Tuesday, October 28, 2014

ಶುಚಿಯಾಗಲಿ ಭಾರತ

ಸ್ವಚ್ಛತೆಯೆಡೆಗೆ ಒಂದು ಹೆಜ್ಜೆ

(ಪುಂಗವ 01/11/2014)

            ಮಹಾತ್ಮಾ ಗಾಂಧಿಯವರ 150ನೇ ಜಯಂತಿಯ ಸಂದರ್ಭದ (2019) ಹೊತ್ತಿಗೆ ಕೊಳೆಯನ್ನು ತೊಳೆದು ಸ್ವಚ್ಛ ಭಾರತ ನಿರ್ಮಿಸುವ ಮಹತ್ವಾಕಾಂಕ್ಷಿ ಆಂದೋಲನಕ್ಕೆ ದೇಶದೆಲ್ಲೆಡೆ ದೊಡ್ಡ ಪ್ರಮಾಣದ ಬೆಂಬಲ ವ್ಯಕ್ತವಾಗುತ್ತಿದೆ. ಬಾಹ್ಯ ಶುಚಿಯ ಜೊತೆಗೆ ಅಂತರಂಗದ ನೈರ್ಮಲ್ಯಕ್ಕೂ ಒತ್ತು ಕೊಟ್ಟ ಶ್ರೇಷ್ಠ ಪರಂಪರೆಯುಳ್ಳ ಭಾರತದಲ್ಲಿ ಸ್ವಚ್ಛತೆಗಾಗಿ ಸರ್ಕಾರವೇ ಒಂದು ರಾಷ್ಟ್ರವ್ಯಾಪಿ ಯೋಜನೆ ರೂಪಿಸಬೇಕಾಗಿ ಬಂದಿರುವುದು ವಿಪರ್ಯಾಸವಾಗಿ ಕಂಡರೂ, ಹೆಚ್ಚುತ್ತಿರುವ ನಗರೀಕರಣ ಮತ್ತು ನಿತ್ಯ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣವನ್ನು ಗಮನಿಸಿದರೆ ನೈರ್ಮಲ್ಯೀಕರಣ ಜನಾಂದೋಲನವಾಗಬೇಕಾದ ಅನಿವಾರ್ಯತೆಯನ್ನು ಮನಗಾಣಬಹುದು. 

ಕಸ ಮಾಡದೇ ಇರುವುದೇ ಮೊದಲ ಹೆಜ್ಜೆ
           ಕೊಳೆಯನ್ನು ಸ್ವಚ್ಛಗೊಳಿಸುವುದು ಒಂದು ಕೆಲಸವಾದರೆ ಕಸದ ಉತ್ಪತ್ತಿಯನ್ನು ಮಿತಗೊಳಿಸುವುದೂ ಸ್ವಚ್ಛತೆಯ ಭಾಗವೇ ಆಗಿದೆ. ಉದಾಹರಣೆಗೆ ಪ್ಲಾಸ್ಟಿಕ್ ಬಳಕೆಯನ್ನು ಬಿಡುವುದು, ಎಲ್ಲೆಂದರಲ್ಲಿ ಕಸವನ್ನು ಎಸೆಯದೇ ಇರುವುದು, ಕಂಡಕಂಡಲ್ಲಿ ಉಗುಳದೇ ಇರುವುದು, ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಂಗಡನೆ ಮಾಡಿ ಪುನರ್ಬಳಕೆ ಮಾಡುವುದು ಮೊದಲಾದ ಚಿಕ್ಕ ಚಿಕ್ಕ ಕ್ರಮಗಳಿಂದಲೇ ಸಾಕಷ್ಟುಮಟ್ಟಿಗೆ  ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು. 

ಮಿತಬಳಕೆ ಮತ್ತು ಸರಳ ಜೀವನ 
           ಕೊಳ್ಳುಬಾಕತನ ಮತ್ತು ಐಶಾರಾಮಿ ಜೀವನಶೈಲಿಗಳು ಪರಿಸರದ ಮೇಲೆ ಅತಿಯಾದ ಒತ್ತಡ ಹೇರುತ್ತಿರುವುದು ಒಂದೆಡೆಯಾದರೆ, ಅಂತಹ ಜೀವನಶೈಲಿಗೆ ಬೇಕಾಗುವ ವಸ್ತುಗಳ ಉತ್ಪಾದನೆ, ಸಾಗಾಣಿಕೆಗಳು ಗಣನೀಯ ಪ್ರಮಾಣದ ತ್ಯಾಜ್ಯಗಳನ್ನು ಉತ್ಪಾದಿಸುತ್ತವೆ. ಆದ್ದರಿಂದ ಮಿತಬಳಕೆ ಮತ್ತು ಶಿಸ್ತುಬದ್ಧ ಸರಳ ಜೀವನವನ್ನು ಮೈಗೂಡಿಸಿಕೊಳ್ಳುವ ಸಂದೇಶವೂ ಸ್ವಚ್ಛ ಭಾರತ ಆಂದೋಲನದಿಂದ ಜನಮಾನಸವನ್ನು ತಲುಪಲಿ.

ಮಕ್ಕಳಿಗೂ ಸಿಗಲಿ ಶುಚಿತ್ವದ ಶಿಕ್ಷಣ
         ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳಲ್ಲಿ ಪ್ರತಿದಿನ ಮುಂಜಾನೆಯ ಪ್ರಾರ್ಥನೆಯ ಮೊದಲು ವಿದ್ಯಾರ್ಥಿಗಳು ಕೊಠಡಿಯನ್ನು, ಶಾಲಾ ಮೈದಾನವನ್ನು ಸ್ವಚ್ಛಗೊಳಿಸುವುದು ಕಡ್ಡಾಯವಾಗಿತ್ತು. ಇಂದಿಗೂ ಅನೇಕ ಶಾಲೆಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಅಂದರೆ ಸ್ವಚ್ಛತೆ ಶಾಲೆಯಲ್ಲಿ ಮಗುವಿಗೆ ಸಿಗುವ ಮೊದಲನೇ ಪಾಠ. ಆದರೆ ಕಾರಣಾಂತರಗಳಿಂದ ಈ ಪದ್ಧತಿ ಕಣ್ಮರೆಯಾಗಿರುವದಷ್ಟೇ ಅಲ್ಲ ಅಪರೂಪಕ್ಕೆ ಮಕ್ಕಳ ಕೈಯಲ್ಲಿ ಕಸ ಸ್ವಚ್ಛಗೊಳಿಸಿದ ಶಿಕ್ಷಕರನ್ನು ಕಟಕಟೆಯಲ್ಲಿ ನಿಲ್ಲಿಸಿದ ಉದಾಹರಣೆಗಳೂ ವರದಿಯಾಗಿವೆ. ಸ್ವಚ್ಛತೆಯೂ ಮಗುವಿನ ಶಿಕ್ಷಣದ ಒಂದು ಅಂಗ. ಈ ನಿಟ್ಟಿನಲ್ಲಿ ಮಕ್ಕಳ ದಿನಾಚರಣೆ ನವಂಬರ್ 14ರಿಂದ ಒಂದು ವಾರಗಳ ಕಾಲ ದೇಶದಾದ್ಯಂತ ಶಾಲೆಗಳನ್ನು ನೈರ್ಮಲ್ಯೀಕರಣದ ಕಾರ್ಯದಲ್ಲಿ ತೊಡಗಿಸುವ ಬಾಲ ಸ್ವಚ್ಛತಾ ಅಭಿಯಾನವನ್ನು ರೂಪಿಸಲಾಗಿದೆ. ನಮ್ಮ ಮಕ್ಕಳ ಶುಚಿತ್ವದ ಶಿಕ್ಷಣ ಇಲ್ಲಿಂದ ಪ್ರಾರಂಭವಾಗಲಿ.

ನಿರ್ಮಲವಾಗಲಿ ಮನ
         ಪರಿಸರ ಶುಚಿಗೊಳ್ಳುವುದರ ಜೊತೆಗೆ ಜನರ ಮನೋಬುದ್ಧಿಗಳೂ ನಿರ್ಮಲಗೊಳ್ಳಬೇಕಾದ ಅಗತ್ಯವಿದೆ. ನಾವು ವಾಸಿಸುವ ಪ್ರದೇಶ ಪರಿಸರವನ್ನು ಕಲಿಷಿತಗೊಳಿಸಬಾರದೆಂಬ ಸಾಮಾಜಿಕ ಪ್ರಜ್ಞೆ ಸದಾ ಜಾಗೃತವಾಗಿರದ ಹೊರತು ಒಮ್ಮೆ ಸರ್ಕಾರ ಅಥವಾ ಯಾರದೋ ಪ್ರಯತ್ನದಿಂದ ಸ್ವಚ್ಛಗೊಂಡ ಪ್ರದೇಶ ಯಾವಾಗಲೂ ಶುಚಿಯಾಗಿಯೇ ಇರಲಾರದು. ನಮ್ಮ ಮನೆಗಳನ್ನು ಸ್ವಚ್ಛವಾಗಿರಿಸಿ ಕಸವನ್ನು ತಂದು ಬೀದಿಯಲ್ಲಿ ಸುರಿಯುವ ಮಾನಸಿಕತೆಯು ಜವಾಬ್ದಾರಿಯುತ ನಾಗರಿಕರಲ್ಲಿರಬಾರದು. ಸ್ವಚ್ಛ ಭಾರತ ಅಭಿಯಾನ ಸ್ಥಳದ ಸ್ವಚ್ಛತೆಯ ಜೊತೆಗೆ ಶಿಸ್ತು ಮತ್ತು ಶುಚಿತ್ವನ್ನು ಕಾಪಾಡಿಕೊಳ್ಳವಲ್ಲಿ ನಾಗರಿಕರನ್ನು ಶಿಕ್ಷಿತರನ್ನಾಗಿಸಲಿ. 

          ದೇಶವನ್ನು ಕಸಮುಕ್ತಗೊಳಿಸುವ ನಿಟ್ಟನಲ್ಲಿ ಸರ್ಕಾರಿ ಯೋಜನೆಯನ್ನು ಜನಾಂದೋಲನವಾಗಿ ಪರಿವರ್ತಿಸಿ ನಾಗರಿಕರ ಹೊಣೆಗಾರಿಕೆಯನ್ನು ಎಚ್ಚರಿಸುವತ್ತ ನಡೆದಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಕಾರ್ಯದಲ್ಲಿ ಸಾಂಕೇತಿಕವಾಗಿಯಾದರೂ ಜೋಡಿಕೊಂಡ ಸಮಾಜದ ಅನೇಕ ಪ್ರಭಾವಿ ವ್ಯಕ್ತಿಗಳು, ಸೆಲೆಬ್ರಿಟಿಗಳು ಸ್ವಚ್ಛತೆಯ ವಿಷಯವನ್ನು ಜನಮಾನಸಕ್ಕೆ ತಲುಪಿಸಲು ಯತ್ನಿಸುತ್ತಿದ್ದಾರೆ. ಆದರೆ ಸ್ವಚ್ಛತೆಯ ಕೆಲಸ ಒಂದೆರಡು ದಿನದ್ದಲ್ಲ. ನಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಕಾರ್ಯ ನಮ್ಮ ಬದುಕಿನ ಅಂಗವೇ ಆಗಿದೆ. ಸೀಮಿತ ಅವಧಿಯ ಸರ್ಕಾರಿ ಯೋಜನೆಯನ್ನು ಸಮಾಜ ನಿರಂತರವಾಗಿ ಮುಂದೊಯ್ದರೆ ಮಾತ್ರ ಒಳಿತಾದ ಪರಿವರ್ತನೆ ಸ್ಥಿರವಾಗಬಲ್ಲದು. ಜಾಗೃತ ದೇಶಭಕ್ತ ಸಮಾಜವೇ ದೇಶದ ಭವಿಷ್ಯದ ನಿರ್ಮಾತೃವಾಗಿದೆ.



ನಾವು ಹೀಗೆ ಮಾಡಬಹುದೇ?
  • ನಮ್ಮ ಊರಿನ ಶಾಲೆಗೆ ಶೌಚಾಲಯ ಕಟ್ಟಿಸಿ ಅದರ ನಿರ್ವಹಣೆಗೆ ಬೇಕಾದ ವ್ಯವಸ್ಥೆ ಮಾಡುವುದು.
  • ನಮ್ಮ ಊರಿನ ಕೇಂದ್ರ ಸ್ಥಾನ-ಅಂಗಡಿ ಮುಂಗಟ್ಟು, ಪಂಚಾಯತಿ ಕಟ್ಟೆಯ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಿಸುವುದು, ಕಸದ ತೊಟ್ಟಿಗಳನ್ನು ಇಡುವುದು.
  • ಊರಿನ ಯುವಕರು ಒಟ್ಟುಗೂಡಿ ಸ್ವಚ್ಛತೆಗಾಗಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಶ್ರಮದಾನ ಮಾಡುವುದು.
  • ನಮ್ಮ ನಮ್ಮ ಮನೆಗಳಲ್ಲಿ ತ್ಯಾಜ್ಯಗಳ ವಿಂಗಡನೆ ಮಾಡಿ, ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳನ್ನು ಪುನರ್ನವೀಕರಣಕ್ಕೆ ನೀಡುವುದು. ಜೈವಿಕ ತ್ಯಾಜ್ಯಗಳು, ತರಕಾರಿ ಸಿಪ್ಪೆ ಇತ್ಯಾದಿಗಳನ್ನು ಕಂಪೋಸ್ಟ ಮಾಡಲು, ಗೊಬ್ಬರದ ಅನಿಲ ತಯಾರಿಕೆಗೆ ಅಥವಾ ನೇರವಾಗಿ ಮರಗಳ ಬುಡಕ್ಕೆ ಗೊಬ್ಬರವಾಗಿ ಬಳಸುವುದು.
  • ವಿಶೇಷ ಕಾರ್ಯಕ್ರಮಗಳು, ಪೂಜೆ, ಉತ್ಸವಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಸಮರ್ಪಕ ವಿಲೇವಾರಿಯ ಬಗ್ಗೆ, ಆವರಣದ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದು.
  • ನೈರ್ಮಲ್ಯದ ಮಹತ್ವ, ನಮ್ಮ ಸುತ್ತಲಿನ ಪರಿಸರವನ್ನು ಕೊಳಕುಮಾಡದಿರುವುದು, ನಿತ್ಯ ಜೀವನದಲ್ಲಿ ಅನುಸರಿಸಬೇಕಾದ ಶಿಸ್ತಿನ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವುದು


ಸ್ವಚ್ಛ ಭಾರತ ಅಭಿಯಾನದ ಪ್ರತಿಜ್ಞಾವಿಧಿ.

ಭಾರತ ದೇಶವು ರಾಜಕೀಯ ಮುಕ್ತವಾಗಿರಬೇಕೆಂಬುದಷ್ಟೇ ಅಲ್ಲ ಕಸ ಮತ್ತು ಕೊಳಕಿನಿಂದಲೂ ಮುಕ್ತವಾಗಿರಬೇಕೆಂಬುದು ಗಾಂಧೀಜಿಯ ಕನಸಾಗಿತ್ತು.

ಗಾಂಧೀಜಿ ನಮ್ಮ ದೇಶವನ್ನ ಮುಕ್ತಗೊಳಿಸಿದರು. ಈಗ ನಮ್ಮ ದೇಶವನ್ನ ಕೊಳಕುಮುಕ್ತವಾಗಿ ಮಾಡುವುದು ನಮ್ಮ ಕರ್ತವ್ಯ.
ಸ್ವಚ್ಛತೆಗಾಗಿ ನಮಗೆ ಕೈಲಾಗಿದ್ದನ್ನ ಮಾಡುತ್ತೇನೆ ಮತ್ತು ಅದಕ್ಕಾಗಿ ಸಮಯ ಮೀಸಲಿರಿಸುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ.

ಪ್ರತೀ ವರ್ಷ 100 ಗಂಟೆ ಅಥವಾ ವಾರಕ್ಕೆ 2 ಗಂಟೆ ಈ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ.

ನಾನು ಎಲ್ಲೆಂದರಲ್ಲಿ ಕಸ ಬಿಸಾಡುವುದಿಲ್ಲ, ಬೇರೆಯವರಿಗೂ ಮಾಡಲು ಬಿಡುವುದಿಲ್ಲ.

ಈ ಸ್ವಚ್ಛತಾ ಕಾರ್ಯವನ್ನ ನನ್ನಿಂದಲೇ ಆರಂಭಿಸಿ, ನನ್ನ ಕುಟುಂಬ, ನನ್ನ ಸುತ್ತಮುತ್ತಲ ಪ್ರದೇಶ, ನನ್ನ ಗ್ರಾಮ ಮತ್ತು ನನ್ನ ಕಚೇರಿ ಸ್ಥಳವನ್ನೂ ಈ ಕೆಲಸಕ್ಕೆ ತೊಡಗಿಸುತ್ತೇನೆ.

ಕೆಲ ರಾಷ್ಟ್ರಗಳು ತುಂಬಾ ಸ್ವಚ್ಛವಾಗಿರುವುದು ಯಾಕೆಂದರೆ ಆ ದೇಶದ ನಾಗರಿಕರು ಕಸ ಹರಗುವುದಿಲ್ಲ, ಬಿಸಾಡುವುದಿಲ್ಲ, ಬೇರೆಯವರಿಗೂ ಆ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂಬುದು ನನಗೆ ಗೊತ್ತು.

ಈ ವಿಷಯವನ್ನ ಗಮನದಲ್ಲಿರಿಸಿಕೊಂಡು ಬೀದಿಯಿಂದ ಬೀದಿಗೆ, ಗ್ರಾಮದಿಂದ ಗ್ರಾಮಕ್ಕೆ ಸಂದೇಶ ಹರಡುತ್ತೇನೆ.

ನಾನು ಶತಥ ಪಡೆಯುತ್ತಿರುವಂತೆಯೇ ಇನ್ನೂ 100ಕ್ಕೂ ಹೆಚ್ಚು ಜನರಿಗೂ ಪ್ರತಿಜ್ಞಾವಿಧಿ ಸಿಗುವಂತೆ ಮಾಡುತ್ತೇನೆ. ಅವರೂ ಕೂಡ ಸ್ವಚ್ಛತಾ ಕಾರ್ಯದಲ್ಲಿ ನೂರು ಗಂಟೆಯಾದರೂ ಮೀಸಲಿಡುವಂತೆ ಮಾಡುತ್ತೇನೆ.

ನನ್ನ ಈ ಮೊದಲ ಹೆಜ್ಜೆಯು ದೇಶವನ್ನ ಸ್ವಚ್ಛವಾಗಿಡಲು ಸಹಾಯವಾಗುತ್ತದೆ ಎಂಬ ನಂಬಿಕೆ ಇದೆ.


ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...