Saturday, April 1, 2017

ಮೀಸಲಾತಿ, ಆರೆಸ್ಸೆಸ್ ಮತ್ತು ಮಾಧ್ಯಮದ ಸುಳ್ಳು

(ವಿಕ್ರಮ 05/02/2017)

ನಮ್ಮ ಬ್ರೇಕಿಂಗ್ ನ್ಯೂಸ್ ಮಾಧ್ಯಮಗಳಿಗೆ ಅತ್ಯಂತ ಪ್ರಿಯ ವಿಷಯ ಎಂದರೆ ವಿವಾದಗಳು. ಮನಬಂದಂತೆ ತಿರುಚಿ ವರದಿ ಸಿದ್ಧಮಾಡಿ ವಿವಾದ ಎಬ್ಬಿಸುವ ಕಲೆಂiನ್ನು ಕರಗತ ಮಾಡಿಕೊಂಡ ಒಂದು ವರ್ಗ ಮಾಧ್ಯಮದಲ್ಲಿ ಸಕ್ರಿಯವಾಗಿದೆ. ಸುಳ್ಳನ್ನು ಒಕ್ಕೊರಲಿನಿಂದ ಮತ್ತೆ ಮತ್ತೆ ಹೇಳಿ ಅದನ್ನು ಸತ್ಯವೆಂದು ನಂಬಿಸುವ ಇವರ ಪ್ರಯತ್ನ ಹೊಸತೇನಲ್ಲ. ಇದಕ್ಕೆ ಇನ್ನೊಂದು ನಿದರ್ಶನ ಸಿಕ್ಕಿದ್ದು ರಾಜಸ್ಥಾನದ ಜೈಪುರದಲ್ಲಿ ನಡದ ವಿಶ್ವಪ್ರಸಿದ್ಧ ಸಾಹಿತ್ಯೋತ್ಸವದಲ್ಲಿ. ಜೈಪುರ ಸಾಹಿತ್ಯೋತ್ಸವದಲ್ಲಿ ಸ್ಯಾಫ್ರಾನ್ ಮತ್ತು ಸಂಘ ಎನ್ನುವ ಚರ್ಚೆಯಲ್ಲಿ ಮೀಸಲಾತಿಯ ಕುರಿತ ಪ್ರಶ್ನೆಗೆ ಉತ್ತರಿಸುತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ ಡಾ ಮನಮೋಹನ ವೈದ್ಯರವರು ನೀಡಿದ ಉತ್ತರವನ್ನು ತಪ್ಪಾಗಿ ವರದಿ ಮಾಡಲಾಯತಲ್ಲದೇ ಮೀಸಲಾತಿಯನ್ನು ಸಮಾಪ್ತಗೊಳಿಸಬೇಕು ಎನ್ನುವುದು ಸಂಘದ ನಿಲುವಾಗಿದೆ ಎಂದೇ ಅಪಪ್ರಚಾರ ಮಾಡಲಾಯಿತು.

ಅಷ್ಟಕ್ಕೂ ನಡದಿದ್ದೇನು? ಪರಿಶಿಷ್ಟ ಜಾತಿ ಪಂಗಡಗಳಿಗೆ ಮೀಸಲಾತಿ ನೀಡಿದಂತೆ ಅಲ್ಪಸಂಖ್ಯಾತರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳಿಗೆ ಮೀಸಲಾತಿ ಪರಿಹಾರವೇ ಎನ್ನುವ ಪ್ರಶ್ನೆಗೆ ಕೇಳಲಾದ ಪ್ರಶ್ನೆಗೆ ಡಾ ಮನಮೋಹನ ವೈದ್ಯ ಹೀಗೆ ಉತ್ತರಿಸಿದರು. -  ’ಭಾರತದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿಯನ್ನು ಒಂದು ವಿಶೇಷ ಕಾರಣದಿಂದ ನೀಡಲಾಗಿದೆ. ನಮ್ಮ ಸಮಾಜದ ಒಂದು ವರ್ಗವನ್ನು ಶಿಕ್ಷಣ ಅವಕಾಶಗಳಿಂದ ವಂಚಿತರನ್ನಾಗಿಡಲಾಯಿತು. ಇದನ್ನು ಸರಿ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲೆ ಇದೆ. ಕೇವಲ ಒಂದು ಜಾತಿಯಲ್ಲಿ ಹುಟ್ಟಿದ ಕಾರಣದಿಂದ ಅವರನ್ನು ದೂರ ಇರಸಿದ್ದು ತಪ್ಪು. ಆದ್ದರಿಂದ ಅವರನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಸಂವಿಧಾನದಲ್ಲಿ ಆರಂಭದಿಂದಲೇ ಮೀಸಲಾತಿಯನ್ನು ಜಾರಿಗೆ ತರಲಾಯಿತು. ಯಾವುದೇ ರಾಷ್ಟ್ರದಲ್ಲಿ ಶಾಶ್ವತವಾಗಿ ಮೀಸಲಾತಿ ಇರುವುದು ಒಳ್ಳೆಯದಲ್ಲ, ಆದಷ್ಟು ಬೇಗ ಇದರ ಅಗತ್ಯ ಕೊನೆಗೊಂಡು ಎಲ್ಲರಿಗೂ ಸಮಾನ ಅವಕಾಶ ಸಿಗುವಂತಾಗಬೇಕು ಎಂದು ಡಾ ಅಂಬೇಡ್ಕರ್‌ರವರೇ ಹೇಳಿದ್ದಾರೆ. ಆದ್ದರಿಂದ ಮೀಸಲಾತಿಯ ಬದಲು ಹೆಚ್ಚಿನ ಶಿಕ್ಷಣ ಅವಕಾಶಗಳನ್ನು ನೀಡುವ ಪ್ರಯತ್ನವೂ ನಡೆಯಬೇಕು. ಇದನ್ನೂ ಮೀರಿ [ಅಲ್ಪಸಂಖ್ಯಾತರಿಗೆ] ಮೀಸಲಾತಿಯನ್ನು ನೀಡುವುದರಿಂದ ಪ್ರತ್ಯೇಕತೆಯ ಭಾವ ಬೆಳಯಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಿಂದೆ ಇರುವುದಕ್ಕೆ ವರ್ಷಗಳಿಂದ ನಡೆದುಬಂದ ಅನ್ಯಾಯ ಕಾರಣವಾಗಿದೆ. ಆದರೆ ಉಳಿದವರ ವಿಷಯದಲ್ಲಿ ಹೀಗಿಲ್ಲ. ಆದ್ದರಿಂದ [ಅಲ್ಪಸಂಖ್ಯಾತರ] ಸ್ಥಿತಿಗಳಿಗೆ ಬೇರೆ ರೀತಿಯಲ್ಲಿ ಪರಿಹಾರ ಹುಡುಕಬೇಕು ಎಂದು ನನಗನ್ನಿಸುತ್ತದೆ.’
ಒಂದೂವರೆ ಗಂಟೆಗೂ ಮೀರಿದ ಸಂವಾದದ ಒಂದು ಸಾಲನ್ನು ತಮಗೆ ಬೇಕಾದಂತೆ ಅರ್ಥ ಮಾಡಿಕೊಂಡ ಮಾಧ್ಯಮಗಳು ತಮಗೆ ಅನುಕೂಲವಾದಂತೆ ವರದಿ ಮಾಡಿದವು. ಮೀಸಲಾತಿಯನ್ನು ಕೊನೆಗೊಳಿಸಬೇಕೆಂದು ಆರೆಸ್ಸೆಸ್ ಹೇಳುತ್ತದೆ, ಮೀಸಲಾತಿ ಪ್ರತ್ಯೇಕತೆಯನ್ನು ಬೆಳೆಸುವುದೆಂದು ಆರೆಸ್ಸೆಸ್ ಹೇಳುತ್ತದೆ, ಆರೆಸ್ಸೆಸ್ ಮೀಸಲಾತಿ ವಿರೋಧಿ ಇತ್ಯಾದಿಯಾಗಿ ಮಾಧ್ಯಮಗಳಲ್ಲಿ ಹುಯಿಲೆಬ್ಬಿಸಲಾಯಿತು. ಟಿವಿ ಚಾನೆಲ್‌ಗಳಲ್ಲಿ ಚರ್ಚೆಗಳು ನಡೆದವು. ಉತ್ತರ ಪ್ರದೇಶ ಚುನಾವಣೆಗೆ ಇದನ್ನು ಜೋಡಿಸಿ ಒಂದರ ಮೇಲೊಂದು ವಿಶ್ಲೇಷಣೆಗಳು ನಡೆದವು. ತತ್‌ಕ್ಷಣಕ್ಕೆ ಚುರುಕಾದ ಬಿಜೆಪಿಯ ವಿರೋಧಿ ಪಕ್ಷಗಳ ನೇತಾರರು ರಾಜಕೀಯ ಲಾಭ ಪಡೆದುಕೊಳ್ಳಲು ಧಾವಿಸಿದರು. ಅಂತರ್ಜಾಲದ ಸುದ್ದಿ ಪೋರ್ಟಲ್‌ಗಳಲ್ಲಿ ವಿಶ್ಲೇಷಣೆಯ ಲೇಖನಗಳು ಬಂದವು. ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್‌ಗಳು ಹರಿದಾಡಿದವು. ಒಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮೀಸಲಾತಿಯ ವಿರೋಧಿ ಹಾಗೂ ಸಂಘದೊಂದಿಗೆ ಸಂಬಂಧವುಳ್ಳ ಬಿಜೆಪಿ ಪಕ್ಷವೂ ಮೀಸಲಾತಿಯ ಪರವಾಗಿಲ್ಲ ಎನ್ನುವ ಸಮೀಕರಣವನ್ನು ಸಾಧಿಸುವ ಎಲ್ಲ ಪ್ರಯತ್ನವನ್ನು ನಡೆಸಲಾಯಿತು.

ಮೀಸಲಾತಿಯ ವಿಷಯದಲ್ಲಿ ವಿವಾದ ಎಬ್ಬಿಸುವುದು ಇಂದಿನದಲ್ಲ. ಕೆಲ ಕಾಲದ ಹಿಂದೆ ಬಿಹಾರ ಚುನಾವಣೆಗೆ ಮೊದಲು ಸಂಘದ ಸರಸಂಘಚಾಲಕ ಶ್ರೀ ಮೋಹನ ಭಾಗವತ್‌ರವರು ಈ ವಿಷಯದಲ್ಲಿ ಹೇಳಿದ್ದನ್ನು ತಿರುಚಿ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದನ್ನು ಇಲ್ಲ ನೆನಪಿಸಿಕೊಳ್ಳಬಹುದು. ನಮ್ಮ ದೇಶದಲ್ಲಿ ಮೀಸಲಾತಿಯ ವಿಷಯವನ್ನಿಟ್ಟುಕೊಂಡೇ ರಾಜಕೀಯ ಬೆಳೆ ತೆಗೆಯುವ ಪಕ್ಷಗಳೂ ಇವೆ. ಆದರೆ ರಚನಾತ್ಮಕ ಹಾಗೂ ದೇಶಹಿತದ ಕಾರ್ಯದಲ್ಲಿ ನಿರತವಾಗಬೇಕಿದ್ದ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಭಾವಿಸಲಾಗುವ ಮಾಧ್ಯಮ ಅಸತ್ಯದ ಪ್ರಚಾರ ಮತ್ತು ರಾಜಕೀಯ ಮೇಲಾಟದ ದಾಳವಾಗಿ ಬಳಕೆಯಾಗುತ್ತಿರುವುದು ಅತ್ಯಂತ ಖೇದಕರವಾಗಿದೆ.

ಮತ್ತೆ ಮತ್ತೆ ಮರುಕಳಿಸುತ್ತಿರುವ ಇಂತಹ ಘಟನೆಗಳಿಂದ ಕೆಲವು ಕಳವಳಕಾರಿಯಾದ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಒಂದೂವರೆ ಗಂಟೆಗೂ ಹೆಚ್ಚಿನ ಕಾಲ ಗಂಭೀರ ವಿಷಯಗಳ ಮೇಲೆ ನಡೆದ ಸಂವಾದದಲ್ಲಿ ಉಳಿದೆಲ್ಲವನ್ನು ಒಂದೆರಡು ಸಾಲನ್ನು ತನಗೆ ಬೇಕಾದಂತೆ ಅರ್ಥೈಸಿಕೊಳ್ಳುವ ವರದಿಗಾರನ ಗ್ರಹಿಕೆಯ ಮಟ್ಟ ಹೇಗಿರಬಹುದು? ದೇಶ, ಸಮಾಜ ಹಾಗೂ ಜನಹಿತವನ್ನು ಕುರಿತಂತೆ ಆತನಿಗೆ ಜವಾಬ್ದಾರಿಯ ಅರಿವಿದೆಯೇ?  ತಂತ್ರಜ್ಞಾನ ಬೆಳೆದಿರುವ ಇಂದಿನ ಮಾಹಿತಿಯ ಯುಗದಲ್ಲಿ  ಈ ರೀತಿಯ ಅಸತ್ಯವನ್ನು ಹೆಚ್ಚು ಕಾಲ ಉಳಿಸಲು ಸಾಧ್ಯವಿಲ್ಲ. ಪ್ರಜ್ಞಾವಂತ ನಾಗರಿಕರು ಸತ್ಯವನ್ನು ಅರಿಯಲು ತಂತ್ರಜ್ಞಾನ ಸಹಕಾರಿಯಾಗಿದೆ. ಹಾಗಾಗಿ ಅಸತ್ಯ ಪ್ರಚಾರದ ಆಧಾರದಲ್ಲಿ ನಿಂತ ಮಾಧ್ಯಮಗಳು ದಿನದಿಂದ ದಿನಕ್ಕೆ ತಮ್ಮ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವುದನ್ನೂ ನಾವು ಕಾಣುತ್ತಿದ್ದೇವೆ.

ಈ ವರ್ಷ ದಶಕವನ್ನು ಪೋರೈಸಿದ ಜೈಪುರ ಸಾಹಿತ್ಯೋತ್ಸವದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಅಧಿಕಾರಗಳಾದ ಸಹಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ, ಪ್ರಚಾರ ಪ್ರಮುಖ್ ಡಾ. ಮನಮೋಹನ ವೈದ್ಯ ಆಹ್ವಾನಿನತರಾಗಿ ಪಾಲ್ಗೊಂಡರು.  ಸಂಘಕ್ಕೆ ಆಹ್ವಾನ ನೀಡಿದ್ದಕ್ಕೆ ಎಡಪಂಥೀಯ ವಿಚಾರದವರು ವಿರೋಧ ವ್ಯಕ್ತಪಡಿಸಿದರು.  ಹಿಂದುಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿರುವಂತೆ ಭಾರತೀಯ ಜನತಾಪಾರ್ಟಿಯ ವೈಚಾರಿಕತೆ ಮೂಲವಾದ ಹಾಗೂ ಯಾವುದೇ ಸ್ಪಷ್ಟ ಸಾಹಿತ್ಯಿಕ ಮೌಲ್ಯವಿಲ್ಲದ ಆರೆಸ್ಸೆಸ್ ವಿಶ್ವದ ಅತಿದೊಡ್ಡ ಸಾಹಿತ್ಯ ಪ್ರದರ್ಶನದಲ್ಲಿ ಚೊಚ್ಚಲ ಬಾರಿಗೆ ಪಾಲ್ಗೊಳ್ಳುತ್ತಿದೆ? ಅದೂ ಸಾಹಿತ್ಯೋತ್ಸವವು ಹತ್ತನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ! ಇದು ಸಂಘಕ್ಕೆ ಆಹ್ವಾನ ನೀಡಿದ್ದನ್ನು ವಿರೋಧಿಸುವವರ ಚಿಂತೆ.  ಇವರಲ್ಲಿ ಅವಾರ್ಡ ವಾಪಸಿ ತಂಡದ ಲೇಖಕರುಗಳೇ ಪ್ರಮುಖರು.  ಇವರು ಮತ್ತು ಎಡಪಕ್ಷಗಳಿಗೆ ಸೇರಿದ ಕೆಲವರು ಆರೆಸ್ಸೆಸ್‌ಗೆ ನೀಡಿದ ಆಹ್ವಾನವನ್ನು ವಿರೋಧಿಸ ಸಾಹಿತ್ಯೋತ್ಸವವನ್ನು ಬಹಿಷ್ಕರಿಸಿ ಪಲಾಯನಗೈದರು.  ಇದು ದೇಶದಲ್ಲಿ ಅಸಹಿಷ್ಣುತೆ ಇದೆಯೆಂದು ಗುಲ್ಲೆಬ್ಬಿಸುವವರು ಇನ್ನೊಂದು ವಿಚಾರಧಾರೆಯ ಜನರನ್ನು ಸ್ವೀಕರಿಸುವ ರೀತಿ.  ಈ ಅಸಹಿಷ್ಣುತೆಯೂ ಸಹ ಹೊಸತೇನಲ್ಲ, ಉದಾಹರಣೆಗೆ 2012ರಲ್ಲಿ ಲೇಖಕ ಸಲ್ಮಾನ್ ರಶ್ದಿ ಜೈಪುರ ಸಾಹಿತ್ಯೋತ್ಸವಕ್ಕೆ ಬರದಂತೆ ತಡೆಯಲಾಗಿತ್ತು. ಆದರೆ ಜನಜೀವನದ ಪ್ರತಿಬಿಂಬವಾದ ಸಾಹಿತ್ಯ ಕಲೆ ಸಂಸ್ಕೃತಿಗಳಿಗೆ ಸಂಬಂಧಿಸಿದ ಉನ್ನತ ಮಟ್ಟದ ಚರ್ಚೆಗೆ ವೇದಿಕೆಗಳಾಗಬೇಕಿದ್ದ ಸಾಹಿತ್ಯ ಸಮ್ಮೇಳನಗಳು ರಾಜಕೀಯ ಗುಂಪುಗಾರಿಕೆಗೆ ಬಲಿಯಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. 




No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...