ ನಾಶಮಾಡುತ್ತದೆ.
  • ರಿಯಲ್ ಎಸ್ಟೇಟ್ ಮಾಫಿಯ, ಸ್ಮಗ್ಲಿಂಗ್ ಮಾಫಿಯಾ, ಫೈನಾನ್ಸ್ ಲೇವಾದೇವಿ ಮಾಫಿಯ, ಕಳ್ಳಭಟ್ಟಿ, ಶಸ್ತ್ರಾಸ್ತ್ರ ಕಳ್ಳಸಾಗಣೆ ಮೊದಲಾದ ವ್ಯವಹಾರಗಳಿಗೆ ಕಪ್ಪು ಹಣವೇ ಆಧಾರ.


ಸರ್ಕಾರದ ಈ ದಿಟ್ಟ ಕ್ರಮದಿಂದ ಈಗಲೇ ಅನೇಕ ಧನಾತ್ಮಕ ಪರಿಣಾಮಗಳು ಗೋಚರವಾಗುತ್ತಿವೆ.
  • ಕೇವಲ ಏಳು ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಜಮೆಯಾಗಿರುವ ಮೊತ್ತ 4 ಲಕ್ಷ ಕೋಟಿ ರೂಪಾಯಿಗೂ ಅಧಿಕ
  • ಭಯೋತ್ಪಾದಕ ಕೃತ್ಯಗಳಿಗೆ ಬಳಕೆಯಾಗುತ್ತಿದ್ದ ಕಪ್ಪು ಹಣಕ್ಕೆ ನಿಯಂತ್ರಣ ಹಾಕಿದಂತಾಗಿದೆ. ಹಾಗಯೇ ನಕ್ಸಲ್ ಚಟುವಟಿಕೆಗಳಿಗೂ ಲಗಾಮು ಹಾಕಿದಂತಾಗಿದೆ. ಇದ್ದಕ್ಕಿದ್ದಂತೇ ಕಾಶ್ಮೀರದ ಕಲ್ಲೆಸೆತಗಾರರು ಮಾಯವಾಗಿದ್ದು ಕಣಿವೆಯಲ್ಲಿ ಶಾಂತಿ ಮರುಕಳಿಸಿದೆ, ಜನಜೀವನ ಸಹಜವಾಗಿದೆ.
  • ಆದಾಯ ತೆರಿಗೆ ಇಲಾಖೆಯ ದಾಳಿಗಳಲ್ಲಿ ಅಡಗಿಸಿಟ್ಟ ಅಪಾರ ಪ್ರಮಾಣದ ಕಪ್ಪು ಹಣ ಸಿಗುತ್ತಿದೆ, ಅನೇಕ ಧನಿಕ ಖುಳಗಳು ಬೆತ್ತಲಾಗುತ್ತಿದ್ದಾರೆ. ಕಪ್ಪು ಹಣ ಕಳ್ಳಸಾಗಣೆಯ ವೇಳೆ ಪೋಲೀಸರ ಕೈವಶವಾದ ಅನೇಕ ಪ್ರಕರಣಗಳು ವರದಿಯಾಗಿವೆ.
  • ಒಂದೇ ಹೊಡೆತಕ್ಕೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಹರಿದು ಬರುತ್ತಿದ್ದ ಖೋಟಾ ನೋಟುಗಳು ನಿಃಷ್ಪ್ರಯೋಜಕಗೊಂಡಿವೆ .
  • ಕಾನೂನು ಬಾಹಿರವಾಗಿ ಮತಾಂತರದಲ್ಲಿ ತೊಡಗಿದ್ದ ಹಲವು ಸಂಘಟನೆಗಳ ಹಣದ ಓಳಹರಿವಿನ ಮೂಲಗಳಿಗೆ ಕೊಡಲಿ ಏಟು ನೀಡಿದಂತಾಗಿದೆ.
  • ವಿದ್ಯುತ್ ಬಿಲ್ ಹಾಗೂ ಭೂ ಕಂದಾಯ ಪಾವತಿಸಲು ಹಳೇ ನೋಟನ್ನು ಸ್ವೀಕರಿಸುತ್ತಿರುವುದರಿಂದ, ಬಾಕಿಯಿದ್ದ ತೆರಿಗೆ, ಕಂದಾಯ, ವಿದುಯುತ್ ಬಿಲ್ ಇತ್ಯಾದಿಗಳು ದಾಖಲೆಯ ವೇಗದಲ್ಲಿ ಪಾವತಿಯಾಗುತ್ತಿವೆ.
  • ಮುಂದಿನ ದಿನಗಳಲ್ಲಿ ನಿವೇಶನಗಳು ಹಾಗೂ ಮನೆಗಳ ಬೆಲೆಗಳು ಇಳಿಕೆಯಾಗಲಿದ್ದು, ಹೂಡಿಕೆಗಾಗಿ ಖರೀದಿಸುವವರಿಗಿಂತ, ಸ್ವಂತ ಸೂರಿಗಾಗಿ ಖರೀದಿಸುವವರಿಗೆ ಇದರ ಹೆಚ್ಚಿನ ಲಾಭ ದೊರೆಯಲಿದೆ ಎನ್ನುವುದು ತಜ್ಞರ ಅಭಿಪ್ರಾಯ
  • ಹಣಕಾಸಿನ ವ್ಯವಹಾರಗಳು ನಗದಿನ ಬದಲು ಬ್ಯಾಂಕ್‌ಗಳ ಮೂಲಕ ಹೆಚ್ಚಾಗಿ ನಡೆಯುದರಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಉತ್ತೇಜನ  ದೊರಕಲಿದ್ದು, ಸಾಲಗಳ ಮೇಲಿನ ಬಡ್ಡಿದರಗಳೂ ಕಡಿಮೆಯಾಗುವ ಸಾದ್ಯತೆಯಿದೆ. ಸರ್ಕಾರ ಇದರ ಸೂಚನೆಯನ್ನು ನೀಡಿದೆ
  • ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆ ಮೊಬೈಲ್ ಮುಖಾಂತರ ಹಣಕಾಸಿನ ವಿನಿಮಯ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಬಳಕೆ ಗಣನೀಯವಾಗಿ ಏರಿಕೆಯಾಗಲಿದ್ದು ಆರ್ಥಿಕ ವ್ವವಸ್ಥೆ ಕ್ಯಾಶ್‌ಲೆಸ್ ಆಗುವತ್ತ ಮುನ್ನಡೆಯಲಿದೆ.
  • ಆದಾಯ ತೆರಿಗೆ ಪಾವತಿದಾರರ ಸಂಖ್ಯೆ ಪ್ರಸ್ತುತ ಕೆವಲ 3% ಆಗಿದ್ದು ಈ ಸಂಖ್ಯೆಯಲ್ಲಿ ಮಹತ್ತರ ಏರಿಕೆಯಾಗಲಿದೆ. ಇದರಿಂದ ಒಟ್ಟಾರೆ ತೆರಿಗೆ ದರದಲ್ಲಿ ಇಳಿಕೆಯಾಗಲಿದ್ದು  ಪ್ರಾಮಾಣಿಕ ತೆರಿಗೆದಾರರ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
  • ಸರ್ಕಾರಕ್ಕೆ ಬರುವ ಹೆಚ್ಚಿನ ಆಧಾಯದಿಂದಾಗಿ ರಕ್ಷಣೆ, ವಿದ್ಯುತ್, ಶಿಕ್ಷಣ, ಆರೋಗ್ಯ ಹಾಗೂ ವಸತಿ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಸಾದ್ಯತೆಯಿದ್ದು, ಸಮಾಜ ಕಲ್ಯಾಣ ಯೋಜನೆಗಳಿಗೆ ನೀಡುವ ಅನುದಾನದಲ್ಲಿ ವೃದ್ಧಿಯಾಗಲಿದೆ.
  • ಕಳೆದ ಎರಡು ವರ್ಷಗಳಿಂದ ಆರ್ಥಿಕ ಸಮಾನತೆ ಗುರಿಯೊಂದಿಗೆ ಸರ್ವರಿಗೂ ಬ್ಯಾಂಕ್ ಖಾತೆ ತೆರೆಯಲು ಫ್ರಧಾನಿ ನೀಡಿದ್ದ ಕರೆ ಹಾಗೂ ಜನ್-ಧನ್ ಯೋಜನೆಯಡಿ ತೆರೆಯಲಾಗಿದ್ದ 25 ಕೋಟಿ ಬ್ಯಾಂಕ್ ಖಾತೆಗಳ ಬಳಕೆ ಹೆಚ್ಚಾಗಿದೆ.
  • ನಗದು ಬದಲಾವಣೆ ಅಥವಾ ಠೇವಣಿಗಳ ಮೂಲಕ 14 ಲಕ್ಷ ಕೋಟಿಗಳಲ್ಲಿ ಶೇಕಡ 75ರಷ್ಟು ಬ್ಯಾಂಕುಗಳಿಗೆ ಜಮೆಯಾದರೂ ಸುಮಾರು 10.5 ಲಕ್ಷ ಕೋಟಿಯಷ್ಟು ಅಗಾಧ ಪ್ರಮಾಣದ ಹಣ ಬ್ಯಾಂಕಿಂಗ್ ಕ್ಷೇತ್ರದ ವ್ಯವಹಾರಕ್ಕೆ ಸಿಕ್ಕಿದಂತೆ ಆಗುತ್ತದೆ. ಉಳಿದ ಕಪ್ಪು ಹಣ ನಷಿಸಿ ಹೋಗುವುದರಿಂದ ಕಪ್ಪು ಆರ್ಥಿಕತೆಗೆ ದೊಡ್ಡ ನಷ್ಟವಾಗುವುದಂತೂ ನಿಜ. 


ಅಪನಗದೀಕರಣದಿಂದಾಗಿ ನಗದಿನ ನಡೆಯುವ ವಹಿವಾಟುಗಳು ಮಂದಗತಿಯಲ್ಲಿ ಸಾಗುವುದು ಮತ್ತು ಸಾಮಾನ್ಯ ನಾಗರಿಕರಿಗೆ ಕೆಲವು ಕಾಲ ತೊಂದರೆಯಾಗುವುದು ನಿಜವಾದರೂ ಒಟ್ಟಾರೆ ದೇಶದ ಆರ್ಥಿಕ ಪ್ರಗತಿಗೆ ಮತ್ತು ಭವಿಷ್ಯದಲ್ಲಿ ಎಲ್ಲ ವರ್ಗಗಳಿಗೂ ಇದು ಹಿತವಾಗಿ ಪರಿಣಮಿಸುವುದು ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ಜೊತೆಗೆ ಕಪ್ಪು ಹಣದ ವಿರುದ್ಧದ ಹೋರಾಟದ ಗೆಲುವು ಸೋಲು ದೇಶದ ನಾಗರಿಕರು ಹೇಗೆ ಸ್ಪಂದಿಸುತ್ತಾರೆ ಎನ್ನುವುದರ ಮೇಲೂ ನಿಂತಿದೆ.

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...