Saturday, April 1, 2017

ಬರದ ಬಿಸಿಯಲ್ಲಿ ಬಸವಳಿಯುತ್ತಿದೆ ಬದುಕು, ಇನ್ನೂ ಎಚ್ಚರಗೊಳ್ಳದಿದ್ದರೆ ವಿನಾಶ ಖಚಿತ

(ಪುಂಗವ 01/03/2017)

ಬರಗಾಲ ಬರದ ವರ್ಷವನ್ನೇ ನಾವು ಇತ್ತೀಚೆಗೆ ನೋಡಿಲ್ಲ, ಕರ್ನಾಟಕದ ಮಟ್ಟಿಗೆ ಅನಾವೃಷ್ಠಿ ಮತ್ತು ಬರ ಅಷ್ಟು ಸಾಮಾನ್ಯವಾಗಿ ಹೋಗಿದೆ. ವರ್ಷದಿಂದ ವರ್ಷಕ್ಕೆ ಬರದ ತೀವ್ರತೆ ಮಾತ್ರ ಹೆಚ್ಚಾಗುತ್ತಿದೆ. ಈ ವರ್ಷದ ಬರಗಾಲವನ್ನು ಕಳೆದ ೪೫  ವರ್ಷಗಳಲ್ಲೇ ಅತ್ಯಂತ ಭೀಕರ ಎನ್ನಲಾಗುತ್ತಿದೆ. ಬೇಸಿಗೆ ಸರಿಯಾಗಿ ಆರಂಭವಾಗುವ ಮೊದಲೇ ಬಿಸಿಲಿನ ಬೇಗೆ ತೀವ್ರವಾಗಿ  ಹೆಚ್ಚುತ್ತಿದೆ. ನಗರಗಳಲ್ಲಿ ನೀರಿನ ಟ್ಯಾಂಕರ್‌ಗಳ ಓಡಾಟ ಹೆಚ್ಚುತ್ತಿರುವಂತೆಯೇ ಹಳ್ಳಿಗಳ ಸಾರ್ವಜನಿಕ ಹ್ಯಾಂಡ್‌ಪಂಪ್‌ಗಳು, ನೀರಿನ ಟ್ಯಾಂಕ್‌ಗಳ ಮುಂದೆ ಪ್ಲಾಸ್ಟಿಕ್ ಕೊಡಪಾನಗಳ ಸಾಲು ಬೆಳೆಯುತ್ತಿದೆ. ಅನೇಕ ಊರುಗಳಲ್ಲಿ ಇಡೀ  ಗ್ರಾಮಕ್ಕೇ ನೀರುಣಿಸುತ್ತಿದ್ದ  ತೆರೆದ ಬಾವಿಗಳು ಬತ್ತಿಹೋಗಿ ವರ್ಷಗಳೇ ಕಳೆದವು.  ಕೊಳವೆ ಬಾವಿಗಳ ಆರ್ಭಟಕ್ಕೆ ಅಂತರ್ಜಲದ ಮಟ್ಟ ದಿನೇದಿನೇ ಕುಸಿಯುತ್ತಿದೆ. ಹಸುರಿನಿಂದ ಸಮೃದ್ಧವಾಗಿರುತ್ತಿದ್ದ ಮಲೆನಾಡು ಪ್ರದೇಶವೂ ನೀರಿನ ಬರಕ್ಕೆ ತುತ್ತಾಗುತ್ತಿರುವುದು ಕಳವಳಗೊಳಿಸುವ ವಿಷಯವಾಗಿದೆ.

ಈ ವರ್ಷ ರಾಜ್ಯದ 176 ತಾಲೂಕುಗಳಲ್ಲಿ 139 ತಾಲೂಕುಗಳು ಬರಪೀಡಿತ ಎಂದು ಈಗಾಗಲೇ ಘೋಷಿಸಲಾಗಿದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಮೀಕ್ಷೆ ನಡಸಿದೆ ಕೇಂದ್ರೀಯ ಅಂತರ್ಜಲ ಮಂಡಲಿಯು ಅಂತರ್ಜಲ ಮಟ್ಟದಲ್ಲಿ ೨ರಿಂದ ೪ ಮೀಟರಿನಷ್ಟು ಕುಸಿತವಾಗಿದೆ ಎಂದು ವರದಿ ನೀಡಿದೆ. ಇದಕ್ಕೆ ಮಳೆಯ ಕೊರತೆ ಒಂದು ಕಾರಣವಾದರೆ ಅಂತರ್ಜವನ್ನು ಅತಿಯಾಗಿ ಹೊರತೆಗೆಯುತ್ತಿರುವ ಕಾರಣವೂ ಇದೆ.

ಅನೇಕ ಕಡೆ ಕಾಳ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು ನಾಗರಹೊಳೆ ಬಂಡಿಪುರ ರಕ್ಷಿತ ಅರಣ್ಯ ಪ್ರದೇಶದಲ್ಲಿಯೇ ಕಾಳ್ಗಿಚ್ಚಿನಿಂದ ನೂರಾರು ಎಕರೆ ಅರಣ್ಯ ನಾಶವಾಗಿದ್ದು ವರದಿಯಾಗಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಕಲ್ಕೆರೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚನ್ನು ನಂದಿಸುವ ಸಂದರ್ಭದಲ್ಲಿ ಅರಣ್ಯಾಧಿಕಾರಿಯೋರ್ವರು ಮೃತಪಟ್ಟಿದ್ದೂ ವರದಿಯಾಗಿದೆ. ಒಣಗಿ ಗರಿಗರಿಯಾಗಿರುವ ಮರ ಹುಲ್ಲು ತರಗೆಲೆಗಳ ನಡುವೆ ಬಿದಿರುಗಳ ತಿಕ್ಕಾಟದಿಂದ ಒಂದು ಸಣ್ಣ ಕಿಡಿ ಹುಟ್ಟಿದರೂ ಅದರಿಂದ ಭಗ್ಗೆಂದು ಹೊತ್ತಿಕೊಂಡು ಉರಿಯುವ ಕಾಳ್ಗಿಚ್ಚನಿಂದ ಅರಣ್ಯವನ್ನು ರಕ್ಷಿಸುವುದು ವನಪಾಲಕರಿಗೆ ದೊಡ್ಡ ಸವಾಲಾಗಿದೆ. ಕಾಡಂಚಿನ ಗ್ರಾಮಗಳೂ ಕಾಳ್ಗಿಚ್ಚಿನ  ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಇದರ ಜೊತೆಗೆ ಕಾಡಿನಲ್ಲಿರುವ ಜಲಮೂಲಗಳು ಕೆರೆತೊರೆಗಳು ಬತ್ತಿ ವನ್ಯಜೀವಿಗಳು ನೀರಿಲ್ಲದೇ ಪರಿತಪಿಸುತ್ತಿರುವುದು ಇನ್ನೊಂದು ಸಮಸ್ಯೆಯಾಗಿದೆ. ಹುಲಿ ಸಂರಕ್ಷಿತ ಅರಣ್ಯವಾದ ಸುಮಾರು ೯೦೦ ಚದರ ಕೀಮೀ ವ್ಯಾಪ್ತಿಯ ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿದ್ದ ೧೫೦ ಕೆರೆಕಟ್ಟೆಗಳ ಪೈಕಿ ೧೨೦ರಷ್ಟು ಬತ್ತಿಹೋಗಿವೆ.ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮ, ಕಬಿನಿ ರಾಷ್ಟ್ರೀಯ ಉದ್ಯಾನ, ಬಿಳಿಗಿರಿರಂಗಸ್ವಾಮಿ ವನ್ಯಧಾಮ, ಮಲೆಮಹದೇಶ್ವರ ಬೆಟ್ಟ ಪ್ರದೇಶಗಳಲ್ಲಿಯೂ ನೀರಿನ ಬರ ತೀವ್ರವಾಗಿದೆ. ವನ್ಯಜೀವಿಗಳಿಗೂ ಬೋರ್‌ವೆಲ್ ನೀರನ್ನು ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಬೇಕಾದ ಸನ್ನಿವೇಶ ಬಂದಿದೆಯೆಂದರೆ ಬರ ತಂದೊದಗಿದ ಪರಿಸ್ಥಿತಿಯನ್ನು ಊಹಿಸಬಹುದು.

ಒಟ್ಟಿನ ತಾತ್ಪರ್ಯವಿಷ್ಟೇ. ನೀರು, ಜಲಮೂಲಗಳು  ಮತ್ತು ಕಾಡಿನ ಸಂರಕ್ಷಣೆಗೆ  ಇನ್ನೂ ನಾವುಎಚ್ಚೆತ್ತುಕೊಳ್ಳದಿದ್ದರೆ ಮನುಕುಲ ವಿನಾಶದ ಕಡೆಗೆ ನಡೆಯುವುದನ್ನು ತಪ್ಪಿಸುವುದು ಸಾಧ್ಯವಿಲ್ಲ. ಭೂಮಿಯನ್ನು ಕೊರೆದು ಅಂತರ್ಜಲವನ್ನು ಹೊರತೆಯುವಲ್ಲಿ ಬೆಳೆದಿರುವ ತಂತ್ರಜ್ಞಾನ ಮತ್ತು ಶ್ರಮ ಮಳೆಯ ನೀರಿನ ಸಂಗ್ರಹ, ನೀರಿಂಗಿಸುವಿಕೆ, ನೀರಿನ ಮಿತಬಳಕೆಯಲ್ಲೂ ಆಗಬೇಕು.ಕಾಡನ್ನು ಕಡಿದು ಮತ್ತು  ಕಾಡಿನ ಉತ್ಪನ್ನಗಳನ್ನು  ತಂದು ನಗರಗಳನ್ನು ನಿರ್ಮಿಸುವಲ್ಲಿ  ವ್ಯಯಗೊಳಿಸುವ ಹಣ ಹಾಗೂ ಶಕ್ತಿ ಕಾಡನ್ನು ಬೆಳೆಸುವಲ್ಲಿಯೂ ವೆಚ್ಚವಾಗಬೇಕು.  ಏಕೆಂದರೆ  ಆರ್ಥಿಕ ಪ್ರಗತಿಯೆಡೆಗಿನ ಧಾವಂತ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾದಾಗ ಅದು ಬದುಕಿಗೇ ಮಾರಕವಾಗುವುದು ಎನ್ನುವ ವಾಸ್ತವವನ್ನು ಅರಿಯದಿದ್ದಲ್ಲಿ ವಿನಾಶ ಖಚಿತ.

ಮೇವಿನ ಬರದಿಂದ ಸಂಕಷ್ಟದಲ್ಲಿರುವ ಗೋವುಗಳು
ಬರದ ನೇರ ಪರಿಣಾಮ ಉಂಟಾಗುವುದು ಜಾನುವಾರುಗಳ ಮೇವಿನ ಮೇಲೆ ಮತ್ತು ದನಗಳನ್ನೇ ಆಶ್ರಯಿಸಿರುವ ರೈತಾಪಿಗಳ ಮೇಲೆ. ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿರುವ ಸುಮಾರು 4 ಸಾವಿರ ದನಗಳು ನೀರು ಮತ್ತು ಮೇವಿನ ಕೊರತೆಯಿಂದ ಸಂಕಷ್ಟಕ್ಕೊಳಗಾಗಿರುವುದನ್ನು ರಾಜ್ಯದ ಪ್ರಮುಖ ದಿನಪತ್ರಿಕೆಯೊಂದು ವರದಿ ಮಾಡಿದೆ. ಇದು ಕೇವಲ ಒಂದು ಪ್ರದೇಶದ ಸಮಸ್ಯೆಯಲ್ಲಿ. ಬರಗಾಲದಿಂದ ಗುಳೆ ಹೋಗುವ ಉತ್ತರ ಕರ್ನಾಟಕದ ಅನೇಕ ಊರುಗಳಲ್ಲಿನ ಜಾನುವಾರುಗಳ ಕಥೆ ಇನ್ನೂ ಕರುಣಾಜನಕ. ಪೌಷ್ಟಿಕ ಮೇವಿನ ಕೊರತೆಯಿಂದ ಹಾಲಿನ ಉತ್ಪಾದನೆಯೂ ಕಡಿಮೆಯಾಗುತ್ತಿದ್ದು  ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತಾಪಿ ವರ್ಗವು ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿದೆ. ಮೇವಿನ ಕೊರತೆ ದನಗಳಿಗಷ್ಟೇ ಅಲ್ಲಿದೆ ಕುರಿಮಂದೆಗಳನ್ನು ಊರಿಂದ ಊರಿಗೆ ಹೊಡೆದುಕೊಂಡು ಹೋಗುವ ಕುರಿಗಾಹಿಗಳನ್ನೂ ತಟ್ಟಿದೆ.

ಅನೇಕ ಕಡೆಗಳಲ್ಲಿ ಸರ್ಕಾರ ತಾತ್ಕಾಲಿಕ ಗೋಶಾಲೆಗಳನ್ನು ತೆರೆದು ಮೇವು ಮತ್ತು ನೀರನ್ನು ಒದಗಿಸುವ ಪ್ರಯತ್ನ ನಡೆಸಿದ್ದರೂ ಬರದ ತೀವ್ರತೆಗೆ ಇದು ಏನೂ ಸಾಲದಾಗಿದೆ. ಮಲೆಮಹದೇಶ್ವರ ಬೆಟ್ಟದಂತೆಯೇ ಅನೇಕ ಅರಣ್ಯ ಪ್ರದೇಶಗಳಲ್ಲಿ ಮೇವಿದ್ದರೂ ಅರಣ್ಯ ಇಲಾಖೆಯು ದನಗಳನ್ನು ಮೇಯಿಸುವುದಕ್ಕೆ ನಿರ್ಭಂದ ಹೇರಿರುವ ಕಾರಣದಿಂದ ಮೊದಲು ಕಾಡಿನಲ್ಲಿ ದೊಡ್ಡಿಗಳನ್ನು ನಿರ್ಮಿಸಿ ದನಗಳನ್ನು ಮೇಯಿಸುತ್ತಿದ್ದ ದನಗಾಹಿಗಳು ದಾರಿಕಾಣದಾಗಿದ್ದಾರೆ. ಅತಿಯಾಗಿ ಮೇಯಿಸುವುದರಿಂದ ಕಾಡು ಹಾಳಾಗಬಹುದೆಂಬ ಅರಣ್ಯ ಇಲಾಖೆಯ ಆತಂಕ ಸರಿಯಾದರೂ ಅರಣ್ಯದ ಮೇವನ್ನೇ ಆಶ್ರಯಿಸಿರುವ ಜಾನುವಾರುಗಳ ಕಷ್ಟವನ್ನು ಗಮನಿಸಬೇಕು. ಆಫ್ರಿಕ ಮತ್ತು ದಕ್ಷಿಣ ಅಮೇರಿಕದ ಪ್ರದೇಶಗಳಲ್ಲಿ ದನಗಳ ಓಡಾಟದಿಂದ ಭೂಮಿ ಸಡಿಲಗೊಂಡು ಮತ್ತು ಅವು ಚೆಲ್ಲುವ ಗಂಜಲ ಸೆಗಣಿಗಳಿಂದ ಕಾಡು ಬೆಳೆದಿರುವ ಉದಾಹರಣೆಗಳು ಇವೆ. ಆದ್ದರಿಂದ ಅರಣ್ಯ ಪ್ರದೇಶದಲ್ಲಿ ದನಗಳನ್ನು ಮೇಯಿಸುವುದಕ್ಕೆ ನಿರ್ಭಂದ ಹೇರುವ ಬದಲು ಸರಿಯಾದ ನಿಯಮಗಳನ್ನು ರೂಪಿಸಿ ಜಾನುವಾರುಗಳನ್ನು ಮೇಯಿಯಸುವುದಕ್ಕೆ ಅವಕಾಶ ಮಾಡಿಕೊಡುವುದು ಸೂಕ್ತ.

ಗೋಪ್ರೇಮಿಗಳು  ಮತ್ತು ಗೋವಂಶದ ರಕ್ಷಣೆಗಾಗಿ ಹೋರಾಡುತ್ತಿರುವ ಸಜ್ಜನರು ಗೋವಿನ ಹಾಗೂ ಗೋಪಾಲಕರ ನೆರವಿಗೆ ಬರಲು ಇದು ಸಕಾಲವಾಗಿದೆ. ಹೈನುಗಾರಿಕೆಯನ್ನು ಅವಲಂಬಿಸಿರುವ ಹಾಗೂ ಕೃಷಿಯೊಂದಿಗೆ ದನಗಳನ್ನು ಸಾಕುವ ದೊಡ್ಡ ಕೃಷಿಕ ವರ್ಗ ನಮ್ಮ ರಾಜ್ಯದಲ್ಲಿದೆ. ಹಾಗೆಯೇ ಮುದಿ ಆಶಕ್ತ ದನಗಳನ್ನು ಸಾಕುವ ಪಿಂಜಾರಪೋಳ್ ಸಂಸ್ಥಯಂತೆ, ದೇಶಿ ಹಸುತಳಿಗಳ ಸಂವರ್ಧನೆಯಲ್ಲಿ ತೊಡಗಿಸಿಕೊಂಡಿರುವ ಸುಮಾರು 140ಕ್ಕೂ ಹೆಚ್ಚು ಗೋಶಾಲೆಗಳು ನಮ್ಮ ರಾಜ್ಯದಲ್ಲಿ ಸಕ್ರಿಯವಾಗಿವೆ. ಎಲ್ಲವೂ ಆರ್ಥಿಕವಾಗಿ ಸುದೃಢವಾಗಿಲ್ಲ, ಹೆಚ್ಚು ಹಣವನ್ನು ತೆತ್ತು ಮೇವನ್ನು ಹೊಂದಿಸುವ ಶಕ್ತಿ ಎಲ್ಲರಲ್ಲೂ ಇಲ್ಲ. ಆದ್ದರಿಂದ ಇಂತಹ ರೈತರ ಹಾಗೂ ಗೋಶಾಲೆಗಳಿಗೆ ಮೇವಿನ ನೆರವು ನೀಡುವುದರ ಮೂಲಕ ಸಹಾಯ ಮಾಡಬಹುದು. ಹಾಗೆಯೇ ಮೇವಿನ ದಾಸ್ತಾನು ಇರುವ ಮಾಹಿತಿ ಹಂಚಿಕೊಂಡು ಹಾಗೂ ಸಾಗಾಣಿಕೆಗೆ ಸಹಕಾರ ನೀಡಬಹುದು. ಅಗತ್ಯವಿದ್ದಲ್ಲಿ ಗೋಶಾಲೆ ಮೇವು ಬ್ಯಾಂಕ್‌ಗಳನ್ನು ಆರಂಭಿಸಿ ನೆರವಾಗಬಹುದು. ಆಹಾರದ ಕೊರತೆಯಿಂದ ಅಶಕ್ತಗೊಂಡು ಸಾವನ್ನಪ್ಪುವ ಅಥವಾ ಕಟುಕರ ಪಾಲಾಗುವ ಗೋವನ್ನು ಸಂರಕ್ಷಿಸಲು ಸಮಾಜ ಮುಂದಾಗಬೇಕಿದೆ.

ಗೋಮಾಳ ಜಮೀನಿನ ಕಬಳಿಕೆಯ ಸಕ್ರಮವೇಕೆ?
ರಾಜ್ಯದಲ್ಲಿ ಗೋಮಾಳ, ಹುಲ್ಲುಗಾವಲು ಸೇರಿದಂತೆ ಸುಮಾರು 12 ಲಕ್ಷ ಎಕರೆಯಷ್ಟು ಸರಕಾರಿ ಜಮೀನು ಒತ್ತುವರಿಯಾಗಿದೆಯೆಂದು ಸರ್ಕಾರ ಹೇಳಿದೆ. ಒತ್ತುವರಿಯಿಂದ ಕಬಳಿಕೆ ಮಾಡಿದ ಗೋಮಾಳಗಳ ಭೂಮಿಯನ್ನು ಸಕ್ರಮ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಗೋವಿನ ಮೇವನ್ನು ಕಸಿಯುವ ಸರ್ಕಾರದ ಈ ನಿರ್ಧಾರವು ಅತ್ಯಂತ ಖಂಡನೀಯವಾಗಿದೆ. ಹೆಚ್ಚಿನ ದೇಸಿ ಗೋ ತಳಿಗಳನ್ನು ಬಯಲಿನಲ್ಲಿ ಮೇಯಿಸಿ ಸಾಕಲಾಗುತ್ತದೆ, ವಿದೇಶಿ ತಳಿಗಳಂತೆ ಹಟ್ಟಿಯಲ್ಲಿ ಕಟ್ಟಿ ಹಾಕಲಾಗುದಿಲ್ಲ. 2012ರ ಜಾನುವಾರು ಗಣತಿಯ ಪ್ರಕಾರ ಕರ್ನಾಟಕದಲ್ಲಿ ಕಳೆದ ಎರಡು ದಶಕಗಳಲ್ಲಿ ಭಾರತೀಯ ತಳಿಯ ಗೋವುಗಳ ಸಂಖ್ಯೆ 64 ಲಕ್ಷದಿಂದ 38 ಲಕ್ಷಕ್ಕೆ ಇಳಿದಿದೆ, ಆದರೆ ವಿದೇಶ ಮತ್ತು ಮಿಶ್ರ ತಳಿಗಳ ಸಂಖ್ಯೆ 6ರಿಂದ 29 ಲಕ್ಷಕ್ಕೆ ಏರಿದೆ. ಸರ್ಕಾರದ ಈ ನಿರ್ಧಾರದಿಂದ ದನಗಳನ್ನು ಮೇಯಿಸುವ ಜಾಗ ಕಡಿಮೆಯಾಗಿ ಭಾರತೀಯ  ಗೋತಳಿಗಳ ಸಂವರ್ಧನೆಗೆ ಹೊಡೆತ ಬೀಳಲಿದೆ. ಇದರಿಂದ ನೇರವಾಗಿ ತೊಂದರೆಗೀಡಾಗುವವರು ಮನೆಗಳಲ್ಲಿ ಒಂದಿಷ್ಟು ದನಸಾಕುವ ಗ್ರಾಮೀಣ ಕೃಷಿಕರು  ಮತ್ತು ಹೈನುಗಾರಿಕೆಯನ್ನೇ ಅವಲಂಬಿಸಿರುವ ದನಗಾಹಿಗಳು. 

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...