Saturday, April 1, 2017

ಜಮ್ಮು ಕಾಶ್ಮೀರದ ನಿರಾಶ್ರಿತರ ದಶಕಗಳ ನೋವಿಗೆ ಒಂದಿಷ್ಟು ಸಾಂತ್ವನ

(ವಿಕ್ರಮ 22/01/2017)

ವಿಶ್ವಸಂಸ್ಥೆಯ ನಿರಾಶ್ರಿತರ ಕಲ್ಯಾಣ ಸಂಸ್ಥೆ (UNHRC) ಪ್ರಕಾರ ಶೋಷಣೆ, ಯುದ್ಧ ಅಥವಾ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ತನ್ನ ದೇಶ ಬಿಟ್ಟು ವಲಸೆಹೋಗುವವರನ್ನು ನಿರಾಶ್ರಿತರು ಎನ್ನಲಾಗುತ್ತದೆ. ಈ ವಲಸೆಗೆ ಜನಾಂಗೀಯ, ಮತೀಯ ಅಥವಾ ರಾಜಕೀಯ ಹಿಂಸೆಗಳು ಕಾರಣವಾಗಿರಬಹುದು. ಇಂತಹ ವಲಸೆ ಬಹುತೇಕ ಅವರು ಪುನಃ ತಮ್ಮ ಸ್ಥಳಗಳಿಗೆ ಮರಳಲು ಅಸಾಧ್ಯವಾಗಿರುವ ಸನ್ನಿವೇಶ ನಿರ್ಮಾಣವಾದಾಗ ನಡೆಯುತ್ತದೆ.  ಹಾಗೆಯೇ ಆಂತರಿಕ ಸ್ಥಳಾಂತರ ಒಳಗಾದ ವ್ಯಕ್ತಿಗಳು(internal displaced persons) ಎನ್ನುವ ಇನ್ನೊಂದು ರೀತಿಯ ನಿರಾಶ್ರಿತರು ಈ ಮೇಲಿನ ಕಾರಣಗಳಿಗೆ ತಮ್ಮ ಮನೆಗಳನ್ನು ಬಿಟ್ಟು ಅದೇ ದೇಶದ ಬೇರೆ ಪ್ರದೇಶಕ್ಕೆ ವಲಸೆ ಹೋಗಿರುತ್ತಾರೆ, ಅಂದರೆ ಅಂತರರಾಷ್ಟ್ರೀಯ ಗಡಿಯನ್ನು ದಾಟಿರುವುದಿಲ್ಲ. ಇನ್ನೊಂದು ರೀತಿಯ ನಿರಾಶ್ರಿತರನ್ನು ಸ್ಟೇಟ್‌ಲೆಸ್ ಸಿಟಿಜನ್ ಎನ್ನಲಾಗುತ್ತದೆ. ಯಾವುದೇ ದೇಶದ ನಾಗರಿಕತೆಯನ್ನು ಹೊಂದಿರದ ಇವರನ್ನೂ ನಿರಾಶ್ರಿತರ ಪಟ್ಟಿಯೊಳಗೆ ಸೇರಿಸಬಹುದು. ಇಂತಹ ಲಕ್ಷಾಂತರ ಜನರು ನಿರಾಶ್ರಿತರಾಗಿ ಕಳೆದ ಎಪ್ಪತ್ತು ವರ್ಷಗಳಿಂದ ಮೂಲಭೂತ ಹಕ್ಕುಗಳಿಂದ ವಂಚಿತರಾಗಿ ನಮ್ಮದೇ ದೇಶದ ಜಮ್ಮು ಕಾಶ್ಮೀರದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಒಂದು ರೀತಿಯಲ್ಲಿ ಜಮ್ಮುವನ್ನು ನಿರಾಶ್ರಿತರ ಕೇಂದ್ರ ಎಂದೇ ಕರೆಯಬಹುದು. ಜಮ್ಮುವಿನ ನಿರಾಶ್ರಿತರ ಒಟ್ಟೂ ಸಂಖ್ಯೆ ಇಪ್ಪತ್ತು ಲಕ್ಷಕ್ಕೂ ಹೆಚ್ಚು. ಇವರಲ್ಲಿ 1947 ದೇಶ ವಿಭಜನೆ, 1965, 1971ರ ಯುದ್ಧ ಸಂದರ್ಭಗಳಲ್ಲಿ ಪಶ್ಚಿಮ ಪಾಕಿಸ್ತಾನದಿಂದ ಪಲಾಯನಗೈದು ಬಂದ ಹಿಂದೂ ಹಾಗೂ ಸಿಖ್ ನಿರಾಶ್ರಿತರು, ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಪ್ರದೇಶದಿಂದ ಹೊರದಬ್ಬಲ್ಪಟ್ಟವರು, ಪೂಂಛ್ ಮೊದಲಾದ ಗಡಿಪ್ರದೇಶಗಳಲ್ಲಿ ಯುದ್ಧ ಸಮಯದಲ್ಲಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದವರು, 1985ರಿಂದ 1995ರವರೆಗೆ ಕಾಶ್ಮೀರ ಕಣಿವೆಯ ಮತಾಂಧ ಮುಸಲ್ಮಾನರ ದೌರ್ಜನ್ಯಕ್ಕೆ ಬಲಿಯಾಗಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡ ಕಾಶ್ಮೀರಿ ಪಂಡಿತರು ಸೇರಿದ್ದಾರೆ. ಇವರ ಜೊತೆಗೆ, 1957ರಲ್ಲಿ ಸಫಾಯಿ ಕರ್ಮಚಾರಿ ಕೆಲಸಕ್ಕೆಂದು ಹೊರರಾಜ್ಯಗಳಿಂದ ವಾಲ್ಮೀಕಿ ದಲಿತ ಸಮುದಾಯದ 70 ಕುಟುಂಬಗಳನ್ನು ರಾಜ್ಯಕ್ಕೆ ಕರೆಸಿಕೊಳ್ಳಲಾಯಿತು. ಇಂದು ಈ ಸಮುದಾಯಕ್ಕೆ ಸೇರಿದ 500 ಕುಟುಂಬಗಳಿಗೆ ರಾಜ್ಯದ ಖಾಯಂ ನಿವಾಸಿಗಳೆಂದು ಮಾನ್ಯತೆ ಸಿಕ್ಕಿಲ್ಲ. ಅವರೂ ಒಂದು ರೀತಿಯ ನಿರಾಶ್ರಿತರೇ.

ಜಮ್ಮು ಕಾಶ್ಮೀರದ ನಿರಾಶ್ರಿತರ ಬವಣೆಗಳ ಕಥೆ ಬಗೆದಷ್ಟೂ ಆಳಕ್ಕೆ ಇಳಿಯುತ್ತದೆ. ಮುಸ್ಲಿಂ ಮೂಲಭೂತವಾದ ಪ್ರೇರಿತ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿಗಳು, ರಾಜ್ಯದ ರಾಜಕೀಯ ಮತ್ತು ದಿಕ್ಕು ದಿಸೆಯಿಲ್ಲದ ಕೇಂದ್ರ ಸರ್ಕಾರದ ನೀತಿಗಳು ಇವುಗಳ ನಡುವೆ ನಿಜವಾಗಿಯೂ ಶೋಷಣೆಗೊಳಗಾದವರು ಈ ನಿರಾಶ್ರಿತರು. ಆಗೊಮ್ಮೆ ಈಗೊಮ್ಮೆ ನಿರಾಶ್ರಿತ ಪುನರ್ವಸತಿ, ಪರಿಹಾರ, ಸ್ಟೇಟ್ ಸಬ್ಜೆಕ್ಟ್ ಪ್ರಮಾಣಪತ್ರ ನೀಡುವ ಕುರಿತು ಚರ್ಚೆಗಳು ನಡೆದರೂ ಒಂದಲ್ಲ ಒಂದೂ ನೆವ ನೀಡಿ ಯೋಜನೆಯನ್ನು ದಾರಿತಪ್ಪಿಸುವ ಕೆಲಸ ನಿರಂತರ ನಡೆದು ಬಂದಿದೆ. ಈ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಕಾರಾತ್ಮಕ ನೀತಿಯಿಂದ ಇತ್ತೀಚೆಗೆ ಎರಡು ಯೋಜನೆಗಳು ಪ್ರಚಲಿತಕ್ಕೆ ಬಂದವು. ಒಂದು ಸ್ಟೇಟ್ ಸಬ್ಜೆಕ್ಟ್ ಪ್ರಮಾಣಪತ್ರಕ್ಕಾಗಿ ಕಳೆದ ಏಳು ದಶಕಗಳಿಂದ ಹಕ್ಕೊತ್ತಾಯ ಮಾಡುತ್ತಿರುವ ಪಶ್ಚಿಮ ಪಾಕಿಸ್ತಾನದಿಂದ ನಿರಾಶ್ರಿತರಾಗಿ ವಲಸೆ ಬಂದವರಿಗೆ ನಿವಾಸಿ ಪ್ರಮಾಣಪತ್ರ ನೀಡುವ ಯೋಜನೆ. ಇನ್ನೊಂದು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಛಂಬ್ ಪ್ರದೇಶಗಳಿಂದ ಮನೆ ಮತ್ತು ಆಸ್ತಿಪಾಸ್ತಿ ಕಳೆದುಕೊಂಡು ವಲಸೆ ಬಂದವರಿಗೆ ಪರಿಹಾರ ನೀಡಲು ೨೦೦೦ ಕೋಟಿ ರೂಪಾಯಿಗಳ ಹಣ ಬಿಡುಗಡೆ.

ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರಿಗೆ ನಿವಾಸಿ ಹಾಗೂ ಗುರುತಿನ ಪ್ರಮಾಣಪತ್ರ
ದೇಶವಿಭಜನೆಯ ನಂತರ ನಡೆದ 1951ರ ಜನಗಣತಿಯಲ್ಲಿ 72 ಲಕ್ಷ 95ಸಾವಿರದಷ್ಟು ಜನ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನದಿಂದ(ಇಂದಿನ ಬಾಂಗ್ಲಾದೇಶದಿಂದ) ಭಾರತಕ್ಕೆ ವಲಸೆ ಬಂದರು. ಹೀಗೆ ಪಶ್ಚಿಮ ಪಾಕಿಸ್ತಾನದಿಂದ ವಲಸೆ ಬಂದ ಸುಮಾರು 47ಲಕ್ಷ ಜನರಲ್ಲಿ ಬಹುತೇಕ ಹಿಂದೂ ಮತ್ತು ಸಿಖ್ ಸಮುದಾಯಗಳಿಗೆ ಸೇರಿದವರು. ಇವರೆಲ್ಲ ಪಂಜಾಬ್, ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಮುಂಬೈ ಮೊದಲಾದ ದೇಶದ ವಿವಿಧ ಭಾಗಗಳಿಗೆ ಹೋಗಿ ನೆಲೆಸಿದರು. ಆದರೆ ಇವರಲ್ಲಿ 567 ಕುಟುಂಬಗಳು ನೆಲೆಗೊಳ್ಳಲು ಜಮ್ಮು ಕಾಶ್ಮೀರವನ್ನು ಆಯ್ದುಕೊಂಡರು, ಕಾರಣ ಸಿಯಾಲಕೊಟ್ ಮತ್ತು ಶಕರ್‌ಘರ್ ಪ್ರದೇಶಗಳಿಂದ ವಲಸೆ ಬಂದ ಅವರಿಗೆ ಮಾನಸಿಕವಾಗಿ ಜಮ್ಮು ಕಾಶ್ಮೀರ ಹತ್ತಿರವಾಗಿತ್ತು, ಇಲ್ಲಿದ್ದರೆ ತಮ್ಮ ಬೇರಿನೊಂದಿಗೆ ಜೋಡಿಕೊಂಡಿರಬಹುದೆಂದು ಅವರು ಭಾವಿಸಿದ್ದರು. ದೇಶದ ಉಳಿದ ರಾಜ್ಯಗಳಿಗೆ ತೆರಳಿ ವಾಸವಾದವರೆಲ್ಲ ಭಾರತದ ನಾಗರಿಕರಾದರು. ಪಾಕಿಸ್ತಾನದಿಂದಲೇ ಬಂದ ಐಕೆ ಗುಜ್ರಾಲ್, ಮನಮೋಹನ್ ಸಿಂಗ್ ದೇಶದ ಪ್ರಧಾನ ಮಂತ್ರಿಗಳೂ ಆದರು, ಇಂದು ಪಾಕಿಸ್ತಾನವಾಗಿರುವ ಪ್ರದೇಶದನಲ್ಲೇ ಜನಿಸಿದ ಲಾಲ್‌ಕೃಷ್ಣ ಆಡ್ವಾಣಿ ದೇಶದ ಉಪಪ್ರಧಾನಿಯೂ ಆದರೆ. ಇವರೊಂದಿಗೇ ವಲಸೆ ಬಂದು ಜಮ್ಮು ಕಾಶ್ಮೀರದಲ್ಲಿ ನೆಲೆಸಿದವರು ಭಾರತದ ನಾಗರಿಕರಾಗಿದ್ದಾರೆ ನಿಜ ಆದರೆ ಇನ್ನೂ ಜಮ್ಮು ಕಾಶ್ಮೀರದ ಖಾಯಂ ನಿವಾಸಿಗಳಲ್ಲ! ಜಮ್ಮು ಕಾಶ್ಮೀರ ಸಂವಿಧಾನದ ವಿಧಿ 6ರ ದುರುಪಯೋಗದಿಂದ ಇವರಿಗೆ ರಾಜ್ಯದ ಖಾಯಂ ನಿವಾಸಿ(ಸ್ಟೇಟ್ ಸಬ್ಜೆಕ್ಟ್) ಮಾನ್ಯತೆ ನೀಡದೇ ವಂಚಿಸಲಾಗಿದೆ. ಆದ್ದರಿಂದ 70 ವರ್ಷಗಳ ನಂತರ ಇವರ ಮೂರನೇ ತಲೆಮಾರಿನ 19 ಸಾವಿರಕ್ಕೂ ಹೆಚ್ಚು ಕುಟುಂಬಗಳು ಇನ್ನೂ ಯಾವುದೇ ರಾಜ್ಯದ ಆಶ್ರಯ ಸವಲತ್ತುಗಳಿಲ್ಲದೆ, ಅದಕ್ಕಿಂತ ಹೆಚ್ಚಾಗಿ ರಾಜ್ಯದ ನಿವಾಸಿಗಳೆಂಬ ಮಾನ್ಯತೆಯೇ ಇಲ್ಲದೆ ಜೀವನ ಸಾಗಿಸುತ್ತಿವೆ. ರಾಜ್ಯ ಸರ್ಕಾರದ ನೌಕರಿ, ಶಿಕ್ಷಣ, ವೈದ್ಯಕೀಯ ಹಾಗೂ ಇತರೆ ಸವಲತ್ತುಗಳನ್ನು ಪಡೆದುಕೊಳ್ಳುವ ಹಕ್ಕು ಇವರಿಗಿಲ್ಲ. ಭಾರತದ ನಾಗರಿಕರಾಗಿ ಲೋಕಸಭೆಯ ಚುನಾವಣೆಯಲ್ಲಿ ಮತ ಚಲಾಯಿಸಬಹುದು, ಸ್ಫರ್ಧಿಸಲೂ ಬಹುದು ಆದರೆ ರಾಜ್ಯ ವಿಧಾನಸಭೆ, ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಾಲ್ಗೊಳ್ಳುವಂತೆ ಇಲ್ಲ ಮತಾಧಿಕಾರವೂ ಇವರಿಗಿಲ್ಲ.

ತಮ್ಮನ್ನು ರಾಜ್ಯದ ಖಾಯಂ ನಿವಾಸಿಗಳೆಂದು ಪರಿಗಣಿಸಿ ಸ್ಟೇಟ್ ಸಬ್ಜೆಕ್ಟ್ ಮಾನ್ಯತೆ ನೀಡಬೇಕೆನ್ನುವುದು ಈ ನಿರಾಶ್ರಿತರ ದಶಕಗಳ ಬೇಡಿಕೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸರ್ಕಾರವು ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರಿಗೆ ಕೇಂದ್ರ ಗೃಹ ಮಂತ್ರಾಲಯದ ನಿರ್ದೇಶನದ ಅನ್ವಯ ನಿವಾಸಿ/ಗುರುತಿನ ಪ್ರಮಾಣಪತ್ರ (nativity/identity certificate) ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಪ್ರಮಾಣಪತ್ರವು ಇದನ್ನು ಹೊಂದಿರುವವನು ಪಶ್ಚಿಮ ಪಾಕಿಸ್ತಾನದ ನಿರಾಶ್ರಿತನಾಗಿದ್ದು ದೇಶವಿಭಜನೆಯ ನಂತರ ಜಮ್ಮು ಕಾಶ್ಮೀರದಲ್ಲಿ ನೆಲೆಸಿಸದ್ದಾನೆ ಎಂದಷ್ಟೇ ಪ್ರಮಾಣೀಕರಿಸಿಲಿದೆ. ಆದರೆ ಇದು ಜಮ್ಮು ಕಾಶ್ಮೀರದ ನಾಗರಿಕರಿಗೆ ಸಮಾನವಾದ ಸ್ಟೇಟ್ ಸಬ್ಜೆಕ್ಟ್ ಮಾನ್ಯತೆಯಲ್ಲ ಎಂದೂ ಸ್ಪಷ್ಟಪಡಿಸಿದೆ. ಏನೇ ಆದರೂ ಈ ನಿರ್ಧಾರವು ಮುಂಬರುವ ದಿನಗಳಲ್ಲಿ ಪಾಕ್ ನಿರಾಶ್ರಿತರು ರಾಜ್ಯದ ನಾಗರಿಕತ್ವ ಪಡೆಯುವ ನಿಟ್ಟಿನಲ್ಲಿ ಒಂದು ಆಶಾಭಾವವನ್ನು ಹೆಚ್ಚಿಸಿದೆ.

ಆದರೆ ದುರದೃಷ್ಟದ ಸಂಗತಿಯೆಂದರೆ ಎಂದಿನಂತೆ ಕಾಶ್ಮೀರಿ ಕಣಿವೆಯ ವಿರೋಧ ಪಕ್ಷಗಳು ಸರ್ಕಾರ ಗುರುತಿನ ಚೀಟಿ ನೀಡುವುದನ್ನೂ ವಿರೋಧಿಸಿವೆ. ಎಂದಿನಂತೆ ಪ್ರತ್ಯೇಕತಾವಾದಿಗಳು ಹರತಾಳ, ಪ್ರದರ್ಶನ, ಹಿಂಸಾಚಾರಕ್ಕೆ ಮುಂದಾಗುತ್ತಿದ್ದಾರೆ. ರಾಜ್ಯದ ಜನಸಂಖ್ಯಾ ಸಮತೋಲನವನ್ನು ಬದಲಾಯಿಸಲಾಗುತ್ತಿದೆ, ಜಮ್ಮು ಕಾಶ್ಮೀರದ ಸ್ವಾಯತ್ತತೆಗೆ ಭಂಗವಾಗುತ್ತಿದೆ, 370ನೇ ವಿಧಿಯ ಭಂಗವಾಗುತ್ತಿದೆ ಇತ್ಯಾದಿಯಾಗಿ ಬೊಬ್ಬಿರಿಯಲಾಗುತ್ತಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಆಂತರಿಕ ಸ್ಥಳಾಂತರಿತ ನಿರ್ವಸಿತರಿಗೆ ಪರಿಹಾರ
1947ರಲ್ಲಿ ಸ್ವಾತಂತ್ರ ಬಂದ ಹೊಸ್ತಿಲಲ್ಲಿ ಪಾಕಿಸ್ತಾನ ಜಮ್ಮು ಕಾಶ್ಮೀರದ ಮೇಲೆ ಆಕ್ರಮಣ ಮಾಡಿ ಮುಜಾಫರಾಬಾದ್, ಮಿರಪುರ್, ಪೂಂಛ್, ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶಗಳ ಒಂದಿಷ್ಟು ಭಾಗವನ್ನು ಆಕ್ರಮಿಸಿಕೊಂಡಾಗ ಅಲ್ಲಿನ ಬಹುತೇಕ ಹಿಂದೂ ಮತ್ತು ಸಿಖ್ ನಿವಾಸಿಗಳು ಹೊರದಬ್ಬಲ್ಪಟ್ಟರು. ಹೀಗೆ ಮನೆ ಮಠ ಆಸ್ತಿ ಪಾಸ್ತಿ ಎಲ್ಲವನ್ನೂ ಕಳೆದುಕೊಂಡ ಈ ಕುಟುಂಬಗಳಿಗೆ ಜಮ್ಮುವಿನ ನಿರಾಶ್ರಿತ ಶಿಬಿರಗಳಲ್ಲಿ ವಸತಿ ಕಲ್ಪಿಸಲಾಯಿತು. ನಂತರ ಭಾರತೀಯ ಸೇನೆಯ ಪರಾಕ್ರಮದಿಂದ ಯುದ್ಧವೇನೋ ನಿಂತಿತು. ಆದರೆ ಅಂದಿನ ಪ್ರಧಾನಿ ನೆಹರು ಪ್ರಣೀತ ವಿದೇಶಿ ನೀತಿಯಿಂದ ವಿಶ್ವಸಂಸ್ಥೆಗೆ ವಿವಾದವನ್ನು ಕೊಂಡೊಯ್ಯಲಾಗಿ ರಾಜ್ಯದ ದೊಡ್ಡ ಭಾಗ (ಇಂದಿನ ಪಾಕ್ ಆಕ್ರಮಿತ ಕಾಶ್ಮೀರ) ಪಾಕಿಸ್ತಾನದ ವಶದಲ್ಲೇ ಉಳಿಯಿತು. ಈ ಪ್ರದೇಶದಿಂದ ನಿರ್ವಸಿತರಾದವರಿಗೆ ಸಮಸ್ಯೆ ಪರಿಹಾರವಾದ ಬಳಿಕ ಮರಳಿ ತಮ್ಮ ಪ್ರದೇಶಗಳಿಗೆ ತೆರಳಬಹುದು, ಪುನಃ ತಮ್ಮ ಮನೆ ಆಸ್ತಿಗಳನ್ನು ಪಡೆದುಕೊಂಡು ಜೀವನ ಸಾಗಿಸಬಹುದೆಂದು ಹೇಳುತ್ತಲೇ ಬರಲಾಯಿತು. ಆದರೆ ಎಪ್ಪತ್ತು ವರ್ಷಗಳ ದೀರ್ಘ ಕಾಲದ ನಂತರ, ಈ ನಿರ್ವಸಿತ ಜನರ ಮೂರು ತಲೆಮಾರು ಕಳೆದರೂ ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆ ಪರಿಹಾರವಾಗಬಹುದು ಎನ್ನುವುದು ನಂಬಲರ್ಹವಲ್ಲವಾಗಿಲ್ಲ. ಇವರ ಜೊತೆಗೆ 1965 ಮತ್ತು 1971ರ ಯುದ್ಧ ಸಂದರ್ಭಗಳಲ್ಲಿ ಛಂಬ್ ಸೆಕ್ಟರ್ ಮೊದಲಾದ ಗಡಿ ಪ್ರದೇಶಗಳಿಂದ ನಿರ್ವಸಿತರಾದವರೂ ಸಹ ನಿರಾಶ್ರಿತರ ಶಿಬಿರಗಳಲ್ಲಿ ಸೇರಿಕೊಂಡರು.
ರಾಜ್ಯದ ನಾಗರಿಕರೇ(ಸ್ಟೇಟ್ ಸಬ್ಜೆಕ್ಟ್) ಆದರೂ ಆಂತರಿಕ ಸ್ಥಳಾಂತರದಿಂದ ನಿರಾಶ್ರಿತರಾದ ಇಂತಹ 36ಸಾವಿರಕ್ಕೂ ಹೆಚ್ಚು ಕುಟುಂಬಗಳು ಪರಿಹಾರದ ನಿರೀಕ್ಷೆಯಲ್ಲಿ ದಶಕಗಳನ್ನು ಕಳೆದಿವೆ.

ಈ ನಿಟ್ಟಿನಲ್ಲಿ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ ನಿರ್ವಸಿತಿರಿಗೆ ಪರಿಹಾರ ನೀಡುವ ಸಲುವಾಗಿ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೆಜ್ ಅಡಿಯಲ್ಲಿ 2000 ಕೋಟಿ ರೂಪಾಯಿಗಳ ಪುನರ್ವಸತಿ ನಿಧಿಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ನಿರಾಶ್ರಿತ ಕುಟುಂಬದ ಪ್ರತಿ ಸದಸ್ಯನಿಗೆ 5.5ಲಕ್ಷ ರೂಪಾಯಿಯಂತೆ ಅವರ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುವುದು ಹಾಗೂ ಕೇಂದ್ರ ಗೃಹ ಮಂತ್ರಾಲಯ ಇದರ ಮೇಲುಸ್ತುವಾರಿ ನೋಡಿಕೊಳ್ಳುವುದು. ಈಗಾಗಲೇ ಜಮ್ಮು ಕಾಶ್ಮೀರ ಸರ್ಕಾರವು 36384 ನಿರ್ವಸಿತ ಕುಟುಂಬಗಳನ್ನು ಗುರುತಿಸಿದೆ.

ನಿರ್ವಸಿತ ಸಮುದಾಯದವರು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದರೂ ಪ್ರತಿ ವ್ಯಕ್ತಿಗೆ 30ಲಕ್ಷದಂತೆ ಒಟ್ಟೂ 9200ಕೋಟಿ ರೂಪಾಯಿಗಳ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿವೆ. ಒಟ್ಟಿನಲ್ಲಿ ರಾಜ್ಯದ ನಾಗರಿಕರೇ ಆದ ಪಾಕ್ ಆಕ್ರಮಿತ ಪ್ರದೇಶದ ನಿರ್ವಸಿತರಿಗೆ ಈ ಯೋಜನೆಯಿಂದ ಒಂದಿಷ್ಟು ಸಾಂತ್ವದ ದೊರೆಯಲಿದೆ.

ಜಮ್ಮು ಕಾಶ್ಮೀರದ ರಾಜಕೀಯ ಅಸ್ಥರತೆ ಪ್ರತ್ಯೇಕತಾವಾದ ಭಯೋತ್ಪಾದನೆಗಳು ಕೊನೆಗೊಳ್ಳುವುದರ ಜೊತೆಗೆ ನಿರಾಶ್ರಿತರಾದವರಿಗೆ ಪರಿಹಾರ ಪುನರ್ವಸತಿ ಒದಗಿಸುವುದೂ ಅಷ್ಟೇ ಮಹತ್ವದ್ದಾಗಿದೆ. ಇಷ್ಟು ವರ್ಷಗಳ ಕಾಲ ಜಮ್ಮು ಕಾಶ್ಮೀರ ರಾಜ್ಯಕ್ಕೆ ಕೇಂದ್ರದಿಂದ ಕೋಟ್ಟಂತರ ರೂಪಾಯಿಗಳ ಆರ್ಥಿಕ ಪ್ಯಾಕೇಜ್‌ಗಳು ದೊರಕುತ್ತಿದ್ದರೂ ಅದರಲ್ಲಿ ಹೆಚ್ಚಿನ ಪಾಲು ಕಣಿವೆಯ ಪ್ರತ್ಯೇಕತಾವಾದಿಗಳನ್ನು ಸಮಾಧಾನಪಡಿಸುವುದರಲ್ಲೇ ವ್ಯಯವಾಗುತ್ತಿತ್ತು, ರಾಜ್ಯದ ಎರಡು ಪ್ರಮುಖ ಪ್ರಾಂತಗಳಾದ ಜಮ್ಮು ಮತ್ತು ಲಢಾಕ್ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿ ಭಿನ್ನ ದಾರಿಯಲ್ಲಿ ಸಾಗುತ್ತಿದ್ದು ಜಮ್ಮು ಕಾಶ್ಮೀರದ ಸಮಸ್ಯೆ ಪರಿಹಾರವಾಗಬಹುದೆಂಬ ಆಶಾಭಾವನೆ ಮೂಡುತ್ತಿದೆ

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...