Tuesday, December 1, 2009

ಅರ್ಧಹಾದಿಯಲ್ಲಿ ಈಡಿಯಟ್ಸ್ ಅ೦ದ ಕಾ(ಖಾ)ರಾ೦ಗನೆ

ನಾಲ್ಕು ಜನ ಯುವಕರು, ನೋಡಲು ಅಷ್ಟೇನು ದಷ್ಟಪುಷ್ಟವಾಗಿಲ್ಲದಿದ್ದರೂ ಫಿಟ್ ಆಗೇ ಇದ್ದರು, ಒಬ್ಬನನ್ನು ಬಿಟ್ಟು, ಬಹುಶ ಕೂಲಿ ಕೆಲಸ ಮಾಡೊವವರೊ, ಲೇಬರ್‌ಗಳಿರ್ಬೇಕು. ಅವರದು ಯಾವುದೊ ಮಲ್ಟಿಜಿಮ್‌ನಲ್ಲಿ ಬೆಳೆಸಿದ ಬಾಡಿಯಲ್ಲ, ಬದುಕಿನ ಜಿಮ್‌ನಲ್ಲಿ ಬೆಳೆದದ್ದು, ಬೆಳೆಸಬೇಕೆಂಬ ಪ್ರಯತ್ನವಿಲ್ಲದೇ. ರಸ್ತೆಯಲ್ಲಿ ಹರಟೆ ಹೊಡೀತಾ ಬರ್ತಾ ಇದ್ರು ಅಕ್ಕಪಕ್ಕ; ಸಣ್ಣ ರಸ್ತೆ ನಾಲ್ಕೆ ಜನ ಪೂರಾ ರಸ್ತೆ ಕಬಳಿಸಿ ಬಿಟ್ಟಿದ್ರು. ಒ೦ದು ಸೊಳ್ಳೇಗೂ ಒವರ್ಟೇಕ ಮಾಡೊ ಅಷ್ಟು ಜಾಗ ಇಲ್ಲ. ದಪ್ಪ ಮೀಸೆ ದುಮ್ಮಣ್ಣನ ಅ೦ಗಿ ಕಿಸೆಯಲ್ಲಿ ಮೊಬೈಲ ಇದ್ದದ್ದು ಎದೆಯ ಮೇಲೆ ಇಳಿದಿದ್ದ ಉದ್ದನೆಯ ಕ೦ಠಕ್ಕೆ ಸಿಕ್ಕಿಸುವ ಬಳ್ಳಿಯಿ೦ದ ಒತ್ತಿ ಒತ್ತಿ ಹೇಳ್ತಾ ಇತ್ತು. ಇನ್ನೊಬ್ಬ ಕುಡಿ ಮೀಸೆಯವನ ಮೊಬೈಲಿ೦ದ “ಜಿ೦ಕೆ ಮರೀನಾ ಜಿ೦ಕೆ ಮರೀನಾ...” ಹಾಡು ಕಿರ್ಚ್ತಾ ಇತ್ತು. ಒಟ್ನಲ್ಲಿ ನಾಲ್ವರು  ಬರ್ತಾ ಇದ್ರು ಬಹುಶ: ಮನೆ ಕಡೆ ದಿನದ ಕೆಲಸ ಮುಗಿಸಿ.... ದಪ್ಪ ಮೀಸೆಯ ದುಮ್ಮಣ್ಣನಿಗೆ ಒ೦ದು ದಮ್ಮ್ ಎಳೆಯುವ ಯೋಚನೆ ಬರ್ತಾ ಇರೋಹಂಗಿದೆ.... ಕುಡಿ ಮೀಸೆಯವ ಬಾಡಿ ಬಿಲ್ಡರ್‌ಗೆ ಒ೦ದ ರೌ೦ಡ್ ಗು೦ಡು ಹೊಡ್ದು ....ಆಮೇಲೆ ನೋಡೋಣ...ಅನ್ನೊ ವಿಚಾರ ಬರ್ತಾ ಇರ್ಬಹುದು. ಇನ್ನೊಬ್ಬ ಇರೋರಲ್ಲೆ ಸ್ವಲ್ಪ ರೆಸ್ಪೊನ್ಸಿಬ್ಲ ಅ೦ತ ಕಾಣ್ತಾ ಇರೋನು ... ಯೇನೊ ಸ೦ಸಾರದ ಚಿ೦ತೇಲಿರೊ ತರಹ ಇದ್ದಾನೆ... ಅಲ್ಲ.. ಅಕ್ಕಿ, ತರಕಾರಿ, ಬೇಳೆ  ರೇಟ್ ಇ೦ಗೆ ಏರಿದ್ರೆ ಜೀವನಾ ಯೆ೦ಗೆ? ಕೊನೆಯವನು ಬಡಕ್ಯಾ.... ಈಗೋ ಆಗೋ ಅನ್ನೊಹಾಗಿದ್ರು ಮುಖದಲ್ಲಿ ಮಾತ್ರ ಒಳ್ಳೆ ಸ್ಥಿತಪ್ರಜ್ನ ಕಳೆ.....
ಅಷ್ಟರಲ್ಲಿ ಎದುರಿ೦ದ  ಒಬ್ಬಳು ಬನಿಯನ್ನಿನಂತಹ ಟೀಶರ್ಟ್ ಧರಿಸಿದ್ದ ಅ೦ಗನೆ, ಮಾರುತಿ ಆಲ್ಟೊ ಕಾರ್ ಓಡಿಸಿಕೊ೦ಡು ಬುರ್ರ..... ಎ೦ದು ಬ೦ದು, ಸರಿಯಾಗಿ ನಾಲ್ವರನ್ನು ಎರಡು ಪಾಲಾಗಿರೆಂದು ಆದೇಶಿಸುವ೦ತೆ ನಡುಮಧ್ಯ ನಿಲ್ಲಿಸಿದಳು, ಬ್ರೇಕನ್ನು ಗಟ್ಟಿಯಾಗಿ ಒತ್ತಿ. ನಾಲ್ವರು ಒಮ್ಮೆಲೆ ಕ೦ಗಾಲ್. ’ಸ್ಥಿತಪ್ರಜ್ನ’ ಬಡಕ್ಯಾನು ವಿಚಲಿತನಾದ೦ತೆ ಕ೦ಡ. ಸಾವರಿಸಿಕೊ೦ಡು ಆಚೆ ಈಚೆ ಜಿಗಿದು ದಾರಿಯೇನೊ ಬಿಟ್ಟರು. ಕಾರು ಚಾಲು ಮಾಡಿ ಹೊರಟ ಕಾರಾಂಗನೆ ಸುಮ್ನೆ ದಾರಿ ಹಿಡ್ಕೊ೦ಡ್ ಹೋಗ್ಬೇಕೊ ಬೇಡ್ವೊ?... ಸ್ವಲ್ಪ ಮು೦ದೆ ಹೋದವಳು ಕಿಟಕಿಯ ಗ್ಲಾಸನ್ನು ಕೆಳಗಿಳಿಸಿ ತನ್ನ ನಗ್ನ ಮೊಣಕೈಯನ್ನು ಸ್ವಲ್ಪ ಹೊರಗೆ ತೋರಿಸುತ್ತ ತಲೆ ಹೊರಗೆಳೆದು ಹಿ೦ತಿರುಗಿ ನೋಡಿದಳು... ಸ್ವಲ್ಪ ಭಯನೂ ಇದ್ದಿರ್ಬಹುದೋ ಏನೋ?... ಏನೊ ಅ೦ದು ಹೊದಳು....ಸ್ವಲ್ಪ ಖಾರವಾಗೇ... “ಏನ೦ದ್ಲು ಇ೦ಗ್ಲೀಸ್ನಾಗೆ”..... “ಈಡಿಯಟ್ಸ್” ...... “ಯೇನ್ಲಾ ಅ೦ಗ೦ದ್ರೆ”.... “ಬಯ್ದ ಓಯ್ತಾ“.....”ಈಡಿಯಟ್ಸ್ ಅ೦ದ್ರೆ ಬಯ್ಯು ಸಬ್ದಾನಾ”....... ನಮ್ಮ ಗೆಳೆಯರ ತಲೆಯೊಳಗೆ ಪ್ರಶ್ನೆಯೊ೦ದು ತೂರಿಬಿಟ್ಟಿತ್ತು.... ಬಡಕ್ಯಾನನ್ನು ಬಿಟ್ಟು. “ಜಿ೦ಕೆ ಮರೀನಾ ...” ಹಾಡು ಮುಗಿದು ಅದ್ಯಾವ್ದೊ ಹಿ೦ದಿ ಹಾಡು ಶುರು ಆಗಿತ್ತು ಕುಡಿ ಮೀಸೆಯವನ ಮೊಬೈಲಲ್ಲಿ...ನಾಲ್ವರು ಮಾತ್ರ ಎರಡು ಪಾಲಾಗಿ ಹ೦ಚೇ ಇದ್ದರು.  

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...