Friday, November 11, 2016

ಆಂತರಿಕ ಭದ್ರತೆಗೆ ಜಿಹಾದಿಗಳ ಸವಾಲು

(ಪುಂಗವ  15/11/2016)

ರಾಜಕೀಯ ಹಿಂಸಾಚಾರಕ್ಕೆ ಮತೀಯ ಉಗ್ರವಾದದ ನಂಟು  -  ರಾಜ್ಯದಲ್ಲಿ ನಡೆದಿದೆ ಆರೆಸ್ಸೆಸ್ ಕಾರ್ಯಕರ್ತರ ಸರಣಿ ಕೊಲೆಗಳು

ರಾಜ್ಯದಲ್ಲಿ ಕಳೆದ ಇಪ್ಪತ್ತೊಂದು ತಿಂಗಳುಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ಪರಿವಾರ ಸಂಘಟನೆಗಳಿಗೆ ಸೇರಿದ ಎಂಟು ಮಂದಿಯ ಹತ್ಯೆಯಾಗಿದೆ. 2015ರ ಫೆಬ್ರುವರಿ 19ರಂದು ಶಿವಮೊಗ್ಗದಲ್ಲಿ ಚೂರಿ ಇರತಕ್ಕೆ ಬಲಿಯಾದ ವಿಶ್ವನಾಥ, 2015 ನವಂಬರ 10ರಂದು ಟಿಪ್ಪು ಜಯಂತಿ ಮೆರವಣಿಗೆಯ ದೊಂಬಿಯಲ್ಲಿ ಹಲ್ಲೆಗೀಡಾಗಿ ಮೃತರಾದ ಕೊಡಗಿನ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ, 2016ರ ಅಕ್ಟೋಬರ್ 16ರಂದು ವಿಜದಶಮಿಯ ಪಥಸಂಚಲ ಮುಗಿಸಿ ಮನೆಗೆ ಹೊರಟಿದ್ದಾಗ ಸಂಘದ ಗಣವೇಶದಲ್ಲೇ ಕೊಲೆಯಾದ ಬೆಂಗಳೂರಿನ ಶಿವಾಜಿನಗರದ ರುದ್ರೇಶ್ ಇವರೆಲ್ಲರ ಕೊಲೆಯ ಸಂಚಿನ ಹಿಂದೆ ಪ್ರಮುಖವಾಗಿ ಒಂದೇ ಸಂಘಟನೆಯ ಹೆಸರು ಕೇಳಿ ಬರುತ್ತಿದೆ.. ಮೂಡುಬಿದಿರೆಯ ಬಜರಂಗದಳ ಕಾರ್ಯಕರ್ತ ಪ್ರಶಾಂತ ಪೂಜಾರಿ, ಮೈಸೂರಿನ ಉದಯಗಿರಿ ಬಡಾವಣೆಯಲ್ಲಿ ಹತ್ಯೆಗೀಡಾದ ಬಿಜೆಪಿಯ ಕ್ಯಾತಮಾರನಹಳ್ಳಿ ರಾಜು, ಕುಶಾಲನಗರದ ಪ್ರವೀಣ ಪೂಜಾರಿ, ಮಂಗಳೂರಿನ ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ ರಾಜ್, ಮೈಸೂರಿನ ಬಿಜೆಪಿ ಮುಖಂಡ ಮಾಗಳಿ ರವಿ ಇವರುಗಳ ಹತ್ಯೆಯ ಹಿಂದೆಯೂ ಒಂದೇ ಸಂಘಟನೆಗೆ ಸೇರಿದ ಜನರ ಹೆಸರು ಬಲವಾಗಿ ಕೇಳಿಬರುತ್ತಿದೆ. ಅಲ್ಲದೇ ಹಲವಾರು ಬಾರಿ ಸಂಘದ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿವೆ. ಬೆಂಗಳೂರಿನ ರುದ್ರೇಶ್ ಹತ್ಯೆಯಲ್ಲಿ ಬಂಧಿತರಾದ ನಾಲ್ವರು ಪ್ರಮುಖ ಆರೋಪಿಗಳಾದ ವಾಸೀಂ ಅಹ್ಮದ್, ಮುಜೀಬ್, ಮೊಹಮದ್ ಮಜರ್ ಮತ್ತು ಇರ್ಫಾನ್ ಪಾಷಾ ವಿಚಾರಣಾ ಸಂದರ್ಭದಲ್ಲಿ ಪೋಲೀಸರಿಗೆ ನೀಡಿದ ಮಾಹಿತಿಯಿಂದ ಸಂಘಪರಿವಾರದ ಕಾರ್ಯಕರ್ತರ ಹತ್ಯೆಯ ವ್ಯವಸ್ಥಿತ ಸಂಚು ಮತ್ತು ಇವೆಲ್ಲದರೊಡನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಅಥವಾ ಪಿಎಫ್‌ಐ ಹೆಸರಿನ ಈ ಸಂಘಟನಯೊಂದಿಗಿನ ನಂಟು ದೃಢಗೊಂಡಿದೆ. ರುದ್ರೇಶ್ ಹತ್ಯೆಯನ್ನು ಕಾರ್ಯಗತಗೊಳಿಸಿದ ಈ ನಾಲ್ವರು ಪಿಎಫ್‌ಐ ಮತ್ತು ಎಸ್‌ಡಿಪಿಐನ ಸದಸ್ಯರಾಗಿದ್ದಲ್ಲದೇ ಇವರಿಗೆ ಸೂಚನೆ ನೀಡಿದ ಪಿಎಫ್‌ಐ ಸಂಘಟನೆಯ ಬೆಂಗಳೂರು ಜಿಲ್ಲಾಧ್ಯಕ್ಷ ಅಸೀಂ ಷರೀಫ್ ಕೂಡ ಬಂಧನಕ್ಕೊಳಗಾಗಿದ್ದಾನೆ. ಈ ಹಿಂದೆ ಮೂಡುಬಿದಿರೆಯ ಪ್ರಶಾಂತ ಪೂಜಾರಿ ಹತ್ಯೆಯಲ್ಲಿ ಬಂಧಿತರಾದ ಏಳು ಜನ ಪಿಎಫ್‌ಐ ಸದಸ್ಯರಾಗಿದ್ದರು, ಅವರಲ್ಲೊಬ್ಬ ವಲಯ ಅಧ್ಯಕ್ಷನೂ ಸೇರಿದ್ದ. ಕುಟ್ಟಪ್ಪ ಹತ್ಯೆ, ರಾಜು ಹತ್ಯೆಯ ಆರೋಪಿಗಳಿಗೂ, ಅನೇಕ ಬಾರಿ ಸಂಘದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರಿಗೂ ಪಿಎಫ್‌ಐ ನಂಟಿದ್ದಿದು ಸಾಬೀತಾಗಿದೆ. ಹಾಗೆಯೇ ಈ ಎಲ್ಲ ಕೊಲೆಗಳಲ್ಲೂ ಒಂದು ರೀತಿ ಸಾಮ್ಯತೆ ಕಾಣುತ್ತದೆ.

ರುದ್ರೇಶ್ ಕೊಲೆ ಪ್ರಕರಣದಲ್ಲಿ ಬಂಧಿತರಾದ ನಾಲ್ವರು ನೀಡಿದ ಮಾಹಿತಿಗಳು ಇನ್ನೂ ಬೆಚ್ಚಿ ಬೀಳಿಸುವಂತವು. ತನಿಖೆ ನಡೆಸುತ್ತಿರುವ ಪೋಲೀಸರೇ ಹೇಳುವಂತೆ ಹತ್ಯೆಗೂ ಮೊದಲು ಅವರು ಉಗ್ರ ಸಂಘಟನೆಯಿಂದ ತರಬೇತಿ ಪಡೆದಿದ್ದರು. ಅವರ ಮನೆಯವರೇ ಪೋಲೀಸರಿಗೆ ನೀಡಿದ ಮಾಹಿತಿಯಂತೆ ಆಗಾಗ ಕೆಲವು ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೇರಳ ಮತ್ತು ಆಂಧ್ರ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಹಾಗೆಯೇ ರುದ್ರೇಶ್ ಜೊತೆಗೆ ಇನ್ನೋರ್ವ ಆರೆಸ್ಸೆಸ್ ಕಾರ್ಯಕರ್ತನನ್ನು ಕೊಲೆ ಮಾಡಿ ಸಂಘದ ಕಾರ್ಯಕರ್ತರಲ್ಲಿ ಭಯವನ್ನು ಹುಟ್ಟಿಸಲು ಬಯಸಿದ್ದರು ಎನ್ನುವ ಮಾಹಿತಿಯನ್ನು ಅವರು ನೀಡಿದ್ದಾರೆ. ಜೊತೆಗೆ ಮೈಸೂರಿನ ಸಂಸದ ಪ್ರತಾಪ ಸಿಂಹ ಸೇರಿದಂತೆ ಇನ್ನು ಕೆಲವು ಮುಖಂಡರನ್ನು ಕೊಲ್ಲಲು ಸಂಚು ನಡೆದಿತ್ತು ಎನ್ನುವ ವರದಿಗಳೂ ಬಂದಿವೆ. ಇವುಗಳಿಂದ ಸಂಘ ಪರಿವಾರಗಳಿಗೆ ಸೇರಿದ ಕಾರ್ಯಕರ್ತರ ಕೊಲೆ ಮತ್ತು ಹಲ್ಲೆಗಳ ಹಿಂದೆ ಸಂಘವನ್ನು ಬೆದರಿಸುವ ಒಂದು ವ್ಯವಸ್ಥಿತ ಸಂಚು ನಡೆದಿದ್ದು ಸ್ಪಷ್ಟ. ಜೊತೆಗೆ ಈ ಹಿಂಸೆಯ ಹಿಂದೆ ರಾಜಕೀಯ ಕುತಂತ್ರವೂ ಅಡಗಿದ್ದು ಪಿಎಫ್‌ಐನ ರಾಜಕೀಯ ಅಂಗವಾದ ಸೊಷಯಲಿಸ್ಟ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ (ಎಸ್‌ಡಿಪಿಐ) ವನ್ನು ಮುಸ್ಲಿಮರ ಪಕ್ಷವಾಗಿ ದಕ್ಷಿಣ ಭಾರತದಲ್ಲಿ ನೆಲೆಗೊಳಿಸುವ ಹುನ್ನಾರವೂ ಅಡಗಿದೆ. 

ಟಿಪ್ಪು ಜಯಂತಿ ಆಚರಣೆಯ ವಿರೋಧದಲ್ಲಿ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದ್ದು ಸಂಘ ಅದರ ಮುಂಚೂಣಿಯಲ್ಲಿರುವುದೂ ಇತ್ತೀಚಿಗೆ ಸಂಘರಿವಾರದ ಕಾರ್ಯಕರ್ತರ ಮೇಲೆ ಹಿಂಸಾಚಾರ ಹೆಚ್ಚಾಗಲು ಇನ್ನೊಂದು ಕಾರಣ. ಇದೇ ನವೆಂಬರ ೪ರಂದು ಮೈಸೂರಿನ ಪಿರಿಯಾಪಟ್ಟಣದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಂಭಂಧಿಸಿದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗಲೇ ಮಾಗಳಿ ರವಿ ಸಂಶಯಾಸ್ಪದ ರೀತಿಯಲ್ಲಿ ಮರಣ ಹೊಂದಿದರು, ಸನ್ನಿವೇಶವನ್ನು ನೋಡಿದರೆ ಇದು ವ್ಯವಸ್ಥಿತ ಕೊಲೆ ಎನ್ನುವುದು ಗೋಚರವಾಗುತ್ತದೆ. ಟಿಪ್ಪು ಜಯಂತಿ ಆಚರಣೆ ಮುಸ್ಲಿಂ ಮತಗಳನ್ನು ಸೆಳೆಯುವ ರಾಜಕೀಯ ಲಾಭಕ್ಕಾಗಿ ದುರುದ್ಧೇಶದಿಂದ ಕೂಡಿದ್ದು ಎನ್ನುವುದು ಸ್ಪಷ್ಟ. ಕ್ರೂರಿ ಮತಾಂಧ ಟಿಪ್ಪುವಿನ ಐತಿಹಾಸಿಕ ನಿಜಸ್ವರೂಪವನ್ನು ಬಯಲು ಮಾಡಿದ್ದಲ್ಲದೆ ಆತನ ಜಯಂತಿ ಆಚರಣೆಯ ಹಿಂದಿನ ರಾಜಕೀಯ ದುರದ್ಧೇಶದ ವಿರುದ್ಧ ಪ್ರಬಲವಾದ ಜನಾಭಿಪ್ರಾಯವು ರೂಪುಗೊಂಡಿದ್ದು ಅವರನ್ನು ಕೆರಳಿಸಿದೆ. ದುರದೃಷ್ಟದ ಸಂಗತಿಯೆಂದರೆ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರ ಇಂತಹ ಸಮಾಜಘಾತುಕ ಶಕ್ತಿಗಳ ರಕ್ಷಣೆಗೆ ನಿಂತಿರುವಂತೆ ಕಾಣುತ್ತಿದೆ. ಪ್ರತಿಯೊಂದು ಬಾರಿ ಸಂಘಪರಿವಾರದ ಕಾರ್ಯಕರ್ತರ ಕೊಲೆಯಾದಾಗಲೂ ವೈಯಕ್ತಿಕ ದ್ವೇಷದಿಂದ ಕೊಲೆ, ಅಪಘಾತದಿಂದ ಸಾವು ಇತ್ಯಾದಿ ವಾದಗಳನ್ನು ತೇಲಿಬಿಟ್ಟು ತನಿಖೆಯ ದಾರಿತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಹತ್ಯೆಗೀಡಾದವರಿಗೆ ಮಸಿ ಬಳಿಯುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.

ಪಿಎಫ್‌ಐನಂತಹ ಉಗ್ರವಾದಿ ಸಂಘಟನೆಯ ರಕ್ಷಣೆ ಅಥವಾ ಮತೀಯ ಮೂಲಭೂತವಾದವನ್ನು ಪೋಷಿಸುವ ನೀತಿಯಿಂದ ಮುಸ್ಲಿಂ ಮತಗಳ ಧ್ರುವೀಕರಣದಿಂದ ರಾಜಕೀಯ ಲಾಭವಾಗಬಹುದೆಂದು ಕಾಂಗ್ರೆಸ್ ಮತ್ತಿತರ ತಥಾಕಥಿತ ಸೆಕ್ಯುಲರ್ ಪಕ್ಷಗಳು ಭಾವಿಸಬಹುದು. ಆದರೆ ಇಂತಹ ನೀತಿಯು ಸಮಾಜಘಾತುಕ ದೇಶವಿರೋಧಿ ಎನ್ನುವ ಎಚ್ಚರಿಕೆ ಇರಬೇಕು. ಹಾಗೆಯೇ ಇಂತಹ ಹಿಂಸಾಚಾರ ವಿರೋಧಗಳಿಂದ ಸಂಘ ಇನ್ನಷ್ಟು ಬಲಗೊಳ್ಳುವುದೇ ವಿನಹ ಎಂದಿಗೂ ಬೆದರಿಸಲಾರವು. ಏಕೆಂದರೆ ಸಂಘ ಸಮಾಜ ಸಂಘಟನೆ ಮತ್ತು ರಾಷ್ಟ್ರೀಯ ಮುನರುತ್ಥಾನದ ಉನ್ನತ ಧ್ಯೇಯಕ್ಕಾಗಿ ಕಾರ್ಯ ಮಾಡುತ್ತಿದೆಯೇ ಹೊರತು, ಯಾವುದೇ ರಾಜಕೀಯ ಅಧಿಕಾರದ ಆಕಾಂಕ್ಷೆಗಳಿಗಲ್ಲ.


ಏನಿದು ಪಿಎಫ್‌ಐ?
ಕೇರಳದಲ್ಲಿ ಮೂಲವನ್ನು ಹೊಂದಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಥವಾ ಪಿಎಫ್‌ಐ ೨೦೦೬ರಲ್ಲಿ ಪ್ರಾರಂಭಗೊಂಡ ಒಂದು ಮುಸ್ಲಿಂ ಮೂಲಭೂತವಾದಿ ಸಂಘಟನೆಯಾಗಿದೆ. ನಿಷೇಧಿತ ಉಗ್ರ ಸಂಘಟನೆ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ ಇಂಡಿಯಾ- ಸಿಮಿಯ ಹೊಸ ರೂಪ ಎಂದೇ ಹೇಳಬಹುದಾದ ಪಿಎಫ್‌ಐನ ಮುಖಂಡರು ಬಹುತೇಕ ಸಿಮಿಯ ಕಾರ್ಯಕರ್ತರೇ ಆಗಿದ್ದಾರೆ. ಉದಾಹರಣೆಹೆ ಪಿಎಫ್‌ಐನ ಸಂಸ್ಥಾಪಕರಲ್ಲೊಬ್ಬ ಅಬ್ದುಲ್ ರೆಹಮಾನ್ ಸಿಮಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ, ಕೇರಳದ ಸೆಕ್ರೆಟರಿ ಅಬ್ದುಲ್ ಹಮೀದ್ ಮಾಸ್ಟರ್ ಸಿಮಿಯ ಕೇರಳ ಸೆಕ್ರೆಟರಿಯಾಗಿದ್ದ.  ಈ ಸಂಘಟನೆ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಸಮಾಜಘಾತುಕ ಮತ್ತು ದೇಶವಿರೋಧಿ ಕಾರ್ಯಗಳಿಗಾಗಿ ಸದಾ ಸುದ್ದಿಯಲ್ಲಿದೆ. ಕಿಡ್ನಾಪ್, ಕೊಲೆ, ಬೆದರಿಕೆ ಹಾಕುವುದು, ಗಲಭೆ ಹುಟ್ಟಿಸುವುದು, ದ್ವೇಷದ ಹರಡುವುದು ಮೊದಲಾದವುಗಳಿಂದ ಹಿಡಿದು ಮತೀಯ ಮೂಲಭೂತವಾದ, ಲವ್ ಜಿಹಾದ್, ಇಸ್ಲಾಂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಭಂಧ ಇವೆ ಎನ್ನುವವರೆಗೆ ಅನೇಕ ಆರೋಪಗಳು ಪಿಎಫ್‌ಐ ಮೇಲೆ ನಿರಂತರ ಕೇಳಿ ಬಂದಿವೆ. ನ್ಯಾಶನಲ್ ಡೆವೆಲೊಪ್‌ಮೆಂಟ್ ಫ್ರಂಟ್(ಎನ್‌ಡಿಎಫ್), ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ(ಕೆಎಫ್‌ಡಿ), ಮನಿತ ನೀತಿ ಪಸರೈ(ಎಮ್‌ಎನ್‌ಪಿ) ಮೊದಲಾದ ಸಂಘಟನೆಗಳು ಪಿಎಫ್‌ಐನಲ್ಲಿ ವಿಲೀನಗೊಂಡು ದಕ್ಷಿಣ ಭಾರತದ ರಾಜ್ಯಗಳಿಗೆ ಪಿಎಫ್‌ಐ ಹರಡಿಕೊಂಡಿದೆ. ನ್ಯಾಶನಲ್ ವುಮನ್ಸ್ ಫ್ರಂಟ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮೊದಲಾದ ವಿವಿಧ ಮೋರ್ಚಾಗಳ ಮೂಲಕ ತನ್ನ ಜಾಲವನ್ನು ವಿಸ್ತರಿಸಿದ್ದು ೮೦ ಸಾವಿರಕ್ಕು ಹೆಚ್ಚು ಸದಸ್ಯತ್ವ ಇದೆ ಎಂದು ಹೇಳಿಕೊಳ್ಳುತ್ತದೆ. ಸಮಾನತೆಯ ಸಮಾಜ ಸ್ಥಾಪನೆಗಾಗಿ ಹೋರಾಡುವ ಸಾಮಾಜಿಕ ಸಂಘಟನೆ ಎಂದು ಹೇಳಿಕೊಳ್ಳುವ ಈ ಸಂಘಟನೆಯ ಸದಸ್ಯರೆಲ್ಲರೂ ಮುಸ್ಲಿಮರೇ. ಸೋಷಯಲಿಸ್ಟ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಅಥವಾ ಎಸ್‌ಡಿಪಿಐ ಪಿಎಫ್‌ಐ ಹುಟ್ಟುಹಾಕಿದ ರಾಜಕೀಯ ಪಕ್ಷವಾಗಿದ್ದು ಆಸ್ಸಾಮಿನ ಬದ್ರುದ್ದೀನ ಅಜ್ಮಲ್‌ನ ಏಐಯುಡಿಎಫ್ ಮತ್ತು ಹೈದರಾಬಾದಿನ ಓವೈಸಿಯ ಎಮ್‌ಐಎಮ್ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮುಸಲ್ಮಾನರ ಪಕ್ಷವಾಗಿ ನೆಲೆಗೊಳ್ಳಲು ಪ್ರಯತ್ನಿಸುತ್ತಿದೆ. 

ಏಪ್ರಿಲ್ 2013ರಲ್ಲಿ ಕೇರಳದ ಕಣ್ಣೂರಿನ ನಾರತ್‌ನಲ್ಲಿ ಪಿಎಫ್‌ಐ ತರಬೇತಿ ಕೇಂದ್ರದಲ್ಲಿ ಪೋಲಿಸರು ದಾಳಿ ಮಾಡಿದಾಗ ನಾಡಬಾಂಬುಗಳು, ಮಚ್ಚು ಮೊದಲಾದ ಆಯುಧಗಳು, ಬಾಂಬ್ ತಯಾರಿಕಾ ಕಚ್ಚಾವಸ್ತುಗಳು ದೊರೆತವು, 21 ಪಿಎಫ್‌ಐ ಕಾರ್ಯಕರ್ತರು ಬಂಧಿತರಾದರು. 2011ರಲ್ಲಿ ಮೈಸೂರಿನಲ್ಲಿ ಇಬ್ಬರು ಹುಡುಗರನ್ನು ಅಪಹರಿಸಿದ ಕೆಎಫ್‌ಡಿಯ ಕಾರ್ಯಕರ್ತರು ಸಂಘಟನೆಯ ಫಂಡಿಗಾಗಿ ೫ಕೋಟಿ ಒತ್ತೆ ಹಣದ ಬೇಡಿಕೆ ಇಟ್ಟಿದ್ದರು. ಆ ಇಬ್ಬರೂ ಹುಡುಗರನ್ನು ಸಾಯಿಸಲಾಯಿತು. 2012ರಲ್ಲಿ ಕೇರಳ ಸರ್ಕಾರ ಉಚ್ಛ ನ್ಯಾಯಾಲಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಪಿಎಫ್‌ಐ ಆರೆಸ್ಸೆಸ್ ಮತ್ತು ಸಿಪಿಐ(ಎಮ್)ನ ಕಾರ್ಯಕರ್ತರ ಕೊಲೆಯ ೨೭ ಪ್ರಕರಣಗಳಲ್ಲಿ ಪಿಎಫ್‌ಐ ಕೈವಾಡ ಇದೆ ಎಂದು ಹೇಳಿದೆ. ೨೦೧೨ರಲ್ಲಿ ಪುನಾ, ಚೆನ್ನೈ, ಹೈದರಾಬಾದ ದೆಹಲಿಗಳಿಂದ ಲಕ್ಷಾಂತರ ಎಸ್‌ಎಮ್‌ಎಸ್‌ಗಳನ್ನು ಕಳುಹಿಸಿ ಇತರ ನಗರಗಳಲ್ಲಿ ನೆಲೆಸಿರುವ ಪೂರ್ವೋತ್ತರ ರಾಜ್ಯದ ಜನರನ್ನು ಬೆದರಿಸುವ ಪ್ರಚಾರಕಾರ್ಯದ ಹಿಂದೆ ಪಿಎಫ್‌ಐನ ಅಂಗ ಸಂಸ್ಥೆಗಳಾದ ಕೆಎಫ್‌ಡಿ, ಎಮ್‌ಎನ್‌ಪಿಗಳಿದ್ದವು. ಇವುಗಳಲ್ಲಿ ಕೆಲವು ಎಸ್‌ಎಮ್‌ಎಸ್‌ಗಳು ಪಾಕಿಸ್ತಾನದಿಂದಲೂ ಕಳುಹಿಸಲ್ಪಟ್ಟಿದ್ದವು. ಇತ್ತೀಚಿನ  ಪಿಎಫ್‌ಐಗೆ ಸೇರಿದ ಕೆಲವು ಉಗ್ರರು ಐಎಸ್‌ಐಎಸ್‌ನ್ನು ಸೇರಿದ್ದು ವರದಿಯಾಗಿವೆ.

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...