Saturday, December 12, 2009

ಆಧುನಿಕ ಅಸ್ಪ್ರಶ್ಯತೆ

ಕೆಲದಿನಗಳ ಹಿಂದೆ ಸ್ನೇಹಿತನೊಬ್ಬನನ್ನು ಬೀಳ್ಕೊಡುವ ಸಲುವಾಗಿ ಬೆಂಗಳೂರಿನ ಸಿಟಿ ರೇಲ್ವೆ ಸ್ಟೇಶನ್ನಿಗೆ ಹೋಗಿದ್ದೆ. ಫ್ಲಾಟ್‌ಫಾರ್ಮ್ ಟಿಕೆಟ್ ಕೊಡುವ ಮಶಿನ್ನಿನೊಳಕ್ಕೆ ನಾಣ್ಯಗಳನ್ನು ತೂರಿಸುತ್ತ ನಿಲ್ಲಲು ವಿರಾಗ ಹುಟ್ಟಿ ಕ್ಯೂನಲ್ಲೆ ನಿಂತು ಟಿಕೆಟ್ ಖರೀದಿಸಿದೆ, ಅಷ್ಟರಲ್ಲೆ ನಾಣ್ಯತೂರಿಸಿಕೊಳ್ಳುವ ಟಿಕೆಟ್ ಮಶಿನ್ನಿನ ಮುಂದೆ ಸಾಕಷ್ಟು ಜನರ ಸಾಲು ಬೆಳೆದಿತ್ತು. ಸಾಲಿನೆ ಕೊನೆಯಲ್ಲಿ ಹಳೆಯ ಕಂಪನಿಯ ಸಹೋದ್ಯೊಗಿಯೊಬ್ಬನ ಮುಖ ಗೋಚರಿಸಿತು, ನನ್ನ ಸ್ನೇಹಿತನ ರೈಲಿನ ಸಮಯವಾದರೂ ಹೊಸದಾಗಿ ಸಿಕ್ಕ ಹಳೆಯ ಸಹೊದ್ಯೋಗಿಯನ್ನು ಮಾತಾಡಿಸುತ್ತ ನಿಂತೆ, ಅವಸರದ ಉಭಯ ಕುಶಲೋಪರಿಯಲ್ಲಿ.
“don’t push me, you uncultured idiot” ಸಾಲಿನ ಮುಂದಿನಿಂದ ಒಂದು ಹೆಣ್ಣು ಗರ್ಜನೆ ಕೇಳಿಬಂತು. ಒಮ್ಮೆ ಸುತ್ತಮುತ್ತಲಿನ ಗದ್ದಲದ ಸದ್ದಡಗಿತು. ಎಲ್ಲರ ಗಮನ ’ಘರ್ಜನೆ’ ಹುಟ್ಟಿದ ಕಡೆಗೆ ಸೆಳೆಯಲ್ಪಟ್ಟಿತು ಸಹಜವಾಗಿ. ಒಬ್ಬಳು ಇಪ್ಪತ್ತು ಇಪ್ಪತ್ತೆರಡರ ಹುಡುಗಿ, ಎಜುಕೇಟೆಡ್, ಸ್ವಲ್ಪ ದಪ್ಪಗೆ ಇದ್ದಳೇನೊ? ಫ್ಲಾಟ್‌ಫಾರ್ಮ್ ಟಿಕೆಟ್ ಮಶಿನ್ನಿನ ಮುಂದಿನ ಸಾಲಿನಲ್ಲೇ ನಿಂತಿದ್ದವಳು. ಮೇಕಪ್ಪಿನ ಮುಖ ಹೊತ್ತುಕೊಂಡು ಬುಸುಬುಸು ಗುಡ್ತಾ ಇದ್ದಳು, ಕಿರುಚಿದಳು ತಾನೆ ಎಂದು ನೋಡಿದವರಿಗೆ ಕಷ್ಟಪಡದೇ ತಿಳಿಯಲಿ ಎಂಬಂತೆ. ಜೀನ್ಸ್ ಪ್ಯಾಂಟ್, ಟೀಶರ್ಟ್ ತೊಟ್ಟಿದ್ದಳು. ಜಾಕೆಟ್ಟೊ? ಸ್ವೆಟರ್ರೊ? ಸೊಂಟಕ್ಕೆ ಬಿಗಿದಿದ್ದಳು. ಕೈಯಲ್ಲಿ ವ್ಯಾನಿಟಿ ಬ್ಯಾಗ್ ಹಿಡಿದಿದ್ದಳು. ತಲೆಯ ಮೇಲೆ ಗೋಗಲ್ ಸಿಕ್ಕಿಸಿದ್ದಳು, ರಾತ್ರಿಯಲ್ಲಿ ಯಾಕೋ? ನನಗೆ ಅರ್ಥವಾಗಿಲ್ಲ, ಆಗೊಲ್ಲ. ತನ್ನ ಹಿಂದೆ ನಿಂತಿದ್ದ ಸುಮಾರು ಅವಳ ತಾಯಿಯ ವಯಸ್ಸಿನವಳಿರಬಹುದಾಗಿದ್ದ ಒಬ್ಬ ಹಳ್ಳಿ ಹೆಂಗಸಿನ, (ಅಷ್ಟೇನೂ ಅಸಂಸ್ಕ್ರಕಳಲ್ಲ) ಮೇಲೆ ಹರಿಹಾಯ್ದಿದ್ದಳು. ಎಲ್ಲೊ ಸಾಲಿನ ನೂಕುನುಗ್ಗಲಲ್ಲಿ ಆ ಹಳ್ಳಿ ಹೆಂಗಸು ಇವಳ ಮೇಲೆ ಸ್ವಲ್ಪ ಎರಗಿರಬಹುದು. ಹೇಳಿಕೇಳಿ ಹಳ್ಳಿಹೆಂಗಸು, ’uncultured’; ಎಜುಕೇಟೆಡ್ ನಾಗರಿಕರ ದ್ರಷ್ಟಿಯಲ್ಲಿ. ಆಧುನಿಕ ನಾಗರಿಕ ’cultured’ ಯುವತಿಯ ಅರ್ಭಟಕ್ಕೆ ಎರಡು ಅಡಿ ಹಿಂದೆ ಸರಿದಿದ್ದಳು, ಭಯಗೊಂಡಂತೆ, ತಪ್ಪಾಯ್ತು ಎಂಬಂತೆ. ಆಚೀಚೆಗೆ ಒಂದಿಬ್ಬರು ’ನಾಗರಿಕ’ ನವಯುವಕರು ’ಏನಾಯ್ತು ಮೇಡಮ್’ ಎನ್ನುತ್ತ ಸನ್ನದ್ಧರಾದಂತೆ ಕಂಡರು, ಯುವತಿಯ ಸಹಾಯಕ್ಕೆ, ಖಾಲಿಬಿದ್ದ ಎರಡಡಿ ಜಾಗವನ್ನು ತುಂಬಿಸಲೆಂಬಂತೆ.              
ನಾನೇನೊ ಸ್ಟೇಶನ್ನಿನೊಳಕ್ಕೆ ಹೋದೆ. ಆದರೆ, ಆ ಯುವತಿ ಅಷ್ಟೊಂದು ಕಿರುಚಬೇಕಾದ ಅಗತ್ಯವಿತ್ತೆ? ಸಹನೆ ಅಷ್ಟು ಕಷ್ಟವೆ? ಆ ಹಳ್ಳಿಯವಳೇನೊ ಅನಕ್ಷರಸ್ಥೆ, ಇವಳು ಹೇಳಿದ ಹಾಗೆ ’uncultured’. ಆದರೆ ಇಲ್ಲಿ ’cultured’ನ ಪರಿಭಾಷೆಯೇನು? ಈಕೆಯಿಂದ ಬಯ್ಯಿಸಿಕೊಂಡವಳು ಒಬ್ಬ ಇವಳ ತಾಯಿಯ ವಯಸ್ಸಿನ ಹೆಂಗಸು. ಇವಳೂ ಹೆಣ್ಣುಮಗಳೇ, ಹೆಣ್ಣಿಗಲ್ಲದ ಧ್ವನಿಯಲ್ಲಿ ಕಿರುಚಿದ್ದಳು. ’ಕ್ಷಮಯಾ ಧರಿತ್ರಿ’ ಎಂಬ ಹೆಣ್ಣಿನ ಸಹಜ ಗುಣದ ವರ್ಣನೆಗಳೆಲ್ಲ ಅರ್ಥವನ್ನು ಕಳೆದುಕೊಳ್ಳುತ್ತಿರುವುದು ನಾಗರಿಕತೆ ಲಕ್ಷಣವೇನೊ? Educated, cultured, civilized ಗಳ ಅರ್ಥ ಸಹಜ ಗುಣಗಳನ್ನು ಕಳೆದು ಕೊಳ್ಳುವುದೇ? ಸರಿ ಆಕೆ ಹಳ್ಳಿ ಹೆಂಗಸಲ್ಲದೇ ಯಾರಾಗಿದ್ದರೂ ಹಾಗೆ ಉಗಿಸಿಕೊಳ್ಳುತಿದ್ದರು ಅಂದಿಟ್ಟುಕೊಳ್ಳೋಣ. ಆದರೂ ಸಹನೆ ಮಮತೆಗಳ ಮೂರ್ತರೂಪವಾದ ಹೆಣ್ತನಕ್ಕೆ ಕಿರುಚುವಿಕೆ ಅಸಹಜವಲ್ಲವೆ? ಆಧುನಿಕತೆ ಆ ಮಟ್ಟಿಗೆ ಅಸಹನೆಯನ್ನು ಬೆಳೆಸಬಲ್ಲದೆ?  
ಅನೇಕ ಕಡೆಗಳಲ್ಲಿ ಇಂತಹ ಘಟನೆಗಳಗೆ ನಾವು ಸಾಕ್ಷಿಯಾಗಬಹುದು. ಟೆಲಿಫೋನ್, ಎಲೆಕ್ಟ್ರಿಸಿಟಿ, ವಾಟರ್ ಬಿಲ್ ತುಂಬುಲು ನಿಂತಿರುವ ಕ್ಯೂನಲ್ಲಿ, ರಾತ್ರಿ ಪ್ರಯಾಣದ ಬಸ್ಸುಗಳಲ್ಲಿ, ಟ್ರಾಫಿಕ್ ಜಾಮಾಗುವ ರಸ್ತೆಗಳಲ್ಲಿ, ಸಿನಿಮಾ ಮಂದಿರಗಳಲ್ಲಿ, ಪ್ರವಾಸಿ ತಾಣಗಳಲ್ಲಿ, ಹೋಟೆಲುಗಳಲ್ಲಿ, ದೇವಸ್ಥಾನಗಳಲ್ಲಿ, ಪಾರ್ಕ್‌ಗಳಲ್ಲಿ........ ಆರ್ಥಿಕತೆಯಿಂದ, ಆಧುನಿಕತೆಯಿಂದ ನಿರ್ದೇಶಿಸಲ್ಪಟ್ಟ ಸಾಮಾಜಿಕ ವರ್ಗಗಳ ನಡುವಿನ ಕಂದಕ ವ್ಯಕ್ತವಾಗುವ ಪರಿಗಳಿವು.  ವಿಶ್ಲೇಷಣೆಯಿಂದ ಸ್ಪಷ್ಟವಾಗುವುದು ’ಆಧುನಿಕ ಅಸ್ಪ್ರಶ್ಯತೆ’ ಚಿಗುರೊಡೆಯುತ್ತಿರುವ, ಬೆಳೆಯುತ್ತಿರುವ ರೀತಿ. ಅಸ್ಪ್ರಶ್ಯತೆಯ ಸ್ವರೂಪ, ಕಾರಣಗಳು ಬದಲಾಗಬಹುದು ಅಷ್ಟೆ. ಹಿಂದಿನ ಕಾಲದ ಜಾತೀಯ ಕಾರಣವನ್ನು ಅರ್ಥಿಕ, ಬದಲಾದ ಸಾಮಾಜಿಕ ಸ್ಥಾನಮಾನಗಳೊ, ನಗರ ಹಳ್ಳಿಗಳ ನಡುವಿನ ಕಂದಕವೊ, ಡಿಗ್ರಿ ಆಧಾರಿತ ಶೈಕ್ಷಣಿಕ ಮಾನದಂಡಗಳೊ ಅಥವಾ ಇನ್ಯಾವುದೊ, ಸ್ಥಳಾಂತರ ಮಾಡುತ್ತಿವೆ ಅಷ್ಟೆ. ನಿಜವಾಗಿಯೂ ಅಸ್ಫ್ರಶ್ಯತೆ ಒಂದು ಗುಣಮಾಡಲಾಗದ ಕುರುಹು.
ಆದರೆ ಈ ಆಧುನಿಕ ಅಸ್ಪ್ರಶ್ಯತೆಯ ಸಮರ್ಥಕರಿಗಾಗಲೀ ವಿರೋಧಿಗಳಿಗಾಗಲೀ ಮನುಸ್ಮ್ರತಿಯೊ ಇನ್ಯಾವುದೋ ಪುರಾಣ ಗ್ರಂಥವೋ ಸಹಾಯಮಾಡಲಾರದು.

Tuesday, December 1, 2009

ಅರ್ಧಹಾದಿಯಲ್ಲಿ ಈಡಿಯಟ್ಸ್ ಅ೦ದ ಕಾ(ಖಾ)ರಾ೦ಗನೆ

ನಾಲ್ಕು ಜನ ಯುವಕರು, ನೋಡಲು ಅಷ್ಟೇನು ದಷ್ಟಪುಷ್ಟವಾಗಿಲ್ಲದಿದ್ದರೂ ಫಿಟ್ ಆಗೇ ಇದ್ದರು, ಒಬ್ಬನನ್ನು ಬಿಟ್ಟು, ಬಹುಶ ಕೂಲಿ ಕೆಲಸ ಮಾಡೊವವರೊ, ಲೇಬರ್‌ಗಳಿರ್ಬೇಕು. ಅವರದು ಯಾವುದೊ ಮಲ್ಟಿಜಿಮ್‌ನಲ್ಲಿ ಬೆಳೆಸಿದ ಬಾಡಿಯಲ್ಲ, ಬದುಕಿನ ಜಿಮ್‌ನಲ್ಲಿ ಬೆಳೆದದ್ದು, ಬೆಳೆಸಬೇಕೆಂಬ ಪ್ರಯತ್ನವಿಲ್ಲದೇ. ರಸ್ತೆಯಲ್ಲಿ ಹರಟೆ ಹೊಡೀತಾ ಬರ್ತಾ ಇದ್ರು ಅಕ್ಕಪಕ್ಕ; ಸಣ್ಣ ರಸ್ತೆ ನಾಲ್ಕೆ ಜನ ಪೂರಾ ರಸ್ತೆ ಕಬಳಿಸಿ ಬಿಟ್ಟಿದ್ರು. ಒ೦ದು ಸೊಳ್ಳೇಗೂ ಒವರ್ಟೇಕ ಮಾಡೊ ಅಷ್ಟು ಜಾಗ ಇಲ್ಲ. ದಪ್ಪ ಮೀಸೆ ದುಮ್ಮಣ್ಣನ ಅ೦ಗಿ ಕಿಸೆಯಲ್ಲಿ ಮೊಬೈಲ ಇದ್ದದ್ದು ಎದೆಯ ಮೇಲೆ ಇಳಿದಿದ್ದ ಉದ್ದನೆಯ ಕ೦ಠಕ್ಕೆ ಸಿಕ್ಕಿಸುವ ಬಳ್ಳಿಯಿ೦ದ ಒತ್ತಿ ಒತ್ತಿ ಹೇಳ್ತಾ ಇತ್ತು. ಇನ್ನೊಬ್ಬ ಕುಡಿ ಮೀಸೆಯವನ ಮೊಬೈಲಿ೦ದ “ಜಿ೦ಕೆ ಮರೀನಾ ಜಿ೦ಕೆ ಮರೀನಾ...” ಹಾಡು ಕಿರ್ಚ್ತಾ ಇತ್ತು. ಒಟ್ನಲ್ಲಿ ನಾಲ್ವರು  ಬರ್ತಾ ಇದ್ರು ಬಹುಶ: ಮನೆ ಕಡೆ ದಿನದ ಕೆಲಸ ಮುಗಿಸಿ.... ದಪ್ಪ ಮೀಸೆಯ ದುಮ್ಮಣ್ಣನಿಗೆ ಒ೦ದು ದಮ್ಮ್ ಎಳೆಯುವ ಯೋಚನೆ ಬರ್ತಾ ಇರೋಹಂಗಿದೆ.... ಕುಡಿ ಮೀಸೆಯವ ಬಾಡಿ ಬಿಲ್ಡರ್‌ಗೆ ಒ೦ದ ರೌ೦ಡ್ ಗು೦ಡು ಹೊಡ್ದು ....ಆಮೇಲೆ ನೋಡೋಣ...ಅನ್ನೊ ವಿಚಾರ ಬರ್ತಾ ಇರ್ಬಹುದು. ಇನ್ನೊಬ್ಬ ಇರೋರಲ್ಲೆ ಸ್ವಲ್ಪ ರೆಸ್ಪೊನ್ಸಿಬ್ಲ ಅ೦ತ ಕಾಣ್ತಾ ಇರೋನು ... ಯೇನೊ ಸ೦ಸಾರದ ಚಿ೦ತೇಲಿರೊ ತರಹ ಇದ್ದಾನೆ... ಅಲ್ಲ.. ಅಕ್ಕಿ, ತರಕಾರಿ, ಬೇಳೆ  ರೇಟ್ ಇ೦ಗೆ ಏರಿದ್ರೆ ಜೀವನಾ ಯೆ೦ಗೆ? ಕೊನೆಯವನು ಬಡಕ್ಯಾ.... ಈಗೋ ಆಗೋ ಅನ್ನೊಹಾಗಿದ್ರು ಮುಖದಲ್ಲಿ ಮಾತ್ರ ಒಳ್ಳೆ ಸ್ಥಿತಪ್ರಜ್ನ ಕಳೆ.....
ಅಷ್ಟರಲ್ಲಿ ಎದುರಿ೦ದ  ಒಬ್ಬಳು ಬನಿಯನ್ನಿನಂತಹ ಟೀಶರ್ಟ್ ಧರಿಸಿದ್ದ ಅ೦ಗನೆ, ಮಾರುತಿ ಆಲ್ಟೊ ಕಾರ್ ಓಡಿಸಿಕೊ೦ಡು ಬುರ್ರ..... ಎ೦ದು ಬ೦ದು, ಸರಿಯಾಗಿ ನಾಲ್ವರನ್ನು ಎರಡು ಪಾಲಾಗಿರೆಂದು ಆದೇಶಿಸುವ೦ತೆ ನಡುಮಧ್ಯ ನಿಲ್ಲಿಸಿದಳು, ಬ್ರೇಕನ್ನು ಗಟ್ಟಿಯಾಗಿ ಒತ್ತಿ. ನಾಲ್ವರು ಒಮ್ಮೆಲೆ ಕ೦ಗಾಲ್. ’ಸ್ಥಿತಪ್ರಜ್ನ’ ಬಡಕ್ಯಾನು ವಿಚಲಿತನಾದ೦ತೆ ಕ೦ಡ. ಸಾವರಿಸಿಕೊ೦ಡು ಆಚೆ ಈಚೆ ಜಿಗಿದು ದಾರಿಯೇನೊ ಬಿಟ್ಟರು. ಕಾರು ಚಾಲು ಮಾಡಿ ಹೊರಟ ಕಾರಾಂಗನೆ ಸುಮ್ನೆ ದಾರಿ ಹಿಡ್ಕೊ೦ಡ್ ಹೋಗ್ಬೇಕೊ ಬೇಡ್ವೊ?... ಸ್ವಲ್ಪ ಮು೦ದೆ ಹೋದವಳು ಕಿಟಕಿಯ ಗ್ಲಾಸನ್ನು ಕೆಳಗಿಳಿಸಿ ತನ್ನ ನಗ್ನ ಮೊಣಕೈಯನ್ನು ಸ್ವಲ್ಪ ಹೊರಗೆ ತೋರಿಸುತ್ತ ತಲೆ ಹೊರಗೆಳೆದು ಹಿ೦ತಿರುಗಿ ನೋಡಿದಳು... ಸ್ವಲ್ಪ ಭಯನೂ ಇದ್ದಿರ್ಬಹುದೋ ಏನೋ?... ಏನೊ ಅ೦ದು ಹೊದಳು....ಸ್ವಲ್ಪ ಖಾರವಾಗೇ... “ಏನ೦ದ್ಲು ಇ೦ಗ್ಲೀಸ್ನಾಗೆ”..... “ಈಡಿಯಟ್ಸ್” ...... “ಯೇನ್ಲಾ ಅ೦ಗ೦ದ್ರೆ”.... “ಬಯ್ದ ಓಯ್ತಾ“.....”ಈಡಿಯಟ್ಸ್ ಅ೦ದ್ರೆ ಬಯ್ಯು ಸಬ್ದಾನಾ”....... ನಮ್ಮ ಗೆಳೆಯರ ತಲೆಯೊಳಗೆ ಪ್ರಶ್ನೆಯೊ೦ದು ತೂರಿಬಿಟ್ಟಿತ್ತು.... ಬಡಕ್ಯಾನನ್ನು ಬಿಟ್ಟು. “ಜಿ೦ಕೆ ಮರೀನಾ ...” ಹಾಡು ಮುಗಿದು ಅದ್ಯಾವ್ದೊ ಹಿ೦ದಿ ಹಾಡು ಶುರು ಆಗಿತ್ತು ಕುಡಿ ಮೀಸೆಯವನ ಮೊಬೈಲಲ್ಲಿ...ನಾಲ್ವರು ಮಾತ್ರ ಎರಡು ಪಾಲಾಗಿ ಹ೦ಚೇ ಇದ್ದರು.  

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...