Friday, January 23, 2026

ಹಿಂದೂ ಹೃದಯ ಸಾಮ್ರಾಟನಾದ ಮರಾಠಿ ಮಾಣೂಸ್‌

 (ವಿಕ್ರಮ - 25 ಜನವರಿ 2026)

ಸುದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿ ನಿರಂತರ ಸಕ್ರಿಯರಾಗಿದ್ದು, ಜೊತೆಗೆ ಪ್ರಸ್ತುತರೂ ಆಗಿದ್ದು ತಮ್ಮ ಬದುಕಿನ ನಂತರವೂ ಪ್ರಭಾವಿಯಾಗಿರುವ ವ್ಯಕ್ತಿಗಳು ವಿರಳ. ಭಾರತ ಕಂಡ ಅಂತಹ ಓರ್ವ ವಿಶಿಷ್ಟ ನೇತಾರ ಬಾಳಾ ಠಾಕ್ರೆ. ಪುಣೆಯ ಸಾಮಾನ್ಯ ಮರಾಠಿ ಕುಟುಂಬದಲ್ಲಿ ಜನಿಸಿದ ಬಾಳ ಕೇಶವ ಠಾಕ್ರೆ (ಜನನ 23 ಜನವರಿ 1926) ವಾಜಪೇಯಿ, ಆಡ್ವಾಣಿ ಮೊದಲಾದವರ ಸಮಕಾಲೀನರಾಗಿ ಯಾವ ಸಾಂವಿಧಾನಿಕ ಹುದ್ದೆಗೂ ಏರದೇ, ಒಂದೇ ಒಂದು ಚುನಾವಣೆಯಲ್ಲಿಯೂ ಸ್ವಯಂ ಸ್ಪರ್ಧೆ ಮಾಡದೇ, ಬದಲಾಗಿ ಶಿಸ್ತುಕ್ರಮದ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೂ ಮತದಾನ ಮಾಡುವ ಅಧಿಕಾರಿದಿಂದಲೂ ನಿಷೇಧಕ್ಕೊಳಪಟ್ಟರೂ (1999ರಲ್ಲಿ 6 ವರ್ಷಗಳ ಕಾಲ) ರಾಷ್ಟ್ರದ ಅದರಲ್ಲೂ ವಿಷೇಶವಾಗಿ ಮಹಾರಾಷ್ಟ್ರದ ರಾಜಕೀಯದಲ್ಲಿ ಅಚ್ಚಳಿಯದ ಪ್ರಭಾವವನ್ನು ಬೀರಿದ್ದು ಅದ್ವಿತೀಯವಾದುದು. ‘ಸಿಂಹ ಎಂದೂ ಚುನಾವಣೆಗೆ  ನಿಲ್ಲುವುದಿಲ್ಲ, ಅದು ತನ್ನ ತಾಕತ್ತಿನಿಂದ ಆಳುತ್ತದೆ’ ಇದು ಶಿವಾಜಿ ಮಹಾರಾಜರ ಧ್ವಜವನ್ನು ಕೈಯಲ್ಲೆತ್ತಿ ಹಿಡಿದ ಬಾಳಾಸಾಹೇಬರ ವಾದ.

ಕುಂಚದಿಂದ ಆರಂಭವಾದ ಕ್ರಾಂತಿ

ಬಾಳಾ ಠಾಕ್ರೆ ಅಂದರೆ ಸಾಮಾನ್ಯವಾಗಿ ಕಣ್ಣ ಮುಂದೆ ಬರುವುದು ಒಬ್ಬ ಖಡಕ್‌ ನಾಯಕನ ರೂಪ, ಆದರೆ ಅವರೊಳಗೆ ನವಿರಾದ ರೇಖೆಗಳು ಮತ್ತು ತಿಳಿಹಾಸ್ಯದ ಮೂಲಕ ಚುರುಕು ಸಂದೇಶ ಮುಟ್ಟಿಸಬಲ್ಲ ವ್ಯಂಗಚಿತ್ರಕಾರನಿದ್ದ ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಅವರ ಸಾರ್ವಜನಿಕ ಚಟುವಟಿಕೆ ಆರಂಭವಾಗಿದ್ದು ರಾಜಕೀಯ ವ್ಯಂಗಚಿತ್ರಕಾರನಾಗಿ, ಪತ್ರಕರ್ತನಾಗಿ. ಆರಂಭದಲ್ಲಿ ಮುಂಬೈನ (ಅಂದಿನ ಬಾಂಬೆ) ದ ಫ್ರೀ ಪ್ರೆಸ್‌ ಜರ್ನಲ್‌ನಲ್ಲಿ ಪ್ರಕಟವಾಗುತ್ತಿದ್ದ ಅವರ ವ್ಯಂಗ್ಯಚಿತ್ರಗಳು ತೀಕ್ಷ್ಣ ರಾಜಕೀಯ ವಿಡಂಬನೆಗಳಿಂದ ಗಮನ ಸೆಳೆದವು. ಟೈಮ್ಸ್‌ ಆಫ್‌ ಇಂಡಿಯಾದ ಭಾನುವಾರದ ಆವೃತ್ತಿಗಳಲ್ಲಿಯೂ ಅವರ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತಿದ್ದವು. ಖ್ಯಾತ ವ್ಯಂಗ್ಯಚಿತ್ರಕಾರ ಆರ್‌ ಕೆ ಲಕ್ಷ್ಮಣರಿಗೆ ಅವರು ಸಹೋದ್ಯೋಗಿಯಾಗಿದ್ದರು. ನಂತರ ಕೆಲವು ಕಾಲ ನ್ಯೂಸ್‌ ಡೇಲಿ ಎನ್ನುವ ದಿನಪತ್ರಿಯಕೆನ್ನು ಅಲ್ಪಕಾಲ ನಡೆಸಿದರು. 1960ರಲ್ಲಿ ಸಹೋದರ ಶ್ರೀಕಾಂತ ಠಾಕ್ರೆ ಜೊತೆಗೆ ಸೇರಿ ಮಾರ್ಮಿಕ್‌ ಹೆಸರಿನ ಮರಾಠಿ ವಾರಪತ್ರಿಕೆಯನ್ನು ಆರಂಭಿಸಿದರು. ನಂತರದ ದಶಕದಲ್ಲಿ ಅವರು ಸ್ಥಾಪಿಸಿದ ದಿನಪತ್ರಿಕೆ ‘ಸಾಮ್ನಾ’ ಶಿವಸೇನೆ ಪಕ್ಷದ ಮುಖವಾಣಿಯಾಗಿದೆ.

ಈ ಎಲ್ಲ ಕಾರ್ಯಗಳ ಹಿಂದೆ ತನ್ನ ತಂದೆಯ ಗಾಢವಾದ ಪ್ರಭಾವ ಇರುವುದನ್ನು ಅವರೇ ಹೇಳಿಕೊಂಡಿದ್ದಾರೆ ಪ್ರಭೊದನಕರ್‌ ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದ ಬಾಳ ಠಾಕ್ರೆಯವರ ತಂದೆ ಕೇಶವ ಠಾಕ್ರೆ ಪತ್ರಕರ್ತರಾಗಿ ದುಡಿದವರು, ಮರಾಠಿ ಭಾಷಿಕ ಪ್ರದೇಶಗಳ ಏಕೀಕರಣಕ್ಕಾಗಿ ಶ್ರಮಿಸಿದ ಸಂಯುಕ್ತ ಮಹಾರಾಷ್ಟ್ರ ಆಂದೋಲನ ಅಗ್ರಗಣ್ಯ ನೇತಾರರಾಗಿದ್ದರು.

 ಪ್ರಾದೇಶಿಕವಾದಿ ಮರಾಠಿ ಮಾಣೂಸ್‌

ಇಂದೂ ಕೇಳಿಬರುವ ಲುಂಗಿ-ಪುಂಗಿ, ಬಿಹಾರಿ ವಲಸಿಗರ ವಿರೋಧದ ಸ್ಲೋಗನ್ನುಗಳ ಮೂಲವನ್ನು 1960ರ ದಶಕದ ಮರಾಠಿ ಪ್ರಾದೇಶಿಕವಾದದ ಆಂದೋಲನಗಳಲ್ಲಿ ಹುಡುಕಬಹುದು. ಠಾಕ್ರೆ ಸಹೋದರರು ಆರಂಭಿಸಿದ ಮಾರ್ಮಿಕ್‌ ಪತ್ರಿಕೆ ಪ್ರಮುಖವಾಗಿ ಮುಂಬೈನ ಮರಾಠಿ ಭಾಷಿಕರ ಸಮಸ್ಯೆಗಳನ್ನು ಎತ್ತಿಕೊಂಡಿತು. ನಿರುದ್ಯೋಗ ಮೊದಲಾದುವುಗಳಿಗೆ ಮದರಾಸಿಗಳು, ಗುಜರಾತಿಗಳ ವಲಸೆ ಬರುವುದೇ ಕಾರಣ ಎಂದು ವ್ಯಾಖ್ಯಾನಿಸಿತು. ಮರಾಠಿ ಭಾಷಿಕರ ಹಿತ ಕಾಯುವ ಸಲುವಾಗಿ ಶಿವಸೇನೆ ಎನ್ನುವ ರಾಜಕೀಯ ವೇದಿಕೆಯ ಹುಟ್ಟು ಇಲ್ಲಿಂದ ಆರಂಭವಾಯಿತು. "ಮರಾಠಿ ಮಾಣೂಸ್" (ಮರಾಠಿ ಮನುಷ್ಯ) ಎಂಬ ಘೋಷಣೆಯೊಂದಿಗೆ ಆರಂಭವಾದ ಈ ಚಳುವಳಿ, ಕೇವಲ ಭಾಷಾ ಪ್ರೇಮವಲ್ಲದೆ, ಅದು ಸ್ಥಳೀಯರ ಆತ್ಮಗೌರವದ ಸಂಕೇತವಾಗಿತ್ತು. 60 ಮತ್ತು 70ರ ದಶಕಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರ ಬೆಂಬಲ ಇದಕ್ಕೆ ದೊರಕಿತು. ಬೀದಿ ಹೋರಾಟ, ಪ್ರತಿಭಟನೆಗಳಿಂದ ಆರಂಭವಾಗಿ ಮುಂಬೈನಾದ್ಯಂತ ಶಿವಸೇನೆ ತನ್ನ ಶಾಖೆಗಳನ್ನು ಸ್ಥಾಪಿಸಿತು. ಠಾಕ್ರೆಯವರ ನೇತೃತ್ವದಲ್ಲಿ ಶಿವಸೇನೆ ಒಂದು ತೋಳ್ಬಲವುಳ್ಳ ಹಾಗೂ ಶಿಸ್ತಿನ ಕೇಡರ್‌ ಉಳ್ಳ ಪಕ್ಷವಾಗಿ ಹೊರಹೊಮ್ಮಿತು.  ಕಾರ್ಮಿಕರ ತಕರಾರು, ಸ್ಥಳೀಯ ಕುಂದುಕೊರತೆಗಳನ್ನು ಪರಿಹರಿಸುವ ಮಧ್ಯಸ್ಥಗಾರನಂತೆ ಪ್ರಭಾವವನ್ನು ಬೆಳೆಸಿಕೊಂಡಿತು. ಪರಿಣಾಮ ಮುಂಬೈನಲ್ಲಿ ಎಡಪಂಥೀಯ ಕಾರ್ಮಿಕ ಯೂನಿಯನ್‌ಗಳನ್ನು ಹಿಂದಿಕ್ಕಿ ಕಾಂಗ್ರೆಸ್‌ನೊಂದಿಗೆ ನೇರ ಪೈಪೋಟಿಗಿಳಿಯಬಲ್ಲ ಸಮರ್ಥ ಪ್ರತಿಸ್ಪರ್ಧಿಯಾಗಿ ಬೆಳೆಯಿತು.

ಪ್ರಖರ ಹಿಂದೂ ರಾಷ್ಟ್ರವಾದಿ

ಠಾಕ್ರೆ ಅವರ ಜೀವನದ ಅತ್ಯಂತ ಮಹತ್ವದ ತಿರುವು ಎಂದರೆ ಅದು ಪ್ರಾದೇಶಿಕವಾದದಿಂದ ಪ್ರಖರ ಹಿಂದುತ್ವದತ್ತ ಅವರು ವಾಲಿದ್ದು. 1980ರ ದಶಕದ ವೇಳೆಗೆ ಭಾರತದ ರಾಜಕಾರಣದಲ್ಲಿ ಓಲೈಕೆಯ ರಾಜಕಾರಣ ತಾರಕಕ್ಕೇರಿತ್ತು. "ಗರ್ವ ಸೇ ಕಹೋ ಹಮ್ ಹಿಂದೂ ಹೈ" ಎಂಬ ಘೋಷಣೆಯನ್ನು ಅವರು ಪ್ರತಿಧ್ವನಿಸಿದಾಗ, ಅದು ದೇಶಾದ್ಯಂತ ಹೊಸ ಸಂಚಲನ ಮೂಡಿಸಿತು. ಭಾಷೆಯ ಗಡಿಯನ್ನು ಮೀರಿ ಧರ್ಮ ಮತ್ತು ರಾಷ್ಟ್ರದ ಹಿತಾಸಕ್ತಿ ಮುಖ್ಯ ಎಂಬ ನಿಲುವನ್ನು ಅವರು ತಳೆದರು. 1987ರ ವಿಲೆ ಪಾರ್ಲೆ ವಿಧಾನಸಭಾ ಉಪಚುನಾವಣೆಯಲ್ಲಿ ಶಿವಸೇನೆಯು ಮೊದಲ ಬಾರಿಗೆ "ಹಿಂದುತ್ವ"ದ ಘೋಷಣೆಯ ಮೇಲೆ ಸ್ಪರ್ಧಿಸಿ ಗೆದ್ದಾಗ, ಭಾರತೀಯ ರಾಜಕಾರಣದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಯಿತು. ಅವರು ಕೇವಲ ಮಹಾರಾಷ್ಟ್ರದ ನಾಯಕರಾಗಿ ಉಳಿಯದೆ, ಇಡೀ ಭಾರತದ ಹಿಂದೂಗಳ ಧ್ವನಿಯಾಗಿ ರೂಪುಗೊಂಡರು.

1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ನಂತರ ಉಂಟಾದ ಅನಿಶ್ಚಿತತೆಯ ನಡುವೆ, "ಅದನ್ನು ಕೆಡವಿದವರು ನನ್ನ ಶಿವಸೈನಿಕರಾಗಿದ್ದರೆ, ಅದಕ್ಕಾಗಿ ನಾನು ಹೆಮ್ಮೆಪಡುತ್ತೇನೆ" ಎಂದು ಬಹಿರಂಗವಾಗಿ ಘೋಷಿಸಿದ ಏಕೈಕ ನಾಯಕ ಠಾಕ್ರೆ. ಅವರ ಈ ನಿರ್ಭೀತ ನಿಲುವು ಅವರನ್ನು ಹಿಂದೂಗಳ ಅಪ್ರತಿಮ ನಾಯಕನನ್ನಾಗಿ ಮಾಡಿತು. ಮುಂಬೈ ಗಲಭೆಯ ಸಮಯದಲ್ಲಿ ಹಿಂದೂಗಳ ರಕ್ಷಣೆಗೆ ಅವರು ನಿಂತರು. ಕಾಶ್ಮೀರದ ಹಿಂದೂಗಳು ಮುಸ್ಲಿಂ ಮೂಲಭೂತಾದಿಗಳ ಹಿಂಸೆಗೆ ಬಲಿಯಾಗಿ ಪಲಾಯನ ಮಾಡಬೇಕಾಗಿ ಬಂದಾಗಿ ಅವರ ಪರವಾಗಿ ಧ್ವನಿ ಎತ್ತಿದವರಲ್ಲಿ ಮೊದಲಿಗರು ಬಾಳಾ ಠಾಕ್ರೆ. ಅಮರನಾಥ ಯಾತ್ರೆಯ ಮೇಲೆ ಮುಸ್ಲಿಂ ಉಗ್ರರ ಕರಾಳ ಛಾಯೆ ಬಿದ್ದು ಕೇಂದ್ರ ಸರ್ಕಾರವೂ ಅಸಹಾಯಕತೆಯನ್ನು ಪ್ರದರ್ಶಿಸಿದಾಗ ‘ಹಿಂದೂಗಳು ಅಮರನಾಥ ಯಾತ್ರೆ ಕೈಗೊಳ್ಳುವುದು ಸಾಧ್ಯವಿಲ್ಲ ಎಂತಾದರೆ ಮುಂಬೈನಿಂದ ಹಜ್‌ಗೆ ಒಂದೂ ವಿಮಾನ ಹಾರುವುದಿಲ್ಲ’ ಎಂದು ಗುಡುಗಿದವರು ಬಾಳಾ ಠಾಕ್ರೆ.

 ರಾಜಕೀಯ ಪ್ರಭಾವ

          90ರ ದಶಕದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿದ ಶಿವಸೇನೆ 1995ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿತು. ರಾಷ್ಟ್ರಮಟ್ಟದಲ್ಲಿಯೂ ಸಹ ಬಿಜೆಪಿಯ ಪ್ರಮುಖ ಮಿತ್ರಪಕ್ಷವಾಗಿ ಶಿವಸೇನೆ ವಾಜಪೇಯಿ ಸರ್ಕಾರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿತು. ಬಾಳಾ ಠಾಕ್ರೆಯವರ ರಾಜಕೀಯ ಮತ್ತು ಶಿವಸೇನೆ ಒಂದು ಮರಾಠಿ ಹಿತಾಸಕ್ತಿಯನ್ನು ಕಾಯುವ ಪ್ರಾದೇಶಿಕ ಭಾವನೆಗಳಿಂದ ಆರಂಭಗೊಂಡರು ಅದರ ಸಿದ್ಧಾಂತ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ವಿರುದ್ಧ, ಹಿಂದುತ್ವ ಮತ್ತು ರಾಷ್ಟ್ರೀಯವಾದದ ಪರವಾಗಿ ವಿಕಾಸಗೊಂಡಿತು. ಇಂದು ಮಹಾರಾಷ್ಟ್ರ ಮತ್ತು ಭಾರತದ ರಾಜಕಾರಣದಲ್ಲಿ ಹಿಂದುತ್ವದ ಮಾತುಗಳು ಕೇಳಿಬರುತ್ತಿದ್ದರೆ, ಅದಕ್ಕೆ ಅಡಿಪಾಯ ಹಾಕಿದವರಲ್ಲಿ ಠಾಕ್ರೆ ಪ್ರಮುಖರು. ಹಾಗೆಯೇ ಪ್ರಾದೇಶಿಕ ಶಕ್ತಿಯನ್ನು ರಾಷ್ಟ್ರೀಯ ಆಶಯದೊಂದಿಗೆ ಹೇಗೆ ಜೋಡಿಸಬಹುದು ಎಂಬುದಕ್ಕೆ ಶಿವಸೇನೆ ಮತ್ತು ಬಿಜೆಪಿಯ ಸುದೀರ್ಘ ಮೈತ್ರಿಯೂ ಒಂದು ಉದಾಹರಣೆ. ಮತ್ತು ಹಿಂದೂ ಹಿತಾಸಕ್ತಿಯ ಧ್ವನಿ ಕ್ಷೀಣವಾಗಿದ್ದ ಸಮಯದಲ್ಲಿ ಸಾರ್ವಜನಿಕವಾಗಿ, ರಾಜಕೀಯ ವೇದಿಕೆಯಲ್ಲಿ ಹಿಂದುತ್ವದ ಪರವಾಗಿ ನಿಂತು, ಹಿಂದುತ್ವಕ್ಕೆ ರಾಜಕೀಯ ಶಕ್ತಿಯನ್ನು ತುಂಬಿದ ಮುಂಚೂಣಿ ನಾಯಕ ಬಾಳಾ ಠಾಕ್ರೆ.

          ಅವರು ರಾಜಕೀಯ ಜೀವನದಲ್ಲಿ ಎಂದು ಚುನಾವಣೆಗೆ ನಿಂತು ಗೆಲ್ಲಲಿಲ್ಲ, ಹಾಗೂ ಯಾವುದೇ ಸಾಂವಿಧಾನಿಕ ಹುದ್ದೆಗೆ ಏರಲಿಲ್ಲ. 1995ರಲ್ಲಿ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಾಗ ಮನೋಹರ ಜೋಶಿ ಮುಖ್ಯಮಂತ್ರಿಯಾದರು. ಆದರೂ ಸರ್ಕಾರದ ನಿಯಂತ್ರಣ ಸಂಪೂರ್ಣ ನಿಯಂತ್ರಣವಿದ್ದಿದ್ದು ಠಾಕ್ರೆಯವರ ನಿವಾಸ ‘ಮಾತೋಶ್ರೀ’ಯಲ್ಲಿ. ನಂತರದ ದಶಕಗಳಲ್ಲಿ, ಇತ್ತೀಚೆಗೆ ಅವರ ಮರಣದ ನಂತರವೂ ಶಿವಸೇನೆ ಅನೇಕ ಗುಂಪುಗಳು-ಹೋಳುಗಳಾದರೂ ಪಕ್ಷದಲ್ಲಿ ಇಂದಿಗೂ ಬಾಳಾ ಠಾಕ್ರೆಯವರ ಸ್ಥಾನ-ಅಧಿಕಾರ-ಪ್ರಭಾವ ಪ್ರಶ್ನಾತೀತವಾಗಿ ಉಳಿಯಿತು.

---------------------------------------------------------------------------------------------

ಸ್ವಾರಸ್ಯಕರ ಸಂಗತಿಗಳು

ಅವರಿಗೆ ರಾಜಕೀಯದೊಂದಿಗೆ ಕಲೆ, ಕ್ರೀಡೆ ಮತ್ತು ಸಾಹಿತ್ಯಗಳ ಬಗ್ಗೆಯೂ ಅಪಾರ ಆಸಕ್ತಿಯಿತ್ತು. ವಿಶೇಷವಾಗಿ ಸಿನಿಮಾ ಕ್ಷೇತ್ರದಲ್ಲಿಯೂ ಅವರಿಗೆ ಆಸಕ್ತಿಯಿತ್ತು, ಬಾಲಿವುಡ್ಡಿನ ಅನೇಕ ಜನಪ್ರಿಯರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಹಾಗೆಯೇ ಸಿನಿಮಾ ಕಾಸ್ಟಿಂಗ್‌, ಪ್ರಚಾರ, ಮಾರ್ಕೆಟಿಂಗ್‌ಗಳಲ್ಲಿಯೂ ಪ್ರಭಾವ ಬೀರಬಲ್ಲವರಾಗಿದ್ದರು. ಭಾರತೀಯ ಸಂಸ್ಕೃತಿ ಕಲೆಗಳ ಬಗ್ಗೆ ಆದರವಿದ್ದಂತೆಯೇ, ವಿಶ್ವಪ್ರಸಿದ್ಧ ಪಾಪ್‌ ಗಾಯಕ ಮೈಕಲ್‌ ಜಾಕ್ಸನ್‌ಗೆ ಆತಿಥ್ಯ ನೀಡಿ ಮುಂಬೈನಲ್ಲಿ ಆತನ ಕಾರ್ಯಕ್ರಮ ಆಯೋಜಿಸುವ, ಆತನ ಸಂಗೀತವನ್ನು ಆಸ್ವಾದಿಸುವ ರಸಿಕತೆಯೂ ಅವರಲ್ಲಿತ್ತು.

ಬಾಳಾ ಠಾಕ್ರೆ ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಅವರು ಯಾವತ್ತೂ ರಾಜಿ ಮಾಡಿಕೊಂಡವರಲ್ಲ. ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಭಾರತವಿರೋಧಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದನ್ನು ಅವರು ಕಡುವಾಗಿ ವಿರೋಧಿಸಿದರು. ಶಿವಸೇನೆಯ ಕಾರ್ಯಕರ್ತತು 1991ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸಕ್ಕೆ ಬಂದಾಗ ಮುಂಬೈನ ವಾಂಖೆಡೆ ಸ್ಟೇಡಿಯಮ್‌ನ ಪಿಚ್‌ ಅಗೆದು ಪಂದ್ಯ ನಿಲ್ಲಿಸಲು ಮುಂದಾದರು. ಮುಂದೆ 1999ರಲ್ಲಿ ದೆಹಲಿಯಲ್ಲೂ ಇದೇ ರೀತಿ ಪ್ರತಿಭಟಿಸಿದರು. ಹೀಗಿದ್ದೂ ಪಾಕಿಸ್ತಾನಿ ಕ್ರಿಕೆಟಿಗ ಜಾವೆದ್‌ ಮಿಯಾಂದಾದನನ್ನು ತಮ್ಮ ಮನೆಗೆ ಆಹ್ವಾನಿಸಿ ಆತನ ಬ್ಯಾಟಿಂಗ್‌ ಕೌಶಲ್ಯವನ್ನು ಪ್ರಶಂಸಿಸುವ ಕ್ರೀಡಾ ಸ್ಪೂರ್ತಿಯನ್ನೂ ಹೊಂದಿದ್ದರು.

ಅವರ ಚುರುಕು ಮುಟ್ಟಿಸುವ ವ್ಯಂಗ್ಯಚಿತ್ರಗಳಂತೆ ಭಾಷಣಗಳಲ್ಲೂ ವಿಡಂಬನೆ, ತಮಾಷೆ, ಕೆಲವೊಮ್ಮೆ ವಿವಾದ ಹುಟ್ಟಿಸುವ ಮಾತುಗಳು ಹೇರಳವಾಗಿರುತ್ತಿದ್ದವು. ಸಭೆಗಳಲ್ಲಿ ಸಾವಿರಾರು ಜನರನ್ನು ತಮ್ಮ ಮಾತಿನಿಂದ ಮಂತ್ರಮುಗ್ಧಗೊಳಿಸಬಲ್ಲ ಪ್ರಭಾವಿ ವಾಗ್ಮಿಯೂ ಆಗಿದ್ದರು. ಅವರು ಮರಾಠಿಯನ್ನು ಸಹಜ ಬಲದಿಂದ ಮಾತನಾಡುತ್ತಿದ್ದರೂ, ಭಾರತೀಯ ಮಹಾಕಾವ್ಯಗಳು, ಹಿಂದೂ ಪುರಾಣ ಕಥೆಗಳಿಂದ ಹಿಡಿದು ಮತ್ತು ಪಾಪ್ ಸಂಸ್ಕೃತಿಯನ್ನೂ ಅಷ್ಟೇ ಸಹಜವಾಗಿ ಉಲ್ಲೇಖಿಸಬಲ್ಲವರಾಗಿದ್ದರು. ಈ ಸಾಮರ್ಥ್ಯದಿಂದ ಸ್ಥಳೀಯ ಕುಂದುಕೊರತೆಗಳನ್ನು ವಿಶಾಲ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಪ್ರಸ್ತುತಪಡಿಸುವುದು ಮತ್ತು ಜನಮಾನಸವನ್ನು ತಲುಪಿವುದು ಸಾಧ್ಯವಾಯಿತು.

ಅವರು ಕಾಂಗ್ರೆಸ್‌ನ ರಾಜಕೀಯವನ್ನು ವಿರೋಧಿಸಿ ಸಂಘಟನೆ ಮಾಡಿದರೂ 1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಅದನ್ನು ಬೆಂಬಲಿಸಿದರು ಎನ್ನುವುದೂ ಅರ್ಥವಾಗದ ಸಂಗತಿ. ಆದರೂ ಇಂದಿರಾ ಗಾಂಧಿಯವರ ನೀತಿಯನ್ನು ಟೀಕಿಸುವ ಅನೇಕ ವ್ಯಂಗ್ಯಚಿತ್ರಗಳು ಕಾಲಕಾಲಕ್ಕೆ ಅವರ ಕುಂಚದಲ್ಲಿ ಮೂಡಿಬಂದವು.

-------------------------------------------------------------------------------------------------

ವಾರಸುದಾರಿಕೆಯ ವೈರುಧ್ಯಗಳು

          ಸ್ವಯಂ ಅಧಿಕಾರದ ಆಸನದಲ್ಲಿ ಕುಳಿತುಕೊಳ್ಳದಿದ್ದರೂ ಸರ್ಕಾರದ ತಂತ್ರ ಮತ್ತು ಪಕ್ಷದ ಮೇಲೆ ಪ್ರಶ್ನಾತೀತ ಅಧಿಕಾರವನ್ನು ಚಲಾಯಿಸಿದವರು ಬಾಳಾಸಾಹೇಬ್‌ ಠಾಕ್ರೆ. ಆದರೆ ಇಂದು ಮಾತೋಶ್ರೀ ಆ ಪ್ರಭಾವವನ್ನು ಉಳಿಸಿಕೊಂಡಿಲ್ಲ. ವಾರಸಿಕೆಯ ತಕರಾರಿನಲ್ಲಿ ಕೆಲವು ವರ್ಷಗಳ ಹಿಂದೆ ದಾಯಾದಿಗಳು ವಿರೋಧಿಗಳಾದರು. ಪ್ರತ್ಯೇಕ ಸಂಘಟನೆ ಕಟ್ಟಿದ ರಾಜ್‌ ಠಾಕ್ರೆ ರಾಜಕೀಯವಾಗಿ ಶೂನ್ಯವನ್ನೇ ಸಂಪಾದಿಸಿದರು. ಹಾಗೆಯೇ ಅಧಿಕಾರದ ಖುರ್ಚಿಯೇರುವ ಕಾಂಕ್ಷೆಗೆ ಬಲಿಯಾದ ಉದ್ಧವ ಠಾಕ್ರೆ ಮತ್ತು ಮೊಮ್ಮಗ ಆದಿತ್ಯ, ಬಾಳಾ ಠಾಕ್ರೆಯವರ ರಾಜಕೀಯದ ಕಡು ವಿರೋಧಿ ಕಾಂಗ್ರೆಸ್‌ನೊಂದಿಗೇ ಕೈಜೋಡಿಸಿದರು, ಜೊತೆಗೆ ಶಿವಸೇನೆಯ ವಿಭಜನೆಗೂ ಕಾರಣರಾದರು. ದಾಯಾದಿಗಳು ಇದೀಗ ಮತ್ತೆ ಒಂದಾಗಿ ಬಾಳಾಸಾಹೇಬರ ವಾರಸಿಕೆಯ ಹಕ್ಕುಸ್ಥಾಪನೆಗೆ ಮುಂದಾಗಿದ್ದಾರೆ, ಜೊತೆಗೆ ಪ್ರಾದೇಶಿಕವಾದದ ಸಂಕುಚಿತತೆಗೂ ಮರಳುವಂತೆ ಕಾಣಿಸುತ್ತಿದೆ. ಇನ್ನೊಂದೆಡೆ ಠಾಕ್ರೆಯವರ ನಿಜವಾದ ವಾರಸುದಾರರು ತಾವು ಎನ್ನುವ ಶಿವಸೇನೆಯ ಇನ್ನೊಂದು ಗುಂಪಿನ ಸಿದ್ದಾಂತವೂ ಸಹ ಅಧಿಕಾರದ ಆಸೆಯ ಹೊರತೂ ಬೇರಯೇನೂ ಇದ್ದಂತೆ ಕಾಣುವುದಿಲ್ಲ.

          ಮಹಾರಾಷ್ಟ್ರದ ರಾಜಕಾರಣದಲ್ಲಿ ಬಾಳಾ ಠಾಕ್ರೆಯವರ ವಾರಸಿಕೆಯ ಗೊಂದಲಗಳೇನೇ ಇರಲಿ. ಆದರೆ ಅವರ ಸಿದ್ದಾಂತ ಇಂದು ಪ್ರಸ್ತುತವೇ ? ಎನ್ನುವ ಪ್ರಶ್ನೆ ಬರಬಹುದು. ಪ್ರಮುಖವಾಗಿ ಕಂಡುಬರುವ ಸಂಗತಿಗಳು ಅಂದರೆ ಪ್ರಾದೇಶಿಕ ಹಿತವನ್ನು ಕಾಯುವ ಪಕ್ಷವಾಗಿ ಆರಂಭವಾದ ಶಿವಸೇನೆ ರಾಷ್ಟ್ರದ ವಿಷಯದಲ್ಲಿ ಮತ್ತು ಹಿಂದೂ ಹಿತದ ಸಂದರ್ಭ ಬಂದಾಗ ಪ್ರಾದೇಶಿಕವಾದದ ಸಂಕುಚಿತತೆಯನ್ನು ಮೀರಿ ಹೇಗೆ ನಿಲ್ಲಬಹುದು ಎನ್ನುವುದಕ್ಕೆ ಒಂದು ಮಾದರಿಯಾಗಿದೆ. ಇದನ್ನು ಶಿವಸೇನೆ ಮತ್ತು ಬಿಜೆಪಿಯ ನಡುವೆ, ಒಂದಿಷ್ಟು ಭಿನ್ನಮತಗಳ ಹೊರತಾಗಿಯೂ ದೀರ್ಘ ಕಾಲ ಬೆಳದುಬಂದ ಮೈತ್ರಿ, ವಿಶೇಷವಾಗಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಶಿವಸೇನೆಯ ಬೆಂಬಲ ಮೊದಲಾದ ನಿದರ್ಶನಗಳಲ್ಲಿ ಕಾಣಬಹುದು.ಇನ್ನೊಂದು ಹಿಂದುತ್ವದ ಪರವಾದ ನಿರ್ಭೀತ ಮತ್ತು ಯಾವುದೇ ಮುಲಾಜಿಗೆ ರಾಜಿಯಾದ ಪ್ರಬಲ ಧ್ವನಿಯಾಗಿದ್ದವರು ಬಾಳಾ ಠಾಕ್ರೆ. ಮರಾಠಿ ಮಾಣೂಸ್‌ ಪ್ರಖರ ಹಿಂದೂ ರಾಷ್ಟ್ರವಾದಿಯಾಗಿ ಪರಿವರ್ತನೆಯಾದುದೂ ಸಹ ಒಂದು ಗಮನೀಯ ಅಂಶವಾಗಿದೆ. ಇಂದು ಬಂಗಾಲ ಮೊದಲಾದ ಕಡೆಗಳಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ-ಹಿಂಸಾಚಾರಗಳನ್ನು ಕಂಡಾಗ ಅಗತ್ಯವಾಗಿ ಬೇಕಾಗಿದ್ದ ನಿರ್ಭೀತ ಹಾಗೂ ಪ್ರಬಲಾದ ಹಿಂದೂ ಧ್ವನಿಯ ಕೊರತೆ ಬಾಧಿಸುತ್ತಿದೆ.



Thursday, January 15, 2026

ಭಾರತೀಯ ಪ್ರಕೃತಿ ಚಿಂತನೆ

 ('ಉತ್ಥಾನ' ಮಾಸಿಕ, ಜನವರಿ 2025, 'ಸಂಕ್ರಾಂತಿ ಗಣರಾಜ್ಯೋತ್ಸವ ವಿಶೇಷಾಂಕ')

ಪರಿಸರ ಸಂರಕ್ಷಣೆ ಆಂದೋಲನ – ‘ಎನ್ವಿರಾನ್ಮೆಂಟಲ್‌ ಎಕ್ಟಿವಿಸಮ್‌’ ಎನ್ನುವುದು ಇಂದಿನ ಜಗತ್ತಿನ ಒಂದು ಅನಿವಾರ್ಯ ಹೋರಾಟವೆಂದೇ ಪರಿಗಣಿಸಲ್ಪಟ್ಟಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ, ಅರಣ್ಯನಾಶ, ಮರುಭೂಮೀಕರಣ, ಪ್ಲಾಸ್ಟಿಕ್‌ ಮಾಲಿನ್ಯ, ಜೀವವೈವಿಧ್ಯ ನಾಶ, ಮಣ್ಣು ಸವಕಳಿ, ಧ್ರುವ ಪ್ರದೇಶದ ಮಂಜುಗಡ್ಡೆ ಕರಗುವುದು, ಗ್ರೀನ್‌ಹೌಸ್‌ ಗ್ಯಾಸ್‌ ಎಮಿಶನ್‌, ಜೀವಜಲದ ಮಾಲಿನ್ಯ ಮತ್ತು ನೀರಿನ ಕೊರತೆ, ವಾಯು ಗುಣಮಟ್ಟ ಸೂಚ್ಯಂಕ ಕುಸಿತ, ಹವಳದ ದಿಬ್ಬಗಳ ಬ್ಲೀಚಿಂಗ್ ಇತ್ಯಾದಿ ಹತ್ತು ಹಲವು ಪರಿಸರ ಸಂಬಂಧೀ ವ್ಯಾಧಿಗಳ ಕುರಿತು ನೂರಾರು ವೈಶ್ವಿಕ ವೇದಿಕೆಗಳು, ಶೃಂಗಸಭೆಗಳು, ಸೆಮಿನಾರುಗಳು, ಘೋಷಣೆ-ಘೋಷವಾಕ್ಯಗಳು, ಬಿಲಿಯನ್‌ಗಟ್ಟಲೇ ಡಾಲರುಗಳನ್ನು ಮೀಸಲಿಡುವ ವಾಗ್ದಾನಗಳು, ನವೀನ ತಂತ್ರಜ್ಞಾನದ ಮೂಲಕವೇ ಪರಿಹಾರ ಎನ್ನುವ ವಾದಗಳು ಈ ಎಲ್ಲ ಯಾವ ಪ್ರಯತ್ನಗಳಿಂದಲೂ ಪ್ರಕೃತಿಯ ನಿರಂತರ ನಾಶವನ್ನು ನಿಲ್ಲಿಸಲು ಸಾಧ್ಯವಾಗಿಲ್ಲ, ಅವನತಿಯ ಹಾದಿಯಿಂದ ವಿಮುಖವಾಗಲಿಲ್ಲ. ಅನೇಕ ಅಧ್ಯಯನಗಳ ಪ್ರಕಾರ ಪರಿಸರ ನಾಶದಿಂದಾಗಿ ಉಂಟಾಗುತ್ತಿರುವ ನಷ್ಟ, ಆಧುನಿಕ ಪರಿಭಾಷೆಯಲ್ಲಿಯೇ ಹೇಳುವುದಾದರೆ ವಾರ್ಷಿಕ 25 ಟ್ರಿಲಿಯನ್‌ ಡಾಲರಿಗಿಂತಲೂ ಹೆಚ್ಚು.

ಪರಿಸರದ ಈ ಅಧೋಗತಿಯ ಹಿಂದಿರುವ ಮೂಲ ಕಾರಣ ಮನುಷ್ಯನ ಆದ್ಯತೆಗಳು, ಆತನ ಸುಖದ ಕಲ್ಪನೆ, ಪ್ರಗತಿಯ ಕಲ್ಪನೆ. ನಿಜವಾದ ಸಮೃದ್ಧಿಯ ಬದಲು ಕೇವಲ ಜಿಡಿಪಿ, ಆರ್ಥಿಕತೆಯ ಗಾತ್ರ ಹಿಗ್ಗುವುದೇ ಪ್ರಗತಿ ಎಂದಾಗಿದೆ. ಉದಾಹರಣೆಗೆ ನದಿಯಲ್ಲಿ ಪರಿಶುದ್ದ ನೀರು ಉಗಮದಿಂದ ಕಡಲು ಸೇರುವವರೆಗೆ ಸದಾ ತುಂಬಿ ಹರಿದು ಜಲಚರಗಳನ್ನು, ಇಕ್ಕೆಲಗಳ ಜೀವರಾಶಿಯನ್ನು ಪೋಷಿಸುತ್ತ ಅದೇ ಗಾಂಭೀರ್ಯದಲ್ಲಿ ಸಾಗರವನ್ನು ಸೇರಿದರೆ ಅದು ಸಮೃದ್ಧಿ. ಆದರೆ ಅದಕ್ಕೊಂದು ಅಣೆಕಟ್ಟು ಕಟ್ಟಿ ಸಹಸ್ರಾರು ಹೆಕ್ಟೇರ್‌ ಕಾಡು ನಾಡುಗಳನ್ನು ಮುಳುಗಿಸಿ, ಕೆಳಗಿನ ನದೀಪಾತ್ರವನ್ನು ಒಣಗಿಸಿ, ನಡೆಯುವ ವಿದ್ಯುತ್‌ ಉತ್ಪಾದನೆಯೋ, ಕೆನಾಲುಗಳಲ್ಲಿ ನೀರು ಹರಿಸುವುದೋ ಇಂದು ಪ್ರಗತಿ ಎನಿಸಿಕೊಳ್ಳುತ್ತದೆ. ಅನ್ನದಾತದ ತೋಟದಲ್ಲಿ ಬೇರೆ ಬೇರೆ ಜಾತಿಯ ಗಿಡಮರಬಳ್ಳಿಗಳು ಹಚ್ಚಹಸುರಾಗಿ ಆರೋಗ್ಯವಾಗಿ ಬೆಳೆದು ಬಗೆಬಗೆಯ ಹೂವುಹಣ್ಣುಗಳನ್ನು ತಳೆದು ನಂದನವನವಾದರೆ, ಮನುಷ್ಯನ ಜೊತೆಗೆ ಪ್ರಾಣಿಪಕ್ಷಿ ಜೆನ್ನೊಣ ಚಿಟ್ಟೆಗಳಾದಿಯಾಗಿ ಕೀಟಗಳೆಲ್ಲವುಗಳ ತನುಮನಗಳನ್ನು ತಣಿಸುವುದು ಸಮೃದ್ಧಿಯಾದರೆ ಅಂತಹ ಜಮೀನಿನಲ್ಲಿ ಅಣೆಕಟ್ಟಿನ ಕೆನಾಲಿನಿಂದ ಬರುವ ನೀರಿನಿಂದಲೋ ಅಥವಾ ಎಂಟನೂರು ಅಡಿ ಆಳದ ಬೋರ್‌ವೆಲ್ಲಿನಿಂದ ಎತ್ತಿದ ನೀರನ್ನು ಬಳಸಿ, ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಸುರಿದು ವಾಣಿಜ್ಯ ಬೆಳೆಗಳನ್ನು ಬೆಳೆದು ಕೈತುಂಬ ಹಣಗಳಿಸುವವನು ‘ಪ್ರಗತಿಪರ ಕೃಷಿಕ’ ಎಂದು ಸನ್ಮಾನಿತನಾಗುತ್ತಾನೆ.

ಕಾಲದ ಅನಿವಾರ್ಯದಲ್ಲಿ ಸಿಲುಕಿರುವ ಭಾರತವೂ ಸಹ ಇದೇ ಮಾದರಿಯನ್ನು ಅನುಸರಿಸುತ್ತಿರುವುದು ವಿದಿತವಾದರರೂ ಮೂಲ ಭಾರತೀಯ ಚಿಂತನೆಯಲ್ಲಿ ಪರಿಸರವನ್ನು ನೋಡುವ ದೃಷ್ಟಿ ಭಿನ್ನವಾಗಿರುವುದು ಕಂಡುಬರುತ್ತದೆ. ಹಾಗೂ ಭಾರತೀಯ ಪ್ರಕೃತಿ ಚಿಂತನೆ ನಮ್ಮ ಸಂಸ್ಕೃತಿ, ಆಚರಣೆಗಳನ್ನು ಹಾಸುಹೊಕ್ಕಾಗಿ ಇಂದಿಗೂ ಜೀವಂತವಾಗಿರುವುದೂ ಕಾಣಿಸುತ್ತದೆ. ಅವುಗಳನ್ನು ಮತ್ತೆ ಜ್ಞಾಪಿಸಿಕೊಂಡರೆ ಪ್ರಪಂಚ ಇಂದು ಎದುರಿಸುತ್ತಿರುವ ಅನೇಕ ಸವಾಲುಗಳಿಗೆ ಪರಿಹಾರ ಸಿಗಬಹುದು.

ಸೃಷ್ಟಿ – ಪಂಚ ಮಹಾಭೂತಗಳು

           ಸೃಷ್ಟಿಯೆಲ್ಲವೂ ಪರಮಾತ್ಮ ವಾಸಸ್ಥಾನ ಎಂದು ಈಶಾವಾಸ್ಯೋಪನಿಷತ್ತಿನ ಮೊದಲ ಮಂತ್ರದಲ್ಲಿಯೇ ಹೇಳಿದೆ ‘ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್‌’. ಅದು ಪೂಜನೀಯವಾದದ್ದು, ಶೋಷಣೀಯವಾದದ್ದಲ್ಲ. ಆದ್ದರಿಂದ ತ್ಯಾಗ ಮನೋಭಾವದಿಂದ ಬದುಕಬೇಕೇ ಹೊರತು ಲೋಭದಿಂದಲ್ಲ. ಭಾರತೀಯ ಚಿಂತನೆಯಲ್ಲಿ ಯಾವುದೂ ಜಡವಲ್ಲ. ಮಾನವನ ಭೌತಿಕ ಶರೀರವೂ ಸೇರಿದಂತೆ ಸರ್ವವೂ ಪಂಚಭೂತಗಳ ಸೃಷ್ಟಿ.

ಭಾರತೀಯ ಪರಿಕಲ್ಪನೆಯಲ್ಲಿ ಮಾನವ ಪ್ರಕೃತಿ ಒಂದು ಭಾಗವೇ ಹೊರತು ಮಾಲೀಕನಲ್ಲ. ಸಕಲ ಚರಾಚರ ಜೀವಿಗಳಂತೇ ಮಾನವನೂ ಸಹ ಪ್ರಕೃತಿಯಿಂದ ಪೋಷಣೆ ಪಡೆಯಬೇಕಾದವನು. ಅಲ್ಲಿರುವುದು ತಾಯಿ ಮಕ್ಕಳ ಸಂಬಂಧ. ಅಥರ್ವವೇದದ 'ಪೃಥ್ವಿ ಸೂಕ್ತ'ವನ್ನು ನಾವು ಜಗತ್ತಿನ ಅತ್ಯಂತ ಪುರಾತನ ಪರಿಸರ ಗೀತೆ ಎಂದು ಕರೆಯಬಹುದು. ಅದರಲ್ಲಿ ಭೂಮಿಯನ್ನು ಕುರಿತು ಹೀಗೆ ಪ್ರಾರ್ಥಿಸಲಾಗಿದೆ "ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ" - ಭೂಮಿಯು ತಾಯಿ, ನಾನು ಅವಳ ಮಗ. ಮುಂದುವರಿದು, ಇನ್ನೂ ಒಂದು ಅದ್ಭುತವಾದ ಸಾಲು ಬರುತ್ತದೆ - "ಹೇ ತಾಯಿ ಭೂಮಿ, ನಿನ್ನನ್ನು ನಾನು ಅಗೆಯುತ್ತೇನೆ ಅದರಿಂದ ನಿನ್ನ ಹೃದಯಕ್ಕೆ ಧಕ್ಕೆಯಾಗದಂತಿರಲಿ, ನಿನ್ನ ಮರ್ಮಸ್ಥಾನಗಳಿಗೆ ನೋವಾಗದಂತಿರಲಿ." – “ಯತ್‌ ತೇ ಭೂಮೇ ವಿಖನಾಮಿ ಕ್ಷಿಪ್ರಂ ತದಪಿ ರೋಹತು, ಮಾ ತೇ ಮರ್ಮ ವಿಮಗ್ವರಿ ಮಾ ತೇ ಹೃದಯಮರ್ಪಿಪಮ್‌” ಮನೆ ಕಟ್ಟುವಾಗ, ಕೃಷಿ ಮಾಡುವಾಗ, ಗಣಿಗಾರಿಕೆಗೆ ಭೂಮಿಯ ಒಡಲನ್ನು ಬಗೆಯಬೇಕಾಗುತ್ತದೆ. ಆದರೆ ಅದು ಭೂಮಿ ತಾಯಿಗೆ ನೋವಾಗದಂತೆ, ಆಕೆ ಮತ್ತೆ ಚೇತರಿಸಿಕೊಳ್ಳುವಂತೆ ಇರಬೇಕು ಎಂಬ ಎಚ್ಚರಿಕೆ ಸಹಸ್ರಾರು ವರ್ಷಗಳ ಹಿಂದೆಯೇ ನಮ್ಮ ಹಿರಿಯರಿಗಿತ್ತು.

ಪರ್ವತಗಳನ್ನು ತಂದೆಯ ಸ್ಥಾನದಲ್ಲಿ, ನದಿಗಳನ್ನು ತಾಯಿಯಂತೆ ಕಾಣುವ ಸಂಸ್ಕೃತಿ ನಮ್ಮದು. ಹಾಗಾಗಿಯೇ ಪ್ರತಿಯೊಂದು ನದಿಪರ್ವತಗಳಿಗೆ ನಮ್ಮಲ್ಲಿ ಅರ್ಥಪೂರ್ಣ ಹೆಸರಗಳಿವೆ. ಅವುಗಳನ್ನು ಪೂಜಿಸಲಾಗುತ್ತದೆ, ಪೂಜ್ಯ ದೃಷ್ಟಿಯಿಂದ ಕಾಣಲಾಗುತ್ತದೆ. ಪ್ರತಿಯೊಂದು ಮನೆಯಲ್ಲೂ ನಡೆಯುತ್ತಿದ್ದ ಯಜ್ಞ-ಯಾಗಾದಿಗಳು, ಅಗ್ನಿಹೋತ್ರ ಮೊದಲಾದವು ವಾತಾವರಣವನ್ನು ಶುದ್ಧೀಕರಿಸುವ ಪ್ರಕ್ರಿಯೆಗಳಾಗಿದ್ದವು. ಅಗ್ನಿಯನ್ನು ಮನುಷ್ಯ ಮತ್ತು ದೇವರ ನಡುವಿನ ಕೊಂಡಿ ಎಂದು ಭಾವಿಸಲಾಗಿತ್ತು. ಯಾಗಗಳಲ್ಲಿ ಸಮರ್ಪಿಸುವ ಹವಿಸ್ಸನ್ನು ದೇವತೆಗಳಿಗೆ ತಲುಪಿಸುವುದು ಅಗ್ನಿದೇವನ ಕಾರ್ಯ ಎಂದು ವೇದಗಳಲ್ಲೇ ಹೇಳಿದೆ.

ನಿರಾಕಾರನಾದರೂ ಸರ್ವವ್ಯಾಪಿಯಾದ ಪರಮಾತ್ಮನು ಎಲ್ಲ ರೂಪಗಳಲ್ಲಿಯೂ ವ್ಯಕ್ತನಾಗುತ್ತಾನೆ ಎನ್ನುವ ನಂಬಿಕೆ ನಮ್ಮದು. ಹಾಗಾಗಿಯೇ ನಮಗೆ ಪ್ರಾಣಿಪಕ್ಷಿಯಾದಿ ಸಕಲ ಚರಾಚರಗಳಲ್ಲಿ ಭಗವಂತನನ್ನು ಕಾಣಲು ಸಾಧ್ಯ, ಕಲ್ಲಿನಲ್ಲಿ ಪರಮಾತ್ಮನ್ನು ನಾವು ಪ್ರತಿಷ್ಠಾಪಿಸಬಲ್ಲೆವು. ಪ್ರಾಣಿಪಕ್ಷಿಗಳ ರೂಪದಲ್ಲಿಯೂ ದೇವರುಗಳನ್ನು ಕಲ್ಪಿಸಿಕೊಂಡು ಪೂಜಿಸಲುತ್ತೇವೆ.


 =========================================================================

‘Conquest of nature’, ‘Bending nature to our will’, ‘Man verses nature’, ‘Taming the wilderness’, ‘Nature as something to be dissected’, ‘Overcoming natural limits’, ‘Defying nature’ ಇತ್ಯಾದಿ ಹತ್ತು ಹಲವು ನುಡಿಗಟ್ಟುಗಳನ್ನು ನಾವು ಕೇಳಿರಬಹುದು. ವಿಶೇಷವಾಗಿ ಇವು ಪಾಶ್ಚಾತ್ಯ ಜಗತ್ತಿನ ಸಾಹಿತ್ಯ, ತತ್ವಶಾಸ್ತ್ರ, ರಾಜಕೀಯ, ವಸಾಹತುಶಾಹಿ ಕಥನಗಳು, ಕೈಗಾರಿಕಾ ಪ್ರಗತಿಯ ಚರ್ಚೆಗಳು, ಮತ್ತು ಸಾಮಾನ್ಯ ಜನಮಾನಸ ಸಂಸ್ಕೃತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಇವೆಲ್ಲವೂ ಪ್ರಕೃತಿಯ ಮೇಲೆ ಮಾನವ ಪ್ರಾಬಲ್ಯ, ನಿಯಂತ್ರಣ ಅಥವಾ ಮಾಲೀಕತ್ವವನ್ನು ಸೂಚಿಸುವ ಸಾಮಾನ್ಯ ಪಾಶ್ಚಿಮಾತ್ಯ ಮೂಲದ ನುಡಿಗಟ್ಟುಗಳು ಅಥವಾ ರೂಪಕಗಳು. ಇಂತಹ ರೂಪಕಗಳ ಮೂಲವಿರುವುದು ಜುಡೆಯೋ-ಕ್ರಿಶ್ಚಿಯನ್‌ ಚಿಂತನೆಯಲ್ಲಿ, ನಂತರ ಯುರೋಪಿನ ಜ್ಞಾನೋದಯ ಮತ್ತು ಕ್ರಾಂತಿಯ ಯುಗ (Enlightenment and Scientific Revolution) ಹಾಗೂ ಕೈಗಾರಿಕೀಕರಣ, ವಸಾಹತುಯುಗಗಳಲ್ಲಿ ಇವು ಇನ್ನೂ ಬೆಳೆದವು. ಪ್ರಕೃತಿ ಎನ್ನುವುದು ಪ್ರಶ್ನಿಸಬೇಕಾದ, ತಿದ್ದಬೇಕಾದ-ತರಬೇತುಗೊಳಿಸಬೇಕಾದ, ಗೆಲ್ಲಬೇಕಾದ, ಮಾನವನ ಭೋಗಕ್ಕೆ ಇರುವ ಸಂಗತಿ ಎನ್ನುವ ಕಥನ ಬೆಳೆದು ಬಂತು. ದುರದೃಷ್ಟಕರವೆಂದರೆ ಈ ಚಿಂತನೆಯೇ ಪ್ರಪಂಚದಲ್ಲಿ ಇಂದು ಪ್ರಬಲವಾಗಿದೆ. ಪ್ರಕೃತಿಯೊಂದಿಗೆ ಸಾಮರಸ್ಯ, ಪರಸ್ಪರ ಅವಲಂಬನೆ ಅಥವಾ ಪರಸ್ಪರ ಸಂಬಂಧವನ್ನು ಒತ್ತಿಹೇಳುವ ಭಾರತೀಯ ಮತ್ತು ಕೆಲವು ಪೌರ್ವಾತ್ಯ ದೃಷ್ಟಿಕೋನಗಳೊಂದಿಗೆ ಇದನ್ನು ಹೋಲಿಸಿ ನೋಡಬಹುದು.

==========================================================================

ಜ್ಞಾನ ಮತ್ತು ಕಲೆಗಳ ಮೂಲ ಗುರುವೇ ಪೃಕೃತಿ

ಭಾರತೀಯ ಪ್ರಕೃತಿ ಚಿಂತನೆ ಕೇವಲ ಚಿಂತನೆಯ ಸ್ತರಕ್ಕೆ ಸೀಮಿತವಲ್ಲ, ನಮ್ಮ ಎಲ್ಲ ಧಾರ್ಮಿಕ ಸಾಂಸ್ಕೃತಿಕ ಆಚರಣೆಗಳಲ್ಲಿ ಹಾಸುಹೊಕ್ಕಾಗಿದೆ. ಭಾರತೀಯರಿಗೆ ಎಲ್ಲ ಜ್ಞಾನ ಮತ್ತು ಕಲೆಗಳ ಮೂಲ ಪ್ರಕೃತಿಯೇ ಆಗಿದೆ. ಗುರುವಿನ ಗುರು ಎಂದೇ ಗೌರವಿತನಾದ ದತ್ತಾತ್ರೇಯ ಪ್ರಕೃತಿಯಲ್ಲಿಯೇ ಗುರುವನ್ನು ಕಂಡವನು. ಭೂಮಿ, ನೀರು, ಗಾಳಿ, ಅಗ್ನಿ, ಆಕಾಶ, ಸೂರ್ಯ-ಚಂದ್ರ, ಸಾಗರ, ಜೇನುಗೂಡು, ಹೆಬ್ಬಾವು, ಮೀನು, ಆನೆ, ಜಿಂಕೆ ಮೊದಲಾಗಿ 24 ಗುರುಗಳಿಂದ ಪಾಠ ಕಲಿತೆ ಎಂದು ದತ್ತಗುರು ಹೇಳುತ್ತಾನೆ. ಯೋಗ ಆಯುರ್ವೇದಗಳು ಪ್ರಕೃತಿಯಿಂದ ಮಾನವ ಕಲಿತ ಪಾಠಗಳು.

ಆರೋಗ್ಯವನ್ನು ನಮ್ಮ ದೇಹ, ಮನಸ್ಸು, ಚೈತನ್ಯ ಮತ್ತು ಪರಿಸರದ ಒಳಗೆ ಮತ್ತು ಅವುಗಳ ನಡುವಿನ ಸಾಮರಸ್ಯದ ಸ್ಥಿತಿ ಎಂದು ಆಯುರ್ವೇದದಲ್ಲಿ ವ್ಯಾಖ್ಯಾನಿಸಲಾಗಿದೆ. ನಮ್ಮ ಶಾರೀರಿಕ ಹಾಗೂ ಮಾನಸಿಕ ಪ್ರಕೃತಿ ಮತ್ತು ನಾವು ಪರಿಸರದ ಚಕ್ರದೊಂದಿಗೆ ಸಂವಹನ ನಡೆಸುವ ವಿಧಾನಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಸಾಮರಸ್ಯವನ್ನು ಸಾಧಿಸಬಹುದು. ಸೃಷ್ಟಿಯ ಐದು ಅಂಶಗಳಾದ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಇವುಗಳು ನಮ್ಮ ಶಾರೀರಿಕ ಮತ್ತು ಮಾನಸಿಕ ಕಾರ್ಯಗಳನ್ನು ನಿಯಂತ್ರಿಸುವ ಮೂರು ದೋಷಗಳಾದ ವಾತ, ಪಿತ್ತ ಮತ್ತು ಕಫದಲ್ಲಿ ವ್ಯಕ್ತವಾಗುತ್ತವೆ. ಹಾಗೂ ಈ ತ್ರಿದೋಷಗಳು ಬದಲಾಗುತ್ತಿರುವ ಋತುಗಳು, ದಿನದ ಸಮಯಗಳು ಮತ್ತು ನಾವು ತಿನ್ನುವ ಆಹಾರಗಳಿಂದ ಪ್ರಭಾವಿತವಾಗಿರುತ್ತದೆ. ಹಾಗಾಗಿ ‘ಋತುಚರ್ಯೆ’ ಅಂದರೆ ಋತುಮಾನದ ಬದಲಾವಣೆಗಳಿಗೆ ಅನುಗುಣವಾಗಿ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಮಾರ್ಪಡಿಸಿಕೊಳ್ಳುವುದನ್ನು ಆಯುರ್ವೇದ ಪ್ರತಿಪಾದಿಸುತ್ತದೆ. ಅದರಂತೆಯೇ ಋತುಗಳಿಗನುಸಾರವಾಗಿ ನಮ್ಮ ಹಬ್ಬಹರಿದಿನ ಆಚರಣೆಗಳು, ಪ್ರತಿಯೊಂದು ಆಚರಣೆಗಳ ವಿಶೇಷತೆಗಳು, ಆಹಾರ-ವ್ಯವಹಾರ ಕ್ರಮ ಒಟ್ಟಾರೆ ಜೀವನಶೈಲಿ ರೂಪಿತವಾಗಿರುವುದನ್ನು ನಾವು ಗಮನಿಸಬಹುದು.

ಪ್ರಕೃತಿಯ ಮೇಲೆ ಗೆಲುವು ಸಾಧಿಸುವುದೂ ಅಲ್ಲ, ಅದು ತನ್ನ ಭೋಗದ ವಸ್ತು ಎನ್ನುವ ಭಾವನೆಯೂ ಅಲ್ಲ, ಬದಲಾಗಿ ಪ್ರಕೃತಿಯ ಕುರಿತು ವಿನೀತಭಾವ ಭಾರತೀಯ ಸಂಸ್ಕೃತಿಯ ಲಕ್ಷಣ. ಇಂದಿಗೂ ಮನೆ ಕಟ್ಟುವ ಮೊದಲು, ಯಾವುದೇ ನಿರ್ಮಾಣ ಆರಂಭಕ್ಕೆ ಮೊದಲು, ಕೃಷಿ ಕಾರ್ಯವನ್ನು ಆರಂಭಿಸುವ ಮೊದಲು 'ಭೂಮಿ ಪೂಜೆ' ಮಾಡುವ ಸಂಪ್ರದಾಯವಿದೆ. "ನನ್ನ ವಾಸಕ್ಕಾಗಿ ನಿನ್ನ ಮೇಲೆ ಭಾರ ಹಾಕುತ್ತಿದ್ದೇನೆ, ನಿನ್ನನ್ನು ಅಗೆಯುತ್ತಿದ್ದೇನೆ, ನನ್ನನ್ನು ಕ್ಷಮಿಸು ತಾಯಿ" ಎಂದು ಪ್ರಾರ್ಥಿಸುವ ಸಂಸ್ಕೃತಿ ಜಗತ್ತಿನಲ್ಲಿ ಬೇರೆಲ್ಲಿಯೂ ಕಾಣುವುದಿಲ್ಲ. ಹಾಗೆಯೇ ಮನೆಯನ್ನು ಕಟ್ಟುವಾಗ ಅನೇಕ ಜೀವಜಂತುಗಳು ಅನಿವಾರ್ಯವಾಗಿ ನಾಶವಾಗುತ್ತವೆ, ಹಾಗಾಗಿ ಪಾಪಪರಿಹಾರಾರ್ಥವಾಗಿ ದಾನಧರ್ಮಗಳನ್ನು ಮಾಡಬೇಕೆನ್ನುವ ಶಾಸ್ತ್ರವಿದೆ.

 

ಪ್ರಗತಿ – ಡೆವೆಲಪ್‌ಮೆಂಟ್‌ನ ಪರಿಕಲ್ಪನೆ

ಹಾಗೆಂದು ಆಧುನಿಕವಾದುದೆಲ್ಲವನ್ನೂ ಅಥವಾ ವೈಜ್ಞಾನಿಕ ಎಂದು ಕರೆಯಲ್ಪಡುವುದೆಲ್ಲವನ್ನೂ ತಿರಸ್ಕರಿಸುವುದು ಭಾರತೀಯ ದೃಷ್ಟಿಯಲ್ಲ. ಹಾಗಿದ್ದಿದ್ದರೆ ಪ್ರಾಚೀನ ಭಾರತದಲ್ಲಿ ಕಂಡುಬರುವ ಇಂದಿನ ವೈಜ್ಞಾನಿಕ ಜಗತ್ತೂ ವಿಸ್ಮಯಗೊಳ್ಳುವಂತಹ ಅನ್ವೇಷಣೆಗಳು ಸಾಧ್ಯವಾಗುತ್ತಿರಲಿಲ್ಲ. ಆದರೆ ಆಧುನಿಕತೆಯ ಮಾದರಿ ಯಾವುದು? ಎನ್ನುವ ಪ್ರಶ್ನೆ ಬಂದಾಗ ಪ್ರಕೃತಿಗೆ ಹಾನಿಯುಂಟುಮಾಡುವ ಮಾರ್ಗವನ್ನು ಭಾರತ ಆಯ್ದುಕೊಳ್ಳಲಿಲ್ಲ. ಬೌದ್ಧಿಕ ಮಟ್ಟದಲ್ಲಿ ಉಳಿದೆಲ್ಲ ಜೀವಜಂತುಗಳಿಗಿಂತ ಮೇಲನ ಸ್ತರದಲ್ಲಿರುವ ಮಾನವ ಪ್ರಪಂಚನವನ್ನು ತನ್ನ ಭೋಗಕ್ಕೆ ಮಾತ್ರ ಬಳಸುವುದಲ್ಲ ಬದಲಿಗೆ ತಾನೂ ಅದರ ಭಾಗವಾಗಿರುವುದರಿಂದ ಅದನ್ನು ಕಾಪಾಡುವ ಹೊಣೆಯೂ ತನ್ನ ಮೇಲಿದೆ ಎನ್ನುವ ಸತ್ಯವನ್ನು ಭಾರತೀಯ ಸಂಸ್ಕೃತಿ ಕಂಡುಕೊಂಡಿತ್ತು. ಅದಕ್ಕನುಗುಣವಾಗಿ ನಮ್ಮ ಬದುಕುವ ರೀತಿ, ಜೀವನಶೈಲಿ ರೂಪುಗೊಂಡಿತು. ಪ್ರಕೃತಿಯೊಂದಿಗೆ ಸಮರಸ ಬದುಕು ನಡೆಸುವ ಕಾರಣ, ಪರಿಸರ ನಾಶ ಹಾಗೂ ಮಾಲಿನ್ಯದ ಪ್ರಶ್ನೆ ಹುಟ್ಟಲಿಲ್ಲ. ಪರಿಸರ ಸಂರಕ್ಷಣೆಯ ವಿಶೇಷ ಅಗತ್ಯ ಪ್ರಾಚೀನ ಭಾರತೀಯರಿಗೆ ಬರಲಿಲ್ಲ.

ಪ್ರಕೃತಿಯ ಮೇಲೆ ಮಾನವನ ದೌರ್ಜನ್ಯದ ಪ್ರತಿಫಲವನ್ನು ನಾವಿಂದು ಕಲುಷಿತ ವಾತಾವರಣ, ಹವಾಮಾನ ವೈಪರಿತ್ಯ, ಋತುಗಳ ಏರುಪೇರು, ತಾಪಮಾನ ಏರಿಕೆ, ಅತವೃಷ್ಟಿ-ಅನಾವೃಷ್ಟಿ ಮೊದಲಾದವುಗಳ ಮೂಲಕ ಪಡೆಯುತ್ತಿದ್ದೇವೆ. ಇವುಗಳಿಗೆ ಮೂಲ ಕಾರಣ ಮಾನವನೇ ಆದರೂ ನಿರಪರಾಧಿಗಳಾದ ಪೃಥ್ವಿಯ ಉಳಿದ ಜೀವಜಂತುಗಳು ಶಿಕ್ಷೆಯನ್ನು ಅನುಭವಿಸುತ್ತಿವೆ. ಪ್ರಕೃತಿಯೇ ಸಹನೆ ಮೀರಿ ಉಗ್ರ ಪ್ರತೀಕಾರಕ್ಕೆ ಮುಂದಾಗುವ ಮೊದಲು ಮಾನವ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ. ಪ್ರಾಚೀನ ಭಾರತ ತೋರಿದ ಸಾಮರಸ್ಯದ ದಾರಿ ನಮ್ಮಲ್ಲಿ ಅಲ್ಪ ಪ್ರಮಾಣದಲ್ಲಿಯಾದರೂ ಜೀವಂತವಿದೆ. ಅದನ್ನು ಮತ್ತೆ ಜ್ಞಾಪಿಸಿಕೊಂಡು ಆ ಜ್ಞಾನದ ಬೆಳಕನ್ನು ವಿಶ್ವದ ಮುಂದಿಡಲು ಭಾರತ ಸನ್ನದ್ಧವಾಗಬೇಕಿದೆ.


 **************************************************************************************************

ವೃಕ್ಷರಕ್ಷಣೆ

ದಶಪುತ್ರ ಸಮೋ ದ್ರುಮಃಎಂದು ಒಂದು ಸುಭಾಷಿತ ಹೇಳುತ್ತದೆ, ಅಂದರೆ ಒಂದು ವೃಕ್ಷವು ಹತ್ತು ಮಕ್ಕಳಿಗೆ ಸಮ. ಗಿಡಮರಗಳನ್ನು ಮಕ್ಕಳಂತೇ ಭಾವಿಸಿ ಸಲಹಿದ ಸಾಲುಮರದ ತಿಮ್ಮಕ್ಕನಂತವರ, ತುಳಿಸಿ ಗೌಡರಂತವರ ವೃಕ್ಷಮಾತೆಯರ ನಾಡು ನಮ್ಮ ನೆಲ. ಇಂದಿಗೂ ಕರ್ನಾಟಕದ ಮೂಲೆ ಮೂಲೆಗಳಲ್ಲಿ ದೇವರಕಾಡುಗಳು ಕಾಣಸಿಗುತ್ತವೆ. ಅದು ಊರ ದೇವರು ನೆಲೆಸಿರುವ ಕಾಡು, ಅದನ್ನು ಹಾಳು ಮಾಡಬಾರದು ಎನ್ನುವ ಶ್ರದ್ಧೆ ಜನರಲ್ಲಿದೆ. ಹಾಗೆಯೇ ನವಗ್ರಹ ವನಗಳ ಕಲ್ಪನೆಯಿದೆ. ಪ್ರತಿಯೊಂದು ಗ್ರಹದ ಪ್ರತೀಕ ಗಿಡವನ್ನು ನೆಟ್ಟು ಪೋಷಿಸಿ, ಅದನ್ನು ಪೂಜಿಸಿ ಪ್ರದಕ್ಷಿಣೆ ಹಾಕುವುದರಿಂದ ದೋಷಪರಿಹಾರವಾಗುತ್ತದೆ ಎನ್ನುವ ನಂಬಿಕೆಯಿದೆ. ಬಸುರಿ ಹೆಂಗಸರು, ಮಕ್ಕಳನ್ನು ಬಯಸುವವರು ಅಶ್ವತ್ಥ ವೃಕ್ಷದ ಪ್ರದಕ್ಷಿಣೆ ಹಾಕುವುದರಿಂದ ಸತ್ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವು ನಂಬಿಕೆಯ ಹಿಂದೆ ಆರೋಗ್ಯದ ಜೊತೆಗೆ ಪರಿಶುದ್ಧ ಗಾಳಿಯನ್ನು ನೀಡುವ ಅಶ್ವತ್ಥ ವೃಕ್ಷದ ಸಂರಕ್ಷಣೆಯೂ ಇದೆ. ಭಾರತೀಯ ಸಂಸ್ಕೃತಿಯಲ್ಲಿ ಅಶ್ವತ್ಥ ವೃಕ್ಷಕ್ಕೆ ವಿಶೇಷ ಸ್ಥಾನವಿದೆ. ಅಶ್ವತ್ಥ ವೃಕ್ಷಕ್ಕೆ ಉಪನಯನ ಮಾಡಲಾಗುತ್ತದೆ. ವಿವಾಹ ಮಾಡಲಾಗುತ್ತದೆ. ಪೂಜಿಸಲಾಗುತ್ತದೆ. ಗ್ರಾಮದ ಪಂಚಾಯತಿಗಳು ನಡೆಯವುದು, ಎಲ್ಲರೂ ಸೇರಿ ಕಷ್ಟಸುಖಗಳನ್ನು ಹಂಚಿಕೊಳ್ಳುವುದು ಊರಿನ ಅರಳೀಕಟ್ಟೆಯ ಮೇಲೆಯೇ. ತುಳಸೀ ವಿವಾಹ, ವನಭೋಜನ, ನಾಗಬನ-ನಾಗಾರಾಧನೆ ಇತ್ಯಾದಿ ಆಚರಣೆಗಳನ್ನು ಪ್ರಕೃತಿ ಸಂರಕ್ಷಣೆಯ ಹಿನ್ನೆಲೆಯಲ್ಲಿ ಕಾಣಬಹುದು.

ಅಶ್ವತ್ಥಮೇಕಂ ಪಿಚುಮಂದಮೇಕಂ ನ್ಯಗ್ರೋಧಮೇಕಂ ದಶತಿಂತ್ರಿಣೀಕಂ| ಕಪಿತ್ಥಬಿಲ್ವಾಮಲಕ ತ್ರಯಂಚ ಪಂಚಾಮ್ರರೋಪೀ ನರಕಂನಯಾತಿ||’ - ಒಂದು ಅಶ್ವತ್ಥ,  ಒಂದು ಬೇವು, ಒಂದು ಆಲ, 10 ಹುಣಿಸೆ, ತಲಾ ಮೂರು ಬೇಲ, ಬಿಲ್ವ, ನೆಲ್ಲಿ ಮತ್ತು ಐದು ಮಾವು ಇವಿಷ್ಟು ಗಿಡಗಳನ್ನು ನೆಟ್ಟು ಮರವಾಗಿ ಮಾಡಿದವನು ನರಕಕ್ಕೆ ಹೋಗುವುದಿಲ್ಲ ಎನ್ನುತ್ತದೆ ಗರುಡಪುರಾಣದ ಈ ಶ್ಲೋಕ.ಒಂದಲ್ಲ ಒಂದು ರೀತಿ ಪ್ರಯೋಜನಕಾರಿ, ಆಯುರ್ವೇದೀಯ ಮಹತ್ತ್ವ ಉಳ್ಳವು ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತಿದೆ. ವಿವಿಧ ಜಾತಿಯ ಮರಗಿಡಗಳು ಯಥೇಚ್ಚವಾಗಿದ್ದ ಕಾಲದಲ್ಲೇ ನಮ್ಮ ಪ್ರಾಚೀನರು ಹೀಗೆ ಎಚ್ಚರವಹಿಸಿ ಮರಗಿಡಗಳನ್ನು ನೆಟ್ಟು ಬೆಳೆಸಬೇಕಾದ ಮಹತ್ವವನ್ನು ಸಾರಿದ್ದರು. 

ವೃಕ್ಷರಕ್ಷಣೆ ಪ್ರಾಚೀನ ಕಾಲದಿಂದ ನಮ್ಮ ಧಾರ್ಮಿಕ ಸಂಪ್ರದಾಯಗಳಲ್ಲಿಯೇ ಬೆರೆತುಕೊಂಡಿದೆ. ಉದಾಹರಣೆಗೆ ಸಂತ ಗುರು ಜಂಬಾಜಿ ಮಹಾರಾಜ ಅವರಿಂದ ಸ್ಥಾಪನೆಯಾದ ಬಿಷ್ಣೋಯ್‌ ಸಮಾಜ ಪರಿಸರ ಸಂರಕ್ಷಣೆಯನ್ನೇ ಮೂಲ ಧ್ಯೇಯವಾಗಿ ಹೊಂದಿದೆ. ಉತ್ತರ ಭಾರತದಲ್ಲಿ ವಿಶೇಷವಾಗಿ ರಾಜಸ್ಥಾನ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಷ್ಣೋಯ್‌ ಸಮಾದ 29 ತತ್ವಗಳ ಪೈಕಿ ಹೆಚ್ಚಿನವು ಪ್ರಕೃತಿ ಗಿಡಮರ ಪ್ರಾಣಿಪಕ್ಷಿಗಳ ರಕ್ಷಣೆಯನ್ನು ಧಾರ್ಮಿಕ ಕರ್ತವ್ಯವ ಎಂದೇ ವಿಧಿಸುತ್ತವೆ. ಬಿಷ್ಣೋಯ್‌ ಸಂಪ್ರದಾಯ ಸ್ಥಾಪನೆಯಾಗಿ ಸುಮಾರು 300 ವರ್ಷಗಳ ನಂತರ 1730ರಲ್ಲಿ ಜೋದಪುರ ಸಮೀಪದ ಖೇಜರ್ಲಿ ಗ್ರಾಮದಲ್ಲಿ ನಡೆದ ಘಟನೆ – ಅಲ್ಲಿ ದೊಡ್ಡ ಪ್ರಮಾಣದಲ್ಲಿ ಬನ್ನಿ ಮರಗಳ ಕಾಡು ಬೆಳೆದಿತ್ತು. ಜೋಧಪುರದ ಮಹಾರಾಜ ಒಂದು ಅರಮನೆಯನ್ನು ನಿರ್ಮಿಸಲು ಬಯಸಿದಾಗ ಅರಮನೆ ಕಟ್ಟಲು ಬೇಕಾಗಿದ್ದ ಮರಗಳನ್ನು ಆ ಕಾಡಿನಿಂದ ಕಡಿದು ತರಲು ಸೈನಿಕರನ್ನು ಅಟ್ಟಿದ. ಮರಗಳ ರಕ್ಷಣೆಗೆ ಕರ್ತವ್ಯಬದ್ಧರಾಗಿದ್ದ ಬಿಷ್ಣೋಯಿಗಳು ವಿರೋಧಿಸಿದರು. ರಾಜಾಜ್ಞೆಯಂತೆ ಮರಗಳ ಕಟಾವಿಗೆ ನಿಂತಿದ್ದ ಸೈನಿಕರು ವಿರೋಧವನ್ನು ಲೆಕ್ಕಿಸದೇ ಇದ್ದಾಗ, ಕಣ್ಣ ಮುಂದೆಯೇ ತಮ್ಮ ನಂಬಿಕೆ ಮತ್ತು ಕಾಡು ಎರಡೂ ನಾಶವಾಗುತ್ತಿದ್ದುದನ್ನು ಸಹಿಸದ ಅಮೃತಾ ದೇವಿ ಎಂಬ ಹೆಸರಿನ ಬಿಷ್ಣೋಯಿ ಮಹಿಳೆ ಮರವನ್ನು ಅಪ್ಪಿಕೊಂಡು ಮರಕಡಿಯುವ ಮೊದಲು ತನ್ನ ತಲೆಕಡಿಯಿರಿ ಎಂದು ಸವಾಲು ಹಾಕಿದಳು. ಮರರಕ್ಷಣೆಗಾಗಿ ಸೈನಿಕರ ಕತ್ತಿಗೆ ಕೊರಳೊಡ್ಡಿದಳು. ಅವಳಿಂದ ಪ್ರೇರಣೆ ಪಡೆದ ಸುಮಾರು 350ಕ್ಕೂ ಹೆಚ್ಚು ಗ್ರಾಮಸ್ಥರು ಮರವನ್ನು ಅಪ್ಪಿಕೊಂಡು ಆತ್ಮಾಹುತಿಗೈದರು. ಸುದ್ದಿ ರಾಜನಿಗೆ ತಲುಪಿತು. ಪಶ್ಚಾತ್ತಾಪಗೊಂಡ ರಾಜ ಆ ಗ್ರಾಮಕ್ಕೆ ಬಂದು ಕ್ಷಮಾಪಣೆ ಕೇಳಿದ ಮತ್ತು ಆ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿ ಯಾವುದೇ ಮರಗಿಡಗಳನ್ನು ಕಡಿಯಬಾರದು, ಪ್ರಾಣಿಗಳನ್ನು ಸಾಯಿಸಬಾರದು ಎಂದು ಕಾನೂನು ಜಾರಿಗೊಳಿಸಿದ. ಇಂದಿಗೂ ಸಹ ಈ ಕಾನೂನು ಜಾರಿಯಲ್ಲಿದೆ.

***************************************************************************************************



Wednesday, June 10, 2020

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

(ಪುಂಗವ – 15/06/2020)

ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ

ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ಈ ಸಂದರ್ಭದಲ್ಲಿ ವಿಶ್ವಕ್ಕೇ ಕೊರೊನಾ ಸೋಂಕಿನ ಕೊಡುಗೆ ನೀಡಿದ ಕಮ್ಯುನಿಸ್ಟ್ ಚೀನಾ ಮಾತ್ರ ತನ್ನ ಸ್ವಾರ್ಥ ಸಾಧನೆಯ ಹಳೆಯ ಚಾಳಿಯನ್ನು ಮುಂದುರವರಿಸಿದೆ.

೨೦೧೯ರ ನವೆಂಬರ್-ಡಿಸೆಂಬರ್ ವೇಳೆಗೆ ಚೀನಾದ ವುಹಾನ್ ಪ್ರಾಂತದಲ್ಲಿ ಪತ್ತೆಯಾದ ಕೊರೊನಾ ಮಹಾಮಾರಿಯನ್ನು ಮೊದಲು ಮುಚ್ಚಿಡಲು ಪ್ರಯತ್ನಿಸಿ, ನಂತರ ಮಾನವರಿಂದ ಮಾನವರಿಗೆ ಹರಡುವುದಿಲ್ಲ ಎಂದ ಚೀನಾ ಸರ್ಕಾರ ವಿಶ್ವದ ಉಳಿದ ದೇಶಗಳಿಗೆ ಸಮಯದಲ್ಲಿ ಜಾಗೃತವಾಗುವಂತೆ ಮುನ್ನೆಚ್ಚರಿಕೆ ನೀಡಲು ವಿಳಂಬ ಮಾಡಿತು. ವುಹಾನ್‌ನಿಂದ ತನ್ನ ದೇಶದ ಉಳಿದ ನಗರಗಳಿಗೆ ಸೋಂಕು ಹರಡುವುದನ್ನು ತಡೆಗಟ್ಟಲು ಕ್ರಮ ಕೈಗೊಂಡ ಚೀನಾ ಇತರೆ ದೇಶಗಳಿಗೆ ಈ ಸೋಂಕು ಹರಡುವುದನ್ನು ತಡೆಗಟ್ಟುವ ವಿಷಯದಲ್ಲಿ ತಲೆಕೆಡಿಸಿಕೊಳ್ಳಲೇ ಇಲ್ಲ. ಈಗಲೂ ಈ ವೈರಸ್ ಕುರಿತು ಜಾಗತಿಕ ಮಟ್ಟದ ಸ್ವತಂತ್ರವಾದ ತನಿಖೆಯಾಗಬೇಕೆಂದರೆ ಚೀನಾ ಮಾಹಿತಿ ನೀಡಲು ತಯಾರಿಲ್ಲ. ಚೀನಾದಲ್ಲಿ ಕೊರೊನಾ ಹರಡಿರುವ ಕುರಿತು ಮತ್ತು ಅದರಿಂದಾದ ಸಾವುನೋವಿನ ಕುರಿತು ಅಂಕಿಅಂಶಗಳನ್ನೇ ಮುಚ್ಚಿಟ್ಟಿದೆ. ಇವೆಲ್ಲ ವಾಸ್ತವಾಂಶಗಳಿಗೆ ಬಲವಾದ ಆಧಾರಗಳು ವರದಿಯಾಗಿವೆ.

ಈ ನಡುವೆ ದಕ್ಷಿಣ ಚೀನಾ ಸಮುದ್ರದಲ್ಲಿ ವಿಯೆಟ್ನಾಂ ಮತ್ತಿತರ ದೇಶಗಳೊಂದಿಗೆ ತಕರಾರು ತೆಗೆದ ಚೀನಾ ಅಲ್ಲಿನ ಚಿಕ್ಕಪುಟ್ಟ ದ್ವೀಪ-ನಡುಗಡ್ಡಗಳಿಗೆ ನಾಮಕರಣ ಮಾಡಿ ಹಕ್ಕು ಸ್ಥಾಪನೆಗೆ ಮುಂದಾಯಿತು. ಕೊರೊನಾ ವೈರಸ್ ಕುರಿತು ತನಿಖೆಯಾಗಬೇಕು ಎಂದು ಪಟ್ಟು ಹಿಡಿದ ಆಸ್ಟ್ರೇಲಿಯಾ ಮೇಲೆ ಗರಂ ಆಗಿ ಆಸ್ಟ್ರೇಲಿಯಾದಿಂದ ಚೀನಾಕ್ಕೆ ರಫ್ತಾಗುತ್ತಿದ್ದ ಬಾರ್ಲಿಯ ಮೇಲೆ ನಿರ್ಭಂದ ಹೇರಿ ಹೆದರಿಸಿತು. ಕಳಪೆ ಗುಣಮಟ್ಟದ ಪರೀಕ್ಷಾ ಕಿಟ್‌ಗಳು, ಮಾಸ್ಕ್‌ಗಳು, ಪಿಪಿಇ ಕಿಟ್‌ಗಳನ್ನು ವಿದೇಶಗಳಿಗೆ ರವಾನೆ ಮಾಡಿ ಮುಖಭಂಗವನ್ನೂ ಅನುಭವಿಸಿತು. ಟಿಬೆಟ್, ತೈವಾನ್‌ಗಳ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಹರಸಾಹಸಪಡುತ್ತಿರುವ ಜೊತೆಗೆ, ಹಾಂಗ್‌ಕಾಂಗ್‌ನ ಪ್ರಜಾಪ್ರಭುತ್ವವಾದಿ ಆಂದೋಲನ ಮಟ್ಟಹಾಕಲು ಕೋವಿಡ್‌ನ ಸಂಕಷ್ಟದ ಸಂದರ್ಭವನ್ನು ಬಳಕೆ ಮಾಡಿಕೊಳ್ಳುತ್ತಿದೆ.

ಭಾರತದ ವಿರುದ್ಧವೂ ಮತ್ತೆ ತಕರಾರು ತೆಗೆದಿರುವ ಚೀನಾ ನಮ್ಮನ್ನು ಬೆದರಿಸುವ ಚೇಷ್ಟೆಗಳನ್ನು ಮತ್ತೆ ಶುರುಮಾಡಿದೆ. ಈಗಾಗಲೇ ಭಾರತದ ವಿರೋಧದ ನಡುವೆಯೂ ಪಾಕ್ ಆಕ್ರಮಿತ ಗಿಲ್ಗಿಟ್-ಬಾಲ್ಟಿಸ್ತಾನದ ಮೂಲಕ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ನಿರ್ಮಿಸಿರುವ ಚೀನಾ ಗಿಲ್ಗೀಟ್ ಬಾಲ್ಟಿಸ್ತಾನದಲ್ಲಿ ೪೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಝೇಲಮ್ ನದಿಗೆ ಡೈಮರ್-ಭಾಷಾ ಅಣೆಕಟ್ಟನ್ನು ಕಟ್ಟಲು ನೆರವು ನೀಡಲು ಮುಂದಾಯಿತು. ೪೫೦೦ ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಈ ಜಲವಿದ್ಯುತ್ ಯೋಜನೆ ಚೀನಾ ಸರ್ಕಾರದ ವಿದ್ಯುತ್ ಕಂಪನಿ ಮತ್ತು ಪಾಕಿಸ್ತಾನ ಸೈನ್ಯದ ಗಡಿ ಕಾಮಗಾರಿ ವಿಭಾಗದ ಜಂಟಿ ಸಹಭಾಗಿತ್ವದಲ್ಲಿ ಜಾರಿಗೆ ಬರಲಿದೆ ಎನ್ನಲಾಗಿದೆ. ಭಾರತ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ.

ಇತ್ತೀಚೆಗೆ ಭಾರತದೊಂದಿಗೆ ಗಡಿ ವಿವಾದ ಎತ್ತಿದ ನೇಪಾಳ ಹೊಸ ನಕ್ಷೆಯನ್ನು ಪ್ರಕಟಿಸಿ ಉತ್ತರಾಖಂಡ ರಾಜ್ಯದ ಕಾಲಾಪಾನಿ, ಲಿಂಪಿಯುಧುರಾ ಮತ್ತು ಲಿಪುಲೇಖ್ ಪ್ರದೇಶಗಳನ್ನು ತನ್ನವೆಂದು ವಾದಿಸಿತು. ನೇಪಾಳದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಈ ಕ್ರಮದ ಹಿಂದೆ ಚೀನಾದ ಕುಮ್ಮಕ್ಕಿದೆ ಎಂದು ಬಲವಾಗಿ ಕೇಳಿಬರುತ್ತಿದೆ.

ಇಷ್ಟು ದಿವಸ ಅರುಣಾಚಲ ಪ್ರದೇಶದಲ್ಲಿ ಗಡಿತಂಟೆ ನಡೆಸುತ್ತಿದ್ದ ಚೀನಾ ಈ ಬಾರಿ ಪೂರ್ವ ಲಢಾಕ್‌ನಲ್ಲಿ ವಾಸ್ತವ ಗಡಿನಿಯಂತ್ರಣ ರೇಖೆ (Line of Actual Control)ಯ ಬಳಿ ಭಾರತ ತನ್ನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ನಡೆಸುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟುಮಾಡುವ ಸಲುವಾಗಿ ತಗಾದೆ ತೆಗೆದಿದೆ. ಗಡಿಯಲ್ಲಿ ಸಾವಿರಾರು ಚೀನಿ ಸೈನಿಕರು ಜಮಾವಣೆಗೊಂಡಿದ್ದಾರೆ. ಅವರನ್ನು ದಿಟ್ಟವಾಗಿ ತಡೆದಿರುವ ಭಾರತೀಯ ಸೈನಿಕರೊಂದಿಗೆ ಕಳೆದ ಅನೇಕ ದಿನಗಳಿಂದ ನೂಕು ನುಗ್ಗಲು ಘರ್ಷಣೆ, ಕಲ್ಲು ತೂರಾಟ ನಡೆದ ವರದಿಯಾಗಿದೆ. ಯುದ್ಧದ ಸಂಭವಿಸಬಹುದೇನೋ ಎನ್ನುವ ಪರಿಸ್ಥಿತಿ ಲಢಾಕಿನ ಗಡಿಯಲ್ಲಿ ನಿರ್ಮಾಣವಾದುದಕ್ಕೆ ಚೀನಾ ನೇರ ಕಾರಣ. ಈಗಿನ ಲಢಾಕ್ ಕೇಂದ್ರಾಡಳಿತ ಪ್ರದೇಶದ (ಹಿಂದಿನ ಜಮ್ಮು ಕಾಶ್ಮೀರ ರಾಜ್ಯ) ೪೨,೭೩೫ಚ.ಕಿಮೀ ಪ್ರದೇಶ ಈಗಾಗಲೇ ಚೀನಾದ ವಶದಲ್ಲಿದೆ. ಇದರಲ್ಲಿ ಅಕ್ಸಾಚಿನ್ ಪ್ರದೇಶದ ೩೭,೫೫೫ಚಕಿಮೀ ಪ್ರದೇಶ ೧೯೬೨ ಯುದ್ಧದಲ್ಲಿ ಆಕ್ರಮಿಸಿಕೊಂಡಿದ್ದಾದರೆ ಉಳಿದ ೫,೧೮೦ ಚಕಿಮೀ ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದ ಶಕ್ಸಗಾಮ್ ಕಣಿವೆ ಪ್ರದೇಶ ೧೯೬೩ರಲ್ಲಿ ಪಾಕಿಸ್ತಾನದಿಂದ ಉಡುಗೊರೆಯಾಗಿ ಪಡೆದದ್ದು.

ಗಡಿಯಲ್ಲಿ ಭಾರತದ ಸೈನಿಕರು ಸಮರ್ಥವಾಗಿ ಚೀನಿಯರನ್ನು ತಡೆದಿದ್ದಾರೆ, ಚೀನಾಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎನ್ನುವ ಸಂದೇಶವನ್ನು ಸರ್ಕಾರ ಕೂಡ ಸ್ಪಷ್ಟವಾಗಿ ರವಾನಿಸಿದೆ. ಗಡಿಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳೂ ನಿಲ್ಲದೇ ನಡೆಯಲಿವೆ ಎಂದು ಭಾರತ ದೃಢ ನಿಲುವು ತಾಳಿದೆ. ಹೀಗಿರುವಾಗ ದೇಶದೊಂದಿಗೆ ನಿಲ್ಲಬೇಕಾದುದು ನಾಗರಿಕರ ಕರ್ತವ್ಯವಾಗಿದೆ. ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಮತ್ತು ಆ ಮೂಲಕ ಪರೋಕ್ಷವಾಗಿ ಚೀನಾಕ್ಕೆ ಲಾಭ ಮಾಡಿಕೊಟ್ಟು ಬೆಂಬಲ ನೀಡುವುದನ್ನು ನಿಲ್ಲಿಸಬೇಕೆಂಬ ಆಂದೋಲನ ಭಾರತದೆಲ್ಲಡೆ ವೇಗ ಪಡೆದುಕೊಳ್ಳುತ್ತಿದೆ. ಒಮ್ಮೆಲೇ ಎಲ್ಲಾ ಚೀನಾ ನಿರ್ಮಿತ ವಸ್ತುಗಳನ್ನು-ಉದಾಹರಣೆಗೆ ಮೊಬೈಲ್ ಫೋನ್‌ಗಳನ್ನು ತ್ಯಜಿಸುವುದು ಕಷ್ಟವಾಗಬಹುದು. ಆದರೆ ಹಂತಹಂತವಾಗಿ ಒಂದೆರಡು ವರ್ಷಗಳ ಅವಧಿಯಲ್ಲಿ ಚೀನಾ ವಸ್ತುಗಳನ್ನು ತ್ಯಜಿಸುತ್ತ ಸ್ವದೇಶಿ ಉದ್ಯಮಗಳಿಗೆ ಪ್ರೋತ್ಸಾಹ ನೀಡುವುದು ಖಂಡಿತಾ ಸಾಧ್ಯವಿದೆ. ಉದಾಹರಣೆಗೆ ಚೀನಾದ ವಿದೇಶ ನೀತಿಯ ಸಾಧನವಾದ ಟಿಕ್‌ಟಾಕ್ ಆಪ್‌ನ್ನು ಈಗಲೇ ತೆಗೆದುಹಾಕಬಹುದು. ಸ್ವದೇಶಿ ಮತ್ತು ಆತ್ಮನಿರ್ಭರವಾಗುವ ಯಜ್ಞದಲ್ಲಿ ನಾಗರಿಕರೆಲ್ಲರೂ ಪಾಲ್ಗೊಳ್ಳಬೇಕಿದೆ.

ವಿಶ್ವದ ದೊಡ್ಡಣ್ಣನಾಗಿ ಮೆರೆಯಬೇಕೆಂಬ ಕಮ್ಯುನಿಸ್ಟ್ ಚೀನಾದ ಮಹತ್ವಾಕಾಂಕ್ಷೆ ಮತ್ತು ಈ ಉದ್ದೇಶಪೂರ್ತಿಗಾಗಿ ಚೀನಾ ಕಮ್ಯುನಿಸ್ಟ್ ಪಕ್ಷ ಅನುಸರಿಸುತ್ತಿರುವ ಮಾರ್ಗಗಳು ವಿಶ್ವಶಾಂತಿ ಮತ್ತು ಸಮತೋಲನಕ್ಕೆ ಅಪಾಯಕಾರಿಯಾಗಿವೆ. ವಿಶ್ವಶಾಂತಿಗೇ ಕಮ್ಯನಿಸ್ಟ್ ಚೀನಾದ ಮಹತ್ವಾಕಾಂಕ್ಷಿ ಧೋರಣೆ ಮಾರಕವಾಗುತ್ತಿದೆಯೇ? ಎನ್ನುವುದು ಇಲ್ಲಿ ಹುಟ್ಟುವ ಪ್ರಶ್ನೆ. ಸಣ್ಣಪುಟ್ಟ ದೇಶಗಳ ಸಾರ್ವಭೌಮತೆಯೊಂದಿಗೇ ಆಟವಾಡುವ ಚೀನಾದ ವಿದೇಶ ವ್ಯವಹಾರ ನೀತಿ ಭಾರತದಂತಹ ದೊಡ್ಡ ದೇಶದ ಆಂತರಿಕ ವಿಷಯದಲ್ಲಿ ಕೈಯಾಡಿಸುವ ಮಟ್ಟಕ್ಕೂ ಮುಂದುವರಿದಿದೆ. ಇಂತಹ ವಿಕ್ಷಿಪ್ತ ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಕೈಜೋಡಿಸುವುದು ನಾಗರಿಕರ ಕರ್ತವ್ಯ. ಅದಕ್ಕಾಗಿ ದೇಶದ ನಾಗರಿಕರ ಕೈಯಲ್ಲಿರುವ ಸಮರ್ಥ ಅಸ್ತ್ರ ಬಾಯ್ಕಾಟ್ ಚೈನಾ ಚೀನಾದ ಎಲ್ಲ ಉತ್ಪನ್ನಗಳ ಬಹಿಷ್ಕಾರ.

Saturday, April 1, 2017

ಪ್ರತಿಗಾಮಿಗಳ ಬಿಗಿಹಿಡಿತದಿಂದ ಪ್ರಗತಿಯ ಹಾದಿಗೆ ತೆರೆದುಕೊಳ್ಳುತ್ತಿದೆಯೇ ಭಾರತೀಯ ಮುಸ್ಲಿಂ ಸಮಾಜ?

(ವಿಕ್ರಮ 02/04/2017) 

ಉತ್ತರ ಪ್ರದೇಶದ ಸಹಾರಾನ್‌ಪುರ ಜಿಲ್ಲೆಯ ದೇವಬಂದ್‌ನಲ್ಲಿ ದಾರುಲ್ ಉಲೂಮ್ ಹೆಸರಿನ ಇಸ್ಲಾಂ ಅಧ್ಯಯನ ಕೇಂದ್ರವಿದೆ. ಹತ್ತೊಂಭತ್ತನೇ ಶತಮಾನದ 1866ರಲ್ಲಿ ಆರಂಭವಾದ ಈ ಕೇಂದ್ರ ಇಸ್ಲಾಂ ಸಂಪ್ರದಾಯಗಳ ವಿಷಯದಲ್ಲಿ ಕಟ್ಟರ್ ಎಂದು ಗುರುತಿಸಿಕೊಂಡಿದೆ. ಭಾರತದ ಅತ್ಯಂತ ಹಳೆಯ ಇಸ್ಲಾಂ ಅಧ್ಯಯನ ಕೇಂದ್ರಗಳಲ್ಲೊಂದಾದ ದಾರುಲ್ ಉಲೂಮ್ ಬೇರೆ ಬೇರೆ ರಾಜ್ಯಗಳಲ್ಲಿ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು ಏಳುಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ. 2011ರಲ್ಲಿ ಈ ಸಂಸ್ಥೆಯ ಉಪಕುಲಪತಿಯಾಗಿ ನಿಯುಕ್ತರಾದ ಗುಜರಾತ್ ಮೂಲದ ಗುಲಾಮ್ ಮೊಹಮ್ಮದ್ ವಸ್ತಾನವಿ ಈ ಕಟ್ಟರ್ ಸಾಂಪ್ರದಾಯಿಕ  ವಾದದಿಂದ ಸ್ವಲ್ಪ ಹೊರಬಂದು ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ, ಇಂಜಿನಿಯರಿಂಗ್, ಕಲೆ, ಸಾಹಿತ್ಯ, ಸಂಗೀತ ವಿಷಯಗಳನ್ನು ಪರಿಚಯಿಸಿ, ಇಸ್ಲಾಮಿನ ಅಧ್ಯಯನದ ಜೊತೆಗೆ ಆಧುನಿಕ ಶಿಕ್ಷಣವನ್ನೂ ನೀಡಲು ಪ್ರಯತ್ನಿಸಿದರು. ವೈಶ್ವಿಕ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣ ನೀಡುವ ಜ್ಞಾನವೂ ಅಗತ್ಯ ಎನ್ನುವುದು ಅವರ ನಂಬಿಕೆಯಾಗಿತ್ತು. ಆದರೆ ಅವರ ಜಾರಿಗೆ ತಂದ ಶಿಕ್ಷಣ ಪದ್ಧತಿ ಇಸ್ಲಾಂ ಶಿಕ್ಷಣವೇ ಎಲ್ಲಕ್ಕಿಂತ ಶ್ರೇಷ್ಠ ಎಂದು ಪ್ರತಿಪಾದಿಸುತ್ತಿದ್ದ ಮುಸ್ಲಿಂ ಮುಲ್ಲಾಗಳ ಕೆಂಗಣ್ಣಿಗೆ ಗುರಿಯಾಯಿತು. ವಸ್ತಾನವಿ ಗುಜರಾತ್ ದಂಗೆಯ ವಿಷಯದಲ್ಲಿ ನರೇಂದ್ರ ಮೋದಿಯವರ ಪರ ಮಾತನಾಡಿದರು ಎಂದು ಕುಂಟು ನೆಪ ಹೊರಿಸಿ ಅವರನ್ನು ಉಪಕುಲಪತಿ ಸ್ಥಾನದಿಂದ ಕೆಳಗಿಳಿಸಲಾಯಿತು. ಆದರೆ ಮುಂದೆ ನಡೆದ ಬೆಳವಣಿಗೆಗಳು ಮುಸ್ಲಿಂ ಸಮಾಜದ ಯುವಕರ ಬದಲಾಗುತ್ತಿರುವ ಮನೋಸ್ಥಿತಿಯನ್ನು ಮತ್ತು ಅವರ ಇಂದಿನ ಆಯ್ಕೆಗಳು ಏನು ಎನ್ನುವುದನ್ನು ಸೂಚಿಸುತ್ತದೆ. ವಸ್ತಾನವಿಯವರ ಬೆಂಬಲಕ್ಕೆ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ನಿಂತರು. ಜೊತಗೆ ಮಾಧ್ಯಮದಲ್ಲಿಯೂ ಅವರ ಪರ ಬೆಂಬಲ ವ್ಯಕ್ತವಾಯಿತು. ದಾರುಲ್ ಉಲೂಮ್‌ನ ಆಡಳಿತ ಮಂಡಳಿ ಮಜ್ಲಿಸ್ ಎ ಶೂರಾ ಬಗ್ಗಲೇ ಬೇಕಾಯಿತು. ಅವರ ಮೋದಿಪರ ಹೇಳಿಕೆಯ ಕುರಿತು ತನಿಖೆ ಆದೇಶವಾಯಿತಾದರೂ ಗುಲಾಮ್ ಮೊಹಮ್ಮದ್ ವಸ್ತಾನವಿ ದಾರುಲ್ ಉಲೂಮ್‌ನ ಉಪಕುಲಪತಿಯಾಗಿ ಪುನಃ ನಿಯುಕ್ತರಾದರು.

ಹಾಗೆ ನೋಡಿದರೆ ಮೂಲಭೂತವಾದ ಮತ್ತು ಆಧುನಿಕ ಸಾಮಾಜಿಕ ಜೀವನಕ್ಕೆ ತೆರೆದುಕೊಳ್ಳಬಯಸುವ ಇಬ್ಬಗೆಯ ಸಂಕೀರ್ಣ ವ್ಯವಸ್ಥೆ ಮುಸ್ಲಿಂ ಸಮಾಜದಲ್ಲಿ ಮೇಲುನೋಟಕ್ಕೆ ಕಾಣಸಿಗುತ್ತದೆ. ಮಧ್ಯಮ ವರ್ಗದ ಮುಸ್ಲಿಂ ಕುಟುಂಬಗಳ ಆಶೋತ್ತರಗಳು ಉಳಿದವರಿಗಿಂತ ಬೇರೆಯೇನಿಲ್ಲ. ಮತೀಯ ಕಟ್ಟರ್‌ವಾದ ಮತ್ತು ತಾರ್ಕಿಕ ಕಾರಣಗಳಿಗೆ ನಿಲುಕದ ನಂಬಿಕೆ ಮತ್ತು ಕೆಲವೇ ಕೆಲವರ ವ್ಯಾಖ್ಯಾನಗಳ ನಿಯಮಗಳ ನಿರ್ಭಂಧದಲ್ಲಿ ನಡೆಯುವ ಇಸ್ಲಾಂ ಸಮಾಜ ಈ ಹಿಡಿತದಿಂದ ಹೊರಬರಲು ಯತ್ನಿಸಿರುವುದು ಇತಿಹಾಸದಲ್ಲಿ ಅಲ್ಲಲ್ಲಿ ಕಾಣಿಸುತ್ತದೆ. ಹಾಗೆಯೇ ಪ್ರಸ್ತುತ ಕಾಲದಲ್ಲಿಯೂ ಇಂತಹ ಸನ್ನಿವೇಶವನ್ನು ಗಮನಿಸಬಹುದು.


ಉಗ್ರವಾದ ಮತ್ತು ಇಸ್ಲಾಂ
ವಿಶ್ವಶಾಂತಿಗೆ ಕಂಟಕವಾಗಿರುವ ಪ್ರಮುಖ ಸಮಸ್ಯೆಗಳಲ್ಲಿ ಮೂಲಭೂತವಾಗಿ ಇಸ್ಲಾಂ ಉಗ್ರವಾದ ಮೊದಲನೆಯದು. ಅಪಘಾನಿಸ್ತಾನದ ತಾಲಿಬಾನನಿಂದ ಮೊದಲುಗೊಂಡು, ಒಸಾಮಾ ಬಿನ್ ಲಾಡನ್‌ನ ಅಲ್ ಖೈದಾ, ಪಾಕಿಸ್ತಾನದಲ್ಲಿ ಬೇರು ಬಿಟ್ಟಿರುವ ಉಗ್ರ ಸಂಘಟನೆಗಳು, ಬಾಂಗ್ಲಾದೇಶದ ಜಮಾತೆಯಂತಹ ತೀವ್ರವಾದಿ ಸಂಘಟನೆಗಳ ಪುಂಡರು, ಯೂರೋಪಿನಲ್ಲಿ ನಿಧಾನವಾಗಿ ಬೇರಿಳಿಸುತ್ತಿರುವ ಮೂಲಭೂತವಾದ, ಜೊತೆಗೆ ಇತ್ತೀಚಿನ ಕೆಲವರ್ಷಗಳಲ್ಲಿ ಪೆಡಂಭೂತವಾಗಿ ಬೆಳದು ಭದ್ರ ನೆಲೆಯನ್ನು ಸ್ಥಾಪಿಸಿಕೊಂಡ ಇಸ್ಲಾಮಿಕ್ ಸ್ಟೇಟ್ (ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಆಂಡ್ ಇರಾಕ್ ಅಥವಾ ಐಎಸ್‌ಐಎಸ್) ಮೊದಲಾದವು ಇಸ್ಲಾಮಿನ ಜಿಹಾದ್ ಹೆಸರಿನಲ್ಲಿ ಮಾನವಕುಲವನ್ನು ವಿನಾಶದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿವೆ. ಪಾಕಿಸ್ತಾನ, ಮಧ್ಯಪ್ರಾಚ್ಯ ಮತ್ತು ಅರಬ್ ದೇಶಗಳು, ಉತ್ತರ ಆಫ್ರಿಕದ ಕೆಲವು ದೇಶಗಳು ಇಂತಹ ದುಷ್ಟಕೂಟಗಳಿಗೆ ಆಶ್ರಯವನ್ನು ನೀಡುತ್ತಿವೆ. ಹಾಗೆಯೇ ಮುಸ್ಲಿಂ ರಾಷ್ಟ್ರವಾಗಿದ್ದರೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದ ಮಲೇಷಿಯ, ಇಂಡೋನೇಷಿಯದಂತಹ ದೇಶಗಳು ಕಟ್ಟರ್ ವಹಾಬಿ ಮೂಲಭೂತವಾದದತ್ತ ವಾಲುತ್ತಿರುವುದು ಕಂಡುಬರುತ್ತಿದೆ. ಅಷ್ಟೇ ಅಲ್ಲದೇ ಚೀನಾದ  ಕಮ್ಯುನಿಸ್ಟ್ ಸರ್ಕಾರದ ಬಿಗಿಹಿಡಿತದ ಹೊರತಾಗಿಯೂ ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ನೆಲೆಸಿರುವ ಉಯ್‌ಗುರ್ ಮುಸಲ್ಮಾನ ಉಗ್ರವಾದ ಚಿಗುರುತ್ತಿದೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಐಎಸ್‌ಐಎಸ್ ಪ್ರಭಾವ ಹರಡುತ್ತಿರುವ ವಿಷಯ ವರದಿಯಾಗಿದೆ.

ಇತ್ತೀಚಿನ ಸಮಯದಲ್ಲಿ ಐಎಸ್‌ಐಎಸ್ ಪ್ರಭಾವಕ್ಕೊಳಗಾದ ಮಧ್ಯಪ್ರಾಚ್ಯ ಪ್ರದೇಶವನ್ನು ಬಿಟ್ಟರೆ ಜಿಹಾದಿ ಭಯೋತ್ಪಾದನೆ ಬಲಿಯಾದ ಇನ್ನೊಂದು ಪ್ರದೇಶ ಸ್ವಯಂ ಮತೀಯ ಉಗ್ರವಾದವನ್ನೇ ಪೋಷಿಸುತ್ತಿರುವ ಪಾಕಿಸ್ತಾನ. 2017ರ ಕಳೆದ ಮೂರು ತಿಂಗಳಿನಲ್ಲಿ ಹದಿನೈದಕ್ಕೂ ಹೆಚ್ಚು ಭಯೋತ್ಪಾದಕ ದಾಳಿಗಳು ಬಾಂಬ್ ವಿಸ್ಫೋಟಗಳು ಪಾಕಿಸ್ತಾನದಲ್ಲಿ ನಡೆದಿದ್ದು ನಾಗರಿಕರು, ಭದ್ರತಾ ಪಡೆಯ ಸಿಬ್ಬಂದಿ ಸೇರಿದಂತೆ ೩೫೦ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 2004ರಿಂದ ಪಾಕಿಸ್ತಾನದಲ್ಲಿ ನಿರಂತರ ಉಗ್ರ ಚಟುವಟಿಕೆ ನಡೆಯುತ್ತಿದ್ದು ಪ್ರತಿವರ್ಷ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 

ಇಸ್ಲಾಂ ಮೂಲಭೂತವಾದ ಅದರಲ್ಲೂ ಪಾಕಿಸ್ತಾನ ಪ್ರೇರಿತ ಗಡಿಯಾಚೆಗಿನ ಭಯೋತ್ಪಾದನೆಯನ್ನು ಭಾರತ ದಶಕಗಳಿಂದ ಎದುರಿಸುತ್ತ ಬಂದಿದೆ. ಇಸ್ಲಾಮಿಗೂ ಉಗ್ರವಾದಕ್ಕೂ ಸಂಭಂಧವಿಲ್ಲ, ಭಾರತೀಯ ಮುಸಲ್ಮಾನರು ಐಎಸ್‌ಐಎಸ್‌ನಂತಹ ಉಗ್ರ ಸಂಘಟನೆ ಸೇರಿಲ್ಲ ಎಂದು ರಾಜಕೀಯ ನೇತಾರರು ಮಾಧ್ಯiದ ಬುದ್ಧಿಜೀವಿಗಳು ಎಷ್ಟೇ ಹೇಳಿದರೂ ಕಳೆದ ಒಂದು ವರ್ಷದಲ್ಲಿ ರಾಷ್ಟ್ರೀಯ ತನಿಖಾದಳ (ಎನ್‌ಐಎ) ಪ್ರತಿಬಾರಿ ಉಗ್ರರನ್ನು ಬಂಧಿಸಿದಾಗ ಹೊರಬೀಳುವ ಮಾಹಿತಿಯನ್ನು ನೋಡಿದರೆ ಜಿಹಾದಿ ಭಯೋತ್ಪಾದಕ ಸಂಘಟನೆಗಳಿಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುವ ಸ್ಲೀಪರ್ ಸೆಲ್‌ಗಳು ಅಲ್ಲಲ್ಲಿ ಕೆಲಸ ಮಾಡುತ್ತಿರುವುದು ಹಾಗೆಯೇ ಸ್ಥಳೀಯರನ್ನೇ ಬಳಸಿಕೊಂಡು ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲು ಯೋಜನೆ ಹಾಕಿರುವುದು ಕಾಣಿಸುತ್ತದೆ. ಇದೇ ಮಾರ್ಚ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ರೇಲ್ವೆಯ ಮೇಲೆ ನಡೆದ ಉಗ್ರ ದಾಳಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಇನ್ನು ಸಾಮಾಜಿಕ ಜಾಲತಾಣಗಳನ್ನೂ ಬಳಸಿಕೊಂಡು ಭಯ ಬಿತ್ತುವ ಕೆಲಸವೂ ನಡೆಯುತ್ತಿದೆ. ಅಂತರರಾಷ್ಟ್ರೀಯ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಪ್ರಭಾವಕ್ಕೆ ಭಾರತೀಯ ಮುಸ್ಲಿಂ ಯುವಕರು ಬಲಿಯಾಗುವರೇ? ಎನ್ನುವುದು ಮುಸ್ಲಿಂ ಸಮಾಜವೇ  ಪರಿಹಾರ ಕಂಡುಹಿಡಿಯಬೇಕಾದ ಪ್ರಶ್ನೆಯಾಗಿದೆ.


ಮುಸ್ಲಿಂ ಮಹಿಳೆಯರು ಮತ್ತು ಸಮಾನತೆ
ವ್ಯಕ್ತಿಸ್ವಾತಂತ್ರ್ಯ ಮತ್ತು ಸಮಾನತೆಗಳ ವಿಷಯದಲ್ಲಿ ಮುಸ್ಲಿಂ ಮಹಿಳೆಯರಷ್ಟು ತಾರತಮ್ಯಕ್ಕೊಳಗಾದ ಗುಂಪು ಇನ್ನೊಂದು ಇರಲಿಕ್ಕಿಲ್ಲ. ಕೆಲವು ಶ್ರೀಮಂತ ವರ್ಗದ ಉದಾಹರಣೆಗಳನ್ನು ನೀಡಿ ಮುಸ್ಲಿಂ ಮಹಿಳೆಯರಿಗೆ ಸಮಾನ ಆಧಿಕಾರ ಇದೆ ಎಂದು ವಾದಿಸಲಾಗುತ್ತದೆಯಾದರೂ ಇಸ್ಲಾಂ ಸಮಾಜದ ದೊಡ್ಡ ವರ್ಗ ಮಹಿಳೆಯರನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಿರುವುದೂ ಅಷ್ಟೇ ಸತ್ಯ. ಉಡುಗೆ ತೊಡುಗೆಗಳಿಂದ ಹಿಡಿದು ಮಹಿಳೆಯರ ಸಾರ್ವಜನಿಕ ವ್ಯವಹಾರದವರೆಗೆ ಮತೀಯ ವಿಧಿನಿಷೇಧಗಳನ್ನು ಪುರುಷಪ್ರಧಾನ ಕಟ್ಟರ್‌ವಾದಿ ಮುಸ್ಲಿಂ ಸಮಾಜ ಹೇರುತ್ತಲೇ ಇದೆ. ಮಾವನಿಂದ ಅತ್ಯಾಚಾರಕ್ಕೊಳಗಾದ ಮಹಿಳೆಗೆ ಗಂಡನಿಂದ ವಿಚ್ಛೇದನ ನೀಡಿಸಿ, ಇನ್ನು ಗಂಡನನ್ನು ಮಗನಂತೇ ಕಾಣಬೇಕೇಂದು ತಲೆಬುಡವಿಲ್ಲದ ತೀರ್ಪಿತ್ತಂತಹ ಘಟನೆಗಳೂ ನಡೆದಿವೆ.

ಉದಾಹರಣೆಗೆ ವಿವಾಹದ ವಿಷಯವನ್ನೇ ತೆಗೆದುಕೊಳ್ಳಬಹುದು. ಇಸ್ಲಾಮಿನಲ್ಲಿ ವಿವಾಹ ಎನ್ನುವುದು ಪುರುಷ ಮತ್ತು ಮಹಿಳೆಯ ನಡುವಿನ ಒಂದು ಒಪ್ಪಂದವೇ ಹೊರತು ಭಾರತೀಯ ಪದ್ಧತಿಯಂತೆ ಒಂದು ಪವಿತ್ರ ಬಂಧನವಲ್ಲ. ಮುಸ್ಲಿಂ ಕಾನೂನಿನಂತೆ ಓರ್ವ ಪುರುಷ ಒಟ್ಟಿಗೆ ನಾಲ್ಕು ಪತ್ನಿಯರನ್ನು ಹೊಂದಲು ಅವಕಾಶವಿದೆ. ಆತ ಇನ್ನೊಂದು ಸ್ತ್ರೀಯನ್ನು ಮದುವೆಯಾಗಲು ಬಯಸಿದರೆ, ನಾಲ್ವರಲ್ಲಿ ಓರ್ವಳನ್ನು ತ್ಯಜಸಿ ಇನ್ನೊಂದು ವಿವಾಹವಾಗಬಹುದು. ವಿವಾಹವಾಗಲು ಸ್ತ್ರೀಪುರುಷರಿಗೆ 18 ಮತ್ತು ೨೧ವರ್ಷ ವಯಸ್ಸಾಗಿರಬೇಕು ಎಂಬ ಕಾನೂನಿದ್ದರೂ ಮುಸ್ಲಿಂ ವೈಯಕ್ತಿಕ ಕಾನೂನಿನಂತೆ ೧೫ ವರ್ಷಕ್ಕೆ ಮುಸ್ಲಿಂ ಹುಡುಗಿಯ ಮದುವೆ ಮಾಡಬಹುದು. ಒಂದು ಸೀಮಿತ ಅವಧಿಗಷ್ಟೇ ಮದುವೆಯಾಗಿರಬಹುದಾದ ಮುಟಾ ವಿವಾಹವೂ ಇಸ್ಲಾಮಿನಲ್ಲಿದೆ. ಮುಸ್ಲಿಂ ಪುರುಷ ತ್ರಿವಳಿ ತಲಾಖ್ ಮೂಲಕ ಯಾವುದೇ ಕಾರಣ ಹಾಗೂ ಜೀವನಾಂಶವನ್ನೂ ನೀಡದೆ ಪತ್ನಿಗೆ ವಿಚ್ಛೇದನ ನೀಡಬಹುದು. 2011 ಜನಗಣತಿಯ ಅಂಕಿಅಂಶಗಳ ಪ್ರಕಾರ 1000 ಮದುವೆಗಳಲ್ಲಿ ವಿಚ್ಛೇದನದ ಪ್ರಮಾಣ ರಾಷ್ಟ್ರೀಯ ಸರಾಸರಿ 3.1ರಷ್ಟು ಇದ್ದರೆ ಮುಸಲ್ಮಾನರಲ್ಲಿ 5.63ರಷ್ಟಿದೆ. ಅವರಲ್ಲಿ 20-34 ವರ್ಷ ವಯೋಮಾನದ ಮಹಿಳೆಯರೇ ಹೆಚ್ಚು ಎನ್ನುವುದು ಇನ್ನೂ ಕಳವಳಕಾರಿಯಾದ ವಿಷಯವಾಗಿದೆ. ಬುರ್ಖಾದ ಪರದೆಯ ಹಿಂದೆ ತಮ್ಮ ಜೀವಮಾನವನ್ನು ಕಳೆಯುವ ಮಹಿಳೆಂiರಿಗೆ ಸಿಗುವ ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಏನು ಎಷ್ಟು? ಎನ್ನುವುದನ್ನು ಮುಸಲ್ಮಾನ ಸಮಾಜವೇ ಹೇಳಬೇಕು.

ಒಂದಿಷ್ಟು ಧನಾತ್ಮಕ ಸೂಚನೆಗಳು
ಇವೆಲ್ಲದರ ನಡುವೆ ಭಾರತೀಯ ಮುಸ್ಲಿಂ ಸಮಾಜ ಬದಲಾವಣೆಯಾಗುತ್ತಿರುವ ಹಾಗೂ ಸಂಪ್ರದಾಯವಾದಿಗಳ ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲುತ್ತಿರುವ ಕೆಲವೊಂದು ಧನಾತ್ಮಕ ಸೂಚನೆಗಳೂ ಕಾಣುತ್ತವೆ.

ಇತ್ತೀಚೆಗೆ ಕನ್ನಡದ ಪ್ರಸಿದ್ಧ ದೂರದರ್ಶನ ವಾಹಿನಿ ನಡೆಸುವ ಸರೆಗಮಪ ಎಂಬ ಹೆಸರಿನ ರಿಯಾಲಿಟಿ ಶೋನಲ್ಲಿ ತನ್ನ ಸುಮಧುರ ಕಂಠದಿಂದ ಭಕ್ತಿಗೀತೆಯನ್ನು ಹಾಡಿ ಜನಮೆಚ್ಚುಗೆ ಗಳಿಸಿದ ಸುಹಾನಾ ಸೈಯದ್ ಎಂಬ ಹುಡುಗಿ ಕಟ್ಟರ್ ವಾದಿಗಳ ಕೆಂಗಣ್ಣಿಗೆ ಗುರಿಯಾದಳು. ಸಾಮಾಜಿಕ ಜಾಲತಾಣಗಳಲ್ಲಿ ಅವಳನ್ನು ಬೇಕಾಬಿಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಯಿತು. ಅವೆಲ್ಲವನ್ನೂ ಧೈರ್ಯಗುಂದದೇ ಎದುರಿಸಿದ ಸುಹಾನಾ ಹಾಡುವುದನ್ನು ನಿಲ್ಲಿಸಲಿಲ್ಲ. ಅವಳ ಕುಟುಂಬವೂ ಸುಹಾನಾಳ ಬೆಂಬಲಕ್ಕೆ ನಿಂತಿತು. ಕರ್ನಾಟಕ ರಾಜ್ಯದ  ಮಂತ್ರಿ ಯು ಟಿ ಖಾದರ್ ಸೇರಿದಂತೆ ಮುಸಲ್ಮಾನ ಸಮಾಜದ ಅನೇಕ ಪ್ರಗತಿಪರರೂ ಅವಳ ಬೆಂಬಲಕ್ಕೆ ನಿಂತರು.

ಕರ್ನಾಟಕದ ಸುಹಾನಾಳಂತೆ ಆಸ್ಸಾಮಿನ ೧೬ವರ್ಷದ ಹುಡುಗಿ ನಾಹಿದ್ ಆಫ್ರಿನ್ ಕೂಡ ಸಾರ್ವಜನಿಕ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಡಿದ್ದಕ್ಕಾಗಿ ಮೌಲ್ವಿಗಳ ಕ್ರೋಧಕ್ಕೆ ಗುರಿಯಾದಳು. ಪ್ರಸಿದ್ಧ ಇಂಡಿಯನ್ ಐಡಲ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಎರಡನೇ ಸ್ಥಾನ ವಿಜೇತಳಾದ ನಾಹಿದ್ ಕಳೆದ ಮಾರ್ಚ ೨೫ರಂದು ಆಸ್ಸಾಮಿನ ಉಡಲಿ ಸೊನಾಯ್ ಬೀಬಿ ಕಾಲೇಜ್ ಆವರಣದಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಹಾಡುವುದನ್ನು ನಿಷೇಧಿಸ ೪೫ ಮೌಲ್ವಿಗಳು ಫತ್ವಾ ಹೊರಡಿಸಿದರು. ’ಮಸೀದಿ, ಮದರಸಾ, ಖಬರ್‌ಸ್ಥಾನ, ಈದಗಾ ಮೈದಾಗಳು ಇರುವ ಪ್ರದೇಶದ ಆವರಣದಲ್ಲಿ ಸಂಗೀತ ಕಾರ್ಯಕ್ರಮ ನಡೆಸುವುದು ಶರಿಯಾಕ್ಕೆ ವಿರುದ್ಧ, ಇದರಿಂದ ನಮ್ಮ ಮುಂದಿನ ತಲೆಮಾರುಗಳು ಅಲ್ಲಾನ ಕ್ರೋಧಕ್ಕೆ ಗುರಿಯಾಗುತ್ತಾರೆ ಎಂದು ಫತ್ವಾ ಹೊರಡಿಸಲಾಗಿತ್ತು. ಇದಕ್ಕೆ ಬಗ್ಗದ ನಾಹಿದ್ ಸಂಗೀತ ನನಗೆ ದೇವರು ನೀಡಿದ ಉಡುಗೊರೆ, ಆದ್ದರಿಂದ ಹಾಡದೇ ಇರುವುದ ದೇವರಿಗೆ ಮಾಡುವ ಅವಮಾನ’ ಎಂದು ಕಡಕ್ ಉತ್ತರ ನೀಡಿದಳು. ಇವರಿಬ್ಬರಿಗೂ ಪ್ರಗತಿಪರ ಮುಸ್ಲಿಂ ಸಮಾಜವೂ ಸೇರಿದಂತೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಖ್ಯಾತ ಚಲನಚಿತ್ರ ಗೀತಕಾರ ಚಿಂತಕ ಜಾವೇದ್ ಆಖ್ತರ್ ಸಾಂಪ್ರದಾಯವಾದಿಗಳನ್ನು ಬಲವಾಗಿ ಖಂಡಿಸಿದರು.

ಕೆಲವು ದಿನಗಳ ಹಿಂದೆ ಲಖನೌನ ಠಾಕುರ್‌ಗಂಜ್‌ನಲ್ಲಿ ಅಡಗಿ ಕೂತ ಉಗ್ರರ ತಂಡವನ್ನು ಭೇದಿಸಲು ನಡೆದ ಭಯೋತ್ಪಾದನ ನಿಗ್ರಹ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಉಗ್ರ ಸೈಫುಲ್ಲಾಹ್‌ನ ಶವವನ್ನು ಪಡೆಯಲು ಸ್ವಯಂ ಆತನ ತಂದೆಯಾದ ಸರ್ತಾಜ್ ನಿರಾಕರಿಸಿದರು. ಎರಡೂವರೆ ತಿಂಗಳ ಹಿಂದೆ ಮನೆ ಬಿಟ್ಟಿದ್ದ ಮಗ ಭಯೋತ್ಪಾದಕನಾಗಿದ್ದನ್ನು ತಿಳಿದ ಆತ ಓರ್ವ ದೇಶದ್ರೋಹಿ ನನ್ನ ಮಗನಾಗಲಾರ. ನಾವು ಮೊದಲು ಭಾರತೀಯರು. ನಾನು ಹುಟ್ಟಿದ್ದು ಇಲ್ಲಿ, ನಮ್ಮ ಪೂರ್ವಜರೂ ಇಲ್ಲಿಯೇ ಹುಟ್ಟಿದ್ದು ಎಂದರು.

ತ್ರಿವಳಿ ತಲಾಖ್‌ನಿಂದ ಮುಸ್ಲಿಂ ಮಹಿಳೆಯರಿಗೆ ಬಹಳ ಅನ್ಯಾಯವಾಗುತ್ತಿದ್ದು ಅದನ್ನು ಕಾನೂನಾತ್ಮಕವಾಗಿ ರದ್ದುಗೊಳಿಸಬೇಕೆಂಬ ಬಲವಾದ ಬೇಡಿಕೆ ಮುಸಲ್ಮಾನ ಸಮಾಜದಿಂದಲೇ ಕೇಳಿಬರುತ್ತಿದೆ. ಇತ್ತಿಚೆಗೆ ದೆಹಲಿಯಲ್ಲಿ ಸೇರಿ ಪ್ರದರ್ಶನ ನಡೆಸಿದ ದೇಶದಾದ್ಯಂತದಿಂದ ಬಂದ ಮುಸ್ಲಿಂ ಮಹಿಳೆಯರು ಪ್ರಧಾನಿ ಮೋದಿಯವರನ್ನು ತ್ರಿವಳಿ ತಲಾಖ್ ಕೊನೆಗೊಳಿಸಲು ಕಾನೂನು ತರುವಂತೆ ಒತ್ತಾಯಿಸಿದರು. ತ್ರಿವಳಿ ತಲಾಖ್ ವಿರುದ್ಧ ಮುಸ್ಲಿಂ ರಾಷ್ಟ್ರೀಯ ಮಂಚ್ ಎನ್ನುವ ಸಂಘಟನೆ ನಡೆಸಿದ ಸಹಿ ಅಭಿಯಾನವನ್ನು ಹತ್ತು ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಬೆಂಬಲಿಸಿದ್ದಾರೆ. ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಎನ್ನುವ ಸಂಘಟನೆ ನಡೆಸಿದ ಸಮೀಕ್ಷೆಯ ಪ್ರಕಾರ ಶೇ 92.1ರಷ್ಟು ಮಹಿಳೆಯರು ತ್ರಿವಳಿ ತಲಾಖ್ ನಿಷೇಧವನ್ನು ಬೆಂಬಲಿಸಿದ್ದಾರೆ, ಶೇ. 91.7 ಮಹಿಳೆಯರು ಬಹುಪತ್ನಿತ್ವವನ್ನು ವಿರೋಧಿಸಿದ್ದು ಮತ್ತು ಶೇ. 83.3ರಷ್ಟು ಮಹಿಳೆಯರು ಸಮಾನತೆ ಮತ್ತು ನ್ಯಾಯ ಸಿಗಲು ಮುಸ್ಲಿಂ ವಿವಾಹ ಕಾನೂನನ್ನು ಲಿಖಿತ ರೂಪಕ್ಕೆ ತರಬೇಕು ಎಂದು ಬಯಸುವುದು ಕಂಡುಬಂದಿದೆ. ಮುಸ್ಲಿಂ ಸಮಾಜದ ಅನೇಕ ಯುವಕರು ಮತ್ತು ಚಿಂತಕರು ತ್ರಿವಳಿ ತಲಾಖ್ ಮತ್ತು ಬಹುಪತ್ನಿತ್ವದ ವಿರುದ್ಧ ದನಿಯೆತ್ತುತ್ತಿರುವುದನ್ನು ಗಮನಿಸಬಹುದು.

ಇತ್ತೀಚೆಗೆ ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಮುಸ್ಲಿಂ ಜನಸಂಖ್ಯಾ ಬಾಹುಳ್ಯದ ಮತ್ತು ಮುಸ್ಲಿಂ ಮತದಾರರೇ ನಿರ್ಣಾಯಕವಾಗಿರುವ ೪೨ ವಿಧಾನಸಭಾ ಕ್ಷೇತ್ರಗಳ ಪೈಕಿ 32ರಲ್ಲಿ ಉಳಿದ ಪಕ್ಷಗಳು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಹೊರತಾಗಿಯೂ ಭಾರತೀಯ ಜನತಾ ಪಾರ್ಟಿ ಬಿಜೆಪಿಯ ಅಭ್ಯರ್ಥಿಗಳು ದೊಡ್ಡ ಮತಗಳ ಅಂತರದಿಂದ ಜಯಗಳಿಸಿದರು. ಅದರಲ್ಲೂ ಮುಸ್ಲಿಂ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಿದ್ದಾಗಿ ಅನೇಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಯನ್ನು ಸಾಮಾನ್ಯವಾಗಿ ಮುಸ್ಲಿಂ ವಿರೋಧಿಯೆಂದು ಪ್ರಚಾರ ಮಾಡಿದ್ದನ್ನು ನಾವು ಗಮನಿಸಿರಬಹುದು. ಈ ಫಲಿತಾಂಶ ಇದುವರೆಗೂ ತಥಾಕಥಿತ ಸೆಕ್ಯುಲರ್ ಪಕ್ಷಗಳ ಮತಬ್ಯಾಂಕ್ ಆಗಿದ್ದ ಮುಸ್ಲಿಂ ಸಮಾಜ ಜಾಗೃತವಾಗಿದ್ದು ದೇಶಹಿತದಲ್ಲಿ ಮೌಲ್ವಿಗಳ ಫತ್ವಾವನ್ನು ಮೀರಿ ಮತಹಾಕುತ್ತಿರುವುದನ್ನು ಸೂಚಿಸುತ್ತದೆ.

ಪ್ರತ್ಯೇಕತಾವಾದಿಗಳೂ ಮತ್ತು ಪಾಕ್ ಮೂಲದ ಜಿಹಾದಿ ಭಯೋತ್ಪಾದಕರ ಬೆದರಿಕೆಗಳ ಹೊರತಾಗಿಯೂ ಭಾರತೀಯ ಸೇನೆಯನ್ನು ಸೇರಲು ಕಾಶ್ಮೀರದ ಯುವಕರು ಸಾಲುಗಟ್ಟಿ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಮಾರ್ಚನಲ್ಲಿ ಬಾರಾಮುಲ್ಲಾದಲ್ಲಿ ನಡೆದ ಸೇನಾಭರ್ತಿ ಮೇಳದಲ್ಲಿ ಸಾವಿರಾರು ಕಾಶ್ಮೀರಿ ಯುವಕರು ಪಾಲ್ಗೊಂಡರು.


ಮುನ್ನೋಟ
ಈ ಮೇಲೆ ಉಲ್ಲೇಖಿಸಿದ ಘಟನೆಗಳು ಒಂದಿಷ್ಟು ಸಮಾಧಾನಕರವಾಗಿದ್ದರೂ ಮುಸ್ಲಿಂ ಸಮಾಜ ಎದುರಿಸಬೇಕಾದ ಸವಾಲುಗಳು ಇನ್ನೂ ಬಹಳವಾಗಿವೆ. ಮುಸ್ಲಿಂ ಸಮಾಜದ ಒಳಗಿಂದಲೇ ಕಟ್ಟರ್ವಾದಿಗಳು ಮತ್ತು ಮೂಲಭೂತವಾದಿಗಳ ವಿರುದ್ಧ ಹೋರಾಡುವ ಶಕ್ತಿ ಸಜ್ಜಾಗಬೇಕಿದೆ. ಒಂದುಕಡೆ ಅಮೆರಿಕ ಬೆಂಬಲದ ನ್ಯಾಟೋ, ಕುರ್ದಿಶ್ ಮತ್ತು ಇರಾಕಿ ಸೇನೆ ಹಾಗೂ ಇನ್ನೊಂದು ಕಡೆಗೆ ರಷ್ಯಾ ಇರಾನ್ ಬೆಂಬಲದ ಸಿರಿಯಾ ಬಲದ ದಾಳಿಗೆ ಐಎಸ್‌ಐಎಸ್ ಸೌಧ ನಿಧಾನವಾಗಿ ಕುಸಿದು ಬೀಳುತ್ತಿದೆ, ಆದರೆ ಅಲ್ಲಿ ನೆಲೆ ಕಳೆದುಕೊಂಡು ಈ ಪಿಡುಗು ದೊಡ್ಡ ಸಂಖ್ಯೆಯ ಮುಸಲ್ಮಾನ ಜನಸಂಖ್ಯೆ ಇರುವ ಏಷಿಯಾದತ್ತ ಮುಖ ಮಾಡುತ್ತಿವೆ. ಈ ಐಎಸ್‌ಐಎಸ್‌ನ ಪ್ರಭಾವಕ್ಕೆ ಮುಸಲ್ಮಾನ ಯುವಕರು ಬಲಿಯಾಗದಂತೆ ತಡೆಯುವ ಜವಾಬ್ದಾರಿಯೂ ಇದೆ.

ಅಮೇರಿಕ ಪ್ಯೂ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನ ಹೇಳುವಂತೆ ೨೦೫೦ರ ಹೊತ್ತಿಗೆ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯುಳ್ಳ ದೇಶವಾಗಲಿದೆ. ಭಾರತದ ಜನಸಂಖ್ಯೆಯ ಶೇ ೭೭ರಷ್ಟು ಹಿಂದೂಗಳೇ ಇದ್ದರೂ ಸುಮಾರು ೩೧ ಕೋಟಿಯಷ್ಟಾಗು ಮುಸ್ಲಿಂ ಜಸಂಖ್ಯೆ ೨೦೫೦ರ ಹೊತ್ತಿಗೆ ಭಾರತದಲ್ಲಿರಲಿದೆ. ಆದರೆ ಶೇ೧೮ ರಷ್ಟು ಜನಸಂಖ್ಯೆಯಿದ್ದರೂ ಅಲ್ಪಸಂಖ್ಯಾತರೆಂದೇ ಗುರುತಿಸಲ್ಪಡುವ ಮುಸ್ಲಿಂ ಸಮುದಾಯ ಸಾಂಪ್ರದಾಯಿಕ ಕಟ್ಟರ್‌ಪಂಥದಿಂದ ಬಿಡಿಸಿಕೊಂಡು ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳದಿದ್ದರೆ ದೊಡ್ಡ ಗಂಡಾಂತರವನ್ನು ತಂದೊಡ್ಡವುದರಲ್ಲಿ ಸಂಶಯವಿಲ್ಲ. ಏಕೆಂದರೆ ಇಷ್ಟು ದೊಡ್ಡ ಸಮುದಾಯ ಒಂದು ಸಣ್ಣ ಪ್ರತಿಶತ ಭಾಗ ಮತೀಯ ಮೂಲಭೂತವಾದ ಭಯೋತ್ಪಾದನೆಯ ಮಾರ್ಗ ಹಿಡಿದರೂ ಸಮಾಜದ ಶಾಂತಿ ಕೆಡಿಸಲು ಸಾಕು. ದಶಕಗಳಿಂದ ನಡೆದಿರುವ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಉಗ್ರವಾದ, ಕೆಲವು ವರ್ಷಗಳ ಹಿಂದೆ ಆಸ್ಸಾಂನಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಮತ್ತು ಪಶ್ಚಿಮ ಬಂಗಾಳದ ಇತ್ತೀಚಿನ ಬೆಳವಣಿಗೆಗಳು ಇದಕ್ಕೆ ಉದಾಹರಣೆಗಳು. 

ಆದ್ದರಿಂದ ಮುಸ್ಲಿಮರ ಹಕ್ಕಿನ ಪರವಾಗಿ ಹೋರಾಡುತ್ತೇವೆ ಎನ್ನುವ ಬುದ್ಧಿಜೀವಿಗಳು, ತಥಾಕಥಿತ ಸೆಕ್ಯುಲರ್‌ವಾದಿ ರಾಜಕೀಯ ಪಕ್ಷಗಳು ಗಮನಹರಿಸಬೇಕಾದುದು ಮುಸ್ಲಿಂ ಸಮಾಜ ಅಲ್ಪಸಂಖ್ಯಾತರೆಂದು ಪ್ರತ್ಯೇಕ ಸವಲತ್ತುಗಳನ್ನು ನೀಡುವ ಕಡೆಗಲ್ಲ. ಬದಲಾಗಿ ಮುಸಲ್ಮಾನ ಸಮಾಜದಲ್ಲೇ ಇರುವ, ಅಲ್ಲಿಂದಲೇ ಹುಟ್ಟಿ ಬರುವ ಪ್ರಗತಿಶೀಲ ದನಿಗಳನ್ನು ಪ್ರೋತ್ಸಾಹಿಸುವುದು, ಸುಧಾರಣೆಗೊಳಪಡಿಸಿ ಆಧುನಿಕ ಕಾಲಕ್ಕೆ ತಮ್ಮ ಸಮಾಜವನ್ನು ತಯಾರುಮಾಡಲು ಪ್ರೇರಣೆ ಪ್ರೋತ್ಸಾಹ ನೀಡುವುದು,  ಮತೀಯ ತೀವ್ರವಾದ  ಮತ್ತು ಜಿಹಾದಿ ಉಗ್ರವಾದಗಳ ಕಡೆಗೆ ಮುಸ್ಲಿಂ ಯುವಜನರು ಆಕರ್ಷಿತರಾಗುವುದನ್ನು ತಡೆಯಲು ಕ್ರಮ ಕೈಗೊಳ್ಳುವುದು ಇಂದಿನ ಆದ್ಯತೆಯಾಗಬೇಕು. ಏಕೆಂದರೆ ಕಾಲಕಾಲಕ್ಕೆ ಪರಿಷ್ಕರಣೆಗೆ ಒಳಗಾಗದ ಮತೀಯ ನಿಯಮಗಳ ಚೌಕಟ್ಟಿನ ಮಿತಿಯ ಹೊರಗೆ ವಿಚಾರಮಾಡದ ಹೊರತು ಭಾರತೀಯ ಇಸ್ಲಾಮ್ ಸಮಾಜದ ಉತ್ಕರ್ಷ ಅಸಾಧ್ಯ, ಹಾಗೆಯೇ ದೇಶದ ಪ್ರಗತಿಯೂ ಸಹ.

 
 

ನವಭಾರತದ ರಾಜಕೀಯಕ್ಕೆ ಮುನ್ನುಡಿ ಬರೆದಿದೆ ಪಂಚರಾಜ್ಯ ಚುನಾವಣೆ

(ಪುಂಗವ 01/04/2017)

ಕೇವಲ ಹೊಸ ಸರ್ಕಾರಗಳನ್ನು ಆರಿಸುವುದಷ್ಟೇ ಚುನಾವಣೆಗಳ ಕೆಲಸವಲ್ಲ. ರಾಜಕೀಯ ಪಕ್ಷಗಳ ಬಲಾಬಲಗಳನ್ನು ಅಳೆಯವುದರ ಜೊತೆಗೆ ಒಟ್ಟಾರೆಯಾಗಿ ಸಮಾಜದ ಮನಸ್ಥಿತಿ(ಪಬ್ಲಿಕ್ ಮೂಡ್), ಅಪೇಕ್ಷೆ ಮತ್ತು ಆದ್ಯತೆಗಳು ಯಾವ ದಿಸೆಯಲ್ಲಿವೆ ಎಂದು ತಿಳಿಯಲೂ ಚುನಾವಣಾ ಫಲಿತಾಂಶಗಳು ಮಾನದಂಡವಾಗುತ್ತವೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ವಿಷಯ ಸ್ಫಷ್ಟವಾಗುತ್ತದೆ. ಅದರಲ್ಲೂ ವಿಶೇಷವಾಗಿ ಜನಸಂಖ್ಯಾ ದೃಷ್ಟಿಯಿಂದ ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶ ರಾಜ್ಯದ ಫಲಿತಾಂಶ ಮತದಾರರನ್ನು ಸಮೀಪಿಸುವಲ್ಲಿ ರಾಜಕೀಯ ಪಕ್ಷಗಳ ಧೋರಣೆ ಮತ್ತು ವಿಶ್ಲೇಷಣೆಯ ವಿಧಾನವನ್ನೇ  ಬದಲಾಯಿಸಿದೆ ಎಂದರೆ ಅತಿಶಯವಲ್ಲ.

ರಾಜ್ಯವಾರು ಚುನಾವಣಾ ಫಲಿತಾಂಶವನ್ನು ಗಮನಿಸಿದರೆ ಒಂದು ರೀತಿಯ ಸಾಮಾನ್ಯ ನಮೂನೆ ಕಂಡುಬರುತ್ತದೆ.
ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ಈ ರಾಜ್ಯಗಳಲ್ಲಿ ಆಯ್ಕೆಯಾದ ಪಕ್ಷಗಳು ಆಯಾ ರಾಜ್ಯಗಳಲ್ಲಿ 3/4ಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ರಾಜ್ಯವ್ಯಾಪಿ ಬೆಂಬಲ ಪಡೆದದ್ದು ಕಂಡುಬರುತ್ತದೆ. (ಉಪ್ರ: ಬಿಜೆಪಿ+ 324/403, ಉತ್ತರಾಖಂಡ: ಬಿಜೆಪಿ 57/70, ಪಂಜಾಬ್: ಕಾಂಗ್ರೆಸ್ 77/117).

ಪರ್ವತರಾಜ್ಯ ಉತ್ತರಾಖಂಡದ ಫಲಿತಾಂಶ ಅಸ್ಥಿತ ಸರ್ಕಾರ ಮತ್ತು ಕಾಂಗ್ರೆಸ್ ದುರಾಡಳಿತದ ವಿರುದ್ಧ ಮತದಾರ ನೀಡಿದ ತೀರ್ಪು ಎಂದೇ ಹೇಳಲಾಗುತ್ತದೆ. ಪಂಜಾಬದಲ್ಲಿ ನಿರೀಕ್ಷಿತ ಫಲಿತಾಂಶ ವ್ಯಕ್ತವಾಗಿದ್ದು ಅಧಿಕಾರದಲ್ಲಿರುವ ಪಕ್ಷದ ವಿರುದ್ಧ ನೀಡಿದ ಫಲಿತಾಂಶವಾಗಿದೆ. ಜೊತೆಗೆ ಅಕಾಲಿದಳದ ವಂಶವಾದ, ರಾಜ್ಯವನ್ನು ಕ್ಯಾನ್ಸರಿನಂತೆ ಕಾಡುತ್ತಿರುವ ಡ್ರಗ್ ಮಾಫಿಯ ವಿರುದ್ಧ ನೀಡಿದ ಮತವಾಗಿದೆ. ಪಂಜಾಬ್ ಗೆಲುವನ್ನು ಕಾಂಗ್ರೆಸ್ ಪಕ್ಷದ ಗೆಲುವು ಅನ್ನುವುದಕ್ಕಿಂತ ಕ್ಯಾ. ಅಮರಿಂದರ್ ಸಿಂಗ್ ಗೆಲುವು ಎನ್ನುವುದು ಹೆಚ್ಚು ಸೂಕ್ತ, ಅಕಾಲಿದಳದಿಂದಲೇ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ರಾಜವಂಶಸ್ಥ ಅಮರಿಂದರ್ ಸಿಂಗ್ ಭ್ರಷ್ಟಾಚಾರದ ಕಳಂಕ ಇಲ್ಲದ ವ್ಯಕ್ತಿ ಎನ್ನುವ ಇಮೇಜ್ ಹೊಂದಿದ್ದಾರೆ.

ಕರಾವಳಿಯ ಪುಟ್ಟ ರಾಜ್ಯ ಗೋವಾದಲ್ಲಿ ಮುಖ್ಯಮಂತ್ರಿ ಪರ್ಸೇಕರ್ ಸೇರಿದಂತೆ ಬಿಜೆಪಿ ಸರ್ಕಾರದ ೮ರಲ್ಲಿ ೬ ಮಂತ್ರಿಗಳು ಚುನಾವಣೆಯಲ್ಲಿ ಸೋತಿದ್ದಾರೆ. ಯಾವುದೇ ಪಕ್ಷಕ್ಕೆ ಬಹುಮತ ನೀಡದ ಫಲಿತಾಂಶ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿದೆ. ಜೊತೆಗೆ ಶೇಕಡಾವಾರು ಮತಗಳಿಕೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಬಿಜೆಪಿ ಜನಪ್ರಿಯ ಪಕ್ಷವಾಗಿ ಹೊರಹೊಮ್ಮಿದೆ.

ಇನ್ನೊಂದು ಪ್ರಮುಖ ಅಂಶವೆಂದರೆ ಪಂಜಾಬಿನಲ್ಲಿ ಸರ್ಕಾರ ಸ್ಥಾಪಿಸುವ ಕನಸು ಕಾಣುತ್ತಿದ್ದ ಆಮ್ ಆದ್ಮೀ ಪಕ್ಷ ಗೆದ್ದ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಶೆಕಡಾವಾರು ಮತಗಳಿಕೆಯಲ್ಲಿ ದೂರದ ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ನು ಗೋವಾ ರಾಜ್ಯದಲ್ಲಿ ಒಂದೂ ಅಭ್ಯರ್ಥಿಯನ್ನು ಗೆಲ್ಲಲಾಗದೇ ಅತೀ ಕಡಿಮೆ ಮತವನ್ನು ಆಪ್ ಪಡೆದಿದೆ.  ಇದರೊಂದಿಗೆ ಅರಾಜಕ ರಾಜಕಾರಣವನ್ನು ಈ ದೇಶದ ಮತದಾರ ಸಹಿಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಮಣಿಪುರ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ್ನು ತಿರಸ್ಕರಿಸಿರುವ ಶೇಕಡಾವಾರು ಮತಗಳಿಕೆಯಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. (ಬಿಜೆಪಿ : 34.2%, ಕಾಂಗ್ರೆಸ್ 31.2%). ಒಟ್ಟೂ 60ರಲ್ಲಿ 21 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ಮೊದಲ ಬಾರಿಗೆ ನಾರ್ಥ ಈಸ್ಟರ್ನ ಡೆಮೊಕ್ರಾಟಿಕ್ ಅಲಯನ್ಸ್ (ಓಇಆಂ) ಮಿತ್ರಪಕ್ಷಗಳೊಂದಿಗೆ ಮಣಿಪುರದಲ್ಲಿ ಸರ್ಕಾರ ಸ್ಥಾಪಿಸಿದೆ. ಇದರೊಂದಿಗೆ ಮೇಘಾಲಯ ಮತ್ತು ತ್ರಿಪುರವನ್ನು ಹೊರತುಪಡಿಸಿ ಉಳಿದ ಕಡೆ ಬಿಜೆಪಿ ಆಡಳಿತ ಸ್ಥಾಪನೆಯಾಗಿದ್ದು ದಶಕಗಳಿಂದ ನಿರ್ಲಕ್ಷಕ್ಕೊಳಗಾಗಿರುವ ಸಪ್ತ ಸೋದರಿಯರ ನಾಡು ಎಂದೂ ಕರೆಯಲ್ಪಡುವ ಈಶಾನ್ಯ ಭಾರತ ಪ್ರದೇಶದಲ್ಲಿ ಅಭಿವೃದ್ಧಿಯ ಆಶಾಭಾವನೆ ಜೀವ ತಳೆದಿದೆ.

ಜನಬಾಹುಳ್ಯದಿಂದ ದೇಶದ ಅತಿದೊಡ್ಡ ರಾಜ್ಯವಾದ  ಉತ್ತರಪ್ರದೇಶ ರಾಷ್ಟ್ರರಾಜಕೀಯದಲ್ಲಿ ಪ್ರಮುಖಸ್ಥಾನದಲ್ಲಿದೆ. ದೆಹಲಿಯ ಅಧಿಕಾರದ ಗದ್ದುಗೆಯ ಮಾರ್ಗ ಉತ್ತರಪ್ರದೇಶದ ಮೂಲಕವೇ ಹಾದುಹೊಗುವದು ಎನ್ನುವದು ರಾಜಕೀಯ ಪಡಸಾಲೆಯಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಮಾತು. ಕಾರಣ ರಾಷ್ಟ್ರ ರಾಜಕಾರಣದಲ್ಲಿ ಸ್ಥಿತ್ಯಂತರಗಳನ್ನೇ ಸೃಷ್ಟಿಸಬಲ್ಲ ವಿಷಯಗಳಾದ ವಿಸ್ತೃತ ಮತ್ತು  ಫಲವತ್ತಾದ ಗಂಗಾ ನದಿಮುಖಜ ಭೂಮಿಯಲ್ಲಿನ ಕೃಷಿಕರ ಕೋಟಲೆಗಳಿಂದ ಮೊದಲ್ಗೊಂಡು ನೆರೆಯ ಪಾಕಿಸ್ತಾನ, ನೇಪಾಳಗಳೊಡನೆ ಭಾರತದ ಸಂಬಂಧ, ಗೋಮಾಂಸ ವ್ಯಾಪಾರದ ಸಾವಿರಾರು ಕೋಟಿ ವ್ಯವಹಾರ, ಹಿಂದೂಗಳ ಶ್ರದ್ಧಾಕೇಂದ್ರ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯಮಂದಿರದ ನಿರ್ಮಾಣ, ಅಧಿಕಾರಾರೂಢ ಸಪಾದ ಕೊನೆಗಾಣದ ಪರಿವಾರವಾದ ಮತ್ತು  ಬಸಪಾದ ಜಾತಿ ರಾಜಕಾರಣ, ಹದಗೆಟ್ಟಿದ್ದ ರಾಜ್ಯದ ಕಾನೂನು ಸುವ್ಯವಸ್ಥೆ, ಮುಗಿಲುಮುಟ್ಟಿದ್ದ ಮುಸ್ಲಿಂ ಓಲೈಕೆ ಹೀಗೆ ಹತ್ತು ಹಲವಾರು ವಿಷಯಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡು ಚುನಾವಣೆಗೆ ತಯಾರಾಗಿದ್ದ ರಾಜ್ಯವದು. ಈ ಪ್ರಮುಖ ರಾಜ್ಯದಲ್ಲಿ ಗೆಲುವು ಸಾಧಿಸಲು ರಾಜಕೀಯ ಪಕ್ಷಗಳು ಶತಾಯಗತಾಯ ಎಲ್ಲ ತರಹದ ತಂತ್ರಗಳನ್ನೂ ನಡೆಸಿದವು.

ಆದರೆ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸಿದರೆ ಒಂದಿಷ್ಟು ಅಂಶಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ರಾಜ್ಯದ ಮತದಾರನ ಒಲವು ಜಾತಿಮತಗಳ ವಿಭಜನೆ ಅಥವಾ ಪೊಳ್ಳು ಆಶ್ವಾಸನೆಗಿಂತ ಇದುವರೆಗೆ ಕೇಂದ್ರ ಸರ್ಕಾರದ ಜನಪರ ಆಡಳಿತದಿಂದ ಆಗುತ್ತಿರುವ ಪರಿವರ್ತನೆ, ಓರ್ವ ಸಮರ್ಥ ನಾಯಕನಾಗಿ ಹೊರಹೊಮ್ಮಿರುವ ಪ್ರಧಾನಿ ಮೋದಿಯವರ ವ್ಯಕ್ತಿತ್ವ, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಗತಶೀಲ ಸ್ಥಿರ ಸರ್ಕಾರವನ್ನು ಸ್ಥಾಪಿಸಬಲ್ಲ ಪಕ್ಷದ ಕಡೆಗಿದ್ದದ್ದು ಸ್ಪಷ್ಟವಾಗಿ ಕಾಣುತ್ತದೆ. ಉದಾಹರಣೆಗೆ ಸ್ವಾತಂತ್ರದ 7 ದಶಕಗಳ ನಂತರವೂ ರಾಜ್ಯದ 1529 ವಿದ್ಯುತ್ ಸಂಪರ್ಕರಹಿತ ಹಳ್ಳಿಗಳ ಪೈಕಿ 1464 ಹಳ್ಳಿಗಳಿಗೆ ಬೆಳಕುಕಾಣಿಸಿದ ಕೇಂದ್ರ ಸರ್ಕಾರದ ಕೆಲಸ ಇಂದು ಗುರುತಿಸಲ್ಪಡುತ್ತಿದೆ. ಉಜ್ವಲಾ ಯೋಜನೆಯ ಅನ್ವಯ ಬಡ ಮಧ್ಯಮ ವರ್ಗದ ಕುಟುಂಬಗಳೂ ಗ್ಯಾಸ್ ಸಂಪರ್ಕ ಪಡೆದು ಮಹಿಳೆಯರು ಒಲೆಯ ಹೊಗೆ ಸೇವನೆಯಿಂದ ಮುಕ್ತವಾದರು. ಇಂತಹ ಜನಪರ ಯೋಜನೆಗಳು ಸಾಮಾನ್ಯರಲ್ಲಿ ಜನಹಿತದ ಪಕ್ಷ ಯಾವುದು ಎಂದು ಚಿಂತಿಸುವಂತೆ ಮಾಡಿದವು. ನೋಟು ಅಮಾನ್ಯೀಕರಣ, ಸರ್ಜಿಕಲ್ ಸ್ಟ್ರೈಕ್ ಮೊದಲಾದ ದಿಟ್ಟ ನಡೆಗಳನ್ನು ತೆಗೆದುಕೊಂಡಿದ್ದು ಕೇಂದ್ರದ ಆಡಳಿತ ಪಕ್ಷ ಸಮರ್ಥ ಸರ್ಕಾರ ನೀಡಬಲ್ಲದು ಎಂದು ಮತದಾರರಲ್ಲಿ ವಿಶ್ವಾಸ ಮೂಡಿಸಿತ್ತು.

ಹಾಗೆಯೇ ಚುನಾವಣಾ ರಣತಂತ್ರ ರೂಪಿಸಿ ಅದನ್ನು ಕಾರ್ಯಗತಗೊಳಿಸಿ ಯಶಸ್ವಿಗೊಳಿಸುವಲ್ಲಿ ಬಿಜೆಪಿ ಪಕ್ಷಾಧ್ಯಕ್ಷ ಅಮಿತ್ ಶಾ ಮತ್ತು ಅವರ ತಂಡದ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಸಿದ ಅವಿರತ ಕಾರ್ಯ ಶ್ಲಾಘನೀಯವಾಗಿದೆ. ಪ್ರಧಾನಿ ಮೋದಿಯವರೂ ಸೇರಿದಂತೆ ತಾರಾ ಪ್ರಚಾರಕ ರ‍್ಯಾಲಿಗಳಿಂದ ಹಿಡಿದು ಬೂತ್ ನಿರ್ವಹಣೆಯವರೆ ವ್ಯವಸ್ಥಿತ ಕಾರ್ಯತಂತ್ರದಿಂದ ಬಿಜೆಪಿ ಇಂತಹ ಬೃಹತ್ ಜನಾದೇಶ ಪಡೆಯಲು ಸಾಧ್ಯವಾಯಿತು. ಹಾಗೆಯೇ ಬಿಜೆಪಿ ಮತ್ತೊಮ್ಮೆ ಅಖಿಲ ಭಾರತೀಯ ರಾಜಕೀಯದಲ್ಲಿ ಪ್ರಬಲವಾಗಿ ಸ್ಥಾಪಿತವಾಯಿತು.

ಒಟ್ಟಾರೆಯಾಗಿ ಪಂಚರಾಜ್ಯಗಳ ಚುನಾವಣೆಯಿಂದ ಸಾಂಪ್ರದಾಯಿಕ, ಜಾತಿ ಮತ್ತು ಮತಬ್ಯಾಂಕ್ ಆಧಾರಿತ ರಾಜಕಾರಣದಿಂದ ಅಭಿವೃದ್ಧಿಶೀಲ ಹಾಗೂ ದೇಶಹಿತದ ಕಾರ್ಯಕ್ರಮಗಳನ್ನು ಮುಂದಿಡುವ ಪಕ್ಷಗಳನ್ನು ಬೆಂಬಲಿಸುವುದು ಸ್ಪಷ್ಟವಾಗಿದೆ. ಹಾಗೆಯೇ ದೇಶದ ಮತದಾರರೂ ಪ್ರಬುದ್ಧರಾಗುತ್ತಿದ್ದಾರೆ.


ಬಿಜೆಪಿಯತ್ತ ಮುಸ್ಲಿಮರು?


2011ರ ಜನಗಣತಿಯ ಪ್ರಕಾರ ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ 19.3% ಮುಸ್ಲಿಮರಿದ್ದಾರೆ. ಸಾಮಾನ್ಯವಾಗಿ ಇದುವರೆಗಿನ ಚುನಾವಣೆಗಳ ಮತದಾನ ಮಾದರಿಗಳನ್ನು ಅವಲೋಕಿಸಿದರೆ ಮುಸಲ್ಮಾನ ಸಮುದಾಯ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ತಥಾಕಥಿತ ಸೆಕ್ಯುಲರ್ ಪಕ್ಷಗಳ ಮತಬ್ಯಾಂಕ್ ಆಗಿದೆ. ಮತ್ತು ಮುಸ್ಲಿಂ ಸಮಾಜ ಮುಲ್ಲಾ ಮೌಲ್ವಿಗಳ ಫತ್ವಾದ ಆದೇಶದಂತೆ ದೊಡ್ಡ ಪ್ರಮಾಣದಲ್ಲಿ ಒಂದು ಪಕ್ಷಕ್ಕೇ ಗುಂಪು ಗುಂಪಾಗಿ ಮತ ನೀಡಿದ್ದು ಕಂಡು ಬರುತ್ತದೆ. ಹಾಗೆಯೇ ಉಳಿದ ಸಮುದಾಯಗಳಿಗೆ ಹೋಲಿಸಿದರೆ ಮುಸ್ಲಿಮರ ಮತದಾನದ ಪ್ರಮಾಣವೂ ಹೆಚ್ಚು. ಭಾರತೀಯ ಜನತಾ ಪಕ್ಷವನ್ನು ಹಿಂದುತ್ವವಾದಿ ಮುಸ್ಲಿಂ ವಿರೋಧಿ ಎಂದೇ ಪ್ರಚಾರ ಮಾಡಲಾಗುತ್ತದೆ. ಹೀಗಿರುವ ಹೊರತಾಗಿಯೂ ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯದ ಮತ್ತು ಆ ಸಮುದಾಯವೇ ನಿರ್ಣಾಯಕವಾಗಿರುವ ಮುಝಾಪರ್‌ನಗರ, ಶಾಮ್ಲಿ, ಸಹರಾನ್‌ಪುರ, ಬರೇಲಿ, ಬಿಜ್‌ನೊರ್, ಮೀರತ್‌ನ ಸರ್ದಾನಾ, ಗೋರಖ್‌ಪುರದ ಖಲೀದಾಬಾದ್, ಮೊರಾದಾಬಾದ್ ಮೊದಲಾದ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಇದನ್ನು ಅನೇಕ ರೀತಿಯಲ್ಲಿ ರೀತಿಯಲ್ಲಿ ಅರ್ಥೈಸಬಹುದು. ಒಂದು ಇದುವರೆಗಿನ ನಡೆದುಬರುತ್ತಿರುವ ಮುಸ್ಲಿಂ ತುಷ್ಟೀಕರಣ ಮತ್ತು ಮತಬ್ಯಾಂಕ್ ವಿರುದ್ಧ ಧೃವೀಕರಣಗೊಂಡು ಬಿಜೆಪಿಯ ಪರವಾಗಿ ಮತ ಚಲಾವಣೆಯಾಗಿರಬಹುದು. ತಥಾಕಥಿತ ಸೆಕ್ಯುಲರ್ ಪಕ್ಷಗಳು ಇಂತಹ ಕ್ಷೇತ್ರಗಳಲ್ಲಿ ಮುಸಲ್ಮಾನ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದುದರ ಪರಿಣಾಮ ಮುಸ್ಲಿಂ ಮತವಿಭಜನೆ ಮತ್ತು ಹಿಂದೂ ಮತಗಳ ಏಕತ್ರೀಕರಣದಿಂದ ಬಿಜೆಪಿಗೆ ಲಾಭವಾಗಿರಬಹುದು. ಇವೆಲ್ಲವೂ ಅಲ್ಲದೇ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮುಸ್ಲಿಂ ಸಮುದಾಯದ ಮತದಾರರು, ಅದರಲ್ಲೂ ಮುಸ್ಲಿಂ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಿದ್ದು ಕಂಡು ಬಂದಿದೆ. ಉದಾಹರಣೆಗೆ ಶೇ. 65ರಷ್ಟು ಮುಸಲ್ಮಾನ ಜನಸಂಖ್ಯೆಯುಳ್ಳ ಸಪಾ ಅಥವಾ ಬಸಪಾಗಳ ಭದ್ರಕೋಟೆಯಾದ ದೇವಬಂದ್ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ 29 ಸಾವಿರಕ್ಕು ಹೆಚ್ಚು ಅಂತರದಿಂದ ಜಯಗಳಿಸಿಸದ್ದಾರೆ. ಬಿಜೆಪಿಯ ಅಭ್ಯರ್ಥಿ 1.02ಲಕ್ಷದಷ್ಟು ಮತಗಳಿಸಿದ್ದರೆ, ಸಮೀಪದ ಪ್ರತಿಸ್ಪರ್ಧಿಗಳಾದ ಸಪಾ ಮತ್ತು ಬಸಪಾ ಆಭ್ಯರ್ಥಿಗಳು ಗಳಿಸಿದ ಒಟ್ಟೂ ಮತ 1.28ಲಕ್ಷದಷ್ಟು, ಉಳಿದ ಎಲ್ಲ ಅಭ್ಯರ್ಥಿಗಳು ಗಳಿಸಿದ ಒಟ್ಟೂ ಮತ ಸುಮಾರು 3ಸಾವಿರ. ಮುಸ್ಲಿಂ ಮತದಾರರೂ ಬಿಜೆಪಿಯನ್ನು ಬೆಂಬಲಿಸದ ಹೊರತು ಈ ಕ್ಷೇತ್ರದಲ್ಲಿ ಗೆಲ್ಲುವುದು ಅಸಾಧ್ಯ. ಮುಸಲ್ಮಾನ ಸಮಾಜ ಜಾಗೃತಗೊಂಡಿದ್ದು ಮತೀಯ ಮತಬ್ಯಾಂಕ ರಾಜನೀತಿಗೆ ಬಲಿಯಾಗದೇ ಪ್ರಗತಿಯ ದಾರಿಯಲ್ಲಿ ನಡೆಯುವ ರಾಜಕೀಯವನ್ನು ಬೆಂಬಲಿಸುತ್ತಿರುವುದನ್ನು ಇದು ತೋರಿಸುತ್ತದೆ.

ಹಿಂದೂ ಹೃದಯ ಸಾಮ್ರಾಟನಾದ ಮರಾಠಿ ಮಾಣೂಸ್‌

 (ವಿಕ್ರಮ - 25 ಜನವರಿ 2026) ಸುದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿ ನಿರಂತರ ಸಕ್ರಿಯರಾಗಿದ್ದು, ಜೊತೆಗೆ ಪ್ರಸ್ತುತರೂ ಆಗಿದ್ದು ತಮ್ಮ ಬದುಕಿನ ನಂತರವೂ ಪ್ರಭಾವಿಯಾಗಿರು...