Wednesday, June 29, 2016

ವಿಶ್ವದಂಗಳದಲ್ಲಿ ಭಾರತದ ಹೆಜ್ಜೆಗುರುತುಗಳು

(ಪುಂಗವ  01/07/2016)

     ಇಂದಿನ ವೈಶ್ವಿಕ ಸನ್ನಿವೇಶದಲ್ಲಿ ಯಾವುದೇ ದೇಶವು ಇನ್ನೊಂದು ದೇಶದ ಮೇಲೆ ಅವಲಂಬಿಸದೇ, ಪರಸ್ಪರ ಸಹಕಾರವಿಲ್ಲದೇ, ಒಂದು ಇನ್ನೊಂದರ ಪ್ರಭಾವಕ್ಕೊಳಗಾಗದೇ ಸರ್ವಸ್ವತಂತ್ರವಾಗಿ ತನ್ನ ಆಗುಹೋಗುಗಳನ್ನು ನಿರ್ವಹಿಸುವುದು ಅಸಾಧ್ಯ. ಜಾಗತೀಕರಣವು ಆಳವಾಗುತ್ತಿರುವಂತೆ ತನ್ನ ಆಂತರಿಕ ನೀತಿಗಳನ್ನು ವೈಶ್ವಿಕ ಆಯಾಮದಲ್ಲಿ ನೋಡುವುದು, ಅದಕ್ಕನುಗುಣವಾಗಿ ತನ್ನ ವಿದೇಶೀ ನೀತಿಯನ್ನು ರೂಪಿಸುವುದು ಪ್ರತಿಯೊಂದು ದೇಶಕ್ಕೂ ಅನಿವಾರ್ಯ. ಅದರಲ್ಲೂ ಭಾರತದಂತಹ ಅಘಾದ ಜನಬಾಹುಳ್ಯ, ಸಾಮಾಜಿಕ ವೈವಿಧ್ಯ, ಭೌಗೋಳಿಕ ವಿಸ್ತಾರ, ಆರ್ಥಿಕ ಪ್ರಗತಿಯ ತುರ್ತು, ಹೊರದೇಶಗಳಿಗೆ ವಲಸೆ ಹೋದ ವಿಶಾಲ ಜನಸಮೂಹವುಳ್ಳ ದೇಶದಲ್ಲಿ ವಿದೇಶೀ ನೀತಿ ಸರಿಯಾದ ದಿಕ್ಕಿನಲ್ಲಿ ಸಾಗುವುದು ಅತ್ಯಂತ ಮಹತ್ವವಾಗಿದೆ. 

     ಬಾಹ್ಯ ವಾತಾವರಣವನ್ನು ರಾಷ್ಟ್ರೀಯ ಹಿತಾಸಕ್ತಿಗೆ ಅನುಕೂಲಕರವಾಗಿ ರೂಪಿಸಿಕೊಳ್ಳವುದರ ಮೇಲೆ ಭಾರತದ ದೇಶೀಯ ಪ್ರಗತಿಯ ಪ್ರಯತ್ನದ ಯಶಸ್ಸು ಅವಲಂಬಿತವಾಗಿದೆ ಎನ್ನವುದು ಪ್ರಥಮ ಪ್ರಧಾನಿ ನೆಹರೂರವರಿಂದ ಹಿಡಿದು ಇದುವರೆಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಎಲ್ಲ ನೇತಾರರರಿಗೂ ಅರ್ಥವಾಗಿದ್ದರೂ, ವಿಶ್ವದಲ್ಲಿ ಭಾರತದ ಪ್ರಭಾವ ಮತ್ತೆ ಮುಂಚೂಣಿಗೆ ಬರುವಂತೆ ವಿದೇಶಾಂಗ ವ್ಯವಹಾರವನ್ನು ನಿರೂಪಿಸವವಲ್ಲಿ ಇದುವರೆಗಿನ ಸರ್ಕಾರಗಳಿಗೆ ನಿರೀಕ್ಷಿತ ಯಶಸ್ಸು ದೊರಕಿರಲಿಲ್ಲ. ದೇಶದ ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಸ್ಥಿತಿಗಳ ಜೊತೆಗೆ ದೃಢ ನಿರ್ಧಾರ ಕೈಗೊಳ್ಳಬಲ್ಲ ಸಾಮರ್ಥ್ಯವುಳ್ಳ ನಾಯಕತ್ವದ ಕೊರತೆಯೂ ಇದಕ್ಕೆ ಕಾರಣವಿರಬಹುದು.
     ಆದರೆ ಕಳೆದ ಎರಡು ವರ್ಷಗಳಲ್ಲಿ ಭಾರತದ ಬಗ್ಗೆ ಪ್ರಪಂಚದ ದೇಶಗಳ ಅಭಿಪ್ರಾಯದಲ್ಲಿ ಧನಾತ್ಮಕ ಧೋರಣೆ, ಬೇರೆ ಬೇರೆ ದೇಶಗಳು ಭಾರತದೊಡನೆ ಪರಸ್ಪರ ಸಹಕಾರ ಹಾಗೂ ವ್ಯವಹಾರ ವರ್ಧಿಸುವಲ್ಲಿ ತೋರಿಸುತ್ತಿರುವ ಆಸಕ್ತಿ, ವೈಶ್ವಿಕ ನಿರ್ಣಯಗಳಲ್ಲಿ ಭಾರತದ ಪಾತ್ರ, ಆರ್ಥಿಕ ಬೆಳವಣಿಗೆಯ ದರದಲ್ಲಿ ಪ್ರಥಮ ಸ್ಥಾನದಲ್ಲಿ ನಿಂತಿರುವ ಭಾರತಕ್ಕೆ ಹರಿದು ಬರುತ್ತಿರುವ ಬಂಡವಾಳ ಹೂಡಿಕೆಗಳು, ವಿಶ್ವದೆಲ್ಲೆಡೆ ಹರಡಿರುವ ಭಾರತೀಯ ಮೂಲದ ಜನರಲ್ಲಿ ಮಾತೃದೇಶದ ಕುರಿತು ಹೆಚ್ಚುತ್ತಿರುವ ಪ್ರೀತಿ ಇವನ್ನೆಲ್ಲ ಗಮನಿಸಿದಾಗ ವಿಶ್ವದ ದೊಡ್ಡಣ್ಣನಾಗಿ ಮೆರೆಯುತ್ತಿರುವ ಅಮೇರಿಕ ಮತ್ತು ಅದರೊಂದಿಗೆ ಪೈಪೋಟಿಗಿಳಿದಿರುವ ಚೀನಾ ದೇಶಗಳ ಮಧ್ಯ ಮುನ್ನಡೆಯುತ್ತಿರುವ ಶಕ್ತಿಯಾಗಿ (ಟeಚಿಜiಟಿg ಠಿoತಿeಡಿ) ಭಾರತ ರೂಪುಗೊಳ್ಳುತ್ತಿರುವುದು ಗೋಚರವಾಗುತ್ತದೆ.

ಆರಂಭದ ಹೆಜ್ಜೆಗಳು
     ಹೊಸ ಸರ್ಕಾರದ ಪ್ರಮಾಣವಚನ ಸಮಾರಂಭಕ್ಕೆ ಸಾರ್ಕ ದೇಶದ ಪ್ರಮುಖರಿಗೆ ಆಹ್ವಾನ ತನ್ಮೂಲಕ ನೆರೆ ಹೊರೆಯ ಸಂಬಂಧ ವರ್ಧನೆಗೆ ನಾಂದಿ. ಪ್ರಧಾನಿಯಾದ ಬಳಿಕೆ ಮೊದಲ ವಿದೇಶಿ ಯಾತ್ರೆಗಾಗಿ ಭೂತಾನ್ ದೇಶದ ಪ್ರವಾಸ ಕೈಗೊಂಡಿದ್ದು ದಕ್ಷಿಣ ಏಷಿಯಾ ದೇಶಗಳ ನೇತೃತ್ವ ವಹಿಸುವ ಭಾರತದ ಇರಾದೆಯನ್ನು ತೋರಿಸುತ್ತದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಭಾಂಗ್ಲಾದೇಶದ ಗಡಿವಿವಾದ ಮತ್ತು ವಸತಿಗಳ ವಿನಿಮಯ ವಿವಾದವನ್ನು ಬಗೆಹರಿಸಿದ್ದು ಮಹತ್ವದ್ದಾಗಿದೆ.

ವಿಶ್ವದಲ್ಲಿ ಭಾರತೀಯ ವಿಚಾರಗಳಿಗೆ ಮನ್ನಣೆ
      ಮಾಹಿತಿ ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಯಲ್ಲಿರುವಂತೆಯೇ, ಯೋಗ, ಆಯುರ್ವೇದಗಳಿಗೆ ವೈಶ್ವಿಕ ಮನ್ನಣೆ ದೊರೆತಿದೆ. ಪ್ರಧಾನಿ ಮೋದಿ  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತ ಜೂನ್ ೨೧ರಂದು ಅಂತರಾಷ್ಟ್ರೀಯ ಯೋಗ ದಿನದ ಆಚರಣೆ ಮಾಡುವ ಪ್ರಸ್ತಾಪಕ್ಕೆ ನೂರೈವತ್ತಕ್ಕೂ ಹೆಚ್ಚು ದೇಶಗಳು ಬೆಂಬಲ ಸೂಚಿಸಿದ್ದು ಕಳೆದ ವರ್ಷ ವಿಶ್ವದೆಲ್ಲಡೆ ಯೋಗದ ವಾತಾವರಣ ಹರಡಿದೆ. ಅದಕ್ಕಿಂತ ಇಮ್ಮಡಿ ಉತ್ಸಾಹ ಈ ವರ್ಷವೂ ಕಾಣುತ್ತಿದೆ. ಹಾಗೆಯೇ ಹೆಚ್ಚು ಹೆಚ್ಚು ವಿದೇಶೀ ಮೂಲದ ಜನರು ಭಾರತೀಯ ಜೀವನಶೈಲಿಯತ್ತ ಆಕರ್ಷಿತರಾಗುತ್ತಿದ್ದಾರೆ.
        ಭಯೋತ್ಪಾದನೆ ವಿಷಯದಲ್ಲಿ ದೃಢವಾದ ಕ್ರಿಯಾತ್ಮಕ ಅಭಿಪ್ರಾಯ  ರೂಪಿಸುವುದು, ಹವಾಮಾನ ಬದಲಾವಣೆ, ಸೈಬರ್ ಅಪರಾಧಗಳು, ನ್ಯೂಕ್ಲಿಯರ್ ಎನರ್ಜಿ  ವಿಷಯಗಳ ನೀತಿರೂಪಿಸುವಲ್ಲಿ  ಸಕ್ರಿಯ ಪಾತ್ರ ವಹಿಸಿದುದು, ವಿಶ್ವಸಂಸ್ಥೆಯ ಸುಧಾರಣೆಗಳು, ವಿಶ್ವ ವ್ಯಾಪಾರ ಸಂಸ್ಥೆ (Wಖಿಔ) ಮಾತಕತೆ ಮುಂತಾದ ವಿಷಯಗಳಲ್ಲಿ ಭಾರತ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದೆ.
     ಸೋಲಾರ ಶಕ್ತಿಯ ಬಳಕೆಯ ಕುರಿತು ಸಂಶೋಧನೆ ನಡೆಸುವ ನೂರಕ್ಕೂ ಹೆಚ್ಚು ದೇಶಗಳು ಹಾಗೂ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಸದಸ್ಯರಾಗಿರುವ ಗುಂಪಿಗೆ ಭಾರತ ನೇತೃತ್ವ ವಹಿಸಿದೆ.
ಅಪಘಾನಿಸ್ತಾನ, ಬಾಂಗ್ಲಾದೇಶ, ಮಂಗೋಲಿಯ, ನೇಪಾಳ, ಭೂತಾನ್ ಮುಂತಾದ ನೆರೆ ಹೊರೆಯ ದೇಶಗಳ ಅಭಿವೃದ್ಧಿಯಲ್ಲಿ ನೆರವಾಗುವ ಮೂಲಕ ಪ್ರಾದೇಶಿಕ ಅಭಿವೃದ್ಧಿಗೆ ಒತ್ತು ನಿಡಿದೆ.

ವಿವಿಧ ದೇಶಗಳ ಸಂಬಂಧ ಮತ್ತು ಸಹಕಾರದಲ್ಲಿ  ಪ್ರಗತಿ
      ಭಾರತ ಸರ್ಕಾರದ ಸಕ್ರಿಯ ವಿದೇಶೀ ನೀತಿಯಿಂದಾಗಿ ವಿವಿಧ ದೇಶಗಳ ಸಖ್ಯದಲ್ಲಿ ಲಾಭವಾಗಿದ್ದು ಕೇವಲ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಮಾತ್ರವಲ್ಲ ರಕ್ಷಣೆ, ಮಿಲಿಟರಿ ಸಹಕಾರ, ಸಾಮಾಜಿಕ ಅಭಿವೃದ್ಧಿಯ ವಿಷಯಗಳಲ್ಲೂ ಗಣನೀಯ ಅನುಕೂಲವಾಗಿದೆ.
        ವ್ಯಾಪಾರಿ ಜಗತ್ತಿನಲ್ಲಿ ಭಾರತದ ಬಗ್ಗೆ ಧನಾತ್ಮಕ ಧೋರಣೆ ಬೆಳೆದ ಪರಿಣಾಮ ವಿದೇಶೀ ನೇರ ಬಂಡವಾಳದ ಹೂಡಿಕೆಯ ಹರಿವು ಹೆಚ್ಚಾಗಿದ್ದು ಇಂದು ಭಾರತ ಅತಿಹೆಚ್ಚು ವಿದೇಶೀ ಬಂಡವಾಳ ಹೂಡಿಕೆಯಾಗುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಹಾಗೆಯೇ ಆರ್ಥಿಕ ಅಭಿವೃದ್ಧಿ ದರದಲ್ಲಿ ಅತಿಹೆಚ್ಚು ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಜಪಾನ್ ದೇಶ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ವೇ ಯೋಜನೆ ಸೇರಿದಂತೆ ಅಪಾರ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಹಾಗೆಯೇ ಫ್ರಾನ್ಸ್ ಸ್ಮಾರ್ಟ ಸಿಟಿಗಳ ನಿರ್ಮಾಣದಲ್ಲಿ ಸಹಕಾರ ನೀಡಲಿದೆ. ಅಮೇರಿಕ ದೇಶದೊಂದಿಗೆ ರಕ್ಷಣಾ ಸಂಭಂಧಿತ ವ್ಯವಹಾರದಲ್ಲಿ ವೇಗದಲ್ಲಿ ಪ್ರಗತಿಯಾಗಿತ್ತಿದ್ದು ಪರಿಣಾವಾಗಿ ಹಿಂದೂ ಮಹಾಸಾಗರ ಮತ್ತು ಸುತ್ತಲಿನ ಪ್ರದೇಶದ ರಕ್ಷಣೆಯ ವಿಷಯದಲ್ಲಿ ಭಾರತ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ. ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಭಾರತದಲ್ಲಿ ಯುದ್ಧ ವಿಮಾನಗಳನ್ನು ತಯಾರಿಸಲು ಬೋಯಿಂಗ್ ಮುಂತಾದ ಸಂಸ್ಥೆಗಳು ಮಾತುಕತೆ ನಡೆಸಿವೆ. ಭಾರತದ ಸಾಂಸ್ಕೃತಿಕ ಪ್ರಭಾವಕ್ಕೊಳಗಾಗಿರುವ ಪೂರ್ವದ ದೇಶಗಳ ಸಂಭಂಧ ಇನ್ನೂ ನಿಕಟವಾಗಿದೆ.
         ಇತ್ತೀಚೆಗೆ ಅಪಘಾನಿಸ್ತಾನ್ ಭೇಟಿ ನೀಡಿದ ಮೋದಿ ಹೇರತ್ ಪ್ರದೇಶದಲ್ಲಿ ಭಾರತದ ಸಹಕಾರದಲ್ಲಿ ನಿರ್ಮಿಸಿದ ಸಲ್ಮಾ ಅಣೆಕಟ್ಟನ್ನು ಅಪಘಾನಿಸ್ತಾನಕ್ಕೆ ಅರ್ಪಿಸಿದರು. 42ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿರುವ ಈ ಅಣೆಕಟ್ಟು ೭೫ ಸಾವಿರ ಹೆಕ್ಟೇರಿನಷ್ಟು ಭೂಮಿಯನ್ನು ನೀರಾವರಿಗೆ ತರುತ್ತದೆ. ಹಾಗೆಯೇ ಇರಾನ್ ಪ್ರವಾಸದ ವೇಳೆ ಚಬಹರ್ ಬಂದರನ್ನು ಅಭಿವೃದ್ಧಿಪಡಿಸುವ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದರು ಈ ಬಂದರು ಅಪಘಾನಿಸ್ತಾನಕ್ಕೆ ಇರಾನಿನ ಮುಖಾಂತರ ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ ಹಾಗೆಯೇ ಭಾರತಕ್ಕೆ ಮಧ್ಯ ಏಷಿಯ ದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ.
       ಪೃಥ್ವಿಯ ಮೇಲೆ ಕ್ಷಿಪಣಿಗಳ ಹರಡುವುದನ್ನು ನಿಯಂತ್ರಿಸುವ ಮಿಸೈಲ್ ಟೆಕ್ನೊಲೊಜಿ ಕಂಟ್ರೋಲ್ ಗ್ರುಪ್‌ನ ಮೂವತ್ತೈದನೇ ಸದಸ್ಯನಾಗಿ ಭಾರತ ಸೇರ್ಪಡೆಯಾಗಿದೆ. ಇದು ಪರಮಾಣು ಇಂಧನವನ್ನು ಪೋರೈಸುವ ನ್ಯೂಕ್ಲಿಯರ್ ಎನರ್ಜಿ ಸಪ್ಲಯರ್ ಸಮೂಹಕ್ಕೆ ಭಾರತ ಸೇರ್ಪಡೆಯಾಗಲು ಹತ್ತಿರವಾದಂತೆ. ಮುಂದುವರೆದು ನ್ಯೂಕ್ಲಿಯರ್ ಸಮೂಹಕ್ಕೆ ಭಾರತವನ್ನು ಸೇರಿಸಕೊಳ್ಳಲು ಅಮೇರಿಕಾ, ರಷಿಯ, ಯುನೈಟೆಡ್ ಕಿಂಗ್‌ಡಮ್, ಮೆಕ್ಸಿಕೋ, ಸ್ವಿಟ್ಜರಲೆಂಡ್ ಮೊದಲಾದ ಅನೇಕ ಸದಸ್ಯ ರಾಷ್ಟ್ರಗಳು ಬೆಂಬಲ ಸೂಚಿಸಿವೆ.


ಭಾರತೀಯ ಮೂಲದ ವಲಸಿಗರು
      2015ರ ಏಪ್ರಿಲ್ ತಿಂಗಳಿನಲ್ಲಿ ಯೆಮೆನ್ ದೇಶದಲ್ಲಿ ಸೌದಿ ಅರೇಬಿಯ ಮತ್ತು ಮಿತ್ರದೇಶಗಳು ಸೈನಿಕ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ನಿರಾಶ್ರಿತರಾದ ಭಾರತೀಯ ಮೂಲದ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನರು ಮತ್ತು ನಲವತ್ತೊಂದು ದೇಶಗಳ ಒಂಭೈನೂರಕ್ಕೂ ಹೆಚ್ಚು ಜನರನ್ನು ಭಾರತ ರಕ್ಷಿಸಿತು. ಆಪರೇಶನ್ ರಾಹತ್ ಹೆಸರಿನಲ್ಲಿ   ಯುದ್ಧಪ್ರದೇಶದಿಂದ ಜನರನ್ನು ಸಂರಕ್ಷಿಸುವ ಇಂತಹ ಅಪಾಯಕಾರಿ ಕಾರ್ಯಾಚರಣೆ ಸಡೆಸುವ ಎದೆಗಾರಿಕೆ ತೋರಿದ ಭಾರತೀಯ ಸೇನೆ ವಿಶ್ವದ ಶ್ಲಾಘನೆಗೆ ಪಾತ್ರವಾಯಿತು. ಅಮೇರಿಕ ಹಾಗೂ ಯೂರೋಪಿನ ಬೇರೆ ಬೇರೆ ದೇಶಗಳೂ ತಮ್ಮ ದೇಶದ ನಾಗರಿಕರ ರಕ್ಷಣೆಗಾಗಿ ಭಾರತವನ್ನು ಕೇಳಿಕೊಂಡವು.
       ಅಷ್ಟೇ ಅಲ್ಲದೇ ಪ್ರಪಂಚದ ಯಾವುದೇ ಮೂಲೆಯಲ್ಲಿ ಭಾರತೀಯ ಮೂಲದ ಜನರು ಸಂಕಷ್ಟದಲ್ಲಿದ್ದರು ಅವರ ಸಹಾಯಕ್ಕೆ ವಿದೇಶಾಂಗ ವ್ಯವಹಾರಗಳ ವಿಭಾಗವು ತ್ಚರಿತವಾಗಿ ಹಾಗೂ ಧನಾತ್ಮಕವಾಗಿ ಸ್ಪಂದಿಸಿರುವ ಅನೇಕ ಘಟನೆಗಳು ಮಾಧ್ಯಮದಲ್ಲಿ ವರದಿಯಾಗಿವೆ.
    ಪ್ರಧಾನಿ ಮೋದಿ ಪ್ರತಿಯೊಂದು ದೇಶಕ್ಕೆ ಭೇಟಿ ನೀಡಿದಾಗಲೂ ಅಲ್ಲಿ ನೆಲೆಸಿರುವ ಭಾರತೀಯ ಮೂಲದ ಜನರು ಅಭೂತಪೂರ್ವ ಸ್ವಾಗತ ನೀಡುತ್ತಿದ್ದು ಅವರ ಭಾರತಪ್ರೇಮದಲ್ಲಿ ಹೊಸ ಹುಮ್ಮಸ್ಸು ಕಾಣುತ್ತಿದೆ. 

ವಿದೇಶಾಂಗ ನೀತಿಯ ಚಾಲಕ ಪ್ರಧಾನಿ ನರೇಂದ್ರ ಮೋದಿ
     ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಲವತ್ತಕ್ಕೂ ಹೆಚ್ಚು ಬಾರಿ ವಿದೇಶಿ ಪ್ರವಾಸಗಳನ್ನು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಂದು ಭೇಟಿಯಲ್ಲೂ ವೈಶ್ವಿಕ ವಾತಾವರಣವನ್ನು ಭಾರತದ ಪರವಾಗಿ ರೂಪಿಸಲು ಗಮನವನ್ನು ಕೇಂದ್ರಿಸಿದ್ದಾರೆ. ಪ್ರತಿ ಬಾರಿಯ ವಿದೇಶಿ ಪ್ರವಾಸದಲ್ಲೂ ಮೂರು ನಾಲ್ಕು ದೇಶಗಳಿಗೆ ಭೇಟಿ ನೀಡುತ್ತಿರುವ ಪ್ರಧಾನಿ ದಿನಪೂರ್ತಿ ಬಿಡುವಿರದ ಕಾರ್ಯಕ್ರಮಗಳಲ್ಲಿ ತೊಡಗುತ್ತಾರೆ. ಅಗತ್ಯವದ್ದರೆ ಮಾತ್ರ ಭೇಟಿ ನೀಡಿದ ದೇಶದಲ್ಲಿ ರಾತ್ರಿ ತಂಗುವ ಮೋದಿ, ಸಮಯ ಉಳಿಸುವ ಸಲುವಾಗಿ ರಾತ್ರಿಯಲ್ಲಿ ಪ್ರಯಾಣ ಮಾಡುತ್ತಾರೆ. ಮಾರಿಶಸ್, ಸಿಚೆಲೆಸ್‌ನಂತಹ ಪುಟ್ಟ ದೇಶಗಳಿಗೂ ಪ್ರಧಾನಿ ಭೇಟಿ ನೀಡಿದರು. ಮಾರ್ಚ ೨೦೧೫ರ ಶ್ರೀಲಂಕಾ ಭೇಟಿ 1982ನಂತರ ಭಾರತದ ಪ್ರಧಾನಿಯ ಮೊದಲ ಶ್ರೀಲಂಕಾ ಪ್ರವಾಸವಾಗಿತ್ತು. 2015 ಏಪ್ರಿಲ್ ತಿಂಗಳ ಕೆನಡಾ ಭೇಟಿ 42 ವರ್ಷಗಳ ನಂತರ ಭಾರತೀಯ ಪ್ರಧಾನಿಯ ಪ್ರವಾಸವಾಗಿತ್ತು.

     ಪ್ರತಿಯೊಂದು ದೇಶಕ್ಕೆ ಭೇಟಿ ನೀಡಿದಾಗಲೂ ಅಲ್ಲಿ ನೆಲೆಸಿರುವ ಭಾರತೀಯ ಮೂಲದ ಜನರನ್ನು ಭೇಟಿಯಾಗಲೂ ಎಂದೂ ಮರೆಯುವುದಿಲ್ಲ. ಅಮೇರಿಕದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನ ಅಭೂತಪೂರ್ವ ಸ್ವಾಗತದಿಂದ ಹಿಡಿದು ಇತ್ತೀಚೆಗೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕೆಲಸಕ್ಕಾಗಿ ವಲಸೆ ಹೋದ ಕೂಲಿ ಕಾರ್ಮಿಕರೊಂದಿಗೆ ಉಪಹಾರ ಸೇವಿಸುವವ ವರೆಗೆ ಮೋದಿಯವರ ಭಾರತೀಯ ಮೂಲದ ಜನರ ಬಗೆಗಿನ ಕಾಳಜಿ ವ್ಯಕ್ತವಾಗುತ್ತದೆ. 
      ಮೊದಲು ಭಾರತದ ರಾಷ್ಟ್ರಪತಿ, ಪ್ರಧಾನಿ ವಿದೇಶೀ ಯಾತ್ರೆಗೆ ಹೋದಾಗ ಪಾಶ್ಚಾತ್ಯ ಉಡುಗೆಯಾದ ಟೈ ಕೋಟ್‌ಗಳನ್ನು ಅಥವಾ ಬಂದ್‌ಗಲಾವನ್ನು ಧರಿಸುವುದು ಸಾಮಾನ್ಯವಾಗಿತ್ತು. ಆದರೆ ಈ ಪದ್ಧತಿಯನ್ನು ಮುರಿದಿರುವ ಮೋದಿ ವಿದೇಶಿ ನೆಲದಲ್ಲೂ ಭಾರತೀಯ ಉಡುಗಯನ್ನೇ ತೊಡುತ್ತಾರೆ. ಇತ್ತೀಚೆಗೆ ಅಮೇರಿಕಾದ ಕಾಂಗ್ರೆಸ್‌ನಲ್ಲಿ ಭಾಷಣ ಮಾಡುವಾಗಲೂ ಮೋದಿ ಎಂದಿನಂತೆ  ಕುರ್ತಾ ಜಾಕೇಟ್‌ನಲ್ಲಿ ಕಂಗೊಳಿಸಿದರು.

       ಉಪನಿಷತ್ತಿನಲ್ಲ ಹೇಳಿದ ವಸುಧೈವ ಕುಟುಂಬಕಮ್ ಇಡೀ ವಿಶ್ವವೇ ಒಂದು ಕುಟುಂಬ ಎನ್ನುವ ಆದರ್ಶ ಭಾರತದ ವಿದೇಶ ವ್ಯವಹಾರವನ್ನು ನಿರ್ದೇಶಿಸಬೇಕು. ಈ ವಾಕ್ಯವನ್ನು ಪ್ರಧಾನಿ ಮೋದಿ ಅನೇಕ ಬಾರಿ ತಮ್ಮ ಭಾಷಣಗಳಲ್ಲಿ ಹೇಳಿದ್ದಾರೆ. ಜಗದ ಮಾತೆಯಾಗಿದ್ದ ಪ್ರಾಚೀನ ಭಾರತ ಜ್ಞಾನದ ಬೆಳಕನ್ನು ಪ್ರಪಂಚಕ್ಕೆ ನೀಡಿತ್ತು. ಇಂದು ಪ್ರಮುಖ ಶಕ್ತಿಯಾಗಿ ಪುನಃ ಹೊರಹೊಮ್ಮುವತ್ತ ಮುನ್ನಡೆಯತ್ತಿರುವ ಭಾರತ ವಿಶ್ವಶಾಂತಿಯನ್ನು ಸ್ಥಾಪಿಸ ಮಾನವತೆಯ ಪ್ರಗತಿಯನ್ನು ನಿರ್ದೇಸುವತ್ತ ಸಾಗಲಿ.

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...